232: ಶುಕಾನುಪ್ರಶ್ನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 232

ಸಾರ

ಯೋಗದಿಂದ ಪರಮಾತ್ಮಪ್ರಾಪ್ತಿ (1-34)

12232001 ವ್ಯಾಸ ಉವಾಚ।
12232001a ಪೃಚ್ಚತಸ್ತವ ಸತ್ಪುತ್ರ ಯಥಾವದಿಹ ತತ್ತ್ವತಃ।
12232001c ಸಾಂಖ್ಯನ್ಯಾಯೇನ ಸಂಯುಕ್ತಂ ಯದೇತತ್ಕೀರ್ತಿತಂ ಮಯಾ।।

ವ್ಯಾಸನು ಹೇಳಿದನು: “ಸತ್ಪುತ್ರ! ನೀನು ಕೇಳಿದಂತೆ ಇದೂವರೆಗೆ ನಾನು ಸಾಂಖ್ಯನ್ಯಾಯಯುಕ್ತವಾದ ತತ್ತ್ವವನ್ನು ಹೇಳಿದೆನು.

12232002a ಯೋಗಕೃತ್ಯಂ ತು ತೇ ಕೃತ್ಸ್ನಂ ವರ್ತಯಿಷ್ಯಾಮಿ ತಚ್ಚೃಣು।
12232002c ಏಕತ್ವಂ ಬುದ್ಧಿಮನಸೋರಿಂದ್ರಿಯಾಣಾಂ ಚ ಸರ್ವಶಃ।
12232002e ಆತ್ಮನೋ ಧ್ಯಾಯಿನಸ್ತಾತ ಜ್ಞಾನಮೇತದನುತ್ತಮಮ್।।

ಈಗ ಯೋಗಕೃತ್ಯವನ್ನು ಸಂಪೂರ್ಣವಾಗಿ ವರ್ಣಿಸುತ್ತೇನೆ. ಅದನ್ನು ಕೇಳು. ಮಗೂ! ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ – ಇವುಗಳೆಲ್ಲವನ್ನೂ ಏಕತ್ವಗೊಳಿಸಿ ಆತ್ಮನನ್ನು ಧ್ಯಾನಿಸುವವನು ಅನುತ್ತಮ ಜ್ಞಾನವನ್ನು ಪಡೆಯುತ್ತಾನೆ.

12232003a ತದೇತದುಪಶಾಂತೇನ ದಾಂತೇನಾಧ್ಯಾತ್ಮಶೀಲಿನಾ।
12232003c ಆತ್ಮಾರಾಮೇಣ ಬುದ್ಧೇನ ಬೋದ್ಧವ್ಯಂ ಶುಚಿಕರ್ಮಣಾ।।

ಶಾಂತನಾಗಿರುವವನು, ಇಂದ್ರಿಯಗಳನ್ನು ನಿಗ್ರಹಿಸಿರುವವನು, ಆಧ್ಯಾತ್ಮಶೀಲನು ಮತ್ತು ಆತ್ಮನಲ್ಲಿಯೇ ರಮಿಸುವ ಶುಚಿಕರ್ಮಿಯು ಯಾವುದನ್ನು ತಿಳಿಯಬೇಕೋ ಅದನ್ನು ತಿಳಿದುಕೊಳ್ಳುತ್ತಾನೆ.

12232004a ಯೋಗದೋಷಾನ್ಸಮುಚ್ಚಿದ್ಯ ಪಂಚ ಯಾನ್ಕವಯೋ ವಿದುಃ।
12232004c ಕಾಮಂ ಕ್ರೋಧಂ ಚ ಲೋಭಂ ಚ ಭಯಂ ಸ್ವಪ್ನಂ ಚ ಪಂಚಮಮ್।।

ಯೋಗಕ್ಕೆ ಸಂಬಂಧಿಸಿದಂತೆ ಐದು ದೋಷಗಳನ್ನು ಕಡಿದುಕೊಳ್ಳಬೇಕು ಎಂದು ವಿದ್ವಾಂಸರು ತಿಳಿದುಕೊಂಡಿದ್ದಾರೆ: ಕಾಮ, ಕ್ರೋಧ, ಲೋಭ, ಭಯ, ಮತ್ತು ಐದನೆಯದಾದ ನಿದ್ರೆ.

