276: ಶ್ರೇಯೋವಾಚಿಕಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 276

ಸಾರ

ಮನುಷ್ಯನಿಗೆ ಶ್ರೇಯಸ್ಕರವಾದುದು ಯಾವುದು ಎನ್ನುವುದರ ಕುರಿತು ಗಾಲವನ ಪ್ರಶ್ನೆಗೆ ನಾರದನು ಉತ್ತರಿಸಿದುದು (1-58).

12276001 ಯುಧಿಷ್ಠಿರ ಉವಾಚ।
12276001a ಅತತ್ತ್ವಜ್ಞಸ್ಯ ಶಾಸ್ತ್ರಾಣಾಂ ಸತತಂ ಸಂಶಯಾತ್ಮನಃ।
12276001c ಅಕೃತವ್ಯವಸಾಯಸ್ಯ ಶ್ರೇಯೋ ಬ್ರೂಹಿ ಪಿತಾಮಹ।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ಶಾಸ್ತ್ರಗಳ ತತ್ತ್ವಗಳನ್ನು ತಿಳಿಯದ, ಸತತವೂ ಸಂಶಯಾತ್ಮಕ ಮನಸ್ಸಿನಿಂದ ಕೂಡಿದ ಮತ್ತು ಪರಮಾರ್ಥಸಾಧನೆಗೆ ಪ್ರಯತ್ನವನ್ನೇ ಮಾಡದ ಮನುಷ್ಯನಿಗೆ ಶ್ರೇಯಸ್ಸು ಹೇಗೆ ಉಂಟಾಗುತ್ತದೆ ಎನ್ನುವುದನ್ನು ಹೇಳು.”

12276002 ಭೀಷ್ಮ ಉವಾಚ।
12276002a ಗುರುಪೂಜಾ ಚ ಸತತಂ ವೃದ್ಧಾನಾಂ ಪರ್ಯುಪಾಸನಮ್।
12276002c ಶ್ರವಣಂ ಚೈವ ವಿದ್ಯಾನಾಂ1 ಕೂಟಸ್ಥಂ ಶ್ರೇಯ ಉಚ್ಯತೇ।।

ಭೀಷ್ಮನು ಹೇಳಿದನು: “ಸತತವೂ ಗುರುಪೂಜೆ, ವೃದ್ಧರ ಸೇವೆ, ವೇದಗಳ ಶ್ರವಣ ಮತ್ತು ಕೂಟಸ್ಥನಾಗಿರುವುದು – ಇವು ಶ್ರೇಯಸ್ಕರವೆಂದು ಹೇಳಿದ್ದಾರೆ.

12276003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12276003c ಗಾಲವಸ್ಯ ಚ ಸಂವಾದಂ ದೇವರ್ಷೇರ್ನಾರದಸ್ಯ ಚ।।

ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಗಾಲವ ಮತ್ತು ದೇವರ್ಷಿ ನಾರದರ ಸಂವಾದವನ್ನು ಉದಾಹರಿಸುತ್ತಾರೆ.

212276004a ವೀತಮೋಹಕ್ಲಮಂ ವಿಪ್ರಂ ಜ್ಞಾನತೃಪ್ತಂ ಜಿತೇಂದ್ರಿಯಮ್।
12276004c ಶ್ರೇಯಸ್ಕಾಮಂ ಜಿತಾತ್ಮಾನಂ ನಾರದಂ ಗಾಲವೋಽಬ್ರವೀತ್।।

ಮೋಹ-ಆಯಾಸಗಳನ್ನು ಕಳೆದುಕೊಂಡಿದ್ದ, ಶ್ರೇಯಸ್ಸನ್ನೇ ಬಯಸುತ್ತಿದ್ದ, ಜ್ಞಾನತೃಪ್ತ, ಜಿತೇಂದ್ರಿಯ, ಜಿತಾತ್ಮ ನಾರದನಿಗೆ ಗಾಲವನು ಹೇಳಿದನು:

12276005a ಯೈಃ ಕೈಶ್ಚಿತ್ಸಂಮತೋ ಲೋಕೇ ಗುಣೈಸ್ತು ಪುರುಷೋ ನೃಷು।
12276005c ಭವತ್ಯನಪಗಾನ್ಸರ್ವಾಂಸ್ತಾನ್ ಗುಣಾಽಲ್ಲಕ್ಷಯಾಮ್ಯಹಮ್।।

“ಮನುಷ್ಯರಲ್ಲಿ ಪುರುಷನು ಯಾವ ಗುಣಗಳಿಂದ ಸನ್ಮಾನಿತನಾಗುವನೋ ಅಂತಹ ಗುಣಗಳೆಲ್ಲವನ್ನೂ ನಿನ್ನಲ್ಲಿ ಸ್ಥಿರವಾಗಿರುವುದನ್ನು ನೋಡುತ್ತಿದ್ದೇವೆ.

12276006a ಭವಾನೇವಂವಿಧೋಽಸ್ಮಾಕಂ ಸಂಶಯಂ ಚೇತ್ತುಮರ್ಹತಿ।
12276006c ಅಮೂಢಶ್ಚಿರಮೂಢಾನಾಂ ಲೋಕತತ್ತ್ವಮಜಾನತಾಮ್।।

ಈ ರೀತಿ ಜ್ಞಾನಸಂಪನ್ನನಾಗಿರುವ ನೀನು ಲೋಕತತ್ತ್ವವನ್ನು ತಿಳಿಯದ, ಬಹುಕಾಲದವರೆಗೆ ಅಜ್ಞಾನದಲ್ಲಿಯೇ ಇರುವ ನಮ್ಮಂಥವರ ಸಂಶಯಗಳನ್ನು ನಿವಾರಿಸಲು ಸಮರ್ಥನಾಗಿದ್ದೀಯೆ.

12276007a ಜ್ಞಾನೇ ಹ್ಯೇವಂ ಪ್ರವೃತ್ತಿಃ ಸ್ಯಾತ್ಕಾರ್ಯಾಕಾರ್ಯೇ ವಿಜಾನತಃ3
12276007c ಯತ್ಕಾರ್ಯಂ ನ ವ್ಯವಸ್ಯಾಮಸ್ತದ್ಭವಾನ್ವಕ್ತುಮರ್ಹತಿ।।

ಯಾವ ಕರ್ಮವನ್ನು ಮಾಡುವುದರಿಂದ ಅಥವಾ ಮಾಡದೇ ಇರುವುದರಿಂದ ಜ್ಞಾನ ಮಾರ್ಗದಲ್ಲಿ ಪ್ರವೃತ್ತನಾಗಬಹುದು ಎಂದು ತಿಳಿದಿಲ್ಲ. ಆದುದರಿಂದ ಯಾವ ಕಾರ್ಯವನ್ನು ಮಾಡಬೇಕೆಂದು ನಿಶ್ಚಯಿಸಲಾರದಾಗಿದ್ದೇವೆ. ನೀನು ಅದರ ಕುರಿತು ಹೇಳಬೇಕು.

