ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 245
ಸಾರ
ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಶರೀರಗಳಿಂದ ಭಿನ್ನರಾದ ಜೀವಾತ್ಮ-ಪರಮಾತ್ಮರನ್ನು ಯೋಗದ ಮೂಲಕ ಸಾಕ್ಷಾತ್ಕರಿಸುವ ವಿಧಾನ (1-14).
12245001 ವ್ಯಾಸ ಉವಾಚ।
12245001a ಶರೀರಾದ್ವಿಪ್ರಮುಕ್ತಂ ಹಿ ಸೂಕ್ಷ್ಮಭೂತಂ ಶರೀರಿಣಮ್।
12245001c ಕರ್ಮಭಿಃ ಪರಿಪಶ್ಯಂತಿ ಶಾಸ್ತ್ರೋಕ್ತೈಃ ಶಾಸ್ತ್ರಚೇತಸಃ।।
ವ್ಯಾಸನು ಹೇಳಿದನು: “ಶಾಸ್ತ್ರಚೇತಸನು ಶರೀರದಿಂದ ಹೊರ ಬರುವ ಸೂಕ್ಷ್ಮಭೂತ ಜೀವಾತ್ಮನನ್ನು ಶಾಸ್ತ್ರೋಕ್ತ ಕರ್ಮಗಳಿಂದ ನೋಡುತ್ತಾರೆ.
12245002a ಯಥಾ ಮರೀಚ್ಯಃ ಸಹಿತಾಶ್ಚರಂತಿ ಗಚ್ಚಂತಿ ತಿಷ್ಠಂತಿ ಚ ದೃಶ್ಯಮಾನಾಃ।
12245002c ದೇಹೈರ್ವಿಮುಕ್ತಾ ವಿಚರಂತಿ ಲೋಕಾಂಸ್ ತಥೈವ ಸತ್ತ್ವಾನ್ಯತಿಮಾನುಷಾಣಿ।।
ಸೂರ್ಯಕಿರಣಗಳು ಹೇಗೆ ಒಂದಕ್ಕೊಂದು ಹೊಂದಿಕೊಂಡು ಎಲ್ಲಕಡೆ ಚಲಿಸುತ್ತವೆಯೋ ಹಾಗೂ ನಿಂತಿರುವಂತೆ ಹೋಗುತ್ತಿರುವಂತೆ ಕಾಣುತ್ತವೆಯೋ ಹಾಗೆ ದೇಹದಿಂದ ಹೊರಟ ಅಮಾನುಷ ಸತ್ತ್ವಗಳು ಲೋಕಗಳಲ್ಲಿ ಸಂಚರಿಸುತ್ತಿರುತ್ತವೆ.
12245003a ಪ್ರತಿರೂಪಂ ಯಥೈವಾಪ್ಸು ತಾಪಃ ಸೂರ್ಯಸ್ಯ ಲಕ್ಷ್ಯತೇ।
12245003c ಸತ್ತ್ವವಾಂಸ್ತು ತಥಾ ಸತ್ತ್ವಂ ಪ್ರತಿರೂಪಂ ಪ್ರಪಶ್ಯತಿ।।
ನೀರಿನಲ್ಲಿ ಹೇಗೆ ಸೂರ್ಯನ ಪ್ರತಿರೂಪ ಮತ್ತು ತಾಪವು ಕಾಣುತ್ತವೆಯೋ ಹಾಗೆ ಯೋಗಿಯು ಶರೀರಗಳಲ್ಲಿ ಜೀವಾತ್ಮನ ಪ್ರತಿರೂಪವನ್ನು ಕಾಣುತ್ತಾನೆ.
12245004a ತಾನಿ ಸೂಕ್ಷ್ಮಾಣಿ ಸತ್ತ್ವಸ್ಥಾ ವಿಮುಕ್ತಾನಿ ಶರೀರತಃ।
12245004c ಸ್ವೇನ ತತ್ತ್ವೇನ ತತ್ತ್ವಜ್ಞಾಃ ಪಶ್ಯಂತಿ ನಿಯತೇಂದ್ರಿಯಾಃ।।
ಶರೀರತತ್ತ್ವವನ್ನು ತಿಳಿದಿರುವ ಜಿತೇಂದ್ರಿಯ ಯೋಗಿಗಳು ಸ್ಥೂಲಶರೀರದಿಂದ ಹೊರಟು ಸೂಕ್ಷ್ಮ ಲಿಂಗಶರೀರವನ್ನು ಧರಿಸಿರುವ ಜೀವಗಳನ್ನು ತಮ್ಮ ಆತ್ಮನ ಮೂಲಕವಾಗಿಯೇ ನೋಡುತ್ತಾರೆ.
