274: ಜ್ವರೋತ್ಪತ್ತಿಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 274

ಸಾರ

ಶಿವನು ದಕ್ಷಯಜ್ಞವನ್ನು ಧ್ವಂಸಗೊಳಿಸಿದುದು; ಶಿವನ ಕ್ರೋಧದಿಂದ ಜ್ವರದ ಉತ್ಪತ್ತಿ; ಜ್ವರದ ವಿವಿಧ ರೂಪಗಳು (1-60).

12274001 ಯುಧಿಷ್ಠಿರ ಉವಾಚ।
12274001a ಪಿತಾಮಹ ಮಹಾಪ್ರಾಜ್ಞ ಸರ್ವಶಾಸ್ತ್ರವಿಶಾರದ।
12274001c ಅಸ್ತಿ ವೃತ್ರವಧಾದೇವ ವಿವಕ್ಷಾ ಮಮ ಜಾಯತೇ।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಪ್ರಾಜ್ಞ! ಸರ್ವಶಾಸ್ತ್ರವಿಶಾರದ! ಈ ವೃತ್ರವಧೆಯ ವಿಷಯದಲ್ಲಿ ಇನ್ನೂ ಕೇಳಲು ಬಯಸುತ್ತೇನೆ.

12274002a ಜ್ವರೇಣ ಮೋಹಿತೋ ವೃತ್ರಃ ಕಥಿತಸ್ತೇ ಜನಾಧಿಪ।
12274002c ನಿಹತೋ ವಾಸವೇನೇಹ ವಜ್ರೇಣೇತಿ ಮಮಾನಘ।।

ಜನಾಧಿಪ! ಅನಘ! ವೃತ್ರನು ಜ್ವರದಿಂದ ಮೋಹಗೊಂಡಿದ್ದಾಗ ವಾಸವನು ಅವನನ್ನು ವಜ್ರದಿಂದ ಸಂಹರಿಸಿದನು ಎಂದು ಹೇಳಿದೆ.

12274003a ಕಥಮೇಷ ಮಹಾಪ್ರಾಜ್ಞ ಜ್ವರಃ ಪ್ರಾದುರಭೂತ್ಕುತಃ।
12274003c ಜ್ವರೋತ್ಪತ್ತಿಂ ನಿಪುಣತಃ ಶ್ರೋತುಮಿಚ್ಚಾಮ್ಯಹಂ ಪ್ರಭೋ।।

ಮಹಾಪ್ರಾಜ್ಞ! ಪ್ರಭೋ! ಜ್ವರವು ಹೇಗೆ ಮತ್ತು ಎಲ್ಲಿಂದ ಹುಟ್ಟಿತು? ನಿಪುಣತೆಯಿಂದ ಜ್ವರದ ಉತ್ಪತ್ತಿಯ ಕುರಿತು ಕೇಳ ಬಯಸುತ್ತೇನೆ.”

12274004 ಭೀಷ್ಮ ಉವಾಚ।
12274004a ಶೃಣು ರಾಜನ್ ಜ್ವರಸ್ಯೇಹ ಸಂಭವಂ ಲೋಕವಿಶ್ರುತಮ್।
12274004c ವಿಸ್ತರಂ ಚಾಸ್ಯ ವಕ್ಷ್ಯಾಮಿ ಯಾದೃಶಂ ಚೈವ ಭಾರತ।।

ಭೀಷ್ಮನು ಹೇಳಿದನು: “ರಾಜನ್! ಭಾರತ! ಲೋಕವಿಶ್ರುತವಾಗಿರುವ ಈ ಜ್ವರದ ಉತ್ಪತ್ತಿಯ ಕುರಿತು ಕೇಳು. ಅದು ಹೇಗಿತ್ತೋ ಹಾಗೆ ವಿಸ್ತಾರವಾಗಿ ವರ್ಣಿಸುತ್ತೇನೆ.

12274005a ಪುರಾ ಮೇರೋರ್ಮಹಾರಾಜ ಶೃಂಗಂ ತ್ರೈಲೋಕ್ಯವಿಶ್ರುತಮ್।
12274005c ಜ್ಯೋತಿಷ್ಕಂ ನಾಮ ಸಾವಿತ್ರಂ ಸರ್ವರತ್ನವಿಭೂಷಿತಮ್।
12274005e ಅಪ್ರಮೇಯಮನಾಧೃಷ್ಯಂ ಸರ್ವಲೋಕೇಷು ಭಾರತ।।

ಮಹಾರಾಜ! ಭಾರತ! ಪೂರ್ವಕಾಲದಲ್ಲಿ ಸೂರ್ಯನಿಗೆ ಸಂಬಂಧಿಸಿದ ತ್ರೈಲೋಕ್ಯವಿಶ್ರುತ, ಸರ್ವರತ್ನವಿಭೂಷಿತ, ಸರ್ವಲೋಕಗಳಲ್ಲಿಯೂ ಅಪ್ರಮೇಯವೂ ಅನಾದೃಷ್ಯವೂ ಆದ ಜ್ಯೋತಿಷ್ಕ ಎಂಬ ಮೇರುವಿನ ಶಿಖರವಿತ್ತು.

12274006a ತತ್ರ ದೇವೋ ಗಿರಿತಟೇ ಹೇಮಧಾತುವಿಭೂಷಿತೇ।
12274006c ಪರ್ಯಂಕ ಇವ ವಿಭ್ರಾಜನ್ನುಪವಿಷ್ಟೋ ಬಭೂವ ಹ।।

ಹೇಮಧಾತುವಿಭೂಷಿತವಾದ ಆ ಗಿರಿತಟದಲ್ಲಿ ಕುಳಿತಿದ್ದ ದೇವದೇವ ಶಂಕರನು ಪರ್ಯಂಕದ ಮೇಲೆ ಕುಳಿತಿರುವಂತೆಯೇ ವಿರಾಜಿಸುತ್ತಿದ್ದನು.