12276008a ಭಗವನ್ನಾಶ್ರಮಾಃ ಸರ್ವೇ ಪೃಥಗಾಚಾರದರ್ಶಿನಃ।
12276008c ಇದಂ ಶ್ರೇಯ ಇದಂ ಶ್ರೇಯ ಇತಿ ನಾನಾಪ್ರಧಾವಿತಾಃ।।

ಭಗವನ್! ಸರ್ವ ಆಶ್ರಮಗಳೂ ಪ್ರತ್ಯೇಕ ಪ್ರತ್ಯೇಕ ಆಚಾರಗಳನ್ನು ತೋರಿಸುತ್ತವೆ. ಇದು ಶ್ರೇಯಸ್ಕರವಾದುದು ಇದು ಶ್ರೇಯಸ್ಕರವಾದುದು ಎಂದು ನಾನಾ ಪ್ರಕಾರವಾಗಿ ಬೋಧಿಸುತ್ತವೆ.

12276009a ತಾಂಸ್ತು ವಿಪ್ರಸ್ಥಿತಾನ್ ದೃಷ್ಟ್ವಾ ಶಾಸ್ತ್ರೈಃ ಶಾಸ್ತ್ರಾಭಿನಂದಿನಃ।
12276009c ಸ್ವಶಾಸ್ತ್ರೈಃ ಪರಿತುಷ್ಟಾಂಶ್ಚ ಶ್ರೇಯೋ ನೋಪಲಭಾಮಹೇ।।

ಎಲ್ಲರೂ ತಾವಿರುವ ಆಶ್ರಮವೇ ಶ್ರೇಷ್ಠವೆಂದು ತಿಳಿದಿರುತ್ತಾರೆ. ಮತ್ತು ಶಾಸ್ತ್ರಗಳೂ ಕೂಡ ಎಲ್ಲ ಆಶ್ರಮಗಳೂ ಶ್ರೇಷ್ಠವೆಂದೇ ಹೇಳುತ್ತವೆ. ಆದರೆ ನಿಜವಾದ ಶ್ರೇಯಸ್ಕರ ಮಾರ್ಗವು ಯಾವುದು ಎನ್ನುವುದನ್ನು ತಿಳಿಯಲಾರದಾಗಿದ್ದೇವೆ.

12276010a ಶಾಸ್ತ್ರಂ ಯದಿ ಭವೇದೇಕಂ ವ್ಯಕ್ತಂ ಶ್ರೇಯೋ ಭವೇತ್ತದಾ।
12276010c ಶಾಸ್ತ್ರೈಶ್ಚ ಬಹುಭಿರ್ಭೂಯಃ ಶ್ರೇಯೋ ಗುಹ್ಯಂ ಪ್ರವೇಶಿತಮ್।।

ಶಾಸ್ತ್ರವು ಒಂದೇ ಆಗಿದ್ದರೆ ಶ್ರೇಯಸ್ಸನ್ನು ಹೊಂದುವ ಉಪಾಯವೂ ಅದರಿಂದ ವ್ಯಕ್ತವಾಗುತ್ತಿತ್ತು. ಶಾಸ್ತ್ರಗಳು ಅನೇಕವಾಗಿರುವುದರಿಂದ ಶ್ರೇಯಸ್ಸಿನ ಮಾರ್ಗವು ರಹಸ್ಯವಾಗಿಯೇ ಉಳಿದುಬಿಟ್ಟಿದೆ.

12276011a ಏತಸ್ಮಾತ್ಕಾರಣಾಚ್ಚ್ರೇಯಃ ಕಲಿಲಂ ಪ್ರತಿಭಾತಿ ಮಾಮ್।
12276011c ಬ್ರವೀತು ಭಗವಾಂಸ್ತನ್ಮೇ ಉಪಸನ್ನೋಽಸ್ಮ್ಯಧೀಹಿ ಭೋಃ।।

ಭೋ! ಆದುದರಿಂದ ಶ್ರೇಯಸ್ಸಿನ ಮಾರ್ಗವು ಎಲ್ಲಿಯೋ ಬೆರೆತುಹೋಗಿದೆಯೆಂದು ನನಗನ್ನಿಸುತ್ತದೆ. ನೀನು ನನಗೆ ದಯಮಾಡಿ ಶ್ರೇಯಸ್ಸಾಧನೆಯ ಉಪಾಯವನ್ನು ಹೇಳು. ನಾನು ನಿನ್ನ ಶಿಷ್ಯನಾಗಿದ್ದೇನೆ.”

12276012 ನಾರದ ಉವಾಚ।
12276012a ಆಶ್ರಮಾಸ್ತಾತ ಚತ್ವಾರೋ ಯಥಾಸಂಕಲ್ಪಿತಾಃ ಪೃಥಕ್।
12276012c ತಾನ್ಸರ್ವಾನನುಪಶ್ಯ ತ್ವಂ ಸಮಾಶ್ರಿತ್ಯೈವ ಗಾಲವ।।

ನಾರದನು ಹೇಳಿದನು: “ಅಯ್ಯಾ ಗಾಲವ! ಆಶ್ರಮಗಳು ನಾಲ್ಕು ಮತ್ತು ಅವುಗಳು ಬೇರೆ ಬೇರೆಯೆಂದು ಸಂಕಲ್ಪಿಸಿದ್ದಾರೆ. ನೀನು ಜ್ಞಾನವನ್ನಾಶ್ರಯಿಸಿ ಆ ಎಲ್ಲ ಆಶ್ರಮಗಳನ್ನೂ ಯಥಾರ್ಥರೂಪದಲ್ಲಿ ಪರಿಶೀಲಿಸು.

12276013a ತೇಷಾಂ ತೇಷಾಂ ತಥಾ ಹಿ ತ್ವಮಾಶ್ರಮಾಣಾಂ ತತಸ್ತತಃ।
12276013c ನಾನಾರೂಪಗುಣೋದ್ದೇಶಂ ಪಶ್ಯ ವಿಪ್ರಸ್ಥಿತಂ ಪೃಥಕ್।
12276013e ನಯಂತಿ ಚೈವ ತೇ ಸಮ್ಯಗಭಿಪ್ರೇತಮಸಂಶಯಮ್।।

ಆಯಾ ಆಶ್ರಮಗಳಿಗೆ ಗುಣಯುಕ್ತವಾದ ಯಾವ ಧರ್ಮಗಳನ್ನು ಹೇಳಿದ್ದಾರೋ ಅವೆಲ್ಲಕ್ಕೂ ಪ್ರತ್ಯೇಕ ಪ್ರತ್ಯೇಕ ಅಸ್ತಿತ್ವವಿದೆ. ಈ ವಿಷಯವನ್ನು ನೀನು ಮನಗಾಣು. ಸಾಧಾರಣವಾಗಿ ಆಶ್ರಮಧರ್ಮಗಳಲ್ಲಿರುವ ನಿಜತತ್ತ್ವವನ್ನು ತಿಳಿದುಕೊಂಡಿರುವುದಿಲ್ಲ.

12276014a ಋಜು ಪಶ್ಯಂಸ್ತಥಾ4 ಸಮ್ಯಗಾಶ್ರಮಾಣಾಂ ಪರಾಂ ಗತಿಮ್।
12276014c ಯತ್ತು ನಿಃಶ್ರೇಯಸಂ ಸಮ್ಯಕ್ತಚ್ಚೈವಾಸಂಶಯಾತ್ಮಕಮ್।।

ಆದರೆ ತತ್ತ್ವಜ್ಞರು ಆಶ್ರಮಧರ್ಮಗಳ ಪರಮತತ್ತ್ವವನ್ನು ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಶ್ರೇಯಸ್ಕರವಾದುದು ಯಾವುದೋ ಅದು ಯಾವಾಗಲೂ ಸಂಶಯರಹಿತವಾಗಿಯೇ ಇರುತ್ತದೆ.

