ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 224
ಸಾರ
ಶುಕನ ಪ್ರಶ್ನೆಗೆ ಉತ್ತರಿಸುತ್ತಾ ವ್ಯಾಸನು ಕಾಲದ ಸ್ವರೂಪವನ್ನು ವರ್ಣಿಸಿದುದು (1-31). ಸೃಷ್ಟಿಯ ಉತ್ಪತ್ತಿ ಕ್ರಮ ಮತ್ತು ಯುಗಧರ್ಮಗಳನ್ನು ಉಪದೇಶಿಸಿದುದು (32-75).
12224001 ಯುಧಿಷ್ಠಿರ ಉವಾಚ।
12224001a ಆದ್ಯಂತಂ ಸರ್ವಭೂತಾನಾಂ ಶ್ರೋತುಮಿಚ್ಚಾಮಿ ಕೌರವ।
12224001c ಧ್ಯಾನಂ ಕರ್ಮ ಚ ಕಾಲಂ ಚ ತಥೈವಾಯುರ್ಯುಗೇ ಯುಗೇ।।
ಯುಧಿಷ್ಠಿರನು ಹೇಳಿದನು: “ಕೌರವ! ಸರ್ವಭೂತಗಳ ಆದಿ-ಅಂತ್ಯಗಳ ಕುರಿತು ಕೇಳಬಯಸುತ್ತೇನೆ. ಯುಗ-ಯುಗಗಳಲ್ಲಿ ಧ್ಯಾನ, ಕರ್ಮ, ಕಾಲ ಮತ್ತು ಆಯುಸ್ಸುಗಳ ಸ್ವರೂಪಗಳೇನು?
12224002a ಲೋಕತತ್ತ್ವಂ ಚ ಕಾರ್ತ್ಸ್ನ್ಯೇನ ಭೂತಾನಾಮಾಗತಿಂ ಗತಿಮ್।
12224002c ಸರ್ಗಶ್ಚ ನಿಧನಂ ಚೈವ ಕುತ ಏತತ್ ಪ್ರವರ್ತತೇ।।
ಲೋಕತತ್ತ್ವ ಮತ್ತು ಭೂತಗಳ ಬಂದು-ಹೋಗುವಿಕೆ, ಸೃಷ್ಟಿ-ಲಯಗಳು ಇವೆಲ್ಲವೂ ಸಂಪೂರ್ಣವಾಗಿ ಹೇಗೆ ನಡೆಯುತ್ತವೆ?
12224003a ಯದಿ ತೇಽನುಗ್ರಹೇ ಬುದ್ಧಿರಸ್ಮಾಸ್ವಿಹ ಸತಾಂ ವರ।
12224003c ಏತದ್ಭವಂತಂ ಪೃಚ್ಚಾಮಿ ತದ್ಭವಾನ್ ಪ್ರಬ್ರವೀತು ಮೇ।।
ಸತ್ಪುರುಷರಲ್ಲಿ ಶ್ರೇಷ್ಠ! ನಮ್ಮ ಮೇಲೆ ನಿನಗೆ ಅನುಗ್ರಹ ಬುದ್ಧಿಯಿದ್ದರೆ ನಾನು ಕೇಳುವ ಇದನ್ನು ನೀನು ನನಗೆ ಹೇಳಬೇಕು.
12224004a ಪೂರ್ವಂ ಹಿ ಕಥಿತಂ ಶ್ರುತ್ವಾ ಭೃಗುಭಾಷಿತಮುತ್ತಮಮ್।
12224004c ಭರದ್ವಾಜಸ್ಯ ವಿಪ್ರರ್ಷೇಸ್ತತೋ ಮೇ ಬುದ್ಧಿರುತ್ತಮಾ।।
ಈ ಮೊದಲೇ ನೀನು ಹೇಳಿದ ವಿಪ್ರರ್ಷಿ ಭೃಗುವು ಭಾರದ್ವಾಜನಿಗೆ ಆಡಿದ ಉತ್ತಮ ಮಾತುಗಳನ್ನು ಕೇಳಿ ನನ್ನ ಬುದ್ಧಿಯು ಉತ್ತಮಗೊಂಡಿತು.
12224005a ಜಾತಾ ಪರಮಧರ್ಮಿಷ್ಠಾ ದಿವ್ಯಸಂಸ್ಥಾನಸಂಸ್ಥಿತಾ।
12224005c ತತೋ ಭೂಯಸ್ತು ಪೃಚ್ಚಾಮಿ ತದ್ಭವಾನ್ವಕ್ತುಮರ್ಹತಿ।।
ನನ್ನ ಬುದ್ಧಿಯು ಪರಮ ಧರ್ಮಿಷ್ಠವಾಯಿತು. ದಿವ್ಯಸಂಸ್ಥಾನದಲ್ಲಿ ನೆಲೆಗೊಂಡಿತು. ಆದರೂ ಇನ್ನೂ ಕೇಳುತ್ತಿದ್ದೇನೆ. ಅದನ್ನು ನೀನು ಹೇಳಬೇಕು.”
12224006 ಭೀಷ್ಮ ಉವಾಚ।
12224006a ಅತ್ರ ತೇ ವರ್ತಯಿಷ್ಯೇಽಹಮಿತಿಹಾಸಂ ಪುರಾತನಮ್।
12224006c ಜಗೌ ಯದ್ ಭಗವಾನ್ವ್ಯಾಸಃ ಪುತ್ರಾಯ ಪರಿಪೃಚ್ಚತೇ।।
ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವನ್ನು ಹೇಳುತ್ತೇನೆ. ಮಗನು ಪ್ರಶ್ನಿಸಲು ಭಗವಾನ್ ವ್ಯಾಸನು ಇದನ್ನು ಹೇಳಿದ್ದನು.
12224007a ಅಧೀತ್ಯ ವೇದಾನಖಿಲಾನ್ಸಾಂಗೋಪನಿಷದಸ್ತಥಾ।
12224007c ಅನ್ವಿಚ್ಚನ್ನೈಷ್ಠಿಕಂ ಕರ್ಮ ಧರ್ಮನೈಪುಣದರ್ಶನಾತ್।।
12224008a ಕೃಷ್ಣದ್ವೈಪಾಯನಂ ವ್ಯಾಸಂ ಪುತ್ರೋ ವೈಯಾಸಕಿಃ ಶುಕಃ।
12224008c ಪಪ್ರಚ್ಚ ಸಂದೇಹಮಿಮಂ ಚಿನ್ನಧರ್ಮಾರ್ಥಸಂಶಯಮ್।।
ವ್ಯಾಸ ಪುತ್ರ ಶುಕನು ಅಖಿಲ ವೇದಗಳನ್ನೂ, ಅವುಗಳ ಅಂಗಗಳಾದ ಉಪನಿಷತ್ತುಗಳನ್ನೂ ಅಧ್ಯಯನ ಮಾಡಿ, ನೈಷ್ಠಿಕ ಕರ್ಮವನ್ನು ತಿಳಿಯಲು ಬಯಸಿ, ಧರ್ಮಾರ್ಥಸಂಶಯಗಳನ್ನು ಹೋಗಲಾಡಿಸಿಕೊಳ್ಳುವುದಕ್ಕಾಗಿ, ಯಾರಲ್ಲಿ ಧರ್ಮನೈಪುಣ್ಯತೆಯನ್ನು ಕಂಡಿದ್ದನೋ ಆ ತಂದೆ ಕೃಷ್ಣದ್ವೈಪಾಯನನಲ್ಲಿ ಈ ಸಂದೇಹವನ್ನು ಪ್ರಶ್ನಿಸಿದನು:
12224009a ಭೂತಗ್ರಾಮಸ್ಯ ಕರ್ತಾರಂ ಕಾಲಜ್ಞಾನೇ ಚ ನಿಶ್ಚಯಮ್।
12224009c ಬ್ರಾಹ್ಮಣಸ್ಯ ಚ ಯತ್ಕೃತ್ಯಂ ತದ್ಭವಾನ್ವಕ್ತುಮರ್ಹತಿ।।
“ಭೂತಗ್ರಾಮದ ಕರ್ತಾರನನ್ನೂ, ಕಾಲಜ್ಞಾನದಲ್ಲಿ ನಿನ್ನ ನಿಶ್ಚಯವನ್ನೂ ಮತ್ತು ಬ್ರಾಹ್ಮಣನ ಕರ್ತ್ಯವ್ಯಗಳೇನೆನ್ನುವುದನ್ನು ನೀನು ಹೇಳಬೇಕು.”
12224010a ತಸ್ಮೈ ಪ್ರೋವಾಚ ತತ್ಸರ್ವಂ ಪಿತಾ ಪುತ್ರಾಯ ಪೃಚ್ಚತೇ।
12224010c ಅತೀತಾನಾಗತೇ ವಿದ್ವಾನ್ಸರ್ವಜ್ಞಃ ಸರ್ವಧರ್ಮವಿತ್।।
ಮಗನು ಕೇಳಲು ಭೂತ-ಭವಿಷ್ಯಗಳನ್ನು ತಿಳಿದಿದ್ದ, ಸರ್ವಜ್ಞ, ಸರ್ವಧರ್ಮವಿದು ತಂದೆಯು ಅವನಿಗೆ ಸರ್ವವನ್ನೂ ಹೇಳಿದನು.
12224011a ಅನಾದ್ಯಂತಮಜಂ ದಿವ್ಯಮಜರಂ ಧ್ರುವಮವ್ಯಯಮ್।
12224011c ಅಪ್ರತರ್ಕ್ಯಮವಿಜ್ಞೇಯಂ ಬ್ರಹ್ಮಾಗ್ರೇ ಸಮವರ್ತತ।।
“ಸೃಷ್ಟಿಯ ಮೊದಲು ಆದಿ-ಅಂತ್ಯಗಳಿಲ್ಲದ, ಹುಟ್ಟಿಲ್ಲದ, ದಿವ್ಯ, ಅಜರ, ಧ್ರುವ, ಅವ್ಯಯ, ತರ್ಕಕ್ಕೆ ಅತೀತವಾದ ಮತ್ತು ಯಾರಿಂದಲೂ ತಿಳಿಯಲ್ಪಡದಿರುವ ಬ್ರಹ್ಮವಸ್ತುವೊಂದೇ ಇದ್ದಿತ್ತು1.
12224012a ಕಾಷ್ಠಾ ನಿಮೇಷಾ ದಶ ಪಂಚ ಚೈವ ತ್ರಿಂಶತ್ತು ಕಾಷ್ಠಾ ಗಣಯೇತ್ಕಲಾಂ ತಾಮ್।
12224012c ತ್ರಿಂಶತ್ಕಲಾಶ್ಚಾಪಿ ಭವೇನ್ಮುಹೂರ್ತೋ ಭಾಗಃ ಕಲಾಯಾ ದಶಮಶ್ಚ ಯಃ ಸ್ಯಾತ್।।
ಹದಿನೈದು ನಿಮೇಷ2ಗಳು ಒಂದು ಕಾಷ್ಠಾ. ಮೂವತ್ತು ಕಾಷ್ಠಾಗಳನ್ನು ಒಂದು ಕಲಾ ಎಂದು ಲೆಕ್ಕಮಾಡಬೇಕು. ಮೂವತ್ತು ಕಲಾಗಳು ಮತ್ತು ಕಲಾದ ಹತ್ತನೆಯ ಒಂದು ಭಾಗ – ಇವು ಸೇರಿ3 ಒಂದು ಮುಹೂರ್ತವಾಗುತ್ತವೆ.
12224013a ತ್ರಿಂಶನ್ಮುಹೂರ್ತಶ್ಚ ಭವೇದಹಶ್ಚ ರಾತ್ರಿಶ್ಚ ಸಂಖ್ಯಾ ಮುನಿಭಿಃ ಪ್ರಣೀತಾ।
12224013c ಮಾಸಃ ಸ್ಮೃತೋ ರಾತ್ರ್ಯಹನೀ ಚ ತ್ರಿಂಶತ್ ಸಂವತ್ಸರೋ ದ್ವಾದಶಮಾಸ ಉಕ್ತಃ।
12224013e ಸಂವತ್ಸರಂ ದ್ವೇ ಅಯನೇ ವದಂತಿ ಸಂಖ್ಯಾವಿದೋ ದಕ್ಷಿಣಮುತ್ತರಂ ಚ।।
ಮೂವತ್ತು ಮುಹೂರ್ತಗಳಿಗೆ ಒಂದು ಹಗಲು ಮತ್ತು ಒಂದು ರಾತ್ರಿಯಾಗುತ್ತದೆ. ಈ ಸಂಖ್ಯೆಯನ್ನು ಮುನಿಗಳೇ ಹೇಳಿದ್ದಾರೆ. ಮೂವತ್ತು ಹಗಲು-ರಾತ್ರಿಗಳು ಸೇರಿ ಒಂದು ಮಾಸ ಎನಿಸಿಕೊಳ್ಳುತ್ತದೆ. ಹನ್ನೆರಡು ಮಾಸಗಳನ್ನು ಸಂವತ್ಸರವೆಂದು ಹೇಳುತ್ತಾರೆ. ಸಂಖ್ಯಾವಿದುಗಳು ಸಂವತ್ಸರದಲ್ಲಿ ದಕ್ಷಿಣ ಮತ್ತು ಉತ್ತರಗಳೆಂಬ ಎರಡು ಅಯನಗಳಿವೆಯೆಂದು ಹೇಳುತ್ತಾರೆ.
