ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 241
ಸಾರ
ಜ್ಞಾನದ ಸಾಧನೆ, ಲಕ್ಷಣ ಮತ್ತು ಮಹಿಮೆ (1-14).
12241001 ವ್ಯಾಸ ಉವಾಚ।
12241001a ಸೃಜತೇ ತು ಗುಣಾನ್ಸತ್ತ್ವಂ ಕ್ಷೇತ್ರಜ್ಞಸ್ತ್ವನುತಿಷ್ಠತಿ।
12241001c ಗುಣಾನ್ವಿಕ್ರಿಯತಃ ಸರ್ವಾನುದಾಸೀನವದೀಶ್ವರಃ।।
ವ್ಯಾಸನು ಹೇಳಿದನು: “ಪ್ರಕೃತಿಯು ಗುಣಗಳನ್ನು ಸೃಷ್ಟಿಸುತ್ತದೆ. ಕ್ಷೇತ್ರಜ್ಞನಾದ ಆತ್ಮನು ಉದಾಸೀನನಂತೆ ವಿಕಾರಶೀಲವಾದ ಆ ಗುಣಗಳನ್ನು ನೋಡುತ್ತಿರುತ್ತಾನೆ. ಅವನೇ ಆ ಗುಣಗಳಿಗೆ ನಾಯಕನು.
12241002a ಸ್ವಭಾವಯುಕ್ತಂ ತತ್ಸರ್ವಂ ಯದಿಮಾನ್ ಸೃಜತೇ ಗುಣಾನ್।
12241002c ಊರ್ಣನಾಭಿರ್ಯಥಾ ಸೂತ್ರಂ ಸೃಜತೇ ತಂತುವದ್ಗುಣಾನ್।।
ಜೇಡರ ಹುಳುವು ತನ್ನ ದೇಹದಿಂದ ದಾರಗಳನ್ನು ಸ್ವಾಭಾವಿಕವಾಗಿಯೇ ಸೃಷ್ಟಿಸುವಂತೆ ಪ್ರಕೃತಿಯೂ ತ್ರಿಗುಣಾತ್ಮಕವಾದ ಸಮಸ್ತ ಪದಾರ್ಥಗಳನ್ನೂ ಸೃಷ್ಟಿಸುತ್ತದೆ.
12241003a ಪ್ರಧ್ವಸ್ತಾ ನ ನಿವರ್ತಂತೇ ಪ್ರವೃತ್ತಿರ್ನೋಪಲಭ್ಯತೇ।
12241003c ಏವಮೇಕೇ ವ್ಯವಸ್ಯಂತಿ ನಿವೃತ್ತಿರಿತಿ ಚಾಪರೇ।।
ತತ್ತ್ವಜ್ಞಾನದಿಂದ ಈ ಗುಣಗಳು ನಾಶಹೊಂದಿದರೂ ಅವು ಜ್ಞಾನಿಯನ್ನು ಬಿಟ್ಟುಹೋಗದೇ ಪ್ರವೃತ್ತವಾಗಿರುತ್ತವೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ತತ್ತ್ವಜ್ಞಾನವಾದೊಡನೆ ತ್ರಿಗುಣಗಳು ಸಂಪೂರ್ಣವಾಗಿ ಬಿಟ್ಟುಹೋಗುತ್ತವೆ ಎಂದು ಹೇಳುತ್ತಾರೆ.
12241004a ಉಭಯಂ ಸಂಪ್ರಧಾರ್ಯೈತದಧ್ಯವಸ್ಯೇದ್ಯಥಾಮತಿ।
12241004c ಅನೇನೈವ ವಿಧಾನೇನ ಭವೇದ್ಗರ್ಭಶಯೋ ಮಹಾನ್।।
ಈ ಎರಡು ಅಭಿಪ್ರಾಯಗಳನ್ನೂ ಚೆನ್ನಾಗಿ ಗ್ರಹಿಸಿ ಯಥಾಮತಿಯಾಗಿ ಪರ್ಯಾಲೋಚಿಸಬೇಕು. ಈ ವಿಧಾನದಿಂದಲೇ ಹೃದಯಗರ್ಭದಲ್ಲಿ ಮಲಗಿರುವ ಜೀವನು ಮಹಾತ್ಮನಾಗುತ್ತಾನೆ.
