ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 243
ಸಾರ
ಬ್ರಹ್ಮವಿದ ಬ್ರಾಹ್ಮಣನ ಲಕ್ಷಣಗಳು; ಪರಬ್ರಹ್ಮಪ್ರಾಪ್ತಿಯ ಉಪಾಯ (1-23).
12243001 ವ್ಯಾಸ ಉವಾಚ।
12243001a ಗಂಧಾನ್ರಸಾನ್ನಾನುರುಂಧ್ಯಾತ್ಸುಖಂ ವಾ ನಾಲಂಕಾರಾಂಶ್ಚಾಪ್ನುಯಾತ್ತಸ್ಯ ತಸ್ಯ।
12243001c ಮಾನಂ ಚ ಕೀರ್ತಿಂ ಚ ಯಶಶ್ಚ ನೇಚ್ಚೇತ್ ಸ ವೈ ಪ್ರಚಾರಃ ಪಶ್ಯತೋ ಬ್ರಾಹ್ಮಣಸ್ಯ।।
ವ್ಯಾಸನು ಹೇಳಿದನು: “ಗಂಧ-ರಸಗಳನ್ನು ಉಪಭೋಗಿಸದೇ ಅವುಗಳಿಂದ ದೊರೆಯುವ ಸುಖಗಳಿಗೆ ಆಸೆಪಡದೇ, ಅಲಂಕಾರ ಮಾಡಿಕೊಳ್ಳದೇ, ಮಾನ-ಕೀರ್ತಿ ಮತ್ತು ಯಶಸ್ಸುಗಳನ್ನು ಆಶಿಸದೇ ಇರುವುದೇ ಬ್ರಹ್ಮಜ್ಞಾನೀ ಬ್ರಾಹ್ಮಣನಲ್ಲಿ ಕಾಣುವ ಆಚಾರ ಲಕ್ಷಣಗಳು.
12243002a ಸರ್ವಾನ್ವೇದಾನಧೀಯೀತ ಶುಶ್ರೂಷುರ್ಬ್ರಹ್ಮಚರ್ಯವಾನ್।
12243002c ಋಚೋ ಯಜೂಂಷಿ ಸಾಮಾನಿ ನ ತೇನ ನ ಸ ಬ್ರಾಹ್ಮಣಃ।।
ಋಕ್ಸಾಮ-ಯಜುಸ್ಸುಗಳೆಂಬ ಸರ್ವ ವೇದಗಳ ಅಧ್ಯಯನವನ್ನೂ ಮಾಡಿರಬೇಕು. ಬ್ರಹ್ಮಚರ್ಯದಲ್ಲಿದ್ದುಕೊಂಡು ಗುರುಶುಶ್ರೂಷೆಯನ್ನು ಮಾಡಿರಬೇಕು. ಇದರಿಂದ ಅವನು ಬ್ರಾಹ್ಮಣನಾಗದೇ ಇರುವುದಿಲ್ಲ.
12243003a ಜ್ಞಾತಿವತ್ಸರ್ವಭೂತಾನಾಂ ಸರ್ವವಿತ್ಸರ್ವವೇದವಿತ್।
12243003c ನಾಕಾಮೋ ಮ್ರಿಯತೇ ಜಾತು ನ ತೇನ ನ ಚ ಬ್ರಾಹ್ಮಣಃ।।
ಸರ್ವಭೂತಗಳಲ್ಲಿಯೂ ಬಂಧುವಂತೆ ನಡೆದುಕೊಳ್ಳುವ, ಸರ್ವವಿದು, ಸರ್ವವೇದವಿದುವು ಕಾಮರಹಿತನಾಗುತ್ತಾನೆ. ಅವನಿಗೆ ಮೃತ್ಯುವಿಲ್ಲ. ಅಂಥವನು ಬ್ರಾಹ್ಮಣನಾಗದೇ ಇರುವುದಿಲ್ಲ.
