ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 272
ಸಾರ
ಇಂದ್ರ-ವೃತ್ರರ ಯುದ್ಧವರ್ಣನೆ (1-44).
12272001 ಯುಧಿಷ್ಠಿರ ಉವಾಚ।
12272001a ಅಹೋ ಧರ್ಮಿಷ್ಠತಾ ತಾತ ವೃತ್ರಸ್ಯಾಮಿತತೇಜಸಃ।
12272001c ಯಸ್ಯ ವಿಜ್ಞಾನಮತುಲಂ ವಿಷ್ಣೋರ್ಭಕ್ತಿಶ್ಚ ತಾದೃಶೀ।।
ಯುಧಿಷ್ಠಿರನು ಹೇಳಿದನು: “ಅಯ್ಯಾ! ಅಮಿತತೇಜಸ್ವೀ ವೃತ್ರನ ಧರ್ಮಿಷ್ಠತೆಯು ಅದ್ಭುತವಾಗಿತ್ತು. ಅವನ ವಿಜ್ಞಾನವೂ ಅತುಲವಾಗಿತ್ತು ಮತ್ತು ವಿಷ್ಣುವಿನ ಕುರಿತಾದ ಅವನ ಭಕ್ತಿಯೂ ಹಾಗೆಯೇ ಇತ್ತು.
12272002a ದುರ್ವಿಜ್ಞೇಯಮಿದಂ ತಾತ ವಿಷ್ಣೋರಮಿತತೇಜಸಃ।
12272002c ಕಥಂ ವಾ ರಾಜಶಾರ್ದೂಲ ಪದಂ ತಜ್ಜ್ಞಾತವಾನಸೌ।।
ಅಯ್ಯಾ! ಅಮಿತ ತೇಜಸ್ವೀ ವಿಷ್ಣುವಿನ ಕುರಿತು ತಿಳಿಯಲು ದುಃಸ್ಸಾಧ್ಯವು. ರಾಜಶಾರ್ದೂಲ! ಅವನು ಹೇಗೆ ಆ ಪದದ ಜ್ಞಾನವನ್ನು ಪಡೆದುಕೊಂಡನು?
12272003a ಭವತಾ ಕಥಿತಂ ಹ್ಯೇತಚ್ಚ್ರದ್ದಧೇ ಚಾಹಮಚ್ಯುತ।
12272003c ಭೂಯಸ್ತು ಮೇ ಸಮುತ್ಪನ್ನಾ ಬುದ್ಧಿರವ್ಯಕ್ತದರ್ಶನಾತ್।।
ಅಚ್ಯುತ! ನೀನು ಹೇಳಿರುವೆಯಾದುದರಿಂದ ಇದರಲ್ಲಿ ಶ್ರದ್ಧೆಯನ್ನಿಟ್ಟಿದ್ದೇನೆ. ಆದರೂ ಬುದ್ಧಿಗೆ ಇದು ವ್ಯಕ್ತವಾಗಿ ಕಾಣದೇ ಇರುವುದರಿಂದ ನನ್ನಲ್ಲಿ ಈ ಪ್ರಶ್ನೆಯುಂಟಾಗಿದೆ.
12272004a ಕಥಂ ವಿನಿಹತೋ ವೃತ್ರಃ ಶಕ್ರೇಣ ಭರತರ್ಷಭ।
12272004c ಧರ್ಮಿಷ್ಠೋ ವಿಷ್ಣುಭಕ್ತಶ್ಚ ತತ್ತ್ವಜ್ಞಶ್ಚ ಪದಾನ್ವಯೇ।।
ಭರತರ್ಷಭ! ಧರ್ಮಿಷ್ಠನೂ, ವಿಷ್ಣುಭಕ್ತನೂ, ತತ್ತ್ವಜ್ಞನೂ, ಪದಾನ್ವಯನೂ1 ಆದ ವೃತ್ರನು ಶಕ್ರನಿಂದ ಹೇಗೆ ಹತನಾದನು?
12272005a ಏತನ್ಮೇ ಸಂಶಯಂ ಬ್ರೂಹಿ ಪೃಚ್ಚತೋ ಭರತರ್ಷಭ।
12272005c ವೃತ್ರಸ್ತು ರಾಜಶಾರ್ದೂಲ ಯಥಾ ಶಕ್ರೇಣ ನಿರ್ಜಿತಃ।।
ಭರತರ್ಷಭ! ರಾಜಶಾರ್ದೂಲ! ಕೇಳುತ್ತಿರುವ ನನಗೆ ಈ ಸಂಶಯದ ಕುರಿತು ಹೇಳು. ವೃತ್ರನಾದರೋ ಶಕ್ರನಿಗೆ ಹೇಗೆ ಸೋತನು?
