275: ಸಮಂಗನಾರದಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 275

ಸಾರ

ಸಮಂಗನು ನಾರದನಿಗೆ ತನ್ನ ಶೋಕರಹಿತ ಸ್ಥಿತಿಯನ್ನು ವರ್ಣಿಸಿದುದು (1-21).

12275001 ಯುಧಿಷ್ಠಿರ ಉವಾಚ।
12275001a ಶೋಕಾದ್ದುಃಖಾಚ್ಚ ಮೃತ್ಯೋಶ್ಚ ತ್ರಸ್ಯಂತಿ ಪ್ರಾಣಿನಃ ಸದಾ।
12275001c ಉಭಯಂ ಮೇ ಯಥಾ ನ ಸ್ಯಾತ್ತನ್ಮೇ ಬ್ರೂಹಿ ಪಿತಾಮಹ।।

ಯುಧಿಷ್ಠಿರನು ಹೇಳಿದನು: “ಪಿತಾಮಹ್! ಪ್ರಾಣಿಗಳು ಸದಾ ಶೋಕದುಃಖ ಮತ್ತು ಮೃತ್ಯುಗಳಿಗೆ ಭಯಪಡುತ್ತವೆ. ಇವೆರಡರ ಭಯವೂ ಇಲ್ಲವಂತಾಗಲು ಏನು ಮಾಡಬೇಕು ಎನ್ನುವುದನ್ನು ಹೇಳು.”

12275002 ಭೀಷ್ಮ ಉವಾಚ।
12275002a ಅತ್ರೈವೋದಾಹರಂತೀಮಮಿತಿಹಾಸಂ ಪುರಾತನಮ್।
12275002c ನಾರದಸ್ಯ ಚ ಸಂವಾದಂ ಸಮಂಗಸ್ಯ ಚ ಭಾರತ।।

ಭೀಷ್ಮನು ಹೇಳಿದನು: “ಭಾರತ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಸಮಂಗನೊಂದಿಗೆ ನಾರದನ ಸಂವಾದವನ್ನು ಉದಾಹರಿಸುತ್ತಾರೆ.

12275003 ನಾರದ ಉವಾಚ।
12275003a ಉರಸೇವ ಪ್ರಣಮಸೇ ಬಾಹುಭ್ಯಾಂ ತರಸೀವ ಚ।
12275003c ಸಂಪ್ರಹೃಷ್ಟಮನಾ ನಿತ್ಯಂ ವಿಶೋಕ ಇವ ಲಕ್ಷ್ಯಸೇ।।

ನಾರದನು ಹೇಳಿದನು: “ಇತರರು ತಲೆಬಾಗಿ ನಮಸ್ಕರಿಸಿದರೆ ನೀನು ದೀರ್ಘದಂಡನಾಗಿ ನಮಸ್ಕರಿಸುತ್ತೀಯೆ. ಯಾರ ಸಹಾಯವೂ ಇಲ್ಲದೇ ನಿನ್ನ ಬಾಹುಗಳಿಂದಲೇ ಭವಸಾಗರವನ್ನು ಈಜುತ್ತಿರುವಂತೆ ಕಾಣುತ್ತೀಯೆ. ನಿತ್ಯವೂ ಸಂಪ್ರಹೃಷ್ಟ ಮನಸ್ಕನಾಗಿರುವ ನೀನು ಶೋಕವೇ ಇಲ್ಲದವನಂತೆ ಕಾಣುತ್ತೀಯೆ.

12275004a ಉದ್ವೇಗಂ ನೇಹ ತೇ ಕಿಂ ಚಿತ್ಸುಸೂಕ್ಷ್ಮಮಪಿ ಲಕ್ಷಯೇ।
12275004c ನಿತ್ಯತೃಪ್ತ ಇವ ಸ್ವಸ್ಥೋ ಬಾಲವಚ್ಚ ವಿಚೇಷ್ಟಸೇ।।

ನಿನ್ನಲ್ಲಿ ಸೂಕ್ಷ್ಮವಾಗಿಯೂ ಯಾವ ಉದ್ವೇಗವೂ ಇಲ್ಲದಿರುವುದು ಕಾಣುತ್ತದೆ. ನಿತ್ಯತೃಪ್ತನಾಗಿ ಸ್ವಸ್ಥನಾಗಿರುವೆ. ಬಾಲಕನಂತೆ ವ್ಯವಹರಿಸುತ್ತಿದ್ದೀಯೆ.”

