309: ಯಾವಕಾಧ್ಯಯನಂ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 309

ಸಾರ

ವ್ಯಾಸನು ಪುತ್ರ ಶುಕನಿಗೆ ವೈರಾಗ್ಯ ಧರ್ಮವನ್ನು ಉಪದೇಶಿಸಿದುದು (1-92).

12309001 ಯುಧಿಷ್ಠಿರ ಉವಾಚ।
12309001a ಕಥಂ ನಿರ್ವೇದಮಾಪನ್ನಃ ಶುಕೋ ವೈಯಾಸಕಿಃ ಪುರಾ।
12309001c ಏತದಿಚ್ಚಾಮಿ ಕೌರವ್ಯ ಶ್ರೋತುಂ ಕೌತೂಹಲಂ ಹಿ ಮೇ।।

ಯುಧಿಷ್ಠಿರನು ಹೇಳಿದನು: “ಕೌರವ್ಯ! ಹಿಂದೆ ಶುಕನು ಹೇಗೆ ವೈರಾಗ್ಯವನ್ನು ಹೊಂದಿದನು? ಇದರ ಕುರಿತು ಕೇಳ ಬಯಸುತ್ತೇನೆ. ನನಗೆ ಕುತೂಹಲವುಂಟಾಗಿದೆ.1

12309002 ಭೀಷ್ಮ ಉವಾಚ।
12309002a ಪ್ರಾಕೃತೇನ ಸುವೃತ್ತೇನ ಚರಂತಮಕುತೋಭಯಮ್।
12309002c ಅಧ್ಯಾಪ್ಯ ಕೃತ್ಸ್ನಂ ಸ್ವಾಧ್ಯಾಯಮನ್ವಶಾದ್ವೈ ಪಿತಾ ಸುತಮ್।।

ಭೀಷ್ಮನು ಹೇಳಿದನು: “ಸಾಧಾರಣ ಮನುಷ್ಯನಂತೆ ವ್ಯವಹರಿಸುತ್ತಾ ಭಯರಹಿತನಾಗಿ ಲೋಕದಲ್ಲಿ ಸಂಚರಿಸುತ್ತಿರುವ ಮಗನಿಗೆ ತಂದೆಯು ಸ್ವಾಧ್ಯಾಯವನ್ನು ಸಂಪೂರ್ಣವಾಗಿ ಅಧ್ಯಾಪಿಸಿ ಈ ಉಪದೇಶವನ್ನು ನೀಡಿದನು:

12309003a ಧರ್ಮಂ ಪುತ್ರ ನಿಷೇವಸ್ವ ಸುತೀಕ್ಷ್ಣೌ ಹಿ ಹಿಮಾತಪೌ।
12309003c ಕ್ಷುತ್ಪಿಪಾಸೇ ಚ ವಾಯುಂ ಚ ಜಯ ನಿತ್ಯಂ ಜಿತೇಂದ್ರಿಯಃ।।

“ಪುತ್ರ! ಧರ್ಮವನ್ನೇ ಆಚರಿಸುತ್ತಿರು. ಜಿತೇಂದ್ರಿಯನಾಗಿ ನಿತ್ಯವೂ ಹಸಿವು, ಬಾಯಾರಿಕೆ, ಮತ್ತು ವಾಯುವನ್ನು ಜಯಿಸು.

12309004a ಸತ್ಯಮಾರ್ಜವಮಕ್ರೋಧಮನಸೂಯಾಂ ದಮಂ ತಪಃ।
12309004c ಅಹಿಂಸಾಂ ಚಾನೃಶಂಸ್ಯಂ ಚ ವಿಧಿವತ್ಪರಿಪಾಲಯ।।

ಸತ್ಯ, ಆರ್ಜವ, ಅಕ್ರೋಧ, ಅನಸೂಯ, ದಮ, ತಪಸ್ಸು, ಅಹಿಂಸೆ, ಮತ್ತು ದಯೆ ಇವುಗಳನ್ನು ವಿಧಿವತ್ತಾಗಿ ಪರಿಪಾಲಿಸು.

12309005a ಸತ್ಯೇ ತಿಷ್ಠ ರತೋ ಧರ್ಮೇ ಹಿತ್ವಾ ಸರ್ವಮನಾರ್ಜವಮ್।
12309005c ದೇವತಾತಿಥಿಶೇಷೇಣ ಯಾತ್ರಾಂ ಪ್ರಾಣಸ್ಯ ಸಂಶ್ರಯ।।

ಸತ್ಯದಲ್ಲಿಯೇ ನಿಷ್ಠನಾಗಿರು. ಸರ್ವ ಕೌಟಿಲ್ಯತೆಗಳನ್ನೂ ತ್ಯಜಿಸಿ ಧರ್ಮದಲ್ಲಿಯೇ ಅಭಿರುಚಿಯನ್ನಿಟ್ಟಿರು. ದೇವತೆಗಳಿಗೆ ಮತ್ತು ಅತಿಥಿಗಳಿಗೆ ಕೊಟ್ಟು ಉಳಿದುದನ್ನು ಪ್ರಾಣರಕ್ಷಣೆಗಾಗಿ ಭುಂಜಿಸು.

12309006a ಫೇನಪಾತ್ರೋಪಮೇ ದೇಹೇ ಜೀವೇ ಶಕುನಿವತ್ ಸ್ಥಿತೇ।
12309006c ಅನಿತ್ಯೇ ಪ್ರಿಯಸಂವಾಸೇ ಕಥಂ ಸ್ವಪಿಷಿ ಪುತ್ರಕ।।

ಪುತ್ರಕ! ನೀರಿನ ಮೇಲಿನ ನೊರೆಯಂತಿರುವ ದೇಹದಲ್ಲಿ ಪಕ್ಷಿಯಂತೆ ಜೀವವು ನೆಲೆಸಿರುವಾಗ ಮತ್ತು ಈ ಪ್ರಿಯಸಂವಾಸವು ಅನಿತ್ಯವಾಗಿರುವಾಗ ಹೇಗೆ ತಾನೇ ನಿದ್ರಿಸುತ್ತೀಯೆ?

12309007a ಅಪ್ರಮತ್ತೇಷು ಜಾಗ್ರತ್ಸು ನಿತ್ಯಯುಕ್ತೇಷು ಶತ್ರುಷು।
12309007c ಅಂತರಂ ಲಿಪ್ಸಮಾನೇಷು ಬಾಲಸ್ತ್ವಂ ನಾವಬುಧ್ಯಸೇ।।

ಅಪ್ರಮತ್ತರಾಗಿ ಎಚ್ಚೆತ್ತು ನಿತ್ಯವೂ ನಿನ್ನನ್ನು ಕಾಡುವ ಶತ್ರುಗಳು ಯಾರೆನ್ನುವುದನ್ನು ಬಾಲಕನಾದ ನಿನಗಿನ್ನೂ ತಿಳಿದಿಲ್ಲ.

12309008a ಗಣ್ಯಮಾನೇಷು ವರ್ಷೇಷು ಕ್ಷೀಯಮಾಣೇ ತಥಾಯುಷಿ।
12309008c ಜೀವಿತೇ ಶಿಷ್ಯಮಾಣೇ ಚ ಕಿಮುತ್ಥಾಯ ನ ಧಾವಸಿ।।

ವರ್ಷಗಳು ಕಳೆಯುತ್ತಿರುವಾಗ ಮತ್ತು ಆಯುಷ್ಯವೂ ಕ್ಷೀಣಿಸುತ್ತಿರುವಾಗ ಹಾಗೂ ಜೀವಿತವು ಸ್ವಲ್ಪಕಾಲ ಮಾತ್ರವೇ ಉಳಿದುಕೊಂಡಿರುವಾಗ ನೀನು ಏಕೆ ಎದ್ದು ಓಡುತ್ತಿಲ್ಲ?

12309009a ಐಹಲೌಕಿಕಮೀಹಂತೇ ಮಾಂಸಶೋಣಿತವರ್ಧನಮ್।
12309009c ಪಾರಲೌಕಿಕಕಾರ್ಯೇಷು ಪ್ರಸುಪ್ತಾ ಭೃಶನಾಸ್ತಿಕಾಃ।।

ಅತ್ಯಂತ ನಾಸ್ತಿಕರು ಈ ಲೋಕದಲ್ಲಿ ರಕ್ತ-ಮಾಂಸಗಳನ್ನು ವರ್ಧಿಸಲು ಕಾರ್ಯಗತರಾಗುತ್ತಾರೆ. ಪರಲೌಕಿಕ ಕಾರ್ಯಗಳು ಬಂದಾಗ ನಿದ್ದೆಮಾಡುತ್ತಾರೆ.

12309010a ಧರ್ಮಾಯ ಯೇಽಭ್ಯಸೂಯಂತಿ ಬುದ್ಧಿಮೋಹಾನ್ವಿತಾ ನರಾಃ।
12309010c ಅಪಥಾ ಗಚ್ಚತಾಂ ತೇಷಾಮನುಯಾತಾಪಿ ಪೀಡ್ಯತೇ।।

ಧರ್ಮದಲ್ಲಿ ದೋಷವನ್ನೆಣಿಸುವ ಮತ್ತು ಕುತ್ಸಿತ ಮಾರ್ಗದಲ್ಲಿ ಹೋಗುವ ಬುದ್ಧಿಮೋಹಾನ್ವಿತ ನರರನ್ನು ಹಿಂಬಾಲಿಸುವವರೂ ಪೀಡೆಗೊಳಗಾಗುತ್ತಾರೆ.

12309011a ಯೇ ತು ತುಷ್ಟಾಃ ಸುನಿಯತಾಃ ಸತ್ಯಾಗಮಪರಾಯಣಾಃ।
12309011c ಧರ್ಮ್ಯಂ ಪಂಥಾನಮಾರೂಢಾಸ್ತಾನುಪಾಸ್ಸ್ವ ಚ ಪೃಚ್ಚ ಚ।।

ತುಷ್ಟರೂ, ಸುನಿಯತರೂ, ಸತ್ಯಾಗಮಪರಾಯಣರು, ಧರ್ಮದ ಮಾರ್ಗವನ್ನು ಅನುಸರಿಸುವವರೂ ಆದವರನ್ನು ಉಪಾಸಿಸು ಮತ್ತು ಅವರನ್ನೇ ಪ್ರಶ್ನಿಸು.

12309012a ಉಪಧಾರ್ಯ ಮತಂ ತೇಷಾಂ ವೃದ್ಧಾನಾಂ ಧರ್ಮದರ್ಶಿನಾಮ್।
12309012c ನಿಯಚ್ಚ ಪರಯಾ ಬುದ್ಧ್ಯಾ ಚಿತ್ತಮುತ್ಪಥಗಾಮಿ ವೈ।।

ವೃದ್ಧರೂ ಧರ್ಮದರ್ಶಿಗಳೂ ಆದ ಅವರ ಮತವನ್ನು ಮನನಮಾಡಿಕೊಂಡು ಶ್ರೇಷ್ಠ ಬುದ್ಧಿಯಿಂದ ಮನಸ್ಸನ್ನು ನಿಯಂತ್ರಿಸು. ಮನಸ್ಸು ಯಾವಾಗಲೂ ತಪ್ಪು ದಾರಿಯಲ್ಲಿಯೇ ಹೋಗುತ್ತಿರುತ್ತದೆಯಲ್ಲವೇ?

12309013a ಅದ್ಯಕಾಲಿಕಯಾ ಬುದ್ಧ್ಯಾ ದೂರೇ ಶ್ವ ಇತಿ ನಿರ್ಭಯಾಃ।
12309013c ಸರ್ವಭಕ್ಷಾ ನ ಪಶ್ಯಂತಿ ಕರ್ಮಭೂಮಿಂ ವಿಚೇತಸಃ।।

ವರ್ತಮಾನದಲ್ಲಿಯೇ ಇದ್ದುಕೊಂಡು ನಾಳೆಯು ಇನ್ನೂ ದೂರದಲ್ಲಿದೆ ಎಂದು ನಿರ್ಭಯರಾಗಿ ಸರ್ವವನ್ನೂ ಭೋಗಿಸುತ್ತಿರುವ ವಿಚೇತಸರು ಕರ್ಮಭೂಮಿಯನ್ನು ತಿಳಿದವರಾಗಿರುವುದಿಲ್ಲ.

