ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 2691
ಸಾರ
ಹಾರೀತಮುನಿಯು ಪ್ರತಿಪಾದಿಸಿದ ಸಂನ್ಯಾಸಧರ್ಮ (1-20).
12269001 ಯುಧಿಷ್ಠಿರ ಉವಾಚ।
12269001a ಕಿಂಶೀಲಃ ಕಿಂಸಮಾಚಾರಃ ಕಿಂವಿದ್ಯಃ ಕಿಂಪರಾಯಣಃ।
12269001c ಪ್ರಾಪ್ನೋತಿ ಬ್ರಹ್ಮಣಃ ಸ್ಥಾನಂ ಯತ್ಪರಂ ಪ್ರಕೃತೇರ್ಧ್ರುವಮ್।।
ಯುಧಿಷ್ಠಿರನು ಹೇಳಿದನು: “ಯಾವ ಶೀಲವಿರುವ, ಯಾವ ಆಚಾರವಿರುವ, ಯಾವ ವಿದ್ಯೆಯಿರುವ ಮತ್ತು ಯಾವುದರಲ್ಲಿ ಪರಾಯಣನಾಗಿರುವವನು ಪ್ರಕೃತಿಗಿಂತಲೂ ಆಚೆಯಿರುವ ನಾಶರಹಿತ ಪರಬ್ರಹ್ಮಸ್ಥಾನವನ್ನು ಪಡೆದುಕೊಳ್ಳಬಹುದು?”
12269002 ಭೀಷ್ಮ ಉವಾಚ।
12269002a ಮೋಕ್ಷಧರ್ಮೇಷು ನಿರತೋ ಲಘ್ವಾಹಾರೋ ಜಿತೇಂದ್ರಿಯಃ।
12269002c ಪ್ರಾಪ್ನೋತಿ ಪರಮಂ ಸ್ಥಾನಂ ಯತ್ಪರಂ ಪ್ರಕೃತೇರ್ಧ್ರುವಮ್।।
ಭೀಷ್ಮನು ಹೇಳಿದನು: “ಮೋಕ್ಷಧರ್ಮದಲ್ಲಿ ನಿರತನಾದ ಲಘು ಆಹಾರೀ ಜಿತೇಂದ್ರಿಯನು ಪಕೃತಿಗಿಂತಲೂ ಅತೀತವಾಗಿರುವ ನಾಶರಹಿತ ಪರಮ ಸ್ಥಾನವನ್ನು ಪಡೆಯುತ್ತಾನೆ.
12269003a ಸ್ವಗೃಹಾದಭಿನಿಃಸೃತ್ಯ ಲಾಭಾಲಾಭೇ ಸಮೋ ಮುನಿಃ।
12269003c ಸಮುಪೋಢೇಷು ಕಾಮೇಷು ನಿರಪೇಕ್ಷಃ ಪರಿವ್ರಜೇತ್।।
ಮುನಿಯಾದವನು ಲಾಭ-ನಷ್ಟಗಳನ್ನು ಸಮಾನವೆಂದು ಭಾವಿಸಿ ಕಾಮೋಪಭೋಗಗಳು ಸನ್ನಿಹಿತವಾಗಿದ್ದರೂ ಅವುಗಳಲ್ಲಿ ನಿರಪೇಕ್ಷನಾಗಿ ಮನೆಯಿಂದ ಹೊರಟುಹೋಗಬೇಕು.
12269004a ನ ಚಕ್ಷುಷಾ ನ ಮನಸಾ ನ ವಾಚಾ ದೂಷಯೇದಪಿ।
12269004c ನ ಪ್ರತ್ಯಕ್ಷಂ ಪರೋಕ್ಷಂ ವಾ ದೂಷಣಂ ವ್ಯಾಹರೇತ್ಕ್ವ ಚಿತ್।।
ಕಣ್ಣಿನಿಂದಾಗಲೀ, ಮನಸ್ಸಿನಿಂದಾಗಲೀ, ಮಾತಿನಿಂದಾಗಲೀ ಯಾವುದನ್ನೂ ದೂಷಿಸಬಾರದು. ಪ್ರತ್ಯಕ್ಷವಾಗಲೀ, ಪರೋಕ್ಷವಾಗಲೀ ಯಾವುದರೊಂದಿಗೂ ದೂಷಿತವಾಗಿ ವ್ಯವಹರಿಸಬಾರದು.
