ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 234
ಸಾರ
ಬ್ರಹ್ಮಚರ್ಯಾಶ್ರಮ ವರ್ಣನೆ (1-29).
12234001 ಶುಕ ಉವಾಚ।
12234001a ಕ್ಷರಾತ್ ಪ್ರಭೃತಿ ಯಃ ಸರ್ಗಃ ಸಗುಣಾನೀಂದ್ರಿಯಾಣಿ ಚ।
12234001c ಬುದ್ಧ್ಯೈಶ್ವರ್ಯಾಭಿಸರ್ಗಾರ್ಥಂ ಯದ್ಧ್ಯಾನಂ ಚಾತ್ಮನಃ ಶುಭಮ್।।
ಶುಕನು ಹೇಳಿದನು: “ಪ್ರಕೃತಿಯಿಂದ ಮೊದಲ್ಗೊಂಡು ಇಪ್ಪತ್ನಾಲ್ಕು ತತ್ತ್ವಾತ್ಮಕ ಸಾಧಾರಣ ಸೃಷ್ಟಿ ಮತ್ತು ವಿಷಯಯುಕ್ತ ಇಂದ್ರಿಯ ಮತ್ತು ಬುದ್ಧಿ-ಐಶ್ವರ್ಯಗಳ ಅದ್ಭುತ ಸೃಷ್ಟಿ – ಇವೆರಡೂ ಶುಭ ಆತ್ಮನದೇ ಎಂದು ಕೇಳಿದ್ದೇನೆ.
12234002a ಭೂಯ ಏವ ತು ಲೋಕೇಽಸ್ಮಿನ್ಸದ್ವೃತ್ತಿಂ ವೃತ್ತಿಹೈತುಕೀಮ್।
12234002c ಯಯಾ ಸಂತಃ ಪ್ರವರ್ತಂತೇ ತದಿಚ್ಚಾಮ್ಯನುವರ್ಣಿತಮ್।।
ಈ ಲೋಕದಲ್ಲಿರುವ ಸದ್ವೃತ್ತಿ ಮತ್ತು ಆ ಸದ್ವೃತ್ತಿಯ ಕಾರಣಗಳ ಹಾಗೂ ಸತ್ಪುರುಷರ ಸದಾಚಾರಗಳ ವರ್ಣನೆಯನ್ನು ಇನ್ನೂ ಹೆಚ್ಚು ಕೇಳಬಯಸುತ್ತೇನೆ.
12234003a ವೇದೇ ವಚನಮುಕ್ತಂ ತು ಕುರು ಕರ್ಮ ತ್ಯಜೇತಿ ಚ।
12234003c ಕಥಮೇತದ್ವಿಜಾನೀಯಾಂ ತಚ್ಚ ವ್ಯಾಖ್ಯಾತುಮರ್ಹಸಿ।।
ವೇದಗಳು ಕರ್ಮವನ್ನು ಮಾಡು ಮತ್ತು ಕರ್ಮವನ್ನು ತ್ಯಜಿಸು ಈ ಎರಡೂ ವಾಕ್ಯಗಳನ್ನು ಹೇಳುತ್ತವೆ. ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಬಿಡಬೇಕು ಎನ್ನುವುದನ್ನು ಹೇಗೆ ತಿಳಿದುಕೊಳ್ಳಬೇಕು1? ಅದರ ಕುರಿತು ವಿವರಿಸಬೇಕು.
12234004a ಲೋಕವೃತ್ತಾಂತತತ್ತ್ವಜ್ಞಃ ಪೂತೋಽಹಂ ಗುರುಶಾಸನಾತ್।
12234004c ಕೃತ್ವಾ ಬುದ್ಧಿಂ ವಿಯುಕ್ತಾತ್ಮಾ ತ್ಯಕ್ಷ್ಯಾಮ್ಯಾತ್ಮಾನಮವ್ಯಥಃ।।
ಗುರುವಿನ ಉಪದೇಶದಿಂದ ನಾನು ಪವಿತ್ರನಾಗಿದ್ದೇನೆ. ಲೋಕವೃತ್ತಾಂತದ ತತ್ತ್ವಗಳನ್ನು ತಿಳಿದುಕೊಂಡಿದ್ದೇನೆ. ಬುದ್ಧಿಯ ಮೂಲಕ ಆತ್ಮನನ್ನು ಶರೀರದಿಂದ ಬೇರ್ಪಡಿಸಿ, ಆ ಅವ್ಯಯನನ್ನು ಪಡೆದುಕೊಳ್ಳುತ್ತೇನೆ.”
