253: ತುಲಾಭಾರಜಾಜಲಿಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 253

ಸಾರ

ಜಾಜಲಿಯ ಘೋರ ತಪಸ್ಸು (1-19); ತಲೆಯ ಮೇಲೆ ಪಕ್ಷಿಯು ಗೂಡುಕಟ್ಟಿದುದರಿಂದ ಅವನಿಗುಂಟಾದ ಆತ್ಮಾಭಿಮಾನ (20-41); ಆಕಾಶವಾಣಿಯ ಪ್ರೇರಣೆಯಂತೆ ವೈಶ್ಯನಾದ ತುಲಾಧಾರನ ಬಳಿ ಜಾಜಲಿಯ ಆಗಮನ (42-51).

12253001 ಭೀಷ್ಮ ಉವಾಚ।
12253001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12253001c ತುಲಾಧಾರಸ್ಯ ವಾಕ್ಯಾನಿ ಧರ್ಮೇ ಜಾಜಲಿನಾ ಸಹ।।

ಭೀಷ್ಮನು ಹೇಳಿದನು: ”ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾಗಿರುವ ಜಾಜಲಿಗೆ ತುಲಾಧಾರನು ಹೇಳಿದ ಧರ್ಮದ ಕುರಿತಾದ ಈ ಮಾತುಗಳನ್ನು ಉದಾಹರಿಸುತ್ತಾರೆ.

12253002a ವನೇ ವನಚರಃ ಕಶ್ಚಿಜ್ಜಾಜಲಿರ್ನಾಮ ವೈ ದ್ವಿಜಃ।
12253002c ಸಾಗರೋದ್ದೇಶಮಾಗಮ್ಯ ತಪಸ್ತೇಪೇ ಮಹಾತಪಾಃ।।

ವನದಲ್ಲಿ ವನಚರನಾಗಿ ವಾಸಿಸುತ್ತಿದ್ದ ಮಹಾತಪಸ್ವೀ ಜಾಜಲಿ ಎಂಬ ಹೆಸರಿನ ಓರ್ವ ದ್ವಿಜನು ಸಾಗರತೀರಕ್ಕೆ ಬಂದು ತಪಸ್ಸನ್ನು ತಪಿಸಿದನು.

12253003a ನಿಯತೋ ನಿಯತಾಹಾರಶ್ಚೀರಾಜಿನಜಟಾಧರಃ।
12253003c ಮಲಪಂಕಧರೋ ಧೀಮಾನ್ಬಹೂನ್ ವರ್ಷಗಣಾನ್ಮುನಿಃ।।

ಚೀರ-ಅಜಿನ-ಜಟೆಗಳನ್ನು ಧರಿಸಿದ್ದ ಆ ಧೀಮಂತ ಮುನಿಯು ನಿಯಮದಿಂದಿರುತ್ತಾ ನಿಯತಾಹಾರನಾಗಿ ಅನೇಕ ವರ್ಷಗಳ ವರೆಗೆ ಮೈಮೇಲೆ ಕೊಳೆಯನ್ನೂ ಕೆಸರನ್ನೂ ಧರಿಸಿಕೊಂಡೇ ಇದ್ದನು.

12253004a ಸ ಕದಾ ಚಿನ್ಮಹಾತೇಜಾ ಜಲವಾಸೋ ಮಹೀಪತೇ।
12253004c ಚಚಾರ ಲೋಕಾನ್ವಿಪ್ರರ್ಷಿಃ ಪ್ರೇಕ್ಷಮಾಣೋ ಮನೋಜವಃ।।

ಮಹೀಪತೇ! ಒಮ್ಮೊಮ್ಮೆ ಆ ಮಹಾತೇಜಸ್ವಿ ವಿಪ್ರರ್ಷಿಯು ಮನೋವೇಗದಿಂದ ಲೋಕಗಳನ್ನು ವೀಕ್ಷಿಸುತ್ತಾ ಸಂಚರಿಸಿ ಜಲವಾಸಿಯಾಗುತ್ತಿದ್ದನು.

12253005a ಸ ಚಿಂತಯಾಮಾಸ ಮುನಿರ್ಜಲಮಧ್ಯೇ ಕದಾ ಚನ।
12253005c ವಿಪ್ರೇಕ್ಷ್ಯ ಸಾಗರಾಂತಾಂ ವೈ ಮಹೀಂ ಸವನಕಾನನಾಮ್।।

ಒಮ್ಮೆ ಸಾಗರವೇ ಕೊನೆಯಾಗುಳ್ಳ ವನಕಾನನಗಳಿಂದ ಕೂಡಿದ್ದ ಮಹಿಯನ್ನು ನಿರೀಕ್ಷಿಸಿ ಜಲಮಧ್ಯೆ ಸೇರಿದ ಮುನಿಯು ಈ ರೀತಿ ಆಲೋಚಿಸಿದನು:

12253006a ನ ಮಯಾ ಸದೃಶೋಽಸ್ತೀಹ ಲೋಕೇ ಸ್ಥಾವರಜಂಗಮೇ।
12253006c ಅಪ್ಸು ವೈಹಾಯಸಂ ಗಚ್ಚೇನ್ಮಯಾ ಯೋಽನ್ಯಃ ಸಹೇತಿ ವೈ।।

“ಈ ಲೋಕದ ಸ್ಥಾವರ-ಜಂಗಮಗಳಲ್ಲೆಲ್ಲ ನನ್ನ ಸದೃಶರಾದವರು ಯಾರೂ ಇಲ್ಲ. ನೀರು ಮತ್ತು ಆಕಾಶಗಳಲ್ಲಿ ನನ್ನೊಡನೆ ಸಂಚರಿಸಲು ಯಾರಿಗೆ ತಾನೇ ಸಾಧ್ಯವಿದೆ?”