12274007a ಶೈಲರಾಜಸುತಾ ಚಾಸ್ಯ ನಿತ್ಯಂ ಪಾರ್ಶ್ವೇ ಸ್ಥಿತಾ ಬಭೌ।
12274007c ತಥಾ ದೇವಾ ಮಹಾತ್ಮಾನೋ ವಸವಶ್ಚ ಮಹೌಜಸಃ।।
12274008a ತಥೈವ ಚ ಮಹಾತ್ಮಾನಾವಶ್ವಿನೌ ಭಿಷಜಾಂ ವರೌ।
12274008c ತಥಾ ವೈಶ್ರವಣೋ ರಾಜಾ ಗುಹ್ಯಕೈರಭಿಸಂವೃತಃ।।
12274009a ಯಕ್ಷಾಣಾಮಧಿಪಃ ಶ್ರೀಮಾನ್ಕೈಲಾಸನಿಲಯಃ ಪ್ರಭುಃ।
112274009c ಅಂಗಿರಃಪ್ರಮುಖಾಶ್ಚೈವ ತಥಾ ದೇವರ್ಷಯೋಽಪರೇ।।
12274010a ವಿಶ್ವಾವಸುಶ್ಚ ಗಂಧರ್ವಸ್ತಥಾ ನಾರದಪರ್ವತೌ।
12274010c ಅಪ್ಸರೋಗಣಸಂಘಾಶ್ಚ ಸಮಾಜಗ್ಮುರನೇಕಶಃ।।

ಶೈಲರಾಜ ಸುತೆಯೂ ನಿತ್ಯವೂ ಅವನ ಪಾರ್ಶ್ವದಲ್ಲಿದ್ದಳು. ಹಾಗೆಯೇ ಅಲ್ಲಿ ಮಹಾತ್ಮದೇವತೆಗಳೂ, ಮಹೌಜಸ ವಸುಗಳೂ, ವೈದ್ಯರಲ್ಲಿ ಶ್ರೇಷ್ಠರಾದ ಮಹಾತ್ಮಾ ಅಶ್ವಿನಿಯರೂ, ಹಾಗೆಯೇ ಗುಹ್ಯಕರಿಂದ ಸಂವೃತನಾಗಿ ಯಕ್ಷರ ಅಧಿಪತಿ ಕೈಲಾಸನಿಲಯ ಪ್ರಭು ಶ್ರೀಮಾನ್ ರಾಜಾ ವೈಶ್ರವಣನೂ, ಅಂಗಿರನೇ ಮೊದಲಾದ ದೇವರ್ಷಿಗಳೂ, ವಿಶ್ವಾವಸು ಗಂಧರ್ವರೂ, ನಾರದ-ಪರ್ವತರೂ, ಅಪ್ಸರಗಣಸಂಘಗಳೂ ಮತ್ತು ಅನೇಕರು ಅಲ್ಲಿ ಸೇರಿದ್ದರು.

12274011a ವವೌ ಶಿವಃ ಸುಖೋ ವಾಯುರ್ನಾನಾಗಂಧವಹಃ ಶುಚಿಃ।
12274011c ಸರ್ವರ್ತುಕುಸುಮೋಪೇತಾಃ ಪುಷ್ಪವಂತೋ ಮಹಾದ್ರುಮಾಃ।।

ಅಲ್ಲಿ ನಾನಾಗಂಧಗಳನ್ನು ಹೊತ್ತ ಶುಚಿಯಾದ ಮಂಗಳಕರ ಸುಖವಾಯುವು ಬೀಸುತ್ತಿತ್ತು. ಸರ್ವಋತುಗಳ ಕುಸುಮಗಳನ್ನು ಹೊತ್ತಿದ್ದ ಪುಷ್ಪಭರಿತ ಮಹಾವೃಕ್ಷಗಳಿದ್ದವು.

12274012a ತಥಾ ವಿದ್ಯಾಧರಾಶ್ಚೈವ ಸಿದ್ಧಾಶ್ಚೈವ ತಪೋಧನಾಃ।
12274012c ಮಹಾದೇವಂ ಪಶುಪತಿಂ ಪರ್ಯುಪಾಸಂತ ಭಾರತ।।

ಭಾರತ! ಹಾಗೆಯೇ ವಿದ್ಯಾಧರರೂ ಮತ್ತು ತಪೋಧನ ಸಿದ್ಧರೂ ಮಹಾದೇವ ಪಶುಪತಿಯನ್ನು ಉಪಾಸಿಸುತ್ತಿದ್ದರು.

12274013a ಭೂತಾನಿ ಚ ಮಹಾರಾಜ ನಾನಾರೂಪಧರಾಣ್ಯಥ।
12274013c ರಾಕ್ಷಸಾಶ್ಚ ಮಹಾರೌದ್ರಾಃ ಪಿಶಾಚಾಶ್ಚ ಮಹಾಬಲಾಃ।।
12274014a ಬಹುರೂಪಧರಾ ಹೃಷ್ಟಾ ನಾನಾಪ್ರಹರಣೋದ್ಯತಾಃ।
12274014c ದೇವಸ್ಯಾನುಚರಾಸ್ತತ್ರ ತಸ್ಥಿರೇ ಚಾನಲೋಪಮಾಃ।।

ಮಹಾರಾಜ! ದೇವನ ಅಗ್ನಿಸ್ವರೂಪ ಅನುಚರರಾದ ನಾನಾರೂಪಗಳನ್ನು ಧರಿಸಿದ್ದ ಭೂತಗಳೂ, ಮಹಾರೌದ್ರ ರಾಕ್ಷಸರೂ, ಮಹಾಬಲಶಾಲೀ ಬಹುರೂಪಧರ ಪಿಶಾಚರೂ ಅಲ್ಲಿ ಸೇರಿದ್ದರು.

12274015a ನಂದೀ ಚ ಭಗವಾಂಸ್ತತ್ರ ದೇವಸ್ಯಾನುಮತೇ ಸ್ಥಿತಃ।
12274015c ಪ್ರಗೃಹ್ಯ ಜ್ವಲಿತಂ ಶೂಲಂ ದೀಪ್ಯಮಾನಂ ಸ್ವತೇಜಸಾ।।

ಭಗವಾನ್ ನಂದಿಯೂ ಮಹಾದೇವನ ಆಜ್ಞೆಯಂತೆ ತನ್ನ ತೇಜಸ್ಸಿನಿಂದ ದೇದೀಪ್ಯಮಾನನಾಗಿ ಪ್ರಜ್ವಲಿತ ಶೂಲವನ್ನು ಹಿಡಿದು ಅಲ್ಲಿ ನಿಂತಿದ್ದನು.

12274016a ಗಂಗಾ ಚ ಸರಿತಾಂ ಶ್ರೇಷ್ಠಾ ಸರ್ವತೀರ್ಥಜಲೋದ್ಭವಾ।
12274016c ಪರ್ಯುಪಾಸತ ತಂ ದೇವಂ ರೂಪಿಣೀ ಕುರುನಂದನ।।

ಕುರುನಂದನ! ಸರಿತೆಯರಲ್ಲಿ ಶ್ರೇಷ್ಠೆ ಸರ್ವತೀರ್ಥಜಲೋದ್ಭವೆ ರೂಪಿಣೀ ಗಂಗೆಯೂ ಕೂಡ ಆ ದೇವನನ್ನು ಪೂಜಿಸುತ್ತಿದ್ದಳು.

