225: ಶುಕಾನುಪ್ರಶ್ನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 225

ಸಾರ

ಬ್ರಾಹ್ಮ ಪ್ರಳಯ ಮತ್ತು ಮಹಾ ಪ್ರಳಯಗಳ ವರ್ಣನೆ (1-16).

12225001 ವ್ಯಾಸ ಉವಾಚ।
12225001a ಪೃಥಿವ್ಯಾಂ ಯಾನಿ ಭೂತಾನಿ ಜಂಗಮಾನಿ ಧ್ರುವಾಣಿ ಚ।
12225001c ತಾನ್ಯೇವಾಗ್ರೇ ಪ್ರಲೀಯಂತೇ ಭೂಮಿತ್ವಮುಪಯಾಂತಿ ಚ।।

ವ್ಯಾಸನು ಹೇಳಿದನು: “ಆ ಸಮಯದಲ್ಲಿ ಮೊದಲು ಪೃಥ್ವಿಯಲ್ಲಿರುವ ಚರಾಚರಪ್ರಾಣಿಗಳೆಲ್ಲವೂ ಅದರಲ್ಲಿ ಲೀನವಾಗಿ ಭೂಮಿತ್ವವನ್ನು ಪಡೆದುಕೊಳ್ಳುತ್ತವೆ.

12225002a ತತಃ ಪ್ರಲೀನೇ ಸರ್ವಸ್ಮಿನ್ ಸ್ಥಾವರೇ ಜಂಗಮೇ ತಥಾ।
12225002c ಅಕಾಷ್ಠಾ1 ನಿಸ್ತೃಣಾ ಭೂಮಿರ್ದೃಶ್ಯತೇ ಕೂರ್ಮಪೃಷ್ಠವತ್।।

ಸ್ಥಾವರ-ಜಂಗಮಗಳೆಲ್ಲವೂ ಅದರಲ್ಲಿ ಲೀನವಾಗಲು ಮರ-ಹುಲ್ಲುಗಳಿಲ್ಲಿದ ಭೂಮಿಯು ಆಮೆಯ ಬೆನ್ನಿನಂತೆ ಬೋಳಾಗಿ ಕಾಣುತ್ತದೆ.

12225003a ಭೂಮೇರಪಿ ಗುಣಂ ಗಂಧಮಾಪ ಆದದತೇ ಯದಾ।
12225003c ಆತ್ತಗಂಧಾ ತದಾ ಭೂಮಿಃ ಪ್ರಲಯತ್ವಾಯ ಕಲ್ಪತೇ।।

ಆಗ ಜಲವು ಭೂಮಿಯ ಗುಣವಾದ ಗಂಧವನ್ನು ತೆಗೆದುಕೊಳ್ಳುತ್ತದೆ. ಗಂಧಹೀನವಾದ ಭೂಮಿಯು ತನ್ನ ಅಸ್ತಿತ್ವಕ್ಕೆ ಕಾರಣಭೂತವಾದ ಜಲದಲ್ಲಿ ಲೀನಗೊಳ್ಳಲು ಕಲ್ಪಿಸುತ್ತದೆ.

12225004a ಆಪಸ್ತತಃ ಪ್ರತಿಷ್ಠಂತಿ ಊರ್ಮಿಮತ್ಯೋ ಮಹಾಸ್ವನಾಃ।
12225004c ಸರ್ವಮೇವೇದಮಾಪೂರ್ಯ ತಿಷ್ಠಂತಿ ಚ ಚರಂತಿ ಚ।।

ಆಗ ನೀರು ದೊಡ್ಡ-ದೊಡ್ಡ ಅಲೆಗಳಿಂದಲೂ ಘೋರ ಶಬ್ದದಿಂದಲೂ ಕೂಡಿ ಎಲ್ಲವನ್ನೂ ತನ್ನಲ್ಲಿ ಮುಳುಗಿಸಿಕೊಂಡು ಪ್ರವಹಿಸುತ್ತದೆ.

12225005a ಅಪಾಮಪಿ ಗುಣಾಂಸ್ತಾತ ಜ್ಯೋತಿರಾದದತೇ ಯದಾ।
12225005c ಆಪಸ್ತದಾ ಆತ್ತಗುಣಾ ಜ್ಯೋತಿಷ್ಯುಪರಮಂತಿ ಚ।।

ಆಗ ಜಲದ ಗುಣವನ್ನೂ ಜ್ಯೋತಿಯು ತೆಗೆದುಕೊಳ್ಳುತ್ತದೆ. ತನ್ನ ಗುಣವನ್ನು ಕಳೆದುಕೊಂಡ ಜಲವೂ ಕೂಡ ಜ್ಯೋತಿಯಲ್ಲಿ ವಿಲೀನವಾಗುತ್ತದೆ.

