290: ಸಾಂಖ್ಯಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 290

ಸಾರ

ಸಾಂಖ್ಯಯೋಗದ ಸಾಧನೆ ಮತ್ತು ಸಾಧನೆಯ ಫಲ (1-110).

12290001 ಯುಧಿಷ್ಠಿರ ಉವಾಚ।
12290001a ಸಮ್ಯಕ್ತ್ವಯಾಯಂ ನೃಪತೇ ವರ್ಣಿತಃ ಶಿಷ್ಟಸಂಮತಃ।
12290001c ಯೋಗಮಾರ್ಗೋ ಯಥಾನ್ಯಾಯಂ ಶಿಷ್ಯಾಯೇಹ ಹಿತೈಷಿಣಾ।।

ಯುಧಿಷ್ಠಿರನು ಹೇಳಿದನು: “ನೃಪತೇ! ನನ್ನ ಹಿತೈಷಿಯಾದ ನೀನು ನನ್ನನ್ನು ಶಿಷ್ಯನೆಂದೇ ತಿಳಿದು ಶಿಷ್ಟಸಂಮತ ಯೋಗಮಾರ್ಗವನ್ನು ಯಥಾನ್ಯಾಯವಾಗಿ ಚೆನ್ನಾಗಿ ವರ್ಣಿಸಿದ್ದೀಯೆ.

12290002a ಸಾಂಖ್ಯೇ ತ್ವಿದಾನೀಂ ಕಾರ್ತ್ಸ್ನ್ಯೇನ ವಿಧಿಂ ಪ್ರಬ್ರೂಹಿ ಪೃಚ್ಚತೇ।
12290002c ತ್ರಿಷು ಲೋಕೇಷು ಯಜ್ಜ್ಞಾನಂ ಸರ್ವಂ ತದ್ವಿದಿತಂ ಹಿ ತೇ।।

ಈಗ ನಾನು ಸಾಂಖ್ಯವಿಷಯಕ ಸಂಪೂರ್ಣ ವಿಧಿಯನ್ನು ಕೇಳುತ್ತಿದ್ದೇನೆ. ಇದನ್ನು ಹೇಳಬೇಕು. ಏಕೆಂದರೆ ಮೂರು ಲೋಕಗಳಲ್ಲಿರುವ ಜ್ಞಾನಗಳೆಲ್ಲವನ್ನೂ ನೀನು ತಿಳಿದುಕೊಂಡಿದ್ದೀಯೆ.”

12290003 ಭೀಷ್ಮ ಉವಾಚ।
12290003a ಶೃಣು ಮೇ ತ್ವಮಿದಂ ಶುದ್ಧಂ ಸಾಂಖ್ಯಾನಾಂ ವಿದಿತಾತ್ಮನಾಮ್।
12290003c ವಿಹಿತಂ ಯತಿಭಿರ್ಬುದ್ಧೈಃ ಕಪಿಲಾದಿಭಿರೀಶ್ವರೈಃ।।

ಭೀಷ್ಮನು ಹೇಳಿದನು: “ಆತ್ಮತತ್ತ್ವವನ್ನು ತಿಳಿಸುವ ಸಾಂಖ್ಯಶಾಸ್ತ್ರ ವಿದ್ವಾಂಸರ ಈ ಸೂಕ್ಷ್ಮ ಜ್ಞಾನವನ್ನು ನನ್ನಿಂದ ಕೇಳು. ಇದನ್ನು ಈಶ್ವರ ಕೋಟಿಯ ಕಪಿಲಾದಿ ಯತಿಗಳು ಸಂಪೂರ್ಣವಾಗಿ ಪ್ರಕಾಶಿಸಿದ್ದಾರೆ.

12290004a ಯಸ್ಮಿನ್ನ ವಿಭ್ರಮಾಃ ಕೇ ಚಿದ್ದೃಶ್ಯಂತೇ ಮನುಜರ್ಷಭ।
12290004c ಗುಣಾಶ್ಚ ಯಸ್ಮಿನ್ಬಹವೋ ದೋಷಹಾನಿಶ್ಚ ಕೇವಲಾ।।

ಮನುಜರ್ಷಭ! ಇದರಲ್ಲಿ ಯಾವುದೇ ತಪ್ಪು ಕಾಣುವುದಿಲ್ಲ. ಇದರಲ್ಲಿ ಅನೇಕ ಗುಣಗಳಿವೆ ಆದರೆ ದೋಷಗಳ ಸರ್ವಥಾ ಅಭಾವವಿದೆ.

12290005a ಜ್ಞಾನೇನ ಪರಿಸಂಖ್ಯಾಯ ಸದೋಷಾನ್ವಿಷಯಾನ್ನೃಪ।
12290005c ಮಾನುಷಾನ್ದುರ್ಜಯಾನ್ ಕೃತ್ಸ್ನಾನ್ಪೈಶಾಚಾನ್ವಿಷಯಾಂಸ್ತಥಾ।।
12290006a ರಾಕ್ಷಸಾನ್ವಿಷಯಾನ್ ಜ್ಞಾತ್ವಾ ಯಕ್ಷಾಣಾಂ ವಿಷಯಾಂಸ್ತಥಾ।
12290006c ವಿಷಯಾನೌರಗಾನ್ ಜ್ಞಾತ್ವಾ ಗಾಂಧರ್ವವಿಷಯಾಂಸ್ತಥಾ।।
12290007a ಪಿತೃಣಾಂ ವಿಷಯಾನ್ ಜ್ಞಾತ್ವಾ ತಿರ್ಯಕ್ಷು ಚರತಾಂ ನೃಪ।
12290007c ಸುಪರ್ಣವಿಷಯಾನ್ ಜ್ಞಾತ್ವಾ ಮರುತಾಂ ವಿಷಯಾಂಸ್ತಥಾ।।
12290008a ರಾಜರ್ಷಿವಿಷಯಾನ್ ಜ್ಞಾತ್ವಾ ಬ್ರಹ್ಮರ್ಷಿವಿಷಯಾಂಸ್ತಥಾ।
12290008c ಆಸುರಾನ್ವಿಷಯಾನ್ ಜ್ಞಾತ್ವಾ ವೈಶ್ವದೇವಾಂಸ್ತಥೈವ ಚ।।
12290009a ದೇವರ್ಷಿವಿಷಯಾನ್ಜ್ಞಾತ್ವಾ ಯೋಗಾನಾಮಪಿ ಚೇಶ್ವರಾನ್।
12290009c ವಿಷಯಾಂಶ್ಚ ಪ್ರಜೇಶಾನಾಂ ಬ್ರಹ್ಮಣೋ ವಿಷಯಾಂಸ್ತಥಾ।।
12290010a ಆಯುಷಶ್ಚ ಪರಂ ಕಾಲಂ ಲೋಕೇ ವಿಜ್ಞಾಯ ತತ್ತ್ವತಃ।
12290010c ಸುಖಸ್ಯ ಚ ಪರಂ ತತ್ತ್ವಂ ವಿಜ್ಞಾಯ ವದತಾಂ ವರ।।
12290011a ಪ್ರಾಪ್ತೇ ಕಾಲೇ ಚ ಯದ್ದುಃಖಂ ಪತತಾಂ ವಿಷಯೈಷಿಣಾಮ್।
12290011c ತಿರ್ಯಕ್ಚ ಪತತಾಂ ದುಃಖಂ ಪತತಾಂ ನರಕೇ ಚ ಯತ್।।
12290012a ಸ್ವರ್ಗಸ್ಯ ಚ ಗುಣಾನ್ ಕೃತ್ಸ್ನಾನ್ದೋಷಾನ್ಸರ್ವಾಂಶ್ಚ ಭಾರತ।
12290012c ವೇದವಾದೇ ಚ ಯೇ ದೋಷಾ ಗುಣಾ ಯೇ ಚಾಪಿ ವೈದಿಕಾಃ।।
12290013a ಜ್ಞಾನಯೋಗೇ ಚ ಯೇ ದೋಷಾ ಗುಣಾ ಯೋಗೇ ಚ ಯೇ ನೃಪ।
12290013c ಸಾಂಖ್ಯಜ್ಞಾನೇ ಚ ಯೇ ದೋಷಾಸ್ತಥೈವ ಚ ಗುಣಾ ನೃಪ।।
12290014a ಸತ್ತ್ವಂ ದಶಗುಣಂ ಜ್ಞಾತ್ವಾ ರಜೋ ನವಗುಣಂ ತಥಾ।
12290014c ತಮಶ್ಚಾಷ್ಟಗುಣಂ ಜ್ಞಾತ್ವಾ ಬುದ್ಧಿಂ ಸಪ್ತಗುಣಾಂ ತಥಾ।।
12290015a ಷಡ್ಗುಣಂ ಚ ನಭೋ ಜ್ಞಾತ್ವಾ ಮನಃ ಪಂಚಗುಣಂ ತಥಾ।
12290015c ಬುದ್ಧಿಂ ಚತುರ್ಗುಣಾಂ ಜ್ಞಾತ್ವಾ ತಮಶ್ಚ ತ್ರಿಗುಣಂ ಮಹತ್।।
12290016a ದ್ವಿಗುಣಂ ಚ ರಜೋ ಜ್ಞಾತ್ವಾ ಸತ್ತ್ವಮೇಕಗುಣಂ ಪುನಃ।
12290016c ಮಾರ್ಗಂ ವಿಜ್ಞಾಯ ತತ್ತ್ವೇನ ಪ್ರಲಯೇ ಪ್ರೇಕ್ಷಣಂ ತಥಾ।।
12290017a ಜ್ಞಾನವಿಜ್ಞಾನಸಂಪನ್ನಾಃ ಕಾರಣೈರ್ಭಾವಿತಾಃ ಶುಭೈಃ।
12290017c ಪ್ರಾಪ್ನುವಂತಿ ಶುಭಂ ಮೋಕ್ಷಂ ಸೂಕ್ಷ್ಮಾ ಇಹ ನಭಃ ಪರಮ್।।

