257: ವಿಚಖ್ನುಗೀತಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 257

ಸಾರ

ವಿಚಖ್ನು ರಾಜನಿಂದ ಅಹಿಂಸಾಧರ್ಮದ ಪ್ರಶಂಸೆ (1-13).

12257001 ಭೀಷ್ಮ ಉವಾಚ।
12257001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12257001c ಪ್ರಜಾನಾಮನುಕಂಪಾರ್ಥಂ ಗೀತಂ ರಾಜ್ಞಾ ವಿಚಖ್ನುನಾ।।

ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ರಾಜ ವಿಚಖ್ನುವು ಪ್ರಜೆಗಳ ಮೇಲಿನ ಅನುಕಂಪದಿಂದ ಹಾಡಿದ ಗೀತೆಯನ್ನು ಉದಾಹರಿಸುತ್ತಾರೆ.

12257002a ಚಿನ್ನಸ್ಥೂಣಂ ವೃಷಂ ದೃಷ್ಟ್ವಾ ವಿರಾವಂ ಚ ಗವಾಂ ಭೃಶಮ್।
12257002c ಗೋಗ್ರಹೇ ಯಜ್ಞವಾಟಸ್ಯ ಪ್ರೇಕ್ಷಮಾಣಃ ಸ ಪಾರ್ಥಿವಃ।।
12257003a ಸ್ವಸ್ತಿ ಗೋಭ್ಯೋಽಸ್ತು ಲೋಕೇಷು ತತೋ ನಿರ್ವಚನಂ ಕೃತಮ್।

ಯಜ್ಞವಾಟಿಯಲ್ಲಿ ಕತ್ತನ್ನು ಕತ್ತರಿಸಿದ್ದ ಹೋರಿಯನ್ನು ನೋಡಿ ಗೋಗ್ರಹದಲ್ಲಿ ಗೋವುಗಳು ಬಹಳವಾಗಿ ರೋದಿಸುತ್ತಿರುವುದನ್ನು ಆ ಪಾರ್ಥಿವನು ನೋಡಿ, “ಲೋಕದಲ್ಲಿರುವ ಗೋವುಗಳಿಗೆಲ್ಲವಕ್ಕೂ ಮಂಗಳವಾಗಲಿ” ಎಂಬ ನಿರ್ವಚನವನ್ನು ಮಾಡಿದನು.

12257003c ಹಿಂಸಾಯಾಂ ಹಿ ಪ್ರವೃತ್ತಾಯಾಮಾಶೀರೇಷಾನುಕಲ್ಪಿತಾ।।
12257004a ಅವ್ಯವಸ್ಥಿತಮರ್ಯಾದೈರ್ವಿಮೂಢೈರ್ನಾಸ್ತಿಕೈರ್ನರೈಃ।
12257004c ಸಂಶಯಾತ್ಮಭಿರವ್ಯಕ್ತೈರ್ಹಿಂಸಾ ಸಮನುಕೀರ್ತಿತಾ।।

ಹಿಂಸಾಪ್ರವೃತ್ತಿಯನ್ನು ನಿಂದಿಸುತ್ತಾ ಈ ರೀತಿ ಹೇಳಿದನು ಕೂಡ: “ಧರ್ಮದ ಮರ್ಯಾದೆಯಿಂದ ಭ್ರಷ್ಟರಾದ ಮೂರ್ಖರು, ನಾಸ್ತಿಕರು, ಆತ್ಮನ ವಿಷಯದಲ್ಲಿ ಸಂದೇಹವುಳ್ಳವರು ಮತ್ತು ಅಪ್ರಸಿದ್ಧರು ಮಾತ್ರ ಹಿಂಸೆಯನ್ನು ಸಮರ್ಥಿಸುತ್ತಾರೆ.

12257005a ಸರ್ವಕರ್ಮಸ್ವಹಿಂಸಾ ಹಿ ಧರ್ಮಾತ್ಮಾ ಮನುರಬ್ರವೀತ್।
12257005c ಕಾಮರಾಗಾದ್ವಿಹಿಂಸಂತಿ ಬಹಿರ್ವೇದ್ಯಾಂ ಪಶೂನ್ನರಾಃ।।

ಧರ್ಮಾತ್ಮ ಮನುವು ಸರ್ವಕರ್ಮಗಳಲ್ಲಿ ಅಹಿಂಸೆಯನ್ನೇ ಪ್ರತಿಪಾದಿಸಿದ್ದಾನೆ. ಮನುಷ್ಯರು ತಮ್ಮ ಕಾಮ-ರಾಗಗಳನ್ನು ಪೂರೈಸಿಕೊಳ್ಳಲು ಬಹಿರ್ವೇದಿಯಲ್ಲಿ ಪಶುಗಳನ್ನು ಬಲಿಕೊಡುತ್ತಾರೆ.

