277: ಸಗರಾರಿಷ್ಟನೇಮಿಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 277

ಸಾರ

ಅರಿಷ್ಟನೇಮಿಯು ಸಗರನಿಗೆ ವೈರಾಗ್ಯ ಮತ್ತು ಮೋಕ್ಷವನ್ನು ಉಪದೇಶಿಸಿದುದು (1-47).

12277001 ಯುಧಿಷ್ಠಿರ ಉವಾಚ।
12277001a ಕಥಂ ನು ಮುಕ್ತಃ1 ಪೃಥಿವೀಂ ಚರೇದಸ್ಮದ್ವಿಧೋ ನೃಪಃ।
12277001c ನಿತ್ಯಂ ಕೈಶ್ಚ ಗುಣೈರ್ಯುಕ್ತಃ ಸಂಗಪಾಶಾದ್ವಿಮುಚ್ಯತೇ।।

ಯುಧಿಷ್ಠಿರನು ಹೇಳಿದನು: “ನನ್ನಂಥಹ ನೃಪನು ಹೇಗೆ ಮುಕ್ತನಾಗಿ ಪೃಥ್ವಿಯಲ್ಲಿ ಸಂಚರಿಸಬಲ್ಲನು? ನಿತ್ಯ ಯಾವ ಗುಣಗಳಿಂದ ಯುಕ್ತನಾಗಿ ಸಂಗಪಾಶಗಳಿಂದ ಮುಕ್ತನಾಗಬಲ್ಲನು?”

12277002 ಭೀಷ್ಮ ಉವಾಚ।
12277002a ಅತ್ರ ತೇ ವರ್ತಯಿಷ್ಯಾಮಿ ಇತಿಹಾಸಂ ಪುರಾತನಮ್।
12277002c ಅರಿಷ್ಟನೇಮಿನಾ ಪ್ರೋಕ್ತಂ ಸಗರಾಯಾನುಪೃಚ್ಚತೇ।।

ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಸಗರನು ಕೇಳಲು ಅರಿಷ್ಟನೇಮಿಯು ಹೇಳಿದ ಈ ಪುರಾತನ ಇತಿಹಾಸವನ್ನು ನಿನಗೆ ಹೇಳುತ್ತೇನೆ.

12277003 ಸಗರ ಉವಾಚ
12277003a ಕಿಂ ಶ್ರೇಯಃ ಪರಮಂ ಬ್ರಹ್ಮನ್ ಕೃತ್ವೇಹ ಸುಖಮಶ್ನುತೇ।
12277003c ಕಥಂ ನ ಶೋಚೇನ್ನ ಕ್ಷುಭ್ಯೇದೇತದಿಚ್ಚಾಮಿ ವೇದಿತುಮ್।।

ಸಗರನು ಹೇಳಿದನು: “ಬ್ರಹ್ಮನ್! ಈ ಲೋಕದಲ್ಲಿ ಮನುಷ್ಯನು ಯಾವ ಶ್ರೇಯಸ್ಕರ ಕರ್ಮವನ್ನು ಮಾಡಿ ಪರಮ ಸುಖವನ್ನು ಹೊಂದುತ್ತಾನೆ? ಮನುಷ್ಯನು ಶೋಕಿಸದಿರಲು ಮತ್ತು ವ್ಯಾಕುಲಗೊಳ್ಳದಿರಲು ಹೇಗೆ ಸಾಧ್ಯವಾಗುತ್ತದೆ? ಇದನ್ನು ತಿಳಿಯಬಯಸುತ್ತೇನೆ.””

12277004 ಭೀಷ್ಮ ಉವಾಚ।
12277004a ಏವಮುಕ್ತಸ್ತದಾ ತಾರ್ಕ್ಷ್ಯಃ ಸರ್ವಶಾಸ್ತ್ರವಿಶಾರದಃ।
12277004c ವಿಬುಧ್ಯ ಸಂಪದಂ ಚಾಗ್ರ್ಯಾಂ ಸದ್ವಾಕ್ಯಮಿದಮಬ್ರವೀತ್।।

ಭೀಷ್ಮನು ಹೇಳಿದನು: “ಹೀಗೆ ಕೇಳಲು ಸರ್ವಶಾಸ್ತ್ರವಿಶಾರದ ತಾರ್ಕ್ಷ್ಯ2ನು ಅವನಲ್ಲಿರುವ ಅಗ್ರ ದೈವೀಸಂಪತ್ತನ್ನು ತಿಳಿದು ಈ ಸದ್ವಾಕ್ಯಗಳನ್ನು ಹೇಳಿದನು”

12277005a ಸುಖಂ ಮೋಕ್ಷಸುಖಂ ಲೋಕೇ ನ ಚ ಲೋಕೋ3ಽವಗಚ್ಚತಿ।
12277005c ಪ್ರಸಕ್ತಃ ಪುತ್ರಪಶುಷು ಧನಧಾನ್ಯಸಮಾಕುಲಃ।।

“ಲೋಕದಲ್ಲಿ ಮೋಕ್ಷಸುಖವೇ ಯಥಾರ್ಥ ಸುಖವು. ಧನ-ಧಾನ್ಯ ಮತ್ತು ಪುತ್ರ-ಪಶುಗಳ ಪಾಲನೆಯಲ್ಲಿ ಆಸಕ್ತನಾಗಿರುವ ಮನುಷ್ಯನು ಇದನ್ನು ತಿಳಿದುಕೊಳ್ಳಲಾರನು.

