ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 229
ಸಾರ
ಸೃಷ್ಟಿಯ ಸಮಸ್ತ ಕಾರ್ಯಗಳಲ್ಲಿ ಬುದ್ಧಿಯ ಪ್ರಾಧಾನ್ಯತೆ (1-10); ಬುದ್ಧಿಗೆ ಅನುಗುಣವಾಗಿ ಪ್ರಾಣಿಗಳಲ್ಲಿರುವ ತಾರತಮ್ಯತೆ (11-25).
12229001 ವ್ಯಾಸ ಉವಾಚ।
12229001a ಅಥ ಜ್ಞಾನಪ್ಲವಂ ಧೀರೋ ಗೃಹೀತ್ವಾ ಶಾಂತಿಮಾಸ್ಥಿತಃ।
12229001c ಉನ್ಮಜ್ಜಂಶ್ಚ ನಿಮಜ್ಜಂಶ್ಚ ಜ್ಞಾನಮೇವಾಭಿಸಂಶ್ರಯೇತ್।।
ವ್ಯಾಸನು ಹೇಳಿದನು: “ಹೀಗೆ ಧೀರನು ಜ್ಞಾನವೆಂಬ ನೌಕೆಯನ್ನು ಹಿಡಿದು ಶಾಂತಿಯಿಂದಿರುತ್ತಾನೆ. ಮುಳುಗಿ-ಏಳುವುದರಲ್ಲಿಯೂ ಜ್ಞಾನವನ್ನೇ ಆಶ್ರಯಿಸಿರುತ್ತಾನೆ.”
12229002 ಶುಕ ಉವಾಚ।
12229002a ಕಿಂ ತಜ್ಜ್ಞಾನಮಥೋ ವಿದ್ಯಾ ಯಯಾ ನಿಸ್ತರತಿ ದ್ವಯಮ್।
12229002c ಪ್ರವೃತ್ತಿಲಕ್ಷಣೋ ಧರ್ಮೋ ನಿವೃತ್ತಿರಿತಿ ಚೈವ ಹಿ।।
ಶುಕನು ಹೇಳಿದನು: “ಈ ಜ್ಞಾನವು ಯಾವುದು? ಯಾವ ವಿದ್ಯೆಯು ದ್ವಂದ್ವಗಳಿಂದ ಪಾರುಮಾಡುತ್ತದೆ. ಧರ್ಮದ ಲಕ್ಷಣವು ಪ್ರವೃತ್ತಿ ಮತ್ತು ನಿವೃತ್ತಿ ಎರಡೂ ಆಗಿವೆ.”
12229003 ವ್ಯಾಸ ಉವಾಚ।
12229003a ಯಸ್ತು ಪಶ್ಯೇತ್ ಸ್ವಭಾವೇನ ವಿನಾ ಭಾವಮಚೇತನಃ।
12229003c ಪುಷ್ಯತೇ ಚ ಪುನಃ ಸರ್ವಾನ್ ಪ್ರಜ್ಞಯಾ ಮುಕ್ತಹೇತುಕಃ।।
ವ್ಯಾಸನು ಹೇಳಿದನು: “ಎಲ್ಲವೂ ಸ್ವಭಾವಸಿದ್ಧವಾದುದೆಂದೂ ಅದಕ್ಕೆ ಬೇರೆ ಯಾವ ಮೂಲಕಾರಣ ಚೇತನವೂ ಇಲ್ಲವೆಂದು ತಿಳಿಯುವವನು ಪ್ರಜ್ಞಾಹೀನನಾದುದರಿಂದ ಅವನು ಮುಕ್ತನಾಗುವುದಿಲ್ಲ.
12229004a ಯೇಷಾಂ ಚೈಕಾಂತಭಾವೇನ ಸ್ವಭಾವಃ ಕಾರಣಂ ಮತಮ್।
12229004c ಪೂತ್ವಾ ತೃಣಬುಸೀಕಾಂ ವೈ ತೇ ಲಭಂತೇ ನ ಕಿಂ ಚನ।।
ಸ್ವಭಾವವೇ ಏಕಕಾರಣವೆಂಬ ಮತವಿರುವವರು ಪ್ರೋಕ್ಷಣೆ ಮಾಡದೇ ಇರುವ ಮೌಂಜಿಹುಲ್ಲಿನಂತೆ. ಅವರಿಗೆ ಏನೂ ಸಿಗುವುದಿಲ್ಲ.