ಮಾತನಾಡುವವರಲ್ಲಿ ಶ್ರೇಷ್ಠ! ನೃಪ! ಜ್ಞಾನ-ವಿಜ್ಞಾನ ಸಂಪನ್ನ ಮೋಕ್ಷೋಪಯೋಗೀ ಸಾಧನೆಗಳಿಂದ ಶುದ್ಧ ಚಿತ್ತರಾದ ವಿದ್ವಾಂಸರು – ವಿಷಯಗಳೆಲ್ಲವೂ ದೋಷಯುಕ್ತವಾದವುಗಳೆನ್ನುವುದನ್ನು ಜ್ಞಾನದ ಮೂಲಕ ವಿಶೇಷವಾಗಿ ಪರಿಗಣಿಸಿ, ಆರೋಪಗಳಿಂದ ವಿಮುಕ್ತರಾಗಿ, ಸಾತ್ತ್ವಿಕಭಾವಗಳಿಂದ ಕೂಡಿದವರಾಗಿ, ಪರಮಾಕಾಶವನ್ನು ಹೊಂದುವ ಸೂಕ್ಷ್ಮಭೂತಗಳಂತೆ ಮಂಗಳಕರ ಮೋಕ್ಷವನ್ನು ಹೊಂದುತ್ತಾರೆ. ಅವರು ಮನುಷ್ಯ-ಪಿಶಾಚಾದಿ ಎಲ್ಲ ಭೂತಗಳಿಗೂ ಸಂಬಂಧಿಸಿದ ವಿಷಯಗಳು ಅಥವಾ ಇಂದ್ರಿಯಾರ್ಥಗಳನ್ನು ಪರಿಶೀಲಿಸಿ ಎಲ್ಲರಿಗೂ – ದೇವತೆಗಳು, ಬ್ರಹ್ಮ, ಋಷಿ-ಮುನಿಗಳನ್ನೂ ಸೇರಿ – ವಿಷಯಾಸಕ್ತಿಗಳಿವೆ ಎನ್ನುವುದನ್ನು ತಿಳಿದುಕೊಂಡರು. ಮೊದಲು ಅವರು ಮನುಷ್ಯನಿಗೆ ಸಂಬಂಧಿಸಿದ ವಿಷಯಗಳೆಲ್ಲವನ್ನೂ ತಿಳಿದುಕೊಂಡು ಅವುಗಳನ್ನು ದುರ್ಜಯಗಳೆಂದು ಭಾವಿಸಿ ಅವುಗಳ ನಿವಾರಣೋಪಾಯವನ್ನು ಕಂಡುಕೊಂಡರು. ಬಳಿಕ ಪಿಶಾಚಿಗಳಿಗೆ ಸಂಬಂಧಿಸಿದ ವಿಷಯಗಳನ್ನೂ, ರಾಕ್ಷಸರಿಗೆ ಸಂಬಂಧಿಸಿದ ವಿಷಯಗಳನ್ನೂ ತಿಳಿದುಕೊಂಡರು. ಯಕ್ಷರಿಗೆ ಸಂಬಂಧಿಸಿದ ವಿಷಯಗಳನ್ನೂ ತಿಳಿದುಕೊಂಡರು. ಗಂಧರ್ವರಿಗೆ ಸಂಬಂಧಿಸಿದ ವಿಷಯಗಳನ್ನೂ ತಿಳಿದುಕೊಂಡರು. ಪಿತೃಗಳಿಗೆ ಸಂಬಂಧಿಸಿದ ವಿಷಯಗಳನ್ನೂ ತಿಳಿದುಕೊಂಡರು. ತಿರ್ಯಗ್ಯೋನಿಗಳಿಗೆ ಸಂಬಂಧಿಸಿದ ವಿಷಯ-ಸುಖಗಳನ್ನೂ ತಿಳಿದುಕೊಂಡರು. ಗರುಡ ಪಕ್ಷಿಗಳಿಗೆ ಮತ್ತು ಮರುತ್ತುಗಳಿಗೆ ಸಂಬಂಧಿಸಿದ ವಿಷಯಗಳನ್ನೂ ತಿಳಿದುಕೊಂಡರು. ರಾಜರ್ಷಿಗಳು-ಮಹರ್ಷಿಗಳಿಗೆ ಸಂಬಂಧಿಸಿದ ವಿಷಯಗಳನ್ನೂ ತಿಳಿದುಕೊಂಡರು. ಅಸುರರಿಗೆ ಸಂಬಂಧಿಸಿದ ಮತ್ತು ವಿಶ್ವೇದೇವರಿಗೆ ಸಂಬಂಧಿಸಿದ ವಿಷಯಗಳನ್ನೂ ತಿಳಿದುಕೊಂಡರು. ದೇವರ್ಷಿಗಳಿಗೆ ಮತ್ತು ಯೋಗಿಗಳಿಗೆ ಸಂಬಂಧಿಸಿದ ವಿಷಯಗಳನ್ನೂ ತಿಳಿದುಕೊಂಡರು. ಪ್ರಜಾಪತಿಗಳಿಗೆ ಮತ್ತು ಬ್ರಹ್ಮನಿಗೆ ಸಂಬಂಧಿಸಿದ ವಿಷಯಗಳನ್ನೂ ತಿಳಿದುಕೊಂಡರು. ಹೀಗೆ ತಿರ್ಯಕ್ಪ್ರಾಣಿಗಳಿಂದ ಬ್ರಹ್ಮಪರ್ಯಂತವಾಗಿ ವಿಷಯಾಭಿಲಾಷೆಯು ಎಲ್ಲರಿಗೂ ಇದ್ದೇ ಇರುತ್ತದೆ ಎನ್ನುವುದನ್ನು ತಿಳಿದುಕೊಂಡರು. ಮನುಷ್ಯನಿಗೆ ಲೋಕದಲ್ಲಿ ಪರಮಾಯುಷ್ಯಕಾಲವು ಎಷ್ಟೆಂಬುದನ್ನು ಯಥಾವತ್ತಾಗಿ ತಿಳಿದುಕೊಂಡರು. ಐಹಿಕ, ಆಮುಷ್ಠಿಕ ಮತ್ತು ಆಧ್ಯಾತ್ಮಸುಖಗಳ ತತ್ತ್ವವನ್ನು ಚೆನ್ನಾಗಿ ತಿಳಿದುಕೊಂಡರು. ವಿಷಯಾಭಿಲಾಷಿಗಳಿಗೆ ಪದೇ ಪದೇ ಎಂತೆಂತಹ ದುಃಖವು ಸಂಭವಿಸುತ್ತದೆ ಎನ್ನುವುದನ್ನೂ ತಿಳಿದುಕೊಂಡರು. ಮಹಾಪಾಪದ ಪರಿಣಾಮವಾಗಿ ತಿರ್ಯಗ್ಯೋನಿಗಳಲ್ಲಿ ಜನ್ಮತಾಳುವವರ ದುಃಖವನ್ನೂ, ನರಕದಲ್ಲಿ ಬೀಳುವವರ ದುಃಖವನ್ನೂ ತಿಳಿದುಕೊಂಡರು. ಸ್ವರ್ಗದಲ್ಲಿರುವ ಸಮಸ್ತ ಗುಣ-ದೋಷಗಳನ್ನೂ ತಿಳಿದುಕೊಂಡರು. ವೇದಗಳಲ್ಲಿಯೂ, ವೈದಿಕ ಕರ್ಮಗಳಲ್ಲಿಯೂ ಇರುವ ಗುಣ-ದೋಷಗಳೆಲ್ಲವನ್ನೂ ತಿಳಿದುಕೊಂಡರು. ಜ್ಞಾನಯೋಗ ಮತ್ತು ಯೋಗ ಮಾರ್ಗಗಳಲ್ಲಿರುವ ಸಮಸ್ತ ಗುಣ-ದೋಷಗಳನ್ನೂ ತಿಳಿದುಕೊಂಡರು. ಅವರು ಹಾಗೆಯೇ ಜಿಜ್ಞಾಸೆಮಾಡುತ್ತಾ ಸತ್ತ್ವಗುಣದಲ್ಲಿ -ಜ್ಞಾನಶಕ್ರಿ, ವೈರಾಗ್ಯ, ಸ್ವಾಮಿಭಾವ, ತಪಸ್ಸು, ಸತ್ಯ, ಕ್ಷಮೆ, ಧೈರ್ಯ, ಸ್ವಚ್ಛತೆ, ಆತ್ಮಬೋಧ, ಮತ್ತು ಅಧಿಷ್ಠಾತೃತ್ವ – ಎಂಬ ಹತ್ತು ಗುಣಗಳಿವೆಯೆಂದು ತಿಳಿದುಕೊಂಡರು. ರಜೋಗುಣದಲ್ಲಿ – ಅಸಂತೋಷ, ಪಶ್ಚಾತ್ತಾಪ, ಶೋಕ, ಲೋಭ, ಅಕ್ಷಮ, ದಮನ ಪ್ರವೃತ್ತಿ, ಕಾಮ, ಕ್ರೋಧ, ಮತ್ತು ಈರ್ಷ್ಯೆಗಳೆಂಬ ಒಂಭತ್ತು ಗುಣಗಳಿವೆಯೆಂದು ತಿಳಿದುಕೊಂಡರು. ತಮೋಗುಣದಲ್ಲಿ – ಅವಿವೇಕ, ಮೋಹ, ಪ್ರಮಾದ, ಸ್ವಪ್ನ, ನಿದ್ರೆ, ಅಭಿಮಾನ, ವಿಷಾದ, ಮತ್ತು ಅಪ್ರೀತಿಗಳೆಂಬ ಎಂಟು ಗುಣಗಳಿವೆ ಎಂದು ತಿಳಿದುಕೊಂಡರು. ಬುದ್ಧಿಯಲ್ಲಿ – ಮಹತ್, ಅಹಂಕಾರ, ಶಬ್ದತನ್ಮಾತ್ರ, ಸ್ಪರ್ಶತನ್ಮಾತ್ರ, ರೂಪತನ್ಮಾತ್ರ, ರಸತನ್ಮಾತ್ರ, ಗಂಧತನ್ಮಾತ್ರಗಳೆಂಬ ಏಳು ಗುಣಗಳಿವೆಯೆಂದು ತಿಳಿದುಕೊಂಡರು. ಮನಸ್ಸಿನಲ್ಲಿ – ಶ್ರೋತ್ರ, ತ್ವಚೆ, ನೇತ್ರ, ರಸನ, ಘ್ರಾಣ ಮತ್ತು ಮನಸ್ಸು – ಎಂಬ ಆರು ಗುಣಗಳಿವೆಯೆನ್ನುವುದನ್ನು ತಿಳಿದುಕೊಂಡರು. ಆಕಾಶವು ವಾಯು, ಆಕಾಶ, ಅಗ್ನಿ, ಜಲ ಮತ್ತು ಪೃಥ್ವಿಗಳೆಂಬ ಐದು ಗುಣಗಳುಳ್ಳದ್ದು ಎಂದು ತಿಳಿದುಕೊಂಡರು. ಬುದ್ಧಿಯು – ಸಂಶಯ, ನಿಶ್ಚಯ, ಗರ್ವ, ಮತ್ತು ಸ್ಮರಣ ಎಂಬ ನಾಲ್ಕು ಗುಣಗಳನ್ನು ಹೊಂದಿದೆಯೆಂದು ತಿಳಿದುಕೊಂಡರು. ಹಾಗೆಯೇ ತಮೋಗುಣವು – ಅಪ್ರತಿಪತ್ತಿ, ವಿಪ್ರತಿಪತ್ತಿ ಮತ್ತು ವಿಪರೀತಪ್ರತಿಪತ್ತಿಗಳೆಂಬ ತ್ರಿಗುಣಾತ್ಮಕವೆಂದೂ, ರಜೋಗುಣವು ಪ್ರವೃತ್ತಿ ಮತ್ತು ದುಃಖಗಳೆಂಬ ದ್ವಿಗುಣಾತ್ಮಕವೆಂದೂ ಮತ್ತು ಸತ್ತ್ವಗುಣವು ಪ್ರಕಾಶವೆಂಬ ಏಕಗುಣಾತ್ಮಕವೆಂದೂ ತಿಳಿದುಕೊಂಡರು. ಆತ್ಮಪ್ರಾಪ್ತಿಯ ಮಾರ್ಗವನ್ನು ತಿಳಿದುಕೊಂಡರು. ಪ್ರಾಕೃತ ಪ್ರಳಯದ ವಿಷಯವನ್ನೂ ಮತ್ತು ಆತ್ಮದರ್ಶನದ ವಿಷಯವನ್ನೂ ತತ್ತ್ವಶಃ ತಿಳಿದುಕೊಂಡರು. ಈ ವಿಷಯಗಳೆಲ್ಲವನ್ನೂ ಮತ್ತು ಶಾಸ್ತ್ರಗಳನ್ನೂ ಮಥಿಸಿ ತಿಳಿದುಕೊಂಡ ಸಾಂಖ್ಯಯೋಗಿಗಳು ಮೋಕ್ಷೋಪಯೋಗೀ ಸಾಧನಗಳಿಂದ ಶುದ್ಧಚಿತ್ತರಾಗಿ ಮೋಕ್ಷವನ್ನು ಪಡೆದುಕೊಂಡರು.

12290018a ರೂಪೇಣ ದೃಷ್ಟಿಂ ಸಂಯುಕ್ತಾಂ ಘ್ರಾಣಂ ಗಂಧಗುಣೇನ ಚ।
12290018c ಶಬ್ದೇ ಸಕ್ತಂ ತಥಾ ಶ್ರೋತ್ರಂ ಜಿಹ್ವಾಂ ರಸಗುಣೇಷು ಚ।।

ಕಣ್ಣುಗಳು ರೂಪಗುಣದಿಂದ ಯುಕ್ತವಾಗಿದೆಯೆನ್ನುವುದನ್ನೂ, ಮೂಗು ಗಂಧಗುಣದಿಂದ ಯುಕ್ತವಾಗಿದೆಯೆನ್ನುವುದನ್ನೂ, ಕಿವಿಯು ಶಬ್ದಗುಣದಿಂದ ಮತ್ತು ನಾಲಿಗೆಯು ರಸೋಗುಣದಿಂದ ಯುಕ್ತವಾಗಿದೆಯೆನ್ನುವುದನ್ನು ತಿಳಿದುಕೊಂಡರು.

12290019a ತನುಂ ಸ್ಪರ್ಶೇ ತಥಾ ಸಕ್ತಾಂ ವಾಯುಂ ನಭಸಿ ಚಾಶ್ರಿತಮ್।
12290019c ಮೋಹಂ ತಮಸಿ ಸಂಸಕ್ತಂ ಲೋಭಮರ್ಥೇಷು ಸಂಶ್ರಿತಮ್।।

ಚರ್ಮವು ಸ್ಪರ್ಷಗುಣಯುಕ್ತವಾಗಿದೆಯೆಂದೂ, ವಾಯುವು ಆಕಾಶದಲ್ಲಿ ಆಶ್ರಿತವಾಗಿದೆಯೆಂದೂ, ತಮೋಗುಣವು ಮೋಹಯುಕ್ತವಾಗಿದೆಯೆಂದೂ ಮತ್ತು ಲೋಭವು ಇಂದ್ರಿಯಾರ್ಥಗಳಲ್ಲಿ ಸೇರಿದೆ ಎನ್ನುವುದನ್ನೂ ತಿಳಿದುಕೊಂಡರು.

12290020a ವಿಷ್ಣುಂ ಕ್ರಾಂತೇ ಬಲೇ ಶಕ್ರಂ ಕೋಷ್ಠೇ ಸಕ್ತಂ ತಥಾನಲಮ್।
12290020c ಅಪ್ಸು ದೇವೀಂ ತಥಾ ಸಕ್ತಾಮಪಸ್ತೇಜಸಿ ಚಾಶ್ರಿತಾಃ।।
12290021a ತೇಜೋ ವಾಯೌ ತು ಸಂಸಕ್ತಂ ವಾಯುಂ ನಭಸಿ ಚಾಶ್ರಿತಮ್।
12290021c ನಭೋ ಮಹತಿ ಸಂಯುಕ್ತಂ ಮಹದ್ಬುದ್ಧೌ ಚ ಸಂಶ್ರಿತಮ್।।

ಪಾದಗಳಲ್ಲಿ ವಿಷ್ಣುವಿರುವನೆಂಬುದನ್ನೂ, ತೋಳುಗಳಲ್ಲಿ ಇಂದ್ರನಿರುವನೆಂಬುದನ್ನೂ, ಹೊಟ್ಟೆಯಲ್ಲಿ ಅಗ್ನಿಯಿರುವನೆಂಬುದನ್ನೂ, ನೀರಿನಲ್ಲಿ ಭೂದೇವಿಯಿರುವಳೆಂಬುದನ್ನೂ, ನೀರು ತೇಜಸ್ಸಿನಲ್ಲಿ ಸೇರಿದೆ ಎನ್ನುವುದನ್ನೂ, ತೇಜಸ್ಸು ವಾಯುವಿನಲ್ಲಿ ಸೇರಿದೆಯೆನ್ನುವುದನ್ನೂ, ವಾಯುವು ಆಕಾಶವನ್ನಾಶ್ರಯಿಸಿದೆಯೆನ್ನುವುದನ್ನೂ, ಆಕಾಶವು ಮಹತ್ತತ್ತ್ವದಲ್ಲಿ ಸೇರಿದೆಯೆನ್ನುವುದನ್ನೂ, ಮಹತ್ತತ್ತ್ವವು ಬುದ್ಧಿಯಲ್ಲಿ ಅಧಿಷ್ಠಾನಹೊಂದಿದೆಯೆನ್ನುವುದನ್ನೂ ಸಾಂಖ್ಯರು ತಿಳಿದುಕೊಂಡರು.

12290022a ಬುದ್ಧಿಂ ತಮಸಿ ಸಂಸಕ್ತಾಂ ತಮೋ ರಜಸಿ ಚಾಶ್ರಿತಮ್।
12290022c ರಜಃ ಸತ್ತ್ವೇ ತಥಾ ಸಕ್ತಂ ಸತ್ತ್ವಂ ಸಕ್ತಂ ತಥಾತ್ಮನಿ।।
12290023a ಸಕ್ತಮಾತ್ಮಾನಮೀಶೇ ಚ ದೇವೇ ನಾರಾಯಣೇ ತಥಾ।
12290023c ದೇವಂ ಮೋಕ್ಷೇ ಚ ಸಂಸಕ್ತಂ ಮೋಕ್ಷಂ ಸಕ್ತಂ ತು ನ ಕ್ವ ಚಿತ್।।

ಬುದ್ಧಿಯು ತಮೋಗುಣದಲ್ಲಿ ಸೇರಿರುವುದನ್ನೂ, ತಮಸ್ಸು ರಜಸ್ಸಿನಲ್ಲಿ ಸೇರಿರುವುದನ್ನೂ, ರಜಸ್ಸು ಸತ್ತ್ವದಲ್ಲಿ ಸೇರಿರುವುದನ್ನೂ, ಸತ್ತ್ವವು ಆತ್ಮನಲ್ಲಿ ಸೇರಿರುವುದನ್ನೂ, ಆತ್ಮನು ಈಶ ನಾರಾಯಣನಲ್ಲಿ ಸೇರಿರುವುದನ್ನೂ, ನಾರಾಯಣನು ಮೋಕ್ಷದಲ್ಲಿ ಸೇರಿರುವನೆಂದೂ ಆದರೆ ಮೋಕ್ಷವು ಯಾವುದರೊಂದಿಗೂ ಸೇರಿಲ್ಲವೆಂಬುದನ್ನೂ, ಹಾಗೂ ಅದೇ ಅವಿನಾಶೀ ಮತ್ತು ಅನಾಶ್ರಯವೆಂಬುದನ್ನೂ ಸಾಂಖ್ಯರು ತಿಳಿದುಕೊಂಡರು.

12290024a ಜ್ಞಾತ್ವಾ ಸತ್ತ್ವಯುತಂ ದೇಹಂ ವೃತಂ ಷೋಡಶಭಿರ್ಗುಣೈಃ।
12290024c ಸ್ವಭಾವಂ ಚೇತನಾಂ ಚೈವ ಜ್ಞಾತ್ವಾ ವೈ ದೇಹಮಾಶ್ರಿತೇ।।
12290025a ಮಧ್ಯಸ್ಥಮೇಕಮಾತ್ಮಾನಂ ಪಾಪಂ ಯಸ್ಮಿನ್ನ ವಿದ್ಯತೇ।
12290025c ದ್ವಿತೀಯಂ ಕರ್ಮ ವಿಜ್ಞಾಯ ನೃಪತೇ ವಿಷಯೈಷಿಣಾಮ್।।
12290026a ಇಂದ್ರಿಯಾಣೀಂದ್ರಿಯಾರ್ಥಾಂಶ್ಚ ಸರ್ವಾನಾತ್ಮನಿ ಸಂಶ್ರಿತಾನ್1

ದೇಹ, ಬುದ್ಧಿ ಇವೇ ಮೊದಲಾದ ಸತ್ತ್ವಗಳಿಂದ ಯುಕ್ತವಾದ ದೇಹವು - ದಶೇಂದ್ರಿಯಗಳು, ಮನಸ್ಸು ಮತ್ತು ಪಂಚಪ್ರಾಣಯುಕ್ತವಾದ ಹದಿನಾರು ಗುಣಗುಳ್ಳಳ್ಳದ್ದು ಎಂದು ತಿಳಿದುಕೊಂಡರು. ನೃಪತೇ! ಸ್ವಭಾವ ಮತ್ತು ಚೇತನಗಳು ದೇಹವನ್ನು ಆಶ್ರಯಿಸಿರುವುದನ್ನೂ, ಪಾಪರಹಿತ ಏಕಮಾತ್ರ ಆತ್ಮನು ಹೃದಯಕಮಲದ ಮಧ್ಯದಲ್ಲಿ ಉದಾಸೀನನಾಗಿದ್ದಾನೆ ಎನ್ನುವುದನ್ನೂ ಸಾಂಖ್ಯರು ತಿಳಿದುಕೊಂಡರು. ವಿಷಯಸುಖೈಷಿಗಳ ಕರ್ಮಗಳು ಆತ್ಮನಿಗೆ ಅತಿರಿಕ್ತವಾಗಿವೆಯೆನ್ನುವುದನ್ನೂ ಮತ್ತು ಅವು ಎರಡನೆಯ ತತ್ವ ಅಜ್ಞಾನಕ್ಕೆ ಸಂಬಂಧಿಸಿವೆಯೆನ್ನುವುದನ್ನೂ ಸಾಂಖ್ಯರು ತಿಳಿದುಕೊಂಡರು. ಇಂದ್ರಿಯಗಳು ಮತ್ತು ಇಂದ್ರಿಯಾರ್ಥಗಳೆಲ್ಲವೂ ಆತ್ಮನಲ್ಲಿ ಆಶ್ರಯಿಸಿರುವವೆಂದೂ ತಿಳಿದುಕೊಂಡರು.

