227: ಶುಕಾನುಪ್ರಶ್ನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 227

ಸಾರ

ಬ್ರಾಹ್ಮಣರ ಕರ್ತವ್ಯಗಳ ಪ್ರತಿಪಾದನೆ; ಕಾಲಸ್ವರೂಪ ನದಿಯನ್ನು ದಾಟುವ ಉಪಾಯ (1-31).

12227001 ವ್ಯಾಸ ಉವಾಚ।
12227001a ತ್ರಯೀವಿದ್ಯಾಮವೇಕ್ಷೇತ ವೇದೇಷೂಕ್ತಾಮಥಾಂಗತಃ।
12227001c ಋಕ್ಸಾಮವರ್ಣಾಕ್ಷರತೋ ಯಜುಷೋಽಥರ್ವಣಸ್ತಥಾ।।

ವ್ಯಾಸನು ಹೇಳಿದನು: “ಬ್ರಾಹ್ಮಣನು ವೇದದಲ್ಲಿ ಹೇಳಿರುವ ತ್ರಯೀವಿದ್ಯೆಯನ್ನು ಅಂಗಗಳ ಸಮೇತ ಅಧ್ಯಯನ ಮಾಡಬೇಕು. ಋಕ್, ಸಾಮ, ವರ್ಣ, ಅಕ್ಷರ, ಯಜುಸ್ ಮತ್ತು ಅಥರ್ವ ಈ ಷಟ್ಕರ್ಮಗಳಲ್ಲಿ ಪಾಂಡಿತ್ಯವಿರಬೇಕು.

12227002a ವೇದವಾದೇಷು ಕುಶಲಾ ಹ್ಯಧ್ಯಾತ್ಮಕುಶಲಾಶ್ಚ ಯೇ।
12227002c ಸತ್ತ್ವವಂತೋ ಮಹಾಭಾಗಾಃ ಪಶ್ಯಂತಿ ಪ್ರಭವಾಪ್ಯಯೌ।।

ವೇದವಾದದಲ್ಲಿ ಕುಶಲರಾಗಿರುವ, ಅಧ್ಯಾತ್ಮವಿಷಯದಲ್ಲಿ ಕುಶಲರಾಗಿರುವ ಸತ್ತ್ವವಂತ ಮಹಾಭಾಗರು ಸೃಷ್ಟಿ-ಲಯಗಳನ್ನು ಕಾಣುತ್ತಾರೆ.

12227003a ಏವಂ ಧರ್ಮೇಣ ವರ್ತೇತ ಕ್ರಿಯಾಃ ಶಿಷ್ಟವದಾಚರೇತ್।
12227003c ಅಸಂರೋಧೇನ ಭೂತಾನಾಂ ವೃತ್ತಿಂ ಲಿಪ್ಸೇತ ವೈ ದ್ವಿಜಃ।।

ಹೀಗೆ ಧರ್ಮದಿಂದ ನಡೆದುಕೊಂಡು ಶಿಷ್ಟಾಚಾರ ಕ್ರಿಯೆಗಳನ್ನು ಆಚರಿಸಬೇಕು. ಭೂತಗಳಿಗೆ ವಿರುದ್ಧವಾಗದ ವೃತ್ತಿಯಲ್ಲಿ ದ್ವಿಜನು ತೊಡಗಿರಬೇಕು.

12227004a ಸದ್ಭ್ಯ ಆಗತವಿಜ್ಞಾನಃ ಶಿಷ್ಟಃ ಶಾಸ್ತ್ರವಿಚಕ್ಷಣಃ।
12227004c ಸ್ವಧರ್ಮೇಣ ಕ್ರಿಯಾ ಲೋಕೇ ಕುರ್ವಾಣಃ ಸತ್ಯಸಂಗರಃ।।

ಶಿಷ್ಟ ಶಾಸ್ತ್ರವಿಚಕ್ಷಣ ಸತ್ಪುರುಷರಿಂದ ಶಾಸ್ತ್ರಜ್ಞಾನವನ್ನು ಪಡೆದುಕೊಳ್ಳಬೇಕು. ಲೋಕದಲ್ಲಿ ಸ್ವಧರ್ಮದ ಕ್ರಿಯೆಗಳನ್ನೇ ಮಾಡುತ್ತಾ ಸತ್ಯಸಂಗರನಾಗಿರಬೇಕು.

