ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 284
ಸಾರ
ವಿಷಯಾಸಕ್ತನ ಪತನ, ತಪೋಬಲದ ಶ್ರೇಷ್ಠತೆ ಮತ್ತು ಸ್ವಧರ್ಮಪಾಲನೆಯ ಆದೇಶ (1-39).
12284001 ಪರಾಶರ ಉವಾಚ।
12284001a ಏಷ ಧರ್ಮವಿಧಿಸ್ತಾತ ಗೃಹಸ್ಥಸ್ಯ ಪ್ರಕೀರ್ತಿತಃ।
12284001c ತಪೋವಿಧಿಂ ತು ವಕ್ಷ್ಯಾಮಿ ತನ್ಮೇ ನಿಗದತಃ ಶೃಣು।।
ಪರಾಶರನು ಹೇಳಿದನು: “ಅಯ್ಯಾ! ಇದೂವರೆಗೆ ಗೃಹಸ್ಥನ ಧರ್ಮವಿಧಿಗಳನ್ನು ಹೇಳಿದೆನು. ಈಗ ತಪೋವಿಧಿಯನ್ನು ಹೇಳುತ್ತೇನೆ. ನನ್ನಿಂದ ಅದನ್ನು ಕೇಳು.
12284002a ಪ್ರಾಯೇಣ ಹಿ ಗೃಹಸ್ಥಸ್ಯ ಮಮತ್ವಂ ನಾಮ ಜಾಯತೇ।
12284002c ಸಂಗಾಗತಂ ನರಶ್ರೇಷ್ಠ ಭಾವೈಸ್ತಾಮಸರಾಜಸೈಃ।।
ನರಶ್ರೇಷ್ಠ! ಪ್ರಾಯಶಃ ತಾಮಸ ಮತ್ತು ರಾಜಸ ಭಾವಗಳಿಂದ ಗೃಹಸ್ಥನಲ್ಲಿ ಸಂಸರ್ಗವಶದಿಂದ ಪದಾರ್ಥ ಮತ್ತು ವ್ಯಕ್ತಿಗಳಲ್ಲಿ ಮಮತೆಯುಂಟಾಗುತ್ತದೆ.
12284003a ಗೃಹಾಣ್ಯಾಶ್ರಿತ್ಯ ಗಾವಶ್ಚ ಕ್ಷೇತ್ರಾಣಿ ಚ ಧನಾನಿ ಚ।
12284003c ದಾರಾಃ ಪುತ್ರಾಶ್ಚ ಭೃತ್ಯಾಶ್ಚ ಭವಂತೀಹ ನರಸ್ಯ ವೈ।।
ಗೃಹವನ್ನಾಶ್ರಯಿಸಿದ ನರನಿಗೆ ಗೋವುಗಳು, ಹೊಲಗಳು, ಧನಸಂಪತ್ತು, ಪತ್ನಿ-ಪುತ್ರರು, ಸೇವಕರು ಮೊದಲಾದವುಗಳೊಂದಿಗೆ ಸಂಬಂಧವುಂಟಾಗಿಬಿಡುತ್ತದೆ.
12284004a ಏವಂ ತಸ್ಯ ಪ್ರವೃತ್ತಸ್ಯ ನಿತ್ಯಮೇವಾನುಪಶ್ಯತಃ।
12284004c ರಾಗದ್ವೇಷೌ ವಿವರ್ಧೇತೇ ಹ್ಯನಿತ್ಯತ್ವಮಪಶ್ಯತಃ।।
ಹೀಗೆ ಪ್ರವೃತ್ತಿಮಾರ್ಗದಲ್ಲಿದ್ದುಕೊಂಡು ಅವನು ನಿತ್ಯವೂ ಈ ವಸ್ತುಗಳನ್ನು ನೋಡುತ್ತಿರುತ್ತಾನೆ, ಆದರೆ ಅವುಗಳ ಅನಿತ್ಯತೆಯ ಕುರಿತು ದೃಷ್ಟಿಹಾಯಿಸುವುದಿಲ್ಲ. ಇದರಿಂದಾಗಿ ಅವನ ಮನಸ್ಸಿನಲ್ಲಿ ಅವುಗಳ ಕುರಿತು ರಾಗ-ದ್ವೇಷಗಳು ಹೆಚ್ಚಾಗುತ್ತಿರುತ್ತವೆ.
12284005a ರಾಗದ್ವೇಷಾಭಿಭೂತಂ ಚ ನರಂ ದ್ರವ್ಯವಶಾನುಗಮ್।
12284005c ಮೋಹಜಾತಾ ರತಿರ್ನಾಮ ಸಮುಪೈತಿ ನರಾಧಿಪ।।
ನರಾಧಿಪ! ರಾಗ-ದ್ವೇಷಗಳ ವಶನಾಗಿ ದ್ರವ್ಯಗಳಲ್ಲಿ ಆಸಕ್ತನಾದ ಮನುಷ್ಯನ ಬಳಿ ಮೋಹದ ಕನ್ಯೆ ರತಿಯು ಬರುತ್ತಾಳೆ.
