248: ಮೃತ್ಯುಪ್ರಜಾಪತಿಸಂವಾದೋಪಕ್ರಮಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 248

ಸಾರ

ಮೃತ್ಯುವಿನ ವಿಷಯದಲ್ಲಿ ಯುಧಿಷ್ಠಿರನ ಪ್ರಶ್ನೆ; ಬ್ರಹ್ಮನ ರೋಷಾಗ್ನಿಯಿಂದ ಸಮಸ್ತ ಪ್ರಾಣಿಗಳ ಸಂಹಾರ (1-21).

12248001 ಯುಧಿಷ್ಠಿರ ಉವಾಚ।
12248001a ಯ ಇಮೇ ಪೃಥಿವೀಪಾಲಾಃ ಶೇರತೇ ಪೃಥಿವೀತಲೇ।
12248001c ಪೃತನಾಮಧ್ಯ ಏತೇ ಹಿ ಗತಸತ್ತ್ವಾ ಮಹಾಬಲಾಃ।।

ಯುಧಿಷ್ಠಿರನು ಹೇಳಿದನು: “ಮಹಾಬಲರಾದ ಪೃಥಿವೀಪಾಲರು ಈ ಸೇನಾಮಧ್ಯದಲ್ಲಿ ಭೂಮಿಯಮೇಲೆ ಹತರಾಗಿ ಮಲಗಿದ್ದಾರೆ.

12248002a ಏಕೈಕಶೋ ಭೀಮಬಲಾ ನಾಗಾಯುತಬಲಾಸ್ತಥಾ।
12248002c ಏತೇ ಹಿ ನಿಹತಾಃ ಸಂಖ್ಯೇ ತುಲ್ಯತೇಜೋಬಲೈರ್ನರೈಃ।।

ಒಬ್ಬೊಬ್ಬರೂ ಭೀಮಬಲರಾಗಿದ್ದರು. ಸಾವಿರ ಆನೆಗಳ ಬಲವುಳ್ಳವರಾಗಿದ್ದರು. ಇವರು ತಮ್ಮಂತೆಯೇ ತೇಜೋಬಲವಿದ್ದ ನರರಿಂದ ಹತರಾದರು.

12248003a ನೈಷಾಂ ಪಶ್ಯಾಮಿ ಹಂತಾರಂ ಪ್ರಾಣಿನಾಂ ಸಂಯುಗೇ ಪುರಾ।
12248003c ವಿಕ್ರಮೇಣೋಪಸಂಪನ್ನಾಸ್ತೇಜೋಬಲಸಮನ್ವಿತಾಃ।।

ವಿಕ್ರಮಸಂಪನ್ನರಾಗಿದ್ದ ಮತ್ತು ತೇಜೋಬಲಸಮನ್ವಿತರಾಗಿದ್ದ ಇವರನ್ನು ಯುದ್ಧದಲ್ಲಿ ಕೊಲ್ಲುವ ಜೀವಿಗಳನ್ನೇ ಈ ಹಿಂದೆ ನೋಡಿರಲಿಲ್ಲ.

12248004a ಅಥ ಚೇಮೇ ಮಹಾಪ್ರಾಜ್ಞ ಶೇರತೇ ಹಿ ಗತಾಸವಃ।
12248004c ಮೃತಾ ಇತಿ ಚ ಶಬ್ದೋಽಯಂ ವರ್ತತ್ಯೇಷು ಗತಾಸುಷು।।

ಮಹಾಪ್ರಾಜ್ಞ! ಅಂಥವರು ಈಗ ಪ್ರಾಣಹೋಗಿ ಮಲಗಿದ್ದಾರೆ. ಪ್ರಾಣಹೋದವರಿಗೆ ಮೃತರಾದರು ಎಂಬ ಶಬ್ದವನ್ನು ಬಳಸುವ ರೂಢಿಯಿದೆ.

12248005a ಇಮೇ ಮೃತಾ ನೃಪತಯಃ ಪ್ರಾಯಶೋ ಭೀಮವಿಕ್ರಮಾಃ।
12248005c ತತ್ರ ಮೇ ಸಂಶಯೋ ಜಾತಃ ಕುತಃ ಸಂಜ್ಞಾ ಮೃತಾ ಇತಿ।।

ಪ್ರಾಯಶಃ ಭೀಮವಿಕ್ರಮಿಗಳಾಗಿದ್ದ ಈ ನೃಪತಿಗಳೂ ಮೃತರಾದರು ಎನ್ನುತ್ತೇವೆ. ಆದರೆ ನನಗೆ ಈ ವಿಷಯದಲ್ಲಿ ಒಂದು ಸಂಶಯವುಂಟಾಗಿದೆ. ಮೃತ ಎನ್ನುವ ಶಬ್ದವು ಹೇಗೆ ಬಂದಿತು?

