ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 223
ಸಾರ
ನಾರದನ ಲೋಕಪ್ರಿಯತೆಗೆ ಕಾರಣವಾದ ಅವನ ಗುಣಗಳನ್ನು ಕೃಷ್ಣನು ಉಗ್ರಸೇನನಿಗೆ ನಿರೂಪಿಸಿದುದು (1-23).
12223001 ಯುಧಿಷ್ಠಿರ ಉವಾಚ।
12223001a ಪ್ರಿಯಃ ಸರ್ವಸ್ಯ ಲೋಕಸ್ಯ ಸರ್ವಸತ್ತ್ವಾಭಿನಂದಿತಾ।
12223001c ಗುಣೈಃ ಸರ್ವೈರುಪೇತಶ್ಚ ಕೋ ನ್ವಸ್ತಿ ಭುವಿ ಮಾನವಃ।।
ಯುಧಿಷ್ಠಿರನು ಹೇಳಿದನು: “ಲೋಕದ ಎಲ್ಲರಿಗೂ ಪ್ರಿಯನಾದ, ಸರ್ವಸತ್ತ್ವಗಳಿಂದಲೂ ಆನಂದದಾಯಕನಾದ, ಸರ್ವಸದ್ಗುಣಸಂಪನ್ನನಾದ ಮಾನವನು ಈ ಭುವಿಯಲ್ಲಿ ಯಾರಿದ್ದಾನೆ?”
12223002 ಭೀಷ್ಮ ಉವಾಚ।
12223002a ಅತ್ರ ತೇ ವರ್ತಯಿಷ್ಯಾಮಿ ಪೃಚ್ಚತೋ ಭರತರ್ಷಭ।
12223002c ಉಗ್ರಸೇನಸ್ಯ ಸಂವಾದಂ ನಾರದೇ ಕೇಶವಸ್ಯ ಚ।।
ಭೀಷ್ಮನು ಹೇಳಿದನು: “ಭರತರ್ಷಭ! ನಿನ್ನ ಪ್ರಶ್ನೆಗೆ ಉತ್ತರವಾಗಿ ನಾರದರ ವಿಷಯದಲ್ಲಿ ಕೇಶವನಿಗೂ ಉಗ್ರಸೇನ1ನಿಗೂ ನಡೆದ ಸಂವಾದವನ್ನು ಹೇಳುತ್ತೇನೆ.
12223003 ಉಗ್ರಸೇನ ಉವಾಚ।
12223003a ಪಶ್ಯ2 ಸಂಕಲ್ಪತೇ ಲೋಕೋ ನಾರದಸ್ಯ ಪ್ರಕೀರ್ತನೇ।
12223003c ಮನ್ಯೇ ಸ ಗುಣಸಂಪನ್ನೋ ಬ್ರೂಹಿ ತನ್ಮಮ ಪೃಚ್ಚತಃ।।
ಉಗ್ರಸೇನನು ಹೇಳಿದನು: “ನೋಡು! ಲೋಕವೇ ನಾರದನ ಗುಣಗಾನಮಾಡಲು ಬಯಸುತ್ತದೆ. ಅವನು ಗುಣಸಂಪನ್ನನೆಂದು ನನಗೂ ಅನಿಸುತ್ತದೆ. ನಾನು ಕೇಳಿದುದಕ್ಕೆ ಅವನ ಗುಣಗಳನ್ನು ಹೇಳು.”
12223004 ವಾಸುದೇವ ಉವಾಚ।
12223004a ಕುಕುರಾಧಿಪ ಯಾನ್ಮನ್ಯೇ ಶೃಣು ತಾನ್ಮೇ ವಿವಕ್ಷತಃ।
12223004c ನಾರದಸ್ಯ ಗುಣಾನ್ಸಾಧೂನ್ಸಂಕ್ಷೇಪೇಣ ನರಾಧಿಪ।।
ವಾಸುದೇವನು ಹೇಳಿದನು: “ಕುಕುರಾಧಿಪ! ನರಾಧಿಪ! ನಾನು ನಾರದನಲ್ಲಿ ಕಂಡ ಸಾಧುಗುಣಗಳನ್ನು ಸಂಕ್ಷೇಪವಾಗಿ ಕೇಳು.
