265: ಚತುಃಪ್ರಾಶ್ನಿಕಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 265

ಸಾರ

ಪಾಪ-ಧರ್ಮ-ವೈರಾಗ್ಯ ಮತ್ತು ಮೋಕ್ಷಗಳ ಕುರಿತಾದ ಯುಧಿಷ್ಠಿರನ ನಾಲ್ಕು ಪ್ರಶ್ನೆಗಳಿಗೆ ಭೀಷ್ಮನು ಉತ್ತರಿಸಿದುದು (1-23).

12265001 ಯುಧಿಷ್ಠಿರ ಉವಾಚ।
12265001a ಕಥಂ ಭವತಿ ಪಾಪಾತ್ಮಾ ಕಥಂ ಧರ್ಮಂ ಕರೋತಿ ವಾ।
12265001c ಕೇನ ನಿರ್ವೇದಮಾದತ್ತೇ ಮೋಕ್ಷಂ ವಾ ಕೇನ ಗಚ್ಚತಿ।।

ಯುಧಿಷ್ಠಿರನು ಹೇಳಿದನು: “ಮನುಷ್ಯನು ಹೇಗೆ ಪಾಪಾತ್ಮನಾಗುತ್ತಾನೆ? ಅಥವಾ ಹೇಗೆ ಅವನು ಧರ್ಮಾಚರಣೆಯನ್ನು ಮಾಡುತ್ತಾನೆ? ಯಾವುದರಿಂದ ವೈರಾಗ್ಯವುಂಟಾಗುತ್ತದೆ? ಅಥವಾ ಯಾವುದರಿಂದ ಮೋಕ್ಷವನ್ನು ಹೊಂದಬಹುದು?”

12265002 ಭೀಷ್ಮ ಉವಾಚ।
12265002a ವಿದಿತಾಃ ಸರ್ವಧರ್ಮಾಸ್ತೇ ಸ್ಥಿತ್ಯರ್ಥಮನುಪೃಚ್ಚಸಿ।
12265002c ಶೃಣು ಮೋಕ್ಷಂ ಸನಿರ್ವೇದಂ ಪಾಪಂ ಧರ್ಮಂ ಚ ಮೂಲತಃ।।

ಭೀಷ್ಮನು ಹೇಳಿದನು: “ನಿನಗೆ ಸರ್ವಧರ್ಮಗಳೂ ತಿಳಿದಿವೆ. ಆದರೂ ನಿರ್ದಿಷ್ಟಪಡಿಸಿಕೊಳ್ಳುವುದಕ್ಕಾಗಿ ಪ್ರಶ್ನಿಸುತ್ತಿರುವೆ. ಮೋಕ್ಷ, ಜೊತೆಗೆ ವೈರಾಗ್ಯ, ಪಾಪ ಮತ್ತು ಧರ್ಮಗಳ ಕುರಿತು ಮೂಲತಃ ಕೇಳು.

12265003a ವಿಜ್ಞಾನಾರ್ಥಂ ಹಿ ಪಂಚಾನಾಮಿಚ್ಚಾ ಪೂರ್ವಂ ಪ್ರವರ್ತತೇ।
12265003c ಪ್ರಾಪ್ಯ ತಾನ್ಜಾಯತೇ ಕಾಮೋ ದ್ವೇಷೋ ವಾ ಭರತರ್ಷಭ।।

ಭರತರ್ಷಭ! ಮೊದಲು ಪಂಚ ಇಂದ್ರಿಯಾರ್ಥಗಳನ್ನು ಅನುಭವಿಸಲು ಇಚ್ಛೆಯಾಗುತ್ತದೆ. ಇಂದ್ರಿಯಾರ್ಥಗಳನ್ನು ಅನುಭವಿಸುವುದರಿಂದ ಕಾಮ ಅಥವಾ ದ್ವೇಷವು ಉತ್ಪನ್ನವಾಗುತ್ತದೆ.

12265004a ತತಸ್ತದರ್ಥಂ ಯತತೇ ಕರ್ಮ ಚಾರಭತೇ ಪುನಃ।
12265004c ಇಷ್ಟಾನಾಂ ರೂಪಗಂಧಾನಾಮಭ್ಯಾಸಂ ಚ ಚಿಕೀರ್ಷತಿ।।

ಯಾವ ವಿಷಯದ ಮೇಲೆ ಅನುರಾಗವುಂಟಾಗುವುದೋ ಅದರ ಕುರಿತು ಮನುಷ್ಯನು ಕರ್ಮಗಳನ್ನು ಪ್ರಾರಂಭಿಸುತ್ತಾನೆ. ತನಗಿಷ್ಟವಾದ ರೂಪ-ಗಂಧಗಳನ್ನು ಪುನಃ ಪುನಃ ಸೇವಿಸುತ್ತಾ ಅದರ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಾನೆ.

