266: ಯೋಗಾಚಾರಾನುವರ್ಣನ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 266

ಸಾರ

ಮೋಕ್ಷಸಾಧನೆಯ ವರ್ಣನೆ (1-19).

12266001 ಯುಧಿಷ್ಠಿರ ಉವಾಚ।
12266001a ಮೋಕ್ಷಃ ಪಿತಾಮಹೇನೋಕ್ತ ಉಪಾಯಾನ್ನಾನುಪಾಯತಃ।
12266001c ತಮುಪಾಯಂ ಯಥಾನ್ಯಾಯಂ ಶ್ರೋತುಮಿಚ್ಚಾಮಿ ಭಾರತ।।

ಯುಧಿಷ್ಠಿರನು ಹೇಳಿದನು: “ಭಾರತ! ಪಿತಾಮಹ! ಉಪಾಯದಿಂದಲೇ ಮೋಕ್ಷವು. ಉಪಾಯವಿಲ್ಲದೇ ಮೋಕ್ಷವಿಲ್ಲ ಎಂದು ಹೇಳಿದ್ದೀಯೆ. ಆ ಉಪಾಯದ ಕುರಿತು ಯಥಾನ್ಯಾಯವಾಗಿ ಕೇಳಬಯಸುತ್ತೇನೆ.”

12266002 ಭೀಷ್ಮ ಉವಾಚ।
12266002a ತ್ವಯ್ಯೇವೈತನ್ಮಹಾಪ್ರಾಜ್ಞ ಯುಕ್ತಂ ನಿಪುಣದರ್ಶನಮ್।
12266002c ಯದುಪಾಯೇನ ಸರ್ವಾರ್ಥಾನ್ನಿತ್ಯಂ ಮೃಗಯಸೇಽನಘ।।

ಭೀಷ್ಮನು ಹೇಳಿದನು: “ಮಹಾಪ್ರಾಜ್ಞ! ಅನಘ! ನೀನು ನಿಪುಣದೃಷ್ಟಿಯುಳ್ಳವನಾಗಿ ಉಪಾಯದಿಂದಲೇ ನಿತ್ಯವೂ ಸರ್ವಾರ್ಥಗಳನ್ನು ಹುಡುಕುತ್ತಿದ್ದೀಯೆ.

12266003a ಕರಣೇ ಘಟಸ್ಯ ಯಾ ಬುದ್ಧಿರ್ಘಟೋತ್ಪತ್ತೌ ನ ಸಾನಘ।
12266003c ಏವಂ ಧರ್ಮಾಭ್ಯುಪಾಯೇಷು ನಾನ್ಯದ್ಧರ್ಮೇಷು ಕಾರಣಮ್।।

ಅನಘ! ಗಡಿಗೆಯನ್ನು ತಯಾರಿಸುವಾಗ ಯಾವ ಬುದ್ಧಿಯು ಬೇಕಾಗಿರುತ್ತದೆಯೋ ಅದೇ ಬುದ್ಧಿಯು ಗಡಿಗೆಯು ತಯಾರಾದ ನಂತರ ಅವಶ್ಯಕತೆಯಿರುವುದಿಲ್ಲ. ಅದೇ ರೀತಿ ಚಿತ್ತಶುದ್ಧಿಗೆ ಸಾಧಕವಾದ ಉಪಾಯಗಳು ನಂತರದ ಧರ್ಮಗಳಿಗೆ ಕಾರಕವಾಗುವುದಿಲ್ಲ1.

12266004a ಪೂರ್ವೇ ಸಮುದ್ರೇ ಯಃ ಪಂಥಾ ನ ಸ ಗಚ್ಚತಿ ಪಶ್ಚಿಮಮ್।
12266004c ಏಕಃ ಪಂಥಾ ಹಿ ಮೋಕ್ಷಸ್ಯ ತನ್ಮೇ ವಿಸ್ತರತಃ ಶೃಣು।।

ಪೂರ್ವಸಮುದ್ರಕ್ಕೆ ಹೋಗುವ ದಾರಿಯು ಪಶ್ಚಿಮ ಸಮುದ್ರಕ್ಕೆ ಎಂದೂ ಹೋಗುವುದಿಲ್ಲ. ಹಾಗೆಯೇ ಮೋಕ್ಷಕ್ಕೂ ಒಂದೇ ಮಾರ್ಗವಿದೆ. ಅದನ್ನು ವಿಸ್ತಾರವಾಗಿ ಕೇಳು.