12290026c ಪ್ರಾಣಾಪಾನೌ ಸಮಾನಂ ಚ ವ್ಯಾನೋದಾನೌ ಚ ತತ್ತ್ವತಃ।।
12290027a ಅವಾಕ್ಚೈವಾನಿಲಂ ಜ್ಞಾತ್ವಾ ಪ್ರವಹಂ ಚಾನಿಲಂ ಪುನಃ।
12290027c ಸಪ್ತ ವಾತಾಂಸ್ತಥಾ ಶೇಷಾನ್ಸಪ್ತಧಾ ವಿಧಿವತ್ಪುನಃ।।

ದೇಹದಲ್ಲಿರುವ ಪ್ರಾಣ, ಅಪಾನ, ಸಮಾನ, ವ್ಯಾನ ಮತ್ತು ಉದಾನ ಎಂಬ ಐದು ವಾಯುಗಳನ್ನೂ, ಆರನೆಯದಾದ ಅಧೋವಾಯುವನ್ನೂ, ಊರ್ಧ್ವಮುಖವಾಗಿರುವ ಪ್ರವಹ ಎಂಬ ಹೆಸರಿನ ಏಳನೇ ವಾಯುವನ್ನೂ, ತತ್ತ್ವತಃ ತಿಳಿದುಕೊಂಡರು. ಈ ಏಳು ವಾಯುಗಳಲ್ಲಿ ಪ್ರತಿಯೊಂದರಲ್ಲಿಯೂ ಇರುವ ಏಳೇಳು ಪ್ರಭೇದಗಳನ್ನೂ, ಹೀಗೆ ಒಟ್ಟು ನಲ್ವತ್ತೊಂಭತ್ತು ಪ್ರಕಾರದ ವಾಯುಗಳಿವೆಯೆಂದು ಸಾಂಖ್ಯರು ತಿಳಿದುಕೊಂಡರು.

12290028a ಪ್ರಜಾಪತೀನೃಷೀಂಶ್ಚೈವ ಮಾರ್ಗಾಂಶ್ಚ ಸುಬಹೂನ್ವರಾನ್।
12290028c ಸಪ್ತರ್ಷೀಂಶ್ಚ ಬಹೂನ್ ಜ್ಞಾತ್ವಾ ರಾಜರ್ಷೀಂಶ್ಚ ಪರಂತಪ।।
12290029a ಸುರರ್ಷೀನ್ಮಹತಶ್ಚಾನ್ಯಾನ್ಮಹರ್ಷೀನ್ಸೂರ್ಯಸಂನಿಭಾನ್।

ಹೀಗೆಯೇ ಅವರು ಅನೇಕ ಪ್ರಜಾಪತಿಗಳನ್ನೂ, ಋಷಿಗಳನ್ನೂ ಮತ್ತು ಅವರನ್ನು ಸೇರುವ ಅನೇಕ ಮಾರ್ಗಗಳನ್ನೂ ತಿಳಿದುಕೊಂಡರು. ಪರಂತಪ! ಸಪ್ತರ್ಷಿಗಳನ್ನೂ, ಬಹುಸಂಖ್ಯಾತ ರಾಜರ್ಷಿಗಳನ್ನೂ, ದೇವರ್ಷಿಗಳನ್ನೂ, ಸೂರ್ಯಸದೃಶ ಬ್ರಹ್ಮರ್ಷಿಗಳನ್ನೂ ಸಾಂಖ್ಯಯೋಗಿಗಳು ತಿಳಿದುಕೊಂಡರು.

12290029c ಐಶ್ವರ್ಯಾಚ್ಚ್ಯಾವಿತಾನ್ ಜ್ಞಾತ್ವಾ ಕಾಲೇನ ಮಹತಾ ನೃಪ।।
12290030a ಮಹತಾಂ ಭೂತಸಂಘಾನಾಂ ಶ್ರುತ್ವಾ ನಾಶಂ ಚ ಪಾರ್ಥಿವ।
12290030c ಗತಿಂ ಚಾಪ್ಯಶುಭಾಂ ಜ್ಞಾತ್ವಾ ನೃಪತೇ ಪಾಪಕರ್ಮಣಾಮ್।।
12290031a ವೈತರಣ್ಯಾಂ ಚ ಯದ್ದುಃಖಂ ಪತಿತಾನಾಂ ಯಮಕ್ಷಯೇ।

ಅಂತಹ ಶ್ರೇಷ್ಠ ಲೋಕಗಳಿಗೆ ಹೋದವರೆಲ್ಲರೂ ದೀರ್ಘ ಕಾಲಾನಂತರ ಅಲ್ಲಿನ ಸಂಪತ್ತಿನಿಂದ ಭ್ರಷ್ಟರಾದುದನ್ನೂ ಸಾಂಖ್ಯಯೋಗಿಗಳು ನೋಡಿದರು. ದೊಡ್ಡ-ದೊಡ್ಡ ಭೂತಸಂಘಗಳೂ ಒಮ್ಮೆ ಸಂಪೂರ್ಣನಾಶವಾಗುತ್ತವೆ ಎನ್ನುವುದನ್ನು ಕೇಳಿ ತಿಳಿದರು. ಪಾಪಕರ್ಮಿಗಳು ಹೊಂದುವ ದುರ್ಗತಿಯನ್ನೂ ವೈತರಣೀನದಿಯಲ್ಲಿದ್ದಾಗ ಅವರು ಅನುಭವಿಸುವ ಶಿಕ್ಷೆಯನ್ನೂ ಸಾಂಖ್ಯರು ತಿಳಿದುಕೊಂಡರು.

12290031c ಯೋನೀಷು ಚ ವಿಚಿತ್ರಾಸು ಸಂಸಾರಾನಶುಭಾಂಸ್ತಥಾ।।
12290032a ಜಠರೇ ಚಾಶುಭೇ ವಾಸಂ ಶೋಣಿತೋದಕಭಾಜನೇ।
12290032c ಶ್ಲೇಷ್ಮಮೂತ್ರಪುರೀಷೇ ಚ ತೀವ್ರಗಂಧಸಮನ್ವಿತೇ।।
12290033a ಶುಕ್ರಶೋಣಿತಸಂಘಾತೇ ಮಜ್ಜಾಸ್ನಾಯುಪರಿಗ್ರಹೇ।
12290033c ಸಿರಾಶತಸಮಾಕೀರ್ಣೇ ನವದ್ವಾರೇ ಪುರೇಽಶುಚೌ।।
12290034a ವಿಜ್ಞಾಯಾಹಿತಮಾತ್ಮಾನಂ ಯೋಗಾಂಶ್ಚ ವಿವಿಧಾನ್ನೃಪ।

ಜೀವರು ವಿಚಿತ್ರಯೋನಿಗಳಲ್ಲಿ ಜನ್ಮತಳೆದು ಅಶುಭ ಸಂಸಾರಗಳನ್ನು ಸೇರುವರೆಂಬುದನ್ನೂ ತಿಳಿದುಕೊಂಡರು. ಜೀವನು ಕಫ-ಮೂತ್ರ-ಪುರೀಷಯುಕ್ತ ತೀಕ್ಷ್ಣ ವಾಸನಾಯುಕ್ತ ರೇತೋರಕ್ತಗಳ ಸಮಾವೇಶವಿರುವ ಮತ್ತು ಮಜ್ಜೆ-ಸ್ನಾಯುಗಳ ಸಂಗ್ರಹವಿರುವ, ನೂರಾರು ನರಗಳಿಂದ ವ್ಯಾಪ್ತವಾದ, ಒಂಭತ್ತು ಬಾಗಿಲುಗಳುಳ್ಳ, ಅಶುಚಿಯಾದ ಶರೀರವೆಂಬ ಪುರದಲ್ಲಿ ರಕ್ತಕ್ಕೂ ಮತ್ತು ಮೂತ್ರಕ್ಕೂ ಪಾತ್ರೆಯ ರೂಪದಲ್ಲಿರುವ ಅಪವಿತ್ರವಾದ ಗರ್ಭಾಶಯದಲ್ಲಿ ವಾಸಮಾಡಬೇಕಾಗುವುದೆನ್ನುವುದನ್ನೂ ತಿಳಿದುಕೊಂಡು ಜೀವನಿಗೆ ಪರಮ ಹಿತಸ್ವರೂಪ ಆತ್ಮನನ್ನೂ ಹಾಗೂ ಅವನನ್ನು ತಿಳಿದುಕೊಳ್ಳಲು ಬೇಕಾದ ನಾನಾ ಪ್ರಕಾರದ ಉಪಾಯಗಳನ್ನೂ ಸಾಂಖ್ಯಯೋಗಿಗಳು ತಿಳಿದುಕೊಂಡರು.

12290034c ತಾಮಸಾನಾಂ ಚ ಜಂತೂನಾಂ ರಮಣೀಯಾವೃತಾತ್ಮನಾಮ್।।
12290035a ಸಾತ್ತ್ವಿಕಾನಾಂ ಚ ಜಂತೂನಾಂ ಕುತ್ಸಿತಂ ಭರತರ್ಷಭ।
12290035c ಗರ್ಹಿತಂ ಮಹತಾಮರ್ಥೇ ಸಾಂಖ್ಯಾನಾಂ ವಿದಿತಾತ್ಮನಾಮ್।।

ಭರತರ್ಷಭ! ಆತ್ಮಜ್ಞಾನೀ ಸಾಂಖ್ಯಯೋಗಿಗಳು ತಾಮಸ, ರಾಜಸ ಮತ್ತು ಸಾತ್ವಿಕ ಜಂತುಗಳ ಮೋಕ್ಷವಿರೋಧಿ ಮತ್ತು ಕುತ್ಸಿತ ವ್ಯವಹಾರಗಳನ್ನು ನಿಂದಿಸುತ್ತಾರೆ ಎನ್ನುವುದನ್ನೂ ಅವರು ತಿಳಿದುಕೊಂಡರು.

12290036a ಉಪಪ್ಲವಾಂಸ್ತಥಾ ಘೋರಾನ್ ಶಶಿನಸ್ತೇಜಸಸ್ತಥಾ।
12290036c ತಾರಾಣಾಂ ಪತನಂ ದೃಷ್ಟ್ವಾ ನಕ್ಷತ್ರಾಣಾಂ ಚ ಪರ್ಯಯಮ್।।
12290037a ದ್ವಂದ್ವಾನಾಂ ವಿಪ್ರಯೋಗಂ ಚ ವಿಜ್ಞಾಯ ಕೃಪಣಂ ನೃಪ।

ನೃಪ! ಘೋರ ಉತ್ಪಾತಗಳು, ಚಂದ್ರ-ಸೂರ್ಯ ಗ್ರಹಣಗಳು, ನಕ್ಷತ್ರಗಳು ಬೀಳುವುದು, ನಕ್ಷತ್ರಗಳ ವಕ್ರಗತಿ, ಪತಿ-ಪತ್ನಿಯರ ದುಃಖಕರ ವಿಯೋಗ ಇವೆಲ್ಲವನ್ನೂ ತಿಳಿದುಕೊಂಡರು.

12290037c ಅನ್ಯೋನ್ಯಭಕ್ಷಣಂ ದೃಷ್ಟ್ವಾ ಭೂತಾನಾಮಪಿ ಚಾಶುಭಮ್।।
12290038a ಬಾಲ್ಯೇ ಮೋಹಂ ಚ ವಿಜ್ಞಾಯ ಕ್ಷಯಂ ದೇಹಸ್ಯ ಚಾಶುಭಮ್।
12290038c ರಾಗೇ ಮೋಹೇ ಚ ಸಂಪ್ರಾಪ್ತೇ ಕ್ವ ಚಿತ್ಸತ್ತ್ವಂ ಸಮಾಶ್ರಿತಮ್।।
12290039a ಸಹಸ್ರೇಷು ನರಃ ಕಶ್ಚಿನ್ಮೋಕ್ಷಬುದ್ಧಿಂ ಸಮಾಶ್ರಿತಃ।

ಲೋಕದಲ್ಲಿ ಅನ್ಯೋನ್ಯರು ಭಕ್ಷಿಸುವ ದುರವಸ್ಥೆಯನ್ನು ನೋಡಿ, ಬಾಲ್ಯದಲ್ಲಿ ಮೋಹವಶರಾಗಿದ್ದು ವೃದ್ಧಾಪ್ಯದಲ್ಲಿ ದೇಹವು ಕ್ಷಯವಾಗುವ ಆ ಅಶುಭವನ್ನೂ ನೋಡಿ ತಿಳಿದುಕೊಂಡರು. ರಾಗ-ಮೋಹಗಳೆರಡೂ ಮನುಷ್ಯರನ್ನು ತುಂಬಿರಲು, ಯಾವುದೋ ಕೆಲವರಲ್ಲಿ ಮಾತ್ರ ಸತ್ತ್ವವು ಆಶ್ರಯಿಸಿದೆಯೆನ್ನುವುದನ್ನೂ, ಸಹಸ್ರರಲ್ಲಿ ಒಬ್ಬಿಬ್ಬರು ಮಾತ್ರ ಮೋಕ್ಷಬುದ್ಧಿಯನ್ನು ಆಶ್ರಯಿಸಿರುವರು ಎನ್ನುವುದನ್ನೂ ತಿಳಿದುಕೊಂಡರು.

12290039c ದುರ್ಲಭತ್ವಂ ಚ ಮೋಕ್ಷಸ್ಯ ವಿಜ್ಞಾಯ ಶ್ರುತಿಪೂರ್ವಕಮ್।।
12290040a ಬಹುಮಾನಮಲಬ್ಧೇಷು ಲಬ್ಧೇ ಮಧ್ಯಸ್ಥತಾಂ ಪುನಃ।

ಸ್ವಾಭಾವಿಕವಾಗಿ ಸಿಕ್ಕದೇ ಇರುವ ವಸ್ತುವಿನಲ್ಲಿ ಹೆಚ್ಚಿನ ಆದರವಿರುವುದನ್ನೂ ಸಿಕ್ಕಿದ ವಸ್ತುವಿನಲ್ಲಿ ಔದಾಸೀನ್ಯವಿರುವುದನ್ನೂ ಕಂಡು ಕೊಂಡರು. ವೇದಗಳ ಮೂಲಕ ಮೋಕ್ಷವು ದುರ್ಲಭವೆನ್ನುವುದನ್ನೂ ತಿಳಿದು ಅಂತಹ ದುರ್ಲಭ ಮೋಕ್ಷದ ವಿಷಯದಲ್ಲಿಯೇ ಹೆಚ್ಚು ಆಸಕ್ತಿಯನ್ನು ಸಾಂಖ್ಯರು ಹೊಂದಿದರು.

