300: ಯಾಜ್ಞವಲ್ಕ್ಯಜನಕಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 300

ಸಾರ

ಸಂಹಾರಕ್ರಮದ ವರ್ಣನೆ (1-17).

12300001 ಯಾಜ್ಞವಲ್ಕ್ಯ ಉವಾಚ।
12300001a ತತ್ತ್ವಾನಾಂ ಸರ್ಗಸಂಖ್ಯಾ ಚ ಕಾಲಸಂಖ್ಯಾ ತಥೈವ ಚ।
12300001c ಮಯಾ ಪ್ರೋಕ್ತಾನುಪೂರ್ವ್ಯೇಣ ಸಂಹಾರಮಪಿ ಮೇ ಶೃಣು।।

ಯಾಜ್ಞವಲ್ಕ್ಯನು ಹೇಳಿದನು: “ಇದೂವರೆಗೆ ನಾನು ತತ್ತ್ವಗಳ ಸೃಷ್ಟಿಸಂಖ್ಯೆಗಳನ್ನೂ ಕಾಲಸಂಖ್ಯೆಗಳನ್ನೂ ಅನುಕ್ರಮವಾಗಿ ಹೇಳಿದ್ದೇನೆ. ಈಗ ಸಂಹಾರಕ್ರಮದ ಕುರಿತು ಕೇಳು.

12300002a ಯಥಾ ಸಂಹರತೇ ಜಂತೂನ್ಸಸರ್ಜ ಚ ಪುನಃ ಪುನಃ।
12300002c ಅನಾದಿನಿಧನೋ ಬ್ರಹ್ಮಾ ನಿತ್ಯಶ್ಚಾಕ್ಷರ ಏವ ಚ।।

ನಿತ್ಯ, ಅಕ್ಷರ, ಅನಾದಿನಿಧನ ಬ್ರಹ್ಮನು ಪುನಃ ಪುನಃ ಹೇಗೆ ಜಂತುಗಳನ್ನು ಸೃಷ್ಟಿಸುತ್ತಾನೆ ಮತ್ತು ಸಂಹರಿಸುತ್ತಾನೆ ಎನ್ನುವುದನ್ನೂ ಕೇಳು.

12300003a ಅಹಃಕ್ಷಯಮಥೋ ಬುದ್ಧ್ವಾ ನಿಶಿ ಸ್ವಪ್ನಮನಾಸ್ತಥಾ।
12300003c ಚೋದಯಾಮಾಸ ಭಗವಾನವ್ಯಕ್ತೋಽಹಂಕೃತಂ ನರಮ್।।

ಭಗವಾನ್ ಅವ್ಯಕ್ತನು ಹಗಲು ಕಳೆಯಿತೆಂದು ತಿಳಿದು ರಾತ್ರಿ ಮಲಗಬೇಕೆಂದು ಮನಸ್ಸುಮಾಡಿ ಅಹಂಕಾರಕೃತ ನರನನ್ನು ಪ್ರಚೋದಿಸುತ್ತಾನೆ.

12300004a ತತಃ ಶತಸಹಸ್ರಾಂಶುರವ್ಯಕ್ತೇನಾಭಿಚೋದಿತಃ।
12300004c ಕೃತ್ವಾ ದ್ವಾದಶಧಾತ್ಮಾನಮಾದಿತ್ಯೋ ಜ್ವಲದಗ್ನಿವತ್।।

ಅನಂತರ ಅವ್ಯಕ್ತನಿಂದ ಪ್ರಚೋದಿತನಾಗಿ ಅಹಂಕಾರನು ಶತಸಹಸ್ರಾಂಶು ಸೂರ್ಯನಾಗಿ ತನ್ನನ್ನು ಹನ್ನೆರಡು ರೂಪಗಳನ್ನಾಗಿ ವಿಭಾಗಿಸಿಕೊಂಡು ಅಗ್ನಿಯೋಪಾದಿಯಲ್ಲಿ ಪ್ರಜ್ವಲಿಸುತ್ತಾನೆ.

