280: ಪರಾಶರಗೀತಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 280

ಸಾರ

ಕರ್ಮಫಲದ ಅನಿವಾರ್ಯತೆ ಮತ್ತು ಪುಣ್ಯಕರ್ಮದಿಂದ ಲಾಭ (1-23).

12280001 ಪರಾಶರ ಉವಾಚ।
12280001a ಮನೋರಥರಥಂ ಪ್ರಾಪ್ಯ ಇಂದ್ರಿಯಾರ್ಥಹಯಂ ನರಃ।
12280001c ರಶ್ಮಿಭಿರ್ಜ್ಞಾನಸಂಭೂತೈರ್ಯೋ ಗಚ್ಚತಿ ಸ ಬುದ್ಧಿಮಾನ್।।

ಪರಾಶರನು ಹೇಳಿದನು: “ಮನೋರಥವೆಂದ ರಥವನ್ನು ಪಡೆದು ಇಂದ್ರಿಯಾರ್ಥಗಳೆಂಬ ಕುದುರೆಗಳನ್ನು ಕಟ್ಟಿ ಜ್ಞಾನಸಂಭೂತ ಲಗಾಮುಗಳಿಂದ ಕುದುರೆಗಳನ್ನು ನಿಯಂತ್ರಿಸುತ್ತಾ ಸಾಗುವ ನರನು ಬುದ್ಧಿವಂತನು.

12280002a ಸೇವಾಶ್ರಿತೇನ ಮನಸಾ ವೃತ್ತಿಹೀನಸ್ಯ ಶಸ್ಯತೇ।
12280002c ದ್ವಿಜಾತಿಹಸ್ತಾನ್ನಿರ್ವೃತ್ತಾ ನ ತು ತುಲ್ಯಾತ್ಪರಸ್ಪರಮ್।।

ವೃತ್ತಿಯಿಲ್ಲದವನು ಸೇವೆಮಾಡಿ ಜೀವನಮಾಡುವ ಮನಸ್ಸಿದ್ದರೆ ಅವನು ಸಮರ್ಥ ದ್ವಿಜರ ಸೇವೆಯನ್ನೇ ಮಾಡಬೇಕು. ತನ್ನಂತೆಯೇ ವೃತ್ತಿಹೀನರ ಸೇವೆಯನ್ನು ಮಾಡಬಾರದು.

12280003a ಆಯುರ್ನಸುಲಭಂ ಲಬ್ಧ್ವಾ ನಾವಕರ್ಷೇದ್ವಿಶಾಂ ಪತೇ।
12280003c ಉತ್ಕರ್ಷಾರ್ಥಂ ಪ್ರಯತತೇ ನರಃ ಪುಣ್ಯೇನ ಕರ್ಮಣಾ।।

ವಿಶಾಂಪತೇ! ಸುಲಭವಲ್ಲದ ಆಯುಸ್ಸನ್ನು ಪಡೆದು ಮನುಷ್ಯನು ಅಧಃಪತನವನ್ನು ತಂದುಕೊಳ್ಳಬಾರದು. ಪುಣ್ಯಕರ್ಮಗಳ ಮೂಲಕ ಉತ್ಕರ್ಷೆಗೆ ಪ್ರಯತ್ನಿಸಬೇಕು.

12280004a ವರ್ಣೇಭ್ಯೋಽಪಿ ಪರಿಭ್ರಷ್ಟಃ ಸ ವೈ ಸಂಮಾನಮರ್ಹತಿ।
12280004c ನ ತು ಯಃ ಸತ್ಕ್ರಿಯಾಂ ಪ್ರಾಪ್ಯ ರಾಜಸಂ ಕರ್ಮ ಸೇವತೇ।।

ವರ್ಣಗಳಿಂದ ಪರಿಭ್ರಷ್ಟನಾದವನು ಸನ್ಮಾನಕ್ಕೆ ಅರ್ಹನಲ್ಲ. ಹಾಗೆಯೇ ಸತ್ಕ್ರಿಯೆಗಳನ್ನು ಮಾಡಿ ನಂತರ ರಾಜಸ ಕರ್ಮಗಳನ್ನು ಮಾಡುವವನೂ ಸನ್ಮಾನಕ್ಕೆ ಅರ್ಹನಲ್ಲ.