12265005a ತತೋ ರಾಗಃ ಪ್ರಭವತಿ ದ್ವೇಷಶ್ಚ ತದನಂತರಮ್।
12265005c ತತೋ ಲೋಭಃ ಪ್ರಭವತಿ ಮೋಹಶ್ಚ ತದನಂತರಮ್।।

ಅದರಿಂದ ರಾಗವುಂಟಾಗುತ್ತದೆ. ನಂತರ ದ್ವೇಷವೂ ಉಂಟಾಗುತ್ತದೆ. ಅನಂತರ ಲೋಭವುಂಟಾಗುತ್ತದೆ ಮತ್ತು ಅದರ ನಂತರ ಮೋಹ.

12265006a ಲೋಭಮೋಹಾಭಿಭೂತಸ್ಯ ರಾಗದ್ವೇಷಾನ್ವಿತಸ್ಯ ಚ।
12265006c ನ ಧರ್ಮೇ ಜಾಯತೇ ಬುದ್ಧಿರ್ವ್ಯಾಜಾದ್ಧರ್ಮಂ ಕರೋತಿ ಚ।।

ಲೋಭ-ಮೋಹಗಳಿಂದ ಮತ್ತು ರಾಗ-ದ್ವೇಷಗಳಿಂದ ಕೂಡಿರುವವನಿಗೆ ಧರ್ಮದ ವಿಷಯದಲ್ಲಿ ಬುದ್ಧಿಯುಂಟಾಗುವುದಿಲ್ಲ. ನೆಪಕ್ಕೆ ಮಾತ್ರ ಅವನು ಧರ್ಮವನ್ನಾಚರಿಸುತ್ತಾನೆ.

12265007a ವ್ಯಾಜೇನ ಚರತೋ ಧರ್ಮಮರ್ಥವ್ಯಾಜೋಽಪಿ ರೋಚತೇ।
12265007c ವ್ಯಾಜೇನ ಸಿಧ್ಯಮಾನೇಷು ಧನೇಷು ಕುರುನಂದನ।।

ಕುರುನಂದನ! ನೆಪಮಾತ್ರಕ್ಕೆ ಧರ್ಮಾಚರಣೆಯನ್ನು ಮಾಡುತ್ತಾನೆ. ನೆಪವನ್ನು ಮಾಡಿಕೊಂಡು ಹಣಸಂಪಾದನೆಗೆ ತೊಡಗುತ್ತಾನೆ. ಒಂದು ವೇಳೆ ಆ ನೆಪದಿಂದ ಅರ್ಥಸಂಪಾದನೆಯು ಸಿದ್ಧಿಸಿದರೆ ಧನದ ಹಿಂದೆಯೇ ಅವನು ಹೋಗುತ್ತಿರುತ್ತಾನೆ.

12265008a ತತ್ರೈವ ಕುರುತೇ ಬುದ್ಧಿಂ ತತಃ ಪಾಪಂ ಚಿಕೀರ್ಷತಿ।
12265008c ಸುಹೃದ್ಭಿರ್ವಾರ್ಯಮಾಣೋಽಪಿ ಪಂಡಿತೈಶ್ಚಾಪಿ ಭಾರತ।।

ಭಾರತ! ಅದರಲ್ಲೇ ತನ್ನ ಬುದ್ಧಿಯನ್ನು ಉಪಯೋಗಿಸಿ ನಂತರ ಅವನು ಸುಹೃದಯರು ಮತ್ತು ಪಂಡಿತರು ತಡೆದರೂ, ಪಾಪಕರ್ಮಗಳನ್ನೆಸಗುತ್ತಾನೆ.

12265009a ಉತ್ತರಂ ನ್ಯಾಯಸಂಬದ್ಧಂ ಬ್ರವೀತಿ ವಿಧಿಯೋಜಿತಮ್।
12265009c ಅಧರ್ಮಸ್ತ್ರಿವಿಧಸ್ತಸ್ಯ ವರ್ಧತೇ ರಾಗಮೋಹಜಃ।।

ಪ್ರಶ್ನಿಸಿದರೆ ಶಾಸ್ತ್ರವಾಕ್ಯಗಳನ್ನು ಆಧರಿಸಿ ನ್ಯಾಯಬದ್ಧವಾಗಿ ತೋರುವ ಉತ್ತರವನ್ನೇ ನೀಡುತ್ತಾನೆ. ಅವನಲ್ಲಿ ರಾಗ-ಮೋಹಗಳಿಂದ ಹುಟ್ಟಿದ ಮೂರು ವಿಧದ ಅಧರ್ಮಗಳು ವರ್ಧಿಸುತ್ತವೆ.

