249: ಮೃತ್ಯುಪ್ರಜಾಪತಿಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 249

ಸಾರ

ಮಹಾದೇವನ ಪ್ರಾರ್ಥನೆಯಂತೆ ಬ್ರಹ್ಮನ ರೋಷಾಗ್ನಿಯ ಉಪಸಂಹಾರ; ಮೃತ್ಯುವಿನ ಉತ್ಪತ್ತಿ (1-22).

12249001 ಸ್ಥಾಣುರುವಾಚ।
12249001a ಪ್ರಜಾಸರ್ಗನಿಮಿತ್ತಂ ಮೇ ಕಾರ್ಯವತ್ತಾಮಿಮಾಂ ಪ್ರಭೋ।
12249001c ವಿದ್ಧಿ ಸೃಷ್ಟಾಸ್ತ್ವಯಾ ಹೀಮಾ ಮಾ ಕುಪ್ಯಾಸಾಂ ಪಿತಾಮಹ।।

ಸ್ಥಾಣುವು ಹೇಳಿದನು: “ಪ್ರಭೋ! ಪಿತಾಮಹ! ನನ್ನ ಈ ಕಾರ್ಯವು ಪ್ರಜೆಗಳ ಸೃಷ್ಟಿಯ ಕುರಿತಾಗಿಯೇ ಇದೆ. ನೀನೇ ಸೃಷ್ಟಿಸಿರುವ ಇವರ ಮೇಲೆ ಕುಪಿತನಾಗಬಾರದು.

12249002a ತವ ತೇಜೋಗ್ನಿನಾ ದೇವ ಪ್ರಜಾ ದಹ್ಯಂತಿ ಸರ್ವಶಃ।
12249002c ತಾ ದೃಷ್ಟ್ವಾ ಮಮ ಕಾರುಣ್ಯಂ ಮಾ ಕುಪ್ಯಾಸಾಂ ಜಗತ್ಪ್ರಭೋ।।

ದೇವ! ಜಗತ್ಪ್ರಭೋ! ನಿನ್ನ ತೇಜೋಗ್ನಿಯಿಂದ ಪ್ರಜೆಗಳು ಎಲ್ಲೆಲ್ಲಿಯೂ ಸುಟ್ಟುಹೋಗುತ್ತಿದ್ದಾರೆ. ಅವರನ್ನು ನೋಡಿ ನನ್ನಲ್ಲಿ ಕಾರುಣ್ಯವುಂಟಾಗಿದೆ. ಅವರ ಮೇಲೆ ಕುಪಿತನಾಗಬೇಡ.”

12249003 ಪ್ರಜಾಪತಿರುವಾಚ।
12249003a ನ ಕುಪ್ಯೇ ನ ಚ ಮೇ ಕಾಮೋ ನ ಭವೇರನ್ ಪ್ರಜಾ ಇತಿ।
12249003c ಲಾಘವಾರ್ಥಂ ಧರಣ್ಯಾಸ್ತು ತತಃ ಸಂಹಾರ ಇಷ್ಯತೇ।।

ಪ್ರಜಾಪತಿಯು ಹೇಳಿದನು: “ನಾನು ಅವರ ಮೇಲೆ ಕುಪಿತನಾಗಿಲ್ಲ. ಅವರೆಲ್ಲರೂ ಇರಬಾರದೆಂಬ ಬಯಕೆಯೂ ನನ್ನದಲ್ಲ. ಭೂಮಿಯ ಭಾರವನ್ನು ಹಗುರಗೊಳಿಸಲು ಅವರ ಸಂಹಾರವನ್ನು ಬಯಸುತ್ತೇನೆ.

12249004a ಇಯಂ ಹಿ ಮಾಂ ಸದಾ ದೇವೀ ಭಾರಾರ್ತಾ ಸಮಚೋದಯತ್।
12249004c ಸಂಹಾರಾರ್ಥಂ ಮಹಾದೇವ ಭಾರೇಣಾಪ್ಸು ನಿಮಜ್ಜತಿ।।

ಭಾರದಿಂದ ಆರ್ತಳಾಗಿದ್ದ ಈ ದೇವಿಯೇ ಪ್ರಜೆಗಳ ಸಂಹಾರಕ್ಕಾಗಿ ನನ್ನನ್ನು ಪ್ರಚೋದಿಸಿದಳು. ಮಹಾದೇವ! ಭಾರದಿಂದ ಇವಳು ನೀರಿನಲ್ಲಿ ಮುಳುಗಿಹೋಗುವುದರಲ್ಲಿದ್ದಳು.