12272006a ಯಥಾ ಚೈವಾಭವದ್ಯುದ್ಧಂ ತಚ್ಚಾಚಕ್ಷ್ವ ಪಿತಾಮಹ।
12272006c ವಿಸ್ತರೇಣ ಮಹಾಬಾಹೋ ಪರಂ ಕೌತೂಹಲಂ ಹಿ ಮೇ।।
ಪಿತಾಮಹ! ಮಹಾಬಾಹೋ! ಅವರ ನಡುವೆ ಯುದ್ಧವು ಹೇಗೆ ನಡೆಯಿತೋ ಅದನ್ನು ವಿಸ್ತಾರವಾಗಿ ಹೇಳು. ನನ್ನಲ್ಲಿ ಪರಮ ಕುತೂಹಲವುಂಟಾಗಿದೆ.”
12272007 ಭೀಷ್ಮ ಉವಾಚ।
12272007a ರಥೇನೇಂದ್ರಃ ಪ್ರಯಾತೋ ವೈ ಸಾರ್ಧಂ ಸುರಗಣೈಃ ಪುರಾ।
12272007c ದದರ್ಶಾಥಾಗ್ರತೋ ವೃತ್ರಂ ವಿಷ್ಠಿತಂ ಪರ್ವತೋಪಮಮ್।।
ಭೀಷ್ಮನು ಹೇಳಿದನು: “ಹಿಂದೆ ಸುರಗಣಗಳನ್ನು ಕೂಡಿಕೊಂಡು ಇಂದ್ರನು ರಥವನ್ನೇರಿ ತನ್ನ ಮುಂದೆ ಪರ್ವತದಂತೆ ಬೆಳೆದು ನಿಂತಿದ್ದ ವೃತ್ರನನ್ನು ನೋಡಿದನು.
12272008a ಯೋಜನಾನಾಂ ಶತಾನ್ಯೂರ್ಧ್ವಂ ಪಂಚೋಚ್ಚ್ರಿತಮರಿಂದಮ।
12272008c ಶತಾನಿ ವಿಸ್ತರೇಣಾಥ ತ್ರೀಣ್ಯೇವಾಭ್ಯಧಿಕಾನಿ ತು।।
ಅರಿಂದಮ! ಅವನು ಐನೂರು ಯೋಜನೆಗಳಷ್ಟು ಉದ್ದವಾಗಿಯೂ ಮುನ್ನೂರು ಯೋಜನೆಗಳಿಗಿಂತಲೂ ಹೆಚ್ಚು ಅಗಲವಾಗಿಯೂ ಬೆಳೆದಿದ್ದನು.
12272009a ತತ್ಪ್ರೇಕ್ಷ್ಯ ತಾದೃಶಂ ರೂಪಂ ತ್ರೈಲೋಕ್ಯೇನಾಪಿ ದುರ್ಜಯಮ್।
12272009c ವೃತ್ರಸ್ಯ ದೇವಾಃ ಸಂತ್ರಸ್ತಾ ನ ಶಾಂತಿಮುಪಲೇಭಿರೇ।।
ಮೂರುಲೋಕಗಳಿಗೂ ದುರ್ಜಯನಾದ ವೃತ್ರನ ಅಂಥಹ ರೂಪವನ್ನು ನೋಡಿ ದೇವತೆಗಳು ಭಯಗೊಂಡರು. ಅವರಿಗೆ ಶಾಂತಿಯೇ ಇಲ್ಲವಾಯಿತು.
12272010a ಶಕ್ರಸ್ಯ ತು ತದಾ ರಾಜನ್ನೂರುಸ್ತಂಭೋ ವ್ಯಜಾಯತ।
12272010c ಭಯಾದ್ವೃತ್ರಸ್ಯ ಸಹಸಾ ದೃಷ್ಟ್ವಾ ತದ್ರೂಪಮುತ್ತಮಮ್।।
ರಾಜನ್! ವೃತ್ರನ ಆ ಉತ್ತಮ ರೋಪವನ್ನು ನೋಡಿ ಶಕ್ರನ ತೊಡೆಗಳು ಒಮ್ಮೆಲೇ ಸೆಟೆದು ನಿಂತವು.
12272011a ತತೋ ನಾದಃ ಸಮಭವದ್ವಾದಿತ್ರಾಣಾಂ ಚ ನಿಸ್ವನಃ।
12272011c ದೇವಾಸುರಾಣಾಂ ಸರ್ವೇಷಾಂ ತಸ್ಮಿನ್ಯುದ್ಧ ಉಪಸ್ಥಿತೇ।।
ಯುದ್ಧವು ಸನ್ನಿಹಿತವಾಗಲು ಸಮಸ್ತ ದೇವತೆಗಳ ಮತ್ತು ಅಸುರರ ಸೈನ್ಯಗಳಲ್ಲಿ ರಣವಾದ್ಯಗಳು ಮೊಳಗಿದವು.