12277006a ಸಕ್ತಬುದ್ಧಿರಶಾಂತಾತ್ಮಾ ನ ಸ ಶಕ್ಯಶ್ಚಿಕಿತ್ಸಿತುಮ್।
12277006c ಸ್ನೇಹಪಾಶಸಿತೋ ಮೂಢೋ ನ ಸ ಮೋಕ್ಷಾಯ ಕಲ್ಪತೇ।।

ವಿಷಯಾಸಕ್ತ ಬುದ್ಧಿ ಮತ್ತು ಅಶಾಂತಾತ್ಮ ಮನುಷ್ಯನಿಗೆ ಚಿಕಿತ್ಸೆಮಾಡಲು ಶಕ್ಯವಿಲ್ಲ. ಸ್ನೇಹಪಾಶಗಳಿಂದ ಬಂಧಿತನಾದ ಮೂಢನು ಮೋಕ್ಷಕ್ಕೆ ಹೇಳಿದವನಲ್ಲ.

12277007a ಸ್ನೇಹಜಾನಿಹ ತೇ ಪಾಶಾನ್ವಕ್ಷ್ಯಾಮಿ ಶೃಣು ತಾನ್ಮಮ।
12277007c ಸಕರ್ಣಕೇನ ಶಿರಸಾ ಶಕ್ಯಾಶ್ಚೇತ್ತುಂ ವಿಜಾನತಾ।।

ಸ್ನೇಹದಿಂದ ಹುಟ್ಟುವ ಪಾಶಗಳ ಕುರಿತು ಹೇಳುತ್ತೇನೆ. ಅವುಗಳನ್ನು ನನ್ನಿಂದ ಕೇಳು. ಕಿವಿಗೊಟ್ಟು ಕೇಳುವವನು ಇದನ್ನು ಬುದ್ಧಿಯಿಂದ ತಿಳಿದುಕೊಳ್ಳಲು ಶಕ್ಯನಾಗುತ್ತಾನೆ.

12277008a ಸಂಭಾವ್ಯ ಪುತ್ರಾನ್ಕಾಲೇನ ಯೌವನಸ್ಥಾನ್ನಿವೇಶ್ಯ ಚ।
12277008c ಸಮರ್ಥಾನ್ ಜೀವನೇ ಜ್ಞಾತ್ವಾ ಮುಕ್ತಶ್ಚರ ಯಥಾಸುಖಮ್।।

ಕಾಲಾನುಗುಣವಾಗಿ ಪುತ್ರರನ್ನು ಪಡೆದು, ಯೌವನಸ್ಥರಾಗಿ ತಮ್ಮ ಜೀವನವನ್ನು ನಡೆಸಲು ಸಮರ್ಥರಾಗಿದ್ದಾರೆ ಎಂದು ನೋಡಿ ಯಥಾಸುಖವಾಗಿ ಮುಕ್ತನಾಗಿ ಸಂಚರಿಸು.

12277009a ಭಾರ್ಯಾಂ ಪುತ್ರವತೀಂ ವೃದ್ಧಾಂ ಲಾಲಿತಾಂ ಪುತ್ರವತ್ಸಲಾಮ್।
12277009c ಜ್ಞಾತ್ವಾ ಪ್ರಜಹಿ ಕಾಲೇ ತ್ವಂ ಪರಾರ್ಥಮನುದೃಶ್ಯ ಚ।।

ಪುತ್ರವತಿಯಾದ, ವೃದ್ಧೆಯಾದ, ಪುತ್ರವತ್ಸಲೆ ಭಾರ್ಯೆಯನ್ನು ಮಕ್ಕಳು ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ನೀನು ಮೋಕ್ಷವನ್ನೇ ಪರಮಾರ್ಥವೆಂದು ಭಾವಿಸಿ ಯೋಗ್ಯ ಸಮಯದಲ್ಲಿ ಅವಳನ್ನೂ ಪರಿತ್ಯಜಿಸು.

12277010a ಸಾಪತ್ಯೋ ನಿರಪತ್ಯೋ ವಾ ಮುಕ್ತಶ್ಚರ ಯಥಾಸುಖಮ್।
12277010c ಇಂದ್ರಿಯೈರಿಂದ್ರಿಯಾರ್ಥಾಂಸ್ತ್ವಮನುಭೂಯ ಯಥಾವಿಧಿ।।
12277011a ಕೃತಕೌತೂಹಲಸ್ತೇಷು ಮುಕ್ತಶ್ಚರ ಯಥಾಸುಖಮ್।
12277011c ಉಪಪತ್ತ್ಯೋಪಲಬ್ಧೇಷು ಲಾಭೇಷು ಚ ಸಮೋ ಭವ।।

ಮಕ್ಕಳಿರಲಿ ಅಥವಾ ಮಕ್ಕಳಿಲ್ಲದಿರಲಿ – ಯಥಾಸುಖವಾಗಿ ಮುಕ್ತನಾಗಿ ಸಂಚರಿಸು. ಇಂದ್ರಿಗಳ ಮೂಲಕ ಇಂದ್ರಿಯ ಸುಖಗಳನ್ನು ಯಥಾವಿಧಿಯಾಗಿ ಅನುಭವಿಸಿ ಅವುಗಳಲ್ಲಿರುವ ಕುತೂಹಲವನ್ನು ತೊರೆದು ಯಥಾಸುಖವಾಗಿ ಮುಕ್ತನಾಗಿ ಸಂಚರಿಸು. ಉಪಲಬ್ಧವಾಗುವ ಲಾಭ-ಅಲಾಭಗಳಲ್ಲಿ ಸಮಭಾವವನ್ನಿಡು.

12277012a ಏಷ ತಾವತ್ಸಮಾಸೇನ ತವ ಸಂಕೀರ್ತಿತೋ ಮಯಾ।
12277012c ಮೋಕ್ಷಾರ್ಥೋ ವಿಸ್ತರೇಣಾಪಿ ಭೂಯೋ ವಕ್ಷ್ಯಾಮಿ ತಚ್ಚೃಣು।।

ಇದೂವರೆಗೆ ನಾನು ಮೋಕ್ಷದ ಕುರಿತಾಗಿ ಸಂಕ್ಷಿಪ್ತವಾಗಿ ಹೇಳಿದೆನು. ಈಗ ಇದರ ಕುರಿತು ವಿಸ್ತಾರವಾಗಿ ಹೇಳುತ್ತೇನೆ. ಕೇಳು.

