273: ಬ್ರಹ್ಮಹತ್ಯಾವಿಭಾಗಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 273

ಸಾರ

ವೃತ್ರಾಸುರನ ವಧೆ ಮತ್ತು ಅವನಿಂದ ಪ್ರಕಟಗೊಂಡ ಬ್ರಹ್ಮಹತ್ಯೆಯನ್ನು ಬ್ರಹ್ಮನು ನಾಲ್ಕು ಸ್ಥಾನಗಳಲ್ಲಿ ವಿಭಜಿಸಿದುದು (1-63).

12273001 ಭೀಷ್ಮ ಉವಾಚ।
12273001a ವೃತ್ರಸ್ಯ ತು ಮಹಾರಾಜ ಜ್ವರಾವಿಷ್ಟಸ್ಯ ಸರ್ವಶಃ।
12273001c ಅಭವನ್ಯಾನಿ ಲಿಂಗಾನಿ ಶರೀರೇ ತಾನಿ ಮೇ ಶೃಣು।।

ಭೀಷ್ಮನು ಹೇಳಿದನು: “ಮಹಾರಾಜ! ಜ್ವರದಿಂದ ಆವಿಷ್ಟವಾದ ವೃತ್ರನ ಶರೀರದಲ್ಲಿ ಯಾವ ಲಕ್ಷಣಗಳು ತೋರಿಕೊಂಡವು ಎನ್ನುವುದನ್ನು ಕೇಳು.

12273002a ಜ್ವಲಿತಾಸ್ಯೋಽಭವದ್ಘೋರೋ ವೈವರ್ಣ್ಯಂ ಚಾಗಮತ್ಪರಮ್।
12273002c ಗಾತ್ರಕಂಪಶ್ಚ ಸುಮಹಾನ್ ಶ್ವಾಸಶ್ಚಾಪ್ಯಭವನ್ಮಹಾನ್।

ಅವನ ಮುಖದಲ್ಲಿ ಘೋರ ಜಲನವುಂಟಾಯಿತು. ಅವನು ಪರಮ ವಿವರ್ಣನಾದನು. ಅವನ ದೇಹವು ಜೋರಾಗಿ ಕಂಪಿಸಿತು ಮತ್ತು ಅವನ ಉಸಿರಾಟವು ಜೋರಾಗತೊಡಗಿತು.

12273002e ರೋಮಹರ್ಷಶ್ಚ ತೀವ್ರೋಽಭೂನ್ನಿಃಶ್ವಾಸಶ್ಚ ಮಹಾನ್ನೃಪ।।
12273003a ಶಿವಾ ಚಾಶಿವಸಂಕಾಶಾ ತಸ್ಯ ವಕ್ತ್ರಾತ್ಸುದಾರುಣಾ।
12273003c ನಿಷ್ಪಪಾತ ಮಹಾಘೋರಾ ಸ್ಮೃತಿಃ ಸಾ ತಸ್ಯ ಭಾರತ।

ನೃಪ! ಭಾರತ! ತೀವ್ರ ರೋಮಹರ್ಷಣವುಂಟಾಯಿತು. ಸುಧೀರ್ಘ ನಿಃಶ್ವಾಸವು ಹೊರಹೊಮ್ಮುತ್ತಿತ್ತು. ಅವನ ಮುಖದಿಂದ ದಾರುಣ ಮಹಾಘೋರ ಅಮಂಗಳ ನರಿಯ ರೂಪದಲ್ಲಿ ಅವನ ಸ್ಮೃತಿಯು ಹೊರಬಿದ್ದಿತು.

12273003e ಉಲ್ಕಾಶ್ಚ ಜ್ವಲಿತಾಸ್ತಸ್ಯ ದೀಪ್ತಾಃ ಪಾರ್ಶ್ವೇ ಪ್ರಪೇದಿರೇ।।
12273004a ಗೃಧ್ರಕಂಕವಡಾಶ್ಚೈವ ವಾಚೋಽಮುಂಚನ್ಸುದಾರುಣಾಃ।
12273004c ವೃತ್ರಸ್ಯೋಪರಿ ಸಂಹೃಷ್ಟಾ1ಶ್ಚಕ್ರವತ್ಪರಿಬಭ್ರಮುಃ।।

ಅವನ ಪಕ್ಕಗಳಲ್ಲಿ ಪ್ರಜ್ವಲಿತ ಪ್ರಕಾಶಮಾನ ಉಲ್ಕೆಗಳು ಬೀಳತೊಡಗಿದವು. ರಣಹದ್ದುಗಳು, ಕಾಗೆಗಳು ಮತ್ತು ಬಕಪಕ್ಷಿಗಳು ದಾರುಣವಾಗಿ ಕೂಗಿಕೊಳ್ಳುತ್ತಿದ್ದವು. ವೃತ್ರನ ಮೇಲೆ ಅವು ಹರ್ಷದಿಂದ ಚಕ್ರದಂತೆ ಸುತ್ತಾಡುತ್ತಿದ್ದವು.

12273005a ತತಸ್ತಂ ರಥಮಾಸ್ಥಾಯ ದೇವಾಪ್ಯಾಯಿತಮಾಹವೇ।
12273005c ವಜ್ರೋದ್ಯತಕರಃ ಶಕ್ರಸ್ತಂ ದೈತ್ಯಂ ಪ್ರತ್ಯವೈಕ್ಷತ।।

ಬಳಿಕ ಯುದ್ಧದಲ್ಲಿ ದೇವತೆಗಳಿಂದ ಪ್ರೋತ್ಸಾಹಿತನಾದ ಶಕ್ರನು ರಥವನ್ನೇರಿ ವಜ್ರವನ್ನು ಎತ್ತಿ ಹಿಡಿದು ದೈತ್ಯನನ್ನು ವೀಕ್ಷಿಸಿದನು.

12273006a ಅಮಾನುಷಮಥೋ ನಾದಂ ಸ ಮುಮೋಚ ಮಹಾಸುರಃ।
12273006c ವ್ಯಜೃಂಭತ ಚ ರಾಜೇಂದ್ರ ತೀವ್ರಜ್ವರಸಮನ್ವಿತಃ।
12273006e ಅಥಾಸ್ಯ ಜೃಂಭತಃ ಶಕ್ರಸ್ತತೋ ವಜ್ರಮವಾಸೃಜತ್।।

ರಾಜೇಂದ್ರ! ತೀವ್ರ ಜ್ವರದಿಂದ ಪೀಡಿತನಾದ ಆ ಮಹಾಸುರನು ಅಮಾನುಷವಾಗಿ ಗರ್ಜಿಸುತ್ತಾ ಆಕಳಿಸತೊಡಗಿದನು. ಹಾಗೆ ಆಕಳಿಸುತ್ತಿದ್ದ ಅವನ ಮೇಲೆ ಶಕ್ರನು ವಜ್ರವನ್ನು ಪ್ರಯೋಗಿಸಿದನು.

12273007a ಸ ವಜ್ರಃ ಸುಮಹಾತೇಜಾಃ ಕಾಲಾಗ್ನಿಸದೃಶೋಪಮಃ।
12273007c ಕ್ಷಿಪ್ರಮೇವ ಮಹಾಕಾಯಂ ವೃತ್ರಂ ದೈತ್ಯಮಪಾತಯತ್।।

ಮಹಾತೇಜಸ್ವೀ ಕಾಲಾಗ್ನಿಯಂತಿದ್ದ ಆ ವಜ್ರವು ಕೂಡಲೇ ಆ ಮಹಾಕಾಯ ದೈತ್ಯ ವೃತ್ರನನ್ನು ಕೆಳಗುರುಳಿಸಿತು.

