231: ಶುಕಾನುಪ್ರಶ್ನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 231

ಸಾರ

ಜ್ಞಾನದ ಸಾಧನೆ ಮತ್ತು ಮಹಿಮೆ (1-34).

12231001 ಭೀಷ್ಮ ಉವಾಚ।
12231001a ಇತ್ಯುಕ್ತೋಽಭಿಪ್ರಶಸ್ಯೈತತ್ಪರಮರ್ಷೇಸ್ತು ಶಾಸನಮ್।
12231001c ಮೋಕ್ಷಧರ್ಮಾರ್ಥಸಂಯುಕ್ತಮಿದಂ ಪ್ರಷ್ಟುಂ ಪ್ರಚಕ್ರಮೇ।।

ಭೀಷ್ಮನು ಹೇಳಿದನು: “ಹೀಗೆ ಮಹರ್ಷಿಯು ಉಪದೇಶಿಸಲು ಅವನ ಶಾಸನವನ್ನು ಪ್ರಶಂಸಿಸಿ ಶುಕನು ಮೋಕ್ಷಧರ್ಮಾರ್ಥಸಂಯುಕ್ತವಾದ ಈ ಪ್ರಶ್ನೆಯನ್ನು ಕೇಳಲು ಉಪಕ್ರಮಿಸಿದನು.

12231002 ಶುಕ ಉವಾಚ।
12231002a ಪ್ರಜಾವಾನ್1 ಶ್ರೋತ್ರಿಯೋ ಯಜ್ವಾ ವೃದ್ಧಃ ಪ್ರಜ್ಞೋಽನಸೂಯಕಃ।
12231002c ಅನಾಗತಮನೈತಿಹ್ಯಂ ಕಥಂ ಬ್ರಹ್ಮಾಧಿಗಚ್ಚತಿ।।

ಶುಕನು ಹೇಳಿದನು: “ಸಂತಾನವನ್ನು ಪಡೆದ, ಶ್ರೋತ್ರೀಯನಾದ, ಯಾಜ್ಞಿಕನಾದ, ಅನಸೂಯಕನಾದ ಮತ್ತು ಶುದ್ಧ ಬುದ್ಧಿಯುಳ್ಳವನು ಇದು ಹೀಗೆ ಎಂದು ನಿಷ್ಕರ್ಷಿಸಲು ಅಸಾಧ್ಯವಾಗಿರುವ ಬ್ರಹ್ಮವನ್ನು ಹೇಗೆ ಪಡೆದುಕೊಳ್ಳುತ್ತಾನೆ?

12231003a ತಪಸಾ ಬ್ರಹ್ಮಚರ್ಯೇಣ ಸರ್ವತ್ಯಾಗೇನ ಮೇಧಯಾ।
12231003c ಸಾಂಖ್ಯೇ ವಾ ಯದಿ ವಾ ಯೋಗೇ ಏತತ್ಪೃಷ್ಟೋಽಭಿಧತ್ಸ್ವ ಮೇ।।

ಅವನು ಅದನ್ನು ತಪಸ್ಸಿನಿಂದ ಅಥವಾ ಬ್ರಹ್ಮಚರ್ಯದಿಂದ ಅಥವಾ ಸರ್ವತ್ಯಾಗದಿಂದ ಅಥವಾ ಮೇಧಾಶಕ್ತಿಯಿಂದ ಅಥವಾ ಜ್ಞಾನದಿಂದ ಅಥವಾ ಯೋಗದಿಂದ – ಯಾವುದರಿಂದ ಪಡೆದುಕೊಳ್ಳುತ್ತಾನೆ?

12231004a ಮನಸಶ್ಚೇಂದ್ರಿಯಾಣಾಂ ಚಾಪ್ಯೈಕಾಗ್ರ್ಯಂ ಸಮವಾಪ್ಯತೇ।
12231004c ಯೇನೋಪಾಯೇನ ಪುರುಷೈಸ್ತಚ್ಚ ವ್ಯಾಖ್ಯಾತುಮರ್ಹಸಿ।।

ಯಾವ ಉಪಾಯದಿಂದ ಮನುಷ್ಯನು ಮನಸ್ಸು ಮತ್ತು ಇಂದ್ರಿಯಗಳನ್ನು ಏಕಾಗ್ರಗೊಳಿಸಬಲ್ಲನು? ಇದರ ಕುರಿತು ಹೇಳಬೇಕು.”