12309014a ಧರ್ಮನಿಃಶ್ರೇಣಿಮಾಸ್ಥಾಯ ಕಿಂ ಚಿತ್ಕಿಂ ಚಿತ್ಸಮಾರುಹ।
12309014c ಕೋಶಕಾರವದಾತ್ಮಾನಂ ವೇಷ್ಟಯನ್ನಾವಬುಧ್ಯಸೇ।।

ಧರ್ಮವನ್ನೇ ಏಣಿಯನ್ನಾಗಿಸಿಕೊಂಡು ಸ್ವಲ್ಪ ಸ್ವಲ್ಪವಾದರೂ ಮೇಲೆ ಏರುತ್ತಿರು. ರೇಷ್ಮೆಯ ಹುಳುವು ತನ್ನ ಸುತ್ತಲೂ ಆವರಣವನ್ನು ಕಲ್ಪಿಸಿಕೊಂಡು ತಾನೇ ಕಲ್ಪಿಸಿಕೊಂಡ ಗೂಡಿನಲ್ಲಿ ಬಂಧಿಯಾಗಿ ಉಳಿಯುವಂತೆ ನೀನು ನಿನ್ನ ಕರ್ಮಗಳಿಂದಲೇ ಕರ್ಮಫಲರೂಪದ ಆವರಣವನ್ನು ಕಲ್ಪಿಸಿಕೊಂಡು ನಿನಗೆ ಅರಿವಿಲ್ಲದೇಯೇ ಬಂಧಿಸಲ್ಪಟ್ಟಿರುವೆ.

12309015a ನಾಸ್ತಿಕಂ ಭಿನ್ನಮರ್ಯಾದಂ ಕೂಲಪಾತಮಿವಾಸ್ಥಿರಮ್2
12309015c ವಾಮತಃ ಕುರು ವಿಸ್ರಬ್ಧೋ ನರಂ ವೇಣುಮಿವೋದ್ಧತಮ್।।

ಮರ್ಯಾದೆಗಳಿಲ್ಲದೇ ಎಲ್ಲಕಡೆ ನುಗ್ಗುವ ಅಸ್ಥಿರನಾದ ನಾಸ್ತಿಕ ನರನನ್ನು ಕಿತ್ತುಹಾಕಿದ ಬಿದಿರುಮೆಳೆಯಂತೆ ಯಾವ ಭಯವೂ ಇಲ್ಲದೇ ತ್ಯಜಿಸು.

12309016a ಕಾಮಂ ಕ್ರೋಧಂ ಚ ಮೃತ್ಯುಂ ಚ ಪಂಚೇಂದ್ರಿಯಜಲಾಂ ನದೀಮ್।
12309016c ನಾವಂ ಧೃತಿಮಯೀಂ ಕೃತ್ವಾ ಜನ್ಮದುರ್ಗಾಣಿ ಸಂತರ।।

ಕಾಮ, ಕ್ರೋಧ, ಮೃತ್ಯು ಮತ್ತು ಪಂಚೇಂದ್ರಿಯಗಳನ್ನೇ ನೀರಾಗುಳ್ಳ ನದಿಯನ್ನು ಧೃತಿಮಯೀ ನಾವೆಯನ್ನು ಕಟ್ಟಿಕೊಂಡು ದುರ್ಗಮವಾದ ಜನ್ಮಮೃತ್ಯುಸಂಕಟದಿಂದ ಪಾರಾಗು.

12309017a ಮೃತ್ಯುನಾಭ್ಯಾಹತೇ ಲೋಕೇ ಜರಯಾ ಪರಿಪೀಡಿತೇ।
12309017c ಅಮೋಘಾಸು ಪತಂತೀಷು ಧರ್ಮಯಾನೇನ ಸಂತರ।।

ಮೃತ್ಯುವು ಅಪ್ಪಳಿಸುತ್ತಿರುವ, ಮುಪ್ಪಿನಿಂದ ಪೀಡಿತವಾದ ಮತ್ತು ಸುಮ್ಮನೇ ಕಾಲವು ಉರುಳುತ್ತಿರುವ ಈ ಲೋಕವನ್ನು ಧರ್ಮವೆಂಬ ನಾವೆಯಿಂದ ದಾಟು.

12309018a ತಿಷ್ಠಂತಂ ಚ ಶಯಾನಂ ಚ ಮೃತ್ಯುರನ್ವೇಷತೇ ಯದಾ।
12309018c ನಿರ್ವೃತಿಂ ಲಭಸೇ ಕಸ್ಮಾದಕಸ್ಮಾನ್ಮೃತ್ಯುನಾಶಿತಃ।।

ನಿಂತವನನ್ನೂ, ಮಲಗಿದವನನ್ನೂ ಮೃತ್ಯುವು ಹಿಂಬಾಲಿಸುತ್ತಿರುವಾಗ ಮತ್ತು ಅಕಸ್ಮಾತ್ತಾಗಿ ನೀನೂ ಮೃತ್ಯುವಿನಿಂದ ನಾಶಹೊಂದುತ್ತಿರುವಾಗ ಅದರಿಂದ ಪಾರಾಗದೇ ನೀನು ಹೇಗಿರುವೆ?

12309019a ಸಂಚಿನ್ವಾನಕಮೇವೈನಂ ಕಾಮಾನಾಮವಿತೃಪ್ತಕಮ್।
12309019c ವೃಕೀವೋರಣಮಾಸಾದ್ಯ ಮೃತ್ಯುರಾದಾಯ ಗಚ್ಚತಿ।।

ಯಾವಾಗಲೂ ಭೋಗಸಾಮಗ್ರಿಗಳನ್ನು ಸಂಗ್ರಹಿಸುತ್ತಿರುವ ಮತ್ತು ಕಾಮನೆಗಳಿಂದ ತೃಪ್ತಿಯನ್ನೇ ಹೊಂದದಿರುವ ಮನುಷ್ಯನನ್ನು ಹೆಣ್ಣು ತೋಳವು ಕುರಿಮರಿಯನ್ನು ಕಚ್ಚಿಕೊಂಡು ಹೋಗುವಂತೆ ಮೃತ್ಯುವು ಕಚ್ಚಿಕೊಂಡು ಹೋಗುತ್ತದೆ.

12309020a ಕ್ರಮಶಃ ಸಂಚಿತಶಿಖೋ ಧರ್ಮಬುದ್ಧಿಮಯೋ ಮಹಾನ್।
12309020c ಅಂಧಕಾರೇ ಪ್ರವೇಷ್ಟವ್ಯೇ ದೀಪೋ ಯತ್ನೇನ ಧಾರ್ಯತಾಮ್।।

ಕ್ರಮೇಣವಾಗಿ ಹತ್ತಿ ಉರಿಯುವ ಧರ್ಮಬುದ್ಧಿಮಯ ದೀಪವನ್ನು ಪ್ರಯತ್ನಪೂರ್ವಕವಾಗಿ ಹಿಡಿದುಕೊಂಡು ಈ ಮಹಾ ಅಂಧಕಾರವನ್ನು ಪ್ರವೇಶಿಸಬೇಕು.

12309021a ಸಂಪತನ್ದೇಹಜಾಲಾನಿ ಕದಾ ಚಿದಿಹ ಮಾನುಷೇ।
12309021c ಬ್ರಾಹ್ಮಣ್ಯಂ ಲಭತೇ ಜಂತುಸ್ತತ್ಪುತ್ರ ಪರಿಪಾಲಯ।।

ಪುತ್ರ! ಅನೇಕ ದೇಹಜಾಲಗಳಲ್ಲಿ ಬಿದ್ದು ಯಾವುದೋ ಒಂದು ಸಮಯದಲ್ಲಿ ಈ ಮನುಷ್ಯದೇಹದಲ್ಲಿ ಜೀವವು ಹುಟ್ಟುತ್ತದೆ. ಯಾವಾಗಲೋ ಒಮ್ಮೆ ಬ್ರಾಹ್ಮಣ್ಯತ್ವವು ದೊರೆಯುತ್ತದೆ. ಅದನ್ನು ಪರಿಪಾಲಿಸು.

12309022a ಬ್ರಾಹ್ಮಣಸ್ಯ ಹಿ ದೇಹೋಽಯಂ ನ ಕಾಮಾರ್ಥಾಯ ಜಾಯತೇ।
12309022c ಇಹ ಕ್ಲೇಶಾಯ ತಪಸೇ ಪ್ರೇತ್ಯ ತ್ವನುಪಮಂ ಸುಖಮ್।।

ಬ್ರಾಹ್ಮಣನ ಈ ದೇಹವು ಕಾಮಾರ್ಥಗಳ ಉಪಭೋಗಕ್ಕಾಗಿ ಹುಟ್ಟಿಲ್ಲ. ಇಹದಲ್ಲಿ ತಪಸ್ಸಿನ ಕ್ಲೇಶಕ್ಕಾಗಿ ಮತ್ತು ಪರದಲ್ಲಿ ಅನುಪಮ ಸುಖಕ್ಕಾಗಿ ಈ ಬ್ರಾಹ್ಮಣ ದೇಹವು ಲಭಿಸಿದೆ.

12309023a ಬ್ರಾಹ್ಮಣ್ಯಂ ಬಹುಭಿರವಾಪ್ಯತೇ ತಪೋಭಿಸ್ ತಲ್ಲಬ್ಧ್ವಾ ನ ಪರಿಪಣೇನ ಹೇಡಿತವ್ಯಮ್3
12309023c ಸ್ವಾಧ್ಯಾಯೇ ತಪಸಿ ದಮೇ ಚ ನಿತ್ಯಯುಕ್ತಃ ಕ್ಷೇಮಾರ್ಥೀ ಕುಶಲಪರಃ ಸದಾ ಯತಸ್ವ।।

ಅನೇಕ ತಪಸ್ಸುಗಳಿಂದ ಈ ಬ್ರಾಹ್ಮಣ್ಯತ್ವವು ಲಭಿಸುತ್ತದೆ. ಅದನ್ನು ಪಡೆದುಕೊಂಡು ಕಾಮಾಸಕ್ತಿಯಲ್ಲಿಯೇ ಮುಳುಗಿರಬಾರದು. ಸ್ವಾಧ್ಯಾಯ, ತಪಸ್ಸು, ದಮಗಳಲ್ಲಿ ನಿತ್ಯವೂ ಯುಕ್ತನಾಗಿದ್ದುಕೊಂಡು ಕ್ಷೇಮಕ್ಕಾಗಿ ಸದಾ ಕುಶಲಪರನಾಗಿ ಪ್ರಯತ್ನಿಸುತ್ತಿರು.

12309024a ಅವ್ಯಕ್ತಪ್ರಕೃತಿರಯಂ ಕಲಾಶರೀರಃ ಸೂಕ್ಷ್ಮಾತ್ಮಾ ಕ್ಷಣತ್ರುಟಿಶೋ ನಿಮೇಷರೋಮಾ।
12309024c ಋತ್ವಾಸ್ಯಃ ಸಮಬಲಶುಕ್ಲಕೃಷ್ಣನೇತ್ರೋ ಮಾಂಸಾಂಗೋ ದ್ರವತಿ ವಯೋಹಯೋ ನರಾಣಾಮ್।।

ಓಡುತ್ತಿರುವ ಮನುಷ್ಯನ ಆಯುಸ್ಸೆಂಬ ಈ ಕುದುರೆಯು ಅವ್ಯಕ್ತ ಪ್ರಕೃತಿ. ಕಲೆ4ಯೇ ಇದರ ಶರೀರ. ಆತ್ಮವು ಅತ್ಯಂತ ಸೂಕ್ಷ್ಮ. ಕ್ಷಣ5, ತ್ರುಟಿ ಮತ್ತು ನಿಮಿಷಗಳೇ ಅದರ ರೋಮಗಳು. ಋತುಗಳೇ ಅದರ ಮುಖ. ಸಮಾನ ಬಲವುಳ್ಳ ಕೃಷ್ಣ ಮತ್ತು ಶುಕ್ಲ ಪಕ್ಷಗಳೇ ಅದರ ನೇತ್ರಗಳು. ಮಾಸಗಳೇ ಅದರ ಅವಯವಗಳು.

