258: ಚಿರಕಾರುಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 258

ಸಾರ

ಮಹರ್ಷಿ ಗೌತಮ ಮತ್ತು ಅವನ ಮಗ ಚಿರಕಾರಿಯ ಉಪಾಖ್ಯಾನ (1-75)

12258001 ಯುಧಿಷ್ಠಿರ ಉವಾಚ।
12258001a ಕಥಂ ಕಾರ್ಯಂ ಪರೀಕ್ಷೇತ ಶೀಘ್ರಂ ವಾಥ ಚಿರೇಣ ವಾ।
12258001c ಸರ್ವಥಾ ಕಾರ್ಯದುರ್ಗೇಽಸ್ಮಿನ್ಭವಾನ್ನಃ ಪರಮೋ ಗುರುಃ।।

ಯುಧಿಷ್ಠಿರನು ಹೇಳಿದನು: “ಸರ್ವಥಾ ದುರ್ಗಮ ಪರಿಸ್ಥಿತಿಯಲ್ಲಿ ಮಾಡಬೇಕಾದುದನ್ನು ಹೇಗೆ ಮಾಡಬೇಕು? ಹಿಂದೆ ಮುಂದೆ ನೋಡದೇ ಔಚಿತ್ಯವನ್ನು ಪರೀಕ್ಷಿಸಹೋಗದೆ ಮಾಡಬೇಕೇ ಅಥವಾ ಯುಕ್ತಾಯುಕ್ತತೆಯನ್ನು ವಿವೇಚಿಸಿ ಸಾವಕಾಶವಾಗಿ ಕಾರ್ಯ ಮಾಡಬೇಕೇ? ನೀನೇ ನಮಗೆ ಪರಮ ಗುರುವು.”

12258002 ಭೀಷ್ಮ ಉವಾಚ।
12258002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12258002c ಚಿರಕಾರೇಸ್ತು ಯತ್ಪೂರ್ವಂ ವೃತ್ತಮಾಂಗಿರಸೇ ಕುಲೇ।।

ಭೀಷ್ಮನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಹಿಂದೆ ಆಂಗಿರಸ ಕುಲದಲ್ಲಿ ಹುಟ್ಟಿದ ಚಿರಕಾರಿಯು ಹೇಗೆ ನಡೆದುಕೊಂಡನು ಎಂಬ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.

12258003a ಚಿರಕಾರಿಕ ಭದ್ರಂ ತೇ ಭದ್ರಂ ತೇ ಚಿರಕಾರಿಕ।
12258003c ಚಿರಕಾರೀ ಹಿ ಮೇಧಾವೀ ನಾಪರಾಧ್ಯತಿ ಕರ್ಮಸು।।

ಅವನ ಕಾರ್ಯವಿಧಾನವನ್ನು ನೋಡಿ ಅವನ ತಂದೆಯೇ ಅವನನ್ನು ಹೀಗೆ ಪ್ರಶಂಸಿಸಿದ್ದನು: “ಚಿರಕಾರೀ! ನಿನಗೆ ಮಂಗಳವಾಗಲಿ! ಚಿರಕಾರೀ! ನಿನಗೆ ಶುಭವಾಗಲಿ! ಚಿರಕಾರಿಯು ಮೇಧಾವಿಯು ಮತ್ತು ಅವನು ಕರ್ಮಗಳಲ್ಲಿ ಎಂದೂ ತಪ್ಪನ್ನು ಮಾಡುವುದಿಲ್ಲ!”

12258004a ಚಿರಕಾರೀ ಮಹಾಪ್ರಾಜ್ಞೋ ಗೌತಮಸ್ಯಾಭವತ್ಸುತಃ।
12258004c ಚಿರಂ ಹಿ ಸರ್ವಕಾರ್ಯಾಣಿ ಸಮೇಕ್ಷಾವಾನ್ ಪ್ರಪದ್ಯತೇ।।

ಮಹಾಪ್ರಾಜ್ಞ ಚಿರಕಾರಿಯು ಗೌತಮನ ಮಗನಾಗಿದ್ದನು. ಅವನು ಎಲ್ಲ ಕಾರ್ಯಗಳನ್ನೂ ಅವುಗಳಿಂದುಂಟಾಗುವ ಪರಿಣಾಮಗಳ ಸಹಿತ ಚೆನ್ನಾಗಿ ವಿಮರ್ಶಿಸಿದ ನಂತರವೇ ನಿಧಾನವಾಗಿ ಯುಕ್ತಕಾರ್ಯಗಳನ್ನು ಮಾಡುತ್ತಿದ್ದನು.

12258005a ಚಿರಂ ಸಂಚಿಂತಯನ್ನರ್ಥಾಂಶ್ಚಿರಂ ಜಾಗ್ರಚ್ಚಿರಂ ಸ್ವಪನ್।
12258005c ಚಿರಕಾರ್ಯಾಭಿಸಂಪತ್ತೇಶ್ಚಿರಕಾರೀ ತಥೋಚ್ಯತೇ।।

ಅವನು ಯಾವುದೇ ವಿಷಯದಲ್ಲಾಗಲೀ ಬಹಳ ಕಾಲ ವಿಚಾರ ಮಾಡುತ್ತಿದ್ದನು. ಬಹಳ ಸಮಯದವರೆಗೂ ಎಚ್ಚರವಾಗಿಯೇ ಇರುತ್ತಿದ್ದನು. ಮಲಗಿದನೆಂದರೆ ಬಹಳ ಹೊತ್ತಿನವರೆಗೂ ನಿದ್ರಿಸುತ್ತಿದ್ದನು. ಬಹಳ ಸಾವಕಾಶವಾಗಿ ಅವನು ಎಲ್ಲ ಕೆಲಸಗಳನ್ನೂ ಪೂರೈಸುತ್ತಿದ್ದನು. ಇದರಿಂದಾಗಿ ಅವನನ್ನು ಎಲ್ಲರೂ “ಚಿರಕಾರಿ” ಎಂದು ಕರೆಯುತ್ತಿದ್ದರು.

12258006a ಅಲಸಗ್ರಹಣಂ ಪ್ರಾಪ್ತೋ ದುರ್ಮೇಧಾವೀ ತಥೋಚ್ಯತೇ।
12258006c ಬುದ್ಧಿಲಾಘವಯುಕ್ತೇನ ಜನೇನಾದೀರ್ಘದರ್ಶಿನಾ।।

ದೀರ್ಘದರ್ಶಿಗಳಲ್ಲದ ಅಲ್ಪಬುದ್ಧಿಯ ಜನರು ಅವನನ್ನು ಮಂದಸ್ವಭಾವದವನೆಂದೂ, ದುರ್ಬುದ್ಧಿಯವನೆಂದೂ ಕರೆಯುತ್ತಿದ್ದರು.

12258007a ವ್ಯಭಿಚಾರೇ ತು ಕಸ್ಮಿಂಶ್ಚಿದ್ವ್ಯತಿಕ್ರಮ್ಯಾಪರಾನ್ಸುತಾನ್।
12258007c ಪಿತ್ರೋಕ್ತಃ ಕುಪಿತೇನಾಥ ಜಹೀಮಾಂ ಜನನೀಮಿತಿ।।

ಒಮ್ಮೆ ತನ್ನ ಪತ್ನಿಯು ಮಾಡಿದ ವ್ಯಭಿಚಾರದಿಂದ ಕುಪಿತನಾದ ಗೌತಮನು ತನ್ನ ಇತರ ಮಕ್ಕಳನ್ನು ಬಿಟ್ಟು ಚಿರಕಾರಿಗೆ “ನಿನ್ನ ಜನನಿಯನ್ನು ಸಂಹರಿಸು!” ಎಂದು ಆಜ್ಞಾಪಿಸಿದನು.

12258008a ಸ ತಥೇತಿ ಚಿರೇಣೋಕ್ತ್ವಾ ಸ್ವಭಾವಾಚ್ಚಿರಕಾರಿಕಃ।
12258008c ವಿಮೃಶ್ಯ ಚಿರಕಾರಿತ್ವಾಚ್ಚಿಂತಯಾಮಾಸ ವೈ ಚಿರಮ್।।

ಸ್ವಭಾವತಃ ನಿಧಾನಿಯಾಗಿದ್ದ ಚಿರಕಾರಿಕನು ಬಹಳ ಹೊತ್ತಿನ ನಂತರ ಹಾಗೆಯೇ ಆಗಲಿ ಎಂದನು. ತಂದೆಯ ಆಜ್ಞೆಯನ್ನು ವಿಮರ್ಶಿಸಿ ಬಹಳ ಸಮಯದವರೆಗೆ ಚಿರಕಾರಿಯು ಚಿಂತಿಸತೊಡಗಿದನು:

12258009a ಪಿತುರಾಜ್ಞಾಂ ಕಥಂ ಕುರ್ಯಾಂ ನ ಹನ್ಯಾಂ ಮಾತರಂ ಕಥಮ್।
12258009c ಕಥಂ ಧರ್ಮಚ್ಚಲೇ ನಾಸ್ಮಿನ್ನಿಮಜ್ಜೇಯಮಸಾಧುವತ್।।

“ತಂದೆಯ ಆಜ್ಞೆಯನ್ನು ಹೇಗೆ ಪಾಲಿಸಲಿ? ತಾಯಿಯನ್ನು ಹೇಗೆ ಕೊಲ್ಲದೇ ಇರಲಿ? ಕೆಟ್ಟವನಂತೆ ಈ ಧರ್ಮಸಂಕಟದಲ್ಲಿ ಮುಳುಗಿಹೋಗಿರುವ ನಾನು ಹೇಗೆ ಮೇಲೇಳಬಹುದು?