12274017a ಏವಂ ಸ ಭಗವಾಂಸ್ತತ್ರ ಪೂಜ್ಯಮಾನಃ ಸುರರ್ಷಿಭಿಃ।
12274017c ದೇವೈಶ್ಚ ಸುಮಹಾಭಾಗೈರ್ಮಹಾದೇವೋ ವ್ಯತಿಷ್ಠತ।।

ಹೀಗೆ ಮಹಾಭಾಗ ಸುರರ್ಷಿಗಳು ಮತ್ತು ದೇವತೆಗಳಿಂದ ಪೂಜಿತನಾಗಿ ಭಗವಾನ್ ಮಹಾದೇವನು ಅಲ್ಲಿ ನೆಲೆಸಿದ್ದನು.

12274018a ಕಸ್ಯ ಚಿತ್ತ್ವಥ ಕಾಲಸ್ಯ ದಕ್ಷೋ ನಾಮ ಪ್ರಜಾಪತಿಃ।
12274018c ಪೂರ್ವೋಕ್ತೇನ ವಿಧಾನೇನ ಯಕ್ಷ್ಯಮಾಣೋಽನ್ವಪದ್ಯತ।।

ಸ್ವಲ್ಪ ಸಮಯದ ನಂತರ ದಕ್ಷ ಎಂಬ ಹೆಸರಿನ ಪ್ರಜಾಪತಿಯು ಪೂರ್ವೋಕ್ತ ವಿಧಾನಗಳಿಂದ ಯಜ್ಞಮಾಡಲು ಪ್ರಾರಂಭಿಸಿದನು.

12274019a ತತಸ್ತಸ್ಯ ಮಖಂ ದೇವಾಃ ಸರ್ವೇ ಶಕ್ರಪುರೋಗಮಾಃ।
12274019c ಗಮನಾಯ ಸಮಾಗಮ್ಯ ಬುದ್ಧಿಮಾಪೇದಿರೇ ತದಾ।।

ಆಗ ಶಕ್ರನೇ ಮೊದಲಾದ ಸರ್ವ ದೇವತೆಗಳೂ ಸೇರಿ ಅವನ ಯಜ್ಞಕ್ಕೆ ಹೋಗಲು ನಿಶ್ಚಯಿಸಿದರು.

12274020a ತೇ ವಿಮಾನೈರ್ಮಹಾತ್ಮಾನೋ ಜ್ವಲಿತೈರ್ಜ್ವಲನಪ್ರಭಾಃ।
12274020c ದೇವಸ್ಯಾನುಮತೇಽಗಚ್ಚನ್ಗಂಗಾದ್ವಾರಮಿತಿ ಶ್ರುತಿಃ।।

ಆ ಮಹಾತ್ಮರು ದೇವದೇವನ ಅನುಮತಿಯನ್ನು ಪಡೆದು ಅಗ್ನಿ-ಸೂರ್ಯರ ಪ್ರಭೆಯಿಂದ ಬೆಳಗುತ್ತಿದ್ದ ವಿಮಾನಗಳಲ್ಲಿ ಗಂಗಾದ್ವಾರಕ್ಕೆ ಹೋದರು ಎಂದು ಕೇಳಿದ್ದೇವೆ.

12274021a ಪ್ರಸ್ಥಿತಾ ದೇವತಾ ದೃಷ್ಟ್ವಾ ಶೈಲರಾಜಸುತಾ ತದಾ।
12274021c ಉವಾಚ ವಚನಂ ಸಾಧ್ವೀ ದೇವಂ ಪಶುಪತಿಂ ಪತಿಮ್।।

ದೇವತೆಗಳು ಹೊರಟಿದ್ದುದನ್ನು ನೋಡಿ ಶೈಲರಾಜಸುತೆ ಸಾಧ್ವಿಯು ಪತಿ ದೇವ ಪಶುಪತಿಗೆ ಹೀಗೆ ಹೇಳಿದಳು:

12274022a ಭಗವನ್ಕ್ವ ನು ಯಾಂತ್ಯೇತೇ ದೇವಾಃ ಶಕ್ರಪುರೋಗಮಾಃ।
12274022c ಬ್ರೂಹಿ ತತ್ತ್ವೇನ ತತ್ತ್ವಜ್ಞ ಸಂಶಯೋ ಮೇ ಮಹಾನಯಮ್।।

“ಭಗವನ್! ಶಕ್ರಾದಿ ದೇವತೆಗಳು ಎಲ್ಲಿಗೆ ಹೋಗುತ್ತಿದ್ದಾರೆ? ತತ್ತ್ವಜ್ಞ! ನಿಜವಾಗಿ ಹೇಳು. ನನ್ನಲ್ಲಿ ಈ ಮಹಾ ಸಂಶಯವುಂಟಾಗಿದೆ.”

12274023 ಮಹೇಶ್ವರ ಉವಾಚ।
12274023a ದಕ್ಷೋ ನಾಮ ಮಹಾಭಾಗೇ ಪ್ರಜಾನಾಂ ಪತಿರುತ್ತಮಃ।
12274023c ಹಯಮೇಧೇನ ಯಜತೇ ತತ್ರ ಯಾಂತಿ ದಿವೌಕಸಃ।।

ಮಹೇಶ್ವರನು ಹೇಳಿದನು: “ಮಹಾಭಾಗೇ! ದಕ್ಷನೆಂಬ ಹೆಸರಿನ ಶ್ರೇಷ್ಠ ಪ್ರಜಾಪತಿಯು ಅಶ್ವಮೇಧವನ್ನು ನಡೆಸುತ್ತಿದ್ದಾನೆ. ದಿವೌಕಸರು ಅಲ್ಲಿಗೆ ಹೋಗುತ್ತಿದ್ದಾರೆ.”

12274024 ಉಮಾ ಉವಾಚ।
12274024a ಯಜ್ಞಮೇತಂ ಮಹಾಭಾಗ ಕಿಮರ್ಥಂ ನಾಭಿಗಚ್ಚಸಿ।
12274024c ಕೇನ ವಾ ಪ್ರತಿಷೇಧೇನ ಗಮನಂ ತೇ ನ ವಿದ್ಯತೇ।।

ಉಮೆಯು ಹೇಳಿದಳು: “ಮಹಾಭಾಗ! ಈ ಯಜ್ಞಕ್ಕೆ ನೀನೇಕೆ ಹೋಗುತ್ತಿಲ್ಲ? ಅಥವಾ ಯಾವ ಪ್ರತಿಬಂಧದ ಕಾರಣದಿಂದ ನೀನು ಅಲ್ಲಿಗೆ ಗಮನಿಸುತ್ತಿಲ್ಲ?”

