ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 283
ಸಾರ
ಬ್ರಾಹ್ಮಣಾದಿ ವರ್ಣಗಳ ಜೀವಿಕೆ, ಮನುಷ್ಯರಲ್ಲಿ ಅಸುರೀಭಾವದ ಪ್ರಾದುರ್ಭಾವ, ಶಿವನಿಂದ ಅದರ ನಿವಾರಣೆ, ಸ್ವಧರ್ಮ ಪರಿಪಾಲನೆ (1-30).
12283001 ಪರಾಶರ ಉವಾಚ।
12283001a ಪ್ರತಿಗ್ರಹಾಗತಾ ವಿಪ್ರೇ ಕ್ಷತ್ರಿಯೇ ಶಸ್ತ್ರನಿರ್ಜಿತಾಃ1।
12283001c ವೈಶ್ಯೇ ನ್ಯಾಯಾರ್ಜಿತಾಶ್ಚೈವ ಶೂದ್ರೇ ಶುಶ್ರೂಷಯಾರ್ಜಿತಾಃ।
12283001e ಸ್ವಲ್ಪಾಪ್ಯರ್ಥಾಃ ಪ್ರಶಸ್ಯಂತೇ ಧರ್ಮಸ್ಯಾರ್ಥೇ ಮಹಾಫಲಾಃ।।
ಪರಾಶರನು ಹೇಳಿದನು: “ವಿಪ್ರನಲ್ಲಿ ಪ್ರತಿಗ್ರಹಿಸಿದ, ಕ್ಷತ್ರಿಯನಲ್ಲಿ ಶಸ್ತ್ರದಿಂದ ಗೆದ್ದ, ವೈಶ್ಯನಲ್ಲಿ ನ್ಯಾಯಾರ್ಜಿತವಾದ ಮತ್ತು ಶೂದ್ರನಲ್ಲಿ ಶುಶ್ರೂಷೆಯಿಂದ ಗಳಿಸಿದ ಧನವು ಅಲ್ಪವಾದರೂ ಪ್ರಶಂಸನೀಯವಾಗಿರುತ್ತದೆ. ಇವುಗಳನ್ನು ಧರ್ಮಕಾರ್ಯಗಳಿಗೆ ಬಳಸಿದರೆ ಮಹಾಫಲವು ದೊರೆಯುತ್ತದೆ.
12283002a ನಿತ್ಯಂ ತ್ರಯಾಣಾಂ ವರ್ಣಾನಾಂ ಶೂದ್ರಃ ಶುಶ್ರೂಷುರುಚ್ಯತೇ।
12283002c ಕ್ಷತ್ರಧರ್ಮಾ ವೈಶ್ಯಧರ್ಮಾ ನಾವೃತ್ತಿಃ ಪತತಿ ದ್ವಿಜಃ।
12283002e ಶೂದ್ರಕರ್ಮಾ ಯದಾ ತು ಸ್ಯಾತ್ತದಾ ಪತತಿ ವೈ ದ್ವಿಜಃ।।
ಮೂರು ವರ್ಣದವರನ್ನು ನಿತ್ಯವೂ ಶುಶ್ರೂಷೆಮಾಡುವವನನ್ನು ಶೂದ್ರ ಎನ್ನುತ್ತಾರೆ. ತನ್ನ ವೃತ್ತಿಯನ್ನು ನಡೆಸಿಕೊಂಡು ಹೋಗಲು ಆಗದೇ ಇದ್ದಾಗ ಬ್ರಾಹ್ಮಣನು ಕ್ಷತ್ರಧರ್ಮ ಅಥವಾ ವೈಶ್ಯಧರ್ಮದ ವೃತ್ತಿಯನ್ನು ಕೈಗೊಂಡರೆ ಪತಿತನಾಗುವುದಿಲ್ಲ. ಆದರೆ ಬ್ರಾಹ್ಮಣನು ಶೂದ್ರಕರ್ಮದಿಂದ ಪತಿತನಾಗುತ್ತಾನೆ.
