252: ಧರ್ಮಪ್ರಮಣ್ಯಾಕ್ಷೇಪಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 252

ಸಾರ

ಯುಧಿಷ್ಠಿರನು ಧರ್ಮದ ಕುರಿತಾದ ಸಂದೇಹಗಳನ್ನು ಹೇಳಿಕೊಳ್ಳುವುದು (1-20).

12252001 ಯುಧಿಷ್ಠಿರ ಉವಾಚ।
12252001a ಸೂಕ್ಷ್ಮಂ ಸಾಧು ಸಮಾದಿಷ್ಟಂ ಭವತಾ ಧರ್ಮಲಕ್ಷಣಮ್।
12252001c ಪ್ರತಿಭಾ ತ್ವಸ್ತಿ ಮೇ ಕಾ ಚಿತ್ತಾಂ ಬ್ರೂಯಾಮನುಮಾನತಃ।।

ಯುಧಿಷ್ಠಿರನು ಹೇಳಿದನು: “ಸೂಕ್ಷ್ಮವಾದ ಧರ್ಮಲಕ್ಷಣವನ್ನು ನೀನು ಚೆನ್ನಾಗಿಯೇ ಉಪದೇಶಿಸಿರುವೆ. ಆದರೆ ನನ್ನ ಚಿತ್ತಕ್ಕೆ ಇನ್ನೂ ಕೆಲವು ವಿಷಯಗಳು ಹೊಳೆಯುತ್ತಿವೆ. ಅನುಮಾನದಿಂದ ನಾನು ಅದನ್ನು ಹೇಳುತ್ತೇನೆ.

12252002a ಭೂಯಾಂಸೋ ಹೃದಯೇ ಯೇ ಮೇ ಪ್ರಶ್ನಾಸ್ತೇ ವ್ಯಾಹೃತಾಸ್ತ್ವಯಾ।
12252002c ಇಮಮನ್ಯಂ ಪ್ರವಕ್ಷ್ಯಾಮಿ ನ ರಾಜನ್ ವಿಗ್ರಹಾದಿವ।।

ರಾಜನ್! ನನ್ನ ಹೃದಯದಲ್ಲಿದ್ದ ಇನ್ನೂ ಅನೇಕ ಪ್ರಶ್ನೆಗಳನ್ನು ನೀನು ಹೋಗಲಾಡಿಸಿದ್ದೀಯೆ. ಅದರೆ ಈ ಪ್ರಶ್ನೆಯನ್ನು ತಿಳಿಯಬೇಕೆಂದು ಕೇಳುತ್ತಿದ್ದೇನೆಯೇ ಹೊರತು ವಾದಿಸಬೇಕೆಂದು ಕೇಳುತ್ತಿಲ್ಲ.

12252003a ಇಮಾನಿ ಹಿ ಪ್ರಾಪಯಂತಿ1 ಸೃಜಂತ್ಯುತ್ತಾರಯಂತಿ ಚ।
12252003c ನ ಧರ್ಮಃ ಪರಿಪಾಠೇನ ಶಕ್ಯೋ ಭಾರತ ವೇದಿತುಮ್।।

ಭಾರತ! ಪ್ರಾಣಿಗಳು ಬದುಕುತ್ತವೆ, ಹುಟ್ಟಿಸುತ್ತವೆ ಮತ್ತು ಶರೀರಗಳನ್ನು ತೊರೆಯುತ್ತವೆ. ಕೇವಲ ಪರಿಪಾಠದಿಂದ ಧರ್ಮವನ್ನು ತಿಳಿದುಕೊಳ್ಳಲು ಶಕ್ಯವಿಲ್ಲ.

12252004a ಅನ್ಯೋ ಧರ್ಮಃ ಸಮಸ್ಥಸ್ಯ ವಿಷಮಸ್ಥಸ್ಯ ಚಾಪರಃ।
12252004c ಆಪದಸ್ತು ಕಥಂ ಶಕ್ಯಾಃ ಪರಿಪಾಠೇನ ವೇದಿತುಮ್।।

ಉತ್ತಮ ಪರಿಸ್ಥಿತಿಯಲ್ಲಿರುವವನಿಗೆ ಧರ್ಮವು ಅನ್ಯ. ವಿಷಮ ಪರಿಸ್ಥಿತಿಯಲ್ಲಿರುವವನಿಗೆ ಬೇರೆಯ ಧರ್ಮ. ಆಪತ್ತಿನಲ್ಲಿರುವವನಿಗೆ ಇರುವ ಧರ್ಮಗಳನ್ನು ಪರಿಪಾಠದಿಂದ ಹೇಗೆ ತಿಳಿದುಕೊಳ್ಳಲು ಶಕ್ಯ?