12284006a ಕೃತಾರ್ಥೋ ಭೋಗತೋ ಭೂತ್ವಾ ಸ ವೈ ರತಿಪರಾಯಣಃ।
12284006c ಲಾಭಂ ಗ್ರಾಮ್ಯಸುಖಾದನ್ಯಂ ರತಿತೋ ನಾನುಪಶ್ಯತಿ।।
ರತಿಪರಾಯಣರಾದ ಎಲ್ಲರೂ ಭೋಗದಿಂದಲೇ ಕೃತಾರ್ಥರಾದವೆಂದು ತಿಳಿದು, ರತಿಯಿಂದ ದೊರಕುವ ಇಂದ್ರಿಯ ಸುಖಕ್ಕಿಂತಲೂ ಇರುವ ಅನ್ಯ ಲಾಭವನ್ನು ತಿಳಿದುಕೊಳ್ಳುವುದಿಲ್ಲ.
12284007a ತತೋ ಲೋಭಾಭಿಭೂತಾತ್ಮಾ ಸಂಗಾದ್ವರ್ಧಯತೇ ಜನಮ್।
12284007c ಪುಷ್ಟ್ಯರ್ಥಂ ಚೈವ ತಸ್ಯೇಹ ಜನಸ್ಯಾರ್ಥಂ ಚಿಕೀರ್ಷತಿ।।
ಅನಂತರ ಅವನು ಲೋಭವಶನಾಗಿ ಆಸಕ್ತಿವಶ ತನ್ನ ಪರಿಜನರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾನೆ. ತದನಂತರ ಆ ಕುಟುಂಬೀಜನರ ಪಾಲನ-ಪೋಷಣೆಗಾಗಿ ಧನಸಂಗ್ರಹವನ್ನು ಬಯಸುತ್ತಾನೆ.
12284008a ಸ ಜಾನನ್ನಪಿ ಚಾಕಾರ್ಯಮರ್ಥಾರ್ಥಂ ಸೇವತೇ ನರಃ।
12284008c ಬಾಲಸ್ನೇಹಪರೀತಾತ್ಮಾ ತತ್ಕ್ಷಯಾಚ್ಚಾನುತಪ್ಯತೇ।।
ಪಾಪಕರ್ಮವೆಂದು ತಿಳಿದರೂ ಧನಕ್ಕೋಸ್ಕರ ನರನು ಪಾಪಕರ್ಮಗಳನ್ನು ಮಾಡುತ್ತಾನೆ. ಬಾಲಮಕ್ಕಳ ಕುರಿತು ಅತಿಯಾದ ಸ್ನೇಹದಿಂದಿದ್ದು ಅವರಲ್ಲಿ ಯಾರಾದರೂ ತೀರಿಕೊಂಡರೆ ಪುನಃ ಪುನಃ ಸಂತಾಪಪಡುತ್ತಿರುತ್ತಾನೆ.
12284009a ತತೋ ಮಾನೇನ ಸಂಪನ್ನೋ ರಕ್ಷನ್ನಾತ್ಮಪರಾಜಯಮ್।
12284009c ಕರೋತಿ ಯೇನ ಭೋಗೀ ಸ್ಯಾಮಿತಿ ತಸ್ಮಾದ್ವಿನಶ್ಯತಿ।।
ಧನಸಂಗ್ರಹದಿಂದ ಮಾನಸಂಪನ್ನನಾದಾಗ ತನ್ನನ್ನು ಪರಾಜಯದಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾನೆ ಮತ್ತು ತಾನು ಭೋಗಸಾಮಾಗ್ರಿಗಳ ಸಂಪನ್ನನಾಗಬೇಕು ಎಂದು ಅದೇ ಕಾರ್ಯಗಳನ್ನು ಪುನಃ ಪುನಃ ಮಾಡುತ್ತಾ ಒಂದು ದಿನ ಸಾಯುತ್ತಾನೆ.
12284010a ತಪೋ1 ಹಿ ಬುದ್ಧಿಯುಕ್ತಾನಾಂ ಶಾಶ್ವತಂ ಬ್ರಹ್ಮದರ್ಶನಮ್।
12284010c ಅನ್ವಿಚ್ಚತಾಂ ಶುಭಂ ಕರ್ಮ ನರಾಣಾಂ ತ್ಯಜತಾಂ ಸುಖಮ್।।
ಸಮತ್ವದಿಂದ ಶುಭಕರ್ಮಗಳನ್ನು ಮಾಡುವ ಮತ್ತು ಅನಿತ್ಯವಾದ ಪ್ರಾಪಂಚಿಕ ಸುಖವನ್ನು ತ್ಯಾಗಮಾಡುವ ತಪಸ್ಸೇ ಬುದ್ಧಿಯುಕ್ತರಿಗೆ ಶಾಶ್ವತ ಬ್ರಹ್ಮದರ್ಶನವನ್ನು ನೀಡುವಂಥಹುದು.
