267: ನಾರದಾಸಿತಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 267

ಸಾರ

ಜೀವಾತ್ಮನು ದೇಹಾಭಿಮಾನದಿಂದ ಮುಕ್ತನಾಗುವ ವಿಷಯದಲ್ಲಿ ನಾರದ ಮತ್ತು ಅಸಿತದೇವಲರ ಸಂವಾದ (1-38).

12267001 ಭೀಷ್ಮ ಉವಾಚ।
12267001a ಅತ್ರೈವೋದಾಹರಂತೀಮಮಿತಿಹಾಸಂ ಪುರಾತನಮ್।
12267001c ನಾರದಸ್ಯ ಚ ಸಂವಾದಂ ದೇವಲಸ್ಯಾಸಿತಸ್ಯ ಚ।।

ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ನಾರದ ಮತ್ತು ಅಸಿತದೇವಲರ ಸಂವಾದವನ್ನು ಉದಾಹರಿಸುತ್ತಾರೆ.

12267002a ಆಸೀನಂ ದೇವಲಂ ವೃದ್ಧಂ ಬುದ್ಧ್ವಾ ಬುದ್ಧಿಮತಾಂ ವರಃ।
12267002c ನಾರದಃ ಪರಿಪಪ್ರಚ್ಚ ಭೂತಾನಾಂ ಪ್ರಭವಾಪ್ಯಯಮ್।।

ಕುಳಿತುಕೊಂಡಿದ್ದ ವೃದ್ಧ ದೇವಲನನ್ನು ನೋಡಿ ಬುದ್ಧಿವಂತರಲ್ಲಿ ಶ್ರೇಷ್ಠನಾದ ನಾರದನು ಭೂತಗಳ ಸೃಷ್ಟಿ-ಲಯಗಳ ಕುರಿತು ಪ್ರಶ್ನಿಸಿದನು.

12267003a ಕುತಃ ಸೃಷ್ಟಮಿದಂ ವಿಶ್ವಂ ಬ್ರಹ್ಮನ್ ಸ್ಥಾವರಜಂಗಮಮ್।
12267003c ಪ್ರಲಯೇ ಚ ಕಮಭ್ಯೇತಿ ತದ್ಭವಾನ್ ಪ್ರಬ್ರವೀತು ಮೇ।।

“ಬ್ರಹ್ಮನ್! ಸ್ಥಾವರ-ಜಂಗಮ ಯುಕ್ತವಾದ ಈ ವಿಶ್ವವು ಎಲ್ಲಿಂದ ಸೃಷ್ಟಿಸಲ್ಪಟ್ಟಿತು? ಪ್ರಲಯದಲ್ಲಿ ಇದು ಯಾವುದರಲ್ಲಿ ಲಯವಾಗುತ್ತದೆ. ಇದನ್ನು ನೀನು ನನಗೆ ಹೇಳಬೇಕು.”

12267004 ಅಸಿತ ಉವಾಚ।
12267004a ಯೇಭ್ಯಃ ಸೃಜತಿ ಭೂತಾನಿ ಕಾಲೋ ಭಾವಪ್ರಚೋದಿತಃ।
12267004c ಮಹಾಭೂತಾನಿ ಪಂಚೇತಿ ತಾನ್ಯಾಹುರ್ಭೂತಚಿಂತಕಾಃ।।

ಅಸಿತನು ಹೇಳಿದನು: “ಕಾಲವು ಬಂದಾಗ ಸೃಷ್ಟಿಕರ್ತನು ಭಾವಪ್ರಚೋದಿತನಾಗಿ ಭೂತಗಳನ್ನು ಸೃಷ್ಟಿಸುತ್ತಾನೆ. ಈ ಮಹಾಭೂತಗಳು ಐದು ಎಂದು ಭೂತಚಿಂತಕರು ಹೇಳುತ್ತಾರೆ.

12267005a ತೇಭ್ಯಃ ಸೃಜತಿ ಭೂತಾನಿ ಕಾಲ ಆತ್ಮಪ್ರಚೋದಿತಃ।
12267005c ಏತೇಭ್ಯೋ ಯಃ ಪರಂ ಬ್ರೂಯಾದಸದ್ಬ್ರೂಯಾದಸಂಶಯಮ್।।

ಆತ್ಮಪ್ರಚೋದಿತ ಕಾಲವು ಇವುಗಳಿಂದ ಭೂತಗಳನ್ನು ಸೃಷ್ಟಿಸುತ್ತದೆ. ಈ ಐದಕ್ಕಿಂತಲೂ ಬೇರೆಯವುಗಳಿಂದ ಸೃಷ್ಟಿಯಾಗಿದೆಯೆಂದು ಹೇಳುವವರು ಸುಳ್ಳನ್ನೇ ಹೇಳುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.