12276015a ಅನುಗ್ರಹಂ ಚ ಮಿತ್ರಾಣಾಮಮಿತ್ರಾಣಾಂ ಚ ನಿಗ್ರಹಮ್।
12276015c ಸಂಗ್ರಹಂ ಚ ತ್ರಿವರ್ಗಸ್ಯ ಶ್ರೇಯ ಆಹುರ್ಮನೀಷಿಣಃ।।

ಮಿತ್ರರಿಗೆ ಅನುಗ್ರಹವನ್ನು ತೋರುವುದು, ಶತ್ರುಗಳನ್ನು ನಿಗ್ರಹಿಸುವುದು, ಧರ್ಮ-ಅರ್ಥ-ಕಾಮಗಳನ್ನು ಸಂಗ್ರಹಿಸುವುದು – ಇವು ಶ್ರೇಯಸ್ಕರವೆಂದು ಮನೀಷಿಣರು ಹೇಳುತ್ತಾರೆ.

12276016a ನಿವೃತ್ತಿಃ ಕರ್ಮಣಃ ಪಾಪಾತ್ಸತತಂ ಪುಣ್ಯಶೀಲತಾ।
12276016c ಸದ್ಭಿಶ್ಚ ಸಮುದಾಚಾರಃ ಶ್ರೇಯ ಏತದಸಂಶಯಮ್।।

ಪಾಪಕರ್ಮಗಳಿಂದ ನಿವೃತ್ತಿಹೊಂದುವುದು, ಸತತವೂ ಪುಣ್ಯಶೀಲನಾಗಿರುವುದು, ಸತ್ಪುರುಷರ ಸಹವಾಸದಲ್ಲಿರುವುದು ಮತ್ತು ಸದಾಚಾರಗಳನ್ನು ಪಾಲಿಸುವುದು – ಇವು ನಿಸ್ಸಂಶಯವಾಗಿಯೂ ಶ್ರೇಯವಾದವು.

12276017a ಮಾರ್ದವಂ ಸರ್ವಭೂತೇಷು ವ್ಯವಹಾರೇಷು ಚಾರ್ಜವಮ್।
12276017c ವಾಕ್ಚೈವ ಮಧುರಾ ಪ್ರೋಕ್ತಾ ಶ್ರೇಯ ಏತದಸಂಶಯಮ್।।

ಸರ್ವಭೂತಗಳಲ್ಲಿ ಮೃದುತ್ವ, ವ್ಯವಹಾರಗಳಲ್ಲಿ ಸರಳತೆ, ಮಧುರ ಮಾತುಗಳನ್ನಾಡುವುದು – ಇವೆಲ್ಲವೂ ಶ್ರೇಯಸ್ಕರವೆನ್ನುವುದರಲ್ಲಿ ಸಂಶಯವೇ ಇಲ್ಲ.

12276018a ದೇವತಾಭ್ಯಃ ಪಿತೃಭ್ಯಶ್ಚ ಸಂವಿಭಾಗೋಽತಿಥಿಷ್ವಪಿ।
12276018c ಅಸಂತ್ಯಾಗಶ್ಚ ಭೃತ್ಯಾನಾಂ ಶ್ರೇಯ ಏತದಸಂಶಯಮ್।।

ದೇವತೆಗಳಿಗೆ, ಪಿತೃಗಳಿಗೆ ಮತ್ತು ಅತಿಥಿಗಳಿಗೆ ಸಲ್ಲಬೇಕಾದುದನ್ನು ನೀಡುವುದು, ಭೃತ್ಯರನ್ನು ತ್ಯಜಿಸದೇ ಇರುವುದು – ಇವು ಶ್ರೇಯಸ್ಕರವಾದವುಗಳು ಎನ್ನುವುದರಲ್ಲಿ ಸಂಶಯವೇ ಇಲ್ಲ.

12276019a ಸತ್ಯಸ್ಯ ವಚನಂ ಶ್ರೇಯಃ ಸತ್ಯಜ್ಞಾನಂ ತು ದುಷ್ಕರಮ್।
12276019c ಯದ್ಭೂತಹಿತಮತ್ಯಂತಮೇತತ್ಸತ್ಯಂ ಬ್ರವೀಮ್ಯಹಮ್।।

ಸತ್ಯವಚನವು ಶ್ರೇಯಸ್ಕರವು. ಆದರೆ ಸತ್ಯವನ್ನು ತಿಳಿಯುವುದು ದುಷ್ಕರವು. ಪ್ರಾಣಿಗಳಿಗೆ ಅತ್ಯಂತ ಹಿತವಾದುದು ಯಾವುದೋ ಅದೇ ಸತ್ಯವೆಂದು ನಾನು ಹೇಳುತ್ತೇನೆ.

12276020a ಅಹಂಕಾರಸ್ಯ ಚ ತ್ಯಾಗಃ ಪ್ರಣಯಸ್ಯ5 ಚ ನಿಗ್ರಹಃ।
12276020c ಸಂತೋಷಶ್ಚೈಕಚರ್ಯಾ ಚ ಕೂಟಸ್ಥಂ ಶ್ರೇಯ ಉಚ್ಯತೇ।।

ಅಹಂಕಾರದ ತ್ಯಾಗ, ಇಚ್ಛೆ-ಅನುರಾಗಗಳ ನಿಗ್ರಹ, ಸಂತೋಷ ಮತ್ತು ಏಕಾಂತವಾಸ – ಇವು ನಿಶ್ಚಿತ ಶ್ರೇಯಕಾರಕಗಳೆಂದು ಹೇಳುತ್ತಾರೆ.

12276021a ಧರ್ಮೇಣ ವೇದಾಧ್ಯಯನಂ ವೇದಾಂಗಾನಾಂ ತಥೈವ ಚ।
12276021c ವಿದ್ಯಾರ್ಥಾನಾಂ6 ಚ ಜಿಜ್ಞಾಸಾ ಶ್ರೇಯ ಏತದಸಂಶಯಮ್।।

ಧರ್ಮಪೂರ್ವಕವಾಗಿ ವೇದ-ವೇದಾಂಗಗಳ ಅಧ್ಯಯನ, ವಿದ್ಯೆಗಾಗಿ ಜಿಜ್ಞಾಸೆ – ಇವು ನಿಃಸಂಶಯವಾಗಿಯೂ ಶ್ರೇಯಸ್ಕರವಾದವು.

12276022a ಶಬ್ದರೂಪರಸಸ್ಪರ್ಶಾನ್ಸಹ ಗಂಧೇನ ಕೇವಲಾನ್।
12276022c ನಾತ್ಯರ್ಥಮುಪಸೇವೇತ ಶ್ರೇಯಸೋಽರ್ಥೀ ಪರಂತಪ।।

ಪರಂತಪ! ಶ್ರೇಯಸ್ಸನ್ನು ಬಯಸುವವನು ಕೇವಲ ಶಬ್ದ-ರೂಪ-ರಸ-ಸ್ಪರ್ಶ-ಗಂಧಗಳನ್ನು ಮಿತಿಮೀರಿ ಸೇವಿಸಬಾರದು.

