ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 238
ಸಾರ
ಪರಮಾತ್ಮನ ಶ್ರೇಷ್ಠತೆ; ದರ್ಶನೋಪಾಯ; ಜ್ಞಾನೋಪದೇಶಕ್ಕೆ ಪಾತ್ರನಾದವನ ನಿರ್ಣಯ (1-20).
12238001 ವ್ಯಾಸ ಉವಾಚ।
12238001a ಪ್ರಕೃತೇಸ್ತು ವಿಕಾರಾ ಯೇ ಕ್ಷೇತ್ರಜ್ಞಸ್ತೈಃ ಪರಿಶ್ರಿತಃ1।
12238001c ತೇ ಚೈನಂ ನ ಪ್ರಜಾನಂತಿ ಸ ತು ಜಾನಾತಿ ತಾನಪಿ।।
ವ್ಯಾಸನು ಹೇಳಿದನು: “ಪ್ರಕೃತಿಯ ವಿಕಾರಗಳಿಂದ ಕ್ಷೇತ್ರಜ್ಞನು ಪರಿಶ್ರಿತನಾಗಿದ್ದಾನೆ. ಅವುಗಳು ಅವನನ್ನು ತಿಳಿಯಲಾರವು. ಆದರೆ ಅವನು ಅವುಗಳನ್ನು ತಿಳಿದಿರುತ್ತಾನೆ.
12238002a ತೈಶ್ಚೈಷ ಕುರುತೇ ಕಾರ್ಯಂ ಮನಃಷಷ್ಠೈರಿಹೇಂದ್ರಿಯೈಃ।
12238002c ಸುದಾಂತೈರಿವ ಸಂಯಂತಾ ದೃಢೈಃ ಪರಮವಾಜಿಭಿಃ।।
ಚತುರ ಸಾರಥಿಯು ಚೆನ್ನಾಗಿ ಪಳಗಿರುವ ಕುದುರೆಗಳಿಂದ ರಥವನ್ನು ನಿರ್ವಹಿಸುವಂತೆ ಕ್ಷೇತ್ರಜ್ಞನು ಮನಸ್ಸು ಮತ್ತು ಐದು ಇಂದ್ರಿಯಗಳ ಮೂಲಕ ತನ್ನ ಕಾರ್ಯವನ್ನು ನಿರ್ವಹಿಸುತ್ತಾನೆ.
12238003a ಇಂದ್ರಿಯೇಭ್ಯಃ ಪರಾ ಹ್ಯರ್ಥಾ ಅರ್ಥೇಭ್ಯಃ ಪರಮಂ ಮನಃ।
12238003c ಮನಸಸ್ತು ಪರಾ ಬುದ್ಧಿರ್ಬುದ್ಧೇರಾತ್ಮಾ ಮಹಾನ್ಪರಃ।।
ಇಂದ್ರಿಯಗಳಿಗಿಂತಲೂ ಇಂದ್ರಿಯಾರ್ಥಗಳು ಶ್ರೇಷ್ಠವಾದವುಗಳು. ಇಂದ್ರಿಯಾರ್ಥಗಳಿಗಿಂತಲೂ ಮನಸ್ಸು ಶ್ರೇಷ್ಠವಾದುದು. ಮನಸ್ಸಿಗಿಂತಲೂ ಬುದ್ಧಿಯು ಶ್ರೇಷ್ಠವಾದುದು. ಬುದ್ಧಿಗಿಂತಲೂ ಆತ್ಮ ಮತ್ತು ಆತ್ಮಕ್ಕಿಂತಲೂ ಮಹತ್ತತ್ತ್ವವು ಶ್ರೇಷ್ಠವಾದುದು.
12238004a ಮಹತಃ ಪರಮವ್ಯಕ್ತಮವ್ಯಕ್ತಾತ್ಪರತೋಽಮೃತಮ್।
12238004c ಅಮೃತಾನ್ನ ಪರಂ ಕಿಂ ಚಿತ್ಸಾ ಕಾಷ್ಠಾ ಸಾ ಪರಾ ಗತಿಃ।।
ಮಹತ್ತತ್ತ್ವಕ್ಕಿಂತಲೂ ಅವ್ಯಕ್ತ ಮೂಲಪ್ರಕೃತಿಯು ಶ್ರೇಷ್ಠವಾದುದು. ಅವ್ಯಕ್ತಕ್ಕಿಂತಲೂ ಅಮೃತಸ್ವರೂಪೀ ಪರಮಾತ್ಮನು ಶ್ರೇಷ್ಠನು. ಆ ಅಮೃತರೂಪಿಗಿಂತಲೂ ಶ್ರೇಷ್ಠವಾದುದು ಬೇರೆ ಯಾವುದೂ ಇಲ್ಲ. ಅದೇ ಶ್ರೇಷ್ಠತೆಯ ಪಾರಾಕಾಷ್ಠೆ ಮತ್ತು ಪರಮ ಗತಿಯು.
