ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 237
ಸಾರ
ಸಂನ್ಯಾಸಿಯ ಆಚರಣೆಗಳು ಮತ್ತು ಜ್ಞಾನವಂತ ಸಂನ್ಯಾಸಿಯ ಪ್ರಶಂಸೆ (1-36).
12237001 ಶುಕ ಉವಾಚ।
12237001a ವರ್ತಮಾನಸ್ತಥೈವಾತ್ರ ವಾನಪ್ರಸ್ಥಾಶ್ರಮೇ ಯಥಾ।
12237001c ಯೋಕ್ತವ್ಯೋಽತ್ಮಾ ಯಥಾ ಶಕ್ತ್ಯಾ ಪರಂ ವೈ ಕಾಂಕ್ಷತಾ ಪದಮ್।।
ಶುಕನು ಹೇಳಿದನು: “ವಾನಪ್ರಸ್ಥಾಶ್ರಮದಲ್ಲಿರುವಂತೆಯೇ ನಡೆದುಕೊಂಡಿದ್ದು ಪರಮ ಪದವನ್ನು ಬಯಸುವವನು ಯಥಾಶಕ್ತಿ ತನ್ನ ಮನಸ್ಸನ್ನು ಆತ್ಮನಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು?”
12237002 ವ್ಯಾಸ ಉವಾಚ।
12237002a ಪ್ರಾಪ್ಯ ಸಂಸ್ಕಾರಮೇತಾಭ್ಯಾಮಾಶ್ರಮಾಭ್ಯಾಂ ತತಃ ಪರಮ್।
12237002c ಯತ್ಕಾರ್ಯಂ ಪರಮಾರ್ಥಾರ್ಥಂ ತದಿಹೈಕಮನಾಃ ಶೃಣು।।
ವ್ಯಾಸನು ಹೇಳಿದನು: “ಈ ಎರಡು ಆಶ್ರಮಗಳಲ್ಲಿ1 ಸಂಸ್ಕಾರಗಳನ್ನು ಪಡೆದುಕೊಂಡ ನಂತರ ಪರಮಾರ್ಥ ಸಿದ್ಧಿಗಾಗಿ ಏನು ಮಾಡಬೇಕು ಎನ್ನುವುದನ್ನು ಏಕಮನಸ್ಕನಾಗಿ ಕೇಳು.
12237003a ಕಷಾಯಂ ಪಾಚಯಿತ್ವಾ ತು ಶ್ರೇಣಿಸ್ಥಾನೇಷು ಚ ತ್ರಿಷು।
12237003c ಪ್ರವ್ರಜೇಚ್ಚ ಪರಂ ಸ್ಥಾನಂ ಪರಿವ್ರಜ್ಯಾಮನುತ್ತಮಾಮ್।।
ಹಿಂದಿನ ಮೂರು ಮೆಟ್ಟಿಲುಗಳಲ್ಲಿ ದೋಷಗಳನ್ನು ಬೇಯಿಸಿ ಸಂನ್ಯಾಸವೆಂಬ ಅನುತ್ತಮ ಪರಮ ಸ್ಥಾನಕ್ಕೆ ಏರಬೇಕು.
12237004a ತದ್ಭವಾನೇವಮಭ್ಯಸ್ಯ ವರ್ತತಾಂ ಶ್ರೂಯತಾಂ ತಥಾ।
12237004c ಏಕ ಏವ ಚರೇನ್ನಿತ್ಯಂ ಸಿದ್ಧ್ಯರ್ಥಮಸಹಾಯವಾನ್।।
ಅದರ ಕುರಿತು ಕೇಳು. ಅಧ್ಯಯನ ಮಾಡು ಮತ್ತು ಹಾಗೆಯೇ ನಡೆದುಕೋ. ಸಿದ್ಧಿಗೆ ಯಾರ ಸಹಾಯವನ್ನೂ ಪಡೆಯದೇ ನಿತ್ಯವೂ ಏಕಾಕಿಯಾಗಿರಬೇಕು.
12237005a ಏಕಶ್ಚರತಿ ಯಃ ಪಶ್ಯನ್ನ ಜಹಾತಿ ನ ಹೀಯತೇ।
12237005c ಅನಗ್ನಿರನಿಕೇತಃ ಸ್ಯಾದ್ ಗ್ರಾಮಮನ್ನಾರ್ಥಮಾಶ್ರಯೇತ್।।
ಏಕಾಕಿಯಾಗಿರುವವನು ಯಾರನ್ನೂ ತ್ಯಜಿಸುವುದಿಲ್ಲ. ಯಾರಿಂದಲೂ ತ್ಯಜಿಸಲ್ಪಡುವುದಿಲ್ಲ. ಅಗ್ನಿಗಳಿಲ್ಲದ ಮತ್ತು ಮನೆಯಿಲ್ಲದ ಅವನು ಅನ್ನಕ್ಕಾಗಿ ಮಾತ್ರ ಗ್ರಾಮವನ್ನು ಆಶ್ರಯಿಸಬೇಕು.
