220: ಬಲಿವಾಸವಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 220

ಸಾರ

ಕಾಲ ಮತ್ತು ಪ್ರಾರಬ್ಧಗಳ ಮಹಿಮೆಯನ್ನು ವರ್ಣಿಸುವ ಬಲಿ-ವಾಸವರ ಸಂವಾದ (1-118).

12220001 ಯುಧಿಷ್ಠಿರ ಉವಾಚ।
12220001a ಮಗ್ನಸ್ಯ ವ್ಯಸನೇ ಕೃಚ್ಚ್ರೇ ಕಿಂ ಶ್ರೇಯಃ ಪುರುಷಸ್ಯ ಹಿ।
12220001c ಬಂಧುನಾಶೇ ಮಹೀಪಾಲ ರಾಜ್ಯನಾಶೇಽಪಿ ವಾ ಪುನಃ।।

ಯುಧಿಷ್ಠಿರನು ಹೇಳಿದನು: “ಮಹೀಪಾಲ! ಬಂಧುನಾಶ ಮತ್ತು ಪುನಃ ರಾಜ್ಯನಾಶದ ಕಷ್ಟಕರ ವ್ಯಸನದಲ್ಲಿ ಮುಳುಗಿರುವ ಪುರುಷನಿಗೆ ಯಾವುದು ಶ್ರೇಯಸ್ಕರವು?

12220002a ತ್ವಂ ಹಿ ನಃ ಪರಮೋ ವಕ್ತಾ ಲೋಕೇಽಸ್ಮಿನ್ ಭರತರ್ಷಭ।
12220002c ಏತದ್ಭವಂತಂ ಪೃಚ್ಚಾಮಿ ತನ್ಮೇ ವಕ್ತುಮಿಹಾರ್ಹಸಿ।।

ಭರತರ್ಷಭ! ಈ ಲೋಕದಲ್ಲಿ ನೀನೇ ನಮಗೆ ಶ್ರೇಷ್ಠ ಬೋಧಕನಾಗಿರುವೆ. ನಾನು ನಿನ್ನಲ್ಲಿ ಇದನ್ನು ಕೇಳುತ್ತಿದ್ದೇನೆ. ಅದನ್ನು ನನಗೆ ಹೇಳಬೇಕು.”

12220003 ಭೀಷ್ಮ ಉವಾಚ।
12220003a ಪುತ್ರದಾರೈಃ ಸುಖೈಶ್ಚೈವ ವಿಯುಕ್ತಸ್ಯ ಧನೇನ ಚ।
12220003c ಮಗ್ನಸ್ಯ ವ್ಯಸನೇ ಕೃಚ್ಚ್ರೇ ಧೃತಿಃ ಶ್ರೇಯಸ್ಕರೀ ನೃಪ।।

ಭೀಷ್ಮನು ಹೇಳಿದನು: “ನೃಪ! ಪತ್ನಿ-ಪುತ್ರರಿಂದಲೂ, ಧನದಿಂದಲೂ, ಸುಖದಿಂದಲೂ ವಿಯುಕ್ತನಾಗಿ ಕಷ್ಟಕರ ವ್ಯಸದಲ್ಲಿ ಮುಳುಗಿರುವವನಿಗೆ ಧೈರ್ಯವೇ ಶ್ರೇಯಸ್ಕರವಾದುದು.

12220004a ಧೈರ್ಯೇಣ ಯುಕ್ತಸ್ಯ ಸತಃ ಶರೀರಂ ನ ವಿಶೀರ್ಯತೇ1
12220004c ಆರೋಗ್ಯಾಚ್ಚ ಶರೀರಸ್ಯ ಸ ಪುನರ್ವಿಂದತೇ ಶ್ರಿಯಮ್।।

ಧೈರ್ಯದಿಂದ ಯುಕ್ತನಾದವನ ಶರೀರವು ಕ್ಷೀಣಿಸುವುದಿಲ್ಲ. ಧೈರ್ಯವಿದ್ದವನು ಶರೀರದ ಆರೋಗ್ಯವನ್ನು ಹೊಂದಿ ಪುನಃ ಶ್ರೀಯನ್ನು ಪಡೆದುಕೊಳ್ಳುತ್ತಾನೆ.

12220005a ಯಸ್ಯ ರಾಜ್ಞೋ2 ನರಾಸ್ತಾತ ಸಾತ್ತ್ವಿಕೀಂ ವೃತ್ತಿಮಾಸ್ಥಿತಾಃ।
12220005c ತಸ್ಯ ಸ್ಥೈರ್ಯಂ ಚ ಧೈರ್ಯಂ ಚ ವ್ಯವಸಾಯಶ್ಚ ಕರ್ಮಸು।।

ಸಾತ್ತ್ವಿಕ ವೃತ್ತಿಯನ್ನು ಆಶ್ರಯಿಸಿದ ಮನುಷ್ಯ ರಾಜರು ಕರ್ಮಗಳಲ್ಲಿ ನಿಷ್ಠೆಯನ್ನೂ, ಸ್ಥೈರ್ಯ-ಧೈರ್ಯಗಳನ್ನೂ ಹೊಂದಿರುತ್ತಾರೆ.

12220006a ಅತ್ರೈವೋದಾಹರಂತೀಮಮಿತಿಹಾಸಂ ಪುರಾತನಮ್।
12220006c ಬಲಿವಾಸವಸಂವಾದಂ ಪುನರೇವ ಯುಧಿಷ್ಠಿರ।।

ಯುಧಿಷ್ಠಿರ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಬಲಿ-ವಾಸವರ ಸಂವಾದವನ್ನು ಪುನಃ ಉದಾಹರಿಸುತ್ತಾರೆ.

12220007a ವೃತ್ತೇ ದೇವಾಸುರೇ ಯುದ್ಧೇ ದೈತ್ಯದಾನವಸಂಕ್ಷಯೇ।
12220007c ವಿಷ್ಣುಕ್ರಾಂತೇಷು ಲೋಕೇಷು ದೇವರಾಜೇ ಶತಕ್ರತೌ।।

ದೇವಾಸುರರ ಯುದ್ಧವು ನಡೆಯುತ್ತಿರಲು ವಿಷ್ಣುವು ತನ್ನ ವಿಕ್ರಮದಿಂದ ಲೋಕಗಳನ್ನು ಪಡೆದುಕೊಂಡು ದೈತ್ಯ-ದಾನವರ ನಾಶವಾಗಲು ಶತಕ್ರತುವು ದೇವರಾಜನಾದನು.

12220008a ಇಜ್ಯಮಾನೇಷು ದೇವೇಷು ಚಾತುರ್ವರ್ಣ್ಯೇ ವ್ಯವಸ್ಥಿತೇ।
12220008c ಸಮೃಧ್ಯಮಾನೇ ತ್ರೈಲೋಕ್ಯೇ ಪ್ರೀತಿಯುಕ್ತೇ ಸ್ವಯಂಭುವಿ।।

ದೇವತೆಗಳಿಗಾಗಿ ಯಜ್ಞಗಳು ನಡೆದವು. ಚಾತುರ್ವರ್ಣ್ಯಗಳು ವ್ಯವಸ್ಥಿತಗೊಂಡವು. ಮೂರು ಲೋಕಗಳು ಸಮೃದ್ಧಿಗೊಳ್ಳುತ್ತಿರಲು ಸ್ವಯಂಭುವು ಸಂತೋಷಗೊಂಡನು.

12220009a ರುದ್ರೈರ್ವಸುಭಿರಾದಿತ್ಯೈರಶ್ವಿಭ್ಯಾಮಪಿ ಚರ್ಷಿಭಿಃ।
12220009c ಗಂಧರ್ವೈರ್ಭುಜಗೇಂದ್ರೈಶ್ಚ ಸಿದ್ಧೈಶ್ಚಾನ್ಯೈರ್ವೃತಃ ಪ್ರಭುಃ।।
12220010a ಚತುರ್ದಂತಂ ಸುದಾಂತಂ ಚ ವಾರಣೇಂದ್ರಂ ಶ್ರಿಯಾ ವೃತಮ್।
12220010c ಆರುಹ್ಯೈರಾವತಂ ಶಕ್ರಸ್ತ್ರೈಲೋಕ್ಯಮನುಸಂಯಯೌ।।

ಅಗ ಪ್ರಭು ಶಕ್ರನು ನಾಲ್ಕು ದಂತಗಳಿದ್ದ, ಚೆನ್ನಾಗಿ ಪಳಗಿದ್ದ, ವಾರಣೇಂದ್ರ ಐರಾವತವನ್ನೇರಿ ರುದ್ರರು-ವಸುಗಳು-ಆದಿತ್ಯರು-ಅಶ್ವಿನಿಯರು-ಋಷಿಗಳು-ಗಂಧರ್ವರು-ಭುಜಗೇಂದ್ರರು-ಸಿದ್ಧರಿಂದ ಪರಿವೃತನಾಗಿ ಶ್ರೀಯಿಂದ ಆವೃತನಾಗಿ ಲೋಕಸಂಚಾರಕ್ಕೆ ಹೊರಟನು.

12220011a ಸ ಕದಾ ಚಿತ್ಸಮುದ್ರಾಂತೇ ಕಸ್ಮಿಂಶ್ಚಿದ್ಗಿರಿಗಹ್ವರೇ।
12220011c ಬಲಿಂ ವೈರೋಚನಿಂ ವಜ್ರೀ ದದರ್ಶೋಪಸಸರ್ಪ ಚ।।

ಒಮ್ಮೆ ವಜ್ರಿಯು ಸಮುದ್ರತೀರದ ಯಾವುದೋ ಒಂದು ಗಿರಿಯ ಗುಹೆಯೊಳಗೆ ವಿರೋಚನನ ಮಗ ಬಲಿಯನ್ನು ಕಂಡು ಅವನ ಬಳಿಸಾರಿದನು.

12220012a ತಮೈರಾವತಮೂರ್ಧಸ್ಥಂ ಪ್ರೇಕ್ಷ್ಯ ದೇವಗಣೈರ್ವೃತಮ್।
12220012c ಸುರೇಂದ್ರಮಿಂದ್ರಂ ದೈತ್ಯೇಂದ್ರೋ ನ ಶುಶೋಚ ನ ವಿವ್ಯಥೇ।।

ದೇವಗಣಗಳಿಂದ ಆವೃತನಾಗಿ ಐರಾವತನ ಮೇಲೇರಿದ್ದ ಸುರೇಂದ್ರ ಇಂದ್ರನನ್ನು ನೋಡಿ ದೈತ್ಯೇಂದ್ರ ಬಲಿಯು ಶೋಕಿಸಲೂ ಇಲ್ಲ ಮತ್ತು ವ್ಯಥಿತನೂ ಆಗಲಿಲ್ಲ.

12220013a ದೃಷ್ಟ್ವಾ ತಮವಿಕಾರಸ್ಥಂ ತಿಷ್ಠಂತಂ ನಿರ್ಭಯಂ ಬಲಿಮ್।
12220013c ಅಧಿರೂಢೋ ದ್ವಿಪಶ್ರೇಷ್ಠಮಿತ್ಯುವಾಚ ಶತಕ್ರತುಃ।।

ಬಲಿಯು ಅವಿಕಾರನಾಗಿಯೂ ನಿರ್ಭಯನಾಗಿಯೂ ನಿಂತಿರುವುದನ್ನು ನೋಡಿ ಗಜಶ್ರೇಷ್ಠನನ್ನು ಏರಿದ್ದ ಶತಕ್ರತುವು ಹೇಳಿದನು:

12220014a ದೈತ್ಯ ನ ವ್ಯಥಸೇ ಶೌರ್ಯಾದಥ ವಾ ವೃದ್ಧಸೇವಯಾ।
12220014c ತಪಸಾ ಭಾವಿತತ್ವಾದ್ವಾ ಸರ್ವಥೈತತ್ಸುದುಷ್ಕರಮ್।।

“ದೈತ್ಯ! ಶೌರ್ಯದಿಂದಲೋ ಅಥವಾ ವೃದ್ಧರ ಸೇವೆಯಿಂದಲೋ ಅಥವಾ ತಪಸ್ಸಿನಿಂದ ಪಡೆದುಕೊಂಡ ತತ್ತ್ವಜ್ಞಾನದಿಂದಲೋ – ಯಾವುದರ ಕಾರಣದಿಂದ ನೀನು ವ್ಯಥಿತನಾಗಿಲ್ಲ? ಸಾಧಾರಣ ಪುರುಷರಿಗೆ ಇಂಥಹ ಪರಿಸ್ಥಿತಿಯಲ್ಲಿಯೂ ವ್ಯಥಿತನಾಗದೇ ಇರುವುದು ಅತ್ಯಂತ ದುಷ್ಕರವು.

12220015a ಶತ್ರುಭಿರ್ವಶಮಾನೀತೋ ಹೀನಃ ಸ್ಥಾನಾದನುತ್ತಮಾತ್।
12220015c ವೈರೋಚನೇ ಕಿಮಾಶ್ರಿತ್ಯ ಶೋಚಿತವ್ಯೇ ನ ಶೋಚಸಿ।।

ವೈರೋಚನೀ! ನೀನು ಶತ್ರುಗಳ ವಶನಾಗಿಯೂ ಮತ್ತು ಅನುತ್ತಮ ಸ್ಥಾನದಿಂದ ಹೀನನಾಗಿಯೂ ಕೂಡ ಯಾವುದನ್ನು ಆಶ್ರಯಿಸಿ ಶೋಕಿಸಬೇಕಾಗಿದ್ದರೂ ಶೋಕಿಸುತ್ತಿಲ್ಲ?

12220016a ಶ್ರೈಷ್ಠ್ಯಂ ಪ್ರಾಪ್ಯ ಸ್ವಜಾತೀನಾಂ ಭುಕ್ತ್ವಾ ಭೋಗಾನನುತ್ತಮಾನ್।
12220016c ಹೃತಸ್ವಬಲರಾಜ್ಯಸ್ತ್ವಂ ಬ್ರೂಹಿ ಕಸ್ಮಾನ್ನ ಶೋಚಸಿ।।

ಸ್ವಜಾತಿಯವರಲ್ಲಿ ಶ್ರೇಷ್ಠತೆಯನ್ನು ಪಡೆದುಕೊಂಡು, ಅನುತ್ತಮ ಭೋಗಗಳನ್ನು ಭೋಗಿಸಿ, ಈಗ ನಿನ್ನ ಬಲ-ರಾಜ್ಯಗಳನ್ನು ಕಳೆದುಕೊಂಡು ಹೇಗೆ ತಾನೇ ಶೋಕಿಸುತ್ತಿಲ್ಲ? ಹೇಳು.