12265010a ಪಾಪಂ ಚಿಂತಯತೇ ಚೈವ ಪ್ರಬ್ರವೀತಿ ಕರೋತಿ ಚ।
12265010c ತಸ್ಯಾಧರ್ಮಪ್ರವೃತ್ತಸ್ಯ ದೋಷಾನ್ಪಶ್ಯಂತಿ ಸಾಧವಃ।।

ಪಾಪಕರ್ಮಗಳ ಕುರಿತೇ ಚಿಂತಿಸುತ್ತಿರುತ್ತಾನೆ. ಪಾಪಕರ್ಮಗಳ ಕುರಿತೇ ಮಾತನಾಡುತ್ತಿರುತ್ತಾನೆ. ಮತ್ತು ಪಾಪಕರ್ಮಗಳನ್ನೇ ಮಾಡುತ್ತಿರುತ್ತಾನೆ. ಅಂತಹ ಅಧರ್ಮಪ್ರವೃತ್ತ ಮನುಷ್ಯನಲ್ಲಿ ಸಾಧುಗಳು ದೋಷಗಳನ್ನು ಕಾಣುತ್ತಾರೆ.

12265011a ಏಕಶೀಲಾಶ್ಚ ಮಿತ್ರತ್ವಂ ಭಜಂತೇ ಪಾಪಕರ್ಮಿಣಃ।
12265011c ಸ ನೇಹ ಸುಖಮಾಪ್ನೋತಿ ಕುತ ಏವ ಪರತ್ರ ವೈ।।

ಅದೇ ನಡತೆಯುಳ್ಳವರು ಪಾಪಕರ್ಮಿಗಳ ಮಿತ್ರತ್ವವನ್ನು ಮಾಡಿಕೊಳ್ಳುತ್ತಾರೆ. ಅಂಥವನು ಇಲ್ಲಿಯೇ ಸುಖವನ್ನು ಹೊಂದುವುದಿಲ್ಲ. ಇನ್ನು ಪರಲೋಕದಲ್ಲಿ ಯಾವ ಸುಖವನ್ನು ಪಡೆಯುತ್ತಾನೆ?

12265012a ಏವಂ ಭವತಿ ಪಾಪಾತ್ಮಾ ಧರ್ಮಾತ್ಮಾನಂ ತು ಮೇ ಶೃಣು।
12265012c ಯಥಾ ಕುಶಲಧರ್ಮಾ ಸ ಕುಶಲಂ ಪ್ರತಿಪದ್ಯತೇ।।

ಹೀಗೆ ಮನುಷ್ಯನು ಪಾಪಾತ್ಮನಾಗುತ್ತಾನೆ. ಇನ್ನು ಧರ್ಮಾತ್ಮನ ಕುರಿತು ನನ್ನಿಂದ ಕೇಳು. ಕುಶಲಧರ್ಮವನ್ನಾಚರಿಸುವವನು ಕುಶಲವನ್ನೇ ಪಡೆದುಕೊಳ್ಳುತ್ತಾನೆ.

12265013a ಯ ಏತಾನ್ಪ್ರಜ್ಞಯಾ ದೋಷಾನ್ಪೂರ್ವಮೇವಾನುಪಶ್ಯತಿ।
12265013c ಕುಶಲಃ ಸುಖದುಃಖಾನಾಂ ಸಾಧೂಂಶ್ಚಾಪ್ಯುಪಸೇವತೇ।।

ಪ್ರಜ್ಞೆಯಿಂದ ರಾಗ-ದ್ವೇಷಗಳ ದೋಷಗಳನ್ನು ಮೊದಲೇ ಕಂಡುಕೊಂಡಿದ್ದವನು ಸುಖ-ದುಃಖಗಳಲ್ಲಿ ಕುಶಲನಾಗಿರುತ್ತಾನೆ. ಸಾಧುಗಳನ್ನು ಸೇವಿಸುತ್ತಾನೆ.