12227005a ತಿಷ್ಠತ್ಯೇತೇಷು ಗೃಹವಾನ್ ಷಟ್ಸು ಕರ್ಮಸು ಸ ದ್ವಿಜಃ।
12227005c ಪಂಚಭಿಃ ಸತತಂ ಯಜ್ಞೈಃ ಶ್ರದ್ದಧಾನೋ ಯಜೇತ ಚ।।

ಗೃಹಸ್ಥ ದ್ವಿಜನು ಈ ಆರು ಕರ್ಮಗಳಲ್ಲಿಯೇ ತೊಡಗಿರಬೇಕು. ಶದ್ಧದಾನನಾಗಿ ಸತತವೂ ಐದು ಯಜ್ಞಗಳಿಂದ1 ಆರಾಧಿಸಬೇಕು.

12227006a ಧೃತಿಮಾನಪ್ರಮತ್ತಶ್ಚ ದಾಂತೋ ಧರ್ಮವಿದಾತ್ಮವಾನ್।
12227006c ವೀತಹರ್ಷಭಯಕ್ರೋಧೋ ಬ್ರಾಹ್ಮಣೋ ನಾವಸೀದತಿ।।

ಧೃತಿಮಾನನೂ, ಅಪ್ರಮತ್ತನೂ, ದಾಂತನೂ, ಧರ್ಮವಿದುವೂ, ಆತ್ಮವಂತನೂ ಆಗಿರಬೇಕು. ಹರ್ಷ-ಭಯ-ಕ್ರೋಧಗಳನ್ನು ತೊರೆದಿರುವ ಬ್ರಾಹ್ಮಣನು ನಾಶಹೊಂದುವುದಿಲ್ಲ.

12227007a ದಾನಮಧ್ಯಯನಂ ಯಜ್ಞಸ್ತಪೋ ಹ್ರೀರಾರ್ಜವಂ ದಮಃ।
12227007c ಏತೈರ್ವರ್ಧಯತೇ ತೇಜಃ ಪಾಪ್ಮಾನಂ ಚಾಪಕರ್ಷತಿ।।

ದಾನ, ಅಧ್ಯಯನ, ಯಜ್ಞ, ತಪಸ್ಸು, ಲಜ್ಜೆ, ಸರಳತೆ, ಇಂದ್ರಿಯ ನಿಗ್ರಹ – ಇವು ತೇಜಸ್ಸನ್ನು ವರ್ಧಿಸುತ್ತವೆ ಮತ್ತು ಪಾಪಗಳನ್ನು ನಾಶಗೊಳಿಸುತ್ತವೆ.

12227008a ಧೂತಪಾಪ್ಮಾ ತು ಮೇಧಾವೀ ಲಘ್ವಾಹಾರೋ ಜಿತೇಂದ್ರಿಯಃ।
12227008c ಕಾಮಕ್ರೋಧೌ ವಶೇ ಕೃತ್ವಾ ನಿನೀಷೇದ್ ಬ್ರಹ್ಮಣಃ ಪದಮ್।।

ಮೇಧಾವಿಯು ಹೀಗೆ ಪಾಪಗಳನ್ನು ಕಳೆದುಕೊಂಡು ಅಲ್ಪಾಹಾರಿಯೂ ಜಿತೇಂದ್ರಿಯನೂ ಆಗಿದ್ದು, ಕಾಮ-ಕ್ರೋಧಗಳನ್ನು ವಶಪಡಿಸಿಕೊಂಡು ಬ್ರಹ್ಮಪದವನ್ನು ಬಯಸಬೇಕು.