12309025a ತಂ ದೃಷ್ಟ್ವಾ ಪ್ರಸೃತಮಜಸ್ರಮುಗ್ರವೇಗಂ ಗಚ್ಚಂತಂ ಸತತಮಿಹಾವ್ಯಪೇಕ್ಷಮಾಣಮ್।
12309025c ಚಕ್ಷುಸ್ತೇ ಯದಿ ನ ಪರಪ್ರಣೇತೃನೇಯಂ ಧರ್ಮೇ ತೇ ಭವತು ಮನಃ ಪರಂ ನಿಶಮ್ಯ।।

ಭಯಂಕರ ವೇಗದಿಂದ ಯಾವುದನ್ನೂ ಅಪೇಕ್ಷಿಸದೇ ಸತತವಾಗಿ ಓಡುತ್ತಿರುವ ಆ ಕುದುರೆಯನ್ನು ನೋಡಿ ನಿನ್ನ ಜ್ಞಾನದೃಷ್ಟಿಯು ಬೇರೆ ಕಡೆ ಚಲಿಸದಂತೆ ವಿಚಲಿತವಾಗಿರಲಿ. ನಿನ್ನ ಮನಸ್ಸು ಯಾವಾಗಲೂ ಪರಮ ಧರ್ಮದಲ್ಲಿಯೇ ಆಸಕ್ತವಾಗಿರಲಿ.

12309026a ಯೇಽಮೀ ತು ಪ್ರಚಲಿತಧರ್ಮಕಾಮವೃತ್ತಾಃ ಕ್ರೋಶಂತಃ ಸತತಮನಿಷ್ಟಸಂಪ್ರಯೋಗಾಃ।
12309026c ಕ್ಲಿಶ್ಯಂತೇ ಪರಿಗತವೇದನಾಶರೀರಾ ಬಹ್ವೀಭಿಃ ಸುಭೃಶಮಧರ್ಮವಾಸನಾಭಿಃ।।

ಈ ಲೋಕದಲ್ಲಿ ಧರ್ಮದಿಂದ ವಿಚಲಿತರಾಗಿ ಸ್ಚೇಚ್ಛಾಚಾರದಲಿ ಪ್ರವೃತ್ತರಾಗಿರುವ, ಇತರರನ್ನು ನಿಂದಿಸುವ ಮತ್ತು ಯಾವಾಗಲೂ ಅನಿಷ್ಟಕರ ಅಶುಭಕರ್ಮಗಳಲ್ಲಿಯೇ ನಿರತರಾಗಿರುವ ಮನುಷ್ಯರು ಮರಣಾನಂತರ ಯಮಲೋಕದಲ್ಲಿ ಯಾತನಾಮಯ ಶರೀರವನ್ನು ಹೊಂದಿ ತಮ್ಮ ಅನೇಕ ಅಧರ್ಮ-ಅಶುಭ ಕರ್ಮಫಲಗಳಿಂದಾಗಿ ನಾನಾವಿಧದ ಕ್ಲೇಶಗಳನ್ನು ಅನುಭವಿಸುತ್ತಾರೆ.

12309027a ರಾಜಾ ಧರ್ಮಪರಃ ಸದಾ ಶುಭಗೋಪ್ತಾ6 ಸಮೀಕ್ಷ್ಯ ಸುಕೃತಿನಾಂ ದಧಾತಿ ಲೋಕಾನ್।
12309027c ಬಹುವಿಧಮಪಿ ಚರತಃ ಪ್ರದಿಶತಿ ಸುಖಮನುಪಗತಂ ನಿರವದ್ಯಮ್।।

ಧರ್ಮಪರನೂ ಸದಾ ಶುಭಫಲಗಳನ್ನು ರಕ್ಷಿಸುವವನೂ ಆದ ಯಮರಾಜನು ಸುಕೃತಗಳನ್ನು ನೋಡಿ ಲೋಕಗಳನ್ನು ನೀಡುತ್ತಾನೆ. ಬಹುವಿಧದ ಶುಭಕರ್ಮಗಳನ್ನು ಮಾಡಿದವರಿಗೆ ಸಾವಿರಾರು ಜನ್ಮಗಳಲ್ಲಿಯೂ ದೊರೆಯದಿರುವ ಉತ್ಕೃಷ್ಟ ಸುಖವನ್ನು ನೀಡುತ್ತಾನೆ.

12309028a ಶ್ವಾನೋ ಭೀಷಣಾಯೋಮುಖಾನಿ ವಯಾಂಸಿ ವಡಗೃಧ್ರಕುಲಪಕ್ಷಿಣಾಂ ಚ ಸಂಘಾಃ।
12309028c ನರಾಂ ಕದನೇ ರುಧಿರಪಾ ಗುರುವಚನ ನುದಮುಪರತಂ ವಿಶಸಂತಿ।।

ಗುರುವಚನವನ್ನು ನಿರಾದರಿಸುವವನನ್ನು ಭಯಂಕರ ಶರೀರದ ನಾಯಿಗಳೂ, ಲೋಹಮಯ ಮುಖಗಳುಳ್ಳ ಪಕ್ಷಿಗಳೂ, ಕಾಗೆ-ಹದ್ದು ಗಳಂಥಹ ಪಕ್ಷಿಸಮೂಹಗಳೂ ಕುಕ್ಕಿ ಕುಕ್ಕಿ ತಿನ್ನುತ್ತವೆ.

12309029a ಮರ್ಯಾದಾ ನಿಯತಾಃ ಸ್ವಯಂಭುವಾ ಯ ಇಹೇಮಾಃ ಪ್ರಭಿನತ್ತಿ ದಶಗುಣಾ ಮನೋನುಗತ್ವಾತ್।
12309029c ನಿವಸತಿ ಭೃಶಮಸುಖಂ ಪಿತೃವಿಷಯ ವಿಪಿನಮವಗಾಹ್ಯ ಸ ಪಾಪಃ।।

ಕಾಮಾಭಿಭೂತ ಮನಸ್ಸನ್ನು ಅನುಸರಿಸಿ ಸ್ವಯಂಭುವು ವಿಧಿಸಿರುವ ಹತ್ತು ಧರ್ಮ7ಗಳ ಮರ್ಯಾದೆಯನ್ನು ಉಲ್ಲಂಘಿಸುವ ಮನುಷ್ಯನು ಮರಣಾನಂತರ ಯಮಲೋಕದ ಅಸಿತಪತ್ರವನಕ್ಕೆ ಹೋಗಿ ಅಲ್ಲಿ ಅತಿಕಷ್ಟವನ್ನು ಅನುಭವಿಸುತ್ತಾನೆ.

12309030a ಯೋ ಲುಬ್ಧಃ ಸುಭೃಶಂ ಪ್ರಿಯಾನೃತಶ್ಚ ಮನುಷ್ಯಃ ಸತತನಿಕೃತಿವಂಚನಾರತಿಃ ಸ್ಯಾತ್।
12309030c ಉಪನಿಧಿಭಿರಸುಖಕೃತ್ಸ ಪರಮನಿರಯಗೋ ಭೃಶಮಸುಖಮನುಭವತಿ ದುಷ್ಕೃತಕರ್ಮಾ।।

ಅತ್ಯಂತಲೋಭಿಯೂ, ಸುಳ್ಳನ್ನಾಡುವುದರಲ್ಲಿಯೇ ಹೆಚ್ಚು ಅಭಿರುಚಿಯುಳ್ಳ, ಸತತವೂ ಕಪಟ-ಮೋಸ-ವಂಚನೆಗಳಲ್ಲಿಯೇ ನಿರತನಾಗಿರುವ, ರಕ್ಷಣೆಗಾಗಿಟ್ಟ ಧನವನ್ನು ದುರುಪಯೋಗಮಾಡಿಕೊಂಡು ಅದನ್ನಿಟ್ಟವರಿಗೆ ದುಃಖವನ್ನುಂಟುಮಾಡುವ ದುಷ್ಕರ್ಮಿ ಪಾಪಾತ್ಮ ಮನುಷ್ಯನು ಮರಣಾನಂತರ ಘೋರನರಕದಲ್ಲಿ ಅತ್ಯಂತ ದುಃಖವನ್ನು ಅನುಭವಿಸುತ್ತಾನೆ.

12309031a ಉಷ್ಣಾಂ ವೈತರಣೀಂ ಮಹಾನದೀಮ್ ಅವಗಾಢೋಽಸಿಪತ್ರವನಭಿನ್ನಗಾತ್ರಃ।
12309031c ಪರಶುವನಶಯೋ ನಿಪತಿತೋ ವಸತಿ ಚ ಮಹಾನಿರಯೇ ಭೃಶಾರ್ತಃ।।

ಅಂಥವನು ಕುದಿಯುತ್ತಿರುವ ಮಹಾನದೀ ವೈತರಣಿಯಲ್ಲಿ ಮುಳುಗುತ್ತಾನೆ. ಕತ್ತಿಗಳೇ ಎಲೆಗಳಾಗಿರುವ ವೃಕ್ಷಗಳ ವನದಲ್ಲಿ ಅವನ ಶರೀರವು ಛಿನ್ನ-ಛಿನ್ನವಾಗುತ್ತದೆ. ಕೊಡಲಿಗಳ ವನದಲ್ಲಿ ಮಲಗಬೇಕಾಗುತ್ತದೆ. ಹೀಗೆ ಅವನು ನಾನಾವಿಧದ ಪೀಡೆಗಳಿಗೊಳಗಾಗುತ್ತಾ ಘೋರ ನರಕದಲ್ಲಿ ವಾಸಿಸುತ್ತಾನೆ.

12309032a ಮಹಾಪದಾನಿ ಕತ್ಥಸೇ ನ ಚಾಪ್ಯವೇಕ್ಷಸೇ ಪರಮ್।
12309032c ಚಿರಸ್ಯ ಮೃತ್ಯುಕಾರಿಕಾಮನಾಗತಾಂ ನ ಬುಧ್ಯಸೇ।।

ಮಹಾ ಲೋಕಗಳ ಕುರಿತು ಹೇಳುತ್ತಿರುವೆಯೇ ವಿನಃ ಅವಕ್ಕೂ ಶ್ರೇಷ್ಠವಾಗಿರುವ ಗತಿಯನ್ನು ನೀನು ಕಾಣುತ್ತಿಲ್ಲ. ಇನ್ನೂ ಒದಗಿರದ ಮೃತ್ಯುವಿಗೆ ಕಾರಣವಾದ, ಮುಂದೆ ಬರಲಿರುವ ಮುಪ್ಪಿನ ಕುರಿತು ನಿನಗೆ ತಿಳಿದಿಲ್ಲ.

12309033a ಪ್ರಯಾಸ್ಯತಾಂ ಕಿಮಾಸ್ಯತೇ ಸಮುತ್ಥಿತಂ ಮಹದ್ಭಯಮ್।
12309033c ಅತಿಪ್ರಮಾಥಿ ದಾರುಣಂ ಸುಖಸ್ಯ ಸಂವಿಧೀಯತಾಮ್।।

ಸುಮ್ಮನೇ ಏಕೆ ಕುಳಿತಿದ್ದೀಯೆ? ಹೃದಯವನ್ನೇ ಕದಡಿಬಿಡುವ ದಾರುಣ ಮಹಾ ಭಯವು ಉತ್ಪನ್ನವಾಗಿದೆ. ಶೀಘ್ರವಾಗಿ ಮುಂದೆ ಹೋಗು. ಪರಮಾನಂದಪ್ರಾಪ್ತಿಗೆ ಪ್ರಯತ್ನಿಸು.

12309034a ಪುರಾ ಮೃತಃ ಪ್ರಣೀಯಸೇ ಯಮಸ್ಯ ಮೃತ್ಯುಶಾಸನಾತ್8
12309034c ತದಂತಿಕಾಯ ದಾರುಣೈಃ ಪ್ರಯತ್ನಮಾರ್ಜವೇ ಕುರು।।

ಯಮನ ಮೃತ್ಯುಶಾಸನದಂತೆ ಯಮದೂತರು ಬಂದು ನಿನ್ನನ್ನು ಆ ದಾರುಣ ಅಂತಕನ ಬಳಿ ಕರೆದೊಯ್ಯುವ ಮೊದಲೇ ಆರ್ಜವಕ್ಕಾಗಿ ಪ್ರಯತ್ನಿಸು.

12309035a ಪುರಾ ಸಮೂಲಬಾಂಧವಂ ಪ್ರಭುರ್ಹರತ್ಯದುಃಖವಿತ್।
12309035c ತವೇಹ ಜೀವಿತಂ ಯಮೋ ನ ಚಾಸ್ತಿ ತಸ್ಯ ವಾರಕಃ।।

ಪ್ರಭು ಯಮನು ಯಾರ ದುಃಖಗಳನ್ನೂ ತಿಳಿದಿರುವುದಿಲ್ಲ. ಅವನು ಶರೀರಸಹಿತವಾಗಿ ನಿನ್ನ ಜೀವನವನ್ನು ಇಲ್ಲಿಂದಲೇ ಅಪಹರಿಸಿಕೊಂಡು ಹೋಗುತ್ತಾನೆ. ಅವನನ್ನು ತಡೆಯುವವರು ಯಾರೂ ಇಲ್ಲ.

