308: ಸುಲಭಾಜನಕಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 308

ಸಾರ

ಜನಕರಾಜನನ್ನು ಪರೀಕ್ಷಿಸುವ ಸಲುವಾಗಿ ಬಂದ ಸುಲಭೆಯು ಜನಕನ ಶರೀರವನ್ನು ಪ್ರವೇಶಿಸಿದುದು (1-19); ಜನಕರಾಜನು ಅವಳ ಮೇಲೆ ದೋಷಾರೋಪಣೆ ಮಾಡಿದುದು (20-76); ಸುಲಭೆಯು ಯುಕ್ತಿಯುಕ್ತವಾಗಿ ಜನಕನು ಮಾಡಿದ ಆಪಾದನೆಗಳನ್ನು ನಿರಾಕರಿಸುತ್ತಾ ಅವನನ್ನು ಅಜ್ಞಾನಿಯೆಂದು ಪ್ರತಿಪಾದಿಸಿದುದು (77-191).

12308001 ಯುಧಿಷ್ಠಿರ ಉವಾಚ।
12308001a ಅಪರಿತ್ಯಜ್ಯ ಗಾರ್ಹಸ್ಥ್ಯಂ ಕುರುರಾಜರ್ಷಿಸತ್ತಮ।
12308001c ಕಃ ಪ್ರಾಪ್ತೋ ವಿನಯಂ ಬುದ್ಧ್ಯಾ ಮೋಕ್ಷತತ್ತ್ವಂ ವದಸ್ವ ಮೇ।।

ಯುಧಿಷ್ಠಿರನು ಹೇಳಿದನು: “ಕುರುರಾಜರ್ಷಿಸತ್ತಮ! ಗೃಹಸ್ಥಾಶ್ರಮವನ್ನು ಪರಿತ್ಯಜಿಸದೆಯೇ ಬುದ್ಧಿಯಿಂದ ವಿನಯರೂಪದ1 ಮೋಕ್ಷತತ್ತ್ವವನ್ನು ಪಡೆದುಕೊಂಡವರು ಯಾರಾದರೂ ಇದ್ದಾರೆಯೇ? ಅದರ ಕುರಿತು ನನಗೆ ಹೇಳು.

12308002a ಸಂನ್ಯಸ್ಯತೇ ಯಥಾತ್ಮಾಯಂ ಸಂನ್ಯಸ್ತಾತ್ಮಾ ಯಥಾ ಚ ಯಃ2
12308002c ಪರಂ ಮೋಕ್ಷಸ್ಯ ಯಚ್ಚಾಪಿ ತನ್ಮೇ ಬ್ರೂಹಿ ಪಿತಾಮಹ।।

ಪಿತಾಮಹ! ಆತ್ಮಸಂನ್ಯಾಸವು ಹೇಗೆ3? ಆತ್ಮಸಂನ್ಯಾಸವನ್ನು ಮಾಡಿದವರು ಹೇಗೆ ವ್ಯವಹರಿಸುತ್ತಾರೆ? ಮೋಕ್ಷದ ಪರತತ್ತ್ವವು ಯಾವುದು? ಅದನ್ನು ನನಗೆ ಹೇಳು.”

12308003 ಭೀಷ್ಮ ಉವಾಚ।
12308003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12308003c ಜನಕಸ್ಯ ಚ ಸಂವಾದಂ ಸುಲಭಾಯಾಶ್ಚ ಭಾರತ।।

ಭೀಷ್ಮನು ಹೇಳಿದನು: “ಭಾರತ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾಗಿರುವ ಜನಕ ಮತ್ತು ಸುಲಭೆಯರ ಸಂವಾದವನ್ನು ಉದಾಹರಿಸುತ್ತಾರೆ.

12308004a ಸಂನ್ಯಾಸಫಲಿಕಃ ಕಶ್ಚಿದ್ಬಭೂವ ನೃಪತಿಃ ಪುರಾ।
12308004c ಮೈಥಿಲೋ ಜನಕೋ ನಾಮ ಧರ್ಮಧ್ವಜ ಇತಿ ಶ್ರುತಃ।।

ಹಿಂದೆ ಮಿಥಿಲೆಯಲ್ಲಿ ಜನಕನ ವಂಶದಲ್ಲಿ ಧರ್ಮಧ್ವಜ ಎಂದು ವಿಖ್ಯಾತನಾದ ಓರ್ವ ನೃಪತಿಯಿದ್ದನು. ಅವನು ಗೃಹಸ್ಥನಾಗಿದ್ದರೂ ಸಂನ್ಯಾಸತ್ವದಿಂದ ಪ್ರಾಪ್ತವಾಗುವ ಸಮ್ಯಜ್ಞಾನಫಲವನ್ನು ಹೊಂದಿದ್ದನು.

12308005a ಸ ವೇದೇ ಮೋಕ್ಷಶಾಸ್ತ್ರೇ ಚ ಸ್ವೇ ಚ ಶಾಸ್ತ್ರೇ ಕೃತಾಗಮಃ।
12308005c ಇಂದ್ರಿಯಾಣಿ ಸಮಾಧಾಯ ಶಶಾಸ ವಸುಧಾಮಿಮಾಮ್।।

ಅವನು ವೇದಗಳು, ಮೋಕ್ಷಶಾಸ್ತ್ರ ಮತ್ತು ಕ್ಷತ್ರಧರ್ಮಶಾಸ್ತ್ರಗಳಲ್ಲಿ ಪರಿಣಿತಿಯನ್ನು ಪಡೆದಿದ್ದನು. ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಈ ವಸುಧೆಯನ್ನು ಆಳುತ್ತಿದ್ದನು.

12308006a ತಸ್ಯ ವೇದವಿದಃ ಪ್ರಾಜ್ಞಾಃ ಶ್ರುತ್ವಾ ತಾಂ ಸಾಧುವೃತ್ತತಾಮ್।
12308006c ಲೋಕೇಷು ಸ್ಪೃಹಯಂತ್ಯನ್ಯೇ ಪುರುಷಾಃ ಪುರುಷೇಶ್ವರ।।

ಪುರುಷೇಶ್ವರ! ಅವನ ವೇದಜ್ಞಾನ ಮತ್ತು ಸಾಧುನಡತೆಗಳ ಕುರಿತು ಕೇಳಿದ ಲೋಕದ ಅನ್ಯ ಪ್ರಾಜ್ಞ ಪುರುಷರೂ ಕೂಡ ಅವನಂತೆಯೇ ಆಗಬೇಕೆಂದು ಬಯಸುತ್ತಿದ್ದರು.

12308007a ಅಥ ಧರ್ಮಯುಗೇ ತಸ್ಮಿನ್ಯೋಗಧರ್ಮಮನುಷ್ಠಿತಾ।
12308007c ಮಹೀಮನುಚಚಾರೈಕಾ ಸುಲಭಾ ನಾಮ ಭಿಕ್ಷುಕೀ।।

ಆ ಧರ್ಮಯುಗದಲ್ಲಿ ಸುಲಭಾ ಎಂಬ ಹೆಸರಿನ ಭಿಕ್ಷುಕಿಯು ಯೋಗಧರ್ಮವನ್ನು ಅನುಷ್ಠಾನಗೊಳಿಸುತ್ತಾ ಭೂಮಿಯಲ್ಲಿ ಓರ್ವಳೇ ಸಂಚರಿಸುತ್ತಿದ್ದಳು.

12308008a ತಯಾ ಜಗದಿದಂ ಸರ್ವಮಟಂತ್ಯಾ ಮಿಥಿಲೇಶ್ವರಃ।
12308008c ತತ್ರ ತತ್ರ ಶ್ರುತೋ ಮೋಕ್ಷೇ ಕಥ್ಯಮಾನಸ್ತ್ರಿದಂಡಿಭಿಃ।।

ಅವಳು ಹೀಗೆ ಈ ಜಗತ್ತಿನ ಎಲ್ಲಕಡೆ ತಿರುಗಾಡುತ್ತಿರುವಾಗ ತ್ರಿದಂಡಿ4ಗಳು ಮಿಥಿಲೇಶ್ವರನ ಮೋಕ್ಷತತ್ತ್ವಗಳ ಕುರಿತು ಅಲ್ಲಲ್ಲಿ ಕೇಳಿಬರುತ್ತಿತ್ತು.

12308009a ಸಾ ಸುಸೂಕ್ಷ್ಮಾಂ ಕಥಾಂ ಶ್ರುತ್ವಾ ತಥ್ಯಂ ನೇತಿ ಸಸಂಶಯಾ।
12308009c ದರ್ಶನೇ ಜಾತಸಂಕಲ್ಪಾ ಜನಕಸ್ಯ ಬಭೂವ ಹ।।

ಸುಸೂಕ್ಷ್ಮವಾದ ಅಂಥಹ ಮಾತುಗಳನ್ನು ಕೇಳಿದ ಇದು ಹಾಗಿರಲಾರದು ಎಂಬ ಸಂಶಯದಿಂದ ಅವಳು ಜನಕನನ್ನು ಸಂದರ್ಶಿಸಲು ಸಂಕಲ್ಪಿಸಿದಳು.

12308010a ತತಃ ಸಾ ವಿಪ್ರಹಾಯಾಥ ಪೂರ್ವರೂಪಂ ಹಿ ಯೋಗತಃ।
12308010c ಅಬಿಭ್ರದನವದ್ಯಾಂಗೀ ರೂಪಮನ್ಯದನುತ್ತಮಮ್।।

ಆಗ ಅವಳು ಯೋಗಬಲದಿಂದ ತನ್ನ ಹಿಂದಿನ ರೂಪವನ್ನು ತೊರೆದು ಅನುತ್ತಮವಾದ ಅನವದ್ಯಾಂಗೀ ರೂಪವನ್ನು ಧರಿಸಿದಳು.

12308011a ಚಕ್ಷುರ್ನಿಮೇಷಮಾತ್ರೇಣ ಲಘ್ವಸ್ತ್ರಗತಿಗಾಮಿನೀ।
12308011c ವಿದೇಹಾನಾಂ ಪುರೀಂ ಸುಭ್ರೂರ್ಜಗಾಮ ಕಮಲೇಕ್ಷಣಾ।।

ಕಣ್ಣುಮುಚ್ಚಿಬಿಡುವುದರೊಳಗೆ ಶೀಘ್ರವಾಗಿ ಹೋಗುವ ಅಸ್ತ್ರದಂತೆ ಆ ಸುಭ್ರು ಕಮಲೇಕ್ಷಣೆಯು ವಿದೇಹರ ಪುರಿಗೆ ಆಗಮಿಸಿದಳು.

12308012a ಸಾ ಪ್ರಾಪ್ಯ ಮಿಥಿಲಾಂ ರಮ್ಯಾಂ ಸಮೃದ್ಧಜನಸಂಕುಲಾಮ್।
12308012c ಭೈಕ್ಷಚರ್ಯಾಪದೇಶೇನ ದದರ್ಶ ಮಿಥಿಲೇಶ್ವರಮ್।।

ಸಮೃದ್ಧಜನಸಂಕುಲಗಳಿಂದ ಕೂಡಿದ್ದ ರಮ್ಯ ಮಿಥಿಲೆಯನ್ನು ತಲುಪಿ ಭೈಕ್ಷಚರ್ಯದ ನೆಪದಿಂದ ಮಿಥಿಲೇಶ್ವರನನ್ನು ಕಂಡಳು.

12308013a ರಾಜಾ ತಸ್ಯಾಃ ಪರಂ ದೃಷ್ಟ್ವಾ ಸೌಕುಮಾರ್ಯಂ ವಪುಸ್ತಥಾ।
12308013c ಕೇಯಂ ಕಸ್ಯ ಕುತೋ ವೇತಿ ಬಭೂವಾಗತವಿಸ್ಮಯಃ।।

ಅವಳ ಸುಕುಮಾರ್ಯತೆ ಮತ್ತು ಪರಮ ರೂಪವನ್ನು ಕಂಡ ರಾಜನು “ಇವಳು ಯಾರು? ಎಲ್ಲಿಂದ ಬಂದಿರುವಳು?” ಎಂದು ವಿಸ್ಮಯವನ್ನು ತಾಳಿದನು.

12308014a ತತೋಽಸ್ಯಾಃ ಸ್ವಾಗತಂ ಕೃತ್ವಾ ವ್ಯಾದಿಶ್ಯ ಚ ವರಾಸನಮ್।
12308014c ಪೂಜಿತಾಂ ಪಾದಶೌಚೇನ ವರಾನ್ನೇನಾಪ್ಯತರ್ಪಯತ್।।

ಬಳಿಕ ಅವನು ಅವಳನ್ನು ಸ್ವಾಗತಿಸಿ, ಸುಂದರ ಆಸನದಲ್ಲಿ ಕುಳ್ಳಿಸಿದಿ, ಪಾದಗಳನ್ನು ತೊಳೆದು ಪೂಜಿಸಿ, ಮೃಷ್ಟಾನ್ನ ಭೋಜನವನ್ನಿತ್ತು ತೃಪ್ತಿಪಡಿಸಿದನು.

12308015a ಅಥ ಭುಕ್ತವತೀ ಪ್ರೀತಾ ರಾಜಾನಂ ಮಂತ್ರಿಭಿರ್ವೃತಮ್।
12308015c ಸರ್ವಭಾಷ್ಯವಿದಾಂ ಮಧ್ಯೇ ಚೋದಯಾಮಾಸ ಭಿಕ್ಷುಕೀ।।

ಭೋಜನದಿಂದ ಪ್ರೀತಳಾದ ಆ ಸರ್ವಭಾಷ್ಯಗಳನ್ನೂ ತಿಳಿದಿದ್ದ ಭಿಕ್ಷುಕಿಯು ಮಂತ್ರಿಗಳಿಂದ ಆವೃತನಾಗಿದ್ದ ರಾಜನನ್ನು ಪ್ರಚೋದಿಸಿದಳು.

12308016a ಸುಲಭಾ ತ್ವಸ್ಯ ಧರ್ಮೇಷು ಮುಕ್ತೋ ನೇತಿ ಸಸಂಶಯಾ।
12308016c ಸತ್ತ್ವಂ ಸತ್ತ್ವೇನ ಯೋಗಜ್ಞಾ ಪ್ರವಿವೇಶ ಮಹೀಪತೇ।।

ಮಹೀಪತೇ! ಯೋಗಜ್ಞೆ ಸುಲಭೆಯಾದರೋ “ಇವನು ಮೋಕ್ಷಧರ್ಮಿಯು ಹೌದೋ ಅಥವಾ ಅಲ್ಲವೋ” ಎಂಬ ಸಂಶಯದಿಂದ ಸತ್ತ್ವದಿಂದ ಸತ್ತ್ವವನ್ನು ಪ್ರವೇಶಿಸಿದಳು.

12308017a ನೇತ್ರಾಭ್ಯಾಂ ನೇತ್ರಯೋರಸ್ಯ ರಶ್ಮೀನ್ಸಂಯೋಜ್ಯ ರಶ್ಮಿಭಿಃ।
12308017c ಸಾ ಸ್ಮ ಸಂಚೋದಯಿಷ್ಯಂತಂ ಯೋಗಬಂಧೈರ್ಬಬಂಧ ಹ।।

ಅವಳು ಅವನನ್ನು ಪ್ರಚೋದಿಸುತ್ತಾ ತನ್ನ ಕಣ್ಣುಗಳ ರಶ್ಮಿಗಳಿಂದ ರಾಜನ ಕಣ್ಣುಗಳ ರಶ್ಮಿಗಳನ್ನು ಸೇರಿಸಿ ಯೋಗಬಂಧಗಳಿಂದ ಬಂಧಿಸಿದಳು.

12308018a ಜನಕೋಽಪ್ಯುತ್ಸ್ಮಯನ್ರಾಜಾ ಭಾವಮಸ್ಯಾ ವಿಶೇಷಯನ್।
12308018c ಪ್ರತಿಜಗ್ರಾಹ ಭಾವೇನ ಭಾವಮಸ್ಯಾ ನೃಪೋತ್ತಮಃ।।

ನೃಪೋತ್ತಮ! ರಾಜಾ ಜನಕನೂ ಕೂಡ ನಸುನಗುತ್ತಾ ಅವಳ ಭಾವವನ್ನು ಮೀರಿಸಿ ತನ್ನದೇ ಭಾವದಿಂದ ಅವಳ ಭಾವವನ್ನು ತಿರುಗಿ ಹಿಡಿದುಕೊಂಡನು.

12308019a ತದೇಕಸ್ಮಿನ್ನಧಿಷ್ಠಾನೇ ಸಂವಾದಃ ಶ್ರೂಯತಾಮಯಮ್।
12308019c ಚತ್ರಾದಿಷು ವಿಮುಕ್ತಸ್ಯ ಮುಕ್ತಾಯಾಶ್ಚ ತ್ರಿದಂಡಕೇ।।

ಚತ್ರಾದಿಗಳಿಂದ ವಿಮುಕ್ತನಾಗಿದ್ದ ಮತ್ತು ತ್ರಿದಂಡಗಳಿಂದ ಮುಕ್ತಳಾಗಿದ್ದ ಅವರಿಬ್ಬರೂ ಒಂದೇ ದೇಹದಲ್ಲಿದ್ದುಕೊಂಡು ನಡೆಸಿದ ಸಂಭಾಷಣೆಯನ್ನು ಕೇಳು.

12308020a ಭಗವತ್ಯಾಃ ಕ್ವ ಚರ್ಯೇಯಂ ಕೃತಾ ಕ್ವ ಚ ಗಮಿಷ್ಯಸಿ।
12308020c ಕಸ್ಯ ಚ ತ್ವಂ ಕುತೋ ವೇತಿ ಪಪ್ರಚ್ಚೈನಾಂ ಮಹೀಪತಿಃ।।

ಮಹೀಪತಿಯು ಅವಳನ್ನು ಪ್ರಶ್ನಿಸಿದನು: “ಭಗವತೀ! ಈ ಸಂನ್ಯಾಸದೀಕ್ಷೆಯನ್ನು ಎಲ್ಲಿಂದ ಪಡೆದುಕೊಂಡೆ? ನೀನು ಮುಂದೆ ಎಲ್ಲಿ ಹೋಗಲಿರುವೆ? ನೀನು ಯಾರವಳು? ಮತ್ತು ಎಲ್ಲಿಂದ ಬಂದಿರುವೆ?

12308021a ಶ್ರುತೇ ವಯಸಿ ಜಾತೌ ಚ ಸದ್ಭಾವೋ ನಾಧಿಗಮ್ಯತೇ।
12308021c ಏಷ್ವರ್ಥೇಷೂತ್ತರಂ ತಸ್ಮಾತ್ಪ್ರವೇದ್ಯಂ ಸತ್ಸಮಾಗಮೇ।।

ಶಾಸ್ತ್ರಜ್ಞಾನ, ವಯಸ್ಸು ಮತ್ತು ಜಾತಿಗಳ ಕುರಿತು ತಿಳಿಯದಿದ್ದರೆ ಪರಸ್ಪರರಲ್ಲಿ ಸದ್ಭಾವವು ಉಂಟಾಗುವುದಿಲ್ಲ. ಆದುದರಿಂದ ನಮ್ಮ ಸತ್ಸಮಾಗಮದಲ್ಲಿ ಕೇಳಿರುವ ಪ್ರಶ್ನೆಗಳಿಗೆ ಉತ್ತರವನ್ನು ನೀಡಬೇಕು.

12308022a ಚತ್ರಾದಿಷು ವಿಶೇಷೇಷು ಮುಕ್ತಂ ಮಾಂ ವಿದ್ಧಿ ಸರ್ವಶಃ।
12308022c ಸ ತ್ವಾಂ ಸಂಮಂತುಮಿಚ್ಚಾಮಿ ಮಾನಾರ್ಹಾಸಿ ಮತಾ ಹಿ ಮೇ।।

ಚತ್ರಾದಿ ಎಲ್ಲ ರಾಜಚಿಹ್ನೆಗಳಿಂದಲೂ ನಾನು ಮುಕ್ತನಾಗಿದ್ದೇನೆಂದು ತಿಳಿ. ನಿನ್ನನ್ನು ಸನ್ಮಾನಿಸಲು ಬಯಸುತ್ತೇನೆ. ನೀನು ಮಾನಾರ್ಹಳು ಎಂದು ನನ್ನ ಅಭಿಪ್ರಾಯ.

12308023a ಯಸ್ಮಾಚ್ಚೈತನ್ಮಯಾ ಪ್ರಾಪ್ತಂ ಜ್ಞಾನಂ ವೈಶೇಷಿಕಂ ಪುರಾ।
12308023c ಯಸ್ಯ ನಾನ್ಯಃ ಪ್ರವಕ್ತಾಸ್ತಿ ಮೋಕ್ಷೇ ತಮಪಿ ಮೇ ಶೃಣು।।

ಹಿಂದೆ ಯಾರಿಂದ ನನಗೆ ಸರ್ವಶ್ರೇಷ್ಠವಾದ ಮೋಕ್ಷಧರ್ಮಜ್ಞಾನವು ಪ್ರಾಪ್ತವಾಯಿತೋ ಅವನ ಹೊರತಾಗಿ ಬೇರೆ ಯಾರೂ ಮೋಕ್ಷಧರ್ಮದ ಪ್ರತಿಪಾದನೆಯನ್ನು ಮಾಡಿದವರಿಲ್ಲ. ಅವನ ಮತ್ತು ಅವನು ಪ್ರತಿಪಾತಿಸಿದ ಮೋಕ್ಷದ ವಿಷಯವನ್ನು ನನ್ನಿಂದ ಕೇಳು.

12308024a ಪಾರಾಶರ್ಯಸಗೋತ್ರಸ್ಯ ವೃದ್ಧಸ್ಯ ಸುಮಹಾತ್ಮನಃ।
12308024c ಭಿಕ್ಷೋಃ ಪಂಚಶಿಖಸ್ಯಾಹಂ ಶಿಷ್ಯಃ ಪರಮಸಂಮತಃ।।

ಪರಾಶರಗೋತ್ರದ ಮಹಾತ್ಮ ವೃದ್ಧಭಿಕ್ಷು ಪಂಚಶಿಖನ ಪರಮಸಮ್ಮತ ಶಿಷ್ಯನು ನಾನು.

12308025a ಸಾಂಖ್ಯಜ್ಞಾನೇ ತಥಾ ಯೋಗೇ ಮಹೀಪಾಲವಿಧೌ ತಥಾ।
12308025c ತ್ರಿವಿಧೇ ಮೋಕ್ಷಧರ್ಮೇಽಸ್ಮಿನ್ಗತಾಧ್ವಾ ಚಿನ್ನಸಂಶಯಃ।।

ಸಾಂಖ್ಯಜ್ಞಾನ, ಯೋಗವಿದ್ಯೆ ಮತ್ತು ರಾಜಧರ್ಮ – ಈ ಮೂರು ವಿಧದ ಮೋಕ್ಷಧರ್ಮಗಳಲ್ಲಿ ಪರಿಣಿತನಾಗಿದ್ದೇನೆ ಮತ್ತು ಸಂಶಯರಹಿತನಾಗಿದ್ದೇನೆ.

12308026a ಸ ಯಥಾಶಾಸ್ತ್ರದೃಷ್ಟೇನ ಮಾರ್ಗೇಣೇಹ ಪರಿವ್ರಜನ್।
12308026c ವಾರ್ಷಿಕಾಂಶ್ಚತುರೋ ಮಾಸಾನ್ಪುರಾ ಮಯಿ ಸುಖೋಷಿತಃ।।

ಹಿಂದೆ ನನ್ನ ಗುರುವು ಶಾಸ್ತ್ರೋಕ್ತ ಮಾರ್ಗಗಳಲ್ಲಿ ಸಂಚರಿಸುತ್ತಾ ವರ್ಷದ ನಾಲ್ಕು ಮಾಸಗಳು ಇಲ್ಲಿ ಸುಖವಾಗಿ ವಾಸಿಸಿದ್ದನು.

12308027a ತೇನಾಹಂ ಸಾಂಖ್ಯಮುಖ್ಯೇನ ಸುದೃಷ್ಟಾರ್ಥೇನ ತತ್ತ್ವತಃ।
12308027c ಶ್ರಾವಿತಸ್ತ್ರಿವಿಧಂ ಮೋಕ್ಷಂ ನ ಚ ರಾಜ್ಯಾದ್ವಿಚಾಲಿತಃ।।

ಸಾಂಖ್ಯದ ಆ ಪ್ರಮುಖವಿದ್ವಾಂಸನು ಮತ್ತು ಸಾಂಖ್ಯಶಾಸ್ತ್ರದ ಅರ್ಥಗಳನ್ನು ದೃಷ್ಟಾಂತಪೂರ್ವಕವಾಗಿ ತಿಳಿದುಕೊಂಡಿದ್ದ ಅವನು ನನಗೆ ಮೂರುವಿಧದ ಮೋಕ್ಷಧರ್ಮಗಳನ್ನು ಹೇಳಿದನು. ಆದರೆ ಅವನು ನನಗೆ ರಾಜ್ಯವನ್ನು ತ್ಯಜಿಸಲು ಅನುಮತಿಯನ್ನು ನೀಡಲಿಲ್ಲ.

