ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 222
ಸಾರ
ಜೈಗೀಶವ್ಯನು ಅಸಿತ-ದೇವಲನಿಗೆ ಸಮತ್ವಬುದ್ಧಿಯನ್ನು ಉಪದೇಶಿಸಿದುದು (1-24).
12222001 ಯುಧಿಷ್ಠಿರ ಉವಾಚ।
12222001a ಕಿಂಶೀಲಃ ಕಿಂಸಮಾಚಾರಃ ಕಿಂವಿದ್ಯಃ ಕಿಂಪರಾಯಣಃ1।
12222001c ಪ್ರಾಪ್ನೋತಿ ಬ್ರಹ್ಮಣಃ ಸ್ಥಾನಂ ಯತ್ಪರಂ ಪ್ರಕೃತೇರ್ಧ್ರುವಮ್।।
ಯುಧಿಷ್ಠಿರನು ಹೇಳಿದನು: “ಮನುಷ್ಯನು ಎಂಥಹ ಶೀಲ, ಎಂತಹ ಆಚರಣೆ, ಎಂತಹ ವಿದ್ಯೆ ಮತ್ತು ಯಾವುದರ ಆಶ್ರಯದಿಂದ ಪ್ರಕೃತಿಗಿಂತಲೂ ಶ್ರೇಷ್ಠವಾಗಿರುವ ಅವಿನಾಶೀ ಬ್ರಹ್ಮಸ್ಥಾನವನ್ನು ಪಡೆದುಕೊಳ್ಳುತ್ತಾನೆ?”
12222002 ಭೀಷ್ಮ ಉವಾಚ।
12222002a ಮೋಕ್ಷಧರ್ಮೇಷು ನಿಯತೋ ಲಘ್ವಾಹಾರೋ ಜಿತೇಂದ್ರಿಯಃ।
12222002c ಪ್ರಾಪ್ನೋತಿ ಬ್ರಹ್ಮಣಃ ಸ್ಥಾನಂ ಯತ್ಪರಂ ಪ್ರಕೃತೇರ್ಧ್ರುವಮ್।।
ಭೀಷ್ಮನು ಹೇಳಿದನು: “ನಿಯತನೂ, ಅಲ್ಪಾಹಾರಿಯೂ, ಜಿತೇಂದ್ರಿಯನೂ ಆಗಿ ಮೋಕ್ಷಧರ್ಮವನ್ನು ಪಾಲಿಸುವವನು ಪ್ರಕೃತಿಗಿಂತಲೂ ಶ್ರೇಷ್ಠವಾಗಿರುವ ಅವಿನಾಶೀ ಬ್ರಹ್ಮಸ್ಥಾನವನ್ನು ಪಡೆಯುತ್ತಾನೆ.
12222003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12222003c ಜೈಗೀಷವ್ಯಸ್ಯ ಸಂವಾದಮಸಿತಸ್ಯ ಚ ಭಾರತ।।
ಭಾರತ! ಈ ವಿಷಯದಲ್ಲಿ ಪುರಾತನ ಇತಿಹಾಸವಾಗಿರುವ ಜೈಗೀಷವ್ಯ ಮತ್ತು ಅಸಿತರ2 ಸಂವಾದವನ್ನು ಉದಾಹರಿಸುತ್ತಾರೆ.
12222004a ಜೈಗೀಷವ್ಯಂ ಮಹಾಪ್ರಾಜ್ಞಂ ಧರ್ಮಾಣಾಮಾಗತಾಗಮಮ್।
12222004c ಅಕ್ರುಧ್ಯಂತಮಹೃಷ್ಯಂತಮಸಿತೋ ದೇವಲೋಽಬ್ರವೀತ್।।
ಮಹಾಪ್ರಾಜ್ಞ, ಧರ್ಮಶಾಸ್ತ್ರಗಳನ್ನು ತಿಳಿದಿದ್ದ, ಕ್ರೋಧಿತನಾಗದಿದ್ದ ಮತ್ತು ಹರ್ಷಿತನೂ ಆಗದಿದ್ದ ಜೈಗೀಷವ್ಯನನ್ನು ಅಸಿತ-ದೇವಲನು ಕೇಳಿದನು:
12222005a ನ ಪ್ರೀಯಸೇ ವಂದ್ಯಮಾನೋ ನಿಂದ್ಯಮಾನೋ ನ ಕುಪ್ಯಸಿ।
12222005c ಕಾ ತೇ ಪ್ರಜ್ಞಾ ಕುತಶ್ಚೈಷಾ ಕಿಂ ಚೈತಸ್ಯಾಃ ಪರಾಯಣಮ್।।
“ವಂದಿಸಿದರೆ ನೀನು ಪ್ರೀತನಾಗುವುದಿಲ್ಲ; ನಿಂದಿಸಿದರೆ ಕುಪಿತನಾಗುವುದಿಲ್ಲ. ನಿನಗಿರುವ ಈ ಪ್ರಜ್ಞೆಯು ಎಂಥಹುದು? ಇದು ನಿನಗೆ ಎಲ್ಲಿಂದ ಹೇಗೆ ಬಂದಿದೆ? ಇದರ ಆಶ್ರಯವಾದರೂ ಏನು?”