12237006a ಅಶ್ವಸ್ತನವಿಧಾನಃ ಸ್ಯಾನ್ಮುನಿರ್ಭಾವಸಮನ್ವಿತಃ।
12237006c ಲಘ್ವಾಶೀ ನಿಯತಾಹಾರಃ ಸಕೃದನ್ನನಿಷೇವಿತಾ।।
ನಾಳೆಗೆಂದು ಏನನ್ನೂ ಇಟ್ಟುಕೊಳ್ಳಬಾರದು. ಮುನಿಯ ಭಾವವನ್ನು ಹೊಂದಿರಬೇಕು. ಸ್ವಲ್ಪವೇ ತಿನ್ನಬೇಕು. ನಿಯತಾಹಾರಿಯಾಗಿರಬೇಕು. ದಿನದಲ್ಲಿ ಒಂದೇ ಬಾರಿ ತಿನ್ನಬೇಕು.
12237007a ಕಪಾಲಂ ವೃಕ್ಷಮೂಲಾನಿ ಕುಚೇಲಮಸಹಾಯತಾ।
12237007c ಉಪೇಕ್ಷಾ ಸರ್ವಭೂತಾನಾಮೇತಾವದ್ಭಿಕ್ಷುಲಕ್ಷಣಮ್।।
ಭಿಕ್ಷಾಪಾತ್ರೆ, ವೃಕ್ಷಗಳ ಬುಡದಲ್ಲಿ ವಾಸ, ಹಳೆಯ ಬಟ್ಟೆಯನ್ನು ಉಟ್ಟಿರುವುದು, ಯಾರ ಸಹಾಯವೂ ಇಲ್ಲದಿರುವುದು, ಸರ್ವಭೂತಗಳ ಕುರಿತೂ ಉಪೇಕ್ಷೆ – ಇವು ಭಿಕ್ಷುವಿನ ಲಕ್ಷಣಗಳು.
12237008a ಯಸ್ಮಿನ್ವಾಚಃ ಪ್ರವಿಶಂತಿ ಕೂಪೇ ಪ್ರಾಪ್ತಾಃ ಶಿಲಾ2 ಇವ।
12237008c ನ ವಕ್ತಾರಂ ಪುನರ್ಯಾಂತಿ ಸ ಕೈವಲ್ಯಾಶ್ರಮೇ ವಸೇತ್।।
ಬಾವಿಗೆ ಎಸೆದ ಕಲ್ಲು ಹೇಗೆ ಹಿಂದಿರುಗಿ ಬರುವುದಿಲ್ಲವೋ ಹಾಗೆ ಅವನಿಗಾಡಿದ ಮಾತುಗಳನ್ನು ಆಡಿದವನಿಗೆ ಪುನಃ ಹಿಂದಿರುಗಿಸದೇ ಇರುವಂಥವನು ಕೈವಲ್ಯಾಶ್ರಮದಲ್ಲಿ ವಾಸಿಸಬೇಕು.
12237009a ನೈವ ಪಶ್ಯೇನ್ನ ಶೃಣುಯಾದವಾಚ್ಯಂ ಜಾತು ಕಸ್ಯ ಚಿತ್।
12237009c ಬ್ರಾಹ್ಮಣಾನಾಂ ವಿಶೇಷೇಣ ನೈವ ಬ್ರೂಯಾತ್ಕಥಂ ಚನ।।
ಅವನು ಇತರರನ್ನು ನೋಡುವುದಿಲ್ಲ. ಇತರರ ಮಾತನ್ನು ಕೇಳುವುದಿಲ್ಲ. ಅವಾಚ್ಯವಾದುದನ್ನು, ಅದರಲ್ಲೂ ವಿಶೇಷವಾಗಿ ಬ್ರಾಹ್ಮಣರಿಗೆ, ಎಂದೂ ನುಡಿಯುವುದಿಲ್ಲ.
12237010a ಯದ್ ಬ್ರಾಹ್ಮಣಸ್ಯ ಕುಶಲಂ ತದೇವ ಸತತಂ ವದೇತ್।
12237010c ತೂಷ್ಣೀಮಾಸೀತ ನಿಂದಾಯಾಂ ಕುರ್ವನ್ಭೇಷಜಮಾತ್ಮನಃ।।
ಬ್ರಾಹ್ಮಣರಿಗೆ ಕುಶಲವಾದುದನ್ನೇ ಸತತವೂ ಮಾತನಾಡಬೇಕು. ನಿಂದೆಯ ಮಾತುಗಳನ್ನು ಕೇಳಿದಾಗ ಸುಮ್ಮನಿದ್ದು ಮನಸ್ಸಿಗೆ ಚಿಕೆತ್ಸೆಮಾಡಿಕೊಳ್ಳಬೇಕು.
