ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 271
ಸಾರ
ವೃತ್ರಾಸುರನಿಗೆ ಸನತ್ಕುಮಾರನು ಆಧ್ಯಾತ್ಮವಿಷಯದಲ್ಲಿ ಉಪದೇಶವನ್ನು ನೀಡಿದುದು; ವೃತ್ರನ ಪರಮ ಗತಿ (1-69).
12271001 ಉಶನೋವಾಚ।
12271001a ನಮಸ್ತಸ್ಮೈ ಭಗವತೇ ದೇವಾಯ ಪ್ರಭವಿಷ್ಣವೇ।
12271001c ಯಸ್ಯ ಪೃಥ್ವೀತಲಂ ತಾತ ಸಾಕಾಶಂ ಬಾಹುಗೋಚರಮ್।।
ಉಶನಸನು ಹೇಳಿದನು: “ಅಯ್ಯಾ! ಯಾರ ಬಾಹುಬಲದಿಂದ ಆಕಾಶಸಹಿತವಾದ ಈ ಪೃಥ್ವಿಯು ನಿಂತಿರುವುದೋ ಆ ಪ್ರಭಾವಶಾಲೀ ಭಗವಂತ ದೇವ ವಿಷ್ಣುವಿಗೆ ನಮಸ್ಕರಿಸುತ್ತೇನೆ.
12271002a ಮೂರ್ಧಾ ಯಸ್ಯ ತ್ವನಂತಂ ಚ ಸ್ಥಾನಂ ದಾನವಸತ್ತಮ।
12271002c ತಸ್ಯಾಹಂ ತೇ ಪ್ರವಕ್ಷ್ಯಾಮಿ ವಿಷ್ಣೋರ್ಮಾಹಾತ್ಮ್ಯಮುತ್ತಮಮ್।।
ದಾನವಸತ್ತಮ! ಯಾರ ಶಿರ ಮತ್ತು ಸ್ಥಾನವು ಅನಂತವಾದುದೋ ಆ ವಿಷ್ಣುವಿನ ಉತ್ತಮ ಮಹಾತ್ಮ್ಯೆಯನ್ನು ನಿನಗೆ ಹೇಳುತ್ತೇನೆ.””
12271003 ಭೀಷ್ಮ ಉವಾಚ।
12271003a ತಯೋಃ ಸಂವದತೋರೇವಮಾಜಗಾಮ ಮಹಾಮುನಿಃ।
12271003c ಸನತ್ಕುಮಾರೋ ಧರ್ಮಾತ್ಮಾ ಸಂಶಯಚ್ಚೇದನಾಯ ವೈ।।
ಭೀಷ್ಮನು ಹೇಳಿದನು: “ಅವರಿಬ್ಬರೂ ಈ ರೀತಿ ಮಾತನಾಡಿಕೊಳ್ಳುತ್ತಿರುವಾಗ ಅವರ ಸಂಶಯಗಳನ್ನು ಹೋಗಲಾಡಿಸಲು ಧರ್ಮಾತ್ಮಾ ಮಹಾಮುನಿ ಸನತ್ಕುಮಾರನು ಅಲ್ಲಿಗೆ ಆಗಮಿಸಿದನು.
12271004a ಸ ಪೂಜಿತೋಽಸುರೇಂದ್ರೇಣ ಮುನಿನೋಶನಸಾ ತಥಾ।
12271004c ನಿಷಸಾದಾಸನೇ ರಾಜನ್ಮಹಾರ್ಹೇ ಮುನಿಪುಂಗವಃ।।
ರಾಜನ್! ಅಸುರೇಂದ್ರನಿಂದ ಮತ್ತು ಮುನಿ ಉಶನಸನಿಂದ ಪೂಜಿತನಾದ ಆ ಮುನಿಪುಂಗವನು ಬಹುಮೂಲ್ಯ ಆಸನದಲ್ಲಿ ಕುಳಿತುಕೊಂಡನು.
12271005a ತಮಾಸೀನಂ ಮಹಾಪ್ರಾಜ್ಞಮುಶನಾ ವಾಕ್ಯಮಬ್ರವೀತ್।
12271005c ಬ್ರೂಹ್ಯಸ್ಮೈ ದಾನವೇಂದ್ರಾಯ ವಿಷ್ಣೋರ್ಮಾಹಾತ್ಮ್ಯಮುತ್ತಮಮ್।।
ಕುಳಿತಿದ್ದ ಆ ಮಹಾಪ್ರಾಜ್ಞನಿಗೆ ಉಶನಸನು “ಈ ದಾನವೇಂದ್ರನಿಗೆ ವಿಷ್ಣುವಿನ ಉತ್ತಮ ಮಹಾತ್ಮೆಯನ್ನು ಹೇಳು” ಎಂದನು.
12271006a ಸನತ್ಕುಮಾರಸ್ತು ತತಃ ಶ್ರುತ್ವಾ ಪ್ರಾಹ ವಚೋಽರ್ಥವತ್।
12271006c ವಿಷ್ಣೋರ್ಮಾಹಾತ್ಮ್ಯಸಂಯುಕ್ತಂ ದಾನವೇಂದ್ರಾಯ ಧೀಮತೇ।।
ಅದನ್ನು ಕೇಳಿ ಸನತ್ಕುಮಾರನಾದರೋ ಧೀಮತ ದಾನವೇಂದ್ರನಿಗೆ ವಿಷ್ಣುವಿನ ಮಹಾತ್ಮೆಯನ್ನೊಳಗೊಂಡ ಈ ಅರ್ಥವತ್ತಾದ ಮಾತನ್ನಾಡಿದನು.
12271007a ಶೃಣು ಸರ್ವಮಿದಂ ದೈತ್ಯ ವಿಷ್ಣೋರ್ಮಾಹಾತ್ಮ್ಯಮುತ್ತಮಮ್।
12271007c ವಿಷ್ಣೌ ಜಗತ್ ಸ್ಥಿತಂ ಸರ್ವಮಿತಿ ವಿದ್ಧಿ ಪರಂತಪ।।
“ದೈತ್ಯ! ಪರಂತಪ! ವಿಷ್ಣುವಿನ ಈ ಉತ್ತಮ ಮಹಾತ್ಮೆಯೆಲ್ಲವನ್ನೂ ಕೇಳು. ವಿಷ್ಣುವಿನಲ್ಲಿಯೇ ಈ ಜಗತ್ತೆಲ್ಲವೂ ಸ್ಥಿತವಾಗಿದೆಯೆಂದು ತಿಳಿಯಬೇಕು.
12271008a ಸೃಜತ್ಯೇಷ ಮಹಾಬಾಹೋ ಭೂತಗ್ರಾಮಂ ಚರಾಚರಮ್।
12271008c ಏಷ ಚಾಕ್ಷಿಪತೇ ಕಾಲೇ ಕಾಲೇ ವಿಸೃಜತೇ ಪುನಃ।
12271008e ಅಸ್ಮಿನ್ಗಚ್ಚಂತಿ ವಿಲಯಮಸ್ಮಾಚ್ಚ ಪ್ರಭವಂತ್ಯುತ।।
ಮಹಾಬಾಹೋ! ಅವನೇ ಚರಾಚರ ಈ ಭೂತಗ್ರಾಮಗಳನ್ನು ಸೃಷ್ಟಿಸುತ್ತಾನೆ. ಮುಂದೆ ಕಾಲವು ಸನ್ನಿಹಿತವಾದಾಗ ಅವನೇ ಅದನ್ನು ನಾಶಗೊಳಿಸುತ್ತಾನೆ. ಕಾಲವು ಬಂದಾಗ ಪುನಃ ಅವನೇ ಅದನ್ನು ಸೃಷ್ಟಿಸುತ್ತಾನೆ. ಎಲ್ಲವೂ ಅವನಲ್ಲಿಯೇ ಲಯವಾಗುತ್ತವೆ. ಮತ್ತು ಅವನಿಂದಲೇ ಹುಟ್ಟುತ್ತವೆ.
12271009a ನೈಷ ದಾನವತಾ1 ಶಕ್ಯಸ್ತಪಸಾ ನೈವ ಚೇಜ್ಯಯಾ।
12271009c ಸಂಪ್ರಾಪ್ತುಮಿಂದ್ರಿಯಾಣಾಂ ತು ಸಂಯಮೇನೈವ ಶಕ್ಯತೇ।।
ದಾನದಿಂದಾಗಲೀ, ತಪಸ್ಸಿನಿಂದಾಗಲೀ ಮತ್ತು ಯಜ್ಞಗಳಿಂದಾಗಲೀ ಅವನನ್ನು ಹೊಂದಲು ಸಾಧ್ಯವಿಲ್ಲ. ಕೇವಲ ಇಂದ್ರಿಯಸಂಯಮದಿಂದ ಅವನನ್ನು ಪಡೆದುಕೊಳ್ಳಬಹುದು.
12271010a ಬಾಹ್ಯೇ ಚಾಭ್ಯಂತರೇ ಚೈವ ಕರ್ಮಣಾ ಮನಸಿ ಸ್ಥಿತಃ।
12271010c ನಿರ್ಮಲೀಕುರುತೇ ಬುದ್ಧ್ಯಾ ಸೋಽಮುತ್ರಾನಂತ್ಯಮಶ್ನುತೇ।।
ಬಾಹ್ಯಾಂತರ ಶುಭ ಕರ್ಮಗಳಿಂದ ಮನಸ್ಸನ್ನು ಸ್ಥಿರಗೊಳಿಸಿ ಬುದ್ಧಿಯ ಮೂಲಕ ಬಾಹ್ಯಾಂತರ ಶುದ್ಧಿಯನ್ನು ಮಾಡಿಕೊಳ್ಳುವವನು ಅನಂತ ಮೋಕ್ಷವನ್ನು ಹೊಂದುತ್ತಾನೆ.
12271011a ಯಥಾ ಹಿರಣ್ಯಕರ್ತಾ ವೈ ರೂಪ್ಯಮಗ್ನೌ ವಿಶೋಧಯೇತ್।
12271011c ಬಹುಶೋಽತಿಪ್ರಯತ್ನೇನ ಮಹತಾತ್ಮಕೃತೇನ ಹ।।
12271012a ತದ್ವಜ್ಜಾತಿಶತೈರ್ಜೀವಃ ಶುಧ್ಯತೇಽಲ್ಪೇನ ಕರ್ಮಣಾ।
12271012c ಯತ್ನೇನ ಮಹತಾ ಚೈವಾಪ್ಯೇಕಜಾತೌ ವಿಶುಧ್ಯತೇ।।
ಅಕ್ಕಸಾಲಿಗನು ಬೆಳ್ಳಿಯನ್ನು ಅನೇಕ ಬಾರಿ ಬೆಂಕಿಯಲ್ಲಿ ಹಾಕಿ ಪ್ರಯತ್ನಪಟ್ಟು ಶುದ್ಧಗೊಳಿಸುವಂತೆ ಜೀವನು ನಾರಾರು ಜನ್ಮಗಳನ್ನು ತಾಳಿ ಮನಸ್ಸನ್ನು ಶುದ್ಧಿಗೊಳಿಸುತ್ತಾನೆ. ಆದರೆ ಮಹಾ ಪ್ರಯತ್ನದಿಂದ ಒಂದೇ ಜನ್ಮದಲ್ಲಿ ವಿಶುದ್ಧನಾಗಬಲ್ಲನು.