12222006a ಇತಿ ತೇನಾನುಯುಕ್ತಃ ಸ ತಮುವಾಚ ಮಹಾತಪಾಃ।
12222006c ಮಹದ್ವಾಕ್ಯಮಸಂದಿಗ್ಧಂ ಪುಷ್ಕಲಾರ್ಥಪದಂ ಶುಚಿ।।
ಹೀಗೆ ಪ್ರಶ್ನಿಸಿದ ಅಸಿತ-ದೇವಲನಿಗೆ ಮಹಾತಪಸ್ವಿ ಜೈಗೀಷವ್ಯನು ಅಸಂದಿಗ್ಧವಾದ ಪುಷ್ಕಲ ಅರ್ಥಗಳನ್ನು ಕೊಡುವ ಶುಚಿಯಾದ ಈ ಮಹಾವಾಕ್ಯವನ್ನು ಹೇಳಿದನು:
12222007a ಯಾ ಗತಿರ್ಯಾ ಪರಾ ನಿಷ್ಠಾ ಯಾ ಶಾಂತಿಃ ಪುಣ್ಯಕರ್ಮಣಾಮ್।
12222007c ತಾಂ ತೇಽಹಂ ಸಂಪ್ರವಕ್ಷ್ಯಾಮಿ ಯನ್ಮಾಂ ಪೃಚ್ಚಸಿ ವೈ ದ್ವಿಜ।।
“ದ್ವಿಜ! ನೀನು ಪ್ರಶ್ನಿಸುವ ಆ ಪುಣ್ಯಕರ್ಮಿಗಳಿಗೆ ಗತಿಯಾದ, ಪರಮ ನಿಷ್ಠೆಯಾದ ಮತ್ತು ಶಾಂತಿಯುಕ್ತವಾದ ಪ್ರಜ್ಞೆಯ ಕುರಿತು ಹೇಳುತ್ತೇನೆ.
12222008a ನಿಂದತ್ಸು ಚ ಸಮೋ ನಿತ್ಯಂ ಪ್ರಶಂಸತ್ಸು ಚ ದೇವಲ।
12222008c ನಿಹ್ನುವಂತಿ ಚ ಯೇ ತೇಷಾಂ ಸಮಯಂ ಸುಕೃತಂ ಚ ಯೇ।।
ದೇವಲ! ಪುಣ್ಯಕರ್ಮಿಗಳು ತಮ್ಮನ್ನು ನಿಂದಿಸುವವರಲ್ಲಿಯೂ, ಪ್ರಶಂಸಿಸುವವರಲ್ಲಿಯೂ ಮತ್ತು ತಮ್ಮ ಸುಕೃತಗಳನ್ನು ಮುಚ್ಚಿಡುವವರಲ್ಲಿಯೂ ಸಮಭಾವದಿಂದಿರುತ್ತಾರೆ.
12222009a ಉಕ್ತಾಶ್ಚ ನ ವಿವಕ್ಷಂತಿ ವಕ್ತಾರಮಹಿತೇ ರತಮ್।
12222009c ಪ್ರತಿಹಂತುಂ ನ ಚೇಚ್ಚಂತಿ ಹಂತಾರಂ ವೈ ಮನೀಷಿಣಃ।।
ಅಹಿತರು ಕಠೋರವಾಗಿ ಮಾತನಾಡಿದರೂ ಮನೀಷಿಣರು ತಿರುಗಿ ಕಠೋರವಾಗಿ ಮಾತನಾಡುವುದಿಲ್ಲ. ಹೊಡೆಯುವವರನ್ನು ಪ್ರತಿಯಾಗಿ ಹೊಡೆಯಲು ಇಚ್ಛಿಸುವುದಿಲ್ಲ.