12237011a ಯೇನ ಪೂರ್ಣಮಿವಾಕಾಶಂ ಭವತ್ಯೇಕೇನ ಸರ್ವದಾ।
12237011c ಶೂನ್ಯಂ ಯೇನ ಜನಾಕೀರ್ಣಂ ತಂ ದೇವಾ ಬ್ರಾಹ್ಮಣಂ ವಿದುಃ।।
ಸರ್ವದಾ ಒಬ್ಬಂಟಿಗನಾಗಿದ್ದರೂ ಪೂರ್ಣ ಆಕಾಶದಂತಿರುವ ಮತ್ತು ಜನರಿಂದ ತುಂಬಿರುವ ಸ್ಥಳವನ್ನೂ ಶೂನ್ಯವೆಂದು ಭಾವಿಸುವವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿಯುತ್ತಾರೆ.
12237012a ಯೇನ ಕೇನ ಚಿದಾಚ್ಚನ್ನೋ ಯೇನ ಕೇನ ಚಿದಾಶಿತಃ।
12237012c ಯತ್ರಕ್ವಚನಶಾಯೀ ಚ ತಂ ದೇವಾ ಬ್ರಾಹ್ಮಣಂ ವಿದುಃ।।
ಯಾವುದು ಸಿಗುತ್ತದೆಯೋ ಅದರಿಂದಲೇ ದೇಹವನ್ನು ಮುಚ್ಚಿಕೊಳ್ಳುವ, ಯಾವುದು ಸಿಗುತ್ತದೆಯೋ ಅದನ್ನೇ ತಿನ್ನುವ, ಎಲ್ಲೆಂದರಲ್ಲಿ ಮಲಗುವವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿಯುತ್ತಾರೆ.
12237013a ಅಹೇರಿವ ಗಣಾದ್ಭೀತಃ ಸೌಹಿತ್ಯಾನ್ನರಕಾದಿವ।
12237013c ಕುಣಪಾದಿವ ಚ ಸ್ತ್ರೀಭ್ಯಸ್ತಂ ದೇವಾ ಬ್ರಾಹ್ಮಣಂ ವಿದುಃ।।
ಹಾವನ್ನು ಕಂಡು ಭಯಪಡುವವನಂತೆ ಜನಸಮುದಾಯಕ್ಕೆ ಹೆದರುವ, ನರಕಕ್ಕೆ ಭಯಪಡುವವನಂತೆ ಮೃಷ್ಟಾನ್ನ ಭೋಜನಕ್ಕೆ ಹೆದರುವ, ಮತ್ತು ಹೆಣವನ್ನು ಕಂಡು ದೂರಹೋಗುವಂತೆ ಸ್ತ್ರೀಯರನ್ನು ಕಂಡು ದೂರಹೋಗುವವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿಯುತ್ತಾರೆ.
12237014a ನ ಕ್ರುಧ್ಯೇನ್ನ ಪ್ರಹೃಷ್ಯೇಚ್ಚ ಮಾನಿತೋಽಮಾನಿತಶ್ಚ ಯಃ।
12237014c ಸರ್ವಭೂತೇಷ್ವಭಯದಸ್ತಂ ದೇವಾ ಬ್ರಾಹ್ಮಣಂ ವಿದುಃ।।
ಸಮ್ಮಾನಿತನಾದರೆ ಹರ್ಷಿಸದಿರುವ ಮತ್ತು ಅಪಮಾನಿತನಾದರೆ ಕುಪಿತನಾಗದಿರುವ ಹಾಗೂ ಸರ್ವಭೂತಗಳಿಗೂ ಅಭಯವನ್ನು ನೀಡುವವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿಯುತ್ತಾರೆ.
12237015a ನಾಭಿನಂದೇತ ಮರಣಂ ನಾಭಿನಂದೇತ ಜೀವಿತಮ್।
12237015c ಕಾಲಮೇವ ಪ್ರತೀಕ್ಷೇತ ನಿದೇಶಂ ಭೃತಕೋ ಯಥಾ।।
ಮರಣವನ್ನು ಅಭಿನಂದಿಸಬಾರದು. ಜೀವಿಕೆಯನ್ನು ಅಭಿನಂದಿಸಬಾರದು. ಒಡೆಯನ ನಿರ್ದೇಶನಕ್ಕೆ ಕಾಯುವ ಸೇವಕನಂತೆ ಕಾಲವನ್ನೇ ಪ್ರತೀಕ್ಷಿಸುತ್ತಿರಬೇಕು.