12308028a ಸೋಽಹಂ ತಾಮಖಿಲಾಂ ವೃತ್ತಿಂ ತ್ರಿವಿಧಾಂ ಮೋಕ್ಷಸಂಹಿತಾಮ್।
12308028c ಮುಕ್ತರಾಗಶ್ಚರಾಮ್ಯೇಕಃ ಪದೇ ಪರಮಕೇ ಸ್ಥಿತಃ।।

ಅದರಂತೆ ನಾನು ಮೋಕ್ಷಸಂಹಿತ ತ್ರಿವಿಧ ವೃತ್ತಿಗಳನ್ನು ಆಚರಿಸುತ್ತಾ ಏಕಾಕಿಯಾಗಿ ಸದಾ ಪರಮಾತ್ಮಭಾವದಲ್ಲಿಯೇ ಇದ್ದುಬಿಟ್ಟಿದ್ದೇನೆ.

12308029a ವೈರಾಗ್ಯಂ ಪುನರೇತಸ್ಯ ಮೋಕ್ಷಸ್ಯ ಪರಮೋ ವಿಧಿಃ।
12308029c ಜ್ಞಾನಾದೇವ ಚ ವೈರಾಗ್ಯಂ ಜಾಯತೇ ಯೇನ ಮುಚ್ಯತೇ।।

ವೈರಾಗ್ಯವೇ ಮೋಕ್ಷದ ಪರಮ ವಿಧಿ. ಯಾವುದರಿಂದ ಮುಕ್ತಿ ದೊರೆಯುವುದೋ ಆ ವೈರಾಗ್ಯವು ಜ್ಞಾನದಿಂದಲೇ ಹುಟ್ಟುತ್ತದೆ.

12308030a ಜ್ಞಾನೇನ ಕುರುತೇ ಯತ್ನಂ ಯತ್ನೇನ ಪ್ರಾಪ್ಯತೇ ಮಹತ್।
12308030c ಮಹದ್ದ್ವಂದ್ವಪ್ರಮೋಕ್ಷಾಯ ಸಾ ಸಿದ್ಧಿರ್ಯಾ ವಯೋತಿಗಾ।।

ಜ್ಞಾನದಿಂದ ಮನುಷ್ಯನು ವೈರಾಗ್ಯಕ್ಕೆ ಪ್ರಯತ್ನಿಸುತ್ತಾನೆ. ವೈರಾಗ್ಯದಿಂದ ಮಹಾ ಮುಕ್ತಿಯು ಪ್ರಾಪ್ತವಾಗುತ್ತದೆ. ಮಹಾ ದ್ವಂದ್ವಗಳಿಂದ ಮುಕ್ತಿಪಡೆದು ಕಾಲಾತೀತವಾದ ಸಿದ್ಧಿಯನ್ನು ಪಡೆಯುತ್ತಾನೆ.

12308031a ಸೇಯಂ ಪರಮಿಕಾ ಬುದ್ಧಿಃ ಪ್ರಾಪ್ತಾ ನಿರ್ದ್ವಂದ್ವತಾ ಮಯಾ।
12308031c ಇಹೈವ ಗತಮೋಹೇನ ಚರತಾ ಮುಕ್ತಸಂಗಿನಾ।।

ಹೀಗೆ ಪಡೆದುಕೊಂಡು ಪರಮ ಬುದ್ಧಿಯಿಂದ ನಾನು ಗೃಹಸ್ಥಾಶ್ರಮದಲ್ಲಿಯೇ ಇದ್ದರೂ ಮೋಹವನ್ನು ಕಳೆದುಕೊಂಡು ನಿಸ್ಸಂಗನಾಗಿ ದ್ವಂದ್ವರಹಿತನಾಗಿದ್ದೇನೆ.

12308032a ಯಥಾ ಕ್ಷೇತ್ರಂ ಮೃದೂಭೂತಮದ್ಭಿರಾಪ್ಲಾವಿತಂ ತಥಾ।
12308032c ಜನಯತ್ಯಂಕುರಂ ಕರ್ಮ ನೃಣಾಂ ತದ್ವತ್ಪುನರ್ಭವಮ್।।

ಹೇಗೆ ಬೀಜಬಿತ್ತಿ ನೀರುಹಾಯಿಸಿದ ಗದ್ದೆಯಲ್ಲಿ ಮೊಳಕೆಗಳುಂಟಾಗುತ್ತವೆಯೋ ಹಾಗೆ ಕ್ಷೇತ್ರರೂಪದ ಶರೀರದಲ್ಲಿ ಶುಭಾಶುಭಕರ್ಮಗಳೆಂಬ ಕೃಷಿಯಿಂದ ಪುನರ್ಜನ್ಮರೂಪದ ಮೊಳಕೆಗಳು ಹುಟ್ಟಿಕೊಳ್ಳುತ್ತವೆ.

12308033a ಯಥಾ ಚೋತ್ತಾಪಿತಂ ಬೀಜಂ ಕಪಾಲೇ ಯತ್ರ ತತ್ರ ವಾ।
12308033c ಪ್ರಾಪ್ಯಾಪ್ಯಂಕುರಹೇತುತ್ವಮಬೀಜತ್ವಾನ್ನ ಜಾಯತೇ।।
12308034a ತದ್ವದ್ಭಗವತಾ ತೇನ ಶಿಖಾಪ್ರೋಕ್ತೇನ ಭಿಕ್ಷುಣಾ।
12308034c ಜ್ಞಾನಂ ಕೃತಮಬೀಜಂ ಮೇ ವಿಷಯೇಷು ನ ಜಾಯತೇ।।

ಬೀಜವನ್ನು ಯಾವುದಾದರೂ ಪಾತ್ರೆಯಲ್ಲಿ ಹಾಕಿ ಬೆಂಕಿಯ ಮೇಲಿಟ್ಟು ಹುರಿದಾಗ ಅ ಬೀಜವು ಬೀಜತ್ವವನ್ನು ಕಳೆದುಕೊಂಡು ಅಂಕುರಗಳನ್ನು ನೀಡುವುದಿಲ್ಲವೋ ಹಾಗೆ ಭಗವಾನ್ ಭಿಕ್ಷು ಪಂಚಶಿಖನ ಜ್ಞಾನೋಪದೇಶವು ನನ್ನ ಶುಭಾಶುಭಕರ್ಮಗಳೆಲ್ಲವನ್ನೂ ಅಬೀಜವನ್ನಾಗಿ ಮಾಡಿಬಿಟ್ಟಿದೆ. ವಿಷಯಗಳಿಂದ ತುಂಬಿರುವ ಈ ಶರೀರದಲ್ಲಿ ಅವು ಮೊಳೆಯುವುದಿಲ್ಲ.

12308035a ನಾಭಿಷಜ್ಜತಿ ಕಸ್ಮಿಂಶ್ಚಿನ್ನಾನರ್ಥೇ ನ ಪರಿಗ್ರಹೇ।
12308035c ನಾಭಿರಜ್ಯತಿ ಚೈತೇಷು ವ್ಯರ್ಥತ್ವಾದ್ರಾಗದೋಷಯೋಃ।।

ನನ್ನ ಬುದ್ಧಿಯು ಅನರ್ಥವಾಗಿ ಪಡೆದುಕೊಳ್ಳುವುದರಲ್ಲಿ ಅನುರಕ್ತವಾಗುವುದಿಲ್ಲ. ವ್ಯರ್ಥವಾದ ರಾಗದ್ವೇಷಗಳಲ್ಲಿಯೂ ನನ್ನ ಮನಸ್ಸು ಅನುರಕ್ತವಾಗುವುದಿಲ್ಲ.

12308036a ಯಶ್ಚ ಮೇ ದಕ್ಷಿಣಂ ಬಾಹುಂ ಚಂದನೇನ ಸಮುಕ್ಷಯೇತ್।
12308036c ಸವ್ಯಂ ವಾಸ್ಯಾ ಚ ಯಸ್ತಕ್ಷೇತ್ಸಮಾವೇತಾವುಭೌ ಮಮ।।

ನನ್ನ ಬಲತೋಳಿಗೆ ಚಂದನವನ್ನು ಲೇಪಿಸುವವನೂ ಮತ್ತು ಎಡತೋಳನ್ನು ಖಡ್ಗದಿಂದ ಕತ್ತರಿಸುವವರು – ಈ ಇಬ್ಬರೂ ನನಗೆ ಸಮಾನರೇ ಆಗಿರುತ್ತಾರೆ.

12308037a ಸುಖೀ ಸೋಽಹಮವಾಪ್ತಾರ್ಥಃ ಸಮಲೋಷ್ಟಾಶ್ಮಕಾಂಚನಃ।
12308037c ಮುಕ್ತಸಂಗಃ ಸ್ಥಿತೋ ರಾಜ್ಯೇ ವಿಶಿಷ್ಟೋಽನ್ಯೈಸ್ತ್ರಿದಂಡಿಭಿಃ।।

ಏನನ್ನೂ ಬಯಸದ ನಾನು ಸದಾ ಸುಖಿಯಾಗಿದ್ದೇನೆ. ಮಣ್ಣುಹೆಂಟೆ, ಕಲ್ಲು ಮತ್ತು ಕಾಂಚನವನ್ನು ಸಮಾನವಾಗಿ ಕಾಣುತ್ತೇನೆ. ಮುಕ್ತಸಂಗನಾದ ನಾನು ರಾಜ್ಯದಲ್ಲಿದ್ದರೂ ಇತರ ತ್ರಿದಂಡಿಗಳಿಗಿಂತ ವಿಶಿಷ್ಟನಾಗಿದ್ದೇನೆ.

12308038a ಮೋಕ್ಷೇ ಹಿ ತ್ರಿವಿಧಾ ನಿಷ್ಠಾ ದೃಷ್ಟಾ ಪೂರ್ವೈರ್ಮಹರ್ಷಿಭಿಃ।
12308038c ಜ್ಞಾನಂ ಲೋಕೋತ್ತರಂ ಯಚ್ಚ ಸರ್ವತ್ಯಾಗಶ್ಚ ಕರ್ಮಣಾಮ್।।

ಹಿಂದಿನ ಮಹರ್ಷಿಗಳು ಮೋಕ್ಷವು ಮೂರುವಿಧದ ನಿಷ್ಠೆಯೆಂದು ಕಂಡಿದ್ದಾರೆ. ಲೋಕೋತ್ತರ ಜ್ಞಾನವು ಸರ್ವಕರ್ಮಗಳ ತ್ಯಾಗರೂಪವಾದುದು.

12308039a ಜ್ಞಾನನಿಷ್ಠಾಂ ವದಂತ್ಯೇಕೇ ಮೋಕ್ಷಶಾಸ್ತ್ರವಿದೋ ಜನಾಃ।
12308039c ಕರ್ಮನಿಷ್ಠಾಂ ತಥೈವಾನ್ಯೇ ಯತಯಃ ಸೂಕ್ಷ್ಮದರ್ಶಿನಃ।।

ಮೋಕ್ಷಶಾಸ್ತ್ರವನ್ನು ತಿಳಿದಿರುವ ಜನರಲ್ಲಿ ಕೆಲವರು ಜ್ಞಾನನಿಷ್ಠೆಯೇ ಮೋಕ್ಷಕ್ಕೆ ಸಾಧನವೆನ್ನುತ್ತಾರೆ. ಹಾಗೆಯೇ ಅನ್ಯ ಸೂಕ್ಷ್ಮದರ್ಶೀ ಯತಿಗಳು ಕರ್ಮನಿಷ್ಠೆಯೇ ಸಾಧನವೆನ್ನುತ್ತಾರೆ.

12308040a ಪ್ರಹಾಯೋಭಯಮಪ್ಯೇತಜ್ಜ್ಞಾನಂ ಕರ್ಮ ಚ ಕೇವಲಮ್।
12308040c ತೃತೀಯೇಯಂ ಸಮಾಖ್ಯಾತಾ ನಿಷ್ಠಾ ತೇನ ಮಹಾತ್ಮನಾ।।

ಮಹಾತ್ಮ ಪಂಚಶಿಖನು ಜ್ಞಾನ ಮತ್ತು ಕರ್ಮ ಈ ಎರಡು ಮಾರ್ಗಗಳನ್ನೂ ಬಿಟ್ಟು ಮೂರನೆಯ ನಿಷ್ಠೆಯ ಕುರಿತು ಹೇಳಿರುತ್ತಾನೆ.

12308041a ಯಮೇ ಚ ನಿಯಮೇ ಚೈವ ದ್ವೇಷೇ ಕಾಮೇ ಪರಿಗ್ರಹೇ।
12308041c ಮಾನೇ ದಂಭೇ ತಥಾ ಸ್ನೇಹೇ ಸದೃಶಾಸ್ತೇ ಕುಟುಂಬಿಭಿಃ।।

ಈ ಮೂರನೆಯ ನಿಷ್ಠೆಯನ್ನು ಹೊಂದಿದವರು ಯಮ, ನಿಯಮ, ದ್ವೇಷ, ಕಾಮ, ಪರಿಗ್ರಹ, ಮಾನ, ದಂಭ ಮತ್ತು ಸ್ನೇಹಗಳಲ್ಲಿ ಗ್ರಹಸ್ಥರಂತೆಯೇ ಇರುತ್ತಾರೆ.

12308042a ತ್ರಿದಂಡಾದಿಷು ಯದ್ಯಸ್ತಿ ಮೋಕ್ಷೋ ಜ್ಞಾನೇನ ಕೇನ ಚಿತ್।
12308042c ಚತ್ರಾದಿಷು ಕಥಂ ನ ಸ್ಯಾತ್ತುಲ್ಯಹೇತೌ ಪರಿಗ್ರಹೇ।।

ತ್ರಿದಂಡವನ್ನು ಹಿಡಿದ ಸಂನ್ಯಾಸಿಗೆ ಒಂದು ವೇಳೆ ಮೋಕ್ಷ ಜ್ಞಾನವು ಲಭಿಸುವುದಾದರೆ ಚತ್ರಾದಿಗಳನ್ನು ಹೊಂದಿದ ರಾಜನಿಗೆ ಹೇಗೆ ಆ ಜ್ಞಾನವು ದೊರಕುವುದಿಲ್ಲ? ಪರಿಗ್ರಹವು ಎರಡರಲ್ಲಿಯೂ ಸಮಾನವಾಗಿಯೇ ಇದೆ.

12308043a ಯೇನ ಯೇನ ಹಿ ಯಸ್ಯಾರ್ಥಃ ಕಾರಣೇನೇಹ ಕಸ್ಯ ಚಿತ್।
12308043c ತತ್ತದಾಲಂಬತೇ ದ್ರವ್ಯಂ ಸರ್ವಃ ಸ್ವೇ ಸ್ವೇ ಪರಿಗ್ರಹೇ।।

ಯಾವ ಯಾವ ಉದ್ದೇಶ ಕಾರಣಗಳಿಂದ ಯಾರು ಏನನ್ನು ಸಂಗ್ರಹಿಸುತ್ತಾರೋ ಅದೇ ದ್ರವ್ಯದ ಮೇಲೆ ಅವನ ಎಲ್ಲವೂ ಅವಲಂಬಿಸಿರುತ್ತದೆ.

12308044a ದೋಷದರ್ಶೀ ತು ಗಾರ್ಹಸ್ಥ್ಯೇ ಯೋ ವ್ರಜತ್ಯಾಶ್ರಮಾಂತರಮ್।
12308044c ಉತ್ಸೃಜನ್ಪರಿಗೃಹ್ಣಂಶ್ಚ ಸೋಽಪಿ ಸಂಗಾನ್ನ ಮುಚ್ಯತೇ।।

ಗೃಹಸ್ಥಾಶ್ರಮದಲ್ಲಿ ದೋಷವನ್ನು ಕಂಡು ಅದನ್ನು ಪರಿತ್ಯಜಿಸಿ ಬೇರೆ ಆಶ್ರಮಕ್ಕೆ ಹೋಗುವವು ಆ ಆಶ್ರಮದಲ್ಲಿಯೂ ಕೆಲವನ್ನು ತ್ಯಜಿಸುತ್ತಾನೆ ಮತ್ತು ಬೇರೆ ಕೆಲವನ್ನು ಸಂಗ್ರಹಿಸುತ್ತಾನೆ. ಆಗಲೂ ಅವನು ಸಂಗದೋಷದಿಂದ ಮುಕ್ತನಾಗುವುದಿಲ್ಲ.

12308045a ಆಧಿಪತ್ಯೇ ತಥಾ ತುಲ್ಯೇ ನಿಗ್ರಹಾನುಗ್ರಹಾತ್ಮನಿ।
12308045c ರಾಜರ್ಷಿಭಿಕ್ಷುಕಾಚಾರ್ಯಾ ಮುಚ್ಯಂತೇ ಕೇನ ಹೇತುನಾ।।

ನಿಗ್ರಹ-ಅನುಗ್ರಹಗಳಲ್ಲಿ ಮತ್ತು ಆಧಿಪತ್ಯದಲ್ಲಿ ರಾಜರ್ಷಿ ಮತ್ತು ಸಂನ್ಯಾಸಿಗಳಿಬ್ಬರೂ ಸಮಾನರೇ ಆಗಿರುತ್ತಾರೆ. ಹೀಗಿರುವಾಗ ಯಾವ ಕಾರಣಕ್ಕೆ ಕೇವಲ ಸನ್ಯಾಸಿಗಳು ಮುಕ್ತರಾಗುತ್ತಾರೆ?

12308046a ಅಥ ಸತ್ಯಾಧಿಪತ್ಯೇಽಪಿ ಜ್ಞಾನೇನೈವೇಹ ಕೇವಲಮ್।
12308046c ಮುಚ್ಯಂತೇ ಕಿಂ ನ ಮುಚ್ಯಂತೇ ಪದೇ ಪರಮಕೇ ಸ್ಥಿತಾಃ।।

ಹಾಗೆ ರಾಜ್ಯಾಧಿಕಾರದಲ್ಲಿದ್ದರೂ ಕೇವಲ ಜ್ಞಾನದ ಮೂಲಕ ಮುಕ್ತರಾಗುತ್ತಾರೆ. ಒಂದೇ ಪರಮ ಪದದಲ್ಲಿರುವವರು ಏಕೆ ಮೋಕ್ಷವನ್ನು ಪಡೆದುಕೊಳ್ಳುವುದಿಲ್ಲ?

12308047a ಕಾಷಾಯಧಾರಣಂ ಮೌಂಡ್ಯಂ ತ್ರಿವಿಷ್ಟಬ್ಧಃ ಕಮಂಡಲುಃ।
12308047c ಲಿಂಗಾನ್ಯತ್ಯರ್ಥಮೇತಾನಿ ನ ಮೋಕ್ಷಾಯೇತಿ ಮೇ ಮತಿಃ।।

ಕಾಷಾಯಧಾರಣ, ಮುಂಡನ, ಮತ್ತು ಕಮಂಡಲು-ತ್ರಿವಿಷ್ಟಗಳನ್ನು ಧರಿಸುವುದು – ಕೇವಲ ಈ ಚಿಹ್ನೆಗಳು ಮೋಕ್ಷಕ್ಕೆ ಕಾರಣವಾಗುವುದಿಲ್ಲ ಎಂದು ನನ್ನ ಅಭಿಪ್ರಾಯ.

12308048a ಯದಿ ಸತ್ಯಪಿ ಲಿಂಗೇಽಸ್ಮಿನ್ ಜ್ಞಾನಮೇವಾತ್ರ ಕಾರಣಮ್।
12308048c ನಿರ್ಮೋಕ್ಷಾಯೇಹ ದುಃಖಸ್ಯ ಲಿಂಗಮಾತ್ರಂ ನಿರರ್ಥಕಮ್।।

ಈ ಚಿಹ್ನೆಗಳಿದ್ದರೂ ಕೇವಲ ಜ್ಞಾನವೇ ದುಃಖದಿಂದ ಮೋಕ್ಷಹೊಂದಲು ಕಾರಣವೆಂದಾದರೆ ಅಲ್ಲಿ ಕೇವಲ ಚಿಹ್ನೆಗಳು ನಿರರ್ಥಕವೆಂದಾಯಿತು.

12308049a ಅಥ ವಾ ದುಃಖಶೈಥಿಲ್ಯಂ ವೀಕ್ಷ್ಯ ಲಿಂಗೇ ಕೃತಾ ಮತಿಃ।
12308049c ಕಿಂ ತದೇವಾರ್ಥಸಾಮಾನ್ಯಂ ಚತ್ರಾದಿಷು ನ ಲಕ್ಷ್ಯತೇ।।

ಅಥವಾ ಈ ಚಿಹ್ನೆಗಳನ್ನು ಧರಿಸುವುದರಿಂದ ದುಃಖವು ಸ್ವಲ್ಪ ಕಡಿಮೆಯಾಗುತ್ತದೆ ಎಂದರೂ ಈ ಅರ್ಥಸಾಮಾನ್ಯವೇ ಛತ್ರ-ಚಾಮರಾದಿಗಳಲ್ಲಿಯೂ ಏಕಿರಬಾರದು?

12308050a ಆಕಿಂಚನ್ಯೇ ನ ಮೋಕ್ಷೋಽಸ್ತಿ ಕೈಂಚನ್ಯೇ ನಾಸ್ತಿ ಬಂಧನಮ್।
12308050c ಕೈಂಚನ್ಯೇ ಚೇತರೇ ಚೈವ ಜಂತುರ್ಜ್ಞಾನೇನ ಮುಚ್ಯತೇ।।

ದಾರಿದ್ರ್ಯದಲ್ಲಿ ಮೋಕ್ಷವೆಂಬುದೇನೂ ಇರುವುದಿಲ್ಲ. ಮೋಕ್ಷಪ್ರಾಪ್ತಿಗೆ ದರಿದ್ರರಾಗಿರಬೇಕೆಂಬ ನಿಯಮವೇನೂ ಇಲ್ಲ. ದರಿದ್ರರೆಲ್ಲರಿಗೂ ಮೋಕ್ಷಪ್ರಾಪ್ರಿಯಾಗುತ್ತದೆ ಎನ್ನುವುದೂ ಇಲ್ಲ. ದಾರಿದ್ರ್ಯವು ಮೋಕ್ಷಕ್ಕೆ ಸಾಧನವಾಗುವುದಿಲ್ಲ. ಅವಶ್ಯ ವಸ್ತುಗಳ ಸಂಪನ್ನತೆಯಿದ್ದರೆ ಅದು ಬಂಧನಕ್ಕೆ ಕಾರಣವೇನೂ ಆಗುವುದಿಲ್ಲ. ಆಢ್ಯನಾಗಲೀ ದರಿದ್ರನಾಗಲೀ ಮನುಷ್ಯನು ಜ್ಞಾನಮಾತ್ರದಿಂದಲೇ ಬಂಧನದಿಂದ ಮುಕ್ತಿಯನ್ನು ಹೊಂದುತ್ತಾನೆ.

12308051a ತಸ್ಮಾದ್ಧರ್ಮಾರ್ಥಕಾಮೇಷು ತಥಾ ರಾಜ್ಯಪರಿಗ್ರಹೇ।
12308051c ಬಂಧನಾಯತನೇಷ್ವೇಷು ವಿದ್ಧ್ಯಬಂಧೇ ಪದೇ ಸ್ಥಿತಮ್।।

ಧರ್ಮ-ಅರ್ಥ-ಕಾಮ ಮತ್ತು ಹಾಗೆಯೇ ರಾಜ್ಯಪರಿಗ್ರಹ ಈ ಬಂಧನಗಳನ್ನುಂಟುಮಾಡುವ ವಿಷಯಗಳಲ್ಲಿ ತೊಡಗಿಕೊಂಡಿದ್ದರೂ ನಾನು ಬಂಧನರಹಿತವಾದ ಜೀವನ್ಮುಕ್ತನ ಸ್ಥಾನದಲ್ಲಿರುವೆ ಎನ್ನುವುದನ್ನು ತಿಳಿದುಕೋ.

12308052a ರಾಜ್ಯೈಶ್ವರ್ಯಮಯಃ ಪಾಶಃ ಸ್ನೇಹಾಯತನಬಂಧನಃ।
12308052c ಮೋಕ್ಷಾಶ್ಮನಿಶಿತೇನೇಹ ಚಿನ್ನಸ್ತ್ಯಾಗಾಸಿನಾ ಮಯಾ।।

ರಾಜ್ಯೈಶ್ವರ್ಯಮಯವಾದ ಪಾಶವನ್ನೂ ಮತ್ತು ಸ್ನೇಹದಿಂದುಂಟಾಗುವ ಬಂಧನಗಳನ್ನೂ ನಾನು ಮೋಕ್ಷವೆಂಬ ಕಲ್ಲಿಗೆ ಉಜ್ಜಿ ಹರಿತಗೊಳಿಸಿದ ತ್ಯಾಗವೆಂಬ ಖಡ್ಗದಿಂದ ಕತ್ತರಿಸಿಬಿಟ್ಟಿದ್ದೇನೆ.

