302: ಯಾಜ್ಞವಲ್ಕ್ಯಜನಕಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 302

ಸಾರ

ಸಾತ್ತ್ವಿಕ-ರಾಜಸ-ತಾಮಸ ಪ್ರಕೃತಿಯ ಜನರು ಹೊಂದುವ ಗತಿ (1-12); ಜನಕನ ಪ್ರಶ್ನೆ (13-18).

12302001 ಯಾಜ್ಞವಲ್ಕ್ಯ ಉವಾಚ।
12302001a ಏತೇ ಪ್ರಧಾನಸ್ಯ ಗುಣಾಸ್ತ್ರಯಃ ಪುರುಷಸತ್ತಮ।
12302001c ಕೃತ್ಸ್ನಸ್ಯ ಚೈವ ಜಗತಸ್ತಿಷ್ಠಂತ್ಯನಪಗಾಃ ಸದಾ।।

ಯಾಜ್ಞವಲ್ಕ್ಯನು ಹೇಳಿದನು: “ಪುರುಷಸತ್ತಮ! ಈ ಮೂರು ಪ್ರಕೃತಿಯ ಗುಣಗಳಾಗಿವೆ. ಈ ಗುಣಗಳು ಸಂಪೂರ್ಣಜಗತ್ತನ್ನೂ ವ್ಯಾಪಿಸಿಕೊಂಡಿವೆ. ಯಾವಾಗಲೂ ಈ ಗುಣಗಳು ಜಗತ್ತನ್ನು ಬಿಟ್ಟುಹೋಗುವುದೇ ಇಲ್ಲ.

112302002a ಶತಧಾ ಸಹಸ್ರಧಾ ಚೈವ ತಥಾ ಶತಸಹಸ್ರಧಾ।
12302002c ಕೋಟಿಶಶ್ಚ ಕರೋತ್ಯೇಷ ಪ್ರತ್ಯಗಾತ್ಮಾನಮಾತ್ಮನಾ।।

ಅವ್ಯಕ್ತನು ಪ್ರಕೃತಿಯ ಸಾಹಚರ್ಯದಿಂದ ನೂರಾರು, ಸಾವಿರಾರು, ಲಕ್ಷೋಪಲಕ್ಷ, ಕೋಟ್ಯಾನುಕೋಟಿ ರೂಪಗಳನ್ನು ತನ್ನಿಂದಲೇ ಪ್ರಕಟಪಡಿಸಿಕೊಳ್ಳುತ್ತಾನೆ.

12302003a ಸಾತ್ತ್ವಿಕಸ್ಯೋತ್ತಮಂ ಸ್ಥಾನಂ ರಾಜಸಸ್ಯೇಹ ಮಧ್ಯಮಮ್।
12302003c ತಾಮಸಸ್ಯಾಧಮಂ ಸ್ಥಾನಂ ಪ್ರಾಹುರಧ್ಯಾತ್ಮಚಿಂತಕಾಃ।।

ಆಧ್ಯಾತ್ಮಚಿಂತಕರು ಸಾತ್ತ್ವಿಕನು ಉತ್ತಮನೆಂದೂ, ರಾಜಸನು ಮಧ್ಯಮನೆಂದೂ ಮತ್ತು ತಾಮಸನು ಅಧಮನೆಂದೂ ಹೇಳುತ್ತಾರೆ.