12276023a ನಕ್ತಂಚರ್ಯಾ ದಿವಾಸ್ವಪ್ನಮಾಲಸ್ಯಂ ಪೈಶುನಂ ಮದಮ್।
12276023c ಅತಿಯೋಗಮಯೋಗಂ ಚ ಶ್ರೇಯಸೋಽರ್ಥೀ ಪರಿತ್ಯಜೇತ್।।

ಶ್ರೇಯಸ್ಸನ್ನು ಬಯಸುವವನು ರಾತ್ರಿ ಸಂಚರಿಸುವುದನ್ನು, ಹಗಲಿನಲ್ಲಿ ನಿದ್ದೆಮಾಡುವುದನ್ನು, ಆಲಸ್ಯ, ಚಾಡಿಕೋರತನ, ಮದ, ಅತಿಯೋಗ ಮತ್ತು ಅಯೋಗ ಇವುಗಳನ್ನು ಪರಿತ್ಯಜಿಸಬೇಕು.

12276024a ಕರ್ಮೋತ್ಕರ್ಷಂ7 ನ ಮಾರ್ಗೇತ ಪರೇಷಾಂ ಪರಿನಿಂದಯಾ।
12276024c ಸ್ವಗುಣೈರೇವ ಮಾರ್ಗೇತ ವಿಪ್ರಕರ್ಷಂ ಪೃಥಗ್ಜನಾತ್।।

ಪರರನ್ನು ನಿಂದಿಸಿ ತನ್ನ ಶ್ರೇಷ್ಠತೆಯನ್ನು ಊರ್ಜಿತ ಗೊಳಿಸಿಕೊಳ್ಳಬಾರದು. ಇತರರಿಗಿಂತ ತನ್ನಲ್ಲಿರುವ ಉತ್ಕರ್ಷತೆಯನ್ನು ಸ್ವಗುಣಗಳಿಂದಲೇ ತೋರಿಸಿಕೊಡಬೇಕು.

12276025a ನಿರ್ಗುಣಾಸ್ತ್ವೇವ ಭೂಯಿಷ್ಠಮಾತ್ಮಸಂಭಾವಿನೋ ನರಾಃ।
12276025c ದೋಷೈರನ್ಯಾನ್ಗುಣವತಃ ಕ್ಷಿಪಂತ್ಯಾತ್ಮಗುಣಕ್ಷಯಾತ್।।

ನಿರ್ಗುಣಿಗಳೇ ಹೆಚ್ಚಾಗಿ ತಮ್ಮನ್ನು ಸಂಭಾವಿತರೆಂದು ಪ್ರಶಂಸೆಮಾಡಿಕೊಳ್ಳುತ್ತಾರೆ ಮತ್ತು ಅನ್ಯ ಗುಣವಂತರನ್ನು ದೋಷಾರೋಪಣೆಗಳಿಂದ ಕೆಳಕ್ಕೆ ತಳ್ಳುತ್ತಾರೆ.

12276026a ಅನೂಚ್ಯಮಾನಾಶ್ಚ ಪುನಸ್ತೇ ಮನ್ಯಂತೇ ಮಹಾಜನಾತ್।
12276026c ಗುಣವತ್ತರಮಾತ್ಮಾನಂ ಸ್ವೇನ ಮಾನೇನ ದರ್ಪಿತಾಃ।।

ಮಹಾಜನರು ತಮ್ಮನ್ನು ನಿಂದಿಸದೇ ಇರುವುದರಿಂದ ಸ್ವಾಭಿಮಾನದಿಂದ ದರ್ಪಿತರಾದ ಗುಣಹೀನರು ಮಹಾಜನರಿಗಿಂತಲೂ ತಾವು ಅಧಿಕರೆಂದು ಭಾವಿಸುತ್ತಾರೆ.

12276027a ಅಬ್ರುವನ್ಕಸ್ಯ ಚಿನ್ನಿಂದಾಮಾತ್ಮಪೂಜಾಮವರ್ಣಯನ್।
12276027c ವಿಪಶ್ಚಿದ್ಗುಣಸಂಪನ್ನಃ ಪ್ರಾಪ್ನೋತ್ಯೇವ ಮಹದ್ಯಶಃ।।

ಆದರೆ ಯಾರ ನಿಂದೆಯನ್ನೂ ಮಾಡದೇ ಆತ್ಮಪ್ರಶಂಸೆಯನ್ನೂ ಮಾಡಿಕೊಳ್ಳದೇ ಉತ್ತಮಗುಣಸಂಪನ್ನನಾಗಿರುವ ವಿದ್ವಾಂಸನು ಮಹಾ ಯಶಸ್ಸನ್ನು ಹೊಂದಿಯೇ ಹೊಂದುತ್ತಾನೆ.

12276028a ಅಬ್ರುವನ್ವಾತಿ ಸುರಭಿರ್ಗಂಧಃ ಸುಮನಸಾಂ ಶುಚಿಃ।
12276028c ತಥೈವಾವ್ಯಾಹರನ್ ಭಾತಿ ವಿಮಲೋ ಭಾನುರಂಬರೇ।।

ಪವಿತ್ರವಾದ ಮತ್ತು ಸುಮನೋಹರ ಹೂವುಗಳು ಯಾವ ಮಾತನ್ನೂ ಆಡದೇ ಸುಂಗಧವನ್ನು ಬೀರುತ್ತವೆ. ನಿರ್ಮಲ ಭಾನುವೂ ಹಾಗೆಯೇ ಅಂಬರದಲ್ಲಿದ್ದುಕೊಂಡು ಪ್ರಕಾಶವನ್ನೀಯುತ್ತಾನೆ.

12276029a ಏವಮಾದೀನಿ ಚಾನ್ಯಾನಿ ಪರಿತ್ಯಕ್ತಾನಿ ಮೇಧಯಾ।
12276029c ಜ್ವಲಂತಿ ಯಶಸಾ ಲೋಕೇ ಯಾನಿ ನ ವ್ಯಾಹರಂತಿ ಚ।।

ಇವೇ ಮೊದಲಾದ ಬುದ್ಧಿಯಿಲ್ಲದ ಅನೇಕ ವಸ್ತುಗಳೂ ಲೋಕದಲ್ಲಿ ಯಶಸ್ಸಿನಿಂದ ಪ್ರಜ್ವಲಿಸುತ್ತವೆ. ಆದರೆ ಅವುಗಳು ತಮ್ಮಲ್ಲಿರುವ ಗುಣಗಳ ವಿಷಯವಾಗಿ ಏನನ್ನೂ ಹೇಳಿಕೊಳ್ಳುವುದಿಲ್ಲ.

12276030a ನ ಲೋಕೇ ದೀಪ್ಯತೇ ಮೂರ್ಖಃ ಕೇವಲಾತ್ಮಪ್ರಶಂಸಯಾ।
12276030c ಅಪಿ ಚಾಪಿಹಿತಃ ಶ್ವಭ್ರೇ ಕೃತವಿದ್ಯಃ ಪ್ರಕಾಶತೇ।।

ಕೇವಲ ಆತ್ಮಪ್ರಶಂಸೆಯಿಂದ ಮೂರ್ಖನು ಲೋಕದಲ್ಲಿ ಬೆಳಗುವುದಿಲ್ಲ. ಅದೇ ವಿದ್ವಾಂಸನು ಗುಹೆಯಲ್ಲಿ ಅಡಗಿಕೊಂಡಿದ್ದರೂ ಲೋಕವಿಖ್ಯಾತನಾಗುತ್ತಾನೆ.