12243004a ಇಷ್ಟೀಶ್ಚ ವಿವಿಧಾಃ ಪ್ರಾಪ್ಯ ಕ್ರತೂಂಶ್ಚೈವಾಪ್ತದಕ್ಷಿಣಾನ್।
12243004c ನೈವ ಪ್ರಾಪ್ನೋತಿ ಬ್ರಾಹ್ಮಣ್ಯಮಭಿಧ್ಯಾನಾತ್ಕಥಂ ಚನ।।
ವಿವಿಧ ಇಷ್ಟಿಗಳನ್ನೂ, ಆಪ್ತದಕ್ಷಿಣೆಯುಕ್ತ ಕ್ರತುಗಳನ್ನೂ ಮಾಡಿ ಬ್ರಹ್ಮಜ್ಞಾನವನ್ನು ಪಡೆದುಕೊಳ್ಳದೇ ಇದ್ದರೆ ಯಾವುದೇ ಕಾರಣದಿಂದಲೂ ಬ್ರಾಹ್ಮಣನಾಗುವುದಿಲ್ಲ.
12243005a ಯದಾ ಚಾಯಂ ನ ಬಿಭೇತಿ ಯದಾ ಚಾಸ್ಮಾನ್ನ ಬಿಭ್ಯತಿ।
12243005c ಯದಾ ನೇಚ್ಚತಿ ನ ದ್ವೇಷ್ಟಿ ಬ್ರಹ್ಮ ಸಂಪದ್ಯತೇ ತದಾ।।
ಇತರರ ಕುರಿತು ಭಯಪಡದಿರುವಾಗ ಮತ್ತು ಇತರರು ಅವನ ಕುರಿತು ಭಯಪಡದಿರುವಾಗ, ಹಾಗೂ ಯಾವಾಗ ಅವನು ಇಚ್ಛಿಸುವುದೂ ಇಲ್ಲವೋ ಮತ್ತು ದ್ವೇಷಿಸುವುದೂ ಇಲ್ಲವೋ ಆಗ ಅವನು ಬ್ರಹ್ಮಭಾವವನ್ನು ಪಡೆದುಕೊಳ್ಳುತ್ತಾನೆ.
12243006a ಯದಾ ನ ಕುರುತೇ ಭಾವಂ ಸರ್ವಭೂತೇಷು ಪಾಪಕಮ್।
12243006c ಕರ್ಮಣಾ ಮನಸಾ ವಾಚಾ ಬ್ರಹ್ಮ ಸಂಪದ್ಯತೇ ತದಾ।।
ಕರ್ಮ, ಮನಸ್ಸು ಮತ್ತು ಮಾತಿನಿಂದ ಯಾರು ಸರ್ವಭೂತಗಳಿಗೂ ಪಾಪವನ್ನೆಸಗುವ ಭಾವವನ್ನು ಹೊಂದುವುದಿಲ್ಲವೋ ಅಂಥವನು ಬ್ರಹ್ಮಭಾವವನ್ನು ಹೊಂದುತ್ತಾನೆ.
12243007a ಕಾಮಬಂಧನಮೇವೈಕಂ ನಾನ್ಯದಸ್ತೀಹ ಬಂಧನಮ್।
12243007c ಕಾಮಬಂಧನಮುಕ್ತೋ ಹಿ ಬ್ರಹ್ಮಭೂಯಾಯ ಕಲ್ಪತೇ।।
ಕಾಮಬಂಧನವೇ ಏಕೈಕಬಂಧನವು. ಇಲ್ಲಿ ಬೇರಾವ ಬಂಧನವೂ ಇಲ್ಲ. ಕಾಮಬಂಧನದಿಂದ ಮುಕ್ತನಾದವನೇ ಬ್ರಹ್ಮಭಾವವನ್ನು ಹೊಂದುತ್ತಾನೆ.