12253007a ಸ ದೃಶ್ಯಮಾನೋ ರಕ್ಷೋಭಿರ್ಜಲಮಧ್ಯೇಽವದತ್ತತಃ।
12253007c ಅಬ್ರುವಂಶ್ಚ ಪಿಶಾಚಾಸ್ತಂ ನೈವಂ ತ್ವಂ ವಕ್ತುಮರ್ಹಸಿ।।

ಜಲಮಧ್ಯದಲ್ಲಿ ಈ ರೀತಿ ಹೇಳುತ್ತಿದ್ದ ಅವನನ್ನು ರಾಕ್ಷಸರು ನೋಡಿದರು. ಆಗ ಪಿಶಾಚರು ಅವನಿಗೆ “ಹೀಗೆ ಹೇಳುವುದು ಸರಿಯಲ್ಲ” ಎಂದರು.

12253008a ತುಲಾಧಾರೋ ವಣಿಗ್ಧರ್ಮಾ ವಾರಾಣಸ್ಯಾಂ ಮಹಾಯಶಾಃ।
12253008c ಸೋಽಪ್ಯೇವಂ ನಾರ್ಹತೇ ವಕ್ತುಂ ಯಥಾ ತ್ವಂ ದ್ವಿಜಸತ್ತಮ।।

“ದ್ವಿಜಸತ್ತಮ! ವಾರಾಣಸಿಯಲ್ಲಿ ಮಹಾಯಶೋವಂತನಾದ ವೈಶ್ಯಧರ್ಮವನ್ನು ಪಾಲಿಸುತ್ತಿರುವ ತುಲಾಧಾರನೂ ಕೂಡ ನೀನು ಹೇಳಿದಂತೆ ಹೇಳುವವನಲ್ಲ.”

12253009a ಇತ್ಯುಕ್ತೋ ಜಾಜಲಿರ್ಭೂತೈಃ ಪ್ರತ್ಯುವಾಚ ಮಹಾತಪಾಃ।
12253009c ಪಶ್ಯೇಯಂ ತಮಹಂ ಪ್ರಾಜ್ಞಂ ತುಲಾಧಾರಂ ಯಶಸ್ವಿನಮ್।।

ಭೂತಗಳು ಹೀಗೆ ಹೇಳಲು ಮಹಾತಪಸ್ವೀ ಜಾಜಲಿಯು ಅವರಿಗೆ ಪ್ರತ್ಯುತ್ತರಿಸಿದನು: “ಯಶಸ್ವಿನೀ ಪ್ರಾಜ್ಞ ತುಲಾಧಾರನನ್ನು ನಾನು ಈಗಲೇ ಸಂದರ್ಶಿಸುತ್ತೇನೆ.”

12253010a ಇತಿ ಬ್ರುವಾಣಂ ತಮೃಷಿಂ ರಕ್ಷಾಂಸ್ಯುದ್ಧೃತ್ಯ ಸಾಗರಾತ್।
12253010c ಅಬ್ರುವನ್ ಗಚ್ಚ ಪಂಥಾನಮಾಸ್ಥಾಯೇಮಂ ದ್ವಿಜೋತ್ತಮ।।

ಹೀಗೆ ಹೇಳಿದ ಆ ಋಷಿಯನ್ನು ರಾಕ್ಷಸರು ಸಾಗರದಿಂದ ಮೇಲಕ್ಕೆತ್ತಿ ಹೇಳಿದರು: “ದ್ವಿಜೋತ್ತಮ! ಈ ಮಾರ್ಗವನ್ನೇ ಹಿಡಿದು ಹೋಗು!”

12253011a ಇತ್ಯುಕ್ತೋ ಜಾಜಲಿರ್ಭೂತೈರ್ಜಗಾಮ ವಿಮನಾಸ್ತದಾ।
12253011c ವಾರಾಣಸ್ಯಾಂ ತುಲಾಧಾರಂ ಸಮಾಸಾದ್ಯಾಬ್ರವೀದ್ವಚಃ।।

ಭೂತಗಳಿಂದ ಇದನ್ನು ಕೇಳಿದ ಜಾಜಲಿಯು ವಿಮನಸ್ಕನಾಗಿಯೇ ವಾರಾಣಸಿಯ ತುಲಾಧಾರನ ಬಳಿಸಾರಿ ಅವನಿಗೆ ಹೀಗೆ ಹೇಳಿದನು.”

12253012 ಯುಧಿಷ್ಠಿರ ಉವಾಚ।
12253012a ಕಿಂ ಕೃತಂ ಸುಕೃತಂ ಕರ್ಮ ತಾತ ಜಾಜಲಿನಾ ಪುರಾ।
12253012c ಯೇನ ಸಿದ್ಧಿಂ ಪರಾಂ ಪ್ರಾಪ್ತಸ್ತನ್ನೋ ವ್ಯಾಖ್ಯಾತುಮರ್ಹಸಿ।।

ಯುಧಿಷ್ಠಿರನು ಹೇಳಿದನು: “ತಂದೆಯೇ! ಅಂಥಹ ಪರಮ ಸಿದ್ಧಿಯನ್ನು ಪಡೆಯಲು ಜಾಜಲಿಯು ಹಿಂದೆ ಯಾವ ಸುಕೃತ ಕರ್ಮವನ್ನು ಮಾಡಿದ್ದನು? ಅದನ್ನು ನನಗೆ ಹೇಳಬೇಕು.”

12253013 ಭೀಷ್ಮ ಉವಾಚ।
12253013a ಅತೀವ ತಪಸಾ ಯುಕ್ತೋ ಘೋರೇಣ ಸ ಬಭೂವ ಹ।
12253013c ನದ್ಯುಪಸ್ಪರ್ಶನರತಃ ಸಾಯಂ ಪ್ರಾತರ್ಮಹಾತಪಾಃ।।

ಭೀಷ್ಮನು ಹೇಳಿದನು: “ಅವನು ಅತೀವ ಘೋರ ತಪಸ್ಸಿನಲ್ಲಿ ನಿರತನಾಗಿದ್ದನು. ಆ ಮಹಾತಪಸ್ವಿಯು ಪ್ರಾತಃ-ಸಾಯಂ ಸಮಯಗಳಲ್ಲಿ ಸ್ನಾನಮಾಡಿ ಸಂಧ್ಯಾವಂದನೆಗಳನ್ನು ಮಾಡುತ್ತಿದ್ದನು.