12274025 ಮಹೇಶ್ವರ ಉವಾಚ।
12274025a ಸುರೈರೇವ ಮಹಾಭಾಗೇ ಸರ್ವಮೇತದನುಷ್ಠಿತಮ್।
12274025c ಯಜ್ಞೇಷು ಸರ್ವೇಷು ಮಮ ನ ಭಾಗ ಉಪಕಲ್ಪಿತಃ।।

ಮಹೇಶ್ವರನು ಹೇಳಿದನು: “ಮಹಾಭಾಗೇ! ಸರ್ವ ಯಜ್ಞಗಳಲ್ಲಿ ನನಗೆ ಭಾಗವನ್ನು ಕಲ್ಪಿಸದೇ ಇರುವುದನ್ನು ಸರ್ವ ಸುರರೇ ಅನುಷ್ಠಾನಮಾಡಿಕೊಂಡು ಬಂದಿದ್ದಾರೆ.

12274026a ಪೂರ್ವೋಪಾಯೋಪಪನ್ನೇನ ಮಾರ್ಗೇಣ ವರವರ್ಣಿನಿ।
12274026c ನ ಮೇ ಸುರಾಃ ಪ್ರಯಚ್ಚಂತಿ ಭಾಗಂ ಯಜ್ಞಸ್ಯ ಧರ್ಮತಃ।।

ವರವರ್ಣಿನಿ! ಪೂರ್ವನಿಶ್ಚಿತ ಉಪಾಯಮಾರ್ಗದಂತೆ ಧರ್ಮತಃ ಸುರರು ಯಜ್ಞದಲ್ಲಿ ನನಗೆ ಭಾಗವನ್ನು ನೀಡುತ್ತಿಲ್ಲ.”

12274027 ಉಮಾ ಉವಾಚ।
12274027a ಭಗವನ್ಸರ್ವಭೂತೇಷು ಪ್ರಭವಾಭ್ಯಧಿಕೋ ಗುಣೈಃ।
12274027c ಅಜೇಯಶ್ಚಾಪ್ರಧೃಷ್ಯಶ್ಚ ತೇಜಸಾ ಯಶಸಾ ಶ್ರಿಯಾ।।

ಉಮೆಯು ಹೇಳಿದಳು: “ಭಗವನ್! ಸರ್ವಭೂತಗಳಲ್ಲಿಯೂ ನೀನು ಎಲ್ಲರಿಗಿಂತ ಅಧಿಕ ಪ್ರಭಾವಶಾಲಿಯೂ, ಗುಣವಂತನೂ, ಅಜೇಯನೂ, ಅಧೃಷ್ಯನೂ, ತೇಜಸ್ವಿಯೂ, ಯಶಸ್ವಿಯೂ ಮತ್ತು ಶ್ರೀಸಂಪನ್ನನೂ ಆಗಿದ್ದೀಯೆ.

12274028a ಅನೇನ ತೇ ಮಹಾಭಾಗ ಪ್ರತಿಷೇಧೇನ ಭಾಗತಃ।
12274028c ಅತೀವ ದುಃಖಮುತ್ಪನ್ನಂ ವೇಪಥುಶ್ಚ ಮಮಾನಘ।।

ಮಹಾಭಾಗ! ಅನಘ! ಹೀಗೆ ನಿನ್ನ ಯಜ್ಞಭಾಗವನ್ನು ನಿಷೇಧಿಸಿದ್ದಾರೆ ಎಂದು ನನಗೆ ಅತೀವ ದುಃಖವಾಗುತ್ತಿದೆ. ನನ್ನ ಶರೀರವೂ ಕಂಪಿಸುತ್ತಿದೆ.””

12274029 ಭೀಷ್ಮ ಉವಾಚ।
12274029a ಏವಮುಕ್ತ್ವಾ ತು ಸಾ ದೇವೀ ದೇವಂ ಪಶುಪತಿಂ ಪತಿಮ್।
12274029c ತೂಷ್ಣೀಂಭೂತಾಭವದ್ರಾಜನ್ ದಹ್ಯಮಾನೇನ ಚೇತಸಾ।।

ಭೀಷ್ಮನು ಹೇಳಿದನು: “ರಾಜನ್! ಪತಿ ದೇವ ಪಶುಪತಿಗೆ ಹೀಗೆ ಹೇಳಿ ಚೇತನವೇ ಸುಡುತ್ತಿದ್ದ ದೇವಿಯು ಸುಮ್ಮನಾದಳು.

12274030a ಅಥ ದೇವ್ಯಾ ಮತಂ ಜ್ಞಾತ್ವಾ ಹೃದ್ಗತಂ ಯಚ್ಚಿಕೀರ್ಷಿತಮ್।
12274030c ಸ ಸಮಾಜ್ಞಾಪಯಾಮಾಸ ತಿಷ್ಠ ತ್ವಮಿತಿ ನಂದಿನಮ್।।

ದೇವಿಯ ಮತವನ್ನು ತಿಳಿದು ಮತ್ತು ಅವಳು ಏನು ಮಾಡಲು ಬಯಸುತ್ತಿದ್ದಾಳೆ ಎನ್ನುವ ಅವಳ ಹೃದಯದ ಇಂಗಿತವನ್ನು ತಿಳಿದ ಶಂಕರನು ನಂದಿಗೆ “ನೀನು ಇಲ್ಲಿಯೇ ಇರು” ಎಂದು ಆಜ್ಞಾಪಿಸಿದನು.

12274031a ತತೋ ಯೋಗಬಲಂ ಕೃತ್ವಾ ಸರ್ವಯೋಗೇಶ್ವರೇಶ್ವರಃ।
12274031c ತಂ ಯಜ್ಞಂ ಸುಮಹಾತೇಜಾ ಭೀಮೈರನುಚರೈಸ್ತದಾ।
12274031e ಸಹಸಾ ಘಾತಯಾಮಾಸ ದೇವದೇವಃ ಪಿನಾಕಧೃಕ್।।

ಅನಂತರ ಸರ್ವಯೋಗೇಶ್ವರೇಶ್ವರ ಪಿನಾಕಧೃಕ್ ಮಹಾತೇಜಸ್ವೀ ದೇವದೇವನು ಯೋಗಬಲವನ್ನಾಶ್ರಯಿಸಿ ತನ್ನ ಭಯಂಕರ ಅನುಚರರೊಂದಿಗೆ ಒಮ್ಮೆಲೇ ಆ ಯಜ್ಞವನ್ನು ಧ್ವಂಸಗೊಳಿಸಿದನು.

12274032a ಕೇ ಚಿನ್ನಾದಾನಮುಂಚಂತ ಕೇ ಚಿದ್ಧಾಸಾಂಶ್ಚ ಚಕ್ರಿರೇ।
12274032c ರುಧಿರೇಣಾಪರೇ ರಾಜಂಸ್ತತ್ರಾಗ್ನಿಂ ಸಮವಾಕಿರನ್।।

ರಾಜನ್! ಕೆಲವರು ಸಿಂಹನಾದಗೈಯುತ್ತಿದ್ದರು. ಕೆಲವರು ಅಟ್ಟಹಾಸಗೈಯುತ್ತಿದ್ದರು. ಇನ್ನು ಇತರರು ರಕ್ತದಿಂದ ಅಗ್ನಿಯನ್ನು ಆರಿಸತೊಡಗಿದ್ದರು.