12220017a ಈಶ್ವರೋ ಹಿ ಪುರಾ ಭೂತ್ವಾ ಪಿತೃಪೈತಾಮಹೇ ಪದೇ।
12220017c ತತ್ತ್ವಮದ್ಯ ಹೃತಂ ದೃಷ್ಟ್ವಾ ಸಪತ್ನೈಃ ಕಿಂ ನ ಶೋಚಸಿ।।

ಹಿಂದೆ ಪಿತೃ-ಪಿತಾಮಹರ ಪದದಲ್ಲಿ ಈಶ್ವರನಾಗಿದ್ದ ನೀನು ಇಂದು ಅದನ್ನು ಶತ್ರುಗಳಿಗೆ ಕಳೆದುಕೊಂಡಿದ್ದುದನ್ನು ನೋಡಿಯೂ ನೀನು ಏಕೆ ಶೋಕಿಸುತ್ತಿಲ್ಲ?

12220018a ಬದ್ಧಶ್ಚ ವಾರುಣೈಃ ಪಾಶೈರ್ವಜ್ರೇಣ ಚ ಸಮಾಹತಃ।
12220018c ಹೃತದಾರೋ ಹೃತಧನೋ ಬ್ರೂಹಿ ಕಸ್ಮಾನ್ನ ಶೋಚಸಿ।।

ವರುಣನ ಪಾಶಗಳಲ್ಲಿ ಬಂಧಿತನಾಗಿದ್ದರೂ, ವಜ್ರದಿಂದ ಹೊಡೆಯಲ್ಪಟ್ಟಿದ್ದರೂ, ಪತ್ನಿಯರನ್ನು ಕಳೆದುಕೊಂಡು ಮತ್ತು ಧನವನ್ನು ಕಳೆದುಕೊಂಡು ನೀನು ಏಕೆ ಶೋಕಿಸುತ್ತಿಲ್ಲ? ಹೇಳು.

12220019a ಭ್ರಷ್ಟಶ್ರೀರ್ವಿಭವಭ್ರಷ್ಟೋ ಯನ್ನ ಶೋಚಸಿ ದುಷ್ಕರಮ್।
12220019c ತ್ರೈಲೋಕ್ಯರಾಜ್ಯನಾಶೇ ಹಿ ಕೋಽನ್ಯೋ ಜೀವಿತುಮುತ್ಸಹೇತ್।।

ಶ್ರೀಯಿಂದ ಭ್ರಷ್ಟನಾಗಿರುವೆ. ವೈಭವ ಭ್ರಷ್ಟನಾಗಿರುವೆ. ಆದರೂ ನೀನು ಶೋಕಿಸುತ್ತಿಲ್ಲ ಎನ್ನುವುದು ದುಷ್ಕರವೇ ಸರಿ. ತ್ರೈಲೋಕ್ಯರಾಜ್ಯವು ನಾಶಗೊಳ್ಳಲು ಅನ್ಯ ಯಾರು ತಾನೇ ಜೀವಿತವಾಗಿರಲು ಉತ್ಸಾಹಿತರಾಗಿರುತ್ತಾರೆ?”

12220020a ಏತಚ್ಚಾನ್ಯಚ್ಚ ಪರುಷಂ ಬ್ರುವಂತಂ ಪರಿಭೂಯ ತಮ್।
12220020c ಶ್ರುತ್ವಾ ಸುಖಮಸಂಭ್ರಾಂತೋ ಬಲಿರ್ವೈರೋಚನೋಽಬ್ರವೀತ್।।

ಇದು ಮತ್ತು ಅನ್ಯ ಕಠೋರ ಮಾತುಗಳನ್ನು ಹೇಳಿ ಇಂದ್ರನು ಅವನನ್ನು ತಿರಸ್ಕರಿಸಿದನು. ಅವನ ಮಾತುಗಳನ್ನು ಸುಖವಾಗಿ ಸ್ವಲ್ಪವೂ ಗಾಭರಿಗೊಳ್ಳದೇ ಕೇಳಿದ ವೈರೋಚನ ಬಲಿಯು ಹೇಳಿದನು:

12220021a ನಿಗೃಹೀತೇ ಮಯಿ ಭೃಶಂ ಶಕ್ರ ಕಿಂ ಕತ್ಥಿತೇನ ತೇ।
12220021c ವಜ್ರಮುದ್ಯಮ್ಯ ತಿಷ್ಠಂತಂ ಪಶ್ಯಾಮಿ ತ್ವಾಂ ಪುರಂದರ।।

“ಶಕ್ರ! ಪುರಂದರ! ಚೆನ್ನಾಗಿ ಬಂಧಿತನಾಗಿರುವ ನನ್ನೊಡನೆ ಏಕೆ ನೀನು ಈ ರೀತಿ ಕೊಚ್ಚಿಕೊಳ್ಳುತ್ತಿರುವೆ? ವಜ್ರವನ್ನು ಎತ್ತಿ ಹಿಡಿದು ನಿಂತಿರುವುದನ್ನು ನಾನು ನೋಡುತ್ತಿದ್ದೇನೆ.

12220022a ಅಶಕ್ತಃ ಪೂರ್ವಮಾಸೀಸ್ತ್ವಂ ಕಥಂ ಚಿಚ್ಚಕ್ತತಾಂ ಗತಃ।
12220022c ಕಸ್ತ್ವದನ್ಯ ಇಮಾ ವಾಚಃ ಸುಕ್ರೂರಾ ವಕ್ತುಮರ್ಹತಿ।।

ಮೊದಲು ನೀನು ಅಶಕ್ತನಾಗಿದ್ದೆ. ಈಗ ಹೇಗೆ ಶಕ್ತನಾಗಿಬಿಟ್ಟಿದ್ದೀಯೆ? ನೀನಲ್ಲದೇ ಬೇರೆ ಯಾರು ತಾನೇ ಇಂತಹ ಕ್ರೂರ ಮಾತುಗಳನ್ನಾಡಬಲ್ಲರು?

12220023a ಯಸ್ತು ಶತ್ರೋರ್ವಶಸ್ಥಸ್ಯ ಶಕ್ತೋಽಪಿ ಕುರುತೇ ದಯಾಮ್।
12220023c ಹಸ್ತಪ್ರಾಪ್ತಸ್ಯ ವೀರಸ್ಯ ತಂ ಚೈವ ಪುರುಷಂ ವಿದುಃ।।

ಶಕ್ತಿಶಾಲಿಯಾಗಿದ್ದರೂ ತನ್ನ ವಶದಲ್ಲಿರುವ ಮತ್ತು ತನ್ನ ಕೈಗೆ ಸಿಕ್ಕಿರುವ ವೀರ ಶತ್ರುವಿನ ಮೇಲೆ ದಯೆಯನ್ನು ತೋರಿಸುವವನು ಪುರುಷನೆಂದು ತಿಳಿಯುತ್ತಾರೆ.

12220024a ಅನಿಶ್ಚಯೋ ಹಿ ಯುದ್ಧೇಷು ದ್ವಯೋರ್ವಿವದಮಾನಯೋಃ।
12220024c ಏಕಃ ಪ್ರಾಪ್ನೋತಿ ವಿಜಯಮೇಕಶ್ಚೈವ ಪರಾಭವಮ್।।

ಇಬ್ಬರಲ್ಲಿ ವಿವಾದ ಅಥವಾ ಯುದ್ಧವು ಉಂಟಾದಾಗ ಯಾರಿಗೆ ಗೆಲುವಾಗುತ್ತದೆ ಎನ್ನುವುದು ಅನಿಶ್ಚಯವಾದುದು. ಒಬ್ಬನಿಗೆ ವಿಜಯವಾಗುತ್ತದೆ ಮತ್ತು ಇನ್ನೊಬ್ಬನು ಪರಾಭವನಾಗುತ್ತಾನೆ.

12220025a ಮಾ ಚ ತೇ ಭೂತ್ಸ್ವಭಾವೋಽಯಂ ಮಯಾ ದೈವತಪುಂಗವ3
12220025c ಈಶ್ವರಃ ಸರ್ವಭೂತಾನಾಂ ವಿಕ್ರಮೇಣ ಜಿತೋ ಬಲಾತ್।।

ದೈವತಪುಂಗವ! ಸ್ವತಃ ನೀನು ಸರ್ವಭೂತಗಳ ಈಶ್ವರನಾಗಿದ್ದ ನನ್ನನ್ನು ವಿಕ್ರಮ ಮತ್ತು ಬಲದಿಂದ ಗೆದ್ದಿದ್ದೀಯೆ ಎನ್ನುವ ಭಾವನೆಯು ನಿನಗುಂಟಾಗದಿರಲಿ!

12220026a ನೈತದಸ್ಮತ್ಕೃತಂ ಶಕ್ರ ನೈತಚ್ಚಕ್ರ ತ್ವಯಾ ಕೃತಮ್।
12220026c ಯತ್ತ್ವಮೇವಂಗತೋ ವಜ್ರಿನ್ಯದ್ವಾಪ್ಯೇವಂಗತಾ ವಯಮ್।।

ಶಕ್ರ! ವಜ್ರಧಾರೀ ಶಕ್ರ! ಇಂದು ನೀನೇನು ಈ ಪ್ರಕಾರ ರಾಜವೈಭವದಿಂದ ಮೆರೆಯುತ್ತಿರುವೆಯೋ ಅಥವಾ ನಾವು ಈ ದೀನ ದಶೆಯನ್ನು ಹೊಂದಿದ್ದೇವೋ ಇದರಲ್ಲಿ ನೀನು ಮಾಡಿದುದೇನೂ ಇಲ್ಲ ಮತ್ತು ನಾವು ಮಾಡಿದುದೇನೂ ಇಲ್ಲ.

12220027a ಅಹಮಾಸಂ ಯಥಾದ್ಯ ತ್ವಂ ಭವಿತಾ ತ್ವಂ ಯಥಾ ವಯಮ್।
12220027c ಮಾವಮಂಸ್ಥಾ ಮಯಾ ಕರ್ಮ ದುಷ್ಕೃತಂ ಕೃತಮಿತ್ಯುತ।।

ಈಗ ನೀನು ಹೇಗಿದ್ದೀಯೋ ಹಾಗೆ ನಾನೂ ಇರುತ್ತಿದ್ದೆ. ಮತ್ತು ಇಂದು ನಾವು ಯಾವ ದಶೆಯಲ್ಲಿರುವೆವೋ ಆ ದಶೆಯು ಮುಂದೆ ನಿನಗೂ ಉಂಟಾಗುತ್ತದೆ. ನೀನೇನೋ ಮಹಾ ದುಷ್ಕೃತ ಕರ್ಮವನ್ನೆಸಗಿದ್ದೀಯೆ ಎಂದು ಹೇಳಿಕೊಂಡು ನನ್ನನ್ನು ಅಪಮಾನಿಸಬೇಡ!

12220028a ಸುಖದುಃಖೇ ಹಿ ಪುರುಷಃ ಪರ್ಯಾಯೇಣಾಧಿಗಚ್ಚತಿ।
12220028c ಪರ್ಯಾಯೇಣಾಸಿ ಶಕ್ರತ್ವಂ ಪ್ರಾಪ್ತಃ ಶಕ್ರ ನ ಕರ್ಮಣಾ।।

ಶಕ್ರ! ಪ್ರತಿಯೊಬ್ಬ ಪುರುಷನೂ ಒಂದಾದ ಮೇಲೆ ಒಂದರಂತೆ ಸುಖ-ದುಃಖಗಳನ್ನು ಪಡೆಯುತ್ತಿರುತ್ತಾನೆ. ನೀನೂ ಕೂಡ ಕಾಲಪಲ್ಲಟದಿಂದ ಶಕ್ರತ್ವವನ್ನು ಪಡೆದಿದ್ದೀಯೆ. ನಿನ್ನ ಕರ್ಮಗಳಿಂದಲ್ಲ.

12220029a ಕಾಲಃ ಕಾಲೇ ನಯತಿ ಮಾಂ ತ್ವಾಂ ಚ ಕಾಲೋ ನಯತ್ಯಯಮ್।
12220029c ತೇನಾಹಂ ತ್ವಂ ಯಥಾ ನಾದ್ಯ ತ್ವಂ ಚಾಪಿ ನ ಯಥಾ ವಯಮ್।।

ಕಾಲವೇ ನನ್ನನ್ನು ಕೆಟ್ಟಸಮಯಕ್ಕೆ ಒಯ್ಯುತ್ತಿದೆ ಮತ್ತು ಕಾಲವೇ ನಿನ್ನನ್ನು ಒಳ್ಳೆಯ ಸಮಯಕ್ಕೆ ಒಯ್ಯುತ್ತಿದೆ. ಆದುದರಿಂದ ಇಂದು ನೀನು ಹೇಗಿದ್ದೀಯೋ ಹಾಗೆ ನಾನಿಲ್ಲ. ನಾವು ಹೇಗಿದ್ದೇವೋ ಹಾಗೆ ನೀನಿಲ್ಲ.

12220030a ನ ಮಾತೃಪಿತೃಶುಶ್ರೂಷಾ ನ ಚ ದೈವತಪೂಜನಮ್।
12220030c ನಾನ್ಯೋ ಗುಣಸಮಾಚಾರಃ ಪುರುಷಸ್ಯ ಸುಖಾವಹಃ।।

ಮಾತಾ-ಪಿತೃಗಳ ಶುಶ್ರೂಷೆ, ದೇವಪೂಜನ, ಮತ್ತು ಅನ್ಯ ಸದ್ಗುಣ ಸದಾಚಾರಗಳು ಪುರುಷನಿಗೆ ಸುಖವನ್ನೀಯುವುದಿಲ್ಲ4.

12220031a ನ ವಿದ್ಯಾ ನ ತಪೋ ದಾನಂ ನ ಮಿತ್ರಾಣಿ ನ ಬಾಂಧವಾಃ।
12220031c ಶಕ್ನುವಂತಿ ಪರಿತ್ರಾತುಂ ನರಂ ಕಾಲೇನ ಪೀಡಿತಮ್।।

ವಿದ್ಯೆಯಾಗಲೀ, ತಪಸ್ಸಾಗಲೀ, ದಾನವಾಗಲೀ, ಮಿತ್ರರಾಗಲೀ, ಬಾಂಧವರಾಗಲೀ ಕಾಲಪೀಡಿತ ನರನನ್ನು ರಕ್ಷಿಸಲು ಶಕ್ತವಾಗುವುದಿಲ್ಲ.