12273008a ತತೋ ನಾದಃ ಸಮಭವತ್ಪುನರೇವ ಸಮಂತತಃ।
12273008c ವೃತ್ರಂ ವಿನಿಹತಂ ದೃಷ್ಟ್ವಾ ದೇವಾನಾಂ ಭರತರ್ಷಭ।।

ಭರತರ್ಷಭ! ವೃತ್ರನು ಹತನಾದುದನ್ನು ನೋಡಿ ಎಲ್ಲಕಡೆಗಳಲ್ಲಿ ದೇವತೆಗಳ ಪುನಃ ನಿನಾದಗಳುಂಟಾದವು.

12273009a ವೃತ್ರಂ ತು ಹತ್ವಾ ಭಗವಾನ್ದಾನವಾರಿರ್ಮಹಾಯಶಾಃ।
12273009c ವಜ್ರೇಣ ವಿಷ್ಣುಯುಕ್ತೇನ ದಿವಮೇವ ಸಮಾವಿಶತ್।।

ಭಗವಾನ್ ದಾನವಾರಿ ಮಹಾಯಶಸ್ವೀ ಇಂದ್ರನು ವಿಷ್ಣುಯುಕ್ತವಾಗಿದ್ದ ವಜ್ರದಿಂದ ವೃತ್ರನನ್ನು ಸಂಹರಿಸಿ ಸ್ವರ್ಗವನ್ನು ಪ್ರವೇಶಿಸಿದನು.

12273010a ಅಥ ವೃತ್ರಸ್ಯ ಕೌರವ್ಯ ಶರೀರಾದಭಿನಿಃಸೃತಾ।
12273010c ಬ್ರಹ್ಮಹತ್ಯಾ2 ಮಹಾಘೋರಾ ರೌದ್ರಾ ಲೋಕಭಯಾವಹಾ।।

ಕೌರವ್ಯ! ಆಗ ವೃತ್ರನ ಶರೀರದಿಂದ ಲೋಕಕ್ಕೇ ಭಯವನ್ನುಂಟುಮಾಡುವ ಮಹಾಘೋರ, ರೌದ್ರ, ಬ್ರಹ್ಮಹತ್ಯೆಯು ಹೊರಹೊಮ್ಮಿದಳು.

12273011a ಕರಾಲದಶನಾ ಭೀಮಾ ವಿಕೃತಾ ಕೃಷ್ಣಪಿಂಗಲಾ।
12273011c ಪ್ರಕೀರ್ಣಮೂರ್ಧಜಾ ಚೈವ ಘೋರನೇತ್ರಾ ಚ ಭಾರತ।।

ಭಾರತ! ಅವಳ ಕಣ್ಣುಗಳು ಕರಾಲವಾಗಿದ್ದವು. ಅವಳು ವಿಕೃತಳೂ, ಕೃಷ್ಣಪಿಂಗಲೆಯೂ, ಭಯಂಕರಳೂ ಆಗಿದ್ದಳು. ಅವಳ ಕೂದಲುಗಳು ಕೆದರಿದ್ದವು. ಅವಳ ಕಣ್ಣುಗಳು ಘೋರವಾಗಿದ್ದವು.

12273012a ಕಪಾಲಮಾಲಿನೀ ಚೈವ ಕೃಶಾ ಚ ಭರತರ್ಷಭ3
12273012c ರುಧಿರಾರ್ದ್ರಾ ಚ ಧರ್ಮಜ್ಞ ಚೀರವಸ್ತ್ರನಿವಾಸಿನೀ।।

ಭರತರ್ಷಭ! ಧರ್ಮಜ್ಞ! ಅವಳು ಕಪಾಲಗಳ ಮಾಲೆಯನ್ನು ಧರಿಸಿದ್ದಳು. ಕೃಶಳಾಗಿದ್ದಳು. ರಕ್ತದಿಂದ ತೋಯ್ದಿದ್ದಳು. ಹರಕು ನಾರುಬಟ್ಟೆಗಳನ್ನು ಉಟ್ಟಿದ್ದಳು.

12273013a ಸಾಭಿನಿಷ್ಕ್ರಮ್ಯ ರಾಜೇಂದ್ರ ತಾದೃಗ್ರೂಪಾ ಭಯಾವಹಾ।
12273013c ವಜ್ರಿಣಂ ಮೃಗಯಾಮಾಸ ತದಾ ಭರತಸತ್ತಮ।।

ರಾಜೇಂದ್ರ! ಭರತಸತ್ತಮ! ಅಂತಹ ಭಯಂಕರ ರೂಪದ ಅವಳು ವೃತ್ರನ ಮೃತಶರೀರದಿಂದ ಹೊರಬಂದು ವಜ್ರಿ ಇಂದ್ರನನ್ನು ಹುಡುಕತೊಡಗಿದಳು.

12273014a ಕಸ್ಯ ಚಿತ್ತ್ವಥ ಕಾಲಸ್ಯ ವೃತ್ರಹಾ ಕುರುನಂದನ।
12273014c ಸ್ವರ್ಗಾಯಾಭಿಮುಖಃ ಪ್ರಾಯಾಲ್ಲೋಕಾನಾಂ ಹಿತಕಾಮ್ಯಯಾ।।

ಕುರುನಂದನ! ಅದೇ ಸಮಯದಲ್ಲಿ ವೃತ್ರಹನು ಲೋಕಗಳ ಹಿತವನ್ನು ಬಯಸಿ ಸ್ವರ್ಗಾಭಿಮುಖವಾಗಿ ಹೋಗುತ್ತಿದ್ದನು.

12273015a ಬಿಸಾನ್ನಿಃಸರಮಾಣಂ4 ತು ದೃಷ್ಟ್ವಾ ಶಕ್ರಂ ಮಹೌಜಸಮ್।
12273015c ಕಂಠೇ ಜಗ್ರಾಹ5 ದೇವೇಂದ್ರಂ ಸುಲಗ್ನಾ ಚಾಭವತ್ತದಾ।।

ಯುದ್ಧದಿಂದ ಹಿಂದಿರುಗುತ್ತಿದ್ದ ಮಹೌಜಸ ಶಕ್ರನನ್ನು ನೋಡಿ ಅವಳು ದೇವೇಂದ್ರನ ಕುತ್ತಿಗೆಯನ್ನು ಹಿಡಿದು ಅವನ ಶರೀರಕ್ಕೆ ಅಂಟಿಕೊಂಡಳು.

12273016a ಸ ಹಿ ತಸ್ಮಿನ್ಸಮುತ್ಪನ್ನೇ ಬ್ರಹ್ಮಹತ್ಯಾಕೃತೇ ಭಯೇ।
12273016c ನಲಿನ್ಯಾಂ ಬಿಸಮಧ್ಯಸ್ಥೋ ಬಭೂವಾಬ್ದಗಣಾನ್ಬಹೂನ್।।

ಬ್ರಹ್ಮಹತ್ಯೆಯು ಮಾಡಿದ ಆ ಭಯವು ಅವನಲ್ಲಿ ಉತ್ಪನ್ನವಾಗಲು ಇಂದ್ರನು ಅನೇಕ ವರ್ಷಗಳು ಕಮಲದ ನಾಳದ ಮಧ್ಯದಲ್ಲಿಯೇ ಅಡಗಿದ್ದನು.