12229005a ಯೇ ಚೈನಂ ಪಕ್ಷಮಾಶ್ರಿತ್ಯ ವರ್ತಯಂತ್ಯಲ್ಪಚೇತಸಃ।
12229005c ಸ್ವಭಾವಂ ಕಾರಣಂ ಜ್ಞಾತ್ವಾ ನ ಶ್ರೇಯಃ ಪ್ರಾಪ್ನುವಂತಿ ತೇ।।
ಜಗತ್ತಿಗೆ ಸ್ವಭಾವವೇ ಕಾರಣವೆಂದು ತಿಳಿದು ಈ ಪಕ್ಷವನ್ನು ಆಶ್ರಯಿಸಿ ವರ್ತಿಸುವ ಅಲ್ಪಚೇತಸರು ಶ್ರೇಯಸ್ಸನ್ನು ಹೊಂದುವುದಿಲ್ಲ.
12229006a ಸ್ವಭಾವೋ ಹಿ ವಿನಾಶಾಯ ಮೋಹಕರ್ಮಮನೋಭವಃ।
12229006c ನಿರುಕ್ತಮೇತಯೋರೇತತ್ ಸ್ವಭಾವಪರಭಾವಯೋಃ।।
ಮೋಹಕರ್ಮಮನೋಜನಿತ ಈ ಸ್ವಭಾವವಾದವು ವಿನಾಶಕ್ಕೆ ಎಡೆಮಾಡಿಕೊಡುತ್ತದೆ. ಸ್ವಭಾವವಾದ ಮತ್ತು ಪರಾಭವ ಈ ಎರಡೂ ಶಬ್ದಗಳು ಅವ್ಯಯಾರ್ಥವನ್ನು ಕೊಡುತ್ತವೆ.
12229007a ಕೃಷ್ಯಾದೀನಿ ಹಿ ಕರ್ಮಾಣಿ ಸಸ್ಯಸಂಹರಣಾನಿ ಚ।
12229007c ಪ್ರಜ್ಞಾವದ್ಭಿಃ ಪ್ರಕ್ಲೃಪ್ತಾನಿ ಯಾನಾಸನಗೃಹಾಣಿ ಚ।।
ಪ್ರಜ್ಞಾವಂತರು ಸಸ್ಯಲಾಭಕ್ಕಾಗಿ ಕೃಷಿ ಮೊದಲಾದ ಕರ್ಮಗಳನ್ನೂ, ಬೀಜಸಂಗ್ರಹಣಕಾರ್ಯಗಳನ್ನೂ ಮಾಡುತ್ತಾರೆ. ಪ್ರಯಾಣಮಾಡಲು ಗಾಡಿಗಳನ್ನೂ, ಕುಳಿತುಕೊಳ್ಳಲು ಆಸನಗಳನ್ನೂ, ವಾಸಿಸಲು ಮನೆಗಳನ್ನೂ ಕಲ್ಪಿಸಿಕೊಳ್ಳುತ್ತಾರೆ.
12229008a ಆಕ್ರೀಡಾನಾಂ ಗೃಹಾಣಾಂ ಚ ಗದಾನಾಮಗದಸ್ಯ ಚ।
12229008c ಪ್ರಜ್ಞಾವಂತಃ ಪ್ರವಕ್ತಾರೋ ಜ್ಞಾನವದ್ಭಿರನುಷ್ಠಿತಾಃ।।
ಆಟವಾಡಲು ಮೈದಾನ, ವಾಸಿಸಲು ಮನೆ ಇವುಗಳನ್ನು ಪ್ರಾಜ್ಞರಾದವರೇ ಮಾಡಿಕೊಳ್ಳುತ್ತಾರೆ. ಆಯುರ್ವೇದವನ್ನು ತಿಳಿದವರು ರೋಗಿಗಳ ರೋಗವನ್ನು ತಿಳಿದು ಪರಿಹಾರಕ್ಕೆ ಔಷಧಿಗಳನ್ನು ಕೊಡುತ್ತಾರೆ.