12275005 ಸಮಂಗ ಉವಾಚ।
12275005a ಭೂತಂ ಭವ್ಯಂ ಭವಿಷ್ಯಚ್ಚ ಸರ್ವಂ ಸತ್ತ್ವೇಷು ಮಾನದ।
12275005c ತೇಷಾಂ ತತ್ತ್ವಾನಿ ಜಾನಾಮಿ ತತೋ ನ ವಿಮನಾ ಹ್ಯಹಮ್।।

ಸಮಂಗನು ಹೇಳಿದನು: “ಮಾನದ! ನಾನು ಸರ್ವಸತ್ತ್ವಗಳಲ್ಲಿರುವ ಭೂತ, ವರ್ತಮಾನ ಮತ್ತು ಭವಿಷ್ಯತ್ತುಗಳನ್ನು ಮತ್ತು ಅವುಗಳ ತತ್ತ್ವಗಳನ್ನೂ ತಿಳಿದಿದ್ದೇನೆ. ಆದುದರಿಂದ ನಾನು ವಿಮನಸ್ಕನಾಗಿಲ್ಲ.

12275006a ಉಪಕ್ರಮಾನಹಂ ವೇದ ಪುನರೇವ ಫಲೋದಯಾನ್।
12275006c ಲೋಕೇ ಫಲಾನಿ ಚಿತ್ರಾಣಿ ತತೋ ನ ವಿಮನಾ ಹ್ಯಹಮ್।।

ಕರ್ಮಗಳ ಉಪಕ್ರಮಗಳನ್ನೂ ಪುನಃ ಅವುಗಳಿಂದಾಗುವ ಫಲಗಳನ್ನೂ, ಲೋಕದಲ್ಲಿ ಉಂಟಾಗುವ ವಿಚಿತ್ರ ಕರ್ಮಫಲಗಳನ್ನೂ ತಿಳಿದಿದ್ದೇನೆ. ಆದುದರಿಂದ ನಾನು ವಿಮನಸ್ಕನಾಗಿಲ್ಲ.

12275007a ಅಗಾಧಾಶ್ಚಾಪ್ರತಿಷ್ಠಾಶ್ಚ ಗತಿಮಂತಶ್ಚ ನಾರದ।
12275007c ಅಂಧಾ ಜಡಾಶ್ಚ ಜೀವಂತಿ ಪಶ್ಯಾಸ್ಮಾನಪಿ ಜೀವತಃ।।

ನಾರದ! ಅಗಾಧ ಜ್ಞಾನವುಳ್ಳವರೂ, ಅಪ್ರತಿಷ್ಠರೂ, ಗತಿಮಂತರೂ, ಅಂಧರೂ, ಜಡರೂ ಜೀವಿಸುತ್ತಿರುವುದನ್ನು ನೋಡಿ ನಾನೂ ಕೂಡ ಜೀವಿಸುತ್ತಿದ್ದೇನೆ.

12275008a ವಿಹಿತೇನೈವ ಜೀವಂತಿ ಅರೋಗಾಂಗಾ ದಿವೌಕಸಃ।
12275008c ಬಲವಂತೋಽಬಲಾಶ್ಚೈವ ತದ್ವದಸ್ಮಾನ್ಸಭಾಜಯ।।

ಅರೋಗಾಂಗರಾದ ದೇವತೆಗಳು, ಬಲವಂತರು ಮತ್ತು ಅಬಲರೂ ಕೂಡ ತಮ್ಮ ತಮ್ಮ ಪ್ರಾರಬ್ಧಕರ್ಮಗಳಿಗನುಸಾರವಾಗಿ ಜೀವಿಸುತ್ತಾರೆ. ನಾನೂ ಕೂಡ ನನ್ನ ಭಾಗದಲ್ಲಿಷ್ಟಿರುವುದೋ ಅಷ್ಟರಲ್ಲೇ ಜೀವಿಸುತ್ತಿದ್ದೇನೆ.

12275009a ಸಹಸ್ರಿಣಶ್ಚ ಜೀವಂತಿ ಜೀವಂತಿ ಶತಿನಸ್ತಥಾ।
12275009c ಶಾಕೇನ ಚಾನ್ಯೇ ಜೀವಂತಿ ಪಶ್ಯಾಸ್ಮಾನಪಿ ಜೀವತಃ।।

ಸಾವಿರವಿರುವವರೂ ಜೀವಿಸುತ್ತಾರೆ. ನೂರಿರುವವರೂ ಜೀವಿಸುತ್ತಾರೆ. ಅನ್ಯರು ಕೇವಲ ಗೆಡ್ಡೆ-ಗೆಣಸುಗಳಿಂದ ಜೀವಿಸುತ್ತಾರೆ. ಅದೇ ರೀತಿ ನಾನೂ ಜೀವಿಸುತ್ತಿರುವುದನ್ನು ನೋಡು.