12253014a ಅಗ್ನೀನ್ ಪರಿಚರನ್ ಸಮ್ಯಕ್ ಸ್ವಾಧ್ಯಾಯಪರಮೋ ದ್ವಿಜಃ।
12253014c ವಾನಪ್ರಸ್ಥವಿಧಾನಜ್ಞೋ ಜಾಜಲಿರ್ಜ್ವಲಿತಃ ಶ್ರಿಯಾ।।

ವಿಧಿಪೂರ್ವಕವಾಗಿ ಅಗ್ನಿಕಾರ್ಯಗಳನ್ನು ಮಾಡುತ್ತಿದ್ದನು ಮತ್ತು ಆ ಪರಮ ದ್ವಿಜನು ಸ್ವಾಧ್ಯಾಯಪರನಾಗಿದ್ದನು. ವಾನಪ್ರಸ್ಥವಿಧಾನಗಳನ್ನು ತಿಳಿದಿದ್ದ ಜಾಜಲಿಯು ಕಾಂತಿಯಿಂದ ಬೆಳಗುತ್ತಿದ್ದನು.

12253015a ಸತ್ಯೇ ತಪಸಿ ತಿಷ್ಠನ್ಸ ನ ಚ ಧರ್ಮಮವೈಕ್ಷತ।
12253015c ವರ್ಷಾಸ್ವಾಕಾಶಶಾಯೀ ಸ ಹೇಮಂತೇ ಜಲಸಂಶ್ರಯಃ।।

ಸತ್ಯ ತಪಸ್ಸಿನಲ್ಲಿ ನಿರತನಾಗಿದ್ದ ಅವನು ಧರ್ಮವನ್ನು ಎಂದೂ ಕಡೆಗಾಣಲಿಲ್ಲ. ಮಳೆಗಾಲದಲ್ಲಿ ಅವನು ಆಕಾಶವನ್ನೇ ಹೊದಿಕೆಯನ್ನಾಗಿ ಮಾಡಿಕೊಂಡು ಮಲಗುತ್ತಿದ್ದನು. ಹೇಮಂತ ಋತುವಿನಲ್ಲಿ ನೀರಿನೊಳಗೆ ಕುಳಿತು ತಪಸ್ಸನ್ನಾಚರಿಸುತ್ತಿದ್ದನು.

12253016a ವತಾತಪಸಹೋ ಗ್ರೀಷ್ಮೇ ನ ಚ ಧರ್ಮಮವಿಂದತ।
12253016c ದುಃಖಶಯ್ಯಾಶ್ಚ ವಿವಿಧಾ ಭೂಮೌ ಚ ಪರಿವರ್ತನಮ್।।

ಗ್ರೀಷ್ಮದಲ್ಲಿ ಗಾಳಿ-ಬಿಸಿಲುಗಳನ್ನು ಸಹಿಸಿಕೊಳ್ಳುತ್ತಿದ್ದನು. ಆದರೂ ಅವನಿಗೆ ಧರ್ಮವು ಏನೆಂದು ಅರ್ಥವಾಗಲಿಲ್ಲ. ಅವನು ಭೂಮಿಯ ಮೇಲೆ ಹೊರಳಾಡುತ್ತಿದ್ದನು. ದುಃಖವನ್ನುಂಟುಮಾಡುವ ವಿವಿಧ ಮುಳ್ಳಿನ ಹಾಸಿಗೆಗಳ ಮೇಲೆ ಮಲಗುತ್ತಿದ್ದನು.

12253017a ತತಃ ಕದಾ ಚಿತ್ಸ ಮುನಿರ್ವರ್ಷಾಸ್ವಾಕಾಶಮಾಸ್ಥಿತಃ।
12253017c ಅಂತರಿಕ್ಷಾಜ್ಜಲಂ ಮೂರ್ಧ್ನಾ ಪ್ರತ್ಯಗೃಹ್ಣಾನ್ಮುಹುರ್ಮುಹುಃ।।

ಅನಂತರ ಒಮ್ಮೆ ವರ್ಷಾಕಾಲದಲ್ಲಿ ಆ ಮುನಿಯು ಆಕಾಶದ ಕೆಳಗೆ ನಿಂತನು. ಅಂತರಿಕ್ಷದಿಂದ ಮಳೆಯು ಅವನ ನೆತ್ತಿಯಮೇಲೆ ಮತ್ತೆ ಮತ್ತೆ ಬೀಳುತ್ತಿರಲು ಅದನ್ನು ಅವನು ಸಹಿಸಿಕೊಳ್ಳುತ್ತಿದ್ದನು.

12253018a ಅಥ ತಸ್ಯ ಜಟಾಃ ಕ್ಲಿನ್ನಾ ಬಭೂವುರ್ಗ್ರಥಿತಾಃ ಪ್ರಭೋ।
12253018c ಅರಣ್ಯಗಮನಾನ್ನಿತ್ಯಂ ಮಲಿನೋ ಮಲಸಂಯುತಾಃ।।

ಪ್ರಭೋ! ಆಗ ಅವನ ಜಟೆಯು ಸಂಪೂರ್ಣ ಒದ್ದೆಯಾಗಿ ಕೂದಲುಗಳು ಜಡೆಗಟ್ಟಿಕೊಂಡವು. ನಿತ್ಯವೂ ಅರಣ್ಯದಲ್ಲಿ ತಿರುಗುತ್ತಿದ್ದುದರಿಂದ ಅವನ ಜಡೆಯು ಧೂಳಿನಿಂದ ತುಂಬಿ ಮಲಿನವಾಗಿತ್ತು.

12253019a ಸ ಕದಾ ಚಿನ್ನಿರಾಹಾರೋ ವಾಯುಭಕ್ಷೋ ಮಹಾತಪಾಃ।
12253019c ತಸ್ಥೌ ಕಾಷ್ಠವದವ್ಯಗ್ರೋ ನ ಚಚಾಲ ಚ ಕರ್ಹಿ ಚಿತ್।।

ಎಷ್ಟೋ ಸಮಯ ಆ ಮಹಾತಪಸ್ವಿಯು ವಾಯುಭಕ್ಷಕನಾಗಿ ನಿರಾಹಾರನಾಗಿ ಕಟ್ಟಿಗೆಯಂತೆ ಅವ್ಯಗ್ರನಾಗಿ ನಿಂತು ಸ್ವಲ್ಪವೂ ಚಲಿಸುತ್ತಿರಲಿಲ್ಲ.