12248006a ಕಸ್ಯ ಮೃತ್ಯುಃ ಕುತೋ ಮೃತ್ಯುಃ ಕೇನ ಮೃತ್ಯುರಿಹ ಪ್ರಜಾಃ।
12248006c ಹರತ್ಯಮರಸಂಕಾಶ ತನ್ಮೇ ಬ್ರೂಹಿ ಪಿತಾಮಹ।।

ಪಿತಾಮಹ! ಈ ಮೃತ್ಯುವು ಯಾರದ್ದು? ಎಲ್ಲಿಯದು? ಯಾವ ಕಾರಣದಿಂದ ಈ ಮೃತ್ಯುವು ಪ್ರಜೆಗಳ ಪ್ರಾಣಗಳನ್ನು ಅಪಹರಿಸುತ್ತದೆ? ಇದನ್ನು ನನಗೆ ಹೇಳು.”

12248007 ಭೀಷ್ಮ ಉವಾಚ।
12248007a ಪುರಾ ಕೃತಯುಗೇ ತಾತ ರಾಜಾಸೀದವಿಕಂಪಕಃ।
12248007c ಸ ಶತ್ರುವಶಮಾಪನ್ನಃ ಸಂಗ್ರಾಮೇ ಕ್ಷೀಣವಾಹನಃ।।

ಭೀಷ್ಮನು ಹೇಳಿದನು: “ಮಗೂ! ಹಿಂದೆ ಕೃತಯುಗದಲ್ಲಿ ವಿಕಂಪಕನೆಂಬ ರಾಜನಿದ್ದನು. ಸಂಗ್ರಾಮದಲ್ಲಿ ಅವನು ರಥವನ್ನು ಕಳೆದುಕೊಂಡು ಶತ್ರುವಶನಾದನು.

12248008a ತತ್ರ ಪುತ್ರೋ ಹರಿರ್ನಾಮ ನಾರಾಯಣಸಮೋ ಬಲೇ।
12248008c ಸ ಶತ್ರುಭಿರ್ಹತಃ ಸಂಖ್ಯೇ ಸಬಲಃ ಸಪದಾನುಗಃ।।

ಅವನಿಗೆ ಹರಿ ಎಂಬ ಹೆಸರಿನ, ನಾರಾಯಣನ ಸಮನಾದ ಬಲಶಾಲಿಯಾಗಿದ್ದ ಮಗನಿದ್ದನು. ಅವನು ಯುದ್ಧದಲ್ಲಿ ತನ್ನ ಸೇನೆ ಮತ್ತು ಅನುಯಾಯಿಗಳೊಂದಿಗೆ ಶತ್ರುಗಳಿಂದ ಹತನಾದನು.

12248009a ಸ ರಾಜಾ ಶತ್ರುವಶಗಃ ಪುತ್ರಶೋಕಸಮನ್ವಿತಃ।
12248009c ಯದೃಚ್ಚಯಾಶಾಂತಿಪರೋ ದದರ್ಶ ಭುವಿ ನಾರದಮ್।।

ಶತ್ರುವಿನ ವಶನಾಗಿದ್ದ ಮತ್ತು ಪುತ್ರಶೋಕಸಮನ್ವಿತನಾದ್ದ ಅವನು ಪರಮ ಶಾಂತಿಯನ್ನು ಬಯಸಿ ಭುವಿಯಲ್ಲಿ ನಾರದನ್ನು ಕಂಡನು.

12248010a ಸ ತಸ್ಮೈ ಸರ್ವಮಾಚಷ್ಟ ಯಥಾ ವೃತ್ತಂ ಜನೇಶ್ವರಃ।
12248010c ಶತ್ರುಭಿರ್ಗ್ರಹಣಂ ಸಂಖ್ಯೇ ಪುತ್ರಸ್ಯ ಮರಣಂ ತಥಾ।।

ಜನೇಶ್ವರನು ಅವನಿಗೆ ಯುದ್ಧದಲ್ಲಿ ತಾನು ಶತ್ರುವಿನ ಬಂಧಿಯಾದುದು ಮತ್ತು ಪುತ್ರನ ಮರಳ ಎಲ್ಲವನ್ನೂ ಹೇಗೆ ನಡೆಯಿತೋ ಹಾಗೆ ಹೇಳಿದನು.