12284011a ಸ್ನೇಹಾಯತನನಾಶಾಚ್ಚ ಧನನಾಶಾಚ್ಚ ಪಾರ್ಥಿವ।
12284011c ಆಧಿವ್ಯಾಧಿಪ್ರತಾಪಾಚ್ಚ ನಿರ್ವೇದಮುಪಗಚ್ಚತಿ।।
ಪಾರ್ಥಿವ! ಸಂಸಾರಿಗಳಿಗೆ ತಮ್ಮ ಸ್ನೇಹದಲ್ಲಿರುವ ಪತ್ನಿ-ಪುತ್ರರ ನಾಶವಾದಾಗ, ಧನವು ನಾಶವಾದಾಗ ಮತ್ತು ರೋಗ ಮತ್ತು ಚಿಂತೆಗಳಿಂದ ಕಷ್ಟಬಂದೊದಗಿದಾಗ ಮಾತ್ರ ವೈರಾಗ್ಯವುಂಟಾಗುತ್ತದೆ.
12284012a ನಿರ್ವೇದಾದಾತ್ಮಸಂಬೋಧಃ ಸಂಬೋಧಾಚ್ಚಾಸ್ತ್ರದರ್ಶನಮ್।
12284012c ಶಾಸ್ತ್ರಾರ್ಥದರ್ಶನಾದ್ರಾಜಂಸ್ತಪ ಏವಾನುಪಶ್ಯತಿ।।
ವೈರಾಗ್ಯದಿಂದ ಮನುಷ್ಯನಲ್ಲಿ ಆತ್ಮತತ್ತ್ವದ ಜಿಜ್ಞಾಸೆಯುಂಟಾಗುತ್ತದೆ. ಆ ಜಿಜ್ಞಾಸೆಯಿಂದ ಅವನು ಶಾಸ್ತ್ರಗಳ ಸ್ವಾಧ್ಯಾಯದಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳುತ್ತಾನೆ ಮತ್ತು ಶಾಸ್ತ್ರಗಳ ಅರ್ಥ ಮತ್ತು ಭಾವಗಳ ಜ್ಞಾನದ ಮೂಲಕ ತಪಸ್ಸೇ ಕಲ್ಯಾಣಕ್ಕೆ ಸಾಧನವೆಂದು ಅರಿತುಕೊಳ್ಳುತ್ತಾನೆ.
12284013a ದುರ್ಲಭೋ ಹಿ ಮನುಷ್ಯೇಂದ್ರ ನರಃ ಪ್ರತ್ಯವಮರ್ಶವಾನ್।
12284013c ಯೋ ವೈ ಪ್ರಿಯಸುಖೇ ಕ್ಷೀಣೇ ತಪಃ ಕರ್ತುಂ ವ್ಯವಸ್ಯತಿ।।
ಮನುಷ್ಯೇಂದ್ರ! ಸಂಸಾರದಲ್ಲಿ ಸ್ತ್ರೀ-ಪುತ್ರಾದಿ ಪ್ರಿಯಜನರಿಂದ ದೊರಕುವ ಸುಖವಿಲ್ಲದೇ ಹೋದಾಗ ತಪಸ್ಸಿನಲ್ಲಿ ಪ್ರವೃತ್ತಗೊಳ್ಳುವ ಮನುಷ್ಯನು ದುರ್ಲಭನು.
12284014a ತಪಃ ಸರ್ವಗತಂ ತಾತ ಹೀನಸ್ಯಾಪಿ ವಿಧೀಯತೇ।
12284014c ಜಿತೇಂದ್ರಿಯಸ್ಯ ದಾಂತಸ್ಯ ಸ್ವರ್ಗಮಾರ್ಗಪ್ರದೇಶಕಮ್।।
ಅಯ್ಯಾ! ಎಲ್ಲರಿಗೂ ತಪಸ್ಸಿನ ಅಧಿಕಾರವಿದೆ. ಜಿತೇಂದ್ರಿಯ ಮತ್ತು ಮನೋನಿಗ್ರಹಸಂಪನ್ನ ಹೀನ ವರ್ಣದವರಿಗೂ ಕೂಡ ತಪಸ್ಸಿನ ವಿಧಾನವಿದೆ. ಏಕೆಂದರೆ ತಪಸ್ಸು ಮನುಷ್ಯನನ್ನು ಸ್ವರ್ಗಮಾರ್ಗದಲ್ಲಿರುವಂತೆ ಮಾಡುತ್ತದೆ.
