295: ವಸಿಷ್ಠಕರಾಲಜನಕಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 295

ಸಾರ

ವಿದ್ಯಾ-ಅವಿದ್ಯಾ, ಅಕ್ಷರ-ಕ್ಷರ ಮತ್ತು ಪ್ರಕೃತಿ-ಪುರುಷರ ಸ್ವರೂಪ ಮತ್ತು ವಿವೇಕದ ಉದ್ಗಾರದ ವರ್ಣನೆ (1-46).

12295001 ವಸಿಷ್ಠ ಉವಾಚ।
12295001a ಸಾಂಖ್ಯದರ್ಶನಮೇತಾವದುಕ್ತಂ ತೇ ನೃಪಸತ್ತಮ।
12295001c ವಿದ್ಯಾವಿದ್ಯೇ ತ್ವಿದಾನೀಂ ಮೇ ತ್ವಂ ನಿಬೋಧಾನುಪೂರ್ವಶಃ।।

ವಸಿಷ್ಠನು ಹೇಳಿದನು: “ನೃಪಸತ್ತಮ! ಇದೂವರೆಗೆ ನಾನು ನಿನಗೆ ಸಾಂಖ್ಯದರ್ಶನದ ಕುರಿತು ಹೇಳಿದೆ. ಈಗ ನನ್ನಿಂದ ವಿದ್ಯೆ ಮತ್ತು ಅವಿದ್ಯೆಗಳ ಕುರಿತು ಕೇಳು.

12295002a ಅವಿದ್ಯಾಮಾಹುರವ್ಯಕ್ತಂ ಸರ್ಗಪ್ರಲಯಧರ್ಮಿ ವೈ।
12295002c ಸರ್ಗಪ್ರಲಯನಿರ್ಮುಕ್ತಂ ವಿದ್ಯಾಂ ವೈ ಪಂಚವಿಂಶಕಮ್।।

ಸೃಷ್ಟಿ ಮತ್ತು ಪ್ರಲಯಧರ್ಮಿಯಾದ ಅವ್ಯಕ್ತವನ್ನೇ ಅವಿದ್ಯಾ ಎಂದು ಹೇಳುತ್ತಾರೆ ಮತ್ತು ಸೃಷ್ಟಿ-ಪ್ರಲಯ ನಿರ್ಮುಕ್ತನಾದ ಇಪ್ಪತ್ತೈದನೆಯದನ್ನು ವಿದ್ಯಾ ಎಂದು ಕರೆಯುತ್ತಾರೆ.

12295003a ಪರಸ್ಪರಮವಿದ್ಯಾಂ ವೈ ತನ್ನಿಬೋಧಾನುಪೂರ್ವಶಃ।
12295003c ಯಥೋಕ್ತಮೃಷಿಭಿಸ್ತಾತ ಸಾಂಖ್ಯಸ್ಯಾಸ್ಯ ನಿದರ್ಶನಮ್।।

ಅಯ್ಯಾ! ಸಾಂಖ್ಯದರ್ಶನದ ನಿದರ್ಶನಗಳನ್ನೀಯುವ ಋಷಿಗಳು ಹೇಳಿದಂತೆ ತತ್ತ್ವಗಳಲ್ಲಿ ಕ್ರಮಶಃ ಪರಸ್ಪರರಿಗೆ ಯಾವುದು ಅವಿದ್ಯೆ ಎನ್ನುವುದನ್ನು ಕೇಳು.

12295004a ಕರ್ಮೇಂದ್ರಿಯಾಣಾಂ ಸರ್ವೇಷಾಂ ವಿದ್ಯಾ ಬುದ್ಧೀಂದ್ರಿಯಂ ಸ್ಮೃತಮ್।
12295004c ಬುದ್ಧೀಂದ್ರಿಯಾಣಾಂ ಚ ತಥಾ ವಿಶೇಷಾ ಇತಿ ನಃ ಶ್ರುತಮ್।।

ಸರ್ವ ಕರ್ಮೇಂದ್ರಿಯಗಳ ವಿದ್ಯೆಯು ಜ್ಞಾನೇಂದ್ರಿಯಗಳಿವೆ ಎಂದು ನಾವು ಕೇಳಿದ್ದೇವೆ. ಅರ್ಥಾತ್ ಕರ್ಮೇಂದ್ರಿಯಗಳಿಗಿಂತ ಜ್ಞಾನೇಂದ್ರಿಯಗಳು ಶ್ರೇಷ್ಠ. ಹಾಗೆಯೇ ಜ್ಞಾನೇಂದ್ರಿಯಗಳ ವಿದ್ಯೆಯು ಪಂಚಮಹಾಭೂತಗಳಿವೆ.

12295005a ವಿಶೇಷಾಣಾಂ ಮನಸ್ತೇಷಾಂ ವಿದ್ಯಾಮಾಹುರ್ಮನೀಷಿಣಃ।
12295005c ಮನಸಃ ಪಂಚಭೂತಾನಿ ವಿದ್ಯಾ ಇತ್ಯಭಿಚಕ್ಷತೇ।।

ಸ್ಥೂಲ ಪಂಚಮಹಾಭೂತಗಳ ವಿದ್ಯೆಯು ಮನಸ್ಸಿಗಿದೆ ಎಂದು ಮನೀಷಿಣರು ಹೇಳುತ್ತಾರೆ. ಮತ್ತು ಮನಸ್ಸಿನ ವಿದ್ಯೆಯು ಸೂಕ್ಷ್ಮ ಪಂಚಭೂತಗಳಿವೆ.

12295006a ಅಹಂಕಾರಸ್ತು ಭೂತಾನಾಂ ಪಂಚಾನಾಂ ನಾತ್ರ ಸಂಶಯಃ।
12295006c ಅಹಂಕಾರಸ್ಯ ಚ ತಥಾ ಬುದ್ಧಿರ್ವಿದ್ಯಾ ನರೇಶ್ವರ।।

ಸೂಕ್ಷ್ಮ ಪಂಚಭೂತಗಳ ವಿದ್ಯೆಯು ಅಹಂಕಾರದಲ್ಲಿದೆ ಎನ್ನುವುದರಲ್ಲಿ ಸಂಶಯವಿಲ್ಲ. ನರೇಶ್ವರ! ಅಹಂಕಾರದ ವಿದ್ಯೆಯು ಬುದ್ಧಿ.