12222010a ನಾಪ್ರಾಪ್ತಮನುಶೋಚಂತಿ ಪ್ರಾಪ್ತಕಾಲಾನಿ ಕುರ್ವತೇ।
12222010c ನ ಚಾತೀತಾನಿ ಶೋಚಂತಿ ನ ಚೈನಾನ್ ಪ್ರತಿಜಾನತೇ।।
ದೊರೆಯದೇ ಇದ್ದುದಕ್ಕೆ ಶೋಕಿಸುವುದಿಲ್ಲ. ಆ ಕಾಲದಲ್ಲಿ ಯಾವುದು ದೊರಕಿದೆಯೋ ಅದರಿಂದಲೇ ಜೀವನ ನಡೆಸಿಕೊಳ್ಳುತ್ತಾರೆ. ಹಿಂದೆ ನಡೆದುಹೋದುದರ ಕುರಿತು ಶೋಕಿಸುವುದಿಲ್ಲ. ಅವುಗಳನ್ನು ಸ್ಮರಿಸಿಕೊಳ್ಳುವುದೂ ಇಲ್ಲ.
12222011a ಸಂಪ್ರಾಪ್ತಾನಾಂ ಚ ಪೂಜ್ಯಾನಾಂ ಕಾಮಾದರ್ಥೇಷು ದೇವಲ।
12222011c ಯಥೋಪಪತ್ತಿಂ ಕುರ್ವಂತಿ ಶಕ್ತಿಮಂತಃ ಕೃತವ್ರತಾಃ।।
ದೇವಲ! ಶಕ್ತಿವಂತರಾದ ವ್ರತಾನುಷ್ಠಾನುಗಳನ್ನು ಮಾಡುತ್ತಿರುವ ಪೂಜ್ಯರು ಯಾರಾದರೂ ಯಾವುದಾದರೂ ಕಾಮನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ವಿಶೇಷ ಪ್ರಯೋಜನ ಸಿದ್ಧಿಗಾಗಿ ತಮ್ಮ ಬಳಿ ಬಂದರೆ ಅವರಿಗೆ ಅವರು ಯಥೋಚಿತ ಸಹಾಯವನ್ನು ಮಾಡುತ್ತಾರೆ.
12222012a ಪಕ್ವವಿದ್ಯಾ ಮಹಾಪ್ರಾಜ್ಞಾ ಜಿತಕ್ರೋಧಾ ಜಿತೇಂದ್ರಿಯಾಃ।
12222012c ಮನಸಾ ಕರ್ಮಣಾ ವಾಚಾ ನಾಪರಾಧ್ಯಂತಿ ಕಸ್ಯ ಚಿತ್।।
ವಿದ್ಯೆಯು ಪಕ್ವವಾಗಿರುವ, ಮಹಾಪ್ರಾಜ್ಞ ಜಿತಕ್ರೋಧ ಜಿತೇಂದ್ರಿಯರು ಎಂದೂ ಮನಸಾರೆ ಅಥವಾ ಕರ್ಮಗಳ ಮೂಲಕ ಅಥವಾ ಮಾತಿನಲ್ಲಿ ಪಾಪಗಳನ್ನೆಸಗುವುದಿಲ್ಲ.
12222013a ಅನೀರ್ಷವೋ ನ ಚಾನ್ಯೋನ್ಯಂ ವಿಹಿಂಸಂತಿ ಕದಾ ಚನ।
12222013c ನ ಚ ಜಾತೂಪತಪ್ಯಂತೇ ಧೀರಾಃ ಪರಸಮೃದ್ಧಿಭಿಃ।।
ಅವರು ಎಂದೂ ಅನ್ಯೋನ್ಯರಲ್ಲಿ ಈರ್ಷ್ಯೆಯನ್ನು ತಾಳುವುದಿಲ್ಲ. ಅನ್ಯೋನ್ಯರನ್ನು ಹಿಂಸಿಸುವುದಿಲ್ಲ. ಅಂಥಹ ಧೀರರು ಇನ್ನೊಬ್ಬರ ಸಮೃದ್ಧಿಯನ್ನು ನೋಡಿ ಹೊಟ್ಟೇಕಿಚ್ಚು ಪಡುವುದಿಲ್ಲ.