12223005a ನ ಚಾರಿತ್ರನಿಮಿತ್ತೋಽಸ್ಯಾಹಂಕಾರೋ ದೇಹಪಾತನಃ3।
12223005c ಅಭಿನ್ನಶ್ರುತಚಾರಿತ್ರಸ್ತಸ್ಮಾತ್ಸರ್ವತ್ರ ಪೂಜಿತಃ।।
ತನ್ನ ಸದಾಚಾರದ ಕಾರಣದಿಂದ ಅವನಿಗೆ ಶರೀರವನ್ನು ಸಂತಪ್ತಗೊಳಿಸುವ ಅಹಂಕಾರವಿಲ್ಲ. ಅವನಲ್ಲಿ ಯಾವ ಶಾಸ್ತ್ರಜ್ಞಾನವಿದೆಯೋ ಅವನ ಚಾರಿತ್ರ್ಯವೂ ಅದರಂತೆಯೇ ಇದೆ. ಆದುದರಿಂದ ಅವನು ಸರ್ವತ್ರ ಪೂಜಿತನಾಗಿದ್ದಾನೆ4.
512223006a ತಪಸ್ವೀ6 ನಾರದೋ ಬಾಢಂ ವಾಚಿ ನಾಸ್ಯ ವ್ಯತಿಕ್ರಮಃ।
12223006c ಕಾಮಾದ್ವಾ ಯದಿ ವಾ ಲೋಭಾತ್ತಸ್ಮಾತ್ಸರ್ವತ್ರ ಪೂಜಿತಃ।।
ನಿಶ್ಚಿತವಾಗಿಯೂ ನಾರದನು ತಪಸ್ವಿಯು. ಕಾಮದಿಂದಾಗಲೀ ಅಥವಾ ಲೋಭದಿಂದಾಗಲೀ ಅವನ ಮಾತು ಬದಲಾಗುವುದಿಲ್ಲ. ಆದುದರಿಂದ ಅವನು ಸರ್ವತ್ರ ಪೂಜಿತನಾಗಿದ್ದಾನೆ.
12223007a ಅಧ್ಯಾತ್ಮವಿಧಿತತ್ತ್ವಜ್ಞಃ ಕ್ಷಾಂತಃ ಶಕ್ತೋ ಜಿತೇಂದ್ರಿಯಃ।
12223007c ಋಜುಶ್ಚ ಸತ್ಯವಾದೀ ಚ ತಸ್ಮಾತ್ಸರ್ವತ್ರ ಪೂಜಿತಃ।।
ಅವನು ಆಧ್ಯಾತ್ಮವಿಧಿಗಳನ್ನು ತತ್ತ್ವತಃ ತಿಳಿದುಕೊಂಡಿದ್ದಾನೆ. ಕ್ಷಮಾಶೀಲನೂ, ಶಕ್ತನೂ, ಜಿತೇಂದ್ರಿಯನೂ, ಸರಳಸ್ವಭಾವದವನೂ, ಸತ್ಯವಾದಿಯೂ ಆಗಿದ್ದಾನೆ. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.
12223008a ತೇಜಸಾ ಯಶಸಾ ಬುದ್ಧ್ಯಾ ನಯೇನ ವಿನಯೇನ ಚ।
12223008c ಜನ್ಮನಾ ತಪಸಾ ವೃದ್ಧಸ್ತಸ್ಮಾತ್ಸರ್ವತ್ರ ಪೂಜಿತಃ।।
ಅವನು ತೇಜಸ್ಸು, ಯಶಸ್ಸು, ಬುದ್ಧಿ, ನಯ-ವಿನಯಗಳು, ಜನ್ಮ ಮತ್ತು ತಪಸ್ಸಿನಲ್ಲಿ ವೃದ್ಧನು. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.
12223009a ಸುಖಶೀಲಃ ಸುಸಂಭೋಗಃ ಸುಭೋಜ್ಯಃ ಸ್ವಾದರಃ ಶುಚಿಃ7।
12223009c ಸುವಾಕ್ಯಶ್ಚಾಪ್ಯನೀರ್ಷ್ಯಶ್ಚ ತಸ್ಮಾತ್ಸರ್ವತ್ರ ಪೂಜಿತಃ।।
ಅವನು ಸುಖಶೀಲನು. ಸುಖವಾಗಿ ಭೋಗಿಸುತ್ತಾನೆ. ಪವಿತ್ರವಾದುದನ್ನು ತಿನ್ನುತ್ತಾನೆ. ಪವಿತ್ರಹೃದಯವುಳ್ಳವನು. ಒಳ್ಳೆಯ ಮಾತನ್ನಾಡುತ್ತಾನೆ. ಈರ್ಷ್ಯಾರಹಿತನು. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.