12258010a ಪಿತುರಾಜ್ಞಾ ಪರೋ ಧರ್ಮಃ ಸ್ವಧರ್ಮೋ ಮಾತೃರಕ್ಷಣಮ್।
12258010c ಅಸ್ವತಂತ್ರಂ ಚ ಪುತ್ರತ್ವಂ ಕಿಂ ನು ಮಾಂ ನಾತ್ರ ಪೀಡಯೇತ್।।

ತಂದೆಯ ಆಜ್ಞೆಯನ್ನು ಪಾಲಿಸುವುದು ಪರಮ ಧರ್ಮವು. ತಾಯಿಯನ್ನು ರಕ್ಷಿಸುವುದು ಸ್ವಧರ್ಮವು. ಪುತ್ರತ್ವವು ಸ್ವತಂತ್ರವಾದುದಲ್ಲ. ಈಗ ನಾನು ನನಗೆ ಅಧರ್ಮದಿಂದ ಪೀಡೆಯಾಗದಂತೆ ಏನು ಮಾಡಬಹುದು?

12258011a ಸ್ತ್ರಿಯಂ ಹತ್ವಾ ಮಾತರಂ ಚ ಕೋ ಹಿ ಜಾತು ಸುಖೀ ಭವೇತ್।
12258011c ಪಿತರಂ ಚಾಪ್ಯವಜ್ಞಾಯ ಕಃ ಪ್ರತಿಷ್ಠಾಮವಾಪ್ನುಯಾತ್।।

ಸ್ತ್ರೀಯನ್ನು ಅದರಲ್ಲೂ ತಾಯಿಯನ್ನು ಕೊಂದು ಯಾರು ತಾನೇ ಸುಖಿಯಾಗಿರಬಲ್ಲನು? ಹಾಗೆಯೇ ತಂದೆಯ ಆಜ್ಞೆಯನ್ನು ಪರಿಪಾಲಿಸದೇ ಇರುವ ಯಾರು ತಾನೇ ಸಮಾಜದಲ್ಲಿ ಗೌರವವನ್ನು ಪಡೆದುಕೊಳ್ಳಬಲ್ಲನು?

12258012a ಅನವಜ್ಞಾ ಪಿತುರ್ಯುಕ್ತಾ ಧಾರಣಂ ಮಾತೃರಕ್ಷಣಮ್।
12258012c ಯುಕ್ತಕ್ಷಮಾವುಭಾವೇತೌ ನಾತಿವರ್ತೇತಮಾಂ ಕಥಮ್।।

ತಂದೆಯ ಆಜ್ಞೆಯನ್ನು ತಿರಸ್ಕರಿಸದಿರುವುದು ಯುಕ್ತವಾದುದು. ಮಾತೃರಕ್ಷಣೆಯನ್ನು ಮಾಡಬೇಕು. ಇವೆರಡೂ ಯುಕ್ತವಾಗಿರುವಾಗ ಇವೆರಡನ್ನೂ ಉಲ್ಲಂಘಿಸದಿರಲು ಹೇಗೆ ಸಾಧ್ಯ?

12258013a ಪಿತಾ ಹ್ಯಾತ್ಮಾನಮಾಧತ್ತೇ ಜಾಯಾಯಾಂ ಜಜ್ಞಿಯಾಮಿತಿ।
12258013c ಶೀಲಚಾರಿತ್ರಗೋತ್ರಸ್ಯ ಧಾರಣಾರ್ಥಂ ಕುಲಸ್ಯ ಚ।।

ತಂದೆಯಾದವನು ತನ್ನ ಶೀಲ, ಸದಾಚಾರ, ಕುಲ ಮತ್ತು ಗೋತ್ರಗಳನ್ನು ರಕ್ಷಿಸುವ ಸಲುವಾಗಿಯೇ ತನ್ನ ಪತ್ನಿಯ ಗರ್ಭದಲ್ಲಿ ತನ್ನನ್ನೇ ರೇತಸ್ಸಿನ ರೂಪದಲ್ಲಿ ನಿಕ್ಷೇಪಿಸುತ್ತಾನೆ ಮತ್ತು ಪುತ್ರರೂಪದಲ್ಲಿ ಹೊರಬರುತ್ತಾನೆ.

12258014a ಸೋಽಹಮಾತ್ಮಾ ಸ್ವಯಂ ಪಿತ್ರಾ ಪುತ್ರತ್ವೇ ಪ್ರಕೃತಃ ಪುನಃ।
12258014c ವಿಜ್ಞಾನಂ ಮೇ ಕಥಂ ನ ಸ್ಯಾದ್ಬುಬುಧೇ ಚಾತ್ಮಸಂಭವಮ್।।

ಹೀಗೆ ನಾನು ತಾಯಿಯಿಂದಲೂ ಮತ್ತು ತಂದೆಯಿಂದಲೂ ಪುತ್ರರೂಪದಲ್ಲಿ ಜನ್ಮತಾಳಿದ್ದೇನೆ. ನನ್ನ ಹುಟ್ಟಿಗೆ ತಾಯಿ-ತಂದೆಗಳಿಬ್ಬರೂ ಕಾರಣರೆಂದು ತಿಳಿದುಕೊಂಡಿದ್ದೇನೆ. ಆದರೂ ತಂದೆಯ ಆಜ್ಞೆಯನ್ನು ಅನಾದರಣೆಮಾಡದಂತಹ ಮತ್ತು ತಾಯಿಯನ್ನು ರಕ್ಷಿಸುವಂತಹ ವಿಶೇಷಜ್ಞಾನವು ಇನ್ನೂ ನನಗೇಕೆ ಉಂಟಾಗಿಲ್ಲ?

12258015a ಜಾತಕರ್ಮಣಿ ಯತ್ ಪ್ರಾಹ ಪಿತಾ ಯಚ್ಚೋಪಕರ್ಮಣಿ।
12258015c ಪರ್ಯಾಪ್ತಃ ಸ ದೃಢೀಕಾರಃ ಪಿತುರ್ಗೌರವನಿಶ್ಚಯೇ।।

ಜಾತಕರ್ಮದ ಸಮಯದಲ್ಲಿ “ಆತ್ಮಾ ವೈ ಪುತ್ರನಾಮಾಸಿ” ಎಂದು ಹೇಳುವುದೂ ಮತ್ತು ಉಪನಯನದ ಸಮಯದಲ್ಲಿ “ಆಚಾರ್ಯದೇವೋ ಭವ। ಆಪೋಶಾನ। ಕರ್ಮ ಕುರು” ಎಂದು ಮುಂತಾಗಿ ಆಜ್ಞೆಮಾಡುವುದೂ – ಇವುಗಳು ತಂದೆಯೇ ಅತ್ಯಧಿಕನಾದವನೆಂಬ ನಿಶ್ಚಯವನ್ನು ಸಾಕಷ್ಟು ದೃಢೀಕರಿಸುತ್ತವೆ.

12258016a ಗುರುರಗ್ರ್ಯಃ ಪರೋ ಧರ್ಮಃ ಪೋಷಣಾಧ್ಯಯನಾದ್ಧಿತಃ।
12258016c ಪಿತಾ ಯದಾಹ ಧರ್ಮಃ ಸ ವೇದೇಷ್ವಪಿ ಸುನಿಶ್ಚಿತಃ।।

ತಂದೆಯು ಭರಣ-ಪೋಷಣಾದಿಗಳನ್ನು ಮಾಡುವುದರಿಂದಲೂ ಒಳ್ಳೆಯ ಶಿಕ್ಷಣವನ್ನು ಕೊಡಿಸುವುದರಿಂದಲೂ ಪುತ್ರನಿಗೆ ಪ್ರಧಾನ ಗುರುವೇ ಆಗುತ್ತಾನೆ. ಅವನು ಧರ್ಮದ ಸಾಕ್ಷಾತ್ ಸ್ವರೂಪನೇ ಹೌದು. ತಂದೆಯು ಹೇಳಿದ್ದುದು ಧರ್ಮವೇ ಆಗುತ್ತದೆ. ವೇದಗಳಲ್ಲಿಯೂ ಇದು ನಿಶ್ಚಿತವಾಗಿದೆ.

12258017a ಪ್ರೀತಿಮಾತ್ರಂ ಪಿತುಃ ಪುತ್ರಃ ಸರ್ವಂ ಪುತ್ರಸ್ಯ ವೈ ಪಿತಾ।
12258017c ಶರೀರಾದೀನಿ ದೇಯಾನಿ ಪಿತಾ ತ್ವೇಕಃ ಪ್ರಯಚ್ಚತಿ।।

ತಂದೆಗೆ ಮಗನು ಪ್ರೀತಿಸ್ವರೂಪನಾಗಿರುತ್ತಾನೆ. ಪುತ್ರನಿಗೆ ತಂದೆಯು ಸರ್ವಸ್ವವಾಗಿರುತ್ತಾನೆ. ತಂದೆಯಾದವನು ಮಾತ್ರ ಮಗನಿಗೆ ಶರೀರವೇ ಮೊದಲಾದ ಕೊಡಬಹುದಾದವುಗಳೆಲ್ಲವನ್ನೂ ಕೊಡುತ್ತಾನೆ.

12258018a ತಸ್ಮಾತ್ಪಿತುರ್ವಚಃ ಕಾರ್ಯಂ ನ ವಿಚಾರ್ಯಂ ಕಥಂ ಚನ।
12258018c ಪಾತಕಾನ್ಯಪಿ ಪೂಯಂತೇ ಪಿತುರ್ವಚನಕಾರಿಣಃ।।

ಆದುದರಿಂದ ತಂದೆಯ ಮಾತನ್ನು ನಡೆಸಿಕೊಡಲೇ ಬೇಕು. ಅದರಲ್ಲಿ ಏನೂ ವಿಚಾರಮಾಡಬಾರದು. ತಂದೆಯ ಮಾತನ್ನು ಮಾಡಿಕೊಟ್ಟವರು ಪಾತಕರಾಗಿದ್ದರೂ ಪಾವನರಾಗುತ್ತಾರೆ.