12283003a ವಾಣಿಜ್ಯಂ ಪಾಶುಪಾಲ್ಯಂ ಚ ತಥಾ ಶಿಲ್ಪೋಪಜೀವನಮ್।
12283003c ಶೂದ್ರಸ್ಯಾಪಿ ವಿಧೀಯಂತೇ ಯದಾ ವೃತ್ತಿರ್ನ ಜಾಯತೇ।।
ಶೂದ್ರನಿಗೆ ಸೇವಾವೃತ್ತಿಯಿಂದ ಜೀವನವನ್ನು ನಡೆಸಲು ಸಾಧ್ಯವಾಗದೇ ಇದ್ದಾಗ ತನ್ನ ಜೀವಿಕೆಗಾಗಿ ವ್ಯಾಪಾರ, ಪಶುಪಾಲನೆ ಮತ್ತು ಶಿಲ್ಪಗಳನ್ನು ಅವಲಂಬಿಸಬಹುದೆಂದು ಶಾಸ್ತ್ರಗಳು ಹೇಳುತ್ತವೆ.
12283004a ರಂಗಾವತರಣಂ ಚೈವ ತಥಾ ರೂಪೋಪಜೀವನಮ್।
12283004c ಮದ್ಯಮಾಂಸೋಪಜೀವ್ಯಂ ಚ ವಿಕ್ರಯೋ ಲೋಹಚರ್ಮಣೋಃ।।
12283005a ಅಪೂರ್ವಿಣಾ ನ ಕರ್ತವ್ಯಂ ಕರ್ಮ ಲೋಕೇ ವಿಗರ್ಹಿತಮ್।
12283005c ಕೃತಪೂರ್ವಿಣಸ್ತು ತ್ಯಜತೋ ಮಹಾನ್ ಧರ್ಮ ಇತಿ ಶ್ರುತಿಃ।।
ವೇಷವನ್ನು ಧರಿಸಿ ರಂಗಮಂಟಪದಲ್ಲಿ ಕುಣಿಯುವುದು, ವೇಷಗಳನ್ನು ಧರಿಸಿ ಅದರಿಂದಲೇ ಜೀವನ ನಡೆಸುವುದು, ಮದ್ಯ-ಮಾಂಸಗಳಿಂದ ಜೀವನ ನಡೆಸುವುದು, ಲೋಹ ಮತ್ತು ಚರ್ಮಗಳನ್ನು ಮಾರಾಟಮಾಡುವುದು – ಮೊದಲಾದ ಲೋಕದಲ್ಲಿ ಅತಿ ನಿಂದನೀಯವಾದ ಕರ್ಮಗಳನ್ನು - ಹಿಂದಿನಿಂದ ನಡೆದುಕೊಂಡು ಬಂದಿದ್ದರೂ – ಮಾಡಬಾರದು. ಈ ವೃತ್ತಿಗಳು ಹಿಂದಿನಿಂದ ನಡೆದುಕೊಂಡು ಬಂದಿದ್ದರೂ ಅವನ್ನು ತ್ಯಜಿಸಿದರೆ ಮಹಾಧರ್ಮವುಂಟಾಗುತ್ತದೆ ಎಂದು ಶ್ರುತಿಗಳು ಹೇಳುತ್ತವೆ.
12283006a ಸಂಸಿದ್ಧಃ ಪುರುಷೋ ಲೋಕೇ ಯದಾಚರತಿ ಪಾಪಕಮ್।
12283006c ಮದೇನಾಭಿಪ್ಲುತಮನಾಸ್ತಚ್ಚ ನಗ್ರಾಹ್ಯಮುಚ್ಯತೇ।।
ಲೋಕವಿಖ್ಯಾತ ಯಶಸ್ವೀ ಪುರುಷನು ಮದದಿಂದ ಅಥವಾ ಲೋಭದಿಂದ ಪಾಪಕರ್ಮಗಳನ್ನು ಮಾಡಿದರೆ ಅದು ಇತರರ ಆಚರಣೆಗೆ ಯೋಗ್ಯವಾಗುವುದಿಲ್ಲ.