12231005 ವ್ಯಾಸ ಉವಾಚ।
12231005a ನಾನ್ಯತ್ರ ವಿದ್ಯಾತಪಸೋರ್ನಾನ್ಯತ್ರೇಂದ್ರಿಯನಿಗ್ರಹಾತ್।
12231005c ನಾನ್ಯತ್ರ ಸರ್ವಸಂತ್ಯಾಗಾತ್ಸಿದ್ಧಿಂ ವಿಂದತಿ ಕಶ್ಚನ।।

ವ್ಯಾಸನು ಹೇಳಿದನು: “ವಿದ್ಯೆ, ತಪಸ್ಸು, ಇಂದ್ರಿಯನಿಗ್ರಹ, ಮತ್ತು ಸರ್ವತ್ಯಾಗ – ಇವುಗಳ ಹೊರತಾಗಿ ಯಾರೂ ಸಿದ್ಧಿಯನ್ನು ಹೊಂದುವುದಿಲ್ಲ.

12231006a ಮಹಾಭೂತಾನಿ ಸರ್ವಾಣಿ ಪೂರ್ವಸೃಷ್ಟಿಃ ಸ್ವಯಂಭುವಃ।
12231006c ಭೂಯಿಷ್ಠಂ ಪ್ರಾಣಭೃದ್ಗ್ರಾಮೇ ನಿವಿಷ್ಟಾನಿ ಶರೀರಿಷು।।

ಸರ್ವ ಪಂಚಮಹಾಭೂತಗಳೂ ಸ್ವಯಂಭುವಿನಿಂದ ಮೊದಲು ಸೃಷ್ಟಿಸಲ್ಪಟ್ಟವು. ಅವು ಸಮಸ್ತ ಪ್ರಾಣಿಸಮುದಾಯಗಳಲ್ಲಿಯೂ ಶರೀರಿಗಳಲ್ಲಿಯೂ ಅಧಿಕವಾಗಿ ಸೇರಿಕೊಂಡಿವೆ.

12231007a ಭೂಮೇರ್ದೇಹೋ ಜಲಾತ್ಸಾರೋ ಜ್ಯೋತಿಷಶ್ಚಕ್ಷುಷೀ ಸ್ಮೃತೇ।
12231007c ಪ್ರಾಣಾಪಾನಾಶ್ರಯೋ ವಾಯುಃ ಖೇಷ್ವಾಕಾಶಂ ಶರೀರಿಣಾಮ್।।

ದೇಹವು ಭೂಮಿತತ್ತ್ವದಿಂದಲೂ, ಸಾರವು ಜಲತತ್ತ್ವದಿಂದಲೂ, ಕಣ್ಣುಗಳು ಜ್ಯೋತಿತತ್ತ್ವದಿಂದಲೂ ಆಗಿವೆಯೆಂದು ಹೇಳುತ್ತಾರೆ. ಪ್ರಾಣಾಪಾನಗಳು ವಾಯುವನ್ನಾಶ್ರಯಿಸಿವೆ ಮತ್ತು ರಂಧ್ರಗಳು ಆಕಾಶತತ್ತ್ವದಿಂದ ಉಂಟಾಗಿವೆ.

12231008a ಕ್ರಾಂತೇ ವಿಷ್ಣುರ್ಬಲೇ ಶಕ್ರಃ ಕೋಷ್ಠೇಽಗ್ನಿರ್ಭುಕ್ತಮರ್ಚತಿ।
12231008c ಕರ್ಣಯೋಃ ಪ್ರದಿಶಃ ಶ್ರೋತ್ರೇ ಜಿಹ್ವಾಯಾಂ ವಾಕ್ಸರಸ್ವತೀ।।

ನಡುಗೆಯಲ್ಲಿ ವಿಷ್ಣುವಿದ್ದಾನೆ. ಭುಜಬಲದಲ್ಲಿ ಇಂದ್ರನಿದ್ದಾನೆ. ಜಠರದಲ್ಲಿ ಅಗ್ನಿಯು ಭೋಜನವನ್ನು ಬಯಸುತ್ತಾನೆ. ಕಿವಿಗಳಲ್ಲಿ ಶ್ರವಣಶಕ್ತಿ ಮತ್ತು ದಿಕ್ಕುಗಳಿವೆ. ನಾಲಿಗೆಯಲ್ಲಿ ಮಾತು ಮತ್ತು ಸರಸ್ವತಿಯರಿದ್ದಾರೆ.