12227009a ಅಗ್ನೀಂಶ್ಚ ಬ್ರಾಹ್ಮಣಾಂಶ್ಚಾರ್ಚೇದ್ದೇವತಾಃ ಪ್ರಣಮೇತ ಚ।
12227009c ವರ್ಜಯೇದ್ರುಷತೀಂ ವಾಚಂ ಹಿಂಸಾಂ ಚಾಧರ್ಮಸಂಹಿತಾಮ್।।

ಅಗ್ನಿಗಳನ್ನು, ಬ್ರಾಹ್ಮಣರನ್ನು, ಮತ್ತು ದೇವತೆಗಳನ್ನು ಅರ್ಚಿಸಬೇಕು ಮತ್ತು ನಮಸ್ಕರಿಸಬೇಕು. ಹಿಂಸೆ ಮತ್ತು ಅಧರ್ಮಯುಕ್ತ ಕಟುವಾಣಿಯನ್ನು ವರ್ಜಿಸಬೇಕು.

12227010a ಏಷಾ ಪೂರ್ವತರಾ ವೃತ್ತಿರ್ಬ್ರಾಹ್ಮಣಸ್ಯ ವಿಧೀಯತೇ।
12227010c ಜ್ಞಾನಾಗಮೇನ ಕರ್ಮಾಣಿ ಕುರ್ವನ್ಕರ್ಮಸು ಸಿಧ್ಯತಿ।।

ಇದೇ ಹಿಂದಿನಿಂದ ನಡೆದುಕೊಂಡು ಬಂದಿರುವ ವೃತ್ತಿಯನ್ನು ಬ್ರಾಹ್ಮಣನಿಗೆ ವಿಧಿಸಲಾಗಿದೆ. ಜ್ಞಾನಮಾರ್ಗದಿಂದ ಕರ್ಮಗಳನ್ನು ಮಾಡುವುದರಿಂದ ಕರ್ಮಗಳು ಸಿದ್ಧಿಸುತ್ತವೆ.

12227011a ಪಂಚೇಂದ್ರಿಯಜಲಾಂ ಘೋರಾಂ ಲೋಭಕೂಲಾಂ ಸುದುಸ್ತರಾಮ್।
12227011c ಮನ್ಯುಪಂಕಾಮನಾಧೃಷ್ಯಾಂ ನದೀಂ ತರತಿ ಬುದ್ಧಿಮಾನ್।।

ಪಂಚೇಂದ್ರಿಯಗಳೇ ಘೋರ ನೀರಾಗಿರುವ, ಲೋಭವೇ ದುಸ್ತರ ತೀರಗಳಾಗಿರುವ, ಕೋಪವೇ ಕೆಸರಾಗಿರುವ ಮತ್ತು ದಾಟಲು ಕಷ್ಟಕರವಾಗಿರುವ ಈ ಸಂಸಾರವೆಂಬ ನದಿಯನ್ನು ಬುದ್ಧಿವಂತನೇ ದಾಟಬಲ್ಲನು.

12227012a ಕಾಮಮನ್ಯೂದ್ಧತಂ ಯತ್ ಸ್ಯಾನ್ನಿತ್ಯಮತ್ಯಂತಮೋಹಿತಮ್।
12227012c ಮಹತಾ ವಿಧಿದೃಷ್ಟೇನ ಬಲೇನಾಪ್ರತಿಘಾತಿನಾ।
12227012e ಸ್ವಭಾವಸ್ರೋತಸಾ ವೃತ್ತಮುಹ್ಯತೇ ಸತತಂ ಜಗತ್।।

ಕಾಮ-ಕ್ರೋಧಗಳಿಂದ ಹುಟ್ಟುವ ಆ ನದಿಯು ಅತ್ಯಂತ ಮೋಹಗೊಳಿಸುವಂಥಹುದು. ಆ ವಿಧಿಧೃಷ್ಟ ಮಹಾಬಲಶಾಲೀ ಪ್ರವಾಹವು ಜಗತ್ತನ್ನು ಸತತವೂ ತನ್ನ ಸುಳಿಗಳಲ್ಲಿ ಸಿಲುಕಿಸಿಕೊಂಡು ಮೋಹಗೊಳಿಸಿ ತನ್ನದೇ ಪ್ರವಾಹದಲ್ಲಿ ಕೊಂಡೊಯ್ಯುತ್ತಿರುತ್ತದೆ.

