ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 230
ಸಾರ
ಕರ್ಮತತ್ತ್ವದ ವಿವೇಚನೆ (1-6); ಯುಗಧರ್ಮವರ್ಣನೆ (7-18) ಮತ್ತು ಕಾಲದ ಮಹತ್ವ (19-21).
12230001 ವ್ಯಾಸ ಉವಾಚ।
12230001a ಏಷಾ ಪೂರ್ವತರಾ ವೃತ್ತಿರ್ಬ್ರಾಹ್ಮಣಸ್ಯ ವಿಧೀಯತೇ।
12230001c ಜ್ಞಾನವಾನೇವ ಕರ್ಮಾಣಿ ಕುರ್ವನ್ಸರ್ವತ್ರ ಸಿಧ್ಯತಿ।।
ವ್ಯಾಸನು ಹೇಳಿದನು: “ಬ್ರಾಹ್ಮಣನಿಗೆ ಈ ವೃತ್ತಿಯು ಬಹಳ ಹಿಂದಿನಿಂದಲೂ ವಿಧಿಸಲ್ಪಟ್ಟಿದೆ. ಜ್ಞಾನದಿಂದ ಕರ್ಮಗಳನ್ನು ಮಾಡಿ ಅವನು ಸರ್ವತ್ರ ಸಿದ್ಧಿಯನ್ನು ಪಡೆಯುತ್ತಾನೆ.
12230002a ತತ್ರ ಚೇನ್ನ ಭವೇದೇವಂ ಸಂಶಯಃ ಕರ್ಮನಿಶ್ಚಯೇ।
12230002c ಕಿಂ ನು ಕರ್ಮ ಸ್ವಭಾವೋಽಯಂ ಜ್ಞಾನಂ ಕರ್ಮೇತಿ ವಾ ಪುನಃ।।
ಕರ್ಮನಿಶ್ಚಯದಲ್ಲಿ ಅವನಿಗೆ ಸಂಶಯವಿರುವುದಿಲ್ಲ. ಯಾವ ಕರ್ಮಗಳು ಸ್ವಾಭಾವಿಕವಾಗಿ ಮಾಡುವಂಥವುಗಳು ಮತ್ತು ಯಾವ ಕರ್ಮಗಳು ಜ್ಞಾನಯುಕ್ತವಾಗಿ ಮಾಡಬೇಕಾದವು?1
12230003a ತತ್ರ ಚೇಹ ವಿವಿತ್ಸಾ ಸ್ಯಾಜ್ಜ್ಞಾನಂ ಚೇತ್ಪುರುಷಂ ಪ್ರತಿ।
12230003c ಉಪಪತ್ತ್ಯುಪಲಬ್ಧಿಭ್ಯಾಂ ವರ್ಣಯಿಷ್ಯಾಮಿ ತಚ್ಚೃಣು।।
ಮನುಷ್ಯರಲ್ಲಿ ಜ್ಞಾನವನ್ನುಂಟುಮಾಡುವ ಕರ್ಮಗಳ ಕುರಿತು ನಾನು ಇದನ್ನು ತಿಳಿದುಕೊಂಡಿದ್ದೇನೆ ಮತ್ತು ಅನುಭವಿಸಿದ್ದೇನೆ. ಅದನ್ನು ವರ್ಣಿಸುತ್ತೇನೆ. ಕೇಳು.
12230004a ಪೌರುಷಂ ಕಾರಣಂ ಕೇ ಚಿದಾಹುಃ ಕರ್ಮಸು ಮಾನವಾಃ।
12230004c ದೈವಮೇಕೇ ಪ್ರಶಂಸಂತಿ ಸ್ವಭಾವಂ ಚಾಪರೇ ಜನಾಃ।।
ಮಾನವರ ಕರ್ಮಗಳಲ್ಲಿ ಪುರುಷಪ್ರಯತ್ನವೇ ಕಾರಣವೆಂದು ಕೆಲವರು ಹೇಳುತ್ತಾರೆ. ಕೆಲವರು ದೈವವೊಂದನ್ನೇ ಪ್ರಶಂಸಿಸುತ್ತಾರೆ. ಇತರ ಜನರು ಸ್ವಭಾವವನ್ನು ಪ್ರಶಂಸಿಸುತ್ತಾರೆ.