12231009a ಕರ್ಣೌ ತ್ವಕ್ಚಕ್ಷುಷೀ ಜಿಹ್ವಾ ನಾಸಿಕಾ ಚೈವ ಪಂಚಮೀ।
12231009c ದರ್ಶನಾನೀಂದ್ರಿಯೋಕ್ತಾನಿ ದ್ವಾರಾಣ್ಯಾಹಾರಸಿದ್ಧಯೇ।।

ಕಿವಿಗಳು, ಚರ್ಮ, ಕಣ್ಣುಗಳು, ನಾಲಿಗೆ, ಮತ್ತು ಐದನೆಯದಾಗಿ ಮೂಗು – ಇವು ಜ್ಞಾನೇಂದ್ರಿಯಗಳು. ಇವುಗಳನ್ನು ವಿಷಯಾನುಭವಗಳ ದ್ವಾರವೆಂದು ಹೇಳುತ್ತಾರೆ.

12231010a ಶಬ್ದಂ ಸ್ಪರ್ಶಂ ತಥಾ ರೂಪಂ ರಸಂ ಗಂಧಂ ಚ ಪಂಚಮಮ್।
12231010c ಇಂದ್ರಿಯಾಣಿ ಪೃಥಕ್ತ್ವರ್ಥಾನ್ಮನಸೋ ದರ್ಶಯಂತ್ಯುತ।।

ಶಬ್ದ, ಸ್ಪರ್ಶ, ರೂಪ, ರಸ, ಮತ್ತು ಐದನೆಯ ಗಂಧ ಇವು ಇಂದ್ರಿಯಗಳ ವಿಷಯಗಳು. ಇವು ಇಂದ್ರಿಯಗಳಿಗಿಂತ ಯಾವಾಗಲೂ ಪ್ರತ್ಯೇಕವಾಗಿರುವವು ಎಂದು ತಿಳಿಯಬೇಕು.

12231011a ಇಂದ್ರಿಯಾಣಿ ಮನೋ ಯುಂಕ್ತೇ ವಶ್ಯಾನ್ಯಂತೇವ ವಾಜಿನಃ।
12231011c ಮನಶ್ಚಾಪಿ ಸದಾ ಯುಂಕ್ತೇ ಭೂತಾತ್ಮಾ ಹೃದಯಾಶ್ರಿತಃ।।

ಸಾರಥಿಯು ಕಡಿವಾಣಗಳಿಂದ ಕುದುರೆಗಳನ್ನು ನಿಯಂತ್ರಿಸಿ ನಡೆಸುವಂತೆ ಮನಸ್ಸು ಇಂದ್ರಿಯಗಳನ್ನು ತನ್ನ ವಶದಲ್ಲಿರಿಸಿಕೊಂಡು ಇಚ್ಛಾನುಸಾರವಾಗಿ ವಿಷಯಗಳ ಕಡೆ ಪ್ರಚೋದಿಸುತ್ತಿರುತ್ತದೆ. ಆದರೆ ಹೃದಯದಲ್ಲಿರುವ ಭೂತಾತ್ಮನು ಸದಾ ಮನಸ್ಸನ್ನು ನಿಯಂತ್ರಿಸುತ್ತಿರುತ್ತಾನೆ.

12231012a ಇಂದ್ರಿಯಾಣಾಂ ತಥೈವೇಷಾಂ ಸರ್ವೇಷಾಮೀಶ್ವರಂ ಮನಃ।
12231012c ನಿಯಮೇ ಚ ವಿಸರ್ಗೇ ಚ ಭೂತಾತ್ಮಾ ಮನಸಸ್ತಥಾ।।

ಮನಸ್ಸು ಹೇಗೆ ಎಲ್ಲರೀತಿಯಲ್ಲಿಯೂ ಇಂದ್ರಿಯಗಳ ಈಶ್ವರನೋ ಹಾಗೆ ಭೂತಾತ್ಮನೂ ಕೂಡ ಮನಸ್ಸನ್ನು ಒಳಕ್ಕೆ ಎಳೆದುಕೊಳ್ಳುವುದರಲ್ಲಿ ಮತ್ತು ಹೊರಕ್ಕೆ ಬಿಡುವುದರಲ್ಲಿ ಈಶ್ವರನಾಗಿದ್ದಾನೆ.