12277013a ಮುಕ್ತಾ ವೀತಭಯಾ ಲೋಕೇ ಚರಂತಿ ಸುಖಿನೋ ನರಾಃ।
12277013c ಸಕ್ತಭಾವಾ ವಿನಶ್ಯಂತಿ ನರಾಸ್ತತ್ರ ನ ಸಂಶಯಃ।।
12277014a ಆಹಾರಸಂಚಯಾಶ್ಚೈವ ತಥಾ ಕೀಟಪಿಪೀಲಿಕಾಃ।
12277014c ಅಸಕ್ತಾಃ ಸುಖಿನೋ ಲೋಕೇ ಸಕ್ತಾಶ್ಚೈವ ವಿನಾಶಿನಃ।।

ಮುಕ್ತ ನರರು ಭಯವನ್ನು ಕಳೆದುಕೊಂಡು ಸುಖಿಗಳಾಗಿ ಸಂಚರಿಸುತ್ತಾರೆ. ಕೀಟ-ಇರುವೆಗಳಂತೆ ಆಹಾರಸಂಚಯದಲ್ಲಿಯೇ ಸಕ್ತರಾದ ನರರು ನಾಶಹೊಂದುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಆದುದರಿಂದ ಲೋಕದಲ್ಲಿ ಅಸಕ್ತರು ಸುಖಿಗಳು ಮತ್ತು ಸಕ್ತರು ವಿನಾಶಹೊಂದುವವರು.

12277015a ಸ್ವಜನೇ ನ ಚ ತೇ ಚಿಂತಾ ಕರ್ತವ್ಯಾ ಮೋಕ್ಷಬುದ್ಧಿನಾ।
12277015c ಇಮೇ ಮಯಾ ವಿನಾಭೂತಾ ಭವಿಷ್ಯಂತಿ ಕಥಂ ತ್ವಿತಿ।।

ಮೋಕ್ಷಬುದ್ಧಿಯುಳ್ಳವರು “ನಾನಿಲ್ಲದೇ ಇವರು ಹೇಗೆ ಜೀವಿಸುವರು?” ಎಂದು ಸ್ವಜನರ ವಿಷಯದಲ್ಲಿ ಚಿಂತಿಸಬಾರದು.

12277016a ಸ್ವಯಮುತ್ಪದ್ಯತೇ ಜಂತುಃ ಸ್ವಯಮೇವ ವಿವರ್ಧತೇ।
12277016c ಸುಖದುಃಖೇ ತಥಾ ಮೃತ್ಯುಂ ಸ್ವಯಮೇವಾಧಿಗಚ್ಚತಿ।।

ಜಂತುವು ಸ್ವಯಂ ಹುಟ್ಟಿಕೊಳ್ಳುತ್ತದೆ. ಸ್ವಯಂ ತಾನೇ ಬೆಳೆಯುತ್ತದೆ. ಸುಖ-ದುಃಖಗಳನ್ನು ಮತ್ತು ಮೃತ್ಯುವನ್ನೂ ಸ್ವಯಂ ತಾನೇ ಪಡೆದುಕೊಳ್ಳುತ್ತದೆ.

12277017a ಭೋಜನಾಚ್ಚಾದನೇ ಚೈವ ಮಾತ್ರಾ ಪಿತ್ರಾ ಚ ಸಂಗ್ರಹಮ್।
12277017c ಸ್ವಕೃತೇನಾಧಿಗಚ್ಚಂತಿ ಲೋಕೇ ನಾಸ್ತ್ಯಕೃತಂ ಪುರಾ।।

ಮನುಷ್ಯನು ತನ್ನ ಪೂರ್ವ ಜನ್ಮದ ಕರ್ಮಾನುಸಾರವಾಗಿ ಊಟ-ಉಪಚಾರಗಳನ್ನೂ, ಉಡುಗೆ-ತೊಡುಗೆಗಳನ್ನೂ, ಮತ್ತು ತಾಯಿ-ತಂದೆಯರು ಸಂಗ್ರಹಿಸಿದ ಐಶ್ವರ್ಯವನ್ನೂ ಪಡೆದುಕೊಳ್ಳುತ್ತಾನೆ. ಈ ಲೋಕದಲ್ಲಿ ತನ್ನದೇ ಕರ್ಮದಿಂದ ಎಲ್ಲವನ್ನೂ ಪಡೆದುಕೊಳ್ಳುತ್ತಾನೆಯೇ ಹೊರತು ಹಿಂದೆ ಮಾಡದೇ ಇದ್ದುದರ ಯಾವ ಫಲವನ್ನೂ ಪಡೆದುಕೊಳ್ಳುವುದಿಲ್ಲ.

12277018a ಧಾತ್ರಾ ವಿಹಿತಭಕ್ಷ್ಯಾಣಿ ಸರ್ವಭೂತಾನಿ ಮೇದಿನೀಮ್।
12277018c ಲೋಕೇ ವಿಪರಿಧಾವಂತಿ ರಕ್ಷಿತಾನಿ ಸ್ವಕರ್ಮಭಿಃ।।

ಎಲ್ಲ ಪ್ರಾಣಿಗಳೂ ಸ್ವಕರ್ಮಫಲಗಳ ರಕ್ಷಣೆಯಿಂದಲೇ ಲೋಕದಲ್ಲಿ ಸಂಚರಿಸುತ್ತವೆ. ಸರ್ವಭೂತಗಳೂ ವಿಧಾತೃವು ಈ ಮೇದಿನಿಯಲ್ಲಿ ಯಾವ ಕಾಲಕ್ಕೆ ಯಾವ ಆಹಾರವನ್ನು ಕಲ್ಪಿಸಿರುವನೋ ಅದನ್ನೇ ಹೊಂದುತ್ತವೆ.