12283007a ಶ್ರೂಯಂತೇ ಹಿ ಪುರಾಣೇ ವೈ ಪ್ರಜಾ ಧಿಗ್ದಂಡಶಾಸನಾಃ।
12283007c ದಾಂತಾ ಧರ್ಮಪ್ರಧಾನಾಶ್ಚ ನ್ಯಾಯಧರ್ಮಾನುವರ್ತಕಾಃ।।
ಹಿಂದೆ ಪ್ರಜೆಗಳು ಹೆಚ್ಚಾಗಿ ದಾಂತರೂ ಧರ್ಮಪ್ರಧಾನರೂ ಆಗಿದ್ದು ನ್ಯಾಯಧರ್ಮಗಳಂತೆಯೇ ನಡೆದುಕೊಳ್ಳುತ್ತಿದ್ದರು ಮತ್ತು ಆಗ ಧಿಕ್ಕಾರವೆಂಬ ದಂಡಶಾಸನವೇ ಸಾಕಾಗುತ್ತಿತ್ತು ಎಂದು ಪುರಾಣಗಳಲ್ಲಿ ಕೇಳಿದ್ದೇವೆ.
12283008a ಧರ್ಮ ಏವ ಸದಾ ನೃಣಾಮಿಹ ರಾಜನ್ ಪ್ರಶಸ್ಯತೇ।
12283008c ಧರ್ಮವೃದ್ಧಾ ಗುಣಾನೇವ ಸೇವಂತೇ ಹಿ ನರಾ ಭುವಿ।।
ರಾಜನ್! ಇಲ್ಲಿ ಮನುಷ್ಯರಿಗೆ ಸದಾ ಧರ್ಮವೇ ಪ್ರಶಸ್ತವಾಗಿದೆ. ಧರ್ಮವೃದ್ಧ ನರರು ಭುವಿಯಲ್ಲಿ ಸದ್ಗುಣಗಳನ್ನೇ ಆಶ್ರಯಿಸುತ್ತಾರೆ.
12283009a ತಂ ಧರ್ಮಮಸುರಾಸ್ತಾತ ನಾಮೃಷ್ಯಂತ ಜನಾಧಿಪ।
12283009c ವಿವರ್ಧಮಾನಾಃ ಕ್ರಮಶಸ್ತತ್ರ ತೇಽನ್ವಾವಿಶನ್ ಪ್ರಜಾಃ।।
ಅಯ್ಯಾ! ಜನಾಧಿಪ! ಅಂತಹ ಧರ್ಮವನ್ನು ಅಸುರರು ಸಹಿಸದಾದರು. ಕ್ರಮಶಃ ಅವರು ವೃದ್ಧಿಹೊಂದಿ ಪ್ರಜೆಗಳನ್ನು ಆವೇಶಿಸಿಕೊಂಡರು.
12283010a ತೇಷಾಂ ದರ್ಪಃ ಸಮಭವತ್ ಪ್ರಜಾನಾಂ ಧರ್ಮನಾಶನಃ।
12283010c ದರ್ಪಾತ್ಮನಾಂ ತತಃ ಕ್ರೋಧಃ ಪುನಸ್ತೇಷಾಮಜಾಯತ।।
ಅಂತಹ ಪ್ರಜೆಗಳಲ್ಲಿ ಧರ್ಮನಾಶಕವಾದ ದರ್ಪವು ಹುಟ್ಟಿಕೊಂಡಿತು. ಅನಂತರ ದರ್ಪಾತ್ಮರಾದ ಅವರಲ್ಲಿ ಪುನಃ ಕ್ರೋಧವು ಹುಟ್ಟಿಕೊಂಡಿತು.
12283011a ತತಃ ಕ್ರೋಧಾಭಿಭೂತಾನಾಂ ವೃತ್ತಂ ಲಜ್ಜಾಸಮನ್ವಿತಮ್।
12283011c ಹ್ರೀಶ್ಚೈವಾಪ್ಯನಶದ್ರಾಜಂಸ್ತತೋ ಮೋಹೋ ವ್ಯಜಾಯತ।।
ರಾಜನ್! ಕ್ರೋಧದಿಂದ ಅಭಿಭೂತರಾದ ಅವರಲ್ಲಿ ಲಜ್ಜಾಯುಕ್ತವಾದ ಸದಾಚಾರವೂ ಲುಪ್ತವಾಯಿತು. ಸಂಕೋಚವೇ ಇಲ್ಲದ ಅವರಲ್ಲಿ ಮೋಹವುಂಟಾಯಿತು.