12273017a ಅನುಸೃತ್ಯ ತು ಯತ್ನಾತ್ಸ ತಯಾ ವೈ ಬ್ರಹ್ಮಹತ್ಯಯಾ।
12273017c ತದಾ ಗೃಹೀತಃ ಕೌರವ್ಯ ನಿಶ್ಚೇಷ್ಟಃ ಸಮಪದ್ಯತ।।

ಕೌರವ್ಯ! ಪ್ರಯತ್ನಪಟ್ಟು ಅವನನ್ನೇ ಅನುಸರಿಸಿ ಬರುತ್ತಿದ್ದ ಬ್ರಹ್ಮಹತ್ಯೆಯು ಅವನನ್ನು ಹಿಡಿದುಬಿಟ್ಟಳು. ಕೂಡಲೇ ಇಂದ್ರನು ನಿಶ್ಚೇಷ್ಟನಾದನು.

12273018a ತಸ್ಯಾ ವ್ಯಪೋಹನೇ ಶಕ್ರಃ ಪರಂ ಯತ್ನಂ ಚಕಾರ ಹ।
12273018c ನ ಚಾಶಕತ್ತಾಂ ದೇವೇಂದ್ರೋ ಬ್ರಹ್ಮಹತ್ಯಾಂ ವ್ಯಪೋಹಿತುಮ್।।

ಅವಳನ್ನು ಕಳೆದುಕೊಳ್ಳಲು ಶಕ್ರನು ಪರಮ ಯತ್ನವನ್ನು ಮಾಡಿದನು. ಆದರೂ ದೇವೇಂದ್ರನು ಬ್ರಹ್ಮಹತ್ಯೆಯನ್ನು ದೂರೀಕರಿಸಲು ಅಶಕ್ತನಾದನು.

12273019a ಗೃಹೀತ ಏವ ತು ತಯಾ ದೇವೇಂದ್ರೋ ಭರತರ್ಷಭ।
12273019c ಪಿತಾಮಹಮುಪಾಗಮ್ಯ ಶಿರಸಾ ಪ್ರತ್ಯಪೂಜಯತ್।।

ಭರತರ್ಷಭ! ಬ್ರಹ್ಮಹತ್ಯೆಯು ಹಿಡಿದುಕೊಂಡಿರುವಾಗಲೇ ದೇವೇಂದ್ರನು ಪಿತಾಮಹನ ಬಳಿಸಾರಿ ಶಿರಸಾ ವಂದಿಸಿ ಪೂಜಿಸಿದನು.

12273020a ಜ್ಞಾತ್ವಾ ಗೃಹೀತಂ ಶಕ್ರಂ ತು ದ್ವಿಜಪ್ರವರಹತ್ಯಯಾ।
12273020c ಬ್ರಹ್ಮಾ ಸಂಚಿಂತಯಾಮಾಸ ತದಾ ಭರತಸತ್ತಮ।।

ಭರತಸತ್ತಮ! ದ್ವಿಜಪ್ರವರನನ್ನು ಕೊಂದುದಕ್ಕಾಗಿ ಬ್ರಹ್ಮಹತ್ಯೆಯು ಇಂದ್ರನನ್ನು ಹಿಡಿದುಕೊಂಡಿದ್ದುದನ್ನು ತಿಳಿದ ಬ್ರಹ್ಮನು ಯೋಚಿಸತೊಡಗಿದನು.

12273021a ತಾಮುವಾಚ ಮಹಾಬಾಹೋ ಬ್ರಹ್ಮಹತ್ಯಾಂ ಪಿತಾಮಹಃ।
12273021c ಸ್ವರೇಣ ಮಧುರೇಣಾಥ ಸಾಂತ್ವಯನ್ನಿವ ಭಾರತ।।

ಮಹಾಬಾಹೋ! ಭಾರತ! ಆಗ ಪಿತಾಮಹನು ಬ್ರಹ್ಮಹತ್ಯೆಗೆ ಮಧುರ ಸ್ವರದಿಂದ ಸಂತವಿಸುತ್ತಾ ಹೀಗೆಂದನು:

12273022a ಮುಚ್ಯತಾಂ ತ್ರಿದಶೇಂದ್ರೋಽಯಂ ಮತ್ಪ್ರಿಯಂ ಕುರು ಭಾಮಿನಿ।
12273022c ಬ್ರೂಹಿ ಕಿಂ ತೇ ಕರೋಮ್ಯದ್ಯ ಕಾಮಂ ಕಂ ತ್ವಮಿಹೇಚ್ಚಸಿ।।

“ಭಾಮಿನೀ! ಈ ತ್ರಿದಶೇಂದ್ರನನ್ನು ಬಿಟ್ಟು ನನಗೆ ಪ್ರಿಯವಾದುದನ್ನು ಮಾಡು. ಇಂದು ನಾನು ನಿನಗೆ ಏನು ಮಾಡಬೇಕೆಂದು ಹೇಳು. ನೀನು ಬಯಸಿದುದನ್ನು ಮಾಡುತ್ತೇನೆ.”

12273023 ಬ್ರಹ್ಮಹತ್ಯೋವಾಚ।
12273023a ತ್ರಿಲೋಕಪೂಜಿತೇ ದೇವೇ ಪ್ರೀತೇ ತ್ರೈಲೋಕ್ಯಕರ್ತರಿ।
12273023c ಕೃತಮೇವೇಹ ಮನ್ಯೇಽಹಂ ನಿವಾಸಂ ತು ವಿಧತ್ಸ್ವ ಮೇ।।

ಬ್ರಹ್ಮಹತ್ಯೆಯು ಹೇಳಿದಳು: “ತ್ರಿಲೋಕಪೂಜಿತನಾದ ತ್ರಿಲೋಕಗಳನ್ನೂ ಮಾಡಿದ ದೇವನೇ ಪ್ರೀತನಾದನೆಂದರೆ ನಾನು ಕೃತಕೃತ್ಯಳಾದೆನೆಂದೇ ಭಾವಿಸುತ್ತೇನೆ. ಈಗ ನನಗೆ ನಿವಾಸವನ್ನು ವಿಧಿಸು.

12273024a ತ್ವಯಾ ಕೃತೇಯಂ ಮರ್ಯಾದಾ ಲೋಕಸಂರಕ್ಷಣಾರ್ಥಿನಾ।
12273024c ಸ್ಥಾಪನಾ ವೈ ಸುಮಹತೀ ತ್ವಯಾ ದೇವ ಪ್ರವರ್ತಿತಾ।।

ಲೋಕಸಂರಕ್ಷಣಾರ್ಥವಾಗಿಯೇ ನೀನು ಈ ಮರ್ಯಾದೆಗಳನ್ನು ನಿರ್ಮಿಸಿದ್ದೀಯೆ. ದೇವ! ಈ ಮಹಾ ಮರ್ಯಾದೆಯನ್ನು ಸ್ಥಾಪಿಸಿದುದಲ್ಲದೇ ನೀನೇ ಇದನ್ನು ನಡೆಸಿಕೊಂಡು ಬಂದಿದ್ದೀಯೆ.