12290040c ವಿಷಯಾಣಾಂ ಚ ದೌರಾತ್ಮ್ಯಂ ವಿಜ್ಞಾಯ ನೃಪತೇ ಪುನಃ।।
12290041a ಗತಾಸೂನಾಂ ಚ ಕೌಂತೇಯ ದೇಹಾನ್ದೃಷ್ಟ್ವಾ ತಥಾಶುಭಾನ್।
12290041c ವಾಸಂ ಕುಲೇಷು ಜಂತೂನಾಂ ದುಃಖಂ ವಿಜ್ಞಾಯ ಭಾರತ।।

ವಿಷಯಗಳು (ಶಬ್ದ-ಸ್ಪರ್ಶ-ರೂಪ-ರಸ-ಗಂಧಾದಿಗಳು) ದುಷ್ಟವಾದವು ಎನ್ನುವುದನ್ನು ಅರಿತರು. ಪ್ರಾಣಗಳು ಬಿಟ್ಟವರ ದೇಹಗಳನ್ನು ಗಮನಿಸಿ ಅವು ಅಶುಭವಾದವುಗಳು ಎನ್ನುವುದನ್ನೂ ತಿಳಿದರು. ಭಾರತ! ಜಂತುಗಳಿಗೆ ಜನ್ಮತಾಳುವುದೇ ದುಃಖಕರ ಎನ್ನುವುದನ್ನು ತಿಳಿದುಕೊಂಡರು.

12290042a ಬ್ರಹ್ಮಘ್ನಾನಾಂ ಗತಿಂ ಜ್ಞಾತ್ವಾ ಪತಿತಾನಾಂ ಸುದಾರುಣಾಮ್।
12290042c ಸುರಾಪಾನೇ ಚ ಸಕ್ತಾನಾಂ ಬ್ರಾಹ್ಮಣಾನಾಂ ದುರಾತ್ಮನಾಮ್।
12290042e ಗುರುದಾರಪ್ರಸಕ್ತಾನಾಂ ಗತಿಂ ವಿಜ್ಞಾಯ ಚಾಶುಭಾಮ್।।

ಪತಿತ ಬ್ರಹ್ಮಘಾತಿಗಳಿಗೆ ಸುದಾರುಣ ದುರ್ಗತಿಯುಂಟಾಗುವುದೆಂದು ತಿಳಿದುಕೊಂಡರು. ಸುರಾಪಾನದಲ್ಲಿ ಆಸಕ್ತರಾದ ದುರಾತ್ಮ ಬ್ರಾಹ್ಮಣರಿಗೆ, ಮತ್ತು ಗುರುಪತ್ನಿಯರಲ್ಲಿ ಆಸಕ್ತರಾಗಿರುವವರಿಗೆ ದೊರಕುವ ಅಶುಭ ಗತಿಗಳನ್ನೂ ತಿಳಿದುಕೊಂಡರು.

12290043a ಜನನೀಷು ಚ ವರ್ತಂತೇ ಯೇ ನ ಸಮ್ಯಗ್ಯುಧಿಷ್ಠಿರ।
12290043c ಸದೇವಕೇಷು ಲೋಕೇಷು ಯೇ ನ ವರ್ತಂತಿ ಮಾನವಾಃ।।
12290044a ತೇನ ಜ್ಞಾನೇನ ವಿಜ್ಞಾಯ ಗತಿಂ ಚಾಶುಭಕರ್ಮಣಾಮ್।
12290044c ತಿರ್ಯಗ್ಯೋನಿಗತಾನಾಂ ಚ ವಿಜ್ಞಾಯ ಗತಯಃ ಪೃಥಕ್।।

ಜನನಿಯರ ವಿಷಯದಲ್ಲಿ ಸರಿಯಾಗಿ ನಡೆದುಕೊಳ್ಳದಿರುವ, ದೇವತೆಗಳ ವಿಷಯದಲ್ಲಿ ಸರಿಯಾಗಿ ನಡೆದುಕೊಳ್ಳದಿರುವ, ಮತ್ತು ಲೋಕದ ಜನರ ವಿಷಯದಲ್ಲಿ ಸರಿಯಾಗಿ ನಡೆದುಕೊಳ್ಳದಿರುವ ಪಾಪಕರ್ಮಿಗಳಿಗಾಗುವ ದುರ್ಗತಿಯನ್ನೂ, ಪಶು-ಪಕ್ಷಿಗಳೇ ಮೊದಲಾದ ತಿರ್ಯಗ್ಯೋನಿಗಳಲ್ಲಿ ಹುಟ್ಟಿದವುಗಳಿಗೆ ಪ್ರಾಪ್ತವಾಗುವ ವಿಭಿನ್ನ ಗತಿಗಳನ್ನೂ ತಿಳಿದುಕೊಂಡು ಸಾಂಖ್ಯರು ಮೋಕ್ಷಮಾರ್ಗವನ್ನೇ ಅವಲಂಬಿಸಿದರು.

12290045a ವೇದವಾದಾಂಸ್ತಥಾ ಚಿತ್ರಾನೃತೂನಾಂ ಪರ್ಯಯಾಂಸ್ತಥಾ।
12290045c ಕ್ಷಯಂ ಸಂವತ್ಸರಾಣಾಂ ಚ ಮಾಸಾನಾಂ ಪ್ರಕ್ಷಯಂ ತಥಾ।।
12290046a ಪಕ್ಷಕ್ಷಯಂ ತಥಾ ದೃಷ್ಟ್ವಾ ದಿವಸಾನಾಂ ಚ ಸಂಕ್ಷಯಮ್।
12290046c ಕ್ಷಯಂ ವೃದ್ಧಿಂ ಚ ಚಂದ್ರಸ್ಯ ದೃಷ್ಟ್ವಾ ಪ್ರತ್ಯಕ್ಷತಸ್ತಥಾ।।
12290047a ವೃದ್ಧಿಂ ದೃಷ್ಟ್ವಾ ಸಮುದ್ರಾಣಾಂ ಕ್ಷಯಂ ತೇಷಾಂ ತಥಾ ಪುನಃ।
12290047c ಕ್ಷಯಂ ಧನಾನಾಂ ಚ ತಥಾ ಪುನರ್ವೃದ್ಧಿಂ ತಥೈವ ಚ।।

ವಿಚಿತ್ರ ವೇದವಾದಗಳನ್ನೂ, ಋತುಗಳ ಪರಿವರ್ತನೆಗಳನ್ನೂ, ಸಂವತ್ಸರಗಳು-ಮಾಸಗಳು-ಪಕ್ಷಗಳು-ದಿವಸಗಳು ಕಳೆದುಹೋಗುತ್ತಿರುವುದನ್ನೂ, ಚಂದ್ರನ ವೃದ್ಧಿ-ಕ್ಷಯಗಳನ್ನೂ, ಸಮುದ್ರಗಳ ವೃದ್ಧಿ-ಕ್ಷಯಗಳನ್ನೂ, ಐಶ್ವರ್ಯಗಳ ವೃದ್ಧಿ-ಕ್ಷಯಗಳನ್ನೂ, ಪ್ರತ್ಯಕ್ಷವಾಗಿ ನೋಡಿ ಇವುಗಳ್ಯಾವುವೂ ಸ್ಥಿರವಲ್ಲ ಎನ್ನುವುದನ್ನು ನಿಶ್ಚಯಮಾಡಿಕೊಂಡು ಸಾಂಖ್ಯರು ಮೋಕ್ಷಮಾರ್ಗವನ್ನೇ ಅವಲಂಬಿಸಿದರು.

12290048a ಸಂಯೋಗಾನಾಂ ಕ್ಷಯಂ ದೃಷ್ಟ್ವಾ ಯುಗಾನಾಂ ಚ ವಿಶೇಷತಃ।
12290048c ಕ್ಷಯಂ ಚ ದೃಷ್ಟ್ವಾ ಶೈಲಾನಾಂ ಕ್ಷಯಂ ಚ ಸರಿತಾಂ ತಥಾ।।
12290049a ವರ್ಣಾನಾಂ ಚ ಕ್ಷಯಂ ದೃಷ್ಟ್ವಾ ಕ್ಷಯಾಂತಂ ಚ ಪುನಃ ಪುನಃ।
12290049c ಜರಾಮೃತ್ಯುಂ ತಥಾ ಜನ್ಮ ದೃಷ್ಟ್ವಾ ದುಃಖಾನಿ ಚೈವ ಹ।।

ಬಂಧು-ಮಿತ್ರಾದಿಗಳ ಸಂಯೋಗಗಳೂ, ಕೃತ-ತ್ರೇತಾದಿ ಯುಗಗಳೂ ವಿಶೇಷವಾಗಿ ಕ್ಷಯಿಸುವುದನ್ನೂ, ಪರ್ವತಗಳು ಕ್ಷಯಿಸುವುದನ್ನೂ, ನದಿಗಳು ಕ್ಷಯಿಸುವುದನ್ನೂ, ವರ್ಣಗಳು ಕ್ಷಯಿಸುವುದನ್ನೂ, ಮುಪ್ಪು-ಮೃತ್ಯು ಮತ್ತು ಜನ್ಮಗಳು ಪ್ರಾಣಿಮಾತ್ರಕ್ಕೇ ದುಃಖಕರ ಎನ್ನುವುದನ್ನೂ ಪುನಃ ಪುನಃ ನೋಡಿ ಸಾಂಖ್ಯರು ಶಾಶ್ವತವೂ ಸನಾತನವೂ ಆದ ಮೋಕ್ಷಮಾರ್ಗವನ್ನು ಅವಲಂಬಿಸಿದರು.

12290050a ದೇಹದೋಷಾಂಸ್ತಥಾ ಜ್ಞಾತ್ವಾ ತೇಷಾಂ ದುಃಖಂ ಚ ತತ್ತ್ವತಃ।
12290050c ದೇಹವಿಕ್ಲವತಾಂ ಚೈವ ಸಮ್ಯಗ್ವಿಜ್ಞಾಯ ಭಾರತ।।

ಭಾರತ! ದೇಹದಲ್ಲಿರುವ ದೋಷಗಳನ್ನೂ, ದೇಹವು ಅನುಭವಿಸಬೇಕಾದ ದುಃಖಗಳನ್ನೂ, ಶರೀರದ ವ್ಯಾಕುಲತೆಯನ್ನೂ ತತ್ತ್ವತಃ ಚೆನ್ನಾಗಿ ತಿಳಿದುಕೊಂಡು ಸಾಂಖ್ಯರು ದೇಹಾಭಿಮಾನವನ್ನೇ ತೊರೆದರು.

12290051a ಆತ್ಮದೋಷಾಂಶ್ಚ ವಿಜ್ಞಾಯ ಸರ್ವಾನಾತ್ಮನಿ ಸಂಶ್ರಿತಾನ್।
12290051c ಸ್ವದೇಹಾದುತ್ಥಿತಾನ್ಗಂಧಾಂಸ್ತಥಾ ವಿಜ್ಞಾಯ ಚಾಶುಭಾನ್।।

ಶರೀರದಲ್ಲಿರುವ ದೋಷಗಳನ್ನೂ, ಶರೀರದಲ್ಲಿ ಆಶ್ರಯಹೊಂದಿರುವ ವಸ್ತುಗಳನ್ನೂ ದೇಹದಿಂದಲೇ ಹೊರಬರುವ ದುರ್ಗಂಧವನ್ನೂ ತಿಳಿದುಕೊಂಡು ಸಾಂಖ್ಯರು ದೇಹದ ವಿಷಯದಲ್ಲಿ ಅನಾಸಕ್ತರಾದರು.”

12290052 ಯುಧಿಷ್ಠಿರ ಉವಾಚ।
12290052a ಕಾನ್ ಸ್ವಗಾತ್ರೋದ್ಭವಾನ್ದೋಷಾನ್ ಪಶ್ಯಸ್ಯಮಿತವಿಕ್ರಮ।
12290052c ಏತನ್ಮೇ ಸಂಶಯಂ ಕೃತ್ಸ್ನಂ ವಕ್ತುಮರ್ಹಸಿ ತತ್ತ್ವತಃ।।

ಯುಧಿಷ್ಠಿರನು ಹೇಳಿದನು: “ಅಮಿತವಿಕ್ರಮ! ದೇಹದಲ್ಲಿ ಯಾವ ಯಾವ ದೋಷಗಳು ಉತ್ಪನ್ನವಾಗುತ್ತವೆ ಎಂದು ನೀನು ಗಮನಿಸಿರುವೆ? ಈ ಸಂಶಯವು ನನಗುಂಟಾಗಿದೆ. ಇದರ ಕುರಿತು ತತ್ತ್ವತಃ ಹೇಳಬೇಕು.”

12290053 ಭೀಷ್ಮ ಉವಾಚ।
12290053a ಪಂಚ ದೋಷಾನ್ ಪ್ರಭೋ ದೇಹೇ ಪ್ರವದಂತಿ ಮನೀಷಿಣಃ।
12290053c ಮಾರ್ಗಜ್ಞಾಃ ಕಾಪಿಲಾಃ ಸಾಂಖ್ಯಾಃ ಶೃಣು ತಾನರಿಸೂದನ।।

ಭೀಷ್ಮನು ಹೇಳಿದನು: “ಪ್ರಭೋ! ಮೋಕ್ಷಮಾರ್ಗವನ್ನು ತಿಳಿದಿರುವ ಕಪಿಲರೇ ಮೊದಲಾದ ಮನೀಷಿಣರು ದೇಹದಲ್ಲಿ ಐದು ವಿಧವಾದ ದೋಷಗಳಿವೆಯೆಂದು ಹೇಳುತ್ತಾರೆ. ಅರಿಸೂದನ! ಅವುಗಳನ್ನು ಕೇಳು.

12290054a ಕಾಮಕ್ರೋಧೌ ಭಯಂ ನಿದ್ರಾ ಪಂಚಮಃ ಶ್ವಾಸ ಉಚ್ಯತೇ।
12290054c ಏತೇ ದೋಷಾಃ ಶರೀರೇಷು ದೃಶ್ಯಂತೇ ಸರ್ವದೇಹಿನಾಮ್।।

ಕಾಮ, ಕ್ರೋಧ, ಭಯ, ನಿದ್ರಾ ಮತ್ತು ಐದನೆಯದು ಶ್ವಾಸ. ಇವು ಸರ್ವದೇಹಿಗಳ ಶರೀರದಲ್ಲಿ ಕಂಡುಬರುವ ದೋಷಗಳು ಎನ್ನುತ್ತಾರೆ.

12290055a ಚಿಂದಂತಿ ಕ್ಷಮಯಾ ಕ್ರೋಧಂ ಕಾಮಂ ಸಂಕಲ್ಪವರ್ಜನಾತ್।
12290055c ಸತ್ತ್ವಸಂಶೀಲನಾನ್ನಿದ್ರಾಮಪ್ರಮಾದಾದ್ಭಯಂ ತಥಾ।
12290055e ಚಿಂದಂತಿ ಪಂಚಮಂ ಶ್ವಾಸಂ ಲಘ್ವಾಹಾರತಯಾ ನೃಪ।।

ನೃಪ! ಸಾಂಖ್ಯಯೋಗಿಗಳು ಕ್ಷಮೆಯಿಂದ ಕ್ರೋಧವನ್ನೂ, ಸಂಕಲ್ಪವರ್ಜನೆಯಿಂದ ಕಾಮವನ್ನೂ, ಸತ್ತ್ವಸಂಶೀಲತೆಯಿಂದ ನಿದ್ರೆಯನ್ನೂ, ಅಪ್ರಮತ್ತತೆಯಿಂದ ಭಯವನ್ನೂ, ಮತ್ತು ಲಘು ಆಹಾರದಿಂದ ಐದನೆಯ ಶ್ವಾಸವನ್ನೂ ನಾಶಗೊಳಿಸುತ್ತಾರೆ.