12283012a ತತೋ ಮೋಹಪರೀತಾಸ್ತೇ ನಾಪಶ್ಯಂತ ಯಥಾ ಪುರಾ।
12283012c ಪರಸ್ಪರಾವಮರ್ದೇನ ವರ್ತಯಂತಿ ಯಥಾಸುಖಮ್।।
ಮೋಹವಶರಾದ ಅವರು ಹಿಂದಿನಂತೆ ನೋಡುತ್ತಿರಲಿಲ್ಲ. ಪರಸ್ಪರರನ್ನು ತುಳಿಯುತ್ತಾ ತಮ್ಮದೇ ಸುಖವನ್ನು ಹೆಚ್ಚಿಸಿಕೊಳ್ಳತೊಡಗಿದರು.
12283013a ತಾನ್ ಪ್ರಾಪ್ಯ ತು ಸ ಧಿಗ್ದಂಡೋ ನಕಾರಣಮತೋಽಭವತ್।
12283013c ತತೋಽಭ್ಯಗಚ್ಚನ್ದೇವಾಂಶ್ಚ ಬ್ರಾಹ್ಮಣಾಂಶ್ಚಾವಮನ್ಯ ಹ।।
ದಿಗ್ದಂಡವು ಅಂಥವರನ್ನು ಸನ್ಮಾರ್ಗಕ್ಕೆ ತರಲು ಅಸಮರ್ಥವಾಯಿತು. ಜನರು ದೇವತೆಗಳನ್ನೂ ಬ್ರಾಹ್ಮಣರನ್ನೂ ಅಪಮಾನಿಸತೊಡಗಿದರು.
12283014a ಏತಸ್ಮಿನ್ನೇವ ಕಾಲೇ ತು ದೇವಾ ದೇವವರಂ ಶಿವಮ್।
12283014c ಅಗಚ್ಚನ್ ಶರಣಂ ವೀರಂ ಬಹುರೂಪಂ ಗಣಾಧಿಪಮ್2।।
ಅದೇ ಸಮಯದಲ್ಲಿ ದೇವತೆಗಳು ದೇವವರ ವೀರ ಬಹುರೂಪ ಗಣಾಧಿಪ ಶಿವವನ್ನು ಶರಣು ಹೊಕ್ಕರು.
12283015a ತೇನ ಸ್ಮ ತೇ ಗಗನಗಾಃ ಸಪುರಾಃ ಪಾತಿತಾಃ ಕ್ಷಿತೌ।
12283015c ತಿಸ್ರೋಽಪ್ಯೇಕೇನ ಬಾಣೇನ ದೇವಾಪ್ಯಾಯಿತತೇಜಸಾ।।
ದೇವತೆಗಳ ಮೂಲಕ ತೇಜಸ್ಸನ್ನು ವೃದ್ಧಿಪಡಿಸಿಕೊಂಡ ಶಿವನು ಆಗ ಒಂದೇ ಬಾಣದಿಂದ ಮೂರು ಪುರಗಳ ಸಮೇತ ಆಕಾಶದಲ್ಲಿ ಸಂಚರಿಸುತ್ತಿದ್ದ ಅಸುರರನ್ನು ಭೂಮಿಯ ಮೇಲೆ ಬೀಳಿಸಿದನು.
12283016a ತೇಷಾಮಧಿಪತಿಸ್ತ್ವಾಸೀದ್ಭೀಮೋ ಭೀಮಪರಾಕ್ರಮಃ।
12283016c ದೇವತಾನಾಂ ಭಯಕರಃ ಸ ಹತಃ ಶೂಲಪಾಣಿನಾ।।
ದೇವತೆಗಳಿಗೆ ಭಯವನ್ನುಂಟುಮಾಡುತ್ತಿದ್ದ, ಆ ಭೀಮ ಭೀಮಪರಾಕ್ರಮಿ ಅಸುರರ ಅಧಿಪತಿಯು ಶೂಲಪಾಣಿಯಿಂದ ಹತನಾದನು.
12283017a ತಸ್ಮಿನ್ ಹತೇಽಥ ಸ್ವಂ ಭಾವಂ ಪ್ರತ್ಯಪದ್ಯಂತ ಮಾನವಾಃ।
12283017c ಪ್ರಾವರ್ತಂತ3 ಚ ವೇದಾ ವೈ ಶಾಸ್ತ್ರಾಣಿ ಚ ಯಥಾ ಪುರಾ।।
ಹೀಗೆ ಅಸುರಾಧಿಪನು ಹತನಾಗಲು ಪ್ರಜೆಗಳು ತಮ್ಮ ಪೂರ್ವ ಸ್ವಭಾವವನ್ನು ಪಡೆದುಕೊಂಡರು. ಹಿಂದಿನಂತೆಯೇ ವೇದ-ಶಾಸ್ತ್ರಗಳಂತೆ ನಡೆದುಕೊಳ್ಳತೊಡಗಿದರು.