12230005a ಪೌರುಷಂ ಕರ್ಮ ದೈವಂ ಚ ಫಲವೃತ್ತಿಸ್ವಭಾವತಃ।
12230005c ತ್ರಯಮೇತತ್ ಪೃಥಗ್ಭೂತಮವಿವೇಕಂ ತು ಕೇ ಚನ।।
ಇನ್ನು ಕೆಲವರು ಪುರುಷಪ್ರಯತ್ನ, ದೈವ ಮತ್ತು ಸ್ವಾಭಾವಿಕ ಫಲವೃತ್ತಿ – ಈ ಮೂರನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ಅಥವಾ ಒಂದಕ್ಕೊಂದು ಸೇರಿ ಕಾರಣಗಳಾಗುತ್ತವೆ ಎಂದೂ ಹೇಳುತ್ತಾರೆ.
12230006a ಏವಮೇತನ್ನ ಚಾಪ್ಯೇವಮುಭೇ ಚಾಪಿ ನ ಚಾಪ್ಯುಭೇ।
12230006c ಕರ್ಮಸ್ಥಾ ವಿಷಮಂ ಬ್ರೂಯುಃ ಸತ್ತ್ವಸ್ಥಾಃ ಸಮದರ್ಶಿನಃ।।
ಕರ್ಮಸ್ಥರಲ್ಲಿ ಕೆಲವರು ಇವುಗಳಲ್ಲಿ ಒಂದೇ ಒಂದು ಕಾರಣವು ಎಂದೂ ಇನ್ನು ಕೆಲವರು ಇವುಗಳಲ್ಲಿ ಎರಡು ಕಾರಣಗಳೆಂದೂ, ಮತ್ತು ಇನ್ನು ಕೆಲವರು ಒಂದು ಪ್ರಧಾನ ಕಾರಣ, ಇನ್ನೊಂದು ಗೌಣ ಕಾರಣ – ಹೀಗೆ ಇವುಗಳನ್ನು ಬೇರೆಬೇರೆಯಾಗಿ ಕಾಣುತ್ತಾರೆ. ಆದರೆ ಸತ್ವಸ್ಥರು ಇವು ಮೂರೂ ಸಮಾನ ಕಾರಣಗಳೆಂದು ಕಂಡು ಅದನ್ನೇ ಹೇಳುತ್ತಾರೆ.
12230007a ತ್ರೇತಾಯಾಂ ದ್ವಾಪರೇ ಚೈವ ಕಲಿಜಾಶ್ಚ ಸಸಂಶಯಾಃ।
12230007c ತಪಸ್ವಿನಃ ಪ್ರಶಾಂತಾಶ್ಚ ಸತ್ತ್ವಸ್ಥಾಶ್ಚ ಕೃತೇ ಯುಗೇ।।
ತ್ರೇತ, ದ್ವಾಪರ ಮತ್ತು ಕಲಿಯುಗಗಳಲ್ಲಿ ಸಂಶಯಗಳಿರುತ್ತವೆ. ಕೃತಯುಗದಲ್ಲಿ ತಪಸ್ವಿಗಳು ಸತ್ತ್ವಗುಣದಲ್ಲಿ ನೆಲೆಸಿದ್ದು ಪ್ರಶಾಂತರಾಗಿರುತ್ತಾರೆ.
12230008a ಅಪೃಥಗ್ದರ್ಶಿನಃ ಸರ್ವೇ ಋಕ್ಸಾಮಸು ಯಜುಃಷು ಚ।
12230008c ಕಾಮದ್ವೇಷೌ ಪೃಥಗ್ ದೃಷ್ಟ್ವಾ2 ತಪಃ ಕೃತ ಉಪಾಸತೇ।।
ಕೃತಯುಗದಲ್ಲಿ ಎಲ್ಲರೂ ಋಕ್, ಯಜುಃ ಮತ್ತು ಸಾಮಗಳನ್ನು ಪ್ರತ್ಯೇಕವಾಗಿ ನೋಡುವುದಿಲ್ಲ. ಕಾಮ-ದ್ವೇಷಗಳನ್ನು ನೋಡಿ ಅವರು ತಪಸ್ಸನ್ನೇ ಉಪಾಸಿಸುತ್ತಾರೆ.
12230009a ತಪೋಧರ್ಮೇಣ ಸಂಯುಕ್ತಸ್ತಪೋನಿತ್ಯಃ ಸುಸಂಶಿತಃ।
12230009c ತೇನ ಸರ್ವಾನವಾಪ್ನೋತಿ ಕಾಮಾನ್ಯಾನ್ಮನಸೇಚ್ಚತಿ।।
ತಪೋಧರ್ಮಸಂಯುಕ್ತನಾಗಿ ನಿತ್ಯವೂ ತಪಸ್ಸಿನಲ್ಲಿರುವ ಕಠೋರ ವ್ರತನಿಷ್ಠನು ತನ್ನ ಮನೋವಾಂಛಿತ ಸಕಲ ಕಾಮನೆಗಳನ್ನೂ ಪಡೆದುಕೊಳ್ಳುತ್ತಾನೆ.