12232005a ಕ್ರೋಧಂ ಶಮೇನ ಜಯತಿ ಕಾಮಂ ಸಂಕಲ್ಪವರ್ಜನಾತ್।
12232005c ಸತ್ತ್ವಸಂಸೇವನಾದ್ಧೀರೋ ನಿದ್ರಾಮುಚ್ಚೇತ್ತುಮರ್ಹತಿ।।

ಶಾಂತಿಯು ಕ್ರೋಧವನ್ನು ಜಯಿಸುತ್ತದೆ. ಸಂಕಲ್ಪವನ್ನು ತ್ಯಜಿಸುವುದರಿಂದ ಕಾಮವನ್ನು ಜಯಿಸಬೇಕು. ಸತ್ತ್ವಗುಣವನ್ನು ಸೇವಿಸುವುದರಿಂದ ಧೀರನು ನಿದ್ರೆಯನ್ನು ಜಯಿಸಬೇಕು.

12232006a ಧೃತ್ಯಾ ಶಿಶ್ನೋದರಂ ರಕ್ಷೇತ್ಪಾಣಿಪಾದಂ ಚ ಚಕ್ಷುಷಾ।
12232006c ಚಕ್ಷುಃ ಶ್ರೋತ್ರೇ ಚ ಮನಸಾ ಮನೋ ವಾಚಂ ಚ ಕರ್ಮಣಾ।।

ಧೃತಿಯಿಂದ ಶಿಶ್ನ-ಉದರಗಳನ್ನು ರಕ್ಷಿಸಿಕೊಳ್ಳಬೇಕು. ಕಣ್ಣುಗಳಿಂದ ಕೈಕಾಲುಗಳನ್ನು ರಕ್ಷಿಸಿಕೊಳ್ಳಬೇಕು. ಮನಸ್ಸಿನಿಂದ ಕಣ್ಣು-ಕಿವಿಗಳನ್ನು ರಕ್ಷಿಸಿಕೊಳ್ಳಬೇಕು. ಮತ್ತು ಮಾತು-ಕರ್ಮಗಳಿಂದ ಮನಸ್ಸನ್ನು ರಕ್ಷಿಸಿಕೊಳ್ಳಬೇಕು.

12232007a ಅಪ್ರಮಾದಾದ್ಭಯಂ ಜಹ್ಯಾಲ್ಲೋಭಂ ಪ್ರಾಜ್ಞೋಪಸೇವನಾತ್।
12232007c ಏವಮೇತಾನ್ಯೋಗದೋಷಾನ್ ಜಯೇನ್ನಿತ್ಯಮತಂದ್ರಿತಃ।।

ಅಪ್ರಮತ್ತತೆಯಿಂದ ಭಯವನ್ನು ಜಯಿಸಬೇಕು. ಪ್ರಾಜ್ಞರ ಸೇವೆಯಿಂದ ಲೋಭವನ್ನು ಜಯಿಸಬೇಕು. ಈ ರೀತಿ ಆಲಸ್ಯರಹಿತನಾಗಿ ನಿತ್ಯವೂ ಈ ಯೋಗದೋಷಗಳನ್ನು ಜಯಿಸುತ್ತಿರಬೇಕು.

12232008a ಅಗ್ನೀಂಶ್ಚ ಬ್ರಾಹ್ಮಣಾಂಶ್ಚಾರ್ಚೇದ್ದೇವತಾಃ ಪ್ರಣಮೇತ ಚ।
12232008c ವರ್ಜಯೇದ್ರುಷಿತಾಂ ವಾಚಂ ಹಿಂಸಾಯುಕ್ತಾಂ ಮನೋನುಗಾಮ್।।

ಅಗ್ನಿಗಳನ್ನೂ ಬ್ರಾಹ್ಮಣರನ್ನೂ ಅರ್ಚಿಸಬೇಕು. ದೇವತೆಗಳಿಗೆ ನಮಸ್ಕರಿಸಬೇಕು. ಮನಸ್ಸಿಗೆ ಪೀಡೆಯನ್ನುಂಟುಮಾಡುವ ಹಿಂಸಾಯುಕ್ತ ಕಠೋರ ಮಾತುಗಳನ್ನು ವರ್ಜಿಸಬೇಕು.

12232009a ಬ್ರಹ್ಮ ತೇಜೋಮಯಂ ಶುಕ್ರಂ ಯಸ್ಯ ಸರ್ವಮಿದಂ ರಸಃ।
12232009c ಏಕಸ್ಯ ಭೂತಂ ಭೂತಸ್ಯ ದ್ವಯಂ ಸ್ಥಾವರಜಂಗಮಮ್।।

ತೇಜೋಮಯ ಬ್ರಹ್ಮನೇ ಬೀಜವು ಮತ್ತು ಎಲ್ಲದರ ರಸವು. ಸ್ಥಾವರ-ಜಂಗಮಗಳೆರಡರಲ್ಲಿಯೂ ಇರುವ ಒಂದೇ ಒಂದು ತತ್ತ್ವವು ಅವನು.