12253020a ತಸ್ಯ ಸ್ಮ ಸ್ಥಾಣುಭೂತಸ್ಯ ನಿರ್ವಿಚೇಷ್ಟಸ್ಯ ಭಾರತ।
12253020c ಕುಲಿಂಗಶಕುನೌ ರಾಜನ್ನೀಡಂ ಶಿರಸಿ ಚಕ್ರತುಃ।।

ಭಾರತ! ರಾಜನ್! ಹಾಗೆ ನಿರ್ವಿಚೇಷ್ಟನಾಗಿ ಸ್ಥಾಣುವಂತೆ ನಿಂತಿದ್ದ ಅವನ ತಲೆಯ ಮೇಲೆ ಎರಡು ಗುಬ್ಬಚ್ಚಿಗಳು ಗೂಡನ್ನು ಕಟ್ಟಿಕೊಂಡವು.

12253021a ಸ ತೌ ದಯಾವಾನ್ವಿಪ್ರರ್ಷಿರುಪಪ್ರೈಕ್ಷತ ದಂಪತೀ।
12253021c ಕುರ್ವಾಣಂ ನೀಡಕಂ ತತ್ರ ಜಟಾಸು ತೃಣತಂತುಭಿಃ।।

ಆ ಪಕ್ಷಿ ದಂಪತಿಗಳು ಹುಲ್ಲು-ಹಣಬೆಗಳನ್ನು ತಂದು ತನ್ನ ತಲೆಯ ಮೇಲೆ ಗೂಡುಕಟ್ಟಿಕೊಳ್ಳುತ್ತಿದ್ದರೂ ದಯಾವಂತನಾದ ಆ ವಿಪ್ರರ್ಷಿಯು ಅದನ್ನು ಉಪೇಕ್ಷಿಸಿದನು.

12253022a ಯದಾ ಸ ನ ಚಲತ್ಯೇವ ಸ್ಥಾಣುಭೂತೋ ಮಹಾತಪಾಃ।
12253022c ತತಸ್ತೌ ಪರಿವಿಶ್ವಸ್ತೌ ಸುಖಂ ತತ್ರೋಷತುಸ್ತದಾ।।

ಸ್ಥಾಣುಭೂತನಾದ ಆ ಮಹಾತಪಸ್ವಿಯು ಚಲಿಸಲೇ ಇಲ್ಲ. ಆಗ ಆ ಗುಬ್ಬಚ್ಚಿಗಳಿಗೆ ವಿಶ್ವಾಸವುಂಟಾಗಿ ಅಲ್ಲಿಯೇ ಸುಖವಾಗಿ ವಾಸಿಸತೊಡಗಿದವು.

12253023a ಅತೀತಾಸ್ವಥ ವರ್ಷಾಸು ಶರತ್ಕಾಲ ಉಪಸ್ಥಿತೇ।
12253023c ಪ್ರಾಜಾಪತ್ಯೇನ ವಿಧಿನಾ ವಿಶ್ವಾಸಾತ್ಕಾಮಮೋಹಿತೌ।।

ವರ್ಷಾಕಾಲವು ಮುಗಿದು ಶರತ್ಕಾಲವು ಪ್ರಾರಂಭವಾಗಲು ವಿಶ್ವಾಸದಿಂದ ಕಾಮಮೋಹಿತ ಪಕ್ಷಿದಂಪತಿಗಳು ಸಂತಾನೋತ್ಪತ್ತಿಯ ವಿಧಿಯಿಂದ ಪರಸ್ಪರ ಸಮಾಗಮಿಸಿದವು.

12253024a ತತ್ರಾಪಾತಯತಾಂ ರಾಜನ್ ಶಿರಸ್ಯಂಡಾನಿ ಖೇಚರೌ।
12253024c ತಾನ್ಯಬುಧ್ಯತ ತೇಜಸ್ವೀ ಸ ವಿಪ್ರಃ ಸಂಶಿತವ್ರತಃ।।

ರಾಜನ್! ಆ ಪಕ್ಷಿಗಳು ಅವನ ತಲೆಯಮೇಲಿನ ಗೂಡಿನಲ್ಲಿಯೇ ಮೊಟ್ಟೆಗಳನ್ನಿಟ್ಟವು. ಸಂಶಿತವ್ರತ ತೇಜಸ್ವೀ ವಿಪ್ರನು ಅದನ್ನೂ ತಿಳಿದುಕೊಂಡನು.

12253025a ಬುದ್ಧ್ವಾ ಚ ಸ ಮಹಾತೇಜಾ ನ ಚಚಾಲೈವ ಜಾಜಲಿಃ।
12253025c ಧರ್ಮೇ ಧೃತಮನಾ ನಿತ್ಯಂ ನಾಧರ್ಮಂ ಸ ತ್ವರೋಚಯತ್।।

ಅದನ್ನು ತಿಳಿದೂ ಆ ಮಹಾತೇಜಸ್ವೀ ಜಾಜಲಿಯು ಹಂದಾಡಲಿಲ್ಲ. ನಿತ್ಯವೂ ಧರ್ಮದಲ್ಲಿ ಧೃತಮನಸ್ಕನಾಗಿದ್ದ ಅವನು ಅಧರ್ಮವನ್ನೆಸಗಲು ಬಯಸಲಿಲ್ಲ.

