259: ದ್ಯುಮತ್ಸೇನಸತ್ಯವತ್ಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 259

ಸಾರ

ಅಹಿಂಸಾಪೂರ್ವಕವಾದ ರಾಜ್ಯಶಾಸನದ ಕುರಿತಾಗಿ ದ್ಯುಮತ್ಸೇನ-ಸತ್ಯವಾನರ ಸಂವಾದ (1-35).

12259001 ಯುಧಿಷ್ಠಿರ ಉವಾಚ।
12259001a ಕಥಂ ರಾಜಾ ಪ್ರಜಾ ರಕ್ಷೇನ್ನ ಚ ಕಿಂ ಚಿತ್ ಪ್ರತಾಪಯೇತ್1
12259001c ಪೃಚ್ಚಾಮಿ ತ್ವಾಂ ಸತಾಂ ಶ್ರೇಷ್ಠ ತನ್ಮೇ ಬ್ರೂಹಿ ಪಿತಾಮಹ।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ಸತ್ಪುರುಷರಲ್ಲಿ ಶ್ರೇಷ್ಠ! ಯಾರನ್ನೂ ಹಿಂಸಿಸದೇ ರಾಜನಾದವನು ಹೇಗೆ ಪ್ರಜೆಗಳನ್ನು ರಕ್ಷಿಸಬೇಕು? ಇದನ್ನು ನಿನ್ನಲ್ಲಿ ಕೇಳುತ್ತೇನೆ. ಅದನ್ನು ನನಗೆ ಹೇಳು.”

12259002 ಭೀಷ್ಮ ಉವಾಚ।
12259002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12259002c ದ್ಯುಮತ್ಸೇನಸ್ಯ ಸಂವಾದಂ ರಾಜ್ಞಾ ಸತ್ಯವತಾ ಸಹ।।

ಭೀಷ್ಮನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ, ಸತ್ಯವಾನನೊಂದಿಗೆ ರಾಜಾ ದ್ಯುಮತ್ಸೇನ2ನ, ಸಂವಾದವನ್ನು ಉದಾಹರಿಸುತ್ತಾರೆ.

12259003a ಅವ್ಯಾಹೃತಂ ವ್ಯಾಜಹಾರ ಸತ್ಯವಾನಿತಿ ನಃ ಶ್ರುತಮ್।
12259003c ವಧಾಯ ನೀಯಮಾನೇಷು ಪಿತುರೇವಾನುಶಾಸನಾತ್।।

ತಂದೆಯ ಅನುಶಾಸನದಂತೆ ಓರ್ವನನ್ನು ವಧೆಗೆ ಕೊಂಡೊಯ್ಯುತ್ತಿದ್ದಾಗ ಸತ್ಯವಾನನು ಅದಕ್ಕೆ ಮೊದಲು ಯಾರೂ ಮಾಡದಿದ್ದುದನ್ನು ಮಾಡಿದನೆಂದು ನಾವು ಕೇಳಿದ್ದೇವೆ.

12259004a ಅಧರ್ಮತಾಂ ಯಾತಿ ಧರ್ಮೋ ಯಾತ್ಯಧರ್ಮಶ್ಚ ಧರ್ಮತಾಮ್।
12259004c ವಧೋ ನಾಮ ಭವೇದ್ಧರ್ಮೋ ನೈತದ್ ಭವಿತುಮರ್ಹತಿ।।

“ವಧಿಸುವುದು ಧರ್ಮವೆಂದಾದರೆ, ಧರ್ಮವು ಅಧರ್ಮತ್ವವನ್ನು ಪಡೆದುಕೊಳ್ಳುತ್ತದೆ. ಅಧರ್ಮವೂ ಧರ್ಮತ್ವವನ್ನು ಪಡೆದುಕೊಳ್ಳುತ್ತದೆ. ಅದು ಹಾಗಾಗಬಾರದು!” ಎಂದನು.

12259005 ದ್ಯುಮತ್ಸೇನ ಉವಾಚ।
12259005a ಅಥ ಚೇದವಧೋ ಧರ್ಮೋ ಧರ್ಮಃ3 ಕೋ ಜಾತು ಚಿದ್ಭವೇತ್।
12259005c ದಸ್ಯವಶ್ಚೇನ್ನ ಹನ್ಯೇರನ್ ಸತ್ಯವನ್ ಸಂಕರೋ ಭವೇತ್।।

ದ್ಯುಮತ್ಸೇನನು ಹೇಳಿದನು: “ಸತ್ಯವನ್! ವಧಿಸದಿರುವುದು ಧರ್ಮವೆಂದಾದರೆ ಏನಾಗಬಹುದು? ದಸ್ಯುಗಳನ್ನು ಕೊಲ್ಲದಿದ್ದರೆ ಧರ್ಮಸಂಕರವಾಗುತ್ತದೆ.