12271013a ಲೀಲಯಾಲ್ಪಂ ಯಥಾ ಗಾತ್ರಾತ್ಪ್ರಮೃಜ್ಯಾದಾತ್ಮನೋ ರಜಃ।
12271013c ಬಹು ಯತ್ನೇನ ಮಹತಾ ದೋಷನಿರ್ಹರಣಂ ತಥಾ।।
ಶರೀರದ ಮೇಲಿರುವ ಧೂಳನ್ನು ಅಲ್ಪ ಪ್ರಯತ್ನದಿಂದ ಹೇಗೆ ತಾನೇ ಕೊಡವಿಕೊಳ್ಳಬಹುದೋ ಹಾಗೆ ಬಹು ಯತ್ನದಿಂದ ಆಂತರಿಕ ಮಹಾದೋಷಗಳನ್ನು ಹೋಗಲಾಡಿಸಿಕೊಳ್ಳಬಹುದು.
12271014a ಯಥಾ ಚಾಲ್ಪೇನ ಮಾಲ್ಯೇನ ವಾಸಿತಂ ತಿಲಸರ್ಷಪಮ್।
12271014c ನ ಮುಂಚತಿ ಸ್ವಕಂ ಗಂಧಂ ತದ್ವತ್ಸೂಕ್ಷ್ಮಸ್ಯ ದರ್ಶನಮ್।।
ಸ್ವಲ್ಪವೇ ಹೂವುಗಳಿಂದ ವಾಸಿತವಾದ ಎಳ್ಳೆಣ್ಣೆಯು ತನ್ನ ಗಂಧವನ್ನು ಹೇಗೆ ಬಿಟ್ಟುಕೊಡುವುದಿಲ್ಲವೋ ಹಾಗೆ ಪೂರ್ವಜನ್ಮಾನುಗತವಾಗಿ ಬಂದಿರುವ ವಾಸನೆಗಳು ಸುಲಭವಾಗಿ ಬಿಟ್ಟುಹೋಗುವುದಿಲ್ಲ. ಇದು ಸೂಕ್ಷ್ಮದರ್ಶನವು.
12271015a ತದೇವ ಬಹುಭಿರ್ಮಾಲ್ಯೈರ್ವಾಸ್ಯಮಾನಂ ಪುನಃ ಪುನಃ।
12271015c ವಿಮುಂಚತಿ ಸ್ವಕಂ ಗಂಧಂ ಮಾಲ್ಯಗಂಧೇಽವತಿಷ್ಠತಿ।।
ಅದೇ ಎಳ್ಳೆಣ್ಣೆಗೆ ಹೆಚ್ಚು ಹೂವುಗಳನ್ನು ಹಾಕಿ ಪುನಃ ಪುನಃ ಸುವಾಸಿತಗೊಳಿಸಿದರೆ ಆ ಎಳ್ಳೆಣ್ಣೆಯು ತನ್ನ ವಾಸನೆಯನ್ನು ತೊರೆದು ಹೂವಿನ ಗಂಧವನ್ನೇ ಪಡೆದುಕೊಳ್ಳುತ್ತದೆ.
12271016a ಏವಂ ಜಾತಿಶತೈರ್ಯುಕ್ತೋ ಗುಣೈರೇವ ಪ್ರಸಂಗಿಷು।
12271016c ಬುದ್ಧ್ಯಾ ನಿವರ್ತತೇ ದೋಷೋ ಯತ್ನೇನಾಭ್ಯಾಸಜೇನ ವೈ।।
ಹೀಗೆ ನೂರಾರು ಜನ್ಮಗಳಿಂದ ತ್ರಿಗುಣಯುಕ್ತನಾಗಿ, ಸಂಬಂಧಗಳನ್ನು ಹೊಂದಿದ ಜೀವಿಯು ಅಭ್ಯಾಸಜನ್ಯ ಪ್ರಯತ್ನದಿಂದಲೂ ಮತ್ತು ಬುದ್ಧಿಯಿಂದಲೂ ದೋಷಗಳನ್ನು ನಿವಾರಿಸಿಕೊಳ್ಳಬಹುದು.
12271017a ಕರ್ಮಣಾ ಸ್ವೇನ ರಕ್ತಾನಿ2 ವಿರಕ್ತಾನಿ ಚ ದಾನವ।
12271017c ಯಥಾ ಕರ್ಮವಿಶೇಷಾಂಶ್ಚ ಪ್ರಾಪ್ನುವಂತಿ ತಥಾ ಶೃಣು।।
ದಾನವ! ಯಾವ ಕಾರಣದಿಂದ ಕರ್ಮಗಳಲ್ಲಿ ಆಸಕ್ತರೂ-ನಿರಾಸಕ್ತರೂ ಆಗುತ್ತಾರೆ ಮತ್ತು ಅವುಗಳ ಫಲಗಳೇನೆನ್ನುವುದರ ಕುರಿತು ಕೇಳು.
12271018a ಯಥಾ ಚ ಸಂಪ್ರವರ್ತಂತೇ ಯಸ್ಮಿಂಸ್ತಿಷ್ಠಂತಿ ವಾ ವಿಭೋ।
12271018c ತತ್ತೇಽನುಪೂರ್ವ್ಯಾ ವ್ಯಾಖ್ಯಾಸ್ಯೇ ತದಿಹೈಕಮನಾಃ ಶೃಣು।।
ವಿಭೋ! ಪ್ರಾಣಿಗಳು ಹೇಗೆ ಕರ್ಮಗಳಲ್ಲಿ ಪ್ರವೃತ್ತವಾಗುತ್ತವೆ? ಯಾವ ಕಾರಣದಿಂದ ಅದೇ ಸ್ಥಿತಿಯಲ್ಲಿ ಅವು ಮುಂದುವರಿಯುತ್ತವೆ? ಮತ್ತು ಯಾವ ಅವಸ್ಥೆಯಲ್ಲಿ ಅವು ಕರ್ಮಗಳಿಂದ ನಿವೃತ್ತಗೊಳ್ಳುತ್ತವೆ? ಇವೆಲ್ಲವನ್ನೂ ಅನುಕ್ರಮವಾಗಿ ಹೇಳುತ್ತೇನೆ. ಏಕಮನಸ್ಕನಾಗಿ ಕೇಳು.
12271019a ಅನಾದಿನಿಧನಃ ಶ್ರೀಮಾನ್ ಹರಿರ್ನಾರಾಯಣಃ ಪ್ರಭುಃ।
12271019c ಸ ವೈ ಸೃಜತಿ ಭೂತಾನಿ ಸ್ಥಾವರಾಣಿ ಚರಾಣಿ ಚ।।
ಅನಾದಿನಿಧನ ಶ್ರೀಮಾನ್ ಹರಿ ನಾರಾಯಣ ಪ್ರಭುವು ಈ ಸ್ಥಾವರ-ಜಂಗಮ ಭೂತಗಳನ್ನು ಸೃಷ್ಟಿಸುತ್ತಾನೆ.
12271020a ಏಷ ಸರ್ವೇಷು ಭೂತೇಷು ಕ್ಷರಶ್ಚಾಕ್ಷರ ಏವ ಚ।
12271020c ಏಕಾದಶವಿಕಾರಾತ್ಮಾ ಜಗತ್ಪಿಬತಿ ರಶ್ಮಿಭಿಃ।।
ಇವನೇ ಸರ್ವಭೂತಗಳಲ್ಲಿಯೂ ಇರುವ ಕ್ಷರ ಮತ್ತು ಅಕ್ಷರ. ಹನ್ನೊಂದು ವಿಕಾರಗಳನ್ನು3 ಹೊಂದಿ ತನ್ನ ಕಿರಣಗಳಿಂದ ಜಗತ್ತನ್ನು ವ್ಯಾಪಿಸಿದ್ದಾನೆ.
12271021a ಪಾದೌ ತಸ್ಯ ಮಹೀಂ ವಿದ್ಧಿ ಮೂರ್ಧಾನಂ ದಿವಮೇವ ಚ।
12271021c ಬಾಹವಸ್ತು ದಿಶೋ ದೈತ್ಯ ಶ್ರೋತ್ರಮಾಕಾಶಮೇವ ಚ।।
ಭೂಮಿಯೇ ಅವನ ಪಾದಗಳೆಂದು ತಿಳಿ. ಸ್ವರ್ಗವೇ ಅವನ ನೆತ್ತಿ. ದೈತ್ಯ! ದಿಕ್ಕುಗಳೇ ಅವನ ಬಾಹುಗಳು ಮತ್ತು ಆಕಾಶವೇ ಅವನ ಕಿವಿಗಳು.
12271022a ತಸ್ಯ ತೇಜೋಮಯಃ ಸೂರ್ಯೋ ಮನಶ್ಚಂದ್ರಮಸಿ ಸ್ಥಿತಮ್।
12271022c ಬುದ್ಧಿರ್ಜ್ಞಾನಗತಾ ನಿತ್ಯಂ ರಸಸ್ತ್ವಪ್ಸು ಪ್ರವರ್ತತೇ।।
ತೇಜೋಮಯ ಸೂರ್ಯನು ಇವನ ಕಣ್ಣುಗಳು. ಚಂದ್ರನು ಅವನ ಮನಸ್ಸಿನಲ್ಲಿದ್ದಾನೆ. ಇವನ ಬುದ್ಧಿಯು ನಿತ್ಯವೂ ಜ್ಞಾನದಲ್ಲಿದೆ. ರಸವು ನೀರಿನಲ್ಲಿ ಪ್ರತಿಷ್ಠಿತವಾಗಿದೆ.
12271023a ಭ್ರುವೋರನಂತರಾಸ್ತಸ್ಯ ಗ್ರಹಾ ದಾನವಸತ್ತಮ।
12271023c ನಕ್ಷತ್ರಚಕ್ರಂ ನೇತ್ರಾಭ್ಯಾಂ ಪಾದಯೋರ್ಭೂಶ್ಚ ದಾನವ।।
ದಾನವಸತ್ತಮ! ಇವನ ಹುಬ್ಬುಗಳ ನಡುವೆ ಗ್ರಹಗಳಿವೆ. ಕಣ್ಣುಗಳಿಂದ ನಕ್ಷತ್ರಮಂಡಲವು ಪ್ರಕಟವಾಗುತ್ತದೆ. ದಾನವ! ಭೂಮಿಯು ಇವನ ಎರಡು ಪಾದಗಳಲ್ಲಿದೆ.