12284015a ಪ್ರಜಾಪತಿಃ ಪ್ರಜಾಃ ಪೂರ್ವಮಸೃಜತ್ತಪಸಾ ವಿಭುಃ।
12284015c ಕ್ವ ಚಿತ್ಕ್ವ ಚಿದ್ವ್ರತಪರೋ ವ್ರತಾನ್ಯಾಸ್ಥಾಯ ಪಾರ್ಥಿವ।।
ಪಾರ್ಥಿವ! ಹಿಂದೆ ವಿಭು ಪ್ರಜಾಪತಿಯು ತಪಸ್ಸಿನಿಂದ ಮತ್ತು ಇನ್ನೂ ಯಾವ್ಯಾವುದೋ ವ್ರತಗಳನ್ನಾಚರಿಸಿ ಪ್ರಜೆಗಳನ್ನು ಸೃಷ್ಟಿಸಿದ್ದನು.
12284016a ಆದಿತ್ಯಾ ವಸವೋ ರುದ್ರಾಸ್ತಥೈವಾಗ್ನ್ಯಶ್ವಿಮಾರುತಾಃ।
12284016c ವಿಶ್ವೇದೇವಾಸ್ತಥಾ ಸಾಧ್ಯಾಃ ಪಿತರೋಽಥ ಮರುದ್ಗಣಾಃ।।
12284017a ಯಕ್ಷರಾಕ್ಷಸಗಂಧರ್ವಾಃ ಸಿದ್ಧಾಶ್ಚಾನ್ಯೇ ದಿವೌಕಸಃ।
12284017c ಸಂಸಿದ್ಧಾಸ್ತಪಸಾ ತಾತ ಯೇ ಚಾನ್ಯೇ ಸ್ವರ್ಗವಾಸಿನಃ।।
ಅಯ್ಯಾ! ಆದಿತ್ಯರು, ವಸುಗಳು, ರುದ್ರರು, ಅಗ್ನಿ, ಅಶ್ವಿನೀ ಕುಮಾರರು, ವಾಯು, ವಿಶ್ವೇದೇವರು, ಸಾಧ್ಯರು, ಪಿತೃಗಳು, ಮರುದ್ಗಣಗಳು, ಯಕ್ಷ-ರಾಕ್ಷಸ-ಗಂಧರ್ವರು, ಸಿದ್ಧರು ಮತ್ತು ಅನ್ಯ ದಿವೌಕಸರು ಹಾಗೂ ಅನ್ಯ ಸ್ವರ್ಗವಾಸಿಗಳು – ಎಲ್ಲರೂ ತಪಸ್ಸಿನಿಂದಲೇ ಸಿದ್ಧಿಯನ್ನು ಪಡೆದುಕೊಂಡರು.
12284018a ಯೇ ಚಾದೌ ಬ್ರಹ್ಮಣಾ ಸೃಷ್ಟಾ ಬ್ರಾಹ್ಮಣಾಸ್ತಪಸಾ ಪುರಾ।
12284018c ತೇ ಭಾವಯಂತಃ ಪೃಥಿವೀಂ ವಿಚರಂತಿ ದಿವಂ ತಥಾ।।
ಪೂರ್ವಕಾಲದಲ್ಲಿ ಬ್ರಹ್ಮನು ಮರೀಚಿಯೇ ಮೊದಲಾದ ಯಾವ ಬ್ರಾಹ್ಮಣರನ್ನು ಸೃಷ್ಟಿಸಿದ್ದನೋ ಅವರೂ ಕೂಡ ತಪಸ್ಸಿನ ಪ್ರಭಾವದಿಂದಲೇ ಪೃಥ್ವಿ ಮತ್ತು ಆಕಾಶಗಳನ್ನು ಪವಿತ್ರಗೊಳಿಸುತ್ತಾ ಸಂಚರಿಸುತ್ತಾರೆ.
12284019a ಮರ್ತ್ಯಲೋಕೇ ಚ ರಾಜಾನೋ ಯೇ ಚಾನ್ಯೇ ಗೃಹಮೇಧಿನಃ।
12284019c ಮಹಾಕುಲೇಷು ದೃಶ್ಯಂತೇ ತತ್ಸರ್ವಂ ತಪಸಃ ಫಲಮ್।।
ಮರ್ತ್ಯಲೋಕದಲ್ಲಿ ಯಾವ ರಾಜರಿರುವರೋ ಮತ್ತು ಅನ್ಯ ಗೃಹಸ್ಥ ಮಹಾಕುಲಗಳಲ್ಲಿ ಉತ್ಪನ್ನರಾದವರನ್ನು ನೋಡುತ್ತೇವೋ ಅವರೆಲ್ಲರೂ ಅವರ ತಪಸ್ಸಿನ ಫಲಗಳೇ ಆಗಿದ್ದಾರೆ.
