244: ಶುಕಾನುಪ್ರಶ್ನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 244

ಸಾರ

ಶರೀರದಲ್ಲಿ ಪಂಚಭೂತಗಳ ಕಾರ್ಯ ಮತ್ತು ಗುಣಗಳ ವಿವರಣೆ (1-12).

12244001 ವ್ಯಾಸ ಉವಾಚ।
12244001a ದ್ವಂದ್ವಾನಿ ಮೋಕ್ಷಜಿಜ್ಞಾಸುರರ್ಥಧರ್ಮಾವನುಷ್ಠಿತಃ।
12244001c ವಕ್ತ್ರಾ ಗುಣವತಾ ಶಿಷ್ಯಃ ಶ್ರಾವ್ಯಃ ಪೂರ್ವಮಿದಂ ಮಹತ್।।

ವ್ಯಾಸನು ಹೇಳಿದನು: “ದ್ವಂದ್ವಗಳನ್ನು ಸಹಿಸಿಕೊಂಡು ಅರ್ಥ-ಧರ್ಮಗಳನ್ನು ಅನುಷ್ಠಾನಮಾಡುತ್ತಿದ್ದರೂ ಮೋಕ್ಷಜಿಜ್ಞಾಸುವಾದ ಗುಣವಂತ ಶಿಷ್ಯನಿಗೆ ಪ್ರವಚನಕಾರರು ಮೊದಲು ಈ ಮಹತ್ತ್ವದ ಶಾಸ್ತ್ರವಿಷಯವನ್ನು ಹೇಳಬೇಕು.

12244002a ಆಕಾಶಂ ಮಾರುತೋ ಜ್ಯೋತಿರಾಪಃ ಪೃಥ್ವೀ ಚ ಪಂಚಮೀ।
12244002c ಭಾವಾಭಾವೌ ಚ ಕಾಲಶ್ಚ ಸರ್ವಭೂತೇಷು ಪಂಚಸು।।

ಆಕಾಶ, ವಾಯು, ತೇಜಸ್ಸು, ಜಲ ಮತ್ತು ಐದನೆಯದಾದ ಪೃಥ್ವೀ, ವ್ಯಕ್ತ, ಅವ್ಯಕ್ತ ಮತ್ತು ಕಾಲ – ಪಂಚಭೂತಾತ್ಮಿಕವಾದ ಇವು ಎಲ್ಲ ಪ್ರಾಣಿಗಳ ಶರೀರದಲ್ಲಿಯೂ ಇರುತ್ತವೆ.

12244003a ಅಂತರಾತ್ಮಕಮಾಕಾಶಂ ತನ್ಮಯಂ ಶ್ರೋತ್ರಮಿಂದ್ರಿಯಮ್।
12244003c ತಸ್ಯ ಶಬ್ದಂ ಗುಣಂ ವಿದ್ಯಾನ್ಮೂರ್ತಿಶಾಸ್ತ್ರವಿಧಾನವಿತ್।।

ಅಂತರಾತ್ಮಕವಾದ ಆಕಾಶವು ಶ್ರೋತ್ರವೆಂಬ ಇಂದ್ರಿಯವನ್ನು ಆವರಿಸಿದೆ. ಶರೀರಶಾಸ್ತ್ರವಿಧಾನವನ್ನು ತಿಳಿದವರು ಶಬ್ದವು ಆಕಾಶದ ಗುಣವೆಂದು ತಿಳಿಯಬೇಕು.

12244004a ಚರಣಂ ಮಾರುತಾತ್ಮೇತಿ ಪ್ರಾಣಾಪಾನೌ ಚ ತನ್ಮಯೌ।
12244004c ಸ್ಪರ್ಶನಂ ಚೇಂದ್ರಿಯಂ ವಿದ್ಯಾತ್ತಥಾ ಸ್ಪರ್ಶಂ ಚ ತನ್ಮಯಮ್।।

ತಿರುಗಾಡುವುದು ವಾಯುವಿನ ಧರ್ಮ. ಪ್ರಾಣಾಪಾನಗಳು ವಾಯು ಸ್ವರೂಪಗಳು. ಸ್ಪರ್ಶೇಂದ್ರಿಯ ಮತ್ತು ಸ್ಪರ್ಶಗುಣವು ವಾಯುಮಯವೆಂದು ತಿಳಿಯಬೇಕು.