12220032a ನಾಗಾಮಿನಮನರ್ಥಂ ಹಿ ಪ್ರತಿಘಾತಶತೈರಪಿ।
12220032c ಶಕ್ನುವಂತಿ ಪ್ರತಿವ್ಯೋಢುಮೃತೇ ಬುದ್ಧಿಬಲಾನ್ನರಾಃ।।

ಬುದ್ಧಿಬಲದಿಂದಲ್ಲದೇ ಬೇರೆ ಯಾವುದರಿಂದಲೂ – ನೂರಾರು ಪ್ರತಿಘಾತಗಳಿಂದಲೂ – ಬರುವ ಅನರ್ಥವನ್ನು ನರರು ಸಹಿಸಲು ಶಕ್ಯರಾಗುವುದಿಲ್ಲ.

12220033a ಪರ್ಯಾಯೈರ್ಹನ್ಯಮಾನಾನಾಂ ಪರಿತ್ರಾತಾ ನ ವಿದ್ಯತೇ।
12220033c ಇದಂ ತು ದುಃಖಂ ಯಚ್ಚಕ್ರ ಕರ್ತಾಹಮಿತಿ ಮನ್ಯತೇ।।

ಸರದಿಗೆ ತಕ್ಕಂತೆ ನಾಶಹೊಂದುವವರನ್ನು ಯಾರೂ ರಕ್ಷಿಸಲಾರರು. ಶಕ್ರ! ಇದು ನೀನು ಮಾಡಿದ ಕೆಲಸ ಎಂದು ತಿಳಿಯುತ್ತಿರುವೆಯಲ್ಲಾ ಅದೇ ದುಃಖದ ವಿಷಯವು.

12220034a ಯದಿ ಕರ್ತಾ ಭವೇತ್ಕರ್ತಾ ನ ಕ್ರಿಯೇತ ಕದಾ ಚನ।
12220034c ಯಸ್ಮಾತ್ತು ಕ್ರಿಯತೇ ಕರ್ತಾ ತಸ್ಮಾತ್ಕರ್ತಾಪ್ಯನೀಶ್ವರಃ।।

ಒಂದು ವೇಳೆ ಕಾರ್ಯಮಾಡುವವನೇ ನಿಜವಾದ ಕರ್ತೃವಾಗಿದ್ದರೆ ಅವನನ್ನು ಸೃಷ್ಟಿಸುವವನು ಬೇರೆ ಯಾರೂ ಇರುತ್ತಿರಲಿಲ್ಲ. ಕರ್ತೃವಿಗೆ ಕರ್ತನೇ ಬೇರೆಯವನಾಗಿವುದರಿಂದ ಕರ್ತೃವು ಎಂದೂ ಈಶ್ವರನಾಗುವುದಿಲ್ಲ.5

12220035a ಕಾಲೇನ ತ್ವಾಹಮಜಯಂ ಕಾಲೇನಾಹಂ ಜಿತಸ್ತ್ವಯಾ।
12220035c ಗಂತಾ ಗತಿಮತಾಂ ಕಾಲಃ ಕಾಲಃ ಕಲಯತಿ ಪ್ರಜಾಃ।।

ಕಾಲಯೋಗದಿಂದಲೇ ನಾನು ನಿನ್ನನ್ನು ಗೆದ್ದಿದ್ದೆನು. ಕಾಲಯೋಗದಿಂದಲೇ ನೀನು ನನ್ನನ್ನು ಗೆದ್ದಿದ್ದೀಯೆ. ಪ್ರಾಣಿಗಳು ಮುನ್ನಡೆಯುವಾಗ ಕಾಲವೂ ಮುನ್ನಡೆಯುತ್ತಿರುತ್ತದೆ. ಪ್ರಾಣಿಗಳಿಗೆ ಮುನ್ನಡೆಯುವ ಶಕ್ತಿಯನ್ನು ಕಾಲವೇ ನೀಡುತ್ತದೆ. ಅದೇ ಕಾಲವೇ ಪ್ರಜೆಗಳ ಸಂಹಾರವನ್ನೂ ಮಾಡುತ್ತದೆ.

12220036a ಇಂದ್ರ ಪ್ರಾಕೃತಯಾ ಬುದ್ಧ್ಯಾ ಪ್ರಲಪನ್ನಾವಬುಧ್ಯಸೇ6
12220036c ಕೇ ಚಿತ್ತ್ವಾಂ ಬಹು ಮನ್ಯಂತೇ ಶ್ರೈಷ್ಠ್ಯಂ ಪ್ರಾಪ್ತಂ ಸ್ವಕರ್ಮಣಾ।।

ಇಂದ್ರ! ನೀನು ಸಾಧಾರಣಬುದ್ಧಿಯುಳ್ಳವನಾಗಿರುವುದರಿಂದ ತಿಳಿಯದೇ ಮಾತನಾಡುತ್ತಿರುವೆ! ನಿನ್ನ ಸ್ವಕರ್ಮಗಳಿಂದಲೇ ನೀನು ಶ್ರೇಷ್ಠತ್ವವನ್ನು ಪಡೆದಿರುವೆಯೆಂದು ಕೆಲವರು ನಿನ್ನನ್ನು ಬಹಳವಾಗಿ ಗೌರವಿಸುತ್ತಾರೆ.

12220037a ಕಥಮಸ್ಮದ್ವಿಧೋ ನಾಮ ಜಾನಽಲ್ಲೋಕಪ್ರವೃತ್ತಯಃ।
12220037c ಕಾಲೇನಾಭ್ಯಾಹತಃ ಶೋಚೇನ್ಮುಹ್ಯೇದ್ವಾಪ್ಯರ್ಥಸಂಭ್ರಮೇ।।

ಲೋಕವು ಹೇಗೆ ನಡೆಯುತ್ತದೆ ಎನ್ನುವುದನ್ನು ಚೆನ್ನಾಗಿ ತಿಳಿದಿರುವ ನನ್ನಂಥವನು ಕಾಲಪೀಡಿತನಾದಾಗ ಏಕೆ ಶೋಕಿಸುತ್ತಾನೆ? ಅಥವಾ ಅರ್ಥಸಂಭ್ರಮದಿಂದ ಏಕೆ ಮೋಹಿತನಾಗುತ್ತಾನೆ?

12220038a ನಿತ್ಯಂ ಕಾಲಪರೀತಸ್ಯ ಮಮ ವಾ ಮದ್ವಿಧಸ್ಯ ವಾ।
12220038c ಬುದ್ಧಿರ್ವ್ಯಸನಮಾಸಾದ್ಯ ಭಿನ್ನಾ ನೌರಿವ ಸೀದತಿ।।

ನನಗಾಗಲೀ ಅಥವಾ ನನ್ನಂಥವರಿಗಾಗಲೀ ಕೆಟ್ಟ ಕಾಲವು ಬಂದೊದಗಿದಾಗ ನಿತ್ಯವೂ ಬುದ್ಧಿಯು ವ್ಯಸನವನ್ನು ಹೊಂದಿ ಒಡೆದು ಹೋದ ನೌಕೆಯಂತೆ ಕುಸಿಯುತ್ತದೆ.

12220039a ಅಹಂ ಚ ತ್ವಂ ಚ ಯೇ ಚಾನ್ಯೇ ಭವಿಷ್ಯಂತಿ ಸುರಾಧಿಪಾಃ।
12220039c ತೇ ಸರ್ವೇ ಶಕ್ರ ಯಾಸ್ಯಂತಿ ಮಾರ್ಗಮಿಂದ್ರಶತೈರ್ಗತಮ್।।

ನಾನೇ ಆಗಲಿ, ನೀನೇ ಆಗಲಿ, ಅಥವಾ ಬೇರೆ ಯಾರೇ ಆಗಲಿ ಸುರಾಧಿಪರಾಗಬಹುದು. ಶಕ್ರ! ಆದರೆ ಅವರೆಲ್ಲರೂ ಹಿಂದೆ ಆಗಿಹೋಗಿರುವ ನೂರಾರು ಇಂದ್ರರ ಮಾರ್ಗದಲ್ಲಿಯೇ ಹೊರಟು ಹೋಗುತ್ತಾರೆ.

12220040a ತ್ವಾಮಪ್ಯೇವಂ ಸುದುರ್ಧರ್ಷಂ ಜ್ವಲಂತಂ ಪರಯಾ ಶ್ರಿಯಾ।
12220040c ಕಾಲೇ ಪರಿಣತೇ ಕಾಲಃ ಕಾಲಯಿಷ್ಯತಿ ಮಾಮಿವ।।

ನೀನೂ ಕೂಡ ಇಂದು ದುರ್ಧರ್ಷನಾಗಿರುವೆ. ಪರಮ ಶ್ರೀಯಿಂದ ಬೆಳಗುತ್ತಿದ್ದೀಯೆ. ಕಾಲವು ಪಕ್ವವಾದಾಗ ಕಾಲಪುರುಷನು ನನ್ನನ್ನು ಹೇಗೋ ಹಾಗೆ ನಿನ್ನನ್ನೂ ವಿನಾಶಗೊಳಿಸುತ್ತಾನೆ.

12220041a ಬಹೂನೀಂದ್ರಸಹಸ್ರಾಣಿ ದೈತೇಯಾನಾಂ7 ಯುಗೇ ಯುಗೇ।
12220041c ಅಭ್ಯತೀತಾನಿ ಕಾಲೇನ ಕಾಲೋ ಹಿ ದುರತಿಕ್ರಮಃ।।

ಯುಗ ಯುಗದಲ್ಲಿ ದೈತ್ಯರ ಅನೇಕ ಸಹಸ್ರಾರು ಇಂದ್ರರು ಆಗಿ ಹೋಗಿದ್ದಾರೆ. ಅವರೆಲ್ಲರೂ ಕಾಲವಶರಾಗಿ ಹೋಗಿದ್ದಾರೆ. ಕಾಲವನ್ನು ಅತಿಕ್ರಮಿಸಲು ಸಾಧ್ಯವಿಲ್ಲ.

12220042a ಇದಂ ತು ಲಬ್ಧ್ವಾ ತ್ವಂ ಸ್ಥಾನಮಾತ್ಮಾನಂ ಬಹು ಮನ್ಯಸೇ।
12220042c ಸರ್ವಭೂತಭವಂ ದೇವಂ ಬ್ರಹ್ಮಾಣಮಿವ ಶಾಶ್ವತಮ್।।

ಇಂತಹ ಅಶಾಶ್ವತ ಸ್ಥಾನವನ್ನು ಪಡೆದುಕೊಂಡು ನೀನು ಸರ್ವಭೂತಗಳ ಸೃಷ್ಟಿಕರ್ತ ಶಾಶ್ವತ ದೇವ ಬ್ರಹ್ಮನಿಗೆ ಸಮಾನ ಅತಿ ದೊಡ್ಡವನೆಂದು ತಿಳಿದುಕೊಂಡಿರುವೆ.

12220043a ನ ಚೇದಮಚಲಂ ಸ್ಥಾನಮನಂತಂ ವಾಪಿ ಕಸ್ಯ ಚಿತ್।
12220043c ತ್ವಂ ತು ಬಾಲಿಶಯಾ ಬುದ್ಧ್ಯಾ ಮಮೇದಮಿತಿ ಮನ್ಯಸೇ।।

ಆದರೆ ಈ ಸ್ಥಾನವಾದರೋ ಯಾರಿಗೂ ಅಚಲವಾಗಿಯೂ ಅನಂತವಾಗಿಯೂ ಇರುವುದಿಲ್ಲ. ನೀನು ನಿನ್ನ ಬಾಲಿಶ ಬುದ್ಧಿಯಿಂದ ಇದು ನಿನ್ನದೇ ಆಗಿರುತ್ತದೆ ಎಂದು ತಿಳಿದುಕೊಂಡಿರುವೆ!

12220044a ಅವಿಶ್ವಾಸ್ಯೇ ವಿಶ್ವಸಿಷಿ ಮನ್ಯಸೇ ಚಾಧ್ರುವಂ ಧ್ರುವಮ್। 812220044c ಮಮೇಯಮಿತಿ ಮೋಹಾತ್ತ್ವಂ ರಾಜಶ್ರಿಯಮಭೀಪ್ಸಸಿ।।

ಯಾವುದರ ಮೇಲೆ ವಿಶ್ವಾಸವನ್ನಿಡಬಾರದೋ ಅದರ ಮೇಲೆ ನೀನು ವಿಶ್ವಾಸವನ್ನಿಡುತ್ತಿದ್ದೀಯೆ. ಯಾವುದು ಅನಿತ್ಯವೋ ಅದನ್ನು ನಿತ್ಯವೆಂದು ತಿಳಿದಿದ್ದೀಯೆ. ಮೋಹವಶನಾಗಿ ನೀನು “ಈ ರಾಜಶ್ರೀಯು ನನ್ನದು” ಎಂದು ಅದನ್ನು ಬಯಸುತ್ತಿರುವೆ!

12220045a ನೇಯಂ ತವ ನ ಚಾಸ್ಮಾಕಂ ನ ಚಾನ್ಯೇಷಾಂ ಸ್ಥಿರಾ ಮತಾ।
12220045c ಅತಿಕ್ರಮ್ಯ ಬಹೂನನ್ಯಾಂಸ್ತ್ವಯಿ ತಾವದಿಯಂ ಸ್ಥಿತಾ।।

ಆದರೆ ಈ ಶ್ರೀಯು ನಿನ್ನಲ್ಲಿಯಾಗಲೀ, ನನ್ನಲ್ಲಿಯಾಗಲೀ, ಬೇರೆ ಯಾರಲ್ಲಿಯೇ ಆಗಲೀ ಸ್ಥಿರವಾಗಿ ನಿಲ್ಲುವವಳಲ್ಲ. ಅನೇಕರನ್ನು ದಾಟಿ ಇವಳು ಈಗ ನಿನ್ನ ಬಳಿ ಬಂದಿದ್ದಾಳೆ.

12220046a ಕಂ ಚಿತ್ಕಾಲಮಿಯಂ ಸ್ಥಿತ್ವಾ ತ್ವಯಿ ವಾಸವ ಚಂಚಲಾ।
12220046c ಗೌರ್ನಿಪಾನಮಿವೋತ್ಸೃಜ್ಯ ಪುನರನ್ಯಂ ಗಮಿಷ್ಯತಿ।।

ವಾಸವ! ಸ್ವಲ್ಪ ಕಾಲ ನಿನ್ನೊಡನಿದ್ದು ಈ ಚಂಚಲೆಯು, ಗೋವು ನೀರುಕುಡಿದ ನಂತರ ಜಲಾಶಯವನ್ನು ಬಿಟ್ಟು ಹೊರಟು ಹೋಗುವಂತೆ, ಪುನಃ ಅನ್ಯರಲ್ಲಿಗೆ ಹೋಗುತ್ತಾಳೆ.