12273025a ಪ್ರೀತೇ ತು ತ್ವಯಿ ಧರ್ಮಜ್ಞ ಸರ್ವಲೋಕೇಶ್ವರೇ ಪ್ರಭೋ।
12273025c ಶಕ್ರಾದಪಗಮಿಷ್ಯಾಮಿ ನಿವಾಸಂ ತು ವಿಧತ್ಸ್ವ ಮೇ।।

ಸರ್ವಲೋಕೇಶ್ವರ! ಪ್ರಭೋ! ಧರ್ಮಜ್ಞ! ನಿನಗೆ ಇಷ್ಟವಾದರೆ ಈಗಲೇ ನಾನು ಶಕ್ರನನ್ನು ಬಿಟ್ಟು ಹೋಗುತ್ತೇನೆ. ಆದರೆ ನನಗೆ ನಿವಾಸವನ್ನು ಕಲ್ಪಿಸಿಕೊಡು.”

12273026 ಭೀಷ್ಮ ಉವಾಚ।
12273026a ತಥೇತಿ ತಾಂ ಪ್ರಾಹ ತದಾ ಬ್ರಹ್ಮಹತ್ಯಾಂ ಪಿತಾಮಹಃ।
12273026c ಉಪಾಯತಃ ಸ ಶಕ್ರಸ್ಯ ಬ್ರಹ್ಮಹತ್ಯಾಂ ವ್ಯಪೋಹತ।।

ಭೀಷ್ಮನು ಹೇಳಿದನು: “ಆಗ ಪಿತಾಮಹನು ಬ್ರಹ್ಮಹತ್ಯೆಗೆ ಹಾಗೆಯೇ ಆಗಲಿ ಎಂದು ಹೇಳಿ ಉಪಾಯದಿಂದ ಶಕ್ರನಲ್ಲಿದ್ದ ಬ್ರಹ್ಮಹತ್ಯೆಯು ಹೊರಬರುವಂತೆ ಮಾಡಿದನು.

12273027a ತತಃ ಸ್ವಯಂಭುವಾ ಧ್ಯಾತಸ್ತತ್ರ ವಹ್ನಿರ್ಮಹಾತ್ಮನಾ।
12273027c ಬ್ರಹ್ಮಾಣಮುಪಸಂಗಮ್ಯ ತತೋ ವಚನಮಬ್ರವೀತ್।।

ಬಳಿಕ ಮಹಾತ್ಮಾ ಸ್ವಯಂಭುವನು ಅಲ್ಲಿಯೇ ಅಗ್ನಿಯನ್ನು ಧ್ಯಾನಿಸಿದನು. ಅಗ್ನಿಯು ಬ್ರಹ್ಮನ ಬಳಿಸಾರಿ ಹೀಗೆಂದನು:

12273028a ಪ್ರಾಪ್ತೋಽಸ್ಮಿ ಭಗವನ್ದೇವ ತ್ವತ್ಸಕಾಶಮರಿಂದಮ।
12273028c ಯತ್ಕರ್ತವ್ಯಂ ಮಯಾ ದೇವ ತದ್ಭವಾನ್ವಕ್ತುಮರ್ಹತಿ।।

“ಭಗವನ್! ದೇವ! ಅರಿಂದಮ! ನಾನು ನಿನ್ನ ಬಳಿ ಬಂದಿದ್ದೇನೆ. ದೇವ! ನಾನು ಏನು ಮಾಡಬೇಕೆನ್ನುವುದನ್ನು ಹೇಳಬೇಕು.”

12273029 ಬ್ರಹ್ಮೋವಾಚ।
12273029a ಬಹುಧಾ ವಿಭಜಿಷ್ಯಾಮಿ ಬ್ರಹ್ಮಹತ್ಯಾಮಿಮಾಮಹಮ್।
12273029c ಶಕ್ರಸ್ಯಾದ್ಯ ವಿಮೋಕ್ಷಾರ್ಥಂ ಚತುರ್ಭಾಗಂ ಪ್ರತೀಚ್ಚ ಮೇ।।

ಬ್ರಹ್ಮನು ಹೇಳಿದನು: “ಇಂದು ಇಂದ್ರನನ್ನು ಪಾಪವಿಮುಕ್ತನನ್ನಾಗಿಸಲು ಈ ಬ್ರಹ್ಮಹತ್ಯೆಯನ್ನು ಅನೇಕ ಭಾಗಗಳನ್ನಾಗಿ ವಿಭಜಿಸುತ್ತೇನೆ. ಇವಳ ನಾಲ್ಕನೆಯ ಒಂದು ಭಾಗವನ್ನು ನೀನು ಸ್ವೀಕರಿಸು.”

12273030 ಅಗ್ನಿರುವಾಚ।
12273030a ಮಮ ಮೋಕ್ಷಸ್ಯ ಕೋಽಂತೋ ವೈ ಬ್ರಹ್ಮನ್ಧ್ಯಾಯಸ್ವ ವೈ ಪ್ರಭೋ।
12273030c ಏತದಿಚ್ಚಾಮಿ ವಿಜ್ಞಾತುಂ ತತ್ತ್ವತೋ ಲೋಕಪೂಜಿತ।।

ಅಗ್ನಿಯು ಹೇಳಿದನು: “ಬ್ರಹ್ಮನ್! ಪ್ರಭೋ! ಲೋಕಪೂಜಿತ! ಇದರ ಅಂತ್ಯವು ಯಾವಾಗ ಮತ್ತು ಯಾವಾಗ ನನಗೂ ಇದರಿಂದ ಬಿಡುಗಡೆಯಾಗುತ್ತದೆ ಎನ್ನುವುದರ ಕುರಿತು ಯೋಚಿಸು. ಇದನ್ನು ತತ್ತ್ವತಃ ತಿಳಿದುಕೊಳ್ಳಲು ಬಯಸುತ್ತೇನೆ.”

12273031 ಬ್ರಹ್ಮೋವಾಚ।
12273031a ಯಸ್ತ್ವಾಂ ಜ್ವಲಂತಮಾಸಾದ್ಯ ಸ್ವಯಂ ವೈ ಮಾನವಃ ಕ್ವ ಚಿತ್।
12273031c ಬೀಜೌಷಧಿರಸೈರ್ವಹ್ನೇ ನ ಯಕ್ಷ್ಯತಿ ತಮೋವೃತಃ।।
12273032a ತಮೇಷಾ ಯಾಸ್ಯತಿ ಕ್ಷಿಪ್ರಂ ತತ್ರೈವ ಚ ನಿವತ್ಸ್ಯತಿ।
12273032c ಬ್ರಹ್ಮಹತ್ಯಾ ಹವ್ಯವಾಹ ವ್ಯೇತು ತೇ ಮಾನಸೋ ಜ್ವರಃ।।

ಬ್ರಹ್ಮನು ಹೇಳಿದನು: “ವಹ್ನೇ! ಪ್ರಜ್ವಲಿಸುತ್ತಿರುವ ನಿನ್ನ ಬಳಿಬಂದು ತಮಸ್ಸಿನಿಂದ ಆವೃತನಾಗಿ ಬೀಜ-ಔಷಧಿಗಳಿಂದ ನಿನ್ನನ್ನು ಯಜಿಸದೇ ಇರುವ ಮನುಷ್ಯನನ್ನು ಕೂಡಲೇ ಈ ಬ್ರಹ್ಮಹತ್ಯೆಯು ಪ್ರವೇಶಿಸಿ ಅವನಲ್ಲಿಯೇ ವಾಸಿಸುತ್ತಾಳೆ. ಹವ್ಯವಾಹ! ನಿನ್ನ ಮಾನಸ ಜ್ವರವನ್ನು ಕಳೆದುಕೋ!””