12257006a ತಸ್ಮಾತ್ಪ್ರಮಾಣತಃ ಕಾರ್ಯೋ ಧರ್ಮಃ ಸೂಕ್ಷ್ಮೋ ವಿಜಾನತಾ।
12257006c ಅಹಿಂಸೈವ ಹಿ ಸರ್ವೇಭ್ಯೋ ಧರ್ಮೇಭ್ಯೋ ಜ್ಯಾಯಸೀ ಮತಾ।।

ಆದುದರಿಂದ ವಿದ್ವಾಂಸನು ವೈದಿಕ ಪ್ರಮಾಣಗಳಿಂದ ಧರ್ಮಸೂಕ್ಷ್ಮವನ್ನು ನಿರ್ಣಯಿಸಬೇಕು. ಎಲ್ಲ ಪ್ರಾಣಿಗಳಿಗೂ ಎಲ್ಲ ಧರ್ಮಗಳಿಗಿಂತಲೂ ಅಹಿಂಸಾಧರ್ಮವೇ ಶ್ರೇಷ್ಠವಾದುದೆಂದು ವಿದ್ವಾಂಸರ ಅಭಿಪ್ರಾಯವಾಗಿದೆ.

12257007a ಉಪೋಷ್ಯ ಸಂಶಿತೋ ಭೂತ್ವಾ ಹಿತ್ವಾ ವೇದಕೃತಾಃ ಶ್ರುತೀಃ।
12257007c ಆಚಾರ ಇತ್ಯನಾಚಾರಾಃ ಕೃಪಣಾಃ ಫಲಹೇತವಃ।।

ಉಪವಾಸ ಮಾಡುತ್ತಾ ಕಠಿನ ವ್ರತಗಳನ್ನು ಪರಿಪಾಲಿಸಬೇಕು. ವೇದಗಳಲ್ಲಿರುವ ಕಾಮ್ಯಕರ್ಮಗಳನ್ನು ಪರಿತ್ಯಜಿಸಬೇಕು. ಸಕಾಮ ಕರ್ಮಗಳು ಅನಾಚಾರಕರ್ಮಗಳೆಂದು ಭಾವಿಸಿ ಅವುಗಳಲ್ಲಿ ಪ್ರವೃತ್ತನಾಗಬಾರದು. ಕೃಪಣರು ಮಾತ್ರ ಫಲೇಚ್ಛೆಯಿಂದ ಕರ್ಮಗಳನ್ನು ಮಾಡುತ್ತಾರೆ.

12257008a ಯದಿ ಯಜ್ಞಾಂಶ್ಚ ವೃಕ್ಷಾಂಶ್ಚ ಯೂಪಾಂಶ್ಚೋದ್ದಿಶ್ಯ ಮಾನವಾಃ।
12257008c ವೃಥಾ ಮಾಂಸಾನಿ ಖಾದಂತಿ ನೈಷ ಧರ್ಮಃ ಪ್ರಶಸ್ಯತೇ।।

ಯಜ್ಞದ ಯೂಪಸ್ತಂಭಕ್ಕಾಗಿ ಮನುಷ್ಯನು ವೃಕ್ಷಗಳನ್ನು ಕಡಿಯುವುದು ಮತ್ತು ವೃಥಾ ಮಾಂಸಗಳನ್ನು ತಿನ್ನುವುದು – ಇವೆರಡೂ ಧರ್ಮವೆನಿಸಿಕೊಳ್ಳುವುದಿಲ್ಲ.

12257009a ಮಾಂಸಂ ಮಧು ಸುರಾ ಮತ್ಸ್ಯಾ ಆಸವಂ ಕೃಸರೌದನಮ್।
12257009c ಧೂರ್ತೈಃ ಪ್ರವರ್ತಿತಂ ಹ್ಯೇತನ್ನೈತದ್ವೇದೇಷು ಕಲ್ಪಿತಮ್।।
12257010a ಕಾಮಾನ್ಮೋಹಾಚ್ಚ ಲೋಭಾಚ್ಚ ಲೌಲ್ಯಮೇತತ್ಪ್ರವರ್ತಿತಮ್।

ಮಾಂಸ, ಜೇನುತುಪ್ಪ, ಸುರೆ, ಮೀನು ಮತ್ತು ಎಳ್ಳನ್ನ – ಇವುಗಳನ್ನು ಧೂರ್ತರು ಯಜ್ಞದ ಸಂಭಾರಗಳೆಂದು ಕಲ್ಪಿಸಿದ್ದಾರೆ. ಆದರೆ ವೇದಗಳಲ್ಲಿ ಇವುಗಳ ಉಪಯೋಗವಿಧಾನಗಳಿರುವುದಿಲ್ಲ. ಕಾಮ, ಮೋಹ, ಲೋಭ, ಮತ್ತು ಲೋಲುಪತೆಗಳಿಂದ ಅವರು ಹೀಗೆ ಮಾಡಿಕೊಂಡಿದ್ದಾರೆ.