12225006a ಯದಾದಿತ್ಯಂ ಸ್ಥಿತಂ ಮಧ್ಯೇ ಗೂಹಂತಿ ಶಿಖಿನೋಽರ್ಚಿಷಃ।
12225006c ಸರ್ವಮೇವೇದಮರ್ಚಿರ್ಭಿಃ ಪೂರ್ಣಂ ಜಾಜ್ವಲ್ಯತೇ ನಭಃ।।

ಅಗ್ನಿಯ ಜ್ವಾಲೆಗಳು ಮಧ್ಯದಲ್ಲಿರುವ ಆದಿತ್ಯನನ್ನು ಮುಚ್ಚಿಬಿಡಲು ಆಕಾಶವೆಲ್ಲವೂ ಜ್ವಾಲೆಗಳಿಂದ ವ್ಯಾಪ್ತವಾಗಿ ಪ್ರಜ್ವಲಿಸುತ್ತದೆ.

12225007a ಜ್ಯೋತಿಷೋಽಪಿ ಗುಣಂ ರೂಪಂ ವಾಯುರಾದದತೇ ಯದಾ।
12225007c ಪ್ರಶಾಮ್ಯತಿ ತದಾ ಜ್ಯೋತಿರ್ವಾಯುರ್ದೋಧೂಯತೇ ಮಹಾನ್।।

ಆಗ ಜ್ಯೋತಿಯ ಗುಣವಾದ ರೂಪವನ್ನು ವಾಯುವು ತೆಗೆದುಕೊಳ್ಳಲು ಜ್ಯೋತಿಯು ಆರಿಹೋಗಿ ವಾಯುವು ಮಹತ್ತರ ವೇಗದಿಂದ ಆಕಾಶವೆಲ್ಲವನ್ನೂ ಕ್ಷೋಭೆಗೊಳಿಸುತ್ತದೆ.

12225008a ತತಸ್ತು ಮೂಲಮಾಸಾದ್ಯ2 ವಾಯುಃ ಸಂಭವಮಾತ್ಮನಃ।
12225008c ಅಧಶ್ಚೋರ್ಧ್ವಂ ಚ ತಿರ್ಯಕ್ಚ ದೋಧವೀತಿ ದಿಶೋ ದಶ।।

ತನ್ನ ಹುಟ್ಟಿಗೆ ಕಾರಣವಾದ ತನ್ನ ಮೂಲ ಆಕಾಶವನ್ನು ಸೇರಿ ವಾಯುವು ಮೇಲೆ-ಕೆಳಗೆ, ಅಕ್ಕ-ಪಕ್ಕಗಳಲ್ಲಿ ಮತ್ತು ಹತ್ತುದಿಕ್ಕುಗಳಲ್ಲಿಯೂ ಬಲವಾಗಿ ಬೀಸುತ್ತದೆ.

12225009a ವಾಯೋರಪಿ ಗುಣಂ ಸ್ಪರ್ಶಮಾಕಾಶಂ ಗ್ರಸತೇ ಯದಾ।
12225009c ಪ್ರಶಾಮ್ಯತಿ ತದಾ ವಾಯುಃ ಖಂ ತು ತಿಷ್ಠತಿ ನಾನದತ್।।

ವಾಯುವಿನ ಗುಣವಾದ ಸ್ಪರ್ಶವನ್ನೂ ಆಕಾಶವು ನುಂಗಿಕೊಳ್ಳಲು ವಾಯುವು ಉಪಶಮನಗೊಳ್ಳುತ್ತದೆ. ಶಬ್ದದಿಂದ ಕೂಡಿದ ಆಕಾಶವೊಂದೇ ಆಗ ಉಳಿದಿರುತ್ತದೆ.

312225010a ಆಕಾಶಸ್ಯ ಗುಣಂ ಶಬ್ದಮಭಿವ್ಯಕ್ತಾತ್ಮಕಂ ಮನಃ।
12225010c ಮನಸೋ ವ್ಯಕ್ತಮವ್ಯಕ್ತಂ ಬ್ರಾಹ್ಮಃ ಸ ಪ್ರತಿಸಂಚರಃ।।

ಆಕಾಶದ ಗುಣ ಶಬ್ದವನ್ನು ಅವ್ಯಕ್ತಾತ್ಮಕ ಮನಸ್ಸು, ಮತ್ತು ವ್ಯಕ್ತ ಮನಸ್ಸನ್ನು ಅವ್ಯಕ್ತ ಬ್ರಹ್ಮನು ಲೀನಗೊಳಿಸಿಕೊಳ್ಳುತ್ತಾರೆ. ಇದನ್ನೇ ಬ್ರಾಹ್ಮಪ್ರಳಯ ಎನ್ನುತ್ತಾರೆ.

