ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 281
ಸಾರ
ಧರ್ಮೋಪಾರ್ಜಿತ ಧನದ ಶ್ರೇಷ್ಠತೆ; ಸದಾಚಾರ ಮತ್ತು ಗುರುಜನರ ಸೇವೆಯಿಂದ ಪ್ರಾಪ್ತವಾಗುವ ಲಾಭ (1-23).
12281001 ಪರಾಶರ ಉವಾಚ।
12281001a ಕಃ ಕಸ್ಯ ಚೋಪಕುರುತೇ ಕಶ್ಚ ಕಸ್ಮೈ ಪ್ರಯಚ್ಚತಿ।
12281001c ಪ್ರಾಣೀ ಕರೋತ್ಯಯಂ ಕರ್ಮ ಸರ್ವಮಾತ್ಮಾರ್ಥಮಾತ್ಮನಾ।।
ಪರಾಶರನು ಹೇಳಿದನು: “ಯಾರು ಯಾರಿಗೆ ಉಪಕಾರ ಮಾಡುತ್ತಾರೆ? ಯಾರು ಯಾರಿಗೆ ಕೊಡುತ್ತಾರೆ? ಈ ಪ್ರಾಣಿಯು ಸರ್ವ ಕರ್ಮಗಳನ್ನೂ ತನ್ನ ಪ್ರಯೋಜಕ್ಕಾಗಿಯೇ ಮಾಡುತ್ತದೆ.
12281002a ಗೌರವೇಣ ಪರಿತ್ಯಕ್ತಂ ನಿಃಸ್ನೇಹಂ ಪರಿವರ್ಜಯೇತ್।
12281002c ಸೋದರ್ಯಂ ಭ್ರಾತರಮಪಿ ಕಿಮುತಾನ್ಯಂ ಪೃಥಗ್ಜನಮ್।।
ಒಡಹುಟ್ಟಿದವನೇ ಆಗಿದ್ದರೂ ಮರ್ಯಾದೆಗೆಟ್ಟಿದ್ದರೆ ಮತ್ತು ಸ್ನೇಹರಹಿತನಾಗಿದ್ದರೆ ತ್ಯಜಿಸಬೇಕು. ಹೀಗಿರುವಾಗ ಸಾಧಾರಣ ಮನುಷ್ಯರ ವಿಷಯದಲ್ಲಿ ಹೇಳುವುದೇನಿದೆ?
12281003a ವಿಶಿಷ್ಟಸ್ಯ ವಿಶಿಷ್ಟಾಚ್ಚ ತುಲ್ಯೌ ದಾನಪ್ರತಿಗ್ರಹೌ।
12281003c ತಯೋಃ ಪುಣ್ಯತರಂ ದಾನಂ ತದ್ದ್ವಿಜಸ್ಯ ಪ್ರಯಚ್ಚತಃ।।
ಶ್ರೇಷ್ಠ ಪುರುಷನು ಶ್ರೇಷ್ಠ ಪುರುಷನಿಗೆ ನೀಡುವ ದಾನ ಮತ್ತು ಶ್ರೇಷ್ಠ ಪುರುಷನು ಶ್ರೇಷ್ಠಪುರುಷನಿಂದ ಸ್ವೀಕರಿಸುವ ದಾನ – ಇವೆರಡೂ ಮಹತ್ವದಲ್ಲಿ ಸಮನಾಗಿರುತ್ತವೆ. ಆದರೂ ದ್ವಿಜನಿಗೆ ದಾನವನ್ನು ಸ್ವೀಕರಿಸುವುದಕ್ಕಿಂತ ದಾನವನ್ನು ನೀಡುವುದೇ ಪುಣ್ಯತರವು.