12252005a ಸದಾಚಾರೋ ಮತೋ ಧರ್ಮಃ ಸಂತಸ್ತ್ವಾಚಾರಲಕ್ಷಣಾಃ।
12252005c ಸಾಧ್ಯಾಸಾಧ್ಯಂ ಕಥಂ ಶಕ್ಯಂ ಸದಾಚಾರೋ ಹ್ಯಲಕ್ಷಣಮ್।।

ಸದಾಚಾರವೇ ಧರ್ಮ. ಧರ್ಮಾಚರಣೆಯ ಲಕ್ಷಣವುಳ್ಳವರು ಸಂತರು2. ಸದಾಚಾರಕ್ಕೆ ನಿರ್ದಿಷ್ಟ ಲಕ್ಷಣವೇ ಇಲ್ಲದಿರುವಾಗ ಸದಾಚಾರವನ್ನು ಪಾಲಿಸುವುದು ಸಾಧ್ಯ ಅಥವಾ ಅಸಾಧ್ಯ ಎಂದು ಹೇಗೆ ತಿಳಿದುಕೊಳ್ಳಬಹುದು?

12252006a ದೃಶ್ಯತೇ ಧರ್ಮರೂಪೇಣ ಅಧರ್ಮಂ ಪ್ರಾಕೃತಶ್ಚರನ್।
12252006c ಧರ್ಮಂ ಚಾಧರ್ಮರೂಪೇಣ ಕಶ್ಚಿದಪ್ರಾಕೃತಶ್ಚರನ್।।

ಸಾಮಾನ್ಯ ಜನರು ಧರ್ಮರೂಪದಲ್ಲಿ ಅಧರ್ಮವನ್ನು ಆಚರಿಸುವುದೂ ಮತ್ತು ಶಿಷ್ಟರು ಅಧರ್ಮರೂಪದಲ್ಲಿ ಧರ್ಮವನ್ನು ಆಚರಿಸುವುದೂ ಕಂಡುಬರುತ್ತದೆ3.

12252007a ಪುನರಸ್ಯ ಪ್ರಮಾಣಂ ಹಿ ನಿರ್ದಿಷ್ಟಂ ಶಾಸ್ತ್ರಕೋವಿದೈಃ।
12252007c ವೇದವಾದಾಶ್ಚಾನುಯುಗಂ ಹ್ರಸಂತೀತಿ ಹ ನಃ ಶ್ರುತಮ್।।

ಮತ್ತು ಶಾಸ್ತ್ರಕೋವಿದರು ಧರ್ಮಕ್ಕೆ ವೇದವೇ ಪ್ರಮಾಣವೆಂದು ನಿರ್ದಿಷ್ಟಪಡಿಸಿರುತ್ತಾರೆ. ಆದರೆ ವೇದವು ಒಂದು ಯುಗದಿಂದ ಮತ್ತೊಂದು ಯುಗಕ್ಕೆ ಹೋಗುವಾಗ ಕ್ಷೀಣವಾಗುತ್ತದೆ ಎನ್ನುವುದನ್ನೂ ನಾವು ಕೇಳಿದ್ದೇವೆ.

12252008a ಅನ್ಯೇ ಕೃತಯುಗೇ ಧರ್ಮಾಸ್ತ್ರೇತಾಯಾಂ ದ್ವಾಪರೇಽಪರೇ।
12252008c ಅನ್ಯೇ ಕಲಿಯುಗೇ ಧರ್ಮಾ ಯಥಾಶಕ್ತಿಕೃತಾ ಇವ।।

ಕೃತಯುಗದಲ್ಲಿ ಅನ್ಯ ಧರ್ಮಗಳಿವೆ. ತ್ರೇತಾಯುಗದಲ್ಲಿ ಬೇರೆ ಮತ್ತು ದ್ವಾಪರಯುಗದಲ್ಲಿ ಬೇರೆ ಧರ್ಮಗಳಿವೆ. ಮತ್ತು ಕಲಿಯುಗದ ಧರ್ಮಗಳೇ ಬೇರೆ. ಹೀಗೆ ಮನುಷ್ಯರ ಶಕ್ತಿಗನುಸಾರವಾಗಿ ಧರ್ಮಗಳನ್ನು ಮಾಡಿರುವಂತಿದೆ.