12280005a ವರ್ಣೋತ್ಕರ್ಷಮವಾಪ್ನೋತಿ ನರಃ ಪುಣ್ಯೇನ ಕರ್ಮಣಾ।
12280005c ದುರ್ಲಭಂ ತಮಲಬ್ಧಾ ಹಿ ಹನ್ಯಾತ್ಪಾಪೇನ ಕರ್ಮಣಾ।।

ಪುಣ್ಯಕರ್ಮಗಳನ್ನು ಮಾಡುವುದರಿಂದ ಮನುಷ್ಯನು ವರ್ಣೋತ್ಕರ್ಷ1ವನ್ನು ಹೊಂದುತ್ತಾನೆ. ಪಾಪಕರ್ಮಗಳಿಂದ ವರ್ಣೋತ್ಕರ್ಷವು ದೊರೆಯದೇ ತನ್ನನ್ನು ತಾನೇ ಹಾಳುಮಾಡಿಕೊಳ್ಳುತ್ತಾನೆ.

12280006a ಅಜ್ಞಾನಾದ್ಧಿ ಕೃತಂ ಪಾಪಂ ತಪಸೈವಾಭಿನಿರ್ಣುದೇತ್।
12280006c ಪಾಪಂ ಹಿ ಕರ್ಮ ಫಲತಿ ಪಾಪಮೇವ ಸ್ವಯಂ ಕೃತಮ್।।
12280006e ತಸ್ಮಾತ್ಪಾಪಂ ನ ಸೇವೇತ ಕರ್ಮ ದುಃಖಫಲೋದಯಮ್।।

ತಿಳಿಯದೇ ಮಾಡಿದ ಪಾಪಗಳನ್ನು ತಪಸ್ಸಿನಿಂದ ಪರಿಹರಿಸಿಕೊಳ್ಳಬೇಕು. ತಾನು ಮಾಡಿದ ಪಾಪ ಕರ್ಮಗಳು ಪಾಪಫಲಗಳನ್ನೇ ಕೊಡುತ್ತವೆ. ಆದುದರಿಂದ ದುಃಖಫಲಗಳನ್ನು ನೀಡುವ ಪಾಪಕರ್ಮಗಳನ್ನು ಮಾಡಬಾರದು.

12280007a ಪಾಪಾನುಬಂಧಂ ಯತ್ಕರ್ಮ ಯದ್ಯಪಿ ಸ್ಯಾನ್ಮಹಾಫಲಮ್।
12280007c ನ ತತ್ಸೇವೇತ ಮೇಧಾವೀ ಶುಚಿಃ ಕುಸಲಿಲಂ ಯಥಾ।।

ಮಹಾಫಲವನ್ನು ಕೊಡುವಂಥದ್ದಾಗಿದ್ದರೂ ಅದು ಪಾಪಕ್ಕೆ ಸಂಬಂಧಿಸಿದುದಾದರೆ ಮೇಧಾವಿಯು ಅಂಥಹ ಕರ್ಮಗಳಿಂದ ಶುಚಿಯಾದವನು ನಾಪಿತನಿಂದ ದೂರವಿರುವಂತೆ ದೂರವಿರಬೇಕು.

12280008a ಕಿಂಕಷ್ಟಮನುಪಶ್ಯಾಮಿ ಫಲಂ ಪಾಪಸ್ಯ ಕರ್ಮಣಃ।
12280008c ಪ್ರತ್ಯಾಪನ್ನಸ್ಯ ಹಿ ಸತೋ ನಾತ್ಮಾ ತಾವದ್ವಿರೋಚತೇ।।

“ಪಾಪಕರ್ಮದ ಫಲವಾಗಿ ನಾನು ಯಾವ ಕಷ್ಟವನ್ನು ಕಾಣುತ್ತಿದ್ದೇನೆ?” ಎಂದು ಪಾಪಕರ್ಮಗಳಲ್ಲಿಯೇ ಪ್ರವೃತ್ತನಾದವನಿಗೆ ಆತ್ಮಚಿಂತನೆಯು ರುಚಿಸುವುದಿಲ್ಲ.