12237016a ಅನಭ್ಯಾಹತಚಿತ್ತಃ ಸ್ಯಾದನಭ್ಯಾಹತವಾಕ್ತಥಾ।
12237016c ನಿರ್ಮುಕ್ತಃ ಸರ್ವಪಾಪೇಭ್ಯೋ ನಿರಮಿತ್ರಸ್ಯ ಕಿಂ ಭಯಮ್।।
ಅನಭ್ಯಾಹತ ಚಿತ್ತನೂ, ಅನಭ್ಯಾಹತ ಮಾತುಳ್ಳವನೂ ಆಗಿರಬೇಕು. ಸರ್ವಪಾಪಗಳಿಂದಲೂ ನಿರ್ಮುಕ್ತನಾದ ನಿರಮಿತ್ರನಿಗೆ ಯಾವ ಭಯವು?
12237017a ಅಭಯಂ ಸರ್ವಭೂತೇಭ್ಯೋ ಭೂತಾನಾಮಭಯಂ ಯತಃ।
12237017c ತಸ್ಯ ದೇಹಾದ್ವಿಮುಕ್ತಸ್ಯ ಭಯಂ ನಾಸ್ತಿ ಕುತಶ್ಚನ।।
ಸರ್ವಭೂತಗಳಿಗೂ ಅಭಯನಾದ ಮತ್ತು ಭೂತಗಳಿಂದ ಅಭಯನಾದ ಆ ದೇಹಮುಕ್ತನಿಗೆ ಯಾರಿಂದಲೂ ಭಯವಿರುವುದಿಲ್ಲ.
12237018a ಯಥಾ ನಾಗಪದೇಽನ್ಯಾನಿ ಪದಾನಿ ಪದಗಾಮಿನಾಮ್।
12237018c ಸರ್ವಾಣ್ಯೇವಾಪಿಧೀಯಂತೇ ಪದಜಾತಾನಿ ಕೌಂಜರೇ।।
12237019a ಏವಂ ಸರ್ವಮಹಿಂಸಾಯಾಂ ಧರ್ಮಾರ್ಥಮಪಿಧೀಯತೇ।
12237019c ಅಮೃತಃ ಸ ನಿತ್ಯಂ ವಸತಿ ಯೋಽಹಿಂಸಾಂ ಪ್ರತಿಪದ್ಯತೇ।।
ಅನ್ಯ ಪದಗಾಮಿಗಳ ಹೆಜ್ಜೆಯ ಗುರುತುಗಳೆಲ್ಲವೂ ಆನೆಯ ಹೆಜ್ಜೆಯ ಗುರುತುಗಳಲ್ಲಿ ಮುಚ್ಚಿಹೋಗುವಂತೆ ಎಲ್ಲ ಧರ್ಮಾರ್ಥಗಳೂ ಅಹಿಂಸೆಯಲ್ಲಿ ಅಡಗಿಹೋಗುತ್ತವೆ. ನಿತ್ಯವೂ ಅಹಿಂಸೆಯನ್ನು ಪ್ರತಿಪಾದಿಸುವವನು ಅಮೃತದಲ್ಲಿ ನೆಲೆಸಿರುತ್ತಾನೆ.
12237020a ಅಹಿಂಸಕಃ ಸಮಃ ಸತ್ಯೋ ಧೃತಿಮಾನ್ನಿಯತೇಂದ್ರಿಯಃ।
12237020c ಶರಣ್ಯಃ ಸರ್ವಭೂತಾನಾಂ ಗತಿಮಾಪ್ನೋತ್ಯನುತ್ತಮಾಮ್।।
ಅಹಿಂಸಕ, ಸಮ, ಸತ್ಯ, ಧೃತಿಮಾನ್, ನಿಯತೇಂದ್ರಿಯ, ಮತ್ತು ಸರ್ವಭೂತಗಳ ಶರಣ್ಯನು ಅನುತ್ತಮ ಗತಿಯನ್ನು ಪಡೆಯುತ್ತಾನೆ.
12237021a ಏವಂ ಪ್ರಜ್ಞಾನತೃಪ್ತಸ್ಯ ನಿರ್ಭಯಸ್ಯ ಮನೀಷಿಣಃ।
12237021c ನ ಮೃತ್ಯುರತಿಗೋ ಭಾವಃ ಸ ಮೃತ್ಯುಮಧಿಗಚ್ಚತಿ।।
ಹೀಗೆ ಪ್ರಜ್ಞಾನತೃಪ್ತ ನಿರ್ಭಯ ಮನೀಷಿಣಿಯನ್ನು ಮೃತ್ಯುವೂ ಅತಿಕ್ರಮಿಸಿ ಹೋಗುವುದಿಲ್ಲ. ಅವನೇ ಮೃತ್ಯುವನ್ನು ಅತಿಕ್ರಮಿಸುತ್ತಾನೆ.