12269005a ನ ಹಿಂಸ್ಯಾತ್ಸರ್ವಭೂತಾನಿ ಮೈತ್ರಾಯಣಗತಿಶ್ಚರೇತ್।
12269005c ನೇದಂ ಜೀವಿತಮಾಸಾದ್ಯ ವೈರಂ ಕುರ್ವೀತ ಕೇನ ಚಿತ್।।
ಸರ್ವಭೂತಗಳನ್ನೂ ಹಿಂಸಿಸಬಾರದು. ಮೈತ್ರಿಭಾವದಿಂದಲೇ ವರ್ತಿಸಬೇಕು. ಈ ಜೀವಿತವನ್ನು ಪಡೆದು ಯಾರೊಡನೆಯೂ ವೈರವನ್ನು ಕಟ್ಟಿಕೊಳ್ಳಬಾರದು.
12269006a ಅತಿವಾದಾಂಸ್ತಿತಿಕ್ಷೇತ ನಾಭಿಮನ್ಯೇತ್ಕಥಂ ಚನ।
12269006c ಕ್ರೋಧ್ಯಮಾನಃ ಪ್ರಿಯಂ ಬ್ರೂಯಾದಾಕ್ರುಷ್ಟಃ ಕುಶಲಂ ವದೇತ್।।
ಅತಿಯಾದ ಮಾತುಗಳನ್ನು ಸಹಿಸಿಕೊಳ್ಳಬೇಕು. ಯಾರೊಂದಿಗೂ ಅಹಂಕಾರ ಪಡಬಾರದು. ಕೋಪಗೊಂಡವರೊಂದಿಗೂ ಪ್ರಿಯವಾಗಿಯೇ ಮಾತನಾಡಬೇಕು. ನಿಂದಿಸುವವನೊಂದಿಗೂ ಕುಶಲವಾಗಿಯೇ ಮಾತನಾಡಬೇಕು.
12269007a ಪ್ರದಕ್ಷಿಣಂ ಪ್ರಸವ್ಯಂ ಚ ಗ್ರಾಮಮಧ್ಯೇ ನ ಚಾಚರೇತ್।
12269007c ಭೈಕ್ಷಚರ್ಯಾಮನಾಪನ್ನೋ ನ ಗಚ್ಚೇತ್ಪೂರ್ವಕೇತಿತಃ।।
ಗ್ರಾಮದಲ್ಲಿ ಸಂಚರಿಸುತ್ತಿರುವಾಗ ಅವನು ಯಾರಿಗೂ ಅತಿಯಾದ ಸೌಹಾರ್ದತೆಯನ್ನಾಗಲೀ ದ್ವೇಷವನ್ನಾಗಲೀ ತೋರಿಸಬಾರದು. ಭಿಕ್ಷೆಗಾಗಿ ಅವನು ಹಿಂದೆ ಹೋಗಿದ್ದ ಮನೆಗಳಿಗೆ ಹೋಗಬಾರದು.
12269008a ಅವಕೀರ್ಣಃ ಸುಗುಪ್ತಶ್ಚ ನ ವಾಚಾ ಹ್ಯಪ್ರಿಯಂ ವದೇತ್।
12269008c ಮೃದುಃ ಸ್ಯಾದಪ್ರತಿಕ್ರೂರೋ ವಿಸ್ರಬ್ಧಃ ಸ್ಯಾದರೋಷಣಃ2।।
ನಿಂದನೆಯಲ್ಲಿಯೂ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು. ತಿರುಗಿ ಅಪ್ರಿಯ ಮಾತುಗಳನ್ನಾಡಬಾರದು. ಮೃದುವಾಗಿರಬೇಕು. ತಿರುಗಿ ಕ್ರೌರ್ಯವನ್ನು ತೋರಿಸಬಾರದು. ಭಯ-ಕೋಪಗಳನ್ನು ನಿಯಂತ್ರಣದಲ್ಲಿರಿಸಿಕೊಂಡಿರಬೇಕು.