12227013a ಕಾಲೋದಕೇನ ಮಹತಾ ವರ್ಷಾವರ್ತೇನ ಸಂತತಮ್।
12227013c ಮಾಸೋರ್ಮಿಣರ್ತುವೇಗೇನ ಪಕ್ಷೋಲಪತೃಣೇನ ಚ।।

ಕಾಲವೇ ಮಹಾನದವು. ವರ್ಷಗಳೇ ಸುಳಿಗಳು. ಮಾಸಗಳು ಅಲೆಗಳು. ಋತುಗಳು ಅದರ ವೇಗ. ಪಕ್ಷಗಳು ತೀರದಲ್ಲಿ ಬೆಳೆಯುವ ಸಸ್ಯಗಳು.

12227014a ನಿಮೇಷೋನ್ಮೇಷಫೇನೇನ ಅಹೋರಾತ್ರಜವೇನ ಚ।
12227014c ಕಾಮಗ್ರಾಹೇಣ ಘೋರೇಣ ವೇದಯಜ್ಞಪ್ಲವೇನ ಚ।।

ನಿಮೇಷ-ಉನ್ಮೇಷಗಳು ಅದರ ನೊರೆ. ಹಗಲು-ರಾತ್ರಿಗಳು ಅದರ ವೇಗವು. ಕಾಮಗಳು ಘೋರ ಮೊಸಳೆಗಳು. ವೇದ-ಯಜ್ಞಗಳು ತೆಪ್ಪ.

12227015a ಧರ್ಮದ್ವೀಪೇನ ಭೂತಾನಾಂ ಚಾರ್ಥಕಾಮರವೇಣ ಚ।
12227015c ಋತಸೋಪಾನತೀರೇಣ ವಿಹಿಂಸಾತರುವಾಹಿನಾ।।

ಭೂತಗಳಿಗೆ ಧರ್ಮವು ದ್ವೀಪವಿದ್ದಂತೆ. ಅರ್ಥ-ಕಾಮಗಳು ಚಿಲುಮೆಗಳು. ಸತ್ಯವು ತೀರದಲ್ಲಿರುವ ಸೋಪಾನ. ಮತ್ತು ಅಹಿಂಸೆಯು ತೀರದಲ್ಲಿರುವ ಮರಗಳು.

12227016a ಯುಗಹ್ರದೌಘಮಧ್ಯೇನ ಬ್ರಹ್ಮಪ್ರಾಯಭವೇನ ಚ।
12227016c ಧಾತ್ರಾ ಸೃಷ್ಟಾನಿ ಭೂತಾನಿ ಕೃಷ್ಯಂತೇ ಯಮಸಾದನಮ್।।

ಯುಗಗಳು ಮಧ್ಯದಲ್ಲಿರುವ ಕೊಳಗಳು. ಬ್ರಹ್ಮವೆಂಬ ಪರ್ವತದಲ್ಲಿ ಆ ಕಾಲನದವು ಹುಟ್ಟಿ ಹರಿಯುತ್ತದೆ. ಬ್ರಹ್ಮನು ಸೃಷ್ಟಿಸಿದ ಎಲ್ಲಪ್ರಾಣಿಗಳೂ ಆ ಕಾಲನದದಲ್ಲಿ ಬಿದ್ದು ಯಮಲೋಕದ ಕಡೆ ಸೆಳೆಯಲ್ಪಡುತ್ತವೆ.