12271024a ರಜಸ್ತಮಶ್ಚ ಸತ್ತ್ವಂ ಚ ವಿದ್ಧಿ ನಾರಾಯಣಾತ್ಮಕಮ್।
12271024c ಸೋಽಶ್ರಮಾಣಾಂ ಮುಖಂ4 ತಾತ ಕರ್ಮಣಸ್ತತ್ಫಲಂ ವಿದುಃ।।
ಅಯ್ಯಾ! ರಜಸ್ತಮೋಸತ್ವಗುಣಗಳು ನಾರಾಯಣಾತ್ಮಕವೆಂದು ತಿಳಿ. ಅವನೇ ಆಶ್ರಮಗಳ ಮುಖನು ಮತ್ತು ಕರ್ಮಗಳ ಫಲವೆಂದು ತಿಳಿಯಬೇಕು.
12271025a ಅಕರ್ಮಣಃ ಫಲಂ ಚೈವ ಸ ಏವ ಪರಮವ್ಯಯಃ।
12271025c ಚಂದಾಂಸಿ ತಸ್ಯ ರೋಮಾಣಿ ಅಕ್ಷರಂ ಚ ಸರಸ್ವತೀ।।
ಆ ಪರಮ ಅವ್ಯಯನು ಅಕರ್ಮದ ಫಲವೂ ಆಗಿದ್ದಾನೆ. ವೇದಮಂತ್ರಗಳೇ ಅವನ ರೋಮಕೋಟಿಗಳು ಮತ್ತು ಪ್ರಣವವೇ ಅವನ ವಾಣಿಯು.
12271026a ಬಹ್ವಾಶ್ರಯೋ ಬಹುಮುಖೋ ಧರ್ಮೋ ಹೃದಿ ಸಮಾಶ್ರಿತಃ।
12271026c ಸ ಬ್ರಹ್ಮಪರಮೋ ಧರ್ಮಸ್ತಪಶ್ಚ ಸದಸಚ್ಚ ಸಃ।।
ಅನೇಕ ಆಶ್ರಮಗಳ ಬಹುಮುಖವಾದ ಧರ್ಮವೂ ಇವನೇ. ಹೃದಯದಲ್ಲಿ ನೆಲೆಸಿರುವ ಪರಬ್ರಹ್ಮನೇ ಅವನು. ಅವನೇ ಧರ್ಮ, ತಪಸ್ಸು ಮತ್ತು ಕಾರ್ಯಕಾರಣನು.
12271027a ಶ್ರುತಿಶಾಸ್ತ್ರಗ್ರಹೋಪೇತಃ ಷೋಡಶರ್ತ್ವಿಕ್ಕ್ರತುಶ್ಚ ಸಃ।
12271027c ಪಿತಾಮಹಶ್ಚ ವಿಷ್ಣುಶ್ಚ ಸೋಽಶ್ವಿನೌ ಸ ಪುರಂದರಃ।।
ಶ್ರುತಿ, ಶಾಸ್ತ್ರ ಮತ್ತು ಸೋಮಪಾತ್ರಸಹಿತರಾದ ಹದಿನಾರು ಋತ್ವಿಜರನ್ನೊಳಗೊಂಡ ಯಜ್ಞವೂ ಅವನೇ. ಪಿತಾಮಹ, ವಿಷ್ಣು, ಅಶ್ವಿನೀ ದೇವತೆಗಳು ಮತ್ತು ಪುರಂದರ – ಇವರೂ ಅವನೇ.
12271028a ಮಿತ್ರಶ್ಚ ವರುಣಶ್ಚೈವ ಯಮೋಽಥ ಧನದಸ್ತಥಾ।
12271028c ತೇ ಪೃಥಗ್ದರ್ಶನಾಸ್ತಸ್ಯ ಸಂವಿದಂತಿ ತಥೈಕತಾಮ್।।
12271028e ಏಕಸ್ಯ ವಿದ್ಧಿ ದೇವಸ್ಯ ಸರ್ವಂ ಜಗದಿದಂ ವಶೇ।।
ಮಿತ್ರ, ವರುಣ, ಯಮ, ಮತ್ತು ಧನದ ಇವರೂ ಅವನೇ. ಇವರೆಲ್ಲರೂ ಅವನ ಪ್ರತ್ಯೇಕ ರೂಪಗಳೇ ಆಗಿರುತ್ತಾರೆ. ಅವರೆಲ್ಲರೂ ಅವನೊಬ್ಬನೇ ಎಂದು ಜ್ಞಾನಿಗಳು ತಿಳಿದಿದ್ದಾರೆ. ಈ ಸರ್ವ ಜಗತ್ತೂ ಆ ಒಬ್ಬನೇ ದೇವನ ವಶದಲ್ಲಿಯಿದೆಯೆಂದು ತಿಳಿ.
12271029a ನಾನಾಭೂತಸ್ಯ ದೈತ್ಯೇಂದ್ರ ತಸ್ಯೈಕತ್ವಂ ವದತ್ಯಯಮ್।
12271029c ಜಂತುಃ ಪಶ್ಯತಿ ಜ್ಞಾನೇನ ತತಃ ಸತ್ತ್ವಂ ಪ್ರಕಾಶತೇ।।
ದೈತ್ಯೇಂದ್ರ! ನಾನಾಭೂತಗಳ ಏಕತ್ವವು ಇವನೇ ಎಂದು ವೇದಗಳು ಹೇಳುತ್ತವೆ. ಜಂತುವು ಈ ಜ್ಞಾನದಿಂದ ನೋಡಿದಾಗ ಸತ್ತ್ವವು ಪ್ರಕಾಶಿಸುತ್ತದೆ.
12271030a ಸಂಹಾರವಿಕ್ಷೇಪಸಹಸ್ರಕೋಟೀಸ್ ತಿಷ್ಠಂತಿ ಜೀವಾಃ ಪ್ರಚರಂತಿ ಚಾನ್ಯೇ।
12271030c ಪ್ರಜಾವಿಸರ್ಗಸ್ಯ ಚ ಪಾರಿಮಾಣ್ಯಂ ವಾಪೀಸಹಸ್ರಾಣಿ ಬಹೂನಿ ದೈತ್ಯ।।
ದೈತ್ಯ! ಸೃಷ್ಟಿ ಮತ್ತು ಪ್ರಳಯಗಳ ಮಧ್ಯದ ಸಹಸ್ರ ಕೋಟಿ ವರ್ಷಗಳ ಪರ್ಯಂತ ಜೀವಿಗಳಿರುತ್ತವೆ. ಅಷ್ಟೇ ಸಮಯ ಪ್ರಳಯ ಮತ್ತು ಸೃಷ್ಟಿಯ ನಡುವೆ ಇದೆ. ಪ್ರಜಾಸೃಷ್ಟಿಯ ಈ ಕಾಲ ಪ್ರಮಾಣವನ್ನು ಅನೇಕ ಸಾವಿರ ಸರೋವರಗಳನ್ನು ಉದಾಹರಿಸಿ ಎಣಿಸುತ್ತಾರೆ5.
12271031a ವಾಪ್ಯಃ ಪುನರ್ಯೋಜನವಿಸ್ತೃತಾಸ್ತಾಃ ಕ್ರೋಶಂ ಚ ಗಂಭೀರತಯಾವಗಾಢಾಃ।
12271031c ಆಯಾಮತಃ ಪಂಚಶತಾಶ್ಚ ಸರ್ವಾಃ ಪ್ರತ್ಯೇಕಶೋ ಯೋಜನತಃ ಪ್ರವೃದ್ಧಾಃ।।
ಪ್ರತಿಯೊಂದು ಸರೋವರವೂ ಒಂದು ಯೋಜನ ಅಗಲ, ಒಂದು ಕ್ರೋಶ ಆಳ ಮತ್ತು ಐನೂರು ಯೋಜನ ಉದ್ದ. ಒಂದು ಸರೋವರದಿಂದ ಇನ್ನೊಂದು ಸರೋವರದ ದೂರ ಒಂದು ಯೋಜನ.
12271032a ವಾಪ್ಯಾ ಜಲಂ ಕ್ಷಿಪ್ಯತಿ ವಾಲಕೋಟ್ಯಾ ತ್ವಹ್ನಾ ಸಕೃಚ್ಚಾಪ್ಯಥ ನ ದ್ವಿತೀಯಮ್।
12271032c ತಾಸಾಂ ಕ್ಷಯೇ ವಿದ್ಧಿ ಕೃತಂ ವಿಸರ್ಗಂ ಸಂಹಾರಮೇಕಂ ಚ ತಥಾ ಪ್ರಜಾನಾಮ್।।
ಎರಡಲ್ಲದೇ ಒಂದೇ ಒಂದು ಕೂದಲೆಳೆಯನ್ನು ದಿನಕೊಮ್ಮೆ ಬಾರಿ ಮಾತ್ರ ಸರೋವರದಲ್ಲಿ ಅದ್ದಿ ನೀರನ್ನು ತೆಗೆದರೆ ಎಲ್ಲ ಸರೋವರಗಳನ್ನೂ ಬತ್ತಿಸಲು ಎಷ್ಟು ಸಮಯ ಬೇಕಾಗುವುದೋ ಅಷ್ಟು ಸಮಯ ಪ್ರಜಾಸೃಷ್ಟಿಯಿರುತ್ತದೆ. ಅಷ್ಟೇ ಸಮಯ ಪ್ರಲಯವೂ ಇರುತ್ತದೆ.
12271033a ಷಡ್ಜೀವವರ್ಣಾಃ ಪರಮಂ ಪ್ರಮಾಣಂ ಕೃಷ್ಣೋ ಧೂಮ್ರೋ ನೀಲಮಥಾಸ್ಯ ಮಧ್ಯಮ್।
12271033c ರಕ್ತಂ ಪುನಃ ಸಹ್ಯತರಂ ಸುಖಂ ತು ಹಾರಿದ್ರವರ್ಣಂ ಸುಸುಖಂ ಚ ಶುಕ್ಲಮ್।।
ಜೀವಿಗಳು ಆರು ಬಣ್ಣದವುಗಳು ಎನ್ನುವುದಕ್ಕೆ ಪರಮ ಪ್ರಮಾಣವಿದೆ: ಕಪ್ಪು, ಹೊಗೆಬಣ್ಣ, ಮಧ್ಯದಲ್ಲಿ ನೀಲಿ, ನಂತರ ಸಹಿಸಬಹುದಾದ ಕೆಂಪು, ತುಂಬಾ ಸುಖಕರವಾದ ಹಳದಿ ಮತ್ತು ಬಿಳಿ.