12280009a ಪ್ರತ್ಯಾಪತ್ತಿಶ್ಚ ಯಸ್ಯೇಹ ಬಾಲಿಶಸ್ಯ ನ ಜಾಯತೇ।
12280009c ತಸ್ಯಾಪಿ ಸುಮಹಾಂಸ್ತಾಪಃ ಪ್ರಸ್ಥಿತಸ್ಯೋಪಜಾಯತೇ।।

ಈ ಲೋಕದಲ್ಲಿ ಯಾರ ಅಂತಃಕರಣದಲ್ಲಿ ವೈರಾಗ್ಯದ ಸಂಚಾರವೇ ಆಗುವುದಿಲ್ಲವೋ ಅಂಥಹ ಮೂಢನು ಮರಣಾನಂತರವೂ ಅತ್ಯಂತ ನರಕಯಾತನೆಯಿಂದ ದುಃಖಿತನಾಗುತ್ತಾನೆ.

12280010a ವಿರಕ್ತಂ ಶೋಧ್ಯತೇ ವಸ್ತ್ರಂ ನ ತು ಕೃಷ್ಣೋಪಸಂಹಿತಮ್।
12280010c ಪ್ರಯತ್ನೇನ ಮನುಷ್ಯೇಂದ್ರ ಪಾಪಮೇವಂ ನಿಬೋಧ ಮೇ।।

ಮನುಷ್ಯೇಂದ್ರ! ಬಣ್ಣವಿಲ್ಲದಿರುವ ಬಟ್ಟೆಯನ್ನು ತೊಳೆದು ಸ್ವಚ್ಛಮಾಡಬಹುದು. ಆದರೆ ಕಪ್ಪು ಬಟ್ಟೆಯನ್ನು ಎಷ್ಟೇ ತೊಳೆದರೂ ಬಿಳಿಯಾಗುವುದಿಲ್ಲ. ಈ ಪಾಪದ ಕುರಿತು ಪ್ರಯತ್ನಪಟ್ಟು ನನ್ನನ್ನು ಕೇಳು.

12280011a ಸ್ವಯಂ ಕೃತ್ವಾ ತು ಯಃ ಪಾಪಂ ಶುಭಮೇವಾನುತಿಷ್ಠತಿ।
12280011c ಪ್ರಾಯಶ್ಚಿತ್ತಂ ನರಃ ಕರ್ತುಮುಭಯಂ ಸೋಽಶ್ನುತೇ ಪೃಥಕ್।।

ಸ್ವಯಂ ಪಾಪವನ್ನು ಮಾಡಿ ಅನಂತರ ಪ್ರಾಯಶ್ಚಿತ್ತಕ್ಕಾಗಿ ಶುಭಕರ್ಮಗಳನ್ನು ಮಾಡತೊಡಗಿದರೆ ಆ ನರನು ಎರಡರ ಫಲಗಳನ್ನೂ ಪ್ರತ್ಯೇಕ-ಪ್ರತ್ಯೇಕವಾಗಿ ಅನುಭವಿಸುತ್ತಾನೆ.

12280012a ಅಜ್ಞಾನಾತ್ತು ಕೃತಾಂ ಹಿಂಸಾಮಹಿಂಸಾ ವ್ಯಪಕರ್ಷತಿ।
12280012c ಬ್ರಾಹ್ಮಣಾಃ ಶಾಸ್ತ್ರನಿರ್ದೇಶಾದಿತ್ಯಾಹುರ್ಬ್ರಹ್ಮವಾದಿನಃ।।
12280013a ತಥಾ ಕಾಮಕೃತಂ ಚಾಸ್ಯ ವಿಹಿಂಸೈವಾಪಕರ್ಷತಿ।
12280013c ಇತ್ಯಾಹುರ್ಧರ್ಮಶಾಸ್ತ್ರಜ್ಞಾ ಬ್ರಾಹ್ಮಣಾ ವೇದಪಾರಗಾಃ।।