12241005a ಅನಾದಿನಿಧನಂ ನಿತ್ಯಮಾಸಾದ್ಯ ವಿಚರೇನ್ನರಃ।
12241005c ಅಕ್ರುಧ್ಯನ್ನಪ್ರಹೃಷ್ಯಂಶ್ಚ ನಿತ್ಯಂ ವಿಗತಮತ್ಸರಃ।।
ಅನಾದಿನಿಧನ ಆತ್ಮನನ್ನು ನಿತ್ಯವೂ ಬಳಿಸಾರುವ ನರನು ಹರ್ಷ-ಕ್ರೋಧ-ಈರ್ಷ್ಯಾ-ದ್ವೇಷ ರಹಿತನಾಗಿ ಸಂಚರಿಸುತ್ತಿರುತ್ತಾನೆ.
12241006a ಇತ್ಯೇವಂ ಹೃದಯಗ್ರಂಥಿಂ ಬುದ್ಧಿಚಿಂತಾಮಯಂ ದೃಢಮ್।
12241006c ಅತೀತ್ಯ ಸುಖಮಾಸೀತ ಅಶೋಚಂಶ್ಚಿನ್ನಸಂಶಯಃ।।
ಹೀಗೆ ಚಿಂತಾಮಯವಾದ ದೃಢ ಬುದ್ಧಿಯಿಂದ ಹೃದಯಗ್ರಂಥಿಯನ್ನು ಭೇದಿಸಿ ಶೋಕ-ಸಂದೇಹರಹಿತನಾಗಿ ಸುಖವನ್ನು ಹೊಂದಬೇಕು.
12241007a ತಪ್ಯೇಯುಃ ಪ್ರಚ್ಯುತಾಃ ಪೃಥ್ವ್ಯಾ ಯಥಾ ಪೂರ್ಣಾಂ ನದೀಂ ನರಾಃ।
12241007c ಅವಗಾಢಾ ಹ್ಯವಿದ್ವಾಂಸೋ ವಿದ್ಧಿ ಲೋಕಮಿಮಂ ತಥಾ।।
ಈಜಲು ತಿಳಿಯದ ನರರು ದಡದಿಂದ ಜಾರಿ ತುಂಬಿದ ನದಿಯಲ್ಲಿ ಬಿದ್ದು ಹೇಗೆ ಮುಳುಗಿಹೋಗುತ್ತಾರೋ ಹಾಗೆ ಅವಿದ್ವಾಂಸರು ಈ ಲೋಕದಲ್ಲಿ ಮುಳುಗಿ ಪರಿತಪಿಸುತ್ತಾರೆ ಎನ್ನುವುದನ್ನು ತಿಳಿ.
12241008a ನ ತು ತಾಮ್ಯತಿ ವೈ ವಿದ್ವಾನ್ ಸ್ಥಲೇ ಚರತಿ ತತ್ತ್ವವಿತ್।
12241008c ಏವಂ ಯೋ ವಿಂದತೇಽಽತ್ಮಾನಂ ಕೇವಲಂ ಜ್ಞಾನಮಾತ್ಮನಃ।।
ಆದರೆ ಈಜಲು ತಿಳಿದವನು ನದಿಯಲ್ಲಿಯೂ ಭೂಮಿಯ ಮೇಲೆ ಹೇಗೋ ಹಾಗೆ ಚಲಿಸುತ್ತಾನೆ. ಹೀಗೆ ಜ್ಞಾನಸ್ವರೂಪನಾದ ಆತ್ಮವನ್ನು ಸಾಕ್ಷಾತ್ಕರಿಸಿಕೊಂಡ ತತ್ತ್ವವಿದುವು ಸಂಸಾರಸಾಗರವನ್ನು ಬಹಳ ಸುಲಭವಾಗಿ ದಾಟಿಬಿಡುತ್ತಾನೆ.