12232010a ಧ್ಯಾನಮಧ್ಯಯನಂ ದಾನಂ ಸತ್ಯಂ ಹ್ರೀರಾರ್ಜವಂ ಕ್ಷಮಾ।
12232010c ಶೌಚಮಾಹಾರಸಂಶುದ್ಧಿರಿಂದ್ರಿಯಾಣಾಂ ಚ ನಿಗ್ರಹಃ।।
12232011a ಏತೈರ್ವಿವರ್ಧತೇ ತೇಜಃ ಪಾಪ್ಮಾನಂ ಚಾಪಕರ್ಷತಿ।
12232011c ಸಿಧ್ಯಂತಿ ಚಾಸ್ಯ ಸರ್ವಾರ್ಥಾ ವಿಜ್ಞಾನಂ ಚ ಪ್ರವರ್ತತೇ।।

ಧ್ಯಾನ, ಅಧ್ಯಯನ, ದಾನ, ಸತ್ಯ, ಲಜ್ಜೆ, ಸರಳತೆ, ಕ್ಷಮೆ, ಶೌಚ, ಆಹಾರಸಂಶುದ್ಧಿ, ಮತ್ತು ಇಂದ್ರಿಯಗಳ ನಿಗ್ರಹ – ಇವು ತೇಜಸ್ಸನ್ನು ವರ್ಧಿಸುತ್ತವೆ ಮತ್ತು ಪಾಪಗಳನ್ನು ಅಪಕರ್ಷಿಸುತ್ತವೆ. ಅವನಿಗೆ ಸರ್ವಾರ್ಥಗಳೂ ಸಿದ್ಧಿಸುತ್ತವೆ ಮತ್ತು ವಿಜ್ಞಾನವೂ ಉಂಟಾಗುತ್ತದೆ.

12232012a ಸಮಃ ಸರ್ವೇಷು ಭೂತೇಷು ಲಬ್ಧಾಲಬ್ಧೇನ ವರ್ತಯನ್।
12232012c ಧುತಪಾಪ್ಮಾ ತು ತೇಜಸ್ವೀ ಲಘ್ವಾಹಾರೋ ಜಿತೇಂದ್ರಿಯಃ।
12232012e ಕಾಮಕ್ರೋಧೌ ವಶೇ ಕೃತ್ವಾ ನಿನೀಷೇದ್ ಬ್ರಹ್ಮಣಃ ಪದಮ್।।

ಸರ್ವಭೂತಗಳಲ್ಲಿಯೂ ಸಮಭಾವದಿಂದಿರಬೇಕು. ಸಿಕ್ಕಲಿ ಅಥವಾ ಸಿಕ್ಕದಿರಲಿ ಸಂತುಷ್ಟನಾಗಿರಬೇಕು. ಪಾಪಗಳನ್ನು ಕಳೆದುಕೊಂಡು ತೇಜಸ್ವಿಯಾಗಬೇಕು. ಲಘು ಆಹಾರಿಯಾಗಿಯೂ ಜಿತೇಂದ್ರಿಯನೂ ಆಗಿದ್ದು ಕಾಮ-ಕ್ರೋಧಗಳನ್ನು ವಶಪಡಿಸಿಕೊಂಡು ಬ್ರಹ್ಮಪದವಿಯನ್ನು ಹೊಂದಲು ಇಚ್ಛಿಸಬೇಕು.

12232013a ಮನಸಶ್ಚೇಂದ್ರಿಯಾಣಾಂ ಚ ಕೃತ್ವೈಕಾಗ್ರ್ಯಂ ಸಮಾಹಿತಃ।
12232013c ಪ್ರಾಗ್ರಾತ್ರಾಪರರಾತ್ರೇಷು ಧಾರಯೇನ್ಮನ ಆತ್ಮನಾ।।

ಮನಸ್ಸು ಮತ್ತು ಇಂದ್ರಿಯಗಳನ್ನು ಏಕಾಗ್ರಗೊಳಿಸಿ ರಾತ್ರಿಯ ಮೊದಲನೆಯ ಮತ್ತು ಕಡೆಯ ಯಾಮಗಳಲ್ಲಿ ಧ್ಯಾನಸ್ಥನಾಗಿ ಮನಸ್ಸನ್ನು ಆತ್ಮನಲ್ಲಿ ನೆಲೆಗೊಳಿಸಬೇಕು.