ಅಜ್ಞಾನದಿಂದ ಮಾಡಿದ ಹಿಂಸೆಯನ್ನು ಅಹಿಂಸೆಯು ತೊಡೆದುಹಾಕುತ್ತದೆ ಎಂದು ಶಾಸ್ತ್ರನಿರ್ದೇಶಾನುಸಾರವಾಗಿ ಬ್ರಹ್ಮವಾದೀ ಬ್ರಾಹ್ಮಣರು ಹೇಳುತ್ತಾರೆ. ಆದರೆ ಇಚ್ಛಾಪೂರ್ವಕವಾಗಿ ಮಾಡಿದ ಹಿಂಸೆಯ ಪಾಪವನ್ನು ಅಹಿಂಸಾವ್ರತವೂ ತೊಡೆದುಹಾಕಲಾರದು ಎಂದು ಬ್ರಹ್ಮಶಾಸ್ತ್ರಜ್ಞ ಬ್ರಹ್ಮವಾದೀ ಬ್ರಾಹ್ಮಣರು ಹೇಳುತ್ತಾರೆ.

12280014a ಅಹಂ ತು ತಾವತ್ಪಶ್ಯಾಮಿ ಕರ್ಮ ಯದ್ವರ್ತತೇ ಕೃತಮ್।
12280014c ಗುಣಯುಕ್ತಂ ಪ್ರಕಾಶಂ ಚ ಪಾಪೇನಾನುಪಸಂಹಿತಮ್।।

ಮಾಡಿದ ಕರ್ಮವು ಪಾಪಯುಕ್ತವಾಗಿರಲಿ ಅಥವಾ ಪುಣ್ಯಯುಕ್ತವಾಗಿರಲಿ, ಬಹಿರಂಗದಲ್ಲಿ ಮಾಡಿದ್ದಿರಲಿ ಅಥವಾ ಅಂತರಂಗದಲ್ಲಿಯೇ ಮಾಡಿದ್ದಿರಲಿ, ತಿಳಿದು ಮಾಡಿದ್ದಿರಲಿ ಅಥವಾ ತಿಳಿಯದೇ ಮಾಡಿದ್ದಿರಲಿ – ಅದಕ್ಕೆ ತಕ್ಕುದಾದ ಫಲವು ಹಾಗೇ ಆಗುತ್ತದೆ ಎಂದು ನಾನು ಕಂಡಿದ್ದೇನೆ.

12280015a ಯಥಾ ಸೂಕ್ಷ್ಮಾಣಿ ಕರ್ಮಾಣಿ ಫಲಂತೀಹ ಯಥಾತಥಮ್।
12280015c ಬುದ್ಧಿಯುಕ್ತಾನಿ ತಾನೀಹ ಕೃತಾನಿ ಮನಸಾ ಸಹ।।

ಬುದ್ಧಿಯುಕ್ತನಾಗಿ ಮನಸ್ಸಿನೊಂದಿಗೆ ಮಾಡಿದ ಸೂಕ್ಷ್ಮಕರ್ಮಗಳೂ ಕೂಡ ಅವು ಹೇಗಿರುತ್ತವೆಯೋ ಹಾಗೆ ಫಲವನ್ನು ಅನುಭವಿಸಬೇಕಾಗುತ್ತದೆ.

12280016a ಭವತ್ಯಲ್ಪಫಲಂ ಕರ್ಮ ಸೇವಿತಂ ನಿತ್ಯಮುಲ್ಬಣಮ್।
12280016c ಅಬುದ್ಧಿಪೂರ್ವಂ ಧರ್ಮಜ್ಞ ಕೃತಮುಗ್ರೇಣ ಕರ್ಮಣಾ।।

ನಿತ್ಯವೂ ಅಬುದ್ಧಿಪೂರ್ವಕವಾಗಿ ಉಗ್ರಕರ್ಮಗಳನ್ನು ಮಾಡುತ್ತಿದ್ದರೆ ಅದರ ಫಲವನ್ನೂ ಅನುಭವಿಸಬೇಕಾಗುತ್ತದೆ. ಆದರೆ ತಿಳಿದು ಮಾಡಿದ ಕರ್ಮಗಳಿಗಿಂತ ತಿಳಿಯದೇ ಮಾಡಿದ ಕರ್ಮಗಳ ಫಲವು ಅಲ್ಪವಾಗಿರುತ್ತದೆ.