12258019a ಭೋಗೇ ಭಾಗ್ಯೇ ಪ್ರಸವನೇ ಸರ್ವಲೋಕನಿದರ್ಶನೇ।
12258019c ಭರ್ತ್ರಾ ಚೈವ ಸಮಾಯೋಗೇ ಸೀಮಂತೋನ್ನಯನೇ ತಥಾ।।

ಭೋಗ, ಭಾಗ್ಯ, ಪ್ರಸವನ, ಸರ್ವಲೋಕನಿದರ್ಶನ, ಗರ್ಭಾಧಾನ-ಪುಂಸವನ-ಸೀಮಂತೋನ್ನಯನವೇ ಮೊದಲಾದ ಸಂಸ್ಕಾರಗಳಲ್ಲಿಯೂ ತಂದೆಯೇ ಪ್ರಭುವಾಗುತ್ತಾನೆ.

12258020a ಪಿತಾ ಸ್ವರ್ಗಃ ಪಿತಾ ಧರ್ಮಃ ಪಿತಾ ಪರಮಕಂ ತಪಃ।
12258020c ಪಿತರಿ ಪ್ರೀತಿಮಾಪನ್ನೇ ಸರ್ವಾಃ ಪ್ರೀಯಂತಿ ದೇವತಾಃ।।

ತಂದೆಯೇ ಸ್ವರ್ಗ. ತಂದೆಯೇ ಧರ್ಮ. ತಂದೆಯೇ ಪರಮ ತಪಸ್ಸು. ತಂದೆಯು ಪ್ರೀತನಾದರೆ ಸಮಸ್ತ ದೇವತೆಗಳೂ ಪ್ರೀತರಾಗುತ್ತಾರೆ.

12258021a ಆಶಿಷಸ್ತಾ ಭಜಂತ್ಯೇನಂ ಪುರುಷಂ ಪ್ರಾಹ ಯಾಃ ಪಿತಾ1
12258021c ನಿಷ್ಕೃತಿಃ ಸರ್ವಪಾಪಾನಾಂ ಪಿತಾ ಯದಭಿನಂದತಿ।।

ಪುರುಷನ ಪಿತನು ಹೇಳಿದ ಎಲ್ಲವೂ ಅವನಿಗೆ ಆಶೀರ್ವಾದವಾಗುತ್ತದೆ. ತಂದೆಯು ಅಭಿನಂದಿಸಿದರೆ ಅವನು ಮಾಡಿದ ಸರ್ವಪಾಪಗಳೂ ಏನೂ ಮಾಡಲಾರವು.

12258022a ಮುಚ್ಯತೇ ಬಂಧನಾತ್ಪುಷ್ಪಂ ಫಲಂ ವೃಂತಾತ್2 ಪ್ರಮುಚ್ಯತೇ।
12258022c ಕ್ಲಿಶ್ಯನ್ನಪಿ ಸುತಸ್ನೇಹೈಃ ಪಿತಾ ಸ್ನೇಹಂ ನ ಮುಂಚತಿ।।

ಹೂವು ತೊಟ್ಟಿನಿಂದ ಕಳಚಿ ಕೆಳಗೆ ಬೀಳುತ್ತದೆ. ಹಣ್ಣು ಬಳ್ಳಿಯಿಂದ ಬೀಳುತ್ತದೆ. ಆದರೆ ಯಾವುದೇ ಕಷ್ಟಸಮಯದಲ್ಲಿಯೂ ತಂದೆಯು ಸುತನನ್ನು ತನ್ನ ಸ್ನೇಹದಿಂದ ಬಿಡುವುದಿಲ್ಲ.

12258023a ಏತದ್ವಿಚಿಂತಿತಂ ತಾವತ್ಪುತ್ರಸ್ಯ ಪಿತೃಗೌರವಮ್।
12258023c ಪಿತಾ ಹ್ಯಲ್ಪತರಂ ಸ್ಥಾನಂ ಚಿಂತಯಿಷ್ಯಾಮಿ ಮಾತರಮ್।।

ಹೀಗೆ ನಾನು ಪುತ್ರನಿಗೆ ತಂದೆಯ ಮೇಲೆ ಇರಬೇಕಾಗಿರುವ ಗೌರವದ ಕುರಿತು ಯೋಚಿಸಿದ್ದಾಯಿತು. ತಂದೆಯ ಸ್ಥಾನವು ಚಿಕ್ಕದೇನಲ್ಲ. ಈಗ ತಾಯಿಯ ಕುರಿತು ವಿಚಾರ ಮಾಡುತ್ತೇನೆ.

12258024a ಯೋ ಹ್ಯಯಂ ಮಯಿ ಸಂಘಾತೋ ಮರ್ತ್ಯತ್ವೇ ಪಾಂಚಭೌತಿಕಃ।
12258024c ಅಸ್ಯ ಮೇ ಜನನೀ ಹೇತುಃ ಪಾವಕಸ್ಯ ಯಥಾರಣಿಃ।
12258024e ಮಾತಾ ದೇಹಾರಣಿಃ ಪುಂಸಾಂ ಸರ್ವಸ್ಯಾರ್ತಸ್ಯ ನಿರ್ವೃತಿಃ।।

ಆರಣಿಯು ಅಗ್ನಿಯನ್ನು ಹುಟ್ಟಿಸಲು ಹೇಗೆ ಕಾರಣವೋ ಹಾಗೆ ನನಗೆ ಈ ಪಾಂಚಭೌತಿಕ ಮರ್ತ್ಯತ್ವವನ್ನು ನೀಡಿರುವ ಆ ಸಂಘಾತದಲ್ಲಿ ನನ್ನ ಜನನಿಯೂ ಕಾರಣವಾಗಿದ್ದಾಳೆ. ತಾಯಿಯು ಮನುಷ್ಯರಿಗೆ ಶರೀರರೂಪದ ಅಗ್ನಿಯನ್ನು ಪ್ರಕಟಗೊಳಿಸುವ ಆರಣಿಯೇ ಆಗಿದ್ದಾಳೆ.

.312258025a ನ ಚ ಶೋಚತಿ ನಾಪ್ಯೇನಂ ಸ್ಥಾವಿರ್ಯಮಪಕರ್ಷತಿ।
12258025c ಶ್ರಿಯಾ ಹೀನೋಽಪಿ ಯೋ ಗೇಹೇ ಅಂಬೇತಿ ಪ್ರತಿಪದ್ಯತೇ।।

ತಾಯಿಯಿರುವವರೆಗೆ ಅವನು ಶೋಕಪಡಬೇಕಾಗಿಲ್ಲ. ಅಲ್ಲಿಯವರೆಗೆ ಅವನನ್ನು ವೃದ್ಧಾಪ್ಯವೂ ಆಕ್ರಮಿಸುವುದಿಲ್ಲ. ಅಮ್ಮಾ ಎಂದು ಮನೆಯೊಳಗೆ ಪ್ರವೇಶಿಸುವವನು ನಿರ್ಧನನಾಗಿದ್ದರೂ ಸಂಪತ್ತು ಇದ್ದವನಂತೆ.

12258026a ಪುತ್ರಪೌತ್ರಸಮಾಕೀರ್ಣೋ ಜನನೀಂ ಯಃ ಸಮಾಶ್ರಿತಃ।
12258026c ಅಪಿ ವರ್ಷಶತಸ್ಯಾಂತೇ ಸ ದ್ವಿಹಾಯನವಚ್ಚರೇತ್।।

ಪುತ್ರ-ಪೌತ್ರರಿಂದ ಕೂಡಿದ್ದರೂ ಮತ್ತು ನೂರು ವರ್ಷಗಳವನಾಗಿದ್ದರೂ ತಾಯಿಯ ಬಳಿ ಕುಳಿತಾಗ ಅವನು ಎರಡು ವರ್ಷದ ಮಗುವಿನಂತೆಯೇ ವರ್ತಿಸುತ್ತಾನೆ.

12258027a ಸಮರ್ಥಂ ವಾಸಮರ್ಥಂ ವಾ ಕೃಶಂ ವಾಪ್ಯಕೃಶಂ ತಥಾ।
12258027c ರಕ್ಷತ್ಯೇವ ಸುತಂ ಮಾತಾ ನಾನ್ಯಃ ಪೋಷ್ಟಾ ವಿಧಾನತಃ।।

ಮಗನು ಸಮರ್ಥನಾಗಿರಲಿ ಅಥವಾ ಅಸಮರ್ಥನಾಗಿರಲಿ, ಕೃಶನಾಗಿರಲಿ ಅಥವಾ ಬಲಿಷ್ಠನಾಗಿರಲಿ ತಾಯಿಯು ಯಾವ ವಿಧದ ತಾರತಮ್ಯವನ್ನೂ ತೋರದೇ ರಕ್ಷಿಸುತ್ತಾಳೆ. ಬೇರೆ ಯಾರೂ ಈ ರೀತಿ ಇರುವುದಿಲ್ಲ.