12237022a ವಿಮುಕ್ತಂ ಸರ್ವಸಂಗೇಭ್ಯೋ ಮುನಿಮಾಕಾಶವತ್ ಸ್ಥಿತಮ್।
12237022c ಅಸ್ವಮೇಕಚರಂ ಶಾಂತಂ ತಂ ದೇವಾ ಬ್ರಾಹ್ಮಣಂ ವಿದುಃ।।
ಸರ್ವಸಂಗಗಳಿಂದ ವಿಮುಕ್ತನಾದ, ಆಕಾಶದಂತೆ ನಿರ್ಲಿಪ್ತನಾದ, ತನ್ನದೆನ್ನುವುದಿಲ್ಲದಿರುವ, ಏಕಾಕಿಯಾಗಿ ಸಂಚರಿಸುವ, ಶಾಂತ ಮುನಿಯನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿಯುತ್ತಾರೆ.
12237023a ಜೀವಿತಂ ಯಸ್ಯ ಧರ್ಮಾರ್ಥಂ ಧರ್ಮೋಽರತ್ಯರ್ಥಮೇವ ಚ3।
12237023c ಅಹೋರಾತ್ರಾಶ್ಚ ಪುಣ್ಯಾರ್ಥಂ ತಂ ದೇವಾ ಬ್ರಾಹ್ಮಣಂ ವಿದುಃ।।
ಯಾರ ಜೀವನವು ಧರ್ಮದ ಸಲುವಾಗಿಯೇ ಇರುವುದೋ, ಯಾರ ಧರ್ಮವು ಅರ್ಥಕ್ಕಾಗಿಲ್ಲವೋ, ಮತ್ತು ಹಗಲು-ರಾತ್ರಿಗಳನ್ನು ಪುಣ್ಯಕರ್ಮಗಳಲ್ಲಿ ತೊಡಗಿಸಿರುವವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿಯುತ್ತಾರೆ.
12237024a ನಿರಾಶಿಷಮನಾರಂಭಂ ನಿರ್ನಮಸ್ಕಾರಮಸ್ತುತಿಮ್।
12237024c ಅಕ್ಷೀಣಂ ಕ್ಷೀಣಕರ್ಮಾಣಂ ತಂ ದೇವಾ ಬ್ರಾಹ್ಮಣಂ ವಿದುಃ।।
ಆಸೆಗಳಿಲ್ಲದ, ಕರ್ಮಗಳನ್ನು ಆರಂಭಿಸದ, ನಮಸ್ಕಾರಗಳಿಲ್ಲದ, ಸ್ತುತಿಗಳಿಲ್ಲದ, ಕ್ಷೀಣಿಸದ, ಕರ್ಮಗಳನ್ನು ಕ್ಷೀಣಿಸಿಕೊಂಡಿರುವವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿಯುತ್ತಾರೆ.
12237025a ಸರ್ವಾಣಿ ಭೂತಾನಿ ಸುಖೇ ರಮಂತೇ ಸರ್ವಾಣಿ ದುಃಖಸ್ಯ ಭೃಶಂ ತ್ರಸಂತಿ।
12237025c ತೇಷಾಂ ಭಯೋತ್ಪಾದನಜಾತಖೇದಃ ಕುರ್ಯಾನ್ನ ಕರ್ಮಾಣಿ ಹಿ ಶ್ರದ್ದಧಾನಃ।।
ಸರ್ವಭೂತಗಳೂ ಸುಖದಲ್ಲಿ ರಮಿಸುತ್ತವೆ. ಎಲ್ಲವೂ ದುಃಖಗಳಿಗೆ ಅತಿಯಾಗಿ ಹೆದರುತ್ತವೆ. ಶ್ರದ್ದಧಾನನು ಭಯೋತ್ಪಾದನದಿಂದ ಖೇದಗೊಳ್ಳುವ ಕರ್ಮಗಳನ್ನು ಮಾಡಬಾರದು.
12237026a ದಾನಂ ಹಿ ಭೂತಾಭಯದಕ್ಷಿಣಾಯಾಃ ಸರ್ವಾಣಿ ದಾನಾನ್ಯಧಿತಿಷ್ಠತೀಹ।
12237026c ತೀಕ್ಷ್ಣಾಂ ತನುಂ ಯಃ ಪ್ರಥಮಂ ಜಹಾತಿ ಸೋಽನಂತಮಾಪ್ನೋತ್ಯಭಯಂ ಪ್ರಜಾಭ್ಯಃ।।
ಭೂತಗಳಿಗೆ ಅಭಯರೂಪದ ದಕ್ಷಿಣೆಯನ್ನು ಕೊಡುವ ದಾನವೇ ಇಲ್ಲಿ ಎಲ್ಲ ದಾನಗಳಿಗಿಂತಲೂ ಮಿಗಿಲಾದುದು. ಮೊಟ್ಟಮೊದಲು ತನ್ನ ತೀಕ್ಷ್ಣತೆಯನ್ನು ತ್ಯಜಿಸುವವನು ಪ್ರಜೆಗಳಿಗೆ ಅನಂತ ಅಭಯವನ್ನು ನೀಡುತ್ತಾನೆ.