12229009a ಪ್ರಜ್ಞಾ ಸಂಯೋಜಯತ್ಯರ್ಥೈಃ ಪ್ರಜ್ಞಾ ಶ್ರೇಯೋಽಧಿಗಚ್ಚತಿ।
12229009c ರಾಜಾನೋ ಭುಂಜತೇ ರಾಜ್ಯಂ ಪ್ರಜ್ಞಯಾ ತುಲ್ಯಲಕ್ಷಣಾಃ।।
ಪ್ರಜ್ಞೆಯಿಂದಲೇ ಐಶ್ವರ್ಯಪ್ರಾಪ್ತಿಯಾಗುತ್ತದೆ. ಪ್ರಜ್ಞೆಯಿಂದಲೇ ಶ್ರೇಯಸ್ಸುಂಟಾಗುತ್ತದೆ. ಸಮಾನಲಕ್ಷಣಗಳುಳ್ಳ ರಾಜರಲ್ಲಿ ಯಾರು ಹೆಚ್ಚು ಪ್ರಾಜ್ಞರೋ ಅವರೇ ರಾಜ್ಯವನ್ನು ಉಪಭೋಗಿಸುತ್ತಾರೆ.
12229010a ಪಾರಾವರ್ಯಂ ತು ಭೂತಾನಾಂ ಜ್ಞಾನೇನೈವೋಪಲಭ್ಯತೇ।
12229010c ವಿದ್ಯಯಾ ತಾತ ಸೃಷ್ಟಾನಾಂ ವಿದ್ಯೈವ ಪರಮಾ ಗತಿಃ।।
ಅಯ್ಯಾ! ಪ್ರಾಣಿಗಳ ಶ್ರೇಷ್ಠತೆಯು ಜ್ಞಾನದಿಂದಲೇ ದೊರೆಯುತ್ತದೆ. ವಿದ್ಯೆಯಿಂದ ಸೃಷ್ಟಿಸಲ್ಪಟ್ಟ ಎಲ್ಲಕ್ಕೂ ವಿದ್ಯೆಯೇ ಪರಮಗತಿಯು.
12229011a ಭೂತಾನಾಂ ಜನ್ಮ ಸರ್ವೇಷಾಂ ವಿವಿಧಾನಾಂ ಚತುರ್ವಿಧಮ್।
12229011c ಜರಾಯ್ವಂಡಮಥೋದ್ಭೇದಂ ಸ್ವೇದಂ ಚಾಪ್ಯುಪಲಕ್ಷಯೇತ್।।
ಸರ್ವ ವಿವಿಧ ಪ್ರಾಣಿಗಳ ನಾಲ್ಕು ವಿಧದ ಜನ್ಮಗಳ – ಗರ್ಭಕೋಶದಿಂದ ಜನ್ಮ, ಮೊಟ್ಟೆಯಿಂದ ಜನ್ಮ, ನೆಲವನ್ನು ಭೇದಿಸಿ ಆಗುವ ಜನ್ಮ, ಮತ್ತು ಬೆವರು-ನೀರಿನಿಂದಾಗುವ ಜನ್ಮ – ಕುರಿತು ಲಕ್ಷ್ಯಕೊಡಬೇಕು.
12229012a ಸ್ಥಾವರೇಭ್ಯೋ ವಿಶಿಷ್ಟಾನಿ ಜಂಗಮಾನ್ಯುಪಲಕ್ಷಯೇತ್।
12229012c ಉಪಪನ್ನಂ ಹಿ ಯಚ್ಚೇಷ್ಟಾ ವಿಶಿಷ್ಯೇತ ವಿಶೇಷ್ಯಯೋಃ।।
ಚಲಿಸದೇ ಇರುವ ಸ್ಥಾವರಗಳಿಗಿಂತಲೂ ಚಲಿಸುವ ಜಂಗಮ ಪ್ರಾಣಿಗಳು ಶ್ರೇಷ್ಠವೆಂದು ತಿಳಿಯಬೇಕು. ಇಷ್ಟದಂತೆ ಚಲಿಸುವುದು ಜಂಗಮಪ್ರಾಣಿಗಳಲ್ಲಿ ವಿಶೇಷವಾದ ಗುಣವು.