12224014a ಅಹೋರಾತ್ರೇ ವಿಭಜತೇ ಸೂರ್ಯೋ ಮಾನುಷಲೌಕಿಕೇ।
12224014c ರಾತ್ರಿಃ ಸ್ವಪ್ನಾಯ ಭೂತಾನಾಂ ಚೇಷ್ಟಾಯೈ ಕರ್ಮಣಾಮಹಃ।।
ಮನುಷ್ಯಲೋಕದಲ್ಲಿ ಸೂರ್ಯನು ಹಗಲು-ರಾತ್ರಿಗಳನ್ನು ವಿಭಜಿಸುತ್ತಾನೆ. ರಾತ್ರಿಯು ಭೂತಗಳಿಗೆ ನಿದ್ರೆಮಾಡಲಿಕ್ಕೆ ಮತ್ತು ಹಗಲು ಕೆಲಸಮಾಡುವುದಕ್ಕೆ.
12224015a ಪಿತ್ರ್ಯೇ ರಾತ್ರ್ಯಹನೀ ಮಾಸಃ ಪ್ರವಿಭಾಗಸ್ತಯೋಃ ಪುನಃ।
12224015c ಕೃಷ್ಣೋಽಹಃ ಕರ್ಮಚೇಷ್ಟಾಯಾಂ ಶುಕ್ಲಃ ಸ್ವಪ್ನಾಯ ಶರ್ವರೀ4।।
ಮನುಷ್ಯರ ಒಂದು ಮಾಸವು ಪಿತೃಗಳಿಗೆ ಒಂದು ಹಗಲು-ರಾತ್ರಿಯಾಗುತ್ತದೆ. ಅದರಲ್ಲಿ ಪುನಃ ವಿಭಾಗವಿದೆ: ಕೃಷ್ಣಪಕ್ಷವು ಅವರ ಕರ್ಮಾರ್ಥವಾಗಿ ಹಗಲಾಗುತ್ತದೆ ಮತ್ತು ಶುಕ್ಲಪಕ್ಷವು ಅವರ ನಿದ್ರೆಗಾಗಿ ರಾತ್ರಿಯಾಗುತ್ತದೆ.
12224016a ದೈವೇ ರಾತ್ರ್ಯಹನೀ ವರ್ಷಂ ಪ್ರವಿಭಾಗಸ್ತಯೋಃ ಪುನಃ।
12224016c ಅಹಸ್ತತ್ರೋದಗಯನಂ ರಾತ್ರಿಃ ಸ್ಯಾದ್ದಕ್ಷಿಣಾಯನಮ್।।
ಮನುಷ್ಯರ ಒಂದು ವರ್ಷವು ದೇವತೆಗಳಿಗೆ ಒಂದು ಹಗಲು-ರಾತ್ರಿಯಾಗುತ್ತದೆ. ಅದರಲ್ಲಿ ಪುನಃ ವಿಭಾಗವಿದೆ: ಉತ್ತರಾಯಣವು ಅವರಿಗೆ ಹಗಲಾಗುತ್ತದೆ ಮತ್ತು ದಕ್ಷಿಣಾಯನವು ಅವರಿಗೆ ರಾತ್ರಿಯಾಗುತ್ತದೆ.
12224017a ಯೇ ತೇ ರಾತ್ರ್ಯಹನೀ ಪೂರ್ವೇ ಕೀರ್ತಿತೇ ದೈವಲೌಕಿಕೇ5।
12224017c ತಯೋಃ ಸಂಖ್ಯಾಯ ವರ್ಷಾಗ್ರಂ ಬ್ರಾಹ್ಮೇ ವಕ್ಷ್ಯಾಮ್ಯಹಃಕ್ಷಪೇ।।
ಹಿಂದೆ ಹೇಳಿದ ದೇವಲೋಕದವರಿಗೆ ಹೇಗೆ ಹಗಲು-ರಾತ್ರಿಗಳಿವೆಯೋ ಹಾಗೆ ಬ್ರಹ್ಮನ ಹಗಲು-ರಾತ್ರಿಯ ವರ್ಷಗಳ ಸಂಖ್ಯೆಯನ್ನು ಹೇಳುತ್ತೇನೆ.
12224018a ತೇಷಾಂ ಸಂವತ್ಸರಾಗ್ರಾಣಿ ಪ್ರವಕ್ಷ್ಯಾಮ್ಯನುಪೂರ್ವಶಃ।
12224018c ಕೃತೇ ತ್ರೇತಾಯುಗೇ ಚೈವ ದ್ವಾಪರೇ ಚ ಕಲೌ ತಥಾ।।
ಹಾಗೆಯೇ ಕೃತ, ತ್ರೇತಾ, ದ್ವಾಪರ ಮತ್ತು ಕಲಿಯುಗಗಳಲ್ಲಿರುವ ಸಂವತ್ಸರಗಳನ್ನೂ ಅನುಕ್ರಮವಾಗಿ ಹೇಳುತ್ತೇನೆ.
12224019a ಚತ್ವಾರ್ಯಾಹುಃ ಸಹಸ್ರಾಣಿ ವರ್ಷಾಣಾಂ ತತ್ಕೃತಂ ಯುಗಮ್।
12224019c ತಸ್ಯ ತಾವಚ್ಚತೀ ಸಂಧ್ಯಾ ಸಂಧ್ಯಾಂಶಶ್ಚ ತಥಾವಿಧಃ।।
ದೇವತೆಗಳ ನಾಲ್ಕು ಸಾವಿರ ವರ್ಷಗಳನ್ನು ಕೃತಯುಗವೆಂದು ಹೇಳುತ್ತಾರೆ. ಅದಕ್ಕೆ ಅಷ್ಟೇ ನೂರು ಸಂಖ್ಯೆಯ6 ಮೊದಲ ಸಂಧ್ಯೆ ಮತ್ತು ನಂತರದ ಸಂಧ್ಯಾಂಶಗಳಿವೆ.
12224020a ಇತರೇಷು ಸಸಂಧ್ಯೇಷು ಸಸಂಧ್ಯಾಂಶೇಷು ಚ ತ್ರಿಷು।
12224020c ಏಕಾಪಾಯೇನ ಸಂಯಾಂತಿ ಸಹಸ್ರಾಣಿ ಶತಾನಿ ಚ।।
ಸಂಧ್ಯಾ ಮತ್ತು ಸಂಧ್ಯಾಂಶಗಳೊಂದಿಗೆ ಇತರ ಮೂರು ಯುಗಗಳಲ್ಲಿ ಕೃತಯುಗದ ಸಹಸ್ರಗಳಲ್ಲಿ ಮತ್ತು ನೂರರಲ್ಲಿ ಕ್ರಮವಾಗಿ ಒಂದೊಂದು ಪಾದದಷ್ಟು ಕಡಿಮೆಯಾಗುತ್ತದೆ7.
12224021a ಏತಾನಿ ಶಾಶ್ವತಾಽಲ್ಲೋಕಾನ್ ಧಾರಯಂತಿ ಸನಾತನಾನ್।
12224021c ಏತದ್ಬ್ರಹ್ಮವಿದಾಂ ತಾತ ವಿದಿತಂ ಬ್ರಹ್ಮ ಶಾಶ್ವತಮ್।।
ಇವೇ ಶಾಶ್ವತ ಸನಾತನ ಲೋಕಗಳನ್ನು ಧರಿಸಿಕೊಂಡಿವೆ. ಮಗೂ! ಈ ಶಾಶ್ವತ ಬ್ರಹ್ಮಸ್ವರೂಪ ಕಾಲವನ್ನು ಬ್ರಹ್ಮವಿದುಗಳು ತಿಳಿದಿರುತ್ತಾರೆ.
12224022a ಚತುಷ್ಪಾತ್ಸಕಲೋ ಧರ್ಮಃ ಸತ್ಯಂ ಚೈವ ಕೃತೇ ಯುಗೇ।
12224022c ನಾಧರ್ಮೇಣಾಗಮಃ ಕಶ್ಚಿತ್ಪರಸ್ತಸ್ಯ ಪ್ರವರ್ತತೇ।।
ಕೃತಯುಗದಲ್ಲಿ ಧರ್ಮ ಮತ್ತು ಸತ್ಯಗಳು ನಾಲ್ಕೂ ಪಾದಗಳಿಂದ ಪೂರ್ಣವಾಗಿರುತ್ತವೆ. ಅಧರ್ಮವೇ ಇಲ್ಲದಿರುವುದರಿಂದ ಅಲ್ಲಿ ಯಾವ ಆಗಮ ಶಾಸ್ತ್ರಗಳೂ ಇರುವುದಿಲ್ಲ.
12224023a ಇತರೇಷ್ವಾಗಮಾದ್ಧರ್ಮಃ ಪಾದಶಸ್ತ್ವವರೋಪ್ಯತೇ।
12224023c ಚೌರಿಕಾನೃತಮಾಯಾಭಿರಧರ್ಮಶ್ಚೋಪಚೀಯತೇ।।
ಇತರ ಯುಗಗಳಲ್ಲಿ ಆಗಮಗಳಿಂದ ಧರ್ಮವನ್ನು ತಿಳಿಯಬೇಕಾಗುತ್ತದೆ. ಆ ಯುಗಗಳಲ್ಲಿ ಕ್ರಮವಾಗಿ ಒಂದೊಂದು ಪಾದವು ಕ್ಷೀಣಿಸುತ್ತದೆ. ಕಳ್ಳತನ, ಅಸತ್ಯ ಮತ್ತು ಮೋಸಗಳಿಂದ ಅಧರ್ಮವು ವೃದ್ಧಿಸುತ್ತದೆ.
12224024a ಅರೋಗಾಃ ಸರ್ವಸಿದ್ಧಾರ್ಥಾಶ್ಚತುರ್ವರ್ಷಶತಾಯುಷಃ।
12224024c ಕೃತೇ ತ್ರೇತಾದಿಷ್ವೇತೇಷಾಂ ಪಾದಶೋ ಹ್ರಸತೇ ವಯಃ।।
ಸತ್ಯಯುಗದಲ್ಲಿ ಮನುಷ್ಯರು ನಿರೋಗಿಗಳಾಗಿದ್ದು ಸರ್ವಾರ್ಥಗಳನ್ನು ಸಿದ್ಧಿಸಿಕೊಂಡು ನಾಲ್ಕು ನೂರುವರ್ಷಗಳ ಆಯುಸ್ಸನ್ನು ಪಡೆದಿರುತ್ತಾರೆ. ತ್ರೇತಾಯುಗದಲ್ಲಿ ಮತ್ತು ಇತರ ಯುಗಗಳಲ್ಲಿ ಅವರ ವಯಸ್ಸು ಕ್ರಮವಾಗಿ ಒಂದು ಪಾದ ಕಡಿಮೆಯಾಗುತ್ತದೆ8.
12224025a ವೇದವಾದಾಶ್ಚಾನುಯುಗಂ ಹ್ರಸಂತೀತಿ ಚ ನಃ ಶ್ರುತಮ್।
12224025c ಆಯೂಂಷಿ ಚಾಶಿಷಶ್ಚೈವ ವೇದಸ್ಯೈವ ಚ ಯತ್ಫಲಮ್।।
ಪ್ರತಿ ಯುಗದಲ್ಲಿಯೂ ವೇದಾಧ್ಯಯನ ಮತ್ತು ಅದರ ಫಲ, ಆಶಾ, ಸಿದ್ಧಿ ಮತ್ತು ಆಯುಸ್ಸುಗಳು ಕ್ರಮವಾಗಿ ಕಡಿಮೆಯಾಗುತ್ತಾ ಹೋಗುತ್ತದೆಯೆಂದು ನಾವು ಕೇಳಿದ್ದೇವೆ.
12224026a ಅನ್ಯೇ ಕೃತಯುಗೇ ಧರ್ಮಾಸ್ತ್ರೇತಾಯಾಂ ದ್ವಾಪರೇಽಪರೇ।
12224026c ಅನ್ಯೇ ಕಲಿಯುಗೇ ಧರ್ಮಾ ಯಥಾಶಕ್ತಿಕೃತಾ ಇವ।।
ಯುಗಗಳ ಕಾಲವು ಕಡಿಮೆಯಾಗುವುದನ್ನು ಅನುಸರಿಸಿ ಕೃತ, ತ್ರೇತಾ, ದ್ವಾಪರ ಮತ್ತು ಕಲಿಯುಗಗಳಲ್ಲಿ ಮನುಷ್ಯರ ಧರ್ಮವೂ ಭಿನ್ನ ಭಿನ್ನವಾಗಿರುತ್ತದೆ.