12222014a ನಿಂದಾಪ್ರಶಂಸೇ ಚಾತ್ಯರ್ಥಂ ನ ವದಂತಿ ಪರಸ್ಯ ಯೇ।
12222014c ನ ಚ ನಿಂದಾಪ್ರಶಂಸಾಭ್ಯಾಂ ವಿಕ್ರಿಯಂತೇ ಕದಾ ಚನ।।
ಅವರು ಇತರರನ್ನು ನಿಂದಿಸುವ ಮತ್ತು ಪ್ರಶಂಸಿಸುವ ಮಾತನ್ನು ಆಡುವುದಿಲ್ಲ. ಅವರು ಎಂದೂ ತಮ್ಮದೇ ನಿಂದನೆ ಮತ್ತು ಪ್ರಶಂಸೆಯನ್ನು ಮಾಡಿಕೊಳ್ಳುವುದಿಲ್ಲ.
12222015a ಸರ್ವತಶ್ಚ ಪ್ರಶಾಂತಾ ಯೇ ಸರ್ವಭೂತಹಿತೇ ರತಾಃ।
12222015c ನ ಕ್ರುಧ್ಯಂತಿ ನ ಹೃಷ್ಯಂತಿ ನಾಪರಾಧ್ಯಂತಿ ಕಸ್ಯ ಚಿತ್।
12222015e ವಿಮುಚ್ಯ ಹೃದಯಗ್ರಂಥೀಂಶ್ಚಂಕಮ್ಯಂತೇ ಯಥಾಸುಖಮ್।।
ಅವರು ಎಲ್ಲರೀತಿಯಲ್ಲಿ ಪ್ರಶಾಂತರಾಗಿರುತ್ತಾರೆ. ಸರ್ವಭೂತಗಳ ಹಿತದಲ್ಲಿಯೇ ನಿರತರಾಗಿರುತ್ತಾರೆ. ಅವರು ಎಂದೂ ಕ್ರೋಧಿಸುವುದಿಲ್ಲ, ಹರ್ಷಿಸುವುದಿಲ್ಲ, ಮತ್ತು ಅಪರಾಧವನ್ನೆಸಗುವುದಿಲ್ಲ. ಅವರು ಹೃದಯದಲ್ಲಿರುವ ಅಜ್ಞಾನವೆಂಬ ಗಂಟನ್ನು ಬಿಚ್ಚಿ ಎಸೆದು ಆನಂದದಿಂದ ಸರ್ವತ್ರ ಸಂಚರಿಸುತ್ತಿರುತ್ತಾರೆ.
12222016a ನ ಯೇಷಾಂ ಬಾಂಧವಾಃ ಸಂತಿ ಯೇ ಚಾನ್ಯೇಷಾಂ ನ ಬಾಂಧವಾಃ।
12222016c ಅಮಿತ್ರಾಶ್ಚ ನ ಸಂತ್ಯೇಷಾಂ ಯೇ ಚಾಮಿತ್ರಾ ನ ಕಸ್ಯ ಚಿತ್।।
ಅವರಿಗೆ ಬಾಂಧವರ್ಯಾರೂ ಇರುವುದಿಲ್ಲ. ಅವರು ಯಾರಿಗೂ ಬಂಧುಗಳಾಗಿರುವುದಿಲ್ಲ. ಅವರಿಗೆ ಶತ್ರುಗಳೂ ಇರುವುದಿಲ್ಲ. ಮಿತ್ರರು ಯಾರೂ ಇರುವುದಿಲ್ಲ.
12222017a ಯ ಏವಂ ಕುರ್ವತೇ ಮರ್ತ್ಯಾಃ ಸುಖಂ ಜೀವಂತಿ ಸರ್ವದಾ।
12222017c ಧರ್ಮಮೇವಾನುವರ್ತಂತೇ3 ಧರ್ಮಜ್ಞಾ ದ್ವಿಜಸತ್ತಮ।
12222017e ಯೇ ಹ್ಯತೋ ವಿಚ್ಯುತಾ ಮಾರ್ಗಾತ್ತೇ ಹೃಷ್ಯಂತ್ಯುದ್ವಿಜಂತಿ ಚ।।
ದ್ವಿಜಸತ್ತಮ! ಹೀಗೆ ಮಾಡುವ ಮನುಷ್ಯರು ಸರ್ವದಾ ಸುಖದಿಂದ ಜೀವಿಸುತ್ತಾರೆ. ಇದೇ ಧರ್ಮವನ್ನು ಅನುಸರಿಸುವವರು ಧರ್ಮಜ್ಞರು. ಈ ಧರ್ಮಮಾರ್ಗದಿಂದ ಚ್ಯುತರಾದವರು ಸುಖಬಂದಾಗ ಹರ್ಷಿಸುತ್ತಾರೆ ಮತ್ತು ಕಷ್ಟವು ಬಂದಾಗ ಉದ್ವಿಗ್ನರಾಗುತ್ತಾರೆ.