12271034a ಪರಂ ತು ಶುಕ್ಲಂ ವಿಮಲಂ ವಿಶೋಕಂ ಗತಕ್ಲಮಂ ಸಿಧ್ಯತಿ ದಾನವೇಂದ್ರ।
12271034c ಗತ್ವಾ ತು ಯೋನಿಪ್ರಭವಾನಿ ದೈತ್ಯ ಸಹಸ್ರಶಃ ಸಿದ್ಧಿಮುಪೈತಿ ಜೀವಃ।।
ದಾನವೇಂದ್ರ! ಬಿಳೀ ವರ್ಣವು ಪರಮ ಶ್ರೇಷ್ಠವಾದುದು. ಅದು ಮಲರಹಿತವಾದುದು, ಶೋಕರಹಿತವಾದುದು, ಆಯಾಸ ರಹಿತವಾದುದು ಮತ್ತು ಮೋಕ್ಷಸಾಧಕವು. ದೈತ್ಯ! ಸಹಸ್ರಾರು ಯೋನಿಗಳಲ್ಲಿ ಜನ್ಮತಾಳಿದ ನಂತರ ಜೀವವು ಈ ಶುಕ್ಲವರ್ಣದ ಸಿದ್ಧಿಯನ್ನು ಪಡೆದುಕೊಳ್ಳುತ್ತದೆ.
12271035a ಗತಿಂ ಚ ಯಾಂ ದರ್ಶನಮಾಹ ದೇವೋ ಗತ್ವಾ ಶುಭಂ ದರ್ಶನಮೇವ ಚಾಹ।
12271035c ಗತಿಃ ಪುನರ್ವರ್ಣಕೃತಾ ಪ್ರಜಾನಾಂ ವರ್ಣಸ್ತಥಾ ಕಾಲಕೃತೋಽಸುರೇಂದ್ರ।।
ಅಸುರೇಂದ್ರ! ದೇವತೆಗಳು ಜೀವಿಗಳ ಎಲ್ಲ ಗತಿಗಳನ್ನೂ ನೋಡಿ ಮತ್ತು ಶುಭ ದರ್ಶನಗಳು ಗತಿಗಳ ಕುರಿತು ಏನನ್ನು ಹೇಳಿವೆ ಎನ್ನುವುದನ್ನೂ ವಿಶ್ಲೇಷಿಸಿ ಜೀವಿಯ ಗತಿಯನ್ನು ಅದರ ಬಣ್ಣವು ನಿರ್ಧರಿಸುತ್ತದೆ ಮತ್ತು ಬಣ್ಣವನ್ನು ಕಾಲವು ನಿರ್ಧರಿಸುತ್ತದೆ ಎಂದು ಅರಿತುಕೊಂಡರು.
12271036a ಶತಂ ಸಹಸ್ರಾಣಿ ಚತುರ್ದಶೇಹ ಪರಾ ಗತಿರ್ಜೀವಗುಣಸ್ಯ ದೈತ್ಯ।
12271036c ಆರೋಹಣಂ ತತ್ಕೃತಮೇವ ವಿದ್ಧಿ ಸ್ಥಾನಂ ತಥಾ ನಿಃಸರಣಂ ಚ ತೇಷಾಮ್।।
ದೈತ್ಯ! ಒಂದು ಜೀವವು ಹದಿನಾಲ್ಕು ಲಕ್ಷ ಹುಟ್ಟು-ಸಾವುಗಳನ್ನು ಅನುಭವಿಸಬೇಕಾಗುತ್ತದೆ ಮತ್ತು ಈ ಸಂಖ್ಯೆಯು ಅನಂತವಾದದ್ದಲ್ಲ6. ಜೀವದ ಕರ್ಮಗಳಿಗನುಗುಣವಾಗಿ ಅದು ತನ್ನ ಗತಿಯಲ್ಲಿ ಮೇಲೇರಬಲ್ಲದು, ಇದ್ದ ಗತಿಯಲ್ಲಿಯೇ ಇರಬಹುದು ಅಥವಾ ಇದ್ದ ಗತಿಗಿಂತ ಕೆಳಗಿನ ಗತಿಗೆ ಇಳಿಯಬಲ್ಲದು ಎಂದು ತಿಳಿ.
12271037a ಕೃಷ್ಣಸ್ಯ ವರ್ಣಸ್ಯ ಗತಿರ್ನಿಕೃಷ್ಟಾ ಸ ಮಜ್ಜತೇ ನರಕೇ ಪಚ್ಯಮಾನಃ।
12271037c ಸ್ಥಾನಂ ತಥಾ ದುರ್ಗತಿಭಿಸ್ತು ತಸ್ಯ ಪ್ರಜಾವಿಸರ್ಗಾನ್ಸುಬಹೂನ್ವದಂತಿ।।
ಕೃಷ್ಣವರ್ಣದ ಗತಿಯು ನಿಕೃಷ್ಟವಾದುದು. ಆ ವರ್ಣದ ಜೀವವು ನರಕದಲ್ಲಿ ಮುಳುಗಿ ಬೇಯಿಸಲ್ಪಡುತ್ತದೆ. ಅದೇ ಸ್ಥಾನದಲ್ಲಿ ಅದು ಅನೇಕ ಕಲ್ಪಗಳವರೆಗೆ ಇರುತ್ತದೆ ಎಂದು ಹೇಳುತ್ತಾರೆ.
12271038a ಶತಂ ಸಹಸ್ರಾಣಿ ತತಶ್ಚರಿತ್ವಾ ಪ್ರಾಪ್ನೋತಿ ವರ್ಣಂ ಹರಿತಂ ತು ಪಶ್ಚಾತ್।
12271038c ಸ ಚೈವ ತಸ್ಮಿನ್ನಿವಸತ್ಯನೀಶೋ ಯುಗಕ್ಷಯೇ ತಮಸಾ ಸಂವೃತಾತ್ಮಾ।।
ನೂರಾರು ಸಹಸ್ರಾರು ವರ್ಷಗಳು ಆ ಪರಿಸ್ಥಿತಿಯಲ್ಲಿಯೇ ಇದ್ದು ನಂತರ ಅದು ಧೂಮ್ರವರ್ಣವನ್ನು ಪಡೆದುಕೊಳ್ಳುತ್ತದೆ7. ಒಂದು ಯುಗವು ಅಂತ್ಯವಾಗುವ ವರೆಗೆ ಅದು ಅಲ್ಲಿಯೇ ಅಸ್ವತಂತ್ರವಾಗಿ, ಅದರ ಆತ್ಮವು ತಮೋಗುಣದಿಂದ ಆವೃತವಾಗಿ ಇರುತ್ತದೆ.
12271039a ಸ ವೈ ಯದಾ ಸತ್ತ್ವಗುಣೇನ ಯುಕ್ತಸ್ ತಮೋ ವ್ಯಪೋಹನ್ ಘಟತೇ ಸ್ವಬುದ್ಧ್ಯಾ।
12271039c ಸ ಲೋಹಿತಂ ವರ್ಣಮುಪೈತಿ ನೀಲೋ ಮನುಷ್ಯಲೋಕೇ ಪರಿವರ್ತತೇ ಚ।।
ಯಾವಾಗ ಆ ಜೀವವು ಸತ್ತ್ವಗುಣಯುಕ್ತವಾಗುತ್ತದೆಯೋ ಆಗ ಅದು ಸ್ವಬುದ್ಧಿಯಿಂದ ತಮಸ್ಸನ್ನು ದೂರೀಕರಿಸಿ ನೀಲವರ್ಣವನ್ನು ತಾಳಿ ಮನುಷ್ಯಲೋಕದಲ್ಲಿ ಸಂಚರಿಸುತ್ತಾ ಕ್ರಮೇಣವಾಗಿ ರಕ್ತವರ್ಣವನ್ನು ತಾಳುತ್ತದೆ8.
12271040a ಸ ತತ್ರ ಸಂಹಾರವಿಸರ್ಗಮೇವ ಸ್ವಕರ್ಮಜೈರ್ಬಂಧನೈಃ ಕ್ಲಿಶ್ಯಮಾನಃ।
12271040c ತತಃ ಸ ಹಾರಿದ್ರಮುಪೈತಿ ವರ್ಣಂ ಸಂಹಾರವಿಕ್ಷೇಪಶತೇ ವ್ಯತೀತೇ।।
ಮನುಷ್ಯಲೋಕದಲ್ಲಿ ಅದು ತನ್ನದೇ ಕರ್ಮಫಲಗಳಿಗೆ ಬಂಧಿಸಲ್ಪಟ್ಟು ಜನನ-ಮರಣಗಳ ದುಃಖಗಳನ್ನು ಅನುಭವಿಸುತ್ತದೆ. ಅನಂತರ ಅದು ಹಳದೀ ಬಣ್ಣವನ್ನು ತಳೆದು9 ನೂರಾರು ಕಲ್ಪಗಳನ್ನು ಕಳೆಯುತ್ತದೆ.
12271041a ಹಾರಿದ್ರವರ್ಣಸ್ತು ಪ್ರಜಾವಿಸರ್ಗಾನ್ ಸಹಸ್ರಶಸ್ತಿಷ್ಠತಿ ಸಂಚರನ್ವೈ।
12271041c ಅವಿಪ್ರಮುಕ್ತೋ ನಿರಯೇ ಚ ದೈತ್ಯ ತತಃ ಸಹಸ್ರಾಣಿ ದಶಾಪರಾಣಿ।।
ದೈತ್ಯ! ಹಳದೀ ಬಣ್ಣದಲ್ಲಿ ಅದು ಸಹಸ್ರಾರು ಕಲ್ಪಗಳು ತಿರುಗುತ್ತಿರುತ್ತದೆ. ಆದರೂ ಅದು ಮೋಕ್ಷವನ್ನು ಹೊಂದದೇ ಒಂದು ಸಾವಿರದ ಹತ್ತು ವರ್ಷಗಳು ನರಕವನ್ನು ಅನುಭವಿಸಬೇಕಾಗುತ್ತದೆ.