12227017a ಏತತ್ ಪ್ರಜ್ಞಾಮಯೈರ್ಧೀರಾ ನಿಸ್ತರಂತಿ ಮನೀಷಿಣಃ।
12227017c ಪ್ಲವೈರಪ್ಲವವಂತೋ ಹಿ ಕಿಂ ಕರಿಷ್ಯಂತ್ಯಚೇತಸಃ।।

ಧೀರ ಮನೀಷಿಣರು ಇದನ್ನು ಪ್ರಜ್ಞೆಯೆಂಬ ನೌಕೆಯಿಂದ ದಾಟುತ್ತಾರೆ. ಅಂತಹ ನೌಕೆಗಳಿಲ್ಲದ ಅಜ್ಞಾನಿಗಳು ಏನು ಮಾಡಬಲ್ಲರು?

12227018a ಉಪಪನ್ನಂ ಹಿ ಯತ್ ಪ್ರಾಜ್ಞೋ ನಿಸ್ತರೇನ್ನೇತರೋ ಜನಃ।
12227018c ದೂರತೋ ಗುಣದೋಷೌ ಹಿ ಪ್ರಾಜ್ಞಃ ಸರ್ವತ್ರ ಪಶ್ಯತಿ।।

ಪ್ರಾಜ್ಞನು ಇದನ್ನು ದಾಟುತ್ತಾನೆ ಮತ್ತು ಇತರರು ಇದನ್ನು ದಾಟಲಾರರು ಎನ್ನುವುದು ಯುಕ್ತಿಸಂಗತವಾಗಿಯೇ ಇದೆ. ಏಕೆಂದರೆ, ಪ್ರಾಜ್ಞನು ಎಲ್ಲದರ ಗುಣ-ದೋಷಗಳನ್ನು ದೂರದಿಂದಲೇ ವಿವೇಚಿಸುತ್ತಾನೆ.

12227019a ಸಂಶಯಾತ್ಮಾ ಸ ಕಾಮಾತ್ಮಾ ಚಲಚಿತ್ತೋಽಲ್ಪಚೇತನಃ।
12227019c ಅಪ್ರಾಜ್ಞೋ ನ ತರತ್ಯೇವ ಯೋ ಹ್ಯಾಸ್ತೇ ನ ಸ ಗಚ್ಚತಿ।।

ಅಪ್ರಾಜ್ಞನು ಅಲ್ಪಚೇತನನೂ, ಸಂಶಯಾತ್ಮನೂ, ಕಾಮಾತ್ಮನೂ, ಚಂಚಲಚಿತ್ತನೂ ಆಗಿರುವುದರಿಂದ ಕಾಲನದವನ್ನು ದಾಟಲು ಅವನಿಗೆ ಸಾಧ್ಯವಾಗುವುದಿಲ್ಲ.

12227020a ಅಪ್ಲವೋ ಹಿ ಮಹಾದೋಷಮುಹ್ಯಮಾನೋಽಧಿಗಚ್ಚತಿ।
12227020c ಕಾಮಗ್ರಾಹಗೃಹೀತಸ್ಯ ಜ್ಞಾನಮಪ್ಯಸ್ಯ ನ ಪ್ಲವಃ।।

ಜ್ಞಾನದ ನೌಕೆಯಿಲ್ಲದವನು ವಿಮೋಹಗೊಂಡು ಮಹಾದೋಷವನ್ನು ಹೊಂದುತ್ತಾನೆ. ಕಾಮವೆಂಬ ಮೊಸಳೆಯಿಂದ ಹಿಡಿಯಲ್ಪಟ್ಟವನಿಗೆ ಜ್ಞಾನವೂ ನೌಕೆಯಾಗುವುದಿಲ್ಲ.