12234005 ವ್ಯಾಸ ಉವಾಚ।
12234005a ಯೈಷಾ ವೈ ವಿಹಿತಾ ವೃತ್ತಿಃ ಪುರಸ್ತಾದ್ಬ್ರಹ್ಮಣಾ ಸ್ವಯಮ್।
12234005c ಏಷಾ ಪೂರ್ವತರೈಃ ಸದ್ಭಿರಾಚೀರ್ಣಾ ಪರಮರ್ಷಿಭಿಃ।।
ವ್ಯಾಸನು ಹೇಳಿದನು: “ಹಿಂದೆ ಸ್ವಯಂ ಬ್ರಹ್ಮನು ಯಾವ ಆಚಾರ-ವ್ಯವಹಾರಗಳನ್ನು ವಿಹಿಸಿದ್ದನೋ ಅವನ್ನೇ ಹಿಂದಿನ ಸತ್ಪುರುಷರು ಮತ್ತು ಪರಮ ಋಷಿಗಳು ಆಚರಿಸುತ್ತಿದ್ದರು.
12234006a ಬ್ರಹ್ಮಚರ್ಯೇಣ ವೈ ಲೋಕಾನ್ ಜಯಂತಿ ಪರಮರ್ಷಯಃ।
12234006c ಆತ್ಮನಶ್ಚ ಹೃದಿ ಶ್ರೇಯಸ್ತ್ವನ್ವಿಚ್ಚ ಮನಸಾತ್ಮನಿ।।
ಪರಮಋಷಿಗಳು ಬ್ರಹ್ಮಚರ್ಯದಿಂದ ಲೋಕಗಳನ್ನು ಜಯಿಸಿದರು. ಮನಸ್ಸಿನ ಮೂಲಕ ಬುದ್ಧಿಯನ್ನು ಬಳಸಿ ತಮ್ಮ ಶ್ರೇಯಸ್ಸಿನ್ನು ಇಚ್ಛಿಸಿದರು.
12234007a ವನೇ ಮೂಲಫಲಾಶೀ ಚ ತಪ್ಯನ್ಸುವಿಪುಲಂ ತಪಃ।
12234007c ಪುಣ್ಯಾಯತನಚಾರೀ ಚ ಭೂತಾನಾಮವಿಹಿಂಸಕಃ।।
ವನಗಳಲ್ಲಿ ಫಲಮೂಲಗಳನ್ನು ತಿಂದುಕೊಂಡು ವಿಪುಲ ತಪಸ್ಸನ್ನು ತಪಿಸಿ ತೀರ್ಥಕ್ಷೇತ್ರಗಳಲ್ಲಿ ಸಂಚರಿಸುತ್ತಾ ಭೂತಗಳಿಗೆ ಅಹಿಂಸಕರಾಗಿರಬೇಕು.
12234008a ವಿಧೂಮೇ ಸನ್ನಮುಸಲೇ ವಾನಪ್ರಸ್ಥಪ್ರತಿಶ್ರಯೇ।
12234008c ಕಾಲೇ ಪ್ರಾಪ್ತೇ ಚರನ್ ಭೈಕ್ಷಂ ಕಲ್ಪತೇ ಬ್ರಹ್ಮಭೂಯಸೇ।।
ಮನೆಯಲ್ಲಿ ಹೊಗೆಯು ಕಾಣದೇ ಇರುವಾಗ ಮತ್ತು ಒನಕೆಯ ಶಬ್ದವು ಕೇಳದೇ ಇರುವಾಗ ಭಿಕ್ಷೆಯನ್ನು ಬೇಡಿ ಜೀವಿಸುವ ವಾನಪ್ರಸ್ಥಾಶ್ರಮಿಯು ಕಾಲಪ್ರಾಪ್ತವಾದಾಗ ಬ್ರಹ್ಮಭಾವವನ್ನು ಹೊಂದುತ್ತಾನೆ.