12224027a ತಪಃ ಪರಂ ಕೃತಯುಗೇ ತ್ರೇತಾಯಾಂ ಜ್ಞಾನಮುತ್ತಮಮ್।
12224027c ದ್ವಾಪರೇ ಯಜ್ಞಮೇವಾಹುರ್ದಾನಮೇವ ಕಲೌ ಯುಗೇ।।
ಕೃತಯುಗದಲ್ಲಿ ತಪಸ್ಸು ಪರಮ ಧರ್ಮವಾಗಿರುತ್ತದೆ. ತ್ರೇತಾಯುಗದಲ್ಲಿ ಜ್ಞಾನವೇ ಉತ್ತಮವು. ದ್ವಾಪರದಲ್ಲಿ ಯಜ್ಞವು ಪರಮ ಧರ್ಮವೆಂದೂ ಕಲಿಯುಗದಲ್ಲಿ ದಾನವೇ ಪರಮ ಧರ್ಮವೆಂದೂ ಹೇಳುತ್ತಾರೆ.
12224028a ಏತಾಂ ದ್ವಾದಶಸಾಹಸ್ರೀಂ ಯುಗಾಖ್ಯಾಂ ಕವಯೋ ವಿದುಃ।
12224028c ಸಹಸ್ರಂ ಪರಿವೃತ್ತಂ ತದ್ ಬ್ರಾಹ್ಮಂ ದಿವಸಮುಚ್ಯತೇ।।
ಹೀಗೆ ದೇವತೆಗಳ 12,000 ವರ್ಷಗಳನ್ನು9 ಒಂದು ಚತುರ್ಯುಗವೆಂದು ವಿದ್ವಾಂಸರು ಹೇಳುತ್ತಾರೆ. ಇಂತಹ ಚತುರ್ಯುಗಗಳು ಒಂದು ಸಾವಿರ ಸಲ ಪರಿವರ್ತನೆ ಹೊಂದಿದರೆ ಬ್ರಹ್ಮನ ಒಂದು ಹಗಲು ಎನ್ನುತ್ತಾರೆ.
12224029a ರಾತ್ರಿಸ್ತಾವತ್ತಿಥೀ ಬ್ರಾಹ್ಮೀ ತದಾದೌ ವಿಶ್ವಮೀಶ್ವರಃ।
12224029c ಪ್ರಲಯೇಽಧ್ಯಾತ್ಮಮಾವಿಶ್ಯ ಸುಪ್ತ್ವಾ ಸೋಽಂತೇ ವಿಬುಧ್ಯತೇ।।
ಬ್ರಹ್ಮನ ರಾತ್ರಿಯೂ 12,000 ದಿವ್ಯ ವರ್ಷಗಳ ಪರ್ಯಂತವಾಗಿಯೇ ಇರುತ್ತದೆ. ಈಶ್ವರ ಬ್ರಹ್ಮನು ತನ್ನ ದಿನದ ಆರಂಭದಲ್ಲಿ ಪ್ರಪಂಚವನ್ನು ಸೃಷ್ಟಿಸುತ್ತಾನೆ. ರಾತ್ರಿಯಲ್ಲಿ ಪ್ರಲಯವಾದಾಗ ಪ್ರಪಂಚವೆಲ್ಲವನ್ನೂ ತನ್ನಲ್ಲಿಯೇ ಲೀನಗೊಳಿಸಿ ಯೋಗನಿದ್ರೆಯಲ್ಲಿ ಮಲಗುತ್ತಾನೆ. ರಾತ್ರಿಯು ಕಳೆಯಲು ಎಚ್ಚರಗೊಳ್ಳುತ್ತಾನೆ.
12224030a ಸಹಸ್ರಯುಗಪರ್ಯಂತಮಹರ್ಯದ್ ಬ್ರಹ್ಮಣೋ ವಿದುಃ।
12224030c ರಾತ್ರಿಂ ಯುಗಸಹಸ್ರಾಂತಾಂ ತೇಽಹೋರಾತ್ರವಿದೋ ಜನಾಃ।।
ಸಹಸ್ರ ಚತುರ್ಯುಗಪರ್ಯಂತವಾದ ಬ್ರಹ್ಮನ ಹಗಲನ್ನೂ, ಹಾಗೆಯೇ ಸಹಸ್ರ ಚತುರ್ಯುಗಪರ್ಯಂತವಾದ ಬ್ರಹ್ಮನ ರಾತ್ರಿಯನ್ನೂ ತಿಳಿದಿರುವವರು ಆಹೋರಾತ್ರಿಗಳನ್ನು ತಿಳಿದವರಾಗಿರುತ್ತಾರೆ.
12224031a ಪ್ರತಿಬುದ್ಧೋ ವಿಕುರುತೇ ಬ್ರಹ್ಮಾಕ್ಷಯ್ಯಂ ಕ್ಷಪಾಕ್ಷಯೇ।
12224031c ಸೃಜತೇ ಚ ಮಹದ್ ಭೂತಂ ತಸ್ಮಾದ್ವ್ಯಕ್ತಾತ್ಮಕಂ ಮನಃ।।
ಎಚ್ಚೆತ್ತ ಬ್ರಹ್ಮನು ನಿರ್ವಿಕಾರ ಅಕ್ಷಯ ಸ್ವರೂಪವನ್ನು ಮಾಯೆಯಿಂದ ವಿಕಾರಯುಕ್ತವನ್ನಾಗಿ ಮಾಡಿ, ನಂತರ ಮಹದ್ಭೂತ ಅಥವಾ ಮಹತ್ತತ್ತ್ವವನ್ನು ಸೃಷ್ಟಿಸುತ್ತಾನೆ. ಅದರಿಂದಲೇ ವ್ಯಕ್ತಾತ್ಮಕ ಸ್ಥೂಲ ಜಗತ್ತನ್ನು ಧಾರಣೆಮಾಡುವ ಮನಸ್ಸೂ ಉತ್ಪನ್ನವಾಗುತ್ತದೆ.10
1112224032a ಬ್ರಹ್ಮ ತೇಜೋಮಯಂ ಶುಕ್ರಂ ಯಸ್ಯ ಸರ್ವಮಿದಂ ಜಗತ್।
12224032c ಏಕಸ್ಯ ಭೂತಂ ಭೂತಸ್ಯ ದ್ವಯಂ ಸ್ಥಾವರಜಂಗಮಮ್।।
ತೇಜೋಮಯ ಮಹತ್ತತ್ತ್ವ ಸ್ವರೂಪ ಬ್ರಹ್ಮನೇ ಈ ಸರ್ವ ಜಗತ್ತಿನ ಬೀಜವು. ದ್ರವ್ಯಾಭ್ಯಂತರರಹಿತನಾದ ಆ ಭೂತನೊಬ್ಬನಿಂದಲೇ ಸ್ಥಾವರ-ಜಂಗಮಗಳೆರಡೂ ಉತ್ಪನ್ನವಾಗಿವೆ.
12224033a ಅಹರ್ಮುಖೇ ವಿಬುದ್ಧಃ ಸನ್ ಸೃಜತೇ ವಿದ್ಯಯಾ ಜಗತ್।
12224033c ಅಗ್ರ ಏವ ಮಹಾಭೂತಮಾಶು ವ್ಯಕ್ತಾತ್ಮಕಂ ಮನಃ।।
ದಿನದ ಪ್ರಾರಂಭದಲ್ಲಿ ಬ್ರಹ್ಮನು ಎಚ್ಚೆತ್ತು ವಿದ್ಯೆಯ ಮೂಲಕ ಜಗತ್ತನ್ನು ಸೃಷ್ಟಿಸುತ್ತಾನೆ. ಮೊದಲು ಮಹತ್ತತ್ತ್ವ ಮತ್ತು ನಂತರ ವ್ಯಕ್ತಾತ್ಮಕ ಮನಸ್ಸನ್ನು ಸೃಷ್ಟಿಸುತ್ತಾನೆ.
12224034a ಅಭಿಭೂಯೇಹ ಚಾರ್ಚಿಷ್ಮದ್ವ್ಯಸೃಜತ್ಸಪ್ತ ಮಾನಸಾನ್।
12224034c ದೂರಗಂ ಬಹುಧಾಗಾಮಿ ಪ್ರಾರ್ಥನಾಸಂಶಯಾತ್ಮಕಮ್।।
ಹಿಂದಿನ ಸೃಷ್ಟಿಯ ಅಂತ್ಯದಲ್ಲಿ ಬ್ರಹ್ಮನು ಏಳು ಮಾನಸ ಪದಾರ್ಥಗಳನ್ನು ಲಯಗೊಳಿಸಿ ನಂತರದ ಸೃಷ್ಟಿಯ ಪ್ರಾರಂಭದಲ್ಲಿ ಅವುಗಳನ್ನೇ ಪುನಃ ಸೃಷ್ಟಿಸುತ್ತಾನೆ. ದೂರ ಹೋಗಬಲ್ಲ, ಅನೇಕ ವಿಧದಲ್ಲಿ ಚಲಿಸಬಲ್ಲ ಮತ್ತು ಪ್ರಾರ್ಥನೆ-ಸಂಶಯಗಳಿಂದ ಕೂಡಿದ ಆ ಮನಸ್ಸು ಚೈತನ್ಯದಿಂದ ಸಂಯುಕ್ತವಾಗಿರುತ್ತದೆ12.
12224035a ಮನಃ ಸೃಷ್ಟಿಂ ವಿಕುರುತೇ ಚೋದ್ಯಮಾನಂ ಸಿಸೃಕ್ಷಯಾ।
12224035c ಆಕಾಶಂ ಜಾಯತೇ ತಸ್ಮಾತ್ತಸ್ಯ ಶಬ್ದೋ ಗುಣೋ ಮತಃ।।
ಸೃಷ್ಟಿಯನ್ನು ಮಾಡಲು ಪ್ರೇರಿತಗೊಂಡ ಮನಸ್ಸು ಅನೇಕ ಪ್ರಕಾರದ ಸೃಷ್ಟಿಯನ್ನು ಮಾಡುತ್ತದೆ. ಮನದಿಂದ ಆಕಾಶವು ಉತ್ಪನ್ನವಾಗುತ್ತದೆ ಮತ್ತು ಶಬ್ದವು ಅದರ ಗುಣ ಎಂಬ ಮತವಿದೆ.
12224036a ಆಕಾಶಾತ್ತು ವಿಕುರ್ವಾಣಾತ್ಸರ್ವಗಂಧವಹಃ ಶುಚಿಃ।
12224036c ಬಲವಾನ್ಜಾಯತೇ ವಾಯುಸ್ತಸ್ಯ ಸ್ಪರ್ಶೋ ಗುಣೋ ಮತಃ।।
ವಿಕಾರ ಹೊಂದಿದ ಆಕಾಶದಿಂದ ಸರ್ವಗಂಧಗಳನ್ನೂ ಒಯ್ಯುವ ಶುಚಿ, ಬಲವಾನ್ ವಾಯುವು ಹುಟ್ಟುತ್ತದೆ ಮತ್ತು ಸ್ಪರ್ಶವು ಅದರ ಗುಣ ಎಂಬ ಮತವಿದೆ.
12224037a ವಾಯೋರಪಿ ವಿಕುರ್ವಾಣಾಜ್ಜ್ಯೋತಿರ್ಭೂತಂ ತಮೋನುದಮ್।
12224037c ರೋಚಿಷ್ಣು ಜಾಯತೇ ತತ್ರ ತದ್ರೂಪಗುಣಮುಚ್ಯತೇ।।
ವಾಯುವೂ ಕೂಡ ವಿಕಾರಗೊಂಡು ಅದರಿಂದ ಕತ್ತಲೆಯನ್ನು ಹೋಗಲಾಡಿಸುವ ಜಗಜಗಿಸುವ ಬಿಳೀ ವರ್ಣದ ಜ್ಯೋತಿಸ್ಸತ್ತ್ವವು ಹುಟ್ಟುತ್ತದೆ. ರೂಪವು ಅದರ ಗುಣವೆಂದು ಹೇಳುತ್ತಾರೆ.
12224038a ಜ್ಯೋತಿಷೋಽಪಿ ವಿಕುರ್ವಾಣಾದ್ಭವಂತ್ಯಾಪೋ ರಸಾತ್ಮಿಕಾಃ।
12224038c ಅದ್ಭ್ಯೋ ಗಂಧಗುಣಾ ಭೂಮಿಃ ಪೂರ್ವೈಷಾ ಸೃಷ್ಟಿರುಚ್ಯತೇ।।
ಜ್ಯೋತಿಯೂ ಕೂಡ ವಿಕಾರಹೊಂದಿ ಅದರಿಂದ ರಸಾತ್ಮಿಕ ಜಲ ಮತ್ತು ಜಲದಿಂದ ಗಂಧಗುಣವುಳ್ಳ ಭೂಮಿಯು ಹುಟ್ಟುತ್ತವೆ. ಇದನ್ನೇ ಪೂರ್ವ ಸೃಷ್ಟಿ ಎಂದು ಹೇಳುತ್ತಾರೆ.