12272012a ಅಥ ವೃತ್ರಸ್ಯ ಕೌರವ್ಯ ದೃಷ್ಟ್ವಾ ಶಕ್ರಮುಪಸ್ಥಿತಮ್।
12272012c ನ ಸಂಭ್ರಮೋ ನ ಭೀಃ ಕಾ ಚಿದಾಸ್ಥಾ ವಾ ಸಮಜಾಯತ।।
ಕೌರವ್ಯ! ಶಕ್ರನು ತನ್ನೆದುರು ನಿಂತಿರುವುದನ್ನು ನೋಡಿ ವೃತ್ರನಿಗೆ ಗಾಬರಿಯೂ ಆಗಲಿಲ್ಲ. ಭಯವೂ ಆಗಲಿಲ್ಲ. ಮಿಗಿಲಾಗಿ ಅವನಿಗೆ ಯಾವ ಆಸೆಗಳೂ ಉಂಟಾಗಲಿಲ್ಲ.
12272013a ತತಃ ಸಮಭವದ್ಯುದ್ಧಂ ತ್ರೈಲೋಕ್ಯಸ್ಯ ಭಯಂಕರಮ್।
12272013c ಶಕ್ರಸ್ಯ ಚ ಸುರೇಂದ್ರಸ್ಯ ವೃತ್ರಸ್ಯ ಚ ಮಹಾತ್ಮನಃ।।
ಅನಂತರ ಸುರೇಂದ್ರ ಶಕ್ರ ಮತ್ತು ಮಹಾತ್ಮ ವೃತ್ರರ ನಡುವೆ ಮೂರುಲೋಕಗಳಿಗೂ ಭಯಂಕರವಾದ ಯುದ್ಧವು ನಡೆಯಿತು.
12272014a ಅಸಿಭಿಃ ಪಟ್ಟಿಶೈಃ ಶೂಲೈಃ ಶಕ್ತಿತೋಮರಮುದ್ಗರೈಃ।
12272014c ಶಿಲಾಭಿರ್ವಿವಿಧಾಭಿಶ್ಚ ಕಾರ್ಮುಕೈಶ್ಚ ಮಹಾಸ್ವನೈಃ।।
12272015a ಅಸ್ತ್ರೈಶ್ಚ ವಿವಿಧೈರ್ದಿವ್ಯೈಃ ಪಾವಕೋಲ್ಕಾಭಿರೇವ ಚ।
12272015c ದೇವಾಸುರೈಸ್ತತಃ ಸೈನ್ಯೈಃ ಸರ್ವಮಾಸೀತ್ಸಮಾಕುಲಮ್।।
ಖಡ್ಗಗಳಿಂದಲೂ, ಪಟ್ಟಿಶಗಳಿಂದಲೂ, ಶೂಲಗಳಿಂದಲೂ, ಶಕ್ತ್ಯಾಯುಧಗಳಿಂದಲೂ, ತೋಮರಗಳಿಂದಲೂ, ಮುದ್ಗರಗಳಿಂದಲೂ, ನಾನಾ ಪ್ರಕಾರದ ಶಿಲೆಗಳಿಂದಲೂ, ಭಯಂಕರ ಶಬ್ದಮಾಡುತ್ತಿದ್ದ ಮಹಾ ಧನುಸ್ಸುಗಳಿಂದಲೂ, ಅನೇಕ ಪ್ರಕಾರದ ದಿವ್ಯಶಸ್ತ್ರಾಸ್ತ್ರಗಳಿಂದಲೂ, ಜ್ವಾಲೆಗಳೊಂದಿಗೆ ಉರಿಯುತ್ತಿದ್ದ ಪಂಜುಗಳಿಂದಲೂ ದೇವಾಸುರರ ಆ ಸೈನ್ಯಗಳೆಲ್ಲವೂ ಸಮಾಕುಲವಾಗಿದ್ದವು.