12241009a ಏವಂ ಬುದ್ಧ್ವಾ ನರಃ ಸರ್ವಾನ್ ಭೂತಾನಾಮಾಗತಿಂ ಗತಿಮ್।
12241009c ಸಮವೇಕ್ಷ್ಯ ಶನೈಃ ಸಮ್ಯಗ್ಲಭತೇ ಶಮಮುತ್ತಮಮ್1।।
ಹೀಗೆ ಸರ್ವ ಭೂತಗಳ ಆವಿರ್ಭಾವ ಮತ್ತು ಲಯಗಳ ರಹಸ್ಯವನ್ನು ತಿಳಿದಿರುವ ಮತ್ತು ಅವುಗಳಲ್ಲಿನ ಏರು-ಪೇರುಗಳ ಕುರಿತು ವಿಚಾರಮಾಡುವ ನರನು ಪರಮಶಾಂತಿಯನ್ನು ಹೊಂದುತ್ತಾನೆ.
12241010a ಏತದ್ವೈ ಜನ್ಮಸಾಮರ್ಥ್ಯಂ ಬ್ರಾಹ್ಮಣಸ್ಯ ವಿಶೇಷತಃ।
12241010c ಆತ್ಮಜ್ಞಾನಂ ಶಮಶ್ಚೈವ ಪರ್ಯಾಪ್ತಂ ತತ್ಪರಾಯಣಮ್।।
ಆತ್ಮಜ್ಞಾನ ಮತ್ತು ಶಮೆ (ಮನಸ್ಸು ಮತ್ತು ಇಂದ್ರಿಯಗಳ ಸಂಯಮ) ಇವುಗಳೇ ಮೋಕ್ಷಪ್ರಾಪ್ತಿಗೆ ಸಾಕಾಗುತ್ತವೆ. ಮನುಷ್ಯನಾಗಿರುವ, ಅದರಲ್ಲೂ ವಿಶೇಷವಾಗಿ ಬ್ರಾಹ್ಮಣನಾಗಿರುವವನಿಗೆ, ಇದೇ ಜನ್ಮಸಾಮಾರ್ಥ್ಯವು. ಇದೇ ಅವರಿಗೆ ಪರಾಯಣವು.
12241011a ಏತದ್ಬುದ್ಧ್ವಾ ಭವೇದ್ಬುದ್ಧಃ ಕಿಮನ್ಯದ್ಬುದ್ಧಲಕ್ಷಣಮ್।
12241011c ವಿಜ್ಞಾಯೈತದ್ವಿಮುಚ್ಯಂತೇ ಕೃತಕೃತ್ಯಾ ಮನೀಷಿಣಃ।।
ಆತ್ಮಜ್ಞಾನವನ್ನು ತಿಳಿದವನು ಬುದ್ಧನಾಗುತ್ತಾನೆ. ಆತ್ಮಜ್ಞಾನ ಮತ್ತು ಶಮೆಗಳಲ್ಲದೇ ಬುದ್ಧನ ಲಕ್ಷಣಗಳ್ಯಾವುದಾದರೂ ಏನಿದೆ? ಈ ರಹಸ್ಯವನ್ನು ತಿಳಿದ ಮನೀಷಿಣರು ಕೃತಕೃತ್ಯರಾಗಿ ಮೋಕ್ಷವನ್ನು ಹೊಂದುತ್ತಾರೆ.