12267006a ವಿದ್ಧಿ ನಾರದ ಪಂಚೈತಾನ್ ಶಾಶ್ವತಾನಚಲಾನ್ ಧ್ರುವಾನ್।
12267006c ಮಹತಸ್ತೇಜಸೋ ರಾಶೀನ್ಕಾಲಷಷ್ಠಾನ್ ಸ್ವಭಾವತಃ।।

ನಾರದ! ಈ ಐದು ಶಾಶ್ವತಗಳೆಂದೂ, ಅಚಲಗಳೆಂದೂ ಮತ್ತು ಸ್ಥಿರವಾದವುಗಳೆಂದೂ ತಿಳಿ. ಸ್ವಭಾವತಃ ಇವು ಮಹಾ ತೇಜಸ್ಸಿನ ರಾಶಿಗಳು. ಆರನೆಯದು ಕಾಲ.

12267007a ಆಪಶ್ಚೈವಾಂತರಿಕ್ಷಂ ಚ ಪೃಥಿವೀ ವಾಯುಪಾವಕೌ।
12267007c ಅಸಿದ್ಧಿಃ ಪರಮೇತೇಭ್ಯೋ ಭೂತೇಭ್ಯೋ ಮುಕ್ತಸಂಶಯಮ್।।

ನೀರು, ಆಕಾಶ, ಪೃಥ್ವಿ, ವಾಯು ಮತ್ತು ಅಗ್ನಿ – ಈ ಭೂತಗಳಿಗೂ ಅನ್ಯವಾದ ಭೂತವು ಯಾವಾಗಲೂ ಇರುವುದಿಲ್ಲ. ಇದರಲ್ಲಿ ಸಂಶಯವೇ ಇಲ್ಲ.

12267008a ನೋಪಪತ್ತ್ಯಾ ನ ವಾ ಯುಕ್ತ್ಯಾ ತ್ವಸದ್ಬ್ರೂಯಾದಸಂಶಯಮ್।
12267008c ವೇತ್ಥ ತಾನಭಿನಿರ್ವೃತ್ತಾನ್ ಷಡೇತೇ ಯಸ್ಯ ರಾಶಯಃ।।

ಯಾವುದೇ ಯುಕ್ತಿಯಿಂದಾಗಲೀ ಪ್ರಮಾಣದಿಂದಾಗಲೀ ಈ ಆರಕ್ಕಿಂತಲೂ ಬೇರೆಯದಾದ ತತ್ತ್ವವನ್ನು ಹೇಳಲು ಸಾಧ್ಯವಿಲ್ಲ. ಹಾಗೆ ಹೇಳಿದರೂ ಅವರು ಸುಳ್ಳನ್ನೇ ಹೇಳುತ್ತಿದ್ದಾರೆನ್ನುವುದರಲ್ಲಿ ಸಂಶಯವಿಲ್ಲ.

12267009a ಪಂಚೈವ ತಾನಿ ಕಾಲಶ್ಚ ಭಾವಾಭಾವೌ ಚ ಕೇವಲೌ।
12267009c ಅಷ್ಟೌ ಭೂತಾನಿ ಭೂತಾನಾಂ ಶಾಶ್ವತಾನಿ ಭವಾಪ್ಯಯೌ।।

ಪಂಚಮಹಾಭೂತಗಳು, ಕಾಲ, ನಿತ್ಯವಾದ ಆತ್ಮತತ್ತ್ವ ಮತ್ತು ಪರಿವರ್ತನಶೀಲವಾದ ಮಹತ್ತತ್ತ್ವ ಈ ಎಂಟು ತತ್ತ್ವಗಳೂ ನಿತ್ಯವಾದವುಗಳು. ಇವೇ ಪ್ರಾಣಿಗಳ ಉತ್ಪತ್ತಿ-ಲಯಗಳಿಗೆ ಕಾರಣಗಳು.

12267010a ಅಭಾವಾದ್ಭಾವಿತೇಷ್ವೇವ ತೇಭ್ಯಶ್ಚ ಪ್ರಭವಂತ್ಯಪಿ।
12267010c ವಿನಷ್ಟೋಽಪಿ ಚ ತಾನ್ಯೇವ ಜಂತುರ್ಭವತಿ ಪಂಚಧಾ।।

ಎಲ್ಲವೂ ಇವುಗಳಲ್ಲಿಯೇ ಲೀನವಾಗುತ್ತವೆ ಮತ್ತು ಇವುಗಳಿಂದಲೇ ಪ್ರಕಟವಾಗುತ್ತವೆ. ಜಂತುವು ವಿನಷ್ಟವಾದರೂ ಕೂಡ ಅದು ಐದು ಪಂಚಭೂತಗಳಲ್ಲಿಯೇ ವಿಲೀನವಾಗುತ್ತದೆ.