12302004a ಕೇವಲೇನೇಹ ಪುಣ್ಯೇನ ಗತಿಮೂರ್ಧ್ವಾಮವಾಪ್ನುಯಾತ್।
12302004c ಪುಣ್ಯಪಾಪೇನ ಮಾನುಷ್ಯಮಧರ್ಮೇಣಾಪ್ಯಧೋಗತಿಮ್।।

ಕೇವಲ ಪುಣ್ಯಕಾರ್ಯಗಳಿಂದಲೇ ಜೀವವು ಮೇಲಿನ ಲೋಕವನ್ನು ಪಡೆದುಕೊಳ್ಳುತ್ತದೆ. ಪುಣ್ಯ ಮತ್ತು ಪಾಪಕರ್ಮಗಳೆರಡನ್ನೂ ಮಾಡುವುದರಿಂದ ಮಾನುಷ್ಯಲೋಕವನ್ನು ಪಡೆದುಕೊಳ್ಳುತ್ತದೆ. ಅಧರ್ಮದಿಂದ ಅಧೋಗತಿಯನ್ನು ಪಡೆದುಕೊಳ್ಳುತ್ತದೆ.

12302005a ದ್ವಂದ್ವಮೇಷಾಂ ತ್ರಯಾಣಾಂ ತು ಸಂನಿಪಾತಂ ಚ ತತ್ತ್ವತಃ।
12302005c ಸತ್ತ್ವಸ್ಯ ರಜಸಶ್ಚೈವ ತಮಸಶ್ಚ ಶೃಣುಷ್ವ ಮೇ।।

ಸತ್ತ್ವ, ರಜಸ್ಸು, ತಮೋಗುಣ ಈ ಮೂರರ ದ್ವಂದ್ವ ಮತ್ತು ಸಂನಿಪಾತಗಳ ಪರಿಣಾಮಗಳನ್ನು ಯಥಾವತ್ತಾಗಿ ಹೇಳುತ್ತೇನೆ. ಕೇಳು.

12302006a ಸತ್ತ್ವಸ್ಯ ತು ರಜೋ ದೃಷ್ಟಂ ರಜಸಶ್ಚ ತಮಸ್ತಥಾ।
12302006c ತಮಸಶ್ಚ ತಥಾ ಸತ್ತ್ವಂ ಸತ್ತ್ವಸ್ಯಾವ್ಯಕ್ತಮೇವ ಚ।।

ಸತ್ತ್ವದೊಂದಿಗೆ ರಜೋಗುಣವು ಸೇರಿರುವುದು, ರಜೋಗುಣದೊಂದಿಗೆ ತಮೋಗುಣವು ಸೇರಿರುವುದು ಮತ್ತು ತಮೋಗುಣದೊಂದಿಗೆ ಸತ್ತ್ವಗುಣವು ಸೇರಿರುವುದು ಕಂಡುಬರುತ್ತದೆ. ಅವ್ಯಕ್ತವು ಕೇವಲ ಸತ್ತ್ವದೊಂದಿಗೆ ಸೇರಿರುವುದೂ ಕಂಡುಬರುತ್ತದೆ.

12302007a ಅವ್ಯಕ್ತಸತ್ತ್ವಸಂಯುಕ್ತೋ ದೇವಲೋಕಮವಾಪ್ನುಯಾತ್।
12302007c ರಜಃಸತ್ತ್ವಸಮಾಯುಕ್ತೋ ಮನುಷ್ಯೇಷೂಪಪದ್ಯತೇ।।

ಅವ್ಯಕ್ತ-ಸತ್ತ್ವ ಸಂಯುಕ್ತನಾದ ಜೀವವು ದೇವಲೋಕವನ್ನು ಪಡೆದುಕೊಳ್ಳುತ್ತದೆ. ರಜಸ್ಸು ಮತ್ತು ಸತ್ತ್ವ ಸಮಾಯುಕ್ತ ಜೀವವು ಮನುಷ್ಯಲೋಕವನ್ನು ಪಡೆದುಕೊಳ್ಳುತ್ತದೆ.