12295007a ಬುದ್ಧೇಃ ಪ್ರಕೃತಿರವ್ಯಕ್ತಂ ತತ್ತ್ವಾನಾಂ ಪರಮೇಶ್ವರಮ್1
12295007c ವಿದ್ಯಾ ಜ್ಞೇಯಾ ನರಶ್ರೇಷ್ಠ ವಿಧಿಶ್ಚ ಪರಮಃ ಸ್ಮೃತಃ।।

ಬುದ್ಧಿಯ ವಿದ್ಯೆಯು ಅವ್ಯಕ್ತ ಪ್ರಕೃತಿ ಮತ್ತು ಎಲ್ಲ ತತ್ತ್ವಗಳ ವಿದ್ಯೆಯು ಪರಮೇಶ್ವರನು. ನರಶ್ರೇಷ್ಠ! ಈ ವಿದ್ಯೆಯೇ ಜ್ಞೇಯ ಯೋಗ್ಯವು. ಇದನ್ನೇ ಪರಮ ವಿಧಿ ಎಂದು ಹೇಳುತ್ತಾರೆ.

12295008a ಅವ್ಯಕ್ತಸ್ಯ ಪರಂ ಪ್ರಾಹುರ್ವಿದ್ಯಾಂ ವೈ ಪಂಚವಿಂಶಕಮ್।
12295008c ಸರ್ವಸ್ಯ ಸರ್ವಮಿತ್ಯುಕ್ತಂ ಜ್ಞೇಯಂ ಜ್ಞಾನಸ್ಯ ಪಾರ್ಥಿವ।।

ಪಾರ್ಥಿವ! ಅವ್ಯಕ್ತದ ಪರಮ ವಿದ್ಯೆಯು ಆ ಇಪ್ಪತ್ತೈದನೆಯದು ಎಂದು ಹೇಳಿದ್ದಾರೆ. ಅದೇ ಸರ್ವ ಜ್ಞಾನದ ಸರ್ವರೂಪ ಜ್ಞೇಯ ಎಂದು ಹೇಳಿದ್ದಾರೆ.

12295009a ಜ್ಞಾನಮವ್ಯಕ್ತಮಿತ್ಯುಕ್ತಂ ಜ್ಞೇಯಂ ವೈ ಪಂಚವಿಂಶಕಮ್।
12295009c ತಥೈವ ಜ್ಞಾನಮವ್ಯಕ್ತಂ ವಿಜ್ಞಾತಾ ಪಂಚವಿಂಶಕಃ।।

ಜ್ಞಾನವನ್ನು ಅವ್ಯಕ್ತವೆಂದೂ ಇಪ್ಪತ್ತೈದನೆಯದನ್ನು ಜ್ಞೇಯವೆಂದೂ ಹೇಳಿದ್ದಾರೆ. ಹಾಗೆಯೇ ಜ್ಞಾನವು ಅವ್ಯಕ್ತ ಮತ್ತು ಇಪ್ಪತ್ತೈದನೆಯದು ವಿಜ್ಞಾತಾ.

12295010a ವಿದ್ಯಾವಿದ್ಯಾರ್ಥತತ್ತ್ವೇನ ಮಯೋಕ್ತಂ ತೇ ವಿಶೇಷತಃ।
12295010c ಅಕ್ಷರಂ ಚ ಕ್ಷರಂ ಚೈವ ಯದುಕ್ತಂ ತನ್ನಿಬೋಧ ಮೇ।।

ವಿದ್ಯೆ ಮತ್ತು ಅವಿದ್ಯೆಗಳ ಕುರಿತು ವಿಶೇಷ ಅರ್ಥಗಳೊಂದಿಗೆ ಹೇಳಿದ್ದೇನೆ. ಇನ್ನು ಅಕ್ಷರ ಮತ್ತು ಕ್ಷರಗಳ ಕುರಿತು ಹೇಳುತ್ತೇನೆ. ಕೇಳು.

12295011a ಉಭಾವೇತೌ ಕ್ಷರಾವುಕ್ತಾವುಭಾವೇತೌ ಚ ನಕ್ಷರೌ।
12295011c ಕಾರಣಂ ತು ಪ್ರವಕ್ಷ್ಯಾಮಿ ಯಥಾ ಖ್ಯಾತೌ ತು ತತ್ತ್ವತಃ।।

ಸಾಂಖ್ಯಶಾಸ್ತ್ರದಲ್ಲಿ ಪ್ರಕೃತಿ ಮತ್ತು ಪುರುಷ ಎರಡನ್ನೂ ಅಕ್ಷರ ಎಂದು ಹೇಳಿದ್ದಾರೆ ಮತ್ತು ಇವೆರಡನ್ನೂ ಕ್ಷರ ಎಂದೂ ಕರೆದಿದ್ದಾರೆ. ನಾನು ಕೇಳಿದಂತೆ ಇದರ ಕಾರಣವನ್ನು ತತ್ತ್ವತಃ ಹೇಳುತ್ತೇನೆ.

12295012a ಅನಾದಿನಿಧನಾವೇತಾವುಭಾವೇವೇಶ್ವರೌ ಮತೌ।
12295012c ತತ್ತ್ವಸಂಜ್ಞಾವುಭಾವೇತೌ ಪ್ರೋಚ್ಯೇತೇ ಜ್ಞಾನಚಿಂತಕೈಃ।।

ಇವೆರಡೂ ಅನಾದಿ ಮತ್ತು ಅನಂತವಾದವುಗಳು. ಆದುದರಿಂದ ಪರಸ್ಪರ ಸಂಯೋಗದಿಂದ ಇಬ್ಬರೂ ಈಶ್ವರ ಎನ್ನುವ ಮಾನ್ಯತೆಯಿತೆ. ಜ್ಞಾನಚಿಂತಕರು ಇವೆರಡನ್ನೂ ತತ್ತ್ವ ಎಂದೇ ಕರೆಯುತ್ತಾರೆ.