12259006a ಮಮೇದಮಿತಿ ನಾಸ್ಯೈತತ್ ಪ್ರವರ್ತೇತ ಕಲೌ ಯುಗೇ।
12259006c ಲೋಕಯಾತ್ರಾ ನ ಚೈವ ಸ್ಯಾದಥ ಚೇದ್ವೇತ್ಥ ಶಂಸ ನಃ।।

ಕಲಿಯುಗದಲ್ಲಿ ಇದು ನನ್ನದು ಅವನದ್ದಲ್ಲ ಎನ್ನುವುದೇ ನಡೆಯುತ್ತದೆ. ಲೋಕವ್ಯವಹಾರಗಳೇ ನಡೆಯುವುದಿಲ್ಲ. ಇದರ ಕುರಿತು ನಿನ್ನಲ್ಲಿ ಉಪಾಯವೇನಾದರೂ ಇದ್ದರೆ ನಮಗೆ ಹೇಳು.”

12259007 ಸತ್ಯವಾನುವಾಚ।
12259007a ಸರ್ವ ಏವ ತ್ರಯೋ ವರ್ಣಾಃ ಕಾರ್ಯಾ ಬ್ರಾಹ್ಮಣಬಂಧನಾಃ।
12259007c ಧರ್ಮಪಾಶನಿಬದ್ಧಾನಾಮಲ್ಪೋ ವ್ಯಪಚರಿಷ್ಯತಿ।।

ಸತ್ಯವಾನನು ಹೇಳಿದನು: “ಮೂರೂ ವರ್ಣದವರನ್ನೂ ಬ್ರಾಹ್ಮಣರಿಗೆ ಅಧೀನರನ್ನಾಗಿ ಮಾಡಬೇಕು. ಈ ರೀತಿ ಧರ್ಮಪಾಶದಿಂದ ಕಟ್ಟಲ್ಪಟ್ಟಾಗ ಉಳಿದವರು ಹಾಗೆಯೇ ನಡೆದುಕೊಳ್ಳುತ್ತಾರೆ.

12259008a ಯೋ ಯಸ್ತೇಷಾಮಪಚರೇತ್ತಮಾಚಕ್ಷೀತ ವೈ ದ್ವಿಜಃ।
12259008c ಅಯಂ ಮೇ ನ ಶೃಣೋತೀತಿ ತಸ್ಮಿನ್ರಾಜಾ ಪ್ರಧಾರಯೇತ್।।

ಅವರಲ್ಲಿ ಯಾರಾದರೂ ಅಪಚಾರವನ್ನೆಸಗಿದರೆ ದ್ವಿಜನು “ಇವನು ನನ್ನ ಮಾತನ್ನು ಕೇಳುತ್ತಿಲ್ಲ” ಎಂದು ರಾಜನಿಗೆ ದೂರಿಡಬೇಕು. ಆಗ ರಾಜನು ಅಪರಾಧಿಗೆ ಶಿಕ್ಷೆಯನ್ನು ವಿಧಿಸಬೇಕು.

12259009a ತತ್ತ್ವಾಭೇದೇನ ಯಚ್ಚಾಸ್ತ್ರಂ ತತ್ಕಾರ್ಯಂ ನಾನ್ಯಥಾ ವಧಃ।
12259009c ಅಸಮೀಕ್ಷ್ಯೈವ ಕರ್ಮಾಣಿ ನೀತಿಶಾಸ್ತ್ರಂ ಯಥಾವಿಧಿ।।

ಶಿಕ್ಷಿಸುವಾಗ ಪಂಚಭೂತಗಳು ಪ್ರತ್ಯೇಕವಾಗದ ರೀತಿಯಲ್ಲಿ ಶಿಕ್ಷಿಸಬೇಕು. ಅನ್ಯಥಾ ವಧಿಸಬಾರದು. ನೀತಿಶಾಸ್ತ್ರದಂತೆ ಯಥಾವಿಧಿಯಾಗಿ ಕರ್ಮಗಳನ್ನು ಸಮೀಕ್ಷಿಸದೇ ಶಿಕ್ಷಿಸಬಾರದು.

