ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 221
ಸಾರ
ದೈತ್ಯರನ್ನು ತ್ಯಜಿಸಿ ಲಕ್ಷ್ಮಿಯು ಇಂದ್ರನನ್ನು ಸೇರಿದುದು; ದೈತ್ಯರಲ್ಲಿ ಸದ್ಗುಣಗಳಿದ್ದಾಗ ತಾನು ಅವರೊಂದಿಗೆ ಇದ್ದೆನೆಂದೂ, ಕಾಲದ ಬದಲಾವಣೆಯಿಂದಾಗಿ ಅವರಲ್ಲಿ ಅಧರ್ಮವುಂಟಾದುದರಿಂದ ಅವರನ್ನು ತ್ಯಜಿಸಿ ದೇವತೆಗಳಲ್ಲಿಗೆ ಬಂದಿದ್ದೇನೆಂದೂ ಲಕ್ಷ್ಮಿಯು ಹೇಳಿದುದು (1-94).
12221001 ಯುಧಿಷ್ಠಿರ ಉವಾಚ।
12221001a ಪೂರ್ವರೂಪಾಣಿ ಮೇ ರಾಜನ್ಪುರುಷಸ್ಯ ಭವಿಷ್ಯತಃ।
12221001c ಪರಾಭವಿಷ್ಯತಶ್ಚೈವ ತ್ವಂ ಮೇ ಬ್ರೂಹಿ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ರಾಜನ್! ಪಿತಾಮಹ! ಔನ್ನತ್ಯವನ್ನು ಹೊಂದಲಿರುವ ಮತ್ತು ಅಧೋಗತಿಯನ್ನು ಹೊಂದಲಿರುವ ಪುರುಷನ ಪೂರ್ವಲಕ್ಷಣಗಳು ಯಾವುವೆಂಬುದನ್ನು ನನಗೆ ಹೇಳು.”
12221002 ಭೀಷ್ಮ ಉವಾಚ।
12221002a ಮನ ಏವ ಮನುಷ್ಯಸ್ಯ ಪೂರ್ವರೂಪಾಣಿ ಶಂಸತಿ।
12221002c ಭವಿಷ್ಯತಶ್ಚ ಭದ್ರಂ ತೇ ತಥೈವ ನಭವಿಷ್ಯತಃ।।
ಭೀಷ್ಮನು ಹೇಳಿದನು: “ನಿನಗೆ ಮಂಗಳವಾಗಲಿ. ಮನಸ್ಸೇ ಮನುಷ್ಯನ ಉನ್ನತಿ ಮತ್ತು ಅವನತಿಯ ಪೂರ್ವಲಕ್ಷಣಗಳನ್ನು ಪ್ರಕಾಶಿಸುತ್ತದೆ.
12221003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12221003c ಶ್ರಿಯಾ ಶಕ್ರಸ್ಯ ಸಂವಾದಂ ತನ್ನಿಬೋಧ ಯುಧಿಷ್ಠಿರ।।
ಯುಧಿಷ್ಠಿರ! ಈ ವಿಷಯದಲ್ಲಿ ಪುರಾತನ ಇತಿಹಾಸವಾಗಿರುವ ಶ್ರೀ ಮತ್ತು ಶಕ್ರರ ಸಂವಾದವನ್ನು ಉದಾಹರಿಸುತ್ತಾರೆ. ಅದನ್ನು ಕೇಳು.
12221004a ಮಹತಸ್ತಪಸೋ ವ್ಯುಷ್ಟ್ಯಾ ಪಶ್ಯಽಲ್ಲೋಕೌ ಪರಾವರೌ।
12221004c ಸಾಮಾನ್ಯಮೃಷಿಭಿರ್ಗತ್ವಾ ಬ್ರಹ್ಮಲೋಕನಿವಾಸಿಭಿಃ।।
12221005a ಬ್ರಹ್ಮೈವಾಮಿತದೀಪ್ತೌಜಾಃ ಶಾಂತಪಾಪ್ಮಾ ಮಹಾತಪಾಃ।
12221005c ವಿಚಚಾರ ಯಥಾಕಾಮಂ ತ್ರಿಷು ಲೋಕೇಷು ನಾರದಃ।।
ಮಹಾತಪಸ್ವಿ, ಪಾಪರಹಿತ, ಬ್ರಹ್ಮನಂತೆಯೇ ಅಮಿತ ತೇಜಸ್ಸಿನಿಂದ ಬೆಳಗುತ್ತಿದ್ದ, ಬ್ರಹ್ಮಲೋಕನಿವಾಸಿಗಳೊಡನೆ ಸಮಾನತೆಯನ್ನು ಹೊಂದಿದ್ದ ನಾರದನು ತನ್ನ ಮಹಾತಪಸ್ಸಿನ ಪ್ರಭಾವದಿಂದ ಮೇಲಿನ ಮತ್ತು ಕೆಳಗಿನ ಲೋಕಗಳೆರಡನ್ನೂ ಸಂದರ್ಶಿಸುತ್ತಾ ತನ್ನ ಇಚ್ಛಾನುಸಾರವಾಗಿ ಮೂರು ಲೋಕಗಳಲ್ಲಿಯೂ ಸಂಚರಿಸುತ್ತಿದ್ದನು.
12221006a ಕದಾ ಚಿತ್ಪ್ರಾತರುತ್ಥಾಯ ಪಿಸ್ಪೃಕ್ಷುಃ ಸಲಿಲಂ ಶುಚಿ।
12221006c ಧ್ರುವದ್ವಾರಭವಾಂ ಗಂಗಾಂ ಜಗಾಮಾವತತಾರ ಚ।।
ಒಮ್ಮೆ ಪ್ರಾತಃಕಾಲದಲ್ಲಿ ಎದ್ದು ಪವಿತ್ರ ತೀರ್ಥದಲ್ಲಿ ಸ್ನಾನಮಾಡುವ ಇಚ್ಛೆಯಿಂದ ಧ್ರುವನ ದ್ವಾರದಲ್ಲಿ ಹುಟ್ಟುವ ಗಂಗಾನದಿಯಲ್ಲಿ ಇಳಿದನು.
12221007a ಸಹಸ್ರನಯನಶ್ಚಾಪಿ ವಜ್ರೀ ಶಂಬರಪಾಕಹಾ।
12221007c ತಸ್ಯಾ ದೇವರ್ಷಿಜುಷ್ಟಾಯಾಸ್ತೀರಮಭ್ಯಾಜಗಾಮ ಹ।।
ಆಗ ಸಹಸ್ರನಯನ ವಜ್ರೀ ಶಂಬರ-ಪಾಕರನ್ನು ಸಂಹರಿಸಿದ ಇಂದ್ರನೂ ಕೂಡ ದೇವರ್ಷಿ ನಾರದನು ಇಳಿದಿದ್ದ ಗಂಗಾತೀರಕ್ಕೆ ಆಗಮಿಸಿದನು.
12221008a ತಾವಾಪ್ಲುತ್ಯ ಯತಾತ್ಮಾನೌ ಕೃತಜಪ್ಯೌ ಸಮಾಸತುಃ।
12221008c ನದ್ಯಾಃ ಪುಲಿನಮಾಸಾದ್ಯ ಸೂಕ್ಷ್ಮಕಾಂಚನವಾಲುಕಮ್।।
12221009a ಪುಣ್ಯಕರ್ಮಭಿರಾಖ್ಯಾತಾ ದೇವರ್ಷಿಕಥಿತಾಃ ಕಥಾಃ।
12221009c ಚಕ್ರತುಸ್ತೌ ಕಥಾಶೀಲೌ ಶುಚಿಸಂಹೃಷ್ಟಮಾನಸೌ।
12221009e ಪೂರ್ವವೃತ್ತವ್ಯಪೇತಾನಿ ಕಥಯಂತೌ ಸಮಾಹಿತೌ।।
ನದಿಯಲ್ಲಿ ಮುಳುಗಿ ಏಕಾಗ್ರಚಿತ್ತರಾಗಿ ಜಪಾದಿಗಳನ್ನು ಮುಗಿಸಿ ಇಂದ್ರ-ನಾರದರಿಬ್ಬರೂ ಸೂಕ್ಷ್ಮ ಸುವರ್ಣಮಯ ಕಣಗಳಿಂದ ಕೂಡಿದ್ದ ನದೀತೀರದ ಮರಳಿನ ಮೇಲೆ ಕುಳಿತು ಪುಣ್ಯಾತ್ಮರು-ಮಹರ್ಷಿಗಳು-ದೇವರ್ಷಿಗಳು ಹೇಳಿದ್ದ ಕಥೆಗಳನ್ನು ಅತ್ಯಂತ ಪವಿತ್ರ ಮತ್ತು ಪ್ರಸನ್ನ ಮನಸ್ಸಿನಿಂದ ಕೇಳಲು ಇಚ್ಛಿಸಿ ಪರಸ್ಪರ ಹೇಳತೊಡಗಿದರು. ಇಬ್ಬರೂ ಸಮಾಹಿತರಾಗಿ ಹಿಂದೆ ನಡೆದಿದ್ದ ಕಥೆಗಳನ್ನು ಹೇಳುತ್ತಿದ್ದರು.
12221010a ಅಥ ಭಾಸ್ಕರಮುದ್ಯಂತಂ ರಶ್ಮಿಜಾಲಪುರಸ್ಕೃತಮ್।
12221010c ಪೂರ್ಣಮಂಡಲಮಾಲೋಕ್ಯ ತಾವುತ್ಥಾಯೋಪತಸ್ಥತುಃ।।
ಅಷ್ಟರಲ್ಲಿಯೇ ಕಿರಣಜಾಲಗಳೊಂದಿಗೆ ಪೂರ್ಣಮಂಡಲಯುಕ್ತನಾಗಿ ಉದಯಿಸುತ್ತಿದ್ದ ಭಾಸ್ಕರನನ್ನು ನೋಡಿ ಅವರಿಬ್ಬರೂ ಎದ್ದು ಅವನನ್ನು ಪೂಜಿಸಿದರು.
12221011a ಅಭಿತಸ್ತೂದಯಂತಂ ತಮರ್ಕಮರ್ಕಮಿವಾಪರಮ್।
12221011c ಆಕಾಶೇ ದದೃಶೇ ಜ್ಯೋತಿರುದ್ಯತಾರ್ಚಿಃಸಮಪ್ರಭಮ್।।
ಆಗ ಆಕಾಶದಲ್ಲಿ ಉದಯಿಸುತ್ತಿರುವ ಸೂರ್ಯನ ಸಮ್ಮುಖದಲ್ಲಿ ಇನ್ನೊಂದು ಸೂರ್ಯನೋ ಎನ್ನುವಂತೆ ಒಂದು ಪ್ರಜ್ವಲಿತ ಅಗ್ನಿಸಮಾನಪ್ರಭೆಯಿದ್ದ ದಿವ್ಯ ಜ್ಯೋತಿಯು ಕಾಣಿಸಿತು.
12221012a ತಯೋಃ ಸಮೀಪಂ ಸಂಪ್ರಾಪ್ತಂ ಪ್ರತ್ಯದೃಶ್ಯತ ಭಾರತ।
12221012c ತತ್ಸುಪರ್ಣಾರ್ಕಚರಿತಮಾಸ್ಥಿತಂ ವೈಷ್ಣವಂ ಪದಮ್।
12221012e ಭಾಭಿರಪ್ರತಿಮಂ ಭಾತಿ ತ್ರೈಲೋಕ್ಯಮವಭಾಸಯತ್।।
ಭಾರತ! ಗರುಡ ಮತ್ತು ಸೂರ್ಯರ ಮಾರ್ಗವನ್ನೇ ಅನುಸರಿಸಿ ಬರುತ್ತಿದ್ದ, ಮೂರು ಲೋಕಗಳನ್ನೂ ಬೆಳಗುವ ಅಪ್ರತಿಮ ಕಾಂತಿಯಿಂದ ಬೆಳಗುತ್ತಿದ್ದ ಆ ವೈಷ್ಣವ ವಿಮಾನವು ಅವರಿಬ್ಬರ ಸಮೀಪ ಬರುತ್ತಿರುವಂತೆ ಕಂಡಿತು.
