242: ಶುಕಾನುಪ್ರಶ್ನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 242

ಸಾರ

ಪರಮಾತ್ಮಪ್ರಾಪ್ತಿಗೆ ಸಾಧನೆಗಳು, ಸಂಸಾರನದಿಯ ವರ್ಣನೆ ಮತ್ತು ಜ್ಞಾನದಿಂದ ಬ್ರಹ್ಮಪ್ರಾಪ್ತಿ (1-25).

12242001 ಶುಕ ಉವಾಚ।
12242001a ಯಸ್ಮಾದ್ಧರ್ಮಾತ್ಪರೋ ಧರ್ಮೋ ವಿದ್ಯತೇ ನೇಹ ಕಶ್ಚನ।
12242001c ಯೋ ವಿಶಿಷ್ಟಶ್ಚ ಧರ್ಮೇಭ್ಯಸ್ತಂ ಭವಾನ್ ಪ್ರಬ್ರವೀತು ಮೇ।।

ಶುಕನು ಹೇಳಿದನು: “ಈ ಜಗತ್ತಿನಲ್ಲಿ ಯಾವುದಕ್ಕಿಂತ ಹಿರಿಯದಾದ ಬೇರೆ ಯಾವ ಧರ್ಮವೂ ಇಲ್ಲವೋ ಮತ್ತು ಯಾವುದು ಎಲ್ಲ ಧರ್ಮಗಳಿಗಿಂತಲೂ ಶ್ರೇಷ್ಠವಾಗಿರುವುದೋ ಆ ಧರ್ಮದ ಕುರಿತು ನನಗೆ ಹೇಳು.”

12242002 ವ್ಯಾಸ ಉವಾಚ।
12242002a ಧರ್ಮಂ ತೇ ಸಂಪ್ರವಕ್ಷ್ಯಾಮಿ ಪುರಾಣಮೃಷಿಸಂಸ್ತುತಮ್।
12242002c ವಿಶಿಷ್ಟಂ ಸರ್ವಧರ್ಮೇಭ್ಯಸ್ತಮಿಹೈಕಮನಾಃ ಶೃಣು।।

ವ್ಯಾಸನು ಹೇಳಿದನು: “ಪುರಾಣ ಋಷಿಸಂಸ್ತುತವಾದ ಧರ್ಮವನ್ನು ನಿನಗೆ ಹೇಳುತ್ತೇನೆ. ಇದು ಸರ್ವಧರ್ಮಗಳಿಗಿಂತಲೂ ವಿಶಿಷ್ಟವಾಗಿದೆ. ಏಕಮನಸ್ಕನಾಗಿ ಇದನ್ನು ಕೇಳು.

12242003a ಇಂದ್ರಿಯಾಣಿ ಪ್ರಮಾಥೀನಿ ಬುದ್ಧ್ಯಾ ಸಂಯಮ್ಯ ಯತ್ನತಃ।
12242003c ಸರ್ವತೋ ನಿಷ್ಪತಿಷ್ಣೂನಿ ಪಿತಾ ಬಾಲಾನಿವಾತ್ಮಜಾನ್।।

ತಂದೆಯು ತನ್ನ ಚಿಕ್ಕ ಮಕ್ಕಳನ್ನು ಸಂಯಮದಲ್ಲಿರಿಸಿಕೊಳ್ಳುವಂತೆ ಎಲ್ಲಕಡೆಗಳಲ್ಲಿಯೂ ಹರಿಯುವ ಸ್ವಭಾವವುಳ್ಳ ಮತ್ತು ಮನಸ್ಸನ್ನು ಕದಡುವ ಇಂದ್ರಿಯಗಳನ್ನು ಪ್ರಯತ್ಮಪೂರ್ವಕವಾಗಿ ಬುದ್ಧಿಯ ಮೂಲಕ ನಿಯಂತ್ರಿಸಿಕೊಳ್ಳಬೇಕು.

12242004a ಮನಸಶ್ಚೇಂದ್ರಿಯಾಣಾಂ ಚ ಹ್ಯೈಕಾಗ್ರ್ಯಂ ಪರಮಂ ತಪಃ।
12242004c ತಜ್ಜ್ಯಾಯಃ ಸರ್ವಧರ್ಮೇಭ್ಯಃ ಸ ಧರ್ಮಃ ಪರ ಉಚ್ಯತೇ।।

ಮನಸ್ಸು-ಇಂದ್ರಿಯಗಳನ್ನು ಏಕಾಗ್ರಗೊಳಿಸುವುದೇ ಪರಮ ತಪಸ್ಸು. ಈ ಚಿತ್ತೈಕಾಗ್ರತೆಯು ಎಲ್ಲ ಧರ್ಮಗಳಿಗಿಂತಲೂ ಶ್ರೇಷ್ಠ ಧರ್ಮವೆಂದು ಹೇಳುತ್ತಾರೆ.