12224039a ಗುಣಾಃ ಪೂರ್ವಸ್ಯ ಪೂರ್ವಸ್ಯ ಪ್ರಾಪ್ನುವಂತ್ಯುತ್ತರೋತ್ತರಮ್।
12224039c ತೇಷಾಂ ಯಾವತ್ತಿಥಂ ಯದ್ಯತ್ತತ್ತತ್ತಾವದ್ಗುಣಂ ಸ್ಮೃತಮ್।।
ಉತ್ತರೋತ್ತರ ಭೂತಗಳಲ್ಲಿ ಹಿಂದೆ ಹುಟ್ಟಿದ ಭೂತಗಳ ಸರ್ವ ಗುಣಗಳೂ ಪ್ರಾಪ್ತವಾಗುತ್ತವೆ13. ಈ ಪಂಚಭೂತಗಳಲ್ಲಿ ಯಾವುದು ಎಷ್ಟು ಸಮಯ ಹೇಗೆ ಇರುತ್ತದೆಯೋ ಅಲ್ಲಿಯವರೆಗೆ ಅದರ ಗುಣವೂ ಹಾಗೆಯೇ ಇರುತ್ತದೆ.
12224040a ಉಪಲಭ್ಯಾಪ್ಸು ಚೇದ್ಗಂಧಂ ಕೇ ಚಿದ್ಬ್ರೂಯುರನೈಪುಣಾತ್।
12224040c ಪೃಥಿವ್ಯಾಮೇವ ತಂ ವಿದ್ಯಾದಾಪೋ ವಾಯುಂ ಚ ಸಂಶ್ರಿತಮ್।।
ಅನೈಪುಣತೆಯಿಂದ ಕೆಲವರು ನೀರಿನಲ್ಲಿಯೂ ಗಂಧವಿದೆಯೆಂದು ಹೇಳುತ್ತಾರೆ. ಆದರೆ ಗಂಧವು ಭೂಮಿಯ ಗುಣವು. ವಾಯು ಅಥವಾ ಜಲದಲ್ಲಿ ಅದು ಆಗಂತುಕ ದ್ರವ್ಯ-ಸಂಪರ್ಕದಿಂದ ತಿಳಿದುಬರುತ್ತದೆ.
12224041a ಏತೇ ತು ಸಪ್ತ ಪುರುಷಾ14 ನಾನಾವಿರ್ಯಾಃ ಪೃಥಕ್ ಪೃಥಕ್।
12224041c ನಾಶಕ್ನುವನ್ ಪ್ರಜಾಃ ಸ್ರಷ್ಟುಮಸಮಾಗಮ್ಯ ಸರ್ವತಃ।।
ಈ ಏಳು15 ಮಹಾವೀರ್ಯ ವ್ಯಾಪಕ ಪದಾರ್ಥಗಳು ಪ್ರತ್ಯೇಕ-ಪ್ರತ್ಯೇಕವಾಗಿರುವಾಗ, ಒಂದಾಗಿ ಸೇರದೇ ಪ್ರಜೆಗಳನ್ನು ಸೃಷ್ಟಿಸಲು ಸರ್ವತಃ ಸಮರ್ಥವಾಗಿರುವುದಿಲ್ಲ.
12224042a ತೇ ಸಮೇತ್ಯ ಮಹಾತ್ಮಾನಮನ್ಯೋನ್ಯಮಭಿಸಂಶ್ರಿತಾಃ।
12224042c ಶರೀರಾಶ್ರಯಣಂ ಪ್ರಾಪ್ತಾಸ್ತತಃ ಪುರುಷ ಉಚ್ಯತೇ।।
ಈ ಮಹಾನ್ ಪದಾರ್ಥಗಳು ಅನ್ಯೋನ್ಯರನ್ನು ಅವಲಂಬಿಸಿ ಸೇರಿಕೊಂಡು ಶರೀರತ್ವವನ್ನು ಪಡೆದು, ಪುರುಷ ಎಂದು ಕರೆಯಲ್ಪಡುತ್ತವೆ16.
12224043a ಶ್ರಯಣಾಚ್ಚರೀರಂ ಭವತಿ ಮೂರ್ತಿಮತ್ ಷೋಡಶಾತ್ಮಕಮ್।
12224043c ತದಾವಿಶಂತಿ ಭೂತಾನಿ ಮಹಾಂತಿ ಸಹ ಕರ್ಮಣಾ।।
ಪಂಚಭೂತಗಳು, ಮನಸ್ಸು ಮತ್ತು ಹತ್ತು ಇಂದ್ರಿಯಗಳು – ಈ ಹದಿನಾರು ಪದಾರ್ಥಗಳು ಶರೀರವನ್ನು ಆಶ್ರಯಿಸಿ ಒಂದಾಗಿ ಮೂರ್ತಿವತ್ತಾಗುತ್ತವೆ17. ಮಹತ್ತತ್ತ್ವ ಮತ್ತು ಭೂತಗಳು ಭೋಗಾವಶಿಷ್ಟ ಕರ್ಮಗಳೊಂದಿಗೆ ಸೂಕ್ಷ್ಮರೂಪದಲ್ಲಿ18 ಆ ಶರೀರವನ್ನು ಪ್ರವೇಶಿಸುತ್ತವೆ.19
12224044a ಸರ್ವಭೂತಾನಿ ಚಾದಾಯ ತಪಸಶ್ಚರಣಾಯ ಚ।
12224044c ಆದಿಕರ್ತಾ ಮಹಾಭೂತಂ ತಮೇವಾಹುಃ ಪ್ರಜಾಪತಿಮ್।।
ಮಹಾಭೂತ ಅಥವಾ ಮಹತ್ತತ್ತ್ವದ ಆದಿಕರ್ತಾ ಬ್ರಹ್ಮನು ತಪಸ್ಸನ್ನಾಚರಿಸಲೋಸುಗ ಸಮಸ್ತ ಸೂಕ್ಷ್ಮಭೂತಗಳನ್ನೂ ಜೊತೆಯಲ್ಲಿ ಸೇರಿಸಿಕೊಂಡು ಸಮಷ್ಟಿ ಶರೀರವನ್ನು ಪ್ರವೇಶಿಸುತ್ತಾನೆ. ಆದುದರಿಂದ ಅವನನ್ನು ಪ್ರಜಾಪತಿ ಎಂದು ಕರೆಯುತ್ತಾರೆ.
12224045a ಸ ವೈ ಸೃಜತಿ ಭೂತಾನಿ ಸ ಏವ ಪುರುಷಃ ಪರಃ।
12224045c ಅಜೋ ಜನಯತೇ ಬ್ರಹ್ಮಾ ದೇವರ್ಷಿಪಿತೃಮಾನವಾನ್।।
12224046a ಲೋಕಾನ್ನದೀಃ ಸಮುದ್ರಾಂಶ್ಚ ದಿಶಃ ಶೈಲಾನ್ವನಸ್ಪತೀನ್।
12224046c ನರಕಿಂನರರಕ್ಷಾಂಸಿ ವಯಃಪಶುಮೃಗೋರಗಾನ್।
12224046e ಅವ್ಯಯಂ ಚ ವ್ಯಯಂ ಚೈವ ದ್ವಯಂ ಸ್ಥಾವರಜಂಗಮಮ್।।
ಅವನೇ ಚರಾಚರ ಭೂತಗಳನ್ನು ಸೃಷ್ಟಿಸುತ್ತಾನೆ. ಅವನೇ ಪರಮ ಪುರುಷನು. ಸ್ವಯಂ ಹುಟ್ಟಿಲ್ಲದ ಬ್ರಹ್ಮನೇ ದೇವರ್ಷಿ, ಪಿತೃಗಳು, ಮಾನವರು, ಲೋಕಗಳು, ನದಿಗಳು, ಸಮುದ್ರಗಳು, ದಿಕ್ಕುಗಳು, ಪರ್ವತಗಳು, ವನಸ್ಪತಿಗಳು, ನರರು, ಕಿನ್ನರರು, ರಾಕ್ಷಸರು, ಪಶು-ಪಕ್ಷಿಗಳು, ಮೃಗಗಳು, ಮತ್ತು ಉರಗಗಳನ್ನು ಸೃಷ್ಟಿಸುತ್ತಾನೆ. ಅವ್ಯಯ20 ಮತ್ತು ವ್ಯಯ ಎರಡೂ ರೀತಿಯ ಸ್ಥಾವರಜಂಗಮಗಳನ್ನೂ ಅವನೇ ಸೃಷ್ಟಿಸುತ್ತಾನೆ.
12224047a ತೇಷಾಂ ಯೇ ಯಾನಿ ಕರ್ಮಾಣಿ ಪ್ರಾಕ್ಸೃಷ್ಟ್ಯಾಂ ಪ್ರತಿಪೇದಿರೇ।
12224047c ತಾನ್ಯೇವ ಪ್ರತಿಪದ್ಯಂತೇ ಸೃಜ್ಯಮಾನಾಃ ಪುನಃ ಪುನಃ।।
ಹಿಂದಿನ ಸೃಷ್ಟಿಯ ಸಮಯದಲ್ಲಿ ಅವು ಯಾವ ಎಲ್ಲ ಕರ್ಮಗಳನ್ನು ಹೊಂದಿದ್ದವೋ ಆ ಕರ್ಮಗಳನ್ನೇ ಪುನಃ ಪುನಃ ಹುಟ್ಟಿ ಪಡೆದುಕೊಳ್ಳುತ್ತವೆ.
12224048a ಹಿಂಸ್ರಾಹಿಂಸ್ರೇ ಮೃದುಕ್ರೂರೇ ಧರ್ಮಾಧರ್ಮೇ ಋತಾನೃತೇ।
12224048c ಅತೋ ಯನ್ಮನ್ಯತೇ ಧಾತಾ ತಸ್ಮಾತ್ತತ್ತಸ್ಯ ರೋಚತೇ21।।
ವಿಧಿನಿಯಮದಂತೆ ಜೀವಿಗಳು ಹಿಂದಿನ ಸೃಷ್ಟಿಯಲ್ಲಿ ಹಿಂಸೆ-ಅಹಿಂಸೆ, ಮೃದು-ಕ್ರೂರ, ಧರ್ಮ-ಅಧರ್ಮ ಮತ್ತು ಸತ್ಯ-ಸುಳ್ಳು ಮೊದಲಾದ ಗುಣ-ದೋಷಗಳನ್ನು ಹೊಂದಿದ್ದವೋ ಈ ಸೃಷ್ಟಿಯಲ್ಲಿಯೂ ಕೂಡ ಅದೇ ವಿಷಯಗಳಲ್ಲಿ ಆಸಕ್ತಿಗಳನ್ನು ಇಟ್ಟುಕೊಂಡು ಹುಟ್ಟುತ್ತವೆ.22
12224049a ಮಹಾಭೂತೇಷು ನಾನಾತ್ವಮಿಂದ್ರಿಯಾರ್ಥೇಷು ಮೂರ್ತಿಷು।
12224049c ವಿನಿಯೋಗಂ ಚ ಭೂತಾನಾಂ ಧಾತೈವ ವಿದಧಾತ್ಯುತ।।
ಆಕಾಶಾದಿ ಮಹಾಭೂತಗಳಲ್ಲಿ, ಶಬ್ದವೇ ಮೊದಲಾದ ಇಂದ್ರಿಯಾರ್ಥಗಳಲ್ಲಿ, ಮತ್ತು ಆಕೃತಿಗಳಲ್ಲಿರುವ ಭಿನ್ನತೆ-ಅನೇಕತೆಗಳನ್ನು ಮತ್ತು ಅವುಗಳು ವಿನಿಯೋಗಿಸುವ ಕರ್ಮಗಳನ್ನು ಬ್ರಹ್ಮನೇ ಕಲ್ಪಿಸುತ್ತಾನೆ.
12224050a ಕೇ ಚಿತ್ಪುರುಷಕಾರಂ ತು ಪ್ರಾಹುಃ ಕರ್ಮವಿದೋ ಜನಾಃ।
12224050c ದೈವಮಿತ್ಯಪರೇ ವಿಪ್ರಾಃ ಸ್ವಭಾವಂ ಭೂತಚಿಂತಕಾಃ।।
ಕೆಲವು ಕರ್ಮವಿದ ಜನರು ಪುರುಷ ಪ್ರಯತ್ನವೇ ಮುಖ್ಯವೆಂದು ಹೇಳುತ್ತಾರೆ. ಇತರ ವಿಪ್ರರು ದೈವವೇ ಪ್ರಧಾನವೆನ್ನುತ್ತಾರೆ. ಭೂತಚಿಂತಕರು ಎಲ್ಲವೂ ಸ್ವಾಭಾವಿಕವಾಗಿಯೇ ನಡೆಯುತ್ತದೆ ಎನ್ನುತ್ತಾರೆ.