12284020a ಕೌಶಿಕಾನಿ ಚ ವಸ್ತ್ರಾಣಿ ಶುಭಾನ್ಯಾಭರಣಾನಿ ಚ।
12284020c ವಾಹನಾಸನಯಾನಾನಿ ಸರ್ವಂ ತತ್ತಪಸಃ ಫಲಮ್।।
ರೇಷ್ಮೆ ವಸ್ತ್ರ, ಸುಂದರ ಆಭೂಷಣಗಳು, ವಾಹನ, ಆಸನ ಮತ್ತು ಉತ್ತಮ ಖಾದ್ಯಗಳು ಎಲ್ಲವೂ ತಪಸ್ಸಿನದೇ ಫಲಗಳು.
12284021a ಮನೋನುಕೂಲಾಃ ಪ್ರಮದಾ ರೂಪವತ್ಯಃ ಸಹಸ್ರಶಃ।
12284021c ವಾಸಃ ಪ್ರಾಸಾದಪೃಷ್ಠೇ ಚ ತತ್ಸರ್ವಂ ತಪಸಃ ಫಲಮ್।।
ಮನೋನುಕೂಲರಾಗಿರುವ ಸಹಸ್ರಾರು ರೂಪವತೀ ಯುವತಿಯರು, ಉತ್ತಮ ಭವನಗಳಲ್ಲಿ ವಾಸ ಇವೆಲ್ಲವೂ ತಪಸ್ಸಿನದೇ ಫಲಗಳು.
12284022a ಶಯನಾನಿ ಚ ಮುಖ್ಯಾನಿ ಭೋಜ್ಯಾನಿ ವಿವಿಧಾನಿ ಚ।
12284022c ಅಭಿಪ್ರೇತಾನಿ ಸರ್ವಾಣಿ ಭವಂತಿ ಕೃತಕರ್ಮಣಾಮ್2।।
ಕೃತಕರ್ಮಿಗಳಿಗೆ ಶ್ರೇಷ್ಠ ಹಾಸಿಗೆಗಳೂ, ವಿವಿಧ ಭೋಜ್ಯಗಳೂ, ಮತ್ತು ಬಯಸಿದ ಎಲ್ಲವೂ ದೊರೆಯುತ್ತವೆ.
12284023a ನಾಪ್ರಾಪ್ಯಂ ತಪಸಾ ಕಿಂ ಚಿತ್ತ್ರೈಲೋಕ್ಯೇಽಸ್ಮಿನ್ಪರಂತಪ।
12284023c ಉಪಭೋಗಪರಿತ್ಯಾಗಃ ಫಲಾನ್ಯಕೃತಕರ್ಮಣಾಮ್।।
ಪರಂತಪ! ತಪಸ್ಸಿನಿಂದ ಲಭ್ಯವಾಗದೇ ಇರುವಂಥಹುದು ಮೂರೂ ಲೋಕಗಳಲ್ಲಿ ಯಾವುದೂ ಇಲ್ಲ. ತಪಸ್ಸನ್ನು ಮಾಡದೇ ಇರುವವರಿಗೆ ಈ ಎಲ್ಲ ಉಪಭೋಗಗಳ ಪರಿತ್ಯಾಗವೇ ಫಲವು.
12284024a ಸುಖಿತೋ ದುಃಖಿತೋ ವಾಪಿ ನರೋ ಲೋಭಂ ಪರಿತ್ಯಜೇತ್।
12284024c ಅವೇಕ್ಷ್ಯ ಮನಸಾ ಶಾಸ್ತ್ರಂ ಬುದ್ಧ್ಯಾ ಚ ನೃಪಸತ್ತಮ।।
ನೃಪಸತ್ತಮ! ಮನುಷ್ಯನು ಸುಖಿಯಾಗಿರಲಿ ಅಥವಾ ದುಃಖಿಯಾಗಿರಲಿ, ಮನಸ್ಸು-ಬುದ್ಧಿಗಳಿಂದ ಶಾಸ್ತ್ರಗಳನ್ನು ಪರಿಶೀಲಿಸಿ, ಲೋಭವನ್ನು ತ್ಯಜಿಸಬೇಕು.
12284025a ಅಸಂತೋಷೋಽಸುಖಾಯೈವ ಲೋಭಾದಿಂದ್ರಿಯವಿಭ್ರಮಃ।
12284025c ತತೋಽಸ್ಯ ನಶ್ಯತಿ ಪ್ರಜ್ಞಾ ವಿದ್ಯೇವಾಭ್ಯಾಸವರ್ಜಿತಾ।।
ಅಸಂತೋಷವು ಕೇವಲ ದುಃಖದ ಕಾರಣವಾಗುತ್ತದೆ. ಲೋಭದಿಂದ ಇಂದ್ರಿಯಗಳು ಭ್ರಮೆಗೊಳಗಾಗುತ್ತವೆ. ಆಗ ಅಭ್ಯಾಸವಿಲ್ಲದ ವಿದ್ಯೆಯಂತೆ ಪ್ರಜ್ಞೆಯೂ ನಷ್ಟವಾಗುತ್ತದೆ.