12237027a ಉತ್ತಾನ ಆಸ್ಯೇನ ಹವಿರ್ಜುಹೋತಿ ಲೋಕಸ್ಯ ನಾಭಿರ್ಜಗತಃ ಪ್ರತಿಷ್ಠಾ।
12237027c ತಸ್ಯಾಂಗಮಂಗಾನಿ ಕೃತಾಕೃತಂ ಚ ವೈಶ್ವಾನರಃ ಸರ್ವಮೇವ ಪ್ರಪೇದೇ।।
ಮೇಲ್ಮುಖನಾಗಿ ಬಾಯಿಯಿಂದಲೇ ಹವಿಸ್ಸನ್ನು ಸ್ವೀಕರಿಸಿ ಹೋಮಮಾಡಿಕೊಳ್ಳುತ್ತಾನೆ. ಲೋಕದ ನಾಭಿಯಾಗಿರುವ, ಜಗತ್ತಿನ ನೆಲೆಯಾಗಿರುವ, ಜಗತ್ತಿನ ಅಂಗ-ಪ್ರತ್ಯಂಗಗಳೂ, ಕಾರ್ಯ-ಕಾರಣವೂ ಆಗಿರುವ ವೈಶ್ವಾನರನಾಗಿ ಎಲ್ಲವನ್ನೂ ಹೊಂದುತ್ತಾನೆ.
12237028a ಪ್ರಾದೇಶಮಾತ್ರೇ ಹೃದಿ ನಿಶ್ರಿತಂ ಯತ್ ತಸ್ಮಿನ್ ಪ್ರಾಣಾನಾತ್ಮಯಾಜೀ ಜುಹೋತಿ।
12237028c ತಸ್ಯಾಗ್ನಿಹೋತ್ರಂ ಹುತಮಾತ್ಮಸಂಸ್ಥಂ ಸರ್ವೇಷು ಲೋಕೇಷು ಸದೈವತೇಷು।।
ಆತ್ಮಯಾಜಿಯು ನಾಭಿಯಿಂದ ಹೃದಯದವರೆಗಿನ ಪ್ರದೇಶವನ್ನು ಆಶ್ರಯಿಸಿರುವ ವೈಶ್ವಾನರನೆಂಬ ಚೈತನ್ಯ ಜ್ಯೋತಿಯಲ್ಲಿ ಪ್ರಾಣಗಳನ್ನು ಹೋಮಮಾಡುತ್ತಾನೆ. ಆ ಪ್ರಾಣಾಗ್ನಿಹೋತ್ರವು ತನ್ನ ಶರೀರದಲ್ಲಿಯೇ ನಡೆದರೂ, ಅವನು ವಿಶ್ವಾತ್ಮಕ ವೈಶ್ವಾನರಾಗ್ನಿಯೇ ಆಗಿರುವುದರಿಂದ ಅದರ ಮೂಲಕ ಅವನು ದೇವತೆಗಳೊಂದಿಗಿನ ಸರ್ವ ಲೋಕಗಳ ಪ್ರಾಣಾಗ್ನಿಹೋತ್ರವನ್ನು ಮಾಡಿದಂತಾಗುತ್ತದೆ.
12237029a ದೈವಂ ತ್ರಿಧಾತುಂ ತ್ರಿವೃತಂ ಸುಪರ್ಣಂ ಯೇ ವಿದ್ಯುರಗ್ರ್ಯಂ ಪರಮಾರ್ಥತಾಂ ಚ।
12237029c ತೇ ಸರ್ವಲೋಕೇಷು ಮಹೀಯಮಾನಾ ದೇವಾಃ ಸಮರ್ಥಾಃ ಸುಕೃತಂ ವ್ರಜಂತಿ4।।
ವಾತ-ಪಿತ್ತ-ಕಫಗಳೆಂಬ ಮೂರು ಧಾತುಗಳಿಂದ ಕೂಡಿದ ಮತ್ತು ಸತ್ತ್ವ-ರಜಸ್-ತಮೋಗುಣಗಳಿಂದ ಆವೃತನಾದ ಸುಪರ್ಣರೂಪೀ ಶ್ರೇಷ್ಠ ಪರಮಾರ್ಥಸ್ವರೂಪವನ್ನು ತಿಳಿದವನು ಸರ್ವಲೋಕಗಳ ಗೌರವಕ್ಕೆ ಪಾತ್ರನಾಗುತ್ತಾನೆ ಮತ್ತು ಸಮರ್ಥ ದೇವತೆಗಳೂ ಅವನ ಸುಕೃತವನ್ನು ಹೊಗಳುತ್ತಾರೆ.