12220047a ರಾಜಲೋಕಾ ಹ್ಯತಿಕ್ರಾಂತಾ ಯಾನ್ನ ಸಂಖ್ಯಾತುಮುತ್ಸಹೇ।
12220047c ತ್ವತ್ತೋ ಬಹುತರಾಶ್ಚಾನ್ಯೇ ಭವಿಷ್ಯಂತಿ ಪುರಂದರ।।

ಪುರಂದರ! ಇದೂವರೆಗೆ ಇವಳು ಲೋಕದ ಎಷ್ಟು ರಾಜರನ್ನು ಅತಿಕ್ರಮಿಸಿದ್ದಾಳೆ ಎನ್ನುವುದನ್ನು ನಾನು ಎಣಿಸಲಾರೆ! ನಿನ್ನ ನಂತರವೂ ಅನ್ಯ ಅನೇಕರು ಇಂದ್ರರಾಗುತ್ತಾರೆ.

12220048a ಸವೃಕ್ಷೌಷಧಿರತ್ನೇಯಂ ಸಸರಿತ್ಪರ್ವತಾಕರಾ।
12220048c ತಾನಿದಾನೀಂ ನ ಪಶ್ಯಾಮಿ ಯೈರ್ಭುಕ್ತೇಯಂ ಪುರಾ ಮಹೀ।।

ವೃಕ್ಷ, ಔಷಧಿ, ರತ್ನ, ಜೀವ ಜಂತು, ವನ ಮತ್ತು ಗಣಿಗಳಿಂದ ಕೂಡಿರುವ ಈ ಪೃಥ್ವಿಯನ್ನು ಇದಕ್ಕೂ ಮೊದಲು ಎಷ್ಟೋ ರಾಜರು ಭೋಗಿಸಿದ್ದಾರೆ. ಆದರೆ ಅವರನ್ನು ಇಂದು ನಾನು ಕಾಣುತ್ತಿಲ್ಲ.

12220049a ಪೃಥುರೈಲೋ ಮಯೋ ಭೌಮೋ ನರಕಃ ಶಂಬರಸ್ತಥಾ।
12220049c ಅಶ್ವಗ್ರೀವಃ ಪುಲೋಮಾ ಚ ಸ್ವರ್ಭಾನುರಮಿತಧ್ವಜಃ।।
12220050a ಪ್ರಹ್ರಾದೋ ನಮುಚಿರ್ದಕ್ಷೋ ವಿಪ್ರಚಿತ್ತಿರ್ವಿರೋಚನಃ।
12220050c ಹ್ರೀನಿಷೇಧಃ ಸುಹೋತ್ರಶ್ಚ ಭೂರಿಹಾ ಪುಷ್ಪವಾನ್ವೃಷಃ।।
12220051a ಸತ್ಯೇಷುರೃಷಭೋ ರಾಹುಃ ಕಪಿಲಾಶ್ವೋ ವಿರೂಪಕಃ।
12220051c ಬಾಣಃ ಕಾರ್ತಸ್ವರೋ ವಹ್ನಿರ್ವಿಶ್ವದಂಷ್ಟ್ರೋಽಥ ನೈರೃತಃ।।
12220052a ರಿತ್ಥಾಹುತ್ಥೌ ವೀರತಾಮ್ರೌ ವರಾಹಾಶ್ವೋ ರುಚಿಃ ಪ್ರಭುಃ9
12220052c ವಿಶ್ವಜಿತ್ಪ್ರತಿಶೌರಿಶ್ಚ ವೃಷಾಂಡೋ ವಿಷ್ಕರೋ ಮಧುಃ।।
12220053a ಹಿರಣ್ಯಕಶಿಪುಶ್ಚೈವ ಕೈಟಭಶ್ಚೈವ ದಾನವಃ।
12220053c ದೈತ್ಯಾಶ್ಚ ಕಾಲಖಂಜಾಶ್ಚ ಸರ್ವೇ ತೇ ನೈರೃತೈಃ ಸಹ।।
12220054a ಏತೇ ಚಾನ್ಯೇ ಚ ಬಹವಃ ಪೂರ್ವೇ ಪೂರ್ವತರಾಶ್ಚ ಯೇ।
12220054c ದೈತ್ಯೇಂದ್ರಾ ದಾನವೇಂದ್ರಾಶ್ಚ ಯಾಂಶ್ಚಾನ್ಯಾನನುಶುಶ್ರುಮ।।
12220055a ಬಹವಃ ಪೂರ್ವದೈತ್ಯೇಂದ್ರಾಃ ಸಂತ್ಯಜ್ಯ ಪೃಥಿವೀಂ ಗತಾಃ।
12220055c ಕಾಲೇನಾಭ್ಯಾಹತಾಃ ಸರ್ವೇ ಕಾಲೋ ಹಿ ಬಲವತ್ತರಃ।।

ಪೃಥು, ಐಲ, ಮಯ, ಭೌಮ, ನರಕ, ಶಂಬರ, ಅಶ್ವಗ್ರೀವ, ಪುಲೋಮ, ಸ್ವರ್ಭಾನು, ಅಮಿತಧ್ವಜ, ಪ್ರಹ್ರಾದ, ನಮುಚಿ, ದಕ್ಷ, ವಿಪ್ರಚಿತ್ತಿ, ವಿರೋಚನ, ಹ್ರೀನಿಷೇಧ, ಸುಹೋತ್ರ, ಭೂರಿಹಾ, ಪುಷ್ಪವಾನ್, ವೃಷ, ಸತ್ಯೇಷು, ಋಷಭ, ರಾಹು, ಕಪಿಲಾಶ್ವ, ವಿರೂಪಕ, ಬಾಣ, ಕಾರ್ತಸ್ವರ, ವಹ್ನಿ, ವಿಶ್ವದಂಷ್ಟ್ರ, ನೈರೃತ, ರಿತ್ಥಾಹುತ್ಥ, ವೀರತಾಮ್ರ, ವರಾಹಾಸ್ವ, ರುಚಿ, ಪ್ರಭು, ವಿಶ್ವಜಿತ್, ಪ್ರತಿಶೌರಿ, ವೃಷಾಂಡ, ವಿಷ್ಕರ, ಮಧು, ಹಿರಣ್ಯಕಶಿಪು, ಕೈಟಭ ಮೊದಲಾದ ದಾನವ, ದೈತ್ಯ, ಕಾಲಖಂಜರೆಲ್ಲರೂ ನೈರೃತ್ತರೊಂದಿಗೆ ಹಾಗೂ ಹೆಸರುಗಳನ್ನು ತಿಳಿಯದಿರುವ ಇನ್ನೂ ಅನೇಕ ಅನ್ಯ ಪ್ರಾಚೀನ ದೈತ್ಯೇಂದ್ರ ದಾನವೇಂದ್ರರು – ಹೀಗೆ ಅನೇಕ ಹಿಂದಿನ ದೈತ್ಯೇಂದ್ರರು ಕಾಲಪೀಡಿತರಾಗಿ ಪೃಥ್ವಿಯನ್ನು ತೊರೆದು ಹೋಗಿದ್ದಾರೆ. ಏಕೆಂದರೆ ಕಾಲವೇ ಬಲಶಾಲಿಯು.

12220056a ಸರ್ವೈಃ ಕ್ರತುಶತೈರಿಷ್ಟಂ ನ ತ್ವಮೇಕಃ ಶತಕ್ರತುಃ।
12220056c ಸರ್ವೇ ಧರ್ಮಪರಾಶ್ಚಾಸನ್ಸರ್ವೇ ಸತತಸತ್ರಿಣಃ।।

ನೀನೊಬ್ಬನೇ ಶತಕ್ರತುವಲ್ಲ. ಇವರೆಲ್ಲರೂ ನೂರು ನೂರು ಕ್ರತುಗಳನ್ನು ಪೂರೈಸಿದ್ದರು. ಎಲ್ಲರೂ ಧರ್ಮಪರಾಯಣರಾಗಿದ್ದರು. ಎಲ್ಲರೂ ಸತತವೂ ಸತ್ರಗಳನ್ನು ನಡೆಸುತ್ತಿದ್ದರು.

12220057a ಅಂತರಿಕ್ಷಚರಾಃ ಸರ್ವೇ ಸರ್ವೇಽಭಿಮುಖಯೋಧಿನಃ।
12220057c ಸರ್ವೇ ಸಂಹನನೋಪೇತಾಃ ಸರ್ವೇ ಪರಿಘಬಾಹವಃ।।

ಎಲ್ಲರೂ ಅಂತರಿಕ್ಷಚರರಾಗಿದ್ದರು. ಸರ್ವರೂ ಶತ್ರುಗಳನ್ನು ಎದುರಿಸುವ ಯೋಧರಾಗಿದ್ದರು. ಎಲ್ಲರೂ ಸದೃಢಕಾಯರಾಗಿದ್ದರು. ಎಲ್ಲರೂ ಪರಿಘಗಳಂತಹ ಬಾಹುಗಳನ್ನು ಹೊಂದಿದ್ದರು.

12220058a ಸರ್ವೇ ಮಾಯಾಶತಧರಾಃ ಸರ್ವೇ ತೇ ಕಾಮಚಾರಿಣಃ।
12220058c ಸರ್ವೇ ಸಮರಮಾಸಾದ್ಯ ನ ಶ್ರೂಯಂತೇ ಪರಾಜಿತಾಃ।।

ಎಲ್ಲರೂ ನೂರಾರು ಮಾಯೆಗಳನ್ನು ಹೊಂದಿದ್ದರು. ಅವರೆಲ್ಲರೂ ಬೇಕಾದಲ್ಲಿ ಹೋಗಬಲ್ಲವರಾಗಿದ್ದರು. ಅವರಲ್ಲಿ ಯಾರೂ ಸಮರವನ್ನು ಸೇರಿ ಪರಾಜಿತರಾದರೆಂದು ಕೇಳಿಬರುತ್ತಿರಲಿಲ್ಲ.

12220059a ಸರ್ವೇ ಸತ್ಯವ್ರತಪರಾಃ ಸರ್ವೇ ಕಾಮವಿಹಾರಿಣಃ।
12220059c ಸರ್ವೇ ವೇದವ್ರತಪರಾಃ ಸರ್ವೇ ಚಾಸನ್ ಬಹುಶ್ರುತಾಃ।।

ಎಲ್ಲರೂ ಸತ್ಯವ್ರತ ಪರಾಯಣರಾಗಿದ್ದರು. ಎಲ್ಲರೂ ಬೇಕಾದಲ್ಲಿ ವಿಹರಿಸುತ್ತಿದ್ದರು. ಸರ್ವರೂ ವೇದವ್ರತಪರಾಯಣರಾಗಿದ್ದರು. ಎಲ್ಲರೂ ವಿದ್ಯಾವಂತರಾಗಿದ್ದರು.

12220060a ಸರ್ವೇ ಸಂಹತಮೈಶ್ವರ್ಯಮೀಶ್ವರಾಃ ಪ್ರತಿಪೇದಿರೇ।
12220060c ನ ಚೈಶ್ವರ್ಯಮದಸ್ತೇಷಾಂ ಭೂತಪೂರ್ವೋ ಮಹಾತ್ಮನಾಮ್।।

ಎಲ್ಲರೂ ರಾಜೇಶ್ವರರಾಗಿ ಸಂಪೂರ್ಣ ಐಶ್ವರ್ಯವನ್ನು ಪಡೆದುಕೊಂಡಿದ್ದರು. ಆದರೂ ಆ ಮಹಾತ್ಮರಿಗೆ ಮೊದಲೆಂದೂ ಐಶ್ವರಮದವಿರಲಿಲ್ಲ.

12220061a ಸರ್ವೇ ಯಥಾರ್ಥದಾತಾರಃ ಸರ್ವೇ ವಿಗತಮತ್ಸರಾಃ।
12220061c ಸರ್ವೇ ಸರ್ವೇಷು ಭೂತೇಷು ಯಥಾವತ್ ಪ್ರತಿಪೇದಿರೇ।।

ಎಲ್ಲರೂ ಯಥಾರ್ಥರಿಗೆ ದಾನಮಾಡುತ್ತಿದ್ದರು. ಎಲ್ಲರೂ ಮಾತ್ಸರ್ಯವನ್ನು ಕಳೆದುಕೊಂಡಿದ್ದರು. ಅವರೆಲ್ಲರೂ ಸರ್ವಭೂತಗಳಲ್ಲಿಯೂ ಯಥಾವತ್ತಾಗಿ ನಡೆದುಕೊಳ್ಳುತ್ತಿದ್ದರು.

12220062a ಸರ್ವೇ ದಾಕ್ಷಾಯಣೀಪುತ್ರಾಃ ಪ್ರಾಜಾಪತ್ಯಾ ಮಹಾಬಲಾಃ।
12220062c ಜ್ವಲಂತಃ ಪ್ರತಪಂತಶ್ಚ ಕಾಲೇನ ಪ್ರತಿಸಂಹೃತಾಃ।।

ಆ ಎಲ್ಲ ಮಹಾಬಲರೂ ದಾಕ್ಷಾಯಣಿಯ ಮತ್ತು ಪ್ರಜಾಪತಿಯ ಪುತ್ರರಾಗಿದ್ದರು10. ತೇಜಸ್ಸು ಮತ್ತು ಪ್ರತಾಪಗಳಿಂದ ಬೆಳಗುತ್ತಿದ್ದರೂ ಕಾಲನು ಅವರೆಲ್ಲರನ್ನೂ ಸಂಹರಿಸಿಬಿಟ್ಟನು.

12220063a ತ್ವಂ ಚೈವೇಮಾಂ ಯದಾ ಭುಕ್ತ್ವಾ ಪೃಥಿವೀಂ ತ್ಯಕ್ಷ್ಯಸೇ ಪುನಃ।
12220063c ನ ಶಕ್ಷ್ಯಸಿ ತದಾ ಶಕ್ರ ನಿಯಂತುಂ ಶೋಕಮಾತ್ಮನಃ।।

ಶಕ್ರ! ಯಾವಾಗ ನೀನು ಈ ಪೃಥ್ವಿಯನ್ನು ಭೋಗಿಸಿ ಪುನಃ ಪರಿತ್ಯಜಿಸುತ್ತೀಯೋ ಆಗ ನಿನ್ನ ಶೋಕವನ್ನು ನಿಯಂತ್ರಿಸಿಕೊಳ್ಳಲು ಶಕ್ಯನಾಗುವುದಿಲ್ಲ.

