ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 264
ಸಾರ
ಯಜ್ಞದಲ್ಲಿ ಹಿಂಸೆಯ ನಿಂದೆ ಮತ್ತು ಅಹಿಂಸೆಯ ಪ್ರಶಂಸೆ (1-19).
12264001 ಯುಧಿಷ್ಠಿರ ಉವಾಚ।
12264001a ಬಹೂನಾಂ ಯಜ್ಞತಪಸಾಮೇಕಾರ್ಥಾನಾಂ ಪಿತಾಮಹ।
12264001c ಧರ್ಮಾರ್ಥಂ ನ ಸುಖಾರ್ಥಾರ್ಥಂ ಕಥಂ ಯಜ್ಞಃ ಸಮಾಹಿತಃ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಅನೇಕ ವಿಧದ ಯಜ್ಞ ಮತ್ತು ತಪಸ್ಸುಗಳ ಉದ್ದೇಶಗಳೂ ಒಂದೇ ಆಗಿದೆ. ಸುಖಕ್ಕಾಗಿ ಅಲ್ಲದೇ ಧರ್ಮಕ್ಕಾಗಿ ಮಾಡುವ ಯಜ್ಞಗಳು ಯಾವುವು ಮತ್ತು ಅವುಗಳನ್ನು ಹೇಗೆ ಮಾಡಬೇಕು?”
12264002 ಭೀಷ್ಮ ಉವಾಚ।
12264002a ಅತ್ರ ತೇ ವರ್ತಯಿಷ್ಯಾಮಿ ನಾರದೇನಾನುಕೀರ್ತಿತಮ್।
12264002c ಉಂಚವೃತ್ತೇಃ ಪುರಾವೃತ್ತಂ ಯಜ್ಞಾರ್ಥೇ ಬ್ರಾಹ್ಮಣಸ್ಯ ಹ।।
ಭೀಷ್ಮನು ಹೇಳಿದನು: “ಹಿಂದೆ ಉಂಚವೃತ್ತಿಯಿಂದ ಜೀವನ ನಿರ್ವಹಿಸುತ್ತಿದ್ದ ಬ್ರಾಹ್ಮಣನು ಮಾಡಿದ ಯಜ್ಞದ ಕುರಿತಾಗಿ ನಾರದನು ನನಗೆ ಹೇಳಿದ್ದುದನ್ನು ನಿನಗೆ ಹೇಳುತ್ತೇನೆ.
12264003a ರಾಷ್ಟ್ರೇ ಧರ್ಮೋತ್ತರೇ ಶ್ರೇಷ್ಠೇ ವಿದರ್ಭೇಷ್ವಭವದ್ದ್ವಿಜಃ।
12264003c ಉಂಚವೃತ್ತಿರೃಷಿಃ ಕಶ್ಚಿದ್ಯಜ್ಞೇ ಯಜ್ಞಂ ಸಮಾದಧೇ।।
ಧರ್ಮಪ್ರಧಾನವಾಗಿದ್ದ ವಿದರ್ಭ ದೇಶದಲ್ಲಿ ಉಂಚವೃತ್ತಿಯಲ್ಲಿ ನಿರತನಾಗಿದ್ದ ಋಷಿಯೋರ್ವನು ಒಂದು ಯಜ್ಞಮಾಡಲು ಸಂಕಲ್ಪಿಸಿದನು.