12242005a ತಾನಿ ಸರ್ವಾಣಿ ಸಂಧಾಯ ಮನಃಷಷ್ಠಾನಿ ಮೇಧಯಾ।
12242005c ಆತ್ಮತೃಪ್ತ ಇವಾಸೀತ ಬಹು ಚಿಂತ್ಯಮಚಿಂತಯನ್।।

ಮನಸ್ಸೇ ಆರನೆಯದಾಗಿರುವ ಆ ಐದು ಇಂದ್ರಿಯಗಳನ್ನೂ ಬುದ್ಧಿಯ ಮೂಲಕ ಸ್ಥಿರಗೊಳಿಸಿ, ಅನೇಕ ಚಿಂತನೆಗಳನ್ನು ಚಿಂತಿಸದೇ, ಆತ್ಮಚಿಂತನೆಯಲ್ಲಿಯೇ ತೃಪ್ತನಾಗಿರುವಂತೆ ಇರಬೇಕು.

12242006a ಗೋಚರೇಭ್ಯೋ ನಿವೃತ್ತಾನಿ ಯದಾ ಸ್ಥಾಸ್ಯಂತಿ ವೇಶ್ಮನಿ।
12242006c ತದಾ ತ್ವಮಾತ್ಮನಾತ್ಮಾನಂ ಪರಂ ದ್ರಕ್ಷ್ಯಸಿ ಶಾಶ್ವತಮ್।।

ವಿಷಯಗಳಿಂದ ನಿವೃತ್ತವಾದ ಇಂದ್ರಿಯಗಳು ಶರೀರವೆಂಬ ಮನೆಯಲ್ಲಿ ಸ್ಥಿರವಾಗಿದ್ದಾಗ ನೀನು ಶಾಶ್ವತನೂ ಶ್ರೇಷ್ಠನೂ ಆದ ಪರಮಾತ್ಮನನ್ನು ಕಾಣುತ್ತೀಯೆ.

12242007a ಸರ್ವಾತ್ಮಾನಂ ಮಹಾತ್ಮಾನಂ ವಿಧೂಮಮಿವ ಪಾವಕಮ್।
12242007c ತಂ ಪಶ್ಯಂತಿ ಮಹಾತ್ಮಾನೋ ಬ್ರಾಹ್ಮಣಾ ಯೇ ಮನೀಷಿಣಃ।।

ಹೊಗೆಯಿಲ್ಲದ ಬೆಂಕಿಯಂತೆ ಬೆಳಗುತ್ತಿರುವ, ಸರ್ವಾತ್ಮನಾದ ಮತ್ತು ಮಹಾತ್ಮನಾದ ಪರಮಾತ್ಮನನ್ನು ವಿದ್ವಾಂಸರೂ ಮಹಾತ್ಮರೂ ಆದ ಬ್ರಾಹ್ಮಣರು ಕಾಣುತ್ತಾರೆ.

12242008a ಯಥಾ ಪುಷ್ಪಫಲೋಪೇತೋ ಬಹುಶಾಖೋ ಮಹಾದ್ರುಮಃ।
12242008c ಆತ್ಮನೋ ನಾಭಿಜಾನೀತೇ ಕ್ವ ಮೇ ಪುಷ್ಪಂ ಕ್ವ ಮೇ ಫಲಮ್।।
12242009a ಏವಮಾತ್ಮಾ ನ ಜಾನೀತೇ ಕ್ವ ಗಮಿಷ್ಯೇ ಕುತೋ ನ್ವಹಮ್।
12242009c ಅನ್ಯೋ ಹ್ಯತ್ರಾಂತರಾತ್ಮಾಸ್ತಿ ಯಃ ಸರ್ವಮನುಪಶ್ಯತಿ।।