12295013a ಸರ್ಗಪ್ರಲಯಧರ್ಮಿತ್ವಾದವ್ಯಕ್ತಂ ಪ್ರಾಹುರಕ್ಷರಮ್।
12295013c ತದೇತದ್ಗುಣಸರ್ಗಾಯ ವಿಕುರ್ವಾಣಂ ಪುನಃ ಪುನಃ।।

ಸೃಷ್ಟಿ-ಪ್ರಲಯಗಳು ಪ್ರಕೃತಿಯ ಧರ್ಮವು. ಆದುದರಿಂದ ಅವ್ಯಕ್ತ ಪ್ರಕೃತಿಯನ್ನು ಅಕ್ಷರ ಎಂದು ಹೇಳುತ್ತಾರೆ. ಅದೇ ಪ್ರಕೃತಿಯು ಮಹತ್ತತ್ತ್ವ ಮೊದಲಾದ ಗುಣಗಳನ್ನು ಸೃಷ್ಟಿಸಲು ಪುನಃ ಪುನಃ ವಿಕಾರಕ್ಕೊಳಗಾಗುತ್ತದೆ. ಆದುದರಿಂದ ಅದನ್ನು ಕ್ಷರ ಎಂದೂ ಕರೆಯುತ್ತಾರೆ.

12295014a ಗುಣಾನಾಂ ಮಹದಾದೀನಾಮುತ್ಪದ್ಯತಿ ಪರಸ್ಪರಮ್।
12295014c ಅಧಿಷ್ಠಾನಾತ್ ಕ್ಷೇತ್ರಮಾಹುರೇತತ್ತತ್ಪಂಚವಿಂಶಕಮ್।।

ಮಹತ್ತತ್ತ್ವಾದಿ ಗುಣಗಳ ಉತ್ಪತ್ತಿಯು ಪ್ರಕೃತಿ ಮತ್ತು ಪುರುಷರ ಪರಸ್ಪರ ಸಂಯೋಗದಿಂದ ಆಗುತ್ತದೆ. ಆದುದರಿಂದ ಒಂದು ಮತ್ತೊಂದರ ಅಧಿಷ್ಠಾನರಾಗಿರುವ ಕಾರಣ ಪುರುಷನಿಗೂ ಕೂಡ ಕ್ಷೇತ್ರ ಎಂದು ಹೇಳುತ್ತಾರೆ.

12295015a ಯದಾ ತು ಗುಣಜಾಲಂ ತದವ್ಯಕ್ತಾತ್ಮನಿ ಸಂಕ್ಷಿಪೇತ್।
12295015c ತದಾ ಸಹ ಗುಣೈಸ್ತೈಸ್ತು ಪಂಚವಿಂಶೋ ವಿಲೀಯತೇ।।

ಯೋಗಿಯು ಪ್ರಕೃತಿಯ ಗುಣಸಮೂಹಗಳನ್ನು ಅವ್ಯಕ್ತ ಮೂಲ ಪ್ರಕೃತಿಯಲ್ಲಿ ವಿಲೀನಗೊಳಿಸಿದಾಗ ಆ ಗುಣಗಳ ಲಯದೊಂದಿಗೆ ಇಪ್ಪತ್ತೈದನೆಯದಾದ ಪುರುಷನೂ ಕೂಡ ವಿಲೀನಗೊಳ್ಳುತ್ತಾನೆ. ಈ ದೃಷ್ಟಿಯಲ್ಲಿ ಅವನನ್ನೂ ಕ್ಷರ ಎಂದೇ ಕರೆಯುತ್ತಾರೆ.

12295016a ಗುಣಾ ಗುಣೇಷು ಲೀಯಂತೇ ತದೈಕಾ ಪ್ರಕೃತಿರ್ಭವೇತ್।
12295016c ಕ್ಷೇತ್ರಜ್ಞೋಽಪಿ ಯದಾ ತಾತ ತತ್ಕ್ಷೇತ್ರೇ ಸಂಪ್ರಲೀಯತೇ।।

ಅಯ್ಯಾ! ಗುಣಗಳು ಗುಣಗಳಲ್ಲಿ ಲೀನವಾದಾಗ ಪ್ರಕೃತಿಯೊಂದೇ ಇರುತ್ತದೆ. ಮತ್ತು ಕ್ಷೇತ್ರಜ್ಞನೂ ಯಾವಾಗ ಕ್ಷೇತ್ರದಲ್ಲಿ ಲೀನನಾಗುತ್ತಾನೋ ಆಗ ಅವನ ಪ್ರತ್ಯೇಕ ಅಸ್ತಿತ್ವವು ಇರುವುದಿಲ್ಲ.

12295017a ತದಾಕ್ಷರತ್ವಂ ಪ್ರಕೃತಿರ್ಗಚ್ಚತೇ ಗುಣಸಂಜ್ಞಿತಾ।
12295017c ನಿರ್ಗುಣತ್ವಂ ಚ ವೈದೇಹ ಗುಣೇಷು ಪ್ರತಿವರ್ತನಾತ್।।

ವೈದೇಹ! ಆಗ ತ್ರಿಗುಣಮಯೀ ಪ್ರಕೃತಿಯು ಕ್ಷರತ್ವವನ್ನು ಹೊಂದಿ ನಾಶಗೊಳ್ಳುತ್ತದೆ ಮತ್ತು ಪುರುಷನೂ ಕೂಡ ಗುಣಗಳಲ್ಲಿ ಪ್ರವೃತ್ತನಾಗಿರದೇ ಇರುವುದರಿಂದ ನಿರ್ಗುಣನಾಗುತ್ತಾನೆ.

12295018a ಏವಮೇವ ಚ ಕ್ಷೇತ್ರಜ್ಞಃ ಕ್ಷೇತ್ರಜ್ಞಾನಪರಿಕ್ಷಯೇ।
12295018c ಪ್ರಕೃತ್ಯಾ ನಿರ್ಗುಣಸ್ತ್ವೇಷ ಇತ್ಯೇವಮನುಶುಶ್ರುಮ।।

ಹೀಗೆ ಯಾವಾಗ ಕ್ಷೇತ್ರದ ಜ್ಞಾನವಿರುವುದಿಲ್ಲವೋ ಅರ್ಥಾತ್ ಪುರುಷನಿಗೆ ಪ್ರಕೃತಿಯ ಜ್ಞಾನವಿರುವುದಿಲ್ಲವೋ ಆಗ ಅವನು ಸ್ವಭಾವತಃ ನಿರ್ಗುಣನೇ ಆಗುತ್ತಾನೆ ಎಂದು ನಾವು ಕೇಳಿದ್ದೇವೆ.