12249005a ಯದಾಹಂ ನಾಧಿಗಚ್ಚಾಮಿ ಬುದ್ಧ್ಯಾ ಬಹು ವಿಚಾರಯನ್।
12249005c ಸಂಹಾರಮಾಸಾಂ ವೃದ್ಧಾನಾಂ ತತೋ ಮಾಂ ಕ್ರೋಧ ಆವಿಶತ್।।

ಬಹುಪ್ರಕಾರವಾಗಿ ವಿಚಾರಿಸಿದರೂ ನನ್ನ ಬುದ್ಧಿಗೆ ವೃದ್ಧಿಯಾಗುತ್ತಿರುವ ಇವರನ್ನು ಸಂಹರಿಸುವ ಉಪಾಯವು ಹೊಳೆಯಲಿಲ್ಲ. ಆಗ ಕ್ರೋಧವು ನನ್ನನ್ನು ಆವರಿಸಿತು.”

12249006 ಸ್ಥಾಣುರುವಾಚ।
12249006a ಸಂಹಾರಾಂತಂ ಪ್ರಸೀದಸ್ವ ಮಾ ಕ್ರುಧಸ್ತ್ರಿದಶೇಶ್ವರ।
12249006c ಮಾ ಪ್ರಜಾಃ ಸ್ಥಾವರಂ ವೈಚ ಜಂಗಮಂ ಚ ವಿನೀನಶಃ।।

ಸ್ಥಾಣುವು ಹೇಳಿದನು: “ತ್ರಿದಶೇಶ್ವರ! ಈ ಸಂಹಾರದಿಂದ ಪ್ರಸೀದನಾಗು. ಕ್ರೋಧಿತನಾಗಬೇಡ. ಈ ಸ್ಥಾವರ-ಜಂಗಮ ಪ್ರಜೆಗಳನ್ನು ವಿನಾಶಗೊಳಿಸಬೇಡ.

12249007a ಪಲ್ವಲಾನಿ ಚ ಸರ್ವಾಣಿ ಸರ್ವಂ ಚೈವ ತೃಣೋಲಪಮ್।
12249007c ಸ್ಥಾವರಂ ಜಂಗಮಂ ಚೈವ ಭೂತಗ್ರಾಮಂ ಚತುರ್ವಿಧಮ್।।

ಜಲಾಶಯಗಳು, ಹುಲ್ಲಿನ ಮೆದೆಗಳು, ಸ್ಥಾವರಗಳು ಮತ್ತು ಜಂಗಮಗಳೆಂಬ ನಾಲ್ಕು ವಿಧದ ಭೂತಗ್ರಾಮಗಳಿವೆ.

12249008a ತದೇತದ್ಭಸ್ಮಸಾದ್ಭೂತಂ ಜಗತ್ಸರ್ವಮುಪಪ್ಲುತಮ್।
12249008c ಪ್ರಸೀದ ಭಗವನ್ಸಾಧೋ ವರ ಏಷ ವೃತೋ ಮಯಾ।।

ಅವೆಲ್ಲವೂ ಭಸ್ಮೀಭೂತವಾಗುತ್ತಿವೆ. ಜಗತ್ತೆಲ್ಲವೂ ಮುಳುಗಿಹೋಗುತ್ತಿದೆ. ಭಗವನ್! ಪ್ರಸೀದನಾಗು. ಇದೇ ನಾನು ಕೇಳುವ ವರವು.