12225011a ತದಾತ್ಮಗುಣಮಾವಿಶ್ಯ ಮನೋ ಗ್ರಸತಿ ಚಂದ್ರಮಾಃ।
12225011c ಮನಸ್ಯುಪರತೇಽಧ್ಯಾತ್ಮಾ ಚಂದ್ರಮಸ್ಯವತಿಷ್ಠತೇ।।

ಮಹಾಪ್ರಳಯದ ಸಮಯದಲ್ಲಿ ಅವ್ಯಕ್ತಮನಸ್ಸಾದ ಚಂದ್ರಮಸನು ವ್ಯಕ್ತ ಮನಸ್ಸನ್ನು ನುಂಗಿಬಿಡುತ್ತಾನೆ. ಇದರಿಂದ ಮನಸ್ಸು ಶಾಂತವಾದರೂ ಅದು ಅವ್ಯಕ್ತ ಮನಸ್ಸು ಚಂದ್ರಮನಲ್ಲಿ ಪ್ರತಿಷ್ಠಿತವಾಗಿರುತ್ತದೆ.4

12225012a ತಂ ತು ಕಾಲೇನ ಮಹತಾ ಸಂಕಲ್ಪಃ ಕುರುತೇ ವಶೇ।
12225012c ಚಿತ್ತಂ ಗ್ರಸತಿ ಸಂಕಲ್ಪಸ್ತಚ್ಚ ಜ್ಞಾನಮನುತ್ತಮಮ್।।

ಬಹಳ ಸಮಯದ ನಂತರ ಸಂಕಲ್ಪವು ಅವ್ಯಕ್ತ ಮನಸ್ಸನ್ನು ವಶಪಡಿಸಿಕೊಳ್ಳುತ್ತದೆ. ಅನಂತರ ಸಮಷ್ಟಿ ಬುದ್ಧಿಯಾದ ಚಿತ್ತವು ಸಂಕಲ್ಪವನ್ನು ನುಂಗುತ್ತದೆ. ಅದೇ ಅನುತ್ತಮ ಜ್ಞಾನವು.

12225013a ಕಾಲೋ ಗಿರತಿ ವಿಜ್ಞಾನಂ ಕಾಲೋ ಬಲಮಿತಿ ಶ್ರುತಿಃ।
12225013c ಬಲಂ ಕಾಲೋ ಗ್ರಸತಿ ತು ತಂ ವಿದ್ವಾನ್ಕುರುತೇ ವಶೇ।।

ಕಾಲವು ಸಮಷ್ಟಿ ಬುದ್ಧಿ ವಿಜ್ಞಾನವನ್ನು ನುಂಗುತ್ತದೆ. ಶಕ್ತಿಯು ಕಾಲನನ್ನು ನುಂಗುತ್ತದೆ. ಮಹಾಕಾಲನು ಶಕ್ತಿಯನ್ನು ನುಂಗುತ್ತಾನೆ. ಮಹಾಕಾಲನನ್ನು ವಿದ್ವತ್ ಶಬ್ದವಾಚ್ಯನಾದ ಪರಬ್ರಹ್ಮನು ತನ್ನ ಅಧೀನಕ್ಕೆ ಒಳಪಡಿಸಿಕೊಳ್ಳುತ್ತಾನೆ.

12225014a ಆಕಾಶಸ್ಯ ತದಾ ಘೋಷಂ ತಂ ವಿದ್ವಾನ್ಕುರುತೇಽಽತ್ಮನಿ।
12225014c ತದವ್ಯಕ್ತಂ ಪರಂ ಬ್ರಹ್ಮ ತಚ್ಚಾಶ್ವತಮನುತ್ತಮಮ್।
12225014e ಏವಂ ಸರ್ವಾಣಿ ಭೂತಾನಿ ಬ್ರಹ್ಮೈವ ಪ್ರತಿಸಂಚರಃ।।

ಆಕಾಶದ ಗುಣವಾದ ಶಬ್ದವನ್ನು ವ್ಯಕ್ತ ಮನಸ್ಸು ಹೇಗೆ ತನ್ನಲ್ಲಿ ಲಯಮಾಡಿಕೊಳ್ಳುವುದೋ ಹಾಗೆ ಅವ್ಯಕ್ತ, ಶಾಶ್ವತ, ಪರಮಶ್ರೇಷ್ಠ ಬ್ರಹ್ಮವಸ್ತುವು ಮಹಾಕಾಲನನ್ನು ತನ್ನಲ್ಲಿಯೇ ಲೀನಮಾಡಿಕೊಳ್ಳುತ್ತದೆ. ಹೀಗೆ ಪ್ರಳಯಾನಂತರ ಸರ್ವಭೂತಗಳೂ ಪರಬ್ರಹ್ಮ ಪರಮಾತ್ಮನಲ್ಲಿಯೇ ಆಶ್ರಯವನ್ನು ಪಡೆಯುತ್ತವೆ.