12231013a ಇಂದ್ರಿಯಾಣೀಂದ್ರಿಯಾರ್ಥಾಶ್ಚ ಸ್ವಭಾವಶ್ಚೇತನಾ ಮನಃ।
12231013c ಪ್ರಾಣಾಪಾನೌ ಚ ಜೀವಶ್ಚ ನಿತ್ಯಂ ದೇಹೇಷು ದೇಹಿನಾಮ್।।

ಇಂದ್ರಿಯಗಳು, ಇಂದ್ರಿಯಾರ್ಥಗಳು, ಸ್ವಭಾವಗಳು, ಚೇತನ, ಮನಸ್ಸು, ಪ್ರಾಣಾಪಾನಗಳು ಮತ್ತು ನಿತ್ಯವೂ ದೇಹಿಗಳ ದೇಹಗಳಲ್ಲಿ ಇರುತ್ತವೆ.

12231014a ಆಶ್ರಯೋ ನಾಸ್ತಿ ಸತ್ತ್ವಸ್ಯ ಗುಣಶಬ್ದೋ ನ ಚೇತನಾ।
12231014c ಸತ್ತ್ವಂ ಹಿ ತೇಜಃ ಸೃಜತಿ ನ ಗುಣಾನ್ವೈ ಕದಾ ಚನ।।

ಶುದ್ಧ ಬುದ್ಧಿಗೆ ಗುಣಗಳಾಗಲೀ, ಶಬ್ದಾದಿ ಇಂದ್ರಿಯವಿಷಯಗಳಾಗಲೀ, ಚೇತನವಾಗಲೀ ಆಶ್ರಯಸ್ಥಾನವಲ್ಲ. ಏಕೆಂದರೆ ಬುದ್ಧಿಯೇ ತೇಜಸ್ಸನ್ನು ಸೃಷ್ಟಿಸುತ್ತದೆ. ಬುದ್ಧಿಯು ತ್ರಿಗುಣಾತ್ಮಕ ಪ್ರಕೃತಿಯನ್ನು ಸೃಷ್ಟಿಸುವುದಿಲ್ಲ. ಆದರೆ ಬುದ್ಧಿಯು ಪ್ರಕೃತಿಯ ಕಾರ್ಯವೇ ಆಗಿದೆ.

12231015a ಏವಂ ಸಪ್ತದಶಂ ದೇಹೇ ವೃತಂ ಷೋಡಶಭಿರ್ಗುಣೈಃ।
12231015c ಮನೀಷೀ ಮನಸಾ ವಿಪ್ರಃ ಪಶ್ಯತ್ಯಾತ್ಮಾನಮಾತ್ಮನಿ।।

ಹೀಗೆ ಬುದ್ಧಿವಂತ ವಿಪ್ರನು ದೇಹದಲ್ಲಿ ಹದಿನಾರು ಗುಣಗಳಿಂದ2 ಆವೃತನಾಗಿರುವ ಹದಿನೇಳನೆಯ ಪರಮಾತ್ಮನನ್ನು ಅಂತಃಕರಣದಲ್ಲಿ ಸಾಕ್ಷಾತ್ಕರಿಸಿಕೊಳ್ಳುತ್ತಾನೆ.

12231016a ನ ಹ್ಯಯಂ ಚಕ್ಷುಷಾ ದೃಶ್ಯೋ ನ ಚ ಸರ್ವೈರಪೀಂದ್ರಿಯೈಃ।
12231016c ಮನಸಾ ಸಂಪ್ರದೀಪ್ತೇನ ಮಹಾನಾತ್ಮಾ ಪ್ರಕಾಶತೇ।।

ಆ ಪರಮಾತ್ಮನನ್ನು ಕಣ್ಣುಗಳಿಂದ ನೋಡುವುದಕ್ಕಾಗುವುದಿಲ್ಲ. ಸರ್ವ ಇಂದ್ರಿಯಗಳಿಂದಲೂ ಅವನನ್ನು ತಿಳಿಯುವುದಕ್ಕಾಗುವುದಿಲ್ಲ. ವಿಶುದ್ಧ ಮನಸ್ಸಿನ ದೀಪದಿಂದಲೇ ಮಹಾನ್ ಆತ್ಮವು ಪ್ರಕಾಶಿಸುತ್ತದೆ.