12308053a ಸೋಽಹಮೇವಂಗತೋ ಮುಕ್ತೋ ಜಾತಾಸ್ಥಸ್ತ್ವಯಿ ಭಿಕ್ಷುಕಿ।
12308053c ಅಯಥಾರ್ಥೋ ಹಿ ತೇ ವರ್ಣೋ ವಕ್ಷ್ಯಾಮಿ ಶೃಣು ತನ್ಮಮ।।

ಭಿಕ್ಷುಕೀ! ಹೀಗೆ ನಾನು ಮುಕ್ತನಾಗಿದ್ದೇನೆ. ನಿನ್ನ ಕುರಿತು ಆಸ್ಥೆಯುಂಟಾಗಿದೆ. ನಿನ್ನ ಈ ಸೌಂದರ್ಯವು ಯಥಾರ್ಥವಾದುದಲ್ಲ. ಅದರ ಕುರಿತು ಹೇಳುತ್ತೇನೆ. ನನ್ನನ್ನು ಕೇಳು.

12308054a ಸೌಕುಮಾರ್ಯಂ ತಥಾ ರೂಪಂ ವಪುರಗ್ರ್ಯಂ ತಥಾ ವಯಃ।
12308054c ತವೈತಾನಿ ಸಮಸ್ತಾನಿ ನಿಯಮಶ್ಚೇತಿ ಸಂಶಯಃ।।

ಸುಕುಮಾರತೆ, ರೂಪ, ಸುಂದರ ಶರೀರ ಮತ್ತು ಯವನಾವಸ್ಥೆ ಇವೆಲ್ಲವೂ ಇನ್ನ ನಿಯಮಗಳಾಗಿವೆ ಎಂದು ಸಂಶಯವಾಗುತ್ತಿದೆ.

12308055a ಯಚ್ಚಾಪ್ಯನನುರೂಪಂ ತೇ ಲಿಂಗಸ್ಯಾಸ್ಯ ವಿಚೇಷ್ಟಿತಮ್।
12308055c ಮುಕ್ತೋಽಯಂ ಸ್ಯಾನ್ನ ವೇತ್ಯಸ್ಮಾದ್ಧರ್ಷಿತೋ ಮತ್ಪರಿಗ್ರಹಃ।।

ನಿನ್ನ ಈ ಲಕ್ಷಣಗಳು ನಿನಗೆ ಅನುರೂಪವಾಗಿಲ್ಲ. ತ್ರಿದಂಡವನ್ನು ಧರಿಸಿರುವುದಕ್ಕೆ ಅನುರೂಪವಾಗಿ ನೀನು ವರ್ತಿಸುತ್ತಿಲ್ಲ. ಇವನು ಮುಕ್ತನಾಗಿರುವನೇ ಇಲ್ಲವೇ ಎಂದು ಪರೀಕ್ಷಿಸುವ ಸಲುವಾಗಿ ನೀನು ಬಲಾತ್ಕಾರವಾಗಿ ನನ್ನನ್ನು ಆಕ್ರಮಿಸಿರುವೆ.

12308056a ನ ಚ ಕಾಮಸಮಾಯುಕ್ತೇ ಮುಕ್ತೇಽಪ್ಯಸ್ತಿ ತ್ರಿದಂಡಕಮ್।
12308056c ನ ರಕ್ಷ್ಯತೇ ತ್ವಯಾ ಚೇದಂ ನ ಮುಕ್ತಸ್ಯಾಸ್ತಿ ಗೋಪನಾ।।

ಮುಕ್ತನಾಗಿದ್ದರೂ ಕಾಮಸಮಾಯುಕ್ತನಾಗಿದ್ದರೆ ತ್ರಿದಂಡವು ಅನುಚಿತವೂ ವ್ಯರ್ಥವೂ ಆಗುತ್ತದೆ. ಈ ರೀತಿ ವರ್ತಿಸುತ್ತಿರುವುದರಿಂದ ನೀನು ನಿನ್ನ ಸಂನ್ನ್ಯಾಸಧರ್ಮವನ್ನೂ ರಕ್ಷಿಸಿಕೊಳ್ಳುತ್ತಿಲ್ಲ. ನಿನ್ನ ನಿಜಸ್ವರೂಪವನ್ನು ಮುಚ್ಚಿಕೊಳ್ಳಲು ನೀನು ಹೀಗೆ ಮಾಡುತ್ತಿರುವೆಯಾದರೆ ಅದು ಸರಿಯಲ್ಲ. ಏಕೆಂದರೆ ಜೀವನ್ಮುಕ್ತನಿಗೆ ಗೋಪನದ ಅವಶ್ಯಕತೆಯೇ ಇಲ್ಲ.

12308057a ಮತ್ಪಕ್ಷಸಂಶ್ರಯಾಚ್ಚಾಯಂ ಶೃಣು ಯಸ್ತೇ ವ್ಯತಿಕ್ರಮಃ।
12308057c ಆಶ್ರಯಂತ್ಯಾಃ ಸ್ವಭಾವೇನ ಮಮ ಪೂರ್ವಪರಿಗ್ರಹಮ್।।

ನನ್ನ ದೇಹವನ್ನು ಪ್ರವೇಶಿಸಿ ನನ್ನ ವಶಳಾಗಿರುವ ನೀನು ಹೇಗೆ ಮರ್ಯಾದೆಯನ್ನು ಮೀರಿ ನಡೆದುಕೊಂಡಿರುವೆ ಎನ್ನುವುದನ್ನು ಹೇಳುತ್ತೇನೆ. ಕೇಳು.

12308058a ಪ್ರವೇಶಸ್ತೇ ಕೃತಃ ಕೇನ ಮಮ ರಾಷ್ಟ್ರೇ ಪುರೇ ತಥಾ।
12308058c ಕಸ್ಯ ವಾ ಸಂನಿಸರ್ಗಾತ್ತ್ವಂ ಪ್ರವಿಷ್ಟಾ ಹೃದಯಂ ಮಮ।।

ನೀನು ಯಾವ ಕಾರಣದಿಂದ ನನ್ನ ರಾಷ್ಟ್ರವನ್ನು ಅಥವಾ ಪುರವನ್ನು ಪ್ರವೇಶಿಸಿರುವೆ? ಯಾರ ಸಂಕೇತದಿಂದ ನೀನು ನನ್ನ ಹೃದಯವನ್ನು ಪ್ರವೇಶಿಸಿದೆ?

12308059a ವರ್ಣಪ್ರವರಮುಖ್ಯಾಸಿ ಬ್ರಾಹ್ಮಣೀ ಕ್ಷತ್ರಿಯೋ ಹ್ಯಹಮ್।
12308059c ನಾವಯೋರೇಕಯೋಗೋಽಸ್ತಿ ಮಾ ಕೃಥಾ ವರ್ಣಸಂಕರಮ್।।

ಈನು ವರ್ಣಪ್ರವರ ಬ್ರಾಹ್ಮಣಿಯಾಗಿರುವೆ. ನಾನು ಕ್ಷತ್ರಿಯನು. ನಾವಿಬ್ಬರೂ ಒಂದೇ ಸ್ಥಳದಲ್ಲಿ ಸೇರಿ ವರ್ಣಸಂಕರಕ್ಕೆ ಕಾರಣವಾಗಬೇಡ.

12308060a ವರ್ತಸೇ ಮೋಕ್ಷಧರ್ಮೇಷು ಗಾರ್ಹಸ್ಥ್ಯೇ ತ್ವಹಮಾಶ್ರಮೇ।
12308060c ಅಯಂ ಚಾಪಿ ಸುಕಷ್ಟಸ್ತೇ ದ್ವಿತೀಯೋಽಶ್ರಮಸಂಕರಃ।।

ಮೋಕ್ಷಧರ್ಮದ ಸಂನ್ಯಾಸಾಶ್ರಮದಲ್ಲಿದ್ದುಕೊಂಡು ನೀನು ವರ್ತಿಸುತ್ತಿರುವೆ. ನಾನು ಗೃಹಸ್ಥಾಶ್ರಮದಲ್ಲಿದ್ದೇನೆ. ಆಶ್ರಮಸಂಕರವನ್ನು ಮಾಡಿರುವ ನಿನಗೆ ಇದು ಎರಡನೆಯ ಕಷ್ಟ.

12308061a ಸಗೋತ್ರಾಂ ವಾಸಗೋತ್ರಾಂ ವಾ ನ ವೇದ ತ್ವಾಂ ನ ವೇತ್ಥ ಮಾಮ್।
12308061c ಸಗೋತ್ರಮಾವಿಶಂತ್ಯಾಸ್ತೇ ತೃತೀಯೋ ಗೋತ್ರಸಂಕರಃ।।

ನೀನು ಸಗೋತ್ರಳೋ ಅಥವಾ ಅಸಗೋತ್ರಳೋ ಎನ್ನುವುದು ನನಗೆ ತಿಳಿಯದು. ನನ್ನ ಗೋತ್ರದ ಕುರಿತು ನಿನಗೂ ತಿಳಿಯದು. ಒಂದು ವೇಳೆ ನಾವಿಬ್ಬರೂ ಸಗೋತ್ರದವರಾಗಿದ್ದರೆ ಗೋತ್ರಸಂಕರದ ಈ ಮೂರನೆಯ ದೋಷವೂ ನಿನಗುಂಟಾಗುತ್ತದೆ.

12308062a ಅಥ ಜೀವತಿ ತೇ ಭರ್ತಾ ಪ್ರೋಷಿತೋಽಪ್ಯಥ ವಾ ಕ್ವ ಚಿತ್।
12308062c ಅಗಮ್ಯಾ ಪರಭಾರ್ಯೇತಿ ಚತುರ್ಥೋ ಧರ್ಮಸಂಕರಃ।।

ಒಂದು ವೇಳೆ ನೀನು ಸಂನ್ಯಾಸಿನಿಯಾಗಿರದೇ ನಿನ್ನ ಪತಿಯು ಜೀವಿಸಿದ್ದರೆ ಅಥವಾ ಬೇರೆಲ್ಲಿಯೋ ಪ್ರವಾಸಮಾಡುತ್ತಿದ್ದರೆ ಪರಭಾರ್ಯೆಯಾದ ನೀನು ನನ್ನನ್ನು ಸೇರುವುದರಿಂದ ನಾಲ್ಕನೆಯ ಧರ್ಮಸಂಕರ ದೋಷವು ನಿನಗುಂಟಾಗುತ್ತದೆ.

12308063a ಸಾ ತ್ವಮೇತಾನ್ಯಕಾರ್ಯಾಣಿ ಕಾರ್ಯಾಪೇಕ್ಷಾ ವ್ಯವಸ್ಯಸಿ।
12308063c ಅವಿಜ್ಞಾನೇನ ವಾ ಯುಕ್ತಾ ಮಿಥ್ಯಾಜ್ಞಾನೇನ ವಾ ಪುನಃ।।

ಕಾರ್ಯಸಾಧನೆಯನ್ನು ಅಪೇಕ್ಷಿಸಿ ಅವಿಜ್ಞಾನದಿಂದ ಅಥವಾ ಮಿಥ್ಯಾಜ್ಞಾನದಿಂದ ನೀನು ಈ ಮಾಡಬಾರದ ಕಾರ್ಯಗಳನ್ನು ಮಾಡುತ್ತಿರುವೆ.

12308064a ಅಥ ವಾಪಿ ಸ್ವತಂತ್ರಾಸಿ ಸ್ವದೋಷೇಣೇಹ ಕೇನ ಚಿತ್।
12308064c ಯದಿ ಕಿಂ ಚಿಚ್ಚ್ರುತಂ ತೇಽಸ್ತಿ ಸರ್ವಂ ಕೃತಮನರ್ಥಕಮ್।।

ಅಥವಾ ನೀನು ಸ್ವತಂತ್ರಳೆಂದು ಭಾವಿಸಿದ್ದರೆ ಮತ್ತು ನೀನು ಸ್ವಲ್ಪವಾದರೂ ವೇದಾಧ್ಯಯನ ಮಾಡಿದ್ದರೆ ನೀನು ಮಾಡಿದುದೆಲ್ಲವೂ ಅನರ್ಥಕವೇ ಆಗಿದೆ.

12308065a ಇದಮನ್ಯತ್ತೃತೀಯಂ5 ತೇ ಭಾವಸ್ಪರ್ಶವಿಘಾತಕಮ್।
12308065c ದುಷ್ಟಾಯಾ ಲಕ್ಷ್ಯತೇ ಲಿಂಗಂ ಪ್ರವಕ್ತವ್ಯಂ ಪ್ರಕಾಶಿತಮ್6।।

ಭಾವಸ್ಪರ್ಷವಿಘಾತಕವಾದ ಇದು ನಿನ್ನ ನಾಲ್ಕನೆಯ ದೋಷ. ನಿನ್ನ ದುಷ್ಟತನವು ಇಲ್ಲಿ ಕಾಣಿಸಿಕೊಳ್ಳುತ್ತಿದೆ. ನಿನ್ನಲ್ಲಿರುವ ದೋಷಗಳನ್ನು ನೀನೇ ಪ್ರಕಾಶಿಸುತ್ತಿರುವೆ.

12308066a ನ ಮಯ್ಯೇವಾಭಿಸಂಧಿಸ್ತೇ ಜಯೈಷಿಣ್ಯಾ ಜಯೇ ಕೃತಃ।
12308066c ಯೇಯಂ ಮತ್ಪರಿಷತ್ಕೃತ್ಸ್ನಾ ಜೇತುಮಿಚ್ಚಸಿ ತಾಮಪಿ।।

ನನ್ನನ್ನು ಜಯಿಸಲು ಇಚ್ಛಿಸಿರುವ ನೀನು ಪ್ರಯತ್ನವನ್ನೇನೋ ಮಾಡಿರುವೆ. ನನ್ನ ಈ ಪರಿಷತ್ತನ್ನೂ ಸಂಪೂರ್ಣವಾಗಿ ಜಯಿಸಲು ನೀನು ಬಯಸುತ್ತಿದ್ದೀಯೆ.

12308067a ತಥಾ ಹ್ಯೇವಂ ಪುನಶ್ಚ ತ್ವಂ ದೃಷ್ಟಿಂ ಸ್ವಾಂ ಪ್ರತಿಮುಂಚಸಿ।
12308067c ಮತ್ಪಕ್ಷಪ್ರತಿಘಾತಾಯ ಸ್ವಪಕ್ಷೋದ್ಭಾವನಾಯ ಚ।।

ನನ್ನ ಪಕ್ಷವನ್ನು ಪರಾಜಯಗೊಳಿಸಲು ಮತ್ತು ನಿನ್ನ ಪಕ್ಷವನ್ನು ಎತ್ತಿಹಿಡಿಯಲು ನನ್ನ ಸಭಾಸದರ ಕಡೆಗೆ ಪದೇ ಪದೇ ನಿನ್ನ ದೃಷ್ಟಿಯನ್ನು ಬೀರುತ್ತಿರುವೆ.

12308068a ಸಾ ಸ್ವೇನಾಮರ್ಷಜೇನ ತ್ವಮೃದ್ಧಿಮೋಹೇನ ಮೋಹಿತಾ।
12308068c ಭೂಯಃ ಸೃಜಸಿ ಯೋಗಾಸ್ತ್ರಂ ವಿಷಾಮೃತಮಿವೈಕಧಾ।।

ಅಸಹನೆಯಿಂದ ನಿನ್ನಲ್ಲಿ ವೃದ್ಧಿಸುತ್ತಿರುವ ಮೋಹದಿಂದ ಮೋಹಿತಳಾಗಿ ವಿಷ ಮತ್ತು ಅಮೃತಗಳನ್ನು ಒಂದು ಮಾಡುವ ಯೋಗಾಸ್ತ್ರಗಳನ್ನು ಪುನಃ ಪುನಃ ಸೃಷ್ಟಿಸುತ್ತಿದ್ದೀಯೆ.

12308069a ಇಚ್ಚತೋರ್ಹಿ ದ್ವಯೋರ್ಲಾಭಃ ಸ್ತ್ರೀಪುಂಸೋರಮೃತೋಪಮಃ।
12308069c ಅಲಾಭಶ್ಚಾಪ್ಯರಕ್ತಸ್ಯ ಸೋಽತ್ರ ದೋಷೋ ವಿಷೋಪಮಃ।।

ಸ್ತ್ರೀಪುರುಷರಿಬ್ಬರೂ ಪರಸ್ಪರರನ್ನು ಇಚ್ಛಿಸಿ ಪಡೆದುಕೊಂಡರೆ ಅದು ಅಮೃತೋಪಮವಾಗಿರುತ್ತದೆ. ಯಾರಲ್ಲಿ ಅನುರಕ್ತರಾಗಿರುವೆವೋ ಅವರು ದೊರಕದಿದ್ದರೆ ಅಲ್ಲಿ ವಿಷದಂತಹ ದೋಷವುಂಟಾಗುತ್ತದೆ.

12308070a ಮಾ ಸ್ಪ್ರಾಕ್ಷೀಃ ಸಧು ಜಾನೀಷ್ವ ಸ್ವಶಾಸ್ತ್ರಮನುಪಾಲಯ।
12308070c ಕೃತೇಯಂ ಹಿ ವಿಜಿಜ್ಞಾಸಾ ಮುಕ್ತೋ ನೇತಿ ತ್ವಯಾ ಮಮ।
12308070e ಏತತ್ಸರ್ವಂ ಪ್ರತಿಚ್ಚನ್ನಂ ಮಯಿ ನಾರ್ಹಸಿ ಗೂಹಿತುಮ್।।

ನನ್ನನ್ನು ಮುಟ್ಟಬೇಡ. ನಾನು ಸಾಧುವೆಂದು ತಿಳಿ. ನಿನ್ನ ಶಾಸ್ತ್ರಜ್ಞಾನವನ್ನು ಪರಿಪಾಲಿಸು. ನಾನು ಮುಕ್ತನೋ ಅಲ್ಲವೋ ಎಂದು ನೀನು ಜಿಜ್ಞಾಸೆಯನ್ನು ಮಾಡುತ್ತಿರುವೆ! ಇವೆಲ್ಲವೂ ನಿನ್ನ ಮನಸ್ಸಿನಲ್ಲಿ ನಿಗೂಢವಾಗಿವೆ. ಇದನ್ನು ನನ್ನಿಂದ ಗೌಪ್ಯವಾಗಿಡಬೇಕಾಗಿಲ್ಲ.

12308071a ಸಾ ಯದಿ ತ್ವಂ ಸ್ವಕಾರ್ಯೇಣ ಯದ್ಯನ್ಯಸ್ಯ ಮಹೀಪತೇಃ।
12308071c ತತ್ತ್ವಂ ಸತ್ರಪ್ರತಿಚ್ಚನ್ನಾ ಮಯಿ ನಾರ್ಹಸಿ ಗೂಹಿತುಮ್।।

ನಿನ್ನ ಅಥವಾ ಅನ್ಯ ಮಹೀಪತಿಯ ಕಾರ್ಯಸಿದ್ಧಿಗಾಗಿ ಹೀಗೆ ವೇಷವನ್ನು ಮರೆಸಿಕೊಂಡು ನೀನು ಬಂದಿದ್ದರೆ ಆ ವಿಷಯವನ್ನು ನನ್ನಿಂದ ಮರೆಮಾಡಬೇಡಬೇಕಾಗಿಲ್ಲ.

12308072a ನ ರಾಜಾನಂ ಮೃಷಾ ಗಚ್ಚೇನ್ನ ದ್ವಿಜಾತಿಂ ಕಥಂ ಚನ।
12308072c ನ ಸ್ತ್ರಿಯಂ ಸ್ತ್ರೀಗುಣೋಪೇತಾಂ ಹನ್ಯುರ್ಹ್ಯೇತೇ ಮೃಷಾಗತಾಃ।।

ರಾಜನ, ದ್ವಿಜನ ಮತ್ತು ಪತಿವ್ರತಾ ಸ್ತ್ರೀಯ ಬಳಿಗೆ ಸ್ವರೂಪವನ್ನು ಮರೆಸಿಕೊಂಡು ಹೋಗಬಾರದು. ಹಾಗೆ ಹೋದಲ್ಲಿ ಅವರು ವೇಷಮರಿಸಿಕೊಂಡು ಬಂದವನನ್ನು ನಾಶಗೊಳಿಸುತ್ತಾರೆ.

12308073a ರಾಜ್ಞಾಂ ಹಿ ಬಲಮೈಶ್ವರ್ಯಂ ಬ್ರಹ್ಮ ಬ್ರಹ್ಮವಿದಾಂ ಬಲಮ್।
12308073c ರೂಪಯೌವನಸೌಭಾಗ್ಯಂ ಸ್ತ್ರೀಣಾಂ ಬಲಮನುತ್ತಮಮ್।।

ರಾಜರಿಗೆ ಐಶ್ವರ್ಯವೇ ಬಲ. ಬ್ರಹ್ಮವಿದರಿಗೆ ಬ್ರಹ್ಮವೇ ಬಲ. ರೂಪಯೌವನಗಳೇ ಸ್ತ್ರೀಯರ ಸೌಭಾಗ್ಯ ಮತ್ತು ಉತ್ತಮ ಬಲ.

12308074a ಅತ ಏತೈರ್ಬಲೈರೇತೇ ಬಲಿನಃ ಸ್ವಾರ್ಥಮಿಚ್ಚತಾ।
12308074c ಆರ್ಜವೇನಾಭಿಗಂತವ್ಯಾ ವಿನಾಶಾಯ ಹ್ಯನಾರ್ಜವಮ್।।

ಇವರಿಂದ ಈ ಬಲಗಳನ್ನು ಸ್ವಾರ್ಥಕ್ಕೆ ಪಡೆದುಕೊಳ್ಳಲು ಇಚ್ಛಿಸುವವನು ಆರ್ಜವದಿಂದಲೇ ಅವರ ಬಳಿ ಹೋಗಬೇಕು. ಅನಾರ್ಜವವು ವಿನಾಶಕ್ಕೆ ಕಾರಣವಾಗುತ್ತದೆ.

12308075a ಸಾ ತ್ವಂ ಜಾತಿಂ ಶ್ರುತಂ ವೃತ್ತಂ ಭಾವಂ ಪ್ರಕೃತಿಮಾತ್ಮನಃ।
12308075c ಕೃತ್ಯಮಾಗಮನೇ ಚೈವ ವಕ್ತುಮರ್ಹಸಿ ತತ್ತ್ವತಃ।।

ಆದುದರಿಂದ ನಿನ್ನ ಜಾತಿ, ವಿದ್ಯೆ, ಚಾರಿತ್ರ್ಯ, ಭಾವ, ಸ್ವಭಾವ ಮತ್ತು ಇಲ್ಲಿಗೆ ಆಗಮಿಸಿದುದರ ಕಾರಣವನ್ನು ತತ್ತ್ವತಃ ಹೇಳಬೇಕು.”

12308076a ಇತ್ಯೇತೈರಸುಖೈರ್ವಾಕ್ಯೈರಯುಕ್ತೈರಸಮಂಜಸೈಃ।
12308076c ಪ್ರತ್ಯಾದಿಷ್ಟಾ ನರೇಂದ್ರೇಣ ಸುಲಭಾ ನ ವ್ಯಕಂಪತ।।

ಇಂತಹ ಅಸುಖವಾದ, ಅಯುಕ್ತವಾದ ಮತ್ತು ಅಸಮಂಜಸವಾದ ಮಾತುಗಳನ್ನು ನರೇಂದ್ರನು ಹೇಳಿದರೂ ಸುಲಭೆಯು ವಿಚಲಿತಳಾಗಲಿಲ್ಲ.

12308077a ಉಕ್ತವಾಕ್ಯೇ ತು ನೃಪತೌ ಸುಲಭಾ ಚಾರುದರ್ಶನಾ।
12308077c ತತಶ್ಚಾರುತರಂ ವಾಕ್ಯಂ ಪ್ರಚಕ್ರಾಮಾಥ ಭಾಷಿತುಮ್।।

ನೃಪತಿಯು ಮಾತನಾಡಿದ ನಂತರ ಚಾರುದರ್ಶನೆ ಸುಲಭೆಯು ತನಗಿಂತಲೂ ಸುಂದರವಾದ ಮಾತುಗಳನ್ನು ಆಡಲು ಉಪಕ್ರಮಿಸಿದಳು.

12308078a ನವಭಿರ್ನವಭಿಶ್ಚೈವ ದೋಷೈರ್ವಾಗ್ಬುದ್ಧಿದೂಷಣೈಃ।
12308078c ಅಪೇತಮುಪಪನ್ನಾರ್ಥಮಷ್ಟಾದಶಗುಣಾನ್ವಿತಮ್।।
12308079a ಸೌಕ್ಷ್ಮ್ಯಂ ಸಂಖ್ಯಾಕ್ರಮೌ7 ಚೋಭೌ ನಿರ್ಣಯಃ ಸಪ್ರಯೋಜನಃ।
12308079c ಪಂಚೈತಾನ್ಯರ್ಥಜಾತಾನಿ ವಾಕ್ಯಮಿತ್ಯುಚ್ಯತೇ ನೃಪ।।

“ನೃಪ! ಒಂಭತ್ತು-ಒಂಭತ್ತು ವಾಕ್8 ಮತ್ತು ಬುದ್ಧಿ9ದೋಷಗಳಿಂದ ವರ್ಜಿತವಾದ, ಹದಿನೆಂಟು ವಾಕ್ ಮತ್ತು ಬುದ್ಧಿಗುಣಗಳಿಂದ ಸಮಾಹಿತವಾಗಿರುವ, ಸೌಕ್ಷ್ಮ್ಯ10, ಸಂಖ್ಯೆ11, ಕ್ರಮ12, ನಿರ್ಣಯ13 ಮತ್ತು ಪ್ರಯೋಜನ14 ಈ ಐದು ಗುಣಗಳಿಂದ ಯುಕ್ತ ಪದಸಮೂಹಕ್ಕೆ ವಾಕ್ಯ ಎನ್ನುತ್ತಾರೆ.