12264004a ಶ್ಯಾಮಾಕಮಶನಂ ತತ್ರ ಸೂರ್ಯಪತ್ನೀ ಸುವರ್ಚಲಾ।
12264004c ತಿಕ್ತಂ ಚ ವಿರಸಂ ಶಾಕಂ ತಪಸಾ ಸ್ವಾದುತಾಂ ಗತಮ್।।
ಅವನು ಸಾಮೆ ಅಕ್ಕಿ, ಸೂರ್ಯಪರ್ಣಿ (ಕಾಡಿನ ಉದ್ದು) ಮತ್ತು ಸುವರ್ಚಲೆ (ಬ್ರಾಹ್ಮೀಲತೆ) ಯನ್ನೇ ಊಟಕ್ಕೆ ಉಪಯೋಗಿಸುತ್ತಿದ್ದನು. ಕಹಿಯಾದ ಮತ್ತು ರುಚಿಯಿಲ್ಲದ ಅವುಗಳು ಅವನ ತಪಸ್ಸಿನಿಂದ ಸ್ವಾದುತ್ವವನ್ನು ಪಡೆಯುತ್ತಿದ್ದವು.
12264005a ಉಪಗಮ್ಯ ವನೇ ಪೃಥ್ವೀಂ ಸರ್ವಭೂತವಿಹಿಂಸಯಾ।
12264005c ಅಪಿ ಮೂಲಫಲೈರಿಜ್ಯೋ ಯಜ್ಞಃ ಸ್ವರ್ಗ್ಯಃ ಪರಂತಪ।।
ಪರಂತಪ! ಭೂಮಿಯಲ್ಲಿರುವ ಸರ್ವಭೂತಗಳಿಗೂ ಅಹಿಂಸಕನಾಗಿದ್ದ ಮತ್ತು ಸ್ವರ್ಗಕ್ಕೆ ಹೋಗ ಬಯಸಿದ್ದ ಅವನು ವನಕ್ಕೆ ಹೋಗಿ ಆ ಯಜ್ಞದಲ್ಲಿ ಫಲಮೂಲಗಳನ್ನೇ ಅರ್ಪಿಸಿದನು.
12264006a ತಸ್ಯ ಭಾರ್ಯಾ ವ್ರತಕೃಶಾ ಶುಚಿಃ ಪುಷ್ಕರಚಾರಿಣೀ।
12264006c ಯಜ್ಞಪತ್ನೀತ್ವಮಾನೀತಾ ಸತ್ಯೇನಾನುವಿಧೀಯತೇ।
12264006e ಸಾ ತು ಶಾಪಪರಿತ್ರಸ್ತಾ ನ ಸ್ವಭಾವಾನುವರ್ತಿನೀ।।
ಅವನ ಭಾರ್ಯೆ ಪುಷ್ಕರಚಾರಿಣಿಯು ವ್ರತದಿಂದ ಶುಚಿಯೂ ಕೃಶಳೂ ಆಗಿದ್ದಳು. ಋಷಿ ಸತ್ಯನು ಅವಳಿಗೆ ಯಜ್ಞಪತ್ನಿಯಾಗಲು ಆದೇಶವನ್ನಿತ್ತನು. ಅನುಸರಿಸುವ ಸ್ವಭಾವದವಳಾಗಿದ್ದ ಅವಳಾದರೋ ಶಾಪಕ್ಕೆ ಹೆದರಿ ಒಪ್ಪಿಕೊಂಡಳು.
12264007a ಮಯೂರಜೀರ್ಣಪರ್ಣಾನಾಂ ವಸ್ತ್ರಂ ತಸ್ಯಾಶ್ಚ ಪರ್ಣಿನಾಮ್।
12264007c ಅಕಾಮಾಯಾಃ ಕೃತಂ ತತ್ರ ಯಜ್ಞೇ ಹೋತ್ರಾನುಮಾರ್ಗತಃ।।
ಅವಳು ಹಳೆಯ ನವಿಲುಗರಿಗಳನ್ನು ಒಟ್ಟಾಗಿ ಸೇರಿಸಿ ಹೆಣೆದಿದ್ದ ವಸ್ತ್ರವನ್ನು ಉಟ್ಟಿದ್ದಳು. ಇಷ್ಟವಿಲ್ಲದಿದ್ದರೂ ಆ ಯಜ್ಞದಲ್ಲಿ ಹೋತೃವಿನ ಆಜ್ಞೆಯಂತೆ ಅವಳು ಕಾರ್ಯನಿರ್ವಹಿಸುತ್ತಿದ್ದಳು.