12243008a ಕಾಮತೋ ಮುಚ್ಯಮಾನಸ್ತು ಧೂಮ್ರಾಭ್ರಾದಿವ ಚಂದ್ರಮಾಃ।
12243008c ವಿರಜಾಃ ಕಾಲಮಾಕಾಂಕ್ಷನ್ಧೀರೋ ಧೈರ್ಯೇಣ ವರ್ತತೇ।।
ಕಾಮನೆಗಳಿಂದ ಮುಕ್ತನಾದ ಧೀರನು ಧೂಮ್ರವರ್ಣದ ಮೋಡಗಳಿಂದ ಮುಕ್ತನಾದ ಚಂದ್ರಮನಂತೆ ರಜೋರಹಿತನಾಗಿ ನಿರ್ಮಲನಾಗಿ ಧೈರ್ಯದಿಂದ ಕಾಲಪ್ರತೀಕ್ಷೆಯನ್ನು ಮಾಡುತ್ತಿರುತ್ತಾನೆ.
12243009a ಆಪೂರ್ಯಮಾಣಮಚಲಪ್ರತಿಷ್ಠಂ ಸಮುದ್ರಮಾಪಃ ಪ್ರವಿಶಂತಿ ಯದ್ವತ್1।
12243009c ಸ ಕಾಮಕಾಂತೋ ನ ತು ಕಾಮಕಾಮಃ ಸ ವೈ ಲೋಕಾತ್ ಸ್ವರ್ಗಮುಪೈತಿ ದೇಹೀ।।
ಸದಾ ತುಂಬಿಕೊಂಡು ಸುಸ್ಥಿರ ಸ್ಥಿತಿಯನ್ನು ಹೊಂದಿರುವ ಸಮುದ್ರವನ್ನು ಎಲ್ಲ ನದ-ನದಿಗಳೂ ಹೇಗೆ ಪ್ರವೇಶಿಸುತ್ತವೆಯೋ ಹಾಗೆ ಸ್ಥಿತಪ್ರಜ್ಞನು ಕಾಮನೆಗಳಿಗೆ ಪ್ರಿಯನಾಗಿರುತ್ತಾನೆ. ಕಾಮನೆಗಳು ಅವನನ್ನು ಹಿಂಬಾಲಿಸುತ್ತವೆ. ಆದರೆ ಅವನು ಮಾತ್ರ ಕಾಮಾಪೇಕ್ಷಿಯಾಗಿರುವುದಿಲ್ಲ. ಅವನೇನಾದರೂ ಕಾಮನೆಗಳನ್ನು ಬಯಸಿದ್ದೇ ಆದರೆ ಸ್ವರ್ಗವನ್ನೇ ಪಡೆದುಕೊಳ್ಳುತ್ತಾನೆ.
12243010a ವೇದಸ್ಯೋಪನಿಷತ್ಸತ್ಯಂ ಸತ್ಯಸ್ಯೋಪನಿಷದ್ದಮಃ।
12243010c ದಮಸ್ಯೋಪನಿಷದ್ದಾನಂ ದಾನಸ್ಯೋಪನಿಷತ್ ತಪಃ।।
ಸತ್ಯವೇ ವೇದದ ರಹಸ್ಯವು. ಸತ್ಯದ ರಹಸ್ಯವು ದಮೆ (ಜಿತೇಂದ್ರಿಯತೆ). ದಮೆಯ ರಹಸ್ಯವು ದಾನ ಮತ್ತು ದಾನದ ರಹಸ್ಯವು ತಪಸ್ಸು.
12243011a ತಪಸೋಪನಿಷತ್ತ್ಯಾಗಸ್ತ್ಯಾಗಸ್ಯೋಪನಿಷತ್ಸುಖಮ್।
12243011c ಸುಖಸ್ಯೋಪನಿಷತ್ ಸ್ವರ್ಗಃ ಸ್ವರ್ಗಸ್ಯೋಪನಿಷಚ್ಚಮಃ।।
ತಪಸ್ಸಿನ ರಹಸ್ಯವು ತ್ಯಾಗ. ತ್ಯಾಗದ ರಹಸ್ಯವು ಸುಖ. ಸುಖದ ರಹಸ್ಯವು ಸ್ವರ್ಗ. ಮತ್ತು ಸ್ವರ್ಗದ ರಹಸ್ಯವು ಶಮೆ (ಸರ್ವೋಪಶಮನರೂಪವಾದ ಮುಕ್ತಿ).