12271042a ಗತೀಃ ಸಹಸ್ರಾಣಿ ಚ ಪಂಚ ತಸ್ಯ ಚತ್ವಾರಿ ಸಂವರ್ತಕೃತಾನಿ ಚೈವ।
12271042c ವಿಮುಕ್ತಮೇನಂ ನಿರಯಾಚ್ಚ ವಿದ್ಧಿ ಸರ್ವೇಷು ಚಾನ್ಯೇಷು ಚ ಸಂಭವೇಷು।।
ಹತ್ತೊಂಬತ್ತು ಸಾವಿರ10 ಕರ್ಮಚಕ್ರಗಳ ಗತಿಯ ಕುರಿತೂ ಹೇಳುತ್ತಾರೆ. ಮೋಕ್ಷದಿಂದ ಮಾತ್ರ ನರಕ ಮತ್ತು ಎಲ್ಲ ಅನ್ಯ ಹುಟ್ಟುಗಳಿಂದ ತಪ್ಪಿಸಿಕೊಳ್ಳಬಹುದು ಎನ್ನುವುದನ್ನು ತಿಳಿದುಕೋ11.
12271043a ಸ ದೇವಲೋಕೇ ವಿಹರತ್ಯಭೀಕ್ಷ್ಣಂ ತತಶ್ಚ್ಯುತೋ ಮಾನುಷತಾಮುಪೈತಿ।
12271043c ಸಂಹಾರವಿಕ್ಷೇಪಶತಾನಿ ಚಾಷ್ಟೌ ಮರ್ತ್ಯೇಷು ತಿಷ್ಠನ್ನಮೃತತ್ವಮೇತಿ।।
ಆ ಜೀವವು ದೇವಲೋಕದಲ್ಲಿ ವಿಹರಿಸಿದರೂ ಪುಣ್ಯಗಳು ಕ್ಷೀಣಿಸಿದಾಗ ಅದು ದೇವಲೋಕದಿಂದ ಚ್ಯುತಿಹೊಂದಿ ಮನುಷ್ಯತ್ವವನ್ನು ಪಡೆದುಕೊಳ್ಳುತ್ತದೆ. ಮರ್ತ್ಯಲೋಕದಲ್ಲಿ ಆ ಜೀವವು ನೂರಾಎಂಟು12 ಕಲ್ಪಗಳ ವರೆಗೂ ಹುಟ್ಟು-ಸಾವುಗಳನ್ನು ಅನುಭವಿಸಿ ಅಮೃತತ್ತ್ವವನ್ನು ಪಡೆದುಕೊಳ್ಳುತ್ತದೆ.
12271044a ಸೋಽಸ್ಮಾದಥ ಭ್ರಶ್ಯತಿ ಕಾಲಯೋಗಾತ್ ಕೃಷ್ಣೇ ತಲೇ ತಿಷ್ಠತಿ ಸರ್ವಕಷ್ಟೇ।
12271044c ಯಥಾ ತ್ವಯಂ ಸಿಧ್ಯತಿ ಜೀವಲೋಕಸ್ ತತ್ತೇಽಭಿಧಾಸ್ಯಾಮ್ಯಸುರಪ್ರವೀರ।।
ಅಸುರಪ್ರವೀರ! ಆದರೆ ಕಾಲಯೋಗದಿಂದ ಅಲ್ಲಿ ಮೋಕ್ಷಮಾರ್ಗದಿಂದ ಭ್ರಷ್ಟವಾದರೆ ಅದು ಕೃಷ್ಣವರ್ಣವನ್ನು ಪಡೆದುಕೊಂಡು ಸರ್ವಕಷ್ಟಗಳನ್ನೂ ಅನುಭವಿಸುತ್ತದೆ. ಈಗ ನಾನು ನಿನಗೆ ಜೀವಲೋಕವು, ಇಚ್ಛಿಸಿದರೆ, ಹೇಗೆ ಮೋಕ್ಷಸಿದ್ಧಿಯನ್ನು ಹೊಂದುತ್ತದೆ ಎನ್ನುವುದನ್ನು ಹೇಳುತ್ತೇನೆ.
12271045a ದೈವಾನಿ ಸ ವ್ಯೂಹಶತಾನಿ ಸಪ್ತ ರಕ್ತೋ ಹರಿದ್ರೋಽಥ ತಥೈವ ಶುಕ್ಲಃ।
12271045c ಸಂಶ್ರಿತ್ಯ ಸಂಧಾವತಿ ಶುಕ್ಲಮೇತಮ್ ಅಷ್ಟಾಪರಾನರ್ಚ್ಯತಮಾನ್ಸ ಲೋಕಾನ್।।
ಏಳುನೂರು ಬೇರೆ ಬೇರೆ ಕರ್ಮಗಳಿಂದ ಜೀವವು ಕೆಂಪುವರ್ಣದಿಂದ ಹಳದಿ ಮತ್ತು ಶುಕ್ಲವರ್ಣಗಳನ್ನು ಪಡೆದುಕೊಳ್ಳುತ್ತದೆ. ಶುಕ್ಲವರ್ಣವನ್ನು ಆಶ್ರಯಿಸಿ ಜೀವವು ಎಂಟು ಅಪರ ಲೋಕಗಳಲ್ಲಿ ಸಂಚರಿಸುತ್ತದೆ.
12271046a ಅಷ್ಟೌ ಚ ಷಷ್ಟಿಂ ಚ ಶತಾನಿ ಯಾನಿ ಮನೋವಿರುದ್ಧಾನಿ ಮಹಾದ್ಯುತೀನಾಮ್।
12271046c ಶುಕ್ಲಸ್ಯ ವರ್ಣಸ್ಯ ಪರಾ ಗತಿರ್ಯಾ ತ್ರೀಣ್ಯೇವ ರುದ್ಧಾನಿ ಮಹಾನುಭಾವ।।
ಎಂಟು13, ಅರವತ್ತು14 ಮತ್ತು ನೂರು15 – ಇವು ಮಹಾತೇಜಸ್ವಿಗಳ ಮನಸ್ಸಿಗೆ ಅಡ್ಡಿಯನ್ನುಂಟುಮಾಡುತ್ತವೆ. ಮಹಾನುಭಾವ! ಶುಕ್ಲವರ್ಣದ ತುರೀಯಾವಸ್ಥೆಯು ಜಾಗೃತ್-ಸ್ವಪ್ನ-ಸುಷುಪ್ತಿ ಈ ಮೂರು ಅವಸ್ಥೆಗಳನ್ನೂ ನಿರೋಧಿಸುವುದರಿಂದ ಪ್ರಾಪ್ತವಾಗುತ್ತದೆ.
12271047a ಸಂಹಾರವಿಕ್ಷೇಪಮನಿಷ್ಟಮೇಕಂ ಚತ್ವಾರಿ ಚಾನ್ಯಾನಿ ವಸತ್ಯನೀಶಃ।
12271047c ಷಷ್ಠಸ್ಯ ವರ್ಣಸ್ಯ ಪರಾ ಗತಿರ್ಯಾ ಸಿದ್ಧಾ ವಿಶಿಷ್ಟಸ್ಯ ಗತಕ್ಲಮಸ್ಯ।।
ಪಾಪರಹಿತ ಸಿದ್ಧನಿಗೆ ಆರನೆಯ ಶುಕ್ಲವರ್ಣದ ಪರಮ ಗತಿಯು ಸಿದ್ಧಿಸದೇ ಇದ್ದರೂ ಒಂದು ಕಲ್ಪದವರೆಗೆ ಅವನು ಮಹೋಲೋಕ-ಜನೋಲೋಕ-ತಪೋಲೋಕ-ಸತ್ಯಲೋಕಗಳೆಂಬ ನಾಲ್ಕು ಲೋಕಗಳಲ್ಲಿ ವಾಸಿಸಿ ಕಲ್ಪಾಂತದಲ್ಲಿ ಮುಕ್ತನಾಗುತ್ತಾನೆ.
12271048a ಸಪ್ತೋತ್ತರಂ ತೇಷು ವಸತ್ಯನೀಶಃ ಸಂಹಾರವಿಕ್ಷೇಪಶತಂ ಸಶೇಷಮ್।
12271048c ತಸ್ಮಾದುಪಾವೃತ್ಯ ಮನುಷ್ಯಲೋಕೇ ತತೋ ಮಹಾನ್ಮಾನುಷತಾಮುಪೈತಿ।।
ಚೆನ್ನಾಗಿ ಯೋಗಸಾಧನಮಾಡಲು ಅಸಮರ್ಥನಾಗಿರುವ ಅಥವಾ ಯೋಗಭ್ರಷ್ಟನಾದ ಶುಕ್ಲವರ್ಣದವನು ನೂರು ಕಲ್ಪಗಳ ವರೆಗೆ ಮೇಲಿನ ಏಳು16 ಲೋಕಗಳಲ್ಲಿ ವಾಸಿಸುತ್ತಿದ್ದು ನಂತರ ಅವನು ಉಳಿದ ಕರ್ಮಸಂಸ್ಕಾರಗಳೊಂದಿಗೆ ಅಲ್ಲಿಂದ ಹಿಂದಿರುಗಿ ಪುನಃ ಮನುಷ್ಯಲೋಕದಲ್ಲಿ ಮಹಾಮನುಷ್ಯತ್ವವನ್ನು ಪಡೆದುಕೊಳ್ಳುತ್ತಾನೆ.
12271049a ತಸ್ಮಾದುಪಾವೃತ್ಯ ತತಃ ಕ್ರಮೇಣ ಸೋಽಗ್ರೇ ಸ್ಮ ಸಂತಿಷ್ಠತಿ ಭೂತಸರ್ಗಮ್।
12271049c ಸ ಸಪ್ತಕೃತ್ವಶ್ಚ ಪರೈತಿ ಲೋಕಾನ್ ಸಂಹಾರವಿಕ್ಷೇಪಕೃತಪ್ರವಾಸಃ।।
ಕ್ರಮೇಣವಾಗಿ ಅವನು ಅಲ್ಲಿಂದ ಮುಂದು-ಮುಂದಿನ ಯೋನಿಗಳಲ್ಲಿ ಹುಟ್ಟುತ್ತಾ ಎಲ್ಲ ಪ್ರಾಣಿವರ್ಗಕ್ಕೂ ಅಗ್ರಗಣ್ಯನಾಗುತ್ತಾನೆ. ಹೀಗೆ ಮೇಲಿನ ಏಳು ಲೋಕಗಳಲ್ಲಿ ಪ್ರಭಾವಶಾಲಿಯಾಗಿ ಪ್ರತಿಯೊಂದು ಲೋಕದಲ್ಲಿಯೂ ಒಂದು ಕಲ್ಪದವರೆಗೆ ಇರುತ್ತಾನೆ.