12264008a ಶುಕ್ರಸ್ಯ ಪುನರಾಜಾತಿರಪಧ್ಯಾನಾದಧರ್ಮವಿತ್।
12264008c ತಸ್ಮಿನ್ವನೇ ಸಮೀಪಸ್ಥೋ ಮೃಗೋಽಭೂತ್ಸಹಚಾರಿಕಃ।
12264008e ವಚೋಭಿರಬ್ರವೀತ್ಸತ್ಯಂ ತ್ವಯಾ ದುಷ್ಕೃತಕಂ ಕೃತಮ್।।
ಆ ವನದಲ್ಲಿ ಸಮೀಪದಲ್ಲಿಯೇ ಶುಕ್ರನ ವಂಶಜನಾದ ಓರ್ವನು ಮೃಗರೂಪದಲ್ಲಿ ವಾಸಿಸುತ್ತಿದ್ದನು. ಅವನು ಅಸೂಯಕನೂ ಅಧರ್ಮಿಯೂ ಆಗಿದ್ದನು. ಅವನು ಸತ್ಯನಿಗೆ ಈ ಮಾತನ್ನಾಡಿದನು: “ನೀನು ದುಷ್ಕೃತ ಕೃತ್ಯವನ್ನು ಮಾಡಲು ಹೊರಟಿರುವೆ.
12264009a ಯದಿ ಮಂತ್ರಾಂಗಹೀನೋಽಯಂ ಯಜ್ಞೋ ಭವತಿ ವೈಕೃತಃ।
12264009c ಮಾಂ ಭೋಃ ಪ್ರಕ್ಷಿಪ ಹೋತ್ರೇ ತ್ವಂ ಗಚ್ಚ ಸ್ವರ್ಗಮತಂದ್ರಿತಃ।।
ಮಂತ್ರಾಂಗಹೀನವಾದ ಈ ಯಜ್ಞವು ಸರಿಯಾಗುವುದಿಲ್ಲ. ಭೋ! ಆದುದರಿಂದ ನನ್ನನ್ನು ಹವಿಸ್ಸನ್ನಾಗಿ ಅಗ್ನಿಯಲ್ಲಿ ಹಾಕು ಮತ್ತು ಅನಾಯಾಸನಾಗಿ ಸ್ವರ್ಗಕ್ಕೆ ಹೋಗು!”
12264010a ತತಸ್ತು ಯಜ್ಞೇ ಸಾವಿತ್ರೀ ಸಾಕ್ಷಾತ್ತಂ ಸಂನ್ಯಮಂತ್ರಯತ್।
12264010c ನಿಮಂತ್ರಯಂತೀ ಪ್ರತ್ಯುಕ್ತಾ ನ ಹನ್ಯಾಂ ಸಹವಾಸಿನಮ್।।
ಆಗ ಸಾವಿತ್ರಿಯೇ ಆ ಯಜ್ಞದಲ್ಲಿ ಸಾಕ್ಷಾತ್ತಾಗಿ ಅವನಿಗೆ ಹಾಗೆಯೇ ಮಾಡಲು ಸಲಹೆಯನ್ನಿತ್ತಳು. ಅವಳು ಒತ್ತಾಯಿಸಿದರೂ ಮುನಿಯು “ನನ್ನ ಸಹವಾಸಿಯನ್ನು ಕೊಲ್ಲುವುದಿಲ್ಲ” ಎಂದು ಉತ್ತರಿಸಿದನು.