12267011a ತಸ್ಯ ಭೂಮಿಮಯೋ ದೇಹಃ ಶ್ರೋತ್ರಮಾಕಾಶಸಂಭವಮ್।
12267011c ಸೂರ್ಯಶ್ಚಕ್ಷುರಸುರ್ವಾಯುರದ್ಭ್ಯಸ್ತು ಖಲು ಶೋಣಿತಮ್।।

ಅದರ ದೇಹವು ಭೂಮಿಮಯವು. ಕಿವಿಗಳು ಆಕಾಶತತ್ತ್ವದಿಂದ ಹುಟ್ಟಿದವು. ಕಣ್ಣುಗಳು ಸೂರ್ಯ, ಪ್ರಾಣವು ವಾಯು ಮತ್ತು ರಕ್ತವು ನೀರು – ಇವುಗಳಿಂದ ಹುಟ್ಟಿ ಇವುಗಳಲ್ಲಿಯೇ ಲೀನವಾಗುತ್ತವೆ.

12267012a ಚಕ್ಷುಷೀ ನಾಸಿಕಾಕರ್ಣೌ ತ್ವಗ್ಜಿಹ್ವೇತಿ ಚ ಪಂಚಮೀ।
12267012c ಇಂದ್ರಿಯಾಣೀಂದ್ರಿಯಾರ್ಥಾನಾಂ ಜ್ಞಾನಾನಿ ಕವಯೋ ವಿದುಃ।।

ಕಣ್ಣು, ಮೂಗು, ಕಿವಿ, ಚರ್ಮ ಮತ್ತು ನಾಲಿಗೆ – ಈ ಐದು ಜ್ಞಾನೇಂದ್ರಿಯಗಳೆಂದೂ ವಿಷಯಗಳನ್ನು ಗ್ರಹಿಸತಕ್ಕವುಗಳೆಂದೂ ವಿದ್ವಾಂಸರು ತಿಳಿದಿದ್ದಾರೆ.

12267013a ದರ್ಶನಂ ಶ್ರವಣಂ ಘ್ರಾಣಂ ಸ್ಪರ್ಶನಂ ರಸನಂ ತಥಾ।
12267013c ಉಪಪತ್ತ್ಯಾ ಗುಣಾನ್ವಿದ್ಧಿ ಪಂಚ ಪಂಚಸು ಪಂಚಧಾ।।

ನೋಡುವುದು, ಕೇಳುವುದು, ಮೂಸುವುದು, ಮುಟ್ಟುವುದು ಮತ್ತು ರುಚಿನೋಡುವುದು – ಇವು ಐದು ಇಂದ್ರಿಯಗಳ ಐದು ಗುಣಗಳ ಐದು ಕ್ರಿಯೆಗಳೆಂದು ತಿಳಿ.

12267014a ರೂಪಂ ಗಂಧೋ ರಸಃ ಸ್ಪರ್ಶಃ ಶಬ್ದಶ್ಚೈವಾಥ ತದ್ಗುಣಾಃ।
12267014c ಇಂದ್ರಿಯೈರುಪಲಭ್ಯಂತೇ ಪಂಚಧಾ ಪಂಚ ಪಂಚಭಿಃ।।

ರೂಪ, ಗಂಧ, ರಸ, ಸ್ಪರ್ಶ, ಮತ್ತು ಶಬ್ದ ಇವು ಐದು ಇಂದ್ರಿಯಗಳ ಗುಣಗಳು. ಇವು ಐದು ಇಂದ್ರಿಯಗಳ ಐದು ಕ್ರಿಯೆಗಳಲ್ಲಿ ಐದು ಗುಣಗಳಾಗಿ ಕಾಣುತ್ತವೆ.

12267015a ರೂಪಂ ಗಂಧಂ ರಸಂ ಸ್ಪರ್ಶಂ ಶಬ್ದಂ ಚೈತಾಂಸ್ತು ತದ್ಗುಣಾನ್।
12267015c ಇಂದ್ರಿಯಾಣಿ ನ ಬುಧ್ಯಂತೇ ಕ್ಷೇತ್ರಜ್ಞಸ್ತೈಸ್ತು ಬುಧ್ಯತೇ।।

ರೂಪ, ಗಂಧ, ರಸ, ಸ್ಪರ್ಶ ಮತ್ತು ಶಬ್ದ – ಈ ಗುಣಗಳನ್ನು ಇಂದ್ರಿಯಗಳು ತಾವೇ ತಿಳಿಯಲಾರವು. ಆದರೆ ಕ್ಷೇತ್ರಜ್ಞನು ಅವುಗಳನ್ನು ತಿಳಿಯುತ್ತಾನೆ.