12302008a ರಜಸ್ತಮೋಭ್ಯಾಂ ಸಂಯುಕ್ತಸ್ತಿರ್ಯಗ್ಯೋನಿಷು ಜಾಯತೇ।
12302008c ರಜಸ್ತಾಮಸಸತ್ತ್ವೈಶ್ಚ ಯುಕ್ತೋ ಮಾನುಷ್ಯಮಾಪ್ನುಯಾತ್।।

ರಜೋಗುಣ ಮತ್ತು ತಮೋಗುಣಗಳ ಸಂಯುಕ್ತ ಜೀವವು ಕೀಳಯೋನಿಯನ್ನು ಪಡೆದುಕೊಳ್ಳುತ್ತದೆ. ರಜೋಗುಣ-ತಮೋಗುಣ ಮತ್ತು ಸತ್ತ್ವಗುಣ ಯುಕ್ತವಾದ ಜೀವವು ಮಾನುಷ್ಯಲೋಕವನ್ನು ಪಡೆದುಕೊಳ್ಳುತ್ತದೆ.

12302009a ಪುಣ್ಯಪಾಪವಿಯುಕ್ತಾನಾಂ ಸ್ಥಾನಮಾಹುರ್ಮನೀಷಿಣಾಮ್।
12302009c ಶಾಶ್ವತಂ ಚಾವ್ಯಯಂ ಚೈವ ಅಕ್ಷರಂ ಚಾಭಯಂ ಚ ಯತ್।।

ಪುಣ್ಯ-ಪಾಪಗಳಿಂದ ಮುಕ್ತರಾದವರು ಶಾಶ್ವತವೂ, ಅವ್ಯಯವೂ ಮತ್ತು ಅಕ್ಷರವೂ ಆದ ಅಭಯವನ್ನು ಪಡೆದುಕೊಳ್ಳುತ್ತಾರೆ ಎಂದು ತಿಳಿದವರು ಹೇಳುತ್ತಾರೆ.

12302010a ಜ್ಞಾನಿನಾಂ ಸಂಭವಂ ಶ್ರೇಷ್ಠಂ ಸ್ಥಾನಮವ್ರಣಮಚ್ಯುತಮ್।
12302010c ಅತೀಂದ್ರಿಯಮಬೀಜಂ ಚ ಜನ್ಮಮೃತ್ಯುತಮೋನುದಮ್।।

ಜ್ಞಾನಿಗಳಿಗೆ ಅವಿನಾಶಿಯಾದ, ಚ್ಯುತವಾಗದ, ಇಂದ್ರಿಯಾತೀತವಾದ, ಪಾಪ-ಪುಣ್ಯಗಳಿಗೆ ಅವಕಾಶವೇ ಇಲ್ಲದ, ಹುಟ್ಟು-ಸಾವುಗಳನ್ನೂ ಅಜ್ಞಾನವನ್ನೂ ತೊಡೆದುಹಾಕುವ ಶ್ರೇಷ್ಠ ಪರಮ ಪದವು ಪ್ರಾಪ್ತವಾಗುತ್ತದೆ.

12302011a ಅವ್ಯಕ್ತಸ್ಥಂ ಪರಂ ಯತ್ತತ್ ಪೃಷ್ಟಸ್ತೇಽಹಂ ನರಾಧಿಪ।
12302011c ಸ ಏಷ ಪ್ರಕೃತಿಷ್ಠೋ ಹಿ ತಸ್ಥುರಿತ್ಯಭಿಧೀಯತೇ।।

ನರಾಧಿಪ! ಅವ್ಯಕ್ತಸ್ಥನಾದ ಪರಮಾತ್ಮನ ಕುರಿತು ನೀನು ಹೇಳಿದುದಕ್ಕೆ ಉತ್ತರವು ಇದಾಗಿದೆ. ಅವನೇ ಶರೀರದಲ್ಲಿರುವುದರಿಂದ ಅವನನ್ನು ಪ್ರಕೃತಿಸ್ಥನೆಂದೂ ಕರೆಯುತ್ತಾರೆ.