12223010a ಕಲ್ಯಾಣಂ ಕುರುತೇ ಬಾಢಂ ಪಾಪಮಸ್ಮಿನ್ನ ವಿದ್ಯತೇ।
12223010c ನ ಪ್ರೀಯತೇ ಪರಾನರ್ಥೈಸ್ತಸ್ಮಾತ್ಸರ್ವತ್ರ ಪೂಜಿತಃ।।
ಅವನು ಎಲ್ಲರಿಗೂ ಯಾವಾಗಲೂ ಒಳ್ಳೆಯದನ್ನೇ ಮಾಡುತ್ತಾನೆ. ಅವನಲ್ಲಿ ಪಾಪವೆನ್ನುವುದೇ ಇಲ್ಲ. ಇತರರಿಗುಂಟಾದ ಅನರ್ಥಗಳಿಂದ ಅವನು ಹರ್ಷಿತನಾಗುವುದಿಲ್ಲ. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.
12223011a ವೇದಶ್ರುತಿಭಿರಾಖ್ಯಾನೈರರ್ಥಾನಭಿಜಿಗೀಷತೇ।
12223011c ತಿತಿಕ್ಷುರನವಜ್ಞಶ್ಚ ತಸ್ಮಾತ್ಸರ್ವತ್ರ ಪೂಜಿತಃ।।
ಅವನು ವೇದ, ಶ್ರುತಿ ಮತ್ತು ಆಖ್ಯಾನಗಳ ಮೂಲಕ ಎಲ್ಲವನ್ನೂ ತಿಳಿಸಲು ಬಯಸುತ್ತಾನೆ. ಅವನು ಸಹನಶೀಲನು ಮತ್ತು ಯಾರನ್ನೂ ಅಪಮಾನಿಸುವುದಿಲ್ಲ. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.
12223012a ಸಮತ್ವಾದ್ಧಿ ಪ್ರಿಯೋ ನಾಸ್ತಿ ನಾಪ್ರಿಯಶ್ಚ ಕಥಂ ಚನ।
12223012c ಮನೋನುಕೂಲವಾದೀ ಚ ತಸ್ಮಾತ್ಸರ್ವತ್ರ ಪೂಜಿತಃ।।
ಸಮತ್ವದಿಂದಾಗಿ ಅವನಿಗೆ ಯಾರೂ ಪ್ರಿಯರಲ್ಲ. ಯಾರೂ ಅಪ್ರಿಯರೂ ಅಲ್ಲ. ಎಲ್ಲರ ಮನಸ್ಸಿಗೂ ಹಿತವಾಗುವಂತೆ ಮಾತನಾಡುತ್ತಾನೆ8. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.
12223013a ಬಹುಶ್ರುತಶ್ಚೈತ್ರಕಥಃ ಪಂಡಿತೋಽನಲಸೋಽಶಠಃ।
12223013c ಅದೀನೋಽಕ್ರೋಧನೋಽಲುಬ್ಧಸ್ತಸ್ಮಾತ್ಸರ್ವತ್ರ ಪೂಜಿತಃ।।
ಅವನು ಸಕಲಶಾಸ್ತ್ರಗಳಲ್ಲಿಯೂ ಪಾಂಡಿತ್ಯವುಳ್ಳವನು. ವಿಚಿತ್ರ ಕಥೆಗಳನ್ನು ಹೇಳುತ್ತಾನೆ9. ಅವನು ಪಂಡಿತನು. ನಿರಾಲಸಿಯು. ಶಠತ್ವವಿಲ್ಲದವನು. ದೈನ್ಯ-ಕ್ರೋಧ-ಲೋಭಗಳಿಲ್ಲದವನು. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.
12223014a ನಾರ್ಥೇ ನ ಧರ್ಮೇ ಕಾಮೇ ವಾ ಭೂತಪೂರ್ವೋಽಸ್ಯ ವಿಗ್ರಹಃ।
12223014c ದೋಷಾಶ್ಚಾಸ್ಯ ಸಮುಚ್ಚಿನ್ನಾಸ್ತಸ್ಮಾತ್ಸರ್ವತ್ರ ಪೂಜಿತಃ।।
ಯಾವುದಾದರೂ ವಸ್ತುವಿನ ವಿಷಯದಲ್ಲಾಗಲೀ, ಧನಕ್ಕಾಗಲೀ ಅಥವಾ ಕಾಮಕ್ಕಾಗಲೀ ಅವನು ಹಿಂದೆ ಯಾರೊಡನೆಯೂ ಜಗಳವಾಡಿದ್ದಿಲ್ಲ. ಅವನ ಸರ್ವದೋಷಗಳೂ ನಷ್ಟವಾಗಿ ಹೋಗಿವೆ. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.