12253026a ಅಹನ್ಯಹನಿ ಚಾಗಮ್ಯ ತತಸ್ತೌ ತಸ್ಯ ಮೂರ್ಧನಿ।
12253026c ಆಶ್ವಾಸಿತೌ ವೈ ವಸತಃ ಸಂಪ್ರಹೃಷ್ಟೌ ತದಾ ವಿಭೋ।।

ವಿಭೋ! ಅನುದಿನವೂ ಹೊರಗೆ ಹೋಗಿ ಅವನ ಜಟೆಗೆ ಹಿಂದಿರುಗುತ್ತಿದ್ದ ಆ ಪಕ್ಷಿಗಳು ಆಶ್ವಾಸಿತರಾಗಿ ಸಂಪ್ರಹೃಷ್ಟರಾಗಿ ಅಲ್ಲಿಯೇ ವಾಸಮಾಡಿಕೊಂಡಿದ್ದವು.

12253027a ಅಂಡೇಭ್ಯಸ್ತ್ವಥ ಪುಷ್ಟೇಭ್ಯಃ ಪ್ರಜಾಯಂತ ಶಕುಂತಕಾಃ।
12253027c ವ್ಯವರ್ಧಂತ ಚ ತತ್ರೈವ ನ ಚಾಕಂಪತ ಜಾಜಲಿಃ।।

ಅಷ್ಟರಲ್ಲಿಯೇ ಮೊಟ್ಟೆಗಳು ಬಲಿದು ಅವುಗಳಿಂದ ಪುಟ್ಟ ಪಕ್ಷಿಗಳು ಹುಟ್ಟಿಕೊಂಡು ಬೆಳೆಯತೊಡಗಿದವು. ಆಗಲೂ ಜಾಜಲಿಯು ಹಂದಾಡಲಿಲ್ಲ.

12253028a ಸ ರಕ್ಷಮಾಣಸ್ತ್ವಂಡಾನಿ ಕುಲಿಂಗಾನಾಂ ಯತವ್ರತಃ।
12253028c ತಥೈವ ತಸ್ಥೌ ಧರ್ಮಾತ್ಮಾ ನಿರ್ವಿಚೇಷ್ಟಃ ಸಮಾಹಿತಃ।।

ಗುಬ್ಬಚ್ಚಿಗಳ ಆ ಮೊಟ್ಟೆಗಳನ್ನು ರಕ್ಷಿಸುತ್ತಾ ಆ ಯತವ್ರತ ಧರ್ಮಾತ್ಮಾ ಜಾಜಲಿಯು ಸಮಾಹಿತನಾಗಿ ಹಾಗೆಯೇ ನಿಂತುಕೊಂಡಿದ್ದನು.

12253029a ತತಸ್ತು ಕಾಲಸಮಯೇ ಬಭೂವುಸ್ತೇಽಥ ಪಕ್ಷಿಣಃ।
12253029c ಬುಬುಧೇ ತಾಂಶ್ಚ ಸ ಮುನಿರ್ಜಾತಪಕ್ಷಾನ್ ಶಕುಂತಕಾನ್।।

ಅನಂತರ ಕಾಲಬಂದಹಾಗೆ ಗುಬ್ಬಚ್ಚಿಯ ಮರಿಗಳಿಗೆ ರೆಕ್ಕೆಗಳು ಮೂಡಿದವು. ಅದನ್ನೂ ಕೂಡ ಮುನಿಯು ತಿಳಿದುಕೊಂಡನು.

12253030a ತತಃ ಕದಾ ಚಿತ್ತಾಂಸ್ತತ್ರ ಪಶ್ಯನ್ಪಕ್ಷೀನ್ಯತವ್ರತಃ।
12253030c ಬಭೂವ ಪರಮಪ್ರೀತಸ್ತದಾ ಮತಿಮತಾಂ ವರಃ।।

ಆಗ ಒಮ್ಮೆ ಆ ಪಕ್ಷಿಗಳೂ ಕೂಡ ಹಾರಾಡುತ್ತಾ ತನ್ನ ಬಳಿಗೆ ಬರುತ್ತಿರುವುದನ್ನು ಕಂಡು ಯತವ್ರತ ಮತಿಮಂತರಲ್ಲಿ ಶ್ರೇಷ್ಠ ಜಾಜಲಿಯು ಪರಮಪ್ರೀತನಾದನು.

12253031a ತಥಾ ತಾನಭಿಸಂವೃದ್ಧಾನ್ದೃಷ್ಟ್ವಾ ಚಾಪ್ನುವತಾಂ ಮುದಮ್।
12253031c ಶಕುನೌ ನಿರ್ಭಯೌ ತತ್ರ ಊಷತುಶ್ಚಾತ್ಮಜೈಃ ಸಹ।।

ಹಾಗೆಯೇ ತಮ್ಮ ಮರಿಗಳು ದೊಡ್ಡವಾದುದನ್ನು ನೋಡಿ ಪಕ್ಷಿಗಳೂ ಸಂತಸಗೊಂಡವು. ನಿರ್ಭಯರಾಗಿ ಆ ಪಕ್ಷಿಗಳೆರಡೂ ತಮ್ಮ ಮರಿಗಳೊಂದಿಗೆ ಅಲ್ಲಿ ವಾಸಮಾಡಿಕೊಂಡಿದ್ದವು.

12253032a ಜಾತಪಕ್ಷಾಂಶ್ಚ ಸೋಽಪಶ್ಯದುಡ್ಡೀನಾನ್ಪುನರಾಗತಾನ್।
12253032c ಸಾಯಂ ಸಾಯಂ ದ್ವಿಜಾನ್ವಿಪ್ರೋ ನ ಚಾಕಂಪತ ಜಾಜಲಿಃ।।

ಮರಿಗಳೂ ಕೂಡ ರೆಕ್ಕೆಹೊಂದಿ ದೊಡ್ಡ ಪಕ್ಷಿಗಳಂತೆ ಬೆಳಿಗ್ಗೆ ಹೊರಹೋಗಿ ಸಾಯಂಕಾಲ ಹಿಂದಿರುಗಿ ಬರುತ್ತಿದ್ದುದನ್ನು ನೋಡಿದನು. ಅದರೂ ಆ ವಿಪ್ರ ಜಾಜಲಿಯು ಹಂದಾಡಲಿಲ್ಲ.