12252009a ಆಮ್ನಾಯವಚನಂ ಸತ್ಯಮಿತ್ಯಯಂ ಲೋಕಸಂಗ್ರಹಃ।
12252009c ಆಮ್ನಾಯೇಭ್ಯಃ ಪರಂ ವೇದಾಃ ಪ್ರಸೃತಾ ವಿಶ್ವತೋಮುಖಾಃ4।।

ವೇದವಾಕ್ಯವು ಸತ್ಯ ಎಂಬ ಈ ಮಾತು ಕೇವಲ ಲೋಕರಂಜನೆಗೆ ಮಾತ್ರವೇ ಆಗಿದೆ. ಏಕೆಂದರೆ ವೇದಗಳಿಂದಲೇ ಅನೇಕ ಪ್ರಕಾರದ ಸ್ಮೃತಿಗಳು ಸರ್ವತೋಮುಖವಾಗಿ ಬೆಳೆದಿವೆ.

12252010a ತೇ ಚೇತ್ಸರ್ವೇ ಪ್ರಮಾಣಂ ವೈ ಪ್ರಮಾಣಂ ತನ್ನ ವಿದ್ಯತೇ।
12252010c ಪ್ರಮಾಣೇ ಚಾಪ್ರಮಾಣೇ ಚ ವಿರುದ್ಧೇ ಶಾಸ್ತ್ರತಾ ಕುತಃ।।

ಕೆಲವರು ಸಂಪೂರ್ಣ ವೇದವನ್ನೇ ಪ್ರಮಾಣವೆಂದು ಹೇಳುತ್ತಾರೆ. ಆದರೆ ವೇದಗಳಲ್ಲಿ ಪರಸ್ಪರ ವಿರುದ್ಧ ವಾಕ್ಯಗಳೂ ಕಂಡುಬರುತ್ತವೆ. ಅವುಗಳಲ್ಲಿ ಒಂದರ ದೃಷ್ಟಿಯಿಂದ ಮತ್ತೊಂದು ಅಪ್ರಮಾಣವಾಗುತ್ತದೆ. ಆಗ ಅಪ್ರಮಾಣ ವಾಕ್ಯಗಳು ಪ್ರಮಾಣವನ್ನು ಬಾಧಿಸಿದಂತಾಗುತ್ತದೆ. ಹಾಗಾದರೆ ವೇದಕ್ಕೆ ಶಾಸ್ತ್ರತ್ವವು5 ಹೇಗೆ ಉಂಟಾಗುತ್ತದೆ?

12252011a ಧರ್ಮಸ್ಯ ಹ್ರಿಯಮಾಣಸ್ಯ6 ಬಲವದ್ಭಿರ್ದುರಾತ್ಮಭಿಃ।
12252011c ಯಾ ಯಾ ವಿಕ್ರಿಯತೇ ಸಂಸ್ಥಾ ತತಃ ಸಾಪಿ ಪ್ರಣಶ್ಯತಿ।।

ಬಲಶಾಲೀ ದುರಾತ್ಮರು ಧರ್ಮವನ್ನು ಅಪಹರಿಸಿ ಅದರ ಮೂಲಸ್ಥಾನವನ್ನೇ ವಿನಾಶಗೊಳಿಸಲು ಧರ್ಮವು ನಾಶಹೊಂದುತ್ತದೆ.

12252012a ವಿದ್ಮ ಚೈವಂ ನ ವಾ ವಿದ್ಮ ಶಕ್ಯಂ ವಾ ವೇದಿತುಂ ನ ವಾ।
12252012c ಅಣೀಯಾನ್ ಕ್ಷುರಧಾರಾಯಾ ಗರೀಯಾನ್ ಪರ್ವತಾದಪಿ7।।

ಧರ್ಮವನ್ನು ನಾವು ತಿಳಿದಿರುವೆವೋ ಇಲ್ಲವೋ ಅಥವಾ ಧರ್ಮವನ್ನು ತಿಳಿದುಕೊಳ್ಳಲು ಶಕ್ಯವೋ ಇಲ್ಲವೋ, ಇಷ್ಟು ಮಾತ್ರ ಹೇಳಬಹುದಾಗಿದೆ: ಧರ್ಮವು ಕತ್ತಿಯ ಅಲುಗಿಗಿಂತಲೂ ಸೂಕ್ಷ್ಮವಾದುದು ಮತ್ತು ಪರ್ವತಕ್ಕಿಂತಲೂ ದೊಡ್ಡದಾದುದು.