12231017a ಅಶಬ್ದಸ್ಪರ್ಶರೂಪಂ ತದರಸಾಗಂಧಮವ್ಯಯಮ್।
12231017c ಅಶರೀರಂ ಶರೀರೇ ಸ್ವೇ ನಿರೀಕ್ಷೇತ ನಿರಿಂದ್ರಿಯಮ್।।

ಆತ್ಮತತ್ತ್ವವು ಶಬ್ದ-ಸ್ಪರ್ಶ-ರೂಪ-ರಸ-ಗಂಧಗಳಿಂದ ರಹಿತವಾಗಿದೆ. ಅವಿಕಾರಿಯಾಗಿದೆ. ಅದಕ್ಕೆ ಶರೀರವಿಲ್ಲ. ಇಂದ್ರಿಯಗಳಿಲ್ಲ. ಆದರೂ ಅದನ್ನು ಶರೀರದಲ್ಲಿಯೇ ಕಾಣಬಹುದಾಗಿದೆ3.

12231018a ಅವ್ಯಕ್ತಂ ವ್ಯಕ್ತದೇಹೇಷು ಮರ್ತ್ಯೇಷ್ವಮರಮಾಶ್ರಿತಮ್।
12231018c ಯೋಽನುಪಶ್ಯತಿ ಸ ಪ್ರೇತ್ಯ ಕಲ್ಪತೇ ಬ್ರಹ್ಮಭೂಯಸೇ।।

ವ್ಯಕ್ತದೇಹದಲ್ಲಿ ಅವ್ಯಕ್ತನಾಗಿರುವ ಮತ್ತು ಸಾಯುವ ದೇಹವನ್ನು ಆಶ್ರಯಿಸಿರುವ ಆ ಅಮರನನ್ನು ಕಾಣುವವನು ಮರಣಾನಂತರ ಬ್ರಹ್ಮಭೂಯನಾಗುತ್ತಾನೆ.

12231019a ವಿದ್ಯಾಭಿಜನಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ।
12231019c ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ।।

ಪಂಡಿತರು ವಿದ್ಯಾ-ಕುಲ ಸಂಪನ್ನನಾಗಿರುವ ಬ್ರಾಹ್ಮಣನಲ್ಲಿಯೂ, ಗೋವಿನಲ್ಲಿಯೂ, ನಾಯಿಯಲ್ಲಿಯೂ, ನಾಯಿಯಮಾಂಸವನ್ನು ತಿನ್ನುವವನಲ್ಲಿಯೂ, ಸಾಮ್ಯವನ್ನು ಕಾಣುತ್ತಾರೆ.

12231020a ಸ ಹಿ ಸರ್ವೇಷು ಭೂತೇಷು ಜಂಗಮೇಷು ಧ್ರುವೇಷು ಚ।
12231020c ವಸತ್ಯೇಕೋ ಮಹಾನಾತ್ಮಾ ಯೇನ ಸರ್ವಮಿದಂ ತತಮ್।।

ಯಾರಿಂದ ಈ ಸರ್ವವೂ ಆಗಿವೆಯೋ ಆ ಮಹಾನ್ ಆತ್ಮನೊಬ್ಬನೇ ಸರ್ವ ಚರಾಚರಪ್ರಾಣಿಗಳಲ್ಲಿ ವಾಸಮಾಡುತ್ತಿದ್ದಾನೆ.

12231021a ಸರ್ವಭೂತೇಷು ಚಾತ್ಮಾನಂ ಸರ್ವಭೂತಾನಿ ಚಾತ್ಮನಿ।
12231021c ಯದಾ ಪಶ್ಯತಿ ಭೂತಾತ್ಮಾ ಬ್ರಹ್ಮ ಸಂಪದ್ಯತೇ ತದಾ।।

ಭೂತಾತ್ಮನು ಯಾವಾಗ ಸರ್ವಭೂತಗಳಲ್ಲಿ ತನ್ನನ್ನು ಮತ್ತು ಸರ್ವಭೂತಗಳನ್ನು ತನ್ನಲ್ಲಿ ಕಂಡುಕೊಳ್ಳುತ್ತಾನೋ ಆಗ ಅವನು ಬ್ರಹ್ಮಭಾವವನ್ನು ಹೊಂದುತ್ತಾನೆ.

12231022a ಯಾವಾನಾತ್ಮನಿ ವೇದಾತ್ಮಾ ತಾವಾನಾತ್ಮಾ ಪರಾತ್ಮನಿ।
12231022c ಯ ಏವಂ ಸತತಂ ವೇದ ಸೋಽಮೃತತ್ವಾಯ ಕಲ್ಪತೇ।।

ತನ್ನಲ್ಲಿ ಯಾವ ಆತ್ಮನಿದ್ದಾನೋ ಅದೇ ಆತ್ಮನು ಪರರಲ್ಲಿಯೂ ಇದ್ದಾನೆ ಎಂದು ಸತತವೂ ತಿಳಿದುಕೊಂಡಿರುವವನು ಅಮೃತತ್ತ್ವವನ್ನು ಹೊಂದುತ್ತಾನೆ.