12258028a ತದಾ ಸ ವೃದ್ಧೋ ಭವತಿ ಯದಾ ಭವತಿ ದುಃಖಿತಃ।
12258028c ತದಾ ಶೂನ್ಯಂ ಜಗತ್ತಸ್ಯ ಯದಾ ಮಾತ್ರಾ ವಿಯುಜ್ಯತೇ।।

ಮನುಷ್ಯನು ಯಾವಾಗ ತಾಯಿಯಿಂದ ವಿಯೋಗವನ್ನು ಹೊಂದುವನೋ ಆಗ ಅವನು ವೃದ್ಧನಾಗುತ್ತಾನೆ. ದುಃಖಿತನಾಗುತ್ತಾನೆ. ಆಗ ಅವನಿಗೆ ಜಗತ್ತೆಲ್ಲವೂ ಶೂನ್ಯವಾಗಿ ಕಾಣುತ್ತದೆ.

12258029a ನಾಸ್ತಿ ಮಾತೃಸಮಾ ಚಾಯಾ ನಾಸ್ತಿ ಮಾತೃಸಮಾ ಗತಿಃ।
12258029c ನಾಸ್ತಿ ಮಾತೃಸಮಂ ತ್ರಾಣಂ ನಾಸ್ತಿ ಮಾತೃಸಮಾ ಪ್ರಪಾ4।।

ತಾಯಿಯಂಥಹ ನೆರಳು ಇಲ್ಲ. ತಾಯಿಯಂಥಹ ಗತಿಯು ಇಲ್ಲ. ತಾಯಿಯಂಥಹ ತ್ರಾಣವಿಲ್ಲ. ತಾಯಿಯಂಥಹ ಪ್ರಿಯವಾದುದು ಇಲ್ಲ.

12258030a ಕುಕ್ಷಿಸಂಧಾರಣಾದ್ಧಾತ್ರೀ ಜನನಾಜ್ಜನನೀ ಸ್ಮೃತಾ।
12258030c ಅಂಗಾನಾಂ ವರ್ಧನಾದಂಬಾ ವೀರಸೂತ್ವೇನ ವೀರಸೂಃ।।

ಹೊಟ್ಟೆಯಲ್ಲಿ ಧಾರಣೆಮಾಡುವುದರಿಂದ ಅವಳು ಧಾತ್ರೀ. ಜನನನೀಡುವುದರಿಂದ ಅವಳನ್ನು ಜನನಿಯೆಂದು ಕರೆಯುತ್ತಾರೆ. ಅಂಗಾಂಗಗಳನ್ನು ವರ್ಧಿಸುವುದರಿಂದ ಅವಳು ಅಂಬಾ ಮತ್ತು ವೀರಸಂತಾನವನ್ನು ಪಡೆಯುವುದರಿಂದ ಅವಳು ವೀರಸೂ.

12258031a ಶಿಶೋಃ ಶುಶ್ರೂಷಣಾಚ್ಚುಶ್ರೂರ್ಮಾತಾ ದೇಹಮನಂತರಮ್।
12258031c ಚೇತನಾವಾನ್ನರೋ ಹನ್ಯಾದ್ಯಸ್ಯ ನಾಸುಷಿರಂ ಶಿರಃ।।

ಶಿಶುವಿನ ಶುಶ್ರೂಷಣೆ ಮಾಡುವುದರಿಂದ ತಾಯಿಗೆ ಶುಶ್ರೂ ಎಂಬ ಹೆಸರೂ ಬಂದಿದೆ. ಅವಳು ಮಗುವಿನ ಮತ್ತೊಂದು ಶರೀರವಷ್ಟೆ. ಚೇತನಾವಾನ್ ನರನು ತನ್ನ ತಾಯಿಯನ್ನೆಂದಿಗೂ ಕೊಲ್ಲಲಾರನು.

12258032a ದಂಪತ್ಯೋಃ ಪ್ರಾಣಸಂಶ್ಲೇಷೇ ಯೋಽಭಿಸಂಧಿಃ ಕೃತಃ ಕಿಲ।
12258032c ತಂ ಮಾತಾ ವಾ ಪಿತಾ ವೇದ ಭೂತಾರ್ಥೋ ಮಾತರಿ ಸ್ಥಿತಃ।।

ದಂಪತಿಗಳು ಕೂಡುವ ಕಾಲದಲ್ಲಿ ಯಾವ ರೀತಿಯ ಸಂತಾನವು ಹುಟ್ಟಬೇಕೆಂಬ ಅಭಿಲಾಷೆಗಳು ಮಾತಾ-ಪಿತ ಇಬ್ಬರಲ್ಲಿ ಇದ್ದರೂ ಈ ಅಭಿಲಾಷೆಗಳು ತಾಯಿಯ ಹೃದಯದಲ್ಲಿ ವಿಶೇಷವಾಗಿರುತ್ತವೆ.

12258033a ಮಾತಾ ಜಾನಾತಿ ಯದ್ಗೋತ್ರಂ ಮಾತಾ ಜಾನಾತಿ ಯಸ್ಯ ಸಃ।
12258033c ಮಾತುರ್ಭರಣಮಾತ್ರೇಣ ಪ್ರೀತಿಃ ಸ್ನೇಹಃ ಪಿತುಃ ಪ್ರಜಾಃ।।

ತಾಯಿಯು ಹುಟ್ಟುವವನು ಯಾರ ಮಗನು ಮತ್ತು ಯಾವ ಗೋತ್ರದವನು ಎಂದು ತಿಳಿದಿರುತ್ತಾಳೆ. ಒಂಭತ್ತು ತಿಂಗಳು ಆ ಮಗುವನ್ನು ಹೊಟ್ಟೆಯಲ್ಲಿ ಬೆಳೆಸಿದುದರಿಂದ ಅವಳಿಗೆ ಮಗುವಿನ ಮೇಲೆ ಪ್ರೀತಿ-ಸ್ನೇಹಗಳು ಹೆಚ್ಚಾಗಿದ್ದರೂ ಮಗನು ತಂದೆಗೆ ಸೇರುತ್ತಾನೆ.

12258034a ಪಾಣಿಬಂಧಂ ಸ್ವಯಂ ಕೃತ್ವಾ ಸಹಧರ್ಮಮುಪೇತ್ಯ ಚ।
12258034c ಯದಿ ಯಾಪ್ಯಂತಿ ಪುರುಷಾಃ ಸ್ತ್ರಿಯೋ ನಾರ್ಹಂತಿ ಯಾಪ್ಯತಾಮ್5।।

ಸ್ವಯಂ ಪಾಣಿಗ್ರಹಣ ಮಾಡಿ ಸಹಧರ್ಮಿಯೆಂದು ವಚನವನ್ನಿತ್ತ ಪುರುಷನು ಒಂದು ವೇಳೆ ಕೇಳುಮಟ್ಟಕ್ಕಿಳಿದರೂ ಸ್ತ್ರೀಯನ್ನು ಕೀಳಾಗಿ ಕಾಣಬಾರದು.

12258035a ಭರಣಾದ್ಧಿ ಸ್ತ್ರಿಯೋ ಭರ್ತಾ ಪಾತ್ಯಾಚ್ಚೈವ ಸ್ತ್ರಿಯಾಃ ಪತಿಃ।
12258035c ಗುಣಸ್ಯಾಸ್ಯ ನಿವೃತ್ತೌ ತು ನ ಭರ್ತಾ ನ ಪತಿಃ ಪತಿಃ।।

ಸ್ತ್ರೀಯ ಭರಣ-ಪೋಷಣಗಳನ್ನು ಮಾಡುವುದರಿಂದ ಪುರುಷನು ಭರ್ತನೆನಿಸಿಕೊಳ್ಳುತ್ತಾನೆ. ಸ್ತ್ರೀಯನ್ನು ಪಾಲನೆಮಾಡುವುದರಿಂದ ಪತಿಯೆಂದು ಎನಿಸಿಕೊಳ್ಳುತ್ತಾನೆ. ಈ ಎರಡೂ ಗುಣಗಳು ಇಲ್ಲದಿದ್ದ ಪತಿಯು ಭರ್ತನೂ ಆಗುವುದಿಲ್ಲ ಪತಿಯೂ ಆಗುವುದಿಲ್ಲ.

12258036a ಏವಂ ಸ್ತ್ರೀ ನಾಪರಾಧ್ನೋತಿ ನರ ಏವಾಪರಾಧ್ಯತಿ।
12258036c ವ್ಯುಚ್ಚರಂಶ್ಚ ಮಹಾದೋಷಂ ನರ ಏವಾಪರಾಧ್ಯತಿ।।

ಹೀಗೆ ಸ್ತ್ರೀಯು ಅಪರಾಧಿಯಾಗುವುದಿಲ್ಲ. ಪುರುಷನೇ ಅಪರಾಧವನ್ನೆಸಗುತ್ತಾನೆ. ವ್ಯಭಿಚಾರವೆಂಬ ಮಹಾದೋಷವನ್ನು ಪುರುಷನೇ ಮಾಡುತ್ತಾನೆ.

12258037a ಸ್ತ್ರಿಯಾ ಹಿ ಪರಮೋ ಭರ್ತಾ ದೈವತಂ ಪರಮಂ ಸ್ಮೃತಮ್।
12258037c ತಸ್ಯಾತ್ಮನಾ ತು ಸದೃಶಮಾತ್ಮಾನಂ ಪರಮಂ ದದೌ।
612258037e ಸರ್ವಕಾರ್ಯಾಪರಾಧ್ಯತ್ವಾನ್ನಾಪರಾಧ್ಯಂತಿ ಚಾಂಗನಾಃ।।

ಸ್ತ್ರೀಗೆ ಪತಿಯೇ ಶ್ರೇಷ್ಠನು. ಪರಮ ದೈವತವೆಂದು ಹೇಳುತ್ತಾರೆ. ತನ್ನ ಪತಿಯ ಸಮಾನ ಶರೀರವನ್ನು ಧರಿಸಿ ಬಂದಿದ್ದ ಇಂದ್ರನನ್ನು ನೋಡಿ ತನ್ನ ಶ್ರೇಷ್ಠ ಶರೀರವನ್ನು ಕೊಟ್ಟಳು. ಸರ್ವಕಾರ್ಯಗಳಲ್ಲಿ ಸ್ತ್ರೀಯರಿಗೆ ಶ್ರೇಷ್ಠತೆಯೇ ಇಲ್ಲದಿರುವುದರಿಂದ ಅಂಗನೆಯರು ಅಪರಾಧ ಮಾಡುವುದೇ ಇಲ್ಲ.