12271050a ಸಪ್ತೈವ ಸಂಹಾರಮುಪಪ್ಲವಾನಿ ಸಂಭಾವ್ಯ ಸಂತಿಷ್ಠತಿ ಸಿದ್ಧಲೋಕೇ।
12271050c ತತೋಽವ್ಯಯಂ ಸ್ಥಾನಮನಂತಮೇತಿ ದೇವಸ್ಯ ವಿಷ್ಣೋರಥ ಬ್ರಹ್ಮಣಶ್ಚ।
12271050e ಶೇಷಸ್ಯ ಚೈವಾಥ ನರಸ್ಯ ಚೈವ ದೇವಸ್ಯ ವಿಷ್ಣೋಃ ಪರಮಸ್ಯ ಚೈವ।।
ಹೀಗೆ ಏಳು ಕಲ್ಪಗಳಲ್ಲಿ ಏಳು ಲೋಕಗಳಲ್ಲಿ ನೆಲೆಸಿ ನಂತರ ಸಾಧ್ಯವಾದರೆ ಅವನು ಸಿದ್ಧಲೋಕಕ್ಕೆ ಹೋಗುತ್ತಾನೆ. ಆ ಅವ್ಯಯ ಅನಂತ ಸ್ಥಾನವನ್ನು ಶಿವ, ವಿಷ್ಣು, ಬ್ರಹ್ಮ, ಶೇಷ, ನರ, ಪರಮಾತ್ಮ ಮತ್ತು ಪರಬ್ರಹ್ಮನ ಸ್ಥಾನವೆಂದು ಕರೆಯುತ್ತಾರೆ.
12271051a ಸಂಹಾರಕಾಲೇ ಪರಿದಗ್ಧಕಾಯಾ ಬ್ರಹ್ಮಾಣಮಾಯಾಂತಿ ಸದಾ ಪ್ರಜಾ ಹಿ।
12271051c ಚೇಷ್ಟಾತ್ಮನೋ ದೇವಗಣಾಶ್ಚ ಸರ್ವೇ ಯೇ ಬ್ರಹ್ಮಲೋಕಾದಮರಾಃ ಸ್ಮ ತೇಽಪಿ।।
ಸಂಹಾರಕಾಲದಲ್ಲಿ ಧಗ್ಧಕಾಯರಾದ ಅವರು ಪರಬ್ರಹ್ಮ ಪರಮಾತ್ಮನನ್ನು ಸೇರುತ್ತಾರೆ. ಇತರ ದೇವಗಣಗಳೂ ಬ್ರಹ್ಮಲೋಕದಲ್ಲಿ ಅಮರತ್ವವನ್ನು ಪಡೆಯುತ್ತವೆ.
12271052a ಪ್ರಜಾವಿಸರ್ಗಂ ತು ಸಶೇಷಕಾಲಂ ಸ್ಥಾನಾನಿ ಸ್ವಾನ್ಯೇವ ಸರಂತಿ ಜೀವಾಃ।
12271052c ನಿಃಶೇಷಾಣಾಂ ತತ್ಪದಂ ಯಾಂತಿ ಚಾಂತೇ ಸರ್ವಾಪದಾ ಯೇ ಸದೃಶಾ ಮನುಷ್ಯಾಃ।।
ಆದರೆ ಪ್ರಲಯದ ನಂತರದ ಪ್ರಜಾಸೃಷ್ಟಿಯ ಕಾಲದಲ್ಲಿ ಜೀವಿಗಳು ತಮ್ಮ ಹಿಂದಿನ ಸ್ಥಾನಗಳಿಗೇ ಹೋಗುತ್ತವೆ. ತಮ್ಮ ಪುಣ್ಯಫಲಗಳು ಮುಗಿದ ನಂತರ ಅವರ ಆ ಪದವು ಕೊನೆಗೊಂಡು ಪುನಃ ಮನುಷ್ಯರಂತೆಯೇ ಆಗುತ್ತವೆ.
12271053a ಯೇ ತು ಚ್ಯುತಾಃ ಸಿದ್ಧಲೋಕಾತ್ ಕ್ರಮೇಣ ತೇಷಾಂ ಗತಿಂ ಯಾಂತಿ ತಥಾನುಪೂರ್ವ್ಯಾ।
12271053c ಜೀವಾಃ ಪರೇ ತದ್ಬಲವೇಷರೂಪಾ ವಿಧಿಂ ಸ್ವಕಂ ಯಾಂತಿ ವಿಪರ್ಯಯೇಣ।।
ಸಿದ್ಧಲೋಕದಿಂದ ಚ್ಯುತರಾದವರ ಸ್ಥಾನಗಳನ್ನು ಮರ್ತ್ಯಲೋಕದಲ್ಲಿ ಬಲ-ತೇಜಸ್ಸುಗಳನ್ನು ಪಡೆದ ಇತರ ಯೋಗಿಗಳು ಅನುಕ್ರಮವಾಗಿ ಪಡೆದುಕೊಳ್ಳುತ್ತಾರೆ. ಫಲಾನುಭವದ ವ್ಯತ್ಯಾಸದಿಂದ ಜೀವಗಳು ತಮ್ಮ ತಮ್ಮ ಅದೃಷ್ಟಸ್ಥಾನಗಳನ್ನು ಪಡೆದುಕೊಳ್ಳುತ್ತವೆ.
12271054a ಸ ಯಾವದೇವಾಸ್ತಿ ಸಶೇಷಭುಕ್ತೇ ಪ್ರಜಾಶ್ಚ ದೇವ್ಯೌ ಚ ತಥೈವ ಶುಕ್ಲೇ।
12271054c ತಾವತ್ತದಾ ತೇಷು17 ವಿಶುದ್ಧಭಾವಃ ಸಂಯಮ್ಯ ಪಂಚೇಂದ್ರಿಯರೂಪಮೇತತ್।।
ವಿಶುದ್ಧಭಾವದಿಂದ ಸಂಪನ್ನನಾದ ಸಿದ್ಧನು ಎಲ್ಲಿಯವರೆಗೆ ಪಂಚೇಂದ್ರಿಯರೂಪವಾದ ಕರಣಸಮುದಾಯಗಳನ್ನು ಸಂಯಮಗೊಳಿಸಿ ಉಳಿದಿರುವ ಪ್ರಾರಬ್ಧ ಕರ್ಮಗಳನ್ನು ಭೋಗಿಸುತ್ತಿರುತ್ತಾನೋ ಅಲ್ಲಿಯ ವರೆಗೂ ಅವನಲ್ಲಿ ಪ್ರಜೆಗಳೂ18, ಮತ್ತು ಎರಡು ದೇವಿಯರೂ19 ವಾಸಿಸುತ್ತಿದ್ದು ಅವನ ವರ್ಣವು ಶುಕ್ಲವಾಗಿಯೇ ಇರುತ್ತದೆ.
12271055a ಶುದ್ಧಾಂ ಗತಿಂ ತಾಂ ಪರಮಾಂ ಪರೈತಿ ಶುದ್ಧೇನ ನಿತ್ಯಂ ಮನಸಾ ವಿಚಿನ್ವನ್।
12271055c ತತೋಽವ್ಯಯಂ ಸ್ಥಾನಮುಪೈತಿ ಬ್ರಹ್ಮ ದುಷ್ಪ್ರಾಪಮಭ್ಯೇತಿ ಸ ಶಾಶ್ವತಂ ವೈ।
12271055e ಇತ್ಯೇತದಾಖ್ಯಾತಮಹೀನಸತ್ತ್ವ ನಾರಾಯಣಸ್ಯೇಹ ಬಲಂ ಮಯಾ ತೇ।।
ಶುದ್ಧಮನಸ್ಸಿನಿಂದ ನಿತ್ಯವೂ ಶುದ್ಧ ಗತಿಯನ್ನು ಅನುಸಂಧಾನಮಾಡುವವನು ಪರಮ ಗತಿಯನ್ನು ಹೊಂದುತ್ತಾನೆ. ಬಳಿಕ ಅವನು ಅವಿಕಾರಿಯೂ, ದುರ್ಲಭವೂ, ಮತ್ತು ಶಾಶ್ವತವೂ ಆದ ಬ್ರಹ್ಮಪದವನ್ನು ಹೊಂದಿ ಅದರಲ್ಲಿಯೇ ನೆಲೆಸುತ್ತಾನೆ. ಮಹಾಸತ್ತ್ವ! ಹೀಗೆ ನಾನು ನಿನಗೆ ನಾರಾಯಣನ ಬಲದ ಕುರಿತು ಹೇಳಿದ್ದೇನೆ.”
12271056 ವೃತ್ರ ಉವಾಚ।
12271056a ಏವಂ ಗತೇ ಮೇ ನ ವಿಷಾದೋಽಸ್ತಿ ಕಶ್ಚಿತ್ ಸಮ್ಯಕ್ಚ ಪಶ್ಯಾಮಿ ವಚಸ್ತವೈತತ್।
12271056c ಶ್ರುತ್ವಾ ಚ ತೇ ವಾಚಮದೀನಸತ್ತ್ವ ವಿಕಲ್ಮಷೋಽಸ್ಮ್ಯದ್ಯ ತಥಾ ವಿಪಾಪ್ಮಾ।।
ವೃತ್ರನು ಹೇಳಿದನು: “ಅದೀನಸತ್ತ್ವ! ವಿಷಯವೇ ಹೀಗಿರುವಾಗ ನನಗೆ ಸ್ವಲ್ಪವೂ ವಿಷಾದವಿಲ್ಲ. ನಿನ್ನ ಮಾತುಗಳನ್ನು ಚೆನ್ನಾಗಿ ಕಾಣುತ್ತಿದ್ದೇನೆ. ನಿನ್ನ ಮಾತುಗಳನ್ನು ಕೇಳಿ ಕಲ್ಮಷರಹಿತನಾಗಿದ್ದೇನೆ. ಪಾಪಗಳನ್ನು ಕಳೆದುಕೊಂಡಿದ್ದೇನೆ.
12271057a ಪ್ರವೃತ್ತಮೇತದ್ಭಗವನ್ಮಹರ್ಷೇ ಮಹಾದ್ಯುತೇಶ್ಚಕ್ರಮನಂತವೀರ್ಯಮ್।
12271057c ವಿಷ್ಣೋರನಂತಸ್ಯ ಸನಾತನಂ ತತ್ ಸ್ಥಾನಂ ಸರ್ಗಾ ಯತ್ರ ಸರ್ವೇ ಪ್ರವೃತ್ತಾಃ।
12271057e ಸ ವೈ ಮಹಾತ್ಮಾ ಪುರುಷೋತ್ತಮೋ ವೈ ತಸ್ಮಿನ್ ಜಗತ್ಸರ್ವಮಿದಂ ಪ್ರತಿಷ್ಠಿತಮ್।।
ಭಗವನ್! ಮಹರ್ಷೇ! ಅನಂತವೀರ್ಯ ಮಹಾದ್ಯುತಿ ವಿಷ್ಣುವಿನ ಈ ಸನಾತನ ಚಕ್ರವು ಹೀಗೆಯೇ ತಿರುಗುತ್ತಿರುತ್ತದೆ. ಯಾವುದರಿಂದ ಈ ಎಲ್ಲವೂ ಹುಟ್ಟಿವೆಯೋ ಆ ಸ್ಥಾನವೇ ಅವನು. ಈ ಜಗತ್ತೆಲ್ಲವೂ ಆ ಮಹಾತ್ಮಾ ಪುರುಷೋತ್ತಮನಲ್ಲಿ ಪ್ರತಿಷ್ಠಿತಗೊಂಡಿದೆ.””