12241012a ನ ಭವತಿ ವಿದುಷಾಂ ಮಹದ್ಭಯಂ ಯದವಿದುಷಾಂ ಸುಮಹದ್ಭಯಂ ಭವೇತ್।
12241012c ನ ಹಿ ಗತಿರಧಿಕಾಸ್ತಿ ಕಸ್ಯ ಚಿದ್ ಭವತಿ ಹಿ ಯಾ ವಿದುಷಃ ಸನಾತನೀ।।
ಅಜ್ಞಾನಿಗಳಿಗೆ ಇರುವ ಮಹಾಭಯವು ಜ್ಞಾನಿಗಳಿಗೆ ಇರುವುದಿಲ್ಲ. ಜ್ಞಾನಿಗಳಿಗೆ ದೊರೆಯುವ ಸನಾತನ ಗತಿಗಿಂತ ಅಧಿಕವಾದ ಗತಿಯು ಬೇರೆ ಯಾವುದೂ ಇಲ್ಲ.
12241013a ಲೋಕಮಾತುರಮಸೂಯತೇ ಜನಸ್ ತತ್ತದೇವ ಚ ನಿರೀಕ್ಷ್ಯ ಶೋಚತೇ।
12241013c ತತ್ರ ಪಶ್ಯ ಕುಶಲಾನಶೋಚತೋ ಯೇ ವಿದುಸ್ತದುಭಯಂ ಕೃತಾಕೃತಮ್।।
ಕೆಲವರು ದುಃಖಿಗಳನ್ನೂ ರೋಗಿಗಳನ್ನೂ ನೋಡಿ ಅವರಲ್ಲಿ ದೋಷಗಳನ್ನು ಭಾವಿಸುತ್ತಾರೆ. ಮತ್ತೆ ಕೆಲವರು ಅವರನ್ನು ನೋಡಿ ಶೋಕಪಡುತ್ತಾರೆ. ಆದರೆ ಕಾರ್ಯ-ಕಾರಣಗಳ ತತ್ತ್ವವನ್ನು ತಿಳಿದಿರುವವರು ಅಂಥವರನ್ನು ನೋಡಿ ಶೋಕಪಡುವುದಿಲ್ಲ ಅಥವಾ ದೋಷವೆಣಿಸುವುದಿಲ್ಲ. ಅಂಥವರನ್ನೇ ನೀನು ಕುಶಲರೆಂದು ತಿಳಿ.
12241014a ಯತ್ಕರೋತ್ಯನಭಿಸಂಧಿಪೂರ್ವಕಂ ತಚ್ಚ ನಿರ್ಣುದತಿ ಯತ್ಪುರಾ ಕೃತಮ್।
12241014c ನ ಪ್ರಿಯಂ ತದುಭಯಂ ನ ಚಾಪ್ರಿಯಂ ತಸ್ಯ ತಜ್ಜನಯತೀಹ ಕುರ್ವತಃ।।
ನಿಷ್ಕಾಮಭಾವದಿಂದ ವಿವೇಕಿಯು ಮಾಡಿದ ಕರ್ಮಗಳು ಅವನು ಹಿಂದೆ ಮಾಡಿದ ಅಶುಭಕರ್ಮದ ದುಷ್ಫಲಗಳನ್ನೂ ತೊಡೆದುಹಾಕುತ್ತದೆ. ನಿಷ್ಕಾಮ ಕರ್ಮವು ಅವನಿಗೆ ಇಹದಲ್ಲಿಯಾಗಲೀ ಪರದಲ್ಲಿಯಾಗಲೀ ಪ್ರಿಯವನ್ನಾಗಲೀ ಅಪ್ರಿಯವನ್ನಾಗಲೀ ಉಂಟುಮಾಡುವುದಿಲ್ಲ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಏಕಚತ್ವಾರಿಂಶಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾನಲ್ವತ್ತೊಂದನೇ ಅಧ್ಯಾಯವು.
-
ಇವು ಹುಟ್ಟಿಗೆ ಕಾರಣವಾದ ಸಂಸ್ಕಾರಗಳಿಂದ ಹುಟ್ಟಿರುತ್ತವೆ. ಇವುಗಳನ್ನು ಜೀವನು ಹುಟ್ಟಿನೊಡನೆಯೇ ತಂದಿರುತ್ತಾನೆ. (ಭಾರತ ದರ್ಶನ) ↩︎