12265014a ತಸ್ಯ ಸಾಧುಸಮಾಚಾರಾದಭ್ಯಾಸಾಚ್ಚೈವ ವರ್ಧತೇ।
12265014c ಪ್ರಜ್ಞಾ ಧರ್ಮೇ ಚ ರಮತೇ ಧರ್ಮಂ ಚೈವೋಪಜೀವತಿ।।

ಸಾಧುಗಳ ಸಂಗ-ಸಮಾಚಾರಗಳಿಂದ ಅವನ ಧರ್ಮಾಭ್ಯಾಸವು ವರ್ಧಿಸುತ್ತದೆ. ಅವನ ಪ್ರಜ್ಞೆಯು ಧರ್ಮದಲ್ಲಿ ರಮಿಸುತ್ತದೆ. ಧರ್ಮವನ್ನೇ ಆಶ್ರಯಿಸಿರುತ್ತದೆ.

12265015a ಸೋಽಥ ಧರ್ಮಾದವಾಪ್ತೇಷು ಧನೇಷು ಕುರುತೇ ಮನಃ।
12265015c ತಸ್ಯೈವ ಸಿಂಚತೇ ಮೂಲಂ ಗುಣಾನ್ಪಶ್ಯತಿ ಯತ್ರ ವೈ।।

ಧರ್ಮಪೂರ್ವಕವಾಗಿ ಪಡೆದ ಧನದಲ್ಲಿಯೇ ಅವನ ಮನಸ್ಸು ನೆಲೆಸಿರುತ್ತದೆ. ಅವನು ತನ್ನ ಮೂಲವನ್ನು ಎಲ್ಲಿ ಗುಣಗಳನ್ನು ಕಾಣುತ್ತಾನೋ ಅವುಗಳಿಂದಲೇ ಸಿಂಪಡಿಸುತ್ತಾನೆ.

12265016a ಧರ್ಮಾತ್ಮಾ ಭವತಿ ಹ್ಯೇವಂ ಮಿತ್ರಂ ಚ ಲಭತೇ ಶುಭಮ್।
12265016c ಸ ಮಿತ್ರಧನಲಾಭಾತ್ತು ಪ್ರೇತ್ಯ ಚೇಹ ಚ ನಂದತಿ।।

ಧರ್ಮಾತ್ಮನಿಗೆ ಅವನಂತಹ ಶುಭ ಮಿತ್ರನೇ ದೊರೆಯುತ್ತಾನೆ. ಆ ಮಿತ್ರಧನಲಾಭದಿಂದ ಅವನು ಇಹದಲ್ಲಿಯೂ ಪರದಲ್ಲಿಯೂ ಆನಂದಿಸುತ್ತಾನೆ.

12265017a ಶಬ್ದೇ ಸ್ಪರ್ಶೇ ತಥಾ ರೂಪೇ ರಸೇ ಗಂಧೇ ಚ ಭಾರತ।
12265017c ಪ್ರಭುತ್ವಂ ಲಭತೇ ಜಂತುರ್ಧರ್ಮಸ್ಯೈತತ್ಫಲಂ ವಿದುಃ।।

ಭಾರತ! ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳ ಮೇಲೆ ಪ್ರಭುತ್ವವನ್ನು ಪಡೆದುಕೊಳ್ಳುತ್ತಾನೆ. ಇದೇ ಜೀವಿಗೆ ಧರ್ಮದಿಂದ ದೊರೆಯುವ ಫಲ ಎಂದು ತಿಳಿದಿದ್ದಾರೆ.

12265018a ಸ ಧರ್ಮಸ್ಯ ಫಲಂ ಲಬ್ಧ್ವಾ ನ ತೃಪ್ಯತಿ ಯುಧಿಷ್ಠಿರ।
12265018c ಅತೃಪ್ಯಮಾಣೋ ನಿರ್ವೇದಮಾದತ್ತೇ ಜ್ಞಾನಚಕ್ಷುಷಾ।।

ಯುಧಿಷ್ಠಿರ! ಅವನು ಧರ್ಮದ ಫಲವನ್ನು ಪಡೆದು ತೃಪ್ತನಾಗುವುದಿಲ್ಲ. ಶುಭಾಶುಭಫಲಗಳಿಂದ ತೃಪ್ತಿಯನ್ನು ಹೊಂದದೇ ಜ್ಞಾನಚಕ್ಷುಷುವು ವೈರಾಗ್ಯವನ್ನು ಹೊಂದುತ್ತಾನೆ.