12245005a ಸ್ವಪತಾಂ ಜಾಗ್ರತಾಂ ಚೈವ ಸರ್ವೇಷಾಮಾತ್ಮಚಿಂತಿತಮ್।
12245005c ಪ್ರಧಾನದ್ವೈಧಯುಕ್ತಾನಾಂ ಜಹತಾಂ ಕರ್ಮಜಂ ರಜಃ।।
12245006a ಯಥಾಹನಿ ತಥಾ ರಾತ್ರೌ ಯಥಾ ರಾತ್ರೌ ತಥಾಹನಿ।
12245006c ವಶೇ ತಿಷ್ಠತಿ ಸತ್ತ್ವಾತ್ಮಾ ಸತತಂ ಯೋಗಯೋಗಿನಾಮ್।।
ಕರ್ಮಜನಿತ ರಜೋಗುಣವನ್ನು ಪರಿತ್ಯಜಿಸಿರುವ ಮತ್ತು ಪ್ರಕೃತಿಸಂಬಂಧ ದ್ವಂದ್ವಗಳಿಂದ ವಿಮುಕ್ತರಾಗಿರುವ ಯೋಗಿಗಳಿಗೆ ಮಲಗಿದ್ದಾಗ ಮತ್ತು ಎಚ್ಚೆತ್ತಿರುವಾಗ ಆತ್ಮನು ವಶನಾಗುತ್ತಾನೆ. ಅವರಿಗೆ ಹಗಲಿನಂತೆ ರಾತ್ರಿಯಲ್ಲಿಯೂ, ರಾತ್ರಿಯಂತೆ ಹಗಲಿನಲ್ಲಿಯೂ ನಿರಂತರವಾಗಿ ಆತ್ಮದರ್ಶನವಾಗುತ್ತಿರುತ್ತದೆ.
12245007a ತೇಷಾಂ ನಿತ್ಯಂ ಸದಾನಿತ್ಯೋ ಭೂತಾತ್ಮಾ ಸತತಂ ಗುಣೈಃ।
12245007c ಸಪ್ತಭಿಸ್ತ್ವನ್ವಿತಃ ಸೂಕ್ಷ್ಮೈಶ್ಚರಿಷ್ಣುರಜರಾಮರಃ।।
ಅಂಥವರಿಗೆ ನಿತ್ಯನೂ, ಏಳು ಸೂಕ್ಷ್ಮಗುಣಗಳಿಂದ1 ಕೂಡಿರುವವನೂ, ಸಂಚರಿಸುವ ಸ್ವಭಾವವುಳ್ಳವನೂ, ಮುಪ್ಪು-ಸಾವುಗಳಿಲ್ಲದವನೂ ಮತ್ತು ಸರ್ವವ್ಯಾಪಕನೂ ಆದ ಭೂತಾತ್ಮನು ಕಾಣಿಸಿಕೊಳ್ಳುತ್ತಾನೆ.
12245008a ಮನೋಬುದ್ಧಿಪರಾಭೂತಃ ಸ್ವದೇಹಪರದೇಹವಿತ್।
12245008c ಸ್ವಪ್ನೇಷ್ವಪಿ ಭವತ್ಯೇಷ ವಿಜ್ಞಾತಾ ಸುಖದುಃಖಯೋಃ।।
ಮನೋಬುದ್ಧಿಗಳಿಗೆ ಸೋತ ಮತ್ತು ಸ್ವದೇಹ-ಪರದೇಹಗಳನ್ನು ತಿಳಿದಿರುವವನು ಕನಸಿನಲ್ಲಿಯೂ ಸುಖ-ದುಃಖಗಳನ್ನು ಅರಿಯುತ್ತಾನೆ.
12245009a ತತ್ರಾಪಿ ಲಭತೇ ದುಃಖಂ ತತ್ರಾಪಿ ಲಭತೇ ಸುಖಮ್।
12245009c ಕ್ರೋಧಲೋಭೌ ತು ತತ್ರಾಪಿ ಕೃತ್ವಾ ವ್ಯಸನಮರ್ಚತಿ।।
ಅಂಥವನು ಕನಸಿನಲ್ಲಿಯೂ ದುಃಖವನ್ನು ಅನುಭವಿಸುತ್ತಾನೆ. ಸುಖವನ್ನೂ ಅನುಭವಿಸುತ್ತಾನೆ. ನಿದ್ರೆಯಲ್ಲಿಯೂ ಕೂಡ ಕ್ರೋಧ-ಲೋಭಗಳಿಗೆ ಅಧೀನನಾಗಿ ವ್ಯಸನವನ್ನು ಹೊಂದುತ್ತಾನೆ.