12308080a ಏಷಾಮೇಕೈಕಶೋಽರ್ಥಾನಾಂ ಸೌಕ್ಷ್ಮ್ಯಾದೀನಾಂ ಸುಲಕ್ಷಣಮ್।
12308080c ಶೃಣು ಸಂಸಾರ್ಯಮಾಣಾನಾಂ ಪದಾರ್ಥೈಃ ಪದವಾಕ್ಯತಃ।।

ಈ ಸೌಕ್ಷ್ಮ್ಯಾದಿಗಳಲ್ಲಿ ಒಂದೊಂದಕ್ಕೂ ಪದ, ವಾಕ್ಯ, ಪದಾರ್ಥ ಮತ್ತು ವಾಕ್ಯಾರ್ಥ ಎಂಬ ನಾಲ್ಕು ವಿಧದ ವಿಷಯ ಭೇದಗಳಿವೆ. ಅದನ್ನು ವಿಸ್ತಾರವಾಗಿ ಹೇಳುತ್ತೇನೆ. ಕೇಳು.

12308081a ಜ್ಞಾನಂ ಜ್ಞೇಯೇಷು ಭಿನ್ನೇಷು ಯಥಾಭೇದೇನ ವರ್ತತೇ।
12308081c ತತ್ರಾತಿಶಯಿನೀ ಬುದ್ಧಿಸ್ತತ್ಸೌಕ್ಷ್ಮ್ಯಮಿತಿ ವರ್ತತೇ।।

ವಾಕ್ಯಕ್ಕೆ ಭಿನ್ನ ಭಿನ್ನವಾದ ಅರ್ಥಗಳಿದ್ದರೆ ಅದನ್ನು ಅರ್ಥೈಸಿಕೊಳ್ಳುವವನ ಜ್ಞಾನವೂ ಭಿನ್ನ ಭಿನ್ನವಾಗಿಯೇ ಇರುತ್ತದೆ. ಅದನ್ನೂ ಅತಿಶಯಿಸುವ ಬುದ್ಧಿಯನ್ನು ಸೌಕ್ಷ್ಮ್ಯ ಎಂದು ಹೇಳುತ್ತಾರೆ.

12308082a ದೋಷಾಣಾಂ ಚ ಗುಣಾನಾಂ ಚ ಪ್ರಮಾಣಂ ಪ್ರವಿಭಾಗಶಃ।
12308082c ಕಂ ಚಿದರ್ಥಮಭಿಪ್ರೇತ್ಯ ಸಾ ಸಂಖ್ಯೇತ್ಯುಪಧಾರ್ಯತಾಮ್।।

ವಾಕ್ಯಕ್ಕೆ ಯಾವುದೋ ಅರ್ಥವನ್ನು ಮಾಡಿಕೊಂಡು ಅದರ ದೋಷ-ಗುಣಗಳ ಪ್ರಮಾಣವನ್ನು ವಿಭಾಗಪೂರ್ವಕವಾಗಿ ಎಣಿಸುವುದಕ್ಕೆ ಸಂಖ್ಯೆ ಎಂದು ಹೆಸರು.

12308083a ಇದಂ ಪೂರ್ವಮಿದಂ ಪಶ್ಚಾದ್ವಕ್ತವ್ಯಂ ಯದ್ವಿವಕ್ಷಿತಮ್।
12308083c ಕ್ರಮಯೋಗಂ ತಮಪ್ಯಾಹುರ್ವಾಕ್ಯಂ ವಾಕ್ಯವಿದೋ ಜನಾಃ।।

ಇದನ್ನು ಮೊದಲು ಹೇಳಬೇಕು ಇದನ್ನು ನಂತರ ಹೇಳಬೇಕು ಎಂದು ಯೋಚಿಸಿ ಮಾತನಾಡುವುದಕ್ಕೆ ಕ್ರಮಯುಕ್ತವಾದ ವಾಕ್ಯ ಎಂದು ವಾಕ್ಯವಿದ ಜನರು ಹೇಳುತ್ತಾರೆ.

12308084a ಧರ್ಮಾರ್ಥಕಾಮಮೋಕ್ಷೇಷು15 ಪ್ರತಿಜ್ಞಾಯ ವಿಶೇಷತಃ।
12308084c ಇದಂ ತದಿತಿ ವಾಕ್ಯಾಂತೇ ಪ್ರೋಚ್ಯತೇ ಸ ವಿನಿರ್ಣಯಃ।।

ಧರ್ಮ-ಅರ್ಥ-ಕಾಮ-ಮೋಕ್ಷಗಳಲ್ಲಿ ಈ ವಿಷಯದ ಕುರಿತು ವಿಶೇಷವಾಗಿ ಪ್ರತಿಪಾದಿಸುತ್ತದೆ ಎನ್ನುವುದನ್ನು ವಾಕ್ಯದ ಕೊನೆಯಲ್ಲಿ ಹೇಳುವುದಕ್ಕೆ ನಿರ್ಣಯ ಎಂದು ಹೇಳುತ್ತಾರೆ.

12308085a ಇಚ್ಚಾದ್ವೇಷಭವೈರ್ದುಃಖೈಃ ಪ್ರಕರ್ಷೋ ಯತ್ರ ಜಾಯತೇ।
12308085c ತತ್ರ ಯಾ ನೃಪತೇ ವೃತ್ತಿಸ್ತತ್ಪ್ರಯೋಜನಮಿಷ್ಯತೇ।।

ನೃಪತೇ! ಇಚ್ಛಾದ್ವೇಷಗಳಿಂದ ಉಂಟಾಗುವ ದುಃಖದಿಂದ ಬೆಚ್ಚಾಗಿ ಪೀಡೆಯುಂಟಾದಾಗ ಅದನ್ನು ಪರಿಹರಿಸಿಕೊಳ್ಳಲು ಮಾಡುವುದೇ ಪ್ರಯೋಜನ.

12308086a ತಾನ್ಯೇತಾನಿ ಯಥೋಕ್ತಾನಿ ಸೌಕ್ಷ್ಮ್ಯಾದೀನಿ ಜನಾಧಿಪ।
12308086c ಏಕಾರ್ಥಸಮವೇತಾನಿ ವಾಕ್ಯಂ ಮಮ ನಿಶಾಮಯ।।

ಜನಾಧಿಪ! ನಾನು ಹೇಳಿದ ಈ ಸೌಕ್ಷ್ಮ್ಯಾದಿಗಳಿಂದ ಕೂಡಿದ ಒಂದ? ಅರ್ಥವನ್ನು ಹೊಂದಿರುವ ನನ್ನ ವಾಕ್ಯವನ್ನು ಕೇಳು.

12308087a ಉಪೇತಾರ್ಥಮಭಿನ್ನಾರ್ಥಂ ನಾಪವೃತ್ತಂ ನ ಚಾಧಿಕಮ್।
12308087c ನಾಶ್ಲಕ್ಷ್ಣಂ ನ ಚ ಸಂದಿಗ್ಧಂ ವಕ್ಷ್ಯಾಮಿ ಪರಮಂ ತವ।।

ನಾನು ಅರ್ಥಸಹಿತವಾಗಿರುವ ಅರ್ಥಭೇದವಿಲ್ಲದ ಹೊಗಳಿಕೆಯ ಮಾತಾಗಿರದ ಅವಶ್ಯಕ್ಕಿಂತಲೂ ಅಧಿಕವಾಗಿಲ್ಲದ, ಸಂದಿಗ್ಧವಾಗಿಲ್ಲದ ಪರಮಶ್ರೇಷ್ಠವಾದ ಮಾತನ್ನು ನಿನಗೆ ಹೇಳುತ್ತೇನೆ.

12308088a ನ ಗುರ್ವಕ್ಷರಸಂಬದ್ಧಂ ಪರಾಙ್ಮುಖಮುಖಂ ನ ಚ।
12308088c ನಾನೃತಂ ನ ತ್ರಿವರ್ಗೇಣ ವಿರುದ್ಧಂ ನಾಪ್ಯಸಂಸ್ಕೃತಮ್।।

ನಾನು ಹೇಳುವ ವಾಕ್ಯಗಳಲ್ಲಿ ಕಠಿನ ಶಬ್ಧಗಳನ್ನು ಜೋಡಿಸಿಲ್ಲ16. ನನ್ನ ಈ ಮಾತು ಪರಾಙ್ಮುಖನಿಗೆ ಸುಖವನ್ನು ನೀಡುವುದಿಲ್ಲ17. ಸುಳ್ಳಲ್ಲ. ಧರ್ಮಾರ್ಥಕಾಮಗಳೆಂಬ ತ್ರಿವರ್ಗಗಳಿಗೆ ವಿರುದ್ಧವಾಗಿಲ್ಲ. ಅಸಂಸ್ಕೃತವೂ18 ಅಲ್ಲ.

12308089a ನ ನ್ಯೂನಂ ಕಷ್ಟಶಬ್ದಂ ವಾ ವ್ಯುತ್ಕ್ರಮಾಭಿಹಿತಂ ನ ಚ।
12308089c ನ ಶೇಷಂ ನಾನುಕಲ್ಪೇನ ನಿಷ್ಕಾರಣಮಹೇತುಕಮ್।।

ಇದು ಕೀಳಾಗಿಲ್ಲ. ಕಷ್ಟಶಬ್ಧಗಳಿಂದ19 ಕೂಡಿಲ್ಲ. ಕ್ರಮವನ್ನು ತಪ್ಪಿಲ್ಲ. ಬೇರೆ ಯಾವ ಶಬ್ಧಗಳನ್ನೂ ಬಳಸಿ ಹೇಳಬೇಕಾಗಿಲ್ಲ. ಹೇಳುವುದರಲ್ಲಿ ಏನನ್ನೂ ಬಿಟ್ಟಿಲ್ಲ. ನಿಷ್ಪ್ರಯೋಜಕವಾಗಿಲ್ಲ. ನಿಷ್ಕಾರಣವಾಗಿಲ್ಲ. ಉದ್ದೇಶವಿಲ್ಲದೇ ಹೇಳಿದುದಲ್ಲ.

12308090a ಕಾಮಾತ್ಕ್ರೋಧಾದ್ಭಯಾಲ್ಲೋಭಾದ್ದೈನ್ಯಾದಾನಾರ್ಯಕಾತ್ತಥಾ।
12308090c ಹ್ರೀತೋಽನುಕ್ರೋಶತೋ ಮಾನಾನ್ನ ವಕ್ಷ್ಯಾಮಿ ಕಥಂ ಚನ।।

ಕಾಮದಿಂದಾಗಲೀ, ಕ್ರೋಧದಿಂದಾಗಲೀ, ಭಯದಿಂದಾಗಲೀ, ಲೋಭದಿಂದಾಗಲೀ, ದೈನ್ಯದಿಂದಾಗಲೀ, ಮತ್ತು ಅನಾರ್ಯಕತ್ವದಿಂದಾಗಲೀ, ನಾಚಿಯಿಂದಾಗಲೀ, ಅನುಕ್ರೋಶದಿಂದಾಗಲೀ, ಮಾನಕ್ಕಾಗಲೀ ನಾನು ಎಂದೂ ಮಾತನಾಡುವುದಿಲ್ಲ.

12308091a ವಕ್ತಾ ಶ್ರೋತಾ ಚ ವಾಕ್ಯಂ ಚ ಯದಾ ತ್ವವಿಕಲಂ ನೃಪ।
12308091c ಸಮಮೇತಿ ವಿವಕ್ಷಾಯಾಂ ತದಾ ಸೋಽರ್ಥಃ ಪ್ರಕಾಶತೇ।।

ನೃಪ! ಮಾತನಾಡುವವನು, ಕೇಳುವವನು ಮತ್ತು ಮಾತು ಈ ಮೂರೂ ನ್ಯೂನಾತಿರೇಕವಿಲ್ಲದೇ ಸಮನಾಗಿದ್ದರೆ ವಾಕ್ಯದ ಅರ್ಥವು ಪ್ರಕಾಶಿಸುತ್ತದೆ.

12308092a ವಕ್ತವ್ಯೇ ತು ಯದಾ ವಕ್ತಾ ಶ್ರೋತಾರಮವಮನ್ಯತೇ।
12308092c ಸ್ವಾರ್ಥಮಾಹ ಪರಾರ್ಥಂ ವಾ ತದಾ ವಾಕ್ಯಂ ನ ರೋಹತಿ।।

ಮಾತನಾಡುವವನು ಕೇಳುವವನನ್ನು ಅಪಮಾನಿಸಿ ಮಾತನಾಡಿದರೆ ಅಥವಾ ಇನ್ನೊಬ್ಬರ ಅರ್ಥವನ್ನು ತನ್ನದೇ ಅರ್ಥವೆಂದು ಮಾತನಾಡಿದರೆ ಆ ಮಾತು ಮುಂದೆ ಬೆಳೆಯುವುದಿಲ್ಲ.

12308093a ಅಥ ಯಃ ಸ್ವಾರ್ಥಮುತ್ಸೃಜ್ಯ ಪರಾರ್ಥಂ ಪ್ರಾಹ ಮಾನವಃ।
12308093c ವಿಶಂಕಾ ಜಾಯತೇ ತಸ್ಮಿನ್ವಾಕ್ಯಂ ತದಪಿ ದೋಷವತ್।।

ಸ್ವಾಭಿಪ್ರಾಯವನ್ನು ಹೇಳದೇ ಇತರರು ಹೇಳಿದುದನ್ನೇ ಹೇಳುವವನ ಮಾತಿನ ವಿಷಯದಲ್ಲಿ ಕೇಳುವವನಿಗೆ ವಿಶೇಷ ಸಂದೇಹವೇ ಉಂಟಾಗುತ್ತದೆ. ಆದುದರಿಂದ ಹಾಗೆ ಹೇಳುವ ಮಾತು ದೋಷಯುಕ್ತವಾಗಿರುತ್ತದೆ.

12308094a ಯಸ್ತು ವಕ್ತಾ ದ್ವಯೋರರ್ಥಮವಿರುದ್ಧಂ ಪ್ರಭಾಷತೇ।
12308094c ಶ್ರೋತುಶ್ಚೈವಾತ್ಮನಶ್ಚೈವ ಸ ವಕ್ತಾ ನೇತರೋ ನೃಪ।।

ನೃಪ! ಇಬ್ಬರ – ತನ್ನ ಮತ್ತು ಕೇಳುವವನ - ಅರ್ಥಕ್ಕೂ ವಿರುದ್ಧಬಾರದಂತೆ ಮಾತನಾಡುವವನು ವಾಗ್ಮಿಯು. ಇತರರಲ್ಲ.

12308095a ತದರ್ಥವದಿದಂ ವಾಕ್ಯಮುಪೇತಂ ವಾಕ್ಯಸಂಪದಾ।
12308095c ಅವಿಕ್ಷಿಪ್ತಮನಾ ರಾಜನ್ನೇಕಾಗ್ರಃ ಶ್ರೋತುಮರ್ಹಸಿ।।

ರಾಜನ್! ಆದುದರಿಂದ ಅರ್ಥವತ್ತಾದ ಮತ್ತು ವಾಕ್ಯಸಂಪತ್ತಿನಿಂದ ಕೂಡಿದ ನನ್ನ ಈ ವಾಕ್ಯವನ್ನು ತಿರಸ್ಕಾರಮನಸ್ಕನಾಗಿರದೇ ಏಕಾಗ್ರಚಿತ್ತನಾಗಿ ಕೇಳಬೇಕು.

12308096a ಕಾಸಿ ಕಸ್ಯ ಕುತೋ ವೇತಿ ತ್ವಯಾಹಮಭಿಚೋದಿತಾ।
12308096c ತತ್ರೋತ್ತರಮಿದಂ ವಾಕ್ಯಂ ರಾಜನ್ನೇಕಮನಾಃ ಶೃಣು।।

“ನೀನು ಯಾರು? ಯಾರವಳು? ಎಲ್ಲಿಂದ ಬಂದೆ?” ಎನ್ನುವ ನಿನ್ನ ಪ್ರಶ್ನೆಗಳಿಗೆ ಉತ್ತರದಾಯಕವಾಗಿದೆ ನನ್ನ ಈ ವಾಕ್ಯವು. ಒಂದೇ ಮನಸ್ಸಿನಿಂದ ಕೇಳು.

12308097a ಯಥಾ ಜತು ಚ ಕಾಷ್ಠಂ ಚ ಪಾಂಸವಶ್ಚೋದಬಿಂದುಭಿಃ।
12308097c ಸುಶ್ಲಿಷ್ಟಾನಿ ತಥಾ ರಾಜನ್ಪ್ರಾಣಿನಾಮಿಹ ಸಂಭವಃ।।

ಅರಗು ಮತ್ತು ಕಡ್ಡಿಗಳು ಸೇರಿರುವಂತೆ ಹಾಗೂ ಧೂಳು ಮತ್ತು ನೀರಹನಿಗಳು ಸೇರಿರುವಂತೆ ತತ್ತ್ವಗಳ ಸೇರುವಿಕೆಯಿಂದ ಪ್ರಾಣಿಗಳ ಉತ್ಪತ್ತಿಯಾಗುತ್ತದೆ.

12308098a ಶಬ್ದಃ ಸ್ಪರ್ಶೋ ರಸೋ ರೂಪಂ ಗಂಧಃ ಪಂಚೇಂದ್ರಿಯಾಣಿ ಚ।
12308098c ಪೃಥಗಾತ್ಮಾ ದಶಾತ್ಮಾನಃ ಸಂಶ್ಲಿಷ್ಟಾ ಜತುಕಾಷ್ಠವತ್।।

ಶಬ್ದ-ಸ್ಪರ್ಶ-ರಸ-ರೂಪ-ಗಂಧಗಳೂ ಮತ್ತು ಪಂಚೇಂದ್ರಿಯಗಳು - ಈ ಹತ್ತು – ಪ್ರತ್ಯೇಕವಾಗಿದ್ದರೂ, ಅರಗು ಕಡ್ಡಿಯೊಳಗೆ ಸೇರಿಕೊಂಡಿರುವಂತೆ ಆತ್ಮನೊಡನೆ ಸೇರಿಕೊಂಡಿವೆ.

12308099a ನ ಚೈಷಾಂ ಚೋದನಾ ಕಾ ಚಿದಸ್ತೀತ್ಯೇಷ ವಿನಿಶ್ಚಯಃ।
12308099c ಏಕೈಕಸ್ಯೇಹ ವಿಜ್ಞಾನಂ ನಾಸ್ತ್ಯಾತ್ಮನಿ ತಥಾ ಪರೇ।।

ಆದರೆ ಇವು ಯಾವುವೂ ಸ್ವತಂತ್ರವಾಗಿ ಆತ್ಮನನ್ನು ಪ್ರಚೋದಿಸುವ ಶಕ್ತಿಯನ್ನು ಹೊಂದಿಲ್ಲ ಎನ್ನುವುದು ವಿನಿಶ್ಚಯವಾಗಿದೆ. ಇವುಗಳಲ್ಲಿ ಒಂದೊಂದಕ್ಕೂ ತಾನು ಯಾರು ಎಂಬ ಆತ್ಮಜ್ಞಾನವಾಗಲೀ ಮತ್ತು ಇತರರ ಜ್ಞಾನವಾಗಲೀ ಇರುವುದಿಲ್ಲ.

12308100a ನ ವೇದ ಚಕ್ಷುಶ್ಚಕ್ಷುಷ್ಟ್ವಂ ಶ್ರೋತ್ರಂ ನಾತ್ಮನಿ ವರ್ತತೇ।
12308100c ತಥೈವ ವ್ಯಭಿಚಾರೇಣ ನ ವರ್ತಂತೇ ಪರಸ್ಪರಮ್।।
12308100e ಸಂಶ್ಲಿಷ್ಟಾ ನಾಭಿಜಾಯಂತೇ ಯಥಾಪ ಇಹ ಪಾಂಸವಃ।।

ಕಣ್ಣಿಗೆ ತನ್ನ ನೋಡುವಿಕೆಯ ಮತ್ತು ಕಿವಿಗೆ ಅದರ ಕೇಳುವಿಕೆಯ ಜ್ಞಾನವು ಇರುವುದಿಲ್ಲ. ನೀರು ಮತ್ತು ಧೂಳು ಪರಸ್ಪರವಾಗಿ ಬೆರೆತುಕೊಂಡಿದ್ದರೂ ನೀರಿನ ಗುಣವನ್ನು ಧೂಳಾಗಲೀ ಧೂಳಿನ ಗುಣವನ್ನು ನೀರಾಗಲೀ ಅರಿತಿರುವುದಿಲ್ಲದ ರೀತಿಯಲ್ಲಿ ಒಟ್ಟಾಗಿದ್ದರೂ ಪರಸ್ಪರರ ಜ್ಞಾನವಿರುವುದಿಲ್ಲ.

12308101a ಬಾಹ್ಯಾನನ್ಯಾನಪೇಕ್ಷಂತೇ ಗುಣಾಂಸ್ತಾನಪಿ ಮೇ ಶೃಣು।
12308101c ರೂಪಂ ಚಕ್ಷುಃ ಪ್ರಕಾಶಶ್ಚ ದರ್ಶನೇ ಹೇತವಸ್ತ್ರಯಃ।
12308101e ಯಥೈವಾತ್ರ ತಥಾನ್ಯೇಷು ಜ್ಞಾನಜ್ಞೇಯೇಷು ಹೇತವಃ।।

ಈ ಇಂದ್ರಿಯಗಳಾದರೋ ತಮಗೆ ಹೊರಗಾಗಿರುವ ಯಾವ ಗುಣಗಳನ್ನು ಹುಡುಕುತ್ತಿರುತ್ತಾರೋ ಅದರ ಕುರಿತು ನನ್ನಿಂದ ಕೇಳು. ದರ್ಶನದಲ್ಲಿ ರೂಪ, ಕಣ್ಣು ಮತ್ತು ಪ್ರಕಾಶ – ಈ ಮೂರು ಹೇತುಗಳಾಗಿರುತ್ತವೆ. ಇದರಂತೆ ಅನ್ಯ ಜ್ಞಾನ-ಜ್ಞೇಯಗಳಲ್ಲಿರೂ ಮೂರು ಮೂರು ಹೇತುಗಳಿವೆ.

12308102a ಜ್ಞಾನಜ್ಞೇಯಾಂತರೇ ತಸ್ಮಿನ್ಮನೋ ನಾಮಾಪರೋ ಗುಣಃ।
12308102c ವಿಚಾರಯತಿ ಯೇನಾಯಂ ನಿಶ್ಚಯೇ ಸಾಧ್ವಸಾಧುನೀ।।

ಜ್ಞಾನ ಮತ್ತು ಜ್ಞೇಯಗಳ ಮಧ್ಯೆ ಮನಸ್ಸೆಂಬ ಇನ್ನೊಂದು ಗುಣವೂ ಇದೆ. ಈ ಮನಸ್ಸು ಇವುಗಳು ಸಾಧುವೇ ಅಸಾಧುವೇ ಎನ್ನುವುದನ್ನು ವಿಚಾರಿಸಿ ನಿಶ್ಚಯಿಸುತ್ತದೆ.

12308103a ದ್ವಾದಶಸ್ತ್ವಪರಸ್ತತ್ರ ಬುದ್ಧಿರ್ನಾಮ ಗುಣಃ ಸ್ಮೃತಃ।
12308103c ಯೇನ ಸಂಶಯಪೂರ್ವೇಷು ಬೋದ್ಧವ್ಯೇಷು ವ್ಯವಸ್ಯತಿ।।

ಹನ್ನೆರಡನೆಯದಾದ ಬುದ್ಧಿ ಎನ್ನುವ ಇನ್ನೊಂದು ಗುಣವೂ ಇದೆ. ಪೂರ್ವ ಸಂಶಯವಾದಾಗ ಬೋಧಿಸುವ ಗುಣವು ಇದರಲ್ಲಿದೆ.

12308104a ಅಥ ದ್ವಾದಶಕೇ ತಸ್ಮಿನ್ಸತ್ತ್ವಂ ನಾಮಾಪರೋ ಗುಣಃ।
12308104c ಮಹಾಸತ್ತ್ವೋಽಲ್ಪಸತ್ತ್ವೋ ವಾ ಜಂತುರ್ಯೇನಾನುಮೀಯತೇ।।

ಹನ್ನೆರಡನೆಯದಾದ ಬುದ್ಧಿಯಲ್ಲಿಯೇ ಸತ್ತ್ವ ಎಂಬ ಇನ್ನೊಂದು ಗುಣವಿದೆ. ಜಂತುವು ಮಹಾಸತ್ತ್ವದ್ದೋ ಅಥವಾ ಅಲ್ಪಸತ್ತ್ವದ್ದೋ ಎನ್ನುವುದನ್ನು ಇದು ಊಹಿಸುತ್ತದೆ.