12283018a ತತೋಽಭ್ಯಷಿಂಚನ್ರಾಜ್ಯೇನ ದೇವಾನಾಂ ದಿವಿ ವಾಸವಮ್।
12283018c ಸಪ್ತರ್ಷಯಶ್ಚಾನ್ವಯುಂಜನ್ನರಾಣಾಂ ದಂಡಧಾರಣೇ।।
ಅನಂತರ ದಿವಿಯಲ್ಲಿ ವಾಸವನನ್ನು ದೇವತೆಗಳ ರಾಜ್ಯದಲ್ಲಿ ಅಭಿಷೇಕಿಸಿ ಸಪ್ತರ್ಷಿಗಳು ತಾವೇ ನರರ ದಂಢಧಾರಿಗಳಾದರು.
12283019a ಸಪ್ತರ್ಷೀಣಾಮಥೋರ್ಧ್ವಂ ಚ ವಿಪೃಥುರ್ನಾಮ ಪಾರ್ಥಿವಃ।
12283019c ರಾಜಾನಃ ಕ್ಷತ್ರಿಯಾಶ್ಚೈವ ಮಂಡಲೇಷು ಪೃಥಕ್ ಪೃಥಕ್।।
ಸಪ್ತರ್ಷಿಗಳ ಶಾಸನದ ನಂತರ ವಿಪೃಥು ಎಂಬ ಹೆಸರಿನವನು ಪಾರ್ಥಿವನಾದನು. ಕ್ಷತ್ರಿಯ ರಾಜರು ಬೇರೆ ಬೇರೆ ಮಂಡಲಗಳಲ್ಲಿ ಶಾಸನ ಮಾಡತೊಡಗಿದರು.
12283020a ಮಹಾಕುಲೇಷು ಯೇ ಜಾತಾ ವೃತ್ತಾಃ ಪೂರ್ವತರಾಶ್ಚ ಯೇ।
12283020c ತೇಷಾಮಥಾಸುರೋ ಭಾವೋ ಹೃದಯಾನ್ನಾಪಸರ್ಪತಿ।।
ಮಹಾಕುಲಗಳಲ್ಲಿ ಹುಟ್ಟಿದ್ದ ಅವರಲ್ಲಿ ಹಿಂದಿನಂತೆಯೇ ನಡೆದುಕೊಳ್ಳುವವರಿದ್ದರು. ಆದರೂ ಅಸುರಭಾವವು ಅವರ ಹೃದಯದಿಂದ ಸಂಪೂರ್ಣವಾಗಿ ಹೋಗಿರಲಿಲ್ಲ.
12283021a ತಸ್ಮಾತ್ತೇನೈವ ಭಾವೇನ ಸಾನುಷಂಗೇನ ಪಾರ್ಥಿವಾಃ।
12283021c ಆಸುರಾಣ್ಯೇವ ಕರ್ಮಾಣಿ ನ್ಯಷೇವನ್ ಭೀಮವಿಕ್ರಮಾಃ।।
ಆದುದರಿಂದ ಭೀಮವಿಕ್ರಮಿಗಳಾಗಿದ್ದ ಆ ಪಾರ್ಥಿವರು ಹೃದಯಾಂತರ್ಗತವಾಗಿದ್ದ ಅಸುರಭಾವದಲ್ಲಿಯೇ ಇದ್ದುಕೊಂಡು ಅಸುರೋಚಿತ ಕರ್ಮಗಳನ್ನೇ ಮಾಡುತ್ತಿದ್ದರು.