12267016a ಚಿತ್ತಮಿಂದ್ರಿಯಸಂಘಾತಾತ್ಪರಂ ತಸ್ಮಾತ್ಪರಂ ಮನಃ।
12267016c ಮನಸಸ್ತು ಪರಾ ಬುದ್ಧಿಃ ಕ್ಷೇತ್ರಜ್ಞೋ ಬುದ್ಧಿತಃ ಪರಃ।।

ಇಂದ್ರಿಯಗಳು ಮತ್ತು ವಿಷಯಗಳ ಸಂಪರ್ಕಕ್ಕಿಂತಲೂ ಆಚೆ ಚಿತ್ತವಿದೆ. ಚಿತ್ತಕ್ಕಿಂತಲೂ ಆಚೆ ಮನವಿದೆ. ಮನಕ್ಕಿಂತಲೂ ಆಚೆ ಬುದ್ಧಿಯಿದೆ. ಮತ್ತು ಕ್ಷೇತ್ರಜ್ಞನು ಬುದ್ಧಿಗಿಂತಲೂ ಆಚೆಯಿರುವವನು.

12267017a ಪೂರ್ವಂ ಚೇತಯತೇ ಜಂತುರಿಂದ್ರಿಯೈರ್ವಿಷಯಾನ್ ಪೃಥಕ್।
12267017c ವಿಚಾರ್ಯ ಮನಸಾ ಪಶ್ಚಾದಥ ಬುದ್ಧ್ಯಾ ವ್ಯವಸ್ಯತಿ।
12267017e ಇಂದ್ರಿಯೈರುಪಲಬ್ಧಾರ್ಥಾನ್ಸರ್ವಾನ್ಯಸ್ತ್ವಧ್ಯವಸ್ಯತಿ।।

ಪ್ರಾಣಿಯ ಚಿತ್ತವು ಮೊದಲು ಪ್ರತ್ಯೇಕ ಇಂದ್ರಿಯಗಳಿಂದ ಪ್ರತ್ಯೇಕ ವಿಷಯಗಳನ್ನು ಗ್ರಹಿಸುತ್ತದೆ. ಅವುಗಳ ಕುರಿತು ಮನಸ್ಸು ವಿಚಾರಿಸುತ್ತದೆ. ನಂತರ ಅದು ಬುದ್ಧಿಯನ್ನು ತಲುಪುತ್ತದೆ. ಇಂದ್ರಿಯಗಳಿಂದ ಉಪಲಬ್ಧವಾಗುವ ಸರ್ವ ಅರ್ಥಗಳೂ ಬುದ್ಧಿಯಲ್ಲಿ ನೆಲೆಸುತ್ತವೆ.

12267018a ಚಿತ್ತಮಿಂದ್ರಿಯಸಂಘಾತಂ ಮನೋ ಬುದ್ಧಿಂ ತಥಾಷ್ಟಮೀಮ್।
12267018c ಅಷ್ಟೌ ಜ್ಞಾನೇಂದ್ರಿಯಾಣ್ಯಾಹುರೇತಾನ್ಯಧ್ಯಾತ್ಮಚಿಂತಕಾಃ।।

ಅಧ್ಯಾತ್ಮ ಚಿಂತಕರು ಐದು ಇಂದ್ರಿಗಳು, ಚಿತ್ತ, ಮನಸ್ಸು ಮತ್ತು ಬುದ್ಧಿ – ಈ ಎಂಟನ್ನು ಜ್ಞಾನೇಂದ್ರಿಯಗಳೆಂದು ಹೇಳುತ್ತಾರೆ.

12267019a ಪಾಣಿಪಾದಂ ಚ ಪಾಯುಶ್ಚ ಮೇಹನಂ ಪಂಚಮಂ ಮುಖಮ್।
12267019c ಇತಿ ಸಂಶಬ್ದ್ಯಮಾನಾನಿ ಶೃಣು ಕರ್ಮೇಂದ್ರಿಯಾಣ್ಯಪಿ।।

ಕೈಗಳು, ಕಾಲುಗಳು, ಗುದ, ಉಪಸ್ಥ ಮತ್ತು ಮುಖ – ಈ ಐದನ್ನು ಕರ್ಮೇಂದ್ರಿಯಗಳೆಂದು ಕರೆಯುತ್ತಾರೆ. ಇವುಗಳ ಕುರಿತು ಕೇಳು.

12267020a ಜಲ್ಪನಾಭ್ಯವಹಾರಾರ್ಥಂ ಮುಖಮಿಂದ್ರಿಯಮುಚ್ಯತೇ।
12267020c ಗಮನೇಂದ್ರಿಯಂ ತಥಾ ಪಾದೌ ಕರ್ಮಣಃ ಕರಣೇ ಕರೌ।।

ಮಾತನಾಡಲು ಮತ್ತು ಆಹಾರವನ್ನು ಸೇವಿಸಲು ಮುಖವು ಕರ್ಮೇಂದ್ರಿಯವು ಎಂದು ಹೇಳುತ್ತಾರೆ. ಕಾಲುಗಳು ಗಮನೇಂದ್ರಿಯಗಳು. ಮತ್ತು ಕೈಗಳು ಕರ್ಮಗಳನ್ನು ಮಾಡಲಿಕ್ಕಿರುವ ಕರ್ಮೇಂದ್ರಿಯವು.