12302012a ಅಚೇತನಶ್ಚೈಷ ಮತಃ ಪ್ರಕೃತಿಸ್ಥಶ್ಚ ಪಾರ್ಥಿವ।
12302012c ಏತೇನಾಧಿಷ್ಠಿತಶ್ಚೈವ ಸೃಜತೇ ಸಂಹರತ್ಯಪಿ।।

ಪಾರ್ಥಿವ! ಅಚೇತನ ಅಥವಾ ಜಡವಾಗಿದ್ದರೂ ಪ್ರಕೃತಿಯು ಅವ್ಯಕ್ತ ಪರಮಾತ್ಮನಿಂದ ಆಶ್ರಯಿಸಲ್ಪಟ್ಟಿರುವುದರಿಂದ ಸೃಷ್ಟಿ-ಸಂಹಾರ ಕಾರ್ಯಗಳನ್ನು ಮಾಡುತ್ತದೆ.”

12302013 ಜನಕ ಉವಾಚ।
12302013a ಅನಾದಿನಿಧನಾವೇತಾವುಭಾವೇವ ಮಹಾಮುನೇ।
12302013c ಅಮೂರ್ತಿಮಂತಾವಚಲಾವಪ್ರಕಂಪ್ಯೌ ಚ ನಿರ್ವ್ರಣೌ2।।

ಜನಕನು ಹೇಳಿದನು: “ಮಹಾಮುನೇ! ಪ್ರಕೃತಿ-ಪುರುಷರಿಬ್ಬರೂ ಅನಾದಿನಿಧನರು. ಅಮೂರ್ತರು. ಅಚಲರು. ತಮ್ಮ ತಮ್ಮ ಗುಣಗಳಲ್ಲಿ ಸ್ಥಿರವಾಗಿರತಕ್ಕವರು ಮತ್ತು ನಿರ್ಗುಣರು.

12302014a ಅಗ್ರಾಹ್ಯಾವೃಷಿಶಾರ್ದೂಲ ಕಥಮೇಕೋ ಹ್ಯಚೇತನಃ।
12302014c ಚೇತನಾವಾಂಸ್ತಥಾ ಚೈಕಃ ಕ್ಷೇತ್ರಜ್ಞ ಇತಿ ಭಾಷಿತಃ।।

ಋಷಿಶಾರ್ದೂಲ! ಅವರು ಬುದ್ಧಿಗೆ ಅಗೋಚರರು. ಹೀಗಿರುವಾಗ ಅವುಗಳಲ್ಲಿ ಒಂದೇ ಹೇಗೆ ಜಡವಾಯಿತು? ಮತ್ತೊಂದು ಚೇತನವುಳ್ಳದ್ದು ಹೇಗಾಯಿತು? ಮತ್ತು ಅದನ್ನು ಕ್ಷೇತ್ರಜ್ಞ ಎಂದು ಏಕೆ ಕರೆಯುತ್ತಾರೆ?

12302015a ತ್ವಂ ಹಿ ವಿಪ್ರೇಂದ್ರ ಕಾರ್ತ್ಸ್ನ್ಯೇನ ಮೋಕ್ಷಧರ್ಮಮುಪಾಸಸೇ।
12302015c ಸಾಕಲ್ಯಂ ಮೋಕ್ಷಧರ್ಮಸ್ಯ ಶ್ರೋತುಮಿಚ್ಚಾಮಿ ತತ್ತ್ವತಃ।।

ವಿಪ್ರೇಂದ್ರ! ನೀನು ಸಂಪೂರ್ಣವಾಗಿ ಮೋಕ್ಷಧರ್ಮವನ್ನು ಉಪಾಸಿಸುತ್ತೀದ್ದೀಯೆ. ಆದುದರಿಂದ ಸಂಪೂರ್ಣ ಮೋಕ್ಷಧರ್ಮವನ್ನು ತತ್ತ್ವತಃ ನಿನ್ನಿಂದ ಕೇಳಬೇಕೆಂದಿದ್ದೇನೆ.