12295019a ಕ್ಷರೋ ಭವತ್ಯೇಷ ಯದಾ ತದಾ ಗುಣವತೀಮಥ।
12295019c ಪ್ರಕೃತಿಂ ತ್ವಭಿಜಾನಾತಿ ನಿರ್ಗುಣತ್ವಂ ತಥಾತ್ಮನಃ।।

ಹೀಗೆ ಅವನು ಕ್ಷರವಾದಾಗ ಅವನು ಪ್ರಕ್ಕೃತಿಯ ಸಗುಣತ್ವವನ್ನೂ ಮತ್ತು ನನ್ನ ನಿರ್ಗುಣತ್ವವನ್ನೂ ಯಾರ್ಥಾರ್ಥ ತಿಳಿದುಕೊಳ್ಳುತ್ತಾನೆ.

12295020a ತದಾ ವಿಶುದ್ಧೋ ಭವತಿ ಪ್ರಕೃತೇಃ ಪರಿವರ್ಜನಾತ್।
12295020c ಅನ್ಯೋಽಹಮನ್ಯೇಯಮಿತಿ ಯದಾ ಬುಧ್ಯತಿ ಬುದ್ಧಿಮಾನ್।।

ಪ್ರಕೃತಿಯನ್ನು ಪರಿತ್ಯಜಿಸಿದುದರಿಂದ ಆಗ ಅವನು ವಿಶುದ್ಧನಾಗುತ್ತಾನೆ. ತಾನು ಬೇರೆ ಮತ್ತು ಪ್ರಕೃತಿಯು ಬೇರೆ ಎನ್ನುವ ಅರಿವು ಆ ಬುದ್ಧಿವಂತನಿಗಾಗುತ್ತದೆ.

12295021a ತದೈಷೋಽನ್ಯತ್ವತಾಮೇತಿ ನ ಚ ಮಿಶ್ರತ್ವಮಾವ್ರಜೇತ್।
12295021c ಪ್ರಕೃತ್ಯಾ ಚೈವ ರಾಜೇಂದ್ರ ನಮಿಶ್ರೋಽನ್ಯಶ್ಚ ದೃಶ್ಯತೇ।।

ರಾಜೇಂದ್ರ! ಪ್ರಕೃತಿಯ ಸಂಯೋಗದಲ್ಲಿರುವಾಗ ಅವನಿಗೆ ತಾನು ಭಿನ್ನನಲ್ಲ ಎಂದು ತೋರುವುದಕ್ಕೆ ಅವನು ತದ್ರೂಪವನ್ನು ಹೊಂದುವುದೇ ಕಾರಣ ಎಂದು ಅನಿಸುತ್ತದೆ. ಆದರೆ ಆ ಅವಸ್ಥೆಯಲ್ಲಿಯೂ ಕೂಡ ಅವನು ಪ್ರಕೃತಿಯೊಡನೆ ಸೇರಿ ಒಂದಾಗಿರುವುದಿಲ್ಲ, ಪ್ರತ್ಯೇಕನಾಗಿಯೇ ಇರುತ್ತಾನೆ. ಹೀಗೆ ಪುರುಷನು ಪ್ರಕೃತಿಯೊಡನೆ ಸಂಯುಕ್ತನಾಗಿಯೂ ಮತ್ತು ಪ್ರತ್ಯೇಕನಾಗಿಯೂ ಕಂಡುಬರುತ್ತಾನೆ.

12295022a ಯದಾ ತು ಗುಣಜಾಲಂ ತತ್ ಪ್ರಾಕೃತಂ ವಿಜುಗುಪ್ಸತೇ।
12295022c ಪಶ್ಯತೇ ಚಾಪರಂ ಪಶ್ಯಂ ತದಾ ಪಶ್ಯನ್ನ ಸಂಜ್ವರೇತ್।।

ಪ್ರಾಕೃತ ಗುಣಜಾಲಗಳು ಕುತ್ಸಿತವೆಂದು ತಿಳಿದು ಅವುಗಳಿಂದ ವಿರತನಾದಾಗ ಅವನಿಗೆ ಪರಮಾತ್ಮನ ದರ್ಶನವಾಗುತ್ತದೆಯಾದರೂ ಅವುಗಳನ್ನು ಸಂಪೂರ್ಣವಾಗಿ ತ್ಯಜಿಸುವುದಿಲ್ಲ ಅಥವಾ ಅವುಗಳಿಂದ ಬೇರೆಯಾಗುವುದಿಲ್ಲ.

12295023a ಕಿಂ ಮಯಾ ಕೃತಮೇತಾವದ್ಯೋಽಹಂ ಕಾಲಮಿಮಂ ಜನಮ್।
12295023c ಮತ್ಸ್ಯೋ ಜಾಲಂ ಹ್ಯವಿಜ್ಞಾನಾದನುವರ್ತಿತವಾಂಸ್ತಥಾ।।

ಆದರೆ ಯಾವಾಗ ಅವನಿಗೆ ಬೋಧೆಯುಂಟಾಗುತ್ತದೆಯೋ ಆಗ ಅನಿಸುತ್ತದೆ: “ಅಯ್ಯೋ! ನಾನೇನು ಮಾಡಿಬಿಟ್ಟೆ! ಮೀನು ಅಜ್ಞಾನವಶ ಸ್ವಯಂ ತಾನೇ ಹೋಗಿ ಜಾಲದಲ್ಲಿ ಸಿಲುಕಿಹಾಕಿಕೊಳ್ಳುವಂತೆ ನಾನೂ ಕೂಡ ತಿಳಿಯದೇ ಇಲ್ಲಿ ಪ್ರಾಕೃತ ಶರೀರದ ಅನುಸರಣೆಯನ್ನು ಮಾಡುತ್ತಿದ್ದೇನೆ!