12308105a ಕ್ಷೇತ್ರಜ್ಞ ಇತಿ ಚಾಪ್ಯನ್ಯೋ20 ಗುಣಸ್ತತ್ರ ಚತುರ್ದಶಃ।
12308105c ಮಮಾಯಮಿತಿ ಯೇನಾಯಂ ಮನ್ಯತೇ ನ ಚ ಮನ್ಯತೇ।।

ಅಲ್ಲಿ ಕ್ಷೇತ್ರಜ್ಞ ಎನ್ನುವ ಹದಿನಾಲ್ಕನೆಯ ಅನ್ಯ ಗುಣವೂ ಇದೆ. “ಇದು ನನ್ನದು” “ಇದು ನನ್ನದಲ್ಲ” ಎನ್ನುವುದನ್ನು ಇದು ಭಾವಿಸಿಕೊಳ್ಳುತ್ತದೆ.

12308106a ಅಥ ಪಂಚದಶೋ ರಾಜನ್ಗುಣಸ್ತತ್ರಾಪರಃ ಸ್ಮೃತಃ।
12308106c ಪೃಥಕ್ಕಲಾಸಮೂಹಸ್ಯ ಸಾಮಗ್ರ್ಯಂ ತದಿಹೋಚ್ಯತೇ।।

ರಾಜನ್! ಹದಿನೈದನೆಯ ಇನ್ನೊಂದು ಗುಣವೂ ಅದರಲ್ಲಿದೆ ಎಂದು ತಿಳಿದಿದೆ. ಇವು ಪ್ರತ್ಯೇಕ ಕಲಾಸಮೂಹ21ಗಳ ಸಮಗ್ರ ಎಂದು ಹೇಳುತ್ತಾರೆ.

12308107a ಗುಣಸ್ತ್ವೇವಾಪರಸ್ತತ್ರ ಸಂಘಾತ ಇತಿ ಷೋಡಶಃ।
12308107c ಆಕೃತಿರ್ವ್ಯಕ್ತಿರಿತ್ಯೇತೌ22 ಗುಣೌ ಯಸ್ಮಿನ್ಸಮಾಶ್ರಿತೌ।।

ಅದರಲ್ಲಿ ಹದಿನಾರನೆಯದಾದ ಸಂಘಾತ ಎಂಬ ಇನ್ನೊಂದು ಗುಣವೂ ಇದೆ. ಸಂಘಾತವನ್ನು ಪ್ರಕೃತಿ-ಪುರುಷರೆನ್ನುವ ಎರಡು ಗುಣಗಳು ಆಶ್ರಯಿಸಿವೆ.

12308108a ಸುಖದುಃಖೇ ಜರಾಮೃತ್ಯೂ ಲಾಭಾಲಾಭೌ ಪ್ರಿಯಾಪ್ರಿಯೇ।
12308108c ಇತಿ ಚೈಕೋನವಿಂಶೋಽಯಂ ದ್ವಂದ್ವಯೋಗ ಇತಿ ಸ್ಮೃತಃ।।

ಸುಖ-ದುಃಖ, ಜರಾ-ಮೃತ್ಯು, ಲಾಭಾಲಾಭ ಮತ್ತು ಪ್ರಿಯಾಪ್ರಿಯಗಳೆನ್ನುವ ಈ ಹತ್ತೊಂಭತ್ತನೆಯ ಗುಣವನ್ನು ದ್ವಂದ್ವಯೋಗವೆಂದು ಕರೆಯುತ್ತಾರೆ.

12308109a ಊರ್ಧ್ವಮೇಕೋನವಿಂಶತ್ಯಾಃ ಕಾಲೋ ನಾಮಾಪರೋ ಗುಣಃ।
12308109c ಇತೀಮಂ ವಿದ್ಧಿ ವಿಂಶತ್ಯಾ ಭೂತಾನಾಂ ಪ್ರಭವಾಪ್ಯಯಮ್।।

ಹತ್ತೊಂಭತ್ತು ಗುಣಗಳಿಂದಲೂ ಮುಂದೆ ಕಾಲವೆಂಬ ಮತ್ತೊಂದು ಗುಣವಿದೆ. ಈ ಇಪ್ಪತ್ತು ಗುಣಗಳಿಂದ ಭೂತಗಳ ಉತ್ಪತ್ತಿಯಾಗಿದೆ ಎನ್ನುವುದನ್ನು ತಿಳಿ.

12308110a ವಿಂಶಕಶ್ಚೈಷ ಸಂಘಾತೋ ಮಹಾಭೂತಾನಿ ಪಂಚ ಚ।
12308110c ಸದಸದ್ಭಾವಯೋಗೌ ಚ ಗುಣಾವನ್ಯೌ ಪ್ರಕಾಶಕೌ।।

ಈ ಇಪ್ಪತ್ತು ಗುಣಗಳು ಮತ್ತು ಐದು ಮಹಾಭೂತಗಳು ಹಾಗೂ ಸದ್ಭಾವ ಯೋಗ ಮತ್ತು ಅಸದ್ಭಾವಯೋಗ ಎನ್ನುವ ಪ್ರಕಾಶಕ ಗುಣಗಳೂ ಇವೆ.

12308111a ಇತ್ಯೇವಂ ವಿಂಶತಿಶ್ಚೈವ ಗುಣಾಃ ಸಪ್ತ ಚ ಯೇ ಸ್ಮೃತಾಃ।
12308111c ವಿಧಿಃ ಶುಕ್ರಂ ಬಲಂ ಚೇತಿ ತ್ರಯ ಏತೇ ಗುಣಾಃ ಪರೇ।।

ಹೀಗೆ ಇಪ್ಪತ್ತೇಳು ಗುಣಗಳೆಂದು ತಿಳಿದಿದ್ದೇವೆ. ವಿಧಿ, ಶುಕ್ರ, ಮತ್ತು ಬಲ ಎನ್ನುವ ಇತರ ಮೂರು ಗುಣಗಳೂ ಇವೆ.

12308112a ಏಕವಿಂಶಶ್ಚ ದಶ ಚ ಕಲಾಃ ಸಂಖ್ಯಾನತಃ ಸ್ಮೃತಾಃ।
12308112c ಸಮಗ್ರಾ ಯತ್ರ ವರ್ತಂತೇ ತಚ್ಚರೀರಮಿತಿ ಸ್ಮೃತಮ್।।

ಹೀಗೆ ಲೆಕ್ಕಮಾಡಿದರೆ ಸಂಖ್ಯೆಯಲ್ಲಿ ಮೂವತ್ತು ಗುಣಗಳೂ ಸಮಗ್ರವಾಗಿ ಎಲ್ಲಿ ಸೇರಿರುತ್ತದೆಯೋ ಅದಕ್ಕೆ ಶರೀರವೆಂದು ಹೆಸರು.

12308113a ಅವ್ಯಕ್ತಂ ಪ್ರಕೃತಿಂ ತ್ವಾಸಾಂ ಕಲಾನಾಂ ಕಶ್ಚಿದಿಚ್ಚತಿ।
12308113c ವ್ಯಕ್ತಂ ಚಾಸಾಂ ತಥೈವಾನ್ಯಃ ಸ್ಥೂಲದರ್ಶೀ ಪ್ರಪಶ್ಯತಿ।।

ಈ ಮೂವತ್ತು ಗುಣಗಳಿಗೂ ಅವ್ಯಕ್ತಪ್ರಕೃತಿಯೇ ಮೂಲವೆಂದು ಕೆಲವರು ಹೇಳುತ್ತಾರೆ. ಅವುಗಳಿಗೆ ಮೂಲವಾದುದು ವ್ಯಕ್ತ ಪ್ರಕೃತಿಯಲ್ಲದೇ ಬೇರೆ ಅಲ್ಲ ಎಂದು ಸ್ಥೂಲದರ್ಶಿಗಳು ಕಾಣುತ್ತಾರೆ.

12308114a ಅವ್ಯಕ್ತಂ ಯದಿ ವಾ ವ್ಯಕ್ತಂ ದ್ವಯೀಮಥ ಚತುಷ್ಟಯೀಮ್।
12308114c ಪ್ರಕೃತಿಂ ಸರ್ವಭೂತಾನಾಂ ಪಶ್ಯಂತ್ಯಧ್ಯಾತ್ಮಚಿಂತಕಾಃ।।

ಇವು ಅವ್ಯಕ್ತ ಪ್ರಕೃತಿಯಿಂದ ಅಥವಾ ವ್ಯಕ್ತ ಪ್ರಕೃತಿಯಿಂದ ಅಥವಾ ಈ ಎರಡರಿಂದಲೂ ಅಥವಾ ಪುರುಷ, ಈಶ್ವರ ಈ ನಾಲ್ಕರಿಂದ ಹುಟ್ಟಿರಲಿ – ಹೇಗಿದ್ದರೂ ಎಲ್ಲ ಪ್ರಾಣಿಗಳಿಗೂ ಪ್ರಕೃತಿಯೇ ಮೂಲಕಾರಣವೆಂದು ಆಧ್ಯಾತ್ಮಚಿಂತಕರು ಹೇಳುತ್ತಾರೆ.

12308115a ಸೇಯಂ ಪ್ರಕೃತಿರವ್ಯಕ್ತಾ ಕಲಾಭಿರ್ವ್ಯಕ್ತತಾಂ ಗತಾ।
12308115c ಅಹಂ ಚ ತ್ವಂ ಚ ರಾಜೇಂದ್ರ ಯೇ ಚಾಪ್ಯನ್ಯೇ ಶರೀರಿಣಃ।।

ರಾಜೇಂದ್ರ! ಈ ಅವ್ಯಕ್ತ ಪ್ರಕೃತಿಯು ತನ್ನಿಂದಲೇ ಪ್ರಾದುರ್ಭೂತವಾದ ಕಲೆಗಳ ರೂಪದಲ್ಲಿ ವ್ಯಕ್ತವಾಗುತ್ತದೆ. ನಾನು, ನೀನು ಮತ್ತು ಈ ಅನ್ಯರು ಅವ್ಯಕ್ತ ಪ್ರಕೃತಿಯಿಂದಲೇ ವ್ಯಕ್ತವಾಗಿರುವ ಶರೀರಗಳನ್ನು ಪಡೆದುಕೊಂಡಿರುತ್ತೇವೆ.

12308116a ಬಿಂದುನ್ಯಾಸಾದಯೋಽವಸ್ಥಾಃ ಶುಕ್ರಶೋಣಿತಸಂಭವಾಃ।
12308116c ಯಾಸಾಮೇವ ನಿಪಾತೇನ ಕಲಲಂ ನಾಮ ಜಾಯತೇ।।

ಶುಕ್ರ-ಶೋಣಿತಗಳ ಸಂಯೋಗದಿಂದ ರೇತಸ್ಸಿಂಚನವೇ ಮೊದಲಾದ ಅವಸ್ಥೆಗಳು ಉಂಟಾಗುತ್ತವೆ. ರೇತಸ್ಸಿಂಚನದಿಂದ ಕಲಲ ಎಂಬ ಹೆಸರಿನ ಪದಾರ್ಥವು ಹುಟ್ಟಿಕೊಳ್ಳುತ್ತದೆ.

12308117a ಕಲಲಾದರ್ಬುದೋತ್ಪತ್ತಿಃ ಪೇಶೀ ಚಾಪ್ಯರ್ಬುದೋದ್ಭವಾ।
12308117c ಪೇಶ್ಯಾಸ್ತ್ವಂಗಾಭಿನಿರ್ವೃತ್ತಿರ್ನಖರೋಮಾಣಿ ಚಾಂಗತಃ।।

ಕಲಲದಿಂದ ಬುದ್ಬುದದ ಉತ್ಪತ್ತಿಯಾಗುತ್ತದೆ. ಬುದ್ಬುದದಿಂದ ಪೇಷಿಯಾಗುತ್ತದೆ. ಪೇಷಿಯಿಂದ ಅಂಗಾಂಗಗಳೂ ನಂತರ ಅಂಗಗಳ ದೆಸೆಯಿಂದ ಉಗುರು-ರೋಮಗಳೂ ಹುಟ್ಟುತ್ತವೆ.

12308118a ಸಂಪೂರ್ಣೇ ನವಮೇ ಮಾಸೇ ಜಂತೋರ್ಜಾತಸ್ಯ ಮೈಥಿಲ।
12308118c ಜಾಯತೇ ನಾಮರೂಪತ್ವಂ ಸ್ತ್ರೀ ಪುಮಾನ್ವೇತಿ ಲಿಂಗತಃ।।

ಮೈಥಿಲ! ಒಂಭತ್ತು ತಿಂಗಳು ಪೂರ್ಣವಾದ ನಂತರ ಹುಟ್ಟಿದ ಜಂತುವಿನ ನಾಮ ರೂಪತ್ವ ಮತ್ತು ಸ್ತ್ರೀ-ಪುರುಷನೆನ್ನುವ ಲಿಂಗ ಇವು ತಿಳಿಯುತ್ತವೆ.

12308119a ಜಾತಮಾತ್ರಂ ತು ತದ್ರೂಪಂ ದೃಷ್ಟ್ವಾ ತಾಮ್ರನಖಾಂಗುಲಿ।
12308119c ಕೌಮಾರರೂಪಮಾಪನ್ನಂ ರೂಪತೋ ನೋಪಲಭ್ಯತೇ।।

ಹುಟ್ಟಿದಾಕ್ಷಣ ಕಾಣುವ ಆ ತಾಮ್ರವರ್ಣದ ಉಗುರು-ಬೆರಳುಗಳ ರೂಪದ ನಂತರ ಉತ್ತಮ ರೂಪದ ಕೌಮಾರಾವಸ್ಥೆಯು ಕಾಣಿಸಿಕೊಳ್ಳುತ್ತದೆ. ಆದರೆ ಕೌಮಾರವಾಸ್ಥೆಯಲ್ಲಿ ಹುಟ್ಟಿದಾಗ ಇದ್ದ ರೂಪವು ಕಾಣಲು ದೊರಕುವುದಿಲ್ಲ.

12308120a ಕೌಮಾರಾದ್ಯೌವನಂ ಚಾಪಿ ಸ್ಥಾವಿರ್ಯಂ ಚಾಪಿ ಯೌವನಾತ್।
12308120c ಅನೇನ ಕ್ರಮಯೋಗೇನ ಪೂರ್ವಂ ಪೂರ್ವಂ ನ ಲಭ್ಯತೇ।।

ಅದೇರೀತಿ ಕ್ರಮೇಣವಾಗಿ ಕೌಮಾರ್ಯಾವಸ್ಥೆಯಿಂದ ಯೌವನಾವಸ್ಥೆ, ಮತ್ತು ಯೌವನಾವಸ್ಥೆಯಿಂದ ವೃದ್ಧಾಪ್ಯವು ಬರುತ್ತದೆ. ಕ್ರಮಬದ್ಧವಾಗಿ ಹಿಂದಿನ ಅವಸ್ಥೆಯು ಅದರ ಮುಂದಿನ ಅವಸ್ಥೆಯಲ್ಲಿ ಕಾಣಸಿಗುವುದಿಲ್ಲ.

12308121a ಕಲಾನಾಂ ಪೃಥಗರ್ಥಾನಾಂ ಪ್ರತಿಭೇದಃ ಕ್ಷಣೇ ಕ್ಷಣೇ।
12308121c ವರ್ತತೇ ಸರ್ವಭೂತೇಷು ಸೌಕ್ಷ್ಮ್ಯಾತ್ತು ನ ವಿಭಾವ್ಯತೇ।।

ಎಲ್ಲ ಪ್ರಾಣಿಗಳಲ್ಲಿಯೂ ಪ್ರತ್ಯೇಕ ಪ್ರತ್ಯೇಕ ಅವಸ್ಥೆಗಳನ್ನುಂಟುಮಾಡುವ ಕಲೆಗಳ ಪರಿವರ್ತನೆಯು ಪ್ರತಿಕ್ಷಣದಲ್ಲಿಯೂ ಆಗುತ್ತಿರುತ್ತದೆ. ಆದರೆ ಆ ಬದಲಾವಣೆಗಳು ಸೂಕ್ಷ್ಮವಾಗಿರುವುದರಿಂದ ಶರೀರದಲ್ಲಾಗುತ್ತಿರುವ ಪ್ರತಿಕ್ಷಣದ ಪರಿವರ್ತನೆಗಳು ಜೀವಿಯ ಗಮನಕ್ಕೆ ಬರುವುದಿಲ್ಲ.

12308122a ನ ಚೈಷಾಮಪ್ಯಯೋ ರಾಜಽಲ್ಲಕ್ಷ್ಯತೇ ಪ್ರಭವೋ ನ ಚ।
12308122c ಅವಸ್ಥಾಯಾಮವಸ್ಥಾಯಾಂ ದೀಪಸ್ಯೇವಾರ್ಚಿಷೋ ಗತಿಃ।।

ರಾಜನ್! ದೀಪದಲ್ಲಿರುವ ಜ್ವಾಲೆಯು ಎಡೆಬಿಡದೇ ಲಯವಾಗುತ್ತಲೂ ಪುನಃ ಹುಟ್ಟುತ್ತಲೂ ಇದ್ದರೂ ಒಂದೇ ಸಮನೆ ಉರಿಯುತ್ತಿರುವಂತೆ ಹೇಗೆ ಕಾಣುತ್ತದೆಯೋ ಹಾಗೆ ಶರೀರದಲ್ಲಿ ಒಂದೇ ಸಮನೆ ಕಲೆಗಳು ಲಯವಾಗುತ್ತಿರುವುದು ಮತ್ತು ಪುನಃ ಹುಟ್ಟುತ್ತಿರುವುದು ಜೀವಿಯ ಲಕ್ಷ್ಯಕ್ಕೆ ಬರುವುದಿಲ್ಲ.

12308123a ತಸ್ಯಾಪ್ಯೇವಂಪ್ರಭಾವಸ್ಯ ಸದಶ್ವಸ್ಯೇವ ಧಾವತಃ।
12308123c ಅಜಸ್ರಂ ಸರ್ವಲೋಕಸ್ಯ ಕಃ ಕುತೋ ವಾ ನ ವಾ ಕುತಃ।।
12308124a ಕಸ್ಯೇದಂ ಕಸ್ಯ ವಾ ನೇದಂ ಕುತೋ ವೇದಂ ನ ವಾ ಕುತಃ।
12308124c ಸಂಬಂಧಃ ಕೋಽಸ್ತಿ ಭೂತಾನಾಂ ಸ್ವೈರಪ್ಯವಯವೈರಿಹ।।

ಉತ್ತಮ ಥಳಿಯ ಕುದುರೆಯಂತೆ ಅತ್ಯಂತ ವೇಗದಿಂದ ಅಲ್ಲಿಂದಿಲ್ಲಿಗೆ ಓಡುವಂತೆ ಈ ಸರ್ವಲೋಕವೂ ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ವೇಗವಾಗಿ ಓಡುತ್ತಿರುತ್ತದೆ. ಆದುದರಿಂದ ಇವನು ಯಾರು? ಎಲ್ಲಿಂದ ಬಂದವನು? ಎಲ್ಲಿಗೆ ಹೋಗುತ್ತಿದ್ದಾನೆ? ಇದು ಯಾರದ್ದು? ಇದು ಯಾರದ್ದಲ್ಲ? ಎಂಬ ಈ ಪ್ರಶ್ನೆಗಳನ್ನು ಕೇಳಲು ಸಾಧ್ಯವೇ ಆಗುವುದಿಲ್ಲ. ಒಂದೊಂದು ಅವಯವವೂ ಪ್ರತಿಕ್ಷಣದಲ್ಲಿಯೂ ಬದಲಾಗುತ್ತಿರುವಾಗ ನಿರ್ದಿಷ್ಟವಾಗಿ ಯಾವುದನ್ನೂ ಹೇಳಲೂ ಸಾಧ್ಯವಾಗುವುದಿಲ್ಲ. ಜೀವಿಗಳ ಸಂಬಂಧವಾದರೂ ಹೇಗೆ ನಿರ್ದಿಷ್ಟವಾಗಿರುತ್ತದೆ?

12308125a ಯಥಾದಿತ್ಯಾನ್ಮಣೇಶ್ಚೈವ ವೀರುದ್ಭ್ಯಶ್ಚೈವ ಪಾವಕಃ।
12308125c ಭವತ್ಯೇವಂ ಸಮುದಯಾತ್ಕಲಾನಾಮಪಿ ಜಂತವಃ।।

ಸೂರ್ಯನ ಕಿರಣಗಳ ಸಂಪರ್ಕವನ್ನು ಹೊಂದಿದ ಆದಿತ್ಯಮಣಿಯಿಂದ ಮತ್ತು ಅರಣಿಗಳ ಘರ್ಷಣೆಯಿಂದ ಹೇಗೆ ಅಗ್ನಿಯು ಹುಟ್ಟುವುದೋ ಹಾಗೆಯೇ ಕಲೆಗಳ ಕಲೆಯುವಿಕೆಯಿಂದ ಪ್ರಾಣಿಗಳು ಹುಟ್ಟುತ್ತವೆ.

12308126a ಆತ್ಮನ್ಯೇವಾತ್ಮನಾತ್ಮಾನಂ ಯಥಾ ತ್ವಮನುಪಶ್ಯಸಿ।
12308126c ಏವಮೇವಾತ್ಮನಾತ್ಮಾನಮನ್ಯಸ್ಮಿನ್ಕಿಂ ನ ಪಶ್ಯಸಿ।

ಮನಸ್ಸಿನಿಂದ ನಿನ್ನ ಆತ್ಮವನ್ನು ನೀನು ಹೇಗೆ ಕಾಣುತ್ತಿದ್ದೀಯೋ ಹಾಗೆಯೇ ನಿನ್ನ ಮನಸ್ಸಿನಿಂದ ನನ್ನ ಆತ್ಮವನ್ನೇಕೆ ಕಾಣುತ್ತಿಲ್ಲ?

12308126e ಯದ್ಯಾತ್ಮನಿ ಪರಸ್ಮಿಂಶ್ಚ ಸಮತಾಮಧ್ಯವಸ್ಯಸಿ।।
12308127a ಅಥ ಮಾಂ ಕಾಸಿ ಕಸ್ಯೇತಿ ಕಿಮರ್ಥಮನುಪೃಚ್ಚಸಿ।

ನಿನ್ನ ಮತ್ತು ಇತರರ ಆತ್ಮಗಳಲ್ಲಿ ಸಾಮ್ಯತೆಯಿದೆಯೆಂದು ತಿಳಿದಿರುವೆಯಾದರೆ ನಾನು ಯಾರು? ಯಾರವಳು? ಎಂದು ಏಕೆ ಪ್ರಶ್ನಿಸುತ್ತಿರುವೆ?

12308127c ಇದಂ ಮೇ ಸ್ಯಾದಿದಂ ನೇತಿ ದ್ವಂದ್ವೈರ್ಮುಕ್ತಸ್ಯ ಮೈಥಿಲ।
12308127e ಕಾಸಿ ಕಸ್ಯ ಕುತೋ ವೇತಿ ವಚನೇ ಕಿಂ ಪ್ರಯೋಜನಮ್।।

ಮೈಥಿಲ! ಇದು ನನ್ನದು ಇದು ನನ್ನದಲ್ಲ ಎಂಬ ದ್ವಂದ್ವಭಾವದಿಂದ ಮುಕ್ತನಾದ ನಿನಗೆ ನೀನು ಯಾರು? ಯಾರವಳು? ಎಲ್ಲಿಂದ ಬಂದವಳು? ಮುಂತಾದ ಪ್ರಶ್ನೆಗಳಿಂದ ಏನು ಪ್ರಯೋಜನ?

12308128a ರಿಪೌ ಮಿತ್ರೇಽಥ ಮಧ್ಯಸ್ಥೇ ವಿಜಯೇ ಸಂಧಿವಿಗ್ರಹೇ।
12308128c ಕೃತವಾನ್ಯೋ ಮಹೀಪಾಲ ಕಿಂ ತಸ್ಮಿನ್ಮುಕ್ತಲಕ್ಷಣಮ್।।

ಶತ್ರು, ಮಿತ್ರ, ಮಧ್ಯಸ್ಥರಿಗೆ ಸಂಬಂಧಿಸಿದ ವಿಜಯ, ಸಂಧಿ, ಮತ್ತು ಯುದ್ಧ ಇವುಗಳನ್ನು ಮಾಡುತ್ತಿರುವ ಮಹೀಪಾಲನಲ್ಲಿ ಜೀವನ್ಮುಕ್ತನ ಯಾವ ಲಕ್ಷಣಗಳು ತಾನೇ ಇರಲು ಸಾಧ್ಯ?