12221013a ದಿವ್ಯಾಭಿರೂಪಶೋಭಾಭಿರಪ್ಸರೋಭಿಃ ಪುರಸ್ಕೃತಾಮ್।
12221013c ಬೃಹತೀಮಂಶುಮತ್ಪ್ರಖ್ಯಾಂ ಬೃಹದ್ಭಾನೋರಿವಾರ್ಚಿಷಮ್।।
12221014a ನಕ್ಷತ್ರಕಲ್ಪಾಭರಣಾಂ ತಾರಾಭಕ್ತಿಸಮಸ್ರಜಮ್।
12221014c ಶ್ರಿಯಂ ದದೃಶತುಃ ಪದ್ಮಾಂ ಸಾಕ್ಷಾತ್ಪದ್ಮತಲಸ್ಥಿತಾಮ್।।
ಆ ವಿಮಾನದಲ್ಲಿ ಅವರು ತನ್ನಂತೆಯೇ ದಿವ್ಯ ರೂಪ-ಶೋಭೆಗಳನ್ನು ಹೊಂದಿದ್ದ ಅಪ್ಸರೆಯರಿಂದ ಸುತ್ತುವರೆಯಲ್ಪಟ್ಟ, ಅಂಶುಮಾಲಿ ಸೂರ್ಯನ ತೇಜಸ್ಸಿಗೆ ಸಮಾನ ತೇಜಸ್ಸಿನಿಂದ ಕೂಡಿ ಅಗ್ನಿಯ ಜ್ವಾಲೆಯಂತೆ ಜಾಜ್ಜ್ವಲ್ಯಮಾನಳಾಗಿದ್ದ, ನಕ್ಷತ್ರಗಳಂತೆ ಥಳಥಳಿಸುವ ಆಭರಣಗಳನ್ನೂ, ಮುತ್ತು-ರತ್ನಗಳ ಹಾರಗಳನ್ನೂ ಧರಿಸಿದ್ದ, ಕಮಲದ ಮಧ್ಯದಲ್ಲಿ ಕುಳಿತಿದ್ದ ಬೃಹದಾಕಾರದ ಸಾಕ್ಷಾತ್ ಶ್ರೀಯನ್ನು ನೋಡಿದರು.
12221015a ಸಾವರುಹ್ಯ ವಿಮಾನಾಗ್ರಾದಂಗನಾನಾಮನುತ್ತಮಾ।
12221015c ಅಭ್ಯಗಚ್ಚತ್ತ್ರಿಲೋಕೇಶಂ ಶಕ್ರಂ ಚರ್ಷಿಂ ಚ ನಾರದಮ್।।
ಅಂಗನೆಯರಲ್ಲಿಯೇ ಅನುತ್ತಮಳಾಗಿದ್ದ ಅವಳು ವಿಮಾನದಿಂದ ಇಳಿದು ತ್ರಿಲೋಕೇಶ ಶಕ್ರ ಮತ್ತು ಋಷಿ ನಾರದರ ಬಳಿಸಾರಿದಳು.
12221016a ನಾರದಾನುಗತಃ ಸಾಕ್ಷಾನ್ಮಘವಾಂಸ್ತಾಮುಪಾಗಮತ್।
12221016c ಕೃತಾಂಜಲಿಪುಟೋ ದೇವೀಂ ನಿವೇದ್ಯಾತ್ಮಾನಮಾತ್ಮನಾ।।
ನಾರದನು ಮುಂದೆ ಮತ್ತು ಹಿಂದೆ ಸಾಕ್ಷಾತ್ ಮಘವಾನ ಇಂದ್ರನು ಕೈಮುಗಿದು ದೇವಿಯ ಸಮೀಪ ಹೋಗಿ ಸ್ವಯಂ ಆತ್ಮಸಮರ್ಪಣೆಯನ್ನು ಮಾಡಿಕೊಂಡರು.
12221017a ಚಕ್ರೇ ಚಾನುಪಮಾಂ ಪೂಜಾಂ ತಸ್ಯಾಶ್ಚಾಪಿ ಸ ಸರ್ವವಿತ್।
12221017c ದೇವರಾಜಃ ಶ್ರಿಯಂ ರಾಜನ್ವಾಕ್ಯಂ ಚೇದಮುವಾಚ ಹ।।
ರಾಜನ್! ಸರ್ವವಿದು ದೇವರಾಜನು ಶ್ರೀಗೆ ಅನುಪಮ ಪೂಜೆಯನ್ನು ಸಲ್ಲಿಸಿ ಈ ಮಾತನ್ನಾಡಿದನು.
12221018a ಕಾ ತ್ವಂ ಕೇನ ಚ ಕಾರ್ಯೇಣ ಸಂಪ್ರಾಪ್ತಾ ಚಾರುಹಾಸಿನಿ।
12221018c ಕುತಶ್ಚಾಗಮ್ಯತೇ ಸುಭ್ರು ಗಂತವ್ಯಂ ಕ್ವ ಚ ತೇ ಶುಭೇ।।
“ಚಾರುಹಾಸಿನಿ! ನೀನು ಯಾರು ಮತ್ತು ಯಾವ ಕಾರ್ಯಕ್ಕಾಗಿ ಇಲ್ಲಿಗೆ ಬಂದಿರುವೆ? ಸುಭ್ರು! ಶುಭೇ! ಎಲ್ಲಿಂದ ಬರುತ್ತಿರುವೆ ಮತ್ತು ನಿನಗೆ ಎಲ್ಲಿಗೆ ಹೋಗಬೇಕಾಗಿದೆ?”
12221019 ಶ್ರೀರುವಾಚ।
12221019a ಪುಣ್ಯೇಷು ತ್ರಿಷು ಲೋಕೇಷು ಸರ್ವೇ ಸ್ಥಾವರಜಂಗಮಾಃ।
12221019c ಮಮಾತ್ಮಭಾವಮಿಚ್ಚಂತೋ ಯತಂತೇ ಪರಮಾತ್ಮನಾ।।
ಶ್ರೀಯು ಹೇಳಿದಳು: “ಪುಣ್ಯ ಮೂರು ಲೋಕಗಳಲ್ಲಿಯ ಎಲ್ಲ ಸ್ಥಾವರ-ಜಂಗಮಗಳೂ ನನ್ನ ಆತ್ಮೀಯತೆಯನ್ನು ಇಚ್ಛಿಸುತ್ತವೆ ಮತ್ತು ನನ್ನನ್ನು ಪಡೆಯಲು ಪರಮ ಪ್ರಯತ್ನಗಳನ್ನು ಮಾಡುತ್ತಾರೆ.
12221020a ಸಾಹಂ ವೈ ಪಂಕಜೇ ಜಾತಾ ಸೂರ್ಯರಶ್ಮಿವಿಬೋಧಿತೇ।
12221020c ಭೂತ್ಯರ್ಥಂ ಸರ್ವಭೂತಾನಾಂ ಪದ್ಮಾ ಶ್ರೀಃ ಪದ್ಮಮಾಲಿನೀ।।
ಸರ್ವಪ್ರಾಣಿಗಳ ಐಶ್ವರ್ಯಕ್ಕಾಗಿಯೇ ನಾನು ಸೂರ್ಯನ ಕಿರಣಗಳಿಂದ ಅರಳುವ ಕಮಲದಲ್ಲಿ ಹುಟ್ಟಿದವಳು. ನಾನೇ ಪದ್ಮೆಯು. ಶ್ರೀಯು. ಪದ್ಮಮಾಲಿನಿಯು.
12221021a ಅಹಂ ಲಕ್ಷ್ಮೀರಹಂ ಭೂತಿಃ ಶ್ರೀಶ್ಚಾಹಂ ಬಲಸೂದನ।
12221021c ಅಹಂ ಶ್ರದ್ಧಾ ಚ ಮೇಧಾ ಚ ಸನ್ನತಿರ್ವಿಜಿತಿಃ ಸ್ಥಿತಿಃ।।
ಬಲಸೂದನ! ನಾನು ಲಕ್ಷ್ಮೀ. ನಾನು ಭೂತಿ. ನಾನು ಶ್ರೀ. ನಾನು ಶ್ರದ್ಧಾ, ಮೇಧಾ, ಸನ್ನತಿ, ವಿಜಿತಿ ಮತ್ತು ಸ್ಥಿತಿ.
12221022a ಅಹಂ ಧೃತಿರಹಂ ಸಿದ್ಧಿರಹಂ ತ್ವಿಡ್ಭೂತಿರೇವ ಚ।
12221022c ಅಹಂ ಸ್ವಾಹಾ ಸ್ವಧಾ ಚೈವ ಸಂಸ್ತುತಿರ್ನಿಯತಿಃ ಕೃತಿಃ।।
ನಾನು ಧೃತಿ. ನಾನು ಸಿದ್ಧಿ. ನಾನು ಕಾಂತಿ, ಸಮೃದ್ಧಿ, ಸ್ವಾಹಾ, ಸ್ವಧಾ, ಸಂಸ್ತುತಿ, ನಿಯತಿ ಮತ್ತು ಕೃತಿ.
12221023a ರಾಜ್ಞಾಂ ವಿಜಯಮಾನಾನಾಂ ಸೇನಾಗ್ರೇಷು ಧ್ವಜೇಷು ಚ।
12221023c ನಿವಾಸೇ ಧರ್ಮಶೀಲಾನಾಂ ವಿಷಯೇಷು ಪುರೇಷು ಚ।।
ವಿಜಯೇಚ್ಛು ರಾಜರ ಸೇನೆಗಳ ಅಗ್ರಭಾಗದಲ್ಲಿಯೂ, ಧ್ವಜಗಳಲ್ಲಿಯೂ, ಮತ್ತು ಧರ್ಮಶೀಲರ ರಾಜ್ಯ-ಪುರಗಳಲ್ಲಿ ವಾಸಿಸುವವಳು ನಾನು.
12221024a ಜಿತಕಾಶಿನಿ ಶೂರೇ ಚ ಸಂಗ್ರಾಮೇಷ್ವನಿವರ್ತಿನಿ।
12221024c ನಿವಸಾಮಿ ಮನುಷ್ಯೇಂದ್ರೇ ಸದೈವ ಬಲಸೂದನ।।
ಬಲಸೂದನ! ಸಂಗ್ರಾಮದಿಂದ ವಿಮುಖನಾಗಿ ಹಿಂದಿರುಗದ, ವಿಜಯದಿಂದ ಬೆಳಗುವ, ಶೂರ ಮನುಷ್ಯೇಂದ್ರರಲ್ಲಿ ನಾನು ಸದೈವ ವಾಸಿಸುತ್ತೇನೆ.
12221025a ಧರ್ಮನಿತ್ಯೇ ಮಹಾಬುದ್ಧೌ ಬ್ರಹ್ಮಣ್ಯೇ ಸತ್ಯವಾದಿನಿ।
12221025c ಪ್ರಶ್ರಿತೇ ದಾನಶೀಲೇ ಚ ಸದೈವ ನಿವಸಾಮ್ಯಹಮ್।।
ಧರ್ಮನಿತ್ಯ ಬ್ರಹ್ಮಣ್ಯ ಸತ್ಯವಾದಿನೀ ಮಹಾಬುದ್ಧಿಯಿರುವವರಲ್ಲಿ, ವಿನಯಶೀಲ ಮತ್ತು ದಾನಶೀಲರಲ್ಲಿ ನಾನು ಸದೈವ ವಾಸಿಸುತ್ತೇನೆ.