12274033a ಕೇ ಚಿದ್ಯೂಪಾನ್ಸಮುತ್ಪಾಟ್ಯ ಬಭ್ರಮುರ್ವಿಕೃತಾನನಾಃ।
12274033c ಆಸ್ಯೈರನ್ಯೇ ಚಾಗ್ರಸಂತ ತಥೈವ ಪರಿಚಾರಕಾನ್।।

ಕೆಲವು ವಿಕೃತಾನನರು ಯೂಪಗಳನ್ನು ಕಿತ್ತು ತಿರುಗುತ್ತಿದ್ದರು. ಅನ್ಯರು ಪರಿಚಾರಕರನ್ನು ನುಂಗಿಹಾಕುತ್ತಿದ್ದರು.

12274034a ತತಃ ಸ ಯಜ್ಞೋ ನೃಪತೇ ವಧ್ಯಮಾನಃ ಸಮಂತತಃ।
12274034c ಆಸ್ಥಾಯ ಮೃಗರೂಪಂ ವೈ ಖಮೇವಾಭ್ಯಪತತ್ತದಾ।।

ನೃಪತೇ! ಎಲ್ಲಕಡೆಗಳಿಂದಲೂ ಆಘಾತಗೊಳ್ಳುತ್ತಿದ್ದಾಗ ಆ ಯಜ್ಞವು ಮೃಗರೂಪವನ್ನು ಧರಿಸಿ ಆಕಾಶವನ್ನೇರಿ ಓಡತೊಡಗಿತು.

12274035a ತಂ ತು ಯಜ್ಞಂ ತಥಾರೂಪಂ ಗಚ್ಚಂತಮುಪಲಭ್ಯ ಸಃ।
12274035c ಧನುರಾದಾಯ ಬಾಣಂ ಚ ತದಾನ್ವಸರತ ಪ್ರಭುಃ।।

ಅಂಥಹ ರೂಪತಾಳಿ ಹೋಗುತ್ತಿದ್ದ ಯಜ್ಞವನ್ನು ಪ್ರಭುವು ಧನುರ್ಬಾಣಗಳನ್ನು ಹಿಡಿದು ಹಿಂಬಾಲಿಸಿ ಹೋದನು.

12274036a ತತಸ್ತಸ್ಯ ಸುರೇಶಸ್ಯ ಕ್ರೋಧಾದಮಿತತೇಜಸಃ।
12274036c ಲಲಾಟಾತ್ಪ್ರಸೃತೋ ಘೋರಃ ಸ್ವೇದಬಿಂದುರ್ಬಭೂವ ಹ।।

ಆಗ ಕ್ರೋಧಿತನಾಗಿದ್ದ ಅಮಿತ ತೇಜಸ್ವೀ ಸುರೇಶನ ಹಣೆಯಿಂದ ಘೋರವಾದ ಬೆವರಿನ ಬಿಂದುವು ಹೊರಚಿಮ್ಮಿತು.

12274037a ತಸ್ಮಿನ್ ಪತಿತಮಾತ್ರೇ ತು ಸ್ವೇದಬಿಂದೌ ತಥಾ ಭುವಿ।
12274037c ಪ್ರಾದುರ್ಬಭೂವ ಸುಮಹಾನಗ್ನಿಃ ಕಾಲಾನಲೋಪಮಃ।।

ಆ ಬೆವರಿನ ಬಿಂದುವು ಭೂಮಿಯ ಮೇಲೆ ಬೀಳುತ್ತಲೇ ಅದರಿಂದ ಕಾಲಾಗ್ನಿಯಂಥಹ ಮಹಾ ಅಗ್ನಿಯು ಪ್ರಾದುರ್ಭವಿಸಿತು.

12274038a ತತ್ರ ಚಾಜಾಯತ ತದಾ ಪುರುಷಃ ಪುರುಷರ್ಷಭ।
12274038c ಹ್ರಸ್ವೋಽತಿಮಾತ್ರರಕ್ತಾಕ್ಷೋ ಹರಿಶ್ಮಶ್ರುರ್ವಿಭೀಷಣಃ।।

ಪುರುಷರ್ಷಭ! ಆಗ ಅಲ್ಲಿ ಅತಿ ಕುಳ್ಳನಾಗಿದ್ದ ರಕ್ತಾಕ್ಷನಾಗಿದ್ದ ಕಂದುಬಣ್ಣದ ಮೀಸೆ-ಗಡ್ಡಗಳನ್ನು ಹೊಂದಿದ್ದ ಪುರುಷನು ಹುಟ್ಟಿಕೊಂಡನು.

12274039a ಊರ್ಧ್ವಕೇಶೋಽತಿಲೋಮಾಂಗಃ ಶ್ಯೇನೋಲೂಕಸ್ತಥೈವ ಚ।
12274039c ಕರಾಲಃ ಕೃಷ್ಣವರ್ಣಶ್ಚ ರಕ್ತವಾಸಾಸ್ತಥೈವ ಚ।।

ಅವನ ಕೂದಲುಗಳು ಮೇಲ್ಮುಖವಾಗಿದ್ದವು. ಅವನ ಅಂಗಾಂಗಗಳು ಗಿಡುಗನೋ ಅಥವಾ ಗೂಬೆಯೋ ಎನ್ನುವಂತೆ ರೋಮಗಳಿಂದ ಮುಚ್ಚಿಕೊಂಡಿದ್ದವು. ಮುಖವು ಕರಾಲವಾಗಿತ್ತು. ಬಣ್ಣವು ಕಪ್ಪಗಿತ್ತು. ಕೆಂಪು ವಸ್ತ್ರವನ್ನು ಧರಿಸಿದ್ದನು.

12274040a ತಂ ಯಜ್ಞಂ ಸ ಮಹಾಸತ್ತ್ವೋಽದಹತ್ಕಕ್ಷಮಿವಾನಲಃ।
212274040c ದೇವಾಶ್ಚಾಪ್ಯದ್ರವನ್ಸರ್ವೇ ತತೋ ಭೀತಾ ದಿಶೋ ದಶ।।

ಆ ಮಹಾಸತ್ತ್ವವು ಯಜ್ಞವನ್ನು ಬೆಂಕಿಯು ಹುಲ್ಲುಮೆದೆಯನ್ನು ಸುಟ್ಟುಹಾಕುವಂತೆ ಸುಟ್ಟು ಭಸ್ಮಮಾಡಿದನು. ಸರ್ವ ದೇವತೆಗಳೂ ಭೀತರಾಗಿ ಹತ್ತೂ ದಿಕ್ಕುಗಳಲ್ಲಿ ಓಡಿಹೋದರು.