12232014a ಜಂತೋಃ ಪಂಚೇಂದ್ರಿಯಸ್ಯಾಸ್ಯ ಯದೇಕಂ ಚಿದ್ರಮಿಂದ್ರಿಯಮ್।
12232014c ತತೋಽಸ್ಯ ಸ್ರವತಿ ಪ್ರಜ್ಞಾ ದೃತೇಃ ಪಾದಾದಿವೋದಕಮ್।।

ಒಂದೇ ಸಣ್ಣ ತೂತಿದ್ದರೂ ಚರ್ಮದ ಚೀಲದಿಂದ ನೀರು ಸೋರಿಹೋಗುವಂತೆ ಮನುಷ್ಯನ ಪಂಚೇಂದ್ರಿಯಗಳಲ್ಲಿ ಒಂದೇ ಒಂದು ಇಂದ್ರಿಯವು ಛಿದ್ರವಾಗಿ ಹೋದರೂ ಮನುಷ್ಯನ ಪ್ರಜ್ಞೆಯು ಕ್ಷೀಣಿಸುತ್ತದೆ.

12232015a ಮನಸ್ತು ಪೂರ್ವಮಾದದ್ಯಾತ್ಕುಮೀನಾನಿವ ಮತ್ಸ್ಯಹಾ।
12232015c ತತಃ ಶ್ರೋತ್ರಂ ತತಶ್ಚಕ್ಷುರ್ಜಿಹ್ವಾಂ ಘ್ರಾಣಂ ಚ ಯೋಗವಿತ್।।

ಬೆಸ್ತನು ತಂಟೆಮಾಡುವ ಮೀನನ್ನು ಮೊದಲು ಹಿಡಿದು ಬುಟ್ಟಿಯಲ್ಲಿಟ್ಟುಕೊಳ್ಳುವಂತೆ ಯೋಗವಿದುವು ಮೊದಲು ಮನಸ್ಸನ್ನು ನಿಗ್ರಹಿಸಿ ವಶಪಡಿಸಿಕೊಂಡು ನಂತರ ಕಿವಿ, ಕಣ್ಣು, ನಾಲಿಗೆ ಮತ್ತು ಮೂಗನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು.

12232016a ತತ ಏತಾನಿ ಸಂಯಮ್ಯ ಮನಸಿ ಸ್ಥಾಪಯೇದ್ಯತಿಃ।
12232016c ತಥೈವಾಪೋಹ್ಯ ಸಂಕಲ್ಪಾನ್ಮನೋ ಹ್ಯಾತ್ಮನಿ ಧಾರಯೇತ್।।

ಯತಿಯು ಈ ಇಂದ್ರಿಯಗಳನ್ನು ವಶಪಡಿಸಿಕೊಂಡು ಮನಸ್ಸಿನಲ್ಲಿ ಇರಿಸಬೇಕು. ಹಾಗೆಯೇ ಸಂಕಲ್ಪಗಳನ್ನು ದೂರೀಕರಿಸಿ ಮನಸ್ಸನ್ನು ಬುದ್ಧಿಯಲ್ಲಿ ಲೀನಗೊಳಿಸಬೇಕು.

12232017a ಪಂಚ ಜ್ಞಾನೇನ ಸಂಧಾಯ ಮನಸಿ ಸ್ಥಾಪಯೇದ್ಯತಿಃ।
12232017c ಯದೈತಾನ್ಯವತಿಷ್ಠಂತೇ ಮನಃಷಷ್ಠಾನಿ ಚಾತ್ಮನಿ।
12232017e ಪ್ರಸೀದಂತಿ ಚ ಸಂಸ್ಥಾಯ ತದಾ ಬ್ರಹ್ಮ ಪ್ರಕಾಶತೇ।।

ಯತಿಯು ಪಂಚ ಜ್ಞಾನೇಂದ್ರಿಯಗಳನ್ನು ನಿಯಂತ್ರಿಸಿ ಅವುಗಳನ್ನು ಮನಸ್ಸಿನಲ್ಲಿ ಸ್ಥಾಪಿಸಬೇಕು. ಯಾವಾಗ ಆರನೆಯದಾದ ಮನಸ್ಸಿನೊಡನೆ ಇವು ಬುದ್ಧಿಯಲ್ಲಿ ಸೇರಿ ಪ್ರಸನ್ನವಾಗುವವೋ ಆಗ ಬ್ರಹ್ಮವು ಪ್ರಕಾಶಿಸುತ್ತದೆ.