12273033 ಭೀಷ್ಮ ಉವಾಚ।
12273033a ಇತ್ಯುಕ್ತಃ ಪ್ರತಿಜಗ್ರಾಹ ತದ್ವಚೋ ಹವ್ಯಕವ್ಯಭುಕ್।
12273033c ಪಿತಾಮಹಸ್ಯ ಭಗವಾಂಸ್ತಥಾ ಚ ತದಭೂತ್ ಪ್ರಭೋ।।

ಭೀಷ್ಮನು ಹೇಳಿದನು: “ಪ್ರಭೋ! ಪಿತಾಮಹನು ಹೀಗೆ ಹೇಳಲು ಭಗವಾನ್ ಹವ್ಯಕವ್ಯಭುಕ್ ಅಗ್ನಿಯು ಅದನ್ನು ಸ್ವೀಕರಿಸಿದನು. ಆಗ ಅವನ ಮಾತಿನಂತೆಯೇ ಆಯಿತು.

12273034a ತತೋ ವೃಕ್ಷೌಷಧಿತೃಣಂ ಸಮಾಹೂಯ ಪಿತಾಮಹಃ।
12273034c ಇಮಮರ್ಥಂ ಮಹಾರಾಜ ವಕ್ತುಂ ಸಮುಪಚಕ್ರಮೇ।।

ಮಹಾರಾಜ! ಅನಂತರ ಪಿತಾಮಹನು ವೃಕ್ಷ-ಔಷಧಿ-ತೃಣಗಳನ್ನು ಕರೆದು ಅದೇ ಅಭಿಪ್ರಾಯವನ್ನು ಅವರಿಗೂ ಹೇಳಿದನು.

612273035a ತತೋ ವೃಕ್ಷೌಷಧಿತೃಣಂ ತಥೈವೋಕ್ತಂ ಯಥಾತಥಮ್।
12273035c ವ್ಯಥಿತಂ ವಹ್ನಿವದ್ರಾಜನ್ ಬ್ರಹ್ಮಾಣಮಿದಮಬ್ರವೀತ್।।

ರಾಜನ್! ಯಥಾವತ್ತಾಗಿ ಅವನು ಹೀಗೆ ಹೇಳಲು ಅಗ್ನಿಯಂತೆ ವೃಕ್ಷ-ಔಷಧಿ-ತೃಣಗಳೂ ವ್ಯಥಿತಗೊಂಡು ಬ್ರಹ್ಮನಿಗೆ ಇದನ್ನು ಹೇಳಿದವು:

12273036a ಅಸ್ಮಾಕಂ ಬ್ರಹ್ಮಹತ್ಯಾತೋ ಕೋಽಂತೋ ಲೋಕಪಿತಾಮಹ।
12273036c ಸ್ವಭಾವನಿಹತಾನಸ್ಮಾನ್ನ ಪುನರ್ಹಂತುಮರ್ಹಸಿ।।

“ಲೋಕಪಿತಾಮಹ! ನಮ್ಮ ಈ ಬ್ರಹ್ಮಹತ್ಯೆಯು ಯಾವಾಗ ಕೊನೆಗೊಳ್ಳುತ್ತದೆ? ಸ್ವಬಾವತಃ ನಾವು ಸ್ಥಾವರ ಯೋನಿಯಲ್ಲಿ ಬಿದ್ದಿದ್ದೇವೆ. ಪುನಃ ನಮ್ಮನ್ನು ಸಾಯಿಸಬಾರದು.

12273037a ವಯಮಗ್ನಿಂ ತಥಾ ಶೀತಂ ವರ್ಷಂ ಚ ಪವನೇರಿತಮ್।
12273037c ಸಹಾಮಃ ಸತತಂ ದೇವ ತಥಾ ಚೇದನಭೇದನಮ್।।

ದೇವ! ನಾವು ಸತತವೂ ಬೇಗೆ, ಛಳಿ, ಮಳೆ, ಭಿರುಗಾಳಿ, ಮತ್ತು ಕತ್ತರಿಸುವುದನ್ನು ಮತ್ತು ತುಂಡರಿಸುವುದನ್ನು ಸಹಿಸಿಕೊಳ್ಳುತ್ತಿದ್ದೇವೆ.

12273038a ಬ್ರಹ್ಮಹತ್ಯಾಮಿಮಾಮದ್ಯ ಭವತಃ ಶಾಸನಾದ್ವಯಮ್।
12273038c ಗ್ರಹೀಷ್ಯಾಮಸ್ತ್ರಿಲೋಕೇಶ ಮೋಕ್ಷಂ ಚಿಂತಯತಾಂ ಭವಾನ್।।

ನಿನ್ನ ಶಾಸನದಂತೆ ಇಂದು ನಾವು ಈ ಬ್ರಹ್ಮಹತ್ಯೆಯನ್ನೂ ಸ್ವೀಕರಿಸುತ್ತೇವೆ. ತ್ರಿಲೋಕೇಶ! ಆದರೆ ಇವುಗಳಿಂದ ನಮಗೆ ಮೋಕ್ಷವು ಹೇಗಾಗುವುದೆನ್ನುವುದರ ಕುರಿತು ನೀನು ಯೋಚಿಸಬೇಕು.”

12273039 ಬ್ರಹ್ಮೋವಾಚ।
12273039a ಪರ್ವಕಾಲೇ ತು ಸಂಪ್ರಾಪ್ತೇ ಯೋ ವೈ ಚೇದನಭೇದನಮ್।
12273039c ಕರಿಷ್ಯತಿ ನರೋ ಮೋಹಾತ್ತಮೇಷಾನುಗಮಿಷ್ಯತಿ।।

ಬ್ರಹ್ಮನು ಹೇಳಿದನು: “ಪರ್ವಕಾಲವು ಬಂದೊದಗಿದಾಗ ಮೋಹದಿಂದ ನಿಮ್ಮನ್ನು ಕಡಿದು ತುಂಡರಿಸುವ ನರನ ಹಿಂದೆಯೇ ಇದು ನಿಮ್ಮನ್ನು ಬಿಟ್ಟು ಹೊರಟುಹೋಗುತ್ತದೆ7.””

12273040 ಭೀಷ್ಮ ಉವಾಚ।
12273040a ತತೋ ವೃಕ್ಷೌಷಧಿತೃಣಮೇವಮುಕ್ತಂ ಮಹಾತ್ಮನಾ।
12273040c ಬ್ರಹ್ಮಾಣಮಭಿಸಂಪೂಜ್ಯ ಜಗಾಮಾಶು ಯಥಾಗತಮ್।।

ಭೀಷ್ಮನು ಹೇಳಿದನು: “ಮಹಾತ್ಮ ಬ್ರಹ್ಮನು ಹೀಗೆ ಹೇಳಲು ವೃಕ್ಷ-ಔಷಧಿ-ತೃಣಗಳು ಅವನನ್ನು ನಮಸ್ಕರಿಸಿ ಎಲ್ಲಿಂದ ಬಂದಿದ್ದವೋ ಅಲ್ಲಿಗೆ ಹೊರಟುಹೋದವು.