12281004a ನ್ಯಾಯಾಗತಂ ಧನಂ ವರ್ಣೈರ್ನ್ಯಾಯೇನೈವ ವಿವರ್ಧಿತಮ್।
12281004c ಸಂರಕ್ಷ್ಯಂ ಯತ್ನಮಾಸ್ಥಾಯ ಧರ್ಮಾರ್ಥಮಿತಿ ನಿಶ್ಚಯಃ।।
ನ್ಯಾಯವಾಗಿ ಸಂಗ್ರಹಿಸಿದ ಮತ್ತು ನ್ಯಾಯವಾಗಿಯೇ ವೃದ್ಧಿಗೊಳಿಸಿದ ಧನವನ್ನು ಧರ್ಮಕಾರ್ಯಗಳಿಗೆ ಬಳಸಲು ಪ್ರಯತ್ನಪಟ್ಟು ಸಂರಕ್ಷಿಸಿಕೊಳ್ಳಬೇಕು ಎಂಬ ನಿಶ್ಚಯವಿದೆ.
12281005a ನ ಧರ್ಮಾರ್ಥೀ ನೃಶಂಸೇನ ಕರ್ಮಣಾ ಧನಮರ್ಜಯೇತ್।
12281005c ಶಕ್ತಿತಃ ಸರ್ವಕಾರ್ಯಾಣಿ ಕುರ್ಯಾನ್ನರ್ದ್ಧಿಮನುಸ್ಮರೇತ್।।
ಧರ್ಮಾಪೇಕ್ಷಿಯು ಕ್ರೂರಕರ್ಮಗಳಿಂದ ಧನವನ್ನು ಗಳಿಸಬಾರದು. ಸರ್ವಕಾರ್ಯಗಳನ್ನು ಶಕ್ತಿಪೂರ್ವಕವಾಗಿ ಮಾಡಬೇಕು. ಧನವನ್ನು ವೃದ್ಧಿಗೊಳಿಸುವುದರ ಕುರಿತೇ ಯಾವಾಗಲೂ ಚಿಂತಿಸುತ್ತಿರಬಾರದು.
12281006a ಅಪೋ ಹಿ ಪ್ರಯತಃ ಶೀತಾಸ್ತಾಪಿತಾ ಜ್ವಲನೇನ ವಾ।
12281006c ಶಕ್ತಿತೋಽತಿಥಯೇ ದತ್ತ್ವಾ ಕ್ಷುಧಾರ್ತಾಯಾಶ್ನುತೇ ಫಲಮ್।।
ಹಸಿವೆಯಿಂದ ಬಳಲಿದ ಅತಿಥಿಗೆ ತಣ್ಣಗಿರುವ ನೀರನ್ನೋ, ಬೆಂಕಿಯಲ್ಲಿ ಕಾಯಿಸಿದ ಬಿಸಿನೀರನ್ನೋ, ಅನ್ನವನ್ನೋ ಯಥಾಶಕ್ತಿ ವಿನಯಶೀಲನಾಗಿ ನೀಡುವವನು ಫಲವನ್ನು ಹೊಂದುತ್ತಾನೆ.
12281007a ರಂತಿದೇವೇನ ಲೋಕೇಷ್ಟಾ ಸಿದ್ಧಿಃ ಪ್ರಾಪ್ತಾ ಮಹಾತ್ಮನಾ।
12281007c ಫಲಪತ್ರೈರಥೋ ಮೂಲೈರ್ಮುನೀನರ್ಚಿತವಾನಸೌ।।
ಫಲ-ಪತ್ರ-ಮೂಲಗಳಿಂದ ಮುನಿಗಳನ್ನು ಅರ್ಚಿಸುತ್ತಿದ್ದ ಮಹಾತ್ಮ ರಂತಿದೇವನು ಲೋಕವು ಬಯಸುವ ಸಿದ್ಧಿಯನ್ನು ಪಡೆದುಕೊಂಡನು.