12222018a ಆಸ್ಥಿತಸ್ತಮಹಂ ಮಾರ್ಗಮಸೂಯಿಷ್ಯಾಮಿ ಕಂ ಕಥಮ್।
12222018c ನಿಂದ್ಯಮಾನಃ ಪ್ರಶಸ್ತೋ ವಾ ಹೃಷ್ಯೇಯಂ ಕೇನ ಹೇತುನಾ।।
ಅಂಥಹ ಧರ್ಮಮಾರ್ಗವನ್ನೇ ಅನುಸರಿಸುತ್ತಿರುವ ನಾನು ಯಾವ ಕಾರಣಕ್ಕಾಗಿ ಯಾರನ್ನು ತಾನೇ ದ್ವೇಷಿಸಲಿ? ಒಬ್ಬನಿಂದ ನಿಂದಿಸಲ್ಪಟ್ಟು ಮತ್ತೊಬ್ಬನಿಂದ ಪ್ರಶಂಸಿತನಾದರೆ ಯಾವ ಕಾರಣಕ್ಕಾಗಿ ನಾನು ಸಂತೋಷಿಸಲಿ?
12222019a ಯದ್ಯದಿಚ್ಚಂತಿ ತನ್ಮಾರ್ಗಮಭಿಗಚ್ಚಂತಿ ಮಾನವಾಃ।
12222019c ನ ಮೇ ನಿಂದಾಪ್ರಶಂಸಾಭ್ಯಾಂ ಹ್ರಾಸವೃದ್ಧೀ ಭವಿಷ್ಯತಃ।।
ಮನುಷ್ಯರಿಗೆ ಇತರರನ್ನು ನಿಂದಿಸುವುದರಿಂದ ಅಥವಾ ಪ್ರಶಂಸಿಸುವುದರಿಂದ ಲಾಭವುಂಟಾಗುವುದಾದರೆ ಆಗಲಿ. ಆದರೆ ಅವರ ನಿಂದೆಯಿಂದ ನಾನು ಕುಗ್ಗುವುದೂ ಇಲ್ಲ. ಪ್ರಶಂಸನೆಯಿಂದ ಹಿಗ್ಗುವುದೂ ಇಲ್ಲ.
12222020a ಅಮೃತಸ್ಯೇವ ಸಂತೃಪ್ಯೇದವಮಾನಸ್ಯ ತತ್ತ್ವವಿತ್।
12222020c ವಿಷಸ್ಯೇವೋದ್ವಿಜೇನ್ನಿತ್ಯಂ ಸಂಮಾನಸ್ಯ ವಿಚಕ್ಷಣಃ।।
ತತ್ತ್ವವಿದು ವಿಚಕ್ಷಣನು ಇತರರು ಮಾಡುವ ಅಪಮಾನವನ್ನು ಅಮೃತವೆಂದೇ ಭಾವಿಸಿ ತೃಪ್ತನಾಗಬೇಕು. ಹಾಗೆಯೇ ಇತರರು ಮಾಡುವ ಸಮ್ಮಾನವನ್ನು ವಿಷವೆಂದೇ ಭಾವಿಸಿ ಉದ್ವಿಗ್ನನಾಗಬೇಕು.
12222021a ಅವಜ್ಞಾತಃ ಸುಖಂ ಶೇತೇ ಇಹ ಚಾಮುತ್ರ ಚೋಭಯೋಃ।
12222021c ವಿಮುಕ್ತಃ ಸರ್ವಪಾಪೇಭ್ಯೋ ಯೋಽವಮಂತಾ ಸ ಬಧ್ಯತೇ।।
ಸರ್ವದೋಷಗಳಿಂದ ವಿಮುಕ್ತನಾದವನು ಅಪಮಾನಿಸಲ್ಪಟ್ಟರೂ ಈ ಲೋಕದಲ್ಲಿ ಮತ್ತು ಪರಲೋಕದಲ್ಲಿ ಸುಖವಾಗಿ ನಿದ್ರಿಸುತ್ತಾನೆ. ಆದರೆ ಅಂಥವನನ್ನು ಅಪಮಾನಿಸುವವನು ಪಾಪದಿಂದ ಬಂಧಿತನಾಗುತ್ತಾನೆ.