12253033a ಕದಾ ಚಿತ್ಪುನರಭ್ಯೇತ್ಯ ಪುನರ್ಗಚ್ಚಂತಿ ಸಂತತಮ್।
12253033c ತ್ಯಕ್ತಾ ಮಾತೃಪಿತೃಭ್ಯಾಂ ತೇ ನ ಚಾಕಂಪತ ಜಾಜಲಿಃ।।

ಒಮ್ಮೊಮ್ಮೆ ತಾಯಿ-ತಂದೆ ಪಕ್ಷಿಗಳು ಮರಿಗಳನ್ನು ಗೂಡಿನಲ್ಲಿಯೇ ಬಿಟ್ಟು ಹೋಗುತ್ತಿದ್ದವು. ಒಮ್ಮೊಮ್ಮೆ ಮರಿಗಳೂ ಹೊರ ಹೋಗುತ್ತಿದ್ದವು. ಹೀಗೆ ಹೋಗುವ ಮತ್ತು ಬರುವ ಕೋಲಾಹಲಗಳು ನಡೆಯುತ್ತಿದ್ದರೂ ಜಾಜಲಿಯು ಹಂದಾಡಲಿಲ್ಲ.

12253034a ಅಥ ತೇ ದಿವಸಂ ಚಾರೀಂ ಗತ್ವಾ ಸಾಯಂ ಪುನರ್ನೃಪ।
12253034c ಉಪಾವರ್ತಂತ ತತ್ರೈವ ನಿವಾಸಾರ್ಥಂ ಶಕುಂತಕಾಃ।।

ನೃಪ! ಆ ಪಕ್ಷಿಗಳು ದಿವಸವಿಡೀ ಹೊರಗೆ ಹೋಗಿ ಸಾಯಂಕಾಲ ವಾಸಮಾಡಲು ಪುನಃ ತಮ್ಮ ಗೂಡಿಗೆ ಹಿಂದಿರುಗುತ್ತಿದ್ದವು.

12253035a ಕದಾ ಚಿದ್ದಿವಸಾನ್ಪಂಚ ಸಮುತ್ಪತ್ಯ ವಿಹಂಗಮಾಃ।
12253035c ಷಷ್ಠೇಽಹನಿ ಸಮಾಜಗ್ಮುರ್ನ ಚಾಕಂಪತ ಜಾಜಲಿಃ।।

ಕೆಲವೊಮ್ಮೆ ಆ ಪಕ್ಷಿಗಳು ಐದು ದಿನಗಳ ವರೆಗೆ ಹೊರಗಿದ್ದು ಆರನೆಯ ದಿನ ಗೂಡಿಗೆ ಹಿಂದಿರುಗುತ್ತಿದ್ದವು. ಆಗಲೂ ಜಾಜಲಿಯು ಹಂದಾಡಲಿಲ್ಲ.

12253036a ಕ್ರಮೇಣ ಚ ಪುನಃ ಸರ್ವೇ ದಿವಸಾನಿ ಬಹೂನ್ಯಪಿ।
12253036c ನೋಪಾವರ್ತಂತ ಶಕುನಾ ಜಾತಪ್ರಾಣಾಃ ಸ್ಮ ತೇ ಯದಾ।।

ಕ್ರಮೇಣವಾಗಿ ಬಲಿಷ್ಟವಾದ ಆ ಪಕ್ಷಿಗಳು ಎಲ್ಲವೂ ಅನೇಕದಿನಗಳಾದರೂ ಪುನಃ ಹಿಂದಿರುಗುತ್ತಿರಲಿಲ್ಲ.

12253037a ಕದಾ ಚಿನ್ಮಾಸಮಾತ್ರೇಣ ಸಮುತ್ಪತ್ಯ ವಿಹಂಗಮಾಃ।
12253037c ನೈವಾಗಚ್ಚಂಸ್ತತೋ ರಾಜನ್ ಪ್ರಾತಿಷ್ಠತ ಸ ಜಾಜಲಿಃ।।

ರಾಜನ್! ಒಮ್ಮೆ ಆ ಪಕ್ಷಿಗಳು ಗೂಡಿನಿಂದ ಹಾರಿಹೋಗಿ ಒಂದು ತಿಂಗಳು ಹಿಂದಿರುಗಲೇ ಇಲ್ಲ. ಆಗ ಜಾಜಲಿಯು ತನ್ನ ಸ್ಥಳದಿಂದ ಚಲಿಸಿದನು.

12253038a ತತಸ್ತೇಷು ಪ್ರಲೀನೇಷು ಜಾಜಲಿರ್ಜಾತವಿಸ್ಮಯಃ।
12253038c ಸಿದ್ಧೋಽಸ್ಮೀತಿ ಮತಿಂ ಚಕ್ರೇ ತತಸ್ತಂ ಮಾನ ಆವಿಶತ್।।

ತನ್ನ ತಲೆಯ ಮೇಲೆ ಗೂಡುಮಾಡಿಕೊಂಡಿದ್ದ ಪಕ್ಷಿಗಳೆಲ್ಲವೂ ಅದೃಶ್ಯವಾಗಿ ಹೋದನಂತರ ಜಾಜಲಿಯು ವಿಸ್ಮಿತನಾದನು. ತಾನು ಸಿದ್ಧಪುರುಷನೆಂದೇ ಭಾವಿಸಿಕೊಂಡನು. ಆಗ ಅವನಲ್ಲಿ ಅಹಂಕಾರವು ಪ್ರವೇಶಿಸಿತು.

12253039a ಸ ತಥಾ ನಿರ್ಗತಾನ್ ದೃಷ್ಟ್ವಾ ಶಕುಂತಾನ್ನಿಯತವ್ರತಃ।
12253039c ಸಂಭಾವಿತಾತ್ಮಾ ಸಂಭಾವ್ಯ ಭೃಶಂ ಪ್ರೀತಸ್ತದಾಭವನ್।।

ಆ ಪಕ್ಷಿಗಳು ಹೊರಟುಹೋದುದನ್ನು ನೋಡಿ ಆ ನಿಯತಾತ್ಮನು ತಾನು ಸಂಭಾವಿತನು ಎಂದು ತಿಳಿದುಕೊಂಡು ಹರ್ಷಿತನಾದನು.