12295024a ಅಹಮೇವ ಹಿ ಸಂಮೋಹಾದನ್ಯಮನ್ಯಂ ಜನಾಜ್ ಜನಮ್।
12295024c ಮತ್ಸ್ಯೋ ಯಥೋದಕಜ್ಞಾನಾದನುವರ್ತಿತವಾನಿಹ।।

ಮೀನು ಹೇಗೆ ನೀರೇ ತನ್ನ ಜೀವನದ ಮೂಲವೆಂಬ ಸಮ್ಮೋಹದಿಂದ ಒಂದು ಜಲಾಶಯದಿಂದ ಇನ್ನೊಂದು ಜಲಾಶಯಕ್ಕೆ ಹೋಗುತ್ತದೆಯೋ ಹಾಗೆ ನಾನೂ ಕೂಡ ಮೋಹವಶನಾಗಿ ಒಂದು ಶರೀರದಿಂದ ಇನ್ನೊಂದು ಶರೀರವೆಂದು ಅಲೆದಾಡುತ್ತಿದ್ದೇನೆ.

12295025a ಮತ್ಸ್ಯೋಽನ್ಯತ್ವಂ ಯಥಾಜ್ಞಾನಾದುದಕಾನ್ನಾಭಿಮನ್ಯತೇ।
12295025c ಆತ್ಮಾನಂ ತದ್ವದಜ್ಞಾನಾದನ್ಯತ್ವಂ ಚೈವ ವೇದ್ಮ್ಯಹಮ್।।

ಮೀನು ಹೇಗೆ ನೀರು ತನಗಿಂತ ಭಿನ್ನ ಎಂದು ತಿಳಿದಿರುವುದಿಲ್ಲವೋ ಹಾಗೆ ನಾನೂ ಕೂಡ ನನ್ನ ಅಜ್ಞಾನದ ಕಾರಣದಿಂದ ನನ್ನನ್ನು ಈ ಪ್ರಾಕೃತ ಶರೀರಕ್ಕಿಂತ ಭಿನ್ನನಾಗಿ ಕಾಣುತ್ತಿಲ್ಲ.

12295026a ಮಮಾಸ್ತು ಧಿಗಬುದ್ಧಸ್ಯ ಯೋಽಹಂ ಮಗ್ನಮಿಮಂ ಪುನಃ।
12295026c ಅನುವರ್ತಿತವಾನ್ಮೋಹಾದನ್ಯಮನ್ಯಂ ಜನಾಜ್ಜನಮ್।।

ಸಂಸಾರಸಾಗರದಲ್ಲಿ ಮುಳುಗಿರುವ ಈ ಶರೀರವನ್ನು ಆಶ್ರಯಿಸಿ ಮೋಹವಶ ಒಂದು ಶರೀರದಿಂದ ಇನ್ನೊಂದು ಶರೀರದ ಅನುಸರಣೆಮಾಡುತ್ತಿರುವ ಈ ಮೂಢ ನನಗೆ ಧಿಕ್ಕಾರವು!

12295027a ಅಯಮತ್ರ ಭವೇದ್ಬಂಧುರನೇನ ಸಹ ಮೋಕ್ಷಣಮ್।
12295027c ಸಾಮ್ಯಮೇಕತ್ವಮಾಯಾತೋ ಯಾದೃಶಸ್ತಾದೃಶಸ್ತ್ವಹಮ್।।

ವಾಸ್ತವವಾಗಿ ಈ ಜಗತ್ತಿನಲ್ಲಿ ಈ ಪರಮಾತ್ಮನೇ ನನ್ನ ಬಂಧುವು. ಇವನೊಂದಿಗೇ ನನ್ನ ಮೈತ್ರಿಯಾಗಬಹುದು. ಮೊದಲು ನಾನು ಹೇಗಿದ್ದರೂ ಈಗ ಮಾತ್ರ ನಾನು ಅವನ ಸಮಾನತ್ವ ಮತ್ತು ಏಕತ್ವವನ್ನು ಹೊಂದಿದ್ದೇನೆ. ಅವನು ಹೇಗಿದ್ದಾನೆಯೋ ಹಾಗೆ ನಾನೂ ಇದ್ದೇನೆ.

12295028a ತುಲ್ಯತಾಮಿಹ ಪಶ್ಯಾಮಿ ಸದೃಶೋಽಹಮನೇನ ವೈ।
12295028c ಅಯಂ ಹಿ ವಿಮಲೋ ವ್ಯಕ್ತಮಹಮೀದೃಶಕಸ್ತಥಾ।।

ಅವನಲ್ಲಿಯೇ ನನ್ನ ಸಮಾನತೆಯನ್ನು ಕಾಣುತ್ತಿದ್ದೇನೆ. ಅವಶ್ಯವಾಗಿಯೂ ನಾನು ಅವನಂತೆಯೇ ಇದ್ದೇನೆ. ಈ ಪರಮಾತ್ಮನು ಪ್ರತ್ಯಕ್ಷವಾಗಿಯೇ ಅತ್ಯಂತ ನಿರ್ಮಲನಾಗಿದ್ದಾನೆ ಮತ್ತು ನಾನೂ ಹಾಗೆಯೇ ಇದ್ದೇನೆ.

12295029a ಯೋಽಹಮಜ್ಞಾನಸಂಮೋಹಾದಜ್ಞಯಾ ಸಂಪ್ರವೃತ್ತವಾನ್।
12295029c ಸಸಂಗಯಾಹಂ ನಿಃಸಂಗಃ ಸ್ಥಿತಃ ಕಾಲಮಿಮಂ ತ್ವಹಮ್।।

ಆಸಕ್ತರಹಿತನಾಗಿದ್ದರೂ ನಾನು ಅಜ್ಞಾನ-ಮೋಹಗಳಿಂದಾಗಿ ಇಷ್ಟು ಸಮಯದವರೆಗೆ ಈ ಆಸಕ್ತಿಮಯೀ ಜಡ ಪ್ರಕೃತಿಯೊಂದಿಗೆ ರಮಿಸುತ್ತಿದ್ದೇನೆ.

12295030a ಅನಯಾಹಂ ವಶೀಭೂತಃ ಕಾಲಮೇತಂ ನ ಬುದ್ಧವಾನ್।
12295030c ಉಚ್ಚಮಧ್ಯಮನೀಚಾನಾಂ ತಾಮಹಂ ಕಥಮಾವಸೇ।।

ಇವಳು ನನ್ನನ್ನು ಎಷ್ಟು ವಶಮಾಡಿಕೊಂಡಿದ್ದಳು ಎಂದರೆ ನನಗೆ ಇಷ್ಟು ಸಮಯ ಕಳೆದುಹೋಯಿತು ಎನ್ನುವುದೇ ಗೊತ್ತಾಗಲಿಲ್ಲ. ಇವಳಾದರೋ ಉಚ್ಛ, ಮಧ್ಯಮ ಮತ್ತು ನೀಚ ಎಲ್ಲ ಶ್ರೇಣಿಯವರೊಡನೆ ಇರುತ್ತಾಳೆ. ಇವಳೊಡನೆ ನಾನು ಹೇಗೆ ತಾನೆ ಇರಬಲ್ಲೆ?