12269009a ವಿಧೂಮೇ ನ್ಯಸ್ತಮುಸಲೇ ವ್ಯಂಗಾರೇ ಭುಕ್ತವಜ್ಜನೇ।
12269009c ಅತೀತೇ ಪಾತ್ರಸಂಚಾರೇ ಭಿಕ್ಷಾಂ ಲಿಪ್ಸೇತ ವೈ ಮುನಿಃ।।
ಅಡುಗೆಮನೆಯಿಂದ ಹೊಗೆಯಾಡುವುದು ನಿಂತಿರುವಾಗ, ಒನಕೆಯ ಶಬ್ದವು ನಿಂತಿರುವಾಗ, ಒಲೆಯಲ್ಲಿ ಬೆಂಕಿಯು ಆರಿಹೋದಾಗ, ಮನೆಯವರೆಲ್ಲರೂ ಊಟಮಾಡಿರುವಾಗ, ಪಾತ್ರೆಗಳನ್ನು ಸೇರಿಸಿ ಇಟ್ಟಿರುವಾಗ ಮಾತ್ರ ಮುನಿಯು ಭಿಕ್ಷೆ ಬೇಡಲು ಹೋಗಬೇಕು3.
12269010a ಅನುಯಾತ್ರಿಕಮರ್ಥಸ್ಯ ಮಾತ್ರಾಲಾಭೇಷ್ವನಾದೃತಃ4।
12269010c ಅಲಾಭೇ ನ ವಿಹನ್ಯೇತ ಲಾಭಶ್ಚೈನಂ ನ ಹರ್ಷಯೇತ್।।
ಪ್ರಾಣಧಾರಣೆಗೆ ಎಷ್ಟು ಬೇಕೋ ಅಷ್ಟು ಮಾತ್ರ ತೆಗೆದುಕೊಳ್ಳಬೇಕು. ಅದಕ್ಕಿಂತಲೂ ಹೆಚ್ಚು ತೆಗೆದುಕೊಳ್ಳಬಾರದು. ಏನೂ ದೊರೆಯದೇ ಇದ್ದರೂ ದುಃಖಿಯಾಗಬಾರದು. ಸಿಕ್ಕಿದರೂ ಸಂತೋಷಪಡಬಾರದು.
12269011a ಲಾಭಂ ಸಾಧಾರಣಂ ನೇಚ್ಚೇನ್ನ ಭುಂಜೀತಾಭಿಪೂಜಿತಃ।
12269011c ಅಭಿಪೂಜಿತಲಾಭಂ ಹಿ ಜುಗುಪ್ಸೇತೈವ ತಾದೃಶಃ।।
ಸಾಧಾರಣ ಮನುಷ್ಯರು ಬಯಸುವುದನ್ನು ಬಯಸಬಾರದು. ಸತ್ಕಾರದಿಂದ ಕರೆದವರ ಮನೆಯಲ್ಲಿ ಊಟಮಾಡಬಾರದು. ಹಾಗೆಯೇ ಗೌರವಿಸಿ ಕೊಟ್ಟ ಯಾವುದನ್ನೂ ಸ್ವೀಕರಿಸಬಾರದು.
12269012a ನ ಚಾನ್ನದೋಷಾನ್ನಿಂದೇತ ನ ಗುಣಾನಭಿಪೂಜಯೇತ್।
12269012c ಶಯ್ಯಾಸನೇ ವಿವಿಕ್ತೇ ಚ ನಿತ್ಯಮೇವಾಭಿಪೂಜಯೇತ್।।
ತನಗಿತ್ತ ಅನ್ನದಲ್ಲಿ ದೋಷವಿದ್ದರೆ ನಿಂದಿಸಬಾರದು. ಹಾಗೆಯೇ ಚೆನ್ನಾಗಿದ್ದರೆ ಹೊಗಳಲೂ ಬಾರದು. ನಿತ್ಯವೂ ಯಾರೊಡನೆಯೂ ಮಲಗಬಾರದು ಮತ್ತು ಕುಳಿತುಕೊಳ್ಳಬಾರದು5.