12300005a ಚತುರ್ವಿಧಂ ಪ್ರಜಾಜಾಲಂ ನಿರ್ದಹತ್ಯಾಶು ತೇಜಸಾ।
12300005c ಜರಾಯ್ವಂಡಸ್ವೇದಜಾತಮುದ್ಭಿಜ್ಜಂ ಚ ನರಾಧಿಪ।।

ನರಾಧಿಪ! ಅವನು ತನ್ನ ಪ್ರಖರ ತೇಜಸ್ಸಿನಿಂದ ಜರಾಯುಜ, ಅಂಡಜ, ಸ್ವೇದಜ ಮತ್ತು ಉದ್ಭಿಜ್ಜಗಳೆಂಬ ನಾಲ್ಕು ಪ್ರಕಾರದ ಜೀವಗಳನ್ನೂ ಭಸ್ಮಮಾಡುತ್ತಾನೆ.

12300006a ಏತದುನ್ಮೇಷಮಾತ್ರೇಣ ವಿನಿಷ್ಟಂ ಸ್ಥಾಣುಜಂಗಮಮ್।
12300006c ಕೂರ್ಮಪೃಷ್ಠಸಮಾ ಭೂಮಿರ್ಭವತ್ಯಥ ಸಮಂತತಃ।।

ಕಣ್ಣುಮುಚ್ಚಿ ತೆಗೆಯುವುದರೊಳಗೆ ಸ್ಥಾವರ-ಜಂಗಮಗಳೆಲ್ಲವೂ ನಾಶಹೊಂದಿ ಭೂಮಿಯು ಸುತ್ತಲೂ ಆಮೆಯ ಬೆನ್ನಿನಂತೆ ಕಾಣುತ್ತದೆ.

12300007a ಜಗದ್ದಗ್ಧ್ವಾಮಿತಬಲಃ ಕೇವಲಂ ಜಗತೀಂ ತತಃ।
12300007c ಅಂಭಸಾ ಬಲಿನಾ ಕ್ಷಿಪ್ರಮಾಪೂರ್ಯತ ಸಮಂತತಃ।।

ಆ ಅಮಿತಬಲಶಾಲಿಯು ಜಗತ್ತನ್ನು ಭಸ್ಮಮಾಡಿ ಉಳಿದ ಕೇವಲ ಭೂಮಿಯನ್ನು ಪ್ರಬಲವಾದ ನೀರಿನ ಪ್ರವಾಹದಿಂದ ಬೇಗನೇ ಎಲ್ಲಕಡೆಗಳಿಂದ ತುಂಬುತ್ತಾನೆ.

12300008a ತತಃ ಕಾಲಾಗ್ನಿಮಾಸಾದ್ಯ ತದಂಭೋ ಯಾತಿ ಸಂಕ್ಷಯಮ್।
12300008c ವಿನಷ್ಟೇಽಂಭಸಿ ರಾಜೇಂದ್ರ ಜಾಜ್ವಲೀತ್ಯನಲೋ ಮಹಾನ್।।

ರಾಜೇಂದ್ರ! ಅನಂತರ ಕಾಲಾಗ್ನಿಗೆ ಸಿಲುಕಿ ನೀರು ಬತ್ತಿಹೋಗುತ್ತದೆ. ನೀರು ನಷ್ಟವಾದ ನಂತರ ಆ ಮಹಾ ಅನಲನು ಪ್ರಜ್ವಲಿಸುತ್ತಾನೆ.