12238005a ಏವಂ ಸರ್ವೇಷು ಭೂತೇಷು ಗೂಢೋಽಽತ್ಮಾ ನ ಪ್ರಕಾಶತೇ।
12238005c ದೃಶ್ಯತೇ ತ್ವಗ್ರ್ಯಯಾ ಬುದ್ಧ್ಯಾ ಸೂಕ್ಷ್ಮಯಾ ತತ್ತ್ವದರ್ಶಿಭಿಃ।।
ಹೀಗೆ ಸರ್ವಭೂತಗಳಲ್ಲಿಯೂ ಗೂಢನಾಗಿರುವ ಪರಮಾತ್ಮನು ಇಂದ್ರಿಯಗಳಿಗೆ ಕಾಣಿಸುವುದಿಲ್ಲ. ತತ್ತ್ವದರ್ಶಿಗಳು ತಮ್ಮ ಸೂಕ್ಷ್ಮ ಮತ್ತು ಶ್ರೇಷ್ಠ ಬುದ್ಧಿಯಿಂದ ಅವನನ್ನು ಕಾಣುತ್ತಾರೆ.
12238006a ಅಂತರಾತ್ಮನಿ ಸಂಲೀಯ ಮನಃಷಷ್ಠಾನಿ ಮೇಧಯಾ।
12238006c ಇಂದ್ರಿಯಾಣೀಂದ್ರಿಯಾರ್ಥಾಂಶ್ಚ ಬಹು ಚಿಂತ್ಯಮಚಿಂತಯನ್।।
12238007a ಧ್ಯಾನೋಪರಮಣಂ ಕೃತ್ವಾ ವಿದ್ಯಾಸಂಪಾದಿತಂ ಮನಃ।
12238007c ಅನೀಶ್ವರಃ ಪ್ರಶಾಂತಾತ್ಮ ತತೋಽರ್ಚತ್ಯಮೃತಂ ಪದಮ್।।
ಬುದ್ಧಿಯ ಮೂಲಕ ಮನಸ್ಸು, ಇಂದ್ರಿಯಗಳು ಮತ್ತು ಇಂದ್ರಿಯಾರ್ಥಗಳನ್ನು ಅಂತರಾತ್ಮನಲ್ಲಿ ಲೀನಗೊಳಿಸಿ, ಅನೇಕವಿಧದ ಯೋಚನೆಗಳನ್ನು ಯೋಚಿಸದೇ, ವಿದ್ಯಾಸಂಪಾದಿತ ಮನಸ್ಸನ್ನು ಧ್ಯಾನಾಸಕ್ತಗೊಳಿಸಿ ನಾನು ಎಂಬ ಭಾವನೆಯನ್ನು ತೊರೆದು ಪ್ರಶಾಂತಾತ್ಮನಾಗಿ ಯೋಗಿಯು ಅಮೃತ ಪದವನ್ನು ಪಡೆದುಕೊಳ್ಳುತ್ತಾನೆ.
12238008a ಇಂದ್ರಿಯಾಣಾಂ ತು ಸರ್ವೇಷಾಂ ವಶ್ಯಾತ್ಮಾ ಚಲಿತಸ್ಮೃತಿಃ।
12238008c ಆತ್ಮನಃ ಸಂಪ್ರದಾನೇನ ಮರ್ತ್ಯೋ ಮೃತ್ಯುಮುಪಾಶ್ನುತೇ।।
ಸರ್ವ ಇಂದ್ರಿಯಗಳಿಗೂ ವಶನಾಗಿರುವ, ಚಂಚಲ ಸ್ಮರಣೆಯುಳ್ಳ ಮತ್ತು ಕಾಮಕ್ರೋಧಾದಿಗಳಿಗೆ ತನ್ನನ್ನು ಅರ್ಪಿಸಿಕೊಂಡಿರುವ ಮನುಷ್ಯನು ಮೃತ್ಯುವನ್ನೇ ಉಪಭೋಗಿಸುತ್ತಾನೆ.