12267021a ಪಾಯೂಪಸ್ಥೌ ವಿಸರ್ಗಾರ್ಥಮಿಂದ್ರಿಯೇ ತುಲ್ಯಕರ್ಮಣೀ।
12267021c ವಿಸರ್ಗೇ ಚ ಪುರೀಷಸ್ಯ ವಿಸರ್ಗೇ ಚಾಭಿಕಾಮಿಕೇ।।

ಪಾಯು ಮತ್ತು ಉಪಸ್ಥಗಳು ವಿಸರ್ಗಾರ್ಥಕ್ಕಾಗಿಯೇ ಇವೆ. ಸಮಾನ ಕೆಲಸವನ್ನು ಮಾಡುತ್ತವೆ. ಮಲವನ್ನು ವಿಸರ್ಜಿಸುತ್ತದೆ ಮತ್ತು ಕಾಮದ ಸಮಯದಲ್ಲಿ ವೀರ್ಯವನ್ನು ವಿಸರ್ಜಿಸುತ್ತದೆ.

12267022a ಬಲಂ ಷಷ್ಠಂ ಷಡೇತಾನಿ ವಾಚಾ ಸಮ್ಯಗ್ಯಥಾಗಮಮ್।
12267022c ಜ್ಞಾನಚೇಷ್ಟೇಂದ್ರಿಯಗುಣಾಃ ಸರ್ವೇ ಸಂಶಬ್ದಿತಾ ಮಯಾ।।

ಬಲ ಅಥವಾ ಪ್ರಾಣವು ಆರನೆಯದು. ಈ ಆರರ ಕುರಿತು ನಾನು ಆಗಮಗಳಲ್ಲಿರುವಂತೆ ಸರಿಯಾಗಿ ಹೇಳಿದ್ದೇನೆ. ಇಂದ್ರಿಯಗಳ ಜ್ಞಾನ, ಕರ್ಮ ಮತ್ತು ಗುಣಗಳ ಕುರಿತು ಎಲ್ಲವನ್ನೂ ಹೇಳಿದ್ದೇನೆ.

12267023a ಇಂದ್ರಿಯಾಣಾಂ ಸ್ವಕರ್ಮಭ್ಯಃ ಶ್ರಮಾದುಪರಮೋ ಯದಾ।
12267023c ಭವತೀಂದ್ರಿಯಸಂನ್ಯಾಸಾದಥ ಸ್ವಪಿತಿ ವೈ ನರಃ।।

ಇಂದ್ರಿಯಗಳು ತಮ್ಮ ಕರ್ಮಗಳನ್ನು ಮಾಡಿ ಶ್ರಮದಿಂದ ಶಾಂತವಾದಾಗ ನರನು ಇಂದ್ರಿಯಗಳನ್ನು ತೊರೆದು ನಿದ್ರಿಸುತ್ತಾನೆ.

12267024a ಇಂದ್ರಿಯಾಣಾಂ ವ್ಯುಪರಮೇ ಮನೋಽನುಪರತಂ ಯದಿ।
12267024c ಸೇವತೇ ವಿಷಯಾನೇವ ತದ್ವಿದ್ಯಾತ್ ಸ್ವಪ್ನದರ್ಶನಮ್।।

ಇಂದ್ರಿಯಗಳು ಉಪಶಮನ ಹೊಂದಿದರೂ ಮನಸ್ಸು ಇನ್ನೂ ಉಪಶಮನ ಹೊಂದದೇ ಇದ್ದರೆ ಅದು ವಿಷಯಗಳನ್ನು ಸೇವಿಸುತ್ತಾ ಸ್ವಪ್ನವನ್ನು ಕಾಣುತ್ತದೆ ಎಂದು ತಿಳಿಯಬೇಕು.

12267025a ಸಾತ್ತ್ವಿಕಾಶ್ಚೈವ ಯೇ ಭಾವಾಸ್ತಥಾ ರಾಜಸತಾಮಸಾಃ।
12267025c ಕರ್ಮಯುಕ್ತಾನ್ ಪ್ರಶಂಸಂತಿ ಸಾತ್ತ್ವಿಕಾನಿತರಾಂಸ್ತಥಾ।।

ಜಾಗೃತಾವಸ್ಥೆಯಲ್ಲಿ ಸಾತ್ತ್ವಿಕ, ರಾಜಸ, ತಾಮಸ – ಯಾವ ಭಾವಗಳಿರುತ್ತವೆಯೋ ಅವೇ ಕರ್ಮಯುಕ್ತ ಸಾತ್ವಿಕಾದಿ ಭಾವಗಳನ್ನು ಪ್ರಾಣಿಗಳು ಸ್ವಪ್ನಾವಸ್ಥೆಯಲ್ಲಿಯೂ ಅನುಭವಿಸುತ್ತವೆ.