12227021a ತಸ್ಮಾದುನ್ಮಜ್ಜನಸ್ಯಾರ್ಥೇ ಪ್ರಯತೇತ ವಿಚಕ್ಷಣಃ।
12227021c ಏತದುನ್ಮಜ್ಜನಂ ತಸ್ಯ ಯದಯಂ ಬ್ರಾಹ್ಮಣೋ ಭವೇತ್।।

ಆದುದರಿಂದ ಆ ಕಾಲನದವನ್ನು ದಾಟಲು ಸತತವಾಗಿ ಪ್ರಯತ್ನಿಸಬೇಕು. ಇದರಿಂದ ಪಾರಾಗುವವನು ಬ್ರಾಹ್ಮಣನಾಗಬೇಕು.

12227022a ತ್ರ್ಯವದಾತೇ ಕುಲೇ ಜಾತಸ್ತ್ರಿಸಂದೇಹಸ್ತ್ರಿಕರ್ಮಕೃತ್।
12227022c ತಸ್ಮಾದುನ್ಮಜ್ಜನಸ್ತಿಷ್ಠೇನ್ನಿಸ್ತರೇತ್ ಪ್ರಜ್ಞಯಾ ಯಥಾ।।

ಮೂರು ವಿಷಯಗಳ ಕುರಿತು ಮಾತನಾಡುವ2, ಉತ್ತಮ ಕುಲದಲ್ಲಿ ಜನಿಸಿದ, ಸಂದೇಹಗಳಿಲ್ಲದ, ಮೂರು ಕರ್ಮಗಳನ್ನು ಮಾಡುವವನು3 ಕಾಲನದದಲ್ಲಿ ಮುಳುಗುವುದಿಲ್ಲ ಮತ್ತು ಪ್ರಜ್ಞೆಯಿಂದ ದಾಟುತ್ತಾನೆ.

12227023a ಸಂಸ್ಕೃತಸ್ಯ ಹಿ ದಾಂತಸ್ಯ ನಿಯತಸ್ಯ ಕೃತಾತ್ಮನಃ।
12227023c ಪ್ರಾಜ್ಞಸ್ಯಾನಂತರಾ ಸಿದ್ಧಿರಿಹ ಲೋಕೇ ಪರತ್ರ ಚ।।

ಸಂಸ್ಕಾರಸಂಪನ್ನನಾಗಿರುವ ದಾಂತ ನಿಯತ ಕೃತಾತ್ಮ ಪ್ರಾಜ್ಞನಿಗೆ ಇಹದಲ್ಲಿಯೂ ಪರದಲ್ಲಿಯೂ ಸಿದ್ಧಿಯುಂಟಾಗುತ್ತದೆ.

12227024a ವರ್ತತೇ ತೇಷು ಗೃಹವಾನಕ್ರುಧ್ಯನ್ನನಸೂಯಕಃ।
12227024c ಪಂಚಭಿಃ ಸತತಂ ಯಜ್ಞೈರ್ವಿಘಸಾಶೀ ಯಜೇತ ಚ।।

ಗೃಹಸ್ಥಬ್ರಾಹ್ಮಣನು ಕ್ರೋಧರಹಿತನಾಗಿ ಅನಸೂಯಕನಾಗಿ ಸತತವೂ ಪಂಚಯಜ್ಞಗಳಿಂದ ಪೂಜಿಸುತ್ತ ವಿಘಸಾಶಿಯಾಗಿರಬೇಕು.

12227025a ಸತಾಂ ವೃತ್ತೇನ ವರ್ತೇತ ಕ್ರಿಯಾಃ ಶಿಷ್ಟವದಾಚರೇತ್।
12227025c ಅಸಂರೋಧೇನ ಧರ್ಮಸ್ಯ ವೃತ್ತಿಂ ಲಿಪ್ಸೇದಗರ್ಹಿತಾಮ್।।

ಸತ್ಪುರುಷರ ನಡತೆಯಂತೆ ನಡೆದುಕೊಳ್ಳಬೇಕು. ಶಿಷ್ಟರ ಆಚಾರಗಳನ್ನು ಪಾಲಿಸಬೇಕು. ಧರ್ಮವನ್ನು ವಿರೋಧಿಸದ ನಿಂದನೀಯವಲ್ಲದ ವೃತ್ತಿಯನ್ನು ಕೈಗೊಳ್ಳಬೇಕು.