12232018a ವಿಧೂಮ ಇವ ದೀಪ್ತಾರ್ಚಿರಾದಿತ್ಯ ಇವ ದೀಪ್ತಿಮಾನ್।
12232018c ವೈದ್ಯುತೋಽಗ್ನಿರಿವಾಕಾಶೇ ಪಶ್ಯತ್ಯಾತ್ಮಾನಮಾತ್ಮನಾ।
12232018e ಸರ್ವಂ ಚ ತತ್ರ ಸರ್ವತ್ರ ವ್ಯಾಪಕತ್ವಾಚ್ಚ ದೃಶ್ಯತೇ।।

ಆಗ ಅವನು ತನ್ನ ಅಂತಃಕರಣದಲ್ಲಿ ಹೊಗೆಯಿಲ್ಲದೇ ಪ್ರಜ್ವಲಿಸುವ ಅಗ್ನಿಯಂತೆ, ಪ್ರಕಾಶಮಾನ ಸೂರ್ಯನಂತೆ ಮತ್ತು ಆಕಾಶದಲ್ಲಿ ಹೊಳೆಯುವ ಮಿಂಚಿನ ಬೆಳಕಿನಂತೆ ಇರುವ ಆತ್ಮಜ್ಯೋತಿಯನ್ನು ಕಾಣುತ್ತಾನೆ.

12232019a ತಂ ಪಶ್ಯಂತಿ ಮಹಾತ್ಮಾನೋ ಬ್ರಾಹ್ಮಣಾ ಯೇ ಮನೀಷಿಣಃ।
12232019c ಧೃತಿಮಂತೋ ಮಹಾಪ್ರಾಜ್ಞಾಃ ಸರ್ವಭೂತಹಿತೇ ರತಾಃ।।

ವಿದ್ವಾಂಸರಾದ, ಧೃತಿಮಂತರಾದ ಮತ್ತು ಸರ್ವಭೂತಹಿತದಲ್ಲಿ ನಿರತರಾದ ಮಹಾಪ್ರಾಜ್ಞ ಮಹಾತ್ಮ ಬ್ರಾಹ್ಮಣರು ಅದನ್ನು ನೋಡುತ್ತಾರೆ.

12232020a ಏವಂ ಪರಿಮಿತಂ ಕಾಲಮಾಚರನ್ಸಂಶಿತವ್ರತಃ।
12232020c ಆಸೀನೋ ಹಿ ರಹಸ್ಯೇಕೋ ಗಚ್ಚೇದಕ್ಷರಸಾತ್ಮ್ಯತಾಮ್।।

ಹೀಗೆ ಪ್ರತಿದಿನವೂ ನಿಯತ ಕಾಲದವರೆಗೆ ಏಕಾಂತಸ್ಥಳದಲ್ಲಿ ಒಬ್ಬನೇ ಕುಳಿತುಕೊಂಡು ಕಠೋರವ್ರತನಿಷ್ಠನಾಗಿ ಯೋಗಾಭ್ಯಾಸವನ್ನು ಮಾಡುವ ಯೋಗಿಯು ಅಕ್ಷರಬ್ರಹ್ಮನೊಡನೆ ತಾದಾತ್ಮ್ಯವನ್ನು ಹೊಂದುತ್ತಾನೆ.

12232021a ಪ್ರಮೋಹೋ ಭ್ರಮ ಆವರ್ತೋ ಘ್ರಾಣಶ್ರವಣದರ್ಶನೇ।
12232021c ಅದ್ಭುತಾನಿ ರಸಸ್ಪರ್ಶೇ ಶೀತೋಷ್ಣೇ ಮಾರುತಾಕೃತಿಃ।।

ಯೋಗಾಭ್ಯಾಸವನ್ನು ಮುಂದುವರಿಸುವಾಗ ಮೋಹ, ಭ್ರಮೆ, ಅವರ್ತಗಳೆಂಬ ವಿಘ್ನಗಳುಂಟಾಗುತ್ತವೆ. ಅದ್ಭುತ ರಸಸ್ಪರ್ಶ, ಶೀತೋಷ್ಣ ವಾತಾವರಣಗಳ ಅನುಭವವಾಗುತ್ತವೆ.

12232022a ಪ್ರತಿಭಾಮುಪಸರ್ಗಾಂಶ್ಚಾಪ್ಯುಪಸಂಗೃಹ್ಯ ಯೋಗತಃ।
12232022c ತಾಂಸ್ತತ್ತ್ವವಿದನಾದೃತ್ಯ ಸ್ವಾತ್ಮನೈವ ನಿವರ್ತಯೇತ್।।

ದಿವ್ಯ ಪ್ರತಿಭೆಗಳು ಉಂಟಾಗುತ್ತವೆ. ದಿವ್ಯಭೋಗಗಳು ತಾವೇ ತಾವಾಗಿ ಸನ್ನಿಹಿತವಾಗುತ್ತವೆ. ಈ ಎಲ್ಲ ಸಿದ್ಧಿಗಳೂ ಯೋಗಬಲದಿಂದ ಪ್ರಾಪ್ತವಾದರೂ ಇವು ಆತ್ಮದರ್ಶನಕ್ಕೆ ವಿಘ್ನಕಾರಕಗಳೆಂದು ತಿರಸ್ಕರಿಸಿ ಆತ್ಮನಲ್ಲಿ ಮನಸ್ಸನ್ನು ಸ್ಥಿರಗೊಳಿಸಬೇಕು.