12252013a ಗಂಧರ್ವನಗರಾಕಾರಃ ಪ್ರಥಮಂ ಸಂಪ್ರದೃಶ್ಯತೇ।
12252013c ಅನ್ವೀಕ್ಷ್ಯಮಾಣಃ ಕವಿಭಿಃ ಪುನರ್ಗಚ್ಚತ್ಯದರ್ಶನಮ್।।

ಮೊಟ್ಟಮೊದಲು ಧರ್ಮವು ಗಂಧರ್ವನಗರದ ಆಕಾರದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಅದನ್ನೇ ವಿಶೇಷರೂಪದಲ್ಲಿ ವಿಚಾರಮಾಡುವ ವಿದ್ವಾಂಸರಿಗೆ ಅದು ಕಾಣಿಸದೇ ಮಾಯವಾಗಿಬಿಡುತ್ತದೆ.

12252014a ನಿಪಾನಾನೀವ ಗೋಭ್ಯಾಶೇ ಕ್ಷೇತ್ರೇ ಕುಲ್ಯೇವ ಭಾರತ।
12252014c ಸ್ಮೃತೋಽಪಿ ಶಾಶ್ವತೋ ಧರ್ಮೋ ವಿಪ್ರಹೀಣೋ ನ ದೃಶ್ಯತೇ।।

ಭಾರತ! ಹಸುಗಳು ನೀರು ಕುಡಿಯುವ ತೊಟ್ಟಿ ಮತ್ತು ಗದ್ದೆಗಳಿಗೆ ನೀರು ಹಾಯಿಸುವ ಕಾಲುವೆಯು ಹೇಗೆ ಒಂದೇ ಸಮನಾಗಿರುವುದಿಲ್ಲವೋ ಹಾಗೆ ಸ್ಮೃತಿಯೂ ಕೂಡ ಒಂದೇ ರೀತಿಯಾಗಿರದೇ ಕಾಲಕಾಲಕ್ಕೆ ವ್ಯತ್ಯಾಸವಾಗುತ್ತಿರುತ್ತದೆ8. ಆದುದರಿಂದ ನಾಶಹೊಂದದೇ ಇರುವ ಶಾಶ್ವತ ಧರ್ಮವೇ ಇಲ್ಲ.

12252015a ಕಾಮಾದನ್ಯೇ ಕ್ಷಯಾದನ್ಯೇ ಕಾರಣೈರಪರೈಸ್ತಥಾ।
12252015c ಅಸಂತೋ ಹಿ ವೃಥಾಚಾರಂ ಭಜಂತೇ ಬಹವೋಽಪರೇ।।

ಕೆಲವರು ಕಾಮಕ್ಕಾಗಿ, ಕೆಲವರು ಇಚ್ಛೆಗಳಿಗಾಗಿ ಮತ್ತು ಅನ್ಯರು ಇತರ ಅನೇಕ ಕಾರಣಗಳಿಗಾಗಿ ಧರ್ಮಾಚರಣೆಯನ್ನು ಮಾಡುತ್ತಾರೆ. ಕೆಲವು ಅಸಾಧು ಪುರುಷರು ಕೇವಲ ತೋರಿಕೆಗಾಗಿ ವ್ಯರ್ಥ ಧರ್ಮಾಚರಣೆಯನ್ನು ಮಾಡುತ್ತಾರೆ.

12252016a ಧರ್ಮೋ ಭವತಿ ಸ ಕ್ಷಿಪ್ರಂ ವಿಲೀನಸ್ತ್ವೇವ9 ಸಾಧುಷು।
12252016c ಅನ್ಯೇ ತಾನಾಹುರುನ್ಮತ್ತಾನಪಿ ಚಾವಹಸಂತ್ಯುತ।।

ಬೇಗನೇ ಮುಂದೆ ಅದೇ ಧರ್ಮವಾಗಿಬಿಡುತ್ತದೆ. ಸಾಧುಗಳ ಧರ್ಮವು ವಿಲೀನವಾಗಿಬಿಡುತ್ತದೆ. ಅನ್ಯರು ಸಾಧುಪುರುಷರನ್ನು ಹುಚ್ಚರೆಂದು ಕರೆಯುತ್ತಾ ಅಪಹಾಸ್ಯವನ್ನೂ ಮಾಡುತ್ತಾರೆ.