12234009a ನಿಃಸ್ತುತಿರ್ನಿರ್ನಮಸ್ಕಾರಃ ಪರಿತ್ಯಜ್ಯ ಶುಭಾಶುಭೇ।
12234009c ಅರಣ್ಯೇ ವಿಚರೈಕಾಕೀ ಯೇನ ಕೇನ ಚಿದಾಶಿತಃ।।
ಯಾರ ಸ್ತುತಿಯನ್ನೂ ಮಾಡದೇ, ಯಾರಿಗೂ ನಮಸ್ಕರಿಸದೇ, ಶುಭಾಶುಭಗಳನ್ನು ಪರಿತ್ಯಜಿಸಿ, ಅರಣ್ಯದಲ್ಲಿ ಏಕಾಕಿಯಾಗಿ ಸಂಚರಿಸುತ್ತಾ ಯಾರಿಂದ ಏನನ್ನೂ ಆಶಿಸಬಾರದು.”
12234010 ಶುಕ ಉವಾಚ।
12234010a ಯದಿದಂ ವೇದವಚನಂ ಲೋಕವಾದೇ ವಿರುಧ್ಯತೇ।
12234010c ಪ್ರಮಾಣೇ ಚಾಪ್ರಮಾಣೇ ಚ ವಿರುದ್ಧೇ ಶಾಸ್ತ್ರತಾ ಕುತಃ।।
ಶುಕನು ಹೇಳಿದನು: “ಲೋಕವಾದದ ಪ್ರಕಾರ ವೇದವಚನಗಳು ಒಂದಕ್ಕೊಂದು ವಿರೋಧಿಸುವಂತಿವೆ. ಇವಕ್ಕೆ ಪ್ರಮಾಣವಿರಲಿ ಅಥವಾ ಪ್ರಮಾಣವಿಲ್ಲದಿರಲಿ, ಶಾಸ್ತ್ರತಃ ಇವು ವಿರುದ್ಧವಾಗಿರಲು ಹೇಗೆ ಸಾಧ್ಯ?
12234011a ಇತ್ಯೇತಚ್ಚ್ರೋತುಮಿಚ್ಚಾಮಿ ಭಗವಾನ್ ಪ್ರಬ್ರವೀತು ಮೇ।
12234011c ಕರ್ಮಣಾಮವಿರೋಧೇನ ಕಥಮೇತತ್ ಪ್ರವರ್ತತೇ।।
ಭಗವನ್! ಇದನ್ನು ಕೇಳಬಯಸುತ್ತೇನೆ. ನನಗೆ ಹೇಳಬೇಕು. ಶಾಸ್ತ್ರಗಳಲ್ಲಿ ಹೇಳಿರುವ ಕರ್ಮಗಳನ್ನು ವಿರೋಧಿಸದೇ ಹೇಗೆ ನಡೆದುಕೊಳ್ಳಬೇಕು?””
12234012 ಭೀಷ್ಮ ಉವಾಚ।
12234012a ಇತ್ಯುಕ್ತಃ ಪ್ರತ್ಯುವಾಚೇದಂ ಗಂಧವತ್ಯಾಃ ಸುತಃ ಸುತಮ್।
12234012c ಋಷಿಸ್ತತ್ಪೂಜಯನ್ವಾಕ್ಯಂ ಪುತ್ರಸ್ಯಾಮಿತತೇಜಸಃ।।
ಭೀಷ್ಮನು ಹೇಳಿದನು: “ಇದನ್ನು ಕೇಳಿದ ಗಂಧವತಿಯ ಸುತ ಋಷಿಯು ಅಮಿತ ತೇಜಸ್ವೀ ಮಗನ ಮಾತನ್ನು ಗೌರವಿಸುತ್ತಾ ಸುತನಿಗೆ ಹೇಳಿದನು.
12234013a ಗೃಹಸ್ಥೋ ಬ್ರಹ್ಮಚಾರೀ ಚ ವಾನಪ್ರಸ್ಥೋಽಥ ಭಿಕ್ಷುಕಃ।
12234013c ಯಥೋಕ್ತಕಾರಿಣಃ ಸರ್ವೇ ಗಚ್ಚಂತಿ ಪರಮಾಂ ಗತಿಮ್।।
ಗೃಹಸ್ಥ, ಬ್ರಹ್ಮಚಾರಿ, ವಾನಪ್ರಸ್ಥ ಮತ್ತು ಸಂನ್ಯಾಸಿ – ಇವರೆಲ್ಲರೂ ತಮ್ಮ ತಮ್ಮ ಆಶ್ರಮಗಳಿಗೆ ಹೇಳಿರುವ ಕರ್ಮಗಳನ್ನು ಮಾಡುವುದರಿಂದಲೇ ಪರಮ ಗತಿಯನ್ನು ಹೊಂದುತ್ತಾರೆ.