12238009a ಹಿತ್ವಾ ತು ಸರ್ವಸಂಕಲ್ಪಾನ್ಸತ್ತ್ವೇ ಚಿತ್ತಂ ನಿವೇಶಯೇತ್।
12238009c ಸತ್ತ್ವೇ ಚಿತ್ತಂ ಸಮಾವೇಶ್ಯ ತತಃ ಕಾಲಂಜರೋ ಭವೇತ್।।
ಸರ್ವಸಂಕಲ್ಪಗಳನ್ನೂ ಪರಿತ್ಯಜಿಸಿ ಚಿತ್ತವನ್ನು ಸೂಕ್ಷ್ಮಬುದ್ಧಿಯಲ್ಲಿ ಲೀನಗೊಳಿಸಬೇಕು. ಹೀಗೆ ಬುದ್ಧಿಯಲ್ಲಿ ಚಿತ್ತವನ್ನು ಲಯಗೊಳಿಸಿದವನು ಕಾಲವನ್ನೇ ವಿನಾಶಗೊಳಿಸುತ್ತಾನೆ.
12238010a ಚಿತ್ತಪ್ರಸಾದೇನ ಯತಿರ್ಜಹಾತಿ ಹಿ ಶುಭಾಶುಭಮ್।
12238010c ಪ್ರಸನ್ನಾತ್ಮಾತ್ಮನಿ ಸ್ಥಿತ್ವಾ ಸುಖಮಾನಂತ್ಯಮಶ್ನುತೇ।।
ಚಿತ್ತದ ಪ್ರಸನ್ನತೆಯಿಂದ ಯತಿಯು ಶುಭಾಶುಭಗಳನ್ನು ತ್ಯಜಿಸುತ್ತಾನೆ. ಆ ಪ್ರಸನ್ನಾತ್ಮನು ಆತ್ಮನಲ್ಲಿಯೇ ಬುದ್ಧಿಯನ್ನಿರಿಸಿ ಅನಂತ ಸುಖವನ್ನು ಹೊಂದುತ್ತಾನೆ.
12238011a ಲಕ್ಷಣಂ ತು ಪ್ರಸಾದಸ್ಯ ಯಥಾ ತೃಪ್ತಃ2 ಸುಖಂ ಸ್ವಪೇತ್।
12238011c ನಿವಾತೇ ವಾ ಯಥಾ ದೀಪೋ ದೀಪ್ಯಮಾನೋ ನ ಕಂಪತೇ।।
ತೃಪ್ತನಾಗಿ ಸುಖವಾಗಿ ನಿದ್ರಿಸುವುದೇ ಪ್ರಶಾಂತ ಚಿತ್ತದ ಲಕ್ಷಣವು. ಗಾಳಿಯಿಲ್ಲದಿರುವ ಸ್ಥಳದಲ್ಲಿ ಉರಿಯುತ್ತಿರುವ ದೀಪವು ಹೇಗೆ ಕಂಪಿಸುವುದಿಲ್ಲವೋ ಹಾಗೆ ಚಂಚಲಿಸದೇ ಮನಸ್ಸು ಆತ್ಮನಲ್ಲಿ ಲೀನವಾಗಿರುವುದು ಚಿತ್ತಸ್ವಾಸ್ಥ್ಯದ ಲಕ್ಷಣವು.
12238012a ಏವಂ ಪೂರ್ವಾಪರೇ ರಾತ್ರೇ ಯುಂಜನ್ನಾತ್ಮಾನಮಾತ್ಮನಾ।
12238012c ಸತ್ತ್ವಾಹಾರವಿಶುದ್ಧಾತ್ಮಾ3 ಪಶ್ಯತ್ಯಾತ್ಮಾನಮಾತ್ಮನಿ।।
ಹೀಗೆ ಸತ್ತ್ವಾಹಾರಿಯಾಗಿ ವಿಶುದ್ಧ ಮನಸ್ಸುಳ್ಳವನಾಗಿ ರಾತ್ರಿಯ ಮೊದಲ ಮತ್ತು ಕಡೆಯ ಯಾಮಗಳಲ್ಲಿ ಬುದ್ಧಿಯನ್ನು ಆತ್ಮನಲ್ಲಿ ಏಕಾಗ್ರಗೊಳಿಸುತ್ತಿದ್ದರೆ ಯೋಗಿಯು ತನ್ನಲ್ಲಿಯೇ ಪರಮಾತ್ಮನನ್ನು ಕಾಣುತ್ತಾನೆ.