12266005a ಕ್ಷಮಯಾ ಕ್ರೋಧಮುಚ್ಚಿಂದ್ಯಾತ್ಕಾಮಂ ಸಂಕಲ್ಪವರ್ಜನಾತ್।
12266005c ಸತ್ತ್ವಸಂಸೇವನಾದ್ಧೀರೋ ನಿದ್ರಾಮುಚ್ಚೇತುಮರ್ಹತಿ।।

ಧೀರನಾದವನು ಕ್ಷಮೆಯಿಂದ ಕ್ರೋಧವನ್ನು ತೊರೆಯಬೇಕು. ಸಂಕಲ್ಪಿಸುವುದನ್ನು ಬಿಟ್ಟು ಕಾಮವನ್ನು ತ್ಯಜಿಸಬೇಕು. ಸತ್ತ್ವಗುಣ ಸಂಸೇವನೆಯಿಂದ ನಿದ್ರೆಯನ್ನು ತ್ಯಜಿಸಬೇಕು.

12266006a ಅಪ್ರಮಾದಾದ್ಭಯಂ ರಕ್ಷೇಚ್ಚ್ವಾಸಂ ಕ್ಷೇತ್ರಜ್ಞಶೀಲನಾತ್।
12266006c ಇಚ್ಚಾಂ ದ್ವೇಷಂ ಚ ಕಾಮಂ ಚ ಧೈರ್ಯೇಣ ವಿನಿವರ್ತಯೇತ್।।

ಅಪ್ರಮತ್ತತೆಯಿಂದ ಭಯವನ್ನು ದೂರಗೊಳಿಸಬೇಕು. ಕ್ಷೇತ್ರಜ್ಞಶೀಲದಿಂದ ಶ್ವಾಸವನ್ನು ರಕ್ಷಿಸಬೇಕು. ಧೈರ್ಯದಿಂದ ಇಚ್ಛಾ, ದ್ವೇಷ ಮತ್ತು ಕಾಮಗಳನ್ನು ಹೋಗಲಾಡಿಸಿಕೊಳ್ಳಬೇಕು.

12266007a ಭ್ರಮಂ ಪ್ರಮೋಹಮಾವರ್ತಮಭ್ಯಾಸಾದ್ವಿನಿವರ್ತಯೇತ್।
12266007c ನಿದ್ರಾಂ ಚ ಪ್ರತಿಭಾಂ ಚೈವ ಜ್ಞಾನಾಭ್ಯಾಸೇನ ತತ್ತ್ವವಿತ್।।

ತತ್ತ್ವವಿದುವು ಭ್ರಮೆ, ಪ್ರಮೋಹ, ಸಂಶಯಗಳನ್ನು ಶಾಸ್ತ್ರಾಭ್ಯಾಸದಿಂದಲೂ ನಿದ್ರೆ ಮತ್ತು ಪ್ರತಿಭೆಗಳನ್ನು2 ಜ್ಞಾನಾಭ್ಯಾಸದ3 ಮೂಲಕವೂ ನಿವಾರಿಸಿಕೊಳ್ಳಬೇಕು.

12266008a ಉಪದ್ರವಾಂಸ್ತಥಾ ರೋಗಾನ್ ಹಿತಜೀರ್ಣಮಿತಾಶನಾತ್।
12266008c ಲೋಭಂ ಮೋಹಂ ಚ ಸಂತೋಷಾದ್ವಿಷಯಾಂಸ್ತತ್ತ್ವದರ್ಶನಾತ್।।

ಸುಲಭವಾಗಿ ಜೀರ್ಣವಾಗುವ ಮಿತ ಆಹಾರದಿಂದ ಶಾರೀರಕ ಉಪದ್ರವ-ರೋಗಗಳನ್ನೂ, ಸಂತೋಷದಿಂದಿರುವುದರ ಮೂಲಕ ಲೋಭ-ಮೋಹಗಳನ್ನೂ ಮತ್ತು ಅವುಗಳ ಸ್ವಭಾವಗಳನ್ನು ಯಥಾವತ್ತಾಗಿ ತಿಳಿಯುವುದರ ಮೂಲಕ ವಿಷಯಸುಖಗಳನ್ನೂ ತ್ಯಜಿಸಬೇಕು.