12277019a ಸ್ವಯಂ ಮೃತ್ಪಿಂಡಭೂತಸ್ಯ ಪರತಂತ್ರಸ್ಯ ಸರ್ವದಾ।
12277019c ಕೋ ಹೇತುಃ ಸ್ವಜನಂ ಪೋಷ್ಟುಂ ರಕ್ಷಿತುಂ ವಾದೃಢಾತ್ಮನಃ।।

ಸ್ವಯಂ ತಾನೇ ಮಣ್ಣಿನ ಮುದ್ದೆಯಂತೆ ಸರ್ವದಾ ಪರತಂತ್ರನಾಗಿರುವಾಗ ಅಂಥದ ಅದೃಢಾತ್ಮ ಯಾರು ತಾನೇ ಸ್ವಜನರ ಪೋಷಣೆ-ರಕ್ಷಣೆಗಳಿಗೆ ಕಾರಣನಾಗುತ್ತಾನೆ?

12277020a ಸ್ವಜನಂ ಹಿ ಯದಾ ಮೃತ್ಯುರ್ಹಂತ್ಯೇವ ತವ ಪಶ್ಯತಃ।
12277020c ಕೃತೇಽಪಿ ಯತ್ನೇ ಮಹತಿ ತತ್ರ ಬೋದ್ಧವ್ಯಮಾತ್ಮನಾ।।

ನೀನು ಎಷ್ಟೇ ಮಹಾಪ್ರಯತ್ನಗಳನ್ನು ಮಾಡಿದರೂ ನಿನ್ನ ಕಣ್ಣಮುಂದೆಯೇ ನಿನ್ನ ಸ್ವಜನರನ್ನು ಮೃತ್ಯುವು ಕೊಂಡೊಯ್ಯುತ್ತದೆ ಎನ್ನುವಾಗಲಾದರೂ ನಿನ್ನ ಸಾಮರ್ಥ್ಯವು ಎಷ್ಟೆನ್ನುವುದನ್ನು ನೀನು ತಿಳಿದುಕೊಳ್ಳಬೇಕು.

12277021a ಜೀವಂತಮಪಿ ಚೈವೈನಂ ಭರಣೇ ರಕ್ಷಣೇ ತಥಾ।
12277021c ಅಸಮಾಪ್ತೇ ಪರಿತ್ಯಜ್ಯ ಪಶ್ಚಾದಪಿ ಮರಿಷ್ಯಸಿ।।

ನೀನು ಭರಣ-ಪೋಷಣ ಮಾಡಬೇಕಾಗಿರುವವರು ಜೀವಂತವಿರುವಾಗಲೇ ಅದನ್ನು ಮುಗಿಸದೆಯೇ ನೀನು ಬಿಟ್ಟು ಸತ್ತುಹೋಗಬಹುದು.

12277022a ಯದಾ ಮೃತಶ್ಚ ಸ್ವಜನಂ ನ ಜ್ಞಾಸ್ಯಸಿ ಕಥಂ ಚನ।
12277022c ಸುಖಿತಂ ದುಃಖಿತಂ ವಾಪಿ ನನು ಬೋದ್ಧವ್ಯಮಾತ್ಮನಾ।।

ಮೃತನಾದ ನಿನ್ನವನೂ ಮರಣಾನಂತರ ಸುಖವಾಗಿರುತ್ತಾನೋ ಅಥವಾ ದುಃಖಿತನಾಗಿರುತ್ತಾನೋ ಎನ್ನುವುದು ನಿನಗೆ ಎಂದೂ ತಿಳಿಯುವುದಿಲ್ಲ. ಆದುದರಿಂದ ಈ ವಿಷಯದಲ್ಲಿ ನೀನು ಯೋಚನೆಮಾಡಬೇಕಾಗಿದೆ.

12277023a ಮೃತೇ ವಾ ತ್ವಯಿ ಜೀವೇ ವಾ ಯದಿ ಭೋಕ್ಷ್ಯತಿ ವೈ ಜನಃ।
12277023c ಸ್ವಕೃತಂ ನನು ಬುದ್ಧ್ವೈವಂ ಕರ್ತವ್ಯಂ ಹಿತಮಾತ್ಮನಃ।।

ನೀನು ಮೃತನಾಗು ಅಥವಾ ಜೀವಂತವಿರು. ಜನರು ಅವರ ಕರ್ಮಫಲಗಳನ್ನು ಭೋಗಿಸಿಯೇ ತೀರುತ್ತಾರೆ. ಅವರ ಭರಣ-ಪೋಷಣೆಯು ನನ್ನ ಕರ್ತ್ಯವ್ಯ ಎಂದು ತಿಳಿಯದೇ ನಿನ್ನ ಹಿತದ ಕುರಿತು ಯೋಚಿಸು.

12277024a ಏವಂ ವಿಜಾನಽಲ್ಲೋಕೇಽಸ್ಮಿನ್ಕಃ ಕಸ್ಯೇತ್ಯಭಿನಿಶ್ಚಿತಃ।
12277024c ಮೋಕ್ಷೇ ನಿವೇಶಯ ಮನೋ ಭೂಯಶ್ಚಾಪ್ಯುಪಧಾರಯ।।

ಇದನ್ನು ತಿಳಿದು ಈ ಲೋಕದಲ್ಲಿ ಯಾರು ಯಾರವನು ಎಂದು ನಿಶ್ಚಯಿಸಿ ಮೋಕ್ಷಮಾರ್ಗದಲ್ಲಿಯೇ ಬುದ್ಧಿಯನ್ನಿಡು. ಪುನಃ ಪುನಃ ಮನಸ್ಸಿನಲ್ಲಿ ಈ ವಿಷಯವನ್ನು ಆಲೋಚಿಸುತ್ತಿರು.