12258038a ಯಶ್ಚನೋಕ್ತೋ ಹಿ ನಿರ್ದೇಶಃ ಸ್ತ್ರಿಯಾ ಮೈಥುನತೃಪ್ತಯೇ।
12258038c ತಸ್ಯ ಸ್ಮಾರಯತೋ ವ್ಯಕ್ತಮಧರ್ಮೋ ನಾತ್ರ ಸಂಶಯಃ।।

ಮೈಥುನ ತೃಪ್ತಿಗೆ ಸ್ತ್ರೀಯು ಕೇಳದಿದ್ದರೂ ಅವಳನ್ನು ಪ್ರಚೋದಿಸುವ ಪುರುಷನಿಗೇ ಅದರಲ್ಲಿ ಪಾಪದ ಸಂಘಟನೆಯಾಗುತ್ತದೆ. ಇದರಲ್ಲಿ ಸಂಶಯವೇ ಇಲ್ಲ.

12258039a ಯಾವನ್ನಾರೀಂ ಮಾತರಂ ಚ ಗೌರವೇ ಚಾಧಿಕೇ ಸ್ಥಿತಾಮ್।
12258039c ಅವಧ್ಯಾಂ ತು ವಿಜಾನೀಯುಃ ಪಶವೋಽಪ್ಯವಿಚಕ್ಷಣಾಃ।।

ಹೀಗೆ ತಂದೆಗಿಂತಲೂ ಅಧಿಕ ಸ್ಥಾನದಲ್ಲಿರುವ ತಾಯಿ ನಾರಿಯು ಅವಧ್ಯಳು ಎಂದು ಅಜ್ಞಾನಿ ಪಶುಗಳೂ ತಿಳಿದುಕೊಂಡಿರುತ್ತವೆ.

12258040a ದೇವತಾನಾಂ ಸಮಾವಾಯಮೇಕಸ್ಥಂ ಪಿತರಂ ವಿದುಃ।
12258040c ಮರ್ತ್ಯಾನಾಂ ದೇವತಾನಾಂ ಚ ಸ್ನೇಹಾದಭ್ಯೇತಿ ಮಾತರಮ್।।

ತಂದೆಯಿರುವಲ್ಲಿ ದೇವತೆಗಳು ಏಕತ್ರ ಸೇರಿರುವರೆಂದು ಹೇಳುತ್ತಾರೆ. ಆದರೆ ತಾಯಿಯ ಸ್ನೇಹವಿರುವಲ್ಲಿ ಮರ್ತ್ಯರು ಮತ್ತು ದೇವತೆಗಳು ಇಬ್ಬರೂ ಸೇರಿರುತ್ತಾರೆ7.”

12258041a ಏವಂ ವಿಮೃಶತಸ್ತಸ್ಯ ಚಿರಕಾರಿತಯಾ ಬಹು।
12258041c ದೀರ್ಘಃ ಕಾಲೋ ವ್ಯತಿಕ್ರಾಂತಸ್ತತಸ್ತಸ್ಯಾಗಮತ್ಪಿತಾ।।

ಹೀಗೆ ಚಿರಕಾರಿಯು ಬಹಳವಾಗಿ ವಿಮರ್ಶಿಸಿ ದೀರ್ಘಕಾಲವು ಕಳೆದುಹೋಗಲು ಅವನ ತಂದೆಯು ಹಿಂದಿರುಗಿದನು.

12258042a ಮೇಧಾತಿಥಿರ್ಮಹಾಪ್ರಾಜ್ಞೋ ಗೌತಮಸ್ತಪಸಿ ಸ್ಥಿತಃ।
12258042c ವಿಮೃಶ್ಯ ತೇನ ಕಾಲೇನ ಪತ್ನ್ಯಾಃ ಸಂಸ್ಥಾವ್ಯತಿಕ್ರಮಮ್।।

ಮೇಧಾತಿಥಿ ಮಹಾಪ್ರಾಜ್ಞ ಗೌತಮನಾದರೋ ತಪಸ್ಸಿನಲ್ಲಿ ನಿರತನಾಗಿ ಅಷ್ಟೊಂದು ಕಾಲವೂ ತನ್ನ ಪತ್ನಿಯ ವ್ಯಭಿಚಾರ್ಯವನ್ನು ವಿಮರ್ಶಿಸಿದ್ದನು.

12258043a ಸೋಽಬ್ರವೀದ್ದುಃಖಸಂತಪ್ತೋ ಭೃಶಮಶ್ರೂಣಿ ವರ್ತಯನ್।
12258043c ಶ್ರುತಧೈರ್ಯಪ್ರಸಾದೇನ ಪಶ್ಚಾತ್ತಾಪಮುಪಾಗತಃ।।

ದುಃಖಸಂತಪ್ತನಾಗಿದ್ದ ಗೌತಮನು ಕಣ್ಣೀರುಸುರಿಸುತ್ತಾ ವೇದಾಧ್ಯಯನ ಮತ್ತು ಧೈರ್ಯದ ಪ್ರಭಾವದಿಂದ ಹೀಗೆ ಹೇಳಿದನು:

12258044a ಆಶ್ರಮಂ ಮಮ ಸಂಪ್ರಾಪ್ತಸ್ತ್ರಿಲೋಕೇಶಃ ಪುರಂದರಃ।
12258044c ಅತಿಥಿವ್ರತಮಾಸ್ಥಾಯ ಬ್ರಾಹ್ಮಣಂ ರೂಪಮಾಸ್ಥಿತಃ।।

“ತ್ರಿಲೋಕೇಶ ಪುರಂದರನು ಬ್ರಾಹ್ಮಣ ರೂಪವನ್ನು ಧರಿಸಿ ಅತಿಥಿವ್ರತವನ್ನು ಆಶ್ರಯಿಸಿ ನನ್ನ ಆಶ್ರಮಕ್ಕೆ ಬಂದನು.

12258045a ಸಮಯಾ ಸಾಂತ್ವಿತೋ ವಾಗ್ಭಿಃ ಸ್ವಾಗತೇನಾಭಿಪೂಜಿತಃ।
12258045c ಅರ್ಘ್ಯಂ ಪಾದ್ಯಂ ಚ ನ್ಯಾಯೇನ ತಯಾಭಿಪ್ರತಿಪಾದಿತಃ।।

ನಾನು ಅವನನ್ನು ಸಾಂತ್ವನ ಮಾತುಗಳಿಂದ ಸ್ವಾಗತಿಸಿ ಪೂಜಿಸಿದೆನು. ಯಥಾನ್ಯಾಯವಾಗಿ ಅರ್ಘ್ಯ-ಪಾದ್ಯಗಳನ್ನೂ ಅವನಿಗೆ ನೀಡಿದೆನು.

12258046a ಪರವತ್ಯಸ್ಮಿ ಚಾಪ್ಯುಕ್ತಃ ಪ್ರಣಯಿಷ್ಯೇ ನಯೇನ ಚ8
12258046c ಅತ್ರ ಚಾಕುಶಲೇ ಜಾತೇ ಸ್ತ್ರಿಯೋ ನಾಸ್ತಿ ವ್ಯತಿಕ್ರಮಃ।।

ಪ್ರೀತಿಯಿಂದ ಮತ್ತು ನಯದಿಂದ ನಾನು ನಿನ್ನ ಅಧೀನದಲ್ಲಿದ್ದೇನೆ ಎಂದೂ ಅವನಿಗೆ ಹೇಳಿದೆ. ಆದರೂ ಅಲ್ಲಿ ಅಕುಶಲ ಘಟನೆಯು ನಡೆದುಹೋಯಿತು. ಇದರಲ್ಲಿ ನನ್ನ ಪತ್ನಿಯ ಅಪರಾಧವೇನೂ ಇಲ್ಲ.

12258047a ಏವಂ ನ ಸ್ತ್ರೀ ನ ಚೈವಾಹಂ ನಾಧ್ವಗಸ್ತ್ರಿದಶೇಶ್ವರಃ।
12258047c ಅಪರಾಧ್ಯತಿ ಧರ್ಮಸ್ಯ ಪ್ರಮಾದಸ್ತ್ವಪರಾಧ್ಯತಿ।।

ಇದರಲ್ಲಿ ನನ್ನ ಪತ್ನಿಯಾಗಲೀ, ನಾನಾಗಲೀ ಅಥವಾ ತ್ರಿದಶೇಶ್ವರನಾಗಲೀ ಅಪರಾಧಿಗಳಲ್ಲ. ಪ್ರಮಾದದಿಂದ ಅಧರ್ಮವನ್ನೆಸಗಲು ಮಗನಿಗೆ ಆಜ್ಞೆಮಾಡಿದುದೇ ಅಪರಾಧವಾಗಿದೆ.

12258048a ಈರ್ಷ್ಯಾಜಂ ವ್ಯಸನಂ ಪ್ರಾಹುಸ್ತೇನ ಚೈವೋರ್ಧ್ವರೇತಸಃ।
12258048c ಈರ್ಷ್ಯಯಾ ತ್ವಹಮಾಕ್ಷಿಪ್ತೋ ಮಗ್ನೋ ದುಷ್ಕೃತಸಾಗರೇ।।

ಊರ್ಧ್ವರೇತಸರು ಇದನ್ನು ಈರ್ಷ್ಯೆಯಿಂದ ಹುಟ್ಟಿದ ವ್ಯಸನವೆನ್ನುತ್ತಾರೆ. ಈರ್ಷ್ಯೆಯಿಂದಲೇ ನಾನು ಪಾಪಸಾಗರದಲ್ಲಿ ಎಸೆಯಲ್ಪಟ್ಟು ಮುಳುಗಿಹೋದೆನು.