12221026a ಅಸುರೇಷ್ವವಸಂ ಪೂರ್ವಂ ಸತ್ಯಧರ್ಮನಿಬಂಧನಾ।
12221026c ವಿಪರೀತಾಂಸ್ತು ತಾನ್ಬುದ್ಧ್ವಾ ತ್ವಯಿ ವಾಸಮರೋಚಯಮ್।।
ಸತ್ಯಧರ್ಮಗಳಿಂದ ಬಂಧಿತಳಾಗಿದ್ದ ನಾನು ಇದೂವರೆಗೆ ಅಸುರರ ಬಳಿ ವಾಸಿಸುತ್ತಿದ್ದೆ. ಈಗ ಅವರು ವಿಪರೀತರಾಗಿರುವುದನ್ನು ತಿಳಿದು ನಿನ್ನ ಬಳಿ ವಾಸಿಸಲು ಅಪೇಕ್ಷಿಸಿದ್ದೇನೆ.”
12221027 ಶಕ್ರ ಉವಾಚ।
12221027a ಕಥಂವೃತ್ತೇಷು ದೈತ್ಯೇಷು ತ್ವಮವಾತ್ಸೀರ್ವರಾನನೇ।
12221027c ದೃಷ್ಟ್ವಾ ಚ ಕಿಮಿಹಾಗಾಸ್ತ್ವಂ ಹಿತ್ವಾ ದೈತೇಯದಾನವಾನ್।।
ಶಕ್ರನು ಹೇಳಿದನು: “ವರಾನನೇ! ಯಾವರೀತಿ ಆಚಾರ-ವ್ಯವಹಾರಗಳನ್ನಿಟ್ಟುಕೊಂಡಿದ್ದ ದೈತ್ಯರಲ್ಲಿ ನೀನು ವಾಸಮಾಡಿಕೊಂಡಿದ್ದೆ? ದೈತ್ಯ-ದಾನವರಲ್ಲಿ ಈಗ ಏನನ್ನು ಕಂಡು ಅವರನ್ನು ತ್ಯಜಿಸಿ ಇಲ್ಲಿಗೆ ಬಂದಿರುವೆ?”
12221028 ಶ್ರೀರುವಾಚ।
12221028a ಸ್ವಧರ್ಮಮನುತಿಷ್ಠತ್ಸು ಧೈರ್ಯಾದಚಲಿತೇಷು ಚ।
12221028c ಸ್ವರ್ಗಮಾರ್ಗಾಭಿರಾಮೇಷು ಸತ್ತ್ವೇಷು ನಿರತಾ ಹ್ಯಹಮ್।।
ಶ್ರೀಯು ಹೇಳಿದಳು: “ಸ್ವಧರ್ಮನಿರತರಾಗಿರುವ, ಧೈರ್ಯದಿಂದ ವಿಚಲಿತರಾಗದ, ಸ್ವರ್ಗಪ್ರಾಪ್ತಿಯ ಸಾಧನೆಗಳಲ್ಲಿ ಆನಂದಪಡುವ ಸತ್ತ್ವಗಳಲ್ಲಿ ನಾನು ಸದಾ ವಾಸಿಸುತ್ತೇನೆ.
12221029a ದಾನಾಧ್ಯಯನಯಜ್ಞೇಜ್ಯಾ ಗುರುದೈವತಪೂಜನಮ್।
12221029c ವಿಪ್ರಾಣಾಮತಿಥೀನಾಂ ಚ ತೇಷಾಂ ನಿತ್ಯಮವರ್ತತ।।
ದಾನವರಲ್ಲಿ ನಿತ್ಯವೂ ದಾನ-ಅಧ್ಯಯನ-ಯಜ್ಞ-ಯಾಗಾದಿಗಳೂ, ಗುರು-ದೈವತ ಪೂಜೆಗಳೂ, ವಿಪ್ರರು-ಅತಿಥಿಯರ ಪೂಜೆಗಳೂ ನಡೆಯುತ್ತಿದ್ದವು.
12221030a ಸುಸಂಮೃಷ್ಟಗೃಹಾಶ್ಚಾಸನ್ ಜಿತಸ್ತ್ರೀಕಾ ಹುತಾಗ್ನಯಃ।
12221030c ಗುರುಶುಶ್ರೂಷವೋ ದಾಂತಾ ಬ್ರಹ್ಮಣ್ಯಾಃ ಸತ್ಯವಾದಿನಃ।।
ಚೆನ್ನಾಗಿ ಗುಡಿಸಿ-ಸಾರಿಸಿ ಶುದ್ಧವಾದ ಮನೆಗಳಲ್ಲಿ ಅವರು ಇರುತ್ತಿದ್ದರು. ತಮ್ಮ ಪತ್ನಿಯರ ಅಂತಃಕರಣಗಳನ್ನು ಪ್ರೀತಿಯಿಂದ ಜಯಿಸಿದ್ದರು. ಅಗ್ನಿಹೋತ್ರಿಗಳಾಗಿದ್ದರು. ಗುರುಶುಶ್ರೂಷೆಯಲ್ಲಿ ಆಸಕ್ತಿಯುಳ್ಳವರೂ, ಜಿತೇಂದ್ರಿಯರೂ, ಬ್ರಾಹ್ಮಣಪ್ರಿಯರೂ ಮತ್ತು ಸತ್ಯವಾದಿಗಳೂ ಆಗಿದ್ದರು.
12221031a ಶ್ರದ್ದಧಾನಾ ಜಿತಕ್ರೋಧಾ ದಾನಶೀಲಾನಸೂಯಕಾಃ।
12221031c ಭೃತಪುತ್ರಾ ಭೃತಾಮಾತ್ಯಾ ಭೃತದಾರಾ ಹ್ಯನೀರ್ಷವಃ।।
ಅವರು ಶ್ರದ್ದಧಾನರೂ, ಜಿತಕ್ರೋಧರೂ, ದಾನಶೀಲರೂ, ಅನಸೂಯಕರೂ ಆಗಿದ್ದರು. ಪುತ್ರರು, ಅಮಾತ್ಯರು ಮತ್ತು ಪತ್ನಿಯರ ಭರಣ-ಪೋಷಣೆಗಳನ್ನು ಯಥೋಚಿತವಾಗಿ ಮಾಡುತ್ತಿದ್ದರು.
12221032a ಅಮರ್ಷಣಾ ನ ಚಾನ್ಯೋನ್ಯಂ ಸ್ಪೃಹಯಂತಿ ಕದಾ ಚನ।
12221032c ನ ಚ ಜಾತೂಪತಪ್ಯಂತೇ ಧೀರಾಃ ಪರಸಮೃದ್ಧಿಭಿಃ।।
ಕ್ರೋಧದಿಂದ ಅನ್ಯೋನ್ಯರ ಸಂಪತ್ತಿಗೆ ಎಂದೂ ಆಸೆಪಡುತ್ತಿರಲಿಲ್ಲ. ಆ ಧೀರರು ಇತರರ ಸಮೃದ್ಧಿಯಿಂದ ಎಂದೂ ಪರಿತಾಪಪಡುತ್ತಿರಲಿಲ್ಲ.
12221033a ದಾತಾರಃ ಸಂಗೃಹೀತಾರ ಆರ್ಯಾಃ ಕರುಣವೇದಿನಃ।
12221033c ಮಹಾಪ್ರಸಾದಾ ಋಜವೋ ದೃಢಭಕ್ತಾ ಜಿತೇಂದ್ರಿಯಾಃ।।
ದಾನ ಮಾಡುತ್ತಿದ್ದರು. ಸನ್ಮಾರ್ಗದಿಂದ ಧನವನ್ನು ಸಂಗ್ರಹಿಸುತ್ತಿದ್ದರು. ಆರ್ಯರಂತಿದ್ದರು. ಕಾರುಣ್ಯವನ್ನು ತೋರಿಸಲು ತಿಳಿದಿದ್ದರು. ಅನುಗ್ರಹಬುದ್ಧಿಯುಳ್ಳವರಾಗಿದ್ದರು. ಸರಳಸ್ವಭಾವದವರೂ, ದೃಢಭಕ್ತರೂ, ಜಿತೇಂದ್ರಿಯರೂ ಆಗಿದ್ದರು.
12221034a ಸಂತುಷ್ಟಭೃತ್ಯಸಚಿವಾಃ ಕೃತಜ್ಞಾಃ ಪ್ರಿಯವಾದಿನಃ।
12221034c ಯಥಾರ್ಥಮಾನಾರ್ಥಕರಾ ಹ್ರೀನಿಷೇಧಾ1 ಯತವ್ರತಾಃ।।
ಸೇವಕರೂ-ಸಚಿವರೂ ಸಂತುಷ್ಟರಾಗಿರುವಂತೆ ನೋಡಿಕೊಳ್ಳುತ್ತಿದ್ದರು. ಕೃತಜ್ಞರೂ ಪ್ರಿಯವಾದಿಗಳೂ ಆಗಿದ್ದರು. ಯಥಾರ್ಥರನ್ನು ಯಥಾರ್ಥವಾಗಿ ಸಮ್ಮಾನಿಸುತ್ತಿದ್ದರು. ಲಜ್ಜಾಶೀಲರಾಗಿದ್ದರು. ಯಥಾವ್ರತರಾಗಿದ್ದರು.
12221035a ನಿತ್ಯಂ ಪರ್ವಸು ಸುಸ್ನಾತಾಃ ಸ್ವನುಲಿಪ್ತಾಃ ಸ್ವಲಂಕೃತಾಃ।
12221035c ಉಪವಾಸತಪಃಶೀಲಾಃ ಪ್ರತೀತಾ ಬ್ರಹ್ಮವಾದಿನಃ।।
ಪರ್ವಗಳಲ್ಲಿ ನಿತ್ಯವೂ ಸುಸ್ನಾತರಾಗಿ, ಅಂಗಾಗಗಳಿಗೆ ಲೇಪಿಸಿಕೊಳ್ಳುತ್ತಿದ್ದರು ಮತ್ತು ಸ್ವಲಂಕೃತರಾಗುತ್ತಿದ್ದರು. ಉಪವಾಸ-ತಪಃಶೀಲರಾಗಿದ್ದ ಅವರು ಬ್ರಹ್ಮವಾದಿಗಳೂ ವಿಶ್ವಸ್ತರೂ ಆಗಿದ್ದರು.
12221036a ನೈನಾನಭ್ಯುದಿಯಾತ್ಸೂರ್ಯೋ ನ ಚಾಪ್ಯಾಸನ್ ಪ್ರಗೇನಿಶಾಃ।
12221036c ರಾತ್ರೌ ದಧಿ ಚ ಸಕ್ತೂಂಶ್ಚ ನಿತ್ಯಮೇವ ವ್ಯವರ್ಜಯನ್।।
ದೈತ್ಯರು ಏಳುವ ಮೊದಲು ಸೂರ್ಯನು ಉದಯಿಸುತ್ತಲೇ ಇರಲಿಲ್ಲ. ರಾತ್ರಿಯಲ್ಲಿ ನಿತ್ಯವೂ ಅವರು ಮೊಸರು ಮತ್ತು ಹುರಿದ ಹಿಟ್ಟನ್ನು ತಿನ್ನುತ್ತಿರಲಿಲ್ಲ.
12221037a ಕಾಲ್ಯಂ ಘೃತಂ ಚಾನ್ವವೇಕ್ಷನ್ ಪ್ರಯತಾ ಬ್ರಹ್ಮಚಾರಿಣಃ।
12221037c ಮಂಗಲಾನಪಿ ಚಾಪಶ್ಯನ್ ಬ್ರಾಹ್ಮಣಾಂಶ್ಚಾಪ್ಯಪೂಜಯನ್।।
ಮನಸ್ಸು-ಇಂದ್ರಿಯಗಳನ್ನು ವಶದಲ್ಲಿಟ್ಟುಕೊಂಡಿದ್ದ ಆ ಬ್ರಹ್ಮಚಾರಿಗಳು ಬೆಳಿಗ್ಗೆ ಎದ್ದು ತುಪ್ಪದಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳುತ್ತಿದ್ದರು ಮತ್ತು ಇತರ ಮಂಗಳಕರ ವಸ್ತುಗಳನ್ನು ನೋಡುತ್ತಿದ್ದರು. ಬ್ರಾಹ್ಮಣರನ್ನು ಪೂಜಿಸುತ್ತಿದ್ದರು ಕೂಡ.