12281008a ತೈರೇವ ಫಲಪತ್ರೈಶ್ಚ ಸ ಮಾಠರಮತೋಷಯತ್।
12281008c ತಸ್ಮಾಲ್ಲೇಭೇ ಪರಂ ಸ್ಥಾನಂ ಶೈಬ್ಯೋಽಪಿ ಪೃಥಿವೀಪತಿಃ।।
ಪೃಥಿವೀಪತಿ ಶೈಬ್ಯನೂ ಕೂಡ ಅದೇ ಫಲ-ಪತ್ರಗಳಿಂದ ಮಾಠರನನ್ನು ತೃಪ್ತಿಗೊಳಿಸಿದನು. ಅದರಿಂದಾಗಿ ಪರಮ ಸ್ಥಾನವನ್ನು ಪಡೆದುಕೊಂಡನು.
12281009a ದೇವತಾತಿಥಿಭೃತ್ಯೇಭ್ಯಃ ಪಿತೃಭ್ಯೋಽಥಾತ್ಮನಸ್ತಥಾ।
12281009c ಋಣವಾನ್ ಜಾಯತೇ ಮರ್ತ್ಯಸ್ತಸ್ಮಾದನೃಣತಾಂ ವ್ರಜೇತ್।।
ಮರ್ತ್ಯನು ದೇವತೆಗಳ, ಅತಿಥಿಗಳ, ಕುಟುಂಬದ ಜನರ, ಪಿತೃಗಳ ಮತ್ತು ತನ್ನದೇ ಆದ ಋಣಗಳನ್ನು ಹೊತ್ತು ಹುಟ್ಟುತ್ತಾನೆ. ಆದುದರಿಂದ ಮನುಷ್ಯನು ಆ ಋಣಗಳನ್ನು ತೀರಿಸಿಕೊಳ್ಳಬೇಕು.
12281010a ಸ್ವಾಧ್ಯಾಯೇನ ಮಹರ್ಷಿಭ್ಯೋ ದೇವೇಭ್ಯೋ ಯಜ್ಞಕರ್ಮಣಾ।
12281010c ಪಿತೃಭ್ಯಃ ಶ್ರಾದ್ಧದಾನೇನ ನೃಣಾಮಭ್ಯರ್ಚನೇನ ಚ।।
ಸ್ವಾಧ್ಯಾಯದಿಂದ ಮಹರ್ಷಿಗಳ, ಯಜ್ಞಕರ್ಮಗಳಿಂದ ದೇವತೆಗಳ, ಶ್ರಾದ್ಧ-ದಾನಗಳಿಂದ ಪಿತೃಗಳ ಮತ್ತು ಸ್ವಾಗತ-ಸತ್ಕಾರ-ಸೇವೆಗಳಿಂದ ಮನುಷ್ಯರ ಋಣವನ್ನು ಪರಿಹರಿಸಿಕೊಳ್ಳಬೇಕು.
12281011a ವಾಚಃ ಶೇಷಾವಹಾರ್ಯೇಣ ಪಾಲನೇನಾತ್ಮನೋಽಪಿ ಚ।
12281011c ಯಥಾವದ್ ಭೃತ್ಯವರ್ಗಸ್ಯ ಚಿಕೀರ್ಷೇದ್ಧರ್ಮಮಾದಿತಃ।।
ಹೀಗೆಯೇ ವೇದಶಾಸ್ತ್ರದ ಪಠಣ-ಮನನಗಳಿಂದ, ಯಜ್ಞಶೇಷವನ್ನು ಭುಂಜಿಸುವುದರಿಂದ ಮತ್ತು ಆತ್ಮ ರಕ್ಷಣೆಯಿಂದ ಆತ್ಮಋಣದಿಂದ ಮುಕ್ತನಾಗುತ್ತಾನೆ. ಯಥಾವತ್ತಾಗಿ ಕುಟುಂಬದ ಜನರ ಭರಣ-ಪೋಷಣೆಗಳನ್ನು1 ಮಾಡಿ ಭೃತ್ಯಋಣದಿಂದ ಮುಕ್ತನಾಗಬೇಕು.