12308129a ತ್ರಿವರ್ಗೇ ಸಪ್ತಧಾ ವ್ಯಕ್ತಂ ಯೋ ನ ವೇದೇಹ ಕರ್ಮಸು।
12308129c ಸಂಗವಾನ್ಯಸ್ತ್ರಿವರ್ಗೇ ಚ ಕಿಂ ತಸ್ಮಿನ್ಮುಕ್ತಲಕ್ಷಣಮ್।।

ಧರ್ಮ-ಅರ್ಥ-ಕಾಮಗಳೆಂಬ ತ್ರಿವರ್ಗವು ಏಳು ಪ್ರಕಾರಗಳಲ್ಲಿ23 ವ್ಯಕ್ತವಾಗುತ್ತವೆ. ಇದನ್ನು ತಿಳಿದುಕೊಳ್ಳದೆಯೇ ಅವುಗಳಲ್ಲಿ ಆಸಕ್ತನಾಗಿರುವವನಲ್ಲಿ ಜೀವನ್ಮುಕ್ತನ ಯಾವ ಲಕ್ಷಣಗಳು ತಾನೇ ಇರಲು ಸಾಧ್ಯ?

12308130a ಪ್ರಿಯೇ ಚೈವಾಪ್ರಿಯೇ ಚೈವ ದುರ್ಬಲೇ ಬಲವತ್ಯಪಿ।
12308130c ಯಸ್ಯ ನಾಸ್ತಿ ಸಮಂ ಚಕ್ಷುಃ ಕಿಂ ತಸ್ಮಿನ್ಮುಕ್ತಲಕ್ಷಣಮ್।।

ಪ್ರಿಯನಲ್ಲಿ, ಅಪ್ರಿಯನಲ್ಲಿ, ದುರ್ಬಲನಲ್ಲಿ ಮತ್ತು ಬಲವಾನನಲ್ಲಿ ಸಮದೃಷ್ಟಿಯು ಯಾರಲ್ಲಿ ಇಲ್ಲವೋ ಅವನಲ್ಲಿ ಜೀವನ್ಮುಕ್ತನ ಯಾವ ಲಕ್ಷಣಗಳು ತಾನೇ ಇರಲು ಸಾಧ್ಯ?

12308131a ತದಮುಕ್ತಸ್ಯ ತೇ ಮೋಕ್ಷೇ ಯೋಽಭಿಮಾನೋ ಭವೇನ್ನೃಪ।
12308131c ಸುಹೃದ್ಭಿಃ ಸ ನಿವಾರ್ಯಸ್ತೇ ವಿಚಿತ್ತಸ್ಯೇವ ಭೇಷಜೈಃ।।

ನೃಪ! ಅಮುಕ್ತನಾಗಿರುವ ನಿನಗೆ ಮೋಕ್ಷ ಹೊಂದಿರುವೆನು ಎಂಬ ಅಭಿಮಾನವಿದೆ. ಆದರೆ ಪಥ್ಯಮಾಡದ ರೋಗಿಗೆ ಔಷಧವನ್ನು ಕೊಡಬಾರದಂತೆ ನಿನ್ನ ಸುಹೃದಯರು ನಿನಗೆ ಈ ಜೀವನ್ಮುಕ್ತ ಎಂಬ ದರ್ಜೆಯನ್ನು ಕೊಡಬಾರದು.

12308132a ತಾನಿ ತಾನ್ಯನುಸಂದೃಶ್ಯ ಸಂಗಸ್ಥಾನಾನ್ಯರಿಂದಮ।
12308132c ಆತ್ಮನಾತ್ಮನಿ ಸಂಪಶ್ಯೇತ್ಕಿಂ ತಸ್ಮಿನ್ಮುಕ್ತಲಕ್ಷಣಮ್।।

ಅರಿಂದಮ! ಆಸಕ್ತಿಯನ್ನು ಹುಟ್ಟಿಸುವ ಈ ಸ್ಥಾನಮಾನಗಳು ಯಾವುವು ಎನ್ನುವುದನ್ನು ವಿವೇಕದಿಂದ ತಿಳಿದುಕೊಳ್ಳಬೇಕು. ನಿನ್ನೊಳಗೇ ಆತ್ಮನನ್ನುಕ ಾಣುತ್ತಾ ಆತ್ಮಾರಾಮನಾಗಿರಬೇಕು. ಮುಕ್ತನಾದವನಿಗೆ ಇದಕ್ಕಿಂತಲೂ ಬೇರೆ ಲಕ್ಷಣವಾದರೂ ಏನಿದೆ?

12308133a ಇಮಾನ್ಯನ್ಯಾನಿ ಸೂಕ್ಷ್ಮಾಣಿ ಮೋಕ್ಷಮಾಶ್ರಿತ್ಯ ಕಾನಿ ಚಿತ್।
12308133c ಚತುರಂಗಪ್ರವೃತ್ತಾನಿ ಸಂಗಸ್ಥಾನಾನಿ ಮೇ ಶೃಣು।।

ಇವಲ್ಲದೇ ಮೋಕ್ಷಕ್ಕೆ ಸಂಬಂಧಿಸಿದ ಇತರ ಸೂಕ್ಷ್ಮ ಸಂಗಮಸ್ಥಾನಗಳಿವೆ. ಇವು ನಾಲ್ಕು ಪ್ರಕಾರಗಳವು. ಅವುಯಾವುವೆಂದು ನನ್ನಿಂದ ಕೇಳು.

12308134a ಯ ಇಮಾಂ ಪೃಥಿವೀಂ ಕೃತ್ಸ್ನಾಮೇಕಚ್ಚತ್ರಾಂ ಪ್ರಶಾಸ್ತಿ ಹ।
12308134c ಏಕಮೇವ ಸ ವೈ ರಾಜಾ ಪುರಮಧ್ಯಾವಸತ್ಯುತ।।

ಈ ಇಡೀ ಭೂಮಿಯನ್ನೇ ಒಂದು ಚತ್ರದಡಿಯಲ್ಲಿ ಆಳುತ್ತಿರುವ ರಾಜನೂ ಕೂಡ ಒಂದು ಪುರದಲ್ಲಿ ವಾಸಮಾಡುತ್ತಾನೆ.

12308135a ತತ್ಪುರೇ ಚೈಕಮೇವಾಸ್ಯ ಗೃಹಂ ಯದಧಿತಿಷ್ಠತಿ।
12308135c ಗೃಹೇ ಶಯನಮಪ್ಯೇಕಂ ನಿಶಾಯಾಂ ಯತ್ರ ಲೀಯತೇ।।

ಆ ಪುರದಲ್ಲಿ ಇರುವ ಒಂದು ಗೃಹದಲ್ಲಿ ಮಾತ್ರ ಅವನು ವಾಸಿಸುತ್ತಾನೆ. ಆ ಅರಮನೆಯಲ್ಲಿಯೂ ಒಂದೇ ಹಾಸಿಗೆಯ ಮೇಲೆ ಮಲಗಿ ರಾತ್ರಿಯನ್ನು ಕಳೆಯುತ್ತಾನೆ.

12308136a ಶಯ್ಯಾರ್ಧಂ ತಸ್ಯ ಚಾಪ್ಯತ್ರ ಸ್ತ್ರೀಪೂರ್ವಮಧಿತಿಷ್ಠತಿ।
12308136c ತದನೇನ ಪ್ರಸಂಗೇನ ಫಲೇನೈವೇಹ ಯುಜ್ಯತೇ।।

ಅ ಹಾಸಿಗೆಯ ಅರ್ಧಭಾಗದಲ್ಲಿ ಅವನ ಪತ್ನಿಯೂ ಮೊದಲೇ ಮಲಗಿಕೊಂಡಿರುತ್ತಾಳೆ. ಹೀಗೆ ಅಖಂಡ ಭೂಮಂಡಲಕ್ಕೆ ಅಧಿಪತಿಯಾಗಿದ್ದರೂ ಅವನು ಅದರಿಂದ ಪಡೆಯುವ ಫಲವು ಅತ್ಯಲ್ಪವು.

12308137a ಏವಮೇವೋಪಭೋಗೇಷು ಭೋಜನಾಚ್ಚಾದನೇಷು ಚ।
12308137c ಗುಣೇಷು ಪರಿಮೇಯೇಷು ನಿಗ್ರಹಾನುಗ್ರಹೌ ಪ್ರತಿ।।
12308138a ಪರತಂತ್ರಃ ಸದಾ ರಾಜಾ ಸ್ವಲ್ಪೇ ಸೋಽಪಿ ಪ್ರಸಜ್ಜತೇ।
12308138c ಸಂಧಿವಿಗ್ರಹಯೋಗೇ ಚ ಕುತೋ ರಾಜ್ಞಃ ಸ್ವತಂತ್ರತಾ।।

ಹೀಗೆ ಭೋಜನ-ಆಚ್ಚಾದನ ಮೊದಲಾದ ಉಪಭೋಗಗಳಲ್ಲಿ, ಅವುಗಳ ಗುಣ ಮತ್ತು ಪರಿಮಿತಿಯಲ್ಲಿ, ಮತ್ತು ಶಿಕ್ಷೆ-ಅನುಗ್ರಹಗಳಲ್ಲಿ ರಾಜನು ಸದಾ ಪರತಂತ್ರನಾಗಿಯೇ ಇರುತ್ತಾನೆ. ಸಣ್ಣ ವಿಷಯಗಳಲ್ಲಿಯೂ ಅವನಿಗೆ ಸ್ವಾತಂತ್ರ್ಯವಿರುವುದಿಲ್ಲ. ಸಂಧಿ-ಯುದ್ಧಗಳ ಕುರಿತು ರಾಜನಿಗೆ ಸ್ವತಂತ್ರತೆಯೆಲ್ಲಿದೆ?

12308139a ಸ್ತ್ರೀಷು ಕ್ರೀಡಾವಿಹಾರೇಷು ನಿತ್ಯಮಸ್ಯಾಸ್ವತಂತ್ರತಾ।
12308139c ಮಂತ್ರೇ ಚಾಮಾತ್ಯಸಮಿತೌ ಕುತ ಏವ ಸ್ವತಂತ್ರತಾ।।

ಸ್ತ್ರೀಯರ ಮತ್ತು ಕ್ರೀಡಾವಿಹಾರ ವಿಷಯಗಳಲ್ಲಿ ನಿತ್ಯವೂ ಅಸ್ವಂತ್ರನಾಗಿರುವ ಇವನಿಗೆ ಅಮಾತ್ಯರೊಡನೆ ಮಂತ್ರಾಲೋಚನೆಮಾಡುವಾಗ ಯಾವ ಸ್ವಾತಂತ್ರ್ಯವು ಇರುತ್ತದೆ?

12308140a ಯದಾ ತ್ವಾಜ್ಞಾಪಯತ್ಯನ್ಯಾಂಸ್ತದಾಸ್ಯೋಕ್ತಾ ಸ್ವತಂತ್ರತಾ।
12308140c ಅವಶಃ ಕಾರ್ಯತೇ ತತ್ರ ತಸ್ಮಿಂಸ್ತಸ್ಮಿನ್ಗುಣೇ ಸ್ಥಿತಃ।।

ಇನ್ನೊಬ್ಬರಿಗೆ ಆಜ್ಞೆಮಾಡುವಾಗ ಅವನಿಗೆ ಸ್ವಾತ್ರಂತ್ರ್ಯವಿರುತ್ತದೆ ಎಂದು ಹೇಳುತ್ತಾರೆ. ಆದರೆ ಆಯಾ ಸಂದರ್ಭಗಳಲ್ಲಿ ಅವನಿಗೆ ಅವಶ್ಯ ಕಾರ್ಯಗಳನ್ನು ಮಾಡಲೇ ಬೇಕಾಗುತ್ತದೆ.

12308141a ಸ್ವಪ್ತುಕಾಮೋ ನ ಲಭತೇ ಸ್ವಪ್ತುಂ ಕಾರ್ಯಾರ್ಥಿಭಿರ್ಜನೈಃ।
12308141c ಶಯನೇ ಚಾಪ್ಯನುಜ್ಞಾತಃ ಸುಪ್ತ ಉತ್ಥಾಪ್ಯತೇಽವಶಃ।।

ಕಾರ್ಯಾರ್ಥೀ ಅಧಿಕಾರಿಗಳಿಂದ ಸುತ್ತುವರೆಯಲ್ಪಟ್ಟಿರುವ ರಾಜನಿಗೆ ಮಲಗಲು ಬಯಸಿದರೂ ನಿದ್ರಿಸಲು ಸಾಧ್ಯವಾಗುವುದಿಲ್ಲ. ಅವರಿಂದ ಅನುಜ್ಞಾತನಾಗಿ ನಿದ್ರಿಸಿದರೂ ಅವಶನಾಗಿ ಏಳಬೇಕಾಗುತ್ತದೆ.

12308142a ಸ್ನಾಹ್ಯಾಲಭ ಪಿಬ ಪ್ರಾಶ ಜುಹುಧ್ಯಗ್ನೀನ್ಯಜೇತಿ ಚ।
12308142c ವದಸ್ವ ಶೃಣು ಚಾಪೀತಿ ವಿವಶಃ ಕಾರ್ಯತೇ ಪರೈಃ।।

ಸ್ನಾನಮಾಡು, ಎಣ್ಣೆ ಹಚ್ಚಿಕೋ, ಕುಡಿ, ಊಟಮಾಡು, ಅಗ್ನಿಹೋತ್ರ ಮಾಡು, ಯಜ್ಞಮಾಡು, ಮಾತನಾಡು, ಕೇಳು ಇವೇ ಮುಂತಾಗಿ ಇತರರ ಸೂಚನೆಗಳಿಗೆ ವಿವಶನಾಗಿ ಕಾರ್ಯಮಾಡಬೇಕಾಗುತ್ತದೆ.

12308143a ಅಭಿಗಮ್ಯಾಭಿಗಮ್ಯೈನಂ ಯಾಚಂತೇ ಸತತಂ ನರಾಃ।
12308143c ನ ಚಾಪ್ಯುತ್ಸಹತೇ ದಾತುಂ ವಿತ್ತರಕ್ಷೀ ಮಹಾಜನಾತ್।।

ನರರು ಸತತವೂ ಬಂದು ಯಾಚಿಸುತ್ತಲೇ ಇರುತ್ತಾರೆ. ಆದರೆ ಧನವನ್ನು ರಕ್ಷಿಸಿಕೊಂಡು ಬಂದಿರುವ ರಾಜನಿಗೆ ಹೆಚ್ಚು ಜನರಿಗೆ ವಿತ್ತವನ್ನು ನೀಡಲು ಇಷ್ಟವಿಲ್ಲದಿರಬಹುದು.

12308144a ದಾನೇ ಕೋಶಕ್ಷಯೋ ಹ್ಯಸ್ಯ ವೈರಂ ಚಾಪ್ಯಪ್ರಯಚ್ಚತಃ।
12308144c ಕ್ಷಣೇನಾಸ್ಯೋಪವರ್ತಂತೇ ದೋಷಾ ವೈರಾಗ್ಯಕಾರಕಾಃ।।

ದಾನ ಮಾಡಿದರೆ ಕೋಶವು ಕ್ಷೀಣವಾಗುತ್ತದೆ. ದಾನಮಾಡದಿದ್ದರೆ ವೈರವು ಹುಟ್ಟಿಕೊಳ್ಳುತ್ತದೆ. ರಾಜಕಾರ್ಯಗಳಲ್ಲಿಯೇ ವೈರಾಗ್ಯವನ್ನುಂಟು ಮಾಡುವ ಇಂತಹ ದೋಷಗಳು ಕ್ಷಣ ಕ್ಷಣವೂ ಬರುತ್ತಿರುತ್ತವೆ.

12308145a ಪ್ರಾಜ್ಞಾನ್ ಶೂರಾಂಸ್ತಥೈವಾಢ್ಯಾನೇಕಸ್ಥಾನೇಽಪಿ ಶಂಕತೇ।
12308145c ಭಯಮಪ್ಯಭಯೇ ರಾಜ್ಞೋ ಯೈಶ್ಚ ನಿತ್ಯಮುಪಾಸ್ಯತೇ।।

ಪ್ರಾಜ್ಞರು, ಶೂರರು ಮತ್ತು ಆಢ್ಯರು ಒಂದೆಡೆ ಸೇರಿದರೆ ಸಾಕು ರಾಜನು ಸಂದೇಹಪಡುತ್ತಾನೆ. ಯಾರಿಂದ ತನಗೆ ಭಯವೇ ಇರುವುದಿಲ್ಲವೋ ಅವರ ಕುರಿತೂ ರಾಜನು ಭಯಪಡುತ್ತಾನೆ. ನಿತ್ಯವೂ ತನ್ನ ಸುತ್ತಮುತ್ತಲೂ ಓಡಾಡುವ ಜನರ ವಿಷಯದಲ್ಲಿಯೂ ರಾಜನು ಭಯಪಡುತ್ತಿರುತ್ತಾನೆ.

12308146a ಯದಾ ಚೈತೇ ಪ್ರದುಷ್ಯಂತಿ ರಾಜನ್ಯೇ ಕೀರ್ತಿತಾ ಮಯಾ।
12308146c ತದೈವಾಸ್ಯ ಭಯಂ ತೇಭ್ಯೋ ಜಾಯತೇ ಪಶ್ಯ ಯಾದೃಶಮ್।।

ನಾನು ಹೇಳಿದ ಪ್ರಾಜ್ಞರು, ಶೂರರು ಮತ್ತು ಆಢ್ಯರು ರಾಜನನ್ನು ದೂಷಿಸುತ್ತಾರೆ. ಆಗ ಅವರ ಕುರಿತು ರಾಜನಿಗೆ ಯಾವ ರೀತಿಯ ಭಯವುಂಟಾಗುತ್ತದೆ ಎನ್ನುವುದನ್ನು ನೀನೇ ನೋಡು.

12308147a ಸರ್ವಃ ಸ್ವೇ ಸ್ವೇ ಗೃಹೇ ರಾಜಾ ಸರ್ವಃ ಸ್ವೇ ಸ್ವೇ ಗೃಹೇ ಗೃಹೀ।
12308147c ನಿಗ್ರಹಾನುಗ್ರಹೌ ಕುರ್ವಂಸ್ತುಲ್ಯೋ ಜನಕ ರಾಜಭಿಃ।।

ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ರಾಜರೇ ಆಗಿರುತ್ತಾರೆ. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಯಜಮಾನರೇ ಆಗಿರುತ್ತಾರೆ. ಜನಕ! ರಾಜರಂತೆ ಅವರು ತಮಗೆ ಬೇಕಾದವರಿಗೆ ಅನುಗ್ರಹವನ್ನೂ ಬೇಡದವರಿಗೆ ಶಿಕ್ಷೆಯನ್ನೂ ನೀಡುತ್ತಿರುತ್ತಾರೆ.

12308148a ಪುತ್ರಾ ದಾರಾಸ್ತಥೈವಾತ್ಮಾ ಕೋಶೋ ಮಿತ್ರಾಣಿ ಸಂಚಯಃ।
12308148c ಪರೈಃ ಸಾಧಾರಣಾ ಹ್ಯೇತೇ ತೈಸ್ತೈರೇವಾಸ್ಯ ಹೇತುಭಿಃ।।

ರಾಜನಲ್ಲಿದ್ದಂತೆ ಸಾಧಾರಣವಾಗಿ ಇತರ ಎಲ್ಲರಿಗೂ ಪುತ್ರರು, ಪತ್ನಿ, ಶರೀರ, ಕೋಶ, ಮಿತ್ರರು ಮತ್ತು ಧನಸಂಗ್ರಹ ಇದ್ದೇ ಇರುತ್ತವೆ. ಯಾವ ಯಾವ ಕಾರಣಗಳಿಂದ ಓರ್ವನು ರಾಜನೆನಿಸಿಕೊಳ್ಳುವನೋ ಆಯಾ ಕಾರಣಗಳಲ್ಲಿ ಇತರರೂ ರಾಜನ ಸಮಾನರೆಂದೇ ಹೇಳಬಹುದು.

12308149a ಹತೋ ದೇಶಃ ಪುರಂ ದಗ್ಧಂ ಪ್ರಧಾನಃ ಕುಂಜರೋ ಮೃತಃ।
12308149c ಲೋಕಸಾಧಾರಣೇಷ್ವೇಷು ಮಿಥ್ಯಾಜ್ಞಾನೇನ ತಪ್ಯತೇ।।

ದೇಶವು ನಷ್ಟವಾಗಿ ಹೋಯಿತು. ಪುರವು ಸುಟ್ಟುಹೋಯಿತು. ಪಟ್ಟದಾನೆಯು ಸತ್ತುಹೋಯಿತು. ಇವೆಲ್ಲವೂ ಲೋಕಸಾಧಾರಣ ವಿಷಯಗಳೇ ಆಗಿವೆ. ಈ ವಿಷಯಗಳು ರಾಜನಿಗೆ ಎಷ್ಟು ಸಂಬಂಧಿಸಿವೆಯೋ ಅಷ್ಟೇ ಪ್ರಜೆಗಳಿಗೂ ಸಂಬಂಧಿಸಿವೆ. ತನ್ನಲ್ಲಿರುವ ಮಿಥ್ಯಾಜ್ಞಾನದ ಕಾರಣದಿಂದ ರಾಜನು ಇದಕ್ಕೆ ಪರಿತಪಿಸುತ್ತಾನೆ.

12308150a ಅಮುಕ್ತೋ ಮಾನಸೈರ್ದುಃಖೈರಿಚ್ಚಾದ್ವೇಷಪ್ರಿಯೋದ್ಭವೈಃ।
12308150c ಶಿರೋರೋಗಾದಿಭೀ ರೋಗೈಸ್ತಥೈವ ವಿನಿಪಾತಿಭಿಃ।।

ರಾಜನಾದವನು ಮಾನಸಿಕ ದುಃಖ, ಇಚ್ಛಾ, ದ್ವೇಷ, ಪ್ರೀತಿಗಳಿಂದ ಮುಕ್ತನಲ್ಲ. ಹಾಗೆಯೇ ಅವನಿಗೂ ತಲೆನೋವೇ ಮೊದಲಾದ ರೋಗಗಳು ಬರುತ್ತಲೇ ಇರುತ್ತವೆ.

12308151a ದ್ವಂದ್ವೈಸ್ತೈಸ್ತೈರುಪಹತಃ ಸರ್ವತಃ ಪರಿಶಂಕಿತಃ।
12308151c ಬಹುಪ್ರತ್ಯರ್ಥಿಕಂ ರಾಜ್ಯಮುಪಾಸ್ತೇ ಗಣಯನ್ನಿಶಾಃ।।

ಈ ರೀತಿ ದ್ವಂದ್ವಗಳಿಂದ ಪೀಡಿತನಾಗಿ, ಸರ್ವತಃ ಪರಿಶಂಕಿತನಾಗಿ, ರಾತ್ರಿಗಳನ್ನೆಣಿಸುತ್ತಾ ಅನೇಕ ಶತ್ರುಗಳಿಂದ ತುಂಬಿರುವ ರಾಜ್ಯವನ್ನು ಆಳುತ್ತಿರುತ್ತಾನೆ.

12308152a ತದಲ್ಪಸುಖಮತ್ಯರ್ಥಂ ಬಹುದುಃಖಮಸಾರವತ್24
12308152c ಕೋ ರಾಜ್ಯಮಭಿಪದ್ಯೇತ ಪ್ರಾಪ್ಯ ಚೋಪಶಮಂ ಲಭೇತ್।।

ರಾಜ್ಯಾಡಳಿತವು ಅಲ್ಪ ಸುಖವನ್ನು ನೀಡುವಂಥಹುದು ಮತ್ತು ಬಹು ದುಃಖಗಳನ್ನು ನೀಡುವಂಥಹುದು. ಸಾರವೇ ಇಲ್ಲದ್ದು. ಇಂಥಹ ರಾಜ್ಯಾಡಳಿತವನ್ನು ಯಾರುತಾನೇ ವಹಿಸಿಕೊಳ್ಳುತ್ತಾರೆ? ವಹಿಸಿಕೊಂಡು ಯಾರುತಾನೇ ಶಾಂತಿಯಿಂದಿರುತ್ತಾನೆ?

12308153a ಮಮೇದಮಿತಿ ಯಚ್ಚೇದಂ ಪುರಂ ರಾಷ್ಟ್ರಂ ಚ ಮನ್ಯಸೇ।
12308153c ಬಲಂ ಕೋಶಮಮಾತ್ಯಾಂಶ್ಚ ಕಸ್ಯೈತಾನಿ ನ ವಾ ನೃಪ।।

ನೃಪ! ಈ ಪುರ, ರಾಷ್ಟ್ರ, ಸೇನೆ, ಕೋಶ ಮತ್ತು ಅಮಾತ್ಯರು ನನ್ನವರು ಎಂದು ನೀನು ತಿಳಿದುಕೊಂಡಿದ್ದೀಯಲ್ಲಾ ಇವು ಯಾರಿಗೆ ಸೇರಿದವು? ಅಥವಾ ಯಾರಿಗೆ ಸೇರಿಲ್ಲ?

12308154a ಮಿತ್ರಾಮಾತ್ಯಂ ಪುರಂ ರಾಷ್ಟ್ರಂ ದಂಡಃ ಕೋಶೋ ಮಹೀಪತಿಃ।
12308154c ಸಪ್ತಾಂಗಶ್ಚಕ್ರಸಂಘಾತೋ ರಾಜ್ಯಮಿತ್ಯುಚ್ಯತೇ ನೃಪ।।

ನೃಪ! ಮಿತ್ರ, ಅಮಾತ್ಯ, ಪುರ, ರಾಷ್ಟ್ರ, ದಂಡ, ಕೋಶ ಮತ್ತು ರಾಜ ಇವು ರಾಜ್ಯದ ಸಪ್ತಾಂಗಗಳೆಂದು ಹೇಳುತ್ತಾರೆ.