ಪುಷ್ಪ-ಫಲಭರಿತ ಬಹುಶಾಖೆಗಳುಳ್ಳ ಮಹಾ ವೃಕ್ಷವು ತನ್ನ ಫಲ-ಪುಷ್ಪಗಳು ಎಲ್ಲಿವೆ ಎಂದು ಹೇಗೆ ತಿಳಿದಿರುವುದಿಲ್ಲವೋ ಹಾಗೆ ಜೀವಾತ್ಮನು ತಾನು ಎಲ್ಲಿಗೆ ಹೋಗುತ್ತಿದ್ದೇನೆ ಮತ್ತು ಎಲ್ಲಿಂದ ಬಂದಿದ್ದೇನೆ ಎನ್ನುವುದನ್ನು ತಿಳಿದಿರುವುದಿಲ್ಲ. ಶರೀರದಲ್ಲಿ ಜೀವಾತ್ಮನಲ್ಲದೇ ಬೇರೊಬ್ಬ ಅಂತರಾತ್ಮನೂ ಇದ್ದನೆ. ಅವನು ಎಲ್ಲವನ್ನೂ ನೋಡುತ್ತಿರುತ್ತಾನೆ.

12242010a ಜ್ಞಾನದೀಪೇನ ದೀಪ್ತೇನ ಪಶ್ಯತ್ಯಾತ್ಮಾನಮಾತ್ಮನಾ।
12242010c ದೃಷ್ಟ್ವಾ ತ್ವಮಾತ್ಮನಾತ್ಮಾನಂ ನಿರಾತ್ಮಾ ಭವ ಸರ್ವವಿತ್।।

ಜ್ಞಾನದೀಪದ ಬೆಳಕಿನಿಂದ ಜ್ಞಾನಿಯು ತನ್ನಲ್ಲಿಯೇ ಇರುವ ಪರಮಾತ್ಮನನ್ನು ಕಾಣುತ್ತಾನೆ. ನೀನೂ ಕೂಡ ಜೀವಾತ್ಮನ ಮೂಲಕ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡು ಸರ್ವಜ್ಞನೂ ನಿರಭಿಮಾನಿಯೂ ಆಗು.

12242011a ವಿಮುಕ್ತಃ ಸರ್ವಪಾಪೇಭ್ಯೋ ಮುಕ್ತತ್ವಚ ಇವೋರಗಃ।
12242011c ಪರಾಂ ಬುದ್ಧಿಮವಾಪ್ಯೇಹ ವಿಪಾಪ್ಮಾ ವಿಗತಜ್ವರಃ।।

ಪೊರೆಯನ್ನು ಕಳಚಿಕೊಂಡ ಹಾವಿನಂತೆ ಸಕಲ ಪಾಪಗಳಿಂದಲೂ ವಿಮುಕ್ತನಾಗಿ ಉತ್ತಮೋತ್ತಮ ಬುದ್ಧಿಯನ್ನಾಶ್ರಯಿಸಿ ಪಾಪರಹಿತನೂ ಚಿಂತಾರಹಿತನೂ ಆಗು.

12242012a ಸರ್ವತಃಸ್ರೋತಸಂ ಘೋರಾಂ ನದೀಂ ಲೋಕಪ್ರವಾಹಿನೀಮ್।
12242012c ಪಂಚೇಂದ್ರಿಯಗ್ರಾಹವತೀಂ ಮನಃಸಂಕಲ್ಪರೋಧಸಮ್।।
12242013a ಲೋಭಮೋಹತೃಣಚ್ಚನ್ನಾಂ ಕಾಮಕ್ರೋಧಸರೀಸೃಪಾಮ್।
12242013c ಸತ್ಯತೀರ್ಥಾನೃತಕ್ಷೋಭಾಂ ಕ್ರೋಧಪಂಕಾಂ ಸರಿದ್ವರಾಮ್।।

ಎಲ್ಲಕಡೆಗಳಲ್ಲಿ ಹರಿಯುವ ಲೋಕಪ್ರವಾಹನೀ ಈ ಘೋರ ಸಂಸಾರನದಿಯಲ್ಲಿ ಪಂಚಜ್ಞಾನೇಂದ್ರಿಯಗಳು ಮೊಸಳೆಗಳು. ಮನಃಸಂಕಲ್ಪಗಳೇ ಇದರ ತೀರಗಳು. ಲೋಭ-ಮೋಹಗಳು ನದಿಯಲ್ಲಿರುವ ಹುಲ್ಲುಗಳು. ಕಾಮ-ಕ್ರೋಧಗಳು ಅದರಲ್ಲಿರುವ ಸರ್ಪಗಳು. ಸತ್ಯವೇ ಇದರ ಪುಣ್ಯತೀರ್ಥವು. ಅನೃತವು ಕುಲುಕಾಟವು. ಕ್ರೋಧವು ಕೆಸರು.