12224051a ಪೌರುಷಂ ಕರ್ಮ ದೈವಂ ಚ ಫಲವೃತ್ತಿಸ್ವಭಾವತಃ।
12224051c ತ್ರಯ ಏತೇಽಪೃಥಗ್ಭೂತಾ ನವಿವೇಕಂ ತು ಕೇ ಚನ।।
ಕೆಲವರು ಪುರುಷಪ್ರಯತ್ನ, ದೈವಾನುಗ್ರಹ ಮತ್ತು ಸ್ವಭಾವ ಈ ಮೂರು ಸೇರಿರುವುದರಿಂದಲೇ ಕಾರ್ಯಸಿದ್ಧಿಯಾಗುತ್ತದೆ ಎನ್ನುತ್ತಾರೆ. ಈ ಮೂರೂ ಯಾವಾಗಲೂ ಸೇರಿಯೇ ಇರುತ್ತದೆ. ಅವು ಬೇರೆ ಬೇರೆ ಎಂದು ಭಾವಿಸುವುದು ಅವಿವೇಕವು.
12224052a ಏವಮೇತಚ್ಚ ನೈವಂ ಚ ಯದ್ಭೂತಂ ಸೃಜತೇ ಜಗತ್23।
12224052c ಕರ್ಮಸ್ಥಾ ವಿಷಮಂ ಬ್ರೂಯುಃ ಸತ್ತ್ವಸ್ಥಾಃ ಸಮದರ್ಶಿನಃ।।
ಕೆಲವರು ಇದನ್ನು ಸತ್ಯವೆಂದು ಹೇಳುತ್ತಾರೆ. ಕೆಲವರು ಇದನ್ನು ಸತ್ಯವಲ್ಲವೆಂದು ಹೇಳುತ್ತಾರೆ. ಇನ್ನು ಕೆಲವರು ಕರ್ಮಗಳ ವಿಷಮ ಪರಿಣಾಮಗಳ ಕುರಿತು ಹೇಳುತ್ತಾರೆ. ಆದರೆ ಸತ್ತ್ವಗುಣದಲ್ಲಿರುವವರು ಈ ಜಗತ್ತನ್ನು ಸೃಷ್ಟಿಸಿದ ಭೂತವು ಎಲ್ಲದರಲ್ಲಿಯೂ ಸಮನಾಗಿಯೇ ಇದೆಯೆಂದು ಹೇಳುತ್ತಾರೆ.
12224053a ತಪೋ ನಿಃಶ್ರೇಯಸಂ ಜಂತೋಸ್ತಸ್ಯ ಮೂಲಂ ದಮಃ ಶಮಃ।
12224053c ತೇನ ಸರ್ವಾನವಾಪ್ನೋತಿ ಯಾನ್ಕಾಮಾನ್ಮನಸೇಚ್ಚತಿ।।
ಜಂತುಗಳಿಗೆ ತಪಸ್ಸೇ ಶ್ರೇಯಸ್ಕರವಾದುದು. ತಪಸ್ಸಿನ ಮೂಲವೇ ದಮೆ ಮತ್ತು ಶಮೆ.24 ಮನಸ್ಸಿನಲ್ಲಾಗುವ ಸರ್ವಕಾಮನೆಗಳನ್ನೂ ಜಂತುವು ತಪಸ್ಸಿನಿಂದಲೇ ಪಡೆದುಕೊಳ್ಳುತ್ತದೆ.
12224054a ತಪಸಾ ತದವಾಪ್ನೋತಿ ಯದ್ಭೂತಂ ಸೃಜತೇ ಜಗತ್।
12224054c ಸ ತದ್ಭೂತಶ್ಚ ಸರ್ವೇಷಾಂ ಭೂತಾನಾಂ ಭವತಿ ಪ್ರಭುಃ।।
ಈ ಜಗತ್ತನ್ನು ಸೃಷ್ಟಿಸಿರುವ ಆ ಬ್ರಹ್ಮಭೂತನನ್ನು ತಪಸ್ಸಿನಿಂದಲೇ ಪಡೆದುಕೊಳ್ಳಬಹುದು. ಬ್ರಹ್ಮಭೂತನಾದವನು ಸರ್ವ ಭೂತಗಳ ಪ್ರಭುವೂ ಆಗುತ್ತಾನೆ.
12224055a ಋಷಯಸ್ತಪಸಾ ವೇದಾನಧ್ಯೈಷಂತ ದಿವಾನಿಶಮ್।
12224055c ಅನಾದಿನಿಧನಾ ನಿತ್ಯಾ ವಾಗುತ್ಸೃಷ್ಟಾ ಸ್ವಯಂಭುವಾ।।
ತಪಸ್ಸಿನ ಮೂಲಕವೇ ಋಷಿಗಳು ಹಗಲು-ರಾತ್ರಿ ವೇದಾಧ್ಯಯನ ಮಾಡುತ್ತಾರೆ. ಸ್ವಯಂಭುವ ಬ್ರಹ್ಮನು ತಪಸ್ಸಿನ ಶಕ್ತಿಯಿಂದಲೇ ಪ್ರಭಾವಿತನಾಗಿ ಆದ್ಯಂತರಹಿತವಾದ ವೇದವಾಣಿಯನ್ನು ಹೊರಗೆಡಹಿದನು.
12224056a ಋಷೀಣಾಂ ನಾಮಧೇಯಾನಿ ಯಾಶ್ಚ ವೇದೇಷು ಸೃಷ್ಟಯಃ। 2512224056c ಶರ್ವರ್ಯಂತೇಷು ಜಾತಾನಾಂ ತಾನ್ಯೇವೈಭ್ಯೋ ದದಾತಿ ಸಃ।।
ವೇದಗಳಲ್ಲಿ ಹೇಳಿರುವ ಋಷಿಗಳ ನಾಮಧೇಯಗಳು ಮತ್ತು ಸೃಷ್ಟಿಕ್ರಮಗಳಂತೆಯೇ ಬ್ರಹ್ಮನು ರಾತ್ರಿಕಳೆದು ಬೆಳಗಾದಾಗ ಸೃಷ್ಟಿಸುತ್ತಾನೆ ಮತ್ತು ಹೆಸರುಗಳನ್ನು ನೀಡುತ್ತಾನೆ.
12224057a ನಾಮಭೇದಸ್ತಪಃಕರ್ಮಯಜ್ಞಾಖ್ಯಾ ಲೋಕಸಿದ್ಧಯಃ।
12224057c ಆತ್ಮಸಿದ್ಧಿಸ್ತು ವೇದೇಷು ಪ್ರೋಚ್ಯತೇ ದಶಭಿಃ ಕ್ರಮೈಃ।।
ನಾಮಭೇದಗಳು, ತಪಸ್ಸು, ಕರ್ಮ, ಯಜ್ಞಗಳು, ಲೋಕಸಿದ್ಧಿ ಮತ್ತು ಆತ್ಮಸಿದ್ಧಿಯೆಂದು ಕರೆಯಲ್ಪಡುವವು – ಇವೆಲ್ಲವೂ ವೇದಗಳಲ್ಲಿ ಹತ್ತು ಕ್ರಮಗಳಲ್ಲಿ ವರ್ಣಿತಗೊಂಡಿವೆ26.
12224058a ಯದುಕ್ತಂ ವೇದವಾದೇಷು ಗಹನಂ ವೇದದೃಷ್ಟಿಭಿಃ।
12224058c ತದಂತೇಷು ಯಥಾಯುಕ್ತಂ ಕ್ರಮಯೋಗೇನ ಲಕ್ಷ್ಯತೇ।।
ಅತ್ಯಂತ ಗಹನವಾದ ಯಾವ ಬ್ರಹ್ಮವಸ್ತುವಿನ ಕುರಿತು ವೇದವಾಕ್ಯಗಳು ಹೇಳುತ್ತವೆಯೋ ಮತ್ತು ಉಪನಿಷತ್ತುಗಳು ಸ್ಪಷ್ಟವಾಗಿ ವರ್ಣಿಸುತ್ತವೆಯೋ ಆ ಬ್ರಹ್ಮವಸ್ತುವನ್ನು ಕ್ರಮಯೋಗ27ದಿಂದ ಕಾಣಬಹುದು.
12224059a ಕರ್ಮಜೋಽಯಂ ಪೃಥಗ್ಭಾವೋ ದ್ವಂದ್ವಯುಕ್ತೋ ವಿಯೋಗಿನಃ28।
12224059c ಆತ್ಮಸಿದ್ಧಿಸ್ತು ವಿಜ್ಞಾತಾ ಜಹಾತಿ ಪ್ರಾಯಶೋ ಬಲಮ್29।।
ದೇಹಾಭಿಮಾನೀ ಜೀವವು ಅನುಭವಿಸುವ ಪ್ರತ್ಯೇಕ ದ್ವೈತ ಭಾವಗಳು ಕರ್ಮಗಳಿಂದ ಹುಟ್ಟುತ್ತವೆ. ಆತ್ಮಜ್ಞಾನದಿಂದ ಮನುಷ್ಯನು ಪ್ರಾಯಶಃ ಅದನ್ನು ತ್ಯಜಿಸುತ್ತಾನೆ ಮತ್ತು ಜ್ಞಾನದ ಬಲದಿಂದ ಮೋಕ್ಷವನ್ನು ಹೊಂದುತ್ತಾನೆ.
12224060a ದ್ವೇ ಬ್ರಹ್ಮಣೀ ವೇದಿತವ್ಯೇ ಶಬ್ದಬ್ರಹ್ಮ ಪರಂ ಚ ಯತ್।
12224060c ಶಬ್ದಬ್ರಹ್ಮಣಿ ನಿಷ್ಣಾತಃ ಪರಂ ಬ್ರಹ್ಮಾಧಿಗಚ್ಚತಿ।।
ಬ್ರಹ್ಮನ ಎರಡು ಸ್ವರೂಪಗಳನ್ನು ತಿಳಿಯಬೇಕು: ಶಬ್ದಬ್ರಹ್ಮ ಮತ್ತು ಪರಬ್ರಹ್ಮ. ಶಬ್ದಬ್ರಹ್ಮದಲ್ಲಿ ನಿಷ್ಣಾತನಾದವನು ಪರಬ್ರಹ್ಮವನ್ನು ಹೊಂದುತ್ತಾನೆ.
12224061a ಆರಂಭಯಜ್ಞಾಃ30 ಕ್ಷತ್ರಸ್ಯ ಹವಿರ್ಯಜ್ಞಾ ವಿಶಸ್ತಥಾ।
12224061c ಪರಿಚಾರಯಜ್ಞಾಃ ಶೂದ್ರಾಸ್ತು ತಪೋಯಜ್ಞಾ ದ್ವಿಜಾತಯಃ।।
ಯುದ್ಧವು ಕ್ಷತ್ರಿಯರಿಗೆ ಯಜ್ಞ. ಹವಿರ್ಯಜ್ಞವು ವೈಶ್ಯರದ್ದು. ಪರಿಚಾರ ಯಜ್ಞವು ಶೂದ್ರರಿಗೆ. ತಪೋಯಜ್ಞವು ಬ್ರಾಹ್ಮಣರಿಗೆ.
12224062a ತ್ರೇತಾಯುಗೇ ವಿಧಿಸ್ತ್ವೇಷಾಂ ಯಜ್ಞಾನಾಂ ನ ಕೃತೇ ಯುಗೇ।
12224062c ದ್ವಾಪರೇ ವಿಪ್ಲವಂ ಯಾಂತಿ ಯಜ್ಞಾಃ ಕಲಿಯುಗೇ ತಥಾ।।
ತ್ರೇತಾಯುಗದಲ್ಲಿ ಈ ರೀತಿಯ ಯಜ್ಞವಿಧಿಗಳಿದ್ದವು. ಕೃತಯುಗದಲ್ಲಿ ಇರಲಿಲ್ಲ. ದ್ವಾಪರದಲ್ಲಿ ಇವು ಕ್ರಮವಾಗಿ ಕ್ಷೀಣಿಸುತ್ತಾ ಬಂದು ಕಲಿಯುಗದಲ್ಲಿ ಲುಪ್ತವಾಗಿ ಹೋಗುತ್ತವೆ.
12224063a ಅಪೃಥಗ್ಧರ್ಮಿಣೋ ಮರ್ತ್ಯಾ ಋಕ್ಸಾಮಾನಿ ಯಜೂಂಷಿ ಚ।
12224063c ಕಾಮ್ಯಾಂ ಪುಷ್ಟಿಂ ಪೃಥಗ್ ದೃಷ್ಟ್ವಾ ತಪೋಭಿಸ್ತಪ ಏವ ಚ।।
ಸತ್ಯಯುಗದಲ್ಲಿ ಮನುಷ್ಯರು ಅದ್ವೈತನಿಷ್ಠರಾಗಿದ್ದರು. ಋಕ್, ಯಜು, ಸಾಮವೇದ ಮತ್ತು ಸ್ವರ್ಗಗಳ ಯಜ್ಞಾದಿ ಕಾಮ್ಯಕರ್ಮಗಳು ತಪಸ್ಸಿಗಿಂತ ಬೇರೆ ಎಂದು ತಿಳಿದು ಅವೆಲ್ಲವುಗಳನ್ನೂ ತ್ಯಜಿಸಿ ಕೇವಲ ತಪಸ್ಸನ್ನೇ ಆಚರಿಸುತ್ತಿದ್ದರು.