12267026a ಆನಂದಃ ಕರ್ಮಣಾಂ ಸಿದ್ಧಿಃ ಪ್ರತಿಪತ್ತಿಃ ಪರಾ ಗತಿಃ।
12267026c ಸಾತ್ತ್ವಿಕಸ್ಯ ನಿಮಿತ್ತಾನಿ ಭಾವಾನ್ಸಂಶ್ರಯತೇ ಸ್ಮೃತಿಃ।।

ಆನಂದ, ಕರ್ಮಸಿದ್ಧಿ, ಕರ್ತವ್ಯಜ್ಞಾನ ಮತ್ತು ಉತ್ತಮ ಗತಿ – ಈ ನಾಲ್ಕು ಸಾತ್ತ್ವಿಕನ ಲಕ್ಷಣಗಳು. ಅವನ ಸ್ಮೃತಿಯು ಈ ಭಾವಗಳನ್ನು ಆಶ್ರಯಿಸಿರುತ್ತದೆ.

12267027a ಜಂತುಷ್ವೇಕತಮೇಷ್ವೇವಂ ಭಾವಾ ಯೇ ವಿಧಿಮಾಸ್ಥಿತಾಃ।
12267027c ಭಾವಯೋರೀಪ್ಸಿತಂ ನಿತ್ಯಂ ಪ್ರತ್ಯಕ್ಷಗಮನಂ ದ್ವಯೋಃ।।

ಅದರಂತೆ ರಾಜಸ-ತಾಮಸ ಮನುಷ್ಯರ ಸ್ಮೃತಿಗಳೂ ಆ ಗುಣಗಳಿಗೆ ಸಂಬಂಧಿಸಿದ ಭಾವಗಳಿಗನುಗುಣವಾಗಿಯೇ ಇರುತ್ತವೆ. ಆ ಭಾವಗಳಿಗೆ ತಕ್ಕುದಾಗಿ ಅವರಿಗೆ ರಾಜಸ-ತಾಮಸ ಪದಾರ್ಥಗಳ ಪ್ರತ್ಯಕ್ಷದರ್ಶನವು ಆಗುತ್ತಲೇ ಇರುತ್ತದೆ.

12267028a ಇಂದ್ರಿಯಾಣಿ ಚ ಭಾವಾಶ್ಚ ಗುಣಾಃ ಸಪ್ತದಶ ಸ್ಮೃತಾಃ।
12267028c ತೇಷಾಮಷ್ಟಾದಶೋ ದೇಹೀ ಯಃ ಶರೀರೇ ಸ ಶಾಶ್ವತಃ।।

ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಚಿತ್ತ, ಮನಸ್ಸು, ಬುದ್ಧಿ, ಪ್ರಾಣ, ಮತ್ತು ಸಾತ್ತ್ವಿಕ-ರಾಜಸ-ತಾಮಸಗಳೆಂಬ ಮೂರು ಗುಣಗಳು – ಇವು ಹದಿನೇಳೆಂದು ಹೇಳುತ್ತಾರೆ. ಶರೀರದಲ್ಲಿರುವ ಜೀವಾತ್ಮನು ಹದಿನೆಂಟನೆಯವನು. ಅವನು ಶಾಶ್ವತನು.

12267029a ಅಥ ವಾ ಸಶರೀರಾಸ್ತೇ ಗುಣಾಃ ಸರ್ವೇ ಶರೀರಿಣಾಮ್।
12267029c ಸಂಶ್ರಿತಾಸ್ತದ್ವಿಯೋಗೇ ಹಿ ಸಶರೀರಾ ನ ಸಂತಿ ತೇ।।

ಅಥವಾ ಶರೀರದಲ್ಲಿರುವ ಈ ಎಲ್ಲ ಗುಣಗಳೂ ಜೀವಾತ್ಮನನ್ನು ಆಶ್ರಯಿಸಿರುತ್ತವೆ. ಜೀವಾತ್ಮನ ವಿಯೋಗವಾದೊಡನೆಯೇ ಅವು ನಷ್ಟವಾಗುತ್ತವೆ.