12243012a ಕ್ಲೇದನಂ ಶೋಕಮನಸೋಃ ಸಂತಾಪಂ ತೃಷ್ಣಯಾ ಸಹ।
12243012c ಸತ್ತ್ವಮಿಚ್ಚಸಿ ಸಂತೋಷಾಚ್ಚಾಂತಿಲಕ್ಷಣಮುತ್ತಮಮ್।।
ಸಂತೋಷಕ್ಕೋಸ್ಕರ ಸತ್ತ್ವಗುಣವನ್ನು ಆಶ್ರಯಿಸಬೇಕು. ಅದು ಉತ್ತಮ ಶಾಂತಿಯ ಲಕ್ಷಣವೇ ಆಗಿದೆ. ಅದು ತೃಷ್ಣೆಯನ್ನೂ, ಸಂಕಲ್ಪ-ವಿಕಲ್ಪಗಳನ್ನೂ, ಚಿಂತೆ-ದುಃಖಗಳ ಸಂತಾಪವನ್ನೂ ಹೋಗಲಾಡಿಸುತ್ತದೆ.
12243013a ವಿಶೋಕೋ ನಿರ್ಮಮಃ ಶಾಂತಃ ಪ್ರಸನ್ನಾತ್ಮಾತ್ಮವಿತ್ತಮಃ2।
12243013c ಷಡ್ಭಿರ್ಲಕ್ಷಣವಾನೇತೈಃ ಸಮಗ್ರಃ ಪುನರೇಷ್ಯತಿ।।
ವಿಶೋಕ, ನಿರ್ಮಮಕಾರ, ಶಾಂತಿ, ಪ್ರಸನ್ನಾತ್ಮ, ಆತ್ಮವಿತ್ತಮ – ಈ ಆರು ಲಕ್ಷಣಗಳಿಂದ ಕೂಡಿದವನು ಪೂರ್ಣತೆಯನ್ನು ಪಡೆದು ಮೋಕ್ಷವನ್ನು ಹೊಂದುತ್ತಾನೆ.
12243014a ಷಡ್ಭಿಃ ಸತ್ತ್ವಗುಣೋಪೇತೈಃ ಪ್ರಾಜ್ಞೈರಧಿಕಮಂತ್ರಿಭಿಃ।
12243014c ಯೇ ವಿದುಃ ಪ್ರೇತ್ಯ ಚಾತ್ಮಾನಮಿಹಸ್ಥಾಂಸ್ತಾಂಸ್ತಥಾ ವಿದುಃ।।
ಈ ಆರು ಲಕ್ಷಣಗಳಿಂದ ಕೂಡಿದ ಸತ್ತ್ವಗುಣೋಯುಕ್ತ ಪ್ರಾಜ್ಞರು ಯಜ್ಞ-ದಾನ-ತಪಸ್ಸುಗಳೆಂಬ ಅಥವಾ ಶ್ರವಣ-ಮನನ-ನಿಧಿಧ್ಯಾಸನಗಳೆಂಬ ಮೂರರ ಮೂಲಕ ಇಲ್ಲಿಯೇ ದೇಹದಲ್ಲಿರುವ ಆತ್ಮನನ್ನು ತಿಳಿಯುತ್ತಾರೆ. ಅವರು ದೇಹಾವಸಾನದ ನಂತರ ಆತ್ಮಭಾವವನ್ನು ಪಡೆದುಕೊಳ್ಳುತ್ತಾರೆ.
12243015a ಅಕೃತ್ರಿಮಮಸಂಹಾರ್ಯಂ ಪ್ರಾಕೃತಂ ನಿರುಪಸ್ಕೃತಮ್।
12243015c ಅಧ್ಯಾತ್ಮಂ ಸುಕೃತಪ್ರಜ್ಞಃ ಸುಖಮವ್ಯಯಮಶ್ನುತೇ।।
ಉತ್ಪತ್ತಿರಹಿತನಾದ, ಅವಿನಾಶಿಯಾದ, ಸ್ವಭಾವಸಿದ್ಧನಾದ, ಅವಿಕಾರಿಯಾದ ಮತ್ತು ಶರೀರದಲ್ಲಿಯೇ ಇರುವ ಸುಕೃತ ಎನ್ನುವ ಬ್ರಹ್ಮನನ್ನು ಹೊಂದಿದವನು ಅಕ್ಷಯ ಸುಖಕ್ಕೆ ಭಾಗಿಯಾಗುತ್ತಾನೆ.