12275010a ಯದಾ ನ ಶೋಚೇಮಹಿ ಕಿಂ ನು ನ ಸ್ಯಾದ್ ಧರ್ಮೇಣ ವಾ ನಾರದ ಕರ್ಮಣಾ ವಾ।
12275010c ಕೃತಾಂತವಶ್ಯಾನಿ ಯದಾ ಸುಖಾನಿ ದುಃಖಾನಿ ವಾ ಯನ್ನ ವಿಧರ್ಷಯಂತಿ।।

ನಾರದ! ಶೋಕವೇ ಇಲ್ಲದಿರುವಾಗ ಧರ್ಮದಿಂದಾಗಲೀ, ಕರ್ಮದಿಂದಾಗಲೀ ನಮಗೇನು ಪ್ರಯೋಜನ? ಸುಖ-ದುಃಖಗಳು ಕೃತಾಂತ ಕಾಲನ ಅಧೀನವಾಗಿರುವಾಗ ಅವುಗಳಿಗೆ ಏಕೆ ಭಯಪಡಬೇಕು?

12275011a ಯಸ್ಮೈ ಪ್ರಜ್ಞಾಂ ಕಥಯಂತೇ ಮನುಷ್ಯಾಃ ಪ್ರಜ್ಞಾಮೂಲೋ ಹೀಂದ್ರಿಯಾಣಾಂ ಪ್ರಸಾದಃ।
12275011c ಮುಹ್ಯಂತಿ ಶೋಚಂತಿ ಯದೇಂದ್ರಿಯಾಣಿ ಪ್ರಜ್ಞಾಲಾಭೋ ನಾಸ್ತಿ ಮೂಢೇಂದ್ರಿಯಸ್ಯ।।

ಯಾವುದನ್ನು ಮನುಷ್ಯರು ಪ್ರಜ್ಞೆಯೆಂದು ಕರೆಯುತ್ತಾರೋ ಅದೇ ಪ್ರಜ್ಞೆಯೇ ಇಂದ್ರಿಯಗಳ ಪ್ರಸನ್ನತೆಗೆ ಮೂಲವಾಗಿದೆ. ಅದಿಲ್ಲದಿದ್ದರೆ ಇಂದ್ರಿಯಗಳು ಮೋಹಗೊಳ್ಳುತ್ತವೆ ಮತ್ತು ಶೋಕಿಸುತ್ತವೆ. ಮೂಢ ಇಂದ್ರಿಯಗಳುಳ್ಳವನಿಗೆ ಪ್ರಜ್ಞಾಲಾಭವಾಗುವುದಿಲ್ಲ.

12275012a ಮೂಢಸ್ಯ ದರ್ಪಃ ಸ ಪುನರ್ಮೋಹ ಏವ ಮೂಢಸ್ಯ ನಾಯಂ ನ ಪರೋಽಸ್ತಿ ಲೋಕಃ।
12275012c ನ ಹ್ಯೇವ ದುಃಖಾನಿ ಸದಾ ಭವಂತಿ ಸುಖಸ್ಯ ವಾ ನಿತ್ಯಶೋ ಲಾಭ ಏವ।।

ಮೂಢನಿಗೆ ದರ್ಪವುಂಟಾಗುತ್ತದೆ ಮತ್ತು ಪುನಃ ಅದೇ ಮೋಹವಾಗುತ್ತದೆ. ಮೂಢನಿಗೆ ಇಲ್ಲಿ ಮತ್ತು ಪರಲೋಕದಲ್ಲಿ ಸುಖವಿಲ್ಲ. ಯಾರಿಗೂ ಸದಾ ದುಃಖವುಂಟಾಗುವುದಿಲ್ಲ. ಯಾರಿಗೂ ನಿತ್ಯವೂ ಸುಖವೂ ದೊರಕುವುದಿಲ್ಲ.

12275013a ಭಾವಾತ್ಮಕಂ ಸಂಪರಿವರ್ತಮಾನಂ ನ ಮಾದೃಶಃ ಸಂಜ್ವರಂ ಜಾತು ಕುರ್ಯಾತ್।
12275013c ಇಷ್ಟಾನ್ ಭೋಗಾನ್ನಾನುರುಧ್ಯೇತ್ಸುಖಂ ವಾ ನ ಚಿಂತಯೇದ್ದುಃಖಮಭ್ಯಾಗತಂ ವಾ।।

ಸಂಸಾರವು ಸತತವೂ ಪರಿವರ್ತಿತವಾಗುತ್ತಿರುವುದನ್ನು ನೋಡುತ್ತಿರುವ ನನ್ನಂತವನು ಸಂತಾಪಪಡಬಾರದು. ಇಷ್ಟ ಭೋಗಗಳ ಅಥವಾ ಸುಖದ ಹಿಂದೆ ಹೋಗುವುದಿಲ್ಲ. ಅಥವಾ ದುಃಖವೇ ಬಂದರೂ ಚಿಂತಿಸುವುದಿಲ್ಲ.