12245010a ಪ್ರೀಣಿತಶ್ಚಾಪಿ ಭವತಿ ಮಹತೋಽರ್ಥಾನವಾಪ್ಯ ಚ।
12245010c ಕರೋತಿ ಪುಣ್ಯಂ ತತ್ರಾಪಿ ಜಾಗ್ರನ್ನಿವ ಚ ಪಶ್ಯತಿ।।
ಸ್ವಪ್ನಾವಸ್ಥೆಯಲ್ಲಿಯೇ ಮಹಾ ಐಶ್ವರ್ಯವನ್ನು ಪಡೆದು ಸಂತೋಷಪಡುತ್ತಾನೆ. ಅಲ್ಲಿಯೇ ಪುಣ್ಯ ಕಾರ್ಯಗಳನ್ನೂ ಮಾಡುತ್ತಾನೆ. ಜಾಗ್ರತಾವಸ್ಥೆಯಲ್ಲಿರುವವನಂತೆ ಅಲ್ಲಿಯೂ ಎಲ್ಲವನ್ನೂ ನೋಡುತ್ತಾನೆ ಮತ್ತು ಅನುಭವಿಸುತ್ತಾನೆ.
12245011a ತಮೇವಮತಿತೇಜೋಂಶಂ ಭೂತಾತ್ಮಾನಂ ಹೃದಿ ಸ್ಥಿತಮ್।
12245011c ತಮೋರಜೋಭ್ಯಾಮಾವಿಷ್ಟಾ ನಾನುಪಶ್ಯಂತಿ ಮೂರ್ತಿಷು।।
ತಮಸ್ಸು ಮತ್ತು ರಜೋಗುಣಗಳಿಂದ ಆವಿಷ್ಟರಾದವರು ಶರೀರದಲ್ಲಿರುವ, ಹೃದಯದಲ್ಲಿ ಸ್ಥಿತನಾಗಿರುವ, ಅತಿತೇಜೋಂಶಭೂತನಾದ ಭೂತಾತ್ಮನನ್ನು ಕಾಣಲಾರರು.
12245012a ಶಾಸ್ತ್ರಯೋಗಪರಾ ಭೂತ್ವಾ ಸ್ವಮಾತ್ಮಾನಂ ಪರೀಪ್ಸವಃ।
12245012c ಅನುಚ್ಚ್ವಾಸಾನ್ಯಮೂರ್ತೀನಿ ಯಾನಿ ವಜ್ರೋಪಮಾನ್ಯಪಿ।।
ಆತ್ಮದರ್ಶನದ ಇಚ್ಛುಕ ಶಾಸ್ತ್ರಯೋಗಪರರು ಜಡವಾದ ಸ್ಥೂಲ ಶರೀರವನ್ನೂ, ಅಮೂರ್ತವಾದ ಸೂಕ್ಷ್ಮಶರೀರವನ್ನೂ ಮತ್ತು ವಜ್ರದಂತೆ ಸುದೃಢವಾದ ಕಾರಣಶರೀರವನ್ನೂ ದಾಟಬಲ್ಲರು.
12245013a ಪೃಥಗ್ಭೂತೇಷು ಸೃಷ್ಟೇಷು ಚತುರ್ಷ್ವಾಶ್ರಮಕರ್ಮಸು।
12245013c ಸಮಾಧೌ ಯೋಗಮೇವೈತಚ್ಚಾಂಡಿಲ್ಯಃ ಶಮಮಬ್ರವೀತ್।।
ಸಂನ್ಯಾಸಾಶ್ರಮದ ಕರ್ಮಗಳನ್ನು ಭಿನ್ನ-ಭಿನ್ನ ರೀತಿಯಲ್ಲಿ ಹೇಳಿದ್ದಾರೆ. ಸಮಾಧಿಯ ಯೋಗವನ್ನೇ ಶಾಂಡಿಲ್ಯನು ಶಮ ಎಂಬ ಹೆಸರಿನಿಂದ ಕರೆದಿದ್ದಾನೆ2.
12245014a ವಿದಿತ್ವಾ ಸಪ್ತ ಸೂಕ್ಷ್ಮಾಣಿ ಷಡಂಗಂ ಚ ಮಹೇಶ್ವರಮ್।
12245014c ಪ್ರಧಾನವಿನಿಯೋಗಸ್ಥಃ ಪರಂ ಬ್ರಹ್ಮಾಧಿಗಚ್ಚತಿ।।
ಪಂಚತನ್ಮಾತ್ರಗಳು, ಮನಸ್ಸು ಮತ್ತು ಬುದ್ಧಿಗಳೆಂಬ ಏಳು ಸೂಕ್ಷ್ಮ ತತ್ತ್ವಗಳನ್ನು ತಿಳಿದುಕೊಂಡು, ಷಡ್ಗುಣೈಶ್ವರ್ಯ ಸಂಪನ್ನನಾದ ಮಹೇಶ್ವರನ ಜ್ಞಾನವನ್ನು ಪಡೆದು, ತ್ರಿಗುಣಾತ್ಮಿಕವಾದ ಪ್ರಕೃತಿಯ ಪರಿಣಾಮವೇ ಈ ಜಗತ್ತೆಂಬುದನ್ನು ತಿಳಿದುಕೊಂಡವನು ಪರಬ್ರಹ್ಮವಸ್ತುವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ.”