12284026a ನಷ್ಟಪ್ರಜ್ಞೋ ಯದಾ ಭವತಿ ತದಾ ನ್ಯಾಯಂ ನ ಪಶ್ಯತಿ।
12284026c ತಸ್ಮಾತ್ಸುಖಕ್ಷಯೇ ಪ್ರಾಪ್ತೇ ಪುಮಾನುಗ್ರಂ ತಪಶ್ಚರೇತ್।।
ಪ್ರಜ್ಞೆಯು ನಷ್ಟವಾದಾಗ ಮನುಷ್ಯನು ನ್ಯಾಯವನ್ನು ಕಾಣುವುದಿಲ್ಲ. ಆದುದರಿಂದಲೇ ಸುಖದ ಕ್ಷಯವುಂಟಾದಾಗ ಮನುಷ್ಯನು ಉಗ್ರ ತಪಸ್ಸನ್ನು ಮಾಡಬೇಕು.
12284027a ಯದಿಷ್ಟಂ ತತ್ಸುಖಂ ಪ್ರಾಹುರ್ದ್ವೇಷ್ಯಂ ದುಃಖಮಿಹೋಚ್ಯತೇ।
12284027c ಕೃತಾಕೃತಸ್ಯ ತಪಸಃ ಫಲಂ ಪಶ್ಯಸ್ವ ಯಾದೃಶಮ್।।
ಇಷ್ಟವಾದುದೇ ಸುಖವೆಂದು ಹೇಳುತ್ತಾರೆ. ದ್ವೇಷವು ದುಃಖ ಎಂದು ಹೇಳುತ್ತಾರೆ. ತಪಸ್ಸು ಮಾಡಿದರೆ ಸುಖವುಂಟಾಗುತ್ತದೆ ಮತ್ತು ತಪಸ್ಸು ಮಾಡದಿದ್ದರೆ ದುಃಖವುಂಟಾಗುತ್ತದೆ. ತಪಸ್ಸಿನ ಈ ರೀತಿಯ ಫಲವನ್ನು ನೋಡು.
12284028a ನಿತ್ಯಂ ಭದ್ರಾಣಿ ಪಶ್ಯಂತಿ ವಿಷಯಾಂಶ್ಚೋಪಭುಂಜತೇ।
12284028c ಪ್ರಾಕಾಶ್ಯಂ ಚೈವ ಗಚ್ಚಂತಿ ಕೃತ್ವಾ ನಿಷ್ಕಲ್ಮಷಂ ತಪಃ।।
ನಿಷ್ಕಲ್ಮಷ ತಪಸ್ಸನ್ನಾಚರಿಸಿ ಮನುಷ್ಯನು ನಿತ್ಯವೂ ಕಲ್ಯಾಣವನ್ನೇ ಕಾಣುತ್ತಾನೆ. ವಿಷಯಗಳನ್ನು ಭೋಗಿಸುತ್ತಾನೆ. ಮತ್ತು ಜನ-ಸಮಾಜದಲ್ಲಿ ವಿಖ್ಯಾತನಾಗುತ್ತಾನೆ.
12284029a ಅಪ್ರಿಯಾಣ್ಯವಮಾನಾಂಶ್ಚ ದುಃಖಂ ಬಹುವಿಧಾತ್ಮಕಮ್।
12284029c ಫಲಾರ್ಥೀ ಸತ್ಪಥತ್ಯಕ್ತಃ ಪ್ರಾಪ್ನೋತಿ ವಿಷಯಾತ್ಮಕಮ್।।
ವಿಷಯಾತ್ಮಕ ಪಲಾರ್ಥಿಯಾಗಿ ಸತ್ಪಥವನ್ನು ತ್ಯಜಿಸುವವನು ಬಹುವಿಧದ ಅಪ್ರಿಯಗಳನ್ನೂ, ಅಪಮಾನಗಳನ್ನೂ ಮತ್ತು ದುಃಖಗಳನ್ನು ಹೊಂದುತ್ತಾನೆ.
12284030a ಧರ್ಮೇ ತಪಸಿ ದಾನೇ ಚ ವಿಚಿಕಿತ್ಸಾಸ್ಯ ಜಾಯತೇ।
12284030c ಸ ಕೃತ್ವಾ ಪಾಪಕಾನ್ಯೇವ ನಿರಯಂ ಪ್ರತಿಪದ್ಯತೇ।।
ಧರ್ಮ, ತಪಸ್ಸು ಮತ್ತು ದಾನದಲ್ಲಿ ಸಂಶಯವಿರುವವನು ಪಾಪಕರ್ಮಗಳನ್ನು ಮಾಡಿ ನರಕದಲ್ಲಿ ಬೀಳುತ್ತಾನೆ.