12223015a ದೃಢಭಕ್ತಿರನಿಂದ್ಯಾತ್ಮಾ ಶ್ರುತವಾನನೃಶಂಸವಾನ್।
12223015c ವೀತಸಂಮೋಹದೋಷಶ್ಚ ತಸ್ಮಾತ್ಸರ್ವತ್ರ ಪೂಜಿತಃ।।
ಅವನು ದೃಢಭಕ್ತಿಯನ್ನಿಟ್ಟುಕೊಂಡಿದ್ದಾನೆ. ಶುದ್ಧಾತ್ಮನು. ವಿದ್ವಾಂಸನು. ದಯಾಳುವು. ಸಮ್ಮೋಹಾದಿ ದೋಷಗಳಿಂದ ವರ್ಜಿತನಾದವನು. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.
12223016a ಅಸಕ್ತಃ ಸರ್ವಸಂಗೇಷು10 ಸಕ್ತಾತ್ಮೇವ ಚ ಲಕ್ಷ್ಯತೇ।
12223016c ಅದೀರ್ಘಸಂಶಯೋ ವಾಗ್ಮೀ ತಸ್ಮಾತ್ಸರ್ವತ್ರ ಪೂಜಿತಃ।।
ಸರ್ವಸಂಬಂಧಗಳಲ್ಲಿ ಅನಾಸಕ್ತನಾಗಿದ್ದರೂ ಅವನು ಆಸಕ್ತನಾಗಿರುವಂತೆಯೇ ತೋರುತ್ತಾನೆ. ವಾಗ್ಮಿಯಾದ ಅವನಲ್ಲಿ ಸಂಶಯಗಳು ಹೆಚ್ಚುಕಾಲ ಇರುವುದಿಲ್ಲ. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.
12223017a ಸಮಾಧಿರ್ನಾಸ್ಯ ಮಾನಾರ್ಥೇ11 ನಾತ್ಮಾನಂ ಸ್ತೌತಿ ಕರ್ಹಿ ಚಿತ್।
12223017c ಅನೀರ್ಷ್ಯುರ್ದೃಢ12ಸಂಭಾಷಸ್ತಸ್ಮಾತ್ಸರ್ವತ್ರ ಪೂಜಿತಃ।।
ಅವನು ಮಾನ-ಸಮ್ಮಾನಗಳಲ್ಲಿ ಮುಳುಗಿರುವುದಿಲ್ಲ. ಎಂದೂ ಆತ್ಮಸ್ತುತಿಯನ್ನು ಮಾಡಿಕೊಳ್ಳುವುದಿಲ್ಲ. ಈರ್ಷ್ಯೆಯಿಲ್ಲದೇ ದೃಢವಾಗಿ ಮಾತನಾಡುತ್ತಾನೆ. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.
12223018a ಲೋಕಸ್ಯ ವಿವಿಧಂ ವೃತ್ತಂ13 ಪ್ರಕೃತೇಶ್ಚಾಪ್ಯಕುತ್ಸಯನ್।
12223018c ಸಂಸರ್ಗವಿದ್ಯಾಕುಶಲಸ್ತಸ್ಮಾತ್ಸರ್ವತ್ರ ಪೂಜಿತಃ।।
ಲೋಕದ ವಿವಿಧ ವೃತ್ತಿಗಳನ್ನು ನೋಡುತ್ತಾನೆ. ಆದರೂ ಯಾವುದನ್ನೂ ನಿಂದಿಸುವುದಿಲ್ಲ. ಸಂಸರ್ಗವಿದ್ಯೆ14ಯಲ್ಲಿ ಅವನು ಕುಶಲನು. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.
12223019a ನಾಸೂಯತ್ಯಾಗಮಂ ಕಂ ಚಿತ್ಸ್ವಂ ತಪೋ ನೋಪಜೀವತಿ15।
12223019c ಅವಂಧ್ಯಕಾಲೋ ವಶ್ಯಾತ್ಮಾ ತಸ್ಮಾತ್ಸರ್ವತ್ರ ಪೂಜಿತಃ।।
ಅವನು ಆಗಮಗಳಲ್ಲಿ ದೋಷವನ್ನು ಹುಡುಕುವುದಿಲ್ಲ. ತನ್ನ ತಪಸ್ಸಿನಿಂದಲೇ ಜೀವನ ನಡೆಸುತ್ತಾನೆ. ಸಮಯವನ್ನು ಕಳೆಯುವುದಿಲ್ಲ. ಚಿತ್ತವನ್ನು ವಶದಲ್ಲಿಟ್ಟುಕೊಂಡಿರುತ್ತಾನೆ. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.