12281012a ಪ್ರಯತ್ನೇನ ಚ ಸಂಸಿದ್ಧಾ ಧನೈರಪಿ ವಿವರ್ಜಿತಾಃ।
12281012c ಸಮ್ಯಗ್ ಹುತ್ವಾ ಹುತವಹಂ ಮುನಯಃ ಸಿದ್ಧಿಮಾಗತಾಃ।।
ಧನಗಳಿಂದ ವಿವರ್ಜಿತರಾಗಿದ್ದರೂ ಪ್ರಯತ್ನದಿಂದಲೇ ಸಂಸಿದ್ಧರಾಗಿದ್ದಾರೆ. ಮುನಿಗಳು ಚೆನ್ನಾಗಿ ಅಗ್ನಿಹೋತ್ರವನ್ನು ಮಾಡಿಕೊಂಡೇ ಸಿದ್ಧಿಯನ್ನು ಪಡೆದುಕೊಂಡಿದ್ದಾರೆ.
12281013a ವಿಶ್ವಾಮಿತ್ರಸ್ಯ ಪುತ್ರತ್ವಮೃಚೀಕತನಯೋಽಗಮತ್।
12281013c ಋಗ್ಭಿಃ ಸ್ತುತ್ವಾ ಮಹಾಭಾಗೋ ದೇವಾನ್ವೈ ಯಜ್ಞಭಾಗಿನಃ।।
ಋಚೀಕನ ಮಗ ಮಹಾಭಾಗ ಶುನಶ್ಶೇಫನು ಯಜ್ಞಭಾಗಿಗಳಾಗಿದ್ದ ದೇವತೆಗಳನ್ನು ಋಕ್ಕುಗಳಿಂದ ಸ್ತುತಿಸಿಯೇ ವಿಶ್ವಾಮಿತ್ರನ ಪುತ್ರತ್ವವನ್ನು ಪಡೆದುಕೊಂಡನು.
12281014a ಗತಃ ಶುಕ್ರತ್ವಮುಶನಾ ದೇವದೇವಪ್ರಸಾದನಾತ್।
12281014c ದೇವೀಂ ಸ್ತುತ್ವಾ ತು ಗಗನೇ ಮೋದತೇ ತೇಜಸಾ ವೃತಃ।।
ದೇವದೇವನ ಪ್ರಸಾದದಿಂದ ಉಶನಸನು ಶುಕ್ರತ್ವವನ್ನು ಪಡೆದುಕೊಂಡನು. ದೇವಿಯನ್ನು ಸ್ತುತಿಸಿ ಅವನು ಗಗನದಲ್ಲಿ ತೇಜೋಯುಕ್ತನಾಗಿ ಮೋದಿಸುತ್ತಾನೆ.
12281015a ಅಸಿತೋ ದೇವಲಶ್ಚೈವ ತಥಾ ನಾರದಪರ್ವತೌ।
12281015c ಕಕ್ಷೀವಾನ್ ಜಾಮದಗ್ನ್ಯಶ್ಚ ರಾಮಸ್ತಾಂಡ್ಯಸ್ತಥಾಂಶುಮಾನ್2।।
12281016a ವಸಿಷ್ಠೋ ಜಮದಗ್ನಿಶ್ಚ ವಿಶ್ವಾಮಿತ್ರೋಽತ್ರಿರೇವ ಚ।
12281016c ಭರದ್ವಾಜೋ ಹರಿಶ್ಮಶ್ರುಃ ಕುಂಡಧಾರಃ ಶ್ರುತಶ್ರವಾಃ।।
12281017a ಏತೇ ಮಹರ್ಷಯಃ ಸ್ತುತ್ವಾ ವಿಷ್ಣುಮೃಗ್ಭಿಃ ಸಮಾಹಿತಾಃ।
12281017c ಲೇಭಿರೇ ತಪಸಾ ಸಿದ್ಧಿಂ ಪ್ರಸಾದಾತ್ತಸ್ಯ ಧೀಮತಃ।।
ಅಸಿತ-ದೇವಲ, ನಾರದ-ಪರ್ವತರು, ಕಕ್ಷೀವಾನ್, ಜಾಮದಗ್ನಿ ರಾಮ, ತಾಂಡ್ಯ, ಅಂಶುಮಾನ್, ವಸಿಷ್ಠ, ಜಮದಗ್ನಿ, ವಿಶ್ವಾಮಿತ್ರ, ಅತ್ರಿ, ಭರದ್ವಾಜ, ಹರಿಶ್ಮಶ್ರು, ಕುಂಡಧಾರ, ಶ್ರುತಶ್ರವ – ಈ ಮಹರ್ಷಿಗಳು ಸಮಾಹಿತರಾಗಿ ವಿಷ್ಣುವನ್ನು ಋಕ್ಕುಗಳಿಂದ ಸ್ತುತಿಸಿ ಆ ಧೀಮತನ ಪ್ರಸಾದದಿಂದ ತಪಸ್ಸಿನ ಮೂಲಕ ಸಿದ್ಧಿಯನ್ನು ಪಡೆದರು.