12277025a ಕ್ಷುತ್ಪಿಪಾಸಾದಯೋ ಭಾವಾ ಜಿತಾ ಯಸ್ಯೇಹ ದೇಹಿನಃ।
12277025c ಕ್ರೋಧೋ ಲೋಭಸ್ತಥಾ ಮೋಹಃ ಸತ್ತ್ವವಾನ್ಮುಕ್ತ ಏವ ಸಃ।।

ಹಸಿವು, ಬಾಯಾರಿಕೆ, ಕ್ರೋಧ, ಲೋಭ, ಮೋಹ ಮೊದಲಾದ ಭಾವಗಳನ್ನು ಜಯಿಸಿರುವ ಸತ್ತ್ವಸಂಪನ್ನನು ಮುಕ್ತನೇ ಸರಿ.

12277026a ದ್ಯೂತೇ ಪಾನೇ ತಥಾ ಸ್ತ್ರೀಷು ಮೃಗಯಾಯಾಂ ಚ ಯೋ ನರಃ।
12277026c ನ ಪ್ರಮಾದ್ಯತಿ ಸಂಮೋಹಾತ್ಸತತಂ ಮುಕ್ತ ಏವ ಸಃ।।

ದ್ಯೂತ, ಮದ್ಯಪಾನ, ಸ್ತ್ರೀಯರು ಮತ್ತು ಬೇಟೆಗಳಲ್ಲಿ ಯಾವ ನರನು ಸಮ್ಮೋಹದಿಂದ ಪ್ರಮಾದಗೊಳ್ಳುವುದಿಲ್ಲವೋ ಅವನು ಮುಕ್ತನೇ ಸರಿ.

12277027a ದಿವಸೇ ದಿವಸೇ ನಾಮ ರಾತ್ರೌ ರಾತ್ರೌ ಸದಾ ಸದಾ।
12277027c ಭೋಕ್ತವ್ಯಮಿತಿ ಯಃ ಖಿನ್ನೋ ದೋಷಬುದ್ಧಿಃ ಸ ಉಚ್ಯತೇ।।

ಪ್ರತಿ ದಿನವೂ ಮತ್ತು ಪ್ರತಿ ರಾತ್ರಿಯೂ ಸದಾ ನಾನು ಏನನ್ನು ಭೋಗಿಸಲಿ ಎಂದು ಚಿಂತಿಸಿ ಖಿನ್ನನಾಗುವವನನ್ನು ದೋಷಬುದ್ಧಿಯೆಂದು ಕರೆಯುತ್ತಾರೆ.

12277028a ಆತ್ಮಭಾವಂ ತಥಾ ಸ್ತ್ರೀಷು ಮುಕ್ತಮೇವ ಪುನಃ ಪುನಃ।
12277028c ಯಃ ಪಶ್ಯತಿ ಸದಾ ಯುಕ್ತೋ ಯಥಾವನ್ಮುಕ್ತ ಏವ ಸಃ।।

ಸದಾ ಸಾವಧಾನಯುಕ್ತನಾಗಿದ್ದುಕೊಂಡು ಅವಳು ತನ್ನವಳೆಂಬ ಆತ್ಮಭಾವವನ್ನು ತಾಳದೇ ಸ್ತ್ರೀಯರನ್ನು ನೋಡುವವನು ಮುಕ್ತನೇ ಸರಿ.

12277029a ಸಂಭವಂ ಚ ವಿನಾಶಂ ಚ ಭೂತಾನಾಂ ಚೇಷ್ಟಿತಂ ತಥಾ।
12277029c ಯಸ್ತತ್ತ್ವತೋ ವಿಜಾನಾತಿ ಲೋಕೇಽಸ್ಮಿನ್ಮುಕ್ತ ಏವ ಸಃ।।

ಈ ಲೋಕದಲ್ಲಿ ಭೂತಗಳ ಹುಟ್ಟು, ಮರಣ ಮತ್ತು ಜೀವನ ಕ್ಲೇಷಗಳನ್ನು ಯಥಾರ್ಥರೂಪದಲ್ಲಿ ತಿಳಿದಿರುವವನೇ ಮುಕ್ತನು.

12277030a ಪ್ರಸ್ಥಂ ವಾಹಸಹಸ್ರೇಷು ಯಾತ್ರಾರ್ಥಂ ಚೈವ ಕೋಟಿಷು।
12277030c ಪ್ರಾಸಾದೇ ಮಂಚಕಸ್ಥಾನಂ ಯಃ ಪಶ್ಯತಿ ಸ ಮುಚ್ಯತೇ।।

ಸಾವಿರಾರು-ಕೋಟ್ಯಾನುಕೋಟಿ ಬಂಡಿಗಳಲ್ಲಿ ತುಂಬಿರುವ ಧಾನ್ಯದಲ್ಲಿ ತನಗೆ ಅಂದಿನ ಊಟಕ್ಕೆ ಬೇಕಾಗುವಷ್ಟೇ ಧಾನ್ಯವು ಸಾಕು ಎಂದು ಭಾವಿಸುವವನು ಹಾಗೂ ವಿಶಾಲ ಭವನದಲ್ಲಿ ಹಾಸಿಗೆ ಹಾಸುವಷ್ಟು ಜಾಗವು ಸಾಕು ಎನ್ನುವವನು ಮುಕ್ತನೇ ಸರಿ.