12221038a ಸದಾ ಹಿ ದದತಾಂ2 ಧರ್ಮಃ ಸದಾ ಚಾಪ್ರತಿಗೃಹ್ಣತಾಮ್।
12221038c ಅರ್ಧಂ ಚ ರಾತ್ರ್ಯಾಃ ಸ್ವಪತಾಂ ದಿವಾ ಚಾಸ್ವಪತಾಂ ತಥಾ।।
ಸದಾ ದಾನಮಾಡುವುದೇ ಅವರ ಧರ್ಮವಾಗಿತ್ತು. ಎಂದೂ ಅವರು ದಾನವನ್ನು ಸ್ವೀಕರಿಸುತ್ತಿರಲಿಲ್ಲ. ರಾತ್ರಿಯ ಅರ್ಧಭಾಗವು ಕಳೆದ ನಂತರವೇ ಮಲಗುತ್ತಿದ್ದರು. ಹಗಲಿನಲ್ಲಿ ನಿದ್ರಿಸುತ್ತಿರಲಿಲ್ಲ.
12221039a ಕೃಪಣಾನಾಥವೃದ್ಧಾನಾಂ ದುರ್ಬಲಾತುರಯೋಷಿತಾಮ್।
12221039c ದಾಯಂ ಚ ಸಂವಿಭಾಗಂ ಚ ನಿತ್ಯಮೇವಾನುಮೋದತಾಮ್।।
ಕೃಪಣರು, ಅನಾಥರು, ವೃದ್ಧರು, ದುರ್ಬಲರು ಮತ್ತು ಸ್ತ್ರೀಯರ ವಿಷಯದಲ್ಲಿ ದಯೆಯನ್ನು ತೋರಿಸುತ್ತಿದ್ದರು. ಅವರಿಗೆ ಬೇಕಾದುದನ್ನು ವಿಭಜಿಸಿ ಕೊಡುತ್ತಿದ್ದರು. ನಿತ್ಯವೂ ಈ ಸತ್ಕಾರ್ಯಗಳನ್ನು ಅನುಮೋದಿಸುತ್ತಿದ್ದರು.
12221040a ವಿಷಣ್ಣಂ ತ್ರಸ್ತಮುದ್ವಿಗ್ನಂ ಭಯಾರ್ತಂ ವ್ಯಾಧಿಪೀಡಿತಮ್।
12221040c ಹೃತಸ್ವಂ ವ್ಯಸನಾರ್ತಂ ಚ ನಿತ್ಯಮಾಶ್ವಾಸಯಂತಿ ತೇ।।
ನಿತ್ಯವೂ ಅವರು ವಿಷಾದಗೊಂಡವರಿಗೆ, ಭಯಗೊಂಡವರಿಗೆ, ಉದ್ವಿಗ್ನರಾದವರಿಗೆ, ಭಯಾರ್ತರಿಗೆ, ವ್ಯಾಧಿಪೀಡಿತರಿಗೆ, ತಮ್ಮದನ್ನು ಕಳೆದುಕೊಂಡವರಿಗೆ ಮತ್ತು ವ್ಯಸನಿಗಳಿಗೆ ಆಶ್ವಾಸನೆಯನ್ನು ನೀಡುತ್ತಿದ್ದರು.
12221041a ಧರ್ಮಮೇವಾನ್ವವರ್ತಂತ ನ ಹಿಂಸಂತಿ ಪರಸ್ಪರಮ್।
12221041c ಅನುಕೂಲಾಶ್ಚ ಕಾರ್ಯೇಷು ಗುರುವೃದ್ಧೋಪಸೇವಿನಃ।।
ಧರ್ಮವನ್ನೇ ಅನುಸರಿಸಿ ನಡೆಯುತ್ತಿದ್ದರು. ಪರಸ್ಪರರನ್ನು ಹಿಂಸಿಸುತ್ತಿರಲಿಲ್ಲ. ಎಲ್ಲ ಕಾರ್ಯಗಳಲ್ಲಿಯೂ ಪರಸ್ಪರರ ಅನುಕೂಲರಾಗಿದ್ದರು. ಗುರು-ವೃದ್ಧರ ಸೇವೆಗೈಯುತ್ತಿದ್ದರು.
12221042a ಪಿತೃದೇವಾತಿಥೀಂಶ್ಚೈವ ಯಥಾವತ್ತೇಽಭ್ಯಪೂಜಯನ್।
12221042c ಅವಶೇಷಾಣಿ ಚಾಶ್ನಂತಿ ನಿತ್ಯಂ ಸತ್ಯತಪೋರತಾಃ।।
ನಿತ್ಯವೂ ಸತ್ಯತಪೋರತರಾಗಿದ್ದ ಅವರು ಪಿತೃಗಳು, ದೇವತೆಗಳು ಮತ್ತು ಅಥಿತಿಗಳನ್ನು ಯಥಾವತ್ತಾಗಿ ಪೂಜಿಸಿ, ಉಳಿದ ಅನ್ನವನ್ನೇ ಊಟಮಾಡುತ್ತಿದ್ದರು.
12221043a ನೈಕೇಽಶ್ನಂತಿ ಸುಸಂಪನ್ನಂ ನ ಗಚ್ಚಂತಿ ಪರಸ್ತ್ರಿಯಮ್।
12221043c ಸರ್ವಭೂತೇಷ್ವವರ್ತಂತ ಯಥಾತ್ಮನಿ ದಯಾಂ ಪ್ರತಿ।।
ಮೃಷ್ಟಾನ್ನವನ್ನು ಒಬ್ಬರೇ ತಿನ್ನುತ್ತಿರಲಿಲ್ಲ. ಪರಸ್ತ್ರೀಯರನ್ನು ಕೂಡುತ್ತಿರಲಿಲ್ಲ. ಇತರರನ್ನು ತಮ್ಮಂತೆಯೇ ಕಂಡುಕೊಂಡು ಸರ್ವಭೂತಗಳೊಂದಿಗೆ ದಯಾಪರರಾಗಿರುತ್ತಿದ್ದರು.
12221044a ನೈವಾಕಾಶೇ ನ ಪಶುಷು ನಾಯೋನೌ ನ ಚ ಪರ್ವಸು।
12221044c ಇಂದ್ರಿಯಸ್ಯ ವಿಸರ್ಗಂ ತೇಽರೋಚಯಂತ ಕದಾ ಚನ।।
ಅವರು ಎಂದೂ ಆಕಾಶದಲ್ಲಾಗಲೀ, ಪಶುಯೋನಿಗಳಲ್ಲಾಗಲೀ, ಪರ್ವಗಳಲ್ಲಾಗಲೀ ವೀರ್ಯೋತ್ಸರ್ಜನೆಮಾಡಲು ಇಷ್ಟಪಡುತ್ತಿರಲಿಲ್ಲ.
12221045a ನಿತ್ಯಂ ದಾನಂ ತಥಾ ದಾಕ್ಷ್ಯಮಾರ್ಜವಂ ಚೈವ ನಿತ್ಯದಾ।
12221045c ಉತ್ಸಾಹಶ್ಚಾನಹಂಕಾರಃ ಪರಮಂ ಸೌಹೃದಂ ಕ್ಷಮಾ।।
12221046a ಸತ್ಯಂ ದಾನಂ ತಪಃ ಶೌಚಂ ಕಾರುಣ್ಯಂ ವಾಗನಿಷ್ಠುರಾ।
12221046c ಮಿತ್ರೇಷು ಚಾನಭಿದ್ರೋಹಃ ಸರ್ವಂ ತೇಷ್ವಭವತ್ ಪ್ರಭೋ।।
ಪ್ರಭೋ! ನಿತ್ಯವೂ ಅವರು ದಾನ, ದಕ್ಷತೆ, ಸರಳತೆ, ಉತ್ಸಾಹ, ಅನಹಂಕಾರ, ಪರಮ ಸೌಹಾರ್ದತೆ, ಕ್ಷಮೆ, ಸತ್ಯ, ದಾನ, ತಪಸ್ಸು, ಶೌಚ, ಕಾರುಣ್ಯ, ಮಾತಿನಲ್ಲಿ ಅನಿಷ್ಠುರತೆ, ಮಿತ್ರರಿಗೆ ದ್ರೋಹವನ್ನೆಸಗದೇ ಇರುವುದು – ಇವೆಲ್ಲ ಗುಣಗಳನ್ನೂ ಹೊಂದಿದ್ದರು.
12221047a ನಿದ್ರಾ ತಂದ್ರೀರಸಂಪ್ರೀತಿರಸೂಯಾ ಚಾನವೇಕ್ಷಿತಾ।
12221047c ಅರತಿಶ್ಚ ವಿಷಾದಶ್ಚ ನ ಸ್ಪೃಹಾ ಚಾವಿಶಂತ ತಾನ್।।
ನಿದ್ರೆ, ಆಲಸ್ಯ, ಅಪ್ರಸನ್ನತೆ, ದೋಷದೃಷ್ಟಿ, ಅವಿವೇಕ, ಅಪ್ರೀತಿ, ವಿಷಾದ ಮತ್ತು ಕಾಮನೆ – ಇವುಗಳು ಅವರನ್ನು ಪ್ರವೇಶಿಸುತ್ತಲೂ ಇರಲಿಲ್ಲ.
12221048a ಸಾಹಮೇವಂಗುಣೇಷ್ವೇವ ದಾನವೇಷ್ವವಸಂ ಪುರಾ।
12221048c ಪ್ರಜಾಸರ್ಗಮುಪಾದಾಯ ನೈಕಂ ಯುಗವಿಪರ್ಯಯಮ್।।
ಹೀಗೆ ಸೃಷ್ಟಿಯಾದಾಗಿನಿಂದ ಅನೇಕ ಯುಗ ಪರ್ಯಂತ ಉತ್ತಮ ಗುಣಗಳನ್ನು ಹೊಂದಿದ್ದ ದಾನವರಲ್ಲಿ ನಾನು ವಾಸಿಸಿಕೊಂಡಿದ್ದೆನು.
12221049a ತತಃ ಕಾಲವಿಪರ್ಯಾಸೇ ತೇಷಾಂ ಗುಣವಿಪರ್ಯಯಾತ್।
12221049c ಅಪಶ್ಯಂ ವಿಗತಂ ಧರ್ಮಂ ಕಾಮಕ್ರೋಧವಶಾತ್ಮನಾಮ್।।
ಕಾಲವು ಉರುಳುತ್ತಿದ್ದಂತೆ ಅವರ ಗುಣಗಳಲ್ಲಿಯೂ ಬದಲಾವಣೆಗಳುಂಟಾದವು. ಒಳ್ಳೆಯ ಗುಣಗಳು ಕೆಟ್ಟ ಗುಣಗಳಾಗಿ ಪರಿವರ್ತಿತವಾದವು. ಕಾಮಕ್ರೋಧಗಳಿಗೆ ವಶರಾದ ಅವರಲ್ಲಿ ಧರ್ಮವು ಹೊರಟುಹೋದುದನ್ನು ನೋಡಿದೆನು.