12281018a ಅನರ್ಹಾಶ್ಚಾರ್ಹತಾಂ ಪ್ರಾಪ್ತಾಃ ಸಂತಃ ಸ್ತುತ್ವಾ ತಮೇವ ಹ।
12281018c ನ ತು ವೃದ್ಧಿಮಿಹಾನ್ವಿಚ್ಚೇತ್ಕರ್ಮ ಕೃತ್ವಾ ಜುಗುಪ್ಸಿತಮ್।।
ವಿಷ್ಣುವನ್ನು ಸ್ತುತಿಸಿ ಅನರ್ಹರೂ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಜುಗುಪ್ಸಿತ ಕರ್ಮವನ್ನು ಮಾಡಿ ವೃದ್ಧಿಯನ್ನು ಬಯಸಬಾರದು.
12281019a ಯೇಽರ್ಥಾ ಧರ್ಮೇಣ ತೇ ಸತ್ಯಾ ಯೇಽಧರ್ಮೇಣ ಧಿಗಸ್ತು ತಾನ್।
12281019c ಧರ್ಮಂ ವೈ ಶಾಶ್ವತಂ ಲೋಕೇ ನ ಜಹ್ಯಾದ್ಧನಕಾಂಕ್ಷಯಾ।।
ಧರ್ಮದಿಂದ ಸಂಗ್ರಹಿಸಿದ ಧನವೇ ಸತ್ಯವಾದುದು. ಅಧರ್ಮದಿಂದ ಪಡೆದ ಧನಕ್ಕೆ ಧಿಕ್ಕಾರವಿರಲಿ. ಈ ಲೋಕದಲ್ಲಿ ಧರ್ಮವೇ ಶಾಶ್ವತವು. ಧನಾಕಾಂಕ್ಷೆಯಿಂದ ಅದನ್ನು ಬಿಡಬಾರದು.
12281020a ಆಹಿತಾಗ್ನಿರ್ಹಿ ಧರ್ಮಾತ್ಮಾ ಯಃ ಸ ಪುಣ್ಯಕೃದುತ್ತಮಃ।
12281020c ವೇದಾ ಹಿ ಸರ್ವೇ ರಾಜೇಂದ್ರ ಸ್ಥಿತಾಸ್ತ್ರಿಷ್ವಗ್ನಿಷು ಪ್ರಭೋ।।
ರಾಜೇಂದ್ರ! ಪ್ರಭೋ! ಅಗ್ನಿಕಾರ್ಯಗಳನ್ನು ಮಾಡುವವನೇ ಧರ್ಮಾತ್ಮನು. ಅವನೇ ಪುಣ್ಯಕರ್ಮಿಗಳಲ್ಲಿ ಉತ್ತಮನು. ಸರ್ವ ವೇದಗಳೂ ದಕ್ಷಿಣಾಗ್ನಿ, ಗಾರ್ಹಪತ್ಯಾಗ್ನಿ ಮತ್ತು ಆಹವನೀಯ ಅಗ್ನಿ – ಈ ಮೂರು ಅಗ್ನಿಗಳಲ್ಲಿ ವಾಸಿಸುತ್ತವೆ.