12231023a ಸರ್ವಭೂತಾತ್ಮಭೂತಸ್ಯ ಸರ್ವಭೂತಹಿತಸ್ಯ ಚ।
12231023c ದೇವಾಪಿ ಮಾರ್ಗೇ ಮುಹ್ಯಂತಿ ಅಪದಸ್ಯ ಪದೈಷಿಣಃ।।

ಸರ್ವಭೂತಾತ್ಮಭೂತ ಸರ್ವಭೂತಹಿತ ಮತ್ತು ಅಸ್ಪಷ್ಟಮಾರ್ಗನಾದ ಆ ಪರಮಾತ್ಮನ ಪದವನ್ನು ಬಯಸುವ ದೇವತೆಗಳೂ ಕೂಡ ಮಾರ್ಗದಲ್ಲಿ ಭ್ರಮೆಗೊಳ್ಳುತ್ತಾರೆ.

12231024a ಶಕುನೀನಾಮಿವಾಕಾಶೇ ಜಲೇ ವಾರಿಚರಸ್ಯ ವಾ।
12231024c ಯಥಾ ಗತಿರ್ನ ದೃಶ್ಯೇತ ತಥೈವ ಸುಮಹಾತ್ಮನಃ।।

ಆಕಾಶದಲ್ಲಿ ಪಕ್ಷಿಗಳ ಪದಚಿಹ್ನೆಗಳು ಮತ್ತು ನೀರಿನಲ್ಲಿ ಮೀನುಗಳ ಪದಚಿಹ್ನೆಗಳು ಹೇಗೆ ಅಗೋಚರವಾಗಿರುವವೋ ಹಾಗೆ ಮಹಾತ್ಮರ ಮಾರ್ಗಗಳೂ ಕಾಣಸಿಗುವುದಿಲ್ಲ.

12231025a ಕಾಲಃ ಪಚತಿ ಭೂತಾನಿ ಸರ್ವಾಣ್ಯೇವಾತ್ಮನಾತ್ಮನಿ।
12231025c ಯಸ್ಮಿಂಸ್ತು ಪಚ್ಯತೇ ಕಾಲಸ್ತಂ ನ ವೇದೇಹ ಕಶ್ಚನ।।

ಕಾಲನು ಸರ್ವಭೂತಗಳನ್ನೂ ತನ್ನಲ್ಲಿ ಸೇರಿಸಿಕೊಂಡು ಬೇಯಿಸುತ್ತಿರುತ್ತಾನೆ. ಆದರೆ ಕಾಲನನ್ನೇ ಬೇಯಿಸುವ ಪರಮಾತ್ಮನನ್ನು ಯಾರೂ ತಿಳಿಯರು.

12231026a ನ ತದೂರ್ಧ್ವಂ ನ ತಿರ್ಯಕ್ಚ ನಾಧೋ ನ ಚ ತಿರಃ ಪುನಃ।
12231026c ನ ಮಧ್ಯೇ ಪ್ರತಿಗೃಹ್ಣೀತೇ ನೈವ ಕಶ್ಚಿತ್ಕುತಶ್ಚನ।।

ಅವನನ್ನು ಮೇಲಾಗಲೀ, ಕೆಳಗಾಗಲೀ, ಅಕ್ಕ-ಪಕ್ಕದಲ್ಲಾಗಲೀ, ಮಧ್ಯದಲ್ಲಾಗಲೀ – ಯಾವುದೂ ಯಾವಕಡೆಯಿಂದಲೂ, ಎಲ್ಲಿಯೂ ಹಿಡಿದುಕೊಳ್ಳಲು ಸಾಧ್ಯವಿಲ್ಲ.