12242014a ಅವ್ಯಕ್ತಪ್ರಭವಾಂ ಶೀಘ್ರಾಂ ದುಸ್ತರಾಮಕೃತಾತ್ಮಭಿಃ।
12242014c ಪ್ರತರಸ್ವ ನದೀಂ ಬುದ್ಧ್ಯಾ ಕಾಮಗ್ರಾಹಸಮಾಕುಲಾಮ್।।

ಅವ್ಯಕ್ತಪ್ರಕೃತಿಯೆಂಬ ಪರ್ವತದಿಂದ ಹುಟ್ಟಿದ, ಅತ್ಯಂತ ವೇಗಯುಕ್ತವಾದ ಈ ನದಿಯನ್ನು ಜಿತೇಂದ್ರಿಯರಲ್ಲದವರಿಗೆ ದಾಟಲು ಸಾಧ್ಯವಾದುದಲ್ಲ. ಕಾಮಗಳೆಂಬ ಮೊಸಳೆಗಳಿಂದ ಇದು ತುಂಬಿಕೊಂಡಿದೆ.

12242015a ಸಂಸಾರಸಾಗರಗಮಾಂ ಯೋನಿಪಾತಾಲದುಸ್ತರಾಮ್।
12242015c ಆತ್ಮಜನ್ಮೋದ್ಭವಾಂ ತಾತ ಜಿಹ್ವಾವರ್ತಾಂ ದುರಾಸದಾಮ್।।

ಸಂಸಾರವೆಂಬ ಮಹಾಸಾಗರವನ್ನೇ ಸೇರುವ, ವಾಸನೆಯೆಂಬ ಆಳವನ್ನು ಹೊಂದಿರುವ ಇದನ್ನು ದಾಟುವುದು ದುಷ್ಕರವು. ಇದು ಅವರವರ ಕರ್ಮಗಳಿಂದಲೇ ಹುಟ್ಟಿಕೊಳ್ಳುತ್ತದೆ. ನಾಲಿಗೆಯೇ ಅದರ ಸುಳಿಯಾಗಿದ್ದು ದಾಟಲು ದುಷ್ಕರವಾಗಿದೆ.

12242016a ಯಾಂ ತರಂತಿ ಕೃತಪ್ರಜ್ಞಾ ಧೃತಿಮಂತೋ ಮನೀಷಿಣಃ।
12242016c ತಾಂ ತೀರ್ಣಃ ಸರ್ವತೋಮುಕ್ತೋ ವಿಪೂತಾತ್ಮಾತ್ಮವಿಚ್ಚುಚಿಃ।।
12242017a ಉತ್ತಮಾಂ ಬುದ್ಧಿಮಾಸ್ಥಾಯ ಬ್ರಹ್ಮಭೂಯಂ ಗಮಿಷ್ಯಸಿ।
12242017c ಸಂತೀರ್ಣಃ ಸರ್ವಸಂಕ್ಲೇಶಾನ್ ಪ್ರಸನ್ನಾತ್ಮಾ ವಿಕಲ್ಮಷಃ।।

ಧೃತಿಮಂತ ಕೃತಪ್ರಜ್ಞ ಮನೀಷಿಣರು ದಾಟಬಲ್ಲ ಆ ನದಿಯನ್ನು ನೀನೂ ಕೂಡ ಶ್ರೇಷ್ಠ ಬುದ್ಧಿಯನ್ನಾಶ್ರಯಿಸಿ ದಾಟು. ಅದರಿಂದ ನೀನು ಸರ್ವಪ್ರಕಾರಗಳಲ್ಲಿ ಮುಕ್ತನಾಗುತ್ತೀಯೆ. ಆತ್ಮವಿದುವಾಗುತ್ತೀಯೆ. ಶುಚಿಯಾಗುತ್ತೀಯೆ. ಬ್ರಹ್ಮಮಯನಾಗುತ್ತೀಯೆ. ಸಕಲವಿಧದ ಸಂಸಾರಬಂಧನಗಳಿಂದ ವಿಮುಕ್ತನಾಗಿ ಪಾಪರಹಿತನಾಗಿ ಪ್ರಸನ್ನಾತ್ಮನಾಗುತ್ತೀಯೆ.