12258049a ಹತ್ವಾ ಸಾಧ್ವೀಂ ಚ ನಾರೀಂ ಚ ವ್ಯಸನಿತ್ವಾಚ್ಚ ಶಾಸಿತಾಮ್9
12258049c ಭರ್ತವ್ಯತ್ವೇನ ಭಾರ್ಯಾಂ ಚ ಕೋ ನು ಮಾಂ ತಾರಯಿಷ್ಯತಿ।।

ಭರಣ-ಪೋಷಣ ಮಾಡಬೇಕಾದುದರಿಂದ ಭಾರ್ಯೆಯಾಗಿರುವ, ಮನೆಯಲ್ಲಿಯೇ ವಾಸಿಸಬೇಕಾಗಿದ್ದ ಆ ಸಾಧ್ವೀ ನಾರಿಯನ್ನು ಕೊಂದ ನನ್ನನ್ನು ಯಾರು ತಾನೇ ಪಾರುಮಾಡುತ್ತಾರೆ?

12258050a ಅಂತರೇಣ ಮಯಾಜ್ಞಪ್ತಶ್ಚಿರಕಾರೀ ಹ್ಯುದಾರಧೀಃ।
12258050c ಯದ್ಯದ್ಯ ಚಿರಕಾರೀ ಸ್ಯಾತ್ಸ ಮಾಂ ತ್ರಾಯೇತ ಪಾತಕಾತ್।।

ಉದಾರಧೀ ಚಿರಕಾರಿಗೆ ನಾನು ಅವನ ತಾಯಿಯನ್ನು ಕೊಲ್ಲುವಂತೆ ಆಜ್ಞೆಯನ್ನಿತ್ತೆದ್ದೆನು. ಒಂದು ವೇಳೆ ಇಂದು ಚಿರಕಾರಿಯು ಈ ವಿಷಯದಲ್ಲಿ ವಿಳಂಬಮಾಡಿದ್ದುದೇ ಆದರೆ ನಾನು ಈ ಪಾತಕದಿಂದ ಮುಕ್ತನಾದೇನು!

12258051a ಚಿರಕಾರಿಕ ಭದ್ರಂ ತೇ ಭದ್ರಂ ತೇ ಚಿರಕಾರಿಕ।
12258051c ಯದ್ಯದ್ಯ ಚಿರಕಾರೀ ತ್ವಂ ತತೋಽಸಿ ಚಿರಕಾರಿಕಃ।।

ಚಿರಕಾರಿಕ! ನಿನಗೆ ಮಂಗಳವಾಗಲಿ! ಚಿರಕಾರಿಕ! ನಿನಗೆ ಮಂಗಳವಾಗಲಿ! ಒಂದು ವೇಳೆ ಇಂದು ನೀನು ನನ್ನ ಆಜ್ಞೆಯನ್ನು ಪಾಲಿಸುವುದರಲ್ಲಿ ವಿಳಂಬ ಮಾಡಿದ್ದೇ ಆದರೆ ನೀನು ಚಿರಕಾರಿಯೆಂದೇ ಆಗುವೆ!

12258052a ತ್ರಾಹಿ ಮಾಂ ಮಾತರಂ ಚೈವ ತಪೋ ಯಚ್ಚಾರ್ಜಿತಂ ಮಯಾ।
12258052c ಆತ್ಮಾನಂ ಪಾತಕೇಭ್ಯಶ್ಚ ಭವಾದ್ಯ ಚಿರಕಾರಿಕಃ।।

ನನ್ನನ್ನು, ನಿನ್ನ ತಾಯಿಯನ್ನು ಮತ್ತು ನಾನು ಗಳಿಸಿದ್ದ ತಪಸ್ಸನ್ನು, ಹಾಗೂ ನಿನ್ನನ್ನೂ ಪಾಪದಿಂದ ರಕ್ಷಿಸಿ ಇಂದು ನೀನು ಚಿರಕಾರಿಕನಾಗು!

12258053a ಸಹಜಂ ಚಿರಕಾರಿತ್ವಂ ಚಿರಪ್ರಾಜ್ಞತಯಾ10 ತವ।
12258053c ಸಫಲಂ ತತ್ತವಾದ್ಯಾಸ್ತು ಭವಾದ್ಯ ಚಿರಕಾರಿಕಃ।।

ದೀರ್ಘಪ್ರಜ್ಞೆಯಿರುವ ನಿನಗೆ ಚಿರಕಾರಿತ್ವವು ಸಹಜವೇ ಆಗಿದೆ. ಇಂದು ಅದು ಸಫಲವಾಗುವಂತೆ ಮಾಡಿ ಚಿರಕಾರಿಕನಾಗು.

12258054a ಚಿರಮಾಶಂಸಿತೋ ಮಾತ್ರಾ ಚಿರಂ ಗರ್ಭೇಣ ಧಾರಿತಃ।
12258054c ಸಫಲಂ ಚಿರಕಾರಿತ್ವಂ ಕುರು ತ್ವಂ ಚಿರಕಾರಿಕ।।

ನಿನ್ನಂತಹ ಮಗನನ್ನು ಪಡೆಯಬೇಕೆಂದು ನಿನ್ನ ತಾಯಿಯು ಬಹುಕಾಲ ಆಶೆಯನ್ನಿಟ್ಟುಕೊಂಡಿದ್ದಳು ಮತ್ತು ಬಹುಕಾಲ ನಿನ್ನನ್ನು ಗರ್ಭದಲ್ಲಿ ಧರಿಸಿದ್ದಳು. ಚಿರಕಾರಿಕ! ನಿನ್ನ ಚಿರಕಾರಿತ್ವವನ್ನು ಸಫಲಗೊಳಿಸು.

12258055a ಚಿರಾಯತೇ ಚ ಸಂತಾಪಾಚ್ಚಿರಂ ಸ್ವಪಿತಿ ವಾರಿತಃ।
12258055c ಆವಯೋಶ್ಚಿರಸಂತಾಪಾದವೇಕ್ಷ್ಯ ಚಿರಕಾರಿಕ।।

ಸಂತಾಪವೇ ಸನ್ನಿಹಿತವಾಗಿದ್ದರೂ ನೀನು ವಿಳಂಬಿಸಿ ಕಾರ್ಯಮಾಡುವುದನ್ನು ಬಿಡುವವನಲ್ಲ. ಬೇಡವೆಂದರೂ ಬಹಳ ಹೊತ್ತಿನವರೆಗೂ ಮಲಗಿಕೊಂಡಿರುವವನು. ನಮಗೆ ಪ್ರಾಪ್ತವಾಗುವ ಚಿರಕಾಲದ ಸಂತಾಪವನ್ನು ಗಮನಿಸಿಯಾದರೂ ಇಂದು ಇವನು ತನ್ನ ಕೆಲಸದಲ್ಲಿ ವಿಳಂಬಮಾಡಿರಲಿ!”

12258056a ಏವಂ ಸ ದುಃಖಿತೋ ರಾಜನ್ ಮಹರ್ಷಿರ್ಗೌತಮಸ್ತದಾ।
12258056c ಚಿರಕಾರಿಂ ದದರ್ಶಾಥ ಪುತ್ರಂ ಸ್ಥಿತಮಥಾಂತಿಕೇ।।

ರಾಜನ್! ಹೀಗೆ ದುಃಖಿತನಾದ ಮಹರ್ಷಿ ಗೌತಮನು ಹತ್ತಿರದಲ್ಲಿಯೇ ನಿಂತಿದ್ದ ಪುತ್ರ ಚಿರಕಾರಿಯನ್ನು ನೋಡಿದನು.

12258057a ಚಿರಕಾರೀ ತು ಪಿತರಂ ದೃಷ್ಟ್ವಾ ಪರಮದುಃಖಿತಃ।
12258057c ಶಸ್ತ್ರಂ ತ್ಯಕ್ತ್ವಾ ತತೋ ಮೂರ್ಧ್ನಾ ಪ್ರಸಾದಾಯೋಪಚಕ್ರಮೇ।।

ಚಿರಕಾರಿಯಾದರೋ ತಂದೆಯನ್ನು ನೋಡಿ ಪರಮ ದುಃಖಿತನಾಗಿ ಶಸ್ತ್ರವನ್ನು ಬಿಸುಟು ಶಿರಬಾಗಿ ತಂದೆಯನ್ನು ಪ್ರಸನ್ನಗೊಳಿಸಲು ತೊಡಗಿದನು.

12258058a ಗೌತಮಸ್ತು ಸುತಂ ದೃಷ್ಟ್ವಾ ಶಿರಸಾ ಪತಿತಂ ಭುವಿ।
12258058c ಪತ್ನೀಂ ಚೈವ ನಿರಾಕಾರಾಂ ಪರಾಮಭ್ಯಗಮನ್ಮುದಮ್।।

ಗೌತಮನಾದರೋ ಭೂಮಿಯ ಮೇಲೆ ಶಿರಸಾ ಬಿದ್ದಿದ್ದ ಮಗನನ್ನು ಮತ್ತು ನಿರಾಕಾರಳಾಗಿದ್ದ ಪತ್ನಿಯನ್ನೂ ನೋಡಿ ಪರಮ ಮುದಿತನಾದನು.