12308155a ಸಪ್ತಾಂಗಸ್ಯಾಸ್ಯ ರಾಜ್ಯಸ್ಯ ತ್ರಿದಂಡಸ್ಯೇವ ತಿಷ್ಠತಃ।
12308155c ಅನ್ಯೋನ್ಯಗುಣಯುಕ್ತಸ್ಯ ಕಃ ಕೇನ ಗುಣತೋಽಧಿಕಃ।।

ನನ್ನಲ್ಲಿ ಈ ತ್ರಿದಂಡವಿರುವಂತೆ ನಿನ್ನಲ್ಲಿ ಸಪ್ತಾಂಗಯುಕ್ತವಾದ ರಾಜ್ಯವಿದೆ. ರಾಜ್ಯ ಮತ್ತು ತ್ರಿದಂಡ ಇವೆರಡೂ ಗುಣಯುಕ್ತವಾಗಿವೆ. ಆದರೆ ಯಾವನು ಯಾರಿಗೆ ಗುಣದಲ್ಲಿ ಅಧಿಕನಾಗುತ್ತಾನೆ?

12308156a ತೇಷು ತೇಷು ಹಿ ಕಾಲೇಷು ತತ್ತದಂಗಂ ವಿಶಿಷ್ಯತೇ।
12308156c ಯೇನ ಯತ್ಸಿಧ್ಯತೇ ಕಾರ್ಯಂ ತತ್ಪ್ರಾಧಾನ್ಯಾಯ ಕಲ್ಪತೇ।।

ರಾಜ್ಯದ ಸಪ್ತಾಂಗಗಳಲ್ಲಿ ಒಂದೊಂದು ಅಂಗವೂ ಒಂದೊಂದು ಸಮಯದಲ್ಲಿ ತನ್ನ ವೈಶಿಷ್ಟ್ಯವನ್ನು ಪ್ರದರ್ಶಿಸುತ್ತದೆ. ಯಾವುದರಿಂದ ಕಾರ್ಯವು ಸಿದ್ಧಿಸುತ್ತದೆಯೋ ಆ ಸಮಯದಲ್ಲಿ ಅದು ಪ್ರಧಾನವೆನಿಸಿಕೊಳ್ಳುತ್ತದೆ.

12308157a ಸಪ್ತಾಂಗಶ್ಚಾಪಿ ಸಂಘಾತಸ್ತ್ರಯಶ್ಚಾನ್ಯೇ ನೃಪೋತ್ತಮ।
12308157c ಸಂಭೂಯ ದಶವರ್ಗೋಽಯಂ ಭುಂಕ್ತೇ ರಾಜ್ಯಂ ಹಿ ರಾಜವತ್।।

ನೃಪೋತ್ತಮ! ಈ ಸಪ್ತಾಂಗಗಳು ಮೂರು ಅನ್ಯ ಶಕ್ತಿ25ಗಳೊಂದಿಗೆ ಸೇರಿ ಹತ್ತರ ವರ್ಗವಾಗುತ್ತದೆ ಮತ್ತು ಇದೂ ಕೂಡ ರಾಜನಂತೆ ರಾಜ್ಯವನ್ನು ಉಪಭೋಗಿಸುತ್ತದೆ.

12308158a ಯಶ್ಚ ರಾಜಾ ಮಹೋತ್ಸಾಹಃ ಕ್ಷತ್ರಧರ್ಮರತೋ ಭವೇತ್।
12308158c ಸ ತುಷ್ಯೇದ್ದಶಭಾಗೇನ ತತಸ್ತ್ವನ್ಯೋ ದಶಾವರೈಃ।।

ಮಹೋತ್ಸಾಹಿಯಾದ ಮತ್ತು ಕ್ಷತ್ರಧರ್ಮರತನಾದ ರಾಜನು ಪ್ರಜೆಗಳ ಆದಾಯದ ಹತ್ತನೇ ಒಂದು ಭಾಗದಿಂದಲೇ ತೃಪ್ತನಾಗುತ್ತಾನೆ. ಅನ್ಯರು ಅದಕ್ಕಿಂತಲೂ ಕಡಿಮೆ ಭಾಗದಿಂದಲೇ ತೃಪ್ತರಾಗುತ್ತಾರೆ.

12308159a ನಾಸ್ತ್ಯಸಾಧಾರಣೋ ರಾಜಾ ನಾಸ್ತಿ ರಾಜ್ಯಮರಾಜಕಮ್।
12308159c ರಾಜ್ಯೇಽಸತಿ ಕುತೋ ಧರ್ಮೋ ಧರ್ಮೇಽಸತಿ ಕುತಃ ಪರಮ್।।

ಅಸಾಧಾರಣ ರಾಜನಿರುವುದಿಲ್ಲ. ಯಾವ ರಾಜ್ಯವೂ ರಾಜನಿಲ್ಲದೇ ಇರುವುದಿಲ್ಲ. ರಾಜನಿಲ್ಲದಿದ್ದರೆ ಧರ್ಮವು ಎಲ್ಲಿಂದ ಮತ್ತು ಧರ್ಮವು ಇಲ್ಲದಿದ್ದರೆ ಮೋಕ್ಷವು ಎಲ್ಲಿಂದ?

12308160a ಯೋಽಪ್ಯತ್ರ ಪರಮೋ ಧರ್ಮಃ ಪವಿತ್ರಂ ರಾಜರಾಜ್ಯಯೋಃ।
12308160c ಪೃಥಿವೀ ದಕ್ಷಿಣಾ ಯಸ್ಯ ಸೋಽಶ್ವಮೇಧೋ ನ ವಿದ್ಯತೇ।।

ಅವ ರಾಜನ ರಾಜ್ಯದಲ್ಲಿ ಪವಿತ್ರ ಪರಮ ಧರ್ಮವಿದೆಯೋ ಮತ್ತು ಯಾರು ಭೂಮಿಯನ್ನು ದಕ್ಷಿಣಾರೂಪದಲ್ಲಿ ಸದಾ ದಾನಮಾಡಲು ಸಿದ್ಧನಾಗಿರುವನೋ ಅವನಿಗೆ ಅಶ್ವಮೇಧಯಾಗದ ಫಲವು ದೊರೆಯುತ್ತದೆ.

12308161a ಸಾಹಮೇತಾನಿ ಕರ್ಮಾಣಿ ರಾಜ್ಯದುಃಖಾನಿ ಮೈಥಿಲ।
12308161c ಸಮರ್ಥಾ ಶತಶೋ ವಕ್ತುಮಥ ವಾಪಿ ಸಹಸ್ರಶಃ।।

ಮೈಥಿಲ! ದುಃಖವನ್ನು ನೀಡುವ ಇಂತಹ ನೂರಾರು ಸಹಸ್ರಾರು ರಾಜಕರ್ಮಗಳ ಕುರಿತು ಹೇಳಲು ನಾನು ಸಮರ್ಥಳಾಗಿದ್ದೇನೆ.

12308162a ಸ್ವದೇಹೇ ನಾಭಿಷಂಗೋ ಮೇ ಕುತಃ ಪರಪರಿಗ್ರಹೇ।
12308162c ನ ಮಾಮೇವಂವಿಧಾಂ ಮುಕ್ತಾಮೀದೃಶಂ ವಕ್ತುಮರ್ಹಸಿ।।

ನನ್ನ ದೇಹದ ಮೇಲೆಯೇ ನನಗೆ ಯಾವ ವಿಧವಾದ ಆಸಕ್ತಿಯೂ ಇಲ್ಲದಿರುವಾಗ ಪರಪುರುಷರನ್ನು ಪರಿಗ್ರಹಿಸುವುದರಲ್ಲಿ ನನಗೆ ಹೇಗೆ ತಾನೇ ಆಸಕ್ತಿಯಿದ್ದೀತು? ಮುಕ್ತಳಾಗಿರುವ ನನ್ನ ಕುರಿತು ನೀನು ಈ ವಿಧದಲ್ಲಿ ಮಾತನಾಡುವುದು ಸರಿಯಲ್ಲ.

12308163a ನನು ನಾಮ ತ್ವಯಾ ಮೋಕ್ಷಃ ಕೃತ್ಸ್ನಃ ಪಂಚಶಿಖಾಚ್ಚ್ರುತಃ।
12308163c ಸೋಪಾಯಃ ಸೋಪನಿಷದಃ ಸೋಪಾಸಂಗಃ ಸನಿಶ್ಚಯಃ।।

ಪಂಚಶಿಖನು ನಿನಗೆ ಉಪಾಯಯುಕ್ತವಾದ, ಉಪನಿಷದುಕ್ತವಾದ, ಉಪಾಸಂಗ ಯುಕ್ತವಾದ ಮತ್ತು ಸುನಿಶ್ಚಿತವಾದ ಮೋಕ್ಷಶಾಸ್ತ್ರವನ್ನು ಸಮಗ್ರವಾಗಿ ಕೇಳಿರುವೆಯಲ್ಲವೇ?

12308164a ತಸ್ಯ ತೇ ಮುಕ್ತಸಂಗಸ್ಯ ಪಾಶಾನಾಕ್ರಮ್ಯ ತಿಷ್ಠತಃ।
12308164c ಚತ್ರಾದಿಷು ವಿಶೇಷೇಷು ಕಥಂ ಸಂಗಃ ಪುನರ್ನೃಪ।।

ನೃಪ! ಸಂಗಮುಕ್ತನಾಗಿರುವೆಯಲ್ಲವೇ? ಬಂಧಗಳನ್ನು ಮೀರಿರುವೆಯಲ್ಲವೇ? ಹೀಗೆರುವಾಗ ಪುನಃ ಚತ್ರಾದಿಗಳಲ್ಲಿ ನಿನಗೆ ವಿಶೇಷ ಆಸಕ್ತಿಯು ಹೇಗೆ ಉಂಟಾಯಿತು?

12308165a ಶ್ರುತಂ ತೇ ನ ಶ್ರುತಂ ಮನ್ಯೇ ಮಿಥ್ಯಾ ವಾಪಿ ಶ್ರುತಂ ಶ್ರುತಮ್।
12308165c ಅಥ ವಾ ಶ್ರುತಸಂಕಾಶಂ ಶ್ರುತಮನ್ಯಚ್ಚ್ರುತಂ ತ್ವಯಾ।।

ನೀನು ಕೇಳಿರುವೆಯೆಂದರೂ ಕೇಳಿಲ್ಲವೆಂದು ನನಗನ್ನಿಸುತ್ತದೆ. ಅಥವಾ ಸುಳ್ಳನ್ನು ಕೇಳಿರಬಹುದು. ಅಥವಾ ಮೋಕ್ಷಜ್ಞಾನದಂತೆಯೇ ತೋರುವ ಬೇರೆ ಯಾವುದೋ ಜ್ಞಾನವನ್ನು ಕೇಳಿ ಪಡೆದುಕೊಂಡಿರಬಹುದು.

12308166a ಅಥಾಪೀಮಾಸು ಸಂಜ್ಞಾಸು ಲೌಕಿಕೀಷು ಪ್ರತಿಷ್ಠಸಿ।
12308166c ಅಭಿಷಂಗಾವರೋಧಾಭ್ಯಾಂ ಬದ್ಧಸ್ತ್ವಂ ಪ್ರಾಕೃತೋ ಮಯಾ।।

ಪಂಚಶಿಖನಿಂದ ಉಪದೇಶವನ್ನು ಪಡೆದ ನಂತರವೂ ನೀನು ಲೌಕಿಕ ಸಂಜ್ಞೆಗಳಲ್ಲಿ ಪ್ರತಿಷ್ಠಿತನಾಗಿರುವೆ. ಸಾಮಾನ್ಯರಂತೆ ನೀನೂ ಕೂಡ ಮಾನಾಪಮಾನಗಳಿಂದ ಬಂಧಿತನಾಗಿರುವೆ.

12308167a ಸತ್ತ್ವೇನಾನುಪ್ರವೇಶೋ ಹಿ ಯೋಽಯಂ ತ್ವಯಿ ಕೃತೋ ಮಯಾ।
12308167c ಕಿಂ ತವಾಪಕೃತಂ ತತ್ರ ಯದಿ ಮುಕ್ತೋಽಸಿ ಸರ್ವತಃ।।

ಒಂದು ವೇಳೆ ನೀನು ಸರ್ವತಃ ಮುಕ್ತನಾಗಿರುವೆಯಾದರೆ ಬುದ್ಧಿಯ ಮೂಲಕ ನಾನು ನಿನ್ನಲ್ಲಿ ಮಾಡಿರುವ ಪ್ರವೇಶದಿಂದ ನಿನಗೆ ಯಾವ ಅಪಕಾರವನ್ನು ಮಾಡಿದಂತಾಯಿತು?

12308168a ನಿಯಮೋ ಹ್ಯೇಷ ಧರ್ಮೇಷು ಯತೀನಾಂ ಶೂನ್ಯವಾಸಿತಾ।
12308168c ಶೂನ್ಯಮಾವಾಸಯಂತ್ಯಾ ಚ ಮಯಾ ಕಿಂ ಕಸ್ಯ ದೂಷಿತಮ್।।

ಯತಿಗಳ ಧರ್ಮವನ್ನು ಆಚರಿಸುತ್ತಿರುವವರು ಶೂನ್ಯವಾದ ಪ್ರದೇಶದಲ್ಲಿ ವಾಸಿಸಬೇಕೆಂಬ ನಿಯಮವಿದೆ. ಅದರಂತೆ ನಾನು ಶೂನ್ಯವಾಗಿರುವ ನಿನ್ನ ಹೃದಯದಲ್ಲಿ ವಾಸಿಸುತ್ತಿದ್ದೇನೆ. ಅದರಲ್ಲಿ ಯಾವ ದೋಷವಿದೆ?

12308169a ನ ಪಾಣಿಭ್ಯಾಂ ನ ಬಾಹುಭ್ಯಾಂ ಪಾದೋರುಭ್ಯಾಂ ನ ಚಾನಘ।
12308169c ನ ಗಾತ್ರಾವಯವೈರನ್ಯೈಃ ಸ್ಪೃಶಾಮಿ ತ್ವಾ ನರಾಧಿಪ।।

ಅನಘ! ನರಾಧಿಪ! ನಿನ್ನನ್ನು ನಾನು ಕೈಗಳಿಂದಾಗಲೀ, ಬಾಹುಗಳಿಂದಾಗಲೀ, ಪಾದಗಳಿಂದಾಗಲೀ, ತೊಡೆಗಳಿಂದಾಗಲೀ ಅಥವಾ ಮೈಯ ಅನ್ಯ ಅಂಗಗಳಿಂದಾಗಲೀ ಸ್ಪರ್ಶಿಸುತ್ತಿಲ್ಲ.

12308170a ಕುಲೇ ಮಹತಿ ಜಾತೇನ ಹ್ರೀಮತಾ ದೀರ್ಘದರ್ಶಿನಾ।
12308170c ನೈತತ್ಸದಸಿ ವಕ್ತವ್ಯಂ ಸದ್ವಾಸದ್ವಾ ಮಿಥಃ ಕೃತಮ್।।

ಮಹಾಕುಲದಲ್ಲಿ ಹುಟ್ಟಿ ಲಜ್ಜಾಶೀಲನೂ ದೀರ್ಘದರ್ಶಿಯೂ ಆದ ನೀನು ನಮ್ಮಿಬ್ಬರ ನಡುವೆ ಏಕಾಂತದಲ್ಲಿ ನಡೆದ ವ್ಯವಹಾರವನ್ನು ಅದು ಒಳ್ಳೆಯದಾಗಿರಲಿ ಅಥವಾ ಕೆಟ್ಟದಾಗಿರಲಿ, ತುಂಬಿದ ಸಭೆಯಲ್ಲಿ ಹೇಳಬಾರದಾಗಿತ್ತು.

12308171a ಬ್ರಾಹ್ಮಣಾ ಗುರವಶ್ಚೇಮೇ ತಥಾಮಾತ್ಯಾ ಗುರೂತ್ತಮಾಃ।
12308171c ತ್ವಂ ಚಾಥ ಗುರುರಪ್ಯೇಷಾಮೇವಮನ್ಯೋನ್ಯಗೌರವಮ್।।

ಈ ಮಹಾಸಭೆಯಲ್ಲಿ ಎಲ್ಲ ವರ್ಣದವರಿಗೂ ಗುರುವಾದ ಬ್ರಾಹ್ಮಣರಿದ್ದಾರೆ. ಹಾಗೆಯೇ ಹಿರಿಯರಾದ ಉತ್ತಮ ಅಮಾತ್ಯರಿದ್ದಾರೆ. ರಾಜನಾಗಿರುವ ನೀನು ಇವರೆಲ್ಲರಿಗೂ ಗುರುವಿನ ಸ್ಥಾನದಲ್ಲಿರುವೆ. ಹೀಗೆ ಈ ಸಭೆಯಲ್ಲಿ ಗೌರವವು ಪರಸ್ಪರರನ್ನು ಅವಲಂಬಿಸಿದೆ.

12308172a ತದೇವಮನುಸಂದೃಶ್ಯ ವಾಚ್ಯಾವಾಚ್ಯಂ ಪರೀಕ್ಷತಾ।
12308172c ಸ್ತ್ರೀಪುಂಸೋಃ ಸಮವಾಯೋಽಯಂ ತ್ವಯಾ ವಾಚ್ಯೋ ನ ಸಂಸದಿ।।

ಈ ಪರಿಷತ್ತಿನಲ್ಲಿ ಯಾವುದನ್ನು ಹೇಳಬೇಕು ಮತ್ತು ಯಾವುದನ್ನು ಹೇಳಬಾರದು ಎಂದು ವಿಚಾರಿಸದೆಯೇ ನೀನು ಸ್ತ್ರೀ-ಪುರುಷರ ಸಮಾಗಮದ ಕುರಿತಾದ ಈ ಮಾತನ್ನು ಆಡಿದ್ದೀಯೆ.

12308173a ಯಥಾ ಪುಷ್ಕರಪರ್ಣಸ್ಥಂ ಜಲಂ ತತ್ಪರ್ಣಸಂಸ್ಥಿತಮ್।
12308173c ತಿಷ್ಠತ್ಯಸ್ಪೃಶತೀ ತದ್ವತ್ತ್ವಯಿ ವತ್ಸ್ಯಾಮಿ ಮೈಥಿಲ।।

ಮೈಥಿಲ! ಕಮಲದೆಲೆಯ ಮೇಲಿರುವ ನೀರು ಕಮಲದೆಲೆಯನ್ನು ಸ್ಪರ್ಶಿಸದೇ ಇರುವಂತೆ ನಾನೂ ಕೂಡ ನಿನ್ನನ್ನು ಸ್ಪರ್ಶಿಸದೆಯೇ ನಿನ್ನಲ್ಲಿ ವಾಸಿಸುತ್ತಿದ್ದೇನೆ.

12308174a ಯದಿ ವಾಪ್ಯಸ್ಪೃಶಂತ್ಯಾ ಮೇ ಸ್ಪರ್ಶಂ ಜಾನಾಸಿ ಕಂ ಚನ।
12308174c ಜ್ಞಾನಂ ಕೃತಮಬೀಜಂ ತೇ ಕಥಂ ತೇನೇಹ ಭಿಕ್ಷುಣಾ।।

ನಾನು ನಿನ್ನನ್ನು ಮುಟ್ಟದೇ ಇದ್ದರೂ ನಿನಗೆ ನನ್ನ ಸ್ಪರ್ಶದ ಅನುಭವವಾಗಿದ್ದರೆ ಭಿಕ್ಷು ಪಂಚಶಿಕನು ನಿನ್ನ ಜ್ಞಾನವನ್ನು ನಿರ್ಬೀಜವನ್ನಾಗಿಸಿದನು ಎಂದು ಕೇಳಬೇಕಾಗಿದೆ.

12308175a ಸ ಗಾರ್ಹಸ್ಥ್ಯಾಚ್ಚ್ಯುತಶ್ಚ ತ್ವಂ ಮೋಕ್ಷಂ ನಾವಾಪ್ಯ ದುರ್ವಿದಮ್।
12308175c ಉಭಯೋರಂತರಾಲೇ ಚ ವರ್ತಸೇ ಮೋಕ್ಷವಾತಿಕಃ।।

ಪರಸ್ತ್ರೀಸ್ಪರ್ಶವನ್ನು ಅನುಭವಿಸಿದುದರಿಂದ ನೀನು ಗೃಹಸ್ಥಾಶ್ರಮದಿಂದ ಚ್ಯುತನಾಗಿರುವೆ. ನಿನಗೆ ತಿಳಿಯದೇ ಇರುವ ಮೋಕ್ಷವನ್ನೂ ಪಡೆದಿಲ್ಲ. ಮೋಕ್ಷದ ವಿಷಯವಾಗಿ ಕೇವಲ ಪ್ರವಚನಗಳನ್ನು ಮಾಡುತ್ತಾ ಗೃಹಸ್ಥ ಮತ್ತು ಸಂನ್ಯಾಸಾಶ್ರಮಗಳ ಮಧ್ಯೆ ತೂಗಾಡುತ್ತಿರುವೆ.

12308176a ನ ಹಿ ಮುಕ್ತಸ್ಯ ಮುಕ್ತೇನ ಜ್ಞಸ್ಯೈಕತ್ವಪೃಥಕ್ತ್ವಯೋಃ।
12308176c ಭಾವಾಭಾವಸಮಾಯೋಗೇ ಜಾಯತೇ ವರ್ಣಸಂಕರಃ।।

ಜ್ಞಾನಿಯಾದ ಮುಕ್ತನೊಡನೆ ಇನ್ನೊಬ್ಬ ಮುಕ್ತನ ಸಂಯೋಗವಾದರೆ ವರ್ಣಸಂಕರವಾಗುವುದಿಲ್ಲ. ಅಖಂಡವಾದ ಪದಾರ್ಥವೂ ಮತ್ತು ಅದರ ಖಂಡಗಳು ಸೇರಿದಾಗಲೂ ವರ್ಣಸಂಕರವಾಗುವುದಿಲ್ಲ. ಏಕೆಂದರೆ ಅವೆಲ್ಲವೂ ಒಂದೇ ಜಾತಿಯವು. ಭಾವ-ಅಭಾವಗಳ ಸಮಾಯೋಗದಿಂದಲೂ ವರ್ಣಸಂಕರವಾಗುವುದಿಲ್ಲ.

12308177a ವರ್ಣಾಶ್ರಮಪೃಥಕ್ತ್ವೇ ಚ ದೃಷ್ಟಾರ್ಥಸ್ಯಾಪೃಥಕ್ತ್ವಿನಃ।
12308177c ನಾನ್ಯದನ್ಯದಿತಿ ಜ್ಞಾತ್ವಾ ನಾನ್ಯದನ್ಯತ್ಪ್ರವರ್ತತೇ।।

ವರ್ಣಗಳೂ ಆಶ್ರಮಗಳೂ ಪ್ರತ್ಯೇಕಪ್ರತ್ಯೇಕವಾಗಿವೆ. ದೃಷ್ಟಾರ್ಥನಾಗಿರುವವನಿಗೆ ಈ ವರ್ಣಗಳು ಮತ್ತು ಆಶ್ರಮಗಳು ಬ್ರಾಹ್ಮೀ ಸ್ಥಿತಿಯಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿರುವುದಿಲ್ಲ. ಆದುದರಿಂದ ಜೀವನುಮ್ಕ್ತರ ಸಮಾಗಮದಿಂದ ವರ್ಣಸಂಕರವಾಗುವುದಿಲ್ಲ.

12308178a ಪಾಣೌ ಕುಂಡಂ ತಥಾ ಕುಂಡೇ ಪಯಃ ಪಯಸಿ ಮಕ್ಷಿಕಾಃ।
12308178c ಆಶ್ರಿತಾಶ್ರಯಯೋಗೇನ ಪೃಥಕ್ತ್ವೇನಾಶ್ರಯಾ ವಯಮ್।।

ಕೈಯಲ್ಲಿ ಬಿಂದಿಗೆಯಿದೆ. ಹಾಗೆಯೇ ಬಿಂದಿಗೆಯಲ್ಲಿ ಹಾಲಿದೆ. ಹಾಲಿನಲ್ಲಿ ನೊಣವು ಬಿದ್ದಿದೆ. ಇವು ಮೂರೂ ಒಂದು ಆಶ್ರಯ ಮತ್ತೊಂದು ಆಶ್ರಿತ ಎಂಬ ಸಂಬಂಧದಿಂದ ಒಟ್ಟಿಗಿದ್ದರೂ ಅವು ಸ್ವರೂಪತಃ ಬೇರೆ ಬೇರೆಯೇ ಆಗಿವೆ. ಒಂದರೊಡನೆ ಮತ್ತೊಂದರೆ ಸಾಂಕರ್ಯವುಂಟಾಗುವುದಿಲ್ಲ.