12273041a ಆಹೂಯಾಪ್ಸರಸೋ ದೇವಸ್ತತೋ ಲೋಕಪಿತಾಮಹಃ।
12273041c ವಾಚಾ ಮಧುರಯಾ ಪ್ರಾಹ ಸಾಂತ್ವಯನ್ನಿವ ಭಾರತ।।

ಭಾರತ! ಅನಂತರ ಲೋಕಪಿತಾಮಹ ದೇವನು ಅಪ್ಸರೆಯರನ್ನು ಕರೆದು ಅವರನ್ನು ಮಧುರ ಮಾತಿನಿಂದ ಸಂತವಿಸುತ್ತಾ ಹೇಳಿದನು:

12273042a ಇಯಮಿಂದ್ರಾದನುಪ್ರಾಪ್ತಾ ಬ್ರಹ್ಮಹತ್ಯಾ ವರಾಂಗನಾಃ।
12273042c ಚತುರ್ಥಮಸ್ಯಾ ಭಾಗಂ ಹಿ ಮಯೋಕ್ತಾಃ ಸಂಪ್ರತೀಚ್ಚತ।।

“ವರಾಂಗನೆಯರೇ! ಇಂದ್ರನು ಪಡೆದುಕೊಂಡಿರುವ ಈ ಬ್ರಹ್ಮಹತ್ಯೆಯ ನಾಲ್ಕನೇ ಒಂದು ಭಾಗವನ್ನು ನಾನು ಹೇಳಿದಂತೆ ನೀವು ಸ್ವೀಕರಿಸಿರಿ.”

12273043 ಅಪ್ಸರಸ ಊಚುಃ।
12273043a ಗ್ರಹಣೇ ಕೃತಬುದ್ಧೀನಾಂ ದೇವೇಶ ತವ ಶಾಸನಾತ್।
12273043c ಮೋಕ್ಷಂ ಸಮಯತೋಽಸ್ಮಾಕಂ ಚಿಂತಯಸ್ವ ಪಿತಾಮಹ।।

ಅಪ್ಸರೆಯರು ಹೇಳಿದರು: “ದೇವೇಶ! ಪಿತಾಮಹ! ನಿನ್ನ ಶಾಸನದಂತೆ ಇದನ್ನು ಸ್ವೀಕರಿಸಲು ನಿಶ್ಚಯಿಸಿದ್ದೇವೆ. ಆದರೆ ನಮಗೆ ಇದರಿಂದ ಮೋಕ್ಷದೊರೆಯುವ ಸಮಯವನ್ನು ಯೋಚಿಸು!”

12273044 ಬ್ರಹ್ಮೋವಾಚ।
12273044a ರಜಸ್ವಲಾಸು ನಾರೀಷು ಯೋ ವೈ ಮೈಥುನಮಾಚರೇತ್।
12273044c ತಮೇಷಾ ಯಾಸ್ಯತಿ ಕ್ಷಿಪ್ರಂ ವ್ಯೇತು ವೋ ಮಾನಸೋ ಜ್ವರಃ।।

ಬ್ರಹ್ಮನು ಹೇಳಿದನು: “ರಜಸ್ವಲೆ ನಾರಿಯರೊಂದಿಗೆ ಮೈಥುನವನ್ನಾಚರಿಸುವವರ ಹಿಂದೆಯೇ ಇದು ಕ್ಷಿಪ್ರವಾಗಿ ಹೊರಟುಹೋಗುತ್ತದೆ. ನಿಮ್ಮ ಮಾನಸಜ್ವರವನ್ನು ಕಳೆದುಕೊಳ್ಳಿ.””

12273045 ಭೀಷ್ಮ ಉವಾಚ।
12273045a ತಥೇತಿ ಹೃಷ್ಟಮನಸ ಉಕ್ತ್ವಾಥಾಪ್ಸರಸಾಂ ಗಣಾಃ।
12273045c ಸ್ವಾನಿ ಸ್ಥಾನಾನಿ ಸಂಪ್ರಾಪ್ಯ ರೇಮಿರೇ ಭರತರ್ಷಭ।।

ಭೀಷ್ಮನು ಹೇಳಿದನು: “ಭರತರ್ಷಭ! ಹಾಗೆಯೇ ಆಗಲೆಂದು ಹೇಳಿ ಅಪ್ಸರಗಣಗಳು ತಮ್ಮ ತಮ್ಮ ಸ್ಥಾನಗಳಿಗೆ ತೆರಳಿ ರಮಿಸಿದವು.

12273046a ತತಸ್ತ್ರಿಲೋಕಕೃದ್ದೇವಃ ಪುನರೇವ ಮಹಾತಪಾಃ।
12273046c ಅಪಃ ಸಂಚಿಂತಯಾಮಾಸ ಧ್ಯಾತಾಸ್ತಾಶ್ಚಾಪ್ಯಥಾಗಮನ್।।

ಅನಂತರ ತ್ರಿಲೋಕಕೃತ್ ದೇವ ಮಹಾತಪಸ್ವಿಯು ಜಲದ ಕುರಿತು ಯೋಚಿಸಿದನು. ಅವನು ಧ್ಯಾನಿಸಿದೊಡನೆಯೇ ಜಲದೇವತೆಗಳು ಅಲ್ಲಿಗೆ ಆಗಮಿಸಿದವು.

12273047a ತಾಸ್ತು ಸರ್ವಾಃ ಸಮಾಗಮ್ಯ ಬ್ರಹ್ಮಾಣಮಮಿತೌಜಸಮ್।
12273047c ಇದಮೂಚುರ್ವಚೋ ರಾಜನ್ಪ್ರಣಿಪತ್ಯ ಪಿತಾಮಹಮ್।।

ರಾಜನ್! ಆಗ ಅವರೆಲ್ಲರೂ ಅಮಿತೌಜಸ ಬ್ರಹ್ಮನ ಬಳಿಬಂದು ಪಿತಾಮಹನಿಗೆ ನಮಸ್ಕರಿಸಿ ಈ ಮಾತನ್ನಾಡಿದರು:

12273048a ಇಮಾಃ ಸ್ಮ ದೇವ ಸಂಪ್ರಾಪ್ತಾಸ್ತ್ವತ್ಸಕಾಶಮರಿಂದಮ।
12273048c ಶಾಸನಾತ್ತವ ದೇವೇಶ ಸಮಾಜ್ಞಾಪಯ ನೋ ವಿಭೋ।।

“ದೇವ! ಅರಿಂದಮ! ದೇವೇಶ! ವಿಭೋ! ಇದೋ ನಾವೆಲ್ಲರೂ ನಿನ್ನ ಶಾಸನದಂತೆ ನಿನ್ನ ಬಳಿ ಬಂದಿದ್ದೇವೆ. ನಮಗೆ ಆಜ್ಞಾಪಿಸು!”

12273049 ಬ್ರಹ್ಮೋವಾಚ।
12273049a ಇಯಂ ವೃತ್ರಾದನುಪ್ರಾಪ್ತಾ ಪುರುಹೂತಂ ಮಹಾಭಯಾ।
12273049c ಬ್ರಹ್ಮಹತ್ಯಾ ಚತುರ್ಥಾಂಶಮಸ್ಯಾ ಯೂಯಂ ಪ್ರತೀಚ್ಚತ।।

ಬ್ರಹ್ಮನು ಹೇಳಿದನು: “ಇಂದ್ರನು ವೃತ್ರನಿಂದ ಈ ಮಹಾಭಯಂಕರ ಬ್ರಹ್ಮಹತ್ಯೆಯನ್ನು ಪಡೆದುಕೊಂಡಿದ್ದಾನೆ. ಇವಳ ಚತುರ್ಥಾಂಶವನ್ನು ನೀವು ಸ್ವೀಕರಿಸಿರಿ.”