12277031a ಮೃತ್ಯುನಾಭ್ಯಾಹತಂ ಲೋಕಂ ವ್ಯಾಧಿಭಿಶ್ಚೋಪಪೀಡಿತಮ್।
12277031c ಅವೃತ್ತಿಕರ್ಶಿತಂ ಚೈವ ಯಃ ಪಶ್ಯತಿ ಸ ಮುಚ್ಯತೇ।।

ಲೋಕವು ಮೃತ್ಯುವಿನ ಆಕ್ರಮಣಕ್ಕೊಳಪಟ್ಟಿದೆಯೆಂದೂ, ವ್ಯಾಧಿಗಳಿಂದ ಪೀಡಿತವಾಗಿದೆಯೆಂದೂ, ಜೀವಿಕೆಯ ಅಭಾವದಿಂದ ದುರ್ಬಲವು ಎಂದು ಯಾರು ಕಾಣುತ್ತಾನೋ ಅವನು ಮುಕ್ತನಾಗುತ್ತಾನೆ.

12277032a ಯಃ ಪಶ್ಯತಿ ಸುಖೀ ತುಷ್ಟೋ4 ನಪಶ್ಯಂಶ್ಚ ವಿಹನ್ಯತೇ।
12277032c ಯಶ್ಚಾಪ್ಯಲ್ಪೇನ ಸಂತುಷ್ಟೋ ಲೋಕೇಽಸ್ಮಿನ್ಮುಕ್ತ ಏವ ಸಃ।।

ಹೀಗೆ ನೋಡುವವನು ಸುಖಿಯೂ ಸಂತುಷ್ಟನೂ ಆಗುತ್ತಾನೆ. ಹೀಗೆ ನೋಡದಿರುವವನು ನಷ್ಟನಾಗುತ್ತಾನೆ5. ಈ ಲೋಕದಲ್ಲಿ ಅಲ್ಪದಿಂದಲೇ ಸಂತುಷ್ಟರಾಗಿರುವವರು ಮುಕ್ತರೇ ಸರಿ.

12277033a ಅಗ್ನೀಷೋಮಾವಿದಂ ಸರ್ವಮಿತಿ ಯಶ್ಚಾನುಪಶ್ಯತಿ।
12277033c ನ ಚ ಸಂಸ್ಪೃಶ್ಯತೇ ಭಾವೈರದ್ಭುತೈರ್ಮುಕ್ತ ಏವ ಸಃ।।

ಯಾರು ಈ ಎಲ್ಲವೂ ಅಗ್ನೀಷೋಮಗಳ6 ಸ್ವರೂಪವೆಂದು ತಿಳಿಯುವನೋ ಅವನನ್ನು ಮಾಯೆಯ ಅದ್ಭುತಭಾವಗಳು ತಗಲುವುದಿಲ್ಲ. ಅಂಥವನು ಮುಕ್ತನೇ ಸರಿ.

12277034a ಪರ್ಯಂಕಶಯ್ಯಾ ಭೂಮಿಶ್ಚ ಸಮಾನೇ ಯಸ್ಯ ದೇಹಿನಃ।
12277034c ಶಾಲಯಶ್ಚ ಕದನ್ನಂ ಚ ಯಸ್ಯ ಸ್ಯಾನ್ಮುಕ್ತ ಏವ ಸಃ।।

ಯಾರಿಗೆ ಪರ್ಯಂಕಶಯನವೂ ಭೂಮಿಯ ಮೇಲೆ ಮಲಗುವುದೂ ಸಮಾನವೋ, ಹಾಗೆಯೇ ಮೃಷ್ಟಾನ್ನವೂ ತಂಗಳನ್ನವೂ ಸಮಾನವೋ ಅವನು ಮುಕ್ತನೇ ಸರಿ.

12277035a ಕ್ಷೌಮಂ ಚ ಕುಶಚೀರಂ ಚ ಕೌಶೇಯಂ ವಲ್ಕಲಾನಿ ಚ।
12277035c ಆವಿಕಂ ಚರ್ಮ ಚ ಸಮಂ ಯಸ್ಯ ಸ್ಯಾನ್ಮುಕ್ತ ಏವ ಸಃ।।

ಯಾರಿಗೆ ಸುವರ್ಣದ ಜರಿಯಿಂದ ಕೂಡಿರುವ ರೇಷ್ಮೆಯ ಪಟ್ಟೇವಸ್ತ್ರವೂ-ದರ್ಭೆಯ ಬಟ್ಟೆಯೂ ಸಮಾನವೋ, ರೇಷ್ಮೆಯ ವಸ್ತ್ರವೂ-ನಾರು ಮಡಿಯೂ ಸಮಾನವೋ, ಮತ್ತು ಉಣ್ಣೆಯ ಬಟ್ಟೆಯೂ-ಮೃಗಚರ್ಮವೂ ಸಮಾನವೋ ಅವನು ಮುಕ್ತನೇ ಸರಿ.

12277036a ಪಂಚಭೂತಸಮುದ್ಭೂತಂ ಲೋಕಂ ಯಶ್ಚಾನುಪಶ್ಯತಿ।
12277036c ತಥಾ ಚ ವರ್ತತೇ ದೃಷ್ಟ್ವಾ ಲೋಕೇಽಸ್ಮಿನ್ಮುಕ್ತ ಏವ ಸಃ।।

ಪಂಚಭೂತಗಳಿಂದ ಉಂಟಾದುದೆಂದು ಲೋಕವನ್ನು ಕಾಣುವವನು ಮತ್ತು ಲೋಕದ ಎಲ್ಲ ಪ್ರಾಣಿಗಳನ್ನೂ ಸಮನಾಗಿ ಕಾಣುವವನು ಮುಕ್ತನೇ ಸರಿ.

12277037a ಸುಖದುಃಖೇ ಸಮೇ ಯಸ್ಯ ಲಾಭಾಲಾಭೌ ಜಯಾಜಯೌ।
12277037c ಇಚ್ಚಾದ್ವೇಷೌ ಭಯೋದ್ವೇಗೌ ಸರ್ವಥಾ ಮುಕ್ತ ಏವ ಸಃ।।

ಸುಖ-ದುಃಖಗಳಲ್ಲಿ, ಲಾಭಾಲಾಭಗಳಲ್ಲಿ, ಜಯಾಜಯಗಳಲ್ಲಿ, ಇಚ್ಚಾದ್ವೇಷಗಳಲ್ಲಿ, ಮತ್ತು ಭಯೋದ್ವೇಗಗಳಲ್ಲಿ ಸಮಭಾವದಿಂದಿರುವವನು ಮುಕ್ತನೇ ಸರಿ.