12272016a ಪಿತಾಮಹಪುರೋಗಾಶ್ಚ ಸರ್ವೇ ದೇವಗಣಾಸ್ತಥಾ।
12272016c ಋಷಯಶ್ಚ ಮಹಾಭಾಗಾಸ್ತದ್ಯುದ್ಧಂ ದ್ರಷ್ಟುಮಾಗಮನ್।।
12272017a ವಿಮಾನಾಗ್ರ್ಯೈರ್ಮಹಾರಾಜ ಸಿದ್ಧಾಶ್ಚ ಭರತರ್ಷಭ।
12272017c ಗಂಧರ್ವಾಶ್ಚ ವಿಮಾನಾಗ್ರ್ಯೈರಪ್ಸರೋಭಿಃ ಸಮಾಗಮನ್।।
ಮಹಾರಾಜ! ಪಿತಾಮಹನೇ ಮೊದಲ್ಗೊಂಡು ಸರ್ವ ದೇವಗಣಗಳೂ, ಮಹಾಭಾಗ ಋಷಿಗಳೂ ಆ ಯುದ್ಧವನ್ನು ನೋಡಲು ವಿಮಾನಗಳಲ್ಲಿ ಅಲ್ಲಿಗೆ ಬಂದರು. ಭರತರ್ಷಭ! ಸಿದ್ಧರೂ ಗಂಧರ್ವರೂ, ಅಪ್ಸರೆಯರೂ ವಿಮಾನಗಳಲ್ಲಿ ಬಂದು ಸೇರಿದರು.
12272018a ತತೋಽಂತರಿಕ್ಷಮಾವೃತ್ಯ ವೃತ್ರೋ ಧರ್ಮಭೃತಾಂ ವರಃ।
12272018c ಅಶ್ಮವರ್ಷೇಣ ದೇವೇಂದ್ರಂ ಪರ್ವತಾತ್ಸಮವಾಕಿರತ್।।
ಆಗ ಧರ್ಮಭೃತರಲ್ಲಿ ಶ್ರೇಷ್ಠ ವೃತ್ರನು ಅಂತರಿಕ್ಷವನ್ನು ಆವರಿಸಿ ಕಲ್ಲಿನ ಮಳೆಯಿಂದ ಮತ್ತು ಪರ್ವತಗಳಿಂದ ದೇವೇಂದ್ರನನ್ನು ಮುಚ್ಚಿಬಿಟ್ಟನು.
12272019a ತತೋ ದೇವಗಣಾಃ ಕ್ರುದ್ಧಾಃ ಸರ್ವತಃ ಶಸ್ತ್ರವೃಷ್ಟಿಭಿಃ।
12272019c ಅಶ್ಮವರ್ಷಮಪೋಹಂತ ವೃತ್ರಪ್ರೇರಿತಮಾಹವೇ।।
ಆಗ ಯುದ್ಧದಲ್ಲಿ ದೇವಗಣಗಳು ಕ್ರುದ್ಧರಾಗಿ ಎಲ್ಲಕಡೆಗಳಿಂದಲೂ ಶಸ್ತ್ರಗಳ ಮಳೆಯನ್ನು ಸುರಿಸಿ ವೃತ್ರನಿಂದ ಪ್ರೇರಿತವಾದ ಕಲ್ಲಿನಮಳೆಯನ್ನು ಹೋಗಲಾಡಿಸಿದರು.
12272020a ವೃತ್ರಶ್ಚ ಕುರುಶಾರ್ದೂಲ ಮಹಾಮಾಯೋ ಮಹಾಬಲಃ।
12272020c ಮೋಹಯಾಮಾಸ ದೇವೇಂದ್ರಂ ಮಾಯಾಯುದ್ಧೇನ ಸರ್ವತಃ।।
ಕುರುಶಾರ್ದೂಲ! ಮಹಾಬಲ ಮಹಾಮಾಯಾವೀ ವೃತ್ರನಾದರೋ ಮಾಯಾಯುದ್ಧದಿಂದ ಎಲ್ಲಕಡೆಗಳಿಂದಲೂ ದೇವೇಂದ್ರನನ್ನು ಮೋಹಗೊಳಿಸಿದನು.
12272021a ತಸ್ಯ ವೃತ್ರಾರ್ದಿತಸ್ಯಾಥ ಮೋಹ ಆಸೀಚ್ಚತಕ್ರತೋಃ।
12272021c ರಥಂತರೇಣ ತಂ ತತ್ರ ವಸಿಷ್ಠಃ ಸಮಬೋಧಯತ್।।
ವೃತ್ರನಿಂದ ಪೀಡಿತನಾದ ಶತಕ್ರತುವು ಮೂರ್ಛೆಹೋದನು. ಆಗ ರಥಂತರಸಾಮಗಾಯನದಿಂದ ವಸಿಷ್ಠನು ಅವನನ್ನು ಎಬ್ಬಿಸಿದನು.