12229013a ಆಹುರ್ದ್ವಿಬಹುಪಾದಾನಿ ಜಂಗಮಾನಿ ದ್ವಯಾನಿ ಚ।
12229013c ಬಹುಪಾದ್ಭ್ಯೋ ವಿಶಿಷ್ಟಾನಿ ದ್ವಿಪಾದಾನಿ ಬಹೂನ್ಯಪಿ।।
ಜಂಗಮ ಪ್ರಾಣಿಗಳಲ್ಲಿ ಎರಡು ಕಾಲುಗಳಿರುವ ಮತ್ತು ಅನೇಕ ಪಾದಗಳಿರುವ ಪ್ರಾಣಿಗಳು ಎಂದು ಇರಡು ವಿಧಗಳನ್ನು ಹೇಳಿದ್ದಾರೆ. ಬಹುಪಾದಪ್ರಾಣಿಗಳಿಗಿಂತ ಎರಡು ಕಾಲುಗಳಿರುವ ಪ್ರಾಣಿಗಳು ಶ್ರೇಷ್ಠವು.
12229014a ದ್ವಿಪದಾನಿ ದ್ವಯಾನ್ಯಾಹುಃ ಪಾರ್ಥಿವಾನೀತರಾಣಿ ಚ।
12229014c ಪಾರ್ಥಿವಾನಿ ವಿಶಿಷ್ಟಾನಿ ತಾನಿ ಹ್ಯನ್ನಾನಿ ಭುಂಜತೇ।।
ದ್ವಿಪಾದಗಳಲ್ಲಿ ಭೂಮಿಯ ಮೇಲೆ ಚರಿಸುವವು ಮತ್ತು ಅನ್ಯ ಎಂಬ ಎರಡು ವಿಧಗಳಿವೆಯೆಂದು ಹೇಳುತ್ತಾರೆ. ಅನ್ನವನ್ನು ತಿನ್ನುವುದರಿಂದ ಭೂಚರ ಪ್ರಾಣಿಗಳು ಶ್ರೇಷ್ಠವೆನಿಸಲ್ಪಟ್ಟಿವೆ.
12229015a ಪಾರ್ಥಿವಾನಿ ದ್ವಯಾನ್ಯಾಹುರ್ಮಧ್ಯಮಾನ್ಯುತ್ತಮಾನಿ ಚ1।
12229015c ಮಧ್ಯಮಾನಿ ವಿಶಿಷ್ಟಾನಿ ಜಾತಿಧರ್ಮೋಪಧಾರಣಾತ್।।
ಭೂಚರ ಪ್ರಾಣಿಗಳಲ್ಲಿಯೂ ಎರಡು ವಿಧಗಳನ್ನು ಹೇಳಿದ್ದಾರೆ: ಮಧ್ಯಮ ಮತ್ತು ಉತ್ತಮ ಎಂದು. ಜಾತಿಧರ್ಮಗಳನ್ನು ಅನುಸರಿಸುವುದರಿಂದ ಮಧ್ಯಮವು ಶ್ರೇಷ್ಠವು.
12229016a ಮಧ್ಯಮಾನಿ ದ್ವಯಾನ್ಯಾಹುರ್ಧರ್ಮಜ್ಞಾನೀತರಾಣಿ ಚ।
12229016c ಧರ್ಮಜ್ಞಾನಿ ವಿಶಿಷ್ಟಾನಿ ಕಾರ್ಯಾಕಾರ್ಯೋಪಧಾರಣಾತ್।।
ಮಧ್ಯಮರಲ್ಲಿ ಎರಡು ವಿಧಗಳನ್ನು ಹೇಳಿದ್ದಾರೆ: ಧರ್ಮಜ್ಞರು ಮತ್ತು ಇತರರು. ಕಾರ್ಯ-ಅಕಾರ್ಯಗಳನ್ನು ವಿವೇಚಿಸುವ ಧರ್ಮಜ್ಞರು ಶ್ರೇಷ್ಠರು.
12229017a ಧರ್ಮಜ್ಞಾನಿ ದ್ವಯಾನ್ಯಾಹುರ್ವೇದಜ್ಞಾನೀತರಾಣಿ ಚ।
12229017c ವೇದಜ್ಞಾನಿ ವಿಶಿಷ್ಟಾನಿ ವೇದೋ ಹ್ಯೇಷು ಪ್ರತಿಷ್ಠಿತಃ।।
ಧರ್ಮಜ್ಞರಲ್ಲಿ ಎರಡು ವಿಧಗಳನ್ನು ಹೇಳಿದ್ದಾರೆ: ವೇದಜ್ಞರು ಮತ್ತು ಇತರರು. ವೇದವು ಪ್ರತಿಷ್ಠಿತವಾಗಿರುವ ವೇದಜ್ಞರು ಶ್ರೇಷ್ಠರು.