12221050a ಸಭಾಸದಾಂ ತೇ ವೃದ್ಧಾನಾಂ ಸತ್ಯಾಃ ಕಥಯತಾಂ ಕಥಾಃ।
12221050c ಪ್ರಾಹಸನ್ನಭ್ಯಸೂಯಂಶ್ಚ ಸರ್ವವೃದ್ಧಾನ್ಗುಣಾವರಾಃ।।
ಸಭಾಸದರಲ್ಲಿದ್ದ ವೃದ್ಧರು ಸತ್ಯ ಕಥೆಗಳನ್ನು ಹೇಳುತ್ತಿರುವಾಗ ಕೀಳು ಗುಣಗಳ ದಾನವರೆಲ್ಲರೂ ವೃದ್ಧರ ಮಾತುಗಳನ್ನು ಕೇಳಿ ಹಗಹಿಸಿ ನಗುತ್ತಾರೆ. ಅವರ ಮಾತುಗಳಲ್ಲಿ ದೋಷಗಳನ್ನೇ ಕಾಣುತ್ತಿದ್ದಾರೆ.
12221051a ಯೂನಃ ಸಹಸಮಾಸೀನಾನ್3 ವೃದ್ಧಾನಭಿಗತಾನ್ಸತಃ।
12221051c ನಾಭ್ಯುತ್ಥಾನಾಭಿವಾದಾಭ್ಯಾಂ ಯಥಾಪೂರ್ವಮಪೂಜಯನ್।।
ಆಸನಗಳಲ್ಲಿ ಕುಳಿತಿರುವ ಯುವ ಪುರುಷರು ಮೊದಲಿನಂತೆ ಆಗಮಿಸಿದ ಸಾಧು ಮತ್ತು ವೃದ್ಧಜನರನ್ನು ನೋಡಿ ಮೇಲೆದ್ದು ನಮಸ್ಕರಿಸಿ ಅವರ ಸನ್ಮಾನ-ಆದರಗಳನ್ನು ಮಾಡುವುದಿಲ್ಲ.
12221052a ವರ್ತಯಂತ್ಯೇವ ಪಿತರಿ ಪುತ್ರಾಃ ಪ್ರಭವತಾಽಽತ್ಮನಃ।
12221052c ಅಮಿತ್ರಭೃತ್ಯತಾಂ ಪ್ರಾಪ್ಯ ಖ್ಯಾಪಯಂತೋಽನಪತ್ರಪಾಃ।।
ತಂದೆಯು ಇರುವಾಗಲೇ ಪುತ್ರರು ಪ್ರಭುತ್ವವನ್ನು ತೋರಿಸಲು ತೊಡಗಿದ್ದಾರೆ. ಶತ್ರುವಿಗೆ ಅಡಿಯಾಳಾಗಿರುವುದು ಮಾತ್ರವಲ್ಲದೇ ತಾವು ಅಡಿಯಾಳಾಗಿರುವುದನ್ನು ನಾಚಿಕೆಯೇ ಇಲ್ಲದೇ ಇತರರೊಡನೆಯೂ ಹೇಳಿಕೊಳ್ಳುತ್ತಾರೆ.
12221053a ತಥಾ ಧರ್ಮಾದಪೇತೇನ ಕರ್ಮಣಾ ಗರ್ಹಿತೇನ ಯೇ।
12221053c ಮಹತಃ ಪ್ರಾಪ್ನುವಂತ್ಯರ್ಥಾಂಸ್ತೇಷ್ವೇಷಾಮಭವತ್ ಸ್ಪೃಹಾ।।
ಧರ್ಮಪಥಕ್ಕೆ ವಿರುದ್ಧವಾದ ನಿಂದಿತ ಕರ್ಮಗಳ ಮೂಲಕ ಮಹಾ ಧನಸಂಪತ್ತನ್ನು ಗಳಿಸುತ್ತಿದ್ದಾರೆ. ಅವರಲ್ಲಿ ಇಂತಹ ಧನೋಪಾರ್ಜನೆಯಲ್ಲಿಯೇ ಅಭಿಲಾಷೆಯುಂಟಾಗಿಬಿಟ್ಟಿದೆ.
12221054a ಉಚ್ಚೈಶ್ಚಾಪ್ಯವದನ್ರಾತ್ರೌ ನೀಚೈಸ್ತತ್ರಾಗ್ನಿರಜ್ವಲತ್।
12221054c ಪುತ್ರಾಃ ಪಿತೃನಭ್ಯವದನ್ಭಾರ್ಯಾಶ್ಚಾಭ್ಯವದನ್ ಪತೀನ್।।
ರಾತ್ರಿ ಗಟ್ಟಿಯಾಗಿ ಕಿರುಚಾಡಿಕೊಳ್ಳುತ್ತಾರೆ. ಅವರ ಮನೆಗಳಲ್ಲಿ ಅಗ್ನಿಹೋತ್ರವು ಸಣ್ಣದಾಗಿ ಉರಿಯುತ್ತಿದೆ. ಮಕ್ಕಳು ತಂದೆಯನ್ನೂ, ಸ್ತ್ರೀಯರು ಪತಿಯನ್ನೂ ಅತಿಕ್ರಮಿಸಿ ಹೋಗುತ್ತಿದ್ದಾರೆ.
12221055a ಮಾತರಂ ಪಿತರಂ ವೃದ್ಧಮಾಚಾರ್ಯಮತಿಥಿಂ ಗುರುಮ್।
12221055c ಗುರುವನ್ನಾಭ್ಯನಂದಂತ ಕುಮಾರಾನ್ನಾನ್ವಪಾಲಯನ್।।
ತಂದೆ-ತಾಯಿಯರನ್ನು, ವೃದ್ಧ ಆಚಾರ್ಯ, ಅತಿಥಿ, ಗುರುಗಳನ್ನು ಹಿರಿಯರೆಂದೂ ಅಭಿನಂದಿಸುವುದಿಲ್ಲ. ಕುಮಾರರನ್ನು ಪಾಲಿಸುತ್ತಿಲ್ಲ.
12221056a ಭಿಕ್ಷಾಂ ಬಲಿಮದತ್ತ್ವಾ ಚ ಸ್ವಯಮನ್ನಾನಿ ಭುಂಜತೇ।
12221056c ಅನಿಷ್ಟ್ವಾ ಸಂವಿಭಜ್ಯಾಥ ಪಿತೃದೇವಾತಿಥೀನ್ಗುರೂನ್।।
ಭಿಕ್ಷೆ-ಬಲಿಗಳನ್ನು ವಿಭಜಿಸಿ ಪಿತೃ-ದೇವತೆ-ಅತಿಥಿ-ಗುರುಗಳಿಗೆ ನೀಡದೆಯೇ ಸ್ವಯಂ ತಾವೇ ಅನ್ನವನ್ನು ಉಣ್ಣುತ್ತಾರೆ.
12221057a ನ ಶೌಚಮನುರುಧ್ಯಂತ ತೇಷಾಂ ಸೂದಜನಾಸ್ತಥಾ।
12221057c ಮನಸಾ ಕರ್ಮಣಾ ವಾಚಾ ಭಕ್ತಮಾಸೀದನಾವೃತಮ್।।
ಅವರು ಮತ್ತು ಅವರ ಅಡುಗೆಮಾಡುವವರು ಮನ, ಕರ್ಮ ಮತ್ತು ವಾಣಿಯಲ್ಲಿ ಪವಿತ್ರತೆಯನ್ನು ಪಾಲಿಸಿಕೊಂಡಿಲ್ಲ. ಅವರು ಭೋಜನವನ್ನು ಮುಚ್ಚದೆಯೇ ಇಡುತ್ತಿದ್ದಾರೆ.
12221058a ವಿಪ್ರಕೀರ್ಣಾನಿ ಧಾನ್ಯಾನಿ ಕಾಕಮೂಷಕಭೋಜನಮ್।
12221058c ಅಪಾವೃತಂ ಪಯೋಽತಿಷ್ಠದುಚ್ಚಿಷ್ಟಾಶ್ಚಾಸ್ಪೃಶನ್ ಘೃತಮ್।।
ಅವರ ಮನೆಗಳಲ್ಲಿ ಧಾನ್ಯಗಳು ಹರಡಿಕೊಂಡಿರುತ್ತವೆ ಮತ್ತು ಕಾಗೆ-ಇಲಿಗಳು ಅವುಗಳನ್ನು ತಿನ್ನುತ್ತಿರುತ್ತವೆ. ಹಾಲಿನ ಪಾತ್ರೆಯನ್ನು ಮುಚ್ಚಿಡುವುದಿಲ್ಲ. ಎಂಜಲು ಕೈಯಿಂದಲೇ ತುಪ್ಪದ ಪಾತ್ರೆಯನ್ನು ಮುಟ್ಟುತ್ತಾರೆ.
12221059a ಕುದ್ದಾಲಪಾಟೀಪಿಟಕಂ ಪ್ರಕೀರ್ಣಂ ಕಾಂಸ್ಯಭಾಜನಮ್।
12221059c ದ್ರವ್ಯೋಪಕರಣಂ ಸರ್ವಂ ನಾನ್ವವೈಕ್ಷತ್ ಕುಟುಂಬಿನೀ।।
ಅವರ ಮನೆಗಳಲ್ಲಿ ಗುದ್ದಲಿ, ಕುಡುಗೋಲು, ಬುಟ್ಟಿ, ಕಂಚಿನ ಪಾತ್ರೆ, ಹೋಮದ್ರವ್ಯಗಳು ಮತ್ತು ಇತರ ಉಪಕರಣಗಳು ಅಸ್ತವ್ಯಸ್ತವಾಗಿ ಬಿದ್ದಿದ್ದರೂ ಮನೆಯ ಯಜಮಾನಿಯು ಅವುಗಳ ಕಡೆ ಗಮನ ಕೊಡುತ್ತಿಲ್ಲ.
12221060a ಪ್ರಾಕಾರಾಗಾರವಿಧ್ವಂಸಾನ್ನ ಸ್ಮ ತೇ ಪ್ರತಿಕುರ್ವತೇ।
12221060c ನಾದ್ರಿಯಂತೇ ಪಶೂನ್ಬದ್ಧ್ವಾ ಯವಸೇನೋದಕೇನ ಚ।।
ಪ್ರಾಕಾರ-ಆಗಾರಗಳು ಮುರಿದು ಬಿದ್ದಿದ್ದರೂ ಅವುಗಳನ್ನು ಸರಿಮಾಡುತ್ತಿಲ್ಲ. ಕೊಟ್ಟಿಗೆಯಲ್ಲಿ ಕಟ್ಟಿರುವ ಪಶುಗಳಿಗೆ ಮೇವು-ನೀರನ್ನಿತ್ತು ಉಪಚರಿಸುತ್ತಿಲ್ಲ.
12221061a ಬಾಲಾನಾಂ ಪ್ರೇಕ್ಷಮಾಣಾನಾಂ ಸ್ವಯಂ ಭಕ್ಷಾನಭಕ್ಷಯನ್।
12221061c ತಥಾ ಭೃತ್ಯಜನಂ ಸರ್ವಂ ಪರ್ಯಶ್ನಂತಿ ಚ ದಾನವಾಃ।।
ಮಕ್ಕಳು ನೋಡುತ್ತಿದ್ದಂತೆಯೇ ಸ್ವಯಂ ತಾವೇ ಭಕ್ಷ್ಯಗಳನ್ನು ಭಕ್ಷಿಸುತ್ತಾರೆ. ಅದೇ ರೀತಿಯಲ್ಲಿ ದಾನವರು ಸೇವಕರು-ಪರಿವಾರದವರನ್ನು ತೃಪ್ತಿಗೊಳಿಸದೆಯೇ ತಾವು ಮಾತ್ರ ಸುಖೋಪಭೋಗಗಳಲ್ಲಿ ಆಸಕ್ತರಾಗಿರುತ್ತಾರೆ.