12230010a ತಪಸಾ ತದವಾಪ್ನೋತಿ ಯದ್ಭೂತ್ವಾ ಸೃಜತೇ ಜಗತ್।
12230010c ತದ್ಭೂತಶ್ಚ ತತಃ ಸರ್ವೋ ಭೂತಾನಾಂ ಭವತಿ ಪ್ರಭುಃ।।
ತಪಸ್ಸಿನಿಂದ ಜಗತ್ತನ್ನು ಸೃಷ್ಟಿಸಬಲ್ಲವನಾಗುತ್ತಾನೆ. ಆಗ ಅವನು ಸರ್ವ ಭೂತಗಳ ಪ್ರಭುವಾಗುತ್ತಾನೆ.
12230011a ತದುಕ್ತಂ ವೇದವಾದೇಷು ಗಹನಂ ವೇದದರ್ಶಿಭಿಃ।
12230011c ವೇದಾಂತೇಷು ಪುನರ್ವ್ಯಕ್ತಂ ಕ್ರಮಯೋಗೇನ3 ಲಕ್ಷ್ಯತೇ।।
ಆ ಬ್ರಹ್ಮವಸ್ತುವಿನ ಕುರಿತು ವೇದಗಳಲ್ಲಿ ಹೇಳಿದ್ದಾರೆ. ವೇದದರ್ಶಿಗಳಿಗೂ ಅದು ಗಹನವಾದುದು. ವೇದಾಂತಗಳಲ್ಲಿ ಪುನಃ ಇದನ್ನು ವ್ಯಕ್ತಪಡಿಸಿದ್ದಾರೆ. ಕ್ರಮಯೋಗದಿಂದ ಇದನ್ನು ಕಾಣಬಹುದು.
12230012a ಆರಂಭಯಜ್ಞಾಃ4 ಕ್ಷತ್ರಸ್ಯ ಹವಿರ್ಯಜ್ಞಾ ವಿಶಃ ಸ್ಮೃತಾಃ।
12230012c ಪರಿಚಾರಯಜ್ಞಾಃ ಶೂದ್ರಾಶ್ಚ ಜಪಯಜ್ಞಾ ದ್ವಿಜಾತಯಃ।।
ಪಶುವಧೆಯ ಯಜ್ಞಗಳು ಕ್ಷತ್ರಿಯನಿಗೆ ಮತ್ತು ಹವಿರ್ಯಜ್ಞಗಳು ವೈಶ್ಯನಿಗೆ ಎಂದು ಹೇಳಿದ್ದಾರೆ. ಪರಿಚಾರ ಯಜ್ಞಗಳು ಶೂದ್ರರಿಗೆ ಮತ್ತು ಜಪಯಜ್ಞವು ಬ್ರಾಹ್ಮಣರಿಗೆ.
12230013a ಪರಿನಿಷ್ಠಿತಕಾರ್ಯೋ ಹಿ ಸ್ವಾಧ್ಯಾಯೇನ ದ್ವಿಜೋ ಭವೇತ್।
12230013c ಕುರ್ಯಾದನ್ಯನ್ನ ವಾ ಕುರ್ಯಾನ್ಮೈತ್ರೋ ಬ್ರಾಹ್ಮಣ ಉಚ್ಯತೇ।।
ವೈದಿಕ ಕರ್ಮಗಳನ್ನು ಮಾಡುವುದರಿಂದ ಮತ್ತು ಸ್ವಾಧ್ಯಾಯದಿಂದ ಬ್ರಾಹ್ಮಣನಾಗುತ್ತಾನೆ. ಅವನು ಅನ್ಯ ಕಾರ್ಯಗಳನ್ನು ಮಾಡಲಿ ಅಥವಾ ಮಾಡದೇ ಇರಲಿ, ಸರ್ವಭೂತಗಳ ಮೇಲಿನ ಮೈತ್ರಭಾವದಿಂದ ಅವನು ಬ್ರಾಹ್ಮಣನೆನಿಸಿಕೊಳ್ಳುತ್ತಾನೆ.