12220064a ಮುಂಚೇಚ್ಚಾಂ ಕಾಮಭೋಗೇಷು ಮುಂಚೇಮಂ ಶ್ರೀಭವಂ ಮದಮ್।
12220064c ಏವಂ ಸ್ವರಾಜ್ಯನಾಶೇ ತ್ವಂ ಶೋಕಂ ಸಂಪ್ರಸಹಿಷ್ಯಸಿ।।

ಆದುದರಿಂದ ಈಗಲಿಂದಲೇ ಕಾಮಭೋಗಗಳನ್ನು ತ್ಯಜಿಸು. ಈ ಐಶ್ವರ್ಯಮದವನ್ನು ಬಿಡು. ಹೀಗೆ ಮಾಡುವುದರಿಂದ ನೀನು ಸ್ವರಾಜ್ಯವು ನಾಶವಾದಾಗ ಶೋಕವನ್ನು ಸಹಿಸಿಕೊಳ್ಳಬಲ್ಲೆ.

12220065a ಶೋಕಕಾಲೇ ಶುಚೋ ಮಾ ತ್ವಂ ಹರ್ಷಕಾಲೇ ಚ ಮಾ ಹೃಷಃ।
12220065c ಅತೀತಾನಾಗತೇ ಹಿತ್ವಾ ಪ್ರತ್ಯುತ್ಪನ್ನೇನ ವರ್ತಯ।।

ಶೋಕಕಾಲದಲ್ಲಿ ಶೋಕಿಸಬೇಡ. ಹರ್ಷಕಾಲದಲ್ಲಿ ಹರ್ಷಿತನಾಗಬೇಡ. ಅತೀತ ಮತ್ತು ಅನಾಗತ ವಿಷಯಗಳನ್ನು ತೊರೆದು ಈಗ ದೊರಕಿರುವುದರೊಂದಿಗೆ ಜೀವಿಸು.

12220066a ಮಾಂ ಚೇದಭ್ಯಾಗತಃ ಕಾಲಃ ಸದಾಯುಕ್ತಮತಂದ್ರಿತಮ್।
12220066c ಕ್ಷಮಸ್ವ ನಚಿರಾದಿಂದ್ರ ತ್ವಾಮಪ್ಯುಪಗಮಿಷ್ಯತಿ।।

ಸದಾ ಸಾವಧಾನ ಮತ್ತು ಆಲಸ್ಯರಹಿತನಾಗಿರುವ ನನ್ನ ಬಳಿಯೂ ಕಾಲವು ಬಂದಿದೆಯೆಂದರೆ ಸ್ವಲ್ಪವೇ ಸಮಯದಲ್ಲಿ ಅದು ನಿನ್ನ ಬಳಿಯೂ ಬರುತ್ತದೆ. ನಿಜವನ್ನು ಹೇಳಿದುದಕ್ಕೆ ನನ್ನನ್ನು ಕ್ಷಮಿಸು.

12220067a ತ್ರಾಸಯನ್ನಿವ ದೇವೇಂದ್ರ ವಾಗ್ಭಿಸ್ತಕ್ಷಸಿ ಮಾಮಿಹ।
12220067c ಸಂಯತೇ ಮಯಿ ನೂನಂ ತ್ವಮಾತ್ಮಾನಂ ಬಹು ಮನ್ಯಸೇ।।

ದೇವೇಂದ್ರ! ಬೆದರಿಕೆಯ ಮಾತುಗಳಿಂದ ನೀನು ನನ್ನನ್ನು ಆಕ್ರಮಣಿಸುತ್ತಿದ್ದೀಯೆ. ನಾನು ಸುಮ್ಮನಿದ್ದೇನೆಂದು ನಿನ್ನನ್ನು ನೀನು ಇನ್ನೂ ಹೆಚ್ಚಿನವನೆಂದು ತಿಳಿದುಕೊಂಡಿರುವೆ.

12220068a ಕಾಲಃ ಪ್ರಥಮಮಾಯಾನ್ಮಾಂ ಪಶ್ಚಾತ್ತ್ವಾಮನುಧಾವತಿ।
12220068c ತೇನ ಗರ್ಜಸಿ ದೇವೇಂದ್ರ ಪೂರ್ವಂ ಕಾಲಹತೇ ಮಯಿ।।

ದೇವೇಂದ್ರ! ಕಾಲವು ಮೊದಲು ನನ್ನನ್ನು ಆಕ್ರಮಣಿಸಿ ನಂತರ ನಿನ್ನ ಹಿಂದೆ ಓಡಿ ಬರುತ್ತಿದೆ. ಕಾಲನಿಂದ ಮೊದಲು ನಾನು ಹತನಾಗಿರುವುದರಿಂದ ನೀನು ನನ್ನ ಮೇಲೆ ಗರ್ಜಿಸುತ್ತಿದ್ದೀಯೆ.

12220069a ಕೋ ಹಿ ಸ್ಥಾತುಮಲಂ ಲೋಕೇ ಕ್ರುದ್ಧಸ್ಯ ಮಮ ಸಂಯುಗೇ।
12220069c ಕಾಲಸ್ತು ಬಲವಾನ್ ಪ್ರಾಪ್ತಸ್ತೇನ ತಿಷ್ಠಸಿ ವಾಸವ।।

ವಾಸವ! ಯುದ್ಧದಲ್ಲಿ ಕ್ರುದ್ಧನಾಗಿರುವ ನನ್ನ ಎದಿರು ಲೋಕದ ಯಾರುತಾನೇ ನಿಲ್ಲಲು ಸಮರ್ಥರಾಗಿದ್ದಾರೆ? ಬಲವಾನ್ ಕಾಲನು ನನ್ನನ್ನು ಆಕ್ರಮಣಿಸಿರುವುದರಿಂದಲೇ ನೀನು ನನ್ನ ಎದಿರು ನಿಂತಿದ್ದೀಯೆ.

12220070a ಯತ್ತದ್ವರ್ಷಸಹಸ್ರಾಂತಂ ಪೂರ್ಣಂ ಭವಿತುಮರ್ಹತಿ।
12220070c ಯಥಾ ಮೇ ಸರ್ವಗಾತ್ರಾಣಿ ನಸ್ವಸ್ಥಾನಿ ಹತೌಜಸಃ।।

ಸಹಸ್ರವರ್ಷಗಳು ಪೂರ್ಣವಾಗುವ ವರೆಗೆ ನೀನು ಇಂದ್ರಪದವಿಯಲ್ಲಿ ಇರುತ್ತೀಯೆ. ಆ ಸಮಯದಲ್ಲಿ ನನ್ನ ಸರ್ವ ಶರೀರಗಳೂ ಓಜಸ್ಸನ್ನು ಕಳೆದುಕೊಂಡು ಅಸ್ವಸ್ಥವಾಗಿರುತ್ತವೆ.

12220071a ಅಹಮೈಂದ್ರಚ್ಚ್ಯುತಃ ಸ್ಥಾನಾತ್ತ್ವಮಿಂದ್ರಃ ಪ್ರಕೃತೋ ದಿವಿ।
12220071c ಸುಚಿತ್ರೇ ಜೀವಲೋಕೇಽಸ್ಮಿನ್ನುಪಾಸ್ಯಃ ಕಾಲಪರ್ಯಯಾತ್।।

ನಾನು ಇಂದ್ರಸ್ಥಾನದಿಂದ ಚ್ಯುತನಾಗಿರುತ್ತೇನೆ ಮತ್ತು ನೀನು ದಿವಿಯಲ್ಲಿ ಇಂದ್ರನಾಗಿರುತ್ತೀಯೆ. ಕಾಲದ ಪಲ್ಲಟನೆಯಿಂದಾಗಿ ಈಗ ನೀನು ಈ ವಿಚಿತ್ರ ಜೀವಲೋಕದಲ್ಲಿ ಉಪಾಸ್ಯನಾಗಿರುವೆ.

12220072a ಕಿಂ ಹಿ ಕೃತ್ವಾ ತ್ವಮಿಂದ್ರೋಽದ್ಯ ಕಿಂ ಹಿ ಕೃತ್ವಾ ಚ್ಯುತಾ ವಯಮ್।
12220072c ಕಾಲಃ ಕರ್ತಾ ವಿಕರ್ತಾ ಚ ಸರ್ವಮನ್ಯದಕಾರಣಮ್।।

ಏನನ್ನು ಮಾಡಿ ನೀನು ಇಂದು ಇಂದ್ರನಾಗಿದ್ದೀಯೆ ಮತ್ತು ಏನನ್ನು ಮಾಡಿ ನಾನು ಇಂದ್ರಪದವಿಯಿಂದ ಚ್ಯುತನಾಗಿದ್ದೇನೆ? ಕಾಲವೇ ಕರ್ತ ಮತ್ತು ವಿಕರ್ತನು. ಬೇರೆ ಯಾವುದೂ ಇದಕ್ಕೆ ಕಾರಣವಲ್ಲ.

12220073a ನಾಶಂ ವಿನಾಶಮೈಶ್ವರ್ಯಂ ಸುಖದುಃಖೇ ಭವಾಭವೌ।
12220073c ವಿದ್ವಾನ್ಪ್ರಾಪ್ಯೈವಮತ್ಯರ್ಥಂ ನ ಪ್ರಹೃಷ್ಯೇನ್ನ ಚ ವ್ಯಥೇತ್।।

ನಾಶ, ವಿನಾಶ, ಐಶ್ವರ್ಯ ಸುಖ-ದುಃಖ, ವೃದ್ಧಿ-ಪರಾಭವ – ಇವುಗಳನ್ನು ಪಡೆದು ವಿದ್ವಾಂಸರು ಅತ್ಯಂತ ಹರ್ಷಿತರಾಗುವುದಿಲ್ಲ ಮತ್ತು ವ್ಯಥಿತರೂ ಆಗುವುದಿಲ್ಲ.

12220074a ತ್ವಮೇವ ಹೀಂದ್ರ ವೇತ್ಥಾಸ್ಮಾನ್ವೇದಾಹಂ ತ್ವಾಂ ಚ ವಾಸವ।
12220074c ವಿಕತ್ಥಸೇ ಮಾಂ ಕಿಂ ಬದ್ಧಂ ಕಾಲೇನ ನಿರಪತ್ರಪ।।

ಇಂದ್ರ! ನೀನು ನನ್ನನ್ನು ತಿಳಿದಿದ್ದೀಯೆ. ವಾಸವ! ನಾನೂ ನಿನ್ನನ್ನು ತಿಳಿದಿದ್ದೇನೆ. ಕಾಲನಿಂದ ಬದ್ಧನಾದ ನೀನು ಏಕೆ ನನ್ನ ಎದಿರು ಆತ್ಮಶ್ಲಾಘನೆಯನ್ನು ಮಾಡಿಕೊಳ್ಳುತ್ತಿದ್ದೀಯೆ?

12220075a ತ್ವಮೇವ ಹಿ ಪುರಾ ವೇತ್ಥ ಯತ್ತದಾ ಪೌರುಷಂ ಮಮ।
12220075c ಸಮರೇಷು ಚ ವಿಕ್ರಾಂತಂ ಪರ್ಯಾಪ್ತಂ ತನ್ನಿದರ್ಶನಮ್।।

ಹಿಂದೆ ನನ್ನ ಪೌರುಷವೇನಿತ್ತೆಂದು ನಿನಗೆ ತಿಳಿದಿದೆ. ಸಮರದಲ್ಲಿ ನನ್ನ ವಿಕ್ರಾಂತವೇ ಅದಕ್ಕೆ ಪರ್ಯಾಪ್ತ ನಿದರ್ಶನವು.

12220076a ಆದಿತ್ಯಾಶ್ಚೈವ ರುದ್ರಾಶ್ಚ ಸಾಧ್ಯಾಶ್ಚ ವಸುಭಿಃ ಸಹ।
12220076c ಮಯಾ ವಿನಿರ್ಜಿತಾಃ ಸರ್ವೇ ಮರುತಶ್ಚ ಶಚೀಪತೇ।।

ಶಚೀಪತೇ! ಆದಿತ್ಯರು, ರುದ್ರರು, ವಸುಗಳೊಂದಿಗೆ ಸಾಧ್ಯರು, ಮರುತರು ಎಲ್ಲರೂ ನನಗೆ ಸೋತಿದ್ದರು.

12220077a ತ್ವಮೇವ ಶಕ್ರ ಜಾನಾಸಿ ದೇವಾಸುರಸಮಾಗಮೇ।
12220077c ಸಮೇತಾ ವಿಬುಧಾ ಭಗ್ನಾಸ್ತರಸಾ ಸಮರೇ ಮಯಾ।।

ಶಕ್ರ! ದೇವಾಸುರಸಮಾಗಮದಲ್ಲಿ ಸೇರಿದ್ದ ದೇವತೆಗಳೆಲ್ಲರೂ ನನ್ನಿಂದ ಭಗ್ನರಾಗಿ ಸಮರದಿಂದ ಓಡಿಹೋಗಿದ್ದುದು ನಿನಗೆ ತಿಳಿದೇ ಇದೆ.

12220078a ಪರ್ವತಾಶ್ಚಾಸಕೃತ್ ಕ್ಷಿಪ್ತಾಃ ಸವನಾಃ ಸವನೌಕಸಃ।
12220078c ಸಟಂಕಶಿಖರಾ ಘೋರಾಃ ಸಮರೇ ಮೂರ್ಧ್ನಿ ತೇ ಮಯಾ।।

ನಾನು ವನಗಳು ಮತ್ತು ವನೌಕಸರೊಂದಿಗೆ ಪರ್ವತಗಳನ್ನು ಕಿತ್ತು ಎಸೆಯುತ್ತಿದ್ದೆ. ಸಮರದಲ್ಲಿ ಕಲ್ಲಿನ ಘೋರ ಶಿಖರಗಳನ್ನು ನಿನ್ನ ತಲೆಯ ಮೇಲೆ ಎಸೆದಿದ್ದೆ.

12220079a ಕಿಂ ನು ಶಕ್ಯಂ ಮಯಾ ಕರ್ತುಂ ಯತ್ಕಾಲೋ ದುರತಿಕ್ರಮಃ।
12220079c ನ ಹಿ ತ್ವಾಂ ನೋತ್ಸಹೇ ಹಂತುಂ ಸವಜ್ರಮಪಿ ಮುಷ್ಟಿನಾ।।

ಕಾಲವು ಅತ್ಯಂತ ದುರತಿಕ್ರಮವಾಗಿರುವಾಗ ಈಗ ನಾನು ಏನು ಮಾಡಲು ಶಕ್ಯ? ವಜ್ರದಿಂದ ಹೊಡೆಯಲು ಉದ್ಯುಕ್ತನಾಗಿರುವ ನಿನ್ನನ್ನು ನನ್ನ ಮುಷ್ಟಿಯಿಂದಲೂ ಹೊಡೆಯಲು ಶಕ್ಯನಾಗಿಲ್ಲ.