12242018a ಭೂಮಿಷ್ಠಾನೀವ ಭೂತಾನಿ ಪರ್ವತಸ್ಥೋ ನಿಶಾಮಯ।
12242018c ಅಕ್ರುಧ್ಯನ್ನಪ್ರಹೃಷ್ಯಂಶ್ಚ ನನೃಶಂಸಮತಿಸ್ತಥಾ।
12242018e ತತೋ ದ್ರಕ್ಷ್ಯಸಿ ಭೂತಾನಾಂ ಸರ್ವೇಷಾಂ ಪ್ರಭವಾಪ್ಯಯೌ।।

ಪರ್ವತಶಿಖರದ ಮೇಲೆ ನಿಂತಿರುವವನು ಭೂಮಿಯ ಮೇಲಿರುವ ಸಮಸ್ತಪ್ರಾಣಿಗಳನ್ನೂ ನೋಡುವಂತೆ ಜ್ಞಾನರೂಪದ ಶಿಖರದ ಮೇಲೆ ನಿಂತು ಸಮಸ್ತಪ್ರಾಣಿಗಳೂ ಸಂಸಾರದಲ್ಲಿ ಸಿಲುಕಿ ಪಡುತ್ತಿರುವ ಅವಸ್ಥೆಯನ್ನು ಗಮನಿಸು. ಕ್ರೋಧ-ಹರ್ಷಗಳನ್ನು ಮತ್ತು ಕ್ರೂರಬುದ್ಧಿಯನ್ನು ತೊರೆ. ಆಗ ನೀನು ಸರ್ವಭೂತಗಳ ಉತ್ಪತ್ತಿ-ಲಯಗಳ ರಹಸ್ಯವನ್ನು ತಿಳಿಯುತ್ತೀಯೆ.

12242019a ಏವಂ ವೈ ಸರ್ವಧರ್ಮೇಭ್ಯೋ ವಿಶಿಷ್ಟಂ ಮೇನಿರೇ ಬುಧಾಃ।
12242019c ಧರ್ಮಂ ಧರ್ಮಭೃತಾಂ ಶ್ರೇಷ್ಠ ಮುನಯಸ್ತತ್ತ್ವದರ್ಶಿನಃ।।

ತತ್ತ್ವದರ್ಶಿಗಳಾದ ಶ್ರೇಷ್ಠ ಮುನಿ-ವಿದ್ವಾಂಸರು ಇದನ್ನೇ ಸರ್ವಧರ್ಮಗಳಲ್ಲಿ ವಿಶಿಷ್ಟವೆಂದೂ, ಧರ್ಮಭೃತರ ಧರ್ಮವೆಂದೂ ತಿಳಿದಿದ್ದಾರೆ.

12242020a ಆತ್ಮನೋಽವ್ಯಯಿನೋ ಜ್ಞಾತ್ವಾ ಇದಂ ಪುತ್ರಾನುಶಾಸನಮ್।
12242020c ಪ್ರಯತಾಯ ಪ್ರವಕ್ತವ್ಯಂ ಹಿತಾಯಾನುಗತಾಯ ಚ।।

ಪುತ್ರ! ಈ ಉಪದೇಶವು ಅವ್ಯಯನಾದ ಆತ್ಮನ ಜ್ಞಾನವು. ಇದನ್ನು ಹಿತೈಷಿಯಾದ, ವಿಧೇಯನಾದ ಮತ್ತು ಜಿತೇಂದ್ರಿಯನಿಗೆ ಮಾತ್ರ ಉಪದೇಶಿಸಬೇಕು.

12242021a ಆತ್ಮಜ್ಞಾನಮಿದಂ ಗುಹ್ಯಂ ಸರ್ವಗುಹ್ಯತಮಂ ಮಹತ್।
12242021c ಅಬ್ರುವಂ ಯದಹಂ ತಾತ ಆತ್ಮಸಾಕ್ಷಿಕಮಂಜಸಾ।।

ಈ ಆತ್ಮಜ್ಞಾನವು ಗುಹ್ಯವಾಗಿದೆ. ಅತ್ಯಂತ ಗಹನವಾಗಿಯೂ ಮಹತ್ತಾಗಿಯೂ ಇದೆ. ಮಗೂ! ನಿನಗೆ ಹೇಳಿರುವ ಈ ಆತ್ಮಜ್ಞಾನವು ನಿಜವಾಗಿಯೂ ನನ್ನ ಪ್ರತ್ಯಕ್ಷಾನುಭವದಿಂದ ಪಡೆದ ಜ್ಞಾನವಾಗಿದೆ.