12230014a ತ್ರೇತಾದೌ ಸಕಲಾ ವೇದಾ ಯಜ್ಞಾ ವರ್ಣಾಶ್ರಮಾಸ್ತಥಾ।
12230014c ಸಂರೋಧಾದಾಯುಷಸ್ತ್ವೇತೇ ವ್ಯಸ್ಯಂತೇ ದ್ವಾಪರೇ ಯುಗೇ।।
ತ್ರೇತಾಯುಗದ ಆದಿಯಲ್ಲಿ ವೇದಗಳು, ಯಜ್ಞಗಳು ಮತ್ತು ವರ್ಣಾಶ್ರಮಗಳು ಎಲ್ಲವೂ ಇರುತ್ತವೆ. ಆದರೆ ದ್ವಾಪರ ಯುಗದಲ್ಲಿ ಆಯುಸ್ಸು ಕಡಿಮೆಯಾಗುವುದರಿಂದ ಅವುಗಳೂ ಕ್ಷೀಣಿಸುತ್ತವೆ.
12230015a ದ್ವಾಪರೇ ವಿಪ್ಲವಂ ಯಾಂತಿ ವೇದಾಃ ಕಲಿಯುಗೇ ತಥಾ।
12230015c ದೃಶ್ಯಂತೇ ನಾಪಿ ದೃಶ್ಯಂತೇ ಕಲೇರಂತೇ ಪುನಃ ಪುನಃ।।
ದ್ವಾಪರ ಮತ್ತು ಕಲಿಯುಗಗಳಲ್ಲಿ ವೇದಗಳು ಕ್ಷೋಭೆಗೊಳಗಾಗುತ್ತವೆ. ಕಲಿಯ ಅಂತ್ಯದಲ್ಲಿಯಂತೂ ವೇದಗಳು ಪುನಃ ಪುನಃ ಇರುವಂತೆ ಕಾಣುತ್ತವೆ ಮತ್ತು ಕಾಣುವುದಿಲ್ಲ.
12230016a ಉತ್ಸೀದಂತಿ ಸ್ವಧರ್ಮಾಶ್ಚ ತತ್ರಾಧರ್ಮೇಣ ಪೀಡಿತಾಃ।
12230016c ಗವಾಂ ಭೂಮೇಶ್ಚ ಯೇ ಚಾಪಾಮೋಷಧೀನಾಂ ಚ ಯೇ ರಸಾಃ।।
ಸ್ವಧರ್ಮಗಳು ಹಾಳಾಗುತ್ತವೆ. ಅಧರ್ಮದಿಂದ ಪೀಡೆಗೊಳಗಾಗುತ್ತಾರೆ. ಗೋವು ಮತ್ತು ಭೂಮಿಗಳಲ್ಲಿ ಓಷಧಿ-ನೀರು-ರಸಗಳು ಕ್ಷೀಣಿಸುತ್ತವೆ.
12230017a ಅಧರ್ಮಾಂತರ್ಹಿತಾ ವೇದಾ ವೇದಧರ್ಮಾಸ್ತಥಾಶ್ರಮಾಃ।
12230017c ವಿಕ್ರಿಯಂತೇ ಸ್ವಧರ್ಮಸ್ಥಾಃ ಸ್ಥಾವರಾಣಿ ಚರಾಣಿ ಚ।।
ವೇದಗಳೂ, ವೇದಧರ್ಮಗಳೂ, ಆಶ್ರಮಗಳೂ ಅಧರ್ಮಗಳಿಂದ ಮುಚ್ಚಿಹೋಗುತ್ತವೆ. ಸ್ಥಾವರ ಜಂಗಮಗಳೆಲ್ಲವೂ ಸ್ವಧರ್ಮಗಳಿಂದ ವಿಕಾರಗೊಳ್ಳುತ್ತವೆ.
12230018a ಯಥಾ ಸರ್ವಾಣಿ ಭೂತಾನಿ ವೃಷ್ಟಿರ್ಭೌಮಾನಿ ವರ್ಷತಿ।
12230018c ಸೃಜತೇ ಸರ್ವತೋಽಂಗಾನಿ ತಥಾ ವೇದಾ ಯುಗೇ ಯುಗೇ।।
ಭೂಮಿಯ ಮೇಲೆ ಮಳೆಬಿದ್ದು ಹೇಗೆ ಸರ್ವ ಭೂತಗಳ ಪುಷ್ಟಿಯಾಗುತ್ತದೆಯೋ ಹಾಗೆ ಯುಗ ಯುಗಗಳಲ್ಲಿ ವೇದಗಳು ತಮ್ಮ ಅಂಗಗಳನ್ನು ಸೃಷ್ಟಿಸುತ್ತವೆ.