12234014a ಏಕೋ ಯ ಆಶ್ರಮಾನೇತಾನನುತಿಷ್ಠೇದ್ಯಥಾವಿಧಿ।
12234014c ಅಕಾಮದ್ವೇಷಸಂಯುಕ್ತಃ ಸ ಪರತ್ರ ಮಹೀಯತೇ।।
ರಾಗ-ದ್ವೇಷಗಳನ್ನು ತೊರೆದು ಇವುಗಳಲ್ಲಿ ಯಾವುದೇ ಒಂದು ಆಶ್ರಮದಲ್ಲಿ ಯಥಾವಿಧಿಯಾಗಿ ನಡೆದುಕೊಂಡರೆ ಅಂಥವನು ಮರಣಾನಂತರ ಮೆರೆಯುತ್ತಾನೆ.
12234015a ಚತುಷ್ಪದೀ ಹಿ ನಿಃಶ್ರೇಣೀ ಬ್ರಹ್ಮಣ್ಯೇಷಾ ಪ್ರತಿಷ್ಠಿತಾ।
12234015c ಏತಾಮಾಶ್ರಿತ್ಯ ನಿಃಶ್ರೇಣೀಂ ಬ್ರಹ್ಮಲೋಕೇ ಮಹೀಯತೇ।।
ಬ್ರಹ್ಮನಲ್ಲಿಯೇ ಪ್ರತಿಷ್ಠಿತವಾಗಿರುವ ಈ ನಾಲ್ಕು ಆಶ್ರಮಗಳು ಬ್ರಹ್ಮನನ್ನು ಸೇರಲಿಕ್ಕಿರುವ ನಾಲ್ಕು ಪಾದಗಳ ಏಣಿಯಂತೆ. ಈ ಏಣಿಯನ್ನು ಹತ್ತಿ ಹೋದವನು ಬ್ರಹ್ಮಲೋಕದಲ್ಲಿ ಮೆರೆಯುತ್ತಾನೆ.
12234016a ಆಯುಷಸ್ತು ಚತುರ್ಭಾಗಂ ಬ್ರಹ್ಮಚಾರ್ಯನಸೂಯಕಃ।
12234016c ಗುರೌ ವಾ ಗುರುಪುತ್ರೇ ವಾ ವಸೇದ್ಧರ್ಮಾರ್ಥಕೋವಿದಃ।।
ಆಯುಸ್ಸಿನ ನಾಲ್ಕನೆಯ ಒಂದು ಭಾಗವನ್ನು ಅನಸೂಯಕನಾಗಿ ಬ್ರಹ್ಮಚರ್ಯವನ್ನು ಪಾಲಿಸುತ್ತಾ ಕಳೆಯಬೇಕು. ಗುರು ಅಥವಾ ಗುರುಪುತ್ರನ ಬಳಿಯಲ್ಲಿ ವಾಸಿಸಿಕೊಂಡು ಧರ್ಮಾರ್ಥಕೋವಿದನಾಗಬೇಕು.
12234017a ಕರ್ಮಾತಿರೇಕೇಣ ಗುರೋರಧ್ಯೇತವ್ಯಂ ಬುಭೂಷತಾ।
12234017c ದಕ್ಷಿಣೋ ನಾಪವಾದೀ ಸ್ಯಾದಾಹೂತೋ ಗುರುಮಾಶ್ರಯೇತ್।।
ಕರ್ಮಗಳನ್ನು ಮುಗಿಸಿ ಅವನು ಗುರುವು ಕರೆದಾಗ ಮಾತ್ರ ಗುರುವಿನ ಬಳಿ ಹೋಗಿ ಅಧ್ಯಯನ ಮಾಡಬೇಕು. ಎಲ್ಲರ ವಿಷಯದಲ್ಲಿಯೂ ಉದಾರಿಯಾಗಿರಬೇಕು. ಯಾರ ಮೇಲೂ ಅಪವಾದವನ್ನು ಹೊರಿಸಬಾರದು.