12237030a ವೇದಾಂಶ್ಚ ವೇದ್ಯಂ ಚ ವಿಧಿಂ ಚ ಕೃತ್ಸ್ನಮ್ ಅಥೋ ನಿರುಕ್ತಂ ಪರಮಾರ್ಥತಾಂ ಚ।
12237030c ಸರ್ವಂ ಶರೀರಾತ್ಮನಿ ಯಃ ಪ್ರವೇದ ತಸ್ಮೈ ಸ್ಮ ದೇವಾಃ ಸ್ಪೃಹಯಂತಿ ನಿತ್ಯಮ್।।
ವೇದಗಳು, ವೇದ್ಯ, ವಿಧಿ, ವೇದಶಬ್ದಾರ್ಥಗಳು ಮತ್ತು ಪರಬ್ರಹ್ಮತತ್ತ್ವ – ಎಲ್ಲವೂ ತನ್ನ ಶರೀರದಲ್ಲಿರುವುದನ್ನು ತಿಳಿದುಕೊಂಡಿರುವವನನ್ನು ದೇವತೆಗಳೂ ನೋಡಬಯಸುತ್ತಾರೆ.
12237031a ಭೂಮಾವಸಕ್ತಂ ದಿವಿ ಚಾಪ್ರಮೇಯಂ ಹಿರಣ್ಮಯಂ ಯೋಽಂಡಜಮಂಡಮಧ್ಯೇ।
12237031c ಪತತ್ರಿಣಂ ಪಕ್ಷಿಣಮಂತರಿಕ್ಷೇ ಯೋ ವೇದ ಭೋಗ್ಯಾತ್ಮನಿ ದೀಪ್ತರಶ್ಮಿಃ।।
ಭೂಮಿಯಲ್ಲಿ ಆಸಕ್ತನಲ್ಲದ, ದಿವಿಯಲ್ಲಿ ಅಪ್ರಮೇಯನಾಗಿರುವ, ಬ್ರಹ್ಮಾಂಡದ ಮಧ್ಯದಲ್ಲಿ ಅಂಡಜ ಹಿರಣ್ಮಯ ಪಕ್ಷಿರೂಪದ ಪರಮಾತ್ಮನನ್ನು ಭೋಗಾತ್ಮಕ ಶರೀರದ ಹೃದಯಾಕಾಶದಲ್ಲಿ ಕಾಣುವವನು ತೇಜೋಮಯ ರಶ್ಮಿಗಳಿಂದ ಪ್ರಕಾಶಿಸುತ್ತಾನೆ.
12237032a ಆವರ್ತಮಾನಮಜರಂ ವಿವರ್ತನಂ ಷಣ್ಣೇಮಿಕಂ ದ್ವಾದಶಾರಂ ಸುಪರ್ವ।
12237032c ಯಸ್ಯೇದಮಾಸ್ಯೇ ಪರಿಯಾತಿ ವಿಶ್ವಂ ತತ್ಕಾಲಚಕ್ರಂ ನಿಹಿತಂ ಗುಹಾಯಾಮ್।।
ನಿರಂತರ ತಿರುಗುತ್ತಿರುವ, ಅಜರವಾದ, ಆಯುಸ್ಸನ್ನು ಕ್ಷೀಣಿಸುತ್ತಿರುವ, ಋತುರೂಪದ ಆರು ಗುಂಭವುಳ್ಳ, ಮಾಸರೂಪದ ಹನ್ನೆರಡು ಅರೆಕಾಲುಗಳುಳ್ಳ, ದರ್ಶ-ಪೂರ್ಣಮಾಸಾದಿ ಪರ್ವಗಳುಳ್ಳ ಕಾಲಚಕ್ರವು ಬುದ್ಧಿರೂಪದ ಗುಹೆಯಲ್ಲಿ ಅಡಗಿಕೊಂಡಿದೆ. ಆ ಕಾಲಚಕ್ರಕ್ಕೆ ವಿಶ್ವವೇ ಆಹಾರರೂಪದಲ್ಲಿ ಹೋಗಿ ಬೀಳುತ್ತಿರುತ್ತದೆ.