12274041a ತೇನ ತಸ್ಮಿನ್ವಿಚರತಾ ಪುರುಷೇಣ ವಿಶಾಂ ಪತೇ।
12274041c ಪೃಥಿವೀ ವ್ಯಚಲದ್ರಾಜನ್ನತೀವ ಭರತರ್ಷಭ।।

ವಿಶಾಂಪತೇ! ಭರತರ್ಷಭ! ಆ ಪುರುಷನು ಸಂಚರಿಸುತ್ತಿದ್ದಾಗ ಪೃಥ್ವಿಯು ಅತೀವವಾಗಿ ಕಂಪಿಸತೊಡಗಿತು.

12274042a ಹಾಹಾಭೂತೇ ಪ್ರವೃತ್ತೇ ತು ನಾದೇ ಲೋಕಭಯಂಕರೇ3
12274042c ಪಿತಾಮಹೋ ಮಹಾದೇವಂ ದರ್ಶಯನ್ ಪ್ರತ್ಯಭಾಷತ।।

ಲೋಕಭಯಂಕರವಾಗಿ ಅವನು ಸಿಂಹನಾದಗೈಯುತ್ತಿರಲಿ ಹಾಹಾಕಾರವುಂಟಾಯಿತು. ಆಗ ಪಿತಾಮಹನು ಅದನ್ನು ತೋರಿಸುತ್ತಾ ಮಹಾದೇವನಿಗೆ ಇಂತೆಂದನು:

12274043a ಭವತೋಽಪಿ ಸುರಾಃ ಸರ್ವೇ ಭಾಗಂ ದಾಸ್ಯಂತಿ ವೈ ಪ್ರಭೋ।
12274043c ಕ್ರಿಯತಾಂ ಪ್ರತಿಸಂಹಾರಃ ಸರ್ವದೇವೇಶ್ವರ ತ್ವಯಾ।।

“ಪ್ರಭೋ! ಸರ್ವದೇವೇಶ್ವರ! ನಿನ್ನ ಕ್ರೋಧವನ್ನು ಹಿಂತೆಗೆದುಕೊಳ್ಳಬೇಕು. ಸುರರೆಲ್ಲರೂ ನಿನಗೂ ಕೂಡ ಯಜ್ಞಭಾಗವನ್ನು ಕೊಡುತ್ತಾರೆ.

12274044a ಇಮಾ ಹಿ ದೇವತಾಃ ಸರ್ವಾ ಋಷಯಶ್ಚ ಪರಂತಪ।
12274044c ತವ ಕ್ರೋಧಾನ್ಮಹಾದೇವ ನ ಶಾಂತಿಮುಪಲೇಭಿರೇ।।

ಪರಂತಪ! ಮಹಾದೇವ! ಈ ಎಲ್ಲ ದೇವತೆಗಳೂ ಋಷಿಗಳೂ ನಿನ್ನ ಕ್ರೋಧದಿಂದ ತಪ್ತರಾಗಿ ಶಾಂತಿಯನ್ನು ಪಡೆಯದವರಾಗಿದ್ದಾರೆ.

12274045a ಯಶ್ಚೈಷ ಪುರುಷೋ ಜಾತಃ ಸ್ವೇದಾತ್ತೇ ವಿಬುಧೋತ್ತಮ।
12274045c ಜ್ವರೋ ನಾಮೈಷ ಧರ್ಮಜ್ಞ ಲೋಕೇಷು ಪ್ರಚರಿಷ್ಯತಿ।।

ವಿಬುಧೋತ್ತಮ! ಧರ್ಮಜ್ಞ! ನಿನ್ನ ಬೆವರಿನಿಂದ ಹುಟ್ಟಿದ ಈ ಪುರುಷನು ಜ್ವರ ಎಂಬ ಹೆಸರಿನಿಂದ ಲೋಕಗಳಲ್ಲಿ ಸಂಚರಿಸುತ್ತಾನೆ.

12274046a ಏಕೀಭೂತಸ್ಯ ನ ಹ್ಯಸ್ಯ ಧಾರಣೇ ತೇಜಸಃ ಪ್ರಭೋ।
12274046c ಸಮರ್ಥಾ ಸಕಲಾ ಪೃಥ್ವೀ ಬಹುಧಾ ಸೃಜ್ಯತಾಮಯಮ್।।

ಪ್ರಭೋ! ಒಂದೇ ಆಗಿರುವ ಇವನ ತೇಜಸ್ಸೆಲ್ಲವನ್ನೂ ಪೃಥ್ವಿಯು ಧರಿಸಿಕೊಳ್ಳಲು ಸಮರ್ಥಳಾಗಿಲ್ಲ. ಆದುದರಿಂದ ಇವನನ್ನು ಅನೇಕ ರೂಪಗಳಲ್ಲಿ ವಿಭಜಿಸಬೇಕು.”

12274047a ಇತ್ಯುಕ್ತೋ ಬ್ರಹ್ಮಣಾ ದೇವೋ ಭಾಗೇ ಚಾಪಿ ಪ್ರಕಲ್ಪಿತೇ।
12274047c ಭಗವಂತಂ ತಥೇತ್ಯಾಹ ಬ್ರಹ್ಮಾಣಮಮಿತೌಜಸಮ್।।

ಯಜ್ಞಭಾಗವನ್ನು ಪ್ರಕಲ್ಪಿಸಿ ಬ್ರಹ್ಮನು ಹೀಗೆ ಹೇಳಲು ದೇವನು ಭಗವಂತ ಅಮಿತೌಜಸ ಬ್ರಹ್ಮನಿಗೆ “ಹಾಗೆಯೇ ಆಗಲಿ!” ಎಂದನು.

12274048a ಪರಾಂ ಚ ಪ್ರೀತಿಮಗಮದುತ್ಸ್ಮಯಂಶ್ಚ ಪಿನಾಕಧೃಕ್।
12274048c ಅವಾಪ ಚ ತದಾ ಭಾಗಂ ಯಥೋಕ್ತಂ ಬ್ರಹ್ಮಣಾ ಭವಃ।।

ಪಿನಾಕಧೃಕನು ಆಗ ಪರಮ ಪ್ರೀತನಾದನು ಮತ್ತು ಮುಗುಳ್ನಕ್ಕನು. ಬ್ರಹ್ಮನು ಹೇಳಿದಂತೆ ಭವನು ಯಜ್ಞಭಾಗವನ್ನು ಪಡೆದುಕೊಂಡನು.