12269013a ಶೂನ್ಯಾಗಾರಂ ವೃಕ್ಷಮೂಲಮರಣ್ಯಮಥ ವಾ ಗುಹಾಮ್।
12269013c ಅಜ್ಞಾತಚರ್ಯಾಂ ಗತ್ವಾನ್ಯಾಂ ತತೋಽನ್ಯತ್ರೈವ ಸಂವಿಶೇತ್।।
ಖಾಲಿ ಮನೆಯಲ್ಲಿ, ಮರದ ಬುಡದಲ್ಲಿ, ಅರಣ್ಯದಲ್ಲಿ ಅಥವಾ ಗುಹೆಯಲ್ಲಿ ಬೇರೆಯವರಿಗೆ ತಿಳಿಯದಂತೆ ವಾಸಿಸಬೇಕು. ಅಲ್ಲಿ ಯಾರಾದರೂ ಬಂದರೆ ಆ ಸ್ಥಳವನ್ನು ಬಿಟ್ಟು ಬೇರೆಲ್ಲಿಯಾದರೂ ಹೋಗಬೇಕು.
12269014a ಅನುರೋಧವಿರೋಧಾಭ್ಯಾಂ ಸಮಃ ಸ್ಯಾದಚಲೋ ಧ್ರುವಃ।
12269014c ಸುಕೃತಂ ದುಷ್ಕೃತಂ ಚೋಭೇ ನಾನುರುಧ್ಯೇತ ಕರ್ಮಣಿ।।
ಅನುರೋಧ-ವಿರೋಧಗಳನ್ನು ಸಮನಾಗಿ ಕಾಣಬೇಕು. ಅಚಲನೂ ಸ್ಥಿರಚಿತ್ತನೂ ಆಗಿರಬೇಕು. ಸುಕೃತ-ದುಷ್ಕೃತಗಳೆರಡರಲ್ಲಿ ಯಾವುದನ್ನೂ ಮಾಡಬಾರದು.
612269015a ವಾಚೋ ವೇಗಂ ಮನಸಃ ಕ್ರೋಧವೇಗಂ ವಿವಿತ್ಸಾವೇಗ7ಮುದರೋಪಸ್ಥವೇಗಮ್।
12269015c ಏತಾನ್ವೇಗಾನ್ವಿನಯೇದ್ವೈ ತಪಸ್ವೀ ನಿಂದಾ ಚಾಸ್ಯ ಹೃದಯಂ ನೋಪಹನ್ಯಾತ್।।
ತಪಸ್ವಿಯಾದವನು ಮಾತಿನ ವೇಗ, ಮನಸ್ಸು ಮತ್ತು ಕ್ರೋಧದ ವೇಗವನ್ನು ನಿಯಂತ್ರಿಸಿಕೊಳ್ಳಬೇಕು. ತಿಳಿದುಕೊಳ್ಳಬೇಕೆಂಬ ಆಸೆ, ಹೊಟ್ಟೆ ಮತ್ತು ಉಪಸ್ಥಗಳ ವೇಗವನ್ನು ನಿಯಂತ್ರಿಸಿಕೊಳ್ಳಬೇಕು. ಯಾವ ನಿಂದನೆಗೂ ಹೃದಯದಲ್ಲಿ ನೋಯಬಾರದು.
12269016a ಮಧ್ಯಸ್ಥ ಏವ ತಿಷ್ಠೇತ ಪ್ರಶಂಸಾನಿಂದಯೋಃ ಸಮಃ।
12269016c ಏತತ್ಪವಿತ್ರಂ ಪರಮಂ ಪರಿವ್ರಾಜಕ ಆಶ್ರಮೇ।।
ಪ್ರಶಂಸೆ-ನಿಂದನೆಗಳಿಗೆ ಸಮನಾಗಿ ಮಧ್ಯಸ್ಥಭಾವದಿಂದ ಇರಬೇಕು. ಸಂನ್ಯಾಸಾಶ್ರಮದಲ್ಲಿ ಇದು ಪರಮ ಪವಿತ್ರವು.