12275014a ಸಮಾಹಿತೋ ನ ಸ್ಪೃಹಯೇತ್ಪರೇಷಾಂ ನಾನಾಗತಂ ನಾಭಿನಂದೇತ ಲಾಭಮ್।
12275014c ನ ಚಾಪಿ ಹೃಷ್ಯೇದ್ವಿಪುಲೇಽರ್ಥಲಾಭೇ ತಥಾರ್ಥನಾಶೇ ಚ ನ ವೈ ವಿಷೀದೇತ್।।

ಸಮಾಹಿತನಾಗಿರುವವನು ಇತರರ ಐಶ್ವರ್ಯಕ್ಕೆ ಆಸೆಪಡಬಾರದು. ಮುಂದಾಗುವ ಲಾಭದ ಕುರಿತು ಸಂತೋಷಪಡಬಾರದು. ವಿಪುಲ ಅರ್ಥಲಾಭವಾದರೂ ಹರ್ಷಪಡಬಾರದು. ಮತ್ತು ಅರ್ಥನಾಶವಾದರೂ ವಿಷಾದಿಸಬಾರದು.

12275015a ನ ಬಾಂಧವಾ ನ ಚ ವಿತ್ತಂ ನ ಕೌಲೀ ನ ಚ ಶ್ರುತಂ ನ ಚ ಮಂತ್ರಾ ನ ವೀರ್ಯಮ್।
12275015c ದುಃಖಾತ್ತ್ರಾತುಂ ಸರ್ವ ಏವೋತ್ಸಹಂತೇ ಪರತ್ರ ಶೀಲೇ ನ ತು ಯಾಂತಿ ಶಾಂತಿಮ್।।

ಬಾಂಧವರಾಗಲೀ, ವಿತ್ತವಾಗಲೀ, ಉತ್ತಮ ಕುಲವಾಗಲೀ, ವಿದ್ಯೆಯಾಗಲೀ, ಮಂತ್ರಗಳಾಗಲೀ ಅಥವಾ ವೀರ್ಯವಾಗಲೀ – ಯಾವುದೂ ಅಥವಾ ಎಲ್ಲ ಸೇರಿಯೂ – ದುಃಖದಿಂದ ಪಾರುಮಾಡಲು ಶಕ್ಯವಿಲ್ಲ. ಆದರೆ ಶೀಲವೊಂದರಿಂದಲೇ ಪರಲೋಕದಲ್ಲಿ ಶಾಂತಿಯನ್ನು ಹೊಂದಬಹುದು.

12275016a ನಾಸ್ತಿ ಬುದ್ಧಿರಯುಕ್ತಸ್ಯ ನಾಯೋಗಾದ್ವಿದ್ಯತೇ ಸುಖಮ್।
12275016c ಧೃತಿಶ್ಚ ದುಃಖತ್ಯಾಗಶ್ಚಾಪ್ಯುಭಯಂ ನಃ ಸುಖೋದಯಮ್।।

ಯೋಗವಿಲ್ಲದಿರುವವನಿಗೆ ಬುದ್ಧಿಯಿರುವುದಿಲ್ಲ. ಯೋಗವಿಲ್ಲದೇ ಸುಖವೂ ಇಲ್ಲ. ಧೃತಿ ಮತ್ತು ದುಃಖತ್ಯಾಗ ಈ ಎರಡೂ ಸುಖವನ್ನುಂಟುಮಾಡುತ್ತವೆ.

12275017a ಪ್ರಿಯಂ ಹಿ ಹರ್ಷಜನನಂ ಹರ್ಷ ಉತ್ಸೇಕವರ್ಧನಃ।
12275017c ಉತ್ಸೇಕೋ ನರಕಾಯೈವ ತಸ್ಮಾತ್ತಂ ಸಂತ್ಯಜಾಮ್ಯಹಮ್।।

ಪ್ರಿಯವಾದುದು ದೊರೆತಾಗ ಹರ್ಷವುಂಟಾಗುತ್ತದೆ. ಹರ್ಷವು ಅಭಿಮಾನವನ್ನು ಹೆಚ್ಚಿಸುತ್ತದೆ. ಅಭಿಮಾನವೇ ನರಕಕ್ಕೆ ಒಯ್ಯುತ್ತದೆ. ಆದುದರಿಂದ ನಾನು ಅವೆಲ್ಲವನ್ನೂ ತ್ಯಜಿಸಿದ್ದೇನೆ.