12234018a ಜಘನ್ಯಶಾಯೀ ಪೂರ್ವಂ ಸ್ಯಾದುತ್ಥಾಯೀ ಗುರುವೇಶ್ಮನಿ।
12234018c ಯಚ್ಚ ಶಿಷ್ಯೇಣ ಕರ್ತವ್ಯಂ ಕಾರ್ಯಂ ದಾಸೇನ ವಾ ಪುನಃ।।
ಗುರುವು ಮಲಗಿದ ನಂತರ ಅವನಿಗಿಂತಲೂ ಕೆಳ ಸ್ಥಾನದಲ್ಲಿ ಮಲಗಬೇಕು. ಗುರುವು ಏಳುವುದಕ್ಕಿಂತಲೂ ಮೊದಲು ಏಳಬೇಕು. ಪುನಃ ಶಿಷ್ಯ ಅಥವಾ ದಾಸನು ಮಾಡಬೇಕಾದ ಎಲ್ಲ ಕಾರ್ಯಗಳನ್ನು ಮಾಡಬೇಕು.
12234019a ಕೃತಮಿತ್ಯೇವ ತತ್ಸರ್ವಂ ಕೃತ್ವಾ ತಿಷ್ಠೇತ ಪಾರ್ಶ್ವತಃ।
12234019c ಕಿಂಕರಃ ಸರ್ವಕಾರೀ ಚ ಸರ್ವಕರ್ಮಸು ಕೋವಿದಃ।।
ಎಲ್ಲ ಕೆಲಸಗಳನ್ನೂ ಮಾಡಿ ಮಾಡಿಯಾಯಿತು ಎಂದು ಹೇಳಿ ಗುರುವಿನ ಪಾರ್ಶ್ವದಲ್ಲಿ ನಿಂತುಕೊಳ್ಳಬೇಕು. ಎಲ್ಲ ಕರ್ಮಗಳಲ್ಲಿಯೂ ಕೋವಿದನಾಗಿ ಕಿಂಕರನಂತೆ ಎಲ್ಲವನ್ನೂ ಮಾಡಬೇಕು.
12234020a ಶುಚಿರ್ದಕ್ಷೋ ಗುಣೋಪೇತೋ ಬ್ರೂಯಾದಿಷುರಿವಾತ್ವರಃ।
12234020c ಚಕ್ಷುಷಾ ಗುರುಮವ್ಯಗ್ರೋ ನಿರೀಕ್ಷೇತ ಜಿತೇಂದ್ರಿಯಃ।।
ಶುಚಿಯೂ, ದಕ್ಷನೂ, ಗುಣವಂತನೂ ಆಗಿರಬೇಕು. ಮಾತು ಕಡಿಮೆಯಾಗಿರಬೇಕು ಮತ್ತು ಪ್ರಿಯವಾಗಿರಬೇಕು. ಜಿತೇಂದ್ರಿಯನಾಗಿ ಏಕಾಗ್ರಚಿತ್ತನಾಗಿ ಗುರುವನ್ನು ಅವ್ಯಗ್ರನಾಗಿಯೇ ನೋಡುತ್ತಿರಬೇಕು.
12234021a ನಾಭುಕ್ತವತಿ ಚಾಶ್ನೀಯಾದಪೀತವತಿ ನೋ ಪಿಬೇತ್।
12234021c ನ ತಿಷ್ಠತಿ ತಥಾಸೀತ ನಾಸುಪ್ತೇ ಪ್ರಸ್ವಪೇತ ಚ।।
ಗುರುವು ಊಟಮಾಡದಿರುವಾಗ ತಾನೂ ಊಟಮಾಡಬಾರದು. ಗುರುವು ಕುಡಿಯದಿದ್ದರೆ ತಾನೂ ಕುಡಿಯಬಾರದು. ಗುರುವು ನಿಂತಿರುವಾಗ ತಾನು ಕುಳಿತುಕೊಳ್ಳಬಾರದು. ಗುರುವು ಮಲಗದೇ ಇರುವಾಗ ತಾನೂ ಮಲಗಬಾರದು.