12242022a ನೈವ ಸ್ತ್ರೀ ನ ಪುಮಾನೇತನ್ನೈವ ಚೇದಂ ನಪುಂಸಕಮ್।
12242022c ಅದುಃಖಮಸುಖಂ ಬ್ರಹ್ಮ ಭೂತಭವ್ಯಭವಾತ್ಮಕಮ್।।

ಅದುಃಖವೂ, ಅಸುಖವೂ, ಭೂತ-ಭವಿಷ್ಯ-ವರ್ತಮಾನ ಸ್ವರೂಪವೂ ಆದ ಈ ಬ್ರಹ್ಮವು ಗಂಡಸೂ ಅಲ್ಲ, ಹೆಂಗಸೂ ಅಲ್ಲ ಮತ್ತು ನಪುಂಸಕನೂ ಅಲ್ಲ.

12242023a ನೈತಜ್ಜ್ಞಾತ್ವಾ ಪುಮಾನ್ಸ್ತ್ರೀ ವಾ ಪುನರ್ಭವಮವಾಪ್ನುಯಾತ್।
12242023c ಅಭವಪ್ರತಿಪತ್ತ್ಯರ್ಥಮೇತದ್ವರ್ತ್ಮ ವಿಧೀಯತೇ।।

ಪುರುಷನಾಗಲೀ ಸ್ತ್ರೀಯಾಗಲೀ ಈ ಬ್ರಹ್ಮಜ್ಞಾನವನ್ನು ಪಡೆದುಕೊಂಡರೆ ಪುನರ್ಜನ್ಮವನ್ನು ಹೊಂದುವುದಿಲ್ಲ. ಪುನರ್ಜನ್ಮವನ್ನು ಪಡೆಯದಿರುವ ಸಲುವಾಗಿಯೇ ಈ ಧರ್ಮವನ್ನು ಹೇಳಿದ್ದಾರೆ.

12242024a ಯಥಾ ಮತಾನಿ ಸರ್ವಾಣಿ ನ ಚೈತಾನಿ ಯಥಾ ತಥಾ।
12242024c ಕಥಿತಾನಿ ಮಯಾ ಪುತ್ರ ಭವಂತಿ ನ ಭವಂತಿ ಚ।।

ಪುತ್ರ! ಇರುವ ಎಲ್ಲ ಮತಗಳನ್ನೂ ಯಥಾವತ್ತಾಗಿ ಹೇಳಿದ್ದೇನೆ. ಈ ಮತಗಳ ಅರಿವು ಮತ್ತು ಅನುಷ್ಠಾನಗಳು ಇರುವುದೂ ಉಂಟು ಮತ್ತು ಇಲ್ಲದಿರುವುದೂ ಉಂಟು.

12242025a ತತ್ ಪ್ರೀತಿಯುಕ್ತೇನ ಗುಣಾನ್ವಿತೇನ ಪುತ್ರೇಣ ಸತ್ಪುತ್ರಗುಣಾನ್ವಿತೇನ।
12242025c ಪೃಷ್ಟೋ ಹೀದಂ ಪ್ರೀತಿಮತಾ ಹಿತಾರ್ಥಂ ಬ್ರೂಯಾತ್ಸುತಸ್ಯೇಹ ಯದುಕ್ತಮೇತತ್।।

ಸತ್ಪುತ್ರ! ಪ್ರೀತಿಯುಕ್ತನಾದ, ಗುಣವಂತನಾದ ಮತ್ತು ಜಿತೇಂದ್ರಿಯನಾದ ಮಗನು ತಂದೆಯಲ್ಲಿ ಈ ಪ್ರಶ್ನೆಗಳನ್ನು ಕೇಳಿದರೆ ತಂದೆಯು ಸಂತುಷ್ಟಚಿತ್ತದಿಂದ ಆ ಜಿಜ್ಞಾಸು ಮಗನಿಗೆ ನಾನು ಹೇಳಿದಂತೆ ಯಥಾರ್ಥವಾದ ಈ ಬ್ರಹ್ಮಜ್ಞಾನವನ್ನು ಉಪದೇಶಿಸಬೇಕು.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ದ್ವಿಚತ್ವಾರಿಂಶಾಧಿಕದ್ವಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾನಲ್ವತ್ತೆರಡನೇ ಅಧ್ಯಾಯವು.