12290056a ಗುಣಾನ್ಗುಣಶತೈರ್ಜ್ಞಾತ್ವಾ ದೋಷಾನ್ದೋಷಶತೈರಪಿ।
12290056c ಹೇತೂನ್ ಹೇತುಶತೈಶ್ಚಿತ್ರೈಶ್ಚಿತ್ರಾನ್ವಿಜ್ಞಾಯ ತತ್ತ್ವತಃ।।
12290057a ಅಪಾಂ ಫೇನೋಪಮಂ ಲೋಕಂ ವಿಷ್ಣೋರ್ಮಾಯಾಶತೈರ್ವೃತಮ್।
12290057c ಚಿತ್ತಭಿತ್ತಿಪ್ರತೀಕಾಶಂ ನಲಸಾರಮನರ್ಥಕಮ್।।
12290058a ತಮಃ ಶ್ವಭ್ರನಿಭಂ ದೃಷ್ಟ್ವಾ ವರ್ಷಬುದ್ಬುದಸಂನಿಭಮ್।
12290058c ನಾಶಪ್ರಾಯಂ ಸುಖಾದ್ಧೀನಂ ನಾಶೋತ್ತರಮಭಾವಗಮ್।
12290058e ರಜಸ್ತಮಸಿ ಸಂಮಗ್ನಂ ಪಂಕೇ ದ್ವಿಪಮಿವಾವಶಮ್।।
12290059a ಸಾಂಖ್ಯಾ ರಾಜನ್ಮಹಾಪ್ರಾಜ್ಞಾಸ್ತ್ಯಕ್ತ್ವಾ ದೇಹಂ ಪ್ರಜಾಕೃತಮ್।
12290059c ಜ್ಞಾನಜ್ಞೇಯೇನ ಸಾಂಖ್ಯೇನ ವ್ಯಾಪಿನಾ ಮಹತಾ ನೃಪ।।
12290060a ರಾಜಸಾನಶುಭಾನ್ಗಂಧಾಂಸ್ತಾಮಸಾಂಶ್ಚ ತಥಾವಿಧಾನ್।
12290060c ಪುಣ್ಯಾಂಶ್ಚ ಸಾತ್ತ್ವಿಕಾನ್ಗಂಧಾನ್ ಸ್ಪರ್ಶಜಾನ್ದೇಹಸಂಶ್ರಿತಾನ್।
12290060e ಚಿತ್ತ್ವಾಶು ಜ್ಞಾನಶಸ್ತ್ರೇಣ ತಪೋದಂಡೇನ ಭಾರತ।।

ಭಾರತ! ರಾಜನ್! ಸಾಂಖ್ಯಯೋಗಿಗಳು ನೂರು ಪ್ರಕಾರದ ಗುಣಗಳಿಂದ ಗುಣಗಳನ್ನೂ, ನೂರು ಪ್ರಕಾರದ ದೋಷಗಳಿಂದ ದೋಷಗಳನ್ನೂ, ನೂರು ಪ್ರಕಾರದ ವಿಚಿತ್ರಕಾರಣಗಳಿಂದ ವಿಚಿತ್ರ ಕಾರಣಗಳನ್ನೂ ಯಥಾವತ್ತಾಗಿ ತಿಳಿದುಕೊಂಡರು. ಈ ಲೋಕವು ನೀರಿನ ನೊರೆಯಂತೆ ನಶ್ವರ. ಮಹಾವಿಷ್ಣುವಿನ ನೂರಾರು ಮಾಯೆಗಳಿಂದ ಇದು ಆವೃತವಾಗಿದೆ. ಗೋಡೆಯ ಮೇಲಿನ ಚಿತ್ರದಂತೆ ನೋಟಕ್ಕೆ ಚೆನ್ನಾಗಿ ಕಾಣುತ್ತದೆ. ಲಾಳದ ಹುಲ್ಲಿನಂತೆ ಸಾರಹೀನವಾದುದು. ಕತ್ತಲೆಯಿಂದ ತುಂಬಿಕೊಂಡಿರುವ ಹಗೇವಿನಂತಿದೆ. ವರ್ಷಾಕಾಲದ ಮಳೆಯ ನೀರಿನ ಗುಳ್ಳೆಗಳಂತೆ ಕ್ಷಣಭಂಗುರವಾದುದು. ಸುಖದಿಂದ ವಿಹೀನವಾದುದು. ಅಸ್ವತಂತ್ರವಾದುದು. ಕಡೆಯಲ್ಲಿ ನಷ್ಟವೇ ಆಗುವಂಥಹುದು. ಕೆಸರಿನಲ್ಲಿ ಹುದುಗಿಕೊಂಡ ಅಸ್ವತಂತ್ರ ಆನೆಯಂತೆ ಈ ಪ್ರಪಂಚವು ರಜಸ್ತಮಗಳಲ್ಲಿಯೇ ಮುಳುಗಿಹೋಗಿರುವುದು ಎಂಬುದಾಗಿ ಸಾಂಖ್ಯರು ತಮ್ಮ ಯೋಗದಿಂದ ಅರಿತುಕೊಂಡು, ಸಂತಾನವೇ ಮೊದಲಾದವುಗಳಲ್ಲಿದ್ದ ಆಸಕ್ತಿಯನ್ನು ದೂರೀಕರಿಸಿ, ತಪಸ್ಸೆಂಬ ದಂಡದಿಂದಲೂ, ಜ್ಞಾನವೆಂಬ ಶಸ್ತ್ರದಿಂದಲೂ ಅಶುಭ ರಾಜಸ-ತಾಮಸ ಗಂಧಗಳನ್ನೂ, ಪುಣ್ಯಪ್ರಾಪಕ ಶುಭ ಸಾತ್ತ್ವಿಕಗಂಧಗಳನ್ನೂ, ದೇಹವನ್ನಾಶ್ರಯಿಸಿರುವ ಸ್ಪರ್ಶವೇ ಮೊದಲಾದ ವಿಷಯಗಳನ್ನೂ ಕತ್ತರಿಸಿಹಾಕಿದರು.

12290061a ತತೋ ದುಃಖೋದಕಂ ಘೋರಂ ಚಿಂತಾಶೋಕಮಹಾಹ್ರದಮ್।
12290061c ವ್ಯಾಧಿಮೃತ್ಯುಮಹಾಗ್ರಾಹಂ ಮಹಾಭಯಮಹೋರಗಮ್।।
12290062a ತಮಃಕೂರ್ಮಂ ರಜೋಮೀನಂ ಪ್ರಜ್ಞಯಾ ಸಂತರಂತ್ಯುತ।
12290062c ಸ್ನೇಹಪಂಕಂ ಜರಾದುರ್ಗಂ ಸ್ಪರ್ಶದ್ವೀಪಮರಿಂದಮ।।
12290063a ಕರ್ಮಾಗಾಧಂ ಸತ್ಯತೀರಂ ಸ್ಥಿತವ್ರತಮಿದಂ ನೃಪ।
12290063c ಹಿಂಸಾಶೀಘ್ರಮಹಾವೇಗಂ ನಾನಾರಸಮಹಾಕರಮ್।।
12290064a ನಾನಾಪ್ರೀತಿಮಹಾರತ್ನಂ ದುಃಖಜ್ವರಸಮೀರಣಮ್।
12290064c ಶೋಕತೃಷ್ಣಾಮಹಾವರ್ತಂ ತೀಕ್ಷ್ಣವ್ಯಾಧಿಮಹಾಗಜಮ್।।
12290065a ಅಸ್ಥಿಸಂಘಾತಸಂಘಾಟಂ ಶ್ಲೇಷ್ಮಫೇನಮರಿಂದಮ।
12290065c ದಾನಮುಕ್ತಾಕರಂ ಭೀಮಂ ಶೋಣಿತಹ್ರದವಿದ್ರುಮಮ್।।
12290066a ಹಸಿತೋತ್ಕ್ರುಷ್ಟನಿರ್ಘೋಷಂ ನಾನಾಜ್ಞಾನಸುದುಸ್ತರಮ್।
12290066c ರೋದನಾಶ್ರುಮಲಕ್ಷಾರಂ ಸಂಗತ್ಯಾಗಪರಾಯಣಮ್।।
12290067a ಪುನರಾಜನ್ಮಲೋಕೌಘಂ ಪುತ್ರಬಾಂಧವಪತ್ತನಮ್।
12290067c ಅಹಿಂಸಾಸತ್ಯಮರ್ಯಾದಂ ಪ್ರಾಣತ್ಯಾಗಮಹೋರ್ಮಿಣಮ್।।
12290068a ವೇದಾಂತಗಮನದ್ವೀಪಂ ಸರ್ವಭೂತದಯೋದಧಿಮ್।
12290068c ಮೋಕ್ಷದುಷ್ಪ್ರಾಪವಿಷಯಂ ವಡವಾಮುಖಸಾಗರಮ್।।
12290069a ತರಂತಿ ಮುನಯಃ ಸಿದ್ಧಾ ಜ್ಞಾನಯೋಗೇನ ಭಾರತ।
12290069c ತೀರ್ತ್ವಾ ಚ ದುಸ್ತರಂ ಜನ್ಮ ವಿಶಂತಿ ವಿಮಲಂ ನಭಃ।।

ಜ್ಞಾನಯೋಗಿಗಳು ಜ್ಞಾನವೆಂಬ ನೌಕೆಯ ಮೂಲಕ ಸಂಸಾರವೆಂಬ ಈ ಘೋರ ಸಮುದ್ರವನ್ನು ದಾಟಿ ನಿರ್ಮಲ ಹೃದಯಾಕಾಶವನ್ನು ಸೇರುತ್ತಾರೆ. ಸಂಸಾರಸಾಗರವು ಸಾಮಾನ್ಯವಾದುದಲ್ಲ. ದುಃಖವೆಂಬುದೇ ಸಂಸಾರಸಾಗರದ ನೀರು. ಆ ಸಾಗರವು ಅತಿಘೋರವು. ಚಿಂತಾಶೋಕಗಳೆಂಬ ದೊಡ್ಡ ದೊಡ್ಡ ಮಡುವುಗಳು ಆ ಸಾಗರದಲ್ಲಿವೆ. ವ್ಯಾಧಿ ಮತ್ತು ಮೃತ್ಯುಗಳೆಂಬ ದೊಡ್ಡ ಮೊಸಳೆಗಳಿಂದ ಕೂಡಿದೆ. ಮಹಾಭಯವೆಂಬ ಮಹಾಸರ್ಪಗಳಿಂದ ಕೂಡಿದೆ. ತಮೋಗುಣವು ಆ ಮಹಾಸಾಗರದಲ್ಲಿರುವ ಆಮೆ. ಅಂತಹ ಮಹಾಸಾಗರವನ್ನು ಜ್ಞಾನಿಗಳು ಪ್ರಜ್ಞೆಯೆಂಬ ನೌಕೆಯನ್ನೇರಿ ದಾಟುತ್ತಾರೆ. ಸ್ನೇಹವು ಆ ಘೋರ ಸಂಸಾರಸಾಗರದಲ್ಲಿರುವ ಕೆಸರು. ಮುಪ್ಪು ಅದರ ಅಂಚಿನಲ್ಲಿರುವ ದುರ್ಗ. ಜ್ಞಾನವು ಅದರ ಮಧ್ಯದಲ್ಲಿರುವ ದ್ವೀಪ. ಕರ್ಮವೆಂಬುದು ಆ ಸಾಗರದ ಅಗಾಧವಾದ ಆಳ. ಸತ್ಯವು ಅದರ ತೀರ. ವ್ರತ-ನಿಯಮಾದಿಗಳು ಆ ಸಾಗರದ ಸ್ಥಿರತೆ. ಹಿಂಸೆಯು ಆ ಸಾಗರದ ಮಹಾವೇಗ. ನಾನಾ ಪ್ರಕಾರದ ವಿಷಯರಸಗಳಿಂದ ತುಂಬಿರುವ ಆ ಸಾಗರದಲ್ಲಿ ಪ್ರೀತಿಗಳೆಂಬ ರತ್ನಗಳಿವೆ. ದುಃಖ ಸಂತಾಪಗಳು ಸಾಗರದ ಮೇಲೆ ಬೀಸುವ ಗಾಳಿಯಾಗಿದೆ. ಶೋಕ ಮತ್ತು ತೃಷ್ಣೆಗಳು ಇದರ ಸುಳಿಗಳು. ತೀಕ್ಷ್ಣವ್ಯಾಧಿಗಳು ಅದರಲ್ಲಿರುವ ದೊಡ್ಡ ಆನೆಗಳು. ಮೂಳೆಗಳ ಸಮೂಹದಿಂದ ಅದರ ತಳಭಾಗವು ಸಂಘಟಿತವಾಗಿದೆ. ಶ್ಲೇಷ್ಮವೇ ಇದರ ನೊರೆ. ದಾನವೇ ಅದರಲ್ಲಿರುವ ಮುತ್ತಿನ ರಾಶಿ. ರಕ್ತವೇ ಹವಳದ ರಾಶಿ. ಪ್ರಾಣಿಗಳ ಅಟ್ಟಹಾಸಗಳೇ ಸಂಸಾರಸಾಗರದ ಭೋರ್ಗರೆತ. ನಾನಾ ವಿಧದ ಅಜ್ಞಾನಗಳೇ ಅದನ್ನು ದಾಟಲು ಸಾಧ್ಯವಿಲ್ಲದಂತೆ ಮಾಡುತ್ತವೆ. ಪ್ರಾಣಿಗಳ ಕಣ್ಣೀರೇ ಆ ಸಾಗರದ ಮಲಿನ ಉಪ್ಪು ನೀರು. ವಿಷಯಾಸಕ್ತಿಗಳ ತ್ಯಾಗವೇ ಆ ಸಾಗರದ ಕುರಿತಾದ ಭೀತಿಯನ್ನು ಹೋಗಲಾಡಿಸಬಲ್ಲದು. ಪುತ್ರ-ಕಳತ್ರಾದಿಗಳು ಅಲ್ಲಿರುವ ಜಿಗಣೆಗಳು. ಮಿತ್ರರು ಮತ್ತು ಬಂಧುಗಳು ಸಾಗರತೀರದಲ್ಲಿರುವ ಪಟ್ಟಣಗಳು. ಈ ಸಾಗರಕ್ಕೆ ಅಹಿಂಸೆ ಮತ್ತು ಸತ್ಯಗಳೇ ಮೇರೆಗಳು. ಪ್ರಾಣತ್ಯಾಗವೇ ಇದರ ಅಲೆಗಳು. ವೇದಾಂತ ಜ್ಞಾನವೇ ಮಧ್ಯದಲ್ಲಿರುವ ದ್ವೀಪ. ಸಮಸ್ತಪ್ರಾಣಿಗಳಲ್ಲಿರುವ ದಯಾಭಾವವೇ ಇದರ ಜಲರಾಶಿ. ಮೋಕ್ಷವು ಸಂಸಾರಸಾಗರಕ್ಕೆ ದುರ್ಲಭ ವಿಷಯವು. ನಾನಾಪ್ರಕಾರದ ಸಂತಾಪಗಳು ಈ ಸಾಗರದಲ್ಲಿ ಅಡಗಿರುವ ವಡವಾನಲವು. ಅಂತಹ ಭವಸಾಗರವನ್ನು ಸಿದ್ಧ ಯತಿಗಳು ಜ್ಞಾನವೆಂಬ ನೌಕೆಯಿಂದ ದಾಟುತ್ತಾರೆ. ಅತಿದುಸ್ತರವಾದ ಸಾಗರವನ್ನು ದಾಟಿ ನಿರ್ಮಲ ಹೃದಯಾಕಾಶವನ್ನು ಸೇರುತ್ತಾರೆ.