12272022 ವಸಿಷ್ಠ ಉವಾಚ।
12272022a ದೇವಶ್ರೇಷ್ಠೋಽಸಿ ದೇವೇಂದ್ರ ಸುರಾರಿವಿನಿಬರ್ಹಣ।
12272022c ತ್ರೈಲೋಕ್ಯಬಲಸಂಯುಕ್ತಃ ಕಸ್ಮಾಚ್ಚಕ್ರ ವಿಷೀದಸಿ।।
ವಸಿಷ್ಠನು ಹೇಳಿದನು: “ದೇವೇಂದ್ರ! ಶಕ್ರ! ದೇವಶ್ರೇಷ್ಠನಾಗಿದ್ದೀಯೆ. ಸುರಾರಿಗಳನ್ನು ಸಂಹರಿಸುವವನೇ! ಮೂರೂ ಲೋಕಗಳ ಬಲದಿಂದ ಸಂಪನ್ನನಾಗಿದ್ದೀಯೆ. ನೀನು ಏಕೆ ವಿಷಾದಿಸುತ್ತಿದ್ದೀಯೆ?
12272023a ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಶ್ಚೈವ ಜಗತ್ಪ್ರಭುಃ।
12272023c ಸೋಮಶ್ಚ ಭಗವಾನ್ದೇವಃ ಸರ್ವೇ ಚ ಪರಮರ್ಷಯಃ।।
ಇಗೋ ಇಲ್ಲಿ ಬ್ರಹ್ಮ, ವಿಷ್ಣು, ಜಗತ್ಪ್ರಭು ಶಿವ, ಭಗವಾನ್ ಸೋಮದೇವ, ಮತ್ತು ಎಲ್ಲ ಪರಮಋಷಿಗಳೂ ಸೇರಿದ್ದಾರೆ.
212272024a ಮಾ ಕಾರ್ಷೀಃ ಕಶ್ಮಲಂ ಶಕ್ರ ಕಶ್ಚಿದೇವೇತರೋ ಯಥಾ।
12272024c ಆರ್ಯಾಂ ಯುದ್ಧೇ ಮತಿಂ ಕೃತ್ವಾ ಜಹಿ ಶತ್ರುಂ ಸುರೇಶ್ವರ।।
ಸುರೇಶ್ವರ! ಸಾಧಾರಣ ವ್ಯಕ್ತಿಯಂತೆ ವಿಮೋಹಗೊಳ್ಳಬೇಡ. ಶ್ರೇಷ್ಠ ಬುದ್ಧಿಯನ್ನಾಶ್ರಯಿಸಿ ಯುದ್ಧದಲ್ಲಿ ಶತ್ರುವನ್ನು ಸಂಹರಿಸು.
12272025a ಏಷ ಲೋಕಗುರುಸ್ತ್ರ್ಯಕ್ಷಃ ಸರ್ವಲೋಕನಮಸ್ಕೃತಃ।
12272025c ನಿರೀಕ್ಷತೇ ತ್ವಾಂ ಭಗವಾಂಸ್ತ್ಯಜ ಮೋಹಂ ಸುರೇಶ್ವರ।।
ಸುರೇಶ್ವರ! ಈ ಲೋಕಗುರು ಸರ್ವಲೋಕನಮಸ್ಕೃತ ಭಗವಾನ್ ತ್ರಿನೇತ್ರನು ನಿನ್ನನ್ನು ನಿರೀಕ್ಷಿಸುತ್ತಿದ್ದಾನೆ. ಮೋಹವನ್ನು ತ್ಯಜಿಸು.
12272026a ಏತೇ ಬ್ರಹ್ಮರ್ಷಯಶ್ಚೈವ ಬೃಹಸ್ಪತಿಪುರೋಗಮಾಃ।
12272026c ಸ್ತವೇನ ಶಕ್ರ ದಿವ್ಯೇನ ಸ್ತುವಂತಿ ತ್ವಾಂ ಜಯಾಯ ವೈ।।
ಶಕ್ರ! ಇದೋ ಬೃಹಸ್ಪತಿಯೇ ಮೊದಲಾದ ಬ್ರಹ್ಮರ್ಷಿಗಳು ದಿವ್ಯ ಸ್ತವದಿಂದ ನಿನ್ನ ಜಯಕ್ಕಾಗಿ ಸ್ತುತಿಸುತ್ತಿದ್ದಾರೆ.””
12272027 ಭೀಷ್ಮ ಉವಾಚ।
12272027a ಏವಂ ಸಂಬೋಧ್ಯಮಾನಸ್ಯ ವಸಿಷ್ಠೇನ ಮಹಾತ್ಮನಾ।
12272027c ಅತೀವ ವಾಸವಸ್ಯಾಸೀದ್ಬಲಮುತ್ತಮತೇಜಸಃ।।
ಭೀಷ್ಮನು ಹೇಳಿದನು: “ಮಹಾತ್ಮ ವಸಿಷ್ಠನು ಈ ರೀತಿ ಸಂಬೋಧಿಸಲು ಉತ್ತಮ ತೇಜಸ್ವೀ ವಾಸವನ ಬಲವು ಅತಿಯಾಯಿತು.