12232023a ಕುರ್ಯಾತ್ಪರಿಚಯಂ ಯೋಗೇ ತ್ರೈಕಾಲ್ಯಂ ನಿಯತೋ ಮುನಿಃ।
12232023c ಗಿರಿಶೃಂಗೇ ತಥಾ ಚೈತ್ಯೇ ವೃಕ್ಷಾಗ್ರೇಷು ಚ ಯೋಜಜೇತ್।।

ಮುನಿಯು ನಿತ್ಯವೂ ನಿಯಮದಲ್ಲಿದ್ದುಕೊಂಡು ಪರ್ವತ ಶಿಖರದಲ್ಲಾಗಲೀ, ದೇವಾಲಯದಲ್ಲಾಗಲೀ, ಅಥವಾ ಮರಗಳ ಮೇಲಾಗಲೀ ದೃಷ್ಟಿಯನ್ನು ಏಕಾಗ್ರಗೊಳಿಸಿ ದಿನಕ್ಕೆ ಮೂರು ಬಾರಿ1 ಯೋಗಾಭ್ಯಾಸವನ್ನು ಮಾಡಬೇಕು.

12232024a ಸಂನಿಯಮ್ಯೇಂದ್ರಿಯಗ್ರಾಮಂ ಗೋಷ್ಠೇ ಭಾಂಡಮನಾ ಇವ।
12232024c ಏಕಾಗ್ರಶ್ಚಿಂತಯೇನ್ನಿತ್ಯಂ ಯೋಗಾನ್ನೋದ್ವೇಜಯೇನ್ಮನಃ।।

ಹಣದ ಭಂಡಾರವನ್ನು ತುಂಬಿಸಲು ಇಚ್ಛಿಸುವವನು ಭಾಂಡಾಗಾರದಲ್ಲಿ ದ್ರವ್ಯವನ್ನು ಸಂಗ್ರಹಿಸಿ ಇಡುವಂತೆ ಯೋಗ ಸಾಧಕನು ಇಂದ್ರಿಯ ಸಮುದಾಯವನ್ನು ಮನಸ್ಸಿನೊಡನೆ ಹೃದಯಪುಂಡರೀಕದಲ್ಲಿರಿಸಿಕೊಂಡು ಆತ್ಮನನ್ನು ಏಕಾಗ್ರತೆಯಿಂದ ಧ್ಯಾನಿಸಬೇಕು. ಯೋಗದಿಂದ ಮನಸ್ಸನ್ನು ಉದ್ವೇಗಗೊಳಿಸಬಾರದು.

12232025a ಯೇನೋಪಾಯೇನ ಶಕ್ಯೇತ ಸಂನಿಯಂತುಂ ಚಲಂ ಮನಃ।
12232025c ತಂ ತಂ ಯುಕ್ತೋ ನಿಷೇವೇತ ನ ಚೈವ ವಿಚಲೇತ್ತತಃ।।

ಚಂಚಲ ಮನಸ್ಸನ್ನು ಯಾವ ಉಪಾಯದಿಂದ ನಿಯಂತ್ರಿಸಲು ಸಾಧ್ಯವಾಗುತ್ತದೆಯೋ ಆ ಉಪಾಯವನ್ನು ಬಳಸಬೇಕು. ಸಾಧನೆಯಿಂದ ವಿಚಲಿತನಾಗಬಾರದು.

12232026a ಶೂನ್ಯಾ ಗಿರಿಗುಹಾಶ್ಚೈವ ದೇವತಾಯತನಾನಿ ಚ।
12232026c ಶೂನ್ಯಾಗಾರಾಣಿ ಚೈಕಾಗ್ರೋ ನಿವಾಸಾರ್ಥಮುಪಕ್ರಮೇತ್।।

ಏಕಾಗ್ರನಾಗಿ ನಿರ್ಜನ ಗಿರಿಗುಹೆಯನ್ನೋ, ದೇವಾಲಯವನ್ನೋ, ಅಥವಾ ಶೂನ್ಯ ಗ್ರಹಗಳನ್ನೋ ನಿವಾಸಕ್ಕಾಗಿ ಆರಿಸಿಕೊಳ್ಳಬೇಕು.