12309036a ಪುರಾ ವಿವಾತಿ ಮಾರುತೋ ಯಮಸ್ಯ ಯಃ ಪುರಃಸರಃ।
12309036c ಪುರೈಕ ಏವ ನೀಯಸೇ ಕುರುಷ್ವ ಸಾಂಪರಾಯಿಕಮ್।।

ಯಮನ ಮುಂದೆ ಮುಂದೆ ಮಾರುತನು ಹೋಗಿ ನಿನ್ನನ್ನು ಕೊಂಡೊಯ್ಯುವ ಮೊದಲೇ ಮರಣಾನಂತರದ ಪರಮ ಸುಖಕ್ಕೆ ಸಾಧಕವಾದ ಧರ್ಮಾಚರಣೆಗಳನ್ನು ಮಾಡು.

12309037a ಪುರಾ ಸಹಿಕ್ಕ ಏವ ತೇ ಪ್ರವಾತಿ ಮಾರುತೋಽಂತಕಃ।
12309037c ಪುರಾ ಚ ವಿಭ್ರಮಂತಿ ತೇ ದಿಶೋ ಮಹಾಭಯಾಗಮೇ।।

ಹಿಂದಿನ ಜನ್ಮದಲ್ಲಿಯೂ ಆ ಯಮನೇ ನಿನ್ನ ಪ್ರಾಣಗಳನ್ನು ಒಯ್ದಿದ್ದನು. ಈಗಲೂ ವಾಯುರೂಪನಾದ ಆ ಅಂತಕನೇ ನಿನ್ನ ಮುಂದೆ ಬರುತ್ತಾನೆ. ಆಗ ನಿನಗೆ ಮಹಾಭಯವುಂಟಾಗುತ್ತದೆ. ದಿಕ್ಕುಗಳೂ ತಿರುಗುತ್ತಿರುವಂತೆ ಕಾಣುತ್ತದೆ. ಹಾಗಾಗುವ ಮೊದಲೇ ಧರ್ಮಾಚರಣೆ ಮಾಡು.

12309038a ಸ್ಮೃತಿಶ್ಚ ಸಂನಿರುಧ್ಯತೇ ಪುರಾ ತವೇಹ ಪುತ್ರಕ।
12309038c ಸಮಾಕುಲಸ್ಯ ಗಚ್ಚತಃ ಸಮಾಧಿಮುತ್ತಮಂ ಕುರು।।

ಪುತ್ರಕ! ನೀನು ಈ ಶರೀರವನ್ನು ಬಿಟ್ಟುಹೋಗುವಾಗ ವ್ಯಾಕುಲಿತನಾಗುವ ನಿನ್ನ ಸ್ಮೃತಿಯೂ ನಷ್ಟವಾಗಿಹೋಗುತ್ತದೆ. ಹಾಗಾಗುವುದಕ್ಕೆ ಮೊದಲೇ ನೀನು ಉತ್ತಮ ಸಮಾಧಿಯೋಗವನ್ನು ಸಾಧಿಸು.

12309039a ಕೃತಾಕೃತೇ ಶುಭಾಶುಭೇ ಪ್ರಮಾದಕರ್ಮವಿಪ್ಲುತೇ।
12309039c ಸ್ಮರನ್ ಪುರಾ ನ ತಪ್ಯಸೇ ನಿಧತ್ಸ್ವ ಕೇವಲಂ ನಿಧಿಮ್।।

ಹಿಂದೆ ನೀನು ಅಜಾಗರೂಕತೆಯಿಂದ ಪೀಡಾರೂಪದ ಕರ್ಮಗಳನ್ನು ಮಾಡಿ, ಈ ಜನ್ಮದಲ್ಲಿ ಆ ಶುಭಾಶುಭಕರ್ಮಗಳ ಫಲವನ್ನು ಅನುಭವಿಸಬೇಕಾಗುತ್ತದೆ. ಅದನ್ನು ಸ್ಮರಿಸಿ ಪಶ್ಚಾತ್ತಾಪ ಪಡುವುದರ ಮೊದಲೇ ಅಂತಹ ಕರ್ಮಗಳನ್ನು ಮಾಡಹೋಗದೇ ಜ್ಞಾನಭಂಡಾರವನ್ನೇ ಸಂಗ್ರಹಿಸು. ಇದರಿಂದ ನೀನು ಪರಿತಪಿಸಬೇಕಾಗುವುದಿಲ್ಲ.

12309040a ಪುರಾ ಜರಾ ಕಲೇವರಂ ವಿಜರ್ಜರೀಕರೋತಿ ತೇ।
12309040c ಬಲಾಂಗರೂಪಹಾರಿಣೀ ನಿಧತ್ಸ್ವ ಕೇವಲಂ ನಿಧಿಮ್।।

ನಿನ್ನ ಶರೀರವನ್ನು ಜೀರ್ಣಗೊಳಿಸುವುದರ ಮೊದಲೇ ಮತ್ತು ಅಂಗಾಗಗಳ ಬಲ-ರೂಪಗಳು ಅಪಹರಿಸಲ್ಪಡುವ ಮೊದಲೇ ನೀನು ಜ್ಞಾನಭಂಡಾರವನ್ನು ತುಂಬಿಸಿಕೋ.

12309041a ಪುರಾ ಶರೀರಮಂತಕೋ ಭಿನತ್ತಿ ರೋಗಸಾಯಕೈಃ।
12309041c ಪ್ರಸಹ್ಯ ಜೀವಿತಕ್ಷಯೇ ತಪೋ ಮಹತ್ ಸಮಾಚರ।।

ರೋಗವನ್ನೇ ಸಾರಥಿಯನ್ನಾಗುಳ್ಳ ಅಂತಕನು ಬಲಾತ್ಕಾರವಾಗಿ ಶರೀರವನ್ನು ನಾಶಗೊಳಿಸುವುದರ ಮೊದಲೇ ಮತ್ತು ಅದರಿಂದ ನಿನ್ನ ಜೀವಿತವು ವಿನಾಶಹೊಂದುವ ಮೊದಲೇ ಆತ್ಮೋದ್ಧಾರಕವಾದ ಮಹಾತಪಸ್ಸನ್ನು ಆಚರಿಸು.

12309042a ಪುರಾ ವೃಕಾ ಭಯಂಕರಾ ಮನುಷ್ಯದೇಹಗೋಚರಾಃ।
12309042c ಅಭಿದ್ರವಂತಿ ಸರ್ವತೋ ಯತಸ್ವ ಪುಣ್ಯಶೀಲನೇ।।

ಮನುಷ್ಯನ ದೇಹದಲ್ಲಿ ಗೋಚರವಾಗುವ ಕಾಮ-ಕ್ರೋಧಾದಿ ಭಯಂಕರ ತೋಳಗಳು ಎಲ್ಲ ಕಡೆಗಳಿಂದಲೂ ಓಡಿ ಬಂದು ಆಕ್ರಮಣ ಮಾಡುವುದರ ಮೊದಲೇ ಪುಣ್ಯಶೀಲನಾಗಲು ಪ್ರಯತ್ನಿಸು.

12309043a ಪುರಾಂಧಕಾರಮೇಕಕೋಽನುಪಶ್ಯಸಿ ತ್ವರಸ್ವ ವೈ।
12309043c ಪುರಾ ಹಿರಣ್ಮಯಾನ್ನಗಾನ್ನಿರೀಕ್ಷಸೇಽದ್ರಿಮೂರ್ಧನಿ।।

ಮರಣಕಾಲದಲ್ಲಿ ಘೋರ ಅಂಧಕಾರವನ್ನು ಮತ್ತು ಪರ್ವತ ಶಿಖರದಲ್ಲಿರುವ ಸುವರ್ಣಮಯ ವೃಕ್ಷಗಳನ್ನು ಕಾಣುವ ಮೊದಲೇ ನೀನು ಶೀಘ್ರವಾಗಿ ಅತ್ಮೋದ್ಧಾರಕವಾದ ತಪಸ್ಸನ್ನು ಆಚರಿಸು.

12309044a ಪುರಾ ಕುಸಂಗತಾನಿ ತೇ ಸುಹೃನ್ಮುಖಾಶ್ಚ ಶತ್ರವಃ।
12309044c ವಿಚಾಲಯಂತಿ ದರ್ಶನಾದ್ ಘಟಸ್ವ ಪುತ್ರ ಯತ್ಪರಮ್।।

ದುಷ್ಟರ ಸಹವಾಸವು ಕರ್ತವ್ಯದಿಂದ ಚ್ಯುತನನ್ನಾಗಿ ಮಾಡುವುದರ ಮೊದಲೇ ಮತ್ತು ಸ್ನೇಹಿತರ ಮುಖವಾಡವನ್ನು ಧರಿಸಿದ ಶತ್ರುಗಳು ದರ್ಶನಮಾತ್ರದಿಂದಲೇ ನಿನ್ನನ್ನು ಕರ್ತವ್ಯಭ್ರಷ್ಟನನ್ನಾಗಿ ಮಾಡುವ ಮೊದಲೇ ನೀನು ಪರಮ ಪದವನ್ನು ಪಡೆಯಲು ಪ್ರಯತ್ನಿಸು.

12309045a ಧನಸ್ಯ ಯಸ್ಯ ರಾಜತೋ ಭಯಂ ನ ಚಾಸ್ತಿ ಚೌರತಃ।
12309045c ಮೃತಂ ಚ ಯನ್ನ ಮುಂಚತಿ ಸಮರ್ಜಯಸ್ವ ತದ್ಧನಮ್।।

ಯಾವ ಧನಕ್ಕೆ ರಾಜನಿಂದಾಲೀ ಕಳ್ಳನಿಂದಾಗಲೀ ಭಯವಿಲ್ಲವೋ ಮತ್ತು ಯಾವ ಧನವು ನೀನು ಸತ್ತುಹೋದರೂ ನಿನ್ನನ್ನು ತ್ಯಜಿಸಿ ಹೋಗುವುದಿಲ್ಲವೋ ಅಂಥಹ ಧರ್ಮಧನವನ್ನು ಸಂಪಾದಿಸು.

12309046a ನ ತತ್ರ ಸಂವಿಭಜ್ಯತೇ ಸ್ವಕರ್ಮಭಿಃ ಪರಸ್ಪರಮ್।
12309046c ಯದೇವ ಯಸ್ಯ ಯೌತಕಂ ತದೇವ ತತ್ರ ಸೋಽಶ್ನುತೇ।।

ಮಾವನು ಅಳಿಯನಿಗೆ ಕೊಟ್ಟ ಬಳುವಳಿಯನ್ನು ಬೇರೆ ಯಾರೂ ಹಂಚಿಕೊಳ್ಳಲು ಸಾಧ್ಯವಾಗದಂತೆ ತಾನು ಇಲ್ಲಿ ಕರ್ಮಗಳನ್ನು ಮಾಡಿ ಸಂಪಾದಿಸಿದ ಫಲವನ್ನು ಪರಲೋಕದಲ್ಲಿ ಇತರರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಆ ಕರ್ಮಗಳ ಫಲವನ್ನು ಅವನೊಬ್ಬನೇ ಪರಲೋಕದಲ್ಲಿ ಅನುಭವಿಸುತ್ತಾನೆ.

12309047a ಪರತ್ರ ಯೇನ ಜೀವ್ಯತೇ ತದೇವ ಪುತ್ರ ದೀಯತಾಮ್।
12309047c ಧನಂ ಯದಕ್ಷಯಂ ಧ್ರುವಂ ಸಮರ್ಜಯಸ್ವ ತತ್ ಸ್ವಯಮ್।।

ಪುತ್ರ! ಯಾವುದನ್ನು ದಾನಮಾಡಿದರೆ ಪರಲೋಕದಲ್ಲಿ ಸುಖವಾಗಿರಲು ಸಾಧ್ಯವಾಗುತ್ತದೆಯೋ ಅಂತಹ ಉತ್ತಮ ಪದಾರ್ಥಗಳನ್ನೇ ದಾನಮಾಡು. ಧರ್ಮರೂಪವಾದ ಯಾವ ಧನವು ಅವಿನಾಶಿಯೂ ಶಾಶ್ವತವೂ ಆಗಿರುವುದೋ ಅದನ್ನೇ ಸಂಪಾದಿಸು.