12229018a ವೇದಜ್ಞಾನಿ ದ್ವಯಾನ್ಯಾಹುಃ ಪ್ರವಕ್ತೃಣೀತರಾಣಿ ಚ।
12229018c ಪ್ರವಕ್ತೃಣಿ ವಿಶಿಷ್ಟಾನಿ ಸರ್ವಧರ್ಮೋಪಧಾರಣಾತ್।।
ವೇದಜ್ಞರಲ್ಲಿಯೂ ಎರಡು ವಿಧಗಳನ್ನು ಹೇಳಿದ್ದಾರೆ: ಪ್ರವಚನಕಾರರು ಮತ್ತು ಇತರರು. ಅವರಲ್ಲಿ ಪ್ರವಚನಕಾರರೇ ಶ್ರೇಷ್ಠರು. ಏಕೆಂದರೆ ಅವರು ಎಲ್ಲ ಧರ್ಮಗಳನ್ನೂ ತಿಳಿದವರು.
12229019a ವಿಜ್ಞಾಯಂತೇ ಹಿ ಯೈರ್ವೇದಾಃ ಸರ್ವಧರ್ಮಕ್ರಿಯಾಫಲಾಃ।
12229019c ಸಯಜ್ಞಾಃ ಸಖಿಲಾ ವೇದಾಃ ಪ್ರವಕ್ತೃಭ್ಯೋ ವಿನಿಃಸೃತಾಃ।।
ಪ್ರವಕ್ತೃಗಳ ಮುಖದಿಂದ ಪ್ರವಚನಗಳ ಮೂಲಕ ಹೊರಬರುವ ಧರ್ಮ, ಕರ್ಮ, ಫಲಸಹಿತ ಸರ್ವವೇದಗಳ ಜ್ಞಾನ – ಇವೆಲ್ಲವೂ ಇತರರಿಗೆ ತಿಳಿಯುತ್ತದೆ.
12229020a ಪ್ರವಕ್ತೃಣಿ ದ್ವಯಾನ್ಯಾಹುರಾತ್ಮಜ್ಞಾನೀತರಾಣಿ ಚ।
12229020c ಆತ್ಮಜ್ಞಾನಿ ವಿಶಿಷ್ಟಾನಿ ಜನ್ಮಾಜನ್ಮೋಪಧಾರಣಾತ್।।
ಪ್ರವಕ್ತೃಗಳಲ್ಲಿಯೂ ಎರಡು ವಿಧವನ್ನು ಹೇಳಿದ್ದಾರೆ: ಆತ್ಮಜ್ಞಾನಿಗಳು ಮತ್ತು ಇತರರು. ಹುಟ್ಟು-ಸಾವುಗಳ ರಹಸ್ಯಗಳನ್ನು ತಿಳಿದಿರುವುದರಿಂದ ಆತ್ಮಜ್ಞಾನಿಗಳೇ ಶ್ರೇಷ್ಠರು.
12229021a ಧರ್ಮದ್ವಯಂ ಹಿ ಯೋ ವೇದ ಸ ಸರ್ವಃ ಸರ್ವಧರ್ಮವಿದ್।
12229021c ಸ ತ್ಯಾಗೀ ಸತ್ಯಸಂಕಲ್ಪಃ ಸ ತು ಕ್ಷಾಂತಃ ಸ ಈಶ್ವರಃ।।
ಪ್ರವೃತ್ತಿ ಮತ್ತು ನಿವೃತ್ತಿ – ಈ ಎರಡೂ ಧರ್ಮಗಳನ್ನು ತಿಳಿದವನು ಸರ್ವಜ್ಞನು. ಸರ್ವಧರ್ಮವಿದುವು. ಅವನು ತ್ಯಾಗಿಯು, ಸತ್ಯಸಂಕಲ್ಪನು, ಪವಿತ್ರನು ಮತ್ತು ಈಶ್ವರನು.