12290070a ತತಸ್ತಾನ್ಸುಕೃತೀನ್ಸಾಂಖ್ಯಾನ್ಸೂರ್ಯೋ ವಹತಿ ರಶ್ಮಿಭಿಃ।
12290070c ಪದ್ಮತಂತುವದಾವಿಶ್ಯ ಪ್ರವಹನ್ವಿಷಯಾನ್ನೃಪ।।

ನೃಪ! ಕಮಲದ ದಂಟಿನ ಮೂಲಕ ಬಾಯಿಯಿಂದ ಹೀರಲ್ಪಟ್ಟ ನೀರು ಬಾಯಿಯನ್ನು ಸೇರುವಂತೆ ಆತ್ಮನೊಳಗೆ ಪ್ರವೇಶಿಸಿರುವ ಮನಸ್ಸಿನ ಮೂಲಕ ಸೂರ್ಯನು ಒಳಗೆ ಪ್ರವೇಶಿಸಿ ಸುಕೃತಿ ಸಾಂಖ್ಯರನ್ನು ತನ್ನ ನಾಡಿಗಳ ಮೂಲಕ ಊರ್ಧ್ವಲೋಕಕ್ಕೆ ಒಯ್ಯುತ್ತಾನೆ.

12290071a ತತ್ರ ತಾನ್ ಪ್ರವಹೋ ವಾಯುಃ ಪ್ರತಿಗೃಹ್ಣಾತಿ ಭಾರತ।
12290071c ವೀತರಾಗಾನ್ಯತೀನ್ಸಿದ್ಧಾನ್ವೀರ್ಯಯುಕ್ತಾಂಸ್ತಪೋಧನಾನ್।।

ಭಾರತ! ಅಲ್ಲಿ ಪ್ರವಹ ಎಂಬ ವಾಯುವು ವೀತರಾಗರಾದ ಮತ್ತು ವೀರ್ಯಯುಕ್ತರಾದ ಸಿದ್ಧ ತಪೋಧನರನ್ನು ಸೂರ್ಯನ ಕಡೆಯಿಂದ ಪ್ರತಿಗ್ರಹಿಸುತ್ತದೆ.

12290072a ಸೂಕ್ಷ್ಮಃ ಶೀತಃ ಸುಗಂಧೀ ಚ ಸುಖಸ್ಪರ್ಶಶ್ಚ ಭಾರತ।
12290072c ಸಪ್ತಾನಾಂ ಮರುತಾಂ ಶ್ರೇಷ್ಠೋ ಲೋಕಾನ್ಗಚ್ಚತಿ ಯಃ ಶುಭಾನ್।
12290072e ಸ ತಾನ್ವಹತಿ ಕೌಂತೇಯ ನಭಸಃ ಪರಮಾಂ ಗತಿಮ್।।

ಭಾರತ! ಕೌಂತೇಯ! ಸೂಕ್ಷ್ಮ, ಶೀತಲ, ಸುಗಂಧೀ, ಸುಖಸ್ಪರ್ಶ ಏಳು ವಾಯುಗಳಲ್ಲಿ ಶ್ರೇಷ್ಠನಾದ ಪ್ರವಹವು ಅವರನ್ನು ಶುಭವೂ ನಿರ್ಮಲವೂ ಪರಮ ಗತಿ ಹೃದಯಾಕಾಶಕ್ಕೆ ಕೊಂಡೊಯ್ಯುತ್ತದೆ.

12290073a ನಭೋ ವಹತಿ ಲೋಕೇಶ ರಜಸಃ ಪರಮಾಂ ಗತಿಮ್।
12290073c ರಜೋ ವಹತಿ ರಾಜೇಂದ್ರ ಸತ್ತ್ವಸ್ಯ ಪರಮಾಂ ಗತಿಮ್।।
12290074a ಸತ್ತ್ವಂ ವಹತಿ ಶುದ್ಧಾತ್ಮನ್ಪರಂ ನಾರಾಯಣಂ ಪ್ರಭುಮ್।
12290074c ಪ್ರಭುರ್ವಹತಿ ಶುದ್ಧಾತ್ಮಾ ಪರಮಾತ್ಮಾನಮಾತ್ಮನಾ।।
12290075a ಪರಮಾತ್ಮಾನಮಾಸಾದ್ಯ ತದ್ಭೂತಾಯತನಾಮಲಾಃ।
12290075c ಅಮೃತತ್ವಾಯ ಕಲ್ಪಂತೇ ನ ನಿವರ್ತಂತಿ ಚಾಭಿಭೋ।
12290075e ಪರಮಾ ಸಾ ಗತಿಃ ಪಾರ್ಥ ನಿರ್ದ್ವಂದ್ವಾನಾಂ ಮಹಾತ್ಮನಾಮ್।।

ವಿಭೋ! ರಾಜೇಂದ್ರ! ತಮೋರೂಪದ ಹೃದಯಾಕಾಶವು ಸಾಂಖ್ಯಯೋಗಿಯನ್ನು ರಜೋಗುಣದ ಪರಮ ಗತಿಗೆ ಕೊಂಡೊಯ್ಯುತ್ತದೆ. ಬಳಿಕ ರಜೋಗುಣವು ಸತ್ತ್ವಗುಣದ ಪರಮ ಗತಿಗೆ ಕೊಂಡೊಯ್ಯುತ್ತದೆ. ಸತ್ತ್ವವು ಅವರನ್ನು ಶ್ರೇಷ್ಠ ಪ್ರಭು ನಾರಾಯಣನ ಬಳಿಗೆ ಕೊಂಡೊಯ್ಯುತ್ತದೆ. ಶುದ್ಧಾತ್ಮ ನಾರಾಯಣನು ತಾನಾಗಿಯೇ ಅವರನ್ನು ಪರಬ್ರಹ್ಮನ ಬಳಿಗೆ ಒಯ್ಯುತ್ತಾನೆ. ಪರಬ್ರಹ್ಮನನ್ನು ಸೇರಿದ ಆ ಪರಿಶುದ್ಧ ಸಾಂಖ್ಯಯೋಗಿಗಳು ಅಮೃತಭಾವಸಂಪನ್ನರಾಗಿ ಅಲ್ಲಿಯೇ ಇರುತ್ತಾರೆ. ಪುನಃ ಅಲ್ಲಿಂದ ಹಿಂದಿರುಗುವುದಿಲ್ಲ.”

12290076 ಯುಧಿಷ್ಠಿರ ಉವಾಚ।
12290076a ಸ್ಥಾನಮುತ್ತಮಮಾಸಾದ್ಯ ಭಗವಂತಂ ಸ್ಥಿರವ್ರತಾಃ।
12290076c ಆಜನ್ಮಮರಣಂ ವಾ ತೇ ಸ್ಮರಂತ್ಯುತ ನ ವಾನಘ।।
12290077a ಯದತ್ರ ತಥ್ಯಂ ತನ್ಮೇ ತ್ವಂ ಯಥಾವದ್ವಕ್ತುಮರ್ಹಸಿ।
12290077c ತ್ವದೃತೇ ಮಾನವಂ ನಾನ್ಯಂ ಪ್ರಷ್ಟುಮರ್ಹಾಮಿ ಕೌರವ।।

ಯುಧಿಷ್ಠಿರನು ಹೇಳಿದನು: “ಅನಘ! ಕೌರವ! ಸ್ಥಿರವ್ರತರಾದ ಸಾಂಖ್ಯಯೋಗಿಗಳು ಭಗವಂತನ ಉತ್ತಮ ಸ್ಥಾನವನ್ನು ತಲುಪಿದ ನಂತರ ಆಜನ್ಮ ಮರಣ ಅವರು ಮಾಡಿದ ಕರ್ಮಗಳನ್ನು ಸ್ಮರಿಸಿಕೊಳ್ಳುತ್ತಾರೆಯೇ? ಇದರ ವಿಷಯವಾಗಿ ತಥ್ಯವಾದುದನ್ನು ಯಥಾವತ್ತಾಗಿ ಹೇಳಬೇಕು. ನಿನ್ನನ್ನು ಬಿಟ್ಟರೆ ಬೇರೆ ಯಾವ ಮನುಷ್ಯನಲ್ಲೂ ನಾನು ಈ ಪ್ರಶ್ನೆಯನ್ನು ಕೇಳಲಾರೆನು.

12290078a ಮೋಕ್ಷದೋಷೋ ಮಹಾನೇಷ ಪ್ರಾಪ್ಯ ಸಿದ್ಧಿಂ ಗತಾನೃಷೀನ್।
12290078c ಯದಿ ತತ್ರೈವ ವಿಜ್ಞಾನೇ ವರ್ತಂತೇ ಯತಯಃ ಪರೇ।।
12290079a ಪ್ರವೃತ್ತಿಲಕ್ಷಣಂ ಧರ್ಮಂ ಪಶ್ಯಾಮಿ ಪರಮಂ ನೃಪ।
12290079c ಮಗ್ನಸ್ಯ ಹಿ ಪರೇ ಜ್ಞಾನೇ ಕಿಂ ನು ದುಃಖತರಂ ಭವೇತ್।।

ನೃಪ! ಮೋಕ್ಷಪ್ರಾಪ್ತವಾದ ನಂತರವೂ ಯತಿಗಳಿಗೆ ವಿಶೇಷ ಜ್ಞಾನವಿರುವುದೆಂದಾದರೆ ಸಿದ್ಧಿಯನ್ನು ಪಡೆದು ಪರಮ ಗತಿಯನ್ನು ಸೇರಿದ ಆ ಋಷಿಗಳ ಮೋಕ್ಷದಲ್ಲಿ ಮಹಾ ದೋಷವಿದೆಯೆಂದು ನನಗನ್ನಿಸುತ್ತದೆ. ಹಿಂದಿನ ಸ್ಮರಣೆಯೂ ಅವರಿಗೆ ಇರುವುದು ಎಂದಾದರೆ ವಿಜ್ಞಾನ ಯುಕ್ತವಾದ ಸಾಂಖ್ಯಯೋಗವು ಪ್ರವೃತ್ತಿಲಕ್ಷಣವುಳ್ಳ ಶ್ರೇಷ್ಠ ಧರ್ಮ ಎಂದು ಭಾವಿಸುತ್ತೇನೆ. ಶ್ರೇಷ್ಠ ಜ್ಞಾನ ಅರ್ಥಾತ್ ಪರಬ್ರಹ್ಮನಲ್ಲಿ ಮಗ್ನನಾಗಿದ್ದರೂ ಅಲ್ಲಿಯೂ ಹಿಂದಿನ ಸ್ಮರಣೆಯಿರುತ್ತದೆ ಎಂದಾದರೆ ಅದಕ್ಕಿಂತಲೂ ದುಃಖತರವಾದುದು ಬೇರೆ ಏನಿದೆ?”

12290080 ಭೀಷ್ಮ ಉವಾಚ।
12290080a ಯಥಾನ್ಯಾಯಂ ತ್ವಯಾ ತಾತ ಪ್ರಶ್ನಃ ಪೃಷ್ಟಃ ಸುಸಂಕಟಃ।
12290080c ಬುದ್ಧಾನಾಮಪಿ ಸಂಮೋಹಃ ಪ್ರಶ್ನೇಽಸ್ಮಿನ್ ಭರತರ್ಷಭ।।

ಭೀಷ್ಮನು ಹೇಳುತ್ತಾನೆ: “ಅಯ್ಯಾ! ಭರತರ್ಷಭ! ಉತ್ತರಿಸಲು ಬಹಳ ಜಟಿಲವಾದ ಆದರೆ ನ್ಯಾಯ ಸಮ್ಮತವಾದ ಪ್ರಶ್ನೆಯನ್ನೇ ನೀನು ಕೇಳಿರುವೆ. ಈ ಪ್ರಶ್ನೆಯಲ್ಲಿ ವಿದ್ವಾಂಸರೂ ಸಂಭ್ರಾಂತಿಗೊಳ್ಳುವ ವಿಷಯವಿದೆ.

12290080E ಅತ್ರಾಪಿ ತತ್ತ್ವಂ ಪರಮಂ ಶೃಣು ಸಮ್ಯಙ್ಮಯೇರಿತಮ್।
12290081a ಬುದ್ಧಿಶ್ಚ ಪರಮಾ ಯತ್ರ ಕಾಪಿಲಾನಾಂ ಮಹಾತ್ಮನಾಮ್।।

ಆದರೂ ಈ ವಿಷಯದಲ್ಲಿ ನಾನು ಸ್ಪಷ್ಟವಾಗಿ ಹೇಳುವ ಪರಮ ತತ್ತ್ವವನ್ನು ಕೇಳು. ಇದರಲ್ಲಿ ಮಹಾತ್ಮ ಕಪಿಲನ ಪರಮ ಬುದ್ಧಿಯೂ ನೆಲೆಸಿದೆ.

12290081c ಇಂದ್ರಿಯಾಣ್ಯಪಿ ಬುಧ್ಯಂತೇ ಸ್ವದೇಹಂ ದೇಹಿನೋ ನೃಪ।
12290081E ಕಾರಣಾನ್ಯಾತ್ಮನಸ್ತಾನಿ ಸೂಕ್ಷ್ಮಃ ಪಶ್ಯತಿ ತೈಸ್ತು ಸಃ।।

ನೃಪ! ದೇಹಧಾರಿಗಳ ದೇಹದಲ್ಲಿರುವ ಇಂದ್ರಿಯಗಳು ಆತ್ಮನು ತಮಗಿಂತಲೂ ಭಿನ್ನವಾಗಿಲ್ಲ ಎಂಬ ಜ್ಞಾನವನ್ನುಂಟುಮಾಡುತ್ತವೆ. ಏಕೆಂದರೆ ಸೂಕ್ಷ್ಮಾತ್ಮನು ಆ ಇಂದ್ರಿಯಗಳ ಮೂಲಕವೇ ಬಾಹ್ಯ ವಸ್ತುಗಳನ್ನು ನೋಡುತ್ತಾನೆ.

12290082a ಆತ್ಮನಾ ವಿಪ್ರಹೀಣಾನಿ ಕಾಷ್ಠಕುಡ್ಯಸಮಾನಿ ತು।
12290082c ವಿನಶ್ಯಂತಿ ನ ಸಂದೇಹಃ ಫೇನಾ ಇವ ಮಹಾರ್ಣವೇ।।

ಮಹಾಸಮುದ್ರದಲ್ಲಿ ಅಲೆಗಳ ಬಡಿತದಿಂದ ಹುಟ್ಟಿದ ನೊರೆಗಳು ವಿನಾಶಹೊಂದುವಂತೆ ಜೀವಾತ್ಮನಿಂದ ಪರಿತ್ಯಕ್ತವಾದ ಇಂದ್ರಿಯಗಳೂ ಕೂಡ ಕಟ್ಟಿಗೆ ಅಥವಾ ಗೋಡೆಗಳಂತಾಗಿ ವಿನಾಶಹೊಂದುತ್ತವೆ.

12290083a ಇಂದ್ರಿಯೈಃ ಸಹ ಸುಪ್ತಸ್ಯ ದೇಹಿನಃ ಶತ್ರುತಾಪನ।
12290083c ಸೂಕ್ಷ್ಮಶ್ಚರತಿ ಸರ್ವತ್ರ ನಭಸೀವ ಸಮೀರಣಃ।।

ಶತ್ರುತಾಪನ! ದೇಹಧಾರಿಯು ಇಂದ್ರಿಯಗಳೊಡನೆ ಮಲಗಿದ್ದಾಗ ಸೂಕ್ಷ್ಮಶರೀರವು ಅಂತರಿಕ್ಷದಲ್ಲಿರುವ ವಾಯುವಿನಂತೆ ಸರ್ವತ್ರ ಸುತ್ತುತ್ತಿರುತ್ತದೆ.