12222022a ಪರಾಂ ಗತಿಂ ಚ ಯೇ ಕೇ ಚಿತ್ ಪ್ರಾರ್ಥಯಂತಿ ಮನೀಷಿಣಃ।
12222022c ಏತದ್ವ್ರತಂ ಸಮಾಶ್ರಿತ್ಯ ಸುಖಮೇಧಂತಿ ತೇ ಜನಾಃ।।
ಪರಮ ಗತಿಯನ್ನು ಬಯಸುವ ಮನೀಷಿಣರು ಈ ವ್ರತವನ್ನು ಆಶ್ರಯಿಸಿ ಸುಖವನ್ನು ಹೊಂದುತ್ತಾರೆ.
12222023a ಸರ್ವತಶ್ಚ ಸಮಾಹೃತ್ಯ ಕ್ರತೂನ್ಸರ್ವಾನ್ ಜಿತೇಂದ್ರಿಯಃ।
12222023c ಪ್ರಾಪ್ನೋತಿ ಬ್ರಹ್ಮಣಃ ಸ್ಥಾನಂ ಯತ್ಪರಂ ಪ್ರಕೃತೇರ್ಧ್ರುವಮ್।।
ಎಲ್ಲ ರೀತಿಯ ಕಾಮನಾ ಸಂಕಲ್ಪಗಳನ್ನು ಪರಿತ್ಯಜಿಸಿದ ಜಿತೇಂದ್ರಿಯನು ಪ್ರಕೃತಿಗಿಂತಲೂ ಶ್ರೇಷ್ಠವಾದ ಶಾಶ್ವತ ಬ್ರಹ್ಮಸ್ಥಾನವನ್ನು ಪಡೆಯುತ್ತಾನೆ.
12222024a ನಾಸ್ಯ ದೇವಾ ನ ಗಂಧರ್ವಾ ನ ಪಿಶಾಚಾ ನ ರಾಕ್ಷಸಾಃ।
12222024c ಪದಮನ್ವವರೋಹಂತಿ ಪ್ರಾಪ್ತಸ್ಯ ಪರಮಾಂ ಗತಿಮ್।।
ಪರಮ ಗತಿಯನ್ನು ಪಡೆದ ಇಂಥವನ ದಿವ್ಯಪದವಿಯನ್ನು ದೇವತೆಗಳಾಗಲೀ, ಗಂಧರ್ವ-ಪಿಶಾಚ-ರಾಕ್ಷಸರಾಗಲೀ ಅನುಸರಿಸಲಾರರು4.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಜಿಗೀಷವ್ಯಾಸಿತಸಂವಾದೇ ದ್ವಾವಿಂಶಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಜಿಗೀಷವ್ಯಾಸಿತಸಂವಾದ ಎನ್ನುವ ಇನ್ನೂರಾಇಪ್ಪತ್ತೆರಡನೇ ಅಧ್ಯಾಯವು.
-
ಕಿಂಪರಾಕ್ರಮಃ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಅಸಿತದೇವಲ ಮತ್ತು ಜೈಗೀಷವ್ಯರ ಕಥೆಯು ಈಗಾಗಲೇ ಶಲ್ಯಪರ್ವದ ಸಾರಸ್ವತ ಪರ್ವದ ಅಧ್ಯಾಯ 49 ರಲ್ಲಿ ಬಂದಿದೆ. ಅಸಿತ-ದೇವಲನು ವ್ಯಾಸಕೃತ ಮಹಾಭಾರತವನ್ನು ಪಿತೃಗಳಿಗೆ ಹೇಳಿದನೆಂದಿದೆ (ಆದಿಪರ್ವ, ಅನುಕ್ರಮಣಿಕಾ ಪರ್ವ, ಅಧ್ಯಾಯ 1, ಶ್ಲೋಕ 64). ↩︎
-
ಯೇ ಧರ್ಮಂ ಚಾನುರುಧ್ಯಂತೇ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಹೀಗಿರುವುದು ಮನುಷ್ಯರಿಗೆ ಮಾತ್ರ ಸಾಧ್ಯ. ↩︎