12229022a ಧರ್ಮಜ್ಞಾನಪ್ರತಿಷ್ಠಂ ಹಿ ತಂ ದೇವಾ ಬ್ರಾಹ್ಮಣಂ ವಿದುಃ।
12229022c ಶಬ್ದಬ್ರಹ್ಮಣಿ ನಿಷ್ಣಾತಂ ಪರೇ ಚ ಕೃತನಿಶ್ಚಯಮ್।।
ಧರ್ಮಜ್ಞಾನದಲ್ಲಿ ಪ್ರತಿಷ್ಠನಾದವನನ್ನೇ ದೇವತೆಗಳು ಬ್ರಾಹ್ಮಣ ಎಂದು ತಿಳಿಯುತ್ತಾರೆ. ಅಂಥವನು ಶಬ್ದಬ್ರಹ್ಮದಲ್ಲಿ ನಿಷ್ಣಾತನಾಗಿರುತ್ತಾನೆ ಮತ್ತು ಅದಕ್ಕಿತಲೂ ಶ್ರೇಷ್ಠವಾದುದರ ಕುರಿತು ನಿಶ್ಚಯಪಟ್ಟಿರುತ್ತಾನೆ.
12229023a ಅಂತಃಸ್ಥಂ ಚ ಬಹಿಷ್ಠಂ ಚ ಯೇಽಽಧಿಯಜ್ಞಾಧಿದೈವತಮ್।
12229023c ಜಾನಂತಿ ತಾನ್ನಮಸ್ಯಾಮಸ್ತೇ ದೇವಾಸ್ತಾತ ತೇ ದ್ವಿಜಾಃ।।
ಮಗೂ! ಅಂಥವರು ಒಳಗೂ ಮತ್ತು ಹೊರಗೂ ಇರುವ ಆತ್ಮನನ್ನು ತಿಳಿದಿರುತ್ತಾರೆ. ಅಂಥವರು ದೇವತೆಗಳು. ಅಂಥವರು ಬ್ರಾಹ್ಮಣರು.
12229024a ತೇಷು ವಿಶ್ವಮಿದಂ ಭೂತಂ ಸಾಗ್ರಂ ಚ ಜಗದಾಹಿತಮ್।
12229024c ತೇಷಾಂ ಮಾಹಾತ್ಮ್ಯಭಾವಸ್ಯ ಸದೃಶಂ ನಾಸ್ತಿ ಕಿಂ ಚನ।।
ಅಂಥವರಲ್ಲಿಯೇ ಈ ವಿಶ್ವ, ಜಗತ್ತು ಮತ್ತು ಸಕಲ ಪ್ರಾಣಿಗಳು ಪ್ರತಿಷ್ಠಿತವಾಗಿವೆ. ಅವರ ಮಾಹಾತ್ಮೆಗೆ ಸರಿಸಾಟಿಯಾದುದು ಬೇರೆ ಯಾವುದೂ ಇಲ್ಲ.
12229025a ಆದಿಂ ತೇ ನಿಧನಂ ಚೈವ ಕರ್ಮ ಚಾತೀತ್ಯ ಸರ್ವಶಃ।
12229025c ಚತುರ್ವಿಧಸ್ಯ ಭೂತಸ್ಯ ಸರ್ವಸ್ಯೇಶಾಃ ಸ್ವಯಂಭುವಃ।।
ಬ್ರಹ್ಮಜ್ಞಾನದಲ್ಲಿ ಪ್ರತಿಷ್ಠಿತರಾಗಿರುವವರು ಹುಟ್ಟು-ಸಾವು ಮತ್ತು ಕರ್ಮಗಳ ಎಲ್ಲೆಯನ್ನು ಸಂಪೂರ್ಣವಾಗಿ ದಾಟಿ ಎಲ್ಲ ನಾಲ್ಕು ವಿಧದ ಪ್ರಾಣಿಗಳಿಗೂ ಈಶ್ವರರೂ ಸ್ವಯಂಭೂ ಸದೃಶರೂ ಆಗುತ್ತಾರೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಏಕೋನತ್ರಿಂಶಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಇಪ್ಪತ್ತೊಂಭತ್ತನೇ ಅಧ್ಯಾಯವು.
-
ದ್ವಯಾನ್ಯಾಹುರ್ಮಧ್ಯಮಾನ್ಯಧಮಾನಿ ತು। (ಭಾರತ ದರ್ಶನ). ↩︎