12231027a ಸರ್ವೇಽಂತಃಸ್ಥಾ ಇಮೇ ಲೋಕಾ ಬಾಹ್ಯಮೇಷಾಂ ನ ಕಿಂ ಚನ।
12231027c ಯಃ ಸಹಸ್ರಂ ಸಮಾಗಚ್ಚೇದ್ಯಥಾ ಬಾಣೋ ಗುಣಚ್ಯುತಃ।।
12231028a ನೈವಾಂತಂ ಕಾರಣಸ್ಯೇಯಾದ್ಯದ್ಯಪಿ ಸ್ಯಾನ್ಮನೋಜವಃ।

ಈ ಎಲ್ಲ ಲೋಕಗಳೂ ಅವನಲ್ಲಿಯೇ ಅಡಗಿಕೊಂಡಿವೆ. ಅವನ ಹೊರಗೆ ಏನೂ ಇರುವುದಿಲ್ಲ. ಒಂದು ಸಾವಿರ ಬಾಣಗಳನ್ನು ಒಂದೇ ಸಮನೆ ಒಂದಾದ ಮೇಲೆ ಒಂದರಂತೆ ಮನೋವೇಗದಲ್ಲಿ ಪ್ರಯೋಗಿಸಿದರೂ ಸರ್ವಕ್ಕೂ ಕಾರಣವಾಗಿರುವ ಅದರ ಕೊನೆಯನ್ನೂ ಮುಟ್ಟುವುದಿಲ್ಲ.

12231028c ತಸ್ಮಾತ್ಸೂಕ್ಷ್ಮಾತ್ಸೂಕ್ಷ್ಮತರಂ ನಾಸ್ತಿ ಸ್ಥೂಲತರಂ ತತಃ।।
12231029a ಸರ್ವತಃಪಾಣಿಪಾದಾಂತಂ ಸರ್ವತೋಕ್ಷಿಶಿರೋಮುಖಮ್।
12231029c ಸರ್ವತಃಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ।।

ಅದಕ್ಕಿಂತಲೂ ಸೂಕ್ಷ್ಮತರವಾದುದು ಇಲ್ಲ. ಅದಕ್ಕಿಂತಲೂ ಸ್ಥೂಲವಾದುದೂ ಇಲ್ಲ. ಸರ್ವತಃ ಪಾಣಿ-ಪಾದಗಳನ್ನುಳ್ಳ, ಸರ್ವತಃ ಶಿರ-ಮುಖಗಳನ್ನುಳ್ಳ, ಸರ್ವತಃ ಕಿವಿಗಳನ್ನುಳ್ಳ ಅದು ಸರ್ವಲೋಕಗಳನ್ನೂ ಆವರಿಸಿಕೊಂಡಿದೆ.

12231030a ತದೇವಾಣೋರಣುತರಂ ತನ್ಮಹದ್ಭ್ಯೋ ಮಹತ್ತರಮ್।
12231030c ತದಂತಃ ಸರ್ವಭೂತಾನಾಂ ಧ್ರುವಂ ತಿಷ್ಠನ್ನ ದೃಶ್ಯತೇ।।

ಆ ಬ್ರಹ್ಮವಸ್ತುವು ಅಣುವಿಗಿಂತಲೂ ಚಿಕ್ಕದು. ಅತಿ ದೊಡ್ಡದಕ್ಕಿಂತಲೂ ದೊಡ್ಡದು. ಸರ್ವಭೂತಗಳಲ್ಲಿಯೂ ನಿಶ್ಚಯವಾಗಿ ಇರುವ ಅದು ಯಾರಿಗೂ ಕಾಣಿಸುವುದಿಲ್ಲ.

12231031a ಅಕ್ಷರಂ ಚ ಕ್ಷರಂ ಚೈವ ದ್ವೈಧೀಭಾವೋಽಯಮಾತ್ಮನಃ।
12231031c ಕ್ಷರಃ ಸರ್ವೇಷು ಭೂತೇಷು ದಿವ್ಯಂ ಹ್ಯಮೃತಮಕ್ಷರಮ್।।

ಅದಕ್ಕೆ ಅಕ್ಷರ ಮತ್ತು ಕ್ಷರ ಎಂಬ ಎರಡೂ ಭಾವಗಳಿವೆ. ಸರ್ವಭೂತಗಳಲ್ಲಿಯೂ ಅದರ ಕ್ಷರಭಾವವಿದೆ. ಅವುಗಳಲ್ಲಿರುವ ಅಕ್ಷರಭಾವವು ದಿವ್ಯವಾದುದು ಮತ್ತು ಅಮೃತವು4.