12269017a ಮಹಾತ್ಮಾ ಸುವ್ರತೋ8 ದಾಂತಃ ಸರ್ವತ್ರೈವಾನಪಾಶ್ರಿತಃ।
12269017c ಅಪೂರ್ವಚಾರಕಃ ಸೌಮ್ಯೋ ಅನಿಕೇತಃ ಸಮಾಹಿತಃ।।
ಇಂಥಹ ಸಂನ್ಯಾಸಿಯು ಮಹಾತ್ಮನು. ಸುವ್ರತನು. ಇಂದ್ರಿಯ ನಿಗ್ರಹಿಯು. ಯಾವುದನ್ನೂ ಹಚ್ಚಿಕೊಂಡಿರದವನು. ಹಿಂದೆ ಹೋದಲ್ಲಿ ಹೋಗದಿರುವವನು. ಸೌಮ್ಯನು. ವಾಸಿಸಲು ನಿರ್ದಿಷ್ಟ ಸ್ಥಳವಿಲ್ಲದವನು. ಮತ್ತು ಸಮಾಹಿತನು.
12269018a ವಾನಪ್ರಸ್ಥಗೃಹಸ್ಥಾಭ್ಯಾಂ ನ ಸಂಸೃಜ್ಯೇತ ಕರ್ಹಿ ಚಿತ್।
12269018c ಅಜ್ಞಾತಲಿಪ್ಸಾಂ ಲಿಪ್ಸೇತ ನ ಚೈನಂ ಹರ್ಷ ಆವಿಶೇತ್।।
ಅವನು ಎಂದೂ ವಾನಪ್ರಸ್ಥ ಮತ್ತು ಗೃಹಸ್ಥಾಶ್ರಮಿಗಳೊಂದಿಗೆ ಬೆರೆಯುವುದಿಲ್ಲ. ತಿಳಿಯದೆಯೇ ಯಾವುದಕ್ಕೂ ಆಸೆಪಡಬಾರದು. ಹರ್ಷದಲ್ಲಿಯೂ ಆವೇಶಗೊಳ್ಳಬಾರದು.
12269019a ವಿಜಾನತಾಂ ಮೋಕ್ಷ ಏಷ ಶ್ರಮಃ ಸ್ಯಾದವಿಜಾನತಾಮ್।
12269019c ಮೋಕ್ಷಯಾನಮಿದಂ ಕೃತ್ಸ್ನಂ ವಿದುಷಾಂ ಹಾರಿತೋಽಬ್ರವೀತ್।।
ತಿಳಿದವರಿಗೆ ತಿಳಿದಿರುವ ಇದು ಮೋಕ್ಷದ ಆಶ್ರಮವೆಂದು ತಿಳಿ. ಇದು ವಿದುಷ ಹಾರಿತನು ಹೇಳಿದ ಮೋಕ್ಷಯಾನದ ಕುರಿತಾದ ಸಂಪೂರ್ಣ ವಿಷಯವು.