12276031a ಅಸನ್ನುಚ್ಚೈರಪಿ ಪ್ರೋಕ್ತಃ ಶಬ್ದಃ ಸಮುಪಶಾಮ್ಯತಿ।
12276031c ದೀಪ್ಯತೇ ತ್ವೇವ ಲೋಕೇಷು ಶನೈರಪಿ ಸುಭಾಷಿತಮ್।।

ಕೆಟ್ಟ ಮಾತನ್ನು ಎಷ್ಟೇ ಗಟ್ಟಿಯಾಗಿ ಹೇಳಿದರೂ ಅದು ಕರಗಿಹೋಗುತ್ತದೆ. ಒಳ್ಳೆಯ ಮಾತನ್ನು ಮೆಲ್ಲಗೆ ಹೇಳಿದರೂ ಅದು ಲೋಕಗಳಲ್ಲಿ ಬೆಳಗುತ್ತದೆ.

12276032a ಮೂಢಾನಾಮವಲಿಪ್ತಾನಾಮಸಾರಂ ಭಾಷಿತಂ ಬಹು।
12276032c ದರ್ಶಯತ್ಯಂತರಾತ್ಮಾನಂ ದಿವಾ ರೂಪಮಿವಾಂಶುಮಾನ್8।।

ಸೂರ್ಯನು ಸೂರ್ಯಕಾಂತ ಮಣಿಯ ಮೂಲಕ ತನ್ನ ದಿವ್ಯ ರೂಪವನ್ನು ಹೇಗೆ ಪ್ರಕಟಪಡಿಸುತ್ತಾನೋ ಹಾಗೆ ಗರ್ವಿಷ್ಠ ಮೂಢರಾಡುವ ಅನೇಕ ಮಾತುಗಳು ಅವರ ಅಂತಃಕರಣವನ್ನು ಹೊರಪಡಿಸುತ್ತವೆ.

12276033a ಏತಸ್ಮಾತ್ಕಾರಣಾತ್ಪ್ರಜ್ಞಾಂ ಮೃಗಯಂತೇ ಪೃಥಗ್ವಿಧಾಮ್।
12276033c ಪ್ರಜ್ಞಾಲಾಭೋ ಹಿ ಭೂತಾನಾಮುತ್ತಮಃ ಪ್ರತಿಭಾತಿ ಮಾಮ್।।

ಈ ಎಲ್ಲ ಕಾರಣಗಳಿಂದಲೇ ಬೇರೆ ಬೇರೆ ವಿಧಗಳಲ್ಲಿ ಪ್ರಜ್ಞೆಯನ್ನು ಹುಡುಕುತ್ತಿರುತ್ತಾರೆ. ಪ್ರಜ್ಞಾಲಾಭವೇ ಭೂತಗಳಿಗೆ ಉತ್ತಮವೆಂದು ನನಗನ್ನಿಸುತ್ತದೆ.

12276034a ನಾಪೃಷ್ಟಃ ಕಸ್ಯ ಚಿದ್ಬ್ರೂಯಾನ್ನ ಚಾನ್ಯಾಯೇನ ಪೃಚ್ಚತಃ।
12276034c ಜ್ಞಾನವಾನಪಿ ಮೇಧಾವೀ ಜಡವಲ್ಲೋಕಮಾಚರೇತ್।।

ಮೇಧಾವಿಯು ಜ್ಞಾನವಂತನಾಗಿದ್ದರೂ ಪ್ರಶ್ನೆಮಾಡದ ಯಾರಿಗೂ ಉಪದೇಶಿಸಬಾರದು. ನ್ಯಾಯ ಸಮ್ಮತವಲ್ಲದ ರೀತಿಯಲ್ಲಿ ಅಥವಾ ಅಪಹಾಸ್ಯಕ್ಕಾಗಿ ಪ್ರಶ್ನಿಸಿದರೂ ಜಡನಂತೆ ಸುಮ್ಮನೆ ಕುಳಿತುಕೊಳ್ಳಬೇಕು.

12276035a ತತೋ ವಾಸಂ ಪರೀಕ್ಷೇತ ಧರ್ಮನಿತ್ಯೇಷು ಸಾಧುಷು।
12276035c ಮನುಷ್ಯೇಷು ವದಾನ್ಯೇಷು ಸ್ವಧರ್ಮನಿರತೇಷು ಚ।।

ಮನುಷ್ಯನು ಯಾವಾಗಲೂ ಧರ್ಮನಿತ್ಯ ಸಾಧುಗಳ ಮಧ್ಯೆ, ಸ್ವಧರ್ಮ ನಿರತರಾದ ಉದಾರಿಗಳ ಮಧ್ಯೆ ವಾಸಿಸಲು ಬಯಸಬೇಕು.

12276036a ಚತುರ್ಣಾಂ ಯತ್ರ ವರ್ಣಾನಾಂ ಧರ್ಮವ್ಯತಿಕರೋ ಭವೇತ್।
12276036c ನ ತತ್ರ ವಾಸಂ ಕುರ್ವೀತ ಶ್ರೇಯೋರ್ಥೀ ವೈ ಕಥಂ ಚನ।।

ನಾಲ್ಕು ವರ್ಣಗಳ ಧರ್ಮಗಳು ಸಂಕರವಾಗುವಲ್ಲಿ ಶ್ರೇಯೋರ್ಥಿಯು ಎಂದೂ ವಾಸಿಸಬಾರದು.

12276037a ನಿರಾರಂಭೋಽಪ್ಯಯಮಿಹ ಯಥಾಲಬ್ಧೋಪಜೀವನಃ।
12276037c ಪುಣ್ಯಂ ಪುಣ್ಯೇಷು ವಿಮಲಂ ಪಾಪಂ ಪಾಪೇಷು ಚಾಪ್ನುಯಾತ್।।

ಈ ಲೋಕದಲ್ಲಿ ಯಾವುದೇ ಕಾಮ್ಯಕರ್ಮವನ್ನು ಆರಂಭಿಸದ ಮತ್ತು ದೊರಕಿದ್ದುದರಲ್ಲಿಯೇ ಜೀವನವನ್ನು ನಿರ್ವಹಿಸುವವನೂ ಕೂಡ ಪುಣ್ಯಪುರುಷರ ಜೊತೆ ವಾಸಿಸುತ್ತಿದ್ದರೆ ಪುಣ್ಯವನ್ನೂ ಪಾಪಿಷ್ಠರ ಜೊತೆ ವಾಸಿಸುತ್ತಿದ್ದರೆ ಪಾಪವನ್ನೂ ಹೊಂದುತ್ತಾನೆ.

12276038a ಅಪಾಮಗ್ನೇಸ್ತಥೇಂದೋಶ್ಚ ಸ್ಪರ್ಶಂ ವೇದಯತೇ ಯಥಾ।
12276038c ತಥಾ ಪಶ್ಯಾಮಹೇ ಸ್ಪರ್ಶಮುಭಯೋಃ ಪಾಪಪುಣ್ಯಯೋಃ।।

ನೀರು, ಅಗ್ನಿ ಮತ್ತು ಚಂದ್ರರ ಸಂಸರ್ಗದಿಂದ ಹೇಗೆ ಶೀತ, ಉಷ್ಣ ಮತ್ತು ಸುಖಸ್ಪರ್ಶಗಳ ಅನುಭವವಾಗುತ್ತವೆಯೋ ಹಾಗೆ ಪುಣ್ಯವಂತರ ಸಂಸರ್ಗದಿಂದ ಪುಣ್ಯವೂ ಪಾಪಿಷ್ಠರ ಸಂಸರ್ಗದಿಂದ ಪಾಪವೂ ಉಂಟಾಗುವುದನ್ನು ನೋಡುತ್ತೇವೆ.