12266009a ಅನುಕ್ರೋಶಾದಧರ್ಮಂ ಚ ಜಯೇದ್ಧರ್ಮಮುಪೇಕ್ಷಯಾ।
12266009c ಆಯತ್ಯಾ ಚ ಜಯೇದಾಶಾಮರ್ಥಂ ಸಂಗವಿವರ್ಜನಾತ್।।

ಅನುಕ್ರೋಶದಿಂದ ಅಧರ್ಮವನ್ನು ಜಯಿಸಬೇಕು. ವಿಚಾರಿಸಿ ನಡೆದುಕೊಳ್ಳುವುದರಿಂದ ಧರ್ಮವನ್ನು ಗೆಲ್ಲಬೇಕು. ಮುಂದಾಗುವ ಪರಿಣಾಮವನ್ನು ಯೋಚಿಸಿ ಆಸೆಗಳನ್ನು ಜಯಿಸಬೇಕು. ಆಸಕ್ತಿಯನ್ನು ತ್ಯಜಿಸಿ ಅರ್ಥವನ್ನು ಗೆಲ್ಲಬೇಕು.

12266010a ಅನಿತ್ಯತ್ವೇನ ಚ ಸ್ನೇಹಂ ಕ್ಷುಧಂ ಯೋಗೇನ ಪಂಡಿತಃ।
12266010c ಕಾರುಣ್ಯೇನಾತ್ಮನೋ ಮಾನಂ ತೃಷ್ಣಾಂ ಚ ಪರಿತೋಷತಃ।।

ವಸ್ತುಗಳ ಅನಿತ್ಯತೆಯ ಕುರಿತು ಯೋಚಿಸಿ ಪಂಡಿತನು ಸ್ನೇಹವನ್ನು ಕಳೆದುಕೊಳ್ಳಬೇಕು. ಯೋಗಾಭ್ಯಾಸದಿಂದ ಹಸಿವೆಯನ್ನು ಗೆಲ್ಲಬೇಕು. ಕಾರುಣ್ಯದಿಂದ ಆತ್ಮಾಭಿಮಾನವನ್ನು ತೊರೆಯಬೇಕು. ನಿತ್ಯಸಂತುಷ್ಟನಾಗಿರುವುದರ ಮೂಲಕ ತೃಷ್ಣೆಯನ್ನು ಜಯಿಸಬೇಕು.

12266011a ಉತ್ಥಾನೇನ ಜಯೇತ್ತಂದ್ರೀಂ ವಿತರ್ಕಂ ನಿಶ್ಚಯಾಜ್ಜಯೇತ್।
12266011c ಮೌನೇನ ಬಹುಭಾಷ್ಯಂ ಚ ಶೌರ್ಯೇಣ ಚ ಭಯಂ ಜಯೇತ್।।

ನಿರಂತರ ಉದ್ಯೋಗದಿಂದ ಆಲಸ್ಯವನ್ನು ಜಯಿಸಬೇಕು. ಶಾಸ್ತ್ರನಿಶ್ಚಯಗಳಿಂದ ವಿಪರೀತ ತರ್ಕವನ್ನು ಗೆಲ್ಲಬೇಕು. ಮೌನದಿಂದ ಅತಿಯಾಗಿ ಮಾತನಾಡುವುದನ್ನು ಹಾಗೂ ಶೌರ್ಯದಿಂದ ಭಯವನ್ನು ಜಯಿಸಬೇಕು.

12266012a ಯಚ್ಚೇದ್ವಾಙ್ಮನಸೀ ಬುದ್ಧ್ಯಾ ತಾಂ ಯಚ್ಚೇಜ್ಜ್ಞಾನಚಕ್ಷುಷಾ।
12266012c ಜ್ಞಾನಮಾತ್ಮಾ ಮಹಾನ್ಯಚ್ಚೇತ್ತಂ ಯಚ್ಚೇಚ್ಚಾಂತಿರಾತ್ಮನಃ।।

ಬುದ್ಧಿಯಿಂದ ಮಾತು-ಮನಸ್ಸುಗಳನ್ನು ಮತ್ತು ಬುದ್ಧಿಯನ್ನು ಜ್ಞಾನದ ಕಣ್ಣುಗಳಿಂದ ಗೆಲ್ಲಬೇಕು. ಆತ್ಮಜ್ಞಾನದ ಮೂಲಕ ಶಾಸ್ತ್ರಜ್ಞಾನವನ್ನು ಶಮನಗೊಳಿಸಬೇಕು. ಇದರಿಂದ ಮಹಾ ಆತ್ಮಶಾಂತಿಯುಂಟಾಗುತ್ತದೆ.