12224064a ತ್ರೇತಾಯಾಂ ತು ಸಮಸ್ತಾಸ್ತೇ ಪ್ರಾದುರಾಸನ್ಮಹಾಬಲಾಃ।
12224064c ಸಂಯಂತಾರಃ ಸ್ಥಾವರಾಣಾಂ ಜಂಗಮಾನಾಂ ಚ ಸರ್ವಶಃ।।
ತ್ರೇತಾಯುಗದಲ್ಲಿ ಮಹಾಬಲಿಷ್ಠ ರಾಜರು ಪ್ರಾದುರ್ಭವಿಸಿದರು. ಅವರೆಲ್ಲರೂ ಸಮಸ್ತ ಸ್ಥಾವರ-ಜಂಗಮಗಳ ನಿಯಾಮಕರಾಗಿದ್ದರು.
12224065a ತ್ರೇತಾಯಾಂ ಸಂಹತಾ ಹ್ಯೇತೇ31 ಯಜ್ಞಾ ವರ್ಣಾಸ್ತಥೈವ ಚ।
12224065c ಸಂರೋಧಾದಾಯುಷಸ್ತ್ವೇತೇ ವ್ಯಸ್ಯಂತೇ ದ್ವಾಪರೇ ಯುಗೇ।।
ತ್ರೇತಾಯುಗದಲ್ಲಿ ವೇದಗಳು, ಯಜ್ಞಗಳು ಮತ್ತು ವರ್ಣಾಶ್ರಮಧರ್ಮಗಳು ಸುವ್ಯವಸ್ಥಿತವಾಗಿ ಪಾಲಿಸಲ್ಪಡುತ್ತಿದ್ದವು. ದ್ವಾಪರಯುಗದಲ್ಲಿ ಪರಮಾಯುವಿನ ಪರಿಮಾಣವು ಕ್ಷೀಣಿಸಿದ್ದುದರಿಂದ ಇವುಗಳ ಪರಿಪಾಲನೆಯಲ್ಲಿ ಜನರು ಭ್ರಷ್ಟರಾಗತೊಡಗಿದರು.
12224066a ದೃಶ್ಯಂತೇ ನಾಪಿ ದೃಶ್ಯಂತೇ ವೇದಾಃ ಕಲಿಯುಗೇಽಖಿಲಾಃ।
12224066c ಉತ್ಸೀದಂತೇ ಸಯಜ್ಞಾಶ್ಚ ಕೇವಲಾ ಧರ್ಮಸೇತವಃ32।।
ಕಲಿಯುಗದಲ್ಲಿ ವೇದಗಳು ಕಂಡರೂ ಅವು ಅಖಿಲವಾಗಿ ಕಾಣುವುದಿಲ್ಲ. ಕೇವಲ ಧರ್ಮಸೇತುಗಳು ಇಲ್ಲದಿರುವುದರ ಕಾರಣ ಯಜ್ಞಗಳೊಂದಿಗೆ ಅವು ನಷ್ಟವಾಗುತ್ತವೆ.
12224067a ಕೃತೇ ಯುಗೇ ಯಸ್ತು ಧರ್ಮೋ ಬ್ರಾಹ್ಮಣೇಷು ಪ್ರದೃಶ್ಯತೇ।
12224067c ಆತ್ಮವತ್ಸು ತಪೋವತ್ಸು ಶ್ರುತವತ್ಸು ಪ್ರತಿಷ್ಠಿತಃ।।
ಕೃತಯುಗದಲ್ಲಿ ಯಾವ ಧರ್ಮವು ಬ್ರಾಹ್ಮಣರಲ್ಲಿ ಕಂಡುಬರುತ್ತದೆಯೋ ಆ ಧರ್ಮವು ಇತರ ಯುಗಗಳಲ್ಲಿಯೂ ಜಿತೇಂದ್ರಿಯ, ತಪೋನಿರತ ಮತ್ತು ವೇದವಿದ್ವಾಂಸರಲ್ಲಿ ಪ್ರತಿಷ್ಠಿತಗೊಂಡಿರುತ್ತವೆ.
12224068a ಅಧರ್ಮವ್ರತಸಂಯೋಗಂ ಯಥಾಧರ್ಮಂ ಯುಗೇ ಯುಗೇ।
12224068c ವಿಕ್ರಿಯಂತೇ ಸ್ವಧರ್ಮಸ್ಥಾ ವೇದವಾದಾ ಯಥಾಯುಗಮ್33।।
ಯುಗ-ಯುಗದಲ್ಲಿ ವೇದವಾದೀ ಮತ್ತು ಸ್ವಧರ್ಮನಿಷ್ಠ ಪುರುಷರು ಧರ್ಮದ ಕ್ಷೀಣತೆಯ ಕಾರಣದಿಂದ ವಿಕಾರವಶರಾಗುತ್ತಾರೆ ಮತ್ತು ಇದರಿಂದಾಗಿ ಧರ್ಮವು ಪ್ರತ್ಯೇಕ-ಪ್ರತ್ಯೇಕವಾಗಿದೆಯೆಂದು ತೋರುತ್ತದೆ34.
12224069a ಯಥಾ ವಿಶ್ವಾನಿ ಭೂತಾನಿ ವೃಷ್ಟ್ಯಾ ಭೂಯಾಂಸಿ ಪ್ರಾವೃಷಿ।
12224069c ಸೃಜ್ಯಂತೇ ಜಂಗಮಸ್ಥಾನಿ ತಥಾ ಧರ್ಮಾ ಯುಗೇ ಯುಗೇ।।
ಮಳೆಗಾಲದಲ್ಲಿ ವಿಶ್ವದ ಭೂತಗಳು ಹೇಗೆ ವೃದ್ಧಿಹೊಂದುತ್ತವೆಯೋ ಮತ್ತು ಮಳೆಗಾಲ ಕಳೆದ ನಂತರ ಹೇಗೆ ಕ್ಷೀಣಿಸುತ್ತವೆಯೋ ಹಾಗೆ ಯುಗ-ಯುಗದಲ್ಲಿಯೂ ಧರ್ಮಗಳು ವೃದ್ಧಿಸುತ್ತವೆ ಮತ್ತು ಕ್ಷೀಣಿಸುತ್ತವೆ.
12224070a ಯಥರ್ತುಷ್ವ್ ಋತುಲಿಂಗಾನಿ ನಾನಾರೂಪಾಣಿ ಪರ್ಯಯೇ।
12224070c ದೃಶ್ಯಂತೇ ತಾನಿ ತಾನ್ಯೇವ ತಥಾ ಬ್ರಹ್ಮಾಹರಾತ್ರಿಷು35।।
ಒಂದಾದ ಮೇಲೆ ಒಂದರಂತೆ ಬರುವ ಋತುಕಾಲಗಳಲ್ಲಿ ಆಯಾ ಋತುವಿನ ಲಕ್ಷಣಗಳು ಹೇಗೆ ಕಾಣಿಸಿಕೊಳ್ಳುತ್ತವೆಯೋ ಹಾಗೆಯೇ ಸೃಷ್ಟಿ-ಸಂಹಾರಗಳನ್ನೊಡಗೂಡಿದ ಬ್ರಹ್ಮನ ಹಗಲು ರಾತ್ರಿಗಳಲ್ಲಿ ಹಗಲಿನ ಮತ್ತು ರಾತ್ರಿಯ ಲಕ್ಷಣಗಳು ಕಂಡುಬರುತ್ತವೆ.
12224071a ವಿಹಿತಂ ಕಾಲನಾನಾತ್ವಮನಾದಿನಿಧನಂ ತಥಾ।
12224071c ಕೀರ್ತಿತಂ ಯತ್ಪುರಸ್ತಾತ್ತೇ ತತ್ಸೂತೇ ಚಾತ್ತಿ ಚ ಪ್ರಜಾಃ।।
ಚತುರ್ಯುಗಾತ್ಮಕ ಕಾಲಪುರುಷನ ಕಲಾಕಾಷ್ಠಾದಿ ಭೇದಗಳ ನಾನಾತ್ವ, ಧರ್ಮ-ಅಧರ್ಮಗಳ ವೃದ್ಧಿ-ಕ್ಷೀಣತೆಗಳ ಭೇದದ ವಿಭಿನ್ನತ್ವ ಮತ್ತು ಅವನ ಅನಾದಿನಿಧನತ್ವದ ಕುರಿತು ಮೊದಲೇ ನಿನಗೆ ವರ್ಣಿಸಿದ್ದೇನೆ. ಆ ಕಾಲವೇ ಪ್ರಜೆಗಳನ್ನು ಹುಟ್ಟಿಸಿ ಸಂಹರಿಸುತ್ತದೆ.
12224072a ದಧಾತಿ ಪ್ರಭವೇ ಸ್ಥಾನಂ ಭೂತಾನಾಂ ಸಂಯಮೋ ಯಮಃ।
12224072c ಸ್ವಭಾವೇನೈವ ವರ್ತಂತೇ ದ್ವಂದ್ವಯುಕ್ತಾನಿ ಭೂರಿಶಃ।।
ಜೀವಿಗಳು ಸ್ವಾಭಾವಿಕ ಸುಖದುಃಖಾದಿ ದ್ವಂದ್ವಗಳಿಂದ ಕೂಡಿರುವುದಕ್ಕೆ ಕಾಲವೇ ಕಾರಣವು. ಕಾಲವೇ ಅವುಗಳನ್ನು ಸಂಯಮ ಮತ್ತು ನಿಯಮಗಳಲ್ಲಿ ಇಡುತ್ತದೆ. ಕಾಲವೇ ಎಲ್ಲ ಭೂತಗಳನ್ನೂ ಧರಿಸಿಕೊಂಡಿರುತ್ತದೆ. ಪಾಲಿಸುತ್ತದೆ. ಕಾಲವೇ ಸ್ವಯಂ ಸರ್ವಭೂತಸ್ವರೂಪವು36.
12224073a ಸರ್ಗಃ ಕಾಲಃ ಕ್ರಿಯಾ ವೇದಾಃ ಕರ್ತಾ ಕಾರ್ಯಂ ಕ್ರಿಯಾ ಫಲಮ್।
12224073c ಪ್ರೋಕ್ತಂ ತೇ ಪುತ್ರ ಸರ್ವಂ ವೈ ಯನ್ಮಾಂ ತ್ವಂ ಪರಿಪೃಚ್ಚಸಿ।।
ಪುತ್ರ! ನೀನು ನನ್ನನ್ನು ಕೇಳಿದಂತೆ ನಿನಗೆ ಸೃಷ್ಟಿ, ಕಾಲ, ಕ್ರಿಯೆ, ವೇದಗಳು, ಕರ್ತ, ಕಾರ್ಯ, ಕ್ರಿಯಾಫಲ ಎಲ್ಲವನ್ನೂ ಹೇಳಿದ್ದೇನೆ.
3712224074a ಪ್ರತ್ಯಾಹಾರಂ ತು ವಕ್ಷ್ಯಾಮಿ ಶರ್ವರ್ಯಾದೌ ಗತೇಽಹನಿ।
12224074c ಯಥೇದಂ ಕುರುತೇಽಧ್ಯಾತ್ಮಂ ಸುಸೂಕ್ಷ್ಮಂ ವಿಶ್ವಮೀಶ್ವರಃ।।
ಹಗಲು ಕಳೆದು ರಾತ್ರಿಯ ಪ್ರಾರಂಭದಲ್ಲಿ ಸೃಷ್ಟಿಯು ಹೇಗೆ ಲಯಗೊಳ್ಳುತ್ತದೆ ಮತ್ತು ಈಶ್ವರ ಬ್ರಹ್ಮನು ಸ್ಥೂಲಜಗತ್ತನ್ನು ಅತ್ಯಂತ ಸೂಕ್ಷ್ಮವನ್ನಾಗಿ ಮಾಡಿ ತನ್ನ ಆತ್ಮದಲ್ಲಿ ಹೇಗೆ ಇಟ್ಟುಕೊಳ್ಳುತ್ತಾನೆ ಎನ್ನುವುದನ್ನು ಮುಂದೆ ಹೇಳುತ್ತೇನೆ.
12224075a ದಿವಿ ಸೂರ್ಯಾಸ್ತಥಾ ಸಪ್ತ ದಹಂತಿ ಶಿಖಿನೋಽರ್ಚಿಷಾ।
12224075c ಸರ್ವಮೇತತ್ತದಾರ್ಚಿರ್ಭಿಃ ಪೂರ್ಣಂ ಜಾಜ್ವಲ್ಯತೇ ಜಗತ್।।
ಆಗ ಆಕಾಶದಲ್ಲಿ ದ್ವಾದಶ ಆದಿತ್ಯ ಮತ್ತು ಅಗ್ನಿಯ ಏಳು ಜ್ವಾಲೆಗಳು ಈ ದೃಶ್ಯ ಜಗತ್ತನ್ನು ಸುಡಲು ಪ್ರಾರಂಭಿಸುತ್ತವೆ. ಆಗ ಜಗತ್ತೆಲ್ಲವೂ ಸೂರ್ಯನ ಮತ್ತು ಅಗ್ನಿಯ ಜ್ವಾಲೆಗಳಿಂದ ಜಾಜ್ವಲ್ಯಮಾನಗೊಳ್ಳುತ್ತದೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕಾನುಪ್ರಶ್ನೇ ಚತುರ್ವಿಂಶಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕಾನುಪ್ರಶ್ನ ಎನ್ನುವ ಇನ್ನೂರಾಇಪ್ಪತ್ನಾಲ್ಕನೇ ಅಧ್ಯಾಯವು.