12284031a ಸುಖೇ ತು ವರ್ತಮಾನೋ ವೈ ದುಃಖೇ ವಾಪಿ ನರೋತ್ತಮ।
12284031c ಸ್ವವೃತ್ತಾದ್ಯೋ ನ ಚಲತಿ ಶಾಸ್ತ್ರಚಕ್ಷುಃ ಸ ಮಾನವಃ।।
ನರೋತ್ತಮ! ಮನುಷ್ಯನು ಸುಖದಲ್ಲಿರಲಿ ಅಥವಾ ದುಃಖದಲ್ಲಿರಲಿ, ತನ್ನ ಧರ್ಮದಿಂದ ವಿಚಲಿತನಾಗದವನೇ ಶಾಸ್ತ್ರವನ್ನು ತಿಳಿದವನು.
12284032a ಇಷುಪ್ರಪಾತಮಾತ್ರಂ ಹಿ ಸ್ಪರ್ಶಯೋಗೇ ರತಿಃ ಸ್ಮೃತಾ।
12284032c ರಸನೇ ದರ್ಶನೇ ಘ್ರಾಣೇ ಶ್ರವಣೇ ಚ ವಿಶಾಂ ಪತೇ।।
ವಿಶಾಂಪತೇ! ಧನುಸ್ಸಿನಿಂದ ಹೊರಟ ಬಾಣವು ಭೂಮಿಯ ಮೇಲೆ ಬೀಳಲು ಎಷ್ಟು ಸಮಯ ಬೇಕಾಗುವುದೋ ಅಷ್ಟೇ ಸಮಯ ಸ್ಪರ್ಶೇಂದ್ರಿಯ, ರಸನ, ನೇತ್ರ, ನಾಸಿಕ ಮತ್ತು ಶ್ರವಣ ವಿಷಯಗಳ ಸುಖದ ಅನುಭವವಾಗುತ್ತದೆ. ಅರ್ಥಾತ್, ವಿಷಯಗಳ ಸುಖವು ಕ್ಷಣಿಕವಾದುದು.
12284033a ತತೋಽಸ್ಯ ಜಾಯತೇ ತೀವ್ರಾ ವೇದನಾ ತತ್ಕ್ಷಯಾತ್ಪುನಃ।
12284033c ಬುಧಾ ಯೇನ ಪ್ರಶಂಸಂತಿ3 ಮೋಕ್ಷಂ ಸುಖಮನುತ್ತಮಮ್।।
ಪುನಃ ಇಂದ್ರಿಯ ಜನಿತ ಸುಖದ ಸಮಾಪ್ತಿಯಾಗಲು ತೀವ್ರ ದುಃಖವುಂಟಾಗುತ್ತದೆ. ತಿಳಿದವರು ಇದನ್ನು ಪ್ರಶಂಸಿಸುವುದಿಲ್ಲ. ಅವರು ಅನುತ್ತಮ ಮೋಕ್ಷಸುಖವನ್ನು ಪ್ರಶಂಸಿಸುತ್ತಾರೆ.
12284034a ತತಃ ಫಲಾರ್ಥಂ ಚರತಿ4 ಭವಂತಿ ಜ್ಯಾಯಸೋ ಗುಣಾಃ।
12284034c ಧರ್ಮವೃತ್ತ್ಯಾ ಚ ಸತತಂ ಕಾಮಾರ್ಥಾಭ್ಯಾಂ ನ ಹೀಯತೇ।।
ಆದುದರಿಂದ ವಿವೇಕಿಯ ಮನದಲ್ಲಿ ಮೋಕ್ಷಫಲದ ಪ್ರಾಪ್ತಿಗಾಗಿಯೇ ಶಮ-ದಮಾದಿ ಗುಣಗಳು ಹುಟ್ಟಿಕೊಳ್ಳುತ್ತವೆ. ಸತತವೂ ಧರ್ಮಾಚರಣೆಯಲ್ಲಿರುವವನು ಎಂದೂ ಧನ ಮತ್ತು ಕಾಮಗಳಿಂದ ವಂಚಿತನಾಗುವುದಿಲ್ಲ.
12284035a ಅಪ್ರಯತ್ನಾಗತಾಃ ಸೇವ್ಯಾ ಗೃಹಸ್ಥೈರ್ವಿಷಯಾಃ ಸದಾ।
12284035c ಪ್ರಯತ್ನೇನೋಪಗಮ್ಯಶ್ಚ ಸ್ವಧರ್ಮ ಇತಿ ಮೇ ಮತಿಃ।।
ಆದುದರಿಂದ ಗೃಹಸ್ಥನಾದವನು ಸದಾ ಭೋಗಕ್ಕೆ ಪ್ರಯತ್ನಪಡದೇ ತನಗೆ ಪ್ರಾಪ್ತವಾದ ವಿಷಯಗಳನ್ನು ಸೇವಿಸಬೇಕು ಮತ್ತು ಪ್ರಯತ್ನಪಟ್ಟು ತನ್ನ ಧರ್ಮವನ್ನು ಪಾಲಿಸಬೇಕು. ಇದು ನನ್ನ ಅಭಿಪ್ರಾಯ.
