298: ಯಾಜ್ಞವಲ್ಕ್ಯಜನಕಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 298

ಸಾರ

ಜನಕನಿಗೆ ಯಾಜ್ಞವಲ್ಕ್ಯನ ಉಪದೇಶ (1-9); ಇಪ್ಪತ್ನಾಲ್ಕು ತತ್ತ್ವಗಳ ಮತ್ತು ಒಂಭತ್ತು ಸೃಷ್ಟಿಗಳ ನಿರೂಪಣೆ (10-26).

12298001 ಯುಧಿಷ್ಠಿರ ಉವಾಚ।
12298001a ಧರ್ಮಾಧರ್ಮವಿಮುಕ್ತಂ ಯದ್ವಿಮುಕ್ತಂ ಸರ್ವಸಂಶ್ರಯಾತ್।
12298001c ಜನ್ಮಮೃತ್ಯುವಿಮುಕ್ತಂ ಚ ವಿಮುಕ್ತಂ ಪುಣ್ಯಪಾಪಯೋಃ।।
12298002a ಯಚ್ಚಿವಂ ನಿತ್ಯಮಭಯಂ ನಿತ್ಯಂ ಚಾಕ್ಷರಮವ್ಯಯಮ್।
12298002c ಶುಚಿ ನಿತ್ಯಮನಾಯಾಸಂ ತದ್ಭವಾನ್ವಕ್ತುಮರ್ಹತಿ।।

ಯುಧಿಷ್ಠಿರನು ಹೇಳಿದನು: “ಯಾವುದು ಧರ್ಮಾಧರ್ಮಗಳಿಂದಲೂ, ಸರ್ವ ಸಂಶಯಗಳಿಂದಲೂ, ಜನ್ಮ-ಮೃತ್ಯುಗಳಿಂದಲೂ, ಪುಣ್ಯ-ಪಾಪಗಳಿಂದಲೂ ವಿಮುಕ್ತವಾಗಿರುವುದೋ ಮತ್ತು ಯಾವುದು ನಿತ್ಯವೂ, ಅಭಯವೂ, ಮಂಗಳವೂ, ಅಕ್ಷರವೂ, ಅವ್ಯಯವೂ, ಪವಿತ್ರವೂ, ಕ್ಲೇಶರಹಿತವೂ ಆಗಿರುವುದೋ ಆ ಪರಮತತ್ತ್ವದ ಕುರಿತು ನನಗೆ ಹೇಳಬೇಕು.”

12298003 ಭೀಷ್ಮ ಉವಾಚ।
12298003a ಅತ್ರ ತೇ ವರ್ತಯಿಷ್ಯೇಽಹಮಿತಿಹಾಸಂ ಪುರಾತನಮ್।
12298003c ಯಾಜ್ಞವಲ್ಕ್ಯಸ್ಯ ಸಂವಾದಂ ಜನಕಸ್ಯ ಚ ಭಾರತ।।

ಭೀಷ್ಮನು ಹೇಳಿದನು: “ಭಾರತ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಯಾಜ್ಞವಲ್ಕ್ಯ ಮತ್ತು ಜನಕರ ಸಂವಾದವನ್ನು ಹೇಳುತ್ತೇನೆ.

12298004a ಯಾಜ್ಞವಲ್ಕ್ಯಮೃಷಿಶ್ರೇಷ್ಠಂ ದೈವರಾತಿರ್ಮಹಾಯಶಾಃ।
12298004c ಪಪ್ರಚ್ಚ ಜನಕೋ ರಾಜಾ ಪ್ರಶ್ನಂ ಪ್ರಶ್ನವಿದಾಂ ವರಃ।।

ದೇವರಾತನ ಮಗ, ಮಹಾಯಶಸ್ವೀ, ಪ್ರಶ್ನಿಸುವವರಲ್ಲಿ ಶ್ರೇಷ್ಠ ರಾಜಾ ಜನಕನು ಋಷಿಶ್ರೇಷ್ಠ ಯಾಜ್ಞವಲ್ಕ್ಯನನ್ನು ಕೇಳಿದನು:

12298005a ಕತೀಂದ್ರಿಯಾಣಿ ವಿಪ್ರರ್ಷೇ ಕತಿ ಪ್ರಕೃತಯಃ ಸ್ಮೃತಾಃ।
12298005c ಕಿಮವ್ಯಕ್ತಂ ಪರಂ ಬ್ರಹ್ಮ ತಸ್ಮಾಚ್ಚ ಪರತಸ್ತು ಕಿಮ್।।