12244005a ತತಃ1 ಪಾಕಃ ಪ್ರಕಾಶಶ್ಚ ಜ್ಯೋತಿಶ್ಚಕ್ಷುಶ್ಚ ತನ್ಮಯಮ್।
12244005c ತಸ್ಯ ರೂಪಂ ಗುಣಂ ವಿದ್ಯಾತ್ತಮೋಽನ್ವವಸಿತಾತ್ಮಕಮ್।।

ಪಚನ, ಪ್ರಕಾಶ, ಜ್ಯೋತಿ, ಚಕ್ಷುಸ್ಸು ಇವು ಅಗ್ನಿತತ್ತ್ವದ ಕಾರ್ಯಗಳು. ಕೆಂಪು, ಬಿಳಿಪು ಮತ್ತು ಕಪ್ಪು ಮೊದಲಾದ ವರ್ಣಗಳಿಂದ ಕೂಡಿದ ರೂಪವು ಅಗ್ನಿಯ ಗುಣವು.

12244006a ಪ್ರಕ್ಲೇದಃ ಕ್ಷುದ್ರತಾ ಸ್ನೇಹ ಇತ್ಯಾಪೋ ಹ್ಯುಪದಿಶ್ಯತೇ।
12244006c ರಸನಂ ಚೇಂದ್ರಿಯಂ ಜಿಹ್ವಾ ರಸಶ್ಚಾಪಾಂ ಗುಣೋ ಮತಃ।।

ತೇವ, ಸೂಕ್ಷ್ಮತೆ ಮತ್ತು ಸ್ನಿಗ್ಧತೆ – ಇವು ಜಲತತ್ತ್ವದ ಧರ್ಮಗಳು. ರಸನೇಂದ್ರಿಯ, ನಾಲಿಗೆ ಮತ್ತು ರಸ – ಇವು ಜಲದ ಗುಣಗಳೆಂಬ ಮತವಿದೆ.

12244007a ಸಂಘಾತಃ ಪಾರ್ಥಿವೋ ಧಾತುರಸ್ಥಿದಂತನಖಾನಿ ಚ।
12244007c ಶ್ಮಶ್ರು ಲೋಮ ಚ ಕೇಶಾಶ್ಚ ಸಿರಾಃ ಸ್ನಾಯು ಚ ಚರ್ಮ ಚ।।

ಶರೀರದಲ್ಲಿ ಒಂದಕ್ಕೊಂದು ಕೂಡಿಕೊಂಡಿರುವ ಸಂಧಿಬಂಧಗಳು ಪೃಥ್ವೀ ತತ್ತ್ವದ್ದಾಗಿವೆ. ಮೂಳೆ, ಹಲ್ಲು, ಉಗುರುಗಳು, ಗಡ್ಡ-ಮೀಸೆಗಳು, ರೋಮಗಳು, ತಲೆಗೂದಲು, ಸ್ನಾಯುಗಳು, ಚರ್ಮ – ಇವು ಪೃಥ್ವೀಭೂತಕ್ಕೆ ಸಂಬಂಧಿಸಿದವು.

12244008a ಇಂದ್ರಿಯಂ ಘ್ರಾಣಸಂಜ್ಞಾನಂ ನಾಸಿಕೇತ್ಯಭಿಧೀಯತೇ।
12244008c ಗಂಧಶ್ಚೈವೇಂದ್ರಿಯಾರ್ಥೋಽಯಂ ವಿಜ್ಞೇಯಃ ಪೃಥಿವೀಮಯಃ।।

ನಾಸಿಕವೆಂದು ಸೂಚಿತವಾಗಿರುವ ಘ್ರಾಣೇಂದ್ರಿಯವೂ ಪೃಥ್ವಿಯ ಅಂಶವೇ ಆಗಿದೆ. ಗಂಧವೆಂಬ ಘ್ರಾಣೇಂದ್ರಿಯ ವಿಷಯವೂ ಪೃಥಿವೀಮಯವೆಂದು ತಿಳಿಯಬೇಕು.

12244009a ಉತ್ತರೇಷು ಗುಣಾಃ ಸಂತಿ ಸರ್ವೇ ಸರ್ವೇಷು ಚೋತ್ತರಾಃ।
12244009c ಪಂಚಾನಾಂ ಭೂತಸಂಘಾನಾಂ ಸಂತತಿಂ ಮುನಯೋ ವಿದುಃ।।

ಮುಂದುಮುಂದಿನ ಭೂತಗಳಲ್ಲಿ ಹಿಂದು ಹಿಂದಿನ ಭೂತಗಳ ಗುಣಗಳೆಲ್ಲವೂ ಅಡಗಿರುತ್ತವೆ2. ಮುನಿಗಳು ಪಂಚಮಹಾಭೂತಗಳ ಸಮುದಾಯದ ಸಂತತಿಯನ್ನು ಅರಿತಿರುತ್ತಾರೆ.