12308179a ನ ತು ಕುಂಡೇ ಪಯೋಭಾವಃ ಪಯಶ್ಚಾಪಿ ನ ಮಕ್ಷಿಕಾಃ।
12308179c ಸ್ವಯಮೇವಾಶ್ರಯಂತ್ಯೇತೇ ಭಾವಾ ನ ತು ಪರಾಶ್ರಯಮ್।।

ಬಿಂದಿಗೆಯಲ್ಲಿ ಹಾಲಿದ್ದ ಮಾತ್ರಕ್ಕೆ ಹಾಲಿನ ಸ್ವಭಾವವು ಬಿಂದಿಗೆಗೆ ಬರುವುದಿಲ್ಲ. ಹಾಲಿನಲ್ಲಿ ನೊಣವಿದ್ದ ಮಾತ್ರಕ್ಕೆ ಹಾಲಿನ ಭಾವವು ನೊಣದಲ್ಲಿರುವುದಿಲ್ಲ. ಪದಾರ್ಥಗಳೆಲ್ಲವೂ ತಮ್ಮದೇ ಆದ ಭಾವಗಳನ್ನು ಹೊಂದಿರುತ್ತವೆ. ಭಾವಗಳ್ಯಾವವು ಪರಾಶ್ರಯದಿಂದ ಬರತಕ್ಕುದಲ್ಲ.

12308180a ಪೃಥಕ್ತ್ವಾದಾಶ್ರಮಾಣಾಂ ಚ ವರ್ಣಾನ್ಯತ್ವೇ ತಥೈವ ಚ।
12308180c ಪರಸ್ಪರಪೃಥಕ್ತ್ವಾಚ್ಚ ಕಥಂ ತೇ ವರ್ಣಸಂಕರಃ।।

ಆಶ್ರಮಗಳೂ ಪ್ರತ್ಯೇಕ ಪ್ರತ್ಯೇಕವಾಗಿವೆ ಮತ್ತು ವರ್ಣಗಳೂ ಬೇರೆ ಬೇರೆಯಾಗಿವೆ. ಇವು ಪರಸ್ಪರವಾಗಿ ಪ್ರತ್ಯೇಕವಾಗಿರುವುದಲ್ಲದೇ ಆತ್ಮಭಾವದಲ್ಲಿ ಈ ಧರ್ಮವಳು ಯಾವುವೂ ಇಲ್ಲವೆಂದು ತಿಳಿದಿದ್ದರೆ ನಿನಗೆ ಹೇಗೆ ವರ್ಣಸಂಕರದೋಷವುಂಟಾಗುವುದು?

12308181a ನಾಸ್ಮಿ ವರ್ಣೋತ್ತಮಾ ಜಾತ್ಯಾ ನ ವೈಶ್ಯಾ ನಾವರಾ ತಥಾ।
12308181c ತವ ರಾಜನ್ಸವರ್ಣಾಸ್ಮಿ ಶುದ್ಧಯೋನಿರವಿಪ್ಲುತಾ।।

ರಾಜನ್! ಜಾತಿಯಿಂದ ನಾನು ಬ್ರಾಹ್ಮಣಿಯಲ್ಲ. ವೈಶ್ಯೆಯೂ ಅಲ್ಲ, ಶೂದ್ರಳೂ ಅಲ್ಲ. ನಿನ್ನ ಸಮಾನವರ್ಣದ ಕ್ಷತ್ರಿಯಳಾಗಿದ್ದೇನೆ. ಶುದ್ಧಯೋನಿಯವಳಾಗಿದ್ದೇನೆ. ಭ್ರಷ್ಟಳಾಗಿಲ್ಲ.

12308182a ಪ್ರಧಾನೋ ನಾಮ ರಾಜರ್ಷಿರ್ವ್ಯಕ್ತಂ ತೇ ಶ್ರೋತ್ರಮಾಗತಃ।
12308182c ಕುಲೇ ತಸ್ಯ ಸಮುತ್ಪನ್ನಾಂ ಸುಲಭಾಂ ನಾಮ ವಿದ್ಧಿ ಮಾಮ್।।

ಪ್ರಧಾನನೆಂಬ ರಾಜರ್ಷಿಯ ಹೆಸರನ್ನು ನೀನು ಕೇಳಿರಬಹುದು. ಅವನ ಕುಲದಲ್ಲಿ ಹುಟ್ಟಿರುವ ನನ್ನ ಹೆಸರು ಸುಲಭಾ ಎಂದು ತಿಳಿ.

12308183a ದ್ರೋಣಶ್ಚ ಶತಶೃಂಗಶ್ಚ ವಕ್ರದ್ವಾರಶ್ಚ ಪರ್ವತಃ।
12308183c ಮಮ ಸತ್ರೇಷು ಪೂರ್ವೇಷಾಂ ಚಿತಾ ಮಘವತಾ ಸಹ।।

ನನ್ನ ಪೂರ್ವಜರು ಮಘವತನೊಂದಿಗೆ ಯಜ್ಞಗಳನ್ನು ಮಾಡಿದರು. ಆಗ ದ್ರೋಣ, ಶತಶೃಂಗ ಮತ್ತು ಚಕ್ರದ್ವಾರವೆಂಬ ಪರ್ವತಳನ್ನೇ ಯಜ್ಞವೇದಿಕೆಯ ಇಟ್ಟಿಗೆಗಳನ್ನಾಗಿ ಇಟ್ಟಿದ್ದರು.

12308184a ಸಾಹಂ ತಸ್ಮಿನ್ಕುಲೇ ಜಾತಾ ಭರ್ತರ್ಯಸತಿ ಮದ್ವಿಧೇ।
12308184c ವಿನೀತಾ ಮೋಕ್ಷಧರ್ಮೇಷು ಚರಾಮ್ಯೇಕಾ ಮುನಿವ್ರತಮ್।।

ಆ ಕುಲದಲ್ಲಿ ಹುಟ್ಟಿದ ನಾನು ನನಗೆ ಅನುರೂಪ ಪತಿಯು ಸಿಕ್ಕದಿರಲಾಗಿ ಮೋಕ್ಷಧರ್ಮದಲ್ಲಿ ಶಿಕ್ಷಣವನ್ನು ಪಡೆದು ಮುನಿವ್ರತವನ್ನು ಕೈಗೊಂಡು ಏಕಾಂಗಿಯಾಗಿ ಈ ಭೂಮಂಡಲವನ್ನು ಸುತ್ತುತ್ತಿದ್ದೇನೆ.

12308185a ನಾಸ್ಮಿ ಸತ್ರಪ್ರತಿಚ್ಚನ್ನಾ ನ ಪರಸ್ವಾಭಿಮಾನಿನೀ।
12308185c ನ ಧರ್ಮಸಂಕರಕರೀ ಸ್ವಧರ್ಮೇಽಸ್ಮಿ ಧೃತವ್ರತಾ।।

ನಾನು ಕಪಟಿಯಲ್ಲ. ನಾನು ಇತರರ ಸ್ವತ್ತನ್ನು ಅಪಹರಿಸುವವಳಲ್ಲ. ಧರ್ಮಸಂಕರವನ್ನು ಮಾಡುವವಳೂ ಅಲ್ಲ. ಸ್ವಧರ್ಮದಲ್ಲಿ ಧೃತವ್ರತಳಾಗಿದ್ದೇನೆ.

12308186a ನಾಸ್ಥಿರಾ ಸ್ವಪ್ರತಿಜ್ಞಾಯಾಂ ನಾಸಮೀಕ್ಷ್ಯಪ್ರವಾದಿನೀ।
12308186c ನಾಸಮೀಕ್ಷ್ಯಾಗತಾ ಚಾಹಂ ತ್ವತ್ಸಕಾಶಂ ಜನಾಧಿಪ।।

ಜನಾಧಿಪ! ನನ್ನ ಪ್ರತಿಜ್ಞೆಯಿಂದ ನಾನು ವಿಚಲಿತಳಾಗುವುದಿಲ್ಲ. ವಿಚಾರಿಸದೇ ಮಾತನಾಡುವುದಿಲ್ಲ. ವಿಚಾರಮಾಡದೇ ನಾನು ನಿನ್ನ ಬಳಿ ಬಂದಿಲ್ಲ.

12308187a ಮೋಕ್ಷೇ ತೇ ಭಾವಿತಾಂ ಬುದ್ಧಿಂ ಶ್ರುತ್ವಾಹಂ ಕುಶಲೈಷಿಣೀ।
12308187c ತವ ಮೋಕ್ಷಸ್ಯ ಚಾಪ್ಯಸ್ಯ ಜಿಜ್ಞಾಸಾರ್ಥಮಿಹಾಗತಾ।।

ನಿನ್ನ ಬುದ್ಧಿಯು ಮೋಕ್ಷಮಾರ್ಗದಲ್ಲಿ ಸಂಲಗ್ನವಾಗಿದೆ ಎನ್ನುವುದನ್ನು ಕೇಳಿದ ನಾನು ನಿನ್ನ ಕುಶಲವನ್ನು ಬಯಸಿ ಮತ್ತು ನಿನ್ನ ಮೋಕ್ಷಜ್ಞಾನದ ಮರ್ಮವನ್ನು ತಿಳಿಯುವ ಸಲುವಾಗಿ ಇಲ್ಲಿಗೆ ಆಗಮಿಸಿದೆನು.

12308188a ನ ವರ್ಗಸ್ಥಾ ಬ್ರವೀಮ್ಯೇತತ್ಸ್ವಪಕ್ಷಪರಪಕ್ಷಯೋಃ।
12308188c ಮುಕ್ತೋ ನ ಮುಚ್ಯತೇ ಯಶ್ಚ ಶಾಂತೋ ಯಶ್ಚ ನ ಶಾಮ್ಯತಿ।।

“ಇದು ನನ್ನ ಪಕ್ಷ. ಇದನ್ನು ಹೇಗಾದರೂ ಸಮರ್ಥಿಸಿಕೊಳ್ಳಬೇಕು. ಇದು ಪರಪಕ್ಷ. ಇದನ್ನು ಹೇಗಾದರೂ ಸೋಲಿಸಬೇಕು” ಎಂಬ ಪಕ್ಷಪಾತ ಭಾವದಿಂದ ನಾನು ಮಾತನಾಡುತ್ತಿಲ್ಲ. ಪಕ್ಷಸಮರ್ಥನೆಗಾಗಿ ಮಾತಿನ ವ್ಯಾಯಾಮವನ್ನು ಮಾಡದಿರುವವನು ಪರಬ್ರಹ್ಮನನಲ್ಲಿ ಶಾಂತಿಯನ್ನು ಪಡೆದು ಜೀವನ್ಮುಕ್ತನಾಗುತ್ತಾನೆ.

12308189a ಯಥಾ ಶೂನ್ಯೇ ಪುರಾಗಾರೇ ಭಿಕ್ಷುರೇಕಾಂ ನಿಶಾಂ ವಸೇತ್।
12308189c ತಥಾ ಹಿ ತ್ವಚ್ಚರೀರೇಽಸ್ಮಿನ್ನಿಮಾಂ ವತ್ಸ್ಯಾಮಿ ಶರ್ವರೀಮ್।।

ಪಟ್ಟಣದ ಒಂದು ಶೂನ್ಯಗೃಹದಲ್ಲಿ ಸಂನ್ಯಾಸಿಯೊಬ್ಬನು ಒಂದು ರಾತ್ರಿಯನ್ನು ಹೇಗೆ ಕಳೆಯುವನೋ ಹಾಗೆ ನಾನು ಈ ರಾತ್ರಿಯನ್ನು ನಿನ್ನ ಶರೀರದಲ್ಲಿದ್ದು ಕಳೆಯುತ್ತೇನೆ.

12308190a ಸಾಹಮಾಸನದಾನೇನ ವಾಗಾತಿಥ್ಯೇನ ಚಾರ್ಚಿತಾ।
12308190c ಸುಪ್ತಾ ಸುಶರಣಾ ಪ್ರೀತಾ ಶ್ವೋ ಗಮಿಷ್ಯಾಮಿ ಮೈಥಿಲ।।

ಮೈಥಿಲ! ನೀನು ನನಗೆ ಯಥಾಯೋಗ್ಯ ಆಸನವನ್ನಿತ್ತು ಮಾತಿನ ಆತಿಥ್ಯದಿಂದ ಅರ್ಚಿಸಿದ್ದೀಯೆ. ನಾನೀಗ ಪರಮಪ್ರೀತಳಾಗಿ ನಿನ್ನ ಶರೀರರೂಪವಾದ ಸುಂದರ ಗೃಹದಲ್ಲಿ ಮಲಗಿದ್ದು ನಾಳೆ ಹೊರಟುಹೋಗುತ್ತೇನೆ.”

12308191a ಇತ್ಯೇತಾನಿ ಸ ವಾಕ್ಯಾನಿ ಹೇತುಮಂತ್ಯರ್ಥವಂತಿ ಚ।
12308191c ಶ್ರುತ್ವಾ ನಾಧಿಜಗೌ ರಾಜಾ ಕಿಂ ಚಿದನ್ಯದತಃ ಪರಮ್।।

ಹೀಗಿರುವ ಹೇತುಮಂತ ಅರ್ಥವಂತ ವಾಕ್ಯಗಳನ್ನು ಕೇಳಿ ರಾಜನು ಅನ್ಯ ಯಾವ ಮಾತನ್ನೂ ಆಡಲಿಲ್ಲ.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಸುಲಭಾಜನಕಸಂವಾದೇ ಅಷ್ಟಾಧಿಕತ್ರಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಸುಲಭಾಜನಕಸಂವಾದ ಎನ್ನುವ ಮುನ್ನೂರಾಎಂಟನೇ ಅಧ್ಯಾಯವು.

  1. ವಿನಯಃ ಇಂದ್ರಿಯನಿಗ್ರಹಃ, ಸಂಯಮ. ವ್ಯಾಖ್ಯಾನಕಾರರು ವಿಲೀನಃ ಎಂದು ಅರ್ಥಸಿದ್ದಾರೆ. ಬುದ್ಧ್ಯಾ ಬುದ್ಧೇಃ ವಿನೀಯತೇ ಲೀಯತೇ ಅಸ್ಮಿನ್ನಿತಿ ವಿನಯಃ। ಲಯಸ್ಥಾನಂ ಮೋಕ್ಷತತ್ತ್ವಂ – ಬುದ್ಧಿಯು ಲಯಹೊಂದುವ ಸ್ಥಾನ, ಮೋಕ್ಷತತ್ತ್ವ (ಭಾರತ ದರ್ಶನ). ↩︎

  2. ವ್ಯಕ್ತಸ್ಯಾತ್ಮಾ ಯಥಾ ಚ ಯತ್। (ಭಾರತ ದರ್ಶನ). ↩︎

  3. ಸ್ಥೂಲ-ಸೂಕ್ಷ್ಮ ಶರೀರಗಳ ಮೇಲಿನ ಅಭಿಮಾನವನ್ನು ಜೀವನು ಹೇಗೆ ತ್ಯಾಗಮಾಡುತ್ತಾನೆ? ಎಂದು ವ್ಯಾಖ್ಯಾನಕಾರರು ಅರ್ಥೈಸಿದ್ದಾರೆ (ಭಾರತ ದರ್ಶನ). ↩︎

  4. ವಾಗ್ದಂಡ, ಮನೋದಂಡ ಮತ್ತು ಕಾಯದಂಡ ಸೂಚಕವಾದ ತ್ರಿದಂಡವನ್ನು ಹಿಡಿದಿರುವ ಸಂನ್ಯಾಸಿ. ಅವಾಚ್ಯ, ಅಶ್ಲೀಲ ಮತ್ತು ನಿಷಿದ್ಧಮಾತುಗಳನ್ನಾಡದಿರುವುದು ವಾಗ್ದಂಡ. ಮನಸ್ಸಿನಲ್ಲಿ ಯಾರಿಗೂ ಯಾವರೀತಿಯ ದ್ರೋಹವನ್ನೂ ಮತ್ತು ಹಿಂಸೆಯನ್ನು ಯೋಚಿಸದೇ ಸಂಯಮದಿಂದಿರುವುದು ಮನೋದಂಡ. ನಿಷಿದ್ಧ ಕರ್ಮಗಳಲ್ಲಿ ತೊಡಗದಿರುವುದು ಕಾಯದಂಡ. ↩︎

  5. ಇದಮನ್ಯಚ್ಚತುರ್ಥಂ (ಭಾರತ ದರ್ಶನ). ↩︎

  6. ವಿವೃಣ್ವತ್ಯಾಪ್ರಕಾಶಿತಮ್। (ಭಾರತ ದರ್ಶನ). ↩︎

  7. ಸಾಂಖ್ಯಕ್ರಮೌ (ಭಾರತ ದರ್ಶನ). ↩︎

  8. ಕಠೋರವಾಗಿ ಮಾತನಾಡುವುದು ಒಂದು ವಾಕ್ದೋಷ. ↩︎

  9. ಕಾಮದಿಂದ ಅಥವಾ ಕ್ರೋಧದಿಂದ ಮಾತನಾಡುವುದು ಬುದ್ಧಿದೋಷ. ↩︎

  10. ಸಂಶಯಸ್ಯ ವಿಷಯೀಭೂತಂ ಪದಾದಿಸಂದಿಗ್ಧಾರ್ಥತ್ವಂ। ಅರ್ಥಾತ್ ಸಂಶಯಕ್ಕೆ ವಿಷಯೀಭೂತವಾದ ಸಂದಿಗ್ಧಾರ್ಥವುಳ್ಳ ಪದಗಳು. ಸೌಕ್ಶ್ಮ್ಯ ಎನ್ನುವುದರ ಅರ್ಥವೇನೆಂದು ಸುಲಭೆಯೇ ಶ್ಲೋಕ 81ರಲ್ಲಿ ಹೇಳುತ್ತಾಳೆ. ↩︎

  11. ಪೂರ್ವಪಕ್ಷೇ ಸಿದ್ಧಾಂತೇ ಚ ಗುಣದೋಷಸಂಖ್ಯಾನಂ। ಅರ್ಥಾತ್ ಪೂರ್ವಪಕ್ಷ ಮತ್ತು ಸಿದ್ಧಾಂತಗಳಲ್ಲಿರುವ ಗುಣದೋಷಗಳ ಗಣನೆ. ಸಂಖ್ಯೆ ಎನ್ನುವುದರ ಅರ್ಥವೇನೆಂದು ಸುಲಭೆಯೇ ಶ್ಲೋಕ 82ರಲ್ಲಿ ಹೇಳುತ್ತಾಳೆ. ↩︎

  12. ಸಂಖ್ಯಾತಾನಾಂ ಗುಣದೋಷಾಣಾಂ ಬಲಾಬಲವಿಚಾರಣಮ್। ಅರ್ಥಾತ್ ಸಂಖ್ಯಾತವಾದ ಗುಣದೋಷಗಳ ಬಲಾಬಲಪರಾಮರ್ಶೆ. ಕ್ರಮ ಎನ್ನುವುದರ ಅರ್ಥವೇನೆಂದು ಸುಲಭೆಯೇ ಶ್ಲೋಕ 83ರಲ್ಲಿ ಹೇಳುತ್ತಾಳೆ. ↩︎

  13. ಸಿದ್ಧಾಂತ. ನಿರ್ಣಯ ಎನ್ನುವುದರ ಅರ್ಥವೇನೆಂದು ಸುಲಭೆಯೇ ಶ್ಲೋಕ 84ರಲ್ಲಿ ಹೇಳುತ್ತಾಳೆ. ↩︎

  14. ಅನುಷ್ಠಾನ . ↩︎

  15. ಧರ್ಮಕಾಮಾರ್ಥಮೋಕ್ಷೇಷು (ಭಾರತ ದರ್ಶನ). ↩︎

  16. ಶುಷ್ಕೋ ವ್ಯಕ್ತಸ್ತಿಷ್ಠತ್ಯಗ್ರೇ ಎಂಬ ವಾಕ್ಯವನ್ನು ಗುರ್ವಕ್ಷರಯುಕ್ತ ವಾಕ್ಯ ಎಂದು ವ್ಯಾಖ್ಯಾನಕಾರರು ಉದಾಹರಿಸಿದ್ದಾರೆ (ಭಾರತ ದರ್ಶನ). ↩︎

  17. ಗ್ರಾಮ್ಯವಾಗಿಲ್ಲ. ಅಶ್ಲೀಲಾಮಂಗಲಘೃಣಾವದರ್ಥಂ ಗ್ರಾಮ್ಯಂ। ಅಶ್ಲೀಲವಾದ, ಅಮಂಗಲಕರವಾದ ಮತ್ತು ಅಸಹ್ಯವಾದುದು ಗ್ರಾಮ್ಯ. ↩︎

  18. ಸಂಸ್ಕಾರಶೂನ್ಯವಾಗಿರುವುದಕ್ಕೆ ವ್ಯಾಖ್ಯಾನಕಾರರು ಈ ಶ್ಲೋಕವನ್ನು ಉದಾಹರಿಸಿದ್ದಾರೆ: ಗಲ್ಲೌ ಲಾವಣ್ಯತಲ್ಲೌ ತೇ ಲಡಹೌ ಮಡಗೌ ಭುಜೌ। ನೇತ್ರೇ ಸೇವಾಟ್ಟಕಂ ದೋಟ್ಟಂ ಮೋಟ್ಟಾಯಿತ ಸಖೇ ಸಖಿ।। ↩︎

  19. ಕ್ಲಿಷ್ಟಶಬ್ಧಗಳು. ದೂರಂ ಯಸ್ಯಾರ್ಥಸಂವೃತ್ತಿಃ ಕ್ಲಿಷ್ಟಂ ನೇಷ್ಟಂ ಹಿ ತತ್ಸತಾಮ್। ಯಾವ ವಾಕ್ಯದ ಅರ್ಥವು ಅತಿದೂರವಾಗಿರುತ್ತದೆಯೋ, ಸುಲಭವಾಗಿರುವುದಿಲ್ಲವೋ ಅದಕ್ಕೆ ಕ್ಲಿಷ್ಟವೆಂದು ಹೆಸರು. ವಿಜಿತಾತ್ಮಭವದ್ವೇಷೀ ಅರ್ಥಾತ್ ಗರುಡನಿಂದ ಜಯಿಸಲ್ಪಟ್ಟಇಂದ್ರನ ಮಗನಾದ ಅರ್ಜುನನ ಶತ್ರುವಾದ ಕರ್ಣ (ವಿನಾ ಎಂದರೆ ಗುರುತ್ಮತಾ ಜಿತಃ ಎಂದರೆ ಇಂದ್ರ ತಸ್ಯ ಆತ್ಮ ಭವಃ ಅಂದರೆ ಅರ್ಜುನಃ ತಸ್ಯ ದ್ವೇಷೀ ಅಂದರೆ ಕರ್ಣಃ) ಎಂಬ ಸಮಸ್ತಪದವನ್ನು ಕ್ಲಿಷ್ಟಪದಗಳ ಪ್ರಯೋಗಕ್ಕೆ ಉದಾಹರಿಸುತ್ತಾರೆ. ↩︎

  20. ಅಹಂ ಕರ್ತೇತಿ ಚಾಪ್ಯನ್ಯೋ (ಭಾರತ ದರ್ಶನ). ↩︎

  21. ಕಲೆಗಳು ಒಟ್ಟು ಹದಿನಾರು. ಪ್ರಾಣ, ಶ್ರದ್ಧೆ, ಆಕಾಶ, ವಾಯು, ತೇಜಸ್ಸು, ಜಲ, ಪೃಥ್ವೀ, ಇಂದ್ರಿಯ, ಮನಸ್ಸು, ಅನ್ನ, ವೀರ್ಯ, ತಪಸ್ಸು, ಮಂತ್ರ, ಕರ್ಮ, ಲೋಕ ಮತ್ತು ನಾಮ _ ಈ ಹದಿನಾರು ಮನುಷ್ಯನ ರಚನೆಯಲ್ಲಿ ಸೇರಿಕೊಳ್ಳುವ ಕಲೆಗಳು ಅಥವಾ ಉಪಾಧಿಗಳು. ↩︎

  22. ಪ್ರಕೃತಿರ್ವ್ಯಕ್ತಿರಿತ್ಯೇತೌ (ಭಾರತ ದರ್ಶನ). ↩︎

  23. ಧರ್ಮ, ಅರ್ಥ, ಕಾಮ, ಧರ್ಮಾರ್ಥ, ಧರ್ಮ-ಕಾಮ, ಕಾಮಾರ್ಥ, ಧರ್ಮಾರ್ಥಕಾಮಗಳು ಎಂಬುದಾಗಿ. ↩︎

  24. ಇದರ ನಂತರ ತೃಣಾಗ್ನಿಜ್ವಲನಪ್ರಖ್ಯಂ ಫೇನಬುದ್ಬುದಸನ್ನಿಭಮ್। ಎಂಬ ಶ್ಲೋಕಾರ್ಧವು ಇದೆ (ಭಾರತ ದರ್ಶನ). ↩︎

  25. ಪ್ರಭು ಶಕ್ತಿ, ಉತ್ಸಾಹ ಶಕ್ತಿ ಮತ್ತು ಮಂತ್ರ ಶಕ್ತಿ. ↩︎