12265019a ಪ್ರಜ್ಞಾಚಕ್ಷುರ್ಯದಾ ಕಾಮೇ ದೋಷಮೇವಾನುಪಶ್ಯತಿ।
12265019c ವಿರಜ್ಯತೇ ತದಾ ಕಾಮಾನ್ನ ಚ ಧರ್ಮಂ ವಿಮುಂಚತಿ।।

ಪ್ರಜ್ಞಾಚಕ್ಷುವು ಕಾಮದಲ್ಲಿ ದೋಷವನ್ನೇ ಯಾವಾಗ ಕಾಣುತ್ತಾನೋ ಆಗ ಅವನು ಕಾಮದಿಂದ ಮಿಮುಕ್ತನಾಗಿ ಧರ್ಮವನ್ನು ತೊರೆಯುವುದಿಲ್ಲ.

12265020a ಸರ್ವತ್ಯಾಗೇ ಚ ಯತತೇ ದೃಷ್ಟ್ವಾ ಲೋಕಂ ಕ್ಷಯಾತ್ಮಕಮ್।
12265020c ತತೋ ಮೋಕ್ಷಾಯ ಯತತೇ ನಾನುಪಾಯಾದುಪಾಯತಃ।।

ಕ್ಷಯಾತ್ಮಕ ಲೋಕವನ್ನು ನೋಡಿ ಸರ್ವತ್ಯಾಗಕ್ಕೆ ಪ್ರಯತ್ನಿಸುತ್ತಾನೆ. ಅನಂತರ ಉಪಾಯದಿಂದಲೇ ಮೋಕ್ಷಕ್ಕೆ ಪ್ರಯತ್ನಿಸುತ್ತಾನೆ.

12265021a ಶನೈರ್ನಿರ್ವೇದಮಾದತ್ತೇ ಪಾಪಂ ಕರ್ಮ ಜಹಾತಿ ಚ।
12265021c ಧರ್ಮಾತ್ಮಾ ಚೈವ ಭವತಿ ಮೋಕ್ಷಂ ಚ ಲಭತೇ ಪರಮ್।।

ನಿಧಾನವಾಗಿ ವೈರಾಗ್ಯವನ್ನು ಹೊಂದಿ ಸಾಧಕನು ಪಾಪಕರ್ಮಗಳನ್ನು ನಾಶಪಡಿಸುತ್ತಾನೆ. ಧರ್ಮಾತ್ಮನೂ ಆಗುತ್ತಾನೆ ಮತ್ತು ಪರಮ ಮೋಕ್ಷವನ್ನು ಹೊಂದುತ್ತಾನೆ.

12265022a ಏತತ್ತೇ ಕಥಿತಂ ತಾತ ಯನ್ಮಾಂ ತ್ವಂ ಪರಿಪೃಚ್ಚಸಿ।
12265022c ಪಾಪಂ ಧರ್ಮಂ ತಥಾ ಮೋಕ್ಷಂ ನಿರ್ವೇದಂ ಚೈವ ಭಾರತ।।

ಭಾರತ! ಅಯ್ಯಾ! ನೀನು ನನಗೆ ಕೇಳಿದ ಪಾಪ, ಧರ್ಮ, ಮೋಕ್ಷ ಮತ್ತು ವೈರಾಗ್ಯಗಳ ಕುರಿತು ನಿನಗೆ ಹೇಳಿದ್ದೇನೆ.

12265023a ತಸ್ಮಾದ್ಧರ್ಮೇ ಪ್ರವರ್ತೇಥಾಃ ಸರ್ವಾವಸ್ಥಂ ಯುಧಿಷ್ಠಿರ।
12265023c ಧರ್ಮೇ ಸ್ಥಿತಾನಾಂ ಕೌಂತೇಯ ಸಿದ್ಧಿರ್ಭವತಿ ಶಾಶ್ವತೀ।।

ಯುಧಿಷ್ಠಿರ! ಆದುದರಿಂದ ಸರ್ವಾವಸ್ಥೆಯಲ್ಲಿಯೂ ಧರ್ಮದಲ್ಲಿಯೇ ಪ್ರವರ್ತಿಸಬೇಕು. ಕೌಂತೇಯ! ಧರ್ಮದಲ್ಲಿ ಸ್ಥಿತರಾಗಿರುವವರಿಗೆ ಶಾಶ್ವತ ಸಿದ್ಧಿಯಾಗುತ್ತದೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಚತುಃಪ್ರಾಶ್ನಿಕೋ ನಾಮ ಪಂಚಷಷ್ಟ್ಯಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಚತುಃಪ್ರಾಶ್ನಿಕ ಎನ್ನುವ ಇನ್ನೂರಾಅರವತ್ತೈದನೇ ಅಧ್ಯಾಯವು.