12252017a ಮಹಾಜನಾ ಹ್ಯುಪಾವೃತ್ತಾ ರಾಜಧರ್ಮಂ ಸಮಾಶ್ರಿತಾಃ।
12252017c ನ ಹಿ ಸರ್ವಹಿತಃ ಕಶ್ಚಿದಾಚಾರಃ ಸಂಪ್ರದೃಶ್ಯತೇ।।

ದ್ರೋಣಾದಿ ಮಹಾಜನರೂ ಸ್ವಧರ್ಮವನ್ನು ಬಿಟ್ಟು ರಾಜಧರ್ಮವನ್ನು ಆಶ್ರಯಿಸಿದ್ದಾರೆ. ಆದುದರಿಂದ ಸರ್ವರಿಗೂ ಹಿತಕರವಾದ ಸಮಾನರೂಪವಾದ ಯಾವ ಆಚಾರವೂ ಪ್ರಚಲಿತವಾಗಿರುವುದಿಲ್ಲ.

12252018a ತೇನೈವಾನ್ಯಃ ಪ್ರಭವತಿ ಸೋಽಪರಂ ಬಾಧತೇ ಪುನಃ।
12252018c ದೃಶ್ಯತೇ ಚೈವ ಸ ಪುನಸ್ತುಲ್ಯರೂಪೋ ಯದೃಚ್ಚಯಾ।।

ಇಂತಹ ಧರ್ಮದ ಆಚರಣೆಯಿಂದಲೇ ಕೆಲವರು10 ಔನ್ನತ್ಯವನ್ನು ಹೊಂದಿದರು. ಅದೇ ರೀತಿ ಇತರರು ಧರ್ಮದ ಬಲದಿಂದಲೇ ಇತರರನ್ನು ಪೀಡಿಸಿದರು11. ಇತರರು ಈಶ್ವರೇಚ್ಛೆಯಿಂದ ಧರ್ಮದ ಮೂಲಕವಾಗಿಯೇ ಸಮತ್ವವನ್ನು ಪಡೆದುಕೊಂಡಿರುವುದೂ ಕಂಡು ಬರುತ್ತದೆ.

12252019a ಯೇನೈವಾನ್ಯಃ ಪ್ರಭವತಿ ಸೋಽಪರಾನಪಿ ಬಾಧತೇ।
12252019c ಆಚಾರಾಣಾಮನೈಕಾಗ್ರ್ಯಂ ಸರ್ವೇಷಾಮೇವ ಲಕ್ಷಯೇತ್।।

ಒಬ್ಬನು ಧರ್ಮವನ್ನು ಆಚರಿಸಿ ಔನ್ನತ್ಯವನ್ನು ಹೊಂದುತ್ತಾನೆ. ಮತ್ತೊಬ್ಬನು ಅದೇ ಧರ್ಮವನ್ನು ಆಶ್ರಯಿಸಿ ಇತರರನ್ನು ಪೀಡಿಸುತ್ತಾನೆ. ಆದುದರಿಂದ ಧರ್ಮಾಚರಣೆಯನ್ನು ಮಾಡಿದರೂ ಎಲ್ಲರಲ್ಲಿಯೂ ಆಚಾರವ್ಯವಹಾರಗಳು ಒಂದೇ ಆಗಿರುವುದಿಲ್ಲವೆನ್ನುವುದು ಸ್ಪಷ್ಟವಾಗುತ್ತದೆ.

12252020a ಚಿರಾಭಿಪನ್ನಃ ಕವಿಭಿಃ ಪೂರ್ವಂ ಧರ್ಮ ಉದಾಹೃತಃ।
12252020c ತೇನಾಚಾರೇಣ ಪೂರ್ವೇಣ ಸಂಸ್ಥಾ ಭವತಿ ಶಾಶ್ವತೀ।।

ಹಿಂದೆ ವಿದ್ವಾಂಸರು ಬಹಳ ಕಾಲದಿಂದ ಆಚರಿಸುತ್ತಿದ್ದ ಧರ್ಮದ ಕುರಿತು ನೀನು ಹೇಳಿರುವೆ. ಇದರ ಆಚರಣೆಯ ಮೂಲಕವಾಗಿಯೇ ಸಮಾಜವು ಬಹಳ ಕಾಲದವರೆಗೆ ಸುಸ್ಥಿರವಾಗಿರುತ್ತದೆ.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಧರ್ಮಪ್ರಮಣ್ಯಾಕ್ಷೇಪೇ ದ್ವಿಪಂಚಾಶದಧಿಕದ್ವಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಧರ್ಮಪ್ರಮಾಣ್ಯಾಕ್ಷೇಪ ಎನ್ನುವ ಇನ್ನೂರಾಐವತ್ತೆರಡನೇ ಅಧ್ಯಾಯವು.