12238013a ರಹಸ್ಯಂ ಸರ್ವವೇದಾನಾಮನೈತಿಹ್ಯಮನಾಗಮಮ್।
12238013c ಆತ್ಮಪ್ರತ್ಯಯಿಕಂ ಶಾಸ್ತ್ರಮಿದಂ ಪುತ್ರಾನುಶಾಸನಮ್।।
ಪುತ್ರ! ನಾನು ಉಪದೇಶಿಸುತ್ತಿರುವ ಇದು ಪರಮಾತ್ಮನ ಜ್ಞಾನವನ್ನುಂಟುಮಾಡುವ ಸರ್ವವೇದಗಳ ರಹಸ್ಯವಾಗಿದೆ. ಆದರೆ ಇದನ್ನು ಕೇವಲ ಅನುಮಾನದಿಂದಾಗಲೀ ಆಗಮಗಳಿಂದಾಗಲೀ ತಿಳಿಯಲಾಗುವುದಿಲ್ಲ.
12238014a ಧರ್ಮಾಖ್ಯಾನೇಷು ಸರ್ವೇಷು ಸತ್ಯಾಖ್ಯಾನೇಷು ಯದ್ವಸು।
12238014c ದಶೇದಮೃಕ್ಸಹಸ್ರಾಣಿ ನಿರ್ಮಥ್ಯಾಮೃತಮುದ್ಧೃತಮ್।।
ಇದು ಸರ್ವ ಧರ್ಮಾಖ್ಯಾನಗಳು ಮತ್ತು ಸತ್ಯಾಖ್ಯಾನಗಳಲ್ಲಿರುವ ಸಂಪತ್ತಾಗಿದೆ. ಹತ್ತುಸಾವಿರ ಋಕ್ಕುಗಳನ್ನು ಮಥಿಸಿ ಈ ಅಮೃತವನ್ನು ತೆಗೆಯಲಾಗಿದೆ.
12238015a ನವನೀತಂ ಯಥಾ ದಧ್ನಃ ಕಾಷ್ಠಾದಗ್ನಿರ್ಯಥೈವ ಚ।
12238015c ತಥೈವ ವಿದುಷಾಂ ಜ್ಞಾನಂ ಪುತ್ರಹೇತೋಃ ಸಮುದ್ಧೃತಮ್।
12238015e ಸ್ನಾತಕಾನಾಮಿದಂ ಶಾಸ್ತ್ರಂ ವಾಚ್ಯಂ ಪುತ್ರಾನುಶಾಸನಮ್।।
ಮೊಸರನ್ನು ಕಡೆದು ಬೆಣ್ಣೆಯನ್ನು ತೆಗೆಯುವಂತೆ ಮತ್ತು ಕಟ್ಟಿಗೆಯಿಂದ ಅಗ್ನಿಯನ್ನು ಹೊರಡಿಸುವಂತೆ ಮಗನಿಗಾಗಿ ನಾನು ವಿದ್ವಾಂಸರ ಈ ಜ್ಞಾನವನ್ನು ಸಂಗ್ರಹಿಸಿದ್ದೇನೆ. ಪುತ್ರ! ಈ ಶಾಸ್ತ್ರವನ್ನು ಸ್ನಾತಕರಿಗೆ ಹೇಳಿ ಉಪದೇಶಿಸಬೇಕು.