12271058 ಭೀಷ್ಮ ಉವಾಚ।
12271058a ಏವಮುಕ್ತ್ವಾ ಸ ಕೌಂತೇಯ ವೃತ್ರಃ ಪ್ರಾಣಾನವಾಸೃಜತ್।
12271058c ಯೋಜಯಿತ್ವಾ ತಥಾತ್ಮಾನಂ ಪರಂ ಸ್ಥಾನಮವಾಪ್ತವಾನ್।।
ಭೀಷ್ಮನು ಹೇಳಿದನು: “ಕೌಂತೇಯ! ಹೀಗೆ ಹೇಳಿ ವೃತ್ರನು ಪ್ರಾಣಗಳನ್ನು ತೊರೆದನು. ಆತ್ಮನನ್ನು ಪರಮಾತ್ಮನಲ್ಲಿ ನಿಯೋಜಿಸಿ ಪರಮ ಸ್ಥಾನವನ್ನು ಪಡೆದುಕೊಂಡನು.”
12271059 ಯುಧಿಷ್ಠಿರ ಉವಾಚ।
12271059a ಅಯಂ ಸ ಭಗವಾನ್ದೇವಃ ಪಿತಾಮಹ ಜನಾರ್ದನಃ।
12271059c ಸನತ್ಕುಮಾರೋ ವೃತ್ರಾಯ ಯತ್ತದಾಖ್ಯಾತವಾನ್ ಪುರಾ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಹಿಂದೆ ಸನತ್ಕುಮಾರನು ವೃತ್ರನಿಗೆ ಯಾರ ಕುರಿತು ಹೇಳಿದ್ದನೋ ಆ ಭಗವಂತನು ಈ ಜನಾರ್ದನ ಕೃಷ್ಣನೇ ಅಲ್ಲವೇ?”
12271060 ಭೀಷ್ಮ ಉವಾಚ।
12271060a ಮೂಲಸ್ಥಾಯೀ ಸ ಭಗವಾನ್ ಸ್ವೇನಾನಂತೇನ ತೇಜಸಾ।
12271060c ತತ್ಸ್ಥಃ ಸೃಜತಿ ತಾನ್ಭಾವಾನ್ನಾನಾರೂಪಾನ್ಮಹಾತಪಾಃ।।
ಭೀಷ್ಮನು ಹೇಳಿದನು: “ತನ್ನ ಅನಂತ ತೇಜಸ್ಸಿನಿಂದ ಭಗವಂತನು ಮೂಲಸ್ಥಾಯಿಯಾಗಿರುವನು. ಅಲ್ಲಿಂದ ಆ ಮಹಾತಪಸ್ವಿಯು ನಾನಾ ಭಾವಗಳನ್ನು ಮತ್ತು ನಾನಾರೂಪಗಳನ್ನು ಸೃಷ್ಟಿಸುತ್ತಾನೆ.
12271061a ತುರೀಯಾರ್ಧೇನ ತಸ್ಯೇಮಂ ವಿದ್ಧಿ ಕೇಶವಮಚ್ಯುತಮ್।
12271061c ತುರೀಯಾರ್ಧೇನ ಲೋಕಾಂಸ್ತ್ರೀನ್ಭಾವಯತ್ಯೇಷ ಬುದ್ಧಿಮಾನ್।।
ಈ ಅಚ್ಯುತ ಕೇಶವನು ಅವನ ನಾಲ್ಕನೆಯ ಒಂದು ಅಂಶವೆಂದು ತಿಳಿ. ಆ ಬುದ್ಧಿಮಾನನು ತನ್ನ ನಾಲ್ಕನೆಯ ಒಂದು ಭಾಗದಿಂದ ಮೂರುಲೋಕಗಳನ್ನೂ ಸೃಷ್ಟಿಸಿದ್ದಾನೆ.
12271062a ಅರ್ವಾಕ್ ಸ್ಥಿತಸ್ತು ಯಃ ಸ್ಥಾಯೀ ಕಲ್ಪಾಂತೇ ಪರಿವರ್ತತೇ।
12271062c ಸ ಶೇತೇ ಭಗವಾನಪ್ಸು ಯೋಽಸಾವತಿಬಲಃ ಪ್ರಭುಃ।
12271062e ತಾನ್ವಿಧಾತಾ ಪ್ರಸನ್ನಾತ್ಮಾ ಲೋಕಾಂಶ್ಚರತಿ ಶಾಶ್ವತಾನ್।।
ಹಿಂದೆ ಸ್ಥಾಯೀಭೂತನಾಗಿದ್ದವನು ಕಲ್ಪದ ಅಂತ್ಯದಲ್ಲಿ ಮಗ್ಗುಲಾಗುತ್ತಾನೆ. ಆಗ ಆ ಭಗವಾನನು ನೀರಿನಲ್ಲಿ ಪವಡಿಸುತ್ತಾನೆ. ಅತಿಬಲನಾದ ಸೃಷ್ಟಿಕರ್ತ ಪ್ರಭುವು ಪ್ರಸನ್ನಾತ್ಮನಾಗಿ ಶಾಶ್ವತಲೋಕಗಳಲ್ಲಿ ಸಂಚರಿಸುತ್ತಾನೆ.
12271063a ಸರ್ವಾಣ್ಯಶೂನ್ಯಾನಿ ಕರೋತ್ಯನಂತಃ ಸನತ್ಕುಮಾರಃ20 ಸಂಚರತೇ ಚ ಲೋಕಾನ್।
12271063c ಸ ಚಾನಿರುದ್ಧಃ ಸೃಜತೇ ಮಹಾತ್ಮಾ ತತ್ಸ್ಥಂ ಜಗತ್ಸರ್ವಮಿದಂ ವಿಚಿತ್ರಮ್।।
ಅನಂತನೂ ಸನಾತನನೂ ಆದ ಅವನು ಸಮಸ್ತ ಕಾರಣಗಳಿಗೂ ಸತ್ತಾ-ಸ್ಪೂರ್ತಿಗಳನ್ನಿತ್ತು ಪೂರ್ಣಗೊಳಿಸಿ ಲೋಕಗಳಲ್ಲಿ ಸಂಚರಿಸುತ್ತಾನೆ. ಯಾರ ತಡೆಯೂ ಇಲ್ಲದ ಆ ಮಹಾತ್ಮನು ಜಗತ್ತನ್ನು ಸೃಷ್ಟಿಸುತ್ತಾನೆ. ಅದ್ಭುತವಾಗಿರುವ ಈ ಜಗತ್ತೆಲ್ಲವೂ ಅವನಲ್ಲಿಯೇ ನೆಲೆಸಿದೆ.”
12271064 ಯುಧಿಷ್ಠಿರ ಉವಾಚ।
12271064a ವೃತ್ರೇಣ ಪರಮಾರ್ಥಜ್ಞ ದೃಷ್ಟಾ ಮನ್ಯೇಽಽತ್ಮನೋ ಗತಿಃ।
12271064c ಶುಭಾ ತಸ್ಮಾತ್ಸ ಸುಖಿತೋ ನ ಶೋಚತಿ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಪರಮಾರ್ಥಜ್ಞ! ಪಿತಾಮಹ! ವೃತ್ರನು ತನಗೆ ಶುಭಗತಿಯೇ ದೊರಕುವುದೆಂದು ತಿಳಿದಿದ್ದನು. ಆ ಕಾರಣದಿಂದಲೇ ಅವನು ಸುಖಿಯಾಗಿದ್ದು ಶೋಕಿಸಲಿಲ್ಲ ಎಂದು ನನಗನ್ನಿಸುತ್ತದೆ.
12271065a ಶುಕ್ಲಃ ಶುಕ್ಲಾಭಿಜಾತೀಯಃ ಸಾಧ್ಯೋ ನಾವರ್ತತೇಽನಘ।
12271065c ತಿರ್ಯಗ್ಗತೇಶ್ಚ ನಿರ್ಮುಕ್ತೋ ನಿರಯಾಚ್ಚ ಪಿತಾಮಹ।।
ಅನಘ! ಪಿತಾಮಹ! ಶುಕ್ಲವರ್ಣದ ಶುದ್ಧಕುಲದಲ್ಲಿ ಹುಟ್ಟಿದ ಸಾಧಕನು ಹಿಂದಿರುಗಿ ಬರುವುದಿಲ್ಲ. ಅಂಥವನು ನರಕದಿಂದ ಮತ್ತು ತಿರ್ಯಗ್ಯೋನಿಜನ್ಮದಿಂದ ನಿರ್ಮುಕ್ತನಾಗುತ್ತಾನೆ.
12271066a ಹಾರಿದ್ರವರ್ಣೇ ರಕ್ತೇ ವಾ ವರ್ತಮಾನಸ್ತು ಪಾರ್ಥಿವ।
12271066c ತಿರ್ಯಗೇವಾನುಪಶ್ಯೇತ ಕರ್ಮಭಿಸ್ತಾಮಸೈರ್ವೃತಃ।।
ಪಾರ್ಥಿವ! ಹಳದಿ ಅಥವಾ ಕೆಂಪುಬಣ್ಣದವರು ತಾಮಸದಿಂದ ಕೂಡಿರುವ ಕರ್ಮಗಳನ್ನು ಮಾಡುತ್ತಾ ತಿರ್ಯಗ್ಯೋನಿಗಳಲ್ಲಿಯೇ ಕಂಡುಬರುತ್ತಾರೆ.
12271067a ವಯಂ ತು ಭೃಶಮಾಪನ್ನಾ ರಕ್ತಾಃ ಕಷ್ಟಮುಖೇಽಸುಖೇ।
12271067c ಕಾಂ ಗತಿಂ ಪ್ರತಿಪತ್ಸ್ಯಾಮೋ ನೀಲಾಂ ಕೃಷ್ಣಾಧಮಾಮಥ।।
ನಾವು ತುಂಬಾ ಆಪತ್ತಿಗೊಳಗಾಗಿದ್ದೇವೆ. ಕಷ್ಟ ಮತ್ತು ಅಸುಖಗಳನ್ನೇ ಅನುಭವಿಸುತ್ತಿದ್ದೇವೆ. ನಾವು ನೀಲವರ್ಣದ ಮನುಷ್ಯಯೋನಿಯಲ್ಲಿ ಜನ್ಮತಾಳುತ್ತೇವೋ ಅಥವಾ ಕೃಷ್ಣವರ್ಣದ ಅಧಮ ಸ್ಥಾವರ ಯೋನಿಗಳಲ್ಲಿ ಜನ್ಮತಾಳೋತ್ತೇವೋ ತಿಳಿಯದಾಗಿದೆ.”