“ವಿಪ್ರರ್ಷೇ! ಇಂದ್ರಿಯಗಳು ಎಷ್ಟಿವೆ? ಪೃಕೃತಿಯಲ್ಲಿ ಎಷ್ಟು ಭೇದಗಳಿವೆ? ಅವ್ಯಕ್ತವೆನ್ನುವುದು ಯಾವುದು? ಅದಕ್ಕಿಂತಲೂ ಅತೀತವಾಗಿರುವ ಪರಬ್ರಹ್ಮನ ಸ್ವರೂಪವೇನು?

12298006a ಪ್ರಭವಂ ಚಾಪ್ಯಯಂ ಚೈವ ಕಾಲಸಂಖ್ಯಾಂ ತಥೈವ ಚ।
12298006c ವಕ್ತುಮರ್ಹಸಿ ವಿಪ್ರೇಂದ್ರ ತ್ವದನುಗ್ರಹಕಾಂಕ್ಷಿಣಃ।।

ವಿಪ್ರೇಂದ್ರ! ನಿನ್ನ ಅನುಗ್ರಹವನ್ನೇ ಬಯಸುವ ನನಗೆ ಇವುಗಳ ಸೃಷ್ಟಿ ಮತ್ತು ಕಾಲಪ್ರಮಾಣಗಳ ಕುರಿತು ಹೇಳಬೇಕು.

12298007a ಅಜ್ಞಾನಾತ್ಪರಿಪೃಚ್ಚಾಮಿ ತ್ವಂ ಹಿ ಜ್ಞಾನಮಯೋ ನಿಧಿಃ।
12298007c ತದಹಂ ಶ್ರೋತುಮಿಚ್ಚಾಮಿ ಸರ್ವಮೇತದಸಂಶಯಮ್।।

ಅಜ್ಞಾನದಿಂದ ಕೇಳುತ್ತಿದ್ದೇನೆ. ನೀನು ಜ್ಞಾನಮಯ ಮತ್ತು ನಿಧಿ. ಆದುದರಿಂದ ಇವೆಲ್ಲವುಗಳನ್ನೂ ನಿಸ್ಸಂಶಯವಾಗಿ ನಿನ್ನಿಂದ ಕೇಳ ಬಯಸುತ್ತೇನೆ.”

12298008 ಯಾಜ್ಞವಲ್ಕ್ಯ ಉವಾಚ।
12298008a ಶ್ರೂಯತಾಮವನೀಪಾಲ ಯದೇತದನುಪೃಚ್ಚಸಿ।
12298008c ಯೋಗಾನಾಂ ಪರಮಂ ಜ್ಞಾನಂ ಸಾಂಖ್ಯಾನಾಂ ಚ ವಿಶೇಷತಃ।।

ಯಾಜ್ಞವಲ್ಕ್ಯನು ಹೇಳಿದನು: “ಅವನೀಪಾಲ! ನೀನು ಕೇಳಿದ ಪ್ರಶ್ನೆಗಳು ಯೋಗಿಗಳ ಪರಮ ಜ್ಞಾನಕ್ಕೆ ಮತ್ತು ಅದರಲ್ಲೂ ವಿಶೇಷವಾಗಿ ಸಾಂಖ್ಯರ ಜ್ಞಾನಕ್ಕೆ ಸಂಬಂಧಿಸಿವೆ. ಕೇಳು.

12298009a ನ ತವಾವಿದಿತಂ ಕಿಂ ಚಿನ್ಮಾಂ ತು ಜಿಜ್ಞಾಸತೇ ಭವಾನ್।
12298009c ಪೃಷ್ಟೇನ ಚಾಪಿ ವಕ್ತವ್ಯಮೇಷ ಧರ್ಮಃ ಸನಾತನಃ।।

ನಿನಗೆ ತಿಳಿಯದೇ ಇರುವುದು ಯಾವುದೂ ಇಲ್ಲ. ಆದರೂ ನನ್ನಿಂದ ಕೇಳಿ ತಿಳಿಯಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿರುವೆ. ಕೇಳಿದವನಿಗೆ ಹೇಳಬೇಕು ಎನ್ನುವುದು ಸನಾತನ ಧರ್ಮವಾಗಿದೆ.