12248011a ತಸ್ಯ ತದ್ವಚನಂ ಶ್ರುತ್ವಾ ನಾರದೋಽಥ ತಪೋಧನಃ।
12248011c ಆಖ್ಯಾನಮಿದಮಾಚಷ್ಟ ಪುತ್ರಶೋಕಾಪಹಂ ತದಾ।।

ಅವನ ಆ ಮಾತನ್ನು ಕೇಳಿ ತಪೋಧನ ನಾರದನು ಅವನಿಗೆ ಪುತ್ರಶೋಕವನ್ನು ಹೋಗಲಾಡಿಸುವ ಈ ಆಖ್ಯಾನವನ್ನು ಹೇಳಿದನು.

12248012a ರಾಜನ್ ಶೃಣು ಸಮಾಖ್ಯಾನಮದ್ಯೇದಂ ಬಹುವಿಸ್ತರಮ್।
12248012c ಯಥಾ ವೃತ್ತಂ ಶ್ರುತಂ ಚೈವ ಮಯಾಪಿ ವಸುಧಾಧಿಪ।।

“ರಾಜನ್! ವಸುಧಾಧಿಪ! ಬಹುವಿಸ್ತಾರವಾದ ಈ ಸಮಾಖ್ಯಾನವನ್ನು ಅದು ಹೇಗೆ ನಡೆಯಿತೋ ಮತ್ತು ನಾನು ಹೇಗೆ ಕೇಳಿದ್ದೆನೋ ಹಾಗೆ ಕೇಳು.

12248013a ಪ್ರಜಾಃ ಸೃಷ್ಟ್ವಾ ಮಹಾತೇಜಾಃ ಪ್ರಜಾಸರ್ಗೇ ಪಿತಾಮಹಃ।
12248013c ಅತೀವ ವೃದ್ಧಾ ಬಹುಲಾ ನಾಮೃಷ್ಯತ ಪುನಃ ಪ್ರಜಾಃ।।

ಮಹಾತೇಜಸ್ವೀ ಪಿತಾಮಹನು ಪ್ರಜಾಸೃಷ್ಟಿಯ ಸಮಯದಲ್ಲಿ ಅನೇಕ ಪ್ರಜೆಗಳನ್ನು ಸೃಷ್ಟಿಸಿದನು. ಅವರು ಅತೀವ ವೃದ್ಧರಾದರೂ ಸಾಯಲಿಲ್ಲ ಮತ್ತು ಪುನಃ ಹೆಚ್ಚು ಪ್ರಜೆಗಳನ್ನು ಹುಟ್ಟಿಸಿದರು.

12248014a ನ ಹ್ಯಂತರಮಭೂತ್ಕಿಂ ಚಿತ್ಕ್ವ ಚಿಜ್ಜಂತುಭಿರಚ್ಯುತ।
12248014c ನಿರುಚ್ಚ್ವಾಸಮಿವೋನ್ನದ್ಧಂ ತ್ರೈಲೋಕ್ಯಮಭವನ್ನೃಪ।।

ನೃಪ! ಅಚ್ಯುತ! ಪ್ರಾಣಿಗಳಿಲ್ಲದೇ ಇರುವ ಕಿಂಚಿತ್ತು ಜಾಗವೂ ಇರಲಿಲ್ಲ. ಮೂರುಲೋಕಗಳೂ ಜೀವಿಗಳಿಂದ ತುಂಬಿಹೋದವು ಮತ್ತು ಅವುಗಳಿಗೆ ಉಸಿರಾಡಲೂ ಆಗುತ್ತಿರಲಿಲ್ಲ.

12248015a ತಸ್ಯ ಚಿಂತಾ ಸಮುತ್ಪನ್ನಾ ಸಂಹಾರಂ ಪ್ರತಿ ಭೂಪತೇ।
12248015c ಚಿಂತಯನ್ನಾಧ್ಯಗಚ್ಚಚ್ಚ ಸಂಹಾರೇ ಹೇತುಕಾರಣಮ್।।

ಭೂಪತೇ! ಅವರನ್ನು ಹೇಗೆ ಸಂಹರಿಸಬೇಕು ಎಂಬ ಚಿಂತೆಯು ಅವನಲ್ಲಿ ಹುಟ್ಟಿಕೊಂಡಿತು. ಅದರ ಕುರಿತು ಯೋಚಿಸಿದರೂ, ಸಂಹಾರಕ್ಕೆ ಕಾರಣವ್ಯಾವುದನ್ನೂ ನಿರ್ಧರಿಸಲಾಗಲಿಲ್ಲ.