12232027a ನಾಭಿಷ್ವಜೇತ್ಪರಂ ವಾಚಾ ಕರ್ಮಣಾ ಮನಸಾಪಿ ವಾ।
12232027c ಉಪೇಕ್ಷಕೋ ಯತಾಹಾರೋ ಲಬ್ಧಾಲಬ್ಧೇ ಸಮೋ ಭವೇತ್।।

ಮಾತು, ಮನಸ್ಸು ಮತ್ತು ಕರ್ಮಗಳ ಮೂಲಕ ಇತರರೊಂದಿಗೆ ಹೆಚ್ಚಾದ ಸಂಗವನ್ನು ಇಟ್ಟುಕೊಳ್ಳಬಾರದು. ಎಲ್ಲವನ್ನೂ ಉಪೇಕ್ಷಿಸಬೇಕು. ಯತಾಹಾರಿಯಾಗಿರಬೇಕು. ಸಿಕ್ಕಿದುದು ಮತ್ತು ಸಿಕ್ಕದೇ ಇರುವವುಗಳಲ್ಲಿ ಸಮನಾಗಿರಬೇಕು.

12232028a ಯಶ್ಚೈನಮಭಿನಂದೇತ ಯಶ್ಚೈನಮಪವಾದಯೇತ್।
12232028c ಸಮಸ್ತಯೋಶ್ಚಾಪ್ಯುಭಯೋರ್ನಾಭಿಧ್ಯಾಯೇಚ್ಚುಭಾಶುಭಮ್।।

ಅಭಿನಂದಿಸುವವರಲ್ಲಿ ಮತ್ತು ನಿಂದಿಸುವವರಲ್ಲಿ ಸಮಭಾವದಿಂದಿರಬೇಕು. ಹೊಗಳಿದವನಿಗೆ ಶುಭವನ್ನಾಗಲೀ ನಿಂದಿಸಿದವನಿಗೆ ಅಶುಭವನ್ನಾಗಲೀ ಕೋರಬಾರದು.

12232029a ನ ಪ್ರಹೃಷ್ಯೇತ ಲಾಭೇಷು ನಾಲಾಭೇಷು ಚ ಚಿಂತಯೇತ್।
12232029c ಸಮಃ ಸರ್ವೇಷು ಭೂತೇಷು ಸಧರ್ಮಾ ಮಾತರಿಶ್ವನಃ।।

ಲಾಭವಾದರೆ ಸಂತೋಷಪಡಬಾರದು. ನಷ್ಟವಾದರೆ ಚಿಂತಿಸಬಾರದು. ಗಾಳಿಯು ಎಲ್ಲರಲ್ಲಿಯೂ ಒಂದೇ ಸಮನಾಗಿ ನಡೆದುಕೊಳ್ಳುವಂತೆ ಸರ್ವಭೂತಗಳಲ್ಲಿ ಸಮನಾಗಿರಬೇಕು.

12232030a ಏವಂ ಸರ್ವಾತ್ಮನಃ ಸಾಧೋಃ ಸರ್ವತ್ರ ಸಮದರ್ಶಿನಃ।
12232030c ಷಣ್ಮಾಸಾನ್ನಿತ್ಯಯುಕ್ತಸ್ಯ ಶಬ್ದಬ್ರಹ್ಮಾತಿವರ್ತತೇ।।

ಹೀಗೆ ಸರ್ವಾತ್ಮನಾಗಿ ಸರ್ವತ್ರ ಸಮದರ್ಶಿಯಾಗಿ ಆರು ತಿಂಗಳು ಯೋಗಾಭ್ಯಾಸ ನಿರತನಾಗಿರುವ ಸಾಧುವಿಗೆ ಶಬ್ದಬ್ರಹ್ಮವು ಚೆನ್ನಾಗಿ ಪ್ರಕಾಶಗೊಳ್ಳುತ್ತದೆ.

12232031a ವೇದನಾರ್ತಾಃ ಪ್ರಜಾ ದೃಷ್ಟ್ವಾ ಸಮಲೋಷ್ಟಾಶ್ಮಕಾಂಚನಃ।
12232031c ಏತಸ್ಮಿನ್ನಿರತೋ ಮಾರ್ಗೇ ವಿರಮೇನ್ನ ವಿಮೋಹಿತಃ।।

ವೇದನೆಗಳಿಂದ ಆರ್ತರಾದ ಪ್ರಜೆಗಳನ್ನು ನೋಡಿ ವಿರಕ್ತನಾಗಬೇಕು. ಮಣ್ಣುಹೆಂಟೆ-ಕಲ್ಲು-ಚಿನ್ನಗಳನ್ನು ಸಮನಾಗಿ ಕಾಣಬೇಕು. ಯೋಗಮಾರ್ಗದಿಂದ ವಿರತನಾಗಬಾರದು ಮತ್ತು ಮೋಹಗೊಳ್ಳಬಾರದು.