12277038a ರಕ್ತಮೂತ್ರಪುರೀಷಾಣಾಂ ದೋಷಾಣಾಂ ಸಂಚಯಂ ತಥಾ।
12277038c ಶರೀರಂ ದೋಷಬಹುಲಂ ದೃಷ್ಟ್ವಾ ಚೇದಂ ವಿಮುಚ್ಯತೇ।।

ಶರೀರವು ರಕ್ತ-ಮೂತ್ರ-ಮಲಗಳ ಆವಾಸಸ್ಥಾನವಾಗಿರುವುದನ್ನೂ, ವಾತ-ಪಿತ್ತ-ಕಫಗಳೆಂಬ ದೋಷಯುಕ್ತವಾಗಿರುವುದನ್ನೂ ಕಂಡುಕೊಂಡವನು ಮುಕ್ತನಾಗುತ್ತಾನೆ.

12277039a ವಲೀಪಲಿತಸಂಯೋಗಂ ಕಾರ್ಶ್ಯಂ ವೈವರ್ಣ್ಯಮೇವ ಚ।
12277039c ಕುಬ್ಜಭಾವಂ ಚ ಜರಯಾ ಯಃ ಪಶ್ಯತಿ ಸ ಮುಚ್ಯತೇ।।

ಮುಪ್ಪು ಆವರಿಸಿದೊಡನೆಯೇ ಚರ್ಮವು ಸುಕ್ಕಿಹೋಗುವುದು, ತಲೆಗೂದಲು ನೆರೆಯುವುದು, ದೇಹವು ಕೃಶವಾಗಿ ಕಾಂತಿಹೀನವಾಗುವುದು, ಸೊಂಟವು ಬಗ್ಗುವುದು – ಇವುಗಳನ್ನು ಮನಗಾಣುವವನು ಮುಕ್ತನಾಗುತ್ತಾನೆ.

12277040a ಪುಂಸ್ತ್ವೋಪಘಾತಂ ಕಾಲೇನ ದರ್ಶನೋಪರಮಂ ತಥಾ।
12277040c ಬಾಧಿರ್ಯಂ ಪ್ರಾಣಮಂದತ್ವಂ ಯಃ ಪಶ್ಯತಿ ಸ ಮುಚ್ಯತೇ।।

ಕಾಲಕ್ರಮೇಣವಾಗಿ ಆಗುವ ಪುರುಷತ್ವದ ನಾಶ, ದೃಷ್ಟಿಯು ಮಂದವಾಗುವುದು, ಕಿವಿ ಕೇಳಿಸದೇ ಇರುವುದು, ಮತ್ತು ಪ್ರಾಣಶಕ್ತಿಯು ಕ್ಷೀಣಿಸುವುದು – ಇವುಗಳನ್ನು ಮುಂದಾಗಿಯೇ ಮನಗಂಡವನು ಮುಕ್ತನಾಗುತ್ತಾನೆ.

12277041a ಗತಾನೃಷೀಂಸ್ತಥಾ ದೇವಾನಸುರಾಂಶ್ಚ ತಥಾ ಗತಾನ್।
12277041c ಲೋಕಾದಸ್ಮಾತ್ಪರಂ ಲೋಕಂ ಯಃ ಪಶ್ಯತಿ ಸ ಮುಚ್ಯತೇ।।

ಎಷ್ಟೋ ಮಂದಿ ಋಷಿಗಳು, ದೇವತೆಗಳು ಮತ್ತು ಅಸುರರು ಈ ಲೋಕದಿಂದ ಪರಲೋಕಕ್ಕೆ ಹೊರಟುಹೋದರು ಎನ್ನುವುದನ್ನು ನೋಡುವವನು ಮುಕ್ತನಾಗುತ್ತಾನೆ.

12277042a ಪ್ರಭಾವೈರನ್ವಿತಾಸ್ತೈಸ್ತೈಃ ಪಾರ್ಥಿವೇಂದ್ರಾಃ ಸಹಸ್ರಶಃ।
12277042c ಯೇ ಗತಾಃ ಪೃಥಿವೀಂ ತ್ಯಕ್ತ್ವಾ ಇತಿ ಜ್ಞಾತ್ವಾ ವಿಮುಚ್ಯತೇ।।

ಸಹಸ್ರಾರು ಪ್ರಭಾವಯುಕ್ತ ಪಾರ್ಥಿವೇಂದ್ರರು ಈ ಪೃಥ್ವಿಯನ್ನು ತೊರೆದು ಹೊರಟುಹೋಗಿದ್ದಾರೆ ಎಂದು ತಿಳಿದುಕೊಂಡವನು ಮುಕ್ತನಾಗುತ್ತಾನೆ.

12277043a ಅರ್ಥಾಂಶ್ಚ ದುರ್ಲಭಾಽಲ್ಲೋಕೇ ಕ್ಲೇಶಾಂಶ್ಚ ಸುಲಭಾಂಸ್ತಥಾ।
12277043c ದುಃಖಂ ಚೈವ ಕುಟುಂಬಾರ್ಥೇ ಯಃ ಪಶ್ಯತಿ ಸ ಮುಚ್ಯತೇ।।

ಈ ಲೋಕದಲ್ಲಿ ಅರ್ಥಪ್ರಾಪ್ತಿಯು ದುರ್ಲಭವಾದುದು, ಕ್ಲೇಷಗಳು ಸುಲಭವಾಗಿ ದೊರೆಯುತ್ತವೆ ಮತ್ತು ಕುಟುಂಬದ ಕಾರಣದಿಂದ ಅನೇಕ ದುಃಖಗಳುಂಟಾಗುತ್ತದೆ ಎನ್ನುವುದನ್ನು ಕಂಡವನು ಮುಕ್ತನಾಗುತ್ತಾನೆ.