12309048a ನ ಯಾವದೇವ ಪಚ್ಯತೇ ಮಹಾಜನಸ್ಯ ಯಾವಕಮ್।
12309048c ಅಪಕ್ವ ಏವ ಯಾವಕೇ ಪುರಾ ಪ್ರಣೀಯಸೇ ತ್ವರ।।

ಮಹಾಜನರಿಗೆ ಗಂಜಿಯನ್ನು ಬೇಯಿಸುತ್ತಿದ್ದರೆ ಅದು ಬೇಯುವುದರೊಳಗೇ ನೀನು ಮರಣಹೊಂದಿಬಿಡಬಹುದು. ಆದುದರಿಂದ ಅತಿ ಶೀಘ್ರವಾಗಿ ಧರ್ಮವನ್ನಾಚರಿಸು9.

12309049a ನ ಮಾತೃಪಿತೃಬಾಂಧವಾ ನ ಸಂಸ್ತುತಃ ಪ್ರಿಯೋ ಜನಃ।
12309049c ಅನುವ್ರಜಂತಿ ಸಂಕಟೇ ವ್ರಜಂತಮೇಕಪಾತಿನಮ್।।

ಏಕಾಕಿಯಾಗಿ ಪರಲೋಕಕ್ಕೆ ಹೋಗುವಾಗ ಅಂತಹ ಸಂಕಟಸಮಯದಲ್ಲಿಯೂ ತಾಯಿಯಾಗಲೀ, ತಂದೆಯಾಗಲೀ, ಬಾಂಧವರಾಗಲೀ, ಪರಿಚಿತ ಪ್ರಿಯ ಜನರಾಗಲೀ ಅವನನ್ನು ಅನುಸರಿಸಿ ಹೋಗುವುದಿಲ್ಲ.

12309050a ಯದೇವ ಕರ್ಮ ಕೇವಲಂ ಸ್ವಯಂ ಕೃತಂ ಶುಭಾಶುಭಮ್।
12309050c ತದೇವ ತಸ್ಯ ಯೌತಕಂ ಭವತ್ಯಮುತ್ರ ಗಚ್ಚತಃ।।

ಪರಲೋಕಕ್ಕೆ ಹೋಗುವಾಗ ಕೇವಲ ಸ್ವಯಂ ಮಾಡಿದ ಶುಭಾಶುಭಕರ್ಮಗಗಳ ಫಲಗಳು ಮಾತ್ರ ಜೊತೆಯಲ್ಲಿರುತ್ತವೆ.

12309051a ಹಿರಣ್ಯರತ್ನಸಂಚಯಾಃ ಶುಭಾಶುಭೇನ ಸಂಚಿತಾಃ।
12309051c ನ ತಸ್ಯ ದೇಹಸಂಕ್ಷಯೇ ಭವಂತಿ ಕಾರ್ಯಸಾಧಕಾಃ।।

ಶುಭಾಶುಭ ಕರ್ಮಗಳಿಂದ ಸಂಪಾದಿಸಿ ಕೂಡಿಟ್ಟ ಧನಕನಕವಸ್ತುವಾಹನಾದಿಗಳು ದೇಹಸಂಕ್ಷಯವಾದಾಗ ಅವನ ಕಾರ್ಯಸಾಧಕಗಳಾಗುವುದಿಲ್ಲ.

12309052a ಪರತ್ರಗಾಮಿಕಸ್ಯ ತೇ ಕೃತಾಕೃತಸ್ಯ ಕರ್ಮಣಃ।
12309052c ನ ಸಾಕ್ಷಿರಾತ್ಮನಾ ಸಮೋ ನೃಣಾಮಿಹಾಸ್ತಿ ಕಶ್ಚನ।।

ಪರಲೋಕಯಾತ್ರೆಯನ್ನು ಮಾಡುವಾಗ ಅವನು ಮಾಡಿದ ಅಥವಾ ಮಾಡದಿದ್ದ ಕರ್ಮಗಳ ಸಾಕ್ಷಿಯು ಆತ್ಮನಲ್ಲದೇ ಬೇರೆ ಯಾರೂ ಇರುವುದಿಲ್ಲ.

12309053a ಮನುಷ್ಯದೇಹಶೂನ್ಯಕಂ ಭವತ್ಯಮುತ್ರ ಗಚ್ಚತಃ।
12309053c ಪ್ರಪಶ್ಯ ಬುದ್ಧಿಚಕ್ಷುಷಾ ಪ್ರದೃಶ್ಯತೇ ಹಿ ಸರ್ವತಃ।।

ಪರಲೋಕಕ್ಕೆ ಹೋಗುವಾಗ ಮನುಷ್ಯದೇಹವು ಶೂನ್ಯಕವಾಗುತ್ತದೆ. ಜೀವವು ಸೂಕ್ಷ್ಮಶರೀರವನ್ನು ಪ್ರವೇಶಿಸಿ ಬುದ್ಧಿರೂಪವಾದ ಕಣ್ಣಿನ ಮೂಲಕ ಎಲ್ಲ ಕಡೆ ನೋಡುತ್ತದೆ.

12309054a ಇಹಾಗ್ನಿಸೂರ್ಯವಾಯವಃ ಶರೀರಮಾಶ್ರಿತಾಸ್ತ್ರಯಃ।
12309054c ತ ಏವ ತಸ್ಯ ಸಾಕ್ಷಿಣೋ ಭವಂತಿ ಧರ್ಮದರ್ಶಿನಃ।।

ಈ ಲೋಕದಲ್ಲಿ ಅಗ್ನಿ, ಸೂರ್ಯ ಮತ್ತು ವಾಯು ಈ ಮೂವರು ಶರೀರದಲ್ಲಿ ವಾಸಿಸಿರುತ್ತಾರೆ. ಅವರೇ ಅವನ ಧರ್ಮಕರ್ಮಗಳಿಗೆ ಸಾಕ್ಷಿಗಳಾಗುತ್ತಾರೆ.

12309055a ಯಥಾನಿಶೇಷು ಸರ್ವತಃಸ್ಪೃಶತ್ಸು ಸರ್ವದಾರಿಷು10
12309055c ಪ್ರಕಾಶಗೂಢವೃತ್ತಿಷು ಸ್ವಧರ್ಮಮೇವ ಪಾಲಯ।।

ರಾತ್ರಿಯು ಎಲ್ಲ ಪದಾರ್ಥಗಳನ್ನೂ ಮುಚ್ಚಿಬಿಡುತ್ತದೆ. ಎಲ್ಲಕಡೆ ಪಸರಿಸಿ ಎಲ್ಲವನ್ನೂ ಸ್ಪರ್ಶಿಸುತ್ತದೆ. ನೀನು ಕತ್ತಲೆಯಲ್ಲಿ ಮತ್ತು ಹಗಲಿನಲ್ಲಿ ಕೂಡ ಸ್ವಧರ್ಮವನ್ನೇ ಪಾಲಿಸು.

12309056a ಅನೇಕಪಾರಿಪಂಥಿಕೇ ವಿರೂಪರೌದ್ರರಕ್ಷಿತೇ11
12309056c ಸ್ವಮೇವ ಕರ್ಮ ರಕ್ಷ್ಯತಾಂ ಸ್ವಕರ್ಮ ತತ್ರ ಗಚ್ಚತಿ।।

ಪರಲೋಕದ ಮಾರ್ಗದಲ್ಲಿ ಅನೇಕ ವಿರೂಪ ರೌದ್ರ ತಲೆಗಡುಕರಿರುತ್ತಾರೆ. ಸ್ವಕರ್ಮವು ಮಾತ್ರ ಅಲ್ಲಿ ರಕ್ಷಣೆಗೆ ಸಹಾಯಕವಾಗುತ್ತದೆ. ಆದುದರಿಂದ ಸ್ವಯಂ ನಿನ್ನ ಕರ್ಮಗಳನ್ನು ರಕ್ಷಿಸಿಕೊಳ್ಳಬೇಕು.

12309057a ನ ತತ್ರ ಸಂವಿಭಜ್ಯತೇ ಸ್ವಕರ್ಮಣಾ ಪರಸ್ಪರಮ್।
12309057c ಯಥಾಕೃತಂ ಸ್ವಕರ್ಮಜಂ ತದೇವ ಭುಜ್ಯತೇ ಫಲಮ್।।

ಅಲ್ಲಿ ತನ್ನ ಕರ್ಮಗಳಲ್ಲಿ ಶುಭ-ಅಶುಭಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ತಾನು ಹೇಗೆ ಮಾಡಿದ್ದನೋ ಆ ಕರ್ಮಗಳ ಫಲವನ್ನು ತಾನೇ ಅನುಭವಿಸಬೇಕಾಗುತ್ತದೆ.

12309058a ಯಥಾಪ್ಸರೋಗಣಾಃ ಫಲಂ ಸುಖಂ ಮಹರ್ಷಿಭಿಃ ಸಹ।
12309058c ತಥಾಪ್ನುವಂತಿ ಕರ್ಮತೋ ವಿಮಾನಕಾಮಗಾಮಿನಃ।।

ಹೇಗೆ ಅಪ್ಸರಗಣಗಳು ಮಹರ್ಷಿಗಳ ಜೊತೆಗೆ ಪುಣ್ಯಫಲಗಳ ಸುಖವನ್ನು ಅನುಭವಿಸುವರೋ ಹಾಗೆ ಪುಣ್ಯಕರ್ಮಿಗಳು ವಿಮಾನದಲ್ಲಿ ಹೋಗುವ ಕಾಮಗಾಮಿಗಳಾಗುತ್ತಾರೆ.

12309059a ಯಥೇಹ ಯತ್ ಕೃತಂ ಶುಭಂ ವಿಪಾಪ್ಮಭಿಃ ಕೃತಾತ್ಮಭಿಃ।
12309059c ತದಾಪ್ನುವಂತಿ ಮಾನವಾಸ್ತಥಾ ವಿಶುದ್ಧಯೋನಯಃ।।

ಪಾಪರಹಿತ ಮತ್ತು ಪರಿಶುದ್ಧಹೃದಯಿಗಳು ಯಾವ ಶುಭಕರ್ಮಗಳನ್ನು ಮಾಡುತ್ತಾರೋ ಅದಕ್ಕನುಸಾರವಾಗಿ ಜನ್ಮಾಂತರದಲ್ಲಿ ಸತ್ಕುಲಗಳಲ್ಲಿ ಜನ್ಮತಾಳಿ ಅವುಗಳ ಫಲವನ್ನು ಪಡೆದುಕೊಳ್ಳುತ್ತಾರೆ.

12309060a ಪ್ರಜಾಪತೇಃ ಸಲೋಕತಾಂ ಬೃಹಸ್ಪತೇಃ ಶತಕ್ರತೋಃ।
12309060c ವ್ರಜಂತಿ ತೇ ಪರಾಂ ಗತಿಂ ಗೃಹಸ್ಥಧರ್ಮಸೇತುಭಿಃ।।

ಗೃಹಸ್ಥಧರ್ಮದ ಸೇತುವೆಯನ್ನು ಅನುಸರಿಸಿ ಹೋಗುವವರು ಪ್ರಜಾಪತಿಯ, ಬೃಹಸ್ಪತಿಯ ಅಥವಾ ಶತಕ್ರತುವಿನ ಲೋಕಗಳಿಗೆ ಹೋಗಿ ಪರಮ ಗತಿಯನ್ನು ಹೊಂದುತ್ತಾರೆ.

12309061a ಸಹಸ್ರಶೋಽಪ್ಯನೇಕಶಃ ಪ್ರವಕ್ತುಮುತ್ಸಹಾಮಹೇ12
12309061c ಅಬುದ್ಧಿಮೋಹನಂ ಪುನಃ ಪ್ರಭುರ್ವಿನಾ ನ ಯಾವಕಮ್13।।

ನಿನಗೆ ಇದನ್ನು ಸಾವಿರ ಸಲ ಮತ್ತು ಇನ್ನೂ ಹಲವಾರು ಬಾರಿ ಹೇಳುವ ಉತ್ಸಾಹದಿಂದಿದ್ದೇನೆ. ಬುದ್ಧಿಯನ್ನು ಮೋಹಗೊಳಿಸದಿರುವ ಆ ಪ್ರಭು ಧರ್ಮದ ವಿನಃ ಯಾರೂ ಆ ಪರಮ ಗತಿಯನ್ನು ಹೊಂದುವುದಿಲ್ಲ.