12283022a ಪ್ರತ್ಯತಿಷ್ಠಂಶ್ಚ ತೇಷ್ವೇವ ತಾನ್ಯೇವ ಸ್ಥಾಪಯಂತಿ ಚ।
12283022c ಭಜಂತೇ ತಾನಿ ಚಾದ್ಯಾಪಿ ಯೇ ಬಾಲಿಶತಮಾ ನರಾಃ।।
ಮೂರ್ಖರಾದ ಅಂತರ ನರರು ಈಗಲೂ ಅಸುರಭಾವದಲ್ಲಿಯೇ ಸುಸ್ಥಿರರಾಗಿದ್ದಾರೆ. ಅದನ್ನೇ ಸ್ಥಾಪಿಸುತ್ತಿದ್ದಾರೆ. ಅದನ್ನೇ ಪ್ರೀತಿಸುತ್ತಿದ್ದಾರೆ.
12283023a ತಸ್ಮಾದಹಂ ಬ್ರವೀಮಿ ತ್ವಾಂ ರಾಜನ್ಸಂಚಿಂತ್ಯ ಶಾಸ್ತ್ರತಃ।
12283023c ಸಂಸಿದ್ಧಾಧಿಗಮಂ ಕುರ್ಯಾತ್ಕರ್ಮ ಹಿಂಸಾತ್ಮಕಂ ತ್ಯಜೇತ್।।
ರಾಜನ್! ಆದುದರಿಂದ ಶಾಸ್ತ್ರತಃ ಯೋಚಿಸಿ ನಾನು ನಿನಗೆ ಇದನ್ನು ಹೇಳುತ್ತಿದ್ದೇನೆ. ಉತ್ತಮ ಸಿದ್ಧಿಯುಂಟಾಗುವ ಕರ್ಮಗಳನ್ನೇ ಮಾಡಬೇಕು. ಹಿಂಸಾತ್ಮಕ ಕರ್ಮಗಳನ್ನು ತ್ಯಜಿಸಬೇಕು.
12283024a ನ ಸಂಕರೇಣ ದ್ರವಿಣಂ ವಿಚಿನ್ವೀತ ವಿಚಕ್ಷಣಃ।
12283024c ಧರ್ಮಾರ್ಥಂ ನ್ಯಾಯಮುತ್ಸೃಜ್ಯ ನ ತತ್ಕಲ್ಯಾಣಮುಚ್ಯತೇ।।
ವಿಚಕ್ಷಣನು ಧರ್ಮಸಂಕರ ಕ್ರಮದಲ್ಲಿ ಸಂಪಾದಿಸಿದ ದ್ರವ್ಯವನ್ನು ಧರ್ಮಾರ್ಥಕ್ಕೆ ಉಪಯೋಗಿಸಬಾರದು. ಅನ್ಯಾಯದಿಂದ ಸಂಪಾದಿಸಿದ ಧನವು ಕಲ್ಯಾಣಕಾರಿಯಾಗುವುದಿಲ್ಲ ಎಂದಿದ್ದಾರೆ.
12283025a ಸ ತ್ವಮೇವಂವಿಧೋ ದಾಂತಃ ಕ್ಷತ್ರಿಯಃ ಪ್ರಿಯಬಾಂಧವಃ।
12283025c ಪ್ರಜಾ ಭೃತ್ಯಾಂಶ್ಚ ಪುತ್ರಾಂಶ್ಚ ಸ್ವಧರ್ಮೇಣಾನುಪಾಲಯ।।
ನೀನೂ ಕೂಡ ನ್ಯಾಯವಿಧದಲ್ಲಿಯೇ ಧನವನ್ನು ಸಂಗ್ರಹಿಸುತ್ತಾ, ಜಿತೇಂದ್ರಿಯ ಕ್ಷತ್ರಿಯನೂ, ಪ್ರಿಯಬಾಂಧವನೂ ಆಗಿ ಪ್ರಜೆಗಳು-ಸೇವಕರು ಮತ್ತು ಪುತ್ರರನ್ನು ಸ್ವಧರ್ಮದಿಂದ ಪರಿಪಾಲಿಸು.
12283026a ಇಷ್ಟಾನಿಷ್ಟಸಮಾಯೋಗೋ ವೈರಂ ಸೌಹಾರ್ದಮೇವ ಚ।
12283026c ಅಥ ಜಾತಿಸಹಸ್ರಾಣಿ ಬಹೂನಿ ಪರಿವರ್ತತೇ।।
ಇಷ್ಟಾನಿಷ್ಟಗಳನ್ನು ಮತ್ತು ವೈರ-ಸೌಹಾರ್ದತೆಗಳನ್ನು ಪಡೆದುಕೊಳ್ಳುತ್ತಾ ಈ ಜೀವವು ಅನೇಕ ಸಹಸ್ರ ಜನ್ಮಗಳನ್ನು ಕಳೆದಿದೆ.