12237033a ಯಃ ಸಂಪ್ರಸಾದಂ ಜಗತಃ ಶರೀರಂ ಸರ್ವಾನ್ಸ ಲೋಕಾನಧಿಗಚ್ಚತೀಹ।
12237033c ತಸ್ಮಿನ್ ಹುತಂ ತರ್ಪಯತೀಹ ದೇವಾಂಸ್ ತೇ ವೈ ತೃಪ್ತಾಸ್ತರ್ಪಯಂತ್ಯಾಸ್ಯಮಸ್ಯ।।
ಜಗತ್ತಿನ ಶರೀರರೂಪನಾಗಿರುವ, ಪ್ರಸನ್ನತೆಯನ್ನುಂಟುಮಾದುವ ಪರಬ್ರಹ್ಮಪರಮಾತ್ಮನು ಸರ್ವಲೋಕಗಳನ್ನು ಅತಿಕ್ರಮಿಸಿ ನಿಂತಿದ್ದಾನೆ. ಅವನಲ್ಲಿ ಮಾಡುವ ಇಂದ್ರಿಯಾದಿಗಳ ಹೋಮವು ದೇವತೆಗಳನ್ನು ತೃಪ್ತಿಗೊಳಿಸುತ್ತದೆ ಮತ್ತು ಹಾಗೆ ತೃಪ್ತರಾದ ದೇವತೆಗಳು ಅವನ ಮುಖವನ್ನು ಜ್ಞಾನಾಮೃತದಿಂದ ಸಿಂಪಡಿಸಿ ತೃಪ್ತಿಗೊಳಿಸುತ್ತಾರೆ.
12237034a ತೇಜೋಮಯೋ ನಿತ್ಯತನುಃ ಪುರಾಣೋ ಲೋಕಾನನಂತಾನಭಯಾನುಪೈತಿ।
12237034c ಭೂತಾನಿ ಯಸ್ಮಾನ್ನ ತ್ರಸಂತೇ ಕದಾ ಚಿತ್ ಸ ಭೂತೇಭ್ಯೋ ನ ತ್ರಸತೇ ಕದಾ ಚಿತ್।।
ಅಂತಹ ತೇಜೋಮಯ ನಿತ್ಯತನು ಪುರಾಣನು ಅಭಯವಾದ ಅನಂತ ಲೋಕಗಳನ್ನು ಪಡೆಯುತ್ತಾನೆ. ಯಾರಿಂದ ಯಾವ ಪ್ರಾಣಿಗಳೂ ಭಯಪಡುವುದಿಲ್ಲವೋ ಅಂಥವನು ಯಾವ ಪ್ರಾಣಿಗಳಿಗೂ ಭಯಪಡುವುದಿಲ್ಲ.
12237035a ಅಗರ್ಹಣೀಯೋ ನ ಚ ಗರ್ಹತೇಽನ್ಯಾನ್ ಸ ವೈ ವಿಪ್ರಃ ಪರಮಾತ್ಮಾನಮೀಕ್ಷೇತ್।
12237035c ವಿನೀತಮೋಹೋ ವ್ಯಪನೀತಕಲ್ಮಷೋ ನ ಚೇಹ ನಾಮುತ್ರ ಚ ಯೋಽರ್ಥಮೃಚ್ಚತಿ।।
ತಾನೂ ನಿಂದ್ಯನಾಗದೇ ಇತರರನ್ನೂ ನಿಂದಿಸಿದವನೇ ವಿಪ್ರನು. ಅವನೇ ಪರಮಾತ್ಮನನ್ನು ಕಂಡುಕೊಳ್ಳುತ್ತಾನೆ. ಮೋಹವನ್ನು ಕಳೆದುಕೊಂಡು ಕಲ್ಮಷರಹಿತನಾಗಿರುವವನು ಇಹ ಮತ್ತು ಪರಲೋಕಗಳ ಭೋಗಗಳನ್ನು ಬಯಸುವುದಿಲ್ಲ.
12237036a ಅರೋಷಮೋಹಃ ಸಮಲೋಷ್ಟಕಾಂಚನಃ ಪ್ರಹೀಣಶೋಕೋ5 ಗತಸಂಧಿವಿಗ್ರಹಃ।
12237036c ಅಪೇತನಿಂದಾಸ್ತುತಿರಪ್ರಿಯಾಪ್ರಿಯಶ್ ಚರನ್ನುದಾಸೀನವದೇಷ ಭಿಕ್ಷುಕಃ।।
ಅವನು ರೋಷ-ಮೋಹಗಳಿಲ್ಲದವನು. ಮಣ್ಣಿನ ಹೆಂಟೆ ಮತ್ತು ಚಿನ್ನವನ್ನು ಸಮಾನವಾಗಿ ಕಾಣುವವನು. ಶೋಕವನ್ನು ಕಳೆದುಕೊಂಡಿರುವವನು. ಸ್ನೇಗ-ಹಗೆಗಳಿಲ್ಲದವನು. ನಿಂದಾ-ಸ್ತುತಿಗಳನ್ನು ಲೆಕ್ಕಿಸದಿರುವವನು. ಪ್ರಿಯ-ಅಪ್ರಿಯಗಳಿಲ್ಲದವನು. ಯಾವಾಗಲೂ ಉದಾಸೀನನಾಗಿ ಸಂಚರಿಸುತ್ತಿರುವನು. ಇವನೇ ಸಂನ್ಯಾಸಿಯು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಸಪ್ತತ್ರಿಂಶಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಮೂವತ್ತೇಳನೇ ಅಧ್ಯಾಯವು.