12277044a ಅಪತ್ಯಾನಾಂ ಚ ವೈಗುಣ್ಯಂ ಜನಂ ವಿಗುಣಮೇವ ಚ।
12277044c ಪಶ್ಯನ್ಭೂಯಿಷ್ಠಶೋ ಲೋಕೇ ಕೋ ಮೋಕ್ಷಂ ನಾಭಿಪೂಜಯೇತ್।।

ಮಕ್ಕಳಲ್ಲಿರುವ ಗುಣಹೀನತೆ ಮತ್ತು ಜನರಲ್ಲಿರುವ ದುರ್ಗುಣಗಳನ್ನು ಲೋಕದಲ್ಲಿ ಹೆಚ್ಚು ಹೆಚ್ಚು ನೋಡುತ್ತಿರುವ ಯಾರು ತಾನೇ ಮೋಕ್ಷವನ್ನು ಆದರಿಸುವುದಿಲ್ಲ?

12277045a ಶಾಸ್ತ್ರಾಲ್ಲೋಕಾಚ್ಚ ಯೋ ಬುದ್ಧಃ ಸರ್ವಂ ಪಶ್ಯತಿ ಮಾನವಃ।
12277045c ಅಸಾರಮಿವ ಮಾನುಷ್ಯಂ ಸರ್ವಥಾ ಮುಕ್ತ ಏವ ಸಃ।।

ಶಾಸ್ತ್ರಗಳ ಅಧ್ಯಯನದಿಂದ ಮತ್ತು ಲೌಕಿಕ ಅನುಭವದಿಂದ ಜ್ಞಾನಸಂಪನ್ನನಾಗಿ ಮನುಷ್ಯತ್ವವೇ ನಿಸ್ಸಾರವೆಂದು ಕಂಡುಕೊಳ್ಳುವ ಮಾನವನು ಸರ್ವಥಾ ಮುಕ್ತನಾದಂತೆಯೇ.

12277046a ಏತಚ್ಚ್ರುತ್ವಾ ಮಮ ವಚೋ ಭವಾಂಶ್ಚರತು ಮುಕ್ತವತ್।
12277046c ಗಾರ್ಹಸ್ಥ್ಯೇ ಯದಿ ತೇ ಮೋಕ್ಷೇ ಕೃತಾ ಬುದ್ಧಿರವಿಕ್ಲವಾ।।

ನನ್ನ ಈ ಮಾತನ್ನು ಕೇಳಿ ನಿನ್ನ ಬುದ್ಧಿಯ ವ್ಯಾಕುಲತೆಯನ್ನು ದೂರೀಕರಿಸಿ, ಗೃಹಸ್ಥಾಶ್ರಮದಲ್ಲಾಗಲೀ ಸಂನ್ಯಾಸಾಶ್ರಮದಲ್ಲಾಗಲೀ ಇದ್ದುಕೊಂಡು ಮುಕ್ತನಂತೆ ವ್ಯವಹರಿಸು.”

12277047a ತತ್ತಸ್ಯ ವಚನಂ ಶ್ರುತ್ವಾ ಸಮ್ಯಕ್ಸ ಪೃಥಿವೀಪತಿಃ।
12277047c ಮೋಕ್ಷಜೈಶ್ಚ ಗುಣೈರ್ಯುಕ್ತಃ ಪಾಲಯಾಮಾಸ ಚ ಪ್ರಜಾಃ।।

ಅವನ ಆ ಮಾತನ್ನು ಶ್ರದ್ಧೆಯಿಂದ ಕೇಳಿ ಪೃಥಿವೀಪತಿ ಸಗರನು ಮೋಕ್ಷೋಪಯೋಗೀ ಗುಣಗಳಿಂದ ಯುಕ್ತನಾಗಿ ಪ್ರಜೆಗಳನ್ನು ಪಾಲಿಸುತ್ತಿದ್ದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಸಗರಾರಿಷ್ಟನೇಮಿಸಂವಾದೇ ಸಪ್ತಸಪ್ತತ್ಯಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಸಗರಾರಿಷ್ಟನೇಮಿಸಂವಾದ ಎನ್ನುವ ಇನ್ನೂರಾಎಪ್ಪತ್ತೇಳನೇ ಅಧ್ಯಾಯವು.


  1. ಯುಕ್ತಃ (ಭಾರತ ದರ್ಶನ). ↩︎

  2. ಅರಿಷ್ಟನೇಮಿಯ ಇನ್ನೊಂದು ಹೆಸರು ತಾರ್ಕ್ಷ್ಯ. ↩︎

  3. ಮೂಢೋ (ಭಾರತ ದರ್ಶನ). ↩︎

  4. ಯಃ ಪಶ್ಯತಿ ಸ ಸಂತುಷ್ಟೋ (ಭಾರತ ದರ್ಶನ). ↩︎

  5. ತನ್ನನ್ನು ಸಂತುಷ್ಟನನ್ನಾಗಿ ಕಾಣುವವನು ಮುಕ್ತನು. ತಾನು ಸಂತುಷ್ಟನೆಂದು ಯಾರು ಕಾಣುವುದಿಲ್ಲವೋ ಅವನು ಹಾಳಾಗಿಹೋಗುತ್ತಾನೆ. (ಭಾರತ ದರ್ಶನ) ↩︎

  6. ಅಗ್ನಿ – ಜಠರಾಗ್ನಿ, ಭೋಕ್ತಾ ಮತ್ತು ಸೋಮ – ಅನ್ನ, ಭೋಜ್ಯ (ಭಾರತ ದರ್ಶನ). ↩︎