12264011a ಏವಮುಕ್ತಾ ನಿವೃತ್ತಾ ಸಾ ಪ್ರವಿಷ್ಟಾ ಯಜ್ಞಪಾವಕಮ್।
12264011c ಕಿಂ ನು ದುಶ್ಚರಿತಂ ಯಜ್ಞೇ ದಿದೃಕ್ಷುಃ ಸಾ ರಸಾತಲಮ್।।
ಸತ್ಯನು ಹೀಗೆ ಹೇಳಲು ಸಾವಿತ್ರಿಯು ಹಿಂದಿರುಗಿ ಯಜ್ಞಾಗ್ನಿಯನ್ನು ಪ್ರವೇಶಿಸಿದಳು. ಯಜ್ಞದಲ್ಲಿ ನಡೆಯುವ ದುಶ್ಚರಿತವನ್ನು ನೋಡಲು ಬಂದಿದ್ದ ಅವಳು ರಸಾತಲವನ್ನು ಸೇರಿದಳು.
12264012a ಸಾ ತು ಬದ್ಧಾಂಜಲಿಂ ಸತ್ಯಮಯಾಚದ್ಧರಿಣಂ ಪುನಃ।
12264012c ಸತ್ಯೇನ ಸಂಪರಿಷ್ವಜ್ಯ ಸಂದಿಷ್ಟೋ ಗಮ್ಯತಾಮಿತಿ।।
ಜಿಂಕೆಯು ಪುನಃ ಕೈಮುಗಿದು ಸತ್ಯನನ್ನು ಯಾಚಿಸಿತು. ಆದರೆ ಸತ್ಯನು ಅದನ್ನು ಬಿಗಿದಪ್ಪಿ “ನೀನು ಹೊರಟು ಹೋಗು” ಎಂದನು.
12264013a ತತಃ ಸ ಹರಿಣೋ ಗತ್ವಾ ಪದಾನ್ಯಷ್ಟೌ ನ್ಯವರ್ತತ।
12264013c ಸಾಧು ಹಿಂಸಯ ಮಾಂ ಸತ್ಯ ಹತೋ ಯಾಸ್ಯಾಮಿ ಸದ್ಗತಿಮ್।।
ಆಗ ಜಿಂಕೆಯು ಎಂಟು ಹೆಜ್ಜೆ ಹೊರಟು ಪುನಃ ಹಿಂದಿರುಗಿ ಹೇಳಿತು: “ಸತ್ಯ! ನನ್ನನ್ನು ಕೊಲ್ಲುವುದು ಸಾಧುವಾದುದು. ಹತನಾದ ನಾನು ಸದ್ಗತಿಯನ್ನು ಪಡೆದುಕೊಳ್ಳುತ್ತೇನೆ.
12264014a ಪಶ್ಯ ಹ್ಯಪ್ಸರಸೋ ದಿವ್ಯಾ ಮಯಾ ದತ್ತೇನ ಚಕ್ಷುಷಾ।
12264014c ವಿಮಾನಾನಿ ವಿಚಿತ್ರಾಣಿ ಗಂಧರ್ವಾಣಾಂ ಮಹಾತ್ಮನಾಮ್।।
ನಾನು ಕೊಟ್ಟಿರುವ ದಿವ್ಯದೃಷ್ಟಿಯಿಂದ ಈ ಅಪ್ಸರೆಯರನ್ನೂ, ವಿಚಿತ್ರ ವಿಮಾನಗಳನ್ನೂ, ಮಹಾತ್ಮಾ ಗಂಧರ್ವರನ್ನೂ ನೋಡು.”
12264015a ತತಃ ಸುರುಚಿರಂ ದೃಷ್ಟ್ವಾ ಸ್ಪೃಹಾಲಗ್ನೇನ ಚಕ್ಷುಷಾ।
12264015c ಮೃಗಮಾಲೋಕ್ಯ ಹಿಂಸಾಯಾಂ ಸ್ವರ್ಗವಾಸಂ ಸಮರ್ಥಯತ್।।
ಆಗ ಜಿಂಕೆಯು ನೀಡಿದ್ದ ಕಣ್ಣುಗಳಿಂದ ಅದನ್ನು ಬಹಳ ಹೊತ್ತು ನೋಡಿ ಸತ್ಯನು ಜಿಂಕೆಯನ್ನು ಅವಲೋಕಿಸಿ ಹಿಂಸೆಯಿಂದಲೂ ಸ್ವರ್ಗವಾಸವು ಸಮರ್ಥವಾಗುತ್ತದೆ ಎಂದು ಯೋಚಿಸಿದನು.