12258059a ನ ಹಿ ಸಾ ತೇನ ಸಂಭೇದಂ ಪತ್ನೀ ನೀತಾ ಮಹಾತ್ಮನಾ।
12258059c ವಿಜನೇ ಚಾಶ್ರಮಸ್ಥೇನ ಪುತ್ರಶ್ಚಾಪಿ ಸಮಾಹಿತಃ।।

ಆ ವಿಜನ ಆಶ್ರಮದಲ್ಲಿದ್ದ ಮಹಾತ್ಮ ಗೌತಮನು ಪತ್ನಿಯನ್ನೂ ಮತ್ತು ಸಮಾಹಿತನಾಗಿದ್ದ ಪುತ್ರನನ್ನೂ ಪುನಃ ಯಾವಾಗಲೂ ಬಿಟ್ಟು ಹೋಗಲಿಲ್ಲ.

12258060a ಹನ್ಯಾತ್ತ್ವನಪವಾದೇನ ಶಸ್ತ್ರಪಾಣೌ ಸುತೇ ಸ್ಥಿತೇ।
12258060c ವಿನೀತಂ ಪ್ರಶ್ನಯಿತ್ವಾ ಚ ವ್ಯವಸ್ಯೇದಾತ್ಮಕರ್ಮಸು।।

ಅಪವಾದದಿಂದ ಕೊಲ್ಲಲು ಶಸ್ತ್ರವನ್ನು ಹಿಡಿದು ಮಗನು ವಿನೀತನಾಗಿ ತಂದೆಯ ಆಜ್ಞೆಯನ್ನೇ ಪ್ರಶ್ನಿಸುತ್ತಾ ಬಹಳಹೊತ್ತಿನ ವರೆಗೆ ಹಾಗೆಯೇ ನಿಂತಿದ್ದನು.

12258061a ಬುದ್ಧಿಶ್ಚಾಸೀತ್ಸುತಂ ದೃಷ್ಟ್ವಾ ಪಿತುಶ್ಚರಣಯೋರ್ನತಮ್।
12258061c ಶಸ್ತ್ರಗ್ರಹಣಚಾಪಲ್ಯಂ ಸಂವೃಣೋತಿ ಭಯಾದಿತಿ।।

ತಂದೆಯ ಚರಣಗಳಲ್ಲಿ ಬಿದ್ದಿದ್ದ ಮಗನನ್ನು ನೋಡಿ ಗೌತಮನು “ಭಯದಿಂದಾಗಿ ಇವನು ಶಸ್ತ್ರಗ್ರಹಣಮಾಡಿದುದನ್ನು ಮರೆಮಾಚುತ್ತಿದ್ದಾನೆ” ಎಂದು ಭಾವಿಸಿದನು.

12258062a ತತಃ ಪಿತ್ರಾ ಚಿರಂ ಸ್ತುತ್ವಾ ಚಿರಂ ಚಾಘ್ರಾಯ ಮೂರ್ಧನಿ।
12258062c ಚಿರಂ ದೋರ್ಭ್ಯಾಂ ಪರಿಷ್ವಜ್ಯ ಚಿರಂ ಜೀವೇತ್ಯುದಾಹೃತಃ।।

ಅನಂತರ ತಂದೆ ಗೌತಮನು ಮಗನನ್ನು ಬಹಳ ಹೊತ್ತಿನವರೆಗೂ ಪ್ರಶಂಸಿಸಿ, ಬಹಳ ಹೊತ್ತಿನವರೆಗೂ ಅವನ ನೆತ್ತಿಯನ್ನು ಆಘ್ರಾಣಿಸಿ, ಬಹಳ ಹೊತ್ತಿನವರೆಗೂ ಎರಡೂ ತೋಳುಗಳಿಂದ ಅವನನ್ನು ಆಲಂಗಿಸಿ “ಬಹಳ ಕಾಲದವರೆಗೂ ಜೀವಿಸಿರು” ಎಂದು ಆಶೀರ್ವದಿಸಿದನು ಕೂಡ.

12258063a ಏವಂ ಸ ಗೌತಮಃ ಪುತ್ರಂ ಪ್ರೀತಿಹರ್ಷಸಮನ್ವಿತಃ।
12258063c ಅಭಿನಂದ್ಯ ಮಹಾಪ್ರಾಜ್ಞ ಇದಂ ವಚನಮಬ್ರವೀತ್।।

ಮಹಾಪ್ರಾಜ್ಞ! ಈ ರೀತಿ ಪ್ರೀತಿಹರ್ಷಸಮನ್ವಿತನಾದ ಗೌತಮನು ಮಗನನ್ನು ಅಭಿನಂದಿಸಿ ಈ ಮಾತನ್ನಾಡಿದನು:

12258064a ಚಿರಕಾರಿಕ ಭದ್ರಂ ತೇ ಚಿರಕಾರೀ ಚಿರಂ ಭವ।
12258064c ಚಿರಾಯಮಾಣೇ ತ್ವಯಿ ಚ ಚಿರಮಸ್ಮಿ ಸುದುಃಖಿತಃ11।।

“ಚಿರಕಾರಿಕ! ನಿನಗೆ ಮಂಗಳವಾಗಲಿ! ಚಿರಕಾಲ ಚಿರಕಾರಿಯಾಗಿಯೇ ಇರು. ವಿಳಂಬ ಮಾಡದೇ ಇದ್ದಿದ್ದರೆ ನಾನು ಬಹಳ ಕಾಲ ದುಃಖಿತನಾಗಿರುತ್ತಿದ್ದೆ.”

12258065a ಗಾಥಾಶ್ಚಾಪ್ಯಬ್ರವೀದ್ವಿದ್ವಾನ್ ಗೌತಮೋ ಮುನಿಸತ್ತಮಃ।
12258065c ಚಿರಕಾರಿಷು ಧೀರೇಷು ಗುಣೋದ್ದೇಶಸಮಾಶ್ರಯಾತ್।।

ಮುನಿಸತ್ತಮ ವಿದ್ವಾನ್ ಗೌತಮನು ಧೀರ ಚಿರಕಾರಿಗಳ ಗುಣ-ಉದ್ದೇಶಗಳನ್ನು ಆಶ್ರಯಿಸಿದ ಈ ಗಾಥೆಯನ್ನೂ ಹಾಡಿದನು:

12258066a ಚಿರೇಣ ಮಿತ್ರಂ ಬಧ್ನೀಯಾಚ್ಚಿರೇಣ ಚ ಕೃತಂ ತ್ಯಜೇತ್।
12258066c ಚಿರೇಣ ಹಿ ಕೃತಂ ಮಿತ್ರಂ ಚಿರಂ ಧಾರಣಮರ್ಹತಿ।।

“ಬಹಳ ಕಾಲದವರೆಗೂ ಯೋಚಿಸಿ ಮೈತ್ರಿಯನ್ನು ಬೆಳೆಸಬೇಕು. ಬಹಳ ಕಾಲದವರೆಗೂ ಮೈತ್ರಿಯನ್ನು ಬಿಡಬಾರದು. ಬಿಡಬೇಕಾಗಿ ಬಂದರೂ ಬಹಳ ಕಾಲದವರೆಗೆ ಯೋಚಿಸಿ ನಂತರವೇ ಮೈತ್ರಿಯನ್ನು ಬಿಡಬೇಕು. ಬಹಳಕಾಲ ಯೋಚಿಸಿ ಮಾಡಿಕೊಂಡ ಮಿತ್ರನನ್ನು ಬಹಳಕಾಲದವರೆಗೆ ಇರಿಸಿಕೊಳ್ಳಬೇಕು.

12258067a ರಾಗೇ ದರ್ಪೇ ಚ ಮಾನೇ ಚ ದ್ರೋಹೇ ಪಾಪೇ ಚ ಕರ್ಮಣಿ।
12258067c ಅಪ್ರಿಯೇ ಚೈವ ಕರ್ತವ್ಯೇ ಚಿರಕಾರೀ ಪ್ರಶಸ್ಯತೇ।।

ರಾಗ, ದರ್ಪ, ಅಭಿಮಾನ, ದ್ರೋಹ, ಪಾಪಕರ್ಮ ಮತ್ತು ಅಪ್ರಿಯ ಕಾರ್ಯ – ಇವುಗಳಲ್ಲಿ ವಿಳಂಬಮಾಡುವವನು ಪ್ರಶಂಸೆಗೆ ಪಾತ್ರನಾಗುತ್ತಾನೆ.

12258068a ಬಂಧೂನಾಂ ಸುಹೃದಾಂ ಚೈವ ಭೃತ್ಯಾನಾಂ ಸ್ತ್ರೀಜನಸ್ಯ ಚ।
12258068c ಅವ್ಯಕ್ತೇಷ್ವಪರಾಧೇಷು ಚಿರಕಾರೀ ಪ್ರಶಸ್ಯತೇ।।

ಬಂಧುಗಳು, ಗೆಳೆಯರು, ಸೇವಕರು ಮತ್ತು ಸ್ತ್ರೀಯರು – ಇವರ ಅವ್ಯಕ್ತ ಅಪರಾಧಗಳಲ್ಲಿ ನಿರ್ಣಯವನ್ನು ತೆಗೆದುಕೊಳ್ಳಬೇಕಾಗಿ ಬಂದಾಗ ಬಹಳ ಕಾಲ ಯೋಚಿಸಿ ಕಾರ್ಯಮಾಡುವ ಚಿರಕಾರಿಯು ಪ್ರಶಂಸೆಗೆ ಪಾತ್ರನಾಗುತ್ತಾನೆ.”