12259010a ದಸ್ಯೂನ್ ಹಿನಸ್ತಿ ವೈ ರಾಜಾ ಭೂಯಸೋ ವಾಪ್ಯನಾಗಸಃ।
12259010c ಭಾರ್ಯಾ ಮಾತಾ ಪಿತಾ ಪುತ್ರೋ ಹನ್ಯತೇ ಪುರುಷೇ ಹತೇ।
12259010e ಪರೇಣಾಪಕೃತೇ ರಾಜಾ ತಸ್ಮಾತ್ಸಮ್ಯಕ್ ಪ್ರಧಾರಯೇತ್।।

ರಾಜನು ದಸ್ಯರನ್ನು ವಧಿಸುವುದರೊಂದಿಗೆ ಅನೇಕ ನಿರಪರಾಧಿಗಳನ್ನೂ ವಧಿಸುತ್ತಾನೆ. ಪುರುಷನು ಹತನಾಗಲು ಅವನ ಭಾರ್ಯೆ, ಮಾತಾ, ಪಿತಾ ಮತ್ತು ಪುತ್ರರೂ ಹತರಾಗುತ್ತಾರೆ. ಪರರಿಂದ ಅಪಕೃತನಾದ ರಾಜನು ಅವರಿಗೆ ಶಿಕ್ಷೆಯನ್ನು ವಿಧಿಸುವ ಮೊದಲು ಚೆನ್ನಾಗಿ ವಿಚಾರಮಾಡಬೇಕು.

12259011a ಅಸಾಧುಶ್ಚೈವ ಪುರುಷೋ ಲಭತೇ ಶೀಲಮೇಕದಾ।
12259011c ಸಾಧೋಶ್ಚಾಪಿ ಹ್ಯಸಾಧುಭ್ಯೋ ಜಾಯತೇಽಶೋಭನಾ ಪ್ರಜಾ4।।

ಅಸಾಧುವಾಗಿದ್ದರೂ ಪುರುಷನು ಒಮ್ಮೊಮ್ಮೆ ಉತ್ತಮ ಶೀಲವನ್ನು ಪಡೆದುಕೊಳ್ಳುತ್ತಾನೆ. ಸಾಧು ಮತ್ತು ಅಸಾಧುಗಳಿಬ್ಬರೂ ಅಶೋಭನ ಪ್ರಜೆಗಳಿಗೆ ಜನ್ಮವೀಯುತ್ತಾರೆ.

12259012a ನ ಮೂಲಘಾತಃ ಕರ್ತವ್ಯೋ ನೈಷ ಧರ್ಮಃ ಸನಾತನಃ।
12259012c ಅಪಿ ಖಲ್ವವಧೇನೈವ ಪ್ರಾಯಶ್ಚಿತ್ತಂ ವಿಧೀಯತೇ।।

ವಂಶದ ಮೂಲವನ್ನೇ ನಾಶಮಾಡಬಾರದು. ಅದು ಸನಾತನ ಧರ್ಮವಲ್ಲ. ವಧೆಗಿಂತಲೂ ಅಲ್ಪವಾದ ಪ್ರಾಯಶ್ಚಿತ್ತವನ್ನೇ ವಿಧಿಸಬೇಕು.

12259013a ಉದ್ವೇಜನೇನ ಬಂಧೇನ ವಿರೂಪಕರಣೇನ ಚ।
12259013c ವಧದಂಡೇನ ತೇ ಕ್ಲೇಶ್ಯಾ ನ ಪುರೋಽಹಿತಸಂಪದಾ।।

ಉದ್ವೇಗವನ್ನುಂಟುಮಾಡುವುದು, ಬಂಧನ, ವಿರೂಪಗೊಳಿಸುವುದು ಮೊದಲಾದ ಶಿಕ್ಷೆಗಳನ್ನು ವಿಧಿಸಬೇಕೇ ಹೊರತು ವಧದಂಡನೆಯನ್ನು ಕೊಟ್ಟು ಅವನ ಬಂಧು-ಮಿತ್ರರಿಗೆ ಕ್ಲೇಶವುಂಟಾಗುವಂತೆ ಮಾಡಬಾರದು.

12259014a ಯದಾ ಪುರೋಹಿತಂ ವಾ ತೇ ಪರ್ಯೇಯುಃ ಶರಣೈಷಿಣಃ।
12259014c ಕರಿಷ್ಯಾಮಃ ಪುನರ್ಬ್ರಹ್ಮನ್ನ ಪಾಪಮಿತಿ ವಾದಿನಃ।।
12259015a ತದಾ ವಿಸರ್ಗಮರ್ಹಾಃ ಸ್ಯುರಿತೀದಂ ನೃಪಶಾಸನಮ್।
12259015c ಬಿಭ್ರದ್ದಂಡಾಜಿನಂ ಮುಂಡೋ ಬ್ರಾಹ್ಮಣೋಽರ್ಹತಿ ವಾಸಸಮ್।।

ಅಥವಾ ಅವರು ಪುರೋಹಿತನಿಗೆ ಶರಣುಬಂದು “ಬ್ರಹ್ಮನ್! ಪುನಃ ಈ ಪಾಪವನ್ನು ಮಾಡುವುದಿಲ್ಲ” ಎಂದವರನ್ನು ಬಂಧನದಿಂದ ಮುಕ್ತಗೊಳಿಸಬೇಕು ಎನ್ನುವುದು ಬ್ರಹ್ಮನ ಶಾಸನವೇ ಆಗಿದೆ. ದಂಡ-ಜಿನಗಳನ್ನು ಧರಿಸಿದ ಬ್ರಾಹ್ಮಣ ಸಂನ್ಯಾಸಿಯೂ ಅಪರಾಧಮಾಡಿದಲ್ಲಿ ಶಿಕ್ಷಾರ್ಹನಾಗುತ್ತಾನೆ.