12225015a ಯಥಾವತ್ಕೀರ್ತಿತಂ ಸಮ್ಯಗೇವಮೇತದಸಂಶಯಮ್।
12225015c ಬೋಧ್ಯಂ ವಿದ್ಯಾಮಯಂ ದೃಷ್ಟ್ವಾ ಯೋಗಿಭಿಃ ಪರಮಾತ್ಮಭಿಃ।।

ಪರಮಾತ್ಮ ಯೋಗಿಗಳು ಜ್ಞಾನಮಯ ಪರಬ್ರಹ್ಮನನ್ನು ಜ್ಞಾನದೃಷ್ಟಿಯಿಂದ ನೋಡಿ ಅದನ್ನು ಯಥಾವತ್ತಾಗಿ ಸಂದೇಹವೇ ಇಲ್ಲದಂತೆ ಹೇಗೆ ಚೆನ್ನಾಗಿ ವರ್ಣಿಸಿದ್ದಾರೋ ಹಾಗೆಯೇ ಬ್ರಹ್ಮವಸ್ತುವಿನ ಸ್ವರೂಪವಿದೆ.

12225016a ಏವಂ ವಿಸ್ತಾರಸಂಕ್ಷೇಪೌ ಬ್ರಹ್ಮಾವ್ಯಕ್ತೇ ಪುನಃ ಪುನಃ।
12225016c ಯುಗಸಾಹಸ್ರಯೋರಾದಾವಹ್ನೋ ರಾತ್ರ್ಯಾಸ್ತಥೈವ ಚ।।

ಹೀಗೆ ಒಂದು ಸಾವಿರ ಚತುರ್ಯುಗ ಪರ್ಯಂತದ ಹಗಲಿನಲ್ಲಿ ಮತ್ತು ಅಷ್ಟೇ ಕಾಲದ ರಾತ್ರಿಯಲ್ಲಿ ಅವ್ಯಕ್ತ ಬ್ರಹ್ಮನು ವಿಸ್ತಾರ-ಸಂಕ್ಷೇಪಗಳನ್ನು ಪುನಃ ಪುನಃ ಹೊಂದುತ್ತಿರುತ್ತಾನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಪಂಚವಿಂಶಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಇಪ್ಪತ್ತೈದನೇ ಅಧ್ಯಾಯವು.


  1. ನಿರ್ವೃಕ್ಷಾ (ಭಾರತ ದರ್ಶನ). ↩︎

  2. ಸ್ವನಮಾಸಾದ್ಯ (ಭಾರತ ದರ್ಶನ). ↩︎

  3. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಅರೂಪಮರಸಸ್ಪರ್ಶಮಗಂಧಂ ನ ಚ ಮೂರ್ತಿಮತ್। ಸರ್ವಲೋಕಪ್ರಣದಿತಂ ಖಂ ತು ತಿಷ್ಠತಿ ನಾದವತ್।। (ಭಾರತ ದರ್ಶನ). ↩︎

  4. ಆಗ ಚಂದ್ರಮವು ಆತ್ಮಗುಣ ಅರ್ಥಾತ್ ನಿಃಸ್ಸೀಮ ಜ್ಞಾನ, ವೈರಾಗ್ಯ ಮತ್ತು ಐಶ್ವರ್ಯ ಹಾಗೂ ಧರ್ಮರೂಪ ಕರ್ಮಗಳಲ್ಲಿ ಅವಿಷ್ಟನಾಗಿ ಹಿರಣ್ಯಗರ್ಭ ಸಂಬಂಧದ ಸಮಷ್ಟಿ ಮನಸ್ಸನ್ನು ನಷ್ಟಗೊಳಿಸುತ್ತದೆ. ಮನಸ್ಸು ಶಾಂತವಾದಾಗಲೂ ಆತ್ಮಗುಣವು ಚಂದ್ರಮದಲ್ಲಿ ಇರುತ್ತದೆ. (ದಾಮೋದರ್ ಸತ್ವಾಲೇಕರ್: ಸ್ವಾಧ್ಯಾಯ ಮಂಡಲ) ↩︎