12257010c ವಿಷ್ಣುಮೇವಾಭಿಜಾನಂತಿ ಸರ್ವಯಜ್ಞೇಷು ಬ್ರಾಹ್ಮಣಾಃ।
12257010e ಪಾಯಸೈಃ ಸುಮನೋಭಿಶ್ಚ ತಸ್ಯಾಪಿ ಯಜನಂ ಸ್ಮೃತಮ್।।

ಸರ್ವಯಜ್ಞಗಳಲ್ಲಿ ಬ್ರಾಹ್ಮಣರು ಪಾಯಸ ಮತ್ತು ಸುಮನೋಹರ ಪುಷ್ಪಗಳಿಂದ ವಿಷ್ಣುವನ್ನೇ ಪೂಜಿಸುತ್ತಾರೆ. ಅದೂ ಕೂಡ ಯಜ್ಞವೆಂದೇ ಹೇಳಲ್ಪಟ್ಟಿದೆ.

12257011a ಯಜ್ಞಿಯಾಶ್ಚೈವ ಯೇ ವೃಕ್ಷಾ ವೇದೇಷು ಪರಿಕಲ್ಪಿತಾಃ।
12257011c ಯಚ್ಚಾಪಿ ಕಿಂ ಚಿತ್ಕರ್ತವ್ಯಮನ್ಯಚ್ಚೋಕ್ಷೈಃ ಸುಸಂಸ್ಕೃತಮ್।
12257011e ಮಹಾಸತ್ತ್ವೈಃ ಶುದ್ಧಭಾವೈಃ ಸರ್ವಂ ದೇವಾರ್ಹಮೇವ ತತ್।।

ವೇದಗಳಲ್ಲಿ ಯಜ್ಞಗಳಿಗೆ ಯಾವ ವೃಕ್ಷಗಳನ್ನು ಹೇಳಲಾಗಿವೆಯೋ ಅವುಗಳನ್ನು ಶುದ್ಧ ಆಚಾರವಿಚಾರವುಳ್ಳ ಸಾತ್ತ್ವಿಕ ಪುರುಷನು ವಿಶುದ್ಧ ಭಾವನೆಯ ಪ್ರೋಕ್ಷಣೆಯಿಂದಲೇ ಹವಿಸ್ಸಾಗಿ ಸಿದ್ಧಗೊಳಿಸಿದರೆ ಅದೇ ದೇವತೆಗಳಿಗೆ ಅರ್ಹವಾಗುತ್ತದೆ.””

12257012 ಯುಧಿಷ್ಠಿರ ಉವಾಚ।
12257012a ಶರೀರಮಾಪದಶ್ಚಾಪಿ ವಿವದಂತ್ಯವಿಹಿಂಸತಃ।
12257012c ಕಥಂ ಯಾತ್ರಾ ಶರೀರಸ್ಯ ನಿರಾರಂಭಸ್ಯ ಸೇತ್ಸ್ಯತಿ।।

ಯುಧಿಷ್ಠಿರನು ಹೇಳಿದನು: “ಶರೀರಕ್ಕೆ ಆಪತ್ತುಂಟಾದಾಗ ಹಿಂಸೆ-ಅಹಿಂಸೆಗಳ ನಡುವೆ ಘರ್ಷಣೆಯಾಗುತ್ತದೆ. ಅಹಿಂಸಾವಾದಿಯು ಶರೀರದ ಯಾತ್ರೆಯನ್ನು ಹೇಗೆ ನಿರ್ವಹಿಸುತ್ತಾನೆ?”

12257013 ಭೀಷ್ಮ ಉವಾಚ।
12257013a ಯಥಾ ಶರೀರಂ ನ ಗ್ಲಾಯೇನ್ನೇಯಾನ್ಮೃತ್ಯುವಶಂ ಯಥಾ।
12257013c ತಥಾ ಕರ್ಮಸು ವರ್ತೇತ ಸಮರ್ಥೋ ಧರ್ಮಮಾಚರೇತ್।।

ಭೀಷ್ಮನು ಹೇಳಿದನು: “ಶರೀರವು ಕ್ಷೀಣಿಸಿ ಅಕಾಲಮೃತ್ಯುವಿಗೆ ವಶವಾಗದಂತೆ ಕರ್ಮಗಳನ್ನು ಮಾಡುತ್ತಿರಬೇಕು. ಶರೀರಸಾಮರ್ಥ್ಯವುಳ್ಳವನೇ ಧರ್ಮವನ್ನು ಆಚರಿಸಬಲ್ಲನು.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ವಿಚಖ್ನುಗೀತಾಯಾಂ ಸಪ್ತಪಂಚಾಶದಧಿಕದ್ವಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ವಿಚಖ್ನುಗೀತಾ ಎನ್ನುವ ಇನ್ನೂರಾಐವತ್ತೇಳನೇ ಅಧ್ಯಾಯವು.