12259016a ಗರೀಯಾಂಸೋ ಗರೀಯಾಂಸಮಪರಾಧೇ ಪುನಃ ಪುನಃ।
12259016c ತಥಾ ವಿಸರ್ಗಮರ್ಹಂತಿ ನ ಯಥಾ ಪ್ರಥಮೇ ತಥಾ।।

ಪುನಃ ಪುನಃ ಅಪರಾಧವನ್ನೆಸಗಿದವನಿಗೆ ಹೆಚ್ಚು ಹೆಚ್ಚಿನ ಶಿಕ್ಷೆಯನ್ನೇ ವಿಧಿಸಬೇಕು. ಮೊದಲನೆಯ ಅಪರಾಧದಲ್ಲಿ ಎಚ್ಚರಿಕೆ ಕೊಟ್ಟು ಬಂಧನದಿಂದ ಮುಕ್ತಗೊಳಿಸಲು ಹೇಗೆ ಯೋಗ್ಯವೋ ಹಾಗೆ ಪುನಃ ಪುನಃ ಅಪರಾಧವನ್ನೆಸಗಿದವನು ಶಿಕ್ಷೆಯನ್ನು ಪಡೆಯದೇ ಬಿಡುಗಡೆಹೊಂದಲು ಅರ್ಹನಾಗುವುದಿಲ್ಲ.”

12259017 ದ್ಯುಮತ್ಸೇನ ಉವಾಚ।
12259017a ಯತ್ರ ಯತ್ರೈವ ಶಕ್ಯೇರನ್ಸಂಯಂತುಂ ಸಮಯೇ ಪ್ರಜಾಃ।
12259017c ಸ ತಾವತ್ ಪ್ರೋಚ್ಯತೇ ಧರ್ಮೋ ಯಾವನ್ನ ಪ್ರತಿಲಂಘ್ಯತೇ।।

ದ್ಯುಮತ್ಸೇನನು ಹೇಳಿದನು: “ಎಲ್ಲೆಲ್ಲಿ ಮತ್ತು ಸಮಯದಲ್ಲಿ ಪ್ರಜೆಗಳನ್ನು ಧರ್ಮದ ಚೌಕಟ್ಟಿನಲ್ಲಿ ಇರಿಸಿಕೊಳ್ಳಲು ಸಾಧ್ಯವಾಗುತ್ತದೆಯೋ ಅದನ್ನೇ ಧರ್ಮ ಎಂದು ಹೇಳುತ್ತಾರೆ. ಎಲ್ಲಿಯವರೆಗೆ ಧರ್ಮದ ಉಲ್ಲಂಘನೆಯಾಗುವುದಿಲ್ಲವೋ ಅಲ್ಲಿಯವರೆಗೆ ಧರ್ಮವೆಂಬುದು ಉಳಿದಿರುತ್ತದೆ.

12259018a ಅಹನ್ಯಮಾನೇಷು ಪುನಃ ಸರ್ವಮೇವ ಪರಾಭವೇತ್।
12259018c ಪೂರ್ವೇ ಪೂರ್ವತರೇ ಚೈವ ಸುಶಾಸ್ಯಾ ಅಭವನ್ ಜನಾಃ।।

ಧರ್ಮವನ್ನು ಉಲ್ಲಂಘಿಸಿದವರನ್ನು ಸಂಹರಿಸದೇ ಇದ್ದರೆ ಎಲ್ಲ ಪ್ರಾಕಾರದ ಆಡಳಿತಗಳೂ ಪರಾಭವಗೊಳ್ಳುತ್ತವೆ. ಹಿಂದಿನ ಮತ್ತು ಅದಕ್ಕೂ ಹಿಂದಿನ ಪ್ರಜೆಗಳನ್ನು ಆಳುವುದು ಸುಲಭವಾಗಿತ್ತು.