12221062a ಪಾಯಸಂ ಕೃಸರಂ ಮಾಂಸಮಪೂಪಾನಥ ಶಷ್ಕುಲೀಃ।
12221062c ಅಪಾಚಯನ್ನಾತ್ಮನೋಽರ್ಥೇ ವೃಥಾಮಾಂಸಾನ್ಯಭಕ್ಷಯನ್।।
ಪಾಯಸ, ಎಳ್ಳನ್ನ, ಮಾಂಸ, ಅಪೂಪ, ಚಕ್ಕುಲಿ – ಇವುಗಳನ್ನು ತಾವು ತಿನ್ನಲು ಮಾತ್ರವೇ ಮಾಡಿಕೊಳ್ಳುತ್ತಾರೆ. ವೃಥಾ ಮಾಂಸವನ್ನು ತಿನ್ನುತ್ತಾರೆ.
12221063a ಉತ್ಸೂರ್ಯಶಾಯಿನಶ್ಚಾಸನ್ಸರ್ವೇ ಚಾಸನ್ ಪ್ರಗೇನಿಶಾಃ।
12221063c ಅವರ್ತನ್ಕಲಹಾಶ್ಚಾತ್ರ ದಿವಾರಾತ್ರಂ ಗೃಹೇ ಗೃಹೇ।।
ಸೂರ್ಯೋದಯವಾದಾಗಲೂ ಮಲಗಿಕೊಂಡಿರುತ್ತಾರೆ. ಪ್ರಾತಃಕಾಲವನ್ನೂ ರಾತ್ರಿಯೆಂದೇ ಭಾವಿಸುತ್ತಾರೆ. ಮನೆ-ಮನೆಗಳಲ್ಲಿ ಹಗಲು-ರಾತ್ರಿ ಯಾವುದಾದರೊಂದು ಕಲಹವು ನಡೆಯುತ್ತಲೇ ಇರುತ್ತವೆ.
12221064a ಅನಾರ್ಯಾಶ್ಚಾರ್ಯಮಾಸೀನಂ ಪರ್ಯುಪಾಸನ್ನ ತತ್ರ ಹ।
12221064c ಆಶ್ರಮಸ್ಥಾನ್ವಿಕರ್ಮಸ್ಥಾಃ ಪ್ರದ್ವಿಷಂತಿ ಪರಸ್ಪರಮ್।
12221064e ಸಂಕರಾಶ್ಚಾಪ್ಯವರ್ತಂತ ನ ಚ ಶೌಚಮವರ್ತತ।।
ಆ ಅನಾರ್ಯರು ಮನೆಯಲ್ಲಿರುವ ಆರ್ಯರನ್ನು ಗೌರವಿಸುತ್ತಿಲ್ಲ. ಅಧರ್ಮಿಗಳು ಆಶ್ರಮಧರ್ಮಗಳನ್ನು ಪಾಲಿಸುವವರನ್ನು ದ್ವೇಷಿಸುತ್ತಾರೆ. ವರ್ಣಸಂಕರವು ಹೆಚ್ಚಾಗುತ್ತಿದೆ. ಪವಿತ್ರ ಆಚಾರಗಳು ಲುಪ್ತವಾಗುತ್ತಿವೆ.
12221065a ಯೇ ಚ ವೇದವಿದೋ ವಿಪ್ರಾ ವಿಸ್ಪಷ್ಟಮನೃಚಶ್ಚ ಯೇ।
12221065c ನಿರಂತರವಿಶೇಷಾಸ್ತೇ ಬಹುಮಾನಾವಮಾನಯೋಃ।।
ವೇದವಿದರಲ್ಲಿ ಮತ್ತು ವೇದದ ಒಂದು ಋಕ್ಕನ್ನೂ ತಿಳಿಯದಿರುವವರಲ್ಲಿ, ಬಹುಮಾನ-ಅಪಮಾನಗಳಲ್ಲಿ, ಯಾವ ವ್ಯತ್ಯಾಸವನ್ನೂ ಕಾಣುತ್ತಿಲ್ಲ.
12221066a ಹಾವ4ಮಾಭರಣಂ ವೇಷಂ ಗತಿಂ ಸ್ಥಿತಿಮವೇಕ್ಷಿತುಮ್।
12221066c ಅಸೇವಂತ ಭುಜಿಷ್ಯಾ ವೈ ದುರ್ಜನಾಚರಿತಂ ವಿಧಿಮ್।।
ದಾಸಿಯರು ಆಭರಣ-ವೇಷಗಳನ್ನು ಧರಿಸಿ ಹಾವಭಾವಗಳಿಂದ ವ್ಯಭಿಚಾರಿಣಿಯರಂತೆ ನಿಲ್ಲುತ್ತಾರೆ, ನಡೆಯುತ್ತಾರೆ ಮತ್ತು ಕಾಣುತ್ತಾರೆ. ಅವರು ದುರ್ಜನರು ಆಚರಿಸುವ ವಿಧಿಗಳನ್ನು ಅನುಕರಣ ಮಾಡುತ್ತಿದ್ದಾರೆ.
12221067a ಸ್ತ್ರಿಯಃ ಪುರುಷವೇಷೇಣ ಪುಂಸಃ ಸ್ತ್ರೀವೇಷಧಾರಿಣಃ।
12221067c ಕ್ರೀಡಾರತಿವಿಹಾರೇಷು ಪರಾಂ ಮುದಮವಾಪ್ನುವನ್।।
ಸ್ತ್ರೀಯರು ಪುರುಷವೇಷವನ್ನು ಧರಿಸುತ್ತಾರೆ. ಪುರುಷರು ಸ್ತ್ರೀಯರ ವೇಷಧಾರಣೆ ಮಾಡಿ ಕ್ರೀಡೆ-ರತಿ-ವಿಹಾರಗಳಲ್ಲಿ ತೊಡಗಿ ಆನಂದಹೊಂದುತ್ತಾರೆ.
12221068a ಪ್ರಭವದ್ಭಿಃ ಪುರಾ ದಾಯಾನರ್ಹೇಭ್ಯಃ ಪ್ರತಿಪಾದಿತಾನ್।
12221068c ನಾಭ್ಯವರ್ತಂತ ನಾಸ್ತಿಕ್ಯಾದ್ವರ್ತಂತಃ ಸಂಭವೇಷ್ವಪಿ।।
ಹಿಂದಿನವರು ಅರ್ಹ ಬ್ರಾಹ್ಮಣರಿಗೆ ಉಂಬಳಿಯಾಗಿ ಕೊಟ್ಟಿದ್ದ ಭೂಮಿ-ಕಾಣಿಕೆಗಳನ್ನು ನಾಸ್ತಿಕ್ಯದ ಕಾರಣದಿಂದ ಅವರ ಬಳಿಯಲ್ಲಿರಲು ಅವಕಾಶಕೊಡುತ್ತಿಲ್ಲ. ತಮ್ಮ ಜೀವನಿರ್ವಹಣೆಗೆ ಬೇರೆ ದಾರಿಗಳಿದ್ದರೂ ಬ್ರಾಹ್ಮಣರ ಉಂಬಳಿಗಳನ್ನು ಹಿಂದೆ ತೆಗೆದುಕೊಳ್ಳುತ್ತಿದ್ದಾರೆ.
12221069a ಮಿತ್ರೇಣಾಭ್ಯರ್ಥಿತಂ ಮಿತ್ರಮರ್ಥೇ ಸಂಶಯಿತೇ ಕ್ವ ಚಿತ್।
12221069c ವಾಲಕೋಟ್ಯಗ್ರಮಾತ್ರೇಣ ಸ್ವಾರ್ಥೇನಾಘ್ನತ ತದ್ವಸು।।
ಧನ-ಸಂಪತ್ತುಗಳು ಇಬ್ಬರಲ್ಲಿ ಯಾರಿಗೆ ಸೇರಬೇಕೆಂದು ಸಂಶಯವುಂಟಾದಾಗ ಮಿತ್ರನನ್ನು ಕೇಳಿದರೆ ಆ ಮಿತ್ರನು ಕೂದಲಿನ ತುದಿಗೆ ಸಮಾನ ಸ್ವಾರ್ಥದಿಂದ ತಾನೇ ಅದನ್ನು ಕಬಳಿಸಿಬಿಡುತ್ತಾನೆ.
12221070a ಪರಸ್ವಾದಾನರುಚಯೋ ವಿಪಣ್ಯವ್ಯವಹಾರಿಣಃ।
12221070c ಅದೃಶ್ಯಂತಾರ್ಯವರ್ಣೇಷು ಶೂದ್ರಾಶ್ಚಾಪಿ ತಪೋಧನಾಃ।।
ಪರರ ಸ್ವತ್ತಿನಲ್ಲಿಯೇ ರುಚಿಯನ್ನಿಟ್ಟುಕೊಂಡಿದ್ದಾರೆ. ಮೋಸದ ವ್ಯವಹಾರಗಳು ಕಂಡುಬರುತ್ತಿವೆ. ಉಚ್ಚ ವರ್ಣದವರೊಡನೆ ಸೇರಿ ಶೂದ್ರರೂ ತಪೋಧನರಾಗುತ್ತಿದ್ದಾರೆ.
12221071a ಅಧೀಯಂತೇಽವ್ರತಾಃ ಕೇ ಚಿದ್ವೃಥಾವ್ರತಮಥಾಪರೇ।
12221071c ಅಶುಶ್ರೂಷುರ್ಗುರೋಃ ಶಿಷ್ಯಃ ಕಶ್ಚಿಚ್ಚಿಷ್ಯಸಖೋ ಗುರುಃ।।
ವ್ರತಹೀನರು ವೇದಾಭ್ಯಾಸಮಾಡುತ್ತಿದ್ದಾರೆ. ಮತ್ತೆ ಕೆಲವರು ವ್ರತಗಳನ್ನು ಆಚರಿಸುತ್ತಿದ್ದರೂ ವೇದಾಧ್ಯಯನ ಮಾಡುತ್ತಿಲ್ಲ. ಗುರುಶುಶ್ರೂಷೆಯನ್ನು ಮಾಡುತ್ತಿಲ್ಲ. ಕೆಲವು ಕಡೆ ಶಿಷ್ಯನು ಗುರುವಿನ ಮಿತ್ರನೇ ಆಗಿರುತ್ತಾನೆ.
12221072a ಪಿತಾ ಚೈವ ಜನಿತ್ರೀ ಚ ಶ್ರಾಂತೌ ವೃತ್ತೋತ್ಸವಾವಿವ।
12221072c ಅಪ್ರಭುತ್ವೇ ಸ್ಥಿತೌ ವೃದ್ಧಾವನ್ನಂ ಪ್ರಾರ್ಥಯತಃ ಸುತಾನ್।।
ತಂದೆ-ತಾಯಿಗಳು ಉತ್ಸವಹೀನರಾಗಿದ್ದಾರೆ. ಬಳಲಿದ್ದಾರೆ. ಪ್ರಭುತ್ವವನ್ನು ಕಳೆದುಕೊಂಡ ಆ ವೃದ್ಧರು ಮಕ್ಕಳನ್ನೇ ಬೇಡುವಂಥವರಾಗಿದ್ದಾರೆ.
12221073a ತತ್ರ ವೇದವಿದಃ ಪ್ರಾಜ್ಞಾ ಗಾಂಭೀರ್ಯೇ ಸಾಗರೋಪಮಾಃ।
12221073c ಕೃಷ್ಯಾದಿಷ್ವಭವನ್ಸಕ್ತಾ ಮೂರ್ಖಾಃ ಶ್ರಾದ್ಧಾನ್ಯಭುಂಜತ।।
ಅವರಲ್ಲಿ ಸಾಗರದಂತೆ ಗಂಭೀರವಾಗಿರುವ ವೇದವಿದ ಪ್ರಾಜ್ಞರು ಈಗ ಕೃಷ್ಯಾದಿಗಳಲ್ಲಿ ಆಸಕ್ತರಾಗಿದ್ದಾರೆ. ಮೂರ್ಖರು ಶ್ರಾದ್ಧಾನ್ನವನ್ನು ಉಣ್ಣುತ್ತಿದ್ದಾರೆ.