12230019a ವಿಸೃತಂ ಕಾಲನಾನಾತ್ವಮನಾದಿನಿಧನಂ ಚ ಯತ್।
12230019c ಕೀರ್ತಿತಂ ತತ್ಪುರಸ್ತಾನ್ಮೇ ಯತಃ ಸಂಯಾಂತಿ ಯಾಂತಿ ಚ।।
ಹೀಗೆ ಕಾಲವು ನಾನಾರೂಪಗಳಲ್ಲಿ ವಿಸೃತಗೊಳ್ಳುತ್ತದೆ. ಅದಕ್ಕೆ ಆದಿ-ಅಂತ್ಯಗಳಿಲ್ಲ. ಕಾಲವೇ ಎಲ್ಲವನ್ನೂ ಹುಟ್ಟಿಸುತ್ತದೆ ಮತ್ತು ಸಂಕ್ಷಿಪ್ತಗೊಳಿಸುತ್ತದೆ ಎನ್ನುವುದನ್ನು ನಾನು ಈ ಮೊದಲೇ ನಿನಗೆ ಹೇಳಿದ್ದೇನೆ.
12230020a ಧಾತೇದಂ ಪ್ರಭವಸ್ಥಾನಂ ಭೂತಾನಾಂ ಸಂಯಮೋ ಯಮಃ।
12230020c ಸ್ವಭಾವೇನ ಪ್ರವರ್ತಂತೇ ದ್ವಂದ್ವಸೃಷ್ಟಾನಿ ಭೂರಿಶಃ।।
ಸೃಷ್ಟಿಸ್ಥಾನದಲ್ಲಿ ಧಾತನಿದ್ದಾನೆ. ಭೂತಗಳನ್ನು ಯಮನು ನಿಯಂತ್ರಿಸುತ್ತಾನೆ. ಸ್ವಭಾವದಿಂದಾಗಿ ಇವು ಅನೇಕ ದ್ವಂದ್ವರೂಪಗಳನ್ನು ಸೃಷ್ಟಿಸುತ್ತವೆ.
12230021a ಸರ್ಗಃ ಕಾಲೋ ಧೃತಿರ್ವೇದಾಃ ಕರ್ತಾ ಕಾರ್ಯಂ ಕ್ರಿಯಾ ಫಲಮ್।
12230021c ಏತತ್ತೇ ಕಥಿತಂ ತಾತ ಯನ್ಮಾಂ ತ್ವಂ ಪರಿಪೃಚ್ಚಸಿ।।
ಮಗೂ! ನೀನು ಕೇಳಿದ ಸೃಷ್ಟಿ, ಕಾಲ, ಧೃತಿ, ವೇದಗಳು, ಕರ್ತ, ಕಾರ್ಯ ಮತ್ತು ಕ್ರಿಯಾಫಲಗಳ ಕುರಿತು ನಿನಗೆ ಹೇಳಿದ್ದೇನೆ.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ತ್ರಿಂಶಾಧಿಕದ್ವಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಮೂವತ್ತನೇ ಅಧ್ಯಾಯವು.-
ಈ ಶ್ಲೋಕಕ್ಕೆ ಇನ್ನೊಂದು ಅರ್ಥಬರುವ ಅನುವಾದವಿದೆ: ಆದರೆ ಕರ್ಮವು ಹಾಗೆಯೇ ಮಾಡಿದರೆ ಸಿದ್ಧಿಸುತ್ತದೆಯೋ ಅಥವಾ ಜ್ಞಾನಯುಕ್ತವಾಗಿದ್ದರೆ ಸಿದ್ಧಿಸುತ್ತದೆಯೋ ಎನ್ನುವುದರಲ್ಲಿ ಸಂಶಯವಿರಬಾರದು. ಹಾಗೆ ಸಂಶಯವಿಲ್ಲದೇ ಕರ್ಮವನ್ನು ಆಚರಿಸಿದರೆ ಅದು ಸಿದ್ಧಿಸುತ್ತದೆ. (ಭಾರತ ದರ್ಶನ). ↩︎
-
ಕೃತ್ವಾ (ಭಾರತ ದರ್ಶನ). ↩︎
-
ಕರ್ಮಯೋಗೇನ (ಭಾರತ ದರ್ಶನ). ↩︎
-
ಅಲಾಂಭಯಜ್ಞಾಃ (ಭಾರತ ದರ್ಶನ). ↩︎