12259019a ಮೃದವಃ ಸತ್ಯಭೂಯಿಷ್ಠಾ ಅಲ್ಪದ್ರೋಹಾಲ್ಪಮನ್ಯವಃ।
12259019c ಪುರಾ ಧಿಗ್ದಂಡ ಏವಾಸೀದ್ವಾಗ್ದಂಡಸ್ತದನಂತರಮ್।।

ಆಗ ಜನರು ಮೃದುವಾಗಿದ್ದರು, ಸತ್ಯದಲ್ಲಿಯೇ ನೆಲೆಸಿದ್ದರು. ಅಲ್ಪದ್ರೋಹಿಗಳಾಗಿದ್ದರು ಮತ್ತು ಅಲ್ಪಕೋಪಿಷ್ಟರಾಗಿದ್ದರು. ಹಿಂದೆ “ಧಿಕ್ಕಾರ” ಎನ್ನುವುದೇ ದಂಡವಾಗಿತ್ತು. ಅನಂತರ ವಾಗ್ದಂಡವು ಪ್ರಾರಂಭವಾಯಿತು.

12259020a ಆಸೀದಾದಾನದಂಡೋಽಪಿ ವಧದಂಡೋಽದ್ಯ ವರ್ತತೇ।
12259020c ವಧೇನಾಪಿ ನ ಶಕ್ಯಂತೇ ನಿಯಂತುಮಪರೇ ಜನಾಃ।।

ಅದಾನದಂಡವೂ5 ಇತ್ತು. ಈಗ ವಧದಂಡನೆಯು ನಡೆಯುತ್ತಿದೆ. ವಧದಂಡನೆಯಿಂದ ಕೂಡ ಕೈಗೆ ಸಿಕ್ಕಿದವರನ್ನು ಬಿಟ್ಟು ಇತರ ಜನರನ್ನೂ ನಿಯಂತ್ರಿಸಲು ಶಕ್ಯವಿಲ್ಲ.

12259021a ನೈವ ದಸ್ಯುರ್ಮನುಷ್ಯಾಣಾಂ ನ ದೇವಾನಾಮಿತಿ ಶ್ರುತಿಃ।
12259021c ನ ಗಂಧರ್ವಪಿತೃಣಾಂ ಚ ಕಃ ಕಸ್ಯೇಹ ನ ಕಶ್ಚನ।।

ದಸ್ಯುಗಳು ಮನುಷರಲ್ಲಿ ಮಾತ್ರವಲ್ಲದೆ ದೇವತೆಗಳಲ್ಲಿ, ಗಂಧರ್ವರಲ್ಲಿ ಮತ್ತು ಪಿತೃಗಳಲ್ಲಿ ಕೂಡ ಯಾರಿಗೂ ಬೇಡವಾದವರು. ಹಾಗಿರುವಾಗ ದಸ್ಯುಗಳು6 ಯಾರಿಗೂ ಬೇಡವಾದವರು ಎನ್ನುವುದೇ ಯಥಾರ್ಥ.

12259022a ಪದ್ಮಂ ಶ್ಮಶಾನಾದಾದತ್ತೇ ಪಿಶಾಚಾಚ್ಚಾಪಿ ದೈವತಮ್।
12259022c ತೇಷು ಯಃ ಸಮಯಂ ಕುರ್ಯಾದಜ್ಞೇಷು ಹತಬುದ್ಧಿಷು।।

ದಸ್ಯುಗಳು ಶ್ಮಶಾನದಿಂದಲೂ ಪದ್ಮವನ್ನು ಕದಿಯುತ್ತಾರೆ ಮತ್ತು ಪಿಚಾಚಿಗಳನ್ನೇ ದೈವತವೆಂದು ಪೂಜಿಸುತ್ತಾರೆ. ಅಂಥಹ ಬುದ್ಧಿಯನ್ನು ಕಳೆದುಕೊಂಡವರ ವಿಷಯದಲ್ಲಿ ಅಜ್ಞಾನದಿಂದ ಯಾರು ತಾನೇ ಒಪ್ಪಂದವನ್ನು ಮಾಡಿಕೊಳ್ಳುತ್ತಾನೆ?”

12259023 ಸತ್ಯವಾನುವಾಚ।
12259023a ತಾನ್ನ ಶಕ್ನೋಷಿ ಚೇತ್ಸಾಧೂನ್ ಪರಿತ್ರಾತುಮಹಿಂಸಯಾ।
12259023c ಕಸ್ಯ ಚಿದ್ಭೂತಭವ್ಯಸ್ಯ ಲಾಭೇನಾಂತಂ ತಥಾ ಕುರು।।

ಸತ್ಯವಾನನು ಹೇಳಿದನು: “ದಸ್ಯುಗಳನ್ನು ಸಂಹರಿಸದೇ ಅಹಿಂಸಾಪೂರ್ವಕವಾಗಿ ಸತ್ಪುರುಷರನ್ನು ರಕ್ಷಿಸಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ಲೋಕಕಲ್ಯಾಣಕ್ಕಾಗಿ ಅವರನ್ನು ಸಂಹರಿಸು.”