12234022a ಉತ್ತಾನಾಭ್ಯಾಂ ಚ ಪಾಣಿಭ್ಯಾಂ ಪಾದಾವಸ್ಯ ಮೃದು ಸ್ಪೃಶೇತ್।
12234022c ದಕ್ಷಿಣಂ ದಕ್ಷಿಣೇನೈವ ಸವ್ಯಂ ಸವ್ಯೇನ ಪೀಡಯೇತ್।।
ಗುರುವನ್ನು ನಮಸ್ಕರಿಸುವಾಗ ಎರಡೂ ಕೈಗಳನ್ನು ಮೇಲೆತ್ತಿ ಗುರುಗಳ ಎರಡೂ ಪಾದಗಳನ್ನು ಮೃದುವಾಗಿ ಮುಟ್ಟಬೇಕು. ಹಾಗೆ ಮುಟ್ಟುವಾಗ ಬಲಗೈಯಿಂದ ಗುರುವಿನ ಬಲಗಾಲನ್ನೂ ಎಡಗೈಯಿಂದ ಅವನ ಎಡಗಾಲನ್ನೂ ಒತ್ತಬೇಕು.
12234023a ಅಭಿವಾದ್ಯ ಗುರುಂ ಬ್ರೂಯಾದಧೀಷ್ವ ಭಗವನ್ನಿತಿ।
12234023c ಇದಂ ಕರಿಷ್ಯೇ ಭಗವನ್ನಿದಂ ಚಾಪಿ ಕೃತಂ ಮಯಾ।।
ಹೀಗೆ ಗುರುವಿಗೆ ನಮಸ್ಕರಿಸಿ “ಭಗವನ್! ನನಗೆ ವಿದ್ಯೆಯನ್ನು ಹೇಳಿಕೊಡಿ! ನಿಮ್ಮ ಕೆಲಸವನ್ನು ಮಾಡಿದ್ದೇನೆ. ಇನ್ನು ಬೇರೆ ಯಾವುದಾದರೂ ಇದ್ದರೆ ಅದನ್ನೂ ಮಾಡುತ್ತೇನೆ.” ಎಂದು ಹೇಳಬೇಕು.
12234024a ಇತಿ ಸರ್ವಮನುಜ್ಞಾಪ್ಯ ನಿವೇದ್ಯ ಗುರವೇ ಧನಮ್।
12234024c ಕುರ್ಯಾತ್ಕೃತ್ವಾ ಚ ತತ್ಸರ್ವಮಾಖ್ಯೇಯಂ ಗುರವೇ ಪುನಃ।।
ಹೀಗೆ ಎಲ್ಲವನ್ನೂ ಗುರುವಿಗೆ ನಿವೇದಿಸಿ ಗುರುವಿಗೆ ಧನವನ್ನೂ ಒಪ್ಪಿಸಬೇಕು. ಮಾಡಿದ ಕೆಲಸಗಳನ್ನೆಲ್ಲಾ ನಿವೇದಿಸಿ ಪುನಃ ಕೆಲಸವನ್ನು ಹೇಳಬೇಕೆಂದು ಗುರುವಲ್ಲಿ ಕೇಳಿಕೊಳ್ಳಬೇಕು.
12234025a ಯಾಂಸ್ತು ಗಂಧಾನ್ರಸಾನ್ವಾಪಿ ಬ್ರಹ್ಮಚಾರೀ ನ ಸೇವತೇ।
12234025c ಸೇವೇತ ತಾನ್ಸಮಾವೃತ್ತ ಇತಿ ಧರ್ಮೇಷು ನಿಶ್ಚಯಃ।।
ಗಂಧಗಳನ್ನೂ ರಸಗಳನ್ನು ಬ್ರಹ್ಮಚಾರಿಯು ಸೇವಿಸಬಾರದು. ಸಮಾವರ್ತನೆಯಾದ ನಂತರ ಇವನ್ನು ಸೇವಿಸಬಹುದು ಎಂದು ಧರ್ಮ ನಿಶ್ಚಯವಿದೆ.
12234026a ಯೇ ಕೇ ಚಿದ್ವಿಸ್ತರೇಣೋಕ್ತಾ ನಿಯಮಾ ಬ್ರಹ್ಮಚಾರಿಣಃ।
12234026c ತಾನ್ಸರ್ವಾನನುಗೃಹ್ಣೀಯಾದ್ಭವೇಚ್ಚಾನಪಗೋ ಗುರೋಃ।।
ಬ್ರಹ್ಮಚಾರಿಯ ಏನೆಲ್ಲ ನಿಯಮಗಳನ್ನು ಶಾಸ್ತ್ರಗಳಲ್ಲಿ ಹೇಳಿವೆಯೋ ಅವೆಲ್ಲವನ್ನೂ ಪಾಲಿಸಬೇಕು. ಯಾವಾಗಲೂ ಗುರುವಿನ ಬಳಿಯೇ ಇರಬೇಕು.