12298010a ಅಷ್ಟೌ ಪ್ರಕೃತಯಃ ಪ್ರೋಕ್ತಾ ವಿಕಾರಾಶ್ಚಾಪಿ ಷೋಡಶ।
12298010c ಅಥ ಸಪ್ತ ತು ವ್ಯಕ್ತಾನಿ1 ಪ್ರಾಹುರಧ್ಯಾತ್ಮಚಿಂತಕಾಃ।।

ಪ್ರಕೃತಿಗಳು ಎಂಟೆಂದು ಹೇಳುತ್ತಾರೆ. ಅವುಗಳ ವಿಕಾರಗಳು ಹದಿನಾರು. ಅವುಗಳನ್ನು ಏಳು ವ್ಯಕ್ತವಾದವುಗಳು ಎಂದು ಆಧ್ಯಾತ್ಮಚಿಂತಕರು ಹೇಳುತ್ತಾರೆ.

12298011a ಅವ್ಯಕ್ತಂ ಚ ಮಹಾಂಶ್ಚೈವ ತಥಾಹಂಕಾರ ಏವ ಚ।
12298011c ಪೃಥಿವೀ ವಾಯುರಾಕಾಶಮಾಪೋ ಜ್ಯೋತಿಶ್ಚ ಪಂಚಮಮ್।।
12298012a ಏತಾಃ ಪ್ರಕೃತಯಸ್ತ್ವಷ್ಟೌ ವಿಕಾರಾನಪಿ ಮೇ ಶೃಣು।

ಅವ್ಯಕ್ತ, ಮಹತ್ತತ್ತ್ವ, ಅಹಂಕಾರ, ಪೃಥ್ವಿ, ವಾಯು, ಆಕಾಶ, ಜಲ ಮತ್ತು ಐದನೆಯದಾದ ಜ್ಯೋತಿ – ಇವೇ ಎಂಟು ಪ್ರಕೃತಿಗಳು. ಅವುಗಳ ವಿಕಾರಗಳನ್ನು ಕೇಳು.

12298012c ಶ್ರೋತ್ರಂ ತ್ವಕ್ಚೈವ ಚಕ್ಷುಶ್ಚ ಜಿಹ್ವಾ ಘ್ರಾಣಂ ಚ ಪಂಚಮಮ್।।
12298013a ಶಬ್ದಸ್ಪರ್ಶೌ ಚ ರೂಪಂ ಚ ರಸೋ ಗಂಧಸ್ತಥೈವ ಚ।
12298013c ವಾಕ್ಚ ಹಸ್ತೌ ಚ ಪಾದೌ ಚ ಪಾಯುರ್ಮೇಢ್ರಂ ತಥೈವ ಚ।।
12298014a ಏತೇ ವಿಶೇಷಾ ರಾಜೇಂದ್ರ ಮಹಾಭೂತೇಷು ಪಂಚಸು।
12298014c ಬುದ್ಧೀಂದ್ರಿಯಾಣ್ಯಥೈತಾನಿ ಸವಿಶೇಷಾಣಿ ಮೈಥಿಲ।।

ಕಿವಿ, ಚರ್ಮ, ಕಣ್ಣು, ನಾಲಿಗೆ ಮತ್ತು ಮೂಗು – ಇವು ಐದು ಜ್ಞಾನೇಂದ್ರಿಯಗಳು. ಶಬ್ದ, ಸ್ಪರ್ಶ, ರೂಪ, ರಸ, ಗಂಧ – ಇವು ಐದು ಪಂಚತನ್ಮಾತ್ರಗಳು. ನಾಲಿಗೆ, ಕೈಗಳು, ಕಾಲುಗಳು, ಗುದ ಮತ್ತು ಜನನೇಂದ್ರಿಯ – ಇವು ಐದು ಕರ್ಮೇಂದ್ರಿಯಗಳು. ರಾಜೇಂದ್ರ! ಐದು ಕರ್ಮೇಂದ್ರಿಯಗಳನ್ನೂ ಮತ್ತು ಪಂಚ ತನ್ಮಾತ್ರಗಳನ್ನೂ ವಿಶೇಷಗಳೆಂದು ಕರೆಯುತ್ತಾರೆ. ಮೈಥಿಲ! ಐದು ಜ್ಞಾನೇಂದ್ರಿಯಗಳನ್ನು ಸವಿಶೇಷಗಳೆಂದು ಕರೆಯುತ್ತಾರೆ. ವಿಶೇಷ-ಸವಿಶೇಷಗಳೆರಡೂ ಪಂಚಮಹಾಭೂತಗಳಲ್ಲಿಯೇ ಇವೆ.