-
ಆ ಬ್ರಹ್ಮವಸ್ತುವೇ ಭೂತಗ್ರಾಮದ ಕರ್ತಾರವು. ↩︎
-
ನಿಮೇಷ ಎಂದರೆ ಒಂದು ಸಲ ರೆಪ್ಪೆಯನ್ನಾಡಿಸುವಷ್ಟು ಕಾಲ (ನಿಮೇಷೋ ನಿಮಿಷೋ ನೇತ್ರಮೀಲನೇ ಕಲಭಿದ್ಯಪಿ (ಹೇಮಾದ್ರಿ)). (ಭಾರತ ದರ್ಶನ) ಶ್ರೀ ಭಾಗವತ ಮಹಾಪುರಾಣದಲ್ಲಿ ನಿಮೇಷದ ನಿರುಕ್ತಿಯು ಈ ರೀತಿಯಿದೆ: ಅಣುರ್ದ್ವೌ ಪರಮಾಣೂ ಸ್ಯಾತ್ಪ್ರಸರೇಣುಸ್ತ್ರಯಃ ಸ್ಮೃತಃ। ಶತಭಾಗಸ್ತು ವೇಧಃ ಸ್ಯಾತ್ರೈಸ್ತ್ರಿಭಿಸ್ತು ಲವಃ ಸ್ಮೃತಃ। ನಿಮಿಷೇಸ್ತ್ರಿಲವೋ ಜ್ಞೇಯ ಆಮ್ನಾತಸ್ತೇ ತ್ರಯಃ ಕ್ಷಣಃ। ಕ್ಷಣಾನ್ಪಂಚ ವಿದುಃ ಕಾಷ್ಠಾಂ ಲಘು ತಾ ದಶ ಪಂಚ ಚ।। ಅರ್ಥಾತ್: ಎರಡು ಪರಮಾಣುಗಳು ಸೇರಿ ಒಂದು ಅಣುವಾಗುತ್ತದೆ. ಮೂರು ಅಣುಗಳು ಸೇರಿ ಒಂದು ತೃಸರೇಣುವಾಗುತ್ತದೆ. ಇದು ಕಿಟಕಿಯ ಮೂಲಕ ಬರುವ ಸೂರ್ಯನ ಕಿರಣಗಳಲ್ಲಿ ಆಕಾಶದಲ್ಲಿ ಹಾರಿಹೋಗುತ್ತಾ ಭೂಮಿಗಿಳಿಯುವ ಕಣಗಳಂತೆ ಕಾಣುತ್ತದೆ. ಇಂತಹ ಮೂರು ತೃಸರೇಣುಗಳನ್ನು ದಾಟಲು ಸೂರ್ಯನಿಗೆ ತಗಲುವ ಸಮಯವನ್ನು ತೃಟಿ ಎಂದು ಹೇಳುತ್ತಾರೆ. ತ್ರುಟಿಯ ನೂರುಪಟ್ಟು ಕಾಲವು ವೇಧ ಎಂದೂ, ಮೂರು ವೇಧಗಳು ಒಂದು ಲವ ಎಂದೂ ಹೇಳುತ್ತಾರೆ. ಮೂರು ಲವಗಳಿಗೆ ಒಂದು ನಿಮೇಷ ಮತ್ತು ಮೂರು ನಿಮೇಷಗಳಿಗೆ ಒಂದು ಕ್ಷಣವೆಂದೂ, ಐದು ಕ್ಷಣಗಳಿಗೆ ಒಂದು ಕಾಷ್ಠಾ ಎಂದೂ, ಹದಿನೈದು ಕಾಷ್ಠಾಗಳಿಗೆ ಒಂದು ಲಘು ಎಂದೂ ಹೇಳುತ್ತಾರೆ. (ಶ್ರೀ ಭಾಗವತ ಮಹಾಪುರಾಣ, ತೃತೀಯ ಸ್ಕಂಧ, ಅಧ್ಯಾಯ 11, ಶ್ಲೋಕ 5-7, ವಿದುರ-ಮೈತ್ರೇಯ ಸಂವಾದ). ↩︎
-
33 ಕಲಾಗಳು ಸೇರಿ ಒಂದು ಮುಹೂರ್ತವಾಗುತ್ತದೆ. ↩︎
-
ಶುಕ್ಲೋಽಹಃ ಕರ್ಮಚೇಷ್ಟಾಯಾಮ್ ಕೃಷ್ಣಃ ಸ್ವಪ್ನಾಯ ಶರ್ವರೀ। (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಜೀವಲೌಕಿಕೇ। (ಭಾರತ ದರ್ಶನ). ↩︎
-
4800 ದಿವ್ಯ ವರ್ಷಗಳು (400 ಸಂಧ್ಯಾ + 4000 + 400 ಸಂಧ್ಯಾಂಶ) ಕೃತಯುಗದ ಕಾಲಾವಧಿ. ↩︎
-
ತ್ರೇತಾಯುಗದ ಕಾಲಾವಧಿಯು 3600 ದಿವ್ಯ ವರ್ಷಗಳು (300 ಸಂಧ್ಯಾ + 3000 + 300 ಸಂಧ್ಯಾಂಶ). ದ್ವಾಪರ ಯುಗದ ಕಾಲಾವಧಿಯು 2400 ದಿವ್ಯ ವರ್ಷಗಳು (200 ಸಂಧ್ಯಾ + 2000 + 200 ಸಂಧ್ಯಾಂಶ). ಕಲಿಯುಗದ ಕಾಲಾವಧಿಯು 1200 ದಿವ್ಯ ವರ್ಷಗಳು (100 ಸಂಧ್ಯಾ + 1000 + 100 ಸಂಧ್ಯಾಂಶ). ↩︎
-
ತ್ರೇತಾಯುಗದಲ್ಲಿ ಮನುಷ್ಯರ ಆಯುಸ್ಸು 300 ವರ್ಷಗಳಾಗಿರುತ್ತದೆ. ದ್ವಾಪರ ಯುಗದಲ್ಲಿ ಮನುಷ್ಯರ ಆಯುಸ್ಸು 200 ವರ್ಷಗಳು ಮತ್ತು ಕಲಿಯುಗದಲ್ಲಿ 100 ವರ್ಷಗಳಾಗಿರುತ್ತದೆ. ↩︎
-
4800 (ಕೃತಯುಗ) + 3600 (ತ್ರೇತಾಯುಗ) + 2400 (ದ್ವಾಪರಯುಗ) + 1200 (ಕಲಿಯುಗ) = 12,000. ↩︎
-
ರಾತ್ರಿಯು ಕಳೆದೊಡನೆಯೇ ಎಚ್ಚರಗೊಂಡ ಬ್ರಹ್ಮನು ತನ್ನ ಅಕ್ಷಯ ಸ್ವರೂಪವನ್ನು ಮಾಯೆಯಿಂದ ಸೃಷ್ಟಿಸುತ್ತಾನೆ. ಮೊದಲು ಮಹತ್ತತ್ತ್ವವನ್ನು ಸೃಷ್ಟಿಸುತ್ತಾನೆ. ಆ ಮಹತ್ತತ್ತ್ವದಿಂದ ವ್ಯಕ್ತಜಗತ್ತಿಗೆ ಆತ್ಮವಾದ ಮನಸ್ಸನ್ನು ಸೃಷ್ಟಿಸುತ್ತಾನೆ. (ಭಾರತ ದರ್ಶನ). ↩︎
-
ಭಾರತ ದರ್ಶನ ಮತ್ತು ಗೀತಾ ಪ್ರೆಸ್ ಗಳಲ್ಲಿ ಈ ಮುಂದಿನ ಶ್ಲೋಕಗಳನ್ನು ಬೇರೆಯೇ ಅಧ್ಯಾಯವಾಗಿ ಕೊಡಲಾಗಿದೆ. ↩︎
-
ಆ ಮನಸ್ಸು ಬಹಳ ದೂರಗಾಮಿಯಾಗಿದ್ದು ಮತ್ತು ಅನೇಕ ಪ್ರಕಾರವಾದ ಗಮನಾಗಮನವುಳ್ಳದ್ದು. ಪ್ರಾರ್ಥನೆ ಮತ್ತು ಸಂಶಯಗಳಿಂದ ಯುಕ್ತವಾದ ಆ ಮನಸ್ಸು ಪ್ರಕಾಶವಂತನಾದ ಚಿದಾತ್ಮನನ್ನು ಆವರಿಸಿ ಏಳು ಮಂದಿ ಮಾನಸ ಪುತ್ರರನ್ನು ಸೃಷ್ಟಿಸಿತು. (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಆಕಾಶವು ಮೊದಲು ಹುಟ್ಟುವುದರಿಂದ ಅದಕ್ಕೆ ಶಬ್ದವೊಂದೇ ಗುಣ. ಎರಡನೆಯದಾದ ವಾಯುವಿಗೆ ತನ್ನದೇ ಗುಣವಾದ ಸ್ಪರ್ಶ ಮತ್ತು ಆಕಾಶದ ಗುಣವಾದ ಶಬ್ದ ಎರಡು ಗುಣಗಳಿವೆ. ಮೂರನೆಯದಾದ ಜ್ಯೋತಿಗೆ ತನ್ನದೇ ಗುಣವಾದ ರೂಪ ಮತ್ತು ವಾಯು-ಆಕಾಶಗಳ ಗುಣಗಳಾದ ಸ್ಪರ್ಶ-ಶಬ್ದ ಈ ಮೂರು ಗುಣಗಳಿವೆ. ನಾಲ್ಕನೆಯದಾದ ಜಲಕ್ಕೆ ತನ್ನದೇ ಗುಣವಾದ ರಸ ಮತ್ತು ಜ್ಯೋತಿ-ವಾಯು-ಆಕಾಶಗಳ ಗುಣಗಳಾದ ರೂಪ-ಸ್ಪರ್ಶ-ಶಬ್ದ ಈ ನಾಲ್ಕು ಗುಣಗಳಿವೆ. ಐದನೆಯದಾದ ಪೃಥ್ವಿಗೆ ತನ್ನದೇ ಗುಣವಾದ ಗಂಧ ಮತ್ತು ಜಲ-ಜ್ಯೋತಿ-ವಾಯು-ಆಕಾಶಗಳ ಗುಣಗಳಾದ ರಸ-ರೂಪ-ಸ್ಪರ್ಶ-ಶಬ್ದ ಈ ಐದು ಗುಣಗಳಿವೆ. ↩︎
-
ಏತೇ ಸಪ್ತವಿಧಾತ್ಮಾನೋ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಮಹತ್ತತ್ತ್ವ, ಮನಸ್ಸು, ಮತ್ತು ಪಂಚ ಮಹಾಭೂತಗಳು. ↩︎
-
ಆ ಏಳು ಪದಾರ್ಥಗಳೂ ಈಶ್ವರೇಚ್ಛೆಯಿಂದ ಯಾವಾಗ ಪರಸ್ಪರವಾಗಿ ಸಮ್ಮಿಳಿತವಾಗುವವೋ – ಆಗ ಅವುಗಳು ಭಿನ್ನ-ಭಿನ್ನವಾದ ಸಪ್ತ ತತ್ತ್ವಾತ್ಮಕವಾದ ಶರೀರಗಳಾಗಿ ರೂಪಗೊಂಡವು. ಅಂತಹ ಶರೀರವೆಂಬ ಪುರದಲ್ಲಿ ವಾಸಮಾಡುವುದರಿಂದಲೇ ಜೀವಾತ್ಮನನ್ನು ಪುರುಷನೆಂದು ಕರೆಯುತ್ತಾರೆ. (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಸ್ಥೂಲ ಶರೀರ. ↩︎
-
ಸೂಕ್ಷ್ಮ ಶರೀರ. ↩︎
-
ಮೂರ್ತಿಮತ್ತಾದ ದೇಹವು ಪಂಚಸ್ಥೂಲಮಹಾಭೂತಗಳಿಂದಲೂ, ದಶೇಂದ್ರಿಯಗಳಿಂದಲೂ ಮತ್ತು ಮನಸ್ಸಿನಿಂದಲೂ ಯುಕ್ತವಾಗಿದೆ. ಇವುಗಳಿಗೆ ಆಶ್ರಯವನ್ನಿತ್ತಿರುವುದರಿಂದಲೇ ದೇಹಕ್ಕೆ ಶರೀರವೆಂಬ ಹೆಸರು ಬಂದಿದೆ. ಶರೀರವು ಉತ್ಪನ್ನವಾದೊಡನೆಯೇ ಸೂಕ್ಷ್ಮಮಹಾಭೂತಗಳು ಜೀವಗಳ ಭೋಗಾವಶಿಷ್ಟವಾದ ಕರ್ಮಗಳೊಡನೆ ಶರೀರದಲ್ಲಿ ಪ್ರವೇಶಿಸುತ್ತವೆ. (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ನಾಶಹೊಂದದಿರುವ ಆಕಾಶವೇ ಮೊದಲಾದ ಪಂಚ ಮಹಾಭೂತಗಳು. ↩︎
-