12281021a ಸ ಚಾಪ್ಯಗ್ನ್ಯಾಹಿತೋ ವಿಪ್ರಃ ಕ್ರಿಯಾ ಯಸ್ಯ ನ ಹೀಯತೇ।
12281021c ಶ್ರೇಯೋ ಹ್ಯನಾಹಿತಾಗ್ನಿತ್ವಮಗ್ನಿಹೋತ್ರಂ ನ ನಿಷ್ಕ್ರಿಯಮ್।।
ಕ್ರಿಯೆಗಳು ನಷ್ಟವಾಗದ ವಿಪ್ರನು ಅಗ್ನಿಹೋತ್ರಿಯೇ ಆಗುತ್ತಾನೆ. ಕ್ರಿಯಾವಂತನು ಅಗ್ನಿಹೋತ್ರವನ್ನು ಮಾಡದಿದ್ದರೂ ಶ್ರೇಯಸ್ಸನ್ನು ಪಡೆಯುತ್ತಾನೆ. ಆದರೆ ಅಗ್ನಿಹೋತ್ರಿಯಾಗಿದ್ದರೂ ನಿಷ್ಕ್ರಿಯನಾದವನಿಗೆ ಶ್ರೇಯಸ್ಸುಂಟಾಗುವುದಿಲ್ಲ.
12281022a ಅಗ್ನಿರಾತ್ಮಾ ಚ ಮಾತಾ ಚ ಪಿತಾ ಜನಯಿತಾ ತಥಾ।
12281022c ಗುರುಶ್ಚ ನರಶಾರ್ದೂಲ ಪರಿಚರ್ಯಾ ಯಥಾತಥಮ್।।
ನರಶಾರ್ದೂಲ! ಅಗ್ನಿ, ಆತ್ಮ, ತಾಯಿ, ಜನ್ಮದಾತ ತಂದೆ ಮತ್ತು ಗುರುವನ್ನು ಯಥಾಯೋಗ್ಯವಾಗಿ ಸತ್ಕರಿಸಬೇಕು.
12281023a ಮಾನಂ ತ್ಯಕ್ತ್ವಾ ಯೋ ನರೋ ವೃದ್ಧಸೇವೀ ವಿದ್ವಾನ್ ಕ್ಲೀಬಃ ಪಶ್ಯತಿ ಪ್ರೀತಿಯೋಗಾತ್।
12281023c ದಾಕ್ಷ್ಯೇಣಾಹೀನೋ ಧರ್ಮಯುಕ್ತೋ ನದಾಂತೋ ಲೋಕೇಽಸ್ಮಿನ್ವೈ ಪೂಜ್ಯತೇ ಸದ್ಭಿರಾರ್ಯಃ।।
ಮಾನವನ್ನು ತೊರೆದು ವೃದ್ಧರ ಸೇವೆಮಾಡುವ, ಪ್ರೀತಿಯೋಗದಿಂದ ಕಾಣುವ ಕಾಮರಹಿತ ವಿದ್ವಾಂಸ, ಆಲಸ್ಯರಹಿತ, ಧರ್ಮಯುಕ್ತ, ಹಿಂಸಹೀನ ಆರ್ಯನನ್ನು ಈ ಲೋಕದಲ್ಲಿ ಸತ್ಪುರುಷರೂ ಪೂಜಿಸುತ್ತಾರೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಪರಾಶರಗೀತಾಯಾಂ ಏಕಾಶೀತ್ಯತ್ಯಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಪರಾಶರಗೀತಾ ಎನ್ನುವ ಇನ್ನೂರಾಎಂಭತ್ತೊಂದನೇ ಅಧ್ಯಾಯವು.