12309062a ಗತಾ ದ್ವಿರಷ್ಟವರ್ಷತಾ14 ಧ್ರುವೋಽಸಿ ಪಂಚವಿಂಶಕಃ।
12309062c ಕುರುಷ್ವ ಧರ್ಮಸಂಚಯಂ ವಯೋ ಹಿ ತೇಽತಿವರ್ತತೇ।।

ನಿನಗೆ ಈಗಾಗಲೇ ಹದಿನಾರು ವರ್ಷಗಳಾಗಿವೆ. ನೀನು ಇಪ್ಪತ್ತೈದು ವರ್ಷದವನೂ ನಿಶ್ಚಿತವಾಗಿ ಆಗುತ್ತೀಯೆ. ನಿನ್ನ ವಯಸ್ಸು ಹೀಗೆಯೇ ಕಳೆದುಹೋಗುತ್ತಿರುತ್ತದೆ. ಆದುದರಿಂದ ಧರ್ಮವನ್ನು ಸಂಗ್ರಹಿಸು.

12309063a ಪುರಾ ಕರೋತಿ ಸೋಽಂತಕಃ ಪ್ರಮಾದಗೋಮುಖಂ ದಮಮ್15
12309063c ಯಥಾಗೃಹೀತಮುತ್ಥಿತಂ ತ್ವರಸ್ವ ಧರ್ಮಪಾಲನೇ।।

ಅಂತಕನು ಪ್ರಮಾದದಿಂದ ಕೂಡಿದ ಇಂದ್ರಿಯಗಳನ್ನು ಮುಂದಿಟ್ಟುಕೊಂಡು ನಿನ್ನನ್ನು ಆಕ್ರಮಣ ಮಾಡುವುದರ ಮೊದಲೇ ನೀನು ಜಾಗ್ರತನಾಗಿ ಮೇಲೆದ್ದು ಧರ್ಮವನ್ನು ಪಾಲಿಸುವಲ್ಲಿ ತ್ವರೆಮಾಡು.

12309064a ಯದಾ16 ತ್ವಮೇವ ಪೃಷ್ಠತಸ್ತ್ವಮಗ್ರತೋ ಗಮಿಷ್ಯಸಿ।
12309064c ತಥಾ ಗತಿಂ ಗಮಿಷ್ಯತಃ ಕಿಮಾತ್ಮನಾ ಪರೇಣ ವಾ।।

ಪರಲೋಕಕ್ಕೆ ಹೋಗುವಾಗ ನಿನ್ನ ಮುಂದೆ ಮತ್ತು ಹಿಂದೆ ನೀನೇ ಹೋಗುವೆ. ಅಂಥಹ ದಾರಿಯಲ್ಲಿ ಹೋಗುತ್ತಿರುವಾಗ ನಿನ್ನ ಈ ದೇಹದಿಂದಾಗಲೀ ಅಥವಾ ಇತರರಿಂದಾಗಲೀ ಯಾವ ಪ್ರಯೋಜನವಿದೆ?

12309065a ಯದೇಕಪಾತಿನಾಂ ಸತಾಂ ಭವತ್ಯಮುತ್ರ ಗಚ್ಚತಾಮ್।
12309065c ಭಯೇಷು ಸಾಂಪರಾಯಿಕಂ ನಿಧತ್ಸ್ವ ತಂ ಮಹಾನಿಧಿಮ್।।

ಏಕಾಕಿಗಳಾಗಿ ಪರಲೋಕಕ್ಕೆ ಹೋಗುವಾಗ ಸತ್ಪುರುಷರ ಭಯವನ್ನು ಹೋಗಲಾಡಿಸಿ ಪರಲೋಕದಲ್ಲಿ ಹಿತವನ್ನುಂಟುಮಾಡುವಂಥಹ ನಿಧಿರೂಪವಾದ ಜ್ಞಾನವನ್ನೇ ನಿನ್ನಲ್ಲಿಟ್ಟುಕೋ.

12309066a ಸಕೂಲಮೂಲಬಾಂಧವಂ ಪ್ರಭುರ್ಹರತ್ಯಸಂಗವಾನ್।
12309066c ನ ಸಂತಿ ಯಸ್ಯ ವಾರಕಾಃ ಕುರುಷ್ವ ಧರ್ಮಸಂನಿಧಿಮ್।।

ಸರ್ವಸಮರ್ಥವಾದ ಕಾಲವು ಸಂಗರಹಿತವಾದುದು. ಅದು ಯಾರೊಡನೆಯೂ ಸ್ನೇಹಮಾಡುವುದಿಲ್ಲ. ಆದುದರಿಂದ ಅದು ಸಕೂಲ-ಸಮೂಲವಾಗಿ ಸಮಸ್ತಬಂಧುಗಳನ್ನೂ ಅಪಹರಿಸಿಕೊಂಡು ಹೋಗುತ್ತದೆ. ಆಗ ಅದನ್ನು ತಡೆಯುವವರು ಯಾರೂ ಇರುವುದಿಲ್ಲ. ಆದುದರಿಂದ ಧರ್ಮವನ್ನು ಸಂಗ್ರಹಿಸು.

12309067a ಇದಂ ನಿದರ್ಶನಂ ಮಯಾ ತವೇಹ ಪುತ್ರ ಸಂಮತಮ್।
12309067c ಸ್ವದರ್ಶನಾನುಮಾನತಃ ಪ್ರವರ್ಣಿತಂ ಕುರುಷ್ವ ತತ್।।

ಪುತ್ರ! ನನ್ನ ಶಾಸ್ತ್ರಜ್ಞಾನದಿಂದಲೂ ಯುಕ್ತಿಯಿಂದಲೂ ನಿನಗೆ ಉಪದೇಶಿಸಿದ ಈ ಜ್ಞಾನದಂತೆಯೇ ನೀನು ಧರ್ಮಾಚರಣೆಯನ್ನು ಮಾಡು.

12309068a ದಧಾತಿ ಯಃ ಸ್ವಕರ್ಮಣಾ ಧನಾನಿ ಯಸ್ಯ ಕಸ್ಯ ಚಿತ್।
12309068c ಅಬುದ್ಧಿಮೋಹಜೈರ್ಗುಣೈಃ ಶತೈಕ17 ಏವ ಯುಜ್ಯತೇ।।

ಸ್ವಕರ್ಮದಿಂದ ಗಳಿಸಿದ ಧನವನ್ನು ಇತರರಿಗೆ ದಾನಮಾಡುವವನು ಮಾತ್ರ ಮೋಹಗೊಳ್ಳದ ಬುದ್ಧಿಯಿಂದ ಪ್ರಾಪ್ತವಾದ ಗುಣಗಳಿಂದ ಕೂಡಿದವನಾಗುತ್ತಾನೆ.

12309069a ಶ್ರುತಂ ಸಮರ್ಥಮಸ್ತು ತೇ ಪ್ರಕುರ್ವತಃ ಶುಭಾಃ ಕ್ರಿಯಾಃ।
12309069c ತದೇವ ತತ್ರ ದರ್ಶನಂ ಕೃತಜ್ಞಮರ್ಥಸಂಹಿತಮ್।।

ಸಮಸ್ತಶಾಸ್ತ್ರಜ್ಞಾನವನ್ನು ಪಡೆದುಕೊಂಡು ಅದಕ್ಕೆ ಅನುಸಾರವಾಗಿ ಶುಭಕರ್ಮಗಳನ್ನು ಮಾಡುವ ಸಮರ್ಥನಿಗೆ ಈ ಆಧ್ಯಾತ್ಮಜ್ಞಾನವನ್ನು ಉಪದೇಶಿಸಬೇಕು. ಏಕೆಂದರೆ ಕೃತಜ್ಞನಾದವನಿಗೆ ಏನನ್ನು ಉಪದೇಶಿಸಿದರೂ ಅದು ಸಫಲವಾಗುತ್ತದೆ.

12309070a ನಿಬಂಧನೀ ರಜ್ಜುರೇಷಾ ಯಾ ಗ್ರಾಮೇ ವಸತೋ ರತಿಃ।
12309070c ಚಿತ್ತ್ವೈನಾಂ ಸುಕೃತೋ ಯಾಂತಿ ನೈನಾಂ ಚಿಂದಂತಿ ದುಷ್ಕೃತಃ।।

ಗ್ರಾಮ ಅಥವಾ ಪಟ್ಟಣದಲ್ಲಿಯೇ ವಾಸಿಸುತ್ತಿರಲಿ, ಸುಖೋಪಭೋಗಗಳಲ್ಲಿನ ಆಸಕ್ತಿಯೇ ಮನುಷ್ಯನನ್ನು ಬಂಧಿಸುವ ಹಗ್ಗವಾಗಿರುತ್ತದೆ. ಪುಣ್ಯಾತ್ಮರು ಆ ಹಗ್ಗವನ್ನು ತುಂಡರಿಸಿ ಪರಮ ಪದವನ್ನು ಸೇರುತ್ತಾರೆ. ಪಾಪಾತ್ಮರು ಅದನ್ನು ಕತ್ತರಿಸುವ ಪ್ರಯತ್ನವನ್ನೇ ಮಾಡುವುದಿಲ್ಲ.

12309071a ಕಿಂ ತೇ ಧನೇನ ಕಿಂ ಬಂಧುಭಿಸ್ತೇ ಕಿಂ ತೇ ಪುತ್ರೈಃ ಪುತ್ರಕ ಯೋ ಮರಿಷ್ಯಸಿ।
12309071c ಆತ್ಮಾನಮನ್ವಿಚ್ಚ ಗುಹಾಂ ಪ್ರವಿಷ್ಟಂ ಪಿತಾಮಹಾಸ್ತೇ ಕ್ವ ಗತಾಶ್ಚ ಸರ್ವೇ।।

ಪುತ್ರಕ! ಮರಣಹೊಂದುವವನಿಗೆ ಧನದಿಂದೇನಾಗುವುದು? ಬಂಧುಗಳಿಂದ ಏನಾಗುವುದು? ಪುತ್ರರಿಂದ ಏನಾಗಬಹುದು? ಆದುದರಿಂದ ಹೃದಯವೆಂಬ ಗುಹೆಯಲ್ಲಿ ಅಡಗಿರುವ ಆತ್ಮತತ್ತ್ವವನ್ನು ಅನುಸಂಧಾನಮಾಡು. ನಿನ್ನ ಪಿತಾಮಹರು ಎಲ್ಲರೂ ಎಲ್ಲಿ ಹೋಗಿರುವರೆಂದು ಯೋಚಿಸು.

12309072a ಶ್ವಃಕಾರ್ಯಮದ್ಯ ಕುರ್ವೀತ ಪೂರ್ವಾಹ್ಣೇ ಚಾಪರಾಹ್ಣಿಕಮ್।
12309072c ಕೋ ಹಿ ತದ್ವೇದ ಕಸ್ಯಾದ್ಯ ಮೃತ್ಯುಸೇನಾ ನಿವೇಕ್ಷ್ಯತೇ।।

ನಾಳೆಯ ಕಾರ್ಯವನ್ನು ಇಂದೇ ಮಾಡಬೇಕು. ಮಧ್ಯಾಹ್ನ ಮಾಡಬೇಕಾದುದನ್ನು ಬೆಳಿಗ್ಗೆಯೇ ಮಾಡಿ ಮುಗಿಸಬೇಕು. ಏಕೆಂದರೆ ಮೃತ್ಯುವು ಅವನ ಕಾರ್ಯವು ಮುಗಿಯಿತೇ ಅಥವಾ ಇಲ್ಲವೇ ಎನ್ನುವುದನ್ನು ನೋಡುತ್ತಾ ಕುಳಿತುಕೊಳ್ಳುವುದಿಲ್ಲ.

12309073a ಅನುಗಮ್ಯ ಶ್ಮಶಾನಾಂತಂ ನಿವರ್ತಂತೀಹ ಬಾಂಧವಾಃ।
12309073c ಅಗ್ನೌ ಪ್ರಕ್ಷಿಪ್ಯ ಪುರುಷಂ ಜ್ಞಾತಯಃ ಸುಹೃದಸ್ತಥಾ।।

ಮರಣಾನಂತರ ಬಾಂಧವರು, ಕುಟುಂಬದವರು ಮತ್ತು ಸ್ನೇಹಿತರು ಶ್ಮಶಾನದ ವರೆಗೂ ಮೃತನನ್ನು ಅನುಸರಿಸಿ ಬಂದು ಶವಕ್ಕೆ ಅಗ್ನಿಯನ್ನಿಟ್ಟು ಹಿಂದಿರುಗುತ್ತಾರೆ.