12231032a ನವದ್ವಾರಂ ಪುರಂ ಗತ್ವಾ ಹಂಸೋ ಹಿ ನಿಯತೋ ವಶೀ।
12231032c ಈಶಃ ಸರ್ವಸ್ಯ ಭೂತಸ್ಯ ಸ್ಥಾವರಸ್ಯ ಚರಸ್ಯ ಚ।।

ಸರ್ವಭೂತಗಳ – ಸ್ಥಾವರ ಜಂಗಮಗಳ – ಈಶನು ನವದ್ವಾರಗಳಿರುವ ಪುರಕ್ಕೆ ಹೋಗಿ ಅದರ ವಶನಾಗಿ ಹಂಸನೆಂಬ ಹೆಸರಿನಿಂದ ನಿವಾಸಿಸುತ್ತಾನೆ.

12231033a ಹಾನಿಭಂಗವಿಕಲ್ಪಾನಾಂ ನವಾನಾಂ ಸಂಶ್ರಯೇಣ ಚ।
12231033c ಶರೀರಾಣಾಮಜಸ್ಯಾಹುರ್ಹಂಸತ್ವಂ ಪಾರದರ್ಶಿನಃ।।

ಜನ್ಮರಹಿತನಾಗಿದ್ದರೂ ಅದು ಹೊಸ ಹೊಸ ಶರೀರಗಳಲ್ಲಿ ಆಶ್ರಯಿಸಿ ಹಾನಿ, ಭಂಗ ಮತ್ತು ವಿಕಲ್ಪಗಳನ್ನು ಸ್ವೇಚ್ಛೆಯಿಂದ ಸಂಗ್ರಹಿಸುವುದರಿಂದ ಅದಕ್ಕೆ ತತ್ತ್ವಜ್ಞಾನಿಗಳು ಹಂಸ ಎಂದು ಹೇಳಿದ್ದಾರೆ.

12231034a ಹಂಸೋಕ್ತಂ ಚಾಕ್ಷರಂ ಚೈವ ಕೂಟಸ್ಥಂ ಯತ್ತದಕ್ಷರಮ್।
12231034c ತದ್ವಿದ್ವಾನಕ್ಷರಂ ಪ್ರಾಪ್ಯ ಜಹಾತಿ ಪ್ರಾಣಜನ್ಮನೀ।।

ಹಂಸ ಎಂದು ಕರೆಯಲ್ಪಟ್ಟಿರುವವನೇ ಅಕ್ಷರನು. ಆ ಅಕ್ಷರನೇ ಕೂಟಸ್ಥನು. ಆ ಅಕ್ಷರನನ್ನು ಪಡೆದು ವಿದ್ವಾಂಸರು ಪ್ರಾಣಜನ್ಮಗಳ ಬಂಧನಗಳನ್ನು ಕಳಚಿಕೊಳ್ಳುತ್ತಾರೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಏಕತ್ರಿಂಶಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಮೂವತ್ತೊಂದನೇ ಅಧ್ಯಾಯವು.


  1. ಪ್ರಜ್ಞಾವಾನ್ (ಭಾರತ ದರ್ಶನ). ↩︎

  2. ಹದಿನಾರು ಗುಣಗಳು: ಐದು ಇಂದ್ರಿಯಗಳು, ಐದು ಇಂದ್ರಿಯಾರ್ಥಗಳು, ಸ್ವಭಾವ, ಚೇತನ, ಮನಸ್ಸು, ಪ್ರಾಣ, ಅಪಾನ ಮತ್ತು ಜೀವ. (ಭಾರತ ದರ್ಶನ) ↩︎

  3. ಶರೀರದಿಂದಲ್ಲದೇ ಆತ್ಮನನ್ನು ಬೇರೆ ಯಾವುದರಿಂದಲೂ ಕಾಣಲು/ಅನುಭವಿಸಲು ಸಾಧ್ಯವಿಲ್ಲ. ↩︎

  4. ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ। ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥೋಽಕ್ಷರ ಉಚ್ಯತೇ।। ಲೋಕದಲ್ಲಿ ಇಬ್ಬರು ಪುರುಷರಿದ್ದಾರೆ: ಕ್ಷರ ಮತ್ತು ಅಕ್ಷರ. ಸರ್ವಭೂತಗಳು ಕ್ಷರ. ಅವುಗಳಲ್ಲಿರುವ ಕೂಟಸ್ಥನು ಅಕ್ಷರ. (ಭೀಷ್ಮಪರ್ವ, ಭಗವದ್ಗೀತಾ ಪರ್ವ, ಅಧ್ಯಾಯ 37, ಶ್ಲೋಕ 16). ↩︎