12280017a ಕೃತಾನಿ ಯಾನಿ ಕರ್ಮಾಣಿ ದೈವತೈರ್ಮುನಿಭಿಸ್ತಥಾ।
12280017c ನಾಚರೇತ್ತಾನಿ ಧರ್ಮಾತ್ಮಾ ಶ್ರುತ್ವಾ ಚಾಪಿ ನ ಕುತ್ಸಯೇತ್।।

ದೇವತೆಗಳು ಮತ್ತು ಮುನಿಗಳು ಅನುಚಿತ ಕರ್ಮಗಳನ್ನೆಸಗಿದರೆ ಧರ್ಮಾತ್ಮನು ಅದನ್ನು ಅನುಸರಿಸಬಾರದು ಮತ್ತು ಅದರ ಕುರಿತು ಕೇಳಿಯೂ ಅದನ್ನು ನಿಂದಿಸಬಾರದು.

12280018a ಸಂಚಿಂತ್ಯ ಮನಸಾ ರಾಜನ್ವಿದಿತ್ವಾ ಶಕ್ತಿಮಾತ್ಮನಃ।
12280018c ಕರೋತಿ ಯಃ ಶುಭಂ ಕರ್ಮ ಸ ವೈ ಭದ್ರಾಣಿ ಪಶ್ಯತಿ।।

ರಾಜನ್! ಮನಸ್ಸಿನಲ್ಲಿ ಯೋಚಿಸಿ ತನ್ನ ಶಕ್ತಿಯನ್ನು ತಿಳಿದು ಯಾವ ಶುಭಕರ್ಮಗಳನ್ನು ಮನುಷ್ಯನು ಮಾಡುತ್ತಾನೇ ಅದೇ ಅವನಿಗೆ ಕಲ್ಯಾಣಕರವಾಗುತ್ತದೆ.

12280019a ನವೇ ಕಪಾಲೇ ಸಲಿಲಂ ಸಂನ್ಯಸ್ತಂ ಹೀಯತೇ ಯಥಾ।
12280019c ನವೇತರೇ ತಥಾಭಾವಂ ಪ್ರಾಪ್ನೋತಿ ಸುಖಭಾವಿತಮ್।।

ಹಸಿಯಾದ ಹೊಸ ಗಡಿಗೆಯಲ್ಲಿ ನೀರನ್ನು ಇಟ್ಟರೆ ಹೇಗೆ ಅದು ನಷ್ಟವಾಗಿ ಹೋಗುತ್ತದೆಯೋ ಮತ್ತು ಹಳೆಯ ಮಡಿಕೆಯಲ್ಲಿಟ್ಟ ನೀರು ಹೇಗೆ ನಾಶವಾಗುವುದಿಲ್ಲವೋ ಹಾಗೆ ಪರಿಪಕ್ವ ಬುದ್ಧಿಯಿಂದ ಮಾಡಿದ ಶುಭಕರ್ಮಗಳು ನಷ್ಟವಾಗುವುದಿಲ್ಲ.

12280020a ಸತೋಯೇಽನ್ಯತ್ತು ಯತ್ತೋಯಂ ತಸ್ಮಿನ್ನೇವ ಪ್ರಸಿಚ್ಯತೇ।
12280020c ವೃದ್ಧೇ ವೃದ್ಧಿಮವಾಪ್ನೋತಿ ಸಲಿಲೇ ಸಲಿಲಂ ಯಥಾ।।
12280021a ಏವಂ ಕರ್ಮಾಣಿ ಯಾನೀಹ ಬುದ್ಧಿಯುಕ್ತಾನಿ ಭೂಪತೇ।
12280021c ನಸಮಾನೀಹ ಹೀನಾನಿ ತಾನಿ ಪುಣ್ಯತಮಾನ್ಯಪಿ।।