12290084a ಸ ಪಶ್ಯತಿ ಯಥಾನ್ಯಾಯಂ ಸ್ಪರ್ಶಾನ್ ಸ್ಪೃಶತಿ ಚಾಭಿಭೋ।
12290084c ಬುಧ್ಯಮಾನೋ ಯಥಾಪೂರ್ವಮಖಿಲೇನೇಹ ಭಾರತ।।

ವಿಭೋ! ಭಾರತ! ಜಾಗ್ರತಾವಸ್ಥೆಯಲ್ಲಿರುವಂತೆ ಸ್ವಪ್ನಾವಸ್ಥೆಯಲ್ಲಿಯೂ ಆ ಸೂಕ್ಷ್ಮಶರೀರವು ಯಥೋಚಿತವಾಗಿ ನೋಡಬಹುದಾದವುಗಳನ್ನು ನೋಡುತ್ತಿರುತ್ತದೆ. ಮುಟ್ಟಬಹುದಾದವುಗಳನ್ನು ಮುಟ್ಟುತ್ತದೆ. ಹಾಗೆ ಸಂಪೂರ್ಣ ವಿಷಯಗಳನ್ನೂ ಜಾಗ್ರತ್ತಿನಂತೆಯೇ ಅನುಭವಿಸುತ್ತದೆ.

12290085a ಇಂದ್ರಿಯಾಣೀಹ ಸರ್ವಾಣಿ ಸ್ವೇ ಸ್ವೇ ಸ್ಥಾನೇ ಯಥಾವಿಧಿ।
12290085c ಅನೀಶತ್ವಾತ್ ಪ್ರಲೀಯಂತೇ ಸರ್ಪಾ ಹತವಿಷಾ ಇವ।।

ಸ್ವಪ್ನಾವಸ್ಥೆಯು ಕಳೆದು ಸುಷುಪ್ತಾವಸ್ಥೆಯು ಪ್ರಾಪ್ತವಾದಾಗ ಜೀವನು ಪುರೀತತ್ ನಾಡಿಯನ್ನು ಪ್ರವೇಶಿಸಿರುವ ಕಾರಣ ಇಂದ್ರಿಯಗಳು ಒಡೆಯನಿಲ್ಲದೇ ವಿಷಕಳೆದುಕೊಂಡ ಸರ್ಪಗಳಂತೆ ತಮ್ಮ ತಮ್ಮ ಸ್ಥಾನಗಳಲ್ಲಿ ಲೀನವಾಗುತ್ತವೆ.

12290086a ಇಂದ್ರಿಯಾಣಾಂ ತು ಸರ್ವೇಷಾಂ ಸ್ವಸ್ಥಾನೇಷ್ವೇವ ಸರ್ವಶಃ।
12290086c ಆಕ್ರಮ್ಯ ಗತಯಃ ಸೂಕ್ಷ್ಮಾಶ್ಚರತ್ಯಾತ್ಮಾ ನ ಸಂಶಯಃ।।

ಸ್ವಪ್ನಾವಸ್ಥೆಯಲ್ಲಿ ಇಂದ್ರಿಯಗಳು ಸ್ವಸ್ಥಾನದಲ್ಲಿಯೇ ಇದ್ದರೂ ಜೀವಾತ್ಮನು ಎಲ್ಲ ಇಂದ್ರಿಯಗಳ ಸೂಕ್ಷ್ಮ ಗತಿಗಳನ್ನು ಆಕ್ರಮಿಸಿ ಸಂಚರಿಸುತ್ತಿರುತ್ತಾನೆ. ಈ ವಿಷಯದಲ್ಲಿ ಸಂಶಯವೇ ಇಲ್ಲ.

12290087a ಸತ್ತ್ವಸ್ಯ ಚ ಗುಣಾನ್ ಕೃತ್ಸ್ನಾನ್ರಜಸಶ್ಚ ಗುಣಾನ್ಪುನಃ।
12290087c ಗುಣಾಂಶ್ಚ ತಮಸಃ ಸರ್ವಾನ್ಗುಣಾನ್ಬುದ್ಧೇಶ್ಚ ಭಾರತ।।
12290088a ಗುಣಾಂಶ್ಚ ಮನಸಸ್ತದ್ವನ್ನಭಸಶ್ಚ ಗುಣಾಂಸ್ತಥಾ।
12290088c ಗುಣಾನ್ವಾಯೋಶ್ಚ ಧರ್ಮಾತ್ಮಂಸ್ತೇಜಸಶ್ಚ ಗುಣಾನ್ಪುನಃ।।
12290089a ಅಪಾಂ ಗುಣಾಂಸ್ತಥಾ ಪಾರ್ಥ ಪಾರ್ಥಿವಾಂಶ್ಚ ಗುಣಾನಪಿ।
12290089c ಸರ್ವಾತ್ಮನಾ ಗುಣೈರ್ವ್ಯಾಪ್ಯ ಕ್ಷೇತ್ರಜ್ಞಃ ಸ ಯುಧಿಷ್ಠಿರ।।
12290090a ಆತ್ಮಾ ಚ ಯಾತಿ ಕ್ಷೇತ್ರಜ್ಞಂ ಕರ್ಮಣೀ ಚ ಶುಭಾಶುಭೇ।
12290090c ಶಿಷ್ಯಾ ಇವ ಮಹಾತ್ಮಾನಮಿಂದ್ರಿಯಾಣಿ ಚ ತಂ ವಿಭೋ।।
12290091a ಪ್ರಕೃತಿಂ ಚಾಪ್ಯತಿಕ್ರಮ್ಯ ಗಚ್ಚತ್ಯಾತ್ಮಾನಮವ್ಯಯಮ್।
12290091c ಪರಂ ನಾರಾಯಣಾತ್ಮಾನಂ ನಿರ್ದ್ವಂದ್ವಂ ಪ್ರಕೃತೇಃ ಪರಮ್।।

ಭಾರತ! ಯುಧಿಷ್ಠಿರ! ವಿಭೋ! ಪರಬ್ರಹ್ಮ ಪರಮಾತ್ಮನು ಸಮಗ್ರ ಸತ್ತ್ವಗುಣಗಳನ್ನೂ, ಸಮಗ್ರ ರಜೋಗುಣಗಳನ್ನೂ, ಸಮಗ್ರ ತಮೋಗುಣಗಳನ್ನೂ, ಬುದ್ಧಿಗುಣಗಳನ್ನೂ, ಮನಸ್ಸಿನ ಗುಣಗಳನ್ನೂ, ಆಕಾಶದ ಗುಣಗಳನ್ನೂ, ವಾಯುವಿನ ಗುಣಗಳನ್ನೂ, ತೇಜಸ್ಸಿನ ಗುಣಗಳನ್ನೂ, ನೀರಿನ ಗುಣಗಳನ್ನೂ, ಭೂಮಿಯ ಗುಣಗಳನ್ನೂ – ತನ್ನ ಗುಣಗಳ ಮೂಲಕ ವ್ಯಾಪಿಸಿ ಕ್ಷೇತ್ರಜ್ಞನಲ್ಲಿರುತ್ತಾನೆ. ಶಿಷ್ಯನು ಗುರುವನ್ನು ಅನುಸರಿಸಿ ಹೋಗುವಂತೆ ಮನಸ್ಸು, ಇಂದ್ರಿಯಗಳು, ಮತ್ತು ಶುಭಾಶುಭಕರ್ಮಗಳೂ ಜೀವಾತ್ಮನನ್ನೇ ಅನುಸರಿಸಿ ಹೋಗುತ್ತವೆ. ಯಾವಾಗ ಜೀವಾತ್ಮನು ತನ್ನ ಬಳಿಬಂದ ಮನಸ್ಸನ್ನೂ ಇಂದ್ರಿಯಗಳನ್ನೂ ತನ್ನಲ್ಲಿಯೇ ಲೀನಗೊಳಿಸಿ ಪ್ರಕೃತಿಯನ್ನು ಅತಿಕ್ರಮಿಸುವನೋ ಆಗ ಮಾಯೆಯಿಂದ ಅತೀತವಾದ ನಿರ್ದ್ವಂದ್ವ ಅವ್ಯಯ, ಶ್ರೇಷ್ಠ ಪರಮಾತ್ಮ ನಾರಾಯಣನನ್ನು ಸೇರುತ್ತಾನೆ.

12290092a ವಿಮುಕ್ತಃ ಪುಣ್ಯಪಾಪೇಭ್ಯಃ ಪ್ರವಿಷ್ಟಸ್ತಮನಾಮಯಮ್।
12290092c ಪರಮಾತ್ಮಾನಮಗುಣಂ ನ ನಿವರ್ತತಿ ಭಾರತ।।

ಭಾರತ! ಪುಣ್ಯಪಾಪಗಳಿಂದ ವಿಮುಕ್ತನಾಗಿ ಆ ಸಾಂಖ್ಯಯೋಗಿಯು ನಿರ್ಗುಣನೂ, ನಿರಾಕಾರನೂ, ಈತಿಬಾಧಾರಹಿತನೂ ಮತ್ತು ನಾರಾಯಣ ಸ್ವರೂಪನೂ ಆದ ಪರಮಾತ್ಮನನ್ನು ಪ್ರವೇಶಿಸಿ ಅಲ್ಲಿಂದ ಹಿಂದಿರುಗುವುದಿಲ್ಲ.

12290093a ಶಿಷ್ಟಂ ತ್ವತ್ರ ಮನಸ್ತಾತ ಇಂದ್ರಿಯಾಣಿ ಚ ಭಾರತ।
12290093c ಆಗಚ್ಚಂತಿ ಯಥಾಕಾಲಂ ಗುರೋಃ ಸಂದೇಶಕಾರಿಣಃ।।

ಭಾರತ! ಹೀಗೆ ಸಾಂಖ್ಯಯೋಗಿಯ ಜೀವನು ಪರಮಾತ್ಮನೊಡನೆ ಸೇರಿ ಜೀಮನ್ಮುಕ್ತಿಯನ್ನು ಹೊಂದಿದರೂ ಪ್ರಾರಭ್ಧಾನುಸಾರವಾಗಿ ಅವನು ಜೀವಿಸಿರುವವರೆಗೆ ಅವನ ಮನಸ್ಸು ಮತ್ತು ಇಂದ್ರಿಯಗಳು ಯಥಾವತ್ತಾಗಿಯೇ ಉಳಿದಿರುತ್ತವೆ. ಆದರೆ ಅವುಗಳು ಸ್ವತಂತ್ರವಾಗಿರದೇ ಗುರುವಿನ ಆದೇಶವನ್ನು ಪಾಲನೆಮಾಡುವ ಶಿಷ್ಯರಂತೆ ಆ ಯೋಗಿಯ ಆದೇಶದಂತೆ ನಡೆದುಕೊಳ್ಳುತ್ತವೆ.

12290094a ಶಕ್ಯಂ ಚಾಲ್ಪೇನ ಕಾಲೇನ ಶಾಂತಿಂ ಪ್ರಾಪ್ತುಂ ಗುಣಾರ್ಥಿನಾ।
12290094c ಏವಂ ಯುಕ್ತೇನ ಕೌಂತೇಯ ಯುಕ್ತಜ್ಞಾನೇನ ಮೋಕ್ಷಿಣಾ।।

ಕೌಂತೇಯ! ಹೀಗೆ ಸಾಂಖ್ಯಯೋಗದ ಜ್ಞಾನದಿಂದ ಯುಕ್ತನಾದ ಗುಣಾರ್ಥಿ ಮೋಕ್ಷಕ್ಕೆ ಅಧಿಕಾರಿ ಮನುಷ್ಯನು ಅಲ್ಪಸಮಯದಲ್ಲಿಯೇ ಪರಮಶಾಂತಿಯನ್ನು ಪಡೆಯುವ ಸಾಧ್ಯತೆಯಿದೆ.

12290095a ಸಾಂಖ್ಯಾ ರಾಜನ್ಮಹಾಪ್ರಾಜ್ಞಾ ಗಚ್ಚಂತಿ ಪರಮಾಂ ಗತಿಮ್।
12290095c ಜ್ಞಾನೇನಾನೇನ ಕೌಂತೇಯ ತುಲ್ಯಂ ಜ್ಞಾನಂ ನ ವಿದ್ಯತೇ।।

ರಾಜನ್! ಕೌಂತೇಯ! ಇಂತಹ ಜ್ಞಾನದಿಂದ ಸಾಂಖ್ಯಯೋಗಿಗಳು ಪರಮ ಗತಿಯನ್ನು ಹೊಂದುತ್ತಾರೆ. ಈ ಜ್ಞಾನಕ್ಕೆ ಸದೃಶವಾದ ಬೇರೆ ಯಾವ ಜ್ಞಾನವೂ ಇಲ್ಲ.

12290096a ಅತ್ರ ತೇ ಸಂಶಯೋ ಮಾ ಭೂಜ್ಜ್ಞಾನಂ ಸಾಂಖ್ಯಂ ಪರಂ ಮತಮ್।
12290096c ಅಕ್ಷರಂ ಧ್ರುವಮವ್ಯಕ್ತಂ ಪೂರ್ವಂ2 ಬ್ರಹ್ಮ ಸನಾತನಮ್।।

ಸಾಂಖ್ಯಜ್ಞಾನವು ಎಲ್ಲ ಜ್ಞಾನಗಳಿಗಿಂತ ಉತ್ಕೃಷ್ಟವಾದುದು. ಇದರಲ್ಲಿ ನಿನಗೆ ಸಂಶಯವೇ ಉಂಟಾಗದಿರಲಿ. ಈ ಶಾಸ್ತ್ರವು ಅಕ್ಷರ, ಧ್ರುವ, ಅವ್ಯಕ್ತ, ಸನಾತನ ಬ್ರಹ್ಮನನ್ನು ಪ್ರತಿಪಾದಿಸುತ್ತದೆ.

12290097a ಅನಾದಿಮಧ್ಯನಿಧನಂ ನಿರ್ದ್ವಂದ್ವಂ ಕರ್ತೃ ಶಾಶ್ವತಮ್।
12290097c ಕೂಟಸ್ಥಂ ಚೈವ ನಿತ್ಯಂ ಚ ಯದ್ವದಂತಿ ಶಮಾತ್ಮಕಾಃ3।।

ಸನಾತನ ಬ್ರಹ್ಮವು ಆದಿಮಂಧ್ಯಾಂತ ರಹಿತವಾದುದು. ವಿರುದ್ಧಗುಣಗಳ ದ್ವಂದ್ವಗಳಿಂದ ರಹಿತವಾದುದು. ಜಗತ್ತಿನ ಉತ್ಪತ್ತಿಗೆ ಕಾರಣವಾದುದು. ಶಾಶ್ವತವಾದುದು. ಶಮಾತ್ಮಕ ವಿದ್ವಾಂಸರು ಇದನ್ನು ಕೂಟಸ್ಥ ಎಂದೂ ಹೇಳುತ್ತಾರೆ.

12290098a ಯತಃ ಸರ್ವಾಃ ಪ್ರವರ್ತಂತೇ ಸರ್ಗಪ್ರಲಯವಿಕ್ರಿಯಾಃ।
12290098c ಯಚ್ಚ ಶಂಸಂತಿ ಶಾಸ್ತ್ರೇಷು ವದಂತಿ ಪರಮರ್ಷಯಃ।।

ಸೃಷ್ಟಿ-ಪ್ರಲಯರೂಪವಾದ ಸರ್ವ ವಿಕಾರಗಳು ಆ ಸನಾತನ ಬ್ರಹ್ಮದಿಂದಲೇ ಹುಟ್ಟುತ್ತವೆ. ಶಾಸ್ತ್ರಗಳು ಆ ಪ್ರರಬ್ರಹ್ಮನನ್ನು ಪ್ರಶಂಸಿಸುತ್ತವೆ ಮತ್ತು ಪರಮ ಋಷಿಗಳು ಅವನ ಕುರಿತು ಹೇಳುತ್ತಾರೆ.