12309074a ನಾಸ್ತಿಕಾನ್ನಿರನುಕ್ರೋಶಾನ್ನರಾನ್ ಪಾಪಮತೌ ಸ್ಥಿತಾನ್।
12309074c ವಾಮತಃ ಕುರು ವಿಶ್ರಬ್ಧಂ ಪರಂ ಪ್ರೇಪ್ಸುರತಂದ್ರಿತಃ।।

ಪರಮಾತ್ಮತತ್ತ್ವವನ್ನು ಪಡೆಯಲಿಚ್ಛಿಸುವ ನೀನು ಆಲಸ್ಯವನ್ನು ತೊರೆದು ನಾಸ್ತಿಕರನ್ನೂ, ದಯಾಹೀನರನ್ನೂ, ಪಾಪಬುದ್ಧಿಗಳನ್ನೂ ನಿರ್ಭಯನಾಗಿ ಪರಿತ್ಯಜಿಸು.

12309075a ಏವಮಭ್ಯಾಹತೇ ಲೋಕೇ ಕಾಲೇನೋಪನಿಪೀಡಿತೇ।
12309075c ಸುಮಹದ್ಧೈರ್ಯಮಾಲಂಬ್ಯ ಧರ್ಮಂ ಸರ್ವಾತ್ಮನಾ ಕುರು।।

ಹೀಗೆ ಕಾಲನು ಲೋಕವನ್ನು ಅಪ್ಪಳಿಸಿ ಪೀಡಿಸುತ್ತಿರುವಾಗ ನೀನು ಪ್ರಚಂಡ ಧೈರ್ಯವನ್ನು ಆಶ್ರಯಿಸಿ ಸಂಪೂರ್ಣ ಮನಸ್ಸಿನಿಂದ ಧರ್ಮವನ್ನಾಚರಿಸು.

12309076a ಅಥೇಮಂ ದರ್ಶನೋಪಾಯಂ ಸಮ್ಯಗ್ಯೋ ವೇತ್ತಿ ಮಾನವಃ।
12309076c ಸಮ್ಯಕ್ಸ ಧರ್ಮಂ ಕೃತ್ವೇಹ ಪರತ್ರ ಸುಖಮೇಧತೇ।।

ಪರಮಾತ್ಮಸಾಕ್ಷಾತ್ಕಾರದ ಈ ಉಪಾಯವನ್ನು ಚೆನ್ನಾಗಿ ತಿಳಿದಿರುವ ಮನುಷ್ಯನು ಈ ಲೋಕದಲ್ಲಿ ಸ್ವಧರ್ಮವನ್ನಾಚರಿಸಿ ಪರಲೋಕದಲ್ಲಿಯೂ ಸುಖವನ್ನು ಅನುಭವಿಸುತ್ತಾನೆ.

12309077a ನ ದೇಹಭೇದೇ ಮರಣಂ ವಿಜಾನತಾಂ ನ ಚ ಪ್ರಣಾಶಃ ಸ್ವನುಪಾಲಿತೇ ಪಥಿ।
12309077c ಧರ್ಮಂ ಹಿ ಯೋ ವರ್ಧಯತೇ ಸ ಪಂಡಿತೋ ಯ ಏವ ಧರ್ಮಾಚ್ಚ್ಯವತೇ ಸ ಮುಹ್ಯತಿ।।

ದೇಹವು ನಾಶವಾದರೂ ಆತ್ಮವು ವಿನಾಶಹೊಂದುವುದಿಲ್ಲವೆಂದೂ ಮತ್ತು ಶಿಷ್ಠರು ಪರಿಪಾಲಿಸುವ ಧರ್ಮಮಾರ್ಗದಲ್ಲಿರುವವನು ವಿನಾಶಹೊಂದುವುದಿಲ್ಲ ಎನ್ನುವುದನ್ನೂ ತಿಳಿದವನೇ ಪಂಡಿತನು. ಧರ್ಮದಿಂದ ಚ್ಯುತನಾದವನು ವಿಮೋಹಗೊಳ್ಳುತ್ತಾನೆ.

12309078a ಪ್ರಯುಕ್ತಯೋಃ ಕರ್ಮಪಥಿ ಸ್ವಕರ್ಮಣೋಃ ಫಲಂ ಪ್ರಯೋಕ್ತಾ ಲಭತೇ ಯಥಾವಿಧಿ।
12309078c ನಿಹೀನಕರ್ಮಾ ನಿರಯಂ ಪ್ರಪದ್ಯತೇ ತ್ರಿವಿಷ್ಟಪಂ ಗಚ್ಚತಿ ಧರ್ಮಪಾರಗಃ।।

ಕರ್ಮಪಥದಲ್ಲಿ ನಡೆಯುವವರು ತಮ್ಮ ಕರ್ಮಗಳಿಗೆ ತಕ್ಕಂತೆ ಫಲಗಳನ್ನು ಪಡೆದುಕೊಳ್ಳುತ್ತಾರೆ. ವಿಹೀನಕರ್ಮಗಳನ್ನು ಮಾಡುವವರು ನರಕವನ್ನು ಹೊಂದುತ್ತಾರೆ. ಧರ್ಮಪಾರಂಗತರು ಸ್ವರ್ಗಕ್ಕೆ ಹೋಗುತ್ತಾರೆ.

12309079a ಸೋಪಾನಭೂತಂ ಸ್ವರ್ಗಸ್ಯ ಮಾನುಷ್ಯಂ ಪ್ರಾಪ್ಯ ದುರ್ಲಭಮ್।
12309079c ತಥಾತ್ಮಾನಂ ಸಮಾದಧ್ಯಾದ್ ಭ್ರಶ್ಯೇತ ನ ಪುನರ್ಯಥಾ।।

ಸ್ವರ್ಗಕ್ಕೆ ಸೋಪಾನದಂತಿರುವ ದುರ್ಲಭವಾದ ಮನುಷ್ಯ ಜನ್ಮವನ್ನು ಪಡೆದವನು ಮನುಷ್ಯತ್ವದಿಂದ ಭ್ರಷ್ಟನಾಗಿ ನೀಚಯೋನಿಗಳಲ್ಲಿ ಹುಟ್ಟದಿರುವ ರೀತಿಯಲ್ಲಿ ಧರ್ಮಾಚರಣೆಗಳನ್ನು ಮಾಡಿ ತನ್ನನ್ನು ಉನ್ನತ ಸ್ಥಾನಗಳಿಗೆ ಏರಿಸಿಕೊಳ್ಳಬೇಕು.

12309080a ಯಸ್ಯ ನೋತ್ಕ್ರಾಮತಿ ಮತಿಃ ಸ್ವರ್ಗಮಾರ್ಗಾನುಸಾರಿಣೀ।
12309080c ತಮಾಹುಃ ಪುಣ್ಯಕರ್ಮಾಣಮಶೋಚ್ಯಂ ಮಿತ್ರಬಾಂಧವೈಃ।।

ಸ್ವರ್ಗಮಾರ್ಗಾನುಸಾರಿಣಿಯಾದ ಧರ್ಮ ಮತಿಯನ್ನು ಮೀರಿ ನಡೆಯದಿರುವವನನ್ನು ಪುಣ್ಯಕರ್ಮಿ ಎಂದು ಹೇಳುತ್ತಾರೆ. ಅವನಿಂದಾಗಿ ಮಿತ್ರಬಾಂಧವರಿಗೆ ಯಾವ ಶೋಕವೂ ಉಂಟಾಗುವುದಿಲ್ಲ.

12309081a ಯಸ್ಯ ನೋಪಹತಾ ಬುದ್ಧಿರ್ನಿಶ್ಚಯೇಷ್ವವಲಂಬತೇ।
12309081c ಸ್ವರ್ಗೇ ಕೃತಾವಕಾಶಸ್ಯ ತಸ್ಯ ನಾಸ್ತಿ ಮಹದ್ ಭಯಮ್।।

ಯಾರ ಬುದ್ಧಿಯು ದೂಷಿತವಾಗಿಲ್ಲದೇ ದೃಢವಾಗಿರುವುದೋ ಅವನಿಗೆ ಸ್ವರ್ಗದಲ್ಲಿ ಸ್ಥಾನವು ಸಿದ್ಧವಾಗಿಯೇ ಇರುತ್ತದೆ. ಮಹಾಭಯವನ್ನುಂಟುಮಾಡುವ ನರಕವು ಅವನಿಗೆ ಪ್ರಾಪ್ತವಾಗುವುದಿಲ್ಲ.

12309082a ತಪೋವನೇಷು ಯೇ ಜಾತಾಸ್ತತ್ರೈವ ನಿಧನಂ ಗತಾಃ।
12309082c ತೇಷಾಮಲ್ಪತರೋ ಧರ್ಮಃ ಕಾಮಭೋಗಮಜಾನತಾಮ್।।

ಕಾಮಭೋಗಗಳನ್ನು ತಿಳಿಯದೇ ತಪೋವನಗಳಲ್ಲಿಯೇ ಹುಟ್ಟಿ ಅಲ್ಲಿಯೇ ನಿಧನರಾಗುವವರಿಗೆ ದೊರೆಯುವ ಧರ್ಮವು ಅಲ್ಪವಾದುದು.

12309083a ಯಸ್ತು ಭೋಗಾನ್ ಪರಿತ್ಯಜ್ಯ ಶರೀರೇಣ ತಪಶ್ಚರೇತ್।
12309083c ನ ತೇನ ಕಿಂ ಚಿನ್ನ ಪ್ರಾಪ್ತಂ ತನ್ಮೇ ಬಹುಮತಂ ಫಲಮ್।।

ಭೋಗಗಳನ್ನು ಪರಿತ್ಯಜಿಸಿ ಶಾರೀರಿಕ ತಪಸ್ಸನ್ನು ತಪಿಸುವವನಿಗೆ ಅತ್ಯಧಿಕ ಫಲವು ಪ್ರಾಪ್ತವಾಗುವುದೆಂದು ನನ್ನ ಅಭಿಮತವು. ಅವನಿಗೆ ಪ್ರಾಪ್ತವಾಗದೇ ಇರುವುದು ಯಾವುದೂ ಇಲ್ಲ.

12309084a ಮಾತಾಪಿತೃಸಹಸ್ರಾಣಿ ಪುತ್ರದಾರಶತಾನಿ ಚ।
12309084c ಅನಾಗತಾನ್ಯತೀತಾನಿ ಕಸ್ಯ ತೇ ಕಸ್ಯ ವಾ ವಯಮ್।।

ನಮಗೆ ಸಹಸ್ರಾರು ಮಾತ-ಪಿತೃಗಳು ಮತ್ತು ನೂರಾರು ಮಕ್ಕಳು-ಪತ್ನಿಯರು ಆಗಿ ಹೋಗಿದ್ದಾರೆ ಮತ್ತು ಮುಂದೆ ಆಗುವವರಿದ್ದಾರೆ. ಹೀಗಿರುವಾಗ ಅವರು ನಮಗೇನಾಬೇಕು ಅಥವಾ ನಾವು ಅವರಿಗೇನಾಗಬೇಕು?

1812309085a ನ ತೇಷಾಂ ಭವತಾ ಕಾರ್ಯಂ ನ ಕಾರ್ಯಂ ತವ ತೈರಪಿ।
12309085c ಸ್ವಕೃತೈಸ್ತಾನಿ ಯಾತಾನಿ ಭವಾಂಶ್ಚೈವ ಗಮಿಷ್ಯತಿ।।

ನಿನ್ನಿಂದ ಅವರಿಗೆ ಯಾವ ಕಾರ್ಯವೂ ಆಗಬೇಕಾಗಿಲ್ಲ. ಮತ್ತು ಅವರಿಂದ ನಿನಗೆ ಯಾವ ಕಾರ್ಯವೂ ಆಗಬೇಕಾಗಿಲ್ಲ. ಆ ಜೀವಿಗಳೆಲ್ಲವೂ ತಮ್ಮ ತಮ್ಮ ಕರ್ಮಗಳೊಡನೆ ಹೊರಟುಹೋದವು. ಹಾಗೆಯೇ ನೀನೂ ಹೋಗುವೆ.