12266013a ತದೇತದುಪಶಾಂತೇನ ಬೋದ್ಧವ್ಯಂ ಶುಚಿಕರ್ಮಣಾ।
12266013c ಯೋಗದೋಷಾನ್ಸಮುಚ್ಚಿದ್ಯ ಪಂಚ ಯಾನ್ಕವಯೋ ವಿದುಃ।।

ಹೀಗೆ ವಿದ್ವಾಂಸರು ತಿಳಿದಿರುವ ಐದು ಯೋಗದೋಷಗಳನ್ನು ಕಿತ್ತುಹಾಕಿ, ಶುಚಿಕರ್ಮಗಳಿಂದ ಶಾಂತಿಯನ್ನು ಪಡೆದು ಆತ್ಮಸಾಕ್ಷಾತ್ಕಾರವನ್ನು ಪಡೆದುಕೊಳ್ಳಬೇಕು.

12266014a ಕಾಮಂ ಕ್ರೋಧಂ ಚ ಲೋಭಂ ಚ ಭಯಂ ಸ್ವಪ್ನಂ ಚ ಪಂಚಮಮ್।
12266014c ಪರಿತ್ಯಜ್ಯ ನಿಷೇವೇತ ತಥೇಮಾನ್ಯೋಗಸಾಧನಾನ್।।

ಕಾಮ, ಕ್ರೋಧ, ಲೋಭ, ಭಯ ಮತ್ತು ಸ್ವಪ್ನ ಈ ಐದು ಯೋಗದೋಷಗಳನ್ನು ತ್ಯಜಿಸಿದ ನಂತರ ಯೋಗಸಾಧನಗಳಲ್ಲಿ ತೊಡಗಬೇಕು.

12266015a ಧ್ಯಾನಮಧ್ಯಯನಂ ದಾನಂ ಸತ್ಯಂ ಹ್ರೀರಾರ್ಜವಂ ಕ್ಷಮಾ।
12266015c ಶೌಚಮಾಹಾರತಃ ಶುದ್ಧಿರಿಂದ್ರಿಯಾಣಾಂ ಚ ಸಂಯಮಃ।।

ಧ್ಯಾನ, ಅಧ್ಯಯನ, ದಾನ, ಸತ್ಯ, ಲಜ್ಜೆ, ಸರಳತೆ, ಕ್ಷಮೆ, ಶೌಚ, ಆಹಾರಶುದ್ಧಿ, ಇಂದ್ರಿಯಗಳ ಸಂಯಮ ಇವು ಯೋಗಕ್ಕೆ ಸಾಧನಗಳು.

12266016a ಏತೈರ್ವಿವರ್ಧತೇ ತೇಜಃ ಪಾಪ್ಮಾನಮಪಹಂತಿ ಚ।
12266016c ಸಿಧ್ಯಂತಿ ಚಾಸ್ಯ ಸಂಕಲ್ಪಾ ವಿಜ್ಞಾನಂ ಚ ಪ್ರವರ್ತತೇ।।

ಇವುಗಳಿಂದ ತೇಜಸ್ಸು ವೃದ್ಧಿಯಾಗುತ್ತದೆ ಮತ್ತು ಪಾಪಗಳು ಕಳೆಯುತ್ತವೆ. ಸಂಕಲ್ಪಗಳು ಸಿದ್ಧಿಸಿ ವಿಜ್ಞಾನವು ಹುಟ್ಟಿಕೊಳ್ಳುತ್ತದೆ.

12266017a ಧೂತಪಾಪಃ ಸ ತೇಜಸ್ವೀ ಲಘ್ವಾಹಾರೋ ಜಿತೇಂದ್ರಿಯಃ।
12266017c ಕಾಮಕ್ರೋಧೌ ವಶೇ ಕೃತ್ವಾ ನಿನೀಷೇದ್ಬ್ರಹ್ಮಣಃ ಪದಮ್।।

ಪಾಪವನ್ನು ತೊಳೆದುಕೊಂಡ ತೇಜಸ್ವೀ ಮಿತಾಹಾರೀ ಜಿತೇಂದ್ರಿಯನು ಕಾಮಕ್ರೋಧಗಳನ್ನು ವಶಪಡಿಸಿಕೊಂಡು ಬ್ರಹ್ಮಪದವನ್ನು ಹೊಂದಲು ಇಚ್ಛಿಸಬೇಕು.