12298015a ಮನಃ ಷೋಡಶಕಂ ಪ್ರಾಹುರಧ್ಯಾತ್ಮಗತಿಚಿಂತಕಾಃ।
12298015c ತ್ವಂ ಚೈವಾನ್ಯೇ ಚ ವಿದ್ವಾಂಸಸ್ತತ್ತ್ವಬುದ್ಧಿವಿಶಾರದಾಃ।।

ಆಧ್ಯಾತ್ಮಗತಿಚಿಂತಕರು ಮನಸ್ಸನ್ನು ಹದಿನಾರನೆಯ ವಿಕಾರ ಎನ್ನುತ್ತಾರೆ. ನಿನ್ನ ಮತ್ತು ಇತರ ಬುದ್ಧಿವಿಶಾರದ ವಿದ್ವಾಂಸರ ಮತವೂ ಇದೇ ಆಗಿದೆ.

12298016a ಅವ್ಯಕ್ತಾಚ್ಚ ಮಹಾನಾತ್ಮಾ ಸಮುತ್ಪದ್ಯತಿ ಪಾರ್ಥಿವ।
12298016c ಪ್ರಥಮಂ ಸರ್ಗಮಿತ್ಯೇತದಾಹುಃ ಪ್ರಾಧಾನಿಕಂ ಬುಧಾಃ।।

ಪಾರ್ಥಿವ! ಮಹತ್ತು ಅಥವಾ ಅವ್ಯಕ್ತವು ತಾನೇ ಉತ್ಪನ್ನವಾಗುತ್ತದೆ2. ಇದನ್ನೇ ವಿದ್ವಾಂಸರು ಮೊದಲನೆಯ ಮತ್ತು ಪ್ರಧಾನ ಸೃಷ್ಟಿಯೆಂದು ಹೇಳುತ್ತಾರೆ.

12298017a ಮಹತಶ್ಚಾಪ್ಯಹಂಕಾರ ಉತ್ಪದ್ಯತಿ ನರಾಧಿಪ।
12298017c ದ್ವಿತೀಯಂ ಸರ್ಗಮಿತ್ಯಾಹುರೇತದ್ಬುದ್ಧ್ಯಾತ್ಮಕಂ ಸ್ಮೃತಮ್।।

ನರಾಧಿಪ! ಮಹತ್ತಿನಿಂದ ಅಹಂಕಾರವು ಉತ್ಪನ್ನವಾಗುತ್ತದೆ. ಇದನ್ನು ಎರಡನೆಯ ಸೃಷ್ಟಿಯೆಂದು ಹೇಳುತ್ತಾರೆ. ಇದು ಬುದ್ಧ್ಯಾತ್ಮಕ ಸೃಷ್ಟಿ ಎಂದೂ ತಿಳಿಯಲ್ಪಟ್ಟಿದೆ.

12298018a ಅಹಂಕಾರಾಚ್ಚ ಸಂಭೂತಂ ಮನೋ ಭೂತಗುಣಾತ್ಮಕಮ್।
12298018c ತೃತೀಯಃ ಸರ್ಗ ಇತ್ಯೇಷ ಆಹಂಕಾರಿಕ ಉಚ್ಯತೇ।।

ಪಂಚಭೂತಗಳ ಮತ್ತು ಗುಣಗಳನ್ನು ಹೊಂದಿರುವ ಮನಸ್ಸು ಅಹಂಕಾರದಿಂದ ಹುಟ್ಟುತ್ತದೆ. ಇದನ್ನು ಮೂರನೆಯ ಸೃಷ್ಟಿ ಮತ್ತು ಆಹಂಕಾರಿಕ ಸೃಷ್ಟಿ ಎಂದು ಹೇಳುತ್ತಾರೆ.