12290099a ಸರ್ವೇ ವಿಪ್ರಾಶ್ಚ ದೇವಾಶ್ಚ ತಥಾಗಮವಿದೋ ಜನಾಃ।
12290099c ಬ್ರಹ್ಮಣ್ಯಂ ಪರಮಂ ದೇವಮನಂತಂ ಪರತೋಽಚ್ಯುತಮ್4।।
12290100a ಪ್ರಾರ್ಥಯಂತಶ್ಚ ತಂ ವಿಪ್ರಾ ವದಂತಿ ಗುಣಬುದ್ಧಯಃ।
12290100c ಸಮ್ಯಗ್ಯುಕ್ತಾಸ್ತಥಾ ಯೋಗಾಃ ಸಾಂಖ್ಯಾಶ್ಚಾಮಿತದರ್ಶನಾಃ।।

ಸರ್ವ ವಿಪ್ರರೂ, ದೇವತೆಗಳೂ, ಆಗಮವಿದ್ವಾಂಸ ಜನರೂ, ಯೋಗ ಯುಕ್ತರಾದ ಸಾಂಖ್ಯದ ಅಮಿತದರ್ಶನರೂ ಆ ಪರಮ ಬ್ರಹ್ಮಣ್ಯ ದೇವ ಅನಂತ, ಪರಮ ಅಚ್ಯುತನನ್ನು ಪ್ರಾರ್ಥಿಸುತ್ತಾರೆ. ವಿಪ್ರರು ಅವನ ಗುಣಬುದ್ಧಿಗಳನ್ನು ಹೊಗಳುತ್ತಾರೆ.

12290101a ಅಮೂರ್ತೇಸ್ತಸ್ಯ ಕೌಂತೇಯ ಸಾಂಖ್ಯಂ ಮೂರ್ತಿರಿತಿ ಶ್ರುತಿಃ।
12290101c ಅಭಿಜ್ಞಾನಾನಿ ತಸ್ಯಾಹುರ್ಮತಂ ಹಿ ಭರತರ್ಷಭ।।

ಕೌಂತೇಯ! ಭರತರ್ಷಭ! ನಿರಾಕಾರ ಪರಮಾತ್ಮನಿಗೆ ಸಾಂಖ್ಯಶಾಸ್ತ್ರವೇ ಮೂರ್ತಿಸ್ವರೂಪ ಎಂದು ಹೇಳುತ್ತಾರೆ. ಪರಬ್ರಹ್ಮದ ನೆನಪುಗಳನ್ನು ತರುವ ಶಾಸ್ತ್ರವನ್ನೇ ಸಾಂಖ್ಯಮತವೆನ್ನುತ್ತಾರೆ.

12290102a ದ್ವಿವಿಧಾನೀಹ ಭೂತಾನಿ ಪೃಥಿವ್ಯಾಂ ಪೃಥಿವೀಪತೇ।
12290102c ಜಂಗಮಾಗಮಸಂಜ್ಞಾನಿ ಜಂಗಮಂ ತು ವಿಶಿಷ್ಯತೇ।।

ಪೃಥಿವೀಪತೇ! ಭೂತಲದಲ್ಲಿ ಜಂಗಮ ಸ್ಥಾವರಗಳೆಂಬ ಇರಡು ಪ್ರಕಾರ ಭೂತಗಳಿವೆ. ಇವುಗಳಲ್ಲಿ ಜಂಗಮಗಳು ವಿಶೇಷವಾದವುಗಳು.

12290103a ಜ್ಞಾನಂ ಮಹದ್ಯದ್ಧಿ ಮಹತ್ಸು ರಾಜನ್ ವೇದೇಷು ಸಾಂಖ್ಯೇಷು ತಥೈವ ಯೋಗೇ।
12290103c ಯಚ್ಚಾಪಿ ದೃಷ್ಟಂ ವಿವಿಧಂ ಪುರಾಣಂ ಸಾಂಖ್ಯಾಗತಂ ತನ್ನಿಖಿಲಂ ನರೇಂದ್ರ।।

ರಾಜನ್! ನರೇಂದ್ರ! ಮಹಾತ್ಮ ಬ್ರಹ್ಮವಿದರಲ್ಲೂ, ವೇದಗಳಲ್ಲೂ, ಸಾಂಖ್ಯದರ್ಶನಗಳಲ್ಲೂ, ಯೋಗಶಾಸ್ತ್ರದಲ್ಲೂ, ಮತ್ತು ಪುರಾಣಗಳಲ್ಲೂ ಇರುವ ನಾನಾಪ್ರಕಾರದ ಉತ್ತಮ ಜ್ಞಾನಗಳೆಲ್ಲವೂ ಸಾಂಖ್ಯದಿಂದಲೇ ಬಂದಿರುವವು.

12290104a ಯಚ್ಚೇತಿಹಾಸೇಷು ಮಹತ್ಸು ದೃಷ್ಟಂ ಯಚ್ಚಾರ್ಥಶಾಸ್ತ್ರೇ ನೃಪ ಶಿಷ್ಟಜುಷ್ಟೇ।
12290104c ಜ್ಞಾನಂ ಚ ಲೋಕೇ ಯದಿಹಾಸ್ತಿ ಕಿಂ ಚಿತ್ ಸಾಂಖ್ಯಾಗತಂ ತಚ್ಚ ಮಹನ್ಮಹಾತ್ಮನ್।।

ಮಹಾತ್ಮ! ಮಹಾ ಇತಿಹಾಸಗಳಲ್ಲಿ ಮತ್ತು ಸತ್ಪುರುಷರು ಸೇವಿಸುವ ಅರ್ಥಶಾಸ್ತ್ರಗಳಲ್ಲಿ ಇರುವ ಜ್ಞಾನವು ಸಾಂಖ್ಯದಿಂದಲೇ ಬಂದುದು. ಈ ಲೋಕದಲ್ಲಿ ಪ್ರಚಲಿತವಾಗಿರುವ ಮಹಾ ಜ್ಞಾನಗಳೆಲ್ಲವೂ ಸಾಂಖ್ಯದಿಂದಲೇ ಬಂದುದಾಗಿದೆ.

12290105a ಶಮಶ್ಚ ದೃಷ್ಟಃ ಪರಮಂ ಬಲಂ ಚ ಜ್ಞಾನಂ ಚ ಸೂಕ್ಷ್ಮಂ ಚ ಯಥಾವದುಕ್ತಮ್।
12290105c ತಪಾಂಸಿ ಸೂಕ್ಷ್ಮಾಣಿ ಸುಖಾನಿ ಚೈವ ಸಾಂಖ್ಯೇ ಯಥಾವದ್ವಿಹಿತಾನಿ ರಾಜನ್।।

ರಾಜನ್! ಸಾಂಖ್ಯದಲ್ಲಿ ಶಮೆಯ ಕುರಿತು ಇದೆ. ಪರಮ ಬಲದ ಕುರಿತು, ಮತ್ತು ಸೂಕ್ಷ್ಮ ಜ್ಞಾನದ ಕುರಿತು ಯಥಾವತ್ತಾಗಿದೆ. ತಪಸ್ಸು ಮತ್ತು ಸೂಕ್ಷ್ಮ ಸುಖಗಳ ಕುರಿತೂ ಸಾಂಖ್ಯದಲ್ಲಿ ಯಥಾವತ್ತಾಗಿ ಹೇಳಿದ್ದಾರೆ.

12290106a ವಿಪರ್ಯಯೇ ತಸ್ಯ ಹಿ ಪಾರ್ಥ ದೇವಾನ್ ಗಚ್ಚಂತಿ ಸಾಂಖ್ಯಾಃ ಸತತಂ ಸುಖೇನ।
12290106c ತಾಂಶ್ಚಾನುಸಂಚಾರ್ಯ ತತಃ ಕೃತಾರ್ಥಾಃ ಪತಂತಿ ವಿಪ್ರೇಷು ಯತೇಷು ಭೂಯಃ।।

ಪಾರ್ಥ! ಸಾಧನೆಯಲ್ಲಿ ಅಲ್ಪ-ಸ್ವಲ್ಪ ನ್ಯೂನತೆಯುಂಟಾದರೂ ಪರಿಪೂರ್ಣವಾಗದೇ ಇದ್ದರೂ ಸಾಂಖ್ಯಯೋಗ ಸಾಧಕರು ದೇವತೆಗಳ ಬಳಿಗಂತೂ ಹೋಗಿಯೇ ಹೋಗುತ್ತಾರೆ. ಅಲ್ಲಿ ನಿರಂತರವೂ ಸುಖವಾಗಿದ್ದು ದೇವತೆಗಳನ್ನೇ ಅನುಸರಿಸಿ ಅಧಿಪತ್ಯವನ್ನೂ ನಡೆಸಿ ಕೃತಾರ್ಥರಾಗಿ ಪುಣ್ಯಕ್ಷಯವಾದ ನಂತರ ಸಾಧನೆಯನ್ನು ಮುಂದುವರೆಸಲು ಭೂಲೋಕದಲ್ಲಿ ಪ್ರಯತ್ನಶೀಲ ಬ್ರಾಹ್ಮಣರ ಮನೆಯಲ್ಲಿ ಜನಿಸುತ್ತಾರೆ.

12290107a ಹಿತ್ವಾ ಚ ದೇಹಂ ಪ್ರವಿಶಂತಿ ಮೋಕ್ಷಂ ದಿವೌಕಸೋ ದ್ಯಾಮಿವ ಪಾರ್ಥ ಸಾಂಖ್ಯಾಃ।
12290107c ತತೋಽಧಿಕಂ ತೇಽಭಿರತಾ ಮಹಾರ್ಹೇ ಸಾಂಖ್ಯೇ ದ್ವಿಜಾಃ ಪಾರ್ಥಿವ ಶಿಷ್ಟಜುಷ್ಟೇ।।

ಪಾರ್ಥ! ಪಾರ್ಥಿವ! ಸಾಂಖ್ಯಯೋಗಿಗಳು ದೇಹತ್ಯಾಗ ಮಾಡಿದ ನಂತರ ದೇವತೆಗಳು ಸ್ವರ್ಗಕ್ಕೆ ಹೋಗುವಂತೆ ಪರಮದೇವ ಪರಮಾತ್ಮನನ್ನು ಪ್ರವೇಶಿಸುತ್ತಾರೆ. ಆದುದರಿಂದ ಶಿಷ್ಟ ಪುರುಷರು ಸೇವಿಸುವ ಪರಮಪೂಜ್ಯ ಸಾಂಖ್ಯಶಾಸ್ತ್ರದ ವಿಷಯದಲ್ಲಿ ಎಲ್ಲ ದ್ವಿಜರೂ ಹೆಚ್ಚಿನ ಆಸಕ್ತಿಯುಳ್ಳವರಾಗಿರುತ್ತಾರೆ.

12290108a ತೇಷಾಂ ನ ತಿರ್ಯಗ್ಗಮನಂ ಹಿ ದೃಷ್ಟಂ ನಾವಾಗ್ಗತಿಃ ಪಾಪಕೃತಾಂ ನಿವಾಸಃ।
12290108c ನ ಚಾಬುಧಾನಾಮಪಿ ತೇ ದ್ವಿಜಾತಯೋ ಯೇ ಜ್ಞಾನಮೇತನ್ನೃಪತೇಽನುರಕ್ತಾಃ।।

ಈ ಸಾಂಖ್ಯಶಾಸ್ತ್ರದಲ್ಲಿ ಅನುರಕ್ತರಾದ ದ್ವಿಜಾತಿಪ್ರಮುಖರು ಮರಣಾನಂತರ ಪಶು-ಪಕ್ಷಿಗಳೇ ಮೊದಲಾದ ತಿರ್ಯಗ್ಯೋನಿಗಳಲ್ಲಿ ಹುಟ್ಟುವುದಿಲ್ಲ. ನರಕಾದಿ ಅಧೋಗತಿಗಳನ್ನೂ ಹೊಂದುವುದಿಲ್ಲ. ಪಾಪಾಚಾರಿಗಳ ಮಧ್ಯದಲ್ಲಾಗಲೀ ಅವಿದ್ವಾಂಸರ ಮಧ್ಯದಲ್ಲಿಯಾಗಲೀ ಹುಟ್ಟುವುದಿಲ್ಲ.

12290109a ಸಾಂಖ್ಯಂ ವಿಶಾಲಂ ಪರಮಂ ಪುರಾಣಂ ಮಹಾರ್ಣವಂ ವಿಮಲಮುದಾರಕಾಂತಮ್।
12290109c ಕೃತ್ಸ್ನಂ ಚ ಸಾಂಖ್ಯಂ ನೃಪತೇ ಮಹಾತ್ಮಾ ನಾರಾಯಣೋ ಧಾರಯತೇಽಪ್ರಮೇಯಮ್।।

ಸಾಂಖ್ಯವು ವಿಶಾಲವಾದದು. ಪರಮ ಪ್ರಾಚೀನವಾದುದು. ಮಹಾಸಾಗರದಂತೆ ಅಗಾಧವೂ ನಿರ್ಮಲವೂ ಆಗಿದ್ದು ಉದಾರ ಭಾವದಿಂದ ಪರಿಪೂರ್ಣವಾಗಿದೆ. ಅತ್ಯಂತ ಸುಂದರವಾಗಿದೆ. ನೃಪತೇ! ಮಹಾತ್ಮಾ ನಾರಾಯಣನು ಸಂಪೂರ್ಣ ಅಪ್ರಮೇಯ ಸಾಂಖ್ಯವನ್ನು ಧರಿಸಿದ್ದಾನೆ.

12290110a ಏತನ್ಮಯೋಕ್ತಂ ನರದೇವ ತತ್ತ್ವಂ ನಾರಾಯಣೋ ವಿಶ್ವಮಿದಂ ಪುರಾಣಮ್।
12290110c ಸ ಸರ್ಗಕಾಲೇ ಚ ಕರೋತಿ ಸರ್ಗಂ ಸಂಹಾರಕಾಲೇ ಚ ತದತ್ತಿ ಭೂಯಃ5।।

ನರದೇವ! ನಾನು ನಿನಗೆ ಸಾಂಖ್ಯತತ್ತ್ವವನ್ನು ಹೇಳಿದ್ದೇನೆ. ಪುರಾತನವಾದ ಈ ವಿಶ್ವವು ನಾರಾಯಣಾತ್ಮಕವಾಗಿದೆ. ಅವನು ಜಗತ್ಸೃಷ್ಟಿಯ ಸಮಯದಲ್ಲಿ ಸೃಷ್ಟಿಸುತ್ತಾನೆ ಮತ್ತು ಸಂಹಾರಕಾಲದಲ್ಲಿ ಅದನ್ನು ತನ್ನಲ್ಲಿಯೇ ಲಯಗೊಳಿಸಿಕೊಳ್ಳುತ್ತಾನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಸಾಂಖ್ಯಕಥನೇ ನವತ್ಯತ್ಯಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಸಾಂಖ್ಯಕಥನ ಎನ್ನುವ ಇನ್ನೂರಾತೊಂಭತ್ತನೇ ಅಧ್ಯಾಯವು.


  1. ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ದುರ್ಲಭತ್ವಂ ಚ ಮೋಕ್ಷಸ್ಯ ವಿಜ್ಞಾಯ ಶ್ರುತಿಪೂರ್ವಕಮ್।। (ಭಾರತ ದರ್ಶನ). ↩︎

  2. ಪೂರ್ಣಂ (ಭಾರತ ದರ್ಶನ). ↩︎

  3. ಮನೀಷಿಣಃ। (ಭಾರತ ದರ್ಶನ). ↩︎

  4. ಪರಮಚ್ಯುತಮ್। (ಭಾರತ ದರ್ಶನ). ↩︎

  5. ಇದರ ನಂತರ ಈ ಒಂದು ಶ್ಲೋಕಾರ್ಧವಿದೆ: ಸಂಹೃತ್ಯ ಸರ್ವಂ ನಿಜದೇಹಸಂಸ್ಥಂ ಕೃತ್ಯಾಪ್ಸು ಶೇತೇ ಜಗದಂತರಾತ್ಮಾ।। (ಭಾರತ ದರ್ಶನ). ↩︎