12249009a ನಷ್ಟಾ ನ ಪುನರೇಷ್ಯಂತಿ ಪ್ರಜಾ ಹ್ಯೇತಾಃ ಕಥಂ ಚನ।
12249009c ತಸ್ಮಾನ್ನಿವರ್ತ್ಯತಾಮೇತತ್ತೇಜಃ ಸ್ವೇನೈವ ತೇಜಸಾ।।

ನಷ್ಟವಾದ ಈ ಪ್ರಜೆಗಳು ಪುನಃ ಯಾವಕಾರಣಕ್ಕೂ ಹುಟ್ಟುವುದಿಲ್ಲ. ಆದುದರಿಂದ ಈ ತೇಜಸ್ಸನ್ನು ನಿನ್ನದೇ ತೇಜಸ್ಸಿನಿಂದ ಹಿಂತೆಗೆದುಕೋ.

12249010a ಉಪಾಯಮನ್ಯಂ ಸಂಪಶ್ಯ ಪ್ರಜಾನಾಂ ಹಿತಕಾಮ್ಯಯಾ।
12249010c ಯಥೇಮೇ ಜಂತವಃ ಸರ್ವೇ ನಿವರ್ತೇರನ್ಪರಂತಪ।।
12249011a ಅಭಾವಮಭಿಗಚ್ಚೇಯುರುತ್ಸನ್ನಪ್ರಜನಾಃ ಪ್ರಜಾಃ।
12249011c ಅಧಿದೈವನಿಯುಕ್ತೋಽಸ್ಮಿ ತ್ವಯಾ ಲೋಕೇಷ್ವಿಹೇಶ್ವರ।।

ಪರಂತಪ! ಪ್ರಜೆಗಳ ಹಿತವನ್ನು ಬಯಸಿ, ಪುನಃ ಇವರು ನಾಶವಾಗದಂತೆ ಮತ್ತು ಇವರ ಸಂಹಾರ ಕಾರ್ಯವು ವ್ಯವಸ್ಥಿತರೀತಿಯಲ್ಲಿ ನಡೆಯುವಂತೆ ಅನ್ಯ ಉಪಾಯವನ್ನು ನೀನೇ ಯೋಚಿಸು. ಲೋಕೇಶ್ವರೇಶ್ವರ! ಅಧಿದೈವನಾಗಿ ನಿನ್ನಿಂದ ನಿಯುಕ್ತಗೊಳಿಸಲ್ಪಟ್ಟಿದ್ದೇನೆ.

12249012a ತ್ವದ್ಭವಂ ಹಿ ಜಗನ್ನಾಥ ಜಗತ್ ಸ್ಥಾವರಜಂಗಮಮ್।
12249012c ಪ್ರಸಾದ್ಯ ತ್ವಾಂ ಮಹಾದೇವ ಯಾಚಾಮ್ಯಾವೃತ್ತಿಜಾಃ ಪ್ರಜಾಃ।।

ಜಗನ್ನಾಥ! ಮಹಾದೇವ! ಸ್ಥಾವರ-ಜಂಗಮ ಜಗತ್ತೆಲ್ಲವೂ ನಿನ್ನಿಂದಲೇ ಹುಟ್ಟಿದೆ. ನಿನ್ನ ಪ್ರಸಾದದಿಂದ ಪ್ರಜೆಗಳು ಸತ್ತು ಪುನಃ ಹುಟ್ಟುವಂತಾಗಲಿ.””

12249013 ನಾರದ ಉವಾಚ।
12249013a ಶ್ರುತ್ವಾ ತು ವಚನಂ ದೇವಃ ಸ್ಥಾಣೋರ್ನಿಯತವಾಙ್ಮನಾಃ।
12249013c ತೇಜಸ್ತತ್ಸ್ವಂ ನಿಜಗ್ರಾಹ ಪುನರೇವಾಂತರಾತ್ಮನಾ।।

ನಾರದನು ಹೇಳಿದನು: “ನಿಯತ ಮಾತು-ಮನಸ್ಸುಗಳುಳ್ಳ ಬ್ರಹ್ಮದೇವನು ಸ್ಥಾಣುವಿನ ಮಾತನ್ನು ಕೇಳಿ ತೇಜಸ್ಸನ್ನು ಹಿಂತೆಗೆದುಕೊಂಡು ಪುನಃ ಅದನ್ನು ತನ್ನಲ್ಲಿಯೇ ಲೀನಗೊಳಿಸಿದನು.