12309086a ಇಹ ಲೋಕೇ ಹಿ ಧನಿನಃ ಪರೋಽಪಿ19 ಸ್ವಜನಾಯತೇ।
12309086c ಸ್ವಜನಸ್ತು ದರಿದ್ರಾಣಾಂ ಜೀವತಾಮೇವ ನಶ್ಯತಿ।।

ಈ ಲೋಕದಲ್ಲಿ ಧನಿಕರೊಂದಿಗೆ ಪರರೂ ಸ್ವಜನರಂತೆ ನಡೆದುಕೊಳ್ಳುತ್ತಾರೆ. ಆದರೆ ದರಿದ್ರರಿಗೆ ಸ್ವಜನರು ಜೀವಿತವಾಗಿದ್ದರೂ ಇಲ್ಲದಂತೆಯೇ ಇರುತ್ತಾರೆ.

12309087a ಸಂಚಿನೋತ್ಯಶುಭಂ ಕರ್ಮ ಕಲತ್ರಾಪೇಕ್ಷಯಾ ನರಃ।
12309087c ತತಃ ಕ್ಲೇಶಮವಾಪ್ನೋತಿ ಪರತ್ರೇಹ ತಥೈವ ಚ।।

ಮನುಷ್ಯನು ತನ್ನ ಪತ್ನಿಯೇ ಮೊದಲಾದ ರಕ್ಷಣೀಯರ ಸಲುವಾಗಿ ಅಶುಭ ಕರ್ಮಗಳನ್ನು ಮಾಡಿ ನಂತರ ಇಹದಲ್ಲಿಯೂ ಪರದಲ್ಲಿಯೂ ಕ್ಲೇಶಗಳನ್ನು ಪಡೆದುಕೊಳ್ಳುತ್ತಾನೆ.

12309088a ಪಶ್ಯ ತ್ವಂ ಚಿದ್ರಭೂತಂ ಹಿ ಜೀವಲೋಕಂ ಸ್ವಕರ್ಮಣಾ।
12309088c ತತ್ಕುರುಷ್ವ ತಥಾ ಪುತ್ರ ಕೃತ್ಸ್ನಂ ಯತ್ಸಮುದಾಹೃತಮ್।।

ಪುತ್ರ! ನಿನ್ನ ಕರ್ಮಗಳಿಂದ ಈ ಜೀವಲೋಕವು ಚಿದ್ರವಾಗಿರುವುದನ್ನು ನೀನು ಕಾಣುತ್ತೀಯೆ. ಆದುದರಿಂದ ನಾನು ಯಾವುದನ್ನು ನಿನಗೆ ಹೇಗೆ ಉಪದೇಶಿಸಿರುವೆನೋ ಅವೆಲ್ಲವನ್ನೂ ಸಮಗ್ರವಾಗಿ ಹಾಗೆಯೇ ಮಾಡು.

12309089a ತದೇತತ್ಸಂಪ್ರದೃಶ್ಯೈವ ಕರ್ಮಭೂಮಿಂ ಪ್ರವಿಶ್ಯ ತಾಮ್।
12309089c ಶುಭಾನ್ಯಾಚರಿತವ್ಯಾನಿ ಪರಲೋಕಮಭೀಪ್ಸತಾ।।

ಇದು ಕರ್ಮಭೂಮಿ ಎನ್ನುವುದನ್ನು ಚೆನ್ನಾಗಿ ತಿಳಿದುಕೊಂಡು ಪರಲೋಕವನ್ನು ಇಚ್ಛಿಸುವ ಪುರುಷನು ಯಾವಾಗಲೂ ಶುಭಕರ್ಮಗಳನ್ನೇ ಆಚರಿಸುತ್ತಿರಬೇಕು.

12309090a ಮಾಸರ್ತುಸಂಜ್ಞಾಪರಿವರ್ತಕೇನ ಸೂರ್ಯಾಗ್ನಿನಾ ರಾತ್ರಿದಿವೇಂಧನೇನ।
12309090c ಸ್ವಕರ್ಮನಿಷ್ಠಾಫಲಸಾಕ್ಷಿಕೇಣ ಭೂತಾನಿ ಕಾಲಃ ಪಚತಿ ಪ್ರಸಹ್ಯ।।

ಕಾಲನೆಂಬ ಪಾಚಕನು ಕರ್ಮಫಲಕ್ಕೆ ಸಾಕ್ಷೀಭೂತವಾದ ಹಗಲು-ರಾತ್ರಿಗಳೆಂಬ ಕಟ್ಟಿಗೆಗಳಿಂದಲೂ, ಸೂರ್ಯನೆಂಬ ಅಗ್ನಿಯಿಂದಲೂ, ಮಾಸ ಮತ್ತು ಋತುಗಳೆಂಬ ಹುಟ್ಟಿನಿಂದ ಪ್ರಾಣಿಗಳನ್ನು ಪದೇ ಪದೇ ಮೊಗಚಿಹಾಕುತ್ತಾ ಬಲಾತ್ಕಾರವಾಗಿ ಬೇಯಿಸುತ್ತಿರುತ್ತಾನೆ.

12309091a ಧನೇನ ಕಿಂ ಯನ್ನ ದದಾತಿ ನಾಶ್ನುತೇ ಬಲೇನ ಕಿಂ ಯೇನ ರಿಪೂನ್ನ ಬಾಧತೇ।
12309091c ಶ್ರುತೇನ ಕಿಂ ಯೇನ ನ ಧರ್ಮಮಾಚರೇತ್ ಕಿಮಾತ್ಮನಾ ಯೋ ನ ಜಿತೇಂದ್ರಿಯೋ ವಶೀ।।

ಬೇರೆಯವರಿಗೆ ಕೊಡದೇ ಮತ್ತು ತಾನೂ ಉಪಭೋಗಿಸದೇ ಇರುವ ಧನದಿಂದ ಯಾವ ಪ್ರಯೋಜನ? ಶತ್ರುಗಳನ್ನು ಪೀಡಿಸದೇ ಇರುವ ಬಲದಿಂದ ಯಾವ ಪ್ರಯೋಜನ? ಧರ್ಮವನ್ನು ಆಚರಿಸದೇ ಕೇವಲ ವಿದ್ಯಾರ್ಜನೆಯಿಂದ ಯಾವ ಪ್ರಯೋಜನ? ಜಿತೇಂದ್ರಿಯನೂ ಮತ್ತು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡವನೂ ಆಗಿರದಿದ್ದರೆ ಈ ಶರೀರದಿಂದ ಏನು ಪ್ರಯೋಜನ?”

12309092a ಇದಂ ದ್ವೈಪಾಯನವಚೋ ಹಿತಮುಕ್ತಂ ನಿಶಮ್ಯ ತು।
12309092c ಶುಕೋ ಗತಃ ಪರಿತ್ಯಜ್ಯ ಪಿತರಂ ಮೋಕ್ಷದೇಶಿಕಮ್।।

ದ್ವೈಪಾಯನನು ಹೇಳಿದ ಈ ಹಿತ ಮಾತುಗಳನ್ನು ಕೇಳಿ ಶುಕನು ತಂದೆಯನ್ನು ಪರಿತ್ಯಜಿಸಿ ಮೋಕ್ಷತತ್ತ್ವೋಪದೇಶಿಕ ಗುರುವನ್ನು ಅರಸಿಕೊಂಡು ಹೊರಟುಹೋದನು.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಯಾವಕಾಧ್ಯಯನಂ ನಾಮ ನವಾಧಿಕತ್ರಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಯಾವಕಾಧ್ಯಯನ ಎನ್ನುವ ಮುನ್ನೂರಾಒಂಭತ್ತನೇ ಅಧ್ಯಾಯವು.

  1. ಇದರ ನಂತರ ಈ ಒಂದು ಅಧಿಕ ಶ್ಲೋಕವಿದೆ: ಅವ್ಯಕ್ತವ್ಯಕ್ತತತ್ತ್ವಾನಾಂ ನಿಶ್ಚಯಂ ಬುದ್ಧಿನಿಶ್ಚಯಮ್। ವಕ್ತುಮರ್ಹಸಿ ಕೌರವ್ಯ ದೇವಸ್ಯಾಜಸ್ಯ ಯಾ ಕೃತಿಃ।। (ಭಾರತ ದರ್ಶನ) ↩︎

  2. ಕೂಲಪಾತಮಿವ ಸ್ಥಿತಮ್। (ಭಾರತ ದರ್ಶನ). ↩︎

  3. ತಲ್ಲಬ್ಧ್ವಾ ನ ರತಿಪರೇಣ ಹೇಲಿತವ್ಯಮ್। (ಭಾರತ ದರ್ಶನ). ↩︎

  4. 450 ಸಲ ರೆಪ್ಪೆಯಾಡಿಸುವಷ್ಟು ಕಾಲ. ↩︎

  5. ನಿಮಿಷದ ನಾಲ್ಕನೇ ಒಂದು ಭಾಗ. ↩︎

  6. ರಾಜಾ ಸದಾ ಧರ್ಮಪರಃ ಶುಭಾಶುಭಸ್ಯ ಗೋಪ್ತಾ। (ಭಾರತ ದರ್ಶನ). ↩︎

  7. ಧೃತಿಃ ಕ್ಷಮಾ ದಮೋಽಸ್ತೇಯಂ ಶೌಚಮಿಂದ್ರಿಯನಿಗ್ರಹಃ। ಧೀರ್ವಿದ್ಯಾ ಸತ್ಯಮಕ್ರೋಧೋ ದಶತಂ ಧರ್ಮಲಕ್ಷ್ಮಣಮ್।। (ಮನುಸ್ಮೃತಿ). ↩︎

  8. ರಾಜಶಾಸನಾತ್ (ಭಾರತ ದರ್ಶನ). ↩︎

  9. ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್। ನಿತ್ಯಂ ಸನ್ನಿಹಿತೋ ಮೃತ್ಯುಃ। ↩︎

  10. ಅಹರ್ನಿಶೇಷು ಸರ್ವತಃ ಸ್ಪೃಶತ್ಸು ಸರ್ವಚಾರಿಷು। (ಭಾರತ ದರ್ಶನ). ↩︎

  11. ವಿರೂಪರೌದ್ರಮಕ್ಷಿಕೇ। (ಭಾರತ ದರ್ಶನ). ↩︎

  12. ಪ್ರವಕ್ತುಮುತ್ಸಹಾಮ ತೇ। (ಭಾರತ ದರ್ಶನ). ↩︎

  13. ಪ್ರಭುರ್ನಿನಾಯ ಪಾವಕಃ। (ಭಾರತ ದರ್ಶನ). ↩︎

  14. ಗತಾ ತ್ರಿರಷ್ಟವರ್ಷತಾ। ಅರ್ಥಾತ್ ಈಗ ನಿನಗೆ ಇಪ್ಪತ್ನಾಲ್ಕು ವರ್ಷಗಳಾಗಿವೆ (ಭಾರತ ದರ್ಶನ). ↩︎

  15. ಪ್ರಮಾದಗೋಮುಖಾಂ ಚಮೂಮ್। (ಭಾರತ ದರ್ಶನ). ↩︎

  16. ಯಥಾ (ಭಾರತ ದರ್ಶನ). ↩︎

  17. ಸ ಏಕ (ಭಾರತ ದರ್ಶನ). ↩︎

  18. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಅಹಮೇಕೋ ನ ಮೇ ಕಶ್ಚಿನ್ನಾಹಮನ್ಯಸ್ಯ ಸಸ್ಯಚಿತ್। ನ ತಂ ಪಶ್ಯಾಮಿ ಯಸ್ಯಾಹಂ ತನ್ನ ಪಶ್ಯಾಮಿ ಯೋ ಮಮ।। ಅರ್ಥಾತ್: ನಾನು ಏಕಾಂಗಿ. ನನಗೆ ಸಂಬಂಧಿಸಿದವರು ಯಾರೂ ಇಲ್ಲ. ನಾನೂ ಕೂಡ ಬೇರೆ ಯಾರಿಗೂ ಸೇರಿದವನಲ್ಲ. ನಾನು ಯಾರವನೋ ಅವನನ್ನು ಇದೂವರೆಗೆ ನಾನು ನೋಡಿಲ್ಲ. ಯಾವನು ನನ್ನವನೋ ಅವನನ್ನೂ ಕೂಡ ಇದೂವರೆಗೆ ನಾನು ನೋಡಿಲ್ಲ. (ಭಾರತ ದರ್ಶನ) ↩︎

  19. ಸ್ವಜನಃ ಎಂಬ ಪಾಠಾಂತರವಿದೆ (ಭಾರತದರ್ಶನ). ↩︎