12267030a ಅಥ ವಾ ಸಂನಿಪಾತೋಽಯಂ ಶರೀರಂ ಪಾಂಚಭೌತಿಕಮ್।
12267030c ಏಕಶ್ಚ ದಶ ಚಾಷ್ಟೌ ಚ ಗುಣಾಃ ಸಹ ಶರೀರಿಣಾಮ್।
12267030e ಊಷ್ಮಣಾ ಸಹ ವಿಂಶೋ ವಾ ಸಂಘಾತಃ ಪಾಂಚಭೌತಿಕಃ।।

ಅಥವಾ ಈ ಶರೀರವು ಪಂಚಭೌತಿಕ ತತ್ತ್ವಗಳ ಸಮುದಾಯವಾಗಿದೆ. ಒಂದು ಮಹತ್ತತ್ತ್ವ ಮತ್ತು ಜೀವಸಹಿತವಾದ ಈ ಹದಿನೆಂಟು ಗುಣಗಳು – ಈ ಸಮುದಾಯದಲ್ಲಿಯೇ ಸೇರಿಕೊಂಡಿವೆ. ಜಠರಾಗ್ನಿಯನ್ನು ಸೇರಿಸಿದರೆ ಈ ಪಂಚಭೌತಿಕ ಸಮುದಾಯಗಳು ಇಪ್ಪತ್ತಾಗುತ್ತವೆ.

12267031a ಮಹಾನ್ಸಂಧಾರಯತ್ಯೇತಚ್ಚರೀರಂ ವಾಯುನಾ ಸಹ।
12267031c ತಸ್ಯಾಸ್ಯ ಭಾವಯುಕ್ತಸ್ಯ ನಿಮಿತ್ತಂ ದೇಹಭೇದನೇ।।

ಮಹತ್ತತ್ತ್ವವು ಪ್ರಾಣವಾಯುವಿನೊಂದಿಗೆ ಈ ಶರೀರವನ್ನು ಧರಿಸಿದೆ. ದೇಹಭೇದನದಲ್ಲಿ ಭಾವಯುಕ್ತ ಪ್ರಾಣವಾಯುವು ನಿಮಿತ್ತಮಾತ್ರ.

12267032a ಯಥೈವೋತ್ಪದ್ಯತೇ ಕಿಂ ಚಿತ್ಪಂಚತ್ವಂ ಗಚ್ಚತೇ ತಥಾ।
12267032c ಪುಣ್ಯಪಾಪವಿನಾಶಾಂತೇ ಪುಣ್ಯಪಾಪಸಮೀರಿತಮ್।
12267032e ದೇಹಂ ವಿಶತಿ ಕಾಲೇನ ತತೋಽಯಂ ಕರ್ಮಸಂಭವಮ್।।

ಪುಣ್ಯಪಾಪಗಳು ವಿನಾಶವಾದಾಗ ಹುಟ್ಟಿದವುಗಳೆಲ್ಲವೂ ಅವು ಹೇಗೆ ಹುಟ್ಟಿದ್ದವೋ ಹಾಗೆಯೇ ಪಂಚತ್ವವನ್ನು ಹೊಂದುತ್ತವೆ. ಸಂಚಿತ ಪುಣ್ಯಪಾಪಗಳಿಂದ ಪ್ರೇರಿತವಾದ ದೇಹವು ಸಮಯಾನುಸಾರವಾಗಿ ಕರ್ಮಜನಿತ ಇನ್ನೊಂದು ಶರೀರವನ್ನು ಪ್ರವೇಶಿಸುತ್ತದೆ.

12267033a ಹಿತ್ವಾ ಹಿತ್ವಾ ಹ್ಯಯಂ ಪ್ರೈತಿ ದೇಹಾದ್ದೇಹಂ ಕೃತಾಶ್ರಯಃ।
12267033c ಕಾಲಸಂಚೋದಿತಃ ಕ್ಷೇತ್ರೀ ವಿಶೀರ್ಣಾದ್ವಾ ಗೃಹಾದ್ಗೃಹಮ್।।

ಮನೆಯು ಹಳೆಯದಾದಂತೆ ಇರಲು ಹೊಸಮನೆಗೆ ಹೋಗುವಂತೆ ಕಾಲಪ್ರೇರಿತ ಜೀವವು ಕ್ರಮವಾಗಿ ಒಂದೊಂದು ಶರೀರವನ್ನೂ ಬಿಡುತ್ತಾ ಪೂರ್ವಜನ್ಮದ ಕರ್ಮಾನುಸಾರವಾದ ಹೊಸ ಹೊಸ ಶರೀರಗಳಲ್ಲಿ ವಾಸಿಸುತ್ತಿರುತ್ತದೆ.

12267034a ತತ್ರ ನೈವಾನುತಪ್ಯಂತೇ ಪ್ರಾಜ್ಞಾ ನಿಶ್ಚಿತನಿಶ್ಚಯಾಃ।
12267034c ಕೃಪಣಾಸ್ತ್ವನುತಪ್ಯಂತೇ ಜನಾಃ ಸಂಬಂಧಿಮಾನಿನಃ।।

ಈ ವಿಷಯವನ್ನು ನಿಶ್ಚಿತವಾಗಿ ನಿಶ್ಚಯಿಸಿರುವ ಪ್ರಾಜ್ಞರು ದೇಹಭೇದನಕ್ಕೆ ಪರಿತಪಿಸುವುದಿಲ್ಲ. ಆದರೆ ಶರೀರ ಮತ್ತು ಆತ್ಮದ ಏಕತ್ವ ಸಂಬಂಧವನ್ನು ಕಲ್ಪಿಸಿಕೊಂಡಿರುವ ದೀನ ಜನರು ದೇಹಭೇದನದಿಂದ ಪರಿತಪಿಸುತ್ತಾರೆ.