12295031a ಸಮಾನಯಾನಯಾ ಚೇಹ ಸಹವಾಸಮಹಂ ಕಥಮ್।
12295031c ಗಚ್ಚಾಮ್ಯಬುದ್ಧಭಾವತ್ವಾದೇಷೇದಾನೀಂ ಸ್ಥಿರೋ ಭವೇ।।

ನನ್ನೊಡನೆ ಸೇರಿಕೊಂಡು ನನ್ನ ಸಮಾನಳಾಗುತ್ತಿದ್ದಾಳೆ. ಮೂರ್ಖತನದಿಂದ ಇವಳೊಂದಿಗೆ ಹೇಗೆ ತಾನೆ ಸಹವಾಸಮಾಡಬಲ್ಲೆ? ಇನ್ನು ನಾನು ಸ್ಥಿರನಾಗಿಬಿಡುತ್ತೇನೆ.

12295032a ಸಹವಾಸಂ ನ ಯಾಸ್ಯಾಮಿ ಕಾಲಮೇತದ್ಧಿ ವಂಚನಾತ್।
12295032c ವಂಚಿತೋಽಸ್ಮ್ಯನಯಾ ಯದ್ಧಿ ನಿರ್ವಿಕಾರೋ ವಿಕಾರಯಾ।।

ಇಷ್ಟು ಸಮಯದವರೆಗೆ ಈ ವಿಕಾರಮಯೀ ಪ್ರಕೃತಿಯ ವಂಚನೆಗೊಳಗಾಗಿದ್ದೇನೆ. ಅವಳೂ ಕೂಡ ನನ್ನನ್ನು ವಂಚಿಸುತ್ತಿದ್ದಾಳೆ. ಆದುದರಿಂದ ಇನ್ನು ನಾನು ಇವಳೊಂದಿಗೆ ಇರುವುದಿಲ್ಲ.

12295033a ನ ಚಾಯಮಪರಾಧೋಽಸ್ಯಾ ಅಪರಾಧೋ ಹ್ಯಯಂ ಮಮ।
12295033c ಯೋಽಹಮತ್ರಾಭವಂ ಸಕ್ತಃ ಪರಾಙ್ಮುಖಮುಪಸ್ಥಿತಃ।।

ಆದರೆ ಇದು ಅವಳ ಅಪರಾಧವಲ್ಲ. ಪರಮಾತ್ಮನಿಂದ ವಿಮುಖನಾಗಿ ಇವಳಲ್ಲಿ ಆಸಕ್ತನಾಗಿರುವ ಅಪರಾಧವನ್ನು ನಾನೇ ಮಾಡಿದ್ದೇನೆ.

12295034a ತತೋಽಸ್ಮಿ ಬಹುರೂಪಾಸು ಸ್ಥಿತೋ ಮೂರ್ತಿಷ್ವಮೂರ್ತಿಮಾನ್।
12295034c ಅಮೂರ್ತಶ್ಚಾಪಿ ಮೂರ್ತಾತ್ಮಾ ಮಮತ್ವೇನ ಪ್ರಧರ್ಷಿತಃ।।

ಅಮೂರ್ತನಾಗಿದ್ದರೂ ನಾನು ಪ್ರಕೃತಿಯ ಅನೇಕ ರೂಪಗಳ ಮೂರ್ತಿಗಳಲ್ಲಿ ಸ್ಥಿತನಾಗಿದ್ದೇನೆ ಮತ್ತು ದೇಹ ರಹಿತನಾಗಿದ್ದರೂ ಮಮತೆಯಿಂದ ಪರಾಸ್ತನಾಗಿರುವುದರ ಕಾರಣದಿಂದ ದೇಹಧಾರಿಯಾಗಿಬಿಟ್ಟಿದ್ದೇನೆ.

12295035a ಪ್ರಕೃತೇರನಯತ್ವೇನ2 ತಾಸು ತಾಸ್ವಿಹ ಯೋನಿಷು।
12295035c ನಿರ್ಮಮಸ್ಯ ಮಮತ್ವೇನ ಕಿಂ ಕೃತಂ ತಾಸು ತಾಸು ಚ।
12295035e ಯೋನೀಷು ವರ್ತಮಾನೇನ ನಷ್ಟಸಂಜ್ಞೇನ ಚೇತಸಾ।।

ಪ್ರಕೃತಿಯ ಸೆಳೆತದಿಂದ ನನಗೆ ಭಿನ್ನ ಭಿನ್ನ ಯೋನಿಗಳಲ್ಲಿ ಅಲೆದಾಡುವಂತಾಗಿದೆ. ನಾನು ಮಮತಾರಹಿತನಾಗಿದ್ದರೂ ಈ ಪ್ರಕೃತಿ ಜನಿತ ಮಮತೆಯು ನನ್ನನ್ನು ಭಿನ್ನ ಭಿನ್ನ ಯೋನಿಗಳಲ್ಲಿ ದೂಡಿ ದುರ್ದಶೆಯನ್ನುಂಟುಮಾಡಿದೆ. ನನ್ನ ಚೇತನವು ಸಂಜ್ಞೆಗಳನ್ನು ಕಳೆದುಕೊಂಡುಬಿಟ್ಟಿದೆ. ಈ ಕಾರಣದಿಂದಲೂ ನಾನು ಯೋನಿಗಳಲ್ಲಿ ಅಲೆದಾಡುತ್ತಿದ್ದೇನೆ.