12253040a ಸ ನದ್ಯಾಂ ಸಮುಪಸ್ಪೃಶ್ಯ ತರ್ಪಯಿತ್ವಾ ಹುತಾಶನಮ್।
12253040c ಉದಯಂತಮಥಾದಿತ್ಯಮಭ್ಯಗಚ್ಚನ್ಮಹಾತಪಾಃ।।

ಆ ಮಹಾತಪಸ್ವಿಯು ನದಿಯಲ್ಲಿ ಸ್ನಾನಮಾಡಿ ತರ್ಪಣಗಳನ್ನಿತ್ತು ಹುತಾಶನನನ್ನು ಹೊತ್ತಿಸಿ ಉದಯಿಸುತ್ತಿರುವ ಆದಿತ್ಯನನ್ನು ಧ್ಯಾನಿಸಿದನು.

12253041a ಸಂಭಾವ್ಯ ಚಟಕಾನ್ಮೂರ್ಧ್ನಿ ಜಾಜಲಿರ್ಜಪತಾಂ ವರಃ।
12253041c ಆಸ್ಫೋಟಯತ್ತದಾಕಾಶೇ ಧರ್ಮಃ ಪ್ರಾಪ್ತೋ ಮಯೇತಿ ವೈ।।

ತನ್ನ ತಲೆಯ ಮೇಲೆ ಗೂಡು ಕಟ್ಟಿ ವಾಸಿಸುತ್ತಿದ್ದ ಗುಬ್ಬಚ್ಚಿಗಳನ್ನೇ ಸ್ಮರಿಸುತ್ತಾ ತನ್ನನ್ನು ಮಹಾಧರ್ಮಾತ್ಮನೆಂದು ಭಾವಿಸಿಕೊಂಡು ಆ ಜಪಿಗಳಲ್ಲಿ ಶ್ರೇಷ್ಠ ಜಾಜಲಿಯು “ನನಗೆ ಧರ್ಮವು ಪ್ರಾಪ್ತವಾಯಿತು!” ಎಂದು ಆಕಾಶದಲ್ಲಾದ ಅಸ್ಫೋಟದಂತೆ ಕೂಗಿಕೊಂಡನು.

12253042a ಅಥಾಂತರಿಕ್ಷೇ ವಾಗಾಸೀತ್ತಾಂ ಸ ಶುಶ್ರಾವ ಜಾಜಲಿಃ।
12253042c ಧರ್ಮೇಣ ನ ಸಮಸ್ತ್ವಂ ವೈ ತುಲಾಧಾರಸ್ಯ ಜಾಜಲೇ।।

ಆಗ ಅಂತರಿಕ್ಷದ ವಾಣಿಯನ್ನು ಜಾಜಲಿಯು ಕೇಳಿದನು: “ಜಾಜಲೇ! ಧರ್ಮದಲ್ಲಿ ನೀನು ತುಲಾಧಾರನ ಸಮನಲ್ಲ!

12253043a ವಾರಾಣಸ್ಯಾಂ ಮಹಾಪ್ರಾಜ್ಞಸ್ತುಲಾಧಾರಃ ಪ್ರತಿಷ್ಠಿತಃ।
12253043c ಸೋಽಪ್ಯೇವಂ ನಾರ್ಹತೇ ವಕ್ತುಂ ಯಥಾ ತ್ವಂ ಭಾಷಸೇ ದ್ವಿಜ।।

ದ್ವಿಜ! ವಾರಾಣಸಿಯ ಮಹಾಪ್ರಾಜ್ಞ ಪ್ರತಿಷ್ಠಿತ ತುಲಾಧಾರನೂ ಕೂಡ ನಿನ್ನಂತೆ ಹೇಳಿಕೊಳ್ಳುವುದಿಲ್ಲ.”

12253044a ಸೋಽಮರ್ಷವಶಮಾಪನ್ನಸ್ತುಲಾಧಾರದಿದೃಕ್ಷಯಾ।
12253044c ಪೃಥಿವೀಮಚರದ್ರಾಜನ್ಯತ್ರಸಾಯಂಗೃಹೋ ಮುನಿಃ।।

ರಾಜನ್! ಅದನ್ನು ಕೇಳಿ ಜಾಜಲಿಯು ಕ್ರೋಧವಶನಾದನು. ತುಲಾಧಾರನನ್ನು ಸಂದರ್ಶಿಸುವ ಇಚ್ಛೆಯಿಂದ ಪ್ರಯಾಣಹೊರಟ ಮುನಿಯು ಸಾಯಂಕಾಲದವರೆಗೂ ನಡೆದು ಆ ವೇಳೆಗೆ ಸಿಕ್ಕಿದ ಗ್ರಾಮದಲ್ಲಿ ರಾತ್ರಿ ತಂಗುತ್ತಾ ಪುನಃ ಬೆಳಗಾದೊಡನೆಯೇ ಹೊರಟು ಭೂಮಿಯಲ್ಲಿ ಸುತ್ತಾಡಿದನು.

12253045a ಕಾಲೇನ ಮಹತಾಗಚ್ಚತ್ಸ ತು ವಾರಾಣಸೀಂ ಪುರೀಮ್।
12253045c ವಿಕ್ರೀಣಂತಂ ಚ ಪಣ್ಯಾನಿ ತುಲಾಧಾರಂ ದದರ್ಶ ಸಃ।।

ದೀರ್ಘಕಾಲದ ನಂತರ ಅವನು ವಾರಾಣಸೀ ಪುರಿಯನ್ನು ತಲುಪಿ ಅಲ್ಲಿ ಪದಾರ್ಥಗಳನ್ನು ಮಾರಾಟಮಾಡುತ್ತಿದ್ದ ತುಲಾಧಾರನನ್ನು ನೋಡಿದನು.