12276039a ಅಪಶ್ಯಂತೋಽನ್ನವಿಷಯಂ ಭುಂಜತೇ ವಿಘಸಾಶಿನಃ।
12276039c ಭುಂಜಾನಂ ಚಾನ್ನವಿಷಯಾನ್ವಿಷಯಂ ವಿದ್ಧಿ ಕರ್ಮಣಾಮ್।।

ಯಜ್ಞಶೇಷವನ್ನು ಭುಂಜಿಸುವವರು ಅನ್ನವನ್ನು ಇಂದ್ರಿಯವಿಷಯವನ್ನಾಗಿ ಕಾಣದೇ ಪ್ರಸಾದಬುದ್ಧಿಯಿಂದ ನಿರ್ಲಿಪ್ತರಾಗಿ ಸೇವಿಸುತ್ತಾರೆ. ಆದರೆ ಅನ್ನವನ್ನು ಇಂದ್ರಿಯವಿಷಯವನ್ನಾಗಿ ಸೇವಿಸುವವರು ಕರ್ಮಗಳಿಗೆ ಗುರಿಯಾಗುತ್ತಾರೆಂದು ತಿಳಿ.

12276040a ಯತ್ರಾಗಮಯಮಾನಾನಾಮಸತ್ಕಾರೇಣ ಪೃಚ್ಚತಾಮ್।
12276040c ಪ್ರಬ್ರೂಯಾದ್ಬ್ರಹ್ಮಣೋ ಧರ್ಮಂ ತ್ಯಜೇತ್ತಂ ದೇಶಮಾತ್ಮವಾನ್।।

ಅನಾದರ ಮತ್ತು ಅನ್ಯಾಯಪೂರ್ವಕವಾಗಿ ಪ್ರಶ್ನಿಸುತ್ತಿರುವವರಿಗೆ ಬ್ರಾಹ್ಮಣನು ಧರ್ಮವನ್ನು ಉಪದೇಶಿಸುತ್ತಿದ್ದರೆ ಬುದ್ಧಿವಂತನಾದವನು ಒಡನೆಯೇ ಆ ಸ್ಥಳವನ್ನು ತ್ಯಜಿಸಬೇಕು.

12276041a ಶಿಷ್ಯೋಪಾಧ್ಯಾಯಿಕಾ ವೃತ್ತಿರ್ಯತ್ರ ಸ್ಯಾತ್ಸುಸಮಾಹಿತಾ।
12276041c ಯಥಾವಚ್ಚಾಸ್ತ್ರಸಂಪನ್ನಾ ಕಸ್ತಂ ದೇಶಂ ಪರಿತ್ಯಜೇತ್।।

ಗುರುಶಿಷ್ಯರ ವ್ಯವಹಾರವು ಸುವ್ಯವಸ್ಥಿತವಾಗಿರುವ ಮತ್ತು ಶಾಸ್ತ್ರಸಮ್ಮತವಾಗಿರುವ ಸ್ಥಳವನ್ನು ಯಾರು ತಾನೇ ಪರಿತ್ಯಜಿಸುತ್ತಾರೆ?

12276042a ಆಕಾಶಸ್ಥಾ ಧ್ರುವಂ ಯತ್ರ ದೋಷಂ ಬ್ರೂಯುರ್ವಿಪಶ್ಚಿತಾಮ್।
12276042c ಆತ್ಮಪೂಜಾಭಿಕಾಮಾ ವೈ ಕೋ ವಸೇತ್ತತ್ರ ಪಂಡಿತಃ।।

ಯಾವ ಆಧಾರವೂ ಇಲ್ಲದೇ ವಿದ್ವಾಂಸರ ಮೇಲೆ ನಿಶ್ಚಿತ ರೂಪದಲ್ಲಿ ದೋಷಾರೋಪಗಳನ್ನು ಮಾಡುವ ದೇಶದಲ್ಲಿ ಆತ್ಮಗೌರವವನ್ನುಳಿಸಿಕೊಂಡಿರಲು ಇಚ್ಛಿಸುವ ಯಾವ ಪಂಡಿತನು ತಾನೇ ವಾಸಮಾಡಿಕೊಂಡಿರುತ್ತಾನೆ?

12276043a ಯತ್ರ ಸಂಲೋಡಿತಾ ಲುಬ್ಧೈಃ ಪ್ರಾಯಶೋ ಧರ್ಮಸೇತವಃ।
12276043c ಪ್ರದೀಪ್ತಮಿವ ಶೈಲಾಂತಂ ಕಸ್ತಂ ದೇಶಂ ನ ಸಂತ್ಯಜೇತ್।।

ಧರ್ಮಮಾರ್ಗವನ್ನು ಬಯಸುವ ಯಾರುತಾನೇ - ಲುಬ್ಧರು ಪ್ರಾಯಶಃ ಧರ್ಮದ ಎಲ್ಲ ಕಟ್ಟುಪಾಡುಗಳನ್ನೂ ಮುರಿದಿರುವ ದೇಶವನ್ನು – ಸೆರಗಿಗೆ ಬೆಂಕಿ ತಾಗಿದೊಡನೇ ಉಟ್ಟಿರುವ ವಸ್ತ್ರವನ್ನೇ ಕಿತ್ತು ಬಿಸಾಡುವಂತೆ –ಪರಿತ್ಯಜಿಸದೇ ಇರುತ್ತಾರೆ?

12276044a ಯತ್ರ ಧರ್ಮಮನಾಶಂಕಾಶ್ಚರೇಯುರ್ವೀತಮತ್ಸರಾಃ।
12276044c ಚರೇತ್ತತ್ರ ವಸೇಚ್ಚೈವ ಪುಣ್ಯಶೀಲೇಷು ಸಾಧುಷು।।

ಆದರೆ ಶಂಕೆಯಿಲ್ಲದೇ ಮತ್ಸರರಹಿತರಾಗಿ ಧರ್ಮವನ್ನು ಪಾಲಿಸುತ್ತಿರುವ ಪುಣ್ಯಶೀಲ ಸಾಧುಜನರ ಸಮೀಪ ವಾಸಿಸಬೇಕು.

12276045a ಧರ್ಮಮರ್ಥನಿಮಿತ್ತಂ ತು ಚರೇಯುರ್ಯತ್ರ ಮಾನವಾಃ।
12276045c ನ ತಾನನುವಸೇಜ್ಜಾತು ತೇ ಹಿ ಪಾಪಕೃತೋ ಜನಾಃ।।

ಹಣದ ಸಲುವಾಗಿ ಧರ್ಮಾಚರಣೆಯನ್ನು ಮಾಡುವವರು ಇರುವಲ್ಲಿ ಯಾವಾಗಲೂ ಯಾವುದೇ ಕಾರಣಕ್ಕೂ ವಾಸಿಸಬಾರದು. ಏಕೆಂದರೆ ಅಂಥವರು ಪಾಪಕೃತಜನರಾಗಿರುತ್ತಾರೆ.