ತದ್ಭಾವಿತಾ ಪ್ರಪ್ರದ್ಯಂತೇ ತಸ್ಮಾತ್ತತ್ತಸ್ಯ ರೋಚತೇ। (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಒಂದು ಜನ್ಮದಲ್ಲಿ ಮನುಷ್ಯನು ಹಿಂಸೆ-ಅಹಿಂಸೆ, ಮೃದುತ್ವ, ಕ್ರೂರತ್ವ, ಧರ್ಮ-ಅಧರ್ಮ, ದಿಟ-ಸಟೆ ಇವುಗಳಲ್ಲಿ ಯಾವ ಗುಣಗಳನ್ನು ಅಥವಾ ದೋಷಗಳನ್ನು ಹೊಂದಿರುವನೋ ಮರುಹುಟ್ಟಿನಲ್ಲಿಯೂ ಅವನು ಆ ಸಂಸ್ಕಾರದಿಂದಲೇ ಪ್ರಭಾವಿತನಾಗಿ ಆ ಗುಣ ಅಥವಾ ದೋಷಗಳಲ್ಲಿಯೇ ಅನುರಕ್ತನಾಗುತ್ತಾನೆ. (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಏತಮೇವ ಚ ನೈವಂ ಚ ನ ಚೋಭೇ ನಾನುಭೇ ನ ಚ। ಅರ್ಥಾತ್: ಕರ್ಮವಾದಿಗಳು ಈ ವಿಷಯದಲ್ಲಿ ಪುರುಷಾರ್ಥವೇ ಕಾರ್ಯಸಾಧಕ ಎಂದು ಹೇಳುವುದಿಲ್ಲ. ಪುರುಷಾರ್ಥವಲ್ಲ ದೈವವೇ ಕಾರಣ ಎಂದೂ ಹೇಳುವುದಿಲ್ಲ. ಇವೆರಡೂ ಸೇರಿ ಕಾರ್ಯಸಿದ್ಧಿಗೆ ಕಾರಣವಾಗುತ್ತದೆ ಎಂದೂ ಹೇಳುವುದಿಲ್ಲ. ತಾತ್ಪರ್ಯವೆಂದರೆ ಅವರು ಈ ವಿಷಯದಲ್ಲಿ ಯಾವ ನಿಶ್ಚಯವನ್ನೂ ಮಾಡುವುದಿಲ್ಲ. (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಮನೋ ನಿಗ್ರಹವೇ ಶಮೆಯು. ಬಾಹ್ಯ ಇಂದ್ರಿಯ ನಿಗ್ರಹವೇ ದಮೆಯು. ↩︎
-
ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ನಾನಾರೂಪಂ ಚ ಭೂತಾನಾಂ ಕರ್ಮಣಾಂ ಚ ಪ್ರವರ್ತನಮ್। ವೇದಶಬ್ದೇಭ್ಯ ಏವಾದೌ ನಿರ್ಮಿಮತೇ ಸ ಈಶ್ವರಃ। ನಾಮಧೇಯಾನಿ ಚರ್ಷೀಣಾಂ ಯಾಶ್ಚ ವೇದೇಷು ಸೃಷ್ಟಯಃ।। (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ವೇದಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕೂಡಿದ ತಪಸ್ಸು, ಕರ್ಮ, ಯಜ್ಞಗಳೆಂಬುವು ಲೋಕಸಿದ್ಧಿಯ ಸಾಧನಗಳೆಂದೂ ಮತ್ತು ಹತ್ತು ಕ್ರಮಗಳಿಂದ ಆತ್ಮಸಿದ್ಧಿಯಾವುದೆಂದೂ ಹೇಳಲ್ಪಟ್ಟಿವೆ. (ಲೋಕಸಿದ್ಧಿಯ ಸಾಧನಗಳು: ಶಾರೀರ, ವಾಚಕ ಮತ್ತು ಮಾನಸವೆಂಬ ಮೂರು ಬಗೆಯ ತಪಸ್ಸುಗಳು, ಇಷ್ಟ ಮತ್ತು ಪೂರ್ತಗಳೆಂಬ ಎರಡು ಬಗೆಯ ಕರ್ಮಗಳು, ಮತ್ತು ಇಲ್ಲಿಯೇ ಮುಂದೆ ಹೇಳಲ್ಪಡುವ ನಾಲ್ಕು ಬಗೆಯ ಯಜ್ಞಗಳು ಒಟ್ಟು ಒಂಬತ್ತು. ಹತ್ತನೆಯದು ಆತ್ಮಸಿದ್ಧಿಗೆ ಸಾಧನಗಳಾದ ಯಮ-ನಿಯಮಾದಿಗಳು. ಈ ಹತ್ತು ಕ್ರಮಗಳಲ್ಲಿ ವೇದಗಳು ಕಾರ್ಯಸಿದ್ಧಿಯ ಸಾಧನಗಳನ್ನು ನಿರೂಪಿಸುತ್ತವೆ.) (ಭಾರತ ದರ್ಶನ). ↩︎
-
ಕ್ರಮಯೋಗದ ಕುರಿತು ಸುಮಾರಾಗಿ ಹೋಲುವ ಎರಡು ವ್ಯಾಖ್ಯೆಗಳಿವೆ: (1) ಸ್ವಾಧ್ಯಾಯ, ಗಾರ್ಹಸ್ಥ್ಯ, ಸಂಧ್ಯಾವಂದನಾದಿ ನಿತ್ಯಕರ್ಮಗಳು, ಕೃಚ್ಛ-ಚಾಂದ್ರಾಯಣಾದಿ ತಪಸ್ಸು, ಯಜ್ಞ, ಪೂರ್ತಕರ್ಮ (ಇಷ್ಟಾಪೂರ್ತಗಳು: ಬಾವಿ-ಸರೋವರ ಮೊದಲಾದವುಗಳನ್ನು ತೋಡಿಸುವುದು), ಯೋಗ, ದಾನ, ಗುರುಶುಶ್ರೂಷೆ ಮತ್ತು ಸಮಾಧಿ – ಈ ಹತ್ತು ಕ್ರಮಯೋಗಗಳೆಂದು ವ್ಯಾಖ್ಯಾನಕಾರರು ಹೇಳುತ್ತಾರೆ. (ಭಾರತ ದರ್ಶನ) (2) ಹತ್ತು ಪ್ರಕಾರದ ಕ್ರಮಗಳು ಈ ರೀತಿ ಇವೆ: ವೇದಾಧ್ಯಯನ, ಪತ್ನಿಯನ್ನು ಸ್ವೀಕರಿಸಿ ಗೃಹಸ್ಥಧರ್ಮವನ್ನು ಅವಲಂಬಿಸುವುದು, ಕೃಚ್ಛ್ರಚಾಂದ್ರಾಯಣವೇ ಮೊದಲಾದ ವಾನಪ್ರಸ್ಥಾಶ್ರಮದ ತಪಸ್ಸು, ಸರ್ವಾಶ್ರಮ ಸಾಧಾರಣವಾದ ಸಂಧ್ಯೋಪಾಸನಾದಿ ಕರ್ಮಗಳು, ಜ್ಯೋತಿಷ್ಠೋಮಾದಿ ಯಜ್ಞ, ಕೀರ್ತಿಕರ ಸರೋವರ ಮತ್ತು ಉದ್ಯಾನಗಳ ಪೂರ್ತಕರ್ಮ, ಧ್ಯಾನ ಮೊದಲಾದ ಮಾನಸ ಧರ್ಮ, ವೈಶ್ವಾನರಾಖ್ಯದ ಬ್ರಹ್ಮದರ್ಶನ, ದಹರಾದಿ ಗ್ರಹಗಳ ಉಪಾಸನೆ ಮತ್ತು ವಿಶುದ್ಧಸ್ವರೂಪದ ಜ್ಞಾನ. ಈ ಹತ್ತು ಪ್ರಕಾರದ ಕ್ರಮಗಳಿಂದ ಸಾಂಸಾರಿಕ ದುಃಖದಿಂದ ಪಾರಾಗಿ ಪರಬ್ರಹ್ಮನನ್ನು ಹೊಂದಬಹುದು. (ದಾಮೋದರ ಸಾತ್ವಾಲೇಕರ್: ಸ್ವಾಧ್ಯಾಯ ಮಂಡಲ) ↩︎
-
ದ್ವಂದ್ವಯುಕ್ತೋಽಪಿ ದೇಹಿನಃ। (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ತಮಾತ್ಮಸಿದ್ಧಿರ್ವಿಜ್ಞಾನಾಜ್ಜಹಾತಿ ಪುರುಷೋ ಬಲಾತ್। (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಆಲಂಭಯಜ್ಞಾಃ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ವೇದಾ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಕೇವಲಾಧರ್ಮಪೀಡಿತಾಃ। (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಯಥಾಗಮಮ್ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ತ್ರೇತಾಯುಗದಲ್ಲಿ ಅಗ್ನಿಹೋತ್ರಗಳನ್ನು ಮಾಡುತ್ತಿದ್ದ ಬ್ರಾಹ್ಮಣರು ಆಚಾರ ವ್ಯವಹಾರಗಳನ್ನು ಅತಿಕ್ರಮಿಸದೇ ವೇದೋಕ್ತ ಪ್ರಮಾಣಾನುಸಾರವಾಗಿ ಯಜ್ಞಾದಿ ಧರ್ಮ, ಅದರೊಂದಿಗೆ ಉಪವಾಸಾದಿ ಹನ್ನೊಂದು ವ್ರತಗಳು, ಮತ್ತು ತೀರ್ಥದರ್ಶನಾದಿ ಧರ್ಮಕರ್ಮಗಳನ್ನು ಇಚ್ಛಾಪೂರ್ವಕವಾಗಿ ಆಚರಿಸುತ್ತಿದ್ದರು. ಇದರ ದ್ವಿಜಾತಿಯವರೂ ಸ್ವರ್ಗವನ್ನು ಬಯಸಿ ಯಜ್ಞಗಳನ್ನು ಮಾಡುತ್ತಿದ್ದರು. ದ್ವಾಪರಯುಗದಲ್ಲಿ ಬ್ರಾಹ್ಮಣಾದಿ ಮೂರೂ ವರ್ಣಗಳು ಪುತ್ರಾದಿ ಲೌಕಿಕ ಕಾಮನೆಗಳಿಗಾಗಿ ಯಜ್ಞಗಳನ್ನು ಮಾಡುತ್ತಿದ್ದರು. ಕಲಿಯುಗದಲ್ಲಿ ಕೇವಲ ಶತ್ರುಮಾರಣ ಮೊದಲಾದ ಇಚ್ಛೆಯಿಂದ ಮಾತ್ರ ಜನರು ಯಜ್ಞಗಳನ್ನು ಮಾಡುತ್ತಾರೆ. (ದಾಮೋದರ್ ಸಾತ್ವಾಲೇಕರ್: ಸ್ವಾಧ್ಯಾಯ ಮಂಡಲ) ↩︎
-
ಬ್ರಹ್ಮಹರಾದಿಶು (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಹೀಗೆ ಕಾಲವು ಧರಿಸಿ ಪೋಷಿಸುತ್ತದೆ. ಉತ್ಪತ್ತಿಯಲ್ಲಿ ಸ್ಥಾನವನ್ನು ಹೊಂದಿದೆ ಮತ್ತು ಭೂತಗಳನ್ನು ಉಪಸಂಹಾರಮಾಡುವ ಯಮನೂ ಕೂಡ ಕಾಲವೇ. ಎಲ್ಲ ಪ್ರಾಣಿಗಳಿಗೂ ಹೇರಳವಾಗಿ ಸುಖ-ದುಃಖಾದಿ ದ್ವಂದ್ವಗಳಿಂದ ಕೂಡಿರುವುದು ಅವುಗಳ ಸ್ವಭಾವದಿಂದಲೇ. (ಭಾರತ ದರ್ಶನ) ↩︎
-
ಭಾರತ ದರ್ಶನ ಮತ್ತು ಗೀತಾ ಪ್ರೆಸ್ ಗಳಲ್ಲಿ ಮುಂದಿನ ಎರಡು ಶ್ಲೋಕಗಳು ನಂತರದ ಅಧ್ಯಾಯದಲ್ಲಿ ಸೇರಿಸಿ ಕೊಟ್ಟಿದ್ದಾರೆ. ↩︎