12248016a ತಸ್ಯ ರೋಷಾನ್ಮಹಾರಾಜ ಖೇಭ್ಯೋಽಗ್ನಿರುದತಿಷ್ಠತ।
12248016c ತೇನ ಸರ್ವಾ ದಿಶೋ ರಾಜನ್ದದಾಹ ಸ ಪಿತಾಮಹಃ।।

ಮಹಾರಾಜ! ಅವನ ರೋಷದಿಂದಾಗಿ ದೇಹದಿಂದ ಒಂದು ಅಗ್ನಿಯು ಹೊರಹೊಮ್ಮಿತು. ರಾಜನ್! ಅದರಿಂದ ಪಿತಾಮಹನು ಸರ್ವ ದಿಕ್ಕುಗಳನ್ನೂ ದಹಿಸತೊಡಗಿದನು.

12248017a ತತೋ ದಿವಂ ಭುವಂ ಖಂ ಚ ಜಗಚ್ಚ ಸಚರಾಚರಮ್।
12248017c ದದಾಹ ಪಾವಕೋ ರಾಜನ್ ಭಗವತ್ಕೋಪಸಂಭವಃ।।

ರಾಜನ್! ಭಗವಂತನ ಕೋಪದಿಂದ ಹುಟ್ಟಿದ್ದ ಆ ಅಗ್ನಿಯು ಸ್ವರ್ಗ, ಭೂಮಿ, ಆಕಾಶ, ಮತ್ತು ಸಚರಾಚರ ಜಗತ್ತನ್ನೂ ಸುಟ್ಟುಹಾಕಿತು.

12248018a ತತ್ರಾದಹ್ಯಂತ ಭೂತಾನಿ ಜಂಗಮಾನಿ ಧ್ರುವಾಣಿ ಚ।
12248018c ಮಹತಾ ಕೋಪವೇಗೇನ ಕುಪಿತೇ ಪ್ರಪಿತಾಮಹೇ।।

ಪ್ರಪಿತಾಮಹನ ಆ ಮಹಾ ಕೋಪದ ವೇಗದಿಂದ ನಿಶ್ಚಯವಾಗಿಯೂ ಭೂತಗಳು ಜಂಗಮಗಳು ಸುಟ್ಟುಹೋದವು.

12248019a ತತೋ ಹರಿಜಟಃ ಸ್ಥಾಣುರ್ವೇದಾಧ್ವರಪತಿಃ ಶಿವಃ।
12248019c ಜಗಾದ ಶರಣಂ ದೇವೋ ಬ್ರಹ್ಮಾಣಂ ಪರವೀರಹಾ।।

ಆಗ ಹರಿಜಟ ಸ್ಥಾಣು ವೇದಾಧ್ವರಪತಿ ಪರವೀರಹ ದೇವ ಶಿವನು ಬ್ರಹ್ಮನ ಶರಣು ಹೋದನು.

12248020a ತಸ್ಮಿನ್ನಭಿಗತೇ ಸ್ಥಾಣೌ ಪ್ರಜಾನಾಂ ಹಿತಕಾಮ್ಯಯಾ।
12248020c ಅಬ್ರವೀದ್ವರದೋ ದೇವೋ ಜ್ವಲನ್ನಿವ ತದಾ ಶಿವಮ್।।

ಪ್ರಜೆಗಳ ಹಿತವನ್ನು ಬಯಸಿ ಬಂದಿದ್ದ ಸ್ಥಾಣು ಶಿವನಿಗೆ ಪ್ರಜ್ವಲಿಸುತ್ತಿದ್ದ ವರದ ದೇವ ಬ್ರಹ್ಮನು ಹೇಳಿದನು:

12248021a ಕರವಾಣ್ಯದ್ಯ ಕಂ ಕಾಮಂ ವರಾರ್ಹೋಽಸಿ ಮತೋ ಮಮ।
12248021c ಕರ್ತಾ ಹ್ಯಸ್ಮಿ ಪ್ರಿಯಂ ಶಂಭೋ ತವ ಯದ್ಧೃದಿ ವರ್ತತೇ।।

“ನೀನು ವರಕ್ಕೆ ಅರ್ಹನು ಎಂದು ನನಗನ್ನಿಸುತ್ತದೆ. ನಿನ್ನ ಬಯಕೆಯೇನು? ಅದನ್ನು ಇಂದು ಪೂರೈಸುತ್ತೇನೆ. ಶಂಭೋ! ನಾನು ಕರ್ತ. ನಾನು ನಿನ್ನ ವೃದ್ಧಿಯುಂಟಾಗುವಂತೆ ಮಾಡುತ್ತೇನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಮೃತ್ಯುಪ್ರಜಾಪತಿಸಂವಾದೋಪಕ್ರಮೇ ಅಷ್ಟಚತ್ವಾರಿಂಶಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಮೃತ್ಯುಪ್ರಜಾಪತಿಸಂವಾದೋಪಕ್ರಮ ಎನ್ನುವ ಇನ್ನೂರಾನಲ್ವತ್ತೆಂಟನೇ ಅಧ್ಯಾಯವು.