12275018a ಏತಾನ್ ಶೋಕಭಯೋತ್ಸೇಕಾನ್ಮೋಹನಾನ್ಸುಖದುಃಖಯೋಃ।
12275018c ಪಶ್ಯಾಮಿ ಸಾಕ್ಷಿವಲ್ಲೋಕೇ ದೇಹಸ್ಯಾಸ್ಯ ವಿಚೇಷ್ಟನಾತ್।।

ಈ ಶೋಕ-ಭಯ-ಅಭಿಮಾನಗಳು ಸುಖ-ದುಃಖಗಳಲ್ಲಿ ಸಿಲುಕಿಸಿ ವಿಮೋಹಗೊಳಿಸುತ್ತವೆ. ಆದುದರಿಂದ, ಎಲ್ಲಿಯವರೆಗೆ ಈ ದೇಹದಲ್ಲಿ ಚಲನೆಯಿದೆಯೋ ಅಲ್ಲಿಯವರೆಗೆ ನಾನು ಲೋಕವನ್ನು ಸಾಕ್ಷಿಯಾಗಿ ನೋಡುತ್ತಿರುತ್ತೇನೆ.

12275019a ಅರ್ಥಕಾಮೌ ಪರಿತ್ಯಜ್ಯ ವಿಶೋಕೋ ವಿಗತಜ್ವರಃ।
12275019c ತೃಷ್ಣಾಮೋಹೌ ತು ಸಂತ್ಯಜ್ಯ ಚರಾಮಿ ಪೃಥಿವೀಮಿಮಾಮ್।।

ಅರ್ಥ-ಕಾಮಗಳನ್ನು ಪರಿತ್ಯಜಿಸಿ ತೃಷ್ಣೆ-ಮೋಹಗಳನ್ನು ಸಂಪೂರ್ಣವಾಗಿ ತ್ಯಜಿಸಿ ವಿಶೋಕನೂ ವಿಗತಜ್ವರನೂ ಆಗಿ ಈ ಪೃಥ್ವಿಯಲ್ಲಿ ಸಂಚರಿಸುತ್ತೇನೆ.

12275020a ನ ಮೃತ್ಯುತೋ ನ ಚಾಧರ್ಮಾನ್ನ ಲೋಭಾನ್ನ ಕುತಶ್ಚನ।
12275020c ಪೀತಾಮೃತಸ್ಯೇವಾತ್ಯಂತಮಿಹ ಚಾಮುತ್ರ ವಾ ಭಯಮ್।।

ಅಮೃತವನ್ನೇ ಕುಡಿದಿದ್ದೇನೋ ಎನ್ನುವಂತೆ ನಾನು ಇಲ್ಲಾಗಲೀ ಅಲ್ಲಾಗಲೀ ಮೃತ್ಯು, ಅಧರ್ಮ ಮತ್ತು ಲೋಭಗಳಿಗೆ ಎಂದೂ ಭಯಪಡುವುದಿಲ್ಲ.

12275021a ಏತದ್ಬ್ರಹ್ಮನ್ವಿಜಾನಾಮಿ ಮಹತ್ಕೃತ್ವಾ ತಪೋಽವ್ಯಯಮ್।
12275021c ತೇನ ನಾರದ ಸಂಪ್ರಾಪ್ತೋ ನ ಮಾಂ ಶೋಕಃ ಪ್ರಬಾಧತೇ।।

ನಾರದ! ಬ್ರಹ್ಮನ್! ಮಹಾ ಅವ್ಯಯ ತಪಸ್ಸನ್ನಾಚರಿಸಿ ನಾನು ಇದನ್ನು ತಿಳಿದುಕೊಂಡಿದ್ದೇನೆ. ಆದುದರಿಂದ ಶೋಕವನ್ನು ಹೊಂದಿದರೂ ಅದು ನನ್ನನ್ನು ಬಾಧಿಸುವುದಿಲ್ಲ.””

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಸಮಂಗನಾರದಸಂವಾದೇ ಪಂಚಸಪ್ತತ್ಯಧಿಕದ್ವಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಸಮಂಗನಾರದಸಂವಾದ ಎನ್ನುವ ಇನ್ನೂರಾಎಪ್ಪತ್ತೈದನೇ ಅಧ್ಯಾಯವು.