12243016a ನಿಷ್ಪ್ರಚಾರಂ ಮನಃ ಕೃತ್ವಾ ಪ್ರತಿಷ್ಠಾಪ್ಯ ಚ ಸರ್ವತಃ।
12243016c ಯಾಮಯಂ ಲಭತೇ ತುಷ್ಟಿಂ ಸಾ ನ ಶಕ್ಯಮತೋಽನ್ಯಥಾ।।
ಎಲ್ಲಿಂದಲ್ಲಿಗೆ ತಿರುಗಾಡುವ ಮನಸ್ಸನ್ನು ಎಲ್ಲಕಡೆಗಳಿಂದಲೂ ತಡೆದು ಆತ್ಮನಲ್ಲಿಯೇ ಪ್ರತಿಷ್ಠಾಪಿಸಿ ಪಡೆಯುವ ತುಷ್ಟಿಯನ್ನು ಬೇರೆ ಯಾವ ವಿಧಾನದಿಂದಲೂ ಪಡೆಯಲು ಸಾಧ್ಯವಾಗುವುದಿಲ್ಲ.
12243017a ಯೇನ ತೃಪ್ಯತ್ಯಭುಂಜಾನೋ ಯೇನ ತುಷ್ಯತ್ಯವಿತ್ತವಾನ್।
12243017c ಯೇನಾಸ್ನೇಹೋ ಬಲಂ ಧತ್ತೇ ಯಸ್ತಂ ವೇದ ಸ ವೇದವಿತ್।।
ತಿನ್ನದೇ ತೃಪ್ತಿಯನ್ನು ಹೊಂದುವ, ಧನವಿಲ್ಲದೇ ತುಷ್ಟಿಯನ್ನು ಹೊಂದುವ, ಸ್ನೇಹವಿಲ್ಲದೇ ಬಲವನ್ನು ನೀಡುವ ಆ ಬ್ರಹ್ಮವಸ್ತುವನ್ನು ತಿಳಿದವನೇ ವೇದವಿದುವು.
12243018a ಸಂಗೋಪ್ಯ ಹ್ಯಾತ್ಮನೋ ದ್ವಾರಾಣ್ಯಪಿಧಾಯ ವಿಚಿಂತಯನ್।
12243018c ಯೋ ಹ್ಯಾಸ್ತೇ ಬ್ರಾಹ್ಮಣಃ ಶಿಷ್ಟಃ ಸ ಆತ್ಮರತಿರುಚ್ಯತೇ।।
ಪ್ರಮಾದಕ್ಕೆ ಒಳಗಾಗದಂತೆ ತನ್ನ ಶರೀರದ ಎಲ್ಲ ಬಾಗಿಲುಗಳನ್ನೂ ಮುಚ್ಚಿ ರಕ್ಷಿಸಿಕೊಳ್ಳುತ್ತಾ ಅನವರತವೂ ಬ್ರಹ್ಮವಸ್ತುವನ್ನು ಧ್ಯಾನಿಸುವ ಬ್ರಾಹ್ಮಣನನ್ನು ಶಿಷ್ಟನೆಂದೂ ಆತ್ಮರತಿಯೆಂದೂ ಹೇಳುತ್ತಾರೆ.
12243019a ಸಮಾಹಿತಂ ಪರೇ ತತ್ತ್ವೇ ಕ್ಷೀಣಕಾಮಮವಸ್ಥಿತಮ್।
12243019c ಸರ್ವತಃ ಸುಖಮನ್ವೇತಿ ವಪುಶ್ಚಾಂದ್ರಮಸಂ ಯಥಾ।।
ಕಾಮನೆಗಳನ್ನು ಕಳೆದುಕೊಂಡು ಶ್ರೇಷ್ಠ ಪರತತ್ತ್ವದಲ್ಲಿ ಏಕಾಗ್ರಚಿತ್ತನಾಗಿರುವವನು ಚಂದ್ರನ ದೇಹದಂತೆ ಎಲ್ಲ ಕಡೆಗಳಿಂದಲೂ ಆನಂದದಿಂದ ವ್ಯಾಪ್ತನಾಗಿರುತ್ತಾನೆ.