12221074a ಪ್ರಾತಃ ಪ್ರಾತಶ್ಚ ಸುಪ್ರಶ್ನಂ ಕಲ್ಪನಂ ಪ್ರೇಷಣಕ್ರಿಯಾಃ।
12221074c ಶಿಷ್ಯಾನುಪ್ರಹಿತಾಸ್ತಸ್ಮಿನ್ನಕುರ್ವನ್ಗುರವಶ್ಚ ಹ।।
ಪ್ರತಿದಿನವೂ ಬೆಳಿಗ್ಗೆ “ಸುಖನಿದ್ರೆಯಾಯಿತೇ?” ಎಂದು ಗುರುಗಳೇ ಶಿಷ್ಯರನ್ನು ಕೇಳತೊಡಗಿದ್ದಾರೆ. ಸೇವಕರು ಮಾಡುವ ಕೆಲಸಗಳನ್ನು ಗುರುಗಳೇ ಶಿಷ್ಯರಿಗೆ ಮಾಡಿಕೊಡುತ್ತಿದ್ದಾರೆ. ಗುರುಗಳು ತಾವಾಗಿಯೇ ಶಿಷ್ಯರ ವಾರ್ತಾವಾಹಕರಾಗಿ ಅಲ್ಲಿಂದಿಲ್ಲಿಗೆ ಹೋಗಿ ಬರುತ್ತಿರುತ್ತಾರೆ.
12221075a ಶ್ವಶ್ರೂಶ್ವಶುರಯೋರಗ್ರೇ ವಧೂಃ ಪ್ರೇಷ್ಯಾನಶಾಸತ।
12221075c ಅನ್ವಶಾಸಚ್ಚ ಭರ್ತಾರಂ ಸಮಾಹೂಯಾಭಿಜಲ್ಪತೀ।।
ಅತ್ತೆ-ಮಾವಂದಿರ ಎದಿರೇ ಸೊಸೆಯು ಸೇವಕರಿಗೆ ಅಪ್ಪಣೆಮಾಡತೊಡಗಿದ್ದಾಳೆ. ಗಂಡನಿಗೂ ಅಪ್ಪಣೆಮಾಡುತ್ತಾಳೆ. ಅವನನ್ನು ಕರೆದು ಮಾತನಾಡತೊಡಗುತ್ತಾಳೆ.
12221076a ಪ್ರಯತ್ನೇನಾಪಿ ಚಾರಕ್ಷಚ್ಚಿತ್ತಂ ಪುತ್ರಸ್ಯ ವೈ ಪಿತಾ।
12221076c ವ್ಯಭಜಂಶ್ಚಾಪಿ ಸಂರಂಭಾದ್ದುಃಖವಾಸಂ ತಥಾವಸನ್।।
ತಂದೆಯು ಮಗನ ಚಿತ್ತವನ್ನು ರಕ್ಷಿಸತೊಡಗಿದ್ದಾನೆ5. ಮಕ್ಕಳ ಕೋಪಕ್ಕೆ ಹೆದರಿ ತನ್ನಲ್ಲಿರುವುದೆಲ್ಲವನ್ನೂ ಮಕ್ಕಳಲ್ಲಿ ಹಂಚಿಕೊಟ್ಟು ತನ್ನ ಜೀವನವನ್ನು ದುಃಖದಲ್ಲಿಯೇ ಕಳೆಯುತ್ತಾನೆ.
12221077a ಅಗ್ನಿದಾಹೇನ ಚೋರೈರ್ವಾ ರಾಜಭಿರ್ವಾ ಹೃತಂ ಧನಮ್।
12221077c ದೃಷ್ಟ್ವಾ ದ್ವೇಷಾತ್ ಪ್ರಾಹಸಂತ ಸುಹೃತ್ಸಂಭಾವಿತಾ ಹ್ಯಪಿ।।
ಅಗ್ನಿದಾಹ, ಕಳ್ಳರು ಅಥವಾ ರಾಜಪುರುಷರಿಂದ ಯಾರದ್ದಾದರೂ ಧನವು ನಷ್ಟವಾದುದನ್ನು ನೋಡಿದರೆ, ಅವರು ತಮ್ಮ ಮಿತ್ರರೇ ಆಗಿದ್ದರೂ, ದ್ವೇಷದ ಕಾರಣದಿಂದ ಅಪಹಾಸ್ಯಮಾಡುತ್ತಾರೆ.
12221078a ಕೃತಘ್ನಾ ನಾಸ್ತಿಕಾಃ ಪಾಪಾ ಗುರುದಾರಾಭಿಮರ್ಶಿನಃ।
12221078c ಅಭಕ್ಷ್ಯಭಕ್ಷಣರತಾ ನಿರ್ಮರ್ಯಾದಾ ಹತತ್ವಿಷಃ।।
ಅವರು ಕೃತಘ್ನರೂ, ನಾಸ್ತಿಕರೂ, ಪಾಪಿಷ್ಟರೂ, ಗುರುಪತ್ನಿಯನ್ನು ಬಯಸುವವರೂ, ಅಭಕ್ಷ್ಯಗಳನ್ನು ತಿನ್ನುವವರೂ, ಮರ್ಯಾದೆಯಿಲ್ಲದವರೂ, ತೇಜಸ್ಸನ್ನು ಕಳೆದುಕೊಂಡವರೂ ಆಗಿದ್ದಾರೆ.
12221079a ತೇಷ್ವೇವಮಾದೀನಾಚಾರಾನಾಚರತ್ಸು ವಿಪರ್ಯಯೇ।
12221079c ನಾಹಂ ದೇವೇಂದ್ರ ವತ್ಸ್ಯಾಮಿ ದಾನವೇಷ್ವಿತಿ ಮೇ ಮತಿಃ।।
ದೇವೇಂದ್ರ! ಕಾಲ ವಿಪರ್ಯಾಸದಿಂದಾಗಿ ದಾನವರು ಹೀಗೆ ಧರ್ಮಕ್ಕೆ ವಿರುದ್ಧವಾದ ಆಚರಣೆಗಳಲ್ಲಿ ತೊಡಗಿದ್ದಾರೆ. ಇನ್ನು ನಾನು ಅವರೊಡನೆ ವಾಸಿಸಲಾರೆನು. ಇದೇ ನನ್ನ ನಿಶ್ಚಯವು.
12221080a ತಾಂ ಮಾಂ ಸ್ವಯಮನುಪ್ರಾಪ್ತಾಮಭಿನಂದ ಶಚೀಪತೇ।
12221080c ತ್ವಯಾರ್ಚಿತಾಂ ಮಾಂ ದೇವೇಶ ಪುರೋಧಾಸ್ಯಂತಿ ದೇವತಾಃ।।
ಶಚೀಪತೇ! ಸ್ವಯಂ ನಾನೇ ನಿನ್ನ ಬಳಿ ಬಂದಿದ್ದೇನೆ. ನನ್ನನ್ನು ಅಭಿನಂದಿಸು. ದೇವೇಶ! ನಿಮ್ಮಿಂದ ಅರ್ಚಿತಳಾದ ನನ್ನನ್ನು ದೇವತೆಗಳೂ ಪೂಜಿಸುತ್ತಾರೆ.
12221081a ಯತ್ರಾಹಂ ತತ್ರ ಮತ್ಕಾಂತಾ ಮದ್ವಿಶಿಷ್ಟಾ ಮದರ್ಪಣಾಃ।
12221081c ಸಪ್ತ ದೇವ್ಯೋ ಮಯಾಷ್ಟಮ್ಯೋ6 ವಾಸಂ ಚೇಷ್ಯಂತಿ ಮೇಽಷ್ಟಧಾ।।
ನಾನೆಲ್ಲಿ ಇರುತ್ತೇನೋ ಅಲ್ಲಿ ನನಗೆ ಪ್ರಿಯರಾದ, ನನಗೆ ಅಂಟಿಕೊಂಡಿರುವ, ತಮ್ಮನ್ನು ನನಗೇ ಸಮರ್ಪಿಸಿಕೊಂಡಿರುವ ಏಳು ದೇವಿಯರು ಮತ್ತು ಎಂಟನೆಯವಳು ನನ್ನೊಂದಿಗೇ ವಾಸಮಾಡುತ್ತಾರೆ.
12221082a ಆಶಾ ಶ್ರದ್ಧಾ ಧೃತಿಃ ಕಾಂತಿ7ರ್ವಿಜಿತಿಃ ಸನ್ನತಿಃ ಕ್ಷಮಾ।
12221082c ಅಷ್ಟಮೀ ವೃತ್ತಿರೇತಾಸಾಂ ಪುರೋಗಾ ಪಾಕಶಾಸನ।।
ಪಾಕಶಾಸನ! ಆಶಾ, ಶ್ರದ್ಧಾ, ಧೃತಿ, ಕಾಂತಿ, ವಿಜಿತಿ, ಸನ್ನತಿ, ಕ್ಷಮಾ, ಮತ್ತು ಎಂಟನೆಯವಳು, ಇವೆಲ್ಲರಿಗಿಂತಲೂ ಮುಂದಿರುವವಳು, ವೃತ್ತಿ.
12221083a ತಾಶ್ಚಾಹಂ ಚಾಸುರಾಂಸ್ತ್ಯಕ್ತ್ವಾ ಯುಷ್ಮದ್ವಿಷಯಮಾಗತಾ।
12221083c ತ್ರಿದಶೇಷು ನಿವತ್ಸ್ಯಾಮೋ ಧರ್ಮನಿಷ್ಠಾಂತರಾತ್ಮಸು।।
ನಾನು ಮತ್ತು ಆ ಅಷ್ಟದೇವತೆಗಳೂ ಅಸುರರನ್ನು ತ್ಯಜಿಸಿ ನಿನ್ನ ರಾಜ್ಯಕ್ಕೆ ಆಗಮಿಸಿದ್ದೇವೆ. ಧರ್ಮನಿಷ್ಠ ಅಂತರಾತ್ಮವುಳ್ಳ ದೇವತೆಗಳಲ್ಲಿ ನಾವಿನ್ನು ವಾಸಿಸುತ್ತೇವೆ.””
12221084 ಭೀಷ್ಮ ಉವಾಚ।
12221084a ಇತ್ಯುಕ್ತವಚನಾಂ ದೇವೀಮತ್ಯರ್ಥಂ ತೌ ನನಂದತುಃ।
12221084c ನಾರದಶ್ಚ ತ್ರಿಲೋಕರ್ಷಿರ್ವೃತ್ರಹಂತಾ ಚ ವಾಸವಃ।।
ಭೀಷ್ಮನು ಹೇಳಿದನು: “ದೇವಿಯು ಹೀಗೆ ಹೇಳಲು ತ್ರಿಲೋಕ ಋಷಿ ನಾರದ ಮತ್ತು ವೃತ್ರಹಂತಕ ವಾಸವರು ಆನಂದಿತರಾದರು.
12221085a ತತೋಽನಲಸಖೋ ವಾಯುಃ ಪ್ರವವೌ ದೇವವೇಶ್ಮಸು।
12221085c ಇಷ್ಟಗಂಧಃ ಸುಖಸ್ಪರ್ಶಃ ಸರ್ವೇಂದ್ರಿಯಸುಖಾವಹಃ।।
ಆಗ ಅನಲಸಖ ವಾಯುವು ದೇವತೆಗಳ ಮನೆಗಳಲ್ಲಿ ಇಷ್ಟಗಂಧಗಳನ್ನು ಹೊತ್ತು ಸುಖಸ್ಪರ್ಶನಾಗಿ ಸರ್ವೇಂದ್ರಿಯಗಳಿಗೂ ಸುಖವನ್ನು ನೀಡುತ್ತಾ ಬೀಸತೊಡಗಿದನು.