12273050 ಆಪ ಊಚುಃ।
12273050a ಏವಂ ಭವತು ಲೋಕೇಶ ಯಥಾ ವದಸಿ ನಃ ಪ್ರಭೋ।
12273050c ಮೋಕ್ಷಂ ಸಮಯತೋಽಸ್ಮಾಕಂ ಸಂಚಿಂತಯಿತುಮರ್ಹಸಿ।।

ಜಲದೇವತೆಗಳು ಹೇಳಿದರು: “ಲೋಕೇಶ! ಪ್ರಭೋ! ನೀನು ಹೇಳಿದಂತೆಯೇ ನಮಗಾಗಲಿ. ಆದರೆ ಇವಳಿಂದ ನಮ್ಮ ಮೋಕ್ಷವಾಗುವುದರ ಕುರಿತು ಯೋಚಿಸಬೇಕು.

12273051a ತ್ವಂ ಹಿ ದೇವೇಶ ಸರ್ವಸ್ಯ ಜಗತಃ ಪರಮೋ ಗುರುಃ।
12273051c ಕೋಽನ್ಯಃ ಪ್ರಸಾದೋ ಹಿ ಭವೇದ್ಯಃ ಕೃಚ್ಚ್ರಾನ್ನಃ ಸಮುದ್ಧರೇತ್।।

ದೇವೇಶ! ನೀನೇ ಸರ್ವ ಜಗತ್ತಿನ ಪರಮ ಗುರುವು. ಈ ಕಷ್ಟದಿಂದ ನಮ್ಮನ್ನು ಉದ್ಧರಿಸದೇ ಬೇರೆ ಯಾವುದು ನಮಗೆ ನಿನ್ನ ಪ್ರಸಾದವಾಗಬಲ್ಲದು?”

12273052 ಬ್ರಹ್ಮೋವಾಚ।
12273052a ಅಲ್ಪಾ ಇತಿ ಮತಿಂ ಕೃತ್ವಾ ಯೋ ನರೋ ಬುದ್ಧಿಮೋಹಿತಃ।
12273052c ಶ್ಲೇಷ್ಮಮೂತ್ರಪುರೀಷಾಣಿ ಯುಷ್ಮಾಸು ಪ್ರತಿಮೋಕ್ಷ್ಯತಿ।।
12273053a ತಮೇಷಾ ಯಾಸ್ಯತಿ ಕ್ಷಿಪ್ರಂ ತತ್ರೈವ ಚ ನಿವತ್ಸ್ಯತಿ।
12273053c ತಥಾ ವೋ ಭವಿತಾ ಮೋಕ್ಷ ಇತಿ ಸತ್ಯಂ ಬ್ರವೀಮಿ ವಃ।।

ಬ್ರಹ್ಮನು ಹೇಳಿದನು: “ಬುದ್ಧಿಮೋಹಿತನಾಗಿ ನೀವು ಅಲ್ಪರೆಂದು ತಿಳಿದು ನಿಮ್ಮಲ್ಲಿ ಕಫ-ಮಲ-ಮೂತ್ರಗಳನ್ನು ವಿಸರ್ಜಿಸುವ ನರನನ್ನೇ ಇದು ಕ್ಷಿಪ್ರವಾಗಿ ಹಿಂಬಾಲಿಸಿ ಹೋಗಿ ಅವನಲ್ಲಿಯೇ ವಾಸಿಸುತ್ತದೆ. ಆಗ ಇವಳಿಂದ ನಿಮಗೆ ಬಿಡುಗಡೆಯಾಗುತ್ತದೆ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ.””

12273054 ಭೀಷ್ಮ ಉವಾಚ।
12273054a ತತೋ ವಿಮುಚ್ಯ ದೇವೇಂದ್ರಂ ಬ್ರಹ್ಮಹತ್ಯಾ ಯುಧಿಷ್ಠಿರ।
12273054c ಯಥಾನಿಸೃಷ್ಟಂ ತಂ ದೇಶಮಗಚ್ಚದ್ದೇವಶಾಸನಾತ್।।

ಭೀಷ್ಮನು ಹೇಳಿದನು: “ಯುಧಿಷ್ಠಿರ! ಅನಂತರ ಬ್ರಹ್ಮಹತ್ಯೆಯು ದೇವೇಂದ್ರನನ್ನು ಬಿಟ್ಟು ದೇವಶಾಸನದಂತೆ ಅವನು ನಿರ್ದೇಶಿಸಿದ ಜಾಗಗಳಿಗೆ ಹೊರಟುಹೋದಳು.

12273055a ಏವಂ ಶಕ್ರೇಣ ಸಂಪ್ರಾಪ್ತಾ ಬ್ರಹ್ಮಹತ್ಯಾ ಜನಾಧಿಪ।
12273055c ಪಿತಾಮಹಮನುಜ್ಞಾಪ್ಯ ಸೋಽಶ್ವಮೇಧಮಕಲ್ಪಯತ್।।

ಜನಾಧಿಪ! ಹೀಗೆ ಇಂದ್ರನು ಬ್ರಹ್ಮಹತ್ಯೆಯನ್ನು ಪಡೆದುಕೊಂಡು, ಪಿತಾಮಹನ ಆಜ್ಞೆಯಂತೆ ಅಶ್ವಮೇಧವನ್ನು ನೆರವೇರಿಸಿದನು.

12273056a ಶ್ರೂಯತೇ ಹಿ ಮಹಾರಾಜ ಸಂಪ್ರಾಪ್ತಾ ವಾಸವೇನ ವೈ।
12273056c ಬ್ರಹ್ಮಹತ್ಯಾ ತತಃ ಶುದ್ಧಿಂ ಹಯಮೇಧೇನ ಲಬ್ಧವಾನ್।।

ಮಹಾರಾಜ! ಹಯಮೇಧದಿಂದ ವಾಸವನು ಬ್ರಹ್ಮಹತ್ಯೆಯಿಂದ ಶುದ್ಧಿಯನ್ನು ಪಡೆದುಕೊಂಡನು ಎಂದು ಕೇಳಿದ್ದೇವೆ.

12273057a ಸಮವಾಪ್ಯ ಶ್ರಿಯಂ ದೇವೋ ಹತ್ವಾರೀಂಶ್ಚ ಸಹಸ್ರಶಃ।
12273057c ಪ್ರಹರ್ಷಮತುಲಂ ಲೇಭೇ ವಾಸವಃ ಪೃಥಿವೀಪತೇ।।

ಪೃಥಿವೀಪತೇ! ಶ್ರೀಯನ್ನು ಪುನಃ ಪಡೆದು ದೇವ ವಾಸವನು ಸಹಸ್ರಾರು ಶತ್ರುಗಳನ್ನು ಸಂಹರಿಸಿ ಅತುಲ ಹರ್ಷವನ್ನು ಪಡೆದುಕೊಂಡನು.