12302016a ಅಸ್ತಿತ್ವಂ ಕೇವಲತ್ವಂ ಚ ವಿನಾಭಾವಂ ತಥೈವ ಚ।
12302016c ತಥೈವೋತ್ಕ್ರಮಣಸ್ಥಾನಂ ದೇಹಿನೋಽಪಿ ವಿಯುಜ್ಯತಃ।।
12302017a ಕಾಲೇನ ಯದ್ಧಿ ಪ್ರಾಪ್ನೋತಿ ಸ್ಥಾನಂ ತದ್ಬ್ರೂಹಿ ಮೇ ದ್ವಿಜ।

ಪುರುಷನ ಅಸ್ತಿತ್ವ, ಕೇವಲತ್ವ, ಪ್ರಕೃತಿಯೊಂದಿಗೆ ಸಂಬಂಧವಿಲ್ಲದೇ ಇರುವಿಕೆ ಮತ್ತು ಮರಣಹೊಂದುತ್ತಿರುವ ದೇಹಿಯ ಉತ್ಕ್ರಮಣಸ್ಥಾನವು ಯಾವುದು ಮತ್ತು ದ್ವಿಜ! ಮರಣಾನಂತರ ಅವನು ಯಾವ ಸ್ಥಾನವನ್ನು ಪಡೆದುಕೊಳ್ಳುತ್ತಾನೆ ಎನ್ನುವುದನ್ನೂ ನೀನು ನನಗೆ ಹೇಳು.

12302017c ಸಾಂಖ್ಯಜ್ಞಾನಂ ಚ ತತ್ತ್ವೇನ ಪೃಥಗ್ಯೋಗಂ ತಥೈವ ಚ।।
12302018a ಅರಿಷ್ಟಾನಿ ಚ ತತ್ತ್ವೇನ ವಕ್ತುಮರ್ಹಸಿ ಸತ್ತಮ।
12302018c ವಿದಿತಂ ಸರ್ವಮೇತತ್ತೇ ಪಾಣಾವಾಮಲಕಂ ಯಥಾ।।

ಸತ್ತಮ! ಸಾಂಖ್ಯಜ್ಞಾನವನ್ನು ಮತ್ತು ಪ್ರತ್ಯೇಕವಾಗಿ ಯೋಗಜ್ಞಾನವನ್ನೂ, ಮೃತ್ಯುಸೂಚಕ ಲಕ್ಷಣಗಳನ್ನೂ ತತ್ತ್ವಪೂರ್ವಕವಾಗಿ ಹೇಳಬೇಕು. ಅಂಗೈಯಲ್ಲಿರುವ ನೆಲ್ಲೀಕಾಯಿಯಂತೆ ನಿನಗೆ ಈ ವಿಷಯಗಳೆಲ್ಲವೂ ಸಂಪೂರ್ಣವಾಗಿ ತಿಳಿದಿವೆ.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಯಾಜ್ಞವಲ್ಕ್ಯಜನಕಸಂವಾದೇ ದ್ವಾಧಿಕತ್ರಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಯಾಜ್ಞವಲ್ಕ್ಯಜನಕಸಂವಾದ ಎನ್ನುವ ಮುನ್ನೂರಾಎರಡನೇ ಅಧ್ಯಾಯವು.

  1. ಇದಕ್ಕೆ ಮೊದಲು ಭಾರತ ದರ್ಶನದಲ್ಲಿ ಈ ಒಂದು ಶ್ಲೋಕಾರ್ಧವಿದೆ: ಅವ್ಯಕ್ತರೂಪೋ ಭಗವಾನ್ ಶತಧಾ ಚ ಸಹಸ್ರಧಾ। ↩︎

  2. ಅಮೂರ್ತಿಮಂತಾವಚಲಾವಪ್ರಕಂಪ್ಯಗುಣಾಗುಣೌ। (ಭಾರತ ದರ್ಶನ). ↩︎