ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 246
ಸಾರ
ಕಾಮರೂಪೀ ಅದ್ಭುತ ವೃಕ್ಷದ ವರ್ಣನೆ; ಅದನ್ನು ಕತ್ತರಿಸಿ ಮುಕ್ತಿಯನ್ನು ಪಡೆಯುವ ಉಪಾಯ; ಶರೀರರೂಪೀ ನಗರದ ವರ್ಣನೆ (1-15).
12246001 ವ್ಯಾಸ ಉವಾಚ।
12246001a ಹೃದಿ ಕಾಮದ್ರುಮಶ್ಚಿತ್ರೋ ಮೋಹಸಂಚಯಸಂಭವಃ।
12246001c ಕ್ರೋಧಮಾನಮಹಾಸ್ಕಂಧೋ ವಿವಿತ್ಸಾಪರಿಮೋಚನಃ।।
12246002a ತಸ್ಯ ಚಾಜ್ಞಾನಮಾಧಾರಃ ಪ್ರಮಾದಃ ಪರಿಷೇಚನಮ್।
12246002c ಸೋಽಭ್ಯಸೂಯಾಪಲಾಶೋ ಹಿ ಪುರಾದುಷ್ಕೃತಸಾರವಾನ್।।
ವ್ಯಾಸನು ಹೇಳಿದನು: “ಹೃದಯದಲ್ಲಿ ಮೋಹದ ಬೀಜದಿಂದ ಹುಟ್ಟಿದ ಕಾಮವೆಂಬ ಹೆಸರಿನ ವಿಚಿತ್ರ ವೃಕ್ಷವೊಂದಿದೆ. ಕ್ರೋಧ-ಅಭಿಮಾನಗಳೇ ಅದರ ಮಹಾ ಶಾಖೆಗಳು. ಸಂಕಲ್ಪವೇ ಅದಕ್ಕೆ ನೀರೆರೆಯುವ ಪಾತ್ರೆ. ಅಜ್ಞಾನವೇ ಅದರ ಬುಡ. ಪ್ರಮಾದವೇ ಅದಕ್ಕೆ ಹಾಕುವ ನೀರು. ಅಸೂಯೆಯೇ ಅದರ ಹಸುರೆಲೆಗಳು. ಹಿಂದೆ ಮಾಡಿದ ಪಾಪಕರ್ಮಗಳೇ ಅದರ ಮುಖ್ಯ ಸಾರವು.
12246003a ಸಂಮೋಹಚಿಂತಾವಿಟಪಃ ಶೋಕಶಾಖೋ ಭಯಂಕರಃ।
12246003c ಮೋಹನೀಭಿಃ ಪಿಪಾಸಾಭಿರ್ಲತಾಭಿಃ ಪರಿವೇಷ್ಟಿತಃ।।
ಸಂಮೋಹ-ಚಿಂತೆಗಳೇ ಅದರ ದೊಡ್ಡ ರೆಂಬೆಗಳು. ಶೋಕವೇ ಅದರ ಚಿಕ್ಕ ರೆಂಬೆಯು. ಭಯವೆಂಬುದು ಅದರ ಮೊಳಕೆ. ಅದನ್ನು ಸಂಮೋಹಜನಕವಾದ ತೃಷ್ಣೆಗಳೇ ಲತೆಗಳಾಗಿ ಸುತ್ತಿಕೊಂಡಿವೆ.
12246004a ಉಪಾಸತೇ ಮಹಾವೃಕ್ಷಂ ಸುಲುಬ್ಧಾಸ್ತಂ ಫಲೇಪ್ಸವಃ।
12246004c ಆಯಾಸೈಃ ಸಂಯತಃ ಪಾಶೈಃ ಫಲಾನಿ ಪರಿವೇಷ್ಟಯನ್।।
ಅದರ ಫಲವನ್ನು ಪಡೆದುಕೊಳ್ಳಲು ಇಚ್ಛಿಸುವ ಕಡುಲೋಭಿಗಳು ವಾಸನಾರೂಪದ ಕಬ್ಬಿಣದ ಸರಪಳಿಗಳಿಂದ ಬಂಧಿತರಾಗಿ ಫಲದಾಯಕ ಆ ಕಾಮವೃಕ್ಷವನ್ನು ಸುತ್ತುವರಿದು ಉಪಾಸಿಸುತ್ತಾರೆ.