12276046a ಕರ್ಮಣಾ ಯತ್ರ ಪಾಪೇನ ವರ್ತಂತೇ ಜೀವಿತೇಸ್ಪವಃ।
12276046c ವ್ಯವಧಾವೇತ್ತತಸ್ತೂರ್ಣಂ ಸಸರ್ಪಾಚ್ಚರಣಾದಿವ।।

ಪಾಪಕರ್ಮದಿಂದಲೇ ಜನರು ಜೀವನ ನಡೆಸುತ್ತಿರುವ ಸ್ಥಳವನ್ನು – ಹಾವು ಹೊಕ್ಕಿರುವ ಮನೆಯನ್ನು ಬಿಟ್ಟೋಡುವಂತೆ – ಬೇಗ ದೂರ ಹೋಗಿಬಿಡಬೇಕು.

12276047a ಯೇನ ಖಟ್ವಾಂ ಸಮಾರೂಢಃ ಕರ್ಮಣಾನುಶಯೀ ಭವೇತ್।
12276047c ಆದಿತಸ್ತನ್ನ ಕರ್ತವ್ಯಮಿಚ್ಚತಾ ಭವಮಾತ್ಮನಃ।।

ತನ್ನ ಕಲ್ಯಾಣವನ್ನು ಬಯಸುವವನು - ಯಾವ ಪಾಪಕರ್ಮದ ಫಲದಿಂದ ಮಂಚದ ಮೇಲೆ ಮಲಗಿ ದುಃಖ ಪಡಬೇಕಾಗುವುದೋ ಅಂಥಹ ಪಾಪಕರ್ಮವನ್ನು - ಮೊದಲಿನಿಂದಲೂ ಮಾಡಬಾರದು.

12276048a ಯತ್ರ ರಾಜಾ ಚ ರಾಜ್ಞಶ್ಚ ಪುರುಷಾಃ ಪ್ರತ್ಯನಂತರಾಃ।
12276048c ಕುಟುಂಬಿನಾಮಗ್ರಭುಜಸ್ತ್ಯಜೇತ್ತದ್ರಾಷ್ಟ್ರಮಾತ್ಮವಾನ್।।

ಎಲ್ಲಿ ರಾಜ ಮತ್ತು ರಾಜಪುರುಷರು - ಕುಟುಂಬದವರು ಮತ್ತು ಬ್ರಾಹ್ಮಣರು ಊಟ ಮಾಡುವ ಮೊದಲೇ - ಊಟಮಾಡುತ್ತಾರೋ ಆ ರಾಜ್ಯವನ್ನು ಬುದ್ಧಿವಂತನಾದವನು ಅವಶ್ಯವಾಗಿ ತ್ಯಜಿಸಬೇಕು.

12276049a ಶ್ರೋತ್ರಿಯಾಸ್ತ್ವಗ್ರಭೋಕ್ತಾರೋ ಧರ್ಮನಿತ್ಯಾಃ ಸನಾತನಾಃ।
12276049c ಯಾಜನಾಧ್ಯಾಪನೇ ಯುಕ್ತಾ ಯತ್ರ ತದ್ರಾಷ್ಟ್ರಮಾವಸೇತ್।।

ಎಲ್ಲಿ ಯಾಜನ-ಅಧ್ಯಾಪನಗಳಲ್ಲಿ ತೊಡಗಿರುವ ಧರ್ಮನಿತ್ಯ ಸನಾತನ ಶ್ರೋತ್ರೀಯರು ಮೊದಲು ಊಟಮಾಡುತ್ತಾರೋ ಆ ರಾಷ್ಟ್ರದಲ್ಲಿ ಅವಶ್ಯವಾಗಿ ವಾಸಿಸಬೇಕು.

12276050a ಸ್ವಾಹಾಸ್ವಧಾವಷಟ್ಕಾರಾ ಯತ್ರ ಸಮ್ಯಗನುಷ್ಠಿತಾಃ।
12276050c ಅಜಸ್ರಂ ಚೈವ ವರ್ತಂತೇ ವಸೇತ್ತತ್ರಾವಿಚಾರಯನ್।।

ಎಲ್ಲಿ ಸ್ವಾಹಾಕಾರ (ಅಗ್ನಿಹೋತ್ರ), ಸ್ವಧಾಕಾರ (ಶ್ರಾದ್ಧಕರ್ಮ), ಮತ್ತು ವಷಟ್ಕಾರ (ಯಜ್ಞಕರ್ಮ)ಗಳು ಚೆನ್ನಾಗಿ ಅನುಷ್ಠಾನಗೊಳ್ಳುತ್ತವೆಯೋ ಮತ್ತು ನಿರಂತರವಾಗಿ ನಡೆಯುತ್ತವೆಯೋ ಆ ದೇಶದಲ್ಲಿ ಏನೂ ವಿಚಾರ ಮಾಡದೇ ವಾಸಿಸಬೇಕು.

12276051a ಅಶುಚೀನ್ಯತ್ರ ಪಶ್ಯೇತ ಬ್ರಾಹ್ಮಣಾನ್ವೃತ್ತಿಕರ್ಶಿತಾನ್।
12276051c ತ್ಯಜೇತ್ತದ್ರಾಷ್ಟ್ರಮಾಸನ್ನಮುಪಸೃಷ್ಟಮಿವಾಮಿಷಮ್।।

ಎಲ್ಲಿ ಬ್ರಾಹ್ಮಣರು ವೃತ್ತಿಯನ್ನು ಕಳೆದುಕೊಂಡು ಅಶುಚಿಯಾಗಿ ಕಂಡುಬರುತ್ತಾರೋ ಆ ರಾಷ್ಟ್ರವನ್ನು – ಅದು ಹತ್ತಿರದಲ್ಲೇ ಇದ್ದರೂ - ವಿಷವನ್ನು ತ್ಯಜಿಸುವಂತೆ ತ್ಯಜಿಸಬೇಕು.

12276052a ಪ್ರೀಯಮಾಣಾ ನರಾ ಯತ್ರ ಪ್ರಯಚ್ಚೇಯುರಯಾಚಿತಾಃ।
12276052c ಸ್ವಸ್ಥಚಿತ್ತೋ ವಸೇತ್ತತ್ರ ಕೃತಕೃತ್ಯ ಇವಾತ್ಮವಾನ್।।

ಎಲ್ಲಿ ಸ್ವಸ್ಥಚಿತ್ತ ಜನರು ಸತ್ಪುರುಷರನ್ನು ಪ್ರೀತಿಯಿಂದ ಕರೆದು ಅವರು ಯಾಚಿಸದೇ ಇದ್ದರೂ ಪುರಸ್ಕರಿಸಿ ನೀಡುತ್ತಾರೋ ಆ ದೇಶದಲ್ಲಿ ಜಿತೇಂದ್ರಿಯ ಸಾಧಕನು ಕೃತಕೃತ್ಯನಾಗಿ ವಾಸಿಸಬಹುದು.