12221086a ಶುಚೌ ಚಾಭ್ಯರ್ಚಿತೇ ದೇಶೇ ತ್ರಿದಶಾಃ ಪ್ರಾಯಶಃ ಸ್ಥಿತಾಃ।
12221086c ಲಕ್ಷ್ಮ್ಯಾ ಸಹಿತಮಾಸೀನಂ ಮಘವಂತಂ ದಿದೃಕ್ಷವಃ।।
ಶುಚಿಯಾಗಿದ್ದ ಮತ್ತು ಅರ್ಚಿತಗೊಂಡಿದ್ದ ಆ ಪ್ರದೇಶದಲ್ಲಿ ಲಕ್ಷ್ಮಿಯ ಸಹಿತ ಕುಳಿತಿದ್ದ ಮಘವಂತ ಇಂದ್ರನನ್ನು ನೋಡಲು ಬಯಸಿ ಪ್ರಾಯಶಃ ಎಲ್ಲ ದೇವತೆಗಳೂ ಸೇರಿದ್ದರು.
12221087a ತತೋ ದಿವಂ ಪ್ರಾಪ್ಯ ಸಹಸ್ರಲೋಚನಃ ಶ್ರಿಯೋಪಪನ್ನಃ ಸುಹೃದಾ ಸುರರ್ಷಿಣಾ।
12221087c ರಥೇನ ಹರ್ಯಶ್ವಯುಜಾ ಸುರರ್ಷಭಃ ಸದಃ ಸುರಾಣಾಮಭಿಸತ್ಕೃತೋ ಯಯೌ।।
ಅನಂತರ ಸಹಸ್ರಲೋಚನ ಸುರರ್ಷಭನು ತನ್ನ ಸುಹೃದಯಿ ಸುರರ್ಷಿ ನಾರದ ಮತ್ತು ಶ್ರೀಯೊಂದಿಗೆ ಹಸಿರುಬಣ್ಣದ ಕುದುರೆಗಳನ್ನು ಕಟ್ಟಿದ್ದ ರಥದಲ್ಲಿ ಕುಳಿತು ಸುರರಿಂದ ಸತ್ಕೃತನಾಗಿ ಸ್ವರ್ಗವನ್ನು ಸೇರಿ ತನ್ನ ಸಭೆಗೆ ಆಗಮಿಸಿದನು.
12221088a ಅಥೇಂಗಿತಂ ವಜ್ರಧರಸ್ಯ ನಾರದಃ ಶ್ರಿಯಾಶ್ಚ ದೇವ್ಯಾ ಮನಸಾ ವಿಚಾರಯನ್।
12221088c ಶ್ರಿಯೈ ಶಶಂಸಾಮರದೃಷ್ಟಪೌರುಷಃ ಶಿವೇನ ತತ್ರಾಗಮನಂ ಮಹರ್ದ್ಧಿಮತ್।।
ಆಗ ವಜ್ರಧರ ಮತ್ತು ದೇವಿ ಶ್ರೀಯರ ಇಂಗಿತವನ್ನು ಮನಸ್ಸಿನಲ್ಲಿಯೇ ವಿಚಾರಿಸಿ ಅಮರರ ಪೌರುಷವನ್ನು ಕಂಡಿದ್ದ ನಾರದನು ಶ್ರೀಯನ್ನು ಪ್ರಶಂಸಿಸಿದನು ಮತ್ತು ಅವಳ ಆಗಮನದಿಂದ ಮಹಾ ಮಂಗಳವುಂಟಾಯಿತೆಂದು ಹೇಳಿದನು.
12221089a ತತೋಽಮೃತಂ ದ್ಯೌಃ ಪ್ರವವರ್ಷ ಭಾಸ್ವತೀ ಪಿತಾಮಹಸ್ಯಾಯತನೇ ಸ್ವಯಂಭುವಃ।
12221089c ಅನಾಹತಾ ದುಂದುಭಯಶ್ಚ ನೇದಿರೇ ತಥಾ ಪ್ರಸನ್ನಾಶ್ಚ ದಿಶಶ್ಚಕಾಶಿರೇ।।
ಆಗ ನಿರ್ಮಲ ಪ್ರಕಾಶಪೂರ್ಣ ಆಕಾಶವು ಸ್ವಯಂಭೂ ಪಿತಾಮಹನ ಲೋಕದಲ್ಲಿ ಅಮೃತವನ್ನು ಸುರಿಸಿತು. ಬಾರಿಸದೆಯೇ ದೇವದುಂದುಭಿಗಳು ಮೊಳಗಿದವು. ಎಲ್ಲ ದಿಕ್ಕುಗಳೂ ಪ್ರಸನ್ನಗೊಂಡು ಪ್ರಕಾಶಿಸಿದವು.
12221090a ಯಥರ್ತು ಸಸ್ಯೇಷು ವವರ್ಷ ವಾಸವೋ ನ ಧರ್ಮಮಾರ್ಗಾದ್ವಿಚಚಾಲ ಕಶ್ಚನ।
12221090c ಅನೇಕರತ್ನಾಕರಭೂಷಣಾ ಚ ಭೂಃ ಸುಘೋಷಘೋಷಾ ಭುವನೌಕಸಾಂ ಜಯೇ।।
ಋತುವಿಗೆ ತಕ್ಕಂತೆ ವಾಸವನು ಸಸ್ಯಗಳ ಮೇಲೆ ಮಳೆಸುರಿಸಿದನು. ಧರ್ಮಮಾರ್ಗದಿಂದ ಎಂದೂ ವಿಚಲಿತನಾಗಲಿಲ್ಲ. ಅನೇಕ ರತ್ನಾಕರ ಸಮುದ್ರಗಳಿಂದ ಭೂಷಿತವಾದ ಭೂಮಿಯು ಭುವನೌಕಸರ ವಿಜಯದಿಂದಾಗಿ ಸುಂದರ ಜಯಘೋಷವನ್ನು ಮಾಡಿತು.
12221091a ಕ್ರಿಯಾಭಿರಾಮಾ ಮನುಜಾ ಯಶಸ್ವಿನೋ ಬಭುಃ ಶುಭೇ ಪುಣ್ಯಕೃತಾಂ ಪಥಿ ಸ್ಥಿತಾಃ।
12221091c ನರಾಮರಾಃ ಕಿಂನರಯಕ್ಷರಾಕ್ಷಸಾಃ ಸಮೃದ್ಧಿಮಂತಃ ಸುಖಿನೋ ಯಶಸ್ವಿನಃ।।
ಆಗ ಮನುಷ್ಯರು ಪುಣ್ಯಕೃತರ ಶುಭಮಾರ್ಗಗಳಲ್ಲಿ ಸ್ಥಿತರಾಗಿ ಕ್ರಿಯೆಗಳಲ್ಲಿಯೇ ಅನುರಕ್ತರಾಗಿ ಯಶಸ್ವಿಗಳಾದರು. ನರರು, ಅಮರರು, ಕಿನ್ನರ-ಯಕ್ಷ-ರಾಕ್ಷಸರು ಸಮೃದ್ಧಿಮಂತರೂ ಸುಖಿಗಳೂ ಮತ್ತು ಯಶಸ್ವಿಗಳೂ ಆದರು.
12221092a ನ ಜಾತ್ವಕಾಲೇ ಕುಸುಮಂ ಕುತಃ ಫಲಂ ಪಪಾತ ವೃಕ್ಷಾತ್ಪವನೇರಿತಾದಪಿ।
12221092c ರಸಪ್ರದಾಃ ಕಾಮದುಘಾಶ್ಚ ಧೇನವೋ ನ ದಾರುಣಾ ವಾಗ್ವಿಚಚಾರ ಕಸ್ಯ ಚಿತ್।।
ಗಾಳಿಯು ಬೀಸುತ್ತಿದ್ದರೂ ಅಕಾಲದಲ್ಲಿ ಎಂದೂ ಮರಗಳಿಂದ ಕುಸುಮಗಳಾಗಲೀ ಫಲಗಳಾಗಲೀ ಬೀಳುತ್ತಿರಲಿಲ್ಲ. ಹಸುಗಳು ಕೇಳಿದಷ್ಟು ಸತ್ತ್ವಪೂರ್ಣ ಹಾಲನ್ನು ಕೊಡುತ್ತಿದ್ದವು. ಯಾರ ಬಾಯಿಯಿಂದಲೂ ಕಠೋರವಾದ ಮಾತು ಹೊರಬರುತ್ತಿರಲಿಲ್ಲ.
12221093a ಇಮಾಂ ಸಪರ್ಯಾಂ ಸಹ ಸರ್ವಕಾಮದೈಃ ಶ್ರಿಯಾಶ್ಚ ಶಕ್ರಪ್ರಮುಖೈಶ್ಚ ದೈವತೈಃ।
12221093c ಪಠಂತಿ ಯೇ ವಿಪ್ರಸದಃ ಸಮಾಗಮೇ ಸಮೃದ್ಧಕಾಮಾಃ ಶ್ರಿಯಮಾಪ್ನುವಂತಿ ತೇ।।
ಸರ್ವಕಾಮಗಳನ್ನೂ ಪೂರೈಸುವ ಇಂದ್ರಪ್ರಮುಖರ ದೇವತೆಗಳಿಂದ ಸ್ತುತಿಸಲ್ಪಟ್ಟ ಶ್ರೀಯ ಈ ಪೂಜಾಪ್ರಕರಣವನ್ನು ಬ್ರಾಹ್ಮಣರ ಸಭೆಯಲ್ಲಿ ಪಠಿಸುವವರು ಸಮೃದ್ಧಕಾಮರಾಗಿ ಶ್ರೀಯನ್ನು ಹೊಂದುತ್ತಾರೆ.
12221094a ತ್ವಯಾ ಕುರೂಣಾಂ ವರ ಯತ್ಪ್ರಚೋದಿತಂ ಭವಾಭವಸ್ಯೇಹ ಪರಂ ನಿದರ್ಶನಮ್।
12221094c ತದದ್ಯ ಸರ್ವಂ ಪರಿಕೀರ್ತಿತಂ ಮಯಾ ಪರೀಕ್ಷ್ಯ ತತ್ತ್ವಂ ಪರಿಗಂತುಮರ್ಹಸಿ।।
ಕುರುಶ್ರೇಷ್ಠ! ನೀನು ಪ್ರಶ್ನಿಸಿದ ಉನ್ನತಿ ಮತ್ತು ಅವನತಿಗಳ ಪೂರ್ವಲಕ್ಷಣಗಳನ್ನು ಪರಮ ನಿದರ್ಶನವನ್ನಿತ್ತು ಹೇಳಿದ್ದೇನೆ. ಈಗ ನೀನೇ ನಾನು ಹೇಳಿದುದೆಲ್ಲವನ್ನೂ ತತ್ತ್ವತಃ ಪರೀಕ್ಷಿಸಿ ನಿಶ್ಚಯಿಸಲು ಸಮರ್ಥನಾಗಿರುವೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶ್ರೀ-ವಾಸವಸಂವಾದೋ ನಾಮ ಏಕವಿಂಶಾಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶ್ರೀ-ವಾಸವಸಂವಾದ ಎನ್ನುವ ಇನ್ನೂರಾಇಪ್ಪತ್ತೊಂದನೇ ಅಧ್ಯಾಯವು.
-
ಹ್ರೀನಿಷೇವಾ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ವದತಾಂ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಯುವಾನಶ್ಚ ಸಮಾಸೀನಾ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಹಾರ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಮಗನಿಗೆ ಸಿಟ್ಟುಬಾರದ ರೀತಿಯಲ್ಲಿ, ಅವನಿಗೆ ವಿಧೇಯನಾಗಿ ನಡೆದುಕೊಳ್ಳುತ್ತಿದ್ದಾನೆ (ಭಾರತ ದರ್ಶನ). ↩︎
-
ಜಯಾಷ್ಟಮ್ಯೋ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಶಾಂತಿ (ಭಾರತ ದರ್ಶನ/ಗೀತಾ ಪ್ರೆಸ್). ↩︎