12249014a ತತೋಽಗ್ನಿಮುಪಸಂಗೃಹ್ಯ ಭಗವಾಽಲ್ಲೋಕಪೂಜಿತಃ।
12249014c ಪ್ರವೃತ್ತಿಂ ಚ ನಿವೃತ್ತಿಂ ಚ ಕಲ್ಪಯಾಮಾಸ ವೈ ಪ್ರಭುಃ।।

ಆಗ ಲೋಕಪೂಜಿತ ಪ್ರಭು ಭಗವಾನನು ಅಗ್ನಿಯನ್ನು ಉಪಸಂಹರಿಸಿ ಪ್ರವೃತ್ತಿ-ನಿವೃತ್ತಿಗಳನ್ನು ಕಲ್ಪಿಸಿದನು.

12249015a ಉಪಸಂಹರತಸ್ತಸ್ಯ ತಮಗ್ನಿಂ ರೋಷಜಂ ತದಾ।
12249015c ಪ್ರಾದುರ್ಬಭೂವ ವಿಶ್ವೇಭ್ಯಃ ಖೇಭ್ಯೋ ನಾರೀ ಮಹಾತ್ಮನಃ।।

ರೋಷದಿಂದ ಉಂಟಾದ ಆ ಅಗ್ನಿಯನ್ನು ಅವನು ಉಪಸಂಹರಿಸಲು ಆ ಮಹಾತ್ಮನ ಎಲ್ಲ ಅವಯವಗಳಿಂದ ಒಂದು ಶಕ್ತಿಯು ಹೊರಟು ನಾರಿಯಾಗಿ ಪ್ರಾದುರ್ಭವಿಸಿತು.

12249016a ಕೃಷ್ಣಾ ರಕ್ತಾಂಬರಧರಾ ರಕ್ತನೇತ್ರತಲಾಂತರಾ।
12249016c ದಿವ್ಯಕುಂಡಲಸಂಪನ್ನಾ ದಿವ್ಯಾಭರಣಭೂಷಿತಾ।।

ಕಪ್ಪು ಮತ್ತು ಕೆಂಪು ವಸ್ತ್ರಗಳನ್ನುಟ್ಟಿದ್ದ, ಗುಳಿಬಿದ್ದ ರಕ್ತನೇತ್ರಳಾಗಿದ್ದ ಅವಳು ದಿವ್ಯಕುಂಡಲಸಂಪನ್ನಳಾಗಿ ದಿವ್ಯಾಭರಣಭೂಷಿತಳಾಗಿದ್ದಳು.

12249017a ಸಾ ವಿನಿಃಸೃತ್ಯ ವೈ ಖೇಭ್ಯೋ ದಕ್ಷಿಣಾಮಾಶ್ರಿತಾ ದಿಶಮ್।
12249017c ದದೃಶಾತೇಽಥ ತೌ ಕನ್ಯಾಂ ದೇವೌ ವಿಶ್ವೇಶ್ವರಾವುಭೌ।।

ಅವನ ಅವಯವಗಳಿಂದ ಹೊರಟು ದಕ್ಷಿಣ ದಿಕ್ಕಿನಲ್ಲಿ ಹೋಗುತ್ತಿದ್ದ ಆ ಕನ್ಯೆಯನ್ನು ಇಬ್ಬರು ವಿಶ್ವೇಶ್ವರ ದೇವರೂ ನೋಡಿದರು.

12249018a ತಾಮಾಹೂಯ ತದಾ ದೇವೋ ಲೋಕಾನಾಮಾದಿರೀಶ್ವರಃ।
12249018c ಮೃತ್ಯೋ ಇತಿ ಮಹೀಪಾಲ ಜಹಿ ಚೇಮಾಃ ಪ್ರಜಾ ಇತಿ।।

ಮಹೀಪಾಲ! ಆಗ ಲೋಕಗಳ ಆದಿ ಈಶ್ವರನು ಅವಳನ್ನು ಮೃತ್ಯುವೆಂದು ಕರೆದು ಈ ಪ್ರಜೆಗಳನ್ನು ಸಂಹರಿಸು ಎಂದನು.