12243020a ಸವಿಶೇಷಾಣಿ ಭೂತಾನಿ ಗುಣಾಂಶ್ಚಾಭಜತೋ ಮುನೇಃ।
12243020c ಸುಖೇನಾಪೋಹ್ಯತೇ ದುಃಖಂ ಭಾಸ್ಕರೇಣ ತಮೋ ಯಥಾ।।
ಎಲ್ಲ ಪ್ರಾಣಿಗಳನ್ನೂ ಸಮಭಾವದಿಂದ ಕಾಣುವ, ಗುಣಾತೀತನಾದವನ ದುಃಖವು ಅಂಧಕಾರವು ಭಾಸ್ಕರನಿಂದ ಹೊರಟುಹೋಗುವಂತೆ ಅನಾಯಾಸವಾಗಿ ಹೊರಟು ಹೋಗುತ್ತದೆ.
12243021a ತಮತಿಕ್ರಾಂತಕರ್ಮಾಣಮತಿಕ್ರಾಂತಗುಣಕ್ಷಯಮ್।
12243021c ಬ್ರಾಹ್ಮಣಂ ವಿಷಯಾಶ್ಲಿಷ್ಟಂ ಜರಾಮೃತ್ಯೂ ನ ವಿಂದತಃ।।
ಕರ್ಮಗಳನ್ನು ಪರಿತ್ಯಜಿಸಿ, ಗುಣಗಳ ಆಶ್ರಯವನ್ನೂ ಅತಿಕ್ರಮಿಸಿ. ವಿಷಯವಾಸನೆಗಳಿಂದ ರಹಿತನಾದ ಬ್ರಾಹ್ಮಣನನ್ನು ಜರಾಮೃತ್ಯುಗಳು ಬಾಧಿಸುವುದಿಲ್ಲ.
12243022a ಸ ಯದಾ ಸರ್ವತೋ ಮುಕ್ತಃ ಸಮಃ ಪರ್ಯವತಿಷ್ಠತೇ।
12243022c ಇಂದ್ರಿಯಾಣೀಂದ್ರಿಯಾರ್ಥಾಂಶ್ಚ ಶರೀರಸ್ಥೋಽತಿವರ್ತತೇ।।
ಸರ್ವತಃ ಮುಕ್ತನಾಗಿ ಸಮಸ್ಥಿತಿಯಲ್ಲಿರುವವನು ಶರೀರಸ್ಥನಾಗಿದ್ದರೂ ಇಂದ್ರಿಯಗಳು ಮತ್ತು ಇಂದ್ರಿಯಾರ್ಥಗಳನ್ನು ಅತಿಕ್ರಮಿಸುತ್ತಾನೆ.
12243023a ಕಾರಣಂ ಪರಮಂ ಪ್ರಾಪ್ಯ ಅತಿಕ್ರಾಂತಸ್ಯ ಕಾರ್ಯತಾಮ್।
12243023c ಪುನರಾವರ್ತನಂ ನಾಸ್ತಿ ಸಂಪ್ರಾಪ್ತಸ್ಯ ಪರಾತ್ಪರಮ್।।
ಪರಮಕಾರಣಸ್ವರೂಪನಾದ ಬ್ರಹ್ಮವನ್ನು ಹೊಂದಿ ಕಾರ್ಯರೂಪವಾದ ಪ್ರಕೃತಿಯನ್ನು ಅತಿಕ್ರಮಿಸುವವನು ಪರಮಪದವನ್ನು ಹೊಂದುತ್ತಾನೆ ಮತ್ತು ಅವನಿಗೆ ಪುನರಾವರ್ತನೆಯಿರುವುದಿಲ್ಲ.”