12276053a ದಂಡೋ ಯತ್ರಾವಿನೀತೇಷು ಸತ್ಕಾರಶ್ಚ ಕೃತಾತ್ಮಸು।
12276053c ಚರೇತ್ತತ್ರ ವಸೇಚ್ಚೈವ ಪುಣ್ಯಶೀಲೇಷು ಸಾಧುಷು।।

ಎಲ್ಲಿ ಉದ್ಧತರಿಗೆ ಶಿಕ್ಷೆಯಾಗುತ್ತದೆಯೋ ಮತ್ತು ಕೃತಾತ್ಮರಿಗೆ ಸತ್ಕಾರವಾಗುತ್ತದೆಯೋ ಅಲ್ಲಿ ಪುಣ್ಯಶೀಲ ಸಾಧುಗಳ ಮಧ್ಯೆ ವಾಸಿಸಿ ಸಂಚರಿಸಬೇಕು.

12276054a ಉಪಸೃಷ್ಟೇಷ್ವದಾಂತೇಷು ದುರಾಚಾರೇಷ್ವಸಾಧುಷು।
12276054c ಅವಿನೀತೇಷು ಲುಬ್ಧೇಷು ಸುಮಹದ್ದಂಡಧಾರಣಮ್।।

ಜಿತೇಂದ್ರಿಯರ ಮೇಲೆ ಕೋಪಗೊಳ್ಳುವ, ಸಾಧುಜನರ ಮೇಲೆ ದುರಾಚಾರವನ್ನೆಸಗುವ, ಉದ್ಧತ ಲುಬ್ಧಜನರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು.

12276055a ಯತ್ರ ರಾಜಾ ಧರ್ಮನಿತ್ಯೋ ರಾಜ್ಯಂ ವೈ ಪರ್ಯುಪಾಸಿತಾ9
12276055c ಅಪಾಸ್ಯ ಕಾಮಾನ್ಕಾಮೇಶೋ ವಸೇತ್ತತ್ರಾವಿಚಾರಯನ್।।

ಎಲ್ಲಿ ರಾಜನು ಧರ್ಮನಿತ್ಯನಾಗಿದ್ದು ರಾಜ್ಯದ ಪರ್ಯುಪಾಸನೆಯನ್ನು ಮಾಡುತ್ತಾನೋ ಮತ್ತು ಸಮಸ್ತಕಾಮನೆಗಳಿಗೆ ಅಧಿಪತಿಯಾಗಿದ್ದೂ ವಿಷಯಭೋಗಗಳಿಂದ ವಿಮುಕ್ತನಾಗಿದ್ದಾನೋ ಅಲ್ಲಿ ಏನನ್ನೂ ವಿಚಾರಮಾಡದೇ ವಾಸಿಸಬೇಕು.

12276056a ತಥಾಶೀಲಾ10 ಹಿ ರಾಜಾನಃ ಸರ್ವಾನ್ವಿಷಯವಾಸಿನಃ।
12276056c ಶ್ರೇಯಸಾ ಯೋಜಯಂತ್ಯಾಶು ಶ್ರೇಯಸಿ ಪ್ರತ್ಯುಪಸ್ಥಿತೇ।।

ಏಕೆಂದರೆ ರಾಜನ ಶೀಲವು ಹೇಗಿರುತ್ತದೆಯೋ ರಾಷ್ಟ್ರದ ಸರ್ವನಿವಾಸಿಗಳ ಶೀಲವೂ ಹಾಗೆಯೇ ಇರುತ್ತದೆ. ಅಂತಹ ರಾಜನು ತಾನು ಮಾತ್ರ ಶ್ರೇಯಸ್ಸನ್ನು ಪಡೆಯದೇ ಪ್ರಜೆಗಳನ್ನೂ ಶ್ರೇಯಸ್ಸಿಗೆ ಭಾಗಿಗಳನ್ನಾಗಿ ಮಾಡುತ್ತಾನೆ.

12276057a ಪೃಚ್ಚತಸ್ತೇ ಮಯಾ ತಾತ ಶ್ರೇಯ ಏತದುದಾಹೃತಮ್।
12276057c ನ ಹಿ ಶಕ್ಯಂ ಪ್ರಧಾನೇನ ಶ್ರೇಯಃ ಸಂಖ್ಯಾತುಮಾತ್ಮನಃ।।

ಅಯ್ಯಾ! ನೀನು ಕೇಳಿದಂತೆ ಶ್ರೇಯವಾದುದನ್ನು ಉದಾಹರಿಸಿದ್ದೇನೆ. ಆತ್ಮದ ಶ್ರೇಯಸ್ಸಿಗೆ ಪ್ರಧಾನವಾದ ಎಲ್ಲವನ್ನೂ ವರ್ಣಿಸಲು ಶಕ್ಯವಿಲ್ಲ.

12276058a ಏವಂ ಪ್ರವರ್ತಮಾನಸ್ಯ ವೃತ್ತಿಂ ಪ್ರಣಿಹಿತಾತ್ಮನಃ।
12276058c ತಪಸೈವೇಹ ಬಹುಲಂ ಶ್ರೇಯೋ ವ್ಯಕ್ತಂ ಭವಿಷ್ಯತಿ।।

ಹೀಗೆ ನಡೆದುಕೊಂಡು ಪ್ರಾಣಿಗಳ ಹಿತದಲ್ಲಿಯೇ ಆಸಕ್ತನಾಗಿರುವವನಿಗೆ ಅದರಿಂದಲೇ ವಿಪುಲ ಶ್ರೇಯಸ್ಸು ಪ್ರತ್ಯಕ್ಷವಾಗಿ ಉಂಟಾಗುತ್ತದೆ.””

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶ್ರೇಯೋವಾಚಿಕೋ ನಾಮ ಷಟ್ಸಪ್ತತ್ಯಧಿಕದ್ವಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶ್ರೇಯೋವಾಚಿಕ ಎನ್ನುವ ಇನ್ನೂರಾಎಪ್ಪತ್ತಾರನೇ ಅಧ್ಯಾಯವು.

  1. ಶಾಸ್ತ್ರಾಣಾಂ (ಭಾರತ ದರ್ಶನ). ↩︎

  2. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಸ್ವಾಶ್ರಮಂ ಸಮನುಪ್ರಾಪ್ತಂ ನಾರದಂ ದೇವವರ್ಚಸಮ್। (ಗೀತಾ ಪ್ರೆಸ್). ↩︎

  3. ಸ್ಯಾತ್ಕಾರ್ಯಾಣಾಮವಿಶೇಷತಃ (ಭಾರತ ದರ್ಶನ). ↩︎

  4. ಅನ್ಯೇಽಪಶ್ಯಂಸ್ತಥಾ (ಭಾರತ ದರ್ಶನ). ↩︎

  5. ಪ್ರಮಾದಸ್ಯ (ಭಾರತ ದರ್ಶನ). ↩︎

  6. ಜ್ಞಾನಾರ್ಥಾನಾಂ (ಭಾರತ ದರ್ಶನ). ↩︎

  7. ಆತ್ಮೋತ್ಕರ್ಷಂ (ಭಾರತ ದರ್ಶನ). ↩︎

  8. ದರ್ಶಯತ್ಯಂತರಾತ್ಮಾನಮಗ್ನಿರೂಪಮಿವಾಂಶುಮಾನ್। (ಭಾರತ ದರ್ಶನ). ↩︎

  9. ರಾಜ್ಯಂ ಧರ್ಮೇಣ ಪಾಲಯೇತ್। (ಭಾರತ ದರ್ಶನ). ↩︎

  10. ಯಥಾಶೀಲಾ (ಭಾರತ ದರ್ಶನ). ↩︎