12272028a ತತೋ ಬುದ್ಧಿಮುಪಾಗಮ್ಯ ಭಗವಾನ್ಪಾಕಶಾಸನಃ।
12272028c ಯೋಗೇನ ಮಹತಾ ಯುಕ್ತಸ್ತಾಂ ಮಾಯಾಂ ವ್ಯಪಕರ್ಷತ।।
ಆಗ ಭಗವಾನ್ ಪಾಕಶಾಸನನು ಬುದ್ಧಿಯನ್ನು ಆಶ್ರಯಿಸಿ ಮಹಾ ಯೋಗಯುಕ್ತನಾಗಿ ಆ ಮಾಯೆಯನ್ನು ಹೋಗಲಾಡಿಸಿದನು.
12272029a ತತೋಽಂಗಿರಃಸುತಃ ಶ್ರೀಮಾಂಸ್ತೇ ಚೈವ ಪರಮರ್ಷಯಃ।
12272029c ದೃಷ್ಟ್ವಾ ವೃತ್ರಸ್ಯ ವಿಕ್ರಾಂತಮುಪಗಮ್ಯ ಮಹೇಶ್ವರಮ್।
12272029e ಊಚುರ್ವೃತ್ರವಿನಾಶಾರ್ಥಂ ಲೋಕಾನಾಂ ಹಿತಕಾಮ್ಯಯಾ।।
ಅನಂತರ ಅಂಗಿರಸ ಸುತ ಶ್ರೀಮಾನ್ ಬೃಹಸ್ಪತಿ ಮತ್ತು ಪರಮ ಋಷಿಗಳು ವೃತ್ರನ ವಿಕ್ರಾಂತವನ್ನು ನೋಡಿ ಮಹೇಶ್ವರನ ಬಳಿಸಾರಿ ಲೋಕಗಳ ಹಿತವನ್ನು ಬಯಸಿ ವೃತ್ರವಿನಾಶದ ಕುರಿತು ಹೇಳಿದರು.
12272030a ತತೋ ಭಗವತಸ್ತೇಜೋ ಜ್ವರೋ ಭೂತ್ವಾ ಜಗತ್ಪತೇಃ।
12272030c ಸಮಾವಿಶನ್ಮಹಾರೌದ್ರಂ ವೃತ್ರಂ ದೈತ್ಯವರಂ ತದಾ।।
ಆಗ ಜಗತ್ಪತಿಯ ತೇಜಸ್ಸು ಜ್ವರವಾಗಿ ಮಹಾರೌದ್ರ ದೈತ್ಯವರ ವೃತ್ರನನ್ನು ಸಮಾವೇಶಗೊಂಡಿತು.
12272031a ವಿಷ್ಣುಶ್ಚ ಭಗವಾನ್ದೇವಃ ಸರ್ವಲೋಕಾಭಿಪೂಜಿತಃ।
12272031c ಐಂದ್ರಂ ಸಮಾವಿಶದ್ವಜ್ರಂ ಲೋಕಸಂರಕ್ಷಣೇ ರತಃ।।
ಸರ್ವಲೋಕಪೂಜಿತ ಲೋಕಸಂರಕ್ಷಣಾನಿರತ ಭಗವಾನ್ ದೇವ ವಿಷ್ಣುವೂ ಕೂಡ ಇಂದ್ರನ ವಜ್ರವನ್ನು ಸಮಾವೇಶಗೊಂಡನು.
12272032a ತತೋ ಬೃಹಸ್ಪತಿರ್ಧೀಮಾನುಪಾಗಮ್ಯ ಶತಕ್ರತುಮ್।
12272032c ವಸಿಷ್ಠಶ್ಚ ಮಹಾತೇಜಾಃ ಸರ್ವೇ ಚ ಪರಮರ್ಷಯಃ।।
12272033a ತೇ ಸಮಾಸಾದ್ಯ ವರದಂ ವಾಸವಂ ಲೋಕಪೂಜಿತಮ್।
12272033c ಊಚುರೇಕಾಗ್ರಮನಸೋ ಜಹಿ ವೃತ್ರಮಿತಿ ಪ್ರಭೋ।।
ಪ್ರಭೋ! ಅನಂತರ ಧೀಮಾನ್ ಬೃಹಸ್ಪತಿ, ಮಹಾತೇಜಸ್ವೀ ವಸಿಷ್ಠ ಮತ್ತು ಸರ್ವ ಪರಮ ಋಷಿಗಳೂ ಶತಕ್ರತು ಲೋಕಪೂಜಿತ ವರದ ವಾಸವನ ಬಳಿಸಾರಿ ಏಕಾಗ್ರಮನಸ್ಕರಾಗಿ ವೃತ್ರನನ್ನು ಕೊಲ್ಲು ಎಂದು ಹೇಳಿದರು.