12234027a ಸ ಏವಂ ಗುರವೇ ಪ್ರೀತಿಮುಪಹೃತ್ಯ ಯಥಾಬಲಮ್।
12234027c ಆಶ್ರಮೇಷ್ವಾಶ್ರಮೇಷ್ವೇವಂ ಶಿಷ್ಯೋ ವರ್ತೇತ ಕರ್ಮಣಾ।।
ಹೀಗೆ ಗುರುವಿಗೆ ಯಥಾಶಕ್ತಿ ಸೇವೆಗೈದು ಗುರುವಿನ ಪ್ರೀತಿಯನ್ನು ಗಳಿಸಬೇಕು. ಇದಾದ ನಂತರ ಶಿಷ್ಯನು ಬ್ರಹ್ಮಚರ್ಯಾಶ್ರಮವನ್ನು ಬಿಟ್ಟು ಬೇರೊಂದು ಆಶ್ರಮವನ್ನು ಪ್ರಾರಂಭಿಸಬೇಕು. ಆ ಆಶ್ರಮದಲ್ಲಿಯೂ ಧರ್ಮಾನುಸಾರವಾಗಿ ಕರ್ಮಗಳನ್ನು ಮಾಡಬೇಕು.
12234028a ವೇದವ್ರತೋಪವಾಸೇನ ಚತುರ್ಥೇ ಚಾಯುಷೋ ಗತೇ।
12234028c ಗುರವೇ ದಕ್ಷಿಣಾಂ ದತ್ತ್ವಾ ಸಮಾವರ್ತೇದ್ಯಥಾವಿಧಿ।।
ಹೀಗೆ ವೇದಾಧ್ಯಯನ, ವ್ರತ ಮತ್ತು ಉಪವಾಸಗಳಿಂದ ಆಯುಸ್ಸಿನ ನಾಲ್ಕನೆಯ ಒಂದು ಭಾಗವನ್ನು ಕಳೆದು ಗುರುವಿಗೆ ದಕ್ಷಿಣೆಯನ್ನಿತ್ತು ಯಥಾವಿಧಿಯಾಗಿ ಸಮಾವರ್ತನೆಯನ್ನು ಮಾಡಿಕೊಳ್ಳಬೇಕು.
12234029a ಧರ್ಮಲಬ್ಧೈರ್ಯುತೋ ದಾರೈರಗ್ನೀನುತ್ಪಾದ್ಯ ಧರ್ಮತಃ।
12234029c ದ್ವಿತೀಯಮಾಯುಷೋ ಭಾಗಂ ಗೃಹಮೇಧಿವ್ರತೀ ಭವೇತ್।।
ಧರ್ಮಾನುಕೂಲವಾಗಿ ದೊರೆದ ಕನ್ಯೆಯನ್ನು ಪಾಣಿಗ್ರಹಣ ಮಾಡಿಕೊಂಡು ಅವಳೊಂದಿಗೆ ಧರ್ಮತಃ ಅಗ್ನಿಗಳನ್ನು ಪ್ರತಿಷ್ಠಾಪಿಸಬೇಕು. ಹೀಗೆ ತನ್ನ ಆಯುಸ್ಸಿನ ಎರಡನೇ ಭಾಗವನ್ನು ಉತ್ತಮ ಶೀಲವ್ರತನಾಗಿ ಗೃಹಸ್ಥನಾಗಿ ಕಳೆಯಬೇಕು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಚತುಸ್ತ್ರಿಂಶಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಮೂವತ್ನಾಲ್ಕನೇ ಅಧ್ಯಾಯವು.
-
ಅಥವಾ ಕರ್ಮವನ್ನು ಮಾಡು ಅಥವಾ ಕರ್ಮವನ್ನು ತ್ಯಜಿಸು – ಇವೆರಡರಲ್ಲಿ ಯಾವುದು ಶ್ರೇಯಸ್ಕರವೆಂದು ಹೇಗೆ ತಿಳಿದುಕೊಳ್ಳಬೇಕು? ↩︎