12227026a ಶ್ರುತಿವಿಜ್ಞಾನತತ್ತ್ವಜ್ಞಃ ಶಿಷ್ಟಾಚಾರೋ ವಿಚಕ್ಷಣಃ।
12227026c ಸ್ವಧರ್ಮೇಣ ಕ್ರಿಯಾವಾಂಶ್ಚ ಕರ್ಮಣಾ ಸೋಽಪ್ಯಸಂಕರಃ।।

ಶ್ರುತಿವಿಜ್ಞಾನತತ್ತ್ವಜ್ಞ, ಶಿಷ್ಟಾಚಾರೀ ವಿಚಕ್ಷಣನು ಸ್ವಧರ್ಮದ ಪ್ರಕಾರವೇ ಕ್ರಿಯೆಗಳನ್ನು ಮಾಡಬೇಕು. ಕರ್ಮಗಳಲ್ಲಿ ಸಂಕರಗಳನ್ನುಂಟುಮಾಡಬಾರದು.

12227027a ಕ್ರಿಯಾವಾನ್ ಶ್ರದ್ದಧಾನಶ್ಚ ದಾತಾ ಪ್ರಾಜ್ಞೋಽನಸೂಯಕಃ।
12227027c ಧರ್ಮಾಧರ್ಮವಿಶೇಷಜ್ಞಃ ಸರ್ವಂ ತರತಿ ದುಸ್ತರಮ್।।

ಕ್ರಿಯಾವಂತ, ಶ್ರದ್ಧದಾನ, ದಾತ, ಪ್ರಾಜ್ಞ, ಅನಸೂಯಕ, ಮತ್ತು ಧರ್ಮಾಧರ್ಮಗಳ ಅಂತರವನ್ನು ತಿಳಿದಿರುವವನು ದಾಟಲು ಕಷ್ಟವಾದ ಎಲ್ಲವನ್ನೂ ದಾಟುತ್ತಾನೆ.

12227028a ಧೃತಿಮಾನಪ್ರಮತ್ತಶ್ಚ ದಾಂತೋ ಧರ್ಮವಿದಾತ್ಮವಾನ್।
12227028c ವೀತಹರ್ಷಭಯಕ್ರೋಧೋ ಬ್ರಾಹ್ಮಣೋ ನಾವಸೀದತಿ।।

ಧೃತಿಮಾನ, ಅಪ್ರಮತ್ತ, ದಾಂತ, ಧರ್ಮವಿದು, ಆತ್ಮವಾನ್, ಮತ್ತು ಹರ್ಷ-ಭಯ-ಕ್ರೋಧರಹಿತನಾದ ಬ್ರಾಹ್ಮಣನು ನಾಶಹೊಂದುವುದಿಲ್ಲ.

12227029a ಏಷಾ ಪೂರ್ವತರಾ ವೃತ್ತಿರ್ಬ್ರಾಹ್ಮಣಸ್ಯ ವಿಧೀಯತೇ।
12227029c ಜ್ಞಾನವಿತ್ತ್ವೇನ ಕರ್ಮಾಣಿ ಕುರ್ವನ್ಸರ್ವತ್ರ ಸಿಧ್ಯತಿ।।

ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಈ ವೃತ್ತಿಯು ಬ್ರಾಹ್ಮಣನಿಗೆ ವಿಧಿಸಲ್ಪಟ್ಟಿದೆ. ಜ್ಞಾನಪೂರ್ವಕವಾಗಿ ಮಾಡಿದ ಕರ್ಮಗಳೆಲ್ಲವೂ ಸಿದ್ಧಿಸುತ್ತವೆ.