12300009a ತಮಪ್ರಮೇಯೋಽತಿಬಲಂ ಜ್ವಲಮಾನಂ ವಿಭಾವಸುಮ್।
12300009c ಊಷ್ಮಾಣಂ ಸರ್ವಭೂತಾನಾಂ ಸಪ್ತಾರ್ಚಿಷಮಥಾಂಜಸಾ।।
12300010a ಭಕ್ಷಯಾಮಾಸ ಬಲವಾನ್ವಾಯುರಷ್ಟಾತ್ಮಕೋ ಬಲೀ।
12300010c ವಿಚರನ್ನಮಿತಪ್ರಾಣಸ್ತಿರ್ಯಗೂರ್ಧ್ವಮಧಸ್ತಥಾ।।

ಸರ್ವಭೂತಗಳಿಗೂ ಶಾಖವನ್ನುಂಟುಮಾಡುವ ಮಹಾಬಲ ಧಗ-ಧಗಿಸುತ್ತಿರುವ ಏಳು ವಿಧದ ಜ್ವಾಲೆಗಳಿಂದ ಕೂಡಿದ ಅಗ್ನಿಯನ್ನು ಅಪ್ರಮೇಯ ಮಹಾಬಲಿಷ್ಠ ಭಗವಾನ್ ವಾಯುವು ಎಂಟು ವಿಧದ ರೂಪಗಳನ್ನು ಧರಿಸಿ ಮೇಲೆ-ಕೆಳಗೆ ಮತ್ತು ಅಡ್ಡಡ್ಡವಾಗಿ ರಭಸದಿಂದ ಬೀಸುತ್ತಾ ಭಕ್ಷಿಸಿಬಿಡುತ್ತಾನೆ.

12300011a ತಮಪ್ರತಿಬಲಂ ಭೀಮಮಾಕಾಶಂ ಗ್ರಸತೇಽತ್ಮನಾ।
12300011c ಆಕಾಶಮಪ್ಯತಿನದನ್ಮನೋ ಗ್ರಸತಿ ಚಾರಿಕಮ್।।

ಆ ಅಪ್ರತಿಮ ಬಲಶಾಲೀ ಭಯಂಕರ ವಾಯುವನ್ನು ಆಕಾಶವು ನುಂಗಿಬಿಡುತ್ತದೆ. ಗರ್ಜನ-ತರ್ಜನಗಳನ್ನು ಮಾಡುವ ಆಕಾಶವನ್ನು ಅದಕ್ಕಿಂತಲೂ ಅಧಿಕ ಬಲಶಾಲಿಯಾದ ಮನಸ್ಸು ನುಂಗಿಬಿಡುತ್ತದೆ.

12300012a ಮನೋ ಗ್ರಸತಿ ಸರ್ವಾತ್ಮಾ ಸೋಽಹಂಕಾರಃ ಪ್ರಜಾಪತಿಃ।
12300012c ಅಹಂಕಾರಂ ಮಹಾನಾತ್ಮಾ ಭೂತಭವ್ಯಭವಿಷ್ಯವಿತ್।।

ಸರ್ವಾತ್ಮಾ ಪ್ರಜಾಪತಿ ಅಹಂಕಾರವು ಮನಸ್ಸನ್ನು ನುಂಗುತ್ತದೆ. ಅನಂತರ ಭೂತ-ಭವ್ಯ-ಭವಿಷ್ಯತ್ತುಗಳನ್ನು ತಿಳಿದಿರುವ ಮಹಾನ್ ಆತ್ಮವು ಅಹಂಕಾರವನ್ನು ನುಂಗುತ್ತದೆ.

12300013a ತಮಪ್ಯನುಪಮಾತ್ಮಾನಂ ವಿಶ್ವಂ ಶಂಭುಃ ಪ್ರಜಾಪತಿಃ।
12300013c ಅಣಿಮಾ ಲಘಿಮಾ ಪ್ರಾಪ್ತಿರೀಶಾನೋ ಜ್ಯೋತಿರವ್ಯಯಃ।।
12300014a ಸರ್ವತಃಪಾಣಿಪಾದಾಂತಃ ಸರ್ವತೋಕ್ಷಿಶಿರೋಮುಖಃ।
12300014c ಸರ್ವತಃಶ್ರುತಿಮಾಽಲ್ಲೋಕೇ ಸರ್ವಮಾವೃತ್ಯ ತಿಷ್ಠತಿ।।
12300015a ಹೃದಯಂ ಸರ್ವಭೂತಾನಾಂ ಪರ್ವಣೋಽಂಗುಷ್ಠಮಾತ್ರಕಃ।
12300015c ಅನುಗ್ರಸತ್ಯನಂತಂ ಹಿ ಮಹಾತ್ಮಾ ವಿಶ್ವಮೀಶ್ವರಃ।।