12298019a ಮನಸಸ್ತು ಸಮುದ್ಭೂತಾ ಮಹಾಭೂತಾ ನರಾಧಿಪ।
12298019c ಚತುರ್ಥಂ ಸರ್ಗಮಿತ್ಯೇತನ್ಮಾನಸಂ ಪರಿಚಕ್ಷತೇ।।

ನರಾಧಿಪ! ಮನಸ್ಸಿನಿಂದ ಮಹಾಭೂತಗಳು ಹುಟ್ಟುತ್ತವೆ. ಇದನ್ನು ನಾಲ್ಕನೆಯ ಸೃಷ್ಟಿ ಮತ್ತು ಮಾನಸ ಸೃಷ್ಟಿ ಎಂದು ಕರೆಯುತ್ತಾರೆ.

12298020a ಶಬ್ದಃ ಸ್ಪರ್ಶಶ್ಚ ರೂಪಂ ಚ ರಸೋ ಗಂಧಸ್ತಥೈವ ಚ।
12298020c ಪಂಚಮಂ ಸರ್ಗಮಿತ್ಯಾಹುರ್ಭೌತಿಕಂ ಭೂತಚಿಂತಕಾಃ।।

ಪಂಚಮಹಾಭೂತಗಳಿಂದ ಶಬ್ದ, ಸ್ಪರ್ಶ, ರೂಪ, ರಸ, ಮತ್ತು ಗಂಧ ಇವು ಹುಟ್ಟುತ್ತವೆ. ಭೂತಚಿಂತಕರು ಇದನ್ನು ಐದನೆಯ ಸೃಷ್ಟಿಯೆಂದೂ ಭೌತಿಕ ಸೃಷ್ಟಿಯೆಂದೂ ಹೇಳುತ್ತಾರೆ.

12298021a ಶ್ರೋತ್ರಂ ತ್ವಕ್ಚೈವ ಚಕ್ಷುಶ್ಚ ಜಿಹ್ವಾ ಘ್ರಾಣಂ ಚ ಪಂಚಮಮ್।
12298021c ಸರ್ಗಂ ತು ಷಷ್ಠಮಿತ್ಯಾಹುರ್ಬಹುಚಿಂತಾತ್ಮಕಂ ಸ್ಮೃತಮ್।।

ಶಬ್ದ-ಸ್ಪರ್ಶಾದಿ ತನ್ಮಾತ್ರಗಳಿಂದ ಕಿವಿ, ಚರ್ಮ, ಕಣ್ಣು, ನಾಲಿಗೆ ಮತ್ತು ಐದನೆಯದಾಗಿ ಮೂಗು ಇವುಗಳು ಹುಟ್ಟುತ್ತವೆ. ಇದನ್ನು ಆರನೆಯ ಸೃಷ್ಟಿ ಮತ್ತು ಬಹುಚಿಂತಾತ್ಮಕ ಸೃಷ್ಟಿ ಎಂದು ಕರೆಯುತ್ತಾರೆ.

12298022a ಅಧಃ3 ಶ್ರೋತ್ರೇಂದ್ರಿಯಗ್ರಾಮ ಉತ್ಪದ್ಯತಿ ನರಾಧಿಪ।
12298022c ಸಪ್ತಮಂ ಸರ್ಗಮಿತ್ಯಾಹುರೇತದೈಂದ್ರಿಯಕಂ ಸ್ಮೃತಮ್।।

ನರಾಧಿಪ! ಅನಂತರ ಕೆಳಗಿನವುಗಳಾದ ಕಿವಿಯೇ ಮೊದಲಾದ ಕರ್ಮೇಂದ್ರಿಯಗಳ ಗುಂಪು ಹುಟ್ಟುತ್ತದೆ. ಇದನ್ನು ಏಳನೆಯ ಸೃಷ್ಟಿಯೆಂದು ಹೇಳುತ್ತಾರೆ. ಇದು ಐಂದ್ರಿಯಕ ಸೃಷ್ಟಿಯೆಂದೂ ತಿಳಿಯಲ್ಪಟ್ಟಿದೆ.