12273058a ವೃತ್ರಸ್ಯ ರುಧಿರಾಚ್ಚೈವ ಖುಖುಂಡಾಃ ಪಾರ್ಥ ಜಜ್ಞಿರೇ।
12273058c ದ್ವಿಜಾತಿಭಿರಭಕ್ಷ್ಯಾಸ್ತೇ ದೀಕ್ಷಿತೈಶ್ಚ ತಪೋಧನೈಃ।।

ಪಾರ್ಥ! ವೃತ್ರನ ರಕ್ತದಿಂದ ತಲೆಯಲ್ಲಿ ಕುಚ್ಚುಗಳಿರುವ ನವಿಲೇ ಮೊದಲಾದ ಪಕ್ಷಿಗಳು ಹುಟ್ಟಿಕೊಂಡವು. ದ್ವಿಜಾತಿಯವರಿಗೂ, ದೀಕ್ಷಿತರಿಗೂ ಮತ್ತು ತಪೋಧನರಿಗೂ ಅವು ಅಭಕ್ಷ್ಯಗಳಾದವು.

12273059a ಸರ್ವಾವಸ್ಥಂ ತ್ವಮಪ್ಯೇಷಾಂ ದ್ವಿಜಾತೀನಾಂ ಪ್ರಿಯಂ ಕುರು।
12273059c ಇಮೇ ಹಿ ಭೂತಲೇ ದೇವಾಃ ಪ್ರಥಿತಾಃ ಕುರುನಂದನ।।

ಕುರುನಂದನ! ನೀನೂ ಕೂಡ ಸರ್ವಾವಸ್ಥೆಗಳಲ್ಲಿಯೂ ಬ್ರಾಹ್ಮಣರಿಗೆ ಪ್ರಿಯವಾದುದನ್ನೇ ಮಾಡು. ಭೂತಲದಲ್ಲಿ ಇವರೇ ದೇವರೆಂದು ಪ್ರಥಿತರಾಗಿದ್ದಾರೆ.

12273060a ಏವಂ ಶಕ್ರೇಣ ಕೌರವ್ಯ ಬುದ್ಧಿಸೌಕ್ಷ್ಮ್ಯಾನ್ಮಹಾಸುರಃ।
12273060c ಉಪಾಯಪೂರ್ವಂ ನಿಹತೋ ವೃತ್ರೋಽಥಾಮಿತತೇಜಸಾ।।

ಕೌರವ್ಯ! ಹೀಗೆ ಶಕ್ರನು ಬುದ್ಧಿಸೂಕ್ಷ್ಮತೆಯ ಉಪಾಯದಿಂದ ಅಮಿತ ತೇಜಸ್ವೀ ಮಹಾಸುರ ವೃತ್ರನನ್ನು ಸಂಹರಿಸಿದನು.

12273061a ಏವಂ ತ್ವಮಪಿ ಕೌರವ್ಯ ಪೃಥಿವ್ಯಾಮಪರಾಜಿತಃ।
12273061c ಭವಿಷ್ಯಸಿ ಯಥಾ ದೇವಃ ಶತಕ್ರತುರಮಿತ್ರಹಾ।।

ಕೌರವ್ಯ! ಅಮಿತ್ರಹ ಶತಕ್ರತು ದೇವನು ಹೇಗೋ ಹಾಗೆ ನೀನೂ ಕೂಡ ಪೃಥ್ವಿಯಲ್ಲಿ ಅಪರಾಜಿತನಾಗುತ್ತೀಯೆ.

12273062a ಯೇ ತು ಶಕ್ರಕಥಾಂ ದಿವ್ಯಾಮಿಮಾಂ ಪರ್ವಸು ಪರ್ವಸು।
12273062c ವಿಪ್ರಮಧ್ಯೇ ಪಠಿಷ್ಯಂತಿ ನ ತೇ ಪ್ರಾಪ್ಸ್ಯಂತಿ ಕಿಲ್ಬಿಷಮ್।।

ಪರ್ವ-ಪರ್ವಗಳಲ್ಲಿ ವಿಪ್ರರ ಮಧ್ಯದಲ್ಲಿ ಈ ದಿವ್ಯ ಶಕ್ರಕಥೆಯನ್ನು ಪಠಿಸುವವರು ಪಾಪವನ್ನು ಹೊಂದುವುದಿಲ್ಲ.

12273063a ಇತ್ಯೇತದ್ವೃತ್ರಮಾಶ್ರಿತ್ಯ ಶಕ್ರಸ್ಯಾತ್ಯದ್ಭುತಂ ಮಹತ್।
12273063c ಕಥಿತಂ ಕರ್ಮ ತೇ ತಾತ ಕಿಂ ಭೂಯಃ ಶ್ರೋತುಮಿಚ್ಚಸಿ।।

ಅಯ್ಯಾ! ಹೀಗೆ ವೃತ್ರನ ವಿಷಯದಲ್ಲಿ ಶಕ್ರನ ಮಹಾ ಅದ್ಭುತ ಕರ್ಮದ ಕುರಿತು ಹೇಳಿದ್ದೇನೆ. ಇನ್ನೂ ಏನನ್ನು ಕೇಳಲು ಬಯಸುತ್ತೀಯೆ?”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಬ್ರಹ್ಮಹತ್ಯಾವಿಭಾಗೇ ತ್ರಿಸಪ್ತತ್ಯಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಬ್ರಹ್ಮಹತ್ಯಾವಿಭಾಗ ಎನ್ನುವ ಇನ್ನೂರಾಎಪ್ಪತ್ಮೂರನೇ ಅಧ್ಯಾಯವು.


  1. ಸಂಸೃಷ್ಟಾ (ಗೀತಾ ಪ್ರೆಸ್). ↩︎

  2. ಬ್ರಹ್ಮವಧ್ಯಾ (ಗೀತಾ ಪ್ರೆಸ್). ↩︎

  3. ಕೃತ್ಯೇವ ಭರತರ್ಷಭ। (ಗೀತಾ ಪ್ರೆಸ್). ↩︎

  4. ಸಾ ವಿನಿಃಸರಮಾಣಂ (ಗೀತಾ ಪ್ರೆಸ್). ↩︎

  5. ಜಗ್ರಾಹ ವಧ್ಯಾ (ಗೀತಾ ಪ್ರೆಸ್). ↩︎

  6. ಇದಕ್ಕೆ ಮೊದಲು ದಕ್ಷಿಣಾತ್ಯ ಪಾಠದಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ಬ್ರಹ್ಮೋವಾಚ। ಇಯಂ ವೃತ್ರಾದನುಪ್ರಾಪ್ತಾ ಬ್ರಹ್ಮಹತ್ಯಾ ಮಹಾಭಯಾ। ಪುರುಹೂತಂ ಚತುರ್ಥಾಂಶಮಸ್ಯಾ ಯೂಯಂ ಪ್ರತೀಚ್ಛಥ।। (ಗೀತಾ ಪ್ರೆಸ್). ↩︎

  7. ನನ್ನ ತಂದೆಯವರು ಹುಣ್ಣಿಮೆ-ಅಮವಾಸ್ಯೆಗಳಲ್ಲಿ ಕಟ್ಟಿಗೆ ಕಡಿಯಲು ಕಾಡಿಗೆ ಹೋಗುತ್ತಿರಲಿಲ್ಲ; ಆ ದಿನಗಳಲ್ಲಿ ಕೆಲಸಗಾರರನ್ನೂ ಆ ಕೆಲಸಕ್ಕೆ ಹಚ್ಚುತ್ತಿರಲಿಲ್ಲ. ↩︎