12246005a ಯಸ್ತಾನ್ ಪಾಶಾನ್ವಶೇ ಕೃತ್ವಾ ತಂ ವೃಕ್ಷಮಪಕರ್ಷತಿ।
12246005c ಗತಃ ಸ ದುಃಖಯೋರಂತಂ ಯತಮಾನಸ್ತಯೋರ್ದ್ವಯೋಃ।।
ಆ ಪಾಶಗಳನ್ನು ತುಂಡರಿಸಿಕೊಂಡು ವೈರಾಗ್ಯವೆಂಬ ಶಸ್ತ್ರದಿಂದ ಆ ಕಾಮವೃಕ್ಷವನ್ನು ಕೆಳಕ್ಕೆ ಕೆಡಗುವವನು ಜರಾಮರಣಗಳಿಂದ ಪ್ರಾಪ್ತವಾಗುವ ಎರಡೂ ಪ್ರಕಾರದ ದುಃಖಗಳ ಕೊನೆಯನ್ನು ಮುಟ್ಟುತ್ತಾನೆ.
12246006a ಸಂರೋಹತ್ಯಕೃತಪ್ರಜ್ಞಃ ಸಂತಾಪೇನ ಹಿ ಪಾದಪಮ್।
12246006c ಸ ತಮೇವ ತತೋ ಹಂತಿ ವಿಷಂ ಗ್ರಸ್ತಮಿವಾತುರಮ್।।
ಅಕೃತಪ್ರಜ್ಞನು ಆ ವೃಕ್ಷವನ್ನೇರಿ ಸಂತಾಪವನ್ನೇ ಹೊಂದುತ್ತಾನೆ. ವಿಷದ ಗೆಡ್ಡೆಯು ರೋಗಿಯನ್ನು ಹೇಗೋ ಹಾಗೆ ಅದು ಅವನನ್ನು ನಾಶಗೊಳಿಸುತ್ತದೆ.
12246007a ತಸ್ಯಾನುಶಯಮೂಲಸ್ಯ ಮೂಲಮುದ್ಧ್ರಿಯತೇ ಬಲಾತ್।
12246007c ತ್ಯಾಗಾಪ್ರಮಾದಾಕೃತಿನಾ ಸಾಮ್ಯೇನ ಪರಮಾಸಿನಾ।।
ಜ್ಞಾನಿಯು ಬಹಳ ಆಳದವರೆಗೂ ಬೇರುಬಿಟ್ಟಿರುವ ಆ ವೃಕ್ಷದ ಮೂಲವನ್ನು ತ್ಯಾಗ-ಅಪ್ರಮಾದಗಳಿಂದುಂಟಾದ ಸಾಮ್ಯವೆಂಬ ಪರಮ ಖಡ್ಗದಿಂದ ಬಲಪೂರ್ವಕವಾಗಿ ಕತ್ತರಿಸಿ ಹಾಕುತ್ತಾನೆ.
12246008a ಏವಂ ಯೋ ವೇದ ಕಾಮಸ್ಯ ಕೇವಲಂ ಪರಿಕರ್ಷಣಮ್।
12246008c ವಧಂ ವೈ ಕಾಮಶಾಸ್ತ್ರಸ್ಯ ಸ ದುಃಖಾನ್ಯತಿವರ್ತತೇ।।
ಹೀಗೆ ಕಾಮದ ನಿವರ್ತನೋಪಾಯವನ್ನು ತಿಳಿದು ಕಾಮಶಾಸ್ತ್ರವನ್ನೇ ವಧಿಸಿರುವವನು ದುಃಖಗಳಿಂದ ಪಾರಾಗುತ್ತಾನೆ.
12246009a ಶರೀರಂ ಪುರಮಿತ್ಯಾಹುಃ ಸ್ವಾಮಿನೀ ಬುದ್ಧಿರಿಷ್ಯತೇ।
12246009c ತತ್ರ ಬುದ್ಧೇಃ ಶರೀರಸ್ಥಂ ಮನೋ ನಾಮಾರ್ಥಚಿಂತಕಮ್।।
ಶರೀರವನ್ನು ಒಂದು ಪುರವೆಂದು ಹೇಳುತ್ತಾರೆ. ಬುದ್ಧಿಯು ಅದರ ರಾಣಿಯು. ಶರೀರಸ್ಥ ಮನಸ್ಸು ಬುದ್ಧಿಯ ಅರ್ಥಸಿದ್ಧಿಗಾಗಿ ಸಮಾಲೋಚಿಸುವ ಮಂತ್ರಿಯು.
12246010a ಇಂದ್ರಿಯಾಣಿ ಜನಾಃ ಪೌರಾಸ್ತದರ್ಥಂ ತು ಪರಾ ಕೃತಿಃ।
12246010c ತತ್ರ ದ್ವೌ ದಾರುಣೌ ದೋಷೌ ತಮೋ ನಾಮ ರಜಸ್ತಥಾ।।
ಇಂದ್ರಿಯಗಳು ಪೌರ ಜನರು. ಅವರಿಗಾಗಿ ಮನಸ್ಸು ದೊಡ್ಡ ದೊಡ್ಡ ಕಾರ್ಯಗಳನ್ನೇ ಮಾಡುತ್ತಿರುತ್ತದೆ. ಅಲ್ಲಿ ತಮಸ್ಸು ಮತ್ತು ರಜಸ್ಸುಗಳೆಂಬ ಎರಡು ದೋಷಗಳಿವೆ.