12298023a ಊರ್ಧ್ವಸ್ರೋತಸ್ತಥಾ ತಿರ್ಯಗುತ್ಪದ್ಯತಿ ನರಾಧಿಪ।
12298023c ಅಷ್ಟಮಂ ಸರ್ಗಮಿತ್ಯಾಹುರೇತದಾರ್ಜವಕಂ ಬುಧಾಃ।।

ನರಾಧಿಪ! ಅನಂತರ ಮೇಲಕ್ಕೆ ಪ್ರವಹಿಸುವ ಮತ್ತು ಅಡ್ಡಡ್ಡವಾಗಿ ಸಂಚರಿಸುವ ಸಮಾನ, ವ್ಯಾನ ಮತ್ತು ಉದಾನ ವಾಯುಗಳು ಹುಟ್ಟುತ್ತವೆ. ತಿಳಿದವರು ಇದನ್ನು ಎಂಟನೆಯ ಸೃಷ್ಟಿಯೆಂದು ಮತ್ತು ಆರ್ಜವಕ ಸೃಷ್ಟಿಯೆಂದು ಹೇಳುತ್ತಾರೆ.

12298024a ತಿರ್ಯಕ್ ಸ್ರೋತಸ್ತ್ವಧಃಸ್ರೋತ ಉತ್ಪದ್ಯತಿ ನರಾಧಿಪ।
12298024c ನವಮಂ ಸರ್ಗಮಿತ್ಯಾಹುರೇತದಾರ್ಜವಕಂ ಬುಧಾಃ।।

ನರಾಧಿಪ! ಅಡ್ಡಡ್ಡವಾಗಿ ಸಂಚರಿಸುವ ಸಮಾನ-ವ್ಯಾನ-ಉದಾನ ವಾಯುಗಳು ಅಧೋಗತಿಗೆ ತಿರುಗಿದಾಗ ಅಪಾನವು ಹುಟ್ಟುತ್ತದೆ. ಆರ್ಜಕವೆಂದೇ ತಿಳಿದವರು ಕರೆಯುವ ಇದು ಒಂಭತ್ತನೆಯ ಸೃಷ್ಟಿ.

12298025a ಏತಾನಿ ನವ ಸರ್ಗಾಣಿ ತತ್ತ್ವಾನಿ ಚ ನರಾಧಿಪ।
12298025c ಚತುರ್ವಿಂಶತಿರುಕ್ತಾನಿ ಯಥಾಶ್ರುತಿ ನಿದರ್ಶನಾತ್।।

ನರಾಧಿಪ! ಇವೇ ಶ್ರುತಿಗಳಲ್ಲಿ ನಿದರ್ಶನಗಳೊಂದಿಗೆ ಹೇಳಲ್ಪಟ್ಟಿರುವ ಒಂಭತ್ತು ಸೃಷ್ಟಿಗಳು ಮತ್ತು ಇಪ್ಪತ್ನಾಲ್ಕು ತತ್ತ್ವಗಳು.

12298026a ಅತ ಊರ್ಧ್ವಂ ಮಹಾರಾಜ ಗುಣಸ್ಯೈತಸ್ಯ ತತ್ತ್ವತಃ।
12298026c ಮಹಾತ್ಮಭಿರನುಪ್ರೋಕ್ತಾಂ ಕಾಲಸಂಖ್ಯಾಂ ನಿಬೋಧ ಮೇ।।

ಮಹಾರಾಜ! ಇನ್ನು ಮುಂದೆ ಮಹಾತ್ಮರು ಹೇಳಿರುವ ಇವುಗಳ ಗುಣ ಮತ್ತು ಕಾಲಸಂಖ್ಯೆಯನ್ನು ನನ್ನಿಂದ ಕೇಳು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಯಾಜ್ಞವಲ್ಕ್ಯಜನಕಸಂವಾದೇ ಅಷ್ಟನವತ್ಯತ್ಯಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಯಾಜ್ಞವಲ್ಕ್ಯಜನಕಸಂವಾದ ಎನ್ನುವ ಇನ್ನೂರಾತೊಂಭತ್ತೆಂಟನೇ ಅಧ್ಯಾಯವು.


  1. ತತ್ರ ತು ಪ್ರಕೃತೀರಷ್ಟೌ (ಭಾರತ ದರ್ಶನ). ↩︎

  2. ಮಹತ್ತು ಅಥವಾ ಅವ್ಯಕ್ತವು ಪ್ರಧಾನದಿಂದ ಉತ್ಪತ್ತಿಯಾಗುತ್ತದೆ? ↩︎

  3. ಅಥಃ (ಭಾರತ ದರ್ಶನ). ↩︎