  1. ಪ್ರಾಣಯಂತಿ ಎಂಬ ಪಾಠಾಂತರವಿದೆ (ಭಾರತದರ್ಶನ). ↩︎

  2. ಸತ್ಪುರುಷರ ಆಚರಣೆಯೇ ಧರ್ಮ ಮತ್ತು ಧರ್ಮಾಚರಣೆ ಮಾಡುವವರು ಸತ್ಪುರುಷರು ಎಂದು ಹೇಳಿರುವುದರಿಂದ ಸದಾಚಾರ ಮತ್ತು ಸತ್ಪುರುಷರು ಅನ್ಯೋನ್ಯಾಶ್ರಯವನ್ನು ಹೊಂದಿದಂತಾಗುತ್ತದೆ. ↩︎

  3. ಕೇವಲ ಆಚರಣೆಯಿಂದ ಧರ್ಮಾಧರ್ಮಗಳನ್ನು ನಿರ್ಣಯಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಸಾಮಾನ್ಯರು ಧರ್ಮವನ್ನು ಆಚರಿಸಿದರೂ ಅವರ ಆಚರಣೆಯು ಅಧರ್ಮವಾಗಿ ಕಾಣುತ್ತದೆ. ಶಿಷ್ಟರಾದವರು ಅಧರ್ಮವನ್ನು ಆಚರಿಸಿದರೂ ಅದು ಧರ್ಮವಾಗಿಯೇ ಕಾಣುತ್ತದೆ. ಆ ಸಂದರ್ಭಗಳಲ್ಲಿ ಭ್ರಷ್ಟರು ಶಿಷ್ಟಾಚಾರರಂತೆಯೂ ಶಿಷ್ಟರು ಭ್ರಷ್ಟಾಚಾರರಂತೆ ಕಾಣುವುದರಿಂದ ಸದಾಚಾರಲಕ್ಷಣವನ್ನು ನಿರ್ಣಯಿಸಲಿಕ್ಕಾಗುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಶಾಂತಿಪರ್ವದ 141ನೇ ಅಧ್ಯಾಯದ ಚಾಂಡಾಲ-ವಿಶ್ಚಾಮಿತ್ರರ ಸಂವಾದವು ಉದಾಹರಣೆಯಾಗಿದೆ. ↩︎

  4. ಸರ್ವತೋಮುಖಾಃ ಎಂಬ ಪಾಠಾಂತರವಿದೆ (ಭಾರತದರ್ಶನ). ↩︎

  5. ಶಾಸನ ಮಾಡುವ ಅಧಿಕಾರವು. ↩︎

  6. ಕ್ರಿಯಮಾಣಸ್ಯ ಎಂಬ ಪಾಠಾಂತರವಿದೆ (ಭಾರತದರ್ಶನ). ↩︎

  7. ಗರೀಯಾನಪಿ ಪರ್ವತಾತ್। ಎಂಬ ಪಾಠಾಂತರವಿದೆ (ಭಾರತದರ್ಶನ). ↩︎

  8. ವೇದಾ ವಿಭಿನ್ನಾಃ ಸ್ಮೃತಯೋ ವಿಭಿನ್ನಾಃ। ↩︎

  9. ಪ್ರಲಾಪಸ್ತ್ವೇವ ಎಂಬ ಪಾಠಾಂತರವಿದೆ (ಭಾರತದರ್ಶನ). ↩︎

  10. ವಿಶ್ವಾಮಿತ್ರಾದಿ ಮಹಾಪುರುಷರು. ↩︎

  11. ರಾವಣಾದಿ ರಾಕ್ಷಸರು ತಪೋರೂಪಧರ್ಮದ ಬಲದಿಂದ ಇತರರನ್ನು ಪೀಡಿಸಿದರು. ↩︎