12244010a ಮನೋ ನವಮಮೇಷಾಂ ತು ಬುದ್ಧಿಸ್ತು ದಶಮೀ ಸ್ಮೃತಾ।
12244010c ಏಕಾದಶೋಽಂತರಾತ್ಮಾ ಚ ಸರ್ವತಃ ಪರ ಉಚ್ಯತೇ।।

ಪಂಚಭೂತಗಳು, ವ್ಯಕ್ತ, ಅವ್ಯಕ್ತ, ಮತ್ತು ಕಾಲ – ಇವುಗಳಾದ ನಂತರ ಮನಸ್ಸು ಒಂಬತ್ತನೆಯದೆಂದೂ, ಬುದ್ಧಿಯು ಹತ್ತನೆಯದೆಂದೂ, ಹನ್ನೊಂದನೆಯದು ಎಲ್ಲಕ್ಕಿಂತ ಉತ್ತಮನಾದ ಅಂತರಾತ್ಮವೆಂದೂ ಹೇಳಿದ್ದಾರೆ.

12244011a ವ್ಯವಸಾಯಾತ್ಮಿಕಾ ಬುದ್ಧಿರ್ಮನೋ ವ್ಯಾಕರಣಾತ್ಮಕಮ್।
12244011c ಕರ್ಮಾನುಮಾನಾದ್ವಿಜ್ಞೇಯಃ ಸ ಜೀವಃ ಕ್ಷೇತ್ರಸಂಜ್ಞಕಃ।।

ಬುದ್ಧಿಯು ವ್ಯವಸಾಯಾತ್ಮಕವು. ಮನಸ್ಸು ವ್ಯಾಕರಣಾತ್ಮಕವು. ಕರ್ಮಗಳನ್ನು ಮಾಡುವುದೂ ತಿಳಿಯುವುದೂ ಜಡತತ್ತ್ವಕ್ಕೆ ಸಾಧ್ಯವಿಲ್ಲ. ಆದುದರಿಂದ ಕರ್ಮಗಳ ಹಿನ್ನಲೆಯಲ್ಲಿ ಯಾವುದೋ ಚೈತನ್ಯವಿರಬೇಕೆಂಬ ಅನುಮಾನದಿಂದ ಕ್ಷೇತ್ರಜ್ಞನೆಂಬ ಜೀವನಿದ್ದಾನೆಂದು ತಿಳಿಯಬೇಕು.

12244012a ಏಭಿಃ ಕಾಲಾಷ್ಟಮೈರ್ಭಾವೈರ್ಯಃ ಸರ್ವೈಃ ಸರ್ವಮನ್ವಿತಮ್।
12244012c ಪಶ್ಯತ್ಯಕಲುಷಂ ಪ್ರಾಜ್ಞಃ ಸ ಮೋಹಂ ನಾನುವರ್ತತೇ।।

ಎಲ್ಲವೂ ಎಂಟನೆಯದಾದ ಕಾಲದ ಭಾವಗಳಿಂದ ಕೂಡಿರುವುದೆಂದು ತಿಳಿದಿರುವ ಪ್ರಾಜ್ಞನು ಅಕಲ್ಮಷವನ್ನು ಕಂಡು ಮೋಹವಶನಾಗುವುದಿಲ್ಲ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಚತುಶ್ಚತ್ವಾರಿಂಶಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾನಲ್ವತ್ನಾಲ್ಕನೇ ಅಧ್ಯಾಯವು.


  1. ತಪಃ (ಭಾರತ ದರ್ಶನ). ↩︎

  2. ಆಕಾಶದಲ್ಲಿ ಶಬ್ದಗುಣಮಾತ್ರವಿದೆ. ಎರಡನೆಯ ವಾಯುವಿನಲ್ಲಿ ಅದರ ವಿಶಿಷ್ಟ ಗುಣವಾದ ಸ್ಪರ್ಶದ ಜೊತೆಗೆ ಶಬ್ದಗುಣವೂ ಇರುತ್ತದೆ. ಮೂರನೆಯ ತೇಜಸ್ತತ್ತ್ವದಲ್ಲಿ ಅದರ ವಿಶಿಷ್ಟ ಗುಣವಾದ ರೂಪದೊಂದಿಗೆ ಶಬ್ದ-ಸ್ಪರ್ಶ ಗುಣಗಳೂ ಇರುತ್ತವೆ. ನಾಲ್ಕನೆಯದಾದ ಜಲತತ್ತ್ವದಲ್ಲಿ ಅದರ ವಿಶಿಷ್ಟ ಗುಣವಾದ ರಸದೊಂದಿಗೆ ಶಬ್ದ-ಸ್ಪರ್ಶ-ರೂಪ ಗುಣಗಳೂ ಇರುತ್ತವೆ. ಐದನೆಯದಾದ ಪೃಥ್ವೀತತ್ತ್ವದಲ್ಲಿ ಅದರ ವಿಶಿಷ್ಟ ಗುಣವಾದ ಗಂಧದ ಜೊತೆಗೆ ಶಬ್ದ-ಸ್ಪರ್ಶ-ರೂಪ-ರಸ ಗುಣಗಳೂ ಇರುತ್ತವೆ. (ಭಾರತ ದರ್ಶನ) ↩︎