12295036a ನ ಮಮಾತ್ರಾನಯಾ ಕಾರ್ಯಮಹಂಕಾರಕೃತಾತ್ಮಯಾ।
12295036c ಆತ್ಮಾನಂ ಬಹುಧಾ ಕೃತ್ವಾ ಯೇಯಂ ಭೂಯೋ ಯುನಕ್ತಿ ಮಾಮ್।
12295036e ಇದಾನೀಮೇಷ ಬುದ್ಧೋಽಸ್ಮಿ ನಿರ್ಮಮೋ ನಿರಹಂಕೃತಃ।।

ಇನ್ನು ನನಗೆ ಈ ಅಹಂಕಾರಮಯೀ ಪ್ರಕೃತಿಯೊಡನೆ ಯಾವ ಕೆಲಸವೂ ಇಲ್ಲ. ಈಗಲೂ ಕೂಡ ಅವಳು ಅನೇಕ ರೂಪಗಳನ್ನು ಧರಿಸಿ ನನ್ನೊಡನೆ ಸಂಯೋಗಕ್ಕೆ ಪ್ರಯತ್ನಿಸುತ್ತಿದ್ದಾಳೆ. ಆದರೆ ಈಗ ನಾನು ಎಚ್ಚರಗೊಂಡಿದ್ದೇನೆ ಮತ್ತು ಮಮತೆ-ಅಹಂಕಾರ ರಹಿತನಾಗಿದ್ದೇನೆ.

12295037a ಮಮತ್ವಮನಯಾ ನಿತ್ಯಮಹಂಕಾರಕೃತಾತ್ಮಕಮ್।
12295037c ಅಪೇತ್ಯಾಹಮಿಮಾಂ ಹಿತ್ವಾ ಸಂಶ್ರಯಿಷ್ಯೇ ನಿರಾಮಯಮ್।।

ಈಗಲಾದರೂ ಇವಳನ್ನು ಮತ್ತು ಇವಳ ಅಹಂಕಾರಸ್ವರೂಪಿಣೀ ಮಮತೆಯನ್ನು ತ್ಯಜಿಸಿ ಸರ್ವಥಾ ಇವಳಿಂದ ಮುಕ್ತನಾಗುತ್ತೇನೆ ಮತ್ತು ನಿರಾಮಯ ಪರಮಾತ್ಮನ ಶರಣುಹೊಂದುತ್ತೇನೆ.

12295038a ಅನೇನ ಸಾಮ್ಯಂ ಯಾಸ್ಯಾಮಿ ನಾನಯಾಹಮಚೇತಸಾ।
12295038c ಕ್ಷಮಂ ಮಮ ಸಹಾನೇನ ನೈಕತ್ವಮನಯಾ ಸಹ।

ಆ ಪರಮಾತ್ಮನ ಸಾಮ್ಯತೆಯನ್ನು ಪಡೆದುಕೊಳ್ಳುತ್ತೇನೆ. ಈ ಜಡ ಪ್ರಕೃತಿಯ ಸಾಮ್ಯತೆಯನ್ನು ಒಪ್ಪಿಕೊಳ್ಳುವುದಿಲ್ಲ. ಪರಮಾತ್ಮನೊಡನೆಯ ಸಂಯೋಗವು ನನಗೆ ಕಲ್ಯಾಣಕರವು. ಈ ಪ್ರಕೃತಿಯೊಂದಿಗೆ ಇರುವುದು ಶ್ರೇಯಸ್ಕರವಲ್ಲ.”

12295038e ಏವಂ ಪರಮಸಂಬೋಧಾತ್ಪಂಚವಿಂಶೋಽನುಬುದ್ಧವಾನ್।।
12295039a ಅಕ್ಷರತ್ವಂ ನಿಯಚ್ಚೇತ ತ್ಯಕ್ತ್ವಾ ಕ್ಷರಮನಾಮಯಮ್।

ಹೀಗೆ ಉತ್ತಮ ವಿವೇಕದಿಂದ ತನ್ನ ಶುದ್ಧ ಸ್ವರೂಪದ ಜ್ಞಾನವನ್ನು ಪಡೆದುಕೊಂಡು ಇಪ್ಪತ್ತೈದನೆಯದಾದ ಆತ್ಮವು ಕ್ಷರಭಾವವನ್ನು ತ್ಯಜಿಸಿ ನಿರಾಮಯ ಅಕ್ಷರಭಾವವನ್ನು ಹೊಂದುತ್ತದೆ.

12295039c ಅವ್ಯಕ್ತಂ ವ್ಯಕ್ತಧರ್ಮಾಣಂ ಸಗುಣಂ ನಿರ್ಗುಣಂ ತಥಾ।
12295039e ನಿರ್ಗುಣಂ ಪ್ರಥಮಂ ದೃಷ್ಟ್ವಾ ತಾದೃಗ್ಭವತಿ ಮೈಥಿಲ।।

ಮೈಥಿಲ! ಅವ್ಯಕ್ತ ಪ್ರಕೃತಿ, ವ್ಯಕ್ತ ಮಹತ್ತತ್ತ್ವಾದಿ ಸಗುಣ, ನಿರ್ಗುಣ ಮತ್ತು ಸರ್ವ ಆದಿಭೂತಗಳು ನಿರ್ಗುಣ ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆದುಕೊಂಡು ಮನುಷ್ಯನೂ ಕೂಡ ಸ್ವಯಂ ಅದೇ ಆಗುತ್ತಾನೆ.

12295040a ಅಕ್ಷರಕ್ಷರಯೋರೇತದುಕ್ತಂ ತವ ನಿದರ್ಶನಮ್।
12295040c ಮಯೇಹ ಜ್ಞಾನಸಂಪನ್ನಂ ಯಥಾಶ್ರುತಿನಿದರ್ಶನಾತ್।।

ಶೃತಿಗಳಲ್ಲಿ ಹೇಗೆ ನಿದರ್ಶಿಸಿದ್ದಾರೋ ಹಾಗೆ ನಾನು ನಿನಗೆ ವಿವೇಕವನ್ನೀಯುವ ಕ್ಷರ-ಅಕ್ಷರಗಳ ಜ್ಞಾನವನ್ನು ಹೇಳಿದ್ದೇನೆ.

12295041a ನಿಃಸಂದಿಗ್ಧಂ ಚ ಸೂಕ್ಷ್ಮಂ ಚ ವಿಬುದ್ಧಂ ವಿಮಲಂ ತಥಾ।
12295041c ಪ್ರವಕ್ಷ್ಯಾಮಿ ತು ತೇ ಭೂಯಸ್ತನ್ನಿಬೋಧ ಯಥಾಶ್ರುತಮ್।।

ಈಗ ಪುನಃ ಶ್ರುತಿಯಲ್ಲಿರುವಂತೆ ನಿಃಸಂದಿಗ್ಧವೂ, ಸೂಕ್ಷ್ಮವೂ, ನಿರ್ಮಲವೂ ಆಗಿರುವ ವಿಶಿಷ್ಠ ಜ್ಞಾನದ ಕುರಿತು ಹೇಳುತ್ತೇನೆ. ಕೇಳು.