12258069a ಏವಂ ಸ ಗೌತಮಸ್ತಸ್ಯ ಪ್ರೀತಃ ಪುತ್ರಸ್ಯ ಭಾರತ।
12258069c ಕರ್ಮಣಾ ತೇನ ಕೌರವ್ಯ ಚಿರಕಾರಿತಯಾ ತಯಾ।।

ಭಾರತ! ಕೌರವ್ಯ! ಹೀಗೆ ಗೌತಮನು ವಿಳಂಬಿಸಿ ಕಾರ್ಯಮಾಡುವ ತನ್ನ ಮಗನ ಕರ್ಮಗಳಿಂದ ಪ್ರೀತನಾದನು.

12258070a ಏವಂ ಸರ್ವೇಷು ಕಾರ್ಯೇಷು ವಿಮೃಶ್ಯ ಪುರುಷಸ್ತತಃ।
12258070c ಚಿರೇಣ ನಿಶ್ಚಯಂ ಕೃತ್ವಾ ಚಿರಂ ನ ಪರಿತಪ್ಯತೇ।।

ಹೀಗೆ ಸರ್ವ ಕಾರ್ಯಗಳಲ್ಲಿಯೂ ವಿಮರ್ಶೆಮಾಡಿಯೇ ಕಾರ್ಯಮಾಡಬೇಕು. ನಿಧಾನವಾಗಿ ನಿಶ್ಚಯಮಾಡಿದವನು ಬಹಳ ಕಾಲದವರೆಗೆ ಪರಿತಪಿಸುವುದಿಲ್ಲ.

12258071a ಚಿರಂ ಧಾರಯತೇ ರೋಷಂ ಚಿರಂ ಕರ್ಮ ನಿಯಚ್ಚತಿ।
12258071c ಪಶ್ಚಾತ್ತಾಪಕರಂ ಕರ್ಮ ನ ಕಿಂ ಚಿದುಪಪದ್ಯತೇ।।

ಬಹಳ ಕಾಲದವರೆಗೆ ರೋಷವನ್ನು ಸಹಿಸಿಕೊಳ್ಳುವ ಮತ್ತು ರೋಷಸಂಬಂಧದ ಕರ್ಮವನ್ನು ಬಹಳ ಕಾಲದವರೆಗೂ ತಡೆದು ನಿಲ್ಲಿಸಿರುವವನು ಮಾಡುವ ಯಾವುದೇ ಕರ್ಮವೂ ಪಶ್ಚಾತ್ತಾಪಕರವಾಗುವುದಿಲ್ಲ.

12258072a ಚಿರಂ ವೃದ್ಧಾನುಪಾಸೀತ ಚಿರಮನ್ವಾಸ್ಯ ಪೂಜಯೇತ್।
12258072c ಚಿರಂ ಧರ್ಮಾನ್ನಿಷೇವೇತ ಕುರ್ಯಾಚ್ಚಾನ್ವೇಷಣಂ ಚಿರಮ್।।

ಬಹಳ ಕಾಲದ ವರೆಗೂ ವೃದ್ಧರ ಸೇವೆಯನ್ನು ಮಾಡುತ್ತಿರಬೇಕು. ಚಿರಕಾಲದವರೆಗೂ ಅವರನ್ನು ಪೂಜಿಸಿ, ಅವರ ಧರ್ಮವನ್ನು ಉಪಾಸಿಸಬೇಕು ಮತ್ತು ಅನುಸರಿಸಬೇಕು.

12258073a ಚಿರಮನ್ವಾಸ್ಯ ವಿದುಷಶ್ಚಿರಂ ಶಿಷ್ಟಾನ್ನಿಷೇವ್ಯ ಚ।
12258073c ಚಿರಂ ವಿನೀಯ ಚಾತ್ಮಾನಂ ಚಿರಂ ಯಾತ್ಯನವಜ್ಞತಾಮ್।।

ಬಹಳ ಕಾಲದವರೆಗೆ ವಿದ್ವಾಂಸರ ಜೊತೆಯಲ್ಲಿಯೇ ಇರುತ್ತಾ ಶಿಷ್ಯರನ್ನು ಸೇವಿಸುತ್ತಾ ದೀರ್ಘಕಾಲ ಮನಸ್ಸನ್ನು ನಿಗ್ರಹಿಸಿಕೊಂಡಿರುವವನು ಬಹಳ ಕಾಲದವರೆಗೆ ತಿರಸ್ಕರಣೀಯನಾಗಿರುವುದಿಲ್ಲ.

12258074a ಬ್ರುವತಶ್ಚ ಪರಸ್ಯಾಪಿ ವಾಕ್ಯಂ ಧರ್ಮೋಪಸಂಹಿತಮ್।
12258074c ಚಿರಂ ಪೃಚ್ಚೇಚ್ಚಿರಂ ಬ್ರೂಯಾಚ್ಚಿರಂ ನ ಪರಿಭೂಯತೇ।।

ಧರ್ಮಕ್ಕೆ ಸಂಬಂಧಿಸಿದ ಮಾತುಗಳನ್ನು ಹೇಳುವವನು ಧರ್ಮಸಂಬಂಧ ಪ್ರಶ್ನೆಗಳನ್ನು ಕೇಳಿದಾಗ ಬಹಳ ಕಾಲ ಯೋಚಿಸಿಯೇ ಉತ್ತರಿಸಬೇಕು. ಇದರಿಂದ ಉಪದೇಶ ನೀಡುವವನಾಗಲೀ ಅಥವಾ ಪ್ರಶ್ನೆಮಾಡಿದವನಾಗಲೀ ಬಹುಕಾಲದವರೆಗೆ ಪಶ್ಚಾತ್ತಾಪ ಪಡುವುದಿಲ್ಲ.

12258075a ಉಪಾಸ್ಯ ಬಹುಲಾಸ್ತಸ್ಮಿನ್ನಾಶ್ರಮೇ ಸುಮಹಾತಪಾಃ।
12258075c ಸಮಾಃ ಸ್ವರ್ಗಂ ಗತೋ ವಿಪ್ರಃ ಪುತ್ರೇಣ ಸಹಿತಸ್ತದಾ।।

ಆ ಸುಮಹಾತಪಸ್ವೀ ವಿಪ್ರ ಗೌತಮನು ಅನೇಕ ವರ್ಷಗಳು ಅದೇ ಆಶ್ರಮದಲ್ಲಿದ್ದುಕೊಂಡು ಪುತ್ರನೊಂದಿಗೆ ಸ್ವರ್ಗಕ್ಕೆ ಹೋದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಚಿರಕಾರುಪಾಖ್ಯಾನೇ ಅಷ್ಟಪಂಚಾಶದಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಚಿರಕಾರುಪಾಖ್ಯಾನ ಎನ್ನುವ ಇನ್ನೂರಾಐವತ್ತೆಂಟನೇ ಅಧ್ಯಾಯವು.


  1. ಪರುಷಂ ಪ್ರಾಹ ಯತ್ಪಿತಾ। (ಭಾರತ ದರ್ಶನ). ↩︎

  2. ವೃಕ್ಷಾತ್ (ಭಾರತ ದರ್ಶನ). ↩︎

  3. ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಮಾತೃಲಾಭೇ ಸನಾಥತ್ವಮನಾಥತ್ವಂ ವಿಪರ್ಯಯೇ। ↩︎

  4. ಪ್ರಿಯಾ (ಭಾರತ ದರ್ಶನ). ↩︎

  5. ಯದಾ ಯಾಸ್ಯಂತಿ ಪುರುಷಾಃ ಸ್ತ್ರಿಯೋ ನಾರ್ಹಂತಿ ವಾಚ್ಯತಾಮ್। (ಭಾರತ ದರ್ಶನ). ↩︎

  6. ಇದಕ್ಕೆ ಮೊದಲು ಭಾರತ ದರ್ಶನದಲ್ಲಿ ನಾಪರಾಧೋಽಸ್ತಿ ನಾರೀಣಾಂ ನರ ಏವಾಪರಾಧ್ಯತಿ। ಎಂಬ ಶ್ಲೋಕಾರ್ಧವಿದೆ. ↩︎

  7. ಈ ಶ್ಲೋಕದ ಭಾವಾರ್ಥವನ್ನು ವ್ಯಾಖ್ಯಾನಕಾರರು ಹೀಗೆ ಕೊಡುತ್ತಾರೆ: ಪಿತೃ ತೋಷಣೇನ ಸ್ವರ್ಗಪ್ರಾಪ್ತಿಃ। ಮಾತಾ ತು ಅದೃಷ್ಟದ್ವಾರಾ ಲೋಕದ್ವಯಪ್ರದಾ।। ಅರ್ಥಾತ್ ಪಿತೃ ಶುಶ್ರೂಷೆಯಿಂದ ಸ್ವರ್ಗಪ್ರಾಪ್ತಿಯಾಗುತ್ತದೆ. ತಾಯಿಯಾದರೋ ಅದೃಷ್ಟದ ಮೂಲಕ ಇಹ ಮತ್ತು ಪರಲೋಕಗಳಲ್ಲಿ ಸುಖವನ್ನುಂಟುಮಾಡುತ್ತಾಳೆ. ↩︎

  8. ಪ್ರಣಯಿಷ್ಯತಿ ತೇನ ಚ। (ಭಾರತ ದರ್ಶನ). ↩︎

  9. ವಾಸಿತಾಮ್। (ಭಾರತ ದರ್ಶನ). ↩︎

  10. ಅತಿಪ್ರಜ್ಞತಯಾ (ಭಾರತ ದರ್ಶನ). ↩︎

  11. ಚಿರಾಯ ಯದಿ ತೇ ಸೌಮ್ಯ ಚಿರಮಸ್ಮಿ ನ ದುಃಖಿತಃ। (ಭಾರತ ದರ್ಶನ). ↩︎