12272034 ಮಹೇಶ್ವರ ಉವಾಚ।
12272034a ಏಷ ವೃತ್ರೋ ಮಹಾನ್ ಶಕ್ರ ಬಲೇನ ಮಹತಾ ವೃತಃ।
12272034c ವಿಶ್ವಾತ್ಮಾ ಸರ್ವಗಶ್ಚೈವ ಬಹುಮಾಯಶ್ಚ ವಿಶ್ರುತಃ।।
ಮಹೇಶ್ವರನು ಹೇಳಿದನು: “ಶಕ್ರ! ಈ ವೃತ್ರನು ಮಹಾ ಬಲದಿಂದ ಆವೃತನಾಗಿದ್ದಾನೆ. ವಿಶ್ವಾತ್ಮನಾದ ಇವನು ಎಲ್ಲಕಡೆ ಹೋಗಬಲ್ಲನು. ಬಹುಮಾಯನೆಂದೂ ವಿಶ್ರುತನಾಗಿದ್ದಾನೆ.
12272035a ತದೇನಮಸುರಶ್ರೇಷ್ಠಂ ತ್ರೈಲೋಕ್ಯೇನಾಪಿ ದುರ್ಜಯಮ್।
12272035c ಜಹಿ ತ್ವಂ ಯೋಗಮಾಸ್ಥಾಯ ಮಾವಮಂಸ್ಥಾಃ ಸುರೇಶ್ವರ।।
ಸುರೇಶ್ವರ! ತ್ರೈಲೋಕ್ಯಗಳಿಗೂ ದುರ್ಜಯನಾಗಿರುವ ಈ ಅಸುರಶ್ರೇಷ್ಠನನ್ನು ಯೋಗವನ್ನಾಶ್ರಯಸಿ ಸಂಹರಿಸು. ಆದರೆ ಇವನನ್ನು ಅಪಮಾನಿಸಬೇಡ.
12272036a ಅನೇನ ಹಿ ತಪಸ್ತಪ್ತಂ ಬಲಾರ್ಥಮಮರಾಧಿಪ।
12272036c ಷಷ್ಟಿಂ ವರ್ಷಸಹಸ್ರಾಣಿ ಬ್ರಹ್ಮಾ ಚಾಸ್ಮೈ ವರಂ ದದೌ।।
12272037a ಮಹತ್ತ್ವಂ ಯೋಗಿನಾಂ ಚೈವ ಮಹಾಮಾಯತ್ವಮೇವ ಚ।
12272037c ಮಹಾಬಲತ್ವಂ ಚ ತಥಾ ತೇಜಶ್ಚಾಗ್ರ್ಯಂ ಸುರೇಶ್ವರ।।
ಅಮರಾಧಿಪ! ಬಲಕ್ಕಾಗಿಯೇ ಇವನು ಅರವತ್ತು ಸಾವಿರ ವರ್ಷಗಳು ತಪಸ್ಸನ್ನು ತಪಿಸಿದನು. ಸುರೇಶ್ವರ! ಬ್ರಹ್ಮನು ಇವನಿಗೆ ಯೋಗಿಗಳ ಮಹತ್ತ್ವವನ್ನೂ, ಮಹಾಮಾಯತ್ವವನ್ನೂ, ಮಹಾಬಲತ್ವವನ್ನೂ, ಮತ್ತು ಉತ್ತಮ ತೇಜಸ್ಸನ್ನೂ ವರವಾಗಿ ನೀಡಿದ್ದಾನೆ.
12272038a ಏತದ್ವೈ ಮಾಮಕಂ ತೇಜಃ ಸಮಾವಿಶತಿ ವಾಸವ।
12272038c ವೃತ್ರಮೇನಂ ತ್ವಮಪ್ಯೇವಂ ಜಹಿ ವಜ್ರೇಣ ದಾನವಮ್।।
ವಾಸವ! ಇದೋ ನೋಡು. ನನ್ನ ತೇಜಸ್ಸು ನಿನ್ನಲ್ಲಿ ಸಮಾವೇಶಗೊಳ್ಳುತ್ತದೆ. ಈ ದಾನವ ವೃತ್ರನನ್ನು ವಜ್ರದಿಂದ ನೀನೇ ಸಂಹರಿಸು!”