12223020a ಕೃತಶ್ರಮಃ ಕೃತಪ್ರಜ್ಞೋ ನ ಚ ತೃಪ್ತಃ ಸಮಾಧಿತಃ।
12223020c ನಿಯಮಸ್ಥೋಽಪ್ರಮತ್ತಶ್ಚ ತಸ್ಮಾತ್ಸರ್ವತ್ರ ಪೂಜಿತಃ।।
ಅವನು ಆಧ್ಯಾತ್ಮವಿದ್ಯೆಗಾಗಿ ಬಹಳ ಶ್ರಮಿಸಿದ್ದಾನೆ. ಕೃತಪ್ರಜ್ಞನಾಗಿದ್ದಾನೆ. ಸಮಾಧಿಯಲ್ಲಿ ಅವನಿಗೆ ತೃಪ್ತಿಯೆನ್ನುವುದೇ ಇಲ್ಲ. ನಿಯಮಸ್ಥನು ಮತ್ತು ಅಪ್ರಮತ್ತನು. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.
12223021a ಸಾಪತ್ರಪಶ್ಚ16 ಯುಕ್ತಶ್ಚ ಸುನೇಯಃ ಶ್ರೇಯಸೇ ಪರೈಃ।
12223021c ಅಭೇತ್ತಾ ಪರಗುಹ್ಯಾನಾಂ ತಸ್ಮಾತ್ಸರ್ವತ್ರ ಪೂಜಿತಃ।।
ನಾರದನು ದ್ವೇಷರಹಿತನು. ಯೋಗಯುಕ್ತನು. ಇತರರ ಶ್ರೇಯಸ್ಸಿನಲ್ಲಿಯೇ ತೊಡಗಿರುವವನು. ನೀತಿಮಾನನು ಮತ್ತು ಇನ್ನೊಬ್ಬರ ಗುಪ್ತ ವಚನವನ್ನು ಬಹಿರಂಗಪಡಿಸುವುದಿಲ್ಲ. ಆದುದರಿಂದ ಅವನು ಸರ್ವತ್ರ ಪೂಜಿತನು.
12223022a ನ ಹೃಷ್ಯತ್ಯರ್ಥಲಾಭೇಷು ನಾಲಾಭೇಷು ವ್ಯಥತ್ಯಪಿ।
12223022c ಸ್ಥಿರಬುದ್ಧಿರಸಕ್ತಾತ್ಮಾ ತಸ್ಮಾತ್ಸರ್ವತ್ರ ಪೂಜಿತಃ।।
ಧನಲಾಭವಾದರೆ ಹರ್ಷಿಸುವುದಿಲ್ಲ. ನಷ್ಟವಾದಾಗ ವ್ಯಥಿಸುವುದಿಲ್ಲ. ಅನಾಸಕ್ತನಾಗಿದ್ದಾನೆ. ಸ್ಥಿರಬುದ್ಧಿಯುಳ್ಳವನಾಗಿದ್ದಾನೆ. ಆದುದರಿಂದ ಅವನು ಸರ್ವತ್ರ ಪೂಜಿತನಾಗುತ್ತಾನೆ.
12223023a ತಂ ಸರ್ವಗುಣಸಂಪನ್ನಂ ದಕ್ಷಂ ಶುಚಿಮಕಾತರಮ್।
12223023c ಕಾಲಜ್ಞಂ ಚ ನಯಜ್ಞಂ ಚ ಕಃ ಪ್ರಿಯಂ ನ ಕರಿಷ್ಯತಿ।।
ಇಂತಹ ಸರ್ವಗುಣಸಂಪನ್ನನೂ, ದಕ್ಷನೂ, ಶುಚಿಯೂ, ನಿರ್ಭಯನೂ, ಕಾಲಜ್ಞನೂ, ನಯಜ್ಞನೂ ಆದ ಅವನನ್ನು ಯಾರುತಾನೇ ಪ್ರೀತಿಸುವುದಿಲ್ಲ?””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ವಾಸುದೇವೋಗ್ರಸೇನಸಂವಾದೇ ತ್ರಿವಿಂಶಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ವಾಸುದೇವೋಗ್ರಸೇನಸಂವಾದ ಎನ್ನುವ ಇನ್ನೂರಾಇಪ್ಪತ್ಮೂರನೇ ಅಧ್ಯಾಯವು.