ಭೂಪತೇ! ನೀರಿರುವ ಹಳೆಯ ಮಡಿಕೆಯಲ್ಲಿ ಇನ್ನೂ ಹೆಚ್ಚು ನೀರನ್ನು ಹಾಕಿದರೆ ಅದು ವೃದ್ಧಿಸುತ್ತದೆ. ಮಡಿಕೆಯು ಹೆಚ್ಚು ತುಂಬಿಕೊಳ್ಳುತ್ತದೆ. ಅದೇ ರೀತಿ ಬುದ್ಧಿಯುಕ್ತನಾಗಿ ಮಾಡಿದ ಕರ್ಮಗಳು ಹಿಂದೆ ಮಾಡಿದ ಕರ್ಮಗಳನ್ನು ಸೇರಿ ಪುಣ್ಯವನ್ನು ಹೆಚ್ಚಿಸುತ್ತವೆ.

12280022a ರಾಜ್ಞಾ ಜೇತವ್ಯಾಃ ಸಾಯುಧಾಶ್ಚೋನ್ನತಾಶ್ಚ2 ಸಮ್ಯಕ್ಕರ್ತವ್ಯಂ ಪಾಲನಂ ಚ ಪ್ರಜಾನಾಮ್।
12280022c ಅಗ್ನಿಶ್ಚೇಯೋ ಬಹುಭಿಶ್ಚಾಪಿ ಯಜ್ಞೈರ್ ಅಂತೇ ಮಧ್ಯೇ ವಾ ವನಮಾಶ್ರಿತ್ಯ ಸ್ಥೇಯಮ್।।

ರಾಜನಾದವನು ಪ್ರಬುದ್ಧ ಸಶಸ್ತ್ರ ಶತ್ರುಗಳನ್ನೂ ಜಯಿಸಬೇಕು. ಪ್ರಜೆಗಳನ್ನು ಚೆನ್ನಾಗಿ ಪಾಲನೆಮಾಡಬೇಕು. ಬಹುವಿಧದ ಯಜ್ಞಗಳಿಂದ ಅಗ್ನಿಯನ್ನು ತೃಪ್ತಿಪಡಿಸಬೇಕು. ಅಂತ್ಯದಲ್ಲಿ ಅಥವಾ ಮಧ್ಯದಲ್ಲಿ ವನವನ್ನು ಸೇರಿ ಅಲ್ಲಿ ವಾಸಿಸಬೇಕು.

12280023a ದಮಾನ್ವಿತಃ ಪುರುಷೋ ಧರ್ಮಶೀಲೋ ಭೂತಾನಿ ಚಾತ್ಮಾನಮಿವಾನುಪಶ್ಯೇತ್।
12280023c ಗರೀಯಸಃ ಪೂಜಯೇದಾತ್ಮಶಕ್ತ್ಯಾ ಸತ್ಯೇನ ಶೀಲೇನ ಸುಖಂ ನರೇಂದ್ರ।।

ನರೇಂದ್ರ! ಧರ್ಮಶೀಲ ಪುರುಷನು ದಮಾನ್ವಿತನಾಗಿದ್ದು ಪ್ರಾಣಿಗಳನ್ನು ತನ್ನಂತೆಯೇ ಕಾಣಬೇಕು. ಆತ್ಮಶಕ್ತಿಯಿಂದ ಹಿರಿಯರನ್ನು ಪೂಜಿಸಬೇಕು. ಸತ್ಯ ಮತ್ತು ಶೀಲದಿಂದ ಸುಖವುಂಟಾಗುತ್ತದೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಪರಾಶರಗೀತಾಯಾಂ ಅಶೀತ್ಯತ್ಯಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಪರಾಶರಗೀತಾ ಎನ್ನುವ ಇನ್ನೂರಾಎಂಭತ್ತನೇ ಅಧ್ಯಾಯವು.


  1. ಉತ್ತಮ ವರ್ಣದಲ್ಲಿ ಜನ್ಮ. ↩︎

  2. ಶತ್ರವಶ್ಚೋನ್ನತಾಶ್ಚ (ಭಾರತ ದರ್ಶನ). ↩︎