12220080a ನ ತು ವಿಕ್ರಮಕಾಲೋಽಯಂ ಕ್ಷಮಾಕಾಲೋಽಯಮಾಗತಃ।
12220080c ತೇನ ತ್ವಾ ಮರ್ಷಯೇ ಶಕ್ರ ದುರ್ಮರ್ಷಣತರಸ್ತ್ವಯಾ।।

ಇದು ವಿಕ್ರಮವನ್ನು ಪ್ರದರ್ಶಿಸುವ ಕಾಲವಲ್ಲ. ಕ್ಷಮೆಯ ಕಾಲವು ಬಂದಿದೆ. ಶುಕ್ರ! ಈ ಕಾರಣದಿಂದಲೇ ನಾನು ನಿನ್ನನ್ನು ಸಹಿಸಿಕೊಳ್ಳುತ್ತಿದ್ದೇನೆ. ಈಗಲೂ ನಾನು ನಿನಗೆ ಅತ್ಯಂತ ದುಃಸ್ಸಹನೇ ಆಗಿದ್ದೇನೆ.

12220081a ತ್ವಂ ಮಾ ಪರಿಣತೇ ಕಾಲೇ ಪರೀತಂ ಕಾಲವಹ್ನಿನಾ।
12220081c ನಿಯತಂ ಕಾಲಪಾಶೇನ ಬದ್ಧಂ ಶಕ್ರ ವಿಕತ್ಥಸೇ।।

ಕಾಲವು ಪರಿಣತವಾಗಿರುವುದರಿಂದ ನಾನು ಕಾಲಾಗ್ನಿಯಲ್ಲಿ ಬಿದ್ದಿದ್ದೇನೆ ಮತ್ತು ಸದಾ ಕಾಲಪಾಶದಿಂದ ಬದ್ಧನಾಗಿದ್ದೇನೆ. ಶಕ್ರ! ಆದುದರಿಂದಲೇ ನೀನು ಹೀಗೆ ಆತ್ಮಶ್ಲಾಘನೆಯನ್ನು ಮಾಡಿಕೊಳ್ಳುತ್ತಿರುವೆ.

12220082a ಅಯಂ ಸ ಪುರುಷಃ ಶ್ಯಾಮೋ ಲೋಕಸ್ಯ ದುರತಿಕ್ರಮಃ।
12220082c ಬದ್ಧ್ವಾ ತಿಷ್ಠತಿ ಮಾಂ ರೌದ್ರಃ ಪಶುಂ ರಶನಯಾ ಯಥಾ।।

ಯಜ್ಞಪಶುವನ್ನು ಹಗ್ಗದಿಂದ ಕಟ್ಟುವಂತೆ ಲೋಕದ ಜನರಿಂದ ಅತಿಕ್ರಮಿಸಲು ಅಸಾಧ್ಯನಾದ ಶ್ಯಾಮಲವರ್ಣದ ರೌದ್ರ ಕಾಲಪುರುಷನು ನನ್ನನ್ನು ಕಟ್ಟಿಹಾಕಿ ನಿಂತಿದ್ದಾನೆ.

12220083a ಲಾಭಾಲಾಭೌ ಸುಖಂ ದುಃಖಂ ಕಾಮಕ್ರೋಧೌ ಭವಾಭವೌ।
12220083c ವಧೋ ಬಂಧಃ ಪ್ರಮೋಕ್ಷಶ್ಚ ಸರ್ವಂ ಕಾಲೇನ ಲಭ್ಯತೇ।।

ಲಾಭ-ನಷ್ಟಗಳು, ಸುಖ-ದುಃಖಗಳು, ಕಾಮ-ಕ್ರೋಧಗಳು, ಏಳ್ಗೆ-ಅಧೋಗತಿಗಳು, ವಧೆ-ಬಂಧನ-ಬಿಡುಗಡೆ – ಇವೆಲ್ಲವೂ ಕಾಲನಿಂದಲೇ ದೊರೆಯುತ್ತವೆ.

12220084a ನಾಹಂ ಕರ್ತಾ ನ ಕರ್ತಾ ತ್ವಂ ಕರ್ತಾ ಯಸ್ತು ಸದಾ ಪ್ರಭುಃ।
12220084c ಸೋಽಯಂ ಪಚತಿ ಕಾಲೋ ಮಾಂ ವೃಕ್ಷೇ ಫಲಮಿವಾಗತಮ್।।

ನಾನೂ ಕರ್ತನಲ್ಲ. ನೀನೂ ಕರ್ತನಲ್ಲ. ಸದಾ ಆ ಪ್ರಭುವೊಬ್ಬನೇ ಕರ್ತನು. ಅದೇ ಕಾಲರೂಪಿ ಕರ್ತನು ಮರದಲ್ಲಿರುವ ಹಣ್ಣಿನಂತೆ ನನ್ನನ್ನು ಪಕ್ವಗೊಳಿಸುತ್ತಿದ್ದಾನೆ.

12220085a ಯಾನ್ಯೇವ ಪುರುಷಃ ಕುರ್ವನ್ಸುಖೈಃ ಕಾಲೇನ ಯುಜ್ಯತೇ।
12220085c ಪುನಸ್ತಾನ್ಯೇವ ಕುರ್ವಾಣೋ ದುಃಖೈಃ ಕಾಲೇನ ಯುಜ್ಯತೇ।।

ಯಾವ ಕರ್ಮಗಳನ್ನು ಮಾಡಿ ಪುರುಷನು ಕಾಲವಶಾತ್ ಸುಖವನ್ನು ಹೊಂದುತ್ತಾನೋ ಪುನಃ ಅದೇ ಕರ್ಮಗಳನ್ನು ಮಾಡಿ ಕಾಲವಶಾತ್ ದುಃಖಗಳನ್ನು ಅನುಭವಿಸುತ್ತಾನೆ11.

12220086a ನ ಚ ಕಾಲೇನ ಕಾಲಜ್ಞಃ ಸ್ಪೃಷ್ಟಃ ಶೋಚಿತುಮರ್ಹತಿ।
12220086c ತೇನ ಶಕ್ರ ನ ಶೋಚಾಮಿ ನಾಸ್ತಿ ಶೋಕೇ ಸಹಾಯತಾ।।

ಕಾಲವನ್ನು ತಿಳಿದಿರುವವನು ಕಾಲನಿಂದ ಹೊಡೆದುರುಳಿಸಲ್ಪಟ್ಟಾಗ ಶೋಕಿಸುವುದಿಲ್ಲ. ಶಕ್ರ! ಆದುದರಿಂದ ನಾನು ಶೋಕಿಸುತ್ತಿಲ್ಲ. ಶೋಕದಿಂದ ಯಾವ ಸಹಾಯವೂ ದೊರೆಯುವುದಿಲ್ಲ.

12220087a ಯದಾ ಹಿ ಶೋಚತಾಂ ಶೋಕೋ ವ್ಯಸನಂ ನಾಪಕರ್ಷತಿ।
12220087c ಸಾಮರ್ಥ್ಯಂ ಶೋಚತೋ ನಾಸ್ತಿ ನಾದ್ಯ ಶೋಚಾಮ್ಯಹಂ ತತಃ।।

ಶೋಕಿಸುವುದರಿಂದ ಶೋಕ-ವ್ಯಸನಗಳು ದೂರವಾಗುವುದಿಲ್ಲ. ಶೋಕಿಸುವವನ ಸಾಮರ್ಥ್ಯವು ಕ್ಷೀಣಿಸುತ್ತದೆ. ಆದುದರಿಂದ ಇಂದು ನಾನು ಶೋಕಿಸುತ್ತಿಲ್ಲ.”

12220088a ಏವಮುಕ್ತಃ ಸಹಸ್ರಾಕ್ಷೋ ಭಗವಾನ್ ಪಾಕಶಾಸನಃ।
12220088c ಪ್ರತಿಸಂಹೃತ್ಯ ಸಂರಂಭಮಿತ್ಯುವಾಚ ಶತಕ್ರತುಃ।।

ಅವನು ಹೀಗೆ ಹೇಳಲು ಭಗವಾನ್ ಸಹಸ್ರಾಕ್ಷ ಪಾಕಶಾಸನ ಶತಕ್ರತುವು ತನ್ನ ಕೋಪವನ್ನು ಹಿಡಿದಿಟ್ಟುಕೊಂಡು ಹೀಗೆ ಹೇಳಿದನು:

12220089a ಸವಜ್ರಮುದ್ಯತಂ ಬಾಹುಂ ದೃಷ್ಟ್ವಾ ಪಾಶಾಂಶ್ಚ ವಾರುಣಾನ್।
12220089c ಕಸ್ಯೇಹ ನ ವ್ಯಥೇದ್ಬುದ್ಧಿರ್ಮೃತ್ಯೋರಪಿ ಜಿಘಾಂಸತಃ।।

“ವಜ್ರವನ್ನು ಎತ್ತಿಹಿಡಿದ ನನ್ನ ಈ ಬಾಹುವನ್ನೂ, ವರುಣನ ಪಾಶಗಳನ್ನೂ ನೋಡಿದ ಯಾರ ಬುದ್ಧಿಯು ತಾನೇ – ಅವನು ಪ್ರಾಣಗಳನ್ನು ಅಪಹರಿಸಲು ಬಂದಿರುವ ಮೃತ್ಯುವೇ ಆಗಿದ್ದರೂ – ವ್ಯಥಿತಗೊಳ್ಳುವುದಿಲ್ಲ?

12220090a ಸಾ ತೇ ನ ವ್ಯಥತೇ ಬುದ್ಧಿರಚಲಾ ತತ್ತ್ವದರ್ಶಿನೀ।
12220090c ಬ್ರುವನ್ನ ವ್ಯಥಸೇ ಸ ತ್ವಂ ವಾಕ್ಯಂ ಸತ್ಯಪರಾಕ್ರಮ12।।

ಸತ್ಯಪರಾಕ್ರಮಿ! ತತ್ತ್ವದರ್ಶಿನಿಯಾದ ನಿನ್ನ ಬುದ್ಧಿಯು ಅಚಲವಾಗಿರುವುದರಿಂದ ನೀನು ವ್ಯಥಿತನಾಗುತ್ತಿಲ್ಲ. ಧೈರ್ಯದ ಕಾರಣದಿಂದ ನೀನು ವ್ಯಥಿತನಾಗುತ್ತಿಲ್ಲ ಎನ್ನುವುದು ಸ್ಪಷ್ಟವಾಗಿದೆ.

12220091a ಹೋ ಹಿ ವಿಶ್ವಾಸಮರ್ಥೇಷು ಶರೀರೇ ವಾ ಶರೀರಭೃತ್।
12220091c ಕರ್ತುಮುತ್ಸಹತೇ ಲೋಕೇ ದೃಷ್ಟ್ವಾ ಸಂಪ್ರಸ್ಥಿತಂ ಜಗತ್।।

ಜಗತ್ತು ವಿನಾಶದ ಕಡೆ ಹೋಗುತ್ತಿರುವುದನ್ನು ನೋಡಿ ಲೋಕದಲ್ಲಿ ಶರೀರಧಾರಿಯಾದ ಯಾರು ತಾನೇ ಶರೀರ ಅಥವಾ ಧನ-ವೈಭವಗಳಲ್ಲಿ ವಿಶ್ವಾಸವನ್ನಿಡ ಬಯಸುತ್ತಾನೆ?

12220092a ಅಹಮಪ್ಯೇವಮೇವೈನಂ ಲೋಕಂ ಜಾನಾಮ್ಯಶಾಶ್ವತಮ್।
12220092c ಕಾಲಾಗ್ನಾವಾಹಿತಂ ಘೋರೇ ಗುಹ್ಯೇ ಸತತಗೇಽಕ್ಷರೇ।।

ಸತತವೂ ಗೌಪ್ಯನಾಗಿ ಚಲಿಸುತ್ತಿರುವ ಘೋರ ಅಕ್ಷರ ಕಾಲಾಗ್ನಿಯಲ್ಲಿ ಬಿದ್ದಿರುವ ಈ ಲೋಕವು ಅಶಾಶ್ವತವೆಂದು ನಾನೂ ಕೂಡ ತಿಳಿದಿದ್ದೇನೆ.

12220093a ನ ಚಾತ್ರ ಪರಿಹಾರೋಽಸ್ತಿ ಕಾಲಸ್ಪೃಷ್ಟಸ್ಯ ಕಸ್ಯ ಚಿತ್।
12220093c ಸೂಕ್ಷ್ಮಾಣಾಂ ಮಹತಾಂ ಚೈವ ಭೂತಾನಾಂ ಪರಿಪಚ್ಯತಾಮ್।।

ಕಾಲನಿಗೆ ಸಿಲುಕಿದ ಯಾರಿಗೂ ಇಲ್ಲಿ ಪರಿಹಾರವಿಲ್ಲ. ಕಾಲವು ಅತಿ ಸೂಕ್ಷ್ಮವಾದ ಮತ್ತು ಅತಿ ಮಹತ್ತರವಾದ ಭೂತಗಳನ್ನೂ ಬೇಯಿಸುತ್ತಿರುತ್ತದೆ.

12220094a ಅನೀಶಸ್ಯಾಪ್ರಮತ್ತಸ್ಯ ಭೂತಾನಿ ಪಚತಃ ಸದಾ।
12220094c ಅನಿವೃತ್ತಸ್ಯ ಕಾಲಸ್ಯ ಕ್ಷಯಂ ಪ್ರಾಪ್ತೋ ನ ಮುಚ್ಯತೇ।।

ತನಗೆ ಬೇರೆ ಯಾರನ್ನೂ ಈಶ್ವರನನ್ನಾಗಿ ಹೊಂದಿರದ, ಅಪ್ರಮತ್ತನಾಗಿ ಭೂತಗಳನ್ನು ಸದಾ ಬೇಯಿಸುತ್ತಿರುವ, ಹಿಂದಿರುಗಿ ಬಾರದ ಕಾಲದ ವಶದಲ್ಲಿ ಸಿಲುಕಿದವರಿಗೆ ಅದರಿಂದ ಮುಕ್ತಿಯೆನ್ನುವುದೇ ಇಲ್ಲ.

12220095a ಅಪ್ರಮತ್ತಃ ಪ್ರಮತ್ತೇಷು ಕಾಲೋ ಜಾಗರ್ತಿ ದೇಹಿಷು।
12220095c ಪ್ರಯತ್ನೇನಾಪ್ಯತಿಕ್ರಾಂತೋ ದೃಷ್ಟಪೂರ್ವೋ ನ ಕೇನ ಚಿತ್।।

ಅಪ್ರಮತ್ತ ಕಾಲವು ಪ್ರಮತ್ತ ದೇಹಿಗಳಲ್ಲಿ ಜಾಗೃತವಾಗಿರುತ್ತದೆ. ಎಷ್ಟೇ ಪ್ರಯತ್ನಿಸಿದರೂ ಕಾಲನನ್ನು ಅತಿಕ್ರಮಿಸಿದವವನನ್ನು ಹಿಂದೆ ಯಾರೂ ಕಂಡಿಲ್ಲ.