12274049a ಜ್ವರಂ ಚ ಸರ್ವಧರ್ಮಜ್ಞೋ ಬಹುಧಾ ವ್ಯಸೃಜತ್ತದಾ।
12274049c ಶಾಂತ್ಯರ್ಥಂ ಸರ್ವಭೂತಾನಾಂ ಶೃಣು ತಚ್ಚಾಪಿ ಪುತ್ರಕ।।

ಪುತ್ರಕ! ಸರ್ವಧರ್ಮಜ್ಞನು ಸರ್ವಭೂತಗಳ ಶಾಂತಿಗಾಗಿ ಜ್ವರವನ್ನು ಅನೇಕ ಭಾಗಗಳನ್ನಾಗಿ ವಿಭಜಿಸಿದನು. ಅದರ ಕುರಿತು ಕೇಳು.

12274050a ಶೀರ್ಷಾಭಿತಾಪೋ ನಾಗಾನಾಂ ಪರ್ವತಾನಾಂ ಶಿಲಾಜತುಃ।
12274050c ಅಪಾಂ ತು ನೀಲಿಕಾಂ ವಿದ್ಯಾನ್ನಿರ್ಮೋಕಂ ಭುಜಗೇಷು ಚ।।
12274051a ಖೋರಕಃ ಸೌರಭೇಯಾಣಾಮೂಷರಂ ಪೃಥಿವೀತಲೇ।
12274051c ಪಶೂನಾಮಪಿ ಧರ್ಮಜ್ಞ ದೃಷ್ಟಿಪ್ರತ್ಯವರೋಧನಮ್।।

ಆನೆಗಳ ಮಸ್ತಕದಲ್ಲಿರುವ ತಾಪ, ಪರ್ವತಗಳಲ್ಲಿರುವ ಕಪ್ಪು ಖನಿಜ, ನೀರಿನಲ್ಲಿ ಬೆಳೆಯುವ ನೀಲಿಗಿಡ, ಸರ್ಪಗಳ ಪೊರೆ, ಎತ್ತು-ಹಸುಗಳಲ್ಲುಂಟಾಗುವ ಖೋರಕವೆಂಬ ಗೊರಸಿನ ರೋಗ, ಚೌಳುಮಣ್ಣಿನ ಪ್ರದೇಶ, ಮತ್ತು ದೃಷ್ಟಿಶಕ್ತಿಗೆ ಪ್ರತಿರೋಧಕವಾಗಿರುವವು – ಇವೆಲ್ಲವೂ ಜ್ವರದ ನಾನಾ ರೂಪಗಳು.

12274052a ರಂಧ್ರಾಗತಮಥಾಶ್ವಾನಾಂ ಶಿಖೋದ್ಭೇದಶ್ಚ ಬರ್ಹಿಣಾಮ್।
12274052c ನೇತ್ರರೋಗಃ ಕೋಕಿಲಾನಾಂ ಜ್ವರಃ ಪ್ರೋಕ್ತೋ ಮಹಾತ್ಮನಾ।।

ಕುದುರೆಗಳ ಕುತ್ತಿಗೆಯ ರಂಧ್ರದಿಂದ ಹೊರಬರುವ ಮಾಂಸಖಂಡ, ನವಿಲುಗಳ ಶಿಖೆ, ಕೋಗಿಲೆಗಳ ನೇತ್ರರೋಗ ಇವುಗಳೂ ಜ್ವರವೆಂದೇ ಮಹಾತ್ಮರು ಹೇಳುತ್ತಾರೆ.

12274053a ಅಬ್ಜಾನಾಂ ಪಿತ್ತಭೇದಶ್ಚ ಸರ್ವೇಷಾಮಿತಿ ನಃ ಶ್ರುತಮ್।
12274053c ಶುಕಾನಾಮಪಿ ಸರ್ವೇಷಾಂ ಹಿಕ್ಕಿಕಾ ಪ್ರೋಚ್ಯತೇ ಜ್ವರಃ।।

ಎಲ್ಲ ಕುರಿಗಳಿಗೂ ಪಿತ್ತಭೇದವೇ ಜ್ವರವೆಂದು ನಾವು ಕೇಳಿದ್ದೇವೆ. ಸಮಸ್ತ ಗಿಳಿಗಳಿಗೂ ಬಿಕ್ಕಳಿಕೆಯೇ ಜ್ವರವೆಂದು ಹೇಳಿದ್ದಾರೆ.

12274054a ಶಾರ್ದೂಲೇಷ್ವಥ ಧರ್ಮಜ್ಞ ಶ್ರಮೋ ಜ್ವರ ಇಹೋಚ್ಯತೇ।
12274054c ಮಾನುಷೇಷು ತು ಧರ್ಮಜ್ಞ ಜ್ವರೋ ನಾಮೈಷ ವಿಶ್ರುತಃ।
12274054e ಮರಣೇ ಜನ್ಮನಿ ತಥಾ ಮಧ್ಯೇ ಚಾವಿಶತೇ ನರಮ್।।

ಧರ್ಮಜ್ಞ! ಶ್ರಮವೇ ಹುಲಿಗಳಿಗೆ ಜ್ವರವೆಂದು ಹೇಳುತ್ತಾರೆ. ಧರ್ಮಜ್ಞ! ಮನುಷ್ಯರಲ್ಲಿ ಇದು ಜ್ವರವೆಂಬ ಹೆಸರಿನಿಂದಲೇ ಪ್ರಸಿದ್ಧವಾಗಿದೆ. ಇದು ಮರಣಕಾಲದಲ್ಲಿ, ಜನ್ಮಕಾಲದಲ್ಲಿ ಮತ್ತು ಮಧ್ಯವಯಸ್ಸಿನಲ್ಲಿ ಮನುಷ್ಯನನ್ನು ಪ್ರವೇಶಿಸುತ್ತದೆ.

12274055a ಏತನ್ಮಾಹೇಶ್ವರಂ ತೇಜೋ ಜ್ವರೋ ನಾಮ ಸುದಾರುಣಃ।
12274055c ನಮಸ್ಯಶ್ಚೈವ ಮಾನ್ಯಶ್ಚ ಸರ್ವಪ್ರಾಣಿಭಿರೀಶ್ವರಃ।।

ಮಹೇಶ್ವರನ ತೇಜಸ್ಸಾದ ಈ ಜ್ವರವೆನ್ನುವುದು ಅತ್ಯಂತ ದಾರುಣವಾದುದು. ಸರ್ವಪ್ರಾಣಿಗಳಿಗೂ ಈ ಈಶ್ವರ ಜ್ವರವು ವಂದನೀಯವು ಮತ್ತು ಮಾನನೀಯವು.