12249019a ತ್ವಂ ಹಿ ಸಂಹಾರಬುದ್ಧ್ಯಾ ಮೇ ಚಿಂತಿತಾ ರುಷಿತೇನ ಚ।
12249019c ತಸ್ಮಾತ್ಸಂಹರ ಸರ್ವಾಸ್ತ್ವಂ ಪ್ರಜಾಃ ಸಜಡಪಂಡಿತಾಃ।।

“ಸಂಹಾರಬುದ್ಧಿಯಿಂದ ರೋಷಗೊಂಡು ನಿನ್ನನ್ನು ಚಿಂತಿಸಿದೆನು. ಆದುದರಿಂದ ನೀನು ಪಂಡಿತರು-ಮೂರ್ಖರು ಎನ್ನುವ ಭೇದಭಾವವಿಲ್ಲದೇ ಎಲ್ಲರನ್ನೂ ಸಂಹರಿಸು.

12249020a ಅವಿಶೇಷೇಣ ಚೈವ ತ್ವಂ ಪ್ರಜಾಃ ಸಂಹರ ಭಾಮಿನಿ।
12249020c ಮಮ ತ್ವಂ ಹಿ ನಿಯೋಗೇನ ಶ್ರೇಯಃ ಪರಮವಾಪ್ಸ್ಯಸಿ।।

ಭಾಮಿನಿ! ನೀನು ಯಾರನ್ನೂ ಬಿಡದೇ ಪ್ರಜೆಗಳನ್ನು ಸಂಹರಿಸು. ನನ್ನ ನಿಯೋಗದಿಂದ ನೀನು ಪರಮ ಶ್ರೇಯಸ್ಸನ್ನು ಪಡೆಯುತ್ತೀಯೆ.”

12249021a ಏವಮುಕ್ತಾ ತು ಸಾ ದೇವೀ ಮೃತ್ಯುಃ ಕಮಲಮಾಲಿನೀ।
12249021c ಪ್ರದಧ್ಯೌ ದುಃಖಿತಾ ಬಾಲಾ ಸಾಶ್ರುಪಾತಮತೀವ ಹಿ।।

ಅವನು ಹೀಗೆ ಹೇಳಲು ಕಮಲಮಾಲಿನೀ ಬಾಲಕಿ ದೇವೀ ಮೃತ್ಯುವು ಕಣ್ಣೀರು ಸುರಿಸುತ್ತಾ ದುಃಖಿತಳಾಗಿ ಚಿಂತಾಮಗ್ನಳಾದಳು.

12249022a ಪಾಣಿಭ್ಯಾಂ ಚೈವ ಜಗ್ರಾಹ ತಾನ್ಯಶ್ರೂಣಿ ಜನೇಶ್ವರಃ।
12249022c ಮಾನವಾನಾಂ ಹಿತಾರ್ಥಾಯ ಯಯಾಚೇ ಪುನರೇವ ಚ।।

ಮಾನವರ ಹಿತಾರ್ಥಕ್ಕಾಗಿ ಜನೇಶ್ವರ ಬ್ರಹ್ಮನು ಅವಳ ಕಣ್ಣುಗಳಿಂದ ಉದುರುತ್ತಿದ್ದ ಅಶ್ರುಬಿಂದುಗಳನ್ನು ಕೆಳಕ್ಕೆ ಬೀಳಲು ಬಿಡದೇ ತನ್ನ ಅಂಜಲಿಯಲ್ಲಿಯೇ ಹಿಡಿದುಕೊಂಡನು. ಆಗ ಅವಳು ಪುನಃ ಪ್ರಾರ್ಥಿಸಿದಳು.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಮೃತ್ಯುಪ್ರಜಾಪತಿಸಂವಾದೇ ಎಕೋನಪಂಚಾಶದಧಿಕದ್ವಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಮೃತ್ಯುಪ್ರಜಾಪತಿಸಂವಾದ ಎನ್ನುವ ಇನ್ನೂರಾನಲ್ವತ್ತೊಂಭತ್ತನೇ ಅಧ್ಯಾಯವು.