12295042a ಸಾಂಖ್ಯಯೋಗೌ ಮಯಾ ಪ್ರೋಕ್ತೌ ಶಾಸ್ತ್ರದ್ವಯನಿದರ್ಶನಾತ್।
12295042c ಯದೇವ ಶಾಸ್ತ್ರಂ ಸಾಂಖ್ಯೋಕ್ತಂ ಯೋಗದರ್ಶನಮೇವ ತತ್।।

ಸಾಂಖ್ಯ ಮತ್ತು ಯೋಗಗಳ ಕುರಿತು ನಾನು ಹೇಳಿದುದರಲ್ಲಿ ಎರಡು ಶಾಸ್ತ್ರಗಳಿವೆಯೆಂದು ಹೇಳುತ್ತಾರೆ. ಆದರೆ ವಾಸ್ತವವಾಗಿ ಸಾಂಖ್ಯ ಶಾಸ್ತ್ರವೇನಿದೆಯೋ ಅದೇ ಯೋಗಶಾಸ್ತ್ರವೂ ಹೌದು.

12295043a ಪ್ರಬೋಧನಕರಂ ಜ್ಞಾನಂ ಸಾಂಖ್ಯಾನಾಮವನೀಪತೇ।
12295043c ವಿಸ್ಪಷ್ಟಂ ಪ್ರೋಚ್ಯತೇ ತತ್ರ ಶಿಷ್ಯಾಣಾಂ ಹಿತಕಾಮ್ಯಯಾ।।

ಅವನೀಪತೇ! ಶಿಷ್ಯರ ಹಿತಕಾಮನೆಯಿಂದ ನಾನು ವಿಸ್ಪಷ್ಟವಾಗಿ ಸಾಂಖ್ಯದರ್ಶನವನ್ನು ನಿನಗೆ ಬೋಧಿಸಿದ್ದೇನೆ.

12295044a ಬೃಹಚ್ಚೈವ ಹಿ ತಚ್ಚಾಸ್ತ್ರಮಿತ್ಯಾಹುಃ ಕುಶಲಾ ಜನಾಃ।
12295044c ಅಸ್ಮಿಂಶ್ಚ ಶಾಸ್ತ್ರೇ ಯೋಗಾನಾಂ ಪುನರ್ದಧಿ ಪುನಃ ಶರಃ3।।

ಸಾಂಖ್ಯ ಶಾಸ್ತ್ರವು ಬಹು ದೊಡ್ಡದು ಎಂದು ಕುಶಲರು ಹೇಳುತ್ತಾರೆ.

12295045a ಪಂಚವಿಂಶಾತ್ಪರಂ ತತ್ತ್ವಂ ನ ಪಶ್ಯತಿ ನರಾಧಿಪ4
12295045c ಸಾಂಖ್ಯಾನಾಂ ತು ಪರಂ ತತ್ರ ಯಥಾವದನುವರ್ಣಿತಮ್।।

ನರಾಧಿಪ! ಸಾಂಖ್ಯಶಾಸ್ತ್ರದ ಆಚಾರ್ಯರು ಇಪ್ಪತ್ತೈದನೆಯ ತತ್ತ್ವಕ್ಕಿಂತಲೂ ಮುಂದಿನ ಯಾವುದೇ ತತ್ತ್ವದ ವರ್ಣನೆಯನ್ನು ಮಾಡುವುದಿಲ್ಲ. ಇದೋ ನಾನು ಸಾಂಖ್ಯದ ಪರಮ ತತ್ತ್ವವನ್ನು ಯಥಾರ್ಥರೂಪದಲ್ಲಿ ವರ್ಣಿಸಿದ್ದೇನೆ.

12295046a ಬುದ್ಧಮಪ್ರತಿಬುದ್ಧಂ ಚ ಬುಧ್ಯಮಾನಂ ಚ ತತ್ತ್ವತಃ।
12295046c ಬುಧ್ಯಮಾನಂ ಚ ಬುದ್ಧಂ ಚ ಪ್ರಾಹುರ್ಯೋಗನಿದರ್ಶನಮ್।।

ಈ ನಿತ್ಯ ಜ್ಞಾನಸಂಪನ್ನ ಪರಬ್ರಹ್ಮ ಪರಮಾತ್ಮನೇ “ಬುದ್ಧ”ನು. ಪರಮಾತ್ಮ ತತ್ತ್ವವನ್ನು ತಿಳಿಯದ ಕಾರಣದಿಂದ ಜಿಜ್ಞಾಸುವಾಗಿರುವ ಜೀವಾತ್ಮವೇ “ಬುದ್ಧ್ಯಮಾನ” ಎಂದು ಹೇಳಿದ್ದಾರೆ. ಹೀಗೆ ಯೋಗಸಿದ್ಧಾಂತದ ಪ್ರಕಾರ ಬುದ್ಧ ಮತ್ತು ಬುಧ್ಯಮಾನ ಇವೆರಡೂ ಚೇತನಗಳೇ.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ವಸಿಷ್ಠಕರಾಲಜನಕಸಂವಾದೇ ಪಂಚನವತ್ಯತ್ಯಧಿಕದ್ವಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ವಸಿಷ್ಠಕರಾಲಜನಕಸಂವಾದ ಎನ್ನುವ ಇನ್ನೂರಾತೊಂಭತ್ತೈದನೇ ಅಧ್ಯಾಯವು.

  1. ಪರಮೇಶ್ವರೀ। (ಗೀತಾ ಪ್ರೆಸ್). ↩︎

  2. ಪ್ರಾಕ್ ಕೃತೇನ ಮಮತ್ವೇನ (ಗೀತಾ ಪ್ರೆಸ್). ↩︎

  3. ಪುನರ್ವೇದೇ ಪುರಃಸರಃ। (ಗೀತಾ ಪ್ರೆಸ್). ↩︎

  4. ಪಠ್ಯತೇ ನ ನರಾಧಿಪ। (ಗೀತಾ ಪ್ರೆಸ್). ↩︎