12220096a ಪುರಾಣಃ ಶಾಶ್ವತೋ ಧರ್ಮಃ ಸರ್ವಪ್ರಾಣಭೃತಾಂ ಸಮಃ।
12220096c ಕಾಲೋ ನ ಪರಿಹಾರ್ಯಶ್ಚ ನ ಚಾಸ್ಯಾಸ್ತಿ ವ್ಯತಿಕ್ರಮಃ।।

ಪುರಾಣನೂ, ಶಾಶ್ವತನೂ, ಸರ್ವಪ್ರಾಣಿಗಳಲ್ಲಿ ಸಮನಾಗಿರುವ ಕಾಲ ಧರ್ಮನನ್ನು ಯಾರೂ ದೂರೀಕರಿಸಲಾರರು. ಮೀರಲಾರರು.

12220097a ಅಹೋರಾತ್ರಾಂಶ್ಚ ಮಾಸಾಂಶ್ಚ ಕ್ಷಣಾನ್ಕಾಷ್ಠಾಃ ಕಲಾ ಲವಾನ್।
12220097c ಸಂಪಿಂಡಯತಿ ನಃ ಕಾಲೋ ವೃದ್ಧಿಂ ವಾರ್ಧುಷಿಕೋ ಯಥಾ।।

ಬಡ್ಡಿ ತೆಗೆದುಕೊಂಡು ಸಾಲಕೊಡುವವನು ಬಡ್ಡಿಯನ್ನು ಕೂಡಿಸುತ್ತಾ ಸಾಲತೆಗೆದುಕೊಂಡವನಿಗೆ ಹೇಗೆ ಕಷ್ಟಕೊಡುತ್ತಾನೋ ಹಾಗೆ ಕಾಲನು ಹಗಲು-ರಾತ್ರಿ, ಮಾಸ, ಕ್ಷಣ, ಕಾಷ್ಠಾ, ಕಲಾ ಮತ್ತು ಲವಗಳನ್ನು13 ಲೆಕ್ಕಹಾಕಿ ಪ್ರಾಣಿಗಳನ್ನು ಪೀಡಿಸುತ್ತಾನೆ.

12220098a ಇದಮದ್ಯ ಕರಿಷ್ಯಾಮಿ ಶ್ವಃ ಕರ್ತಾಸ್ಮೀತಿ ವಾದಿನಮ್।
12220098c ಕಾಲೋ ಹರತಿ ಸಂಪ್ರಾಪ್ತೋ ನದೀವೇಗ ಇವೋಡುಪಮ್।।

“ಇಂದು ಇದನ್ನು ಮಾಡುತ್ತೇನೆ; ನಾಳೆ ಇದನ್ನು ಮಾಡುತ್ತೇನೆ” ಎಂದು ಮಾತನಾಡುವವರನ್ನು ವೇಗವಾಗಿ ಹರಿಯುವ ನದಿಯು ದಡದಲ್ಲಿರುವುದನ್ನು ಕೊಚ್ಚಿಕೊಂಡು ಹೋಗುವಂತೆ ಕಾಲವು ಅಪಹರಿಸಿಕೊಂಡು ಹೋಗುತ್ತದೆ.

12220099a ಇದಾನೀಂ ತಾವದೇವಾಸೌ ಮಯಾ ದೃಷ್ಟಃ ಕಥಂ ಮೃತಃ।
12220099c ಇತಿ ಕಾಲೇನ ಹ್ರಿಯತಾಂ ಪ್ರಲಾಪಃ ಶ್ರೂಯತೇ ನೃಣಾಮ್।।

“ಇದಾಗಲೇ ಇವನನ್ನು ನೋಡಿದ್ದೆನು; ಈಗ ಅವನು ಹೇಗೆ ಮೃತನಾಗಿ ಬಿಟ್ಟನು?” ಎಂದು ಕಾಲದಿಂದ ಅಪಹರಿಸಲ್ಪಟ್ಟವರ ಕುರಿತು ನರರು ಗೋಳಿಡುವುದು ಕೇಳಿಬರುತ್ತದೆ.

12220100a ನಶ್ಯಂತ್ಯರ್ಥಾಸ್ತಥಾ ಭೋಗಾಃ ಸ್ಥಾನಮೈಶ್ವರ್ಯಮೇವ ಚ। 1412220100c ಅನಿತ್ಯಮಧ್ರುವಂ ಸರ್ವಂ ವ್ಯವಸಾಯೋ ಹಿ ದುಷ್ಕರಃ।
12220100e ಉಚ್ಚ್ರಾಯಾ ವಿನಿಪಾತಾಂತಾ ಭಾವೋಽಭಾವಸ್ಥ ಏವ ಚ।।

ಸಂಪತ್ತು, ಭೋಗಗಳು, ಸ್ಥಾನ-ಐಶ್ವರ್ಯಗಳೂ ಕೂಡ ನಶಿಸಿಹೋಗುತ್ತವೆ. ಸರ್ವವೂ ಅನಿತ್ಯವು ಮತ್ತು ಅಸ್ಥಿರವು. ಉಚ್ಛ್ರಾಯಸ್ಥಿತಿಯು ಅಧಃಪತನದಲ್ಲಿ ಕೊನೆಗೊಳ್ಳುತ್ತದೆ. ಹುಟ್ಟು ಸಾವಿನಲ್ಲಿ ಕೊನೆಗೊಳ್ಳುತ್ತದೆ. ಹೀಗಿರುವಾಗ ವ್ಯವಹರಿಸುವುದೇ ಕಷ್ಟಕರವು.

12220101a ಸಾ ತೇ ನ ವ್ಯಥತೇ ಬುದ್ಧಿರಚಲಾ ತತ್ತ್ವದರ್ಶಿನೀ।
12220101c ಅಹಮಾಸಂ ಪುರಾ ಚೇತಿ ಮನಸಾಪಿ ನ ಬುಧ್ಯಸೇ।।

ನಿನ್ನ ತತ್ತ್ವದರ್ಶಿನೀ ಬುದ್ಧಿಯು ಅಚಲವಾಗಿರುವುದರಿಂದ ನೀನು ವ್ಯಥಿಸುತ್ತಿಲ್ಲ. “ಹಿಂದೆ ನಾನೂ ಕೂಡ ಹೀಗೆ ಇದ್ದೆ” ಎಂದು ಮನಸ್ಸಿನಲ್ಲಿಯೂ ನೀನು ಸ್ಮರಿಸಿಕೊಳ್ಳುತ್ತಿಲ್ಲ.

12220102a ಕಾಲೇನಾಕ್ರಮ್ಯ ಲೋಕೇಽಸ್ಮಿನ್ ಪಚ್ಯಮಾನೇ ಬಲೀಯಸಾ।
12220102c ಅಜ್ಯೇಷ್ಠಮಕನಿಷ್ಠಂ ಚ ಕ್ಷಿಪ್ಯಮಾಣೋ ನ ಬುಧ್ಯಸೇ।।

ಬಲಿಷ್ಠ ಕಾಲವು ಈ ಲೋಕವನ್ನೇ ಆಕ್ರಮಿಸಿ ಜ್ಯೇಷ್ಠ-ಕನಿಷ್ಠ ಎಂಬ ಭೇದವಿಲ್ಲದೇ ತನ್ನೊಳಗೆ ಹಾಕಿಕೊಂಡು ಬೇಯಿಸುತ್ತಿದ್ದರೂ – ಕಾಲದ ಆಘಾತಕ್ಕೊಳಗಾದವನು ಇದನ್ನು ತಿಳಿಯುವುದಿಲ್ಲ.

12220103a ಈರ್ಷ್ಯಾಭಿಮಾನಲೋಭೇಷು ಕಾಮಕ್ರೋಧಭಯೇಷು ಚ।
12220103c ಸ್ಪೃಹಾಮೋಹಾಭಿಮಾನೇಷು ಲೋಕಃ ಸಕ್ತೋ ವಿಮುಹ್ಯತಿ।।

ಈರ್ಷ್ಯೆ, ಅಭಿಮಾನ, ಲೋಭ, ಕಾಮ, ಕ್ರೋಧ, ಭಯ, ಆಸೆ, ಮೋಹ ಮತ್ತು ಅಭಿಮಾನಗಳಲ್ಲಿ ಆಸಕ್ತವಾದ ಲೋಕವು ಭ್ರಾಂತವಾಗಿದೆ.

12220104a ಭವಾಂಸ್ತು ಭಾವತತ್ತ್ವಜ್ಞೋ ವಿದ್ವಾನ್ ಜ್ಞಾನತಪೋನ್ವಿತಃ।
12220104c ಕಾಲಂ ಪಶ್ಯತಿ ಸುವ್ಯಕ್ತಂ ಪಾಣಾವಾಮಲಕಂ ಯಥಾ।।

ನೀನಾದರೋ ಬಾವತತ್ತ್ವಜ್ಞನಾಗಿದ್ದೀಯೆ. ವಿದ್ವಾಂಸನೂ ಜ್ಞಾನತಪೋನ್ವಿತನೂ ಆಗಿದ್ದೀಯೆ. ಅಂಗೈಯಲ್ಲಿರುವ ನೆಲ್ಲಿಕಾಯಿಯಂತೆ ಕಾಲವನ್ನು ನೀನು ಅತ್ಯಂತ ಸ್ಪಷ್ಟವಾಗಿ ಕಾಣುತ್ತಿರುವೆ.

12220105a ಕಾಲಚಾರಿತ್ರತತ್ತ್ವಜ್ಞಃ ಸರ್ವಶಾಸ್ತ್ರವಿಶಾರದಃ।
12220105c ವೈರೋಚನೇ ಕೃತಾತ್ಮಾಸಿ ಸ್ಪೃಹಣೀಯೋ ವಿಜಾನತಾಮ್।।

ಕಾಲದ ನಡುಗೆಯನ್ನು ನೀನು ತತ್ತ್ವತಃ ತಿಳಿದುಕೊಂಡಿದ್ದೀಯೆ. ಸರ್ವಶಾಸ್ತ್ರವಿಶಾರದನಾಗಿದ್ದೀಯೆ. ವೈರೋಚನ! ನೀನು ಕೃತಾತ್ಮನು. ಮತ್ತು ಜ್ಞಾನಿಗಳ ಮೆಚ್ಚುಗೆಗೆ ಪಾತ್ರನಾಗಿರುವೆ.

12220106a ಸರ್ವಲೋಕೋ ಹ್ಯಯಂ ಮನ್ಯೇ ಬುದ್ಧ್ಯಾ ಪರಿಗತಸ್ತ್ವಯಾ।
12220106c ವಿಹರನ್ಸರ್ವತೋಮುಕ್ತೋ ನ ಕ್ವ ಚಿತ್ಪರಿಷಜ್ಜಸೇ।।

ನೀನು ನಿನ್ನ ಬುದ್ಧಿಯಿಂದ ಸರ್ವಲೋಕಗಳ ತತ್ತ್ವಗಳನ್ನೂ ತಿಳಿದಿರುವೆಯೆಂದು ನಾನು ಭಾವಿಸುತ್ತೇನೆ. ಎಲ್ಲದರಿಂದ ಮುಕ್ತನಾಗಿ ವಿಹರಿಸುವ ನೀನು ಯಾವುದರಲ್ಲಿಯೂ ಆಸಕ್ತನಾಗಿಲ್ಲ.

12220107a ರಜಶ್ಚ ಹಿ ತಮಶ್ಚ ತ್ವಾ ಸ್ಪೃಶತೋ ನ ಜಿತೇಂದ್ರಿಯಮ್।
12220107c ನಿಷ್ಪ್ರೀತಿಂ ನಷ್ಟಸಂತಾಪಂ ತ್ವಮಾತ್ಮಾನಮುಪಾಸಸೇ।।

ಜಿತೇಂದ್ರಿಯನಾದ ನಿನ್ನನ್ನು ರಜವಾಗಲೀ ತಮವಾಗಲೀ ಸ್ಪರ್ಶಿಸುತ್ತಲೂ ಇಲ್ಲ. ಪ್ರೀತಿರಹಿತ-ಸಂತಾಪರಹಿತ ಆತ್ಮನನ್ನು ನೀನು ಉಪಾಸಿಸುತ್ತಿದ್ದೀಯೆ.

12220108a ಸುಹೃದಂ ಸರ್ವಭೂತಾನಾಂ ನಿರ್ವೈರಂ ಶಾಂತಮಾನಸಮ್।
12220108c ದೃಷ್ಟ್ವಾ ತ್ವಾಂ ಮಮ ಸಂಜಾತಾ ತ್ವಯ್ಯನುಕ್ರೋಶಿನೀ ಮತಿಃ।।

ಸರ್ವಭೂತಗಳ ಸುಹೃದಯನೂ, ನಿರ್ವೈರನೂ, ಶಾಂತಮಾನಸನೂ ಆಗಿದ್ದೀಯೆ. ನಿನ್ನನ್ನು ನೋಡಿ ನಿನ್ನ ಕುರಿತು ನನ್ನ ಬುದ್ಧಿಯಲ್ಲಿ ಅನುಕ್ರೋಶವು ಹುಟ್ಟಿಕೊಂಡಿದೆ.

12220109a ನಾಹಮೇತಾದೃಶಂ ಬುದ್ಧಂ ಹಂತುಮಿಚ್ಚಾಮಿ ಬಂಧನೇ।
12220109c ಆನೃಶಂಸ್ಯಂ ಪರೋ ಧರ್ಮೋ ಅನುಕ್ರೋಶಸ್ತಥಾ ತ್ವಯಿ।।

ನಾನು ಇಂತಹ ಬುದ್ಧನನ್ನು ಬಂಧನದಲ್ಲಿರಿಸಿ ಕೊಲ್ಲಲು ಬಯಸುವುದಿಲ್ಲ. ಕ್ರೂರವಾಗಿ ನಡೆದುಕೊಳ್ಳದೇ ಇರುವುದೇ ಪರಮ ಧರ್ಮವು. ನಿನ್ನ ಮೇಲೆ ನನಗೆ ಕರುಣೆಯುಂಟಾಗಿದೆ.

12220110a ಮೋಕ್ಷ್ಯಂತೇ ವಾರುಣಾಃ ಪಾಶಾಸ್ತವೇಮೇ ಕಾಲಪರ್ಯಯಾತ್।
12220110c ಪ್ರಜಾನಾಮಪಚಾರೇಣ ಸ್ವಸ್ತಿ ತೇಽಸ್ತು ಮಹಾಸುರ।।

ಮಹಾಸುರ! ಕಾಲವು ಕಳೆದಂತೆ ನೀನು ಈ ವರುಣ ಪಾಶಗಳಿಂದ ಮುಕ್ತನಾಗುತ್ತೀಯೆ. ಪ್ರಜೆಗಳ ಅಪಚಾರವು ಹೆಚ್ಚಾದಾಗ ನಿನಗೆ ಮಂಗಳವುಂಟಾಗುತ್ತದೆ.