12246011a ಯದರ್ಥಮುಪಜೀವಂತಿ ಪೌರಾಃ ಸಹಪುರೇಶ್ವರಾಃ।
12246011c ಅದ್ವಾರೇಣ ತಮೇವಾರ್ಥಂ ದ್ವೌ ದೋಷಾವುಪಜೀವತಃ।।
ಮನಸ್ಸು ಒದಗಿಸಿಕೊಟ್ಟ ದೋಷಯುಕ್ತವಾದ ವಿಷಯಸುಖಗಳನ್ನು ಇಂದ್ರಿಯರೂಪದ ಪ್ರಜೆಗಳು ಪುರಿಯ ಈಶ್ವರರೊಂದಿಗೆ ಉಪಭೋಗಿಸುತ್ತವೆ. ರಜಸ್ಸು-ತಮಸ್ಸುಗಳೆಂಬ ಎರಡು ದೋಷಗಳು ನಿಷಿದ್ಧ ಮಾರ್ಗದಿಂದಲೇ ವಿಷಯಸುಖಗಳನ್ನು ಮನಸ್ಸಿಗೆ ಒದಗಿಸಿಕೊಡುತ್ತವೆ.
12246012a ತತ್ರ ಬುದ್ಧಿರ್ಹಿ ದುರ್ಧರ್ಷಾ ಮನಃ ಸಾಧರ್ಮ್ಯಮುಚ್ಯತೇ।
12246012c ಪೌರಾಶ್ಚಾಪಿ ಮನಸ್ತ್ರಸ್ತಾಸ್ತೇಷಾಮಪಿ ಚಲಾ ಸ್ಥಿತಿಃ।।
ಅಲ್ಲಿ ಬುದ್ಧಿಯು ದುರ್ಧರ್ಷವಾಗಿದ್ದರೂ ಮನಸ್ಸಿನೊಡನೆ ಇರುವುದರಿಂದ ಸಹಧರ್ಮಿಯಾಗಿಬಿಡುತ್ತದೆ. ಇಂದ್ರಿಯಾದಿ ಪೌರರೂ ಮನಸ್ಸೆಂಬ ಮಂತ್ರಿಗೆ ಭಯಪಡುತ್ತವೆ.
12246013a ಯದರ್ಥಂ ಬುದ್ಧಿರಧ್ಯಾಸ್ತೇ ನ ಸೋಽರ್ಥಃ ಪರಿಷೀದತಿ।
12246013c ಯದರ್ಥಂ ಪೃಥಗಧ್ಯಾಸ್ತೇ ಮನಸ್ತತ್ಪರಿಷೀದತಿ।।
ಬುದ್ಧಿಯು ಏನನ್ನು ಯೋಚಿಸುತ್ತದೆಯೋ ಮನಸ್ಸು ಅದನ್ನು ಮಾಡುವುದಿಲ್ಲ. ಹೀಗೆ ಮನಸ್ಸು ಬುದ್ಧಿಯಿಂದ ಪ್ರತ್ಯೇಕವಾದಾಗ ಮನಸ್ಸೇ ಪುರವನ್ನಾಳುತ್ತದೆ.
12246014a ಪೃಥಗ್ಭೂತಂ ಯದಾ ಬುದ್ಧ್ಯಾ ಮನೋ ಭವತಿ ಕೇವಲಮ್।
12246014c ತತ್ರೈನಂ ವಿವೃತಂ ಶೂನ್ಯಂ ರಜಃ ಪರ್ಯವತಿಷ್ಠತೇ।।
ಬುದ್ಧಿಯಿಂದ ಬೇರೆಯಾಗಿ ಮನಸ್ಸು ಒಂದೇ ಆಗಿರುವಾಗ, ಶೂನ್ಯ ಆತ್ಮನನ್ನು ರಜಸ್ಸು ಆವರಿಸುತ್ತದೆ.
12246015a ತನ್ಮನಃ ಕುರುತೇ ಸಖ್ಯಂ ರಜಸಾ ಸಹ ಸಂಗತಮ್।
12246015c ತಂ ಚಾದಾಯ ಜನಂ ಪೌರಂ ರಜಸೇ ಸಂಪ್ರಯಚ್ಚತಿ।।
ಆಗ ಮನಸ್ಸು ರಜಸ್ಸಿನೊಂದಿಗೆ ಸ್ನೇಹಬೆಳೆಸಿ ಅದರೊಡನೆ ಸೇರಿಕೊಳ್ಳುತ್ತದೆ. ಮನಸ್ಸು ಇಂದ್ರಿಯ ರೂಪರಾದ ಪೌರರನ್ನು ಹಿಡಿದು ರಜಸ್ಸಿಗೆ ಒಪ್ಪಿಸಿಬಿಡುತ್ತದೆ.””