12259024 ದ್ಯುಮತ್ಸೇನ ಉವಾಚ।
12259024a ರಾಜಾನೋ ಲೋಕಯಾತ್ರಾರ್ಥಂ ತಪ್ಯಂತೇ ಪರಮಂ ತಪಃ।
12259024c ಅಪತ್ರಪಂತಿ ತಾದೃಗ್ಭ್ಯಸ್ತಥಾವೃತ್ತಾ ಭವಂತಿ ಚ।।

ದ್ಯುಮತ್ಸೇನನು ಹೇಳಿದನು: “ಲೋಕವು ಸುಖಕರವಾಗಿ ನಡೆಯಲೆಂದು ರಾಜರು ಪರಮ ತಪಸ್ಸನ್ನು ತಪಿಸುತ್ತಾರೆ. ತಮ್ಮ ಅಧಿಕಾರದಲ್ಲಿ ದಸ್ಯುಗಳಿಂದ ತೊಂದರೆಯಾದಲ್ಲಿ ಅವರಿಗೆ ನಾಚಿಕೆಯಾಗುತ್ತದೆ ಮತ್ತು ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ.

12259025a ವಿತ್ರಾಸ್ಯಮಾನಾಃ ಸುಕೃತೋ ನ ಕಾಮಾದ್ ಘ್ನಂತಿ ದುಷ್ಕೃತೀನ್।
12259025c ಸುಕೃತೇನೈವ ರಾಜಾನೋ ಭೂಯಿಷ್ಠಂ ಶಾಸತೇ ಪ್ರಜಾಃ।।

ಶಿಕ್ಷೆಯಾಗುವುದೆಂಬ ಭಯದಿಂದಲೇ ಪ್ರಜೆಗಳು ಸುಕೃತರಾಗಿರುತ್ತಾರೆ. ನಯವು ದುಷ್ಕೃತಿಗಳನ್ನು ಕೊಲ್ಲುವುದಿಲ್ಲ. ಪ್ರಜೆಗಳು ಸುಕೃತರಾಗಿದ್ದರೇ ರಾಜರು ಅಭಿವೃದ್ಧಿಯತ್ತ ಶಾಸನ ಮಾಡಬಹುದು.

12259026a ಶ್ರೇಯಸಃ ಶ್ರೇಯಸೀಮೇವಂ ವೃತ್ತಿಂ ಲೋಕೋಽನುವರ್ತತೇ।
12259026c ಸದೈವ ಹಿ ಗುರೋರ್ವೃತ್ತಮನುವರ್ತಂತಿ ಮಾನವಾಃ।।

ಇದೇ ಶ್ರೇಯಸ್ಕರವಾದುದೆಂದು ಶ್ರೇಯಸ್ಕರ ಆಚಾರ-ವ್ಯವಹಾರಗಳನ್ನೇ ಜನರು ಅನುಸರಿಸುತ್ತಾರೆ. ಮನುಷ್ಯರು ಸದಾ ಶ್ರೇಷ್ಠರ ಆಚಾರ-ವಿಚಾರಗಳನ್ನೇ ಅನುಕರಿಸುತ್ತದೆ.

12259027a ಆತ್ಮಾನಮಸಮಾಧಾಯ ಸಮಾಧಿತ್ಸತಿ ಯಃ ಪರಾನ್।
12259027c ವಿಷಯೇಷ್ವಿಂದ್ರಿಯವಶಂ ಮಾನವಾಃ ಪ್ರಹಸಂತಿ ತಮ್।।

ತನ್ನನ್ನು ತಾನು ಹತೋಟಿಯಲ್ಲಿಟ್ಟುಕೊಳ್ಳದೇ ಯಾರು ಇತರರನ್ನು ಆಳುತ್ತಾರೋ ಮತ್ತು ಇಂದ್ರಿಯ ವಿಷಯಗಳ ವಶರಾಗಿ ವರ್ತಿಸುತ್ತಾರೋ ಅವರನ್ನು ನೋಡಿ ಜನರು ನಗುತ್ತಾರೆ.

12259028a ಯೋ ರಾಜ್ಞೋ ದಂಭಮೋಹೇನ ಕಿಂ ಚಿತ್ಕುರ್ಯಾದಸಾಂಪ್ರತಮ್।
12259028c ಸರ್ವೋಪಾಯೈರ್ನಿಯಮ್ಯಃ ಸ ತಥಾ ಪಾಪಾನ್ನಿವರ್ತತೇ।।

ದಂಭದಿಂದಲೋ ಮೋಹದಿಂದಲೋ ರಾಜನ ಕುರಿತು ಅನುಚಿತವಾಗಿ ನಡೆದುಕೊಂಡವವನನ್ನು ಸರ್ವೋಪಾಯಗಳಿಂದ ನಿಯಂತ್ರಿಸಬೇಕು. ಅದರಿಂದಲೇ ಜನರು ಪಾಪಮಾಡುವುದರಿಂದ ಹಿಮ್ಮೆಟ್ಟುತ್ತಾರೆ.