12220111a ಯದಾ ಶ್ವಶ್ರೂಂ ಸ್ನುಷಾ ವೃದ್ಧಾಂ ಪರಿಚಾರೇಣ ಯೋಕ್ಷ್ಯತೇ।
12220111c ಪುತ್ರಶ್ಚ ಪಿತರಂ ಮೋಹಾತ್ಪ್ರೇಷಯಿಷ್ಯತಿ ಕರ್ಮಸು।।
12220112a ಬ್ರಾಹ್ಮಣೈಃ ಕಾರಯಿಷ್ಯಂತಿ ವೃಷಲಾಃ ಪಾದಧಾವನಮ್।
12220112c ಶೂದ್ರಾಶ್ಚ ಬ್ರಾಹ್ಮಣೀಂ ಭಾರ್ಯಾಮುಪಯಾಸ್ಯಂತಿ ನಿರ್ಭಯಾಃ।।
12220113a ವಿಯೋನಿಷು ಚ ಬೀಜಾನಿ ಮೋಕ್ಷ್ಯಂತೇ ಪುರುಷಾ ಯದಾ।
12220113c ಸಂಕರಂ ಕಾಂಸ್ಯಭಾಂಡೈಶ್ಚ ಬಲಿಂ ಚಾಪಿ ಕುಪಾತ್ರಕೈಃ।।
12220114a ಚಾತುರ್ವರ್ಣ್ಯಂ ಯದಾ ಕೃತ್ಸ್ನಮುನ್ಮರ್ಯಾದಂ ಭವಿಷ್ಯತಿ।
12220114c ಏಕೈಕಸ್ತೇ ತದಾ ಪಾಶಃ ಕ್ರಮಶಃ ಪ್ರತಿಮೋಕ್ಷ್ಯತೇ।।

ಸೊಸೆಯು ವೃದ್ಧ ಅತ್ತೆಯನ್ನು ಸೇವೆಗೈಯಲು ತೊಡಗಿಸಿಕೊಂಡಾಗ, ಪುತ್ರನು ಮೋಹದಿಂದ ತಂದೆಯನ್ನು ದುಡಿಮೆಗೆ ತೊಡಗಿಸಿಕೊಂಡಾಗ, ಶೂದ್ರರು ಬ್ರಾಹ್ಮಣರಿಂದ ತಮ್ಮ ಪಾದಗಳನ್ನು ತೊಳೆಯಿಸಿಕೊಳ್ಳುವಾಗ, ಶೂದ್ರರು ನಿರ್ಭಯರಾಗಿ ಬ್ರಾಹ್ಮಣಿಯನ್ನು ಪತ್ನಿಯನ್ನಾಗಿ ಪಡೆದುಕೊಳ್ಳುವಾಗ, ಪುರುಷರು ವಿರುದ್ಧಯೋನಿಗಳಲ್ಲಿ ತಮ್ಮ ವೀರ್ಯವನ್ನು ಬಿಡುವಾಗ, ಕಂಚಿನ ಪಾತ್ರೆಗಳಲ್ಲಿ ಒಟ್ಟಾಗಿ ಊಟಮಾಡುವಾಗ, ಅಪವಿತ್ರ ಪಾತ್ರೆಗಳಲ್ಲಿ ನೈವೇದ್ಯವನ್ನು ನೀಡುವಾಗ, ನಾಲ್ಕು ವರ್ಣಗಳೂ ತಮ್ಮ ಮರ್ಯಾದೆಗಳನ್ನು ಮೀರಿದಾಗ – ನಿನ್ನನ್ನು ಬಂಧಿಸಿರುವ ಈ ವರುಣಪಾಶಗಳು ಒಂದೊಂದಾಗಿ ಕಳಚಿ ಬೀಳುತ್ತವೆ.

12220115a ಅಸ್ಮತ್ತಸ್ತೇ ಭಯಂ ನಾಸ್ತಿ ಸಮಯಂ ಪ್ರತಿಪಾಲಯ।
12220115c ಸುಖೀ ಭವ ನಿರಾಬಾಧಃ ಸ್ವಸ್ಥಚೇತಾ ನಿರಾಮಯಃ।।

ನಮ್ಮಿಂದ ನಿನಗೆ ಯಾವ ಭಯವೂ ಇಲ್ಲ. ಸಮಯವನ್ನೇ ಕಾಯುತ್ತಿರುವ. ಬಾಧೆಗಳಿಲ್ಲದೇ, ಸ್ವಸ್ಥಚೇತಸನಾಗಿ, ನಿರಾಮಯನಾಗಿ ಸುಖಿಯಾಗಿರು.”

12220116a ತಮೇವಮುಕ್ತ್ವಾ ಭಗವಾನ್ ಶತಕ್ರತುಃ ಪ್ರತಿಪ್ರಯಾತೋ ಗಜರಾಜವಾಹನಃ।
12220116c ವಿಜಿತ್ಯ ಸರ್ವಾನಸುರಾನ್ಸುರಾಧಿಪೋ ನನಂದ ಹರ್ಷೇಣ ಬಭೂವ ಚೈಕರಾಟ್।।

ಹೀಗೆ ಹೇಳಿ ಗಜರಾಜವಾಹನ ಭಗವಾನ್ ಶತಕ್ರತುವು ಹಿಂದಿರುಗಿ ಪ್ರಯಾಣಿಸಿದನು. ಸರ್ವ ಅಸುರರನ್ನೂ ಗೆದ್ದು ಅದ್ವಿತೀಯ ಅಧೀಶ್ವರನಾಗಿ ಸುರಾಧಿಪನು ಹರ್ಷಿತನಾದನು.

12220117a ಮಹರ್ಷಯಸ್ತುಷ್ಟುವುರಂಜಸಾ ಚ ತಂ ವೃಷಾಕಪಿಂ ಸರ್ವಚರಾಚರೇಶ್ವರಮ್।
12220117c ಹಿಮಾಪಹೋ ಹವ್ಯಮುದಾವಹಂಸ್ತ್ವರಂಸ್ ತಥಾಮೃತಂ ಚಾರ್ಪಿತಮೀಶ್ವರಾಯ ಹ।।

ಮಹರ್ಷಿಗಳು ಸರ್ವಚರಾಚರೇಶ್ವರ ವೃಷಾಕಪಿ ಇಂದ್ರನನ್ನು ಸ್ತುತಿಗಳಿಂದ ರಂಜಿಸಿದರು. ಅಗ್ನಿದೇವನು ಯಜ್ಞಮಂಡಲಗಳಿಂದ ದೇವತೆಗಳಿಗೆ ಹವಿಸ್ಸನ್ನು ಕೊಂಡೊಯ್ಯತೊಡಗಿದನು ಮತ್ತು ದೇವೇಶ್ವರ ಇಂದ್ರನು ಅರ್ಪಿಸಿದ ಅಮೃತವನ್ನು ಕುಡಿಯತೊಡಗಿದನು.

12220118a ದ್ವಿಜೋತ್ತಮೈಃ ಸರ್ವಗತೈರಭಿಷ್ಟುತೋ ವಿದೀಪ್ತತೇಜಾ ಗತಮನ್ಯುರೀಶ್ವರಃ।
12220118c ಪ್ರಶಾಂತಚೇತಾ ಮುದಿತಃ ಸ್ವಮಾಲಯಂ ತ್ರಿವಿಷ್ಟಪಂ ಪ್ರಾಪ್ಯ ಮುಮೋದ ವಾಸವಃ।।

ಉಪಸ್ಥಿತ ಸರ್ವ ದ್ವಿಜೋತ್ತಮರಿಂದ ಪ್ರಶಂಸಿತನಾದ ದೀಪ್ತತೇಜಸ್ವೀ ಈಶ್ವರ ಇಂದ್ರನು ಆಗ ಪ್ರಶಾಂತಚೇತಸನೂ, ಹರ್ಷಿತನೂ ಆಗಿ ನಿಜಲೋಕ ಸುರಲೋಕವನ್ನು ತಲುಪಿ ಮೋದಿಸಿದನು.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಬಲಿವಾಸವಸಂವಾದೇ ವಿಂಶಾಧಿಕದ್ವಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಬಲಿವಾಸವಸಂವಾದ ಎನ್ನುವ ಇನ್ನೂರಾಇಪ್ಪತ್ತನೇ ಅಧ್ಯಾಯವು.

  1. ವಿಶೋಕತಾ ಸುಖಂ ಧತ್ತೇ ಧತ್ತೇ ಚಾರೋಗ್ಯಮುತ್ತಮಮ್। (ಭಾರತ ದರ್ಶನ/ಗೀತಾ ಪ್ರೆಸ್). ↩︎

  2. ಪ್ರಾಜ್ಞೋ (ಭಾರತ ದರ್ಶನ/ಗೀತಾ ಪ್ರೆಸ್). ↩︎

  3. ಮಾ ಚ ತೇಽಭೂತ್ ಸ್ವಭಾವೋಽಯಮಿತಿ ತೇ ದೇವಪುಂಗವ। (ಗೀತಾ ಪ್ರೆಸ್/ಭಾರತ ದರ್ಶನ). ↩︎

  4. ಕೆಟ್ಟ ಕಾಲಬಂದಾಗ ಅಥವಾ ಕಾಲನಿಂದ ಪೀಡಿತನಾದವನಿಗೆ (ಗೀತಾ ಪ್ರೆಸ್/ಭಾರತ ದರ್ಶನ). ↩︎

  5. ಕರ್ತೃಶಬ್ದವು ಕಾಲವಾಚಿಯಾದ ಪರಮಾತ್ಮನೊಬ್ಬನಿಗೆ ಹೊರತಾಗಿ ಬೇರೆ ಯಾರಿಗೂ ಅನ್ವಯಿಸುವುದಿಲ್ಲ. ಉಳಿದ ಕರ್ತೃಗಳಿಗೂ ಕಾರಣನು ಬೇರೊಬ್ಬನಿರುತ್ತಾನೆ. ಆದುದರಿಂದ “ನಾನು ಈ ಕಾರ್ಯವನ್ನು ಮಾಡಿದವನು, ನಾನೇ ಕರ್ತೃ” ಎಂದು ಹೇಳಿಕೊಳ್ಳುವುದು ಮೌಢ್ಯವೇ ಸರಿ. ಉತ್ಪತ್ತಿ-ಲಯರಹಿತನಾದವನೊಬ್ಬನೇ ಕರ್ತೃ. ಜನನ-ಮರಣಾದಿಗಳ ಸುಳಿಯಲ್ಲಿ ಸಿಕ್ಕಿರುವವನೆಂದಿಗೂ ಕರ್ತೃವಾಗುವುದಿಲ್ಲ. (ಭಾರತ ದರ್ಶನ) ↩︎

  6. ಪ್ರಲಯಂ ನಾವಬುದ್ಧ್ಯಸೇ। (ಭಾರತ ದರ್ಶನ/ಗೀತಾ ಪ್ರೆಸ್). ↩︎

  7. ದೈವತಾನಾಂ (ಭಾರತ ದರ್ಶನ/ಗೀತಾ ಪ್ರೆಸ್). ↩︎

  8. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ನಿತ್ಯಂ ಕಾಲಪರೀತಾತ್ಮಾ ಭವತ್ಯೇವಂ ಸುರೇಶ್ವರ। (ಭಾರತ ದರ್ಶನ/ಗೀತಾ ಪ್ರೆಸ್). ↩︎

  9. ಸಂಕೋಚೋಽಥ ವರೀತಾಕ್ಷೋ ವರಾಹಾಶ್ಚೋ ರುಚಿಪ್ರಭಃ। (ಭಾರತ ದರ್ಶನ/ಗೀತಾ ಪ್ರೆಸ್). ↩︎

  10. ಅವರೆಲ್ಲರೂ ದಕ್ಷಪುತ್ರಿಯರಾದ ದಿತಿ ಮತ್ತು ದನುವಿನಲ್ಲಿ ಪ್ರಜಾಪತಿ ಕಶ್ಯಪನಿಗೆ ಹುಟ್ಟಿದವರಾಗಿದ್ದರು. ↩︎

  11. ಮಾಡಿದ ಕಾರ್ಯದಲ್ಲಿ ಯಾವ ವ್ಯತ್ಯಾಸವಿಲ್ಲದಿದ್ದರೂ ಫಲಗಳು ಕಾಲಾನುಗುಣವಾಗಿರುತ್ತವೆ. (ಭಾರತ ದರ್ಶನ) ↩︎

  12. ಧೈರ್ಯಾತ್ಸತ್ಯಪರಾಕಮ। (ಭಾರತ ದರ್ಶನ/ಗೀತಾ ಪ್ರೆಸ್). ↩︎

  13. ಒಂದು ಹ್ರಸ್ವಾಕ್ಷರವನ್ನು ಉಚ್ಚರಿಸಲು ಬೇಕಾಗುವಷ್ಟು ಸಮಯವು ಕಾಲ. ಒಂದು ಅಕ್ಷಿ ಅಥವಾ ನಿಮೇಷ ಎಂದರೆ ಒಂದು ರೆಪ್ಪೆಹೊಡೆಯುವಷ್ಟು ಸಮಯ. ಹದಿನೈದು ನಿಮೇಷಗಳು ಅಥವಾ ಹದಿನೆಂಟು ಬಾರಿ ರೆಪ್ಪೆ ಹೊಡೆಯುವಷ್ಟು ಸಮಯವು 1 ಕಾಷ್ಠಾ. 30 ಕಾಷ್ಠಗಳು ಒಂದು ಕಲೆ. ಕ್ಷಣದ 1/30ನೇ ಭಾಗವು 1 ಕಲೆ. ಕಲೆಯ 1/10ನೇ ಭಾಗವು ಒಂದು ಕಾಷ್ಠಾ. ಕಾಷ್ಠದ 1/18ನೇ ಭಾಗವು 1 ನಿಮೇಷ. ನಿಮೇಷದ ಅರ್ಧ ಭಾಗವು 1 ಲವ. ಲವದ ಅರ್ಧಭಾಗವು ಒಂದು ಕ್ಷಣ. (ಭಾರತ ದರ್ಶನ) ↩︎

  14. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಜೀವಿತಂ ಜೀವಲೋಕಸ್ಯ ಕಾಲೇನಾಗಮ್ಯ ನೀಯತೇ। (ಭಾರತ ದರ್ಶನ/ಗೀತಾ ಪ್ರೆಸ್). ↩︎