12266018a ಅಮೂಢತ್ವಮಸಂಗಿತ್ವಂ ಕಾಮಕ್ರೋಧವಿವರ್ಜನಮ್।
12266018c ಅದೈನ್ಯಮನುದೀರ್ಣತ್ವಮನುದ್ವೇಗೋ ವ್ಯವಸ್ಥಿತಿಃ।।
12266019a ಏಷ ಮಾರ್ಗೋ ಹಿ ಮೋಕ್ಷಸ್ಯ ಪ್ರಸನ್ನೋ ವಿಮಲಃ ಶುಚಿಃ।
12266019c ತಥಾ ವಾಕ್ಕಾಯಮನಸಾಂ ನಿಯಮಃ ಕಾಮತೋಽನ್ಯಥಾ।।

ಮೂಢನಾಗದಿರುವುದು, ಅನಾಸಕ್ತಿ, ಕಾಮ-ಕ್ರೋಧಗಳ ತ್ಯಾಗ, ದೈನ್ಯವಿಲ್ಲದಿರುವುದು, ಗರ್ವವಿಲ್ಲದಿರುವುದು, ಉದ್ವೇಗವಿಲ್ಲದಿರುವುದು, ಚಿತ್ತಸ್ಥಿರತೆ, ವಾಕ್ಕಾಯಮನಸ್ಸುಗಳ ನಿಯಮ, ನಿಷ್ಕಾಮಭಾವ – ಇವು ಮೋಕ್ಷಕ್ಕೆ ಕೊಂಡೊಯ್ಯುವ ಸ್ವಚ್ಛ ನಿರ್ಮಲ ಮತ್ತು ಪವಿತ್ರ ಮಾರ್ಗಗಳಾಗಿವೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಯೋಗಾಚಾರಾನುವರ್ಣನ ನಾಮ ಷಟ್ಷಷ್ಟ್ಯಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಯೋಗಾಚಾರಾನುವರ್ಣನ ಎನ್ನುವ ಇನ್ನೂರಾಅರವತ್ತಾರನೇ ಅಧ್ಯಾಯವು.


  1. ಚಿತ್ತಶುದ್ಧಿಯ ಉಪಾಯಭೂತವಾದ ಯಜ್ಞಾದಿಗಳ ಧರ್ಮವು ಗುರಿಮುಟ್ಟಿದ ನಂತರ ಮೋಕ್ಷಸಾಧನರೂಪವಾದ ಶಮ-ದಮಾದಿ ಇತರ ಧರ್ಮಗಳಿಗೆ ಯಜ್ಞಧರ್ಮವು ಕಾರಣವಾಗುವುದಿಲ್ಲ. (ಭಾರತ ದರ್ಶನ). ↩︎

  2. ಪರಬ್ರಹ್ಮಪ್ರಾಪ್ತಿಗೆ ಪ್ರತಿಕೂಲವಾದ ಹೊಸ ಹೊಸ ವಿಷಯಗಳು ಹೊಳೆಯುವ ಬುದ್ಧಿ (ಭಾರತ ದರ್ಶನ). ↩︎

  3. ತಚ್ಚಿಂತನಂ ತತ್ಕಥನಮನ್ಯೋನ್ಯಂ ತತ್ಪ್ರಬೋಧನಮ್। ಏತದೇಕ ಪರತ್ವಂ ಚ ಜ್ಞಾನಾಭ್ಯಾಸಂ ವಿದುರ್ಬುಧಾಃ।। ಪರಬ್ರಹ್ಮವಸ್ತುವಿನ ಚಿಂತನೆ, ಪರಬ್ರಹ್ಮದ ವಿಷಯವಾಗಿರುವ ಶಾಸ್ತ್ರಗಳ ಅಧ್ಯಯನ, ಪರಸ್ಪರವಾಗಿ ಅದರ ಕುರಿತು ಮಾತನಾಡುವುದು – ಇವನ್ನು ವಿದ್ವಾಂಸರು ಜ್ಞಾನಾಭ್ಯಾಸವೆಂದು ಹೇಳಿದ್ದಾರೆ (ಭಾರತ ದರ್ಶನ). ↩︎