12259029a ಆತ್ಮೈವಾದೌ ನಿಯಂತವ್ಯೋ ದುಷ್ಕೃತಂ ಸಂನಿಯಚ್ಚತಾ।
12259029c ದಂಡಯೇಚ್ಚ ಮಹಾದಂಡೈರಪಿ ಬಂಧೂನನಂತರಾನ್।।

ದುಷ್ಕೃತಗಳನ್ನು ತಡೆಯಬೇಕೆಂದು ಬಯಸುವವನು ಮೊದಲು ತನ್ನನ್ನು ತಾನು ನಿಯಂತ್ರಿಸಿಕೊಂಡಿರಬೇಕು. ಅಪರಾಧ ಮಾಡಿದ ತನ್ನ ಬಂಧುಗಳನ್ನೂ, ಮಹಾದಂಡವನ್ನೇ ಇತ್ತು, ದಂಡಿಸಬೇಕು.

12259030a ಯತ್ರ ವೈ ಪಾಪಕೃತ್ ಕ್ಲೇಶ್ಯೋ ನ ಮಹದ್ದುಃಖಮರ್ಚತಿ।
12259030c ವರ್ಧಂತೇ ತತ್ರ ಪಾಪಾನಿ ಧರ್ಮೋ ಹ್ರಸತಿ ಚ ಧ್ರುವಮ್।।

ಎಲ್ಲಿ ಪಾಪಕರ್ಮಿಗಳು ಮಹಾದುಃಖವನ್ನು ಅನುಭವಿಸುವುದಿಲ್ಲವೋ ಅಲ್ಲಿ ಪಾಪಕರ್ಮಗಳು ಹೆಚ್ಚುತ್ತಲೇ ಇರುತ್ತವೆ ಮತ್ತು ಧರ್ಮವೂ ನಿಶ್ಚಯವಾಗಿ ಕ್ಷೀಣಿಸುತ್ತಿರುತ್ತದೆ.

12259030e ಇತಿ ಕಾರುಣ್ಯಶೀಲಸ್ತು ವಿದ್ವಾನ್ವೈ ಬ್ರಾಹ್ಮಣೋಽನ್ವಶಾತ್।।
12259031a ಇತಿ ಚೈವಾನುಶಿಷ್ಟೋಽಸ್ಮಿ ಪೂರ್ವೈಸ್ತಾತ ಪಿತಾಮಹೈಃ।
12259031c ಆಶ್ವಾಸಯದ್ಭಿಃ ಸುಭೃಶಮನುಕ್ರೋಶಾತ್ತಥೈವ ಚ।।

ಹೀಗೆ ಕಾರುಣ್ಯಶೀಲ ವಿದ್ವಾಂಸ ಬ್ರಾಹ್ಮಣನೊಬ್ಬನು ನನಗೆ ಹೇಳಿದ್ದನು. ಮಗೂ! ಹಿಂದಿನಿಂದಲೂ ಪಿತಮಾಹರು ಅನುಸರಿಸಿಕೊಂಡು ಬಂದಿರುವಂತೆಯೇ ನಡೆದುಕೊಳ್ಳುತ್ತೇನೆ.

12259032a ಏತತ್ ಪ್ರಥಮಕಲ್ಪೇನ ರಾಜಾ ಕೃತಯುಗೇಽಭಜತ್।
12259032c ಪಾದೋನೇನಾಪಿ ಧರ್ಮೇಣ ಗಚ್ಚೇತ್ತ್ರೇತಾಯುಗೇ ತಥಾ।
12259032e ದ್ವಾಪರೇ ತು ದ್ವಿಪಾದೇನ ಪಾದೇನ ತ್ವಪರೇ ಯುಗೇ।।

ಕೃತಯುಗದಲ್ಲಿ ರಾಜನು ಅಹಿಂಸೆಯಿಂದಲೇ ಪ್ರಜೆಗಳನ್ನು ನಿಯಂತ್ರಿಸಬೇಕು. ತ್ರೇತಾಯುಗವು ಪ್ರಾರಂಭವಾಗುತ್ತಲೇ ಧರ್ಮದ ಒಂದು ಪಾದವು ಊನವಾಗುತ್ತದೆ. ದ್ವಾಪರದಲ್ಲಿ ಧರ್ಮದ ನಾಲ್ಕು ಪಾದಗಳಲ್ಲಿ ಇರಡು ಪಾದಗಳು ಮಾತ್ರವೇ ಉಳಿದಿರುತ್ತದೆ. ಕಲಿಯುಗದಲ್ಲಿ ಒಂದು ಪಾದವು ಮಾತ್ರವೇ ಉಳಿದಿರುತ್ತದೆ.