12274056a ಅನೇನ ಹಿ ಸಮಾವಿಷ್ಟೋ ವೃತ್ರೋ ಧರ್ಮಭೃತಾಂ ವರಃ।
12274056c ವ್ಯಜೃಂಭತ ತತಃ ಶಕ್ರಸ್ತಸ್ಮೈ ವಜ್ರಮವಾಸೃಜತ್।।

ಇವನೇ ಧರ್ಮಭೃತರಲ್ಲಿ ಶ್ರೇಷ್ಠ ವೃತ್ರನನ್ನು ಪ್ರವೇಶಿಸಿದ್ದನು. ಆಗ ಅವನು ಆಕಳಿಸುತ್ತಿದ್ದಾಗ ಶಕ್ರನು ಅವನ ಮೇಲೆ ವಜ್ರಾಯುಧವನ್ನು ಪ್ರಯೋಗಿಸಿದ್ದನು.

12274057a ಪ್ರವಿಶ್ಯ ವಜ್ರೋ ವೃತ್ರಂ ತು ದಾರಯಾಮಾಸ ಭಾರತ।
12274057c ದಾರಿತಶ್ಚ ಸ ವಜ್ರೇಣ ಮಹಾಯೋಗೀ ಮಹಾಸುರಃ।
12274057e ಜಗಾಮ ಪರಮಂ ಸ್ಥಾನಂ ವಿಷ್ಣೋರಮಿತತೇಜಸಃ।।

ಭಾರತ! ವಜ್ರವು ಅವನನ್ನು ಪ್ರವೇಶಿಸಿ ಸೀಳಿಬಿಟ್ಟಿತು. ವಜ್ರದಿಂದ ಸೀಳಲ್ಪಟ್ಟ ಆ ಮಹಾಯೋಗೀ ಅಮಿತ ತೇಜಸ್ವೀ ಮಹಾಸುರನು ವಿಷ್ಣುವಿನ ಪರಮ ಸ್ಥಾನವನ್ನು ಸೇರಿದನು.

12274058a ವಿಷ್ಣುಭಕ್ತ್ಯಾ ಹಿ ತೇನೇದಂ ಜಗದ್ವ್ಯಾಪ್ತಮಭೂತ್ಪುರಾ।
12274058c ತಸ್ಮಾಚ್ಚ ನಿಹತೋ ಯುದ್ಧೇ ವಿಷ್ಣೋಃ ಸ್ಥಾನಮವಾಪ್ತವಾನ್।।

ವಿಷ್ಣುಭಕ್ತಿಯಿಂದಲೆ ಅವನು ಹಿಂದೆ ಈ ಜಗತ್ತನ್ನು ವ್ಯಾಪಿಸಿಕೊಂಡಿದ್ದನು. ಆದುದರಿಂದ ಯುದ್ಧದಲ್ಲಿ ಹತನಾದ ಅವನು ವಿಷ್ಣುಸ್ಥಾನವನ್ನೇ ಪಡೆದುಕೊಂಡನು.

12274059a ಇತ್ಯೇಷ ವೃತ್ರಮಾಶ್ರಿತ್ಯ ಜ್ವರಸ್ಯ ಮಹತೋ ಮಯಾ।
12274059c ವಿಸ್ತರಃ ಕಥಿತಃ ಪುತ್ರ ಕಿಮನ್ಯತ್ ಪ್ರಬ್ರವೀಮಿ ತೇ।।

ಪುತ್ರ! ಹೀಗೆ ವೃತ್ರನನ್ನು ಆವೇಶಿಸಿದ್ದ ಮಹಾ ಜ್ವರದ ಕುರಿತು ವಿಸ್ತಾರವಾಗಿ ಹೇಳಿದ್ದೇನೆ. ಬೇರೆ ಎನನ್ನು ಹೇಳಬೇಕು?

12274060a ಇಮಾಂ ಜ್ವರೋತ್ಪತ್ತಿಮದೀನಮಾನಸಃ ಪಠೇತ್ಸದಾ ಯಃ ಸುಸಮಾಹಿತೋ ನರಃ।
12274060c ವಿಮುಕ್ತರೋಗಃ ಸ ಸುಖೀ ಮುದಾ ಯುತೋ ಲಭೇತ ಕಾಮಾನ್ಸ ಯಥಾಮನೀಷಿತಾನ್।।

ಈ ಜ್ವರೋತ್ಪತ್ತಿಯ ಕಥನವನ್ನು ಸುಸಮಾಹಿತನಾಗಿ ಅದೀನಮನಸ್ಕನಾಗಿ ಸದಾ ಪಠಿಸುವ ನರನು ರೋಗಮುಕ್ತನಾಗಿ ಸುಖ ಮತ್ತು ಸಂತೋಷದಿಂದ ಕಾಮನೆಗಳನ್ನು ಪಡೆದುಕೊಳ್ಳುತ್ತಾನೆ.”4

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಜ್ವರೋತ್ಪತ್ತಿರ್ನಾಮ ಚತುಃಸಪ್ತತ್ಯಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಜ್ವರೋತ್ಪತ್ತಿ ಎನ್ನುವ ಇನ್ನೂರಾಎಪ್ಪತ್ನಾಲ್ಕನೇ ಅಧ್ಯಾಯವು.


  1. ಇದರ ಮೊದಲು ಈ ಅಧಿಕ ಶ್ಲೋಕಗಳಿವೆ: ಶಂಖಪದ್ಮನಿಧಿಭ್ಯಾಂ ಚ ರೃದ್ಧಯಾ ಪರಮಯಾ ಸಹ। ಉಪಾಸಂತ ಮಹಾತ್ಮಾನಮುಶನಾ ಚ ಮಹಾಮುನಿಃ।। ಸನತ್ಕುಮಾರಪ್ರಮುಖಾಸ್ತಥೈವ ಚ ಮಹರ್ಷಯಃ। (ಗೀತಾ ಪ್ರೆಸ್). ↩︎

  2. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ವ್ಯಚರತ್ಸರ್ವತೋ ದೇವಾನ್ ಪ್ರಾದ್ರವತ್ಸ ಋಷೀಂಸ್ತಥಾ। (ಗೀತಾ ಪ್ರೆಸ್). ↩︎

  3. ಹಾಹಾಭೂತಂ ಜಗತ್ಸರ್ವಮುಪಲಕ್ಷ್ಯ ತದಾ ಪ್ರಭುಃ। (ಗೀತಾ ಪ್ರೆಸ್). ↩︎

  4. ಈ ಅಧ್ಯಾಯದ ನಂತರ ಗೀತಾ ಪ್ರೆಸ್ ನಲ್ಲಿ 203 ಶ್ಲೋಕಗಳ ದಕ್ಷಪ್ರೋಕ್ತಶಿವಸಹಸ್ರನಾಮಸ್ತವವೆಂಬ ಅಧ್ಯಾಯವೂ ಮತ್ತು 46 ಶ್ಲೋಕಗಳ ಪಾಂಚಭೌತಿಕವೆಂಬ ಅಧ್ಯಾಯವೂ ಅಧಿಕವಾಗಿವೆ. ಈ ಅಧ್ಯಾಯಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ↩︎