ಅನಂತರ ಎಲ್ಲಕಡೆಗಳಲ್ಲಿಯೂ ಕೈ-ಕಾಲು-ಕಣ್ಣು-ಶಿರಸ್ಸು-ಮುಖ-ಕಿವಿಗಳಿರುವ, ಸಮಸ್ತಲೋಕಗಳನ್ನೂ ಆವರಿಸಿ ನಿಂತಿರುವ, ಅಂಗುಷ್ಠದ ಗಿಣ್ಣಿನಷ್ಟು ಮಾತ್ರವೇ ಆಕಾರದಲ್ಲಿ ಎಲ್ಲ ಪ್ರಾಣಿಗಳ ಹೃದಯಗಳಲ್ಲಿಯೂ ವಿರಾಜಮಾನನಾಗಿರುವ, ಅಣಿಮ-ಲಘಿಮಾ-ಪ್ರಾಪ್ತಿ ಮೊದಲಾದ ಅಷ್ಟೈಶ್ವರ್ಯಗಳಿಗೆ ಒಡೆಯನಾಗಿರುವ, ಜ್ಯೋತಿ, ಅವ್ಯಯ ಮಹಾತ್ಮ ವಿಶ್ವದ ಈಶ್ವರನು ಅನಂತ ಮಹತ್ತತ್ತ್ವವನ್ನು ನುಂಗುತ್ತಾನೆ.

12300016a ತತಃ ಸಮಭವತ್ಸರ್ವಮಕ್ಷಯಾವ್ಯಯಮವ್ರಣಮ್।
12300016c ಭೂತಭವ್ಯಮನುಷ್ಯಾಣಾಂ1 ಸ್ರಷ್ಟಾರಮನಘಂ ತಥಾ।।

ಆಗ ಅಕ್ಷಯ ಅವ್ಯಯ ನಿರ್ವಿಕಾರ ಪರಮಾತ್ಮನ ಸ್ವರೂಪವೇ ಎಲ್ಲವೂ ಆಗುತ್ತವೆ. ಅವನಿಂದಲೇ ಭೂತ-ಭವ್ಯ-ಮನುಷ್ಯರ ಸ್ರಷ್ಟಾರ ಅನಘನ ಸೃಷ್ಟಿಯೂ ಆಗುತ್ತದೆ.

12300017a ಏಷೋಽಪ್ಯಯಸ್ತೇ ರಾಜೇಂದ್ರ ಯಥಾವತ್ಪರಿಭಾಷಿತಃ।
12300017c ಅಧ್ಯಾತ್ಮಮಧಿಭೂತಂ ಚ ಅಧಿದೈವಂ ಚ ಶ್ರೂಯತಾಮ್।।

ರಾಜೇಂದ್ರ! ಹೀಗೆ ನಾನು ಸಂಹಾರಕ್ರಮವನ್ನು ಯಥಾವತ್ತಾಗಿ ಹೇಳಿದ್ದೇನೆ. ಮುಂದೆ ನೀನು ಅಧ್ಯಾತ್ಮ, ಅಧಿಭೂತ ಮತ್ತು ಅಧಿದೈವಗಳ ಕುರಿತು ಕೇಳು.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಯಾಜ್ಞವಲ್ಕ್ಯಜನಕಸಂವಾದೇ ತ್ರಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಯಾಜ್ಞವಲ್ಕ್ಯಜನಕಸಂವಾದ ಎನ್ನುವ ಮುನ್ನೂರನೇ ಅಧ್ಯಾಯವು.

  1. ಭೂತಭವ್ಯಭವಿಷ್ಯಾಣಾಂ (ಭಾರತ ದರ್ಶನ). ↩︎