12283027a ತಸ್ಮಾದ್ಗುಣೇಷು ರಜ್ಯೇಥಾ ಮಾ ದೋಷೇಷು ಕದಾ ಚನ।
12283027c ನಿರ್ಗುಣೋ ಯೋ ಹಿ ದುರ್ಬುದ್ಧಿರಾತ್ಮನಃ ಸೋಽರಿರುಚ್ಯತೇ।।
ಆದುದರಿಂದ ನಿನಗೆ ಸದ್ಗುಣಗಳಲ್ಲಿಯೇ ಅನುರಾಗವುಂಟಾಗಲಿ. ದೋಷಗಳಲ್ಲಿ ಎಂದೂ ಅನುರಾಗವಿಲ್ಲದಿರಲಿ. ನಿರ್ಗುಣನಾದ ದುರ್ಬುದ್ಧಿಯು ತನಗೆ ತಾನೇ ಶತ್ರುವೆಂದು ಹೇಳಿದ್ದಾರೆ.
12283028a ಮಾನುಷೇಷು ಮಹಾರಾಜ ಧರ್ಮಾಧರ್ಮೌ ಪ್ರವರ್ತತಃ।
12283028c ನ ತಥಾನ್ಯೇಷು ಭೂತೇಷು ಮನುಷ್ಯರಹಿತೇಷ್ವಿಹ।।
ಮಹಾರಾಜ! ಧರ್ಮಾಧರ್ಮಗಳು ಕೇವಲ ಮನುಷ್ಯರಲ್ಲಿ ಮಾತ್ರ ಇರುತ್ತದೆ. ಮನುಷ್ಯರಲ್ಲಿ ಧರ್ಮಾಧರ್ಮಗಳು ಇರುವಂತೆ ಅನ್ಯ ಪ್ರಾಣಿಗಳಲ್ಲಿ ಇರುವುದಿಲ್ಲ.
12283029a ಧರ್ಮಶೀಲೋ ನರೋ ವಿದ್ವಾನೀಹಕೋಽನೀಹಕೋಽಪಿ ವಾ।
12283029c ಆತ್ಮಭೂತಃ ಸದಾ ಲೋಕೇ ಚರೇದ್ಭೂತಾನ್ಯಹಿಂಸಯನ್।।
ಧರ್ಮಶೀಲ ವಿದ್ವಾಂಸ ನರನು – ಇಲ್ಲಿಯ ಸುಖದಲ್ಲಿ ಅಪೇಕ್ಷೆಯುಳ್ಳವನಾಗಿರಲಿ ಅಥವಾ ಅಪೇಕ್ಷೆಯಿಲ್ಲದವನಾಗಿರಲಿ – ಸದಾ ಲೋಕದಲ್ಲಿ ಎಲ್ಲರನ್ನೂ ಆತ್ಮಭಾವದಿಂದ ಕಾಣುತ್ತಾ ಹಿಂಸಿಸದೇ ಇರಬೇಕು.
12283030a ಯದಾ ವ್ಯಪೇತಹೃಲ್ಲೇಖಂ ಮನೋ ಭವತಿ ತಸ್ಯ ವೈ।
12283030c ನಾನೃತಂ ಚೈವ ಭವತಿ ತದಾ ಕಲ್ಯಾಣಮೃಚ್ಚತಿ।।
ಯಾರ ಮನಸ್ಸು ಕಾಮನೆಗಳು ಮತ್ತು ಪೂರ್ವಜನ್ಮದ ವಾಸನೆಗಳನ್ನು ಕಳೆದುಕೊಂಡು ಮಿಥ್ಯಾಭಾವ ರಹಿತವಾಗಿರುವುದೋ ಅವನು ಸದಾ ಕಲ್ಯಾಣವನ್ನು ಹೊಂದುತ್ತಾನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಪರಾಶರಗೀತಾಯಾಂ ತ್ರ್ಯಾಶೀತ್ಯತ್ಯಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಪರಾಶರಗೀತಾ ಎನ್ನುವ ಇನ್ನೂರಾಎಂಭತ್ಮೂರನೇ ಅಧ್ಯಾಯವು.