12264016a ಸ ತು ಧರ್ಮೋ ಮೃಗೋ ಭೂತ್ವಾ ಬಹುವರ್ಷೋಷಿತೋ ವನೇ।
12264016c ತಸ್ಯ ನಿಷ್ಕೃತಿಮಾಧತ್ತ ನ ಹ್ಯಸೌ ಯಜ್ಞಸಂವಿಧಿಃ।।
ಧರ್ಮನು ಜಿಂಕೆಯಾಗಿ ಅನೇಕ ವರ್ಷಗಳು ಆ ವನದಲ್ಲಿ ವಾಸಿಸಿಕೊಂಡಿದ್ದನು. ಧರ್ಮನು ಯೋಚಿಸಿದನು: “ಪಶುವಧೆಯು ಯಜ್ಞಸಂವಿಧಿಯಲ್ಲ. ಮುನಿಯನ್ನು ಉದ್ಧರಿಸಬೇಕು.
12264017a ತಸ್ಯ ತೇನ ತು ಭಾವೇನ ಮೃಗಹಿಂಸಾತ್ಮನಸ್ತದಾ।
12264017c ತಪೋ ಮಹತ್ಸಮುಚ್ಚಿನ್ನಂ ತಸ್ಮಾದ್ಧಿಂಸಾ ನ ಯಜ್ಞಿಯಾ।।
ಇವನ ಈ ಮೃಗಹಿಂಸಾತ್ಮಕ ಭಾವದಿಂದ ಇವನು ಸಂಚಯಿಸಿಕೊಂಡಿದ್ದ ಮಹಾ ತಪಸ್ಸಿನ ಫಲವು ನಷ್ಟವಾಗಿಹೋಗುತ್ತದೆ. ಆದುದರಿಂದ ಯಜ್ಞದಲ್ಲಿ ಹಿಂಸೆಯು ಸರಿಯಲ್ಲ.”
12264018a ತತಸ್ತಂ ಭಗವಾನ್ ಧರ್ಮೋ ಯಜ್ಞಂ ಯಾಜಯತ ಸ್ವಯಮ್।
12264018c ಸಮಾಧಾನಂ ಚ ಭಾರ್ಯಾಯಾ ಲೇಭೇ ಸ ತಪಸಾ ಪರಮ್।।
ಅನಂತರ ಭಗವಾನ್ ಧರ್ಮನು ಸ್ವಯಂ ತಾನೇ ಅವನಿಗೆ ಆ ಯಜ್ಞವನ್ನು ನಡೆಸಿಕೊಟ್ಟನು. ಆ ಮುನಿಯು ತನ್ನ ಭಾರ್ಯೆಯೊಂದಿಗೆ ಪರಮ ತಪಸ್ಸಿನ ಸಮಾಧಾನವನ್ನು ಹೊಂದಿದನು.
12264019a ಅಹಿಂಸಾ ಸಕಲೋ ಧರ್ಮೋ ಹಿಂಸಾ ಯಜ್ಞೇಽಸಮಾಹಿತಾ।
12264019c ಸತ್ಯಂ ತೇಽಹಂ ಪ್ರವಕ್ಷ್ಯಾಮಿ ಯೋ ಧರ್ಮಃ ಸತ್ಯವಾದಿನಾಮ್।।
ಅಹಿಂಸೆಯೇ ಸಕಲ ಧರ್ಮವು. ಯಜ್ಞದಲ್ಲಿ ಹಿಂಸೆಯು ಇರುವುದಿಲ್ಲ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ಇದು ಸತ್ಯವಾದಿಗಳ ಧರ್ಮವು.”