12269020a ಅಭಯಂ ಸರ್ವಭೂತೇಭ್ಯೋ ದತ್ತ್ವಾ ಯಃ ಪ್ರವ್ರಜೇದ್ಗೃಹಾತ್।
12269020c ಲೋಕಾಸ್ತೇಜೋಮಯಾಸ್ತಸ್ಯ ತಥಾನಂತ್ಯಾಯ ಕಲ್ಪತೇ।।
ಸರ್ವಭೂತಗಳಿಗೂ ಅಭಯವನ್ನಿತ್ತು ಮನೆಯನ್ನು ಬಿಟ್ಟು ಹೋಗುವವನು ಕಲ್ಪವು ಮುಗಿಯುವವರೆಗೆ ತೇಜೋಮಯ ಲೋಕಗಳನ್ನು ಪಡೆಯುತ್ತಾನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಹಾರೀತಗೀತಾಯಾಂ ಏಕೋನಸಪ್ತತ್ಯಧಿಕದ್ವಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಹಾರೀತಗೀತಾ ಎನ್ನುವ ಇನ್ನೂರಾಅರವತ್ತೊಂಭತ್ತನೇ ಅಧ್ಯಾಯವು.-
ಭಾರತ ದರ್ಶನ ಮತ್ತು ಗೀತಾ ಪ್ರೆಸ್ ಸಂಪುಟಗಳಲ್ಲಿ ಈ ಅಧ್ಯಾಯಕ್ಕೆ ಮೊದಲು ಇನ್ನೊಂದು ಅಧ್ಯಾಯವು ಬರುತ್ತದೆ. ಆದರೆ ಅದು ಶಾಂತಿಪರ್ವದ 169ನೇ ಅಧ್ಯಾಯವೇ ಮರುಕಳಿಸಿದೆ. ಇದು ಪುಣೆಯ ಪರಿಷ್ಕೃತ ಸಂಪುಟದಲ್ಲಿ ಇಲ್ಲ. ↩︎
-
ಸ್ಯಾದಕತ್ಥನಃ (ಭಾರತ ದರ್ಶನ). ↩︎
-
ಯಾರ ಮನೆಯಲ್ಲಿಯಾದರೂ ಮನೆಯವರೆಲ್ಲರೂ ಉಂಡು ಉಳಿದ ಆಹಾರವಿದ್ದರೆ ಮಾತ್ರ ಮುನಿಯು ಅದನ್ನು ಬೇಡಿ ಪಡೆಯಬೇಕು. ಮುನಿಯ ಈ ನಿಯಮಗಳು ಮಹಾಭಾರತದ ಹಲವು ಕಡೆ ಬರುತ್ತದೆ. ↩︎
-
ಪ್ರಾಣಯಾತ್ರಿಕಮಾತ್ರಃ ಸ್ಯಾನ್ಮಾತ್ರಾಲಾಭೇಷ್ವನಾದೃತಃ। (ಭಾರತ ದರ್ಶನ). ↩︎
-
ಒಂಟಿಯಾಗಿ ಮಲಗಬೇಕು. ಒಂಟಿಯಾಗಿ ಕುಳಿತುಕೊಳ್ಳಬೇಕು. ↩︎
-
ಇದಕ್ಕೆ ಮೊದಲು ಭಾರತ ದರ್ಶನದಲ್ಲಿ ಈ ಎರಡು ಅಧಿಕ ಶ್ಲೋಕಗಳಿವೆ: ನಿತ್ಯತೃಪ್ತಃ ಸುಸಂತುಷ್ಟಃ ಪ್ರಸನ್ನವದನೇಂದ್ರಿಯಃ। ವಿಭೀರ್ಜಪ್ಯಪರೋ ಮೌನೀ ವೈರಾಗ್ಯಂ ಸಮುಪಾಶ್ರಿತಃ।। ಅಭ್ಯಸ್ತಂ ಭೌತಿಕಂ ಪಶ್ಯನ್ಭೂತಾನಾಮಾಗತಿಂ ಗತಿಮ್। ನಿಃಸ್ಪೃಹಃ ಸಮದರ್ಶೀ ಚ ಪಕ್ವಾಪಕ್ವೇನ ವರ್ತಯನ್। ಆತ್ಮನಾ ಯಃ ಪ್ರಶಾಂತಾತ್ಮಾ ಲಘ್ವಾಹಾರೋ ಜಿತೇಂದ್ರಿಯಃ।। (ಭಾರತ ದರ್ಶನ). ↩︎
-
ಹಿಂಸಾವೇಗ (ಭಾರತ ದರ್ಶನ). ↩︎
-
ಸರ್ವತೋ (ಭಾರತ ದರ್ಶನ). ↩︎