12253046a ಸೋಽಪಿ ದೃಷ್ಟ್ವೈವ ತಂ ವಿಪ್ರಮಾಯಾಂತಂ ಭಾಂಡಜೀವನಃ।
12253046c ಸಮುತ್ಥಾಯ ಸುಸಂಹೃಷ್ಟಃ ಸ್ವಾಗತೇನಾಭ್ಯಪೂಜಯತ್।।

ವಿವಿಧ ವಸ್ತುಗಳನ್ನು ಮಾರಾಟಮಾಡಿ ಜೀವಿಸುತ್ತಿದ್ದ ತುಲಾಧಾರನಾದರೋ ಆಗಮಿಸುತ್ತಿದ್ದ ವಿಪ್ರನನ್ನು ನೋಡಿದೊಡನೆಯೇ ಹೃಷ್ಟನಾಗಿ ಮೇಲೆದ್ದು ಸ್ವಾಗತಿಸಿ ಪೂಜಿಸಿದನು.

12253047 ತುಲಾಧಾರ ಉವಾಚ।
12253047a ಆಯಾನೇವಾಸಿ ವಿದಿತೋ ಮಮ ಬ್ರಹ್ಮನ್ನ ಸಂಶಯಃ।
12253047c ಬ್ರವೀಮಿ ಯತ್ತು ವಚನಂ ತಚ್ಚೃಣುಷ್ವ ದ್ವಿಜೋತ್ತಮ।।

ತುಲಾಧಾರನು ಹೇಳಿದನು: “ಬ್ರಹ್ಮನ್! ದ್ವಿಜೋತ್ತಮ! ನೀನು ನಿಸ್ಸಂಶಯವಾಗಿಯೂ ಇಲ್ಲಿಗೆ ಬರುತ್ತೀಯೆಂದು ನನಗೆ ಮೊದಲೇ ತಿಳಿದಿತ್ತು. ನಾನು ಈಗ ಹೇಳುವ ಮಾತನ್ನು ಕೇಳುವವನಾಗು.

12253048a ಸಾಗರಾನೂಪಮಾಶ್ರಿತ್ಯ ತಪಸ್ತಪ್ತಂ ತ್ವಯಾ ಮಹತ್।
12253048c ನ ಚ ಧರ್ಮಸ್ಯ ಸಂಜ್ಞಾಂ ತ್ವಂ ಪುರಾ ವೇತ್ಥ ಕಥಂ ಚನ।।

ಹಿಂದೆ ನೀನು ಸಾಗರದ ನೀರನ್ನು ಆಶ್ರಯಿಸಿ ಮಹಾ ತಪಸ್ಸನ್ನು ತಪಿಸಿದೆ. ಆದರೂ ನಿನಗೆ ಧರ್ಮದ ಸಂಜ್ಞೆಯು ದೊರಕಲಿಲ್ಲ.

12253049a ತತಃ ಸಿದ್ಧಸ್ಯ ತಪಸಾ ತವ ವಿಪ್ರ ಶಕುಂತಕಾಃ।
12253049c ಕ್ಷಿಪ್ರಂ ಶಿರಸ್ಯಜಾಯಂತ ತೇ ಚ ಸಂಭಾವಿತಾಸ್ತ್ವಯಾ।।

ವಿಪ್ರ! ಅನಂತರ ಸಿದ್ಧನಾಗಿ ನೀನು ತಪಸ್ಸನ್ನಾಚರಿಸುತ್ತಿರಲು ಕ್ಷಿಪ್ರವಾಗಿ ನಿನ್ನ ತಲೆಯ ಮೇಲೆ ಗೂಡುಕಟ್ಟಿದ ಪಕ್ಷಿಗಳನ್ನು ನೀನು ರಕ್ಷಿಸಿದೆ.

12253050a ಜಾತಪಕ್ಷಾ ಯದಾ ತೇ ಚ ಗತಾಶ್ಚಾರೀಮಿತಸ್ತತಃ।
12253050c ಮನ್ಯಮಾನಸ್ತತೋ ಧರ್ಮಂ ಚಟಕಪ್ರಭವಂ ದ್ವಿಜ।
12253050e ಖೇ ವಾಚಂ ತ್ವಮಥಾಶ್ರೌಷೀರ್ಮಾಂ ಪ್ರತಿ ದ್ವಿಜಸತ್ತಮ।।

ದ್ವಿಜ! ಆ ಗೂಡಿನಲ್ಲಿ ಹುಟ್ಟಿದ ಪಕ್ಷಿಗಳು ಹೊರಹೋಗಿ ಬರಲು ತೊಡಗಿದಾಗ ನೀನು ನಿನ್ನ ತಲೆಯಮೇಲೆ ಕಟ್ಟಿದ್ದ ಗೂಡನ್ನು ರಕ್ಷಿಸಿದುದರಿಂದ ನೀನು ಧರ್ಮಕಾರ್ಯವೆನ್ನೆಸಗಿದೆ ಎಂದು ತಿಳಿದುಕೊಂಡೆ. ದ್ವಿಜಸತ್ತಮ! ಆಗ ನನ್ನ ಬಳಿ ಹೋಗೆಂಬ ಆಕಾಶವಾಣಿಯನ್ನು ನೀನು ಕೇಳಿದೆ.

12253051a ಅಮರ್ಷವಶಮಾಪನ್ನಸ್ತತಃ ಪ್ರಾಪ್ತೋ ಭವಾನಿಹ।
12253051c ಕರವಾಣಿ ಪ್ರಿಯಂ ಕಿಂ ತೇ ತದ್ಬ್ರೂಹಿ ದ್ವಿಜಸತ್ತಮ।।

ದ್ವಿಜಸತ್ತಮ! ಅದರಿಂದ ಕ್ರೋಧವಶನಾಗಿ ನೀನು ನನ್ನ ಬಳಿ ಬಂದಿರುವೆ. ನಿನಗೆ ಪ್ರಿಯವಾದ ಏನನ್ನು ಮಾಡಲಿ? ಹೇಳು.””

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ತುಲಾಭಾರಜಾಜಲಿಸಂವಾದೇ ತ್ರಿಪಂಚಾಶದಧಿಕದ್ವಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ತುಲಾಭಾರಜಾಜಲಿಸಂವಾದ ಎನ್ನುವ ಇನ್ನೂರಾಐವತ್ಮೂರನೇ ಅಧ್ಯಾಯವು.