12272039 ಶಕ್ರ ಉವಾಚ।
12272039a ಭಗವಂಸ್ತ್ವತ್ಪ್ರಸಾದೇನ ದಿತಿಜಂ ಸುದುರಾಸದಮ್।
12272039c ವಜ್ರೇಣ ನಿಹನಿಷ್ಯಾಮಿ ಪಶ್ಯತಸ್ತೇ ಸುರರ್ಷಭ।।
ಶಕ್ರನು ಹೇಳಿದನು: “ಭಗವನ್! ಸುರರ್ಷಭ! ನಿನ್ನ ಪ್ರಸಾದದಿಂದ ನೀನು ನೋಡುತ್ತಿರುವಾಗಲೇ ಈ ದಿತಿಯ ಮಗ ದುರಾಸದನನ್ನು ವಜ್ರದಿಂದ ಸಂಹರಿಸುತ್ತೇನೆ.””
12272040 ಭೀಷ್ಮ ಉವಾಚ।
12272040a ಆವಿಶ್ಯಮಾನೇ ದೈತ್ಯೇ ತು ಜ್ವರೇಣಾಥ ಮಹಾಸುರೇ।
12272040c ದೇವತಾನಾಮೃಷೀಣಾಂ ಚ ಹರ್ಷಾನ್ನಾದೋ ಮಹಾನಭೂತ್।।
ಭೀಷ್ಮನು ಹೇಳಿದನು: “ಮಹಾಸುರ ದೈತ್ಯನಲ್ಲಿ ಜ್ವರವು ಆವೇಶಗೊಳ್ಳಲು ದೇವತೆಗಳು ಮತ್ತು ಋಷಿಗಳಲ್ಲಿ ಮಹಾ ಹರ್ಷನಾದವುಂಟಾಯಿತು.
12272041a ತತೋ ದುಂದುಭಯಶ್ಚೈವ ಶಂಖಾಶ್ಚ ಸುಮಹಾಸ್ವನಾಃ।
12272041c ಮುರಜಾ ಡಿಂಡಿಮಾಶ್ಚೈವ ಪ್ರಾವಾದ್ಯಂತ ಸಹಸ್ರಶಃ।।
ಅನಂತರ ಸಹಸ್ರಾರು ದುಂದುಭಿಗಳೂ, ಮಹಾಸ್ವನದ ಶಂಖಗಳೂ, ಮುರಜ-ಡಿಂಡಿಮಗಳೂ ಮೊಳಗಿದವು.
12272042a ಅಸುರಾಣಾಂ ತು ಸರ್ವೇಷಾಂ ಸ್ಮೃತಿಲೋಪೋಽಭವನ್ಮಹಾನ್।
12272042c ಪ್ರಜ್ಞಾನಾಶಶ್ಚ3 ಬಲವಾನ್ ಕ್ಷಣೇನ ಸಮಪದ್ಯತ।।
ಕ್ಷಣದಲ್ಲಿಯೇ ಸರ್ವ ಅಸುರರ ಮಹಾ ಸ್ಮೃತಿಲೋಪವುಂಟಾಯಿತು. ಆ ಬಲಶಾಲಿಗಳ ಪ್ರಜ್ಞೆಯೂ ನಾಶವಾಗತೊಡಗಿತು.
12272043a ತಮಾವಿಷ್ಟಮಥೋ ಜ್ಞಾತ್ವಾ ಋಷಯೋ ದೇವತಾಸ್ತಥಾ।
12272043c ಸ್ತುವಂತಃ ಶಕ್ರಮೀಶಾನಂ ತಥಾ ಪ್ರಾಚೋದಯನ್ನಪಿ।।
ಜ್ವರವು ಆವಿಷ್ಟವಾದುದನ್ನು ತಿಳಿದು ಋಷಿಗಳು ಮತ್ತು ದೇವತೆಗಳು ಈಶಾನ ಶಕ್ರನನ್ನು ಸ್ತುತಿಸುತ್ತಾ ಪ್ರಚೋದಿಸಿದರೂ ಕೂಡ.
12272044a ರಥಸ್ಥಸ್ಯ ಹಿ ಶಕ್ರಸ್ಯ ಯುದ್ಧಕಾಲೇ ಮಹಾತ್ಮನಃ।
12272044c ಋಷಿಭಿಃ ಸ್ತೂಯಮಾನಸ್ಯ ರೂಪಮಾಸೀತ್ಸುದುರ್ದೃಶಮ್।।
ಆ ಯುದ್ಧಕಾಲದಲ್ಲಿ ಋಷಿಗಳಿಂದ ಸ್ತುತಿಸಲ್ಪಡುತ್ತಿದ್ದ ರಥಸ್ಥನಾಗಿದ್ದ ಶಕ್ರನ ರೂಪವು ನೋಡಲೂ ಕಷ್ಟವಾಗುವಂತಿತ್ತು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ವೃತ್ರವಧೇ ದ್ವಿಸಪ್ತತ್ಯಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ವೃತ್ರವಧ ಎನ್ನುವ ಇನ್ನೂರಾಎಪ್ಪತ್ತೆರಡನೇ ಅಧ್ಯಾಯವು.