12284036a ಮಾನಿನಾಂ ಕುಲಜಾತಾನಾಂ ನಿತ್ಯಂ ಶಾಸ್ತ್ರಾರ್ಥಚಕ್ಷುಷಾಮ್।
12284036c ಧರ್ಮಕ್ರಿಯಾವಿಯುಕ್ತಾನಾಮಶಕ್ತ್ಯಾ ಸಂವೃತಾತ್ಮನಾಮ್।।
12284037a ಕ್ರಿಯಮಾಣಂ ಯದಾ ಕರ್ಮ ನಾಶಂ ಗಚ್ಚತಿ ಮಾನುಷಮ್।
12284037c ತೇಷಾಂ ನಾನ್ಯದೃತೇ ಲೋಕೇ ತಪಸಃ ಕರ್ಮ ವಿದ್ಯತೇ।।
ಉತ್ತಮ ಕುಲದಲ್ಲಿ ಜನ್ಮತಾಳಿದ, ಸನ್ಮಾನಿತ, ಶಾಸ್ತ್ರಗಳ ಅರ್ಥಗಳನ್ನು ಕಂಡುಕೊಂಡಿರುವ ಪುರುಷರಿಗೆ ಹಾಗೂ ಅಸಮರ್ಥರಾಗಿರುವ, ಕರ್ಮ-ಧರ್ಮರಹಿತ, ಆತ್ಮತತ್ತ್ವವನ್ನು ತಿಳಿಯದಿರುವ ಮನುಷ್ಯರು – ಇಬ್ಬರೂ ಮಾಡಿದ ಲೌಕಿಕ ಕರ್ಮಗಳು ನಷ್ಟವಾಗಿ ಹೋಗುತ್ತವೆ ಎನ್ನುವುದು ತಿಳಿಯುತ್ತದೆ. ಇದರಿಂದ ಜಗತ್ತಿನಲ್ಲಿ ತಪಸ್ಸಲ್ಲದೇ ಬೇರೆ ಯಾವ ಸತ್ಕರ್ಮವೂ ಇಲ್ಲ ಎನ್ನುವುದು ನಿಶ್ಚಯವಾಗುತ್ತದೆ.
12284038a ಸರ್ವಾತ್ಮನಾ ತು ಕುರ್ವೀತ ಗೃಹಸ್ಥಃ ಕರ್ಮನಿಶ್ಚಯಮ್।
12284038c ದಾಕ್ಷ್ಯೇಣ ಹವ್ಯಕವ್ಯಾರ್ಥಂ ಸ್ವಧರ್ಮಂ ವಿಚರೇನ್ನೃಪ।।
ನೃಪ! ಗೃಹಸ್ಥನಿಗೆ ಸರ್ವಥಾ ತನ್ನ ಕರ್ತವ್ಯಗಳನ್ನು ನಿಶ್ಚಯಿಸಿ ಸ್ವಧರ್ಮವನ್ನು ಪಾಲಿಸಿಕೊಂಡು ಕೌಶಲ್ಯದಿಂದ ಹವ್ಯ-ಕವ್ಯಗಳನ್ನು ಮಾಡುತ್ತಿರಬೇಕು.
12284039a ಯಥಾ ನದೀನದಾಃ ಸರ್ವೇ ಸಾಗರೇ ಯಾಂತಿ ಸಂಸ್ಥಿತಿಮ್।
12284039c ಏವಮಾಶ್ರಮಿಣಃ ಸರ್ವೇ ಗೃಹಸ್ಥೇ ಯಾಂತಿ ಸಂಸ್ಥಿತಿಮ್।।
ಸರ್ವ ನದೀನದಗಳೂ ಸಾಗರದಲ್ಲಿ ಆಶ್ರಯವನ್ನು ಹೊಂದುವಂತೆ ಸಮಸ್ತ ಆಶ್ರಮಿಗಳೂ ಗೃಹಸ್ಥನಲ್ಲಿ ಆಶ್ರಯವನ್ನು ಪಡೆಯುತ್ತಾರೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಪರಾಶರಗೀತಾಯಾಂ ಚತುರಾಶೀತ್ಯತ್ಯಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಪರಾಶರಗೀತಾ ಎನ್ನುವ ಇನ್ನೂರಾಎಂಭತ್ನಾಲ್ಕನೇ ಅಧ್ಯಾಯವು.