12238016a ತದಿದಂ ನಾಪ್ರಶಾಂತಾಯ ನಾದಾಂತಾಯಾತಪಸ್ವಿನೇ।
12238016c ನಾವೇದವಿದುಷೇ ವಾಚ್ಯಂ ತಥಾ ನಾನುಗತಾಯ ಚ।।
12238017a ನಾಸೂಯಕಾಯಾನೃಜವೇ ನ ಚಾನಿರ್ದಿಷ್ಟಕಾರಿಣೇ।
12238017c ನ ತರ್ಕಶಾಸ್ತ್ರದಗ್ಧಾಯ ತಥೈವ ಪಿಶುನಾಯ ಚ।।
ಪ್ರಶಾಂತನಾಗಿರದವನಿಗೆ, ದಾಂತನಾಗಿಲ್ಲದವನಿಗೆ, ತಪಸ್ವಿಯಾಗಿಲ್ಲದವನಿಗೆ, ವೇದವಿದುಷನಾಗಿರದವನಿಗೆ, ವಿಧೇಯನಾಗಿಲ್ಲದಿರುವವನಿಗೆ, ಅಸೂಯೆಯಿರುವವನಿಗೆ, ಸರಳತೆಯಿಲ್ಲದಿರುವವನಿಗೆ, ಹೇಳಿದುದನ್ನು ಮಾಡದಿರುವವನಿಗೆ, ತರ್ಕಶಾಸ್ತ್ರದಲ್ಲಿಯೇ ಮುಳುಗಿದವನಿಗೆ ಮತ್ತು ಚಾಡಿಕೋರನಿಗೆ ಇದನ್ನು ಉಪದೇಶಿಸಬಾರದು.
12238018a ಶ್ಲಾಘತೇ ಶ್ಲಾಘನೀಯಾಯ ಪ್ರಶಾಂತಾಯ ತಪಸ್ವಿನೇ।
12238018c ಇದಂ ಪ್ರಿಯಾಯ ಪುತ್ರಾಯ ಶಿಷ್ಯಾಯಾನುಗತಾಯ ಚ।
12238018e ರಹಸ್ಯಧರ್ಮಂ ವಕ್ತವ್ಯಂ ನಾನ್ಯಸ್ಮೈ ತು ಕಥಂ ಚನ।।
ಜ್ಞಾನವನ್ನು ಶ್ಲಾಘಿಸುವ, ಶ್ಲಾಘನೀಯನಾದ, ಪ್ರಶಾಂತಾತ್ಮನಾದ ತಪಸ್ವೀ ಪ್ರಿಯ ಪುತ್ರನಿಗಾಗಲೀ ವಿಧೇಯ ಶಿಷ್ಯನಾಗಲೀ ಈ ರಹಸ್ಯ ಧರ್ಮವನ್ನು ಹೇಳಬೇಕು. ಅನ್ಯರಿಗೆ ಎಂದೂ ಇದನ್ನು ಹೇಳಿಕೊಡಬಾರದು.
12238019a ಯದ್ಯಪ್ಯಸ್ಯ ಮಹೀಂ ದದ್ಯಾದ್ರತ್ನಪೂರ್ಣಾಮಿಮಾಂ ನರಃ।
12238019c ಇದಮೇವ ತತಃ ಶ್ರೇಯ ಇತಿ ಮನ್ಯೇತ ತತ್ತ್ವವಿತ್।।
ಒಂದು ವೇಳೆ ರತ್ನಪೂರ್ಣ ಈ ಮಹಿಯನ್ನೇ ಕೊಟ್ಟುಬಿಡುವ ನರನಿಗೂ ಇದೇ ಶ್ರೇಯಸ್ಕರವೆಂದು ತತ್ತ್ವವಿದುವು ತಿಳಿದುಕೊಳ್ಳಬೇಕು.
12238020a ಅತೋ ಗುಹ್ಯತರಾರ್ಥಂ ತದಧ್ಯಾತ್ಮಮತಿಮಾನುಷಮ್।
12238020c ಯತ್ತನ್ಮಹರ್ಷಿಭಿರ್ದೃಷ್ಟಂ ವೇದಾಂತೇಷು ಚ ಗೀಯತೇ।
12238020e ತತ್ತೇಽಹಂ ಸಂಪ್ರವಕ್ಷ್ಯಾಮಿ ಯನ್ಮಾಂ ತ್ವಂ ಪರಿಪೃಚ್ಚಸಿ।।
ನೀನು ನನ್ನನ್ನು ಕೇಳಿರುವ, ಇದಕ್ಕಿಂತಲೂ ಗುಹ್ಯತರವಾದ, ಮಹರ್ಷಿಗಳು ಕಂಡುಕೊಂಡಿರುವ, ವೇದಾಂತಗಳಲ್ಲಿ ಹಾಡಿರುವ ಆ ಅತಿಮಾನುಷ ಅಧ್ಯಾತ್ಮವನ್ನು ನಿನಗೆ ಹೇಳುತ್ತೇನೆ.”