12227030a ಅಧರ್ಮಂ ಧರ್ಮಕಾಮೋ ಹಿ ಕರೋತೀಹಾವಿಚಕ್ಷಣಃ।
12227030c ಧರ್ಮಂ ಚಾಧರ್ಮಸಂಕಾಶಂ ಶೋಚನ್ನಿವ ಕರೋತಿ ಸಃ।।

ಮೂಢನಾದವನು ಧರ್ಮಕಾರ್ಯವನ್ನು ಮಾಡಲಿಚ್ಛಿಸಿ ಅಧರ್ಮವನ್ನೇ ಮಾಡುತ್ತಾನೆ. ಅಥವಾ ಶೋಕಿಸುತ್ತಿರುವವನಂತೆ ಅಧರ್ಮಸದೃಶವಾದ ಧರ್ಮವನ್ನು ಮಾಡುತ್ತಾನೆ.

12227031a ಧರ್ಮಂ ಕರೋಮೀತಿ ಕರೋತ್ಯಧರ್ಮಮ್ ಅಧರ್ಮಕಾಮಶ್ಚ ಕರೋತಿ ಧರ್ಮಮ್।
12227031c ಉಭೇ ಬಾಲಃ ಕರ್ಮಣೀ ನ ಪ್ರಜಾನನ್ ಸ ಜಾಯತೇ ಮ್ರಿಯತೇ ಚಾಪಿ ದೇಹೀ।।

ಧರ್ಮವನ್ನು ಮಾಡುತ್ತೇನೆಂದು ಅಧರ್ಮವನ್ನು ಮಾಡುವನು ಮತ್ತು ಅಧರ್ಮವನ್ನು ಬಯಸಿ ಧರ್ಮವನ್ನು ಮಾಡುವವನು ಈ ಇಬ್ಬರೂ ಅವಿವೇಕದಿಂದ ಕಾರ್ಯಮಾಡುತ್ತಾ ಹುಟ್ಟುತ್ತಿರುತ್ತಾರೆ ಮತ್ತು ಸಾಯುತ್ತಿರುತ್ತಾರೆ. ಅಂಥವರಿಗೆ ಮೋಕ್ಷವೆಂಬುದೇ ಇಲ್ಲ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಸಪ್ತವಿಂಶಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಇಪ್ಪತ್ತೇಳನೇ ಅಧ್ಯಾಯವು.


  1. ಬ್ರಹ್ಮಯಜ್ಞ, ದೇವಯಜ್ಞ, ಪಿತೃಯಜ್ಞ, ಭೂತಯಜ್ಞ ಮತ್ತು ಮನುಷ್ಯಯಜ್ಞ. ಅಧ್ಯಾಪನಂ ಬ್ರಹ್ಮಯಜ್ಞಃ ಪಿತೃಯಜ್ಞಸ್ತು ತರ್ಪಣಮ್। ಹೋಮ ದೈವೋ ಬಲಿರ್ಭೌತೋ ನೃಯಜ್ಞೋಽತಿಥಿಪೂಜನಮ್।। (ಮನುಸ್ಮೃತಿ) ವೇದಗಳನ್ನು ಹೇಳುವುದು ಬ್ರಹ್ಮಯಜ್ಞ, ತರ್ಪಣಕೊಡುವುದು ಪಿತೃಯಜ್ಞ, ಹೋಮಮಾಡುವುದು ದೇವಯಜ್ಞ, ವೈಶ್ವದೇವಬಲಿಯನ್ನು ಕೊಡುವುದು ಭೂತಯಜ್ಞ ಮತ್ತು ಅತಿಥಿಸತ್ಕಾರವು ಮನುಷ್ಯಯಜ್ಞ. (ಭಾರತ ದರ್ಶನ) ↩︎

  2. ಮೂರು ವೇದಗಳನ್ನು ಹೇಳುವ. ↩︎

  3. ವೇದಗಳಿಗೆ ಸಂಬಂಧಿಸಿದಂತೆ ಅಧ್ಯಯನ, ಯಜ್ಞ ಮತ್ತು ದಾನಕರ್ಮಗಳು. ↩︎