12267035a ನ ಹ್ಯಯಂ ಕಸ್ಯ ಚಿತ್ಕಶ್ಚಿನ್ನಾಸ್ಯ ಕಶ್ಚನ ವಿದ್ಯತೇ।
12267035c ಭವತ್ಯೇಕೋ ಹ್ಯಯಂ ನಿತ್ಯಂ ಶರೀರೇ ಸುಖದುಃಖಭಾಕ್।।

ಜೀವನು ಯಾರಿಗೂ ಸಂಬಂಧಿಸಿದವನಲ್ಲ. ಅವನಿಗೆ ಯಾವ ಸಂಬಂಧಿಯೂ ಇಲ್ಲ. ಅವನು ನಿತ್ಯವೂ ಏಕಾಕಿಯು. ಆದರೆ ಶರೀರದಲ್ಲಿದ್ದುಕೊಂಡು ಅದು ತನ್ನದು ಎಂದು ಭಾವಿಸಿಕೊಂಡಿರುವುದರಿಂದ ಕರ್ಮಾನುಗುಣವಾಗಿ ಸುಖದುಃಖಗಳನ್ನು ಅನುಭವಿಸುತ್ತದೆ.

12267036a ನೈವ ಸಂಜಾಯತೇ ಜಂತುರ್ನ ಚ ಜಾತು ವಿಪದ್ಯತೇ।
12267036c ಯಾತಿ ದೇಹಮಯಂ ಭುಕ್ತ್ವಾ ಕದಾ ಚಿತ್ಪರಮಾಂ ಗತಿಮ್।।

ಜೀವವು ಹುಟ್ಟುವುದೂ ಇಲ್ಲ; ಸಾಯುವುದೂ ಇಲ್ಲ. ಯಾವಾಗಲಾದರೂ ಅದಕ್ಕೆ ಈ ತತ್ತ್ವಜ್ಞಾನವುಂಟಾದಾಗ ಅದು ಶರೀರದ ಮೇಲಿನ ಅಭಿಮಾನವನ್ನು ತೊರೆದು ಪರಮಗತಿಯನ್ನು ಹೊಂದುತ್ತದೆ.

12267037a ಪುಣ್ಯಪಾಪಮಯಂ ದೇಹಂ ಕ್ಷಪಯನ್ಕರ್ಮಸಂಚಯಾತ್।
12267037c ಕ್ಷೀಣದೇಹಃ ಪುನರ್ದೇಹೀ ಬ್ರಹ್ಮತ್ವಮುಪಗಚ್ಚತಿ।।

ಉತ್ತಮ ಕರ್ಮಸಂಚಯಗಳಿಂದ ಈ ಪುಣ್ಯಪಾಪಮಯ ದೇಹವನ್ನು ಕಳೆದುಕೊಳ್ಳುತ್ತಾ ಕ್ಷೀಣದೇಹಿಯಾದ ಜೀವವು ಪುನಃ ಬ್ರಹ್ಮತ್ವವನ್ನು ಪಡೆದುಕೊಳ್ಳುತ್ತದೆ.

12267038a ಪುಣ್ಯಪಾಪಕ್ಷಯಾರ್ಥಂ ಚ ಸಾಂಖ್ಯಂ ಜ್ಞಾನಂ ವಿಧೀಯತೇ।
12267038c ತತ್ಕ್ಷಯೇ ಹ್ಯಸ್ಯ ಪಶ್ಯಂತಿ ಬ್ರಹ್ಮಭಾವೇ ಪರಾಂ ಗತಿಮ್।।

ಪುಣ್ಯಪಾಪಗಳನ್ನು ಕ್ಷಯಿಸುವುದಕ್ಕಾಗಿಯೇ ಸಾಂಖ್ಯ ಜ್ಞಾನವನ್ನು ಹೇಳಿದ್ದಾರೆ. ಪುಣ್ಯಪಾಪಗಳು ಕ್ಷಯವಾದೊಡನೆಯೇ ದೊರೆಯುವ ಬ್ರಹ್ಮಭಾವವೇ ಜೀವದ ಪರಮ ಗತಿಯೆಂದು ಕಂಡಿದ್ದಾರೆ.””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ನಾರದಾಸಿತಸಂವಾದೇ ಸಪ್ತಷಷ್ಟ್ಯಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ನಾರದಾಸಿತಸಂವಾದ ಎನ್ನುವ ಇನ್ನೂರಾಅರವತ್ತೇಳನೇ ಅಧ್ಯಾಯವು.