12271068 ಭೀಷ್ಮ ಉವಾಚ।
12271068a ಶುದ್ಧಾಭಿಜನಸಂಪನ್ನಾಃ ಪಾಂಡವಾಃ ಸಂಶಿತವ್ರತಾಃ।
12271068c ವಿಹೃತ್ಯ ದೇವಲೋಕೇಷು ಪುನರ್ಮಾನುಷ್ಯಮೇಷ್ಯಥ।।
ಭೀಷ್ಮನು ಹೇಳಿದನು: “ಪಾಂಡವರೇ! ಶುದ್ಧಕುಲದಲ್ಲಿ ಹುಟ್ಟಿರುವ ಮತ್ತು ಸಂಶಿತವ್ರತರಾಗಿರುವ ನೀವು ದೇವಲೋಕಗಳಲ್ಲಿ ವಿಹರಿಸಿ ಪುನಃ ಮನುಷ್ಯತ್ವವನ್ನು ಪಡೆದುಕೊಳ್ಳುತ್ತೀರಿ.
12271069a ಪ್ರಜಾವಿಸರ್ಗಂ ಚ ಸುಖೇನ ಕಾಲೇ ಪ್ರತ್ಯೇತ್ಯ ದೇವೇಷು ಸುಖಾನಿ ಭುಕ್ತ್ವಾ।
12271069c ಸುಖೇನ ಸಂಯಾಸ್ಯಥ ಸಿದ್ಧಸಂಖ್ಯಾಂ ಮಾ ವೋ ಭಯಂ ಭೂದ್ವಿಮಲಾಃ ಸ್ಥ ಸರ್ವೇ।।
ಪ್ರಜಾಸೃಷ್ಟಿಯಿರುವಷ್ಟು ಕಾಲ ನೀವು ದೇವತೆಗಳನ್ನು ಸೇರಿ ಸುಖಗಳನ್ನು ಭೋಗಿಸುತ್ತೀರಿ. ಸುಖದಲ್ಲಿ ನೀವು ಸಿದ್ಧರೆಂದು ಎಣಿಸಲ್ಪಡುತ್ತೀರಿ. ಇದರ ಕುರಿತು ನಿಮಗೆ ಯಾವುದೂ ಭಯವಿಲ್ಲದಿರಲಿ. ನೀವೆಲ್ಲರೂ ವಿಮಲರೇ ಆಗಿದ್ದೀರಿ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ವೃತ್ರಗೀತಾಸು ಏಕಸಪ್ತತ್ಯಧಿಕದ್ವಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ವೃತ್ರಗೀತಾ ಎನ್ನುವ ಇನ್ನೂರಾಎಪ್ಪತ್ತೊಂದನೇ ಅಧ್ಯಾಯವು.-
ಜ್ಞಾನವತಾ (ಭಾರತ ದರ್ಶನ). ↩︎
-
ಸ್ವನುರಕ್ತಾನಿ (ಭಾರತ ದರ್ಶನ). ↩︎
-
ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು ಮತ್ತು ಮನಸ್ಸು (ಭಾರತ ದರ್ಶನ). ↩︎
-
ಫಲಂ (ಭಾರತ ದರ್ಶನ). ↩︎
-
ಬೇರೆ ಅರ್ಥವನ್ನು ಕೊಡುವ ಅನುವಾದವೂ ಇದೆ: ಸಾವಿರಕೋಟಿ ಸಂಹಾರ-ಸೃಷ್ಟಿಗಳಲ್ಲೂ ಕೆಲವು ಜೀವಿಗಳು (ಮುಕ್ತಾತ್ಮರು) ವಿಕಾರಹೊಂದದೇ ಹಾಗೆಯೇ ಇರುತ್ತಾರೆ. ಇದರ ಅಸಂಖ್ಯ ಜೀವಿಗಳು ಸಂಸಾರಕ್ಕೆ ವಶರಾಗಿ ಸಂಚರಿಸುತ್ತಾರೆ (ವಿಕ್ಷೇಪಃ=ಸೃಷ್ಟಿಗೆ ಎರಚಲ್ಪಡುವಿಕೆ). ಪ್ರಜಾಸೃಷ್ಟಿಯ ಪ್ರಮಾಣವು ಅನೇಕ ಸಾವಿರ ಬಾವಿಗಳ ನೀರನ್ನು ಉಪಯೋಗಿಸುವಷ್ಟು ಅಸಂಖ್ಯಾತವಾಗಿರುತ್ತದೆ. (ಭಾರತ ದರ್ಶನ) ↩︎
-
ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರ ಇವುಗಳು ಹದಿನಾಲ್ಕು. ಈ ಪ್ರತಿಯೊಂದರಲ್ಲಿಯೂ ಲಕ್ಷಗಟ್ಟಳೆ ಭೇದಗಳಿರುವುದರಿಂದ ಹದಿನಾಲ್ಕು ಲಕ್ಷ ಗತಿಗಳುಂಟಾಗುತ್ತವೆ. (ಭಾರತ ದರ್ಶನ) ↩︎
-
ಧೂಮ್ರವರ್ಣದ ಜೀವವು ಪಶು-ಪಕ್ಷಿಗಳೇ ಮೊದಲಾದ ತಿರ್ಯಗ್ಜಂತುಗಳ ಯೋನಿಗಳಲ್ಲಿ ಜನ್ಮವನ್ನು ಪಡೆಯುತ್ತವೆ (ಭಾರತ ದರ್ಶನ). ↩︎
-
ಕೆಲವು ಅನುವಾದಗಳು ಮೊದಲು ರಕ್ತವರ್ಣವನ್ನು ತಾಳಿ ಅನಂತರ ನೀಲವರ್ಣವನ್ನು ತಾಳುತ್ತವೆ ಎನ್ನುವುದನ್ನೂ ಸೂಚಿಸುತ್ತವೆ. ಉದಾಹರಣೆಗೆ: It may then obtain a red complexion. However, if it is stuck with the blue, it circles around in the work of men. (Bibek Debroy) ↩︎
-
ಹಳದೀ ಬಣ್ಣದಿಂದ ಜೀವವು ದೇವತಾಭಾವವನ್ನು ತಾಳುತ್ತದೆ (ಭಾರತ ದರ್ಶನ). ↩︎
-
ದಶೇಂದ್ರಿಯಗಳು, ಪಂಚಪ್ರಾಣಗಳು, ಬುದ್ಧಿ, ಮನಸ್ಸು, ಚಿತ್ತ ಮತ್ತು ಅಹಂಕಾರ – ಈ ಹತ್ತೊಂಬತ್ತು ಭೋಗಸಾಧನಗಳು. ವಿಷಯ ಮತ್ತು ವೃತ್ತಿಭೇದಗಳಿಂದ ಇವು ಹತ್ತೊಂಬತ್ತು ಸಾವಿರವಾಗುತ್ತವೆ. (ಭಾರತ ದರ್ಶನ) ↩︎
-
ನರಕವಾಸದಲ್ಲಿರುವ ಜೀವವು ಹತ್ತೊಂಬತ್ತು ಸಾವಿರ ವಿಭಿನ್ನ ಗತಿಗಳನ್ನು ಹೊಂದುತ್ತದೆ. ಅನಂತರ ಜೀವಕ್ಕೆ ನರಕದಿಂದ ಮುಕ್ತಿಯು ಸಿಗುತ್ತದೆ. ಮನುಷ್ಯಯೋನಿಯನ್ನು ಬಿಟ್ಟು ಉಳಿದೆಲ್ಲವೂ ಕೇವಲ ಸುಖ-ದುಃಖಗಳ ಭೋಗಯೋಗ್ಯಜನ್ಮಗಳೇ ಆಗಿರುತ್ತವೆ. (ಭಾರತ ದರ್ಶನ). ↩︎
-
ಎಂಟು ನೂರು ಎಂಬ ಅನುವಾದವೂ ಇದೆ (ಭಾರತ ದರ್ಶನ). ↩︎
-
ಪ್ರಕೃತಿ, ಮಹತ್ತತ್ತ್ವ, ಅಹಂಕಾರ ಮತ್ತು ಪಂಚತನ್ಮಾತ್ರಗಳು – ಒಟ್ಟು ಎಂಟು. (ಭಾರತ ದರ್ಶನ) ↩︎
-
ಐದು ಜ್ಞಾನೇಂದ್ರಿಯಗಳು ಮತ್ತು ಐದು ಕರ್ಮೇಂದ್ರಿಯಗಳು – ಈ ಹತ್ತು ಸಾತ್ತ್ವಿಕ-ರಾಜಸ-ತಾಮಸಭೇದಗಳು ಮತ್ತು ಜಾಗ್ರತ್-ಸ್ವಪ್ನ-ಸುಷುಪ್ತಿಗಳ ಭೇದಗಳಿಂದ ಒಂದೊಂದು ಇಂದ್ರಿಯವೂ ಆರು ವಿಕಾರಗಳನ್ನು ಹೊಂದುವುದರಿಂದ ಒಟ್ಟು ಅರವತ್ತು ಭೇದಗಳಾಗಿ ಪರಿಣಮಿಸುತ್ತವೆ. (ಭಾರತ ದರ್ಶನ) ↩︎
-
ಹಿಂದೆ ಹೇಳಿದ ಅರವನ್ನು ಭೇದಗಳ ನೂರಾರು ವೃತ್ತಿಗಳು (ಭಾರತ ದರ್ಶನ). ↩︎
-
ಭೂಃ, ಭುವಃ, ಸ್ವಃ, ಮಹಃ, ಜನಃ, ತಪಃ ಮತ್ತು ಸತ್ಯಃ – ಇವು ಮೇಲಿನ ಏಳು ಲೋಕಗಳು. ↩︎
-
ತಾವತ್ತದಂಗೇಷು (ಭಾರತ ದರ್ಶನ). ↩︎
-
ಇಂದ್ರಿಯಗಳ ಅಧಿದೇವತೆಗಳು (ಭಾರತ ದರ್ಶನ). ↩︎
-
ಪರಾವಿದ್ಯೆ ಮತ್ತು ಅಪರಾವಿದ್ಯೆ ಎಂಬ ಎರಡು ದೇವಿಯರು (ಭಾರತ ದರ್ಶನ) ↩︎
-
ಸನಾತನಃ (ಭಾರತ ದರ್ಶನ). ↩︎