12259033a ತಥಾ ಕಲಿಯುಗೇ ಪ್ರಾಪ್ತೇ ರಾಜ್ಞಾಂ ದುಶ್ಚರಿತೇನ ಹ।
12259033c ಭವೇತ್ಕಾಲವಿಶೇಷೇಣ ಕಲಾ ಧರ್ಮಸ್ಯ ಷೋಡಶೀ।।

ಕಲಿಯುಗವು ಮುಂದುವರೆಯುತ್ತಿದ್ದಂತೆ ರಾಜರ ದುಷ್ಕರ್ಮಗಳಿಮ್ದಾಗಿ ಮತ್ತು ಕಾಲವಿಶೇಷದಿಂದ ಧರ್ಮದ ಹದಿನಾರನೆಯ ಒಂದು ಭಾಗವು ಮಾತ್ರ ಉಳಿದಿರುತ್ತದೆ.

12259034a ಅಥ ಪ್ರಥಮಕಲ್ಪೇನ ಸತ್ಯವನ್ಸಂಕರೋ ಭವೇತ್।
12259034c ಆಯುಃ ಶಕ್ತಿಂ ಚ ಕಾಲಂ ಚ ನಿರ್ದಿಶ್ಯ ತಪ ಆದಿಶೇತ್।।

ಸತ್ಯವಾನ್! ಆಗ ಮೊದಲನೆಯ ಅಹಿಂಸಾತ್ಮಕ ಆಡಳಿತವನ್ನು ನಡೆಸಿದರೆ ವರ್ಣಸಾಂಕರ್ಯವುಂಟಾಗುತ್ತದೆ. ಅಪರಾಧಿಯ ವಯಸ್ಸು, ಶಕ್ತಿ ಮತ್ತು ಕಾಲಗಳನ್ನು ನೋಡಿಯೇ ಶಿಕ್ಷೆಯನ್ನು ವಿಧಿಸಬೇಕು.

12259035a ಸತ್ಯಾಯ ಹಿ ಯಥಾ ನೇಹ ಜಹ್ಯಾದ್ಧರ್ಮಫಲಂ ಮಹತ್।
12259035c ಭೂತಾನಾಮನುಕಂಪಾರ್ಥಂ ಮನುಃ ಸ್ವಾಯಂಭುವೋಽಬ್ರವೀತ್।।

ಇರುವವುಗಳ ಮೇಲಿನ ಅನುಕಂಪದಿಂದ ಸ್ವಾಯಂಭುವ ಮನುವು ಹೀಗೆ ಹೇಳಿದ್ದನು: “ಸತ್ಯಕ್ಕಾಗಿ ಮಹತ್ತರ ಅಹಿಂಸಾಧರ್ಮವನ್ನು ಬಿಡಬಾರದು.””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ದ್ಯುಮತ್ಸೇನಸತ್ಯವತ್ಸಂವಾದೇ ಏಕೋನಷಷ್ಟ್ಯಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ದ್ಯುಮತ್ಸೇನಸತ್ಯವತ್ಸಂವಾದ ಎನ್ನುವ ಇನ್ನೂರಾಐವತ್ತೊಂಭತ್ತನೇ ಅಧ್ಯಾಯವು.


  1. ಪ್ರಘಾತಯೇತ್। (ಭಾರತ ದರ್ಶನ). ↩︎

  2. ಅರಣ್ಯ ಪರ್ವದ ಅಧ್ಯಾಯ 377-283ರಲ್ಲಿ ಬರುವ ಸಾವಿತ್ರಿಯ ಕಥೆಯಲ್ಲಿನ ಸತ್ಯವಾನನೇ ಇವನು ಮತ್ತು ಅವನ ತಂದೆ ದ್ಯುಮತ್ಸೇನ, ಶಾಲ್ವದೇಶದ ರಾಜ. ↩︎

  3. ಧರ್ಮೋಽಧರ್ಮಃ (ಭಾರತ ದರ್ಶನ). ↩︎

  4. ಸಾಧೋಶ್ಚಾಪಿ ಹ್ಯಸಾದುಭ್ಯಃ ಶೋಭನಾ ಜಾಯತೇ ಪ್ರಜಾ। (ಭಾರತ ದರ್ಶನ). ↩︎

  5. ಅಪರಾಧಿಯ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು. ↩︎

  6. ದರೋಡೆಕೋರರು . ↩︎