12232032a ಅಪಿ ವರ್ಣಾವಕೃಷ್ಟಸ್ತು ನಾರೀ ವಾ ಧರ್ಮಕಾಂಕ್ಷಿಣೀ।
12232032c ತಾವಪ್ಯೇತೇನ ಮಾರ್ಗೇಣ ಗಚ್ಚೇತಾಂ ಪರಮಾಂ ಗತಿಮ್।।

ನೀಚವರ್ಣದ ಪುರುಷನಾಗಿದ್ದರೂ, ಧರ್ಮವನ್ನು ಬಯಸುವ ಸ್ತ್ರೀಯಾಗಿದ್ದರೂ ಇದೇ ಯೋಗಮಾರ್ಗವನ್ನು ಆಶ್ರಯಿಸಿ ಪರಮ ಗತಿಯನ್ನು ಪಡೆಯಬಲ್ಲರು.

12232033a ಅಜಂ ಪುರಾಣಮಜರಂ ಸನಾತನಂ ಯದಿಂದ್ರಿಯೈರುಪಲಭತೇ ನರೋಽಚಲಃ।
12232033c ಅಣೋರಣೀಯೋ ಮಹತೋ ಮಹತ್ತರಂ ತದಾತ್ಮನಾ ಪಶ್ಯತಿ ಯುಕ್ತ ಆತ್ಮವಾನ್।।

ಚಿತ್ತವನ್ನು ಜಯಿಸಿ ಯೋಗಾಭ್ಯಾಸದಲ್ಲಿ ಯುಕ್ತನಾದ ಯೋಗಿಯು ತನ್ನ ನಿಶ್ಚಲ ಇಂದ್ರಿಯಗಳು ಮತ್ತು ಬುದ್ಧಿಯ ಮೂಲಕ ಹುಟ್ಟಿಲ್ಲದವನೂ, ಸನಾತನನೂ, ಮುಪ್ಪಿಲ್ಲದವನೂ, ಅಣುವಿಗಿಂತ ಅಣುವೂ, ಮಹತ್ತಿಗಿಂತ ಮಹತ್ತರನೂ ಆದ ಪರಮಾತ್ಮನನ್ನು ಕಂಡುಕೊಳ್ಳುತ್ತಾನೆ.”

12232034a ಇದಂ ಮಹರ್ಷೇರ್ವಚನಂ ಮಹಾತ್ಮನೋ ಯಥಾವದುಕ್ತಂ ಮನಸಾನುದೃಶ್ಯ ಚ।
12232034c ಅವೇಕ್ಷ್ಯ ಚೇಯಾತ್ಪರಮೇಷ್ಠಿಸಾತ್ಮ್ಯತಾಂ ಪ್ರಯಾಂತಿ ಯಾಂ ಭೂತಗತಿಂ ಮನೀಷಿಣಃ।।

ಮಹಾತ್ಮ ಮಹರ್ಷಿಯು ಯಥಾವತ್ತಾಗಿ ಹೇಳಿದ ಈ ಮಾತನ್ನು ಮನಸಾ ವಿಚಾರಿಸಿ ಇದು ಯುಕ್ತವಾದುದೆಂದು ಭಾವಿಸಿ ಅದರಂತೆಯೇ ಯಾರು ಯೋಗಾಭ್ಯಾಸ ಮಾಡುವರೋ ಅಂಥಹ ಜ್ಞಾನಿಗಳು ಸಾಮಾನ್ಯಜೀವಿಗಳು ಹೊಂದಲು ಅಸಾಧ್ಯವಾದ ಬ್ರಹ್ಮಸಾಮ್ಯವನ್ನು ಹೊಂದುತ್ತಾರೆ.

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ದ್ವಿತ್ರಿಂಶಾಧಿಕದ್ವಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಮೂವತ್ತೆರಡನೇ ಅಧ್ಯಾಯವು.

  1. ಪ್ರಾತಃಕಾಲದಲ್ಲಿ ಹಾಗೂ ರಾತ್ರಿಯ ಮೊದಲನೇ ಮತ್ತು ಕಡೆಯ ಯಾಮಗಳಲ್ಲಿ (ಭಾರತ ದರ್ಶನ). ↩︎