-
ಉಗ್ರಸೇನನು ಕಂಸ ಮತ್ತು ದೇವಕಿಯರ ತಂದೆ, ಕೃಷ್ಣನ ಅಜ್ಜ. ಕಂಸನನ್ನು ಕೊಂದ ನಂತರ ಕೃಷ್ಣನು ಉಗ್ರಸೇನನನ್ನೇ ಮಥುರೆಯ ರಾಜನನ್ನಾಗಿ ಅಭಿಷೇಕಿಸಿದನು. ↩︎
-
ಯಸ್ಯ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ದೇಹತಾಪನಃ (ಭಾರತ ದರ್ಶನ). ↩︎
-
ನಾರದರಲ್ಲಿ ಶಾಸ್ತ್ರಜ್ಞಾನ-ಸದಾಚಾರಗಳು ಒಟ್ಟಾಗಿ ನೆಲೆಸಿವೆ. ಅವುಗಳಿಂದ ಭಿನ್ನರಾಗಿ ನಾರದರಿರುವುದಿಲ್ಲ. ಆದರೆ ಶಾಸ್ತ್ರಜ್ಞಾನ-ಸದಾಚಾರಗಳೆರಡೂ ಅವರಲ್ಲಿ ಮನೆಮಾಡಿಕೊಂಡಿದ್ದರೂ ಅವರಿಗೆ ಶರೀರವನ್ನು ಪರಿತಾಪಗೊಳಿಸುವ ಅಹಂಕಾರವಿಲ್ಲ. ಈ ಕಾರಣದಿಂದಲೇ ಅವರು ಸವತ್ರ ಪೂಜ್ಯರಾಗಿದ್ದಾರೆ. (ಭಾರತ ದರ್ಶನ) ↩︎
-
ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಅರತಿಃ ಕ್ರೋಧಚಾಪಲ್ಯೇ ಭಯಂ ನೈತಾನಿ ನಾರದೇ। ಅದೀರ್ಘಸೂತ್ರಃ ಶೂರಶ್ಚ ತಸ್ಮಾತ್ಸರ್ವತ್ರ ಪೂಜಿತಃ।। (ಭಾರತ ದರ್ಶನ) ↩︎
-
ಉಪಾಸ್ಯೋ (ಭಾರತ ದರ್ಶನ). ↩︎
-
ಸುಶೀಲಃ ಸುಖಸಂವೇಶಃ ಸುಭೋಜಃ ಸ್ವಾದರಃ ಶುಚಿಃ। (ಭಾರತ ದರ್ಶನ) ↩︎
-
ಅವನು ಮನಸ್ಸಿಗೆ ಅನುಕೂಲವಾಗುವ ಮಾತುಗಳನ್ನಾಡುತ್ತಾನೆ. (ದಾಮೋದರ್ ಸತ್ವಾಲೇಕರ್, ಸ್ವಾಧ್ಯಾಯ ಮಂಡಲ) ↩︎
-
ಅವನು ಕಥೆಗಳನ್ನು ವಿಚಿತ್ರರೀತಿಯಲ್ಲಿ ಹೇಳುತ್ತಾನೆ. (ದಾಮೋದರ್ ಸತ್ವಾಲೇಕರ್, ಸ್ವಾಧ್ಯಾಯ ಮಂಡಲ) ↩︎
-
ಸರ್ವಭೂತೇಷು (ಭಾರತ ದರ್ಶನ). ↩︎
-
ಕಾಮಾರ್ಥೇ (ಭಾರತ ದರ್ಶನ). ↩︎
-
ಮೃದು (ಭಾರತ ದರ್ಶನ). ↩︎
-
ಚಿತ್ತಂ (ಭಾರತ ದರ್ಶನ). ↩︎
-
ಸಹವಾಸದ ಗುಣ-ದೋಷಗಳ ತಿಳುವಳಿಕೆ (ಭಾರತ ದರ್ಶನ). ↩︎
-
ಕಂಚಿತ್ಸ್ವನಯೇನೋಪಜೀವತಿ (ಭಾರತ ದರ್ಶನ). ↩︎
